ಮೈಸೂರು ಸಂಸ್ಥಾನವು ಮೂಲತಃ ಕೃಷಿಯನ್ನು ಅಧಾರವಾಗಿಟ್ಟುಕೊಂಡು ಬೆಳೆದುಬಂದ ಪ್ರದೇಶ. ಈ ದೃಷ್ಟಿಯಿಂದ ನೋಡುವುದಾದರೆ ಯಾವುದೇ ರಾಜಮನೆತನದ ಸರ್ಕಾರವೂ ತನ್ನ ಆಡಳಿತ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣದ ಕಡೆಗೆ ಸಂಪೂರ್ಣವಾಗಿ ವಾಲುವುದು ಸಹಜವಾಗಿಯೇ ಇರುತ್ತದೆ. ಮೈಸೂರು ಸಂಸ್ಥಾನವು ಪ್ರಾರಂಭದಲ್ಲಿ ವಿಜಯನಗರದರಸರ ಅಧೀನವಾಗಿದ್ದು ನಂತರ ಬ್ರಿಟಿಷರಿಗೆ ಸಾಮಂತರಾಗಿ ಸುಮಾರು ೬೦೦ ವರ್ಷಗಳ ಸುದೀರ್ಘವಾಗಿ ಆಳ್ವಿಕೆಯನ್ನು ನಡೆಸಿಕೊಂಡು ಬಂದು, ಕೊನೆಯ ೭೦ ವರ್ಷಗಳ ಅವರ ಆಳ್ವಿಕೆಯ ಸಂಸ್ಥಾನವನ್ನು ವಿಕೇಂದ್ರೀಕರಣದ ಸರ್ಕಾರ ಅಥವಾ ಮಾದರಿ ಸಂಸ್ಥಾನ ಎಂದು ಕರೆಸಿಕೊಳ್ಳುವತ್ತ ಮುನ್ನಡೆದಿತ್ತೆನ್ನಬಹುದು.

ಮೈಸೂರು ಸಂಸ್ಥಾನವು ಹೆಚ್ಚಿನ ಕಾಲಾವಧಿಯನ್ನು ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿ ಆಳ್ವಿಕೆ ನಡೆಸಿಕೊಂಡು ಬಂದದ್ದಾದರೂ ಸ್ಥಳೀಯ ಹಾಗೂ ಕೇಂದ್ರ ಆಳ್ವಿಕೆಯಲ್ಲಿ ಗ್ರಾಮಗಳು, ಅಗ್ರಹಾರಗಳು, ದೇವಸ್ಥಾನಗಳು ಮತ್ತರು ಮಠಗಳು ಹೆಚ್ಚಿನ ಪ್ರಮಾಣದಲ್ಲಿ ತನ್ನದೆ ಅದಂತಹ ಸ್ವಾಯತ್ತತೆಯನ್ನು ಪಡೆದಿದ್ದವೆಂದೂ ಹೇಳಬಹುದಾಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಪೂರ್ವಿಕರು ಹಾಗೂ ರಾಜಮಹಾರಾಜರು ಧಾರ್ಮಿಕ ನಂಬಿಕೆಗಳ ಕಟ್ಟುಪಾಡುಗಳಿಗೆ ತಲೆಬಾಗುತ್ತಿದ್ದ ಹಾಗೂ ಅದರ ಆಧಾರದ ಮೇಲೆ ರಾಜ್ಯಭಾರ ಮಾಡುತ್ತಿದ್ದದ್ದು ಮೂಲ ಕಾರಣವೆಂದು ಹೇಳಬಹುದು. ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷ್ ಆಡಳಿತ ಪದ್ಧತಿಯ ತನ್ನ ಪ್ರಭಾವವನ್ನು ಬೀರುವುದಕ್ಕೂ ಮುಂಚೆಯೇ, ಈ ಭಾಗದಲ್ಲಿದ್ದ ಗ್ರಾಮಗಳು ಮತ್ತು ಪಟ್ಟಣಗಳಿಗೆ ಸ್ವಯಂ ಆಡಳಿತವನ್ನು ನೀಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜ್ಯದ ಆಡಳಿತ ಪದ್ಧತಿಯೊಂದು ರೂಪಗೊಂಡಿತ್ತೆಂಬುದನ್ನು ಪಾಶ್ಚಾತ್ಯ ವಿಮರ್ಶಕರು ಸಂಪೂರ್ಣವಾಗಿ ಅಲ್ಲಗಳೆದಿರುವುದು ಕಂಡುಬರುತ್ತದೆ. ಆದರೆ ಸ್ಥಳೀಯ ಇತಿಹಾಸಗಾರರು ಇದನ್ನು ಸಂಪೂರ್ಣವಾಗಿ ಅಲ್ಲಗೆಳೆಯದಿರುವುದು ಕಂಡುಬರುತ್ತದೆ. ಏಕೆಂದರೆ ಪ್ರಾಚೀನ ಕಾಲದಿಂದಲೂ ಈ ಪ್ರದೇಶವನ್ನು ಚೋಳರು, ಪಲ್ಲವರು ಆಳ್ವಿಕೆ ನಡೆಸಿಕೊಂಡು ಬಂದಿದ್ದಾರೆ. ಇವರ ಆಳ್ವಿಕೆಯ ಕಾಲದಲ್ಲಿಯೇ ಈ ಭೂಭಾಗಗಳಲ್ಲಿ ಸ್ಥಳೀಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಸ್ವಯಂ ಆಡಳಿತ ಪದ್ಧತಿಯು ಅಸ್ತಿತ್ವದಲ್ಲಿತ್ತೆಂಬ ಅಭಿಪ್ರಾಯವನ್ನು ಇತಿಹಾಸಗಾರರು ಹಾಗೂ ಚಿಂತಕರು ಹೆಚ್ಚಿನ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತಾರೆ.

೧೩೯೯ ಸುಮಾರಿನಲ್ಲಿ ಸ್ಥಾಪಿಸಲ್ಲಟ್ಟ ಮೈಸೂರು ಸಂಸ್ಥಾನವು ತನ್ನ ಜೀವಿತದ ಮುಕ್ಕಾಲು ಭಾಗ ತಾನು ಸಾಂತ ಸಂಸ್ಥಾನವಾಗಿದ್ದ ವಿಜಯನಗರದರಸರ ಆಡಳಿತ ಪದ್ಧತಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿಕೊಂಡು ಬಂದಿತು. ವಿಜಯನಗರದ ಆಳ್ವಿಕೆಯ ರೀತಿ ನೀತಿಗಳೇ ಕೆಲವೇ ಕೆಲವು ಸಣ್ಣ – ಪುಟ್ಟ ಬದಲಾವಣೆಗಳೊಂದಿಗೆ ಮೈಸೂರು ಒಡೆಯರು ರೂಪಿಸಿಕೊಂಡು ಮುಂದುವರೆಸಿಕೊಂಡು ಬಂದವರೆನ್ನಬಹುದು. ಪ್ರಾರಂಭದಲ್ಲಿ ಒಡೆಯರವರು ಗ್ರಾಮಸಭೆಗಳನ್ನು ವಿವಿಧ ಹೆಸರುಗಳಿಂದ ನಿರ್ಮಿಸಿ, ನಂತರ ಅವುಗಳು ಗ್ರಾಮೀಣ ಪ್ರದೇಶದ ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಗೊಳಿಸಿದ್ದರು. ಈ ಹಂತದಲ್ಲಿ ನಾಡು, ಮಹಾನಾಡು, ಗ್ರಾಮಗಳ ನಿರ್ದಿಷ್ಟ ಸಮೂಹಗಳ ಮೇಲೆ ಅಧಿಕಾರ ಪಡೆದು ಸಮಾಜದ ಹಾಗೂ ಸಂಸ್ಥಾನದ ಏಳಿಗೆಗಾಗಿ ಶಕ್ತಿ ಮೀರಿ ಶ್ರಮಿಸಲು ಮುಂದಾಗಿದ್ದರು.

ಮೈಸೂರು ಒಡೆಯರ ಆಡಳಿತ ಪದ್ಧತಿಯನ್ನು ತಿಳಿಯಲು ನಮಗೆ ಶಾಸನಗಳು ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿಯಾಗಿವೆ. ಒಂದು ದೃಷ್ಟಿಯಲ್ಲಿ ಶಾಸನಗಳು ನಂಬಿಕೆಗೆ ಯೋಗ್ಯವಾದ ಆಧಾರವೆನ್ನಬಹುದು. ಹೆಚ್ಚಾಗಿ ಇವು ತಾಮ್ರದ ತಗಡುಗಳ ಮೇಲೆ ಹಾಗೂ ಬಂಡೆಗಳ ಮೇಲೆ ಬರೆಸಿರುವುದು ಕಂಡುಬರುತ್ತದೆ. ಇವುಗಳಿಂದ ಗ್ರಾಮೀಣ ಪ್ರದೇಶ ಹಾಗೂ ಕೇಂದ್ರ ಸರ್ಕಾರದ ಆಡಳಿತದ ಮುಖಂಡರ ಹೆಸರು ಹಾಗೂ ಅವರ ಸ್ಥಾನಮಾನವನ್ನು ಸೂಚಿಸುವ ಹುದ್ದೆಗಳನ್ನು ಉಲ್ಲೇಖಿಸಿ ರಚಿಸಿರುವುದಾಗಿರುವುದು ಸಂಸ್ಕೃತಿ ಅಧ್ಯಯನಕ್ಕೆ ಹೆಚ್ಚು ಸಹಕಾರಿಯಾಗಿದೆ. ಈ ಶಾಸನಗಳು ಸಂಸ್ಥಾನದ ಆಡಳಿತದ ಉಪ ವಿಭಾಗಗಳಾದ ಸೀಮೆ ಅಥವಾ ನಾಡು, ಗ್ರಾಮ, ಅಗ್ರಹಾರ, ನಗರ ಅಥವಾ ಪಟ್ಟಣ ಮುಂತಾದ ಪ್ರಮುಖ ಆಡಳಿತ ವಿಭಾಗಗಳನ್ನು ತಿಳಿಸುತ್ತವೆ. ಈ ದೃಷ್ಟಿಯಿಂದಲೇ ಖ್ಯಾತ ಶಾಸನತಜ್ಞರಾದ ಬಿ.ಎಲ್. ರೈಸ್ ರವರು ಶಾಸನಗಳು ಆಡಳಿತದ ವಿವಿಧ ಲಕ್ಷಣಗಳನ್ನು ಮತ್ತು ವೈಶಿಷ್ಟ್ಯಗಳನ್ನು ತಿಳಿಸಿಕೊಡುತ್ತವೆ ಎಂದು ಹೇಳಿರುವುದು. ಅವರ ಮಾತನ್ನು ಸತ್ಯವೆಂದೇ ಹೇಳಬಹುದು. ಮತ್ತೊಂದು ಪ್ರಮುಖ ಆಧಾರವೆಂದರೆ ಸಾಹಿತ್ಯಾಧಾರ. ಇವುಗಳಲ್ಲಿ ದೇಶಿಯ ಹಾಗೂ ವಿದೇಶಿಯ ಆಧಾರಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮೈಸೂರು ಸಂಸ್ಥಾನವು ಈ ದೃಷ್ಟಿಯಿಂದ ಅತ್ಯಂತ ಶ್ರೀಮಂತ ಸಂಸ್ಥಾನವೆಂದೇ ಹೇಳಬಹುದು. ಮೈಸೂರು ಒಡೆಯರು ವಿಜಯನಗರದರಸರ ಸಾಮಂತರಾಗಿದ್ದರೆಂದು ಹೇಳವುದರಿಂದ ನಾವು ಈ ಹಂತದಲ್ಲಿ ಹೆಚ್ಚಿನ ಮಾಹಿತಿಗೆ ವಿಜಯನಗರದ ಸಾಮ್ರಾಜ್ಯದ ಸಾಹಿತ್ಯಾಧಾರಗಳ ಕಡೆಗೂ ಗಮನಹರಿಸುವುದು ಉತ್ತಮವೆನ್ನಿಸುತ್ತದೆ. ಅಮುಕ್ತಮಾಲ್ಯದ ಕೃತಿಯ ಸಂಪೂರ್ಣ ಭಾಗವು ರಾಜ, ಯುರಾಜ ಹಾಗೂ ಮಂತ್ರಗಳು ಸಾಮ್ರಾಜ್ಯವನ್ನು ಆಳ್ವಿಕೆ ನಡೆಸುವ ರೀತಿ ನೀತಿಗಳನ್ನು ತಿಳಿಸುವ ಒಂದು ಗ್ರಂಥವಾಗಿದೆ. ಈ ಆಧಾರಗಳನ್ನು ಪ್ರಾರಂಭದಲ್ಲಿ ಮೈಸೂರು ಒಡೆಯರೂ ಅಳವಡಿಸಿ, ಮುನ್ನಡೆದುಕೊಂಡು ಬಂದರೆನ್ನಬಹುದು ಇದಕ್ಕೆ ಸಾಕ್ಷಿ ಎಂಬಂತೆ ತಿರುಮಲಾರ‍್ಯನ ಕರ್ಣ ವೃತ್ತಾಂತ ಕಥೆ, ವಿರೂಪಾಕ್ಷ ಕವಿಯ ವಾಲ್ಮೀಕಿ ರಾಮಾಯಣದ ಕನ್ನಡ ಟೀಕೆ ಮತ್ತು ಬ್ರಹ್ಮೋತ್ತರ ಖಂಡದ ಟೀಕೆ, ಭಾರತಿನಂಜ ಕವಿಯ ಕಂಠೀರವ ನರಸರಾಜ ವಿಜಯ, ಚಿಕ್ಕದೇವರಾಜ ಒಡೆಯರವರ ಗೀತಗೋಪಾಲ ಭಾಗವತ, ಶೇಷಧರ್ಮ, ಭಾರತ, ಬಿನ್ನಪ, ಗ್ರಂಥಗಳು ಹಾಗೂ ಸಂಚಿ ಹೊನ್ನಮ್ಮನ ಹದಿಬದೆಯಧರ್ಮ, ತಿರುಮಲಾರ‍್ಯನ ಅಪ್ರತಿಮ ವೀರಚರಿತೆ, ಚಿಕ್ಕದೇವರಾಜ ವಿಜಯ, ಚಿಕ್ಕದೇವರಾಜ ವಂಶಾವಳಿ, ಚಿಕ್ಕದೇವರಾಜ ಶತಕ ಗ್ರಂಥಗಳು ಬಹು ಉಪಯೋಗವಾಗಿವೆ. ಇತ್ತೀಚೆಗೆ ಪ್ರಕಟವಾದ ಬಿ.ಎಂ ಶ್ರಿಯವರ ೧೯೨೮ರಲ್ಲಿನ ರಾಜಭಕ್ತಿ ಮುಕ್ತಾವಳಿ, ಎಂ.ಶಿಂಗ್ರಯ್ಯನವರು ೧೯೧೪ರಲ್ಲಿ ಬರೆದು ಪ್ರಕಟಿಸಿದ ಮೈಸೂರನ್ನು ಆಳಿದ ಮಹಾಸ್ವಾಮಿಯವರಾದ ನಾಲ್ವಡಿ ಕೃಷ್ಣರಾಜ ಒಡೆಯರವರು ಹಾಗೂ ಶ್ರೀನಾಥ ಎಂಬುವರು ೧೯೩೬ರಲ್ಲಿ ಪ್ರಕಟಿಸಿದ ನಾಲ್ವಡಿ ಕೃಷ್ಣರಾಜನ ಮೈಸೂರು ಎಂಬ ಚಿಕ್ಕ ಪುಸ್ತಕದಿಂದ ತಿಳಿಯಬಹುದು. ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜೀವನ ಚರಿತ್ರೆಯಾಗಿರುವ ಸಿ.ಕೆ ವೆಂಕಟರಾಮಯ್ಯನವರ ಆಳಿದ ಮಹಾಸ್ವಾಮಿಯವರು ಎಂಬ ಪುಸ್ತಕ ೧೯೪೧ರಲ್ಲಿ ಪ್ರಕಟವಾಯಿತು. ಈ ಬೃಹತ್ ಕೃತಿಯು ಅಂದಿನ ಆಡಳಿತ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಸಹಕರಿಸುತ್ತದೆ. ಸಿ. ಹಯವದನರಾವ್ ರವರ “Mysore Gezzettear” ಈ ಹಂತದಲ್ಲಿ ಉತ್ತಮ ಇಂಗ್ಲಿಷ್ ಗ್ರಂಥವಾಗಿದೆ.

ಆಡಳಿತದ ಹಂತದಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಸ್ಥಾನದಲ್ಲಿತ್ತು. ಅಂದರೆ ಈ ಸರ್ಕಾರದ ನಾಯಕ ರಾಜ, ರಾಜತ್ವವು ಸಂಪೂರ್ಣವಾಗಿ ಸಂಸ್ಥಾನದ ಆಡಳಿತವನ್ನೇ ತನ್ನ ಕೈಯಲ್ಲಿಟ್ಟುಕೊಂಡಿತ್ತೆನ್ನಬಹುದು. ರಾಜನ ಪಟ್ಟಾಭಿಷೇಕ ಮಹೋತ್ಸವವನ್ನು ವಿಧಿವತ್ತಾಗಿ ವೈಭವದಿಂದ ಆಚರಿಸಲಾಗುತ್ತಿತ್ತು. ಈ ದೃಷ್ಟಿಯಿಂದ ರಾಜನಿಗೆ ಸಂಸ್ಥಾನದ ಆಳ್ವಿಕೆ ನಡೆಸಲು ನ್ಯಾಯಬದ್ಧವಾದ ಅಧಿಕಾರ ದೊರಕುವಂತಾಗುತ್ತಿತ್ತು. ರಾಜನ ಪಟ್ಟಾಭಿಷೇಕ ಮಹೋತ್ಸವದಲ್ಲಿ ಸಂಸ್ಥಾನದ ಅಧಿಕಾರಿಗಳು, ಸಾಮಂತ ಪಾಳ್ಯಗಾರರು, ಸಮಾಜದಲ್ಲಿನ ಪ್ರಮುಖ ಮುಖಂಡರು, ಧಾರ್ಮಿಕ ಮುಖಂಡರು ಹಾಜರಿರುತ್ತಿದ್ದರು. ಮೈಸೂರಿನ ರಾಜರು ತಮ್ಮ ನಂತರ ಸಂಸ್ಥಾನದ ಆಡಳಿತದ ಮುಂಚೂಣಿಯಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನು ನೇಮಿಸಿಕೊಳ್ಳುತ್ತಿದ್ದರು. ಈ ಉತ್ತರಾಧಿಕಾರಿಗೆ ಯುವರಾಜ ಎಂದು ಪಟ್ಟಾಭಿಷೇಕ ಬಮಾಡುತ್ತಿದ್ದರು. ಇಮ್ಮಡಿ ರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ರಣಧೀರ ಕಂಠೀರವ ನರಸರಾಜ ಒಡೆಯರ ಆಳ್ವಿಕೆಯಲ್ಲಿ ದೊಡ್ಡ ದೇವರಾಜ ಒಡೆಯರವರು ಯುವರಾಜರಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಆಧುನಿಕ ಮೈಸೂರಿನ ಇತಿಹಾಸದಲ್ಲಿ ಇದು ಹೆಚ್ಚಾಗಿ ಜಾರಿಯಲ್ಲಿ ಕಂಡುಬರುತ್ತದೆ ಈ ಪದ್ಧತಿಯಲ್ಲಿ ಅರಸನ ಪುತ್ರನನ್ನು ಯುವರಾಜನನ್ನಾಗಿ ನೇಮಿಸುವ ಪದ್ಧತಿ ರೂಢಿಯಲ್ಲಿತ್ತು. ಅರಸರಿಗೆ ಗಂಡುಮಕ್ಕಳ ಸಂತಾನವಿಲ್ಲದಿದ್ದ ಪಕ್ಷದಲ್ಲಿ ಅವರ ರಕ್ತ ಸಂಬಂಧಿಗಳೊಬ್ಬನನ್ನು ದತ್ತು ತೆಗೆದುಕೊಂಡು ಅವನನ್ನು ಯುವರಾಜನನ್ನಾಗಿ ನೇಮಿಸಿಕೊಳ್ಳಲಾಗುತ್ತಿತ್ತು. ಮೈಸೂರು ಒಡೆಯರು ದತ್ತು ಮಕ್ಕಳಿಗೆ ಪಣ ಕಟ್ಟಿರುವುದರಲ್ಲಿ ಮೊದಲಿಗರಾಗಿದ್ದಾರೆ ಎನ್ನಬಹುದು.

ಮೈಸೂರು ಸಂಸ್ಥಾನದ ಅರಸರುಗಳು ಹೆಚ್ಚಿನ ಪ್ರಮಾಣದಲ್ಲಿ ನಿರಂಕುಶತ್ವವನ್ನು ಪಾಲಿಸುತ್ತಿರಲಿಲ್ಲವೆಂದು ಹೇಳಬಹುದು. ಕಾರಣ ಅವರಿಗೆ ಅವರದೇ ಆದ ಅನೇಕ ಸಂಪ್ರದಾಯ ಬದ್ಧವಾದ ಆಚರಣೆಗಳು ಮನೆಮಾಡಿಕೊಂಡಿದ್ದವು. ಉದಾಹರಣೆಹೆ ಅವರಿಗೆ ಧರ್ಮವು ಅಡ್ಡಿಯಾಗುತ್ತಿತ್ತು. ರಾಜತ್ವವು ಸಂಪೂರ್ಣವಾಗಿ ಧರ್ಮದ ಆಳ್ವಿಕೆಗೆ ಒಳಪಟ್ಟಿತ್ತು. ಅದ್ದರಿಂದ ಧರ್ಮವನ್ನು ಪರಿಪಾಲಿಸುವುದು ರಾಜನ ಪ್ರಮುಖ ಕರ್ತವ್ಯವಾಗಿತ್ತು. ಹಾಗೂ ಸಾರ್ವಜನಿಕ ಅಭಿಪ್ರಾಯ ಮತ್ತು ರೂಢಿಸಂಪ್ರದಾಯಗಳು ರಾಜರ ನಿರಂಕುಶ ಪ್ರಭುತ್ವವನ್ನು ನಡೆಸಲು ಅಡ್ಡಿಪಡಿಸುತ್ತಿದ್ದವು. ಇವುಗಳ ಜೊತೆಗೆ ಮೈಸೂರು ಸಂಸ್ಥಾನದಲ್ಲಿ ವಿವಿಧ ಸಂಘಗಳು ತಲೆ ಎತ್ತಿ ಇವುಗಳ ರೂಢಿಸಿದ ನಿಬಂಧನೆಗಳನ್ನು ರಾಜ ಪರಿಶೀಲಿಸಿ ಜಾರಿಗೆ ತರುವ ಕರ್ತವ್ಯವನ್ನು ಹೊಂದಿದ್ದನು. ಇವುಗಳಲ್ಲಿ ಮುಖ್ಯವಾದ ಸಂಘಗಳೆಂದರೆ ಸಂಘಜೀವನ, ಕಾರ್ಮಿಕ ಸಂಘಗಳು, ವೃತ್ತಿ ಸಂಘಗಳು (ಅವರುಗಳು ಮಾಡುತ್ತಿದ್ದ ವೃತ್ತಿಗೆ ಅನುಗುಣವಾಗಿ ಸಂಘಗಳು) ಹಾಗೂ ಪ್ರಜಾಪ್ರತಿನಿಧಿಗಳ ಸಂಘಗಳು ಹೆಚ್ಚಿನ ಪ್ರಭಾವ ಬೀರುತ್ತಿದ್ದವು. ರಾಜರು ತಮ್ಮ ಸಂಸ್ಥಾನದ ಆಳ್ವಿಕೆಯನ್ನು ಸುಭದ್ರಗೊಳಿಸುವುದಕ್ಕೋಸ್ಕರ ಉತ್ತಮ ಮಂತ್ರಿಮಂಡಲವನ್ನು ಹೊಂದಿರುತ್ತಿದ್ದರು. ಮಂತ್ರಮಂಡಲದಲ್ಲಿ ರಾಜನಿಂದ ನೇಮಿಸಿಕೊಂಡ ಮಂತ್ರಿಗಳು ಮತ್ತು ಸಂಸ್ಥಾನದಲ್ಲಿ ಉತ್ತಮ ವರ್ಗದವರೆಂದು ಹೇಳಿಕೊಳ್ಳುತ್ತಿದ್ದ ಶ್ರೀಮಂತರೂ ಸದಸ್ಯರಾಗಿರುತ್ತಿದ್ದರು. ಸಂಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ರಾಜ ಮಂತ್ರಿಮಂಡಲದಿಂದ ಪಡೆದುಕೊಳ್ಳುವ ಸಂಪ್ರದಾಯ ರೂಢಿಯಲ್ಲಿದ್ದಿತ್ತು.

ಆಡಳಿತವನ್ನು ಸುಭದ್ರವಾಗಿ ನಡೆಸಿಕೊಂಡು ಬರಲು ಒಡೆಯರವರು ಸಂಸ್ಥಾನವನ್ನು ಸೀಮೆ ಅಥವಾ ನಾಡು ಸ್ಥಳ ಮತ್ತು ಗ್ರಾಮಗಳೆಂದು ವಿಂಗಡಿಸಿಕೊಂಡಿದ್ದರು. ಸಾಮಾನ್ಯವಾಗಿ ಇದು ಚೋಳರ ಕಾಲದಿಂದಲೇ ಬಳವಳಿಯಾಗಿ ಬಂದದ್ದಾಗಿತ್ತು. ರಾಜ ಒಡೆಯರ್ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮೀಣ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳು ಪ್ರಾರಂಭವಾಯಿತು. ನಂತರ ಗ್ರಾಮೀಣ ಪ್ರದೇಶದ ಆಡಳಿತ ಪದ್ಧತಿಯು ತನ್ನದೆ ಆದ ಒಂದು ಆಡಳಿತ ಭಾಗವನ್ನು ಹೊಂದಲಾರಂಭಿಸಿತ್ತು. ಈ ಹಂತದಲ್ಲಿ ಹಲವು ಗ್ರಾಮಗಳನ್ನು ಸೇರಿಸಿ ಸ್ಥಳ (ಗಡಿಮನೆ) ಎಂದು ಕರೆಯುವ ಪದ್ಧತಿ ಬೆಳೆದು ಬಂದಿತ್ತು. ಹಲವು ಸ್ಥಳಗಳನ್ನು ಒಟ್ಟುಗೂಡಿಸಿ ಸೀಮೆ ಅಥವಾ ನಾಡು (ಹೋಬಳಿ) ಎಂದು ಕರೆಯಲಾಗುತ್ತಿತ್ತು. ಈ ವರ್ಗೀಕರಣವನ್ನು ಇಂದಿಗೂ ನೋಡಬಹುದಾಗಿದೆ. ಉದಾಹರಣೆಗೆ ಕ್ರಿ.ಶ.೧೫೧೭ರ ನಂಜನಗೂಡು ತಾಲ್ಲೂಕಿನ ಒಂದು ಶಾಸನವು ಬಳಗುಳದ (ಬೆಳಗೋಳ) ಸಮ್ಮತ್ ಎಂದು ತಿಳಿಸುತ್ತದೆ. ಹಾಗೆಯೇ ಕ್ರಿ.ಶ. ೧೫೩೩ರ ಹಿರಿಯೂರಿನ (ಚಿತ್ರದುರ್ಗ ಜಿಲ್ಲೆ) ಒಂದು ಶಾಸನವು ಧರ್ಮಾಪುರ ಸಮ್ಮತ್ ಎಂದು ದಾಖಲಿಸಿರುವುದು ಕಂಡುಬರುತ್ತದೆ. ಮೇಲೆ ಹೇಳಿದಂತೆ ಇಂದು ಹಲವು ಗ್ರಾಮಗಳನ್ನು ಒಂದುಗೂಡಿಸಿ ಹೋಬಳಿ ಇರುವ ಹಾಗೆ ಅಂದು ಅನೇಕ ಸ್ಥಳಗಳನ್ನು ಸೇರಿಸಿ ಸೀಮೆ ಅಥವಾ ನಾಡುಗಳನ್ನು ಸೃಷ್ಟಿಸಲಾಗುತ್ತಿತ್ತು ಎಂಬ ಅಂಶ ಮೇಲಿನ ಆಧಾರಗಳಿಂದ ಸ್ಪಷ್ಟವಾಗುತ್ತದೆ.

ಗ್ರಾಮೀಣ ಪ್ರದೇಶದ ಆಡಳಿತ

ಸಂಸ್ಥಾನದ ಗ್ರಾಮೀಣಾಡಳಿತದಲ್ಲಿ ಜನರ ಸಹಕಾರವು ಬಹು ಮುಖ್ಯವಾಗಿದ್ದಿತ್ತು. ಇಲ್ಲಿನ ಆಡಳಿತವು ವಿಜಯನಗರದರಸರಿಂದ ರೂಪಿತವಾಗಿತ್ತು. ಮೈಸೂರು ಸಂಸ್ಥಾನದ ಗ್ರಾಮೀಣಾಡಳಿತದ ಸಾಂಸ್ಕೃತಿಕ ಅಧ್ಯಯನವು ವಿಜಯನಗರದರಸರ ಇತಿಹಾಸಕ್ಕೆ ಉತ್ತಮ ಹಿನ್ನೆಲೆಯಾಗುತ್ತದೆ. ಮೈಸೂರು ಅರಸರು ತಮ್ಮ ಸಂಸ್ಥಾನದ ಗ್ರಾಮೀಣಾಡಳಿತದಲ್ಲಿ ಗ್ರಾಮದ ವ್ಯವಹಾರವನ್ನು ಗ್ರಾಮಸ್ಥರೇ ನಡೆಸಿಕೊಂಡು ಹೋಗುವ ಉತ್ತಮ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಗ್ರಾಮಗಳಲ್ಲಿ ಅಂದು ಗ್ರಾಮ, ಅಗ್ರಹಾರ ಮತ್ತು ಪಟ್ಟಣಗಳೆಂಬ ಪ್ರಾದೇಶಿಕ ವಿಭಾಗಗಳಿದ್ದವು. ಗಾವುಂಡ (ಗೌಡ) ಎಂಬುವನು ಗ್ರಾಮಾಡಳಿತದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದನು. ಕರಣಿಕನನ್ನು ಶಾನುಭೋಗ ಅಥವಾ ಕುಲಕರ್ಣಿ ಎಂದು ಕರೆಯುತ್ತಿದ್ದರು. ಈ ಹುದ್ದೆಗಳು ಹೆಚ್ಚಾಗಿ ವಂಶಪಾರಂಪರ‍್ಯವಾಗಿ ಮುಂದುವರಿದುಕೊಂಡು ಬರುವುದಾಗಿದ್ದಿತ್ತು. ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿದ್ದ ಗ್ರಾಮಸಭೆಯು ಸಾಮಾನ್ಯವಾಗಿ ಗ್ರಾಮದ ದೇವಸ್ಥಾನ, ಚಾವಡಿ(ಸಭಾಂಗಣ) ಅಥವಾ ಊರಿನ ಮುಂದೆ ಇರುವ ಅರಳಿಮರದ ಕಟ್ಟೆಯಲ್ಲಿ ಸೇರುತ್ತಿತ್ತು. ಇಲ್ಲಿ ಗ್ರಾಮದ ಮುಂಖಡರೇ ನ್ಯಾಯಾದೀಶರಾಗಿ ಕಾರ್ಯನಿರ್ವಹಿಸಿ ಸರಿ ತಪಗಳನ್ನು ನಿರ್ಧರಿಸುತ್ತಿದ್ದರು. ಗ್ರಾಮಸಭೆಗಳ ಪ್ರಮುಖ ಕರ್ತವ್ಯಗಳೆಂದರೆ ಗ್ರಾಮದ ಜಮೀನುಗಳ ಮೇಲಿನ ಹತೋಟಿ, ನೀರಾವರಿ ಕೆಲಸಗಳ ಮತ್ತು ದೇವಸ್ಥಾನಗಳ ಮೇಲ್ವಿಚಾರಣೆ, ತೆರಿಗೆ ವಸೂಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ರಿಯಾಯಿತಿಗಳ ನೀಡಿಕೆ, ದಾನಗಳ ಹತೋಟಿ, ಹಣದ ಠೇವಣಿಗಳನ್ನು ಹೊಂದಿರುವುದು, ಬ್ಯಾಂಕಿನ ವ್ಯವಹಾರಗಳು ಇನ್ನಿತರ ಪ್ರಮುಖ ಕಾರ್ಯಗಳಲ್ಲಿ ನೇರ ಗ್ರಾಮದ ಪ್ರಗತಿಗೆ ಮುಂದಾಗುತ್ತಿದ್ದವು.

ಅಗ್ರಹಾರ ಮತ್ತು ಆಡಳಿತ

ಅಗ್ರಹಾರದೆಂದರೆ ಅಗ್ರರು ವಾಸಿಸುವ ಸ್ಥಳವಾಗಿದ್ದಿತ್ತು. ಸಾಮಾಜಿಕ ದೃಷ್ಟಿಯಿಂದ ತಾವೇ ಎಲ್ಲ ವರ್ಗದವರಿಗಿಂತಲೂ ಅಗ್ರರು (ಹಿರಿಯರು) ಎಂದು ಸ್ವಘೋಷಿಸಿಕೊಂಡು ಜೀವನ ನಡೆಸುತ್ತಿದ್ದ ಬ್ರಾಹ್ಮಣರು ವಾಸಿಸುವ ಸ್ಥಳಕ್ಕೆ ಅಗ್ರಹಾರವೆಂದು ನಾಮಕರಣ ಮಾಡಿಕೊಂಡಿದ್ದರು. ಇದು ಭಾರತದಾದ್ಯಂತ ಹರಡಿಕೊಂಡಿದ್ದ ಹಾಗೆಯೇ ಮೈಸೂರು ಸಂಸ್ಥಾನದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತೆಂದು ಹೇಳಬಹುದು. ಈ ಅಗ್ರಹಾರಗಳಲ್ಲಿ ಸ್ಥಳೀಯ ಕುಂದುಕೊರತೆಯನ್ನು ನಿವಾರಿಸಿಕೊಳ್ಳಲು ‘ಮಹಾರಾಜ ಸಭೆ’ ಎಂಬ ಸಂಘವು ಅಸ್ತಿತ್ವದಲ್ಲಿತ್ತು. ಇದು ಅಗ್ರಹಾರದ ಮೇಲ್ವಿಚಾರಣೆ ಮತ್ತು ಇತರೆ ಪೌರಕರ್ತವ್ಯಗಳನ್ನು ನಿರ್ವಹಿಸಿಕೊಳ್ಳಲು ಸಹಕಾರಿಯಾಗಿತ್ತು. ಈ ಪ್ರದೇಶದಲ್ಲಿ ಜಾತಿ ಪದ್ಧತಿ ಹಾಗೂ ವರ್ಣಾಶ್ರಮ ಪದ್ಧತಿಯು ಹೆಚ್ಚಾಗಿ ಬಳಕೆಯಲ್ಲಿತ್ತು. ಬ್ರಾಹ್ಮಣರು ಇಲ್ಲಿ ಸಕಲ ವಿದ್ಯೆಯನ್ನು ಕಲಿತು ರಾಜಾಶ್ರಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿ ವೈಭೋಗದ ಜೀವನ ನಡೆಸುತ್ತಿದ್ದರು. ಇವರು ಧಾರ್ಮಿಕ ಹಾಗೂ ಮೂಡನಂಬಿಕೆಗಳಿಂದ ಸಾಮಾನ್ಯ ಜನರಿಂದ ಹಿಡಿದು ರಾಜ ಪರಿಹಾರದವರನ್ನು ತಮ್ಮ ಬಲೆಯಿಂದ ಸಿಲುಕಿಸಿಕೊಂಡು ಅವರಿಂದ ಜೀವನಾವಶ್ಯಕವಾದ ಕೆಲಸಗಳೆಲ್ಲವನ್ನು ಮಾಡಿಸಿಕೊಂಡು ತಮ್ಮ ಸುತ್ತಲಿನ ಬೇಲಿಗಳನ್ನಾಗಿಸಿಕೊಂಡಿದ್ದರೆನ್ನಬಹುದು, ಸ್ಪಷ್ಟವಾಗಿ ನಿರೂಪಿಸುವುದಾದರೆ ಅಂದು ಅಗ್ರಹಾರ ಸ್ವಯಂಧಿಕಾರವುಳ್ಳ ಒಂದು ಸಂಸ್ಥೆಯಾಗಿತ್ತೆನ್ನಬಹುದು. ನಂತರ ಮೈಸೂರು ಸಂಸ್ಥಾನವು ೧೮೮೧ರಲ್ಲಿ ಬ್ರಿಟಿಷರಿಂದ ನೇರವಾಗಿ ಸಂಸ್ಥಾನದ ಆಳ್ವಿಕೆಯ ಚುಕ್ಕಾಣಿಯನ್ನು ಪಡೆದುಕೊಂಡ ಮೇಲೆ ಆಡಳಿತಾತ್ಮಕ ಕ್ಷೇತ್ರದಲ್ಲಿ ವಿಶಿಷ್ಟವಾದ ಬದಲಾವಣೆ ತಂದು ಎಲ್ಲಾ ಪ್ರಜೆಗಳಿಗೂ ಶಿಕ್ಷಣ ದೊರಕಿಸುವ ಕಡೆ ಗಮನ ಹರಿಸಿದರು. ಇದರಿಂದಾಗಿ ಮೈಸೂರು ಸಂಸ್ಥಾನದಲ್ಲಿ ಅಗ್ರಹಾರಗಳ ಸಂಖ್ಯೆ ಕಡಿಮೆಯಾದದ್ದು ಕಂಡುಬರುತ್ತದೆ.

ಅಗ್ರಹಾರದ ಎಲ್ಲಾ ಉತ್ಪತ್ತಿಯ ಬ್ರಾಹ್ಮಣರಿಗೆ ಸಲ್ಲಿತ್ತಿತ್ತು. ಅಗ್ರಹಾರದಿಂದ ಆದಾಯಕ್ಕೆ ಸಲ್ಲಬೇಕಾಗಿದ್ದ ಸಂಪತ್ತನ್ನು ಬ್ರಾಹ್ಮಣರು ಅನುಭವಿಸುತ್ತಿದ್ದರು. ಇಷ್ಟಲ್ಲದೆ ರಾಜರು ಅಗ್ರಹಾರಗಳಿಗೆ ಸರ್ವೆಸಾಮಾನ್ಯ ತೆರಿಗೆಯಲ್ಲಿಯೂ ಸಂಪೂರ್ಣ ವಿನಾಯಿತಿ ನೀಡಿರುವುದು ಇಲ್ಲ ಗಮನಾರ್ಹ ರಾಜರುಗಳು ಅಗ್ರಹಾರಗಳನ್ನು ಸ್ಥಾಪಿಸಿ ವಿದ್ಯಾವಂತರಾದ ಬ್ರಾಹ್ಮಣರು ಹೆಚ್ಚಾಗಿ ಅಲ್ಲಿ ನೆಲಸುವಂತೆ ಮಾಡುತ್ತಿದ್ದರು. ಪಂಡಿತರಿಗೆ ವಿದ್ವಾಂಸರಿಗೆ ಹೇರಳವಾದ ಧನ ಸಹಾಯ ಮಾಡಿದ್ದಲ್ಲದೆ ವಿಶೇಷ ಭೂಮಿ ಅಥವಾ ಗ್ರಾಮಗಳ ಅದಾಯವನ್ನು ದತ್ತಿಯಾಗಿ ಬಿಟ್ಟುಕೊಡುತ್ತಿದ್ದರೆಂದು ತಿಳಿಯಬಹುದು. ಡಾ. ಚಿದಾನಂದ ಮೂರ್ತಿಯವರು “ಅಗ್ರಹಾರಗಳಲ್ಲಿ ಬ್ರಾಹ್ಮಣರೇ ಇರಬೇಕಿಲ್ಲ, ಬೇರೆ ಜಾತಿಯ ಜನಾಂಗಗಳೂ ಇರಬಹುದು” ಎಂದು ತಮ್ಮ ಸಂಶೋಧನಾ ಎಂಬ ಕೃತಿಯಲ್ಲಿ ತಿಳಿಸಿದ್ದಾರೆ ಆದರೆ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ.

ಆಧುನಿಕ ಮೈಸೂರಿನಲ್ಲಿ ಕೇಂದ್ರಾಡಳಿತ

ಒಡೆಯರ್ ಆಳ್ವಿಕೆಯ ಕಾಲದಲ್ಲಿನ ಮೈಸೂರು ಸಂಸ್ಥಾನ ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಉಲ್ಲೇಖನಾರ್ಹವಾದ ಕೊಡುಗೆಗಳನ್ನು ನೀಡಿ ಭಾರತದ ಇತಿಹಾಸದಲ್ಲಿ ವಿಶಿಷ್ಟವಾದ ಸ್ಥಾನವನ್ನು ಪಡೆದಿತ್ತು. ಕ್ರಿ.ಶ. ೧೩೯೯ರಿಂದ ೧೯೪೭ರವರೆಗೆ ಆಳಿದ ಒಡೆಯರ ಸಂತತಿಯಲ್ಲಿ ಅತ್ಯಂತ ಪ್ರಸಿದ್ಧರು ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರು. ಇವರ ಆಳ್ವಿಕೆ (೧೯೦೨ ರಿಂದ ೧೯೪೦) ಮೈಸೂರಿನ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಮತ್ತು ವೈಭವದ ಅಧ್ಯಯನವಾಗಿದೆ.

ಮೈಸೂರು ಸಂಸ್ಥಾನ ಬ್ರಿಟಿಷರ ಪರೋಕ್ಷ ಆಳ್ವಿಕೆಗೆ ಒಳಪಟ್ಟಿದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರು ಆಡಳಿತದ ಕೇಂದ್ರಬಿಂದುವಾಗಿದ್ದರು. ಒಳಾಡಳಿತವೆಲ್ಲವೂ ಅವರ ಹೆಸರಿನಲ್ಲೇ ನಡೆಯುತ್ತಿದ್ದರಿಂದ ಮಹಾರಾಜನೇ ಸರ್ಕಾರವಾಗಿದ್ದರು. ಒಳಾಡಳಿತದಲ್ಲಿ ಮಹಾರಾಜರ ಅಧಿಕಾರಕ್ಕೆ ಅಡ್ಡಿಯಿರಲಿಲ್ಲ. ಸರ್ಕಾರ ಅಧಿಕಾರಗಳದ್ದು, ನ್ಯಾಯಮೂರ್ತಿಗಳನ್ನು ನೇಮಕಮಾಡುವ ಮತ್ತು ಕಾನೂನುಗಳನ್ನು ಜಾರಿಗೆ ತರುವ ಅಧಿಕಾರ ಅವರದಾಗಿತ್ತು. ಪ್ರಮುಖವಾಗಿ ಕೇಂದ್ರಾಡಳಿತವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿತ್ತು. ಸಂಸ್ಥಾನದ ಆಡಳಿತ ಮತ್ತ ಅರಮನೆಯ ಆಡಳಿತ ಮಹಾರಾಜರ ಹೆಸರಿನಲ್ಲೇ ನಡೆಯುತ್ತಿದ್ದರೂ ಎರಡು ಆಡಳಿತಗಳು ಪ್ರತ್ಯೇಕವಾಗಿದ್ದವು. ಮೈಸೂರು ಒಡೆಯರ ರಾಜಧಾನಿಯಾದರೂ ಬೆಂಗಳೂರು ಆಡಳಿತ ಕೇಂದ್ರವಾಗಿತ್ತು. ರಾಜರು ಮೈಸೂರಿನಲ್ಲೇ ಇದ್ದುಕೊಂಡು ಆಡಳಿತ ಕಾರ್ಯಗಳಿಗಾಗಿ ಬೆಂಗಳೂರು ಮತ್ತು ಮೈಸೂರುಗಳ ನಡುವೆ ಪ್ರವಾಸ ಕೈಗೊಳ್ಳುತ್ತಿದ್ದರು.

ಮಹಾರಾಜ ಕೇಂದ್ರಾಡಳಿತ ಮುಖ್ಯಬಿಂದುವಾಗಿದ್ದರು. ಆದರೆ ಅವರಿಗೆ ಆಡಳಿತದಲ್ಲಿ ನೆರವಾಗಲು ಕಾರ್ಯನಿರ್ವಹಣೆ ಸಭೆ (ಎಕ್ಸಿಕ್ಯೂಟಿವ್ ಕೌನ್ಸಿಲ್) ಅಸ್ತಿತ್ವದಲ್ಲಿತ್ತು. ದಿವಾನರ ಅಧ್ಯಕ್ಷತೆಯಲ್ಲಿ ಇಬ್ಬರು ಅಥವಾ ಮೂವರು ಸದಸ್ಯರನ್ನು ಹೊಂದಿದ್ದ ಕಾರ್ಯನಿರ್ವಹಕ ಸಭೆ, ಪೂರ್ಣಕಾಲದ ಮಂತ್ರಿಮಂಡಲವಾಗಿತ್ತು. ಮಹಾರಾಜರ ನಂತರ ಈ ಸಭೆಯೇ ಮುಖ್ಯವಾದುದು. ರಾಜರ ನಂತರ ಹೆಚ್ಚಿನ ಅಧಿಕಾರ ಹೊಂದಿದವರು ದಿವಾನರು. ಇವರಿಗೆ ಎಲ್ಲಾ ಇಲಾಖೆಗಳ ಮೇಲ್ವಿಚಾರಣೆಯ ಅಧಿಕಾರವಿತ್ತು. ಆದರೆ ರಾಜರ ಒಪ್ಪಿಗೆಯಿಲ್ಲದೆ ಕಾನೂನು ರಚನೆ. ಹೊಸ ತೆರಿಗೆ ವಿಧಿಸುವ ಅಥವಾ ತೆರಿಗೆ ತೆಗೆದು ಹಾಕುವ ಕಾರ್ಯವನ್ನು ಯಾರೋ ಮಾಡುವಂತಿರಲಿಲ್ಲ. ಅದರ ಮೇಲೆ ಮಹಾರಾಜರ ಸಂಪೂರ್ಣ ಹತೋಟಿ ಇತ್ತು. ಒಂದರ್ಥದಲ್ಲಿ ಇವರಿಗೆ ಮುಖ್ಯವಾಗಿದ್ದುದು ವ್ಯಕ್ತವಾಗಿಲ್ಲ. ಸಂಸ್ಥಾನದ ಹಾಗೂ ಪ್ರಜಾಕೋಟಿಯ ಹಿತವೆಂದೇ ಹೇಳಬಹುದು. ಇದಕ್ಕೆ ನಮ್ಮ ಸಂಸ್ಕೃತಿಯು ಇವರ ಆಳ್ವಿಕೆಯ ಕಾಲದಲ್ಲಿ ಕಂಡ ಬದಲಾವಣೆಯೇ ಸಾಕ್ಷಿಯಾಗಿದೆ.

ಎಕ್ಸಿಕ್ಯೂಟಿವ್ ಕೌನ್ಸಿಲ್ ಗೆ ಸಹಾಯಕವಾಗಿ ಸೆಕ್ರಿಟೇರಿಯಟ್ ಇತ್ತು. ಸೆಕ್ರಟರಿ ಅಂಡರ್ ಸೆಕ್ರಟರಿ, ಅಸಿಸ್ಟೆಂಟ್ ಸೆಕ್ರೆಟರಿ ಮತ್ತು ಬರಹಗಾರ ನೌಕರರುಗಳಿಂದ ಕೂಡಿದ್ದು ಸೆಕ್ರೆಟೇರಿಯಟ್ ಕೇಂದ್ರಾಡಳಿತದ ಕಾರ್ಯಾಲಯವಾಗಿತ್ತು. ಅದು ಸಂಸ್ಥಾನದ ಆಡಳಿತ ವ್ಯವಹಾರಗಳಿಗೆ ಸಂಬಂಧಿಸಿದ ಮುಖ್ಯ ಕಾಗದ ಪತ್ರಗಳನ್ನು ಪರಿಶೀಲಿಸಿ ಒಪ್ಪಿಗೆಗಾಗಿ ದಿವಾನ ಮತ್ತು ಕೌನ್ಸಿಲ್‌ಗಳಿಗೆ ಒಪ್ಪಿಸುತ್ತಿತ್ತು. ದಿವಾನರು ಅವುಗಳನ್ನು ವಿಮರ್ಶಿಸಿ ತಮ್ಮ ಅಭಿಪ್ರಾಯಗಳನ್ನು ಬರೆದು ಕೊನೆಯ ಅಜ್ಞೆಗಾಗಿ ಮಹಾರಾಜರಿಗೆ ಕಳುಹಿಸಿಕೊಡುತ್ತಿದ್ದರು. ಸಂಸ್ಥಾನದಲ್ಲಿ ೧೯೨೩ – ೨೪ರಲ್ಲಿ ನಾಲ್ಕು ಪ್ರಮುಖ ಸೆಕ್ರೆಟೇರಿಯಟ್‌ಗಳಿದ್ದವು, ಅವುಗಳೆಂದರೆ ಜನರಲ್ ಅಂಡ್ ರೆವಿನ್ಯೂ ಸೆಕ್ರೆಟೇರಿಯಟ್, ದಿ ಪಬ್ಲಿಕ್ ವರ್ಕ್ಸ್ ಸೆಕ್ರೆಟೇರಿಯಟ್, ದಿ ಫೈನಾನ್ಸಿಯಲ್ ಸೆಕ್ರೆಟೇರಿಯಟ್ ಮತ್ತು ರೈಲ್ವೆ ಸೆಕ್ರೆಟೇರಿಯಟ್, ಇವುಗಳು ದಿವಾನರ ಉಸ್ತುವಾರಿಯಲ್ಲಿದ್ದು ಸೆಕ್ರೆಟರಿಗಳ ನೇರ ಆಡಳಿತಕ್ಕೆ ಒಳಪಟ್ಟಿದ್ದವು.

ಮಹಾರಾಜ ದಿವಾನ ಮತ್ತು ಕಾರ್ಯನಿರ್ವಾಹಕ ಸಭೆ ಹಾಗೂ ಸೆಕ್ರೆಟೇರಿಯಟ್ ಗಳು ಸಂಸ್ಥಾನದಲ್ಲಿ ಕಾರ್ಯಾಂಗದ ಕೆಲಸವನ್ನು ನಿರ್ವಹಿಸುತ್ತಿದ್ದರೆ ೧೯೦೭ರವರೆಗೆ ಕಾರ್ಯ ನಿರ್ವಾಹಕ ಸಭೆ (ಎಕ್ಸಿಕ್ಯೂಟಿವ್ ಕೌನ್ಸಿಲ್) ಮಹಾರಾಜರ ಒಪ್ಪಿಗೆ ಪಡೆದು ಕಾನೂನುಗಳನ್ನು ರಚನೆ ಆಚರಣೆಗೆ ತರುತ್ತಿತ್ತು. ೧೯೦೭ರಲ್ಲಿ ಲೆಜಿಸ್ಲೇಟಿವ್ ಕೌನ್ಸಿಲ್ (ನ್ಯಾಯ ವಿಧಾಯಕ ಸಭೆ) ಸ್ಥಾಪನೆಯೊಂದಿಗೆ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಶಾಸಕಾಂಗಕ್ಕೆ ಅಡಿಪಾಯ ಹಾಕಲಾಯಿತು.

೧೯೦೭ರಲ್ಲಿ ಅಸ್ತಿತ್ವಕ್ಕೆ ಬಂದ ನ್ಯಾಯ ವಿಧಾಯಕ ಸಭೆಗೆ ಅಧ್ಯಕ್ಷರು ದಿವಾನರು. ಒಟ್ಟು ೬೦ ಸದಸ್ಯರನ್ನು ಹೊಂದಿದ್ದ ಈ ಸಭೆ ವರ್ಷಕ್ಕೆ ಎರಡು ಬಾರಿ ನಡೆಯುತ್ತಿತ್ತು. ಒಬ್ಬ ಸದಸ್ಯರ ಪೈಕಿ ೨೨ ಮಂದಿಯನ್ನು ಪ್ರಜೆಗಳೇ ಚುನಾಯಿಸುತ್ತಿದ್ದರು. ಉಳಿದವರು ಸರ್ಕಾರದಿಂದ ನಾಮಕರಣಗೊಳ್ಳುತ್ತಿದ್ದರು. ಪ್ರತಿವರ್ಷ ಎರಡು ಬಾರಿ ಸಭೆ ಸೇರಿದಾಗ ಸಭೆಯಲ್ಲಿ ಸಂಸ್ಥಾನದ ಆಯವ್ಯಯದ ಚರ್ಚೆ, ಆಡಳಿತಕ್ಕೆ ಸಂಬಂಧಿಸಿದ ಪ್ರಶ್ನೆಗಳು ಚರ್ಚಿಸಲ್ಪಡುತ್ತಿದ್ದವು. ೧೮೮೧ರಲ್ಲಿ ರಚಿತವಾದ ಪ್ರಜಾಪ್ರತಿನಿಧಿ ಸಭೆ ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ತನ್ನ ಸ್ವರೂಪ, ಅಧಿಕಾರ ವ್ಯಾಪ್ತಿ, ಹಕ್ಕು ಬಾಧ್ಯತೆ ಹಾಗೂ ದಲಿತರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕೆಲಸಕಾರ್ಯಗಳನ್ನು ವಿಸ್ತಿರಿಸಿಕೊಂಡು ಹೆಚ್ಚು ಹೆಚ್ಚು ಪ್ರಜಾಸತ್ತಾತ್ಮಕವಾಯಿತು. ಪ್ರಜಾಪ್ರತಿನಿಧಿ ಸಭೆ ಹಾಗೂ ನ್ಯಾಯ ವಿಧಾಯಕ ಸಭೆಗಳೆರಡೂ ಮೈಸೂರು ಸಂಸ್ಥಾನದ ರಾಜಕೀಯ ಜೀವನನ್ನು ಪ್ರತಿಬಿಂಬಿಸುವ ಕನ್ನಡಿಗಳಾಗಿದ್ದವು.

ಸ್ಥಳೀಯ ಆಡಳಿತ

ಮೈಸೂರು ಸಂಸ್ಥಾನದ ಆಧುನಿಕ ಸ್ಥಳೀಯ ಆಡಲಿತ ಮತ್ತು ಸ್ಥಳೀಯ ಸಂಸ್ಥೆಗಳ ವಿಕಾಸದ ಇತಿಹಾಸವು ಒಂದೂವರೆ ಶತಮಾನದಷ್ಟು ಹಿಂದಿನದು. ಇದನ್ನು ಬ್ರಿಟಿಷ್ ಕಮಿಷ್‌ನರುಗಳಿಂದ ಎರವಲು ಪಡೆದು ಒಡೆಯರ್ ರವರು ತಮ್ಮ ಪ್ರಾಂತ್ಯದಲ್ಲಿ ಪೋಷಿಸಿದರು ಎನ್ನಬಹುದು.

ಆಧುನಿಕ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಸುಧಾರಣಾ ಕ್ರಮಗಳು ಪ್ರಾರಂಭವಾದುದು ೧೮೩೧ರಲ್ಲಿ ಏಕೆಂದರೆ ಬ್ರಿಟಿಷ್ ಪ್ರಭುತ್ವ ಮೈಸೂರು ರಾಜ್ಯದ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರಿಂದ ಅಧಿಕಾರವನ್ನು ಹಿಂದಕ್ಕೆ ಪಡೆದು ಕಮಿಷನರ್ ಮೂಲಕ ಆಡಳಿತದ ನಡೆಸಲು ಪ್ರಾರಂಭಿಸಿದ್ದು ಆ ವರ್ಷದಿಂದಲೇ. ಇಡೀ ಮೈಸೂರು ರಾಜ್ಯವನ್ನು ಮೂರು ಕಂದಾಯ ವಿಭಾಗಗಳಾಗಿ ಮಾರ್ಪಾಡಿಸಿ ಒಟ್ಟು ಎಂಟು ಜಿಲ್ಲೆಗಳನ್ನು ರಚಿಸಲಾಗಿತ್ತು. ನಂದಿದುರ್ಗ, ಅಷ್ಟಗ್ರಾಮ ಮತ್ತು ನಗರ ಇವು ಆ ಮೂರು ವಿಭಾಗಗಳು, ನಂದಿದುರ್ಗ ವಿಭಾಗಕ್ಕೆ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳು ಸೇರಿದ್ದವು. ಅಷ್ಟ ಗ್ರಾಮ ವಿಧಾನಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳು ಸೇರಿದರೆ ನಗರ (ಬಿದನೂರು) ವಿಧಾನಕ್ಕೆ ಶಿವಮೊಗ್ಗ, ಕಡೂರು (ಚಿಕ್ಕಮಗಳೂರು) ಮತ್ತು ಚಿತ್ರದುರ್ಗ ಜಿಲ್ಲೆಗಳು ಸೇರಿದ್ದವು. ವಿಭಾಗಗಳಿಗೆ ವಿಭಾಗ ಸೂಪರಿಂಟೆಂಡೆಂಟ್‌ಗಳು ಮತ್ತು ಜಿಲ್ಲೆಗೆ ಜಿಲ್ಲಾ ಸೂಪರಿಂಟೆಂಡೆಂಟ್‌ಗಳನ್ನು ನೇಮಿಸಲಾಯಿತು. ಜಿಲ್ಲೆಗಳನ್ನು ತಾಲ್ಲೂಕುಗಾಳಗಿ ನಿರ್ಮಿಸಲಾಗಿತ್ತು. ತಾಲ್ಲೂಕು ಸ್ಥಳೀಯ ಆಡಳಿತದ ಪ್ರಮುಖ ಹಂತವಾಗಿತ್ತು. ಅಮಲ್ದಾರರು ತಾಲ್ಲೂಕಿನ ಮುಖ್ಯ ಅಧಿಕಾರಿ, ಅಲ್ಲೇ ಜನಸಾಮಾನ್ಯರು ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಕಂದಾಯ ವಸೂಲಾತಿ, ದರಖಾಸ್ತು ಭೂಮಿ ಮಂಜೂರಾತಿ, ಕಾನೂನು ಪಾಲನೆ, ಅಪರಾಧಿಗಳ ವಿಚಾರಣೆ ಇವೆಲ್ಲ ತಾಲ್ಲೂಕಿನ ಆಡಳಿತಾಧಿಕಾರಿಯ ಅಧಿಕಾರವಾಗಿತ್ತು. ಹೋಬಳಿಗೆ ಶೇಕ್ ದಾರ್ ಎಂಬ ಅಧಿಕಾರಿಯಿದ್ದು ಅಮಲ್ದಾರರಿಗೆ ಆಡಳಿತದಲ್ಲಿ ನೆರವಾಗಬೇಕಿತ್ತು. ಪ್ರಾಚೀನ ಕಾಲದಿಂದಲೂ ಅಸ್ತ್ತಿತ್ವದಲ್ಲಿದ್ದ ಗ್ರಾಮಾಡಳಿತದ ಪ್ರಾಥಮಿಕ ಆಡಳಿತ ಘಟಕವನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಆದರೆ ಹಿಂದೆ ಇದ್ದ ಗ್ರಾಮ ಗೌಡನ ಸ್ಥಾನದಲ್ಲಿ ಪೋಲೀಸ್ ಪಟೇಲನು ನೇಮಕವಾದುದು. ಆತನಿಗೆ ಕಂದಾಯ ವಸೂಲಾತಿ ಮತ್ತು ಕಾನೂನು ವ್ಯವಸ್ಥೆಯ ಹೊಣೆಯನ್ನು ವಹಿಸಲಾಯಿತು. ಈ ಪಟೇಲ ಹುದ್ದೆ ಬಹುಮಟ್ಟಿಗೆ ಹಿಂದಿನ ಗ್ರಾಮಗೌಡನ ಮನೆತನದವರಿಗೇ ಬಂದಿತು. ಶಾನುಭೋಗ ಪಾರಂಪರಿಕ ಗ್ರಾಮ ಲೆಕ್ಕಾಧಿಕಾರಿಯಾಗಿದ್ದು. ಆ ಹುದ್ದೆ ಮುಂದುವರೆಯಿತು. ಕುಳವಾಡಿ ಅಥವಾ ತಳವಾರರು ಗ್ರಾಮದ ಕೊನೆಯ ಗ್ರಾಮ ಸಹಾಯಕರಾಗಿದ್ದರು.

೧೯೩೦ರ ದಶಕದಲ್ಲಿ ಮೈಸೂರು ಸಂಸ್ಥಾನದಲ್ಲಿ ಹೆಚ್ಚಿನ ರಾಜಕೀಯ ಸಂಘಟನೆಗಳಿಂದಾಗಿ ಈ ಸ್ಥಳೀಯ ಸಂಸ್ಥೆಗಳು ಹೆಚ್ಚಾಗಿ ಅಸರೆಯಾಗಿದ್ದವು. ಪ್ರಜಾಪ್ರತಿನಿಧಿ ಸಭೆಯ ಸದಸ್ಯರೊಂದಿಗೆ ಜಿಲ್ಲಾ ಬೋರ್ಡ್ ಮತ್ತು ಗ್ರಾಮಪಂಚಾಯಿತಿ ಸದಸ್ಯರು ಸೇರಿಕೊಂಡು ಜನಪ್ರತಿನಿಧಿಗಳ ದೊಡ್ಡ ಪಡೆಯೇ ನಿರ್ಮಾಣವಾಯಿತು. ಇವರೆಲ್ಲ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪಾಲ್ಗೊಳ್ಳಲು ಈ ಸ್ಥಳೀಯ ಸಂಸ್ಥೆಗಳ ಅನುಭವವೇ ದೊಡ್ಡ ಶಕ್ತಿಯಾಗಿತ್ತೆನ್ನಬಹುದು. ಈ ದೃಷ್ಟಿಯಿಂದ ಮೈಸೂರಿನ ಸ್ಥಳೀಯ ಜನತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಚರಿತ್ರಾರ್ಹವಾಗಿದೆ.

***