ವೈಶ್ಯೆಯರ ಬದುಕು

ಮೈಸೂರು ಸಂಸ್ಥಾನದಲ್ಲಿ ಪ್ರಾರಂಭದಿಂದಲೂ ಯಾವುದೇ ರೀತಿಯ ತಿರಸ್ಕಾರವಿಲ್ಲದೆ ವೇಶ್ಯೆಯರ ಉತ್ತಮ ಜೀವನ ನಡೆಸುತ್ತಿದ್ದರೆಂದು ಅನೇಕ ಆಧಾರಗಳಿಂದ ತಿಳಿಯಬಹುದಾಗಿದೆ. ಗೋವಿಂದ ವೈದ್ಯ, ಮಲ್ಲಿಕಾರ್ಜುನ, ತಿರುಮಲಾಯರವರಲ್ಲದೆ ಇನ್ನೂ ಮೊದಲಾದವರ ಕೃತಿಗಳಲ್ಲಿ ವೇಶ್ಯೆಯರು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದು ಜೀವಿಸುತ್ತಿದ್ದ ಬ್ರಾಹ್ಮಣ, ಕ್ಷತ್ರಿಯರ ಸ್ಥಾನದಲ್ಲಿ ನಿಲ್ಲುತ್ತಿದ್ದರೆಂದು ತಿಳಿಸಿದ್ದಾರೆ. ಅವರೂ ಸಮಾಜದ ಪ್ರಮುಖ ಭಾಗವೆಂದೇ ಅಂದಿನ ಕಲ್ಪನೆಯಾಗಿದ್ದಿತ್ತು. ಅವರಿಗೆ ತನ್ನದೆ ಆದ ಹಕ್ಕುಗಳನ್ನು ಹೊಂದಿರುವುದ ಜೊತೆಗೆ ಎಲ್ಲವನ್ನೂ ಮುಕ್ತವಾಗಿ ನಡೆಸಿಕೊಂಡು ಬರುವ ಸ್ವಾತಂತ್ರ್ಯ ಪಡೆದಿದ್ದವರಾಗಿದ್ದರು. ಅಂದಿನ ಕಾಲದ ಸಾಹಿತ್ಯದಲ್ಲಿ ಹೆಚ್ಚಾಗಿ ಶ್ರೀರಂಗಪಟ್ಟಣ. ಮೂಗೂರು, ತಿರುಮಕೂಡಲು ನರಸೀಪುರದ ವೇಶ್ಯಾವಾಟಿಕೆಗಳಲ್ಲಿನ ವಿವರಣೆ ಅಪಾರವಾಗಿ ದೊರೆಯುತ್ತವೆ. ವೇಶ್ಯೆಯರಲ್ಲಿಯೂ ಅಂದು ಉತ್ತಮ ವರ್ಗದ ವೇಶ್ಯೆ ಹಾಗೂ ಸಾಮಾನ್ಯ ವೇಶ್ಯೆ (ಸೂಳೆ) ಎಂದು ವಿಭಾಗಗಳಿದ್ದವು.

ವೇಶ್ಯೆಯರು ವಿದ್ಯಾವಂತರಾಗಿದ್ದುದರ ಜೊತೆಗೆ ಸಂಗೀತಾಭ್ಯಾಸ, ನೃತ್ಯಗಳಿಗೆ ಹೆಚ್ಚಿನ ಗಮನ ನೀಡಿ ಇದರ ಜೊತೆಗೆ ತಮ್ಮ ದೇಹ ಸೌಂದರ್ಯದ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದವರಾಗಿದ್ದರು. ರಾಜಧಾನಿಯಲ್ಲಿ ವೇಶ್ಯೆಯರು ವಿಲಾಸ ಜೀವನ ನಡೆಸುತ್ತಿದ್ದರು. ಹಲವಾರು ಸುರಸುಂದರಿಯರನ್ನು ಅಸ್ಥಾನದ ಪ್ರತಿಷ್ಠಿತರು, ಶ್ರೀಮಂತರುಗಳೂ ಅವರ ಸಹವಾಸಕ್ಕೆ ಹಾತೊರೆಯುತ್ತಿದ್ದರು ಎಂದು ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯ’ ಹಾಗೂ ತಿರುಮಲಾಚಾರ್ಯನ ‘ಚಿಕ್ಕದೇವರಾಜ ವಿಜಯ’ ಕೃತಿಗಳು ಮನಮೋಹಕವಾಗಿ ವರ್ಣಿಸಿರುವುದು ಕಂಡುಬರುತ್ತದೆ. ದಿನನಿತ್ಯದ ರಾಜಸಭೆಗಳಲ್ಲಿ ವೇಶ್ಯೆಯರು ಸದಾ ಉಪಸ್ಥಿತರಾಗಬೇಕಾಗಿದ್ದಿತ್ತು. ವಿಶೇಷ ನವರಾತ್ರಿ ಸಮಾರಂಭಗಳಲ್ಲಿ ವೇಶ್ಯೆಯರು ರಾಜರ ಅಸ್ಥಾನ ಹಾಗೂ ರಾಜನ ಸನ್ನಿಧಾನಗಳಲ್ಲಿ ಗಾನ ನೃತ್ಯಗಳಿಂದ ರಂಜಿಸಬೇಕಾಗಿದ್ದಿತ್ತು. ಅರಮನೆಯಲ್ಲಿನ ವೇಶ್ಯೆಯರು ಅರಮನೆಯ ಗೂಢಾಚಾರರಾಗಿ, ಸಂಜೆಯ ಗೆಳತಿಯರಾಗಿ, ಅರಸನ ಅಂಗ ಮರ್ದನ ಕಾರ್ಯ ಮಾಡುವವರಾಗಿ, ಅರಸನಿಗೆ ಗಂಧಜಲ, ಅವರ ವೇಷ ಭೂಷಣಗಳನ್ನು ಸಜ್ಜುಗೊಳಿಸುವುದು ಮೊದಲಾದ ಕರ್ತವ್ಯಗಳನ್ನು ಚಾಚೂತಪ್ಪದೆ ಮಾಡಬೇಕಾಗಿತ್ತು. ಹದಿಬದೆಯ ಧರ್ಮ ಎಂಬ ಮಹತ್ವದ ಕೃತಿ ಬರೆದ ಸಂಚಿಯ ಹೊನ್ನಮ್ಮನು ಶೂದ್ರ ಜಾತಿಯ ಮನೆ ಕೆಲಸದವಳಾಗಿದ್ದರೂ ಸಹ ಸ್ವಪ್ರತಿಭೆಯಿಂದಲೇ ಮೇಲೇರಿ ಚಿಕ್ಕದೇವರಾಜ ಒಡೆಯರ ಅಸ್ಥಾನದಲ್ಲಿ ಅಗ್ರಮಾನ್ಯತೆ ಪಡೆದ ಕವಯತ್ರಿಯಾಗಿದ್ದಳು. ಇವಳೂ ಸಹ ಹೆಣ್ಣು ಮಕ್ಕಳನ್ನು ದೇವರ ಸೇವೆಗೆಂದು ಬಿಡುವ ಸಂಪ್ರದಾಯವಿತ್ತೆಂದು ಹೇಳುವುದಿಲ್ಲ. ವಿದೇಶಿಯರಾದ ಸಿನ್ನಮಿ, ಬುಕನನ್, ಅಬೆ ದುಬಾಯಿರ ಬರೆಹಗಳಲ್ಲಿಯೂ ಸಹ ದೇವದಾಸಿಯರ ಉಲ್ಲೇಖ ಕಂಡುಬರುವುದಿಲ್ಲ.

ಅರಸರ ವೇಷಭೂಷಣಗಳು : ಮೈಸೂರು ಅರಸರ ವೇಷಭೂಷಣಗಳನ್ನು ತಿಳಿಯಲು ನಾವು ಸಾಹಿತ್ಯ ಹಾಗೂ ಶಿಲ್ಪಿಗಳ ಮೊರೆಹೊಕ್ಕಲೇ ಬೇಕಾಗುತ್ತದೆ. ‘ಚಿಕ್ಕದೇವರಾಜ ವಿಜಯ’ವು ಈ ಹಂತದಲ್ಲಿ ಮಹತ್ವದ ಸಾಹಿತ್ಯ ಕೃತಿಯಾಗಿತ್ತೆನ್ನಬಹುದು.

ಅರಸರು ದರ್ಬಾರು ನಡೆಯುತ್ತಿದ್ದ ಕಾಲದಲ್ಲಿ ಹಾಗೂ ದಸರಾ ಮಹೋತ್ಸವ, ಸಭೆ, ಸಮಾರಂಭಗಳಲ್ಲಿ ವೈಭವಪೂರಿತವಾದ ವೇಷಭೂಷಿತರಾಗಿ ಕಂಗೊಳಿಸುತ್ತಿದ್ದರು. ಅರಸರ ವಿಶೇಷ ಶೈಲಿಯ ವೇಷ ಹಾಗೂ ಅವರು ಧರಿಸುತ್ತಿದ್ದ ಪೇಟ ಇಂದಿಗೂ ಸಹ ‘ಮೈಸೂರು ಪೇಟ’ ಎಂದು ಜಗತ್ ಪ್ರಸಿದ್ದಿ ಪಡೆದಿರುವುದು ಕಂಡುಬರುತ್ತದೆ. ಮೈಸೂರಿನ ತ್ರಿಣಯನೇಶ್ವರ ದೇವಾಲಯದಲ್ಲಿ ಕಂಠೀರವ ನರಸರಾಜರದೆನ್ನಲಾಗಿರುವ ಭಕ್ತಿಪೂರ್ವಕ ಭಂಗಿಯ ವಿಗ್ರಹವೊಂದು ಅವರ ವೇಷಭೂಷಣಕ್ಕೆ ಹಿಡಿದ ಕನ್ನಡಿಯಾಗಿದೆ. ‘ಬೆಲೆಬಾಳುವ ಮುಕ್ತಾಭರಣ ಖಚಿತವಾದ ವೇಷಭೂಷಣಗಳನ್ನು ಧರಿಸಿ ಅಲಂಕೃತ ಕವಚವನ್ನು ಜರಿತಾರಿ ಕಸೂತಿಯ ಮುಂಡಾಸು (ರುಮಾಲು) ತೊಟ್ಟು, ಕಾಳಿಗೆ ವಜ್ರ ಖಚಿತವಾದ ಹೊನ್ನ ಹಾವುಗೆಗಳನ್ನು ಧರಿಸುತ್ತಿದ್ದರು. ವಿಶೇಷ ಸಮಾರಂಭಗಳಲ್ಲಿ ಪಟ್ಟಾಂಬರವುಟ್ಟು ತಲೆಗೆ ಬಣ್ಣ ಬಣ್ಣದ ಮುಂಡಾಸಿಟ್ಟು, ಹಣೆಗೆ ಕಸ್ತೂರಿ ತಿಲಕವಿಟ್ಟುಕೊಳ್ಳುತ್ತಿದ್ದರು”. ಎಂದು ಸಮಕಾಲೀನ ಆಧಾರವನ್ನು ಆಧರಿಸಿ ಎಂ.ವಿ. ಕೃಷ್ಣರಾವ್ ಮತ್ತು ಎಂ. ಕೇಶವ ಭಟ್ಟರು ತಿಳಿಯಪಡಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ ವೇಷಭೂಷಣವನ್ನು ನೋಡಿರುವ ಹಿರಿಯ ನಾಗರಿಕರು ಇಂದಿಗೂ ಇದ್ದು. ಅವರು ಅವರ ದರ್ಬಾರ್ ನಡೆಯುವಾಗಿನ ವೇಷಭೂಷಣವನ್ನು ವಿವರಿಸಿದ್ದಾರೆ. ಏಕೆಂದರೆ ಇದೇ ಸಂಸ್ಕೃತಿಯು ಭಾರತಕ್ಕೆ ಸ್ವಾತಂತ್ರ ದೊರಕುವವರೆಗೂ ಮುಂದುವರೆದುಕೊಂಡು ಬಂದು ಒಂದಲ್ಲ ಒಂದು ದೃಷ್ಟಿಯಲ್ಲಿ ಇಂದಿಗೂ ಜೀವಂತವಾಗಿ ಉಳಿದೆನ್ನಬಹುದು.

ಚಿಕ್ಕ ದೇವರಾಜ ಒಡೆಯರ ವೇಷಭೂಷಣವನ್ನು ‘ಚಿಕ್ಕದೇವರಾಜ ವಿಜಯ’ದಲ್ಲಿ ವರ್ಣಿಸಿರುವುದು ಕಂಡುಬರುತ್ತದೆ. ರಾಜರ ಥಳಥಳಿಸುವ ಬಿಳಿಯ ಪಟ್ಟಾಂಬರವುಟ್ಟು ರಾಜರ ದರ್ಬಾರಿಗೆ ಬರುತ್ತಿದ್ದರೆಂದು ಹಾಗೂ ರಾಜರು ಬರುವಾಗ ಅವರ ಆಗಮನವನ್ನು ಘೋಷಿಸುವ ವಂದಿ ಮಾಗಧರು ಧರಿಸುತ್ತಿದ್ದ ಬಟ್ಟೆಗಳ ವರ್ಣನೆಯೂ ಇಲ್ಲಿ ಸಿಗುತ್ತದೆ. ಶ್ರೀಮಂತರು ಪ್ರತಿಷ್ಠಿತವಾದ ರೇಷ್ಮೆ ಬಟ್ಟೆಗಳನ್ನು ಧರಿಸುತ್ತಿದ್ದರು. ದಳವಾಯಿ, ಮಂತ್ರಿಗಳು ಹಾಗೂ ಗಣ್ಯವ್ಯಕ್ತಿಗಳು ಜರತಾರಿ ‘ಮುಂಡಾಸು’ಗಳನ್ನು ಧರಿಸುತ್ತಿದ್ದರೆಂದೂ ಈ ಕಾವ್ಯವು ತಿಳಿಸುತ್ತದೆ. ವೈದಿಕ ಬ್ರಾಹ್ಮಣರು ನಿರಾಡಂಬರವಾದ ದೋತರ ಹಾಗೂ ಉತ್ತರೀಯ (ಉತ್ತರಿಗೆ)ಯನ್ನು ಧರಿಸಿದರೆ ವೇಶ್ಯೆಯರು ವಿವಿಧ ಬಗೆಯ ಸಾಂಪ್ರದಾಯಿಕ ವೇಷಭೂಷಣಗಳ ಜೊತೆಗೆ ಮಿನುಗುತ್ತಿದ್ದರೆನ್ನಬಹುದು.

ಅಂದಿನ ಕಾಲದ ಹೆಣ್ಣು ಮಕ್ಕಳು ಧರಿಸುತ್ತಿದ್ದ ವೇಷಭೂಷಣವನ್ನು ಕವಿ ಗೋವಿಂದ ವೈದ್ಯರು ತನ್ನ ಕಂಠೀರವ ನರಸಿಂಹ ವಿಜಯ ಕೃತಿಯಲ್ಲಿ ವರ್ಣಿಸಿದ್ದಾರೆ. ಅವನು ಅಂದು ಸೀರೆ ರವಿಕೆಗಳ ವರ್ಣನೆಯಲ್ಲಿ ತಲ್ಲೀನರಾಗಿ ಸೆಲ್ಲಿಯ ಸೀರೆ, ಕಂಚಿಯ ಸೀರೆ, ಚಂದಗಲದ ಸೀರೆ ಅಂದರೆ ಸೇಲಂ, ಕಂಚಿ ಮತ್ತು ಚಂದಗಲ ಎಂಬ ಕಡೆ ಸಿದ್ಧವಾದ ಸೀರೆಗಳ ಬಳಕೆಯ ವರ್ಣನೆಯನ್ನು ಸಂಕ್ಷಿಪ್ತವಾಗಿ ವರ್ಣಿಸಿರುವುದು ಕಂಡುಬರುತ್ತದೆ. ಇದರ ಜೊತೆಗೆ ಕವಿಯು ಸಾಮಾನ್ಯ ಜನರ ಬಟ್ಟೆಯ ಬಗ್ಗೆ ತಿಳಿಸಲು ಸಹ ಪ್ರಯತ್ನಿಸಿ ಹತ್ತಿಯ ಸಾದಾಬಟ್ಟೆ ಎಂಬ ಹೇಳಿ ತೃಪ್ತರಾಗಿದ್ದಾರೆ. ಒಂದು ಹಂತದಲ್ಲಿ ಸಂಸ್ಥಾನದ ದೀನದಲಿತರಿಗೆ ಮಾನ ಮುಚ್ಚಿಕೊಳ್ಳಲೂ ಸಹ ಬಟ್ಟೆಯ ತೊಂದರೆ ಇತ್ತೆಂದು ಹೇಳಬಹುದು.

ರಾಜಾಸ್ಥಾನದ ವೈಭವ : ವೈಭವದ ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ದೊರೆ ಎನ್ನಿಸಿಕೊಂಡಿರುವ ಕೃಷ್ಣದೇವರಾಯನ ಅಸ್ಥಾನದ ವೈಭವ ಹಾಗೂ ಅಲ್ಲಿ ತುಂಬಿ ತುಳುಕುತಿದ್ದ ವೈಭವೀಕೃತ ಜೀವನವನ್ನು ಪಾಯಸ್, ನ್ಯೂನಿಸ್‌ರ ವಿದೇಶಿ ಬರವಣಿಗೆಗಾರರು ಹಾಗೂ ಸ್ವದೇಶಿ ಬರವಣಿಗೆಗಾರರು ವರ್ಣಿಸಿ ಮನಸಾರೆ ವಿಜಯನಗರದ ಸಾಂಸ್ಕೃತಿಕ ಪರಂಪರೆಯನ್ನು ಚಾಚೂತಪ್ಪದೆ ಮೈಗೂಡಿಸಿಕೊಂಡ ಮೈಸೂರಿನ ರಾಜರು ವಿಜಯನಗರದ ಅರಸರಂತೆ ಕಲಾ ಸಂಸ್ಕೃತಿಗಳ ಉದಾರ ಪೋಷಕರಾಗಿ ಇಂದಿಗೂ ಇತಿಹಾಸ ಪ್ರಸಿದ್ದರಾಗಿದ್ದಾರೆ. ಮೈಸೂರಿನ ಒಡೆಯರ್ ರವರು ‘ಕರ್ನಾಟಕ ರತ್ನ ಸಿಂಹಾಸನಾಧೀಶ್ವರ’ರೆಂದೇ ಪ್ರಸಿದ್ಧರಾಗಿದ್ದಾರೆ. ಇವುಗಳ ಜೊತೆಗೆ ಕನಾಟಕ ಭೂಮಂಡಲೇಶ್ವರ ‘ದಕ್ಷಿಣ ದ್ವಿಚಕ್ತವರ್ತಿ ‘ಶೃಂಗಾರ ಕರ್ನಾಟಕ ಚಕ್ರಿ’, ಕನಾರ್ಟಕ ಚಕ್ರೇಶ್ವರ’ ಇತ್ಯಾದಿ ಬಿರುದುಗಳಿಂದ ಅಂಕಿತರಾಗಿ ವಿಜಯನಗರದ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯ ಉತ್ತರಾಧಿಕಾರಿಗಳೆಂಬುದನ್ನು ನಾಡಿಗೆ ತೋರಿಸಿಕೊಟ್ಟಿದ್ದರೆನ್ನಬಹುದು. ಇದರ ವರ್ಣನೆ ಹಾಗೂ ವೈಭವವನ್ನು ಗೋವಿಂದ ವೈದ್ಯನ ‘ಕಂಠೀರವ ನರಸರಾಜ ವಿಜಯ’ವು ಎಳೆಎಳೆಯಾಗಿ ಹೊರಚಲ್ಲುತ್ತದೆ.

ಸಂಗೀತ ಮತ್ತು ನಾಟ್ಯ: ಮೈಸೂರು ಸಂಸ್ಥಾನವು ಸಂಗೀತ ಮತ್ತು ನಾಟ್ಯ ಕಲೆಗಳ ತವರೂರಾಗಿತ್ತೆಂದು ಹೇಳಬಹುದು. ಸಂಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರು, ನೃತ್ಯಕಲಾವಿದರು, ಕಲಾವಿದೆಯರು ಹೆಚ್ಚಿನ ಸಂಖ್ಯೆಯಲ್ಲಿ ಅಲಂಕರಿಸಿದ್ದರೆನ್ನಬಹುದು. ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ತಾತಾಚಾರ್ಯ ಹಾಗೂ ಇವರ ವಂಶದವನಾದ ವೆಂಕಟ ವರದಾಚಾರ್ಯನು ಪ್ರಮುಖರಾದರೆ, ವೆಂಕಟ ವರದಾಚಾರ್ಯರು ಅಂದು ರಾಜಗುರುಗಳಾಗಿಯೂ, ನ್ಯಾಯ ಶಾಸ್ತ್ರಜ್ಞನಾಗಿಯೂ ಪ್ರಸಿದ್ದಿಪಡೆದಿದ್ದದ್ದು ಸಮಕಾಲಿನ ದಾಖಲೆಗಳಿಂದ ತಿಳಿದುಬರುತ್ತದೆ. ಅಂದು ಸಂಗೀತ, ಗಾನ, ವಾದ್ಯ, ನೃತ್ಯಗಳೇ ಅರಸರ ಅಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹತ್ವವೆನ್ನಿಸಿಕೊಂಡಿದ್ದವು. ಅಂದಿನ ‘ಪಾಡುವ ಗಾಯಕರು’ ಎಂದು ಕರೆಸಿಕೊಳ್ಳುತ್ತಿದ್ದಂತವರು ಹೆಚ್ಚಿನ ಪ್ರಾವೀಣ್ಯತೆಯನ್ನು ಪಡೆದವರಾಗಿದ್ದರೆನ್ನಬಹುದು. ವೀಣಾವಾದನವು ಅಂದು ಬಹು ಶ್ರೀಮಂತವಾದ ಹಾಗೂ ಜನಪ್ರಿಯವಾದದ್ದು ಆಗಿತ್ತು. ರಾಜಸಭೆಗಳಲ್ಲಿ ಸಂತೋಷ ಕೂಟಗಳಲ್ಲಿ ಸಂಗೀತದೊಡನೆ ವೇಶ್ಯೆಯರ ಚಿತ್ತಾಕರ್ಷಕ ನೃತ್ಯವೂ ನಡೆಯುತ್ತಿದ್ದಿತ್ತು.

ಆಭರಣ ಮತ್ತು ಆಹಾರ : ಸಂಸ್ಥಾನದ ಜನರು ಧರಿಸುತ್ತಿದ್ದ ಆಭರಣಗಳನ್ನು ತಿಳಿಯಲು ಮತ್ತೆ ನಾವು ಲಿಖಿತ ಸಾಹಿತ್ಯ, ಜನಪದ ಸಾಹಿತ್ಯ ಹಾಗೂ ಶಿಲ್ಪಕಲೆಗೆ ಸಂಪೂರ್ಣವಾಗಿ ಮೊರೆ ಹೋಗಬೇಕಾಗುತ್ತದೆ. ಅಂದೂ ಇಂದಿನಂತೆ ಸ್ತ್ರೀ ಪುರುಷರಿಬ್ಬರೂ ಆಭರಣ ಪ್ರಿಯರಾಗಿದ್ದರೆನ್ನಬಹುದು. ಏಕೆಂದರೆ ಇಬ್ಬರೂ ಕೊರಳಿಗೆ ಚಿನ್ನದಾರವನ್ನು ಧರಿಸಿರುವುದು ಅನೇಕ ಶಿಲ್ಪಿಗಳಿಂದ ತಿಳಿದುಬರುತ್ತದೆ. ವಿದೇಶಿ ಪ್ರವಾಸಿಗನಾದ ಅಬೆ ದುಬಾಯಿಯವರ ‘ದಿ ಹಿಂದೂ ಮ್ಯಾನರ್ಸ್ ಅಂಡ್ ಕಸ್ಟಮಸ್’ ಎಂಬ ಮಹತ್ವದ ಪುಸ್ತಕದಲ್ಲಿ ವರ್ಣಿಸಿರುವ ಹಾಗೆ ಪುರಷರ ಹಾರಕ್ಕೆ ‘ಕಂಠೀಸರ’ ‘ಗೋಪು’ ಎಂದು ಕರೆದರೆ, ಸ್ತ್ರೀಯರ ಹಾರಕ್ಕೆ ಸರಿಗೆ ಟೀಕು’ ಎಂದು ಹೆಸರಿತ್ತೆಂದು, ನಂತರ ಮೂಗುತಿ, ಚೌಕುಳಿ, ಓಲೆ, ಬಳೆ, ಕಡಗ, ಕಂಕಣ, ಕಾಲಂದುಗೆ, ಜಡೆ ಬಂಗಾರ, ಸರಸಾತಿ, ಸರ, ಹಾರ, ಪದಕಗಳು ಹೆಣ್ಣು ಮಕ್ಕಳ ಚೆಲುವನ್ನು ಹೆಚ್ಚಿಸುತ್ತಿದ್ದವು. ಹಬ್ಬ ಹರಿದಿನಗಳಲ್ಲಿ ವಿಶೇಷ ಸಮಾರಂಭಗಳಲ್ಲೂ ಸ್ತ್ರೀಯರು ‘ಮಿಸುಪ ಸಂಪಗೆಗಾವಿ, ಸಂದ್ಯವಳಿ’ ಮೊದಲಾದ ಬಣ್ಣ ಬಣ್ಣದ ದಿವ್ಯ ಆಭರಣಗಳನ್ನು ಧರಿಸುತ್ತಿದ್ದರೆಂದು ತಿಳಿಸಿದ್ದಾನೆ. ಹೆಣ್ಣು ಮಕ್ಕಳು ಕಾಲಿಗೆ ಬೆಳ್ಳಿಯ ಚೈನು ಹಾಗೂ ಕಡಗಗಳನ್ನು ಧರಿಸುತ್ತಿದ್ದರು ಎಂದು ಸುಂದರವಾದ ವರ್ಣನೆಯನ್ನು ನೀಡಿದ್ದಾನೆ.

ಸಂಸ್ಥಾನದ ಜನರ ಆಹಾರ ಪದ್ಧತಿಯು ಪರಿಸರ, ಸನ್ನಿವೇಶ, ಆಚಾರ, ರೂಢಿಗಳಿಗೆ ಅನುಸಾರವಾಗಿತ್ತೆನ್ನಬಹುದು. ಅಂದು ಅಕ್ಕಿ, ರಾಗಿ, ಜೋಳ, ದ್ವಿದಳ ಧಾನ್ಯದ ಆಹಾರ ವಸ್ತುಗಳನ್ನು ಹೆಚ್ಚಾಗಿ ಸಂಸ್ಥಾನದಲ್ಲಿ ಬೆಳೆಯಲಾಗುತ್ತಿದ್ದಿತ್ತು. ಸಂಸ್ಥಾನದ ಜನರ ಮುಖ್ಯ ಆಹಾರವೆಂದರೆ ಅಕ್ಕಿಯಾಗಿದ್ದಿತ್ತು. ಮಾಂಸಹಾರಿ ಜನರುಗಳ ಕೋಳಿ, ಕುರಿ, ಆಡು, ಹಂದಿ, ಹಸು, ಎಮ್ಮೆಗಳನ್ನು ತಿನ್ನುತ್ತಿದ್ದರು. “ಸಾಮಾನ್ಯ ಜನತೆಗೆ ರಾಗಿ ಹಾಗೂ ಜೋಳ ಮುಖ್ಯಹಾರ, ವಸೂರಬಳ್ಳಿ ಮುಂತಾದ ತರಕಾರಿಯೊಂದಿಗೆ ರಾಗಿಯನ್ನು ಬೇಯಿಸಿ ತಿನ್ನುತ್ತಾರೆ, ಧನಿಕರು ಅಕ್ಕಿಯನ್ನು ಗೋಧಿಯ ರೊಟ್ಟಿಯನ್ನು ಉಪಯೋಗಿಸುತ್ತಾರೆ” ಎಂದು ೧೭೫೦ – ೬೩ರಲ್ಲಿ ಮೈಸೂರಿನಲ್ಲಿ ಪ್ರವಾಸ ಮಡಿದ ಫಾದರ್ ಸಿನ್ನಾಮಿ ತಿಳಿಸಿರುವುದು ಕಂಡುಬರುತ್ತದೆ.

ಕಂಠೀರವ ನರಸರಾಜ ವಿಜಯವು ಅರಮನೆಯ ರಾಜಭೋಜನದ ವೈಭವವನ್ನು ರಸವತ್ತಾಗಿ ವರ್ಣಿಸುವ ಕೆಲಸ ಮಾಡುತ್ತದೆ. ಅರಮನೆಯಲ್ಲಿ ಚಿನ್ನದ, ಬೆಳ್ಳಿಯ ಊಟದ ಪ್ಲೇಟುಗಳು ಬಳಕೆಯಲ್ಲಿದ್ದವು. ಬ್ರಾಹಣರು ಬಾಳೆಯ ಎಲೆ ಅಥವಾ ಅವರೇ ತಂದ ಎಲೆಯನ್ನಾಗಲಿ ಉಪಯೋಗಿಸಿ ಊಟ ಮಾಡುತ್ತಿದ್ದರೆಂದು ಈ ಕಾವ್ಯ ತಿಳಿಸುತ್ತದೆ.

ಮದುವೆ ಸಂಪ್ರದಾಯ ಮತ್ತು ಜನಾಂಗಿಯ ಆಚರಣೆಗಳು

ಅಂದಿನಿಂದ ಇಂದಿನವರೆವಿಗೂ ಪ್ರತಿಯೊಬ್ಬ ವ್ಯಕ್ತಿಯ ಉನ್ನತಿ, ಅವನತಿ, ಸುಖ, ಸುಃಖ ಮುಂತಾದವುಗಳೆಲ್ಲವೂ ಸಹ ಒಂದು ದೃಷ್ಟಿಯಲ್ಲಿ ವಿವಾಹದ ತಳಹದಿಯ ಮೇಲೆ ಅವಲಂಬಿಸಿರುವುದಾಗಿರುತ್ತದೆ ಎನ್ನಬಹುದು. ಸಂಸ್ಥಾನದಲ್ಲಿದ್ದ ಸಾಮಾಜಿಕ ವರ್ಗದವರೆಲ್ಲರೂ ಕಾಲ, ದೇಶ, ಪರಿಸ್ಥಿತಿಗಳಿಗನುಗುಣವಾಗಿ ಹಳೇ ಹಾಗೂ ಹೊಸ ಸಂಸ್ಕೃತಿಗಳ ಮಿಲನದಿಂದಾಗಿ (ವಿದೇಶಿ ಸಂಸ್ಕೃತಿಯೂ ಸಹ ಪ್ರಭಾವ ಭೀರಲಾರಂಭಿಸಿತು.) ವಿವಾಹ ಪದ್ಧತಿಯಲ್ಲಿ ಅನೇಕ ಬದಲಾವಣೆಯನ್ನು ಕಂಡುಕೊಳ್ಳುತ್ತಾ ಬಂದಿದೆ. ಅದರ ಜೊತೆಗೆ ತನ್ನ ಮೂಲ ಸಂಸ್ಕೃತಿಯನ್ನು ಚಾಚೂತಪ್ಪದೆ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಪ್ರಾಚೀನ ಕಾಲದಿಂದಲೂ ಮೈಸೂರು ಸಂಸ್ಥಾನದಲ್ಲಿಯೇ ಅಲ್ಲದೆ ಭಾರತೀಯ ಪ್ರಜೆಗಳ ಪ್ರತಿಯೊಬ್ಬರ ಜೀವನದಲ್ಲಿ ಕುಟುಂಬವೇ ಸಮಾಜದ ಮೂಲ ಹಾಗೂ ಮುಖ್ಯ ಘಟಕವಾಗಿ ಬೆಳೆದು ಬಂದಿದೆ. ಈ ಕುಟುಂಬ ಘಟಕಗಳ ಆಧಾರದ ಮೇಲೆಯೇ ಗ್ರಾಮ, ಹಳ್ಳಿ, ಜಿಲ್ಲೆ, ಪ್ರಾಂತ್ಯ, ರಾಷ್ಟ್ರಗಳೆಲ್ಲವೂ ಅವಲಂಬಿತವಾಗಿರುವುದು. ಒಂದು ದೃಷ್ಟಿಯಲ್ಲಿ ಇದನ್ನು ನಿಸರ್ಗ ನಿರ್ಮಿಸಿದ ವ್ಯವಸ್ಥೆಯೆಂದರೆ ತಪ್ಪಾಗದು. ಇಂತಹ ಕುಟುಂಬ ವ್ಯವಸ್ಥೆಗೆ ಮದುವೆಯೇ ಮುಖ್ಯವಾದ ಮಹಾದ್ವಾರ. ಮನುಷ್ಯರು ಕೂಡಿ ಬಾಳುವ ವ್ಯವಸ್ಥೆಯಲ್ಲಿ ಹೊಸಬರೇನೂ ಅಲ್ಲ. ಏಕೆಂದರೆ ಪಶು ಪಕ್ಷಿಗಳಿಲ್ಲಿಯೂ ಈ ಸಹಬಾಳ್ವೆ ಕಂಡುಬರುತ್ತದೆ. ಆದರೆ ಮದುವೆಯೆಂಬುದು ಮನುಷ್ಯನಿಗೆ ಮಾತ್ರ ಮೀಸಲಾಗಿರುವ ವೈಶಿಷ್ಟ್ಯವೆಂದು ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಅವರು ಗಂಡಾಗಲಿ ಹೆಣ್ಣಾಗಲಿ ಸಾಮಾನ್ಯವಾಗಿ ಎರಡು ಕುಟುಂಬಗಳಲ್ಲಿ ತಮ್ಮ ಜೀವಿತ ಕಾಲವನ್ನು ಕಳೆಯುತ್ತಾರೆ, ಹುಟ್ಟಿದ ಕುಟುಂಬ ಇದರಲ್ಲಿ ಇಂದಾದರೆ ನಂತರ ಕಟ್ಟಿಕೊಂಡ ಕುಟುಂಬ ಮತ್ತೊಂದೆನ್ನಬಹುದು. ಆದರೆ ಇಲ್ಲಿ. ಹುಟ್ಟಿದ ಕುಟುಂಬದ ಆಯ್ಕೆ ಯಾರಿಗೂ ಸಾಧ್ಯವಿಲ್ಲ. ಆದರೆ ಕಟ್ಟಿಕೊಳ್ಳುವ ಕುಟುಂಬದ ಆಯ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಿರುವ ಸಂಗತಿಯೇ, ಹುಟ್ಟಿನಿಂದ ಮೊದಲ ಕುಟುಂಬ ನಿರ್ಧಾರಿತವಾದರೆ ಮದುವೆಯಿಂದ ಹೊಸ ಕುಟುಂಬ ಮೂಡಿಬರುತ್ತದೆ. ಹೀಗೆ ಸಮಾಜದ ರಚನೆಯಲ್ಲಿ ಕುಟುಂಬಕ್ಕೆ ಒಂದು ಸ್ಪಷ್ಟವಾದ ಚೌಕಟ್ಟು ಇರುವುದು ಕಂಡುಬರುತ್ತದೆ. ಕುಟುಂಬಕ್ಕೆ ತಳಹದಿಯೇ ವಿವಾಹ, “ಸಾಮಾಜಿಕ ಮನ್ನಣೆ ಮಡೆದ ಗಂಡು – ಹೆಣ್ಣುಗಳ ಸಂಯೋಗವನ್ನು ವಿವಾಹ ಎನ್ನುತ್ತಾರೆ. ವಿವಾಹದ ಮೂಲಕ ಗಂಡು – ಹೆಣ್ಣುಗಳು ಪತಿ – ಪತ್ನಿಯರಾಗಿ ಕುಟುಂಬವನ್ನು ಸ್ಥಾಪಿಸುವವರು” ಈ ಹಂತದಲ್ಲಿ ವಿವಾಹ ಪದ್ಧತಿಯು ಕುಟುಂಬ ವ್ಯವಸ್ಥೆಗೆ ತಳಹದಿಯಾಗುತ್ತದೆ ಎನ್ನಬಹುದಾಗಿದೆ. ಈ ವಿವಾಹ ಪದ್ಧತಿಯಲ್ಲಿ ಧರ್ಮ, ಜಾತಿ, ಜನಾಂಗಗಳಲ್ಲಿ ವಿವಿಧ ರೀತಿಯ ಸಂಸ್ಕೃತಿ, ಸಂಪ್ರದಾಯಗಳನ್ನು ಹೆಚ್ಚಾಗಿ ಕಾಣಬಹುದು. ಅಂದು ಮೈಸೂರು ಸಂಸ್ಥಾನದಲ್ಲಿ ಇದ್ದ ಸಾಮಾಜಿಕ ರಚನೆಯಲ್ಲಿ ವಿವಾಹದ ವಿವಿಧ ಸಂಪ್ರದಾಯಗಳನ್ನು ಚರ್ಚಿಸುವುದಾದರೆ. ವಿವಾಹದ ಮುನ್ನಾ ವಿವಾಹಕ್ಕೆ ಪೂರಕವಾದ ಕೆಲವು ವಿಧಿ ವಿಧಾನಗಳನ್ನು ಆಚರಿಸುತ್ತಿದ್ದುದ್ದನ್ನು ಸ್ಮರಿಸಬಹುದು. ಹೆಚ್ಚು ಕಡಿಮೆ ಇಂದಿಗೂ ಸಹ ಇದೇ ಸಂಪ್ರದಾಯ ಬೆಳೆದು ಬರುತ್ತಿದೆ.

ನಿಶ್ಚಿತಾರ್ಥ ಅಥವಾ ವಾಗ್ದಾನ : ವಿವಾಹಕ್ಕೆ ಹುಡುಗ – ಹುಡುಗಿ ಒಪ್ಪಿಕೊಂಡ ಮೇಲೆ, ಎರಡು ಮನೆಯವರಿಗೂ ಸಂಬಂಧ ಬೆಳೆಸಲು ಒಪ್ಪಿಗೆ ದೊರಕಿದ ನಂತರ ನಡೆಯುವ ಕಾರ್ಯಕ್ರಮವೇ ನಿಶ್ಚಿತಾರ್ಥ ಅಥವಾ ವಾಗ್ದಾನ, ವೈದಿಕ ವಿವಾಹದಲ್ಲಿ ವಧೂವರರನ್ನು ಆರಿಸುವಾಗ ಅವರ ವಂಶ, ಯಶಸ್ಸು, ಶಾರೀರಿಕ ಲಕ್ಷಣಗಳು, ವಿದ್ಯೆ, ಐಶ್ವರ್ಯಗಳನ್ನೆಲ್ಲ ಗಮನಿಸುತ್ತಾರೆ. ಮದುವೆ ನಿಶ್ಚಯಕ್ಕೆ ಮುನ್ನ ವಧೂವರರ ಪರೀಕ್ಷೆ ನಡೆಯುತ್ತದೆ. ಏಕೆಂದರೆ ಗಂಡು ಹೆಣ್ಣುಗಳ ನಡುವೆ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಕ ಸಾಮರಸ್ಯವಿರಬೇಕೆಂಬುದನ್ನು ನಮ್ಮ ಹಿರಿಯರು ಚೆನ್ನಾಗಿಯೇ ಮನಗಂಡಿದ್ದರೆಂದು ‘ಯುಗಯಾತ್ರಿ ಭಾರತ’ ಗ್ರಂಥವು ತಿಳಿಸುತ್ತದೆ. ನಂತರ ಗಂಡು ಹೆಣ್ಣುಗಳಿಬ್ಬರ ಹೆಸರು ಹಾಗೂ ಹುಟ್ಟಿದ ದಿನಾಂಕಗಳಿಗೆ ಅನುಗುಣವಾಗಿ ಜಾತಕ ಕೇಳಿ ತಾಳೆಯಾಗುತ್ತದೆಯೇ ಎಂಬುದನ್ನು ನೋಡಲಾಗುತ್ತದೆ. ಇಷ್ಟೆಲ್ಲವೂ ಎರಡು ಕುಟುಂಬದವರಿಗೆ ಸರಿಬಂದರೆ ವಾಗ್ದಾನ ಅಥವಾ ನಿಶ್ಚಿತಾರ್ಥದ ವಿಧಿವಿಧಾನಗಳು ನಡೆಯುತ್ತವೆ. ಇಲ್ಲಿ ನಿಶ್ಚಿತಾರ್ಥದ ಸಂಕೇತವಾಗಿ ಹೊಸ ಬಟ್ಟೆಯಲ್ಲಿ ಅಥವಾ ಹೊಸ ಬಿದುರಿನ ಬುಟ್ಟಿಯಲ್ಲಿ ಫಲತಾಂಬೂಲಗಳನ್ನು ಬದಲಾಯಿಸಿಕೊಂಡು ಕೆಲವು ಒಪ್ಪಂದದ ಮಾತನಾಡಿಸಿಕೊಳ್ಳುತ್ತಾರೆ. ಇನ್ನೂ ಮುಂದಿನ ಹಂತವೇ ಮದುವೆ. ಈ ಮದುವೆಗೆ ಮುನ್ನ ವಧುವಿನ ಕುಟುಂಬದಲ್ಲಿ ಉಂಟಾಗುವ ಆಶೋತ್ತರಗಳನ್ನು ನಮ್ಮ ಕವಿಗಳ ವರ್ಣನಾತ’ಕವಾಗಿ ವಿವರಿಸಿದ್ದಾರೆ.

ಕನ್ಯಾವರಯತೇ ರೂಪಮ್
ಮಾತಾವಿತ್ತಂ ಪಿತಾಶ್ರುತಮ್
ಬಾಂಧ ವಾಃ ಕುಲಮಿಚ್ಚಂತಿ
ಮೃಷ್ಟಾನ್ನ ಮಿತರೇ ಜನಾಃ
||

ಇದರರ್ಥ “ವಧುವಿಗೆ ವರನ ರೂಪ ಮೆಚ್ಚು, ತಾಯಿಗೆ ಅವನ ಸೌಕರ್ಯಗಳತ್ತ ದೃಷ್ಟಿ, ತಂದೆ ಬಯಸುವುದು ವಿದ್ಯೆಯನ್ನು, ಬಂಧುಗಳಿಗೆ ಮನೆತನ ಮುಖ್ಯವಾದರೆ ಮಿಕ್ಕವರಿಗೆಲ್ಲ ಅಂದಿನ ಊಟ ಸ್ವಾದಿಷ್ಟ ಮತ್ತು ಸಮೃದ್ಧವಾದರೆ ಸಾಕು” ಎಂದು ಆ ಸಂದರ್ಭದ ನೈಜ ಚಿತ್ರಣವನ್ನು ಸೂಕ್ಷ್ಮವಾಗಿ ವಿವರಿಸುತ್ತಾರೆ. ಇದು ಸತ್ಯವೂ ಕೂಡ.

ಮದುವೆ : ಮದುವೆಗೂ ಮುಂಚೆ ಅನೇಕ ದೇವತಾ ಕಾರ್ಯಗಳು, ವಿಧಿವಿಧಾನಗಳೂ ನಡೆದು ಕೊನೆಯಲ್ಲಿ ಮಂಗಳ ಸೂತ್ರ ಬಂಧನಕ್ಕೆ ಬರುತ್ತಾರೆ. ಇದು ಮದುವೆಯಲ್ಲಿ ಗಂಡು – ಹೆಣ್ಣು ಒಂದಾಗಲು ಅಂತಿಮ ಹಂತವೆನ್ನಬಹುದು. ಈ ಹಂತದಲ್ಲಿ ಅವರವರ ಜಾತಿ, ಧರ್ಮ ಸಂಪ್ರದಾಯಗಳಿಗೆ ಒಂದೊಂದು ರೀತಿಯಲ್ಲಿ ಮಂಗಳಸೂತ್ರವನ್ನು ಕಟ್ಟುವ ಪದ್ಧತಿ ಬೆಳೆದು ಬಂದಿತ್ತು. ಈ ಸಮಯದಲ್ಲಿ ಹೆಚ್ಚಾಗಿ ಸಮಾಜದ ಪ್ರಮುಖರು ಉಪಸ್ಥಿತರಿದ್ದು ಕುಟುಂಬದವರ ಪರವಾಗಿ ಲಕ್ಷ್ಮೀ, ಸರಸ್ವತಿ, ಗೌರಿ ದೇವರನ್ನು ಸ್ಮರಿಸಿಕೊಂಡು ಅರ್ಚಿಸಿ ನವ ದಂಪತಿಗಳಗೆ ಸ್ಥಿರದಾಂಪತ್ಯ, ಆರೋಗ್ಯ ಮತ್ತು ಪುತ್ರಲಾಭಗಳನ್ನು ಮಾಂಗಲ್ಯವನ್ನು ಕಟ್ಟುವಾಗ ವೇದದ ಶ್ಲೋಕವಾಗಿರುವ

ಮಾಂಗಲ್ಯ ತಂತು ನಾನೇನ ಭರ್ತೃಜೀವನ ಹೇತು ನಾ |
ಕಂಠೇ ಬಧ್ನಾಮಿ ಶುಭಗೇ ಸಾಜೀನ ಶರದಃ ಶತಂ ||

ಎಂಬ ವಾಗ್ದಾನದೊಂದಿಗೆ ವರನನ್ನು ವಧುವಿನ ಕೊರಳಿಗೆ ಕಟ್ಟುವಂತೆ (ಈ ಮಾಂಗಲ್ಯ ತಂತುವು ನನ್ನ ಜೀವನಕ್ಕೆ (ದಾಂಪತ್ಯ ಜೀವನಕ್ಕೆ)ಕಾರಣವಾದುದು. ಇದನ್ನು ನಿನ್ನ ಕೊರಳಲ್ಲಿ ಕಟ್ಟುವೆನು. ನೀನು ನನ್ನೊಡನೆ ನೂರು ವರ್ಷ ಕಾಲ ಬಾಳು ಎಂದು ವರನು ಹೇಳುವ ಅರ್ಥದಲ್ಲಿ) ಹಿರಿಯರು ನಡೆದುಕೊಳ್ಳುತ್ತಾರೆ. ಇದು ಅಪ್ಪಟ ವೈದಿಕರಿಂದ ಬಂದಿರುವ ಸಂಪ್ರದಾಯ. ಸಾವಿರಾರು ಸಾಮಾಜಿಕ ವರ್ಗಿಕರಣದಲ್ಲೂ, ಜಾತಿ ಜಾತಿಗಳಲ್ಲಿಯೂ ಈ ಸಂಪ್ರದಾಯ ಉಳಿದುಕೊಂಡು ಬರುವ ಹಾಗೆ ವೈದಿಕರು ಪ್ರಭಾವ ಬೀರಿ ಇಂತಹ ಸನ್ನಿವೇಶದಲ್ಲಿಯೂ ಪ್ರಭಾವಶಾಲಿಗಳಾಗಿಯೇ ಅಂದಿನಿಂದ ಇಂದಿನವರೆವಿಗೂ ಬೆಳೆದು ಬರುತ್ತಿದ್ದಾರೆ. ವಿವಾಹವಾದುದಕ್ಕೆ ಇಂದು ವಿಡಿಯೋ ಪೋಟೋ ಮುಂತಾದ ಸಾಕ್ಷಿಗಳಿವೆ. ಆದರೆ ಅಂದು ಇದ್ದ ಒಂದೇ ಒಂದು ಸಾಕ್ಷಿ ಎಂದರೆ ‘ಅಗ್ನಿಸಾಕ್ಷಿ’, ಸಂಸ್ಥಾನದ ವಿವಾಹ ವ್ಯವಸ್ಥೆಯಲ್ಲಿಯೇ ಅಲ್ಲದೆ ಭಾರತೀಯ ಹಿಂದೂ ವಿವಾಹ ಪರಂಪರೆಯಲ್ಲಿಯೂ ‘ಅಗ್ನಿ’ಗೆ ಪವಿತ್ರವಾದ ಸ್ಥಾನ ಕಲ್ಪಿಸಲಾಗಿದೆ. ಅಗ್ನಿಯನ್ನು ಸಾಕ್ಷಿಯಾಗಿರಿಸದೆ ಮಾಡಿದ ವಿವಾಹವು ಧಾರ್ಮಿಕ ಮಾನ್ಯತೆ ಮಾತ್ರವಲ್ಲದೆ. ಸಾಮಾಜಿಕ ಮನ್ನಣೆಯಿಂದಲೂ ದೂರವಿರಬೇಕಾಗಿತ್ತು. ಚರ್ತುವರ್ಣಗಳಲ್ಲಿ ಮೂರು ವರ್ಗದ ಹಿಂದೂಗಳು ಇಂದಿಗೂ ಅಗ್ನಿಸಾಕ್ಷಿಯಾಗಿಯೇ ವಿವಾಹ ಸಂಸ್ಕಾರಗಳನ್ನು ನಡೆಸಿಕೊಂಡು ಅಂದಿನಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಶೂದ್ರರು ಹಾಗೂ ದಲಿತು ಇದನ್ನು ಪಾಲಿಸುವುದು ಕಂಡುಬರುವುದಿಲ್ಲ. ಈ ಅಗ್ನಿಸಾಕ್ಷಿಗೆ ಇನ್ನೊಂದು ಅಧ್ಯಾತ್ಮಿಕವಾದ ಮಾನ್ಯತೆಯೆಂದರೆ, ಪಂಚಭೂತಗಳಲ್ಲಿ ಮೂರನೆಯದಾದ ಅಗ್ನಿಗೆ ಎಲ್ಲವನ್ನೂ ಸುಟ್ಟು ನಾಶ ಮಾಡುವ ಶಕ್ತಿ ಎನ್ನುವುದು. ವಿವಾಹದ ಸಮಯದಲ್ಲೂ ಪತಿ ಪತ್ನಿಯರಲ್ಲಿರುವ ಮಾಲಿನ್ಯ ದ್ವೇಷಾಸೂಯೆಗಳನ್ನು ಅಗ್ನಿ ನಾಶಮಾಡಲಿ ಎಂಬ ಅಕಾಂಕ್ಷೆ ಈ ಸಂದರ್ಭದಲ್ಲಿ ಅಡಕವಾಗಿ ಮೂಡಿ ಬಂದಿತ್ತೆನ್ನಬಹುದು. ಇನ್ನೊಂದರ್ಥದಲ್ಲಿ ಹೇಳುವುದಾಧರೆ ಅಗ್ನಿ ಉರ್ಧ್ವಗಾಮಿ, ಆದರೆ ಜ್ವಾಲೆಯು ಮೇಲ್ಮುಖವಾಗಿರುತ್ತಯೇ ವಿನಃ ಎಂದೂ ಕೆಳಮುಖವಾಗಿರುವುದಿಲ್ಲ. ಈ ರೀತಿಯಲ್ಲಿ ಯೇ ದಂಪತಿಗಳ ಜೀವನವೂ ಉತ್ತರೋತ್ತರವಾಗಿ ಎತ್ತರಕ್ಕೇರಲಿ, ಸದಾ ಮೇಲ್ಮುಖವಾಗಿರಲಿ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಗಳತ್ತ ಏರುತ್ತಾ ಹೋಗಲಿ ಎಂಬ ಸಂದೇಶವನ್ನು ‘ಅಗ್ನಿಸಾಕ್ಷಿ’ ಸಾರುತ್ತದೆಂದು ನಂಬಿಕೆ.

ಬ್ರಾಹ್ಮಣರ ಮದುವೆ : ಇವರಲ್ಲಿ ಮಗಳನ್ನು ಮದುಮಗನಿಗೆ ಕನ್ಯಾದಾನವೆಂದು ಕೊಡುಗೆಯ ರೂಪದಲ್ಲಿ ಮದುವೆ ಮಾಡಿಕೊಡುವ ಸರ್ವಾತ್ರಿಕ ಪದ್ಧತಿಯಿದೆ. ಹೆಚ್ಚಾಗಿ ವಿವಾಹವು ಮಧುವಿನ ಮನೆಯಲ್ಲಿ ನಡೆಯುವುದು ಕಂಡುಬಂದರೆ ಅಥವಾ ಮನೆಯಲ್ಲಿ ಸ್ಥಳದ ತೊಂದರೆ ಕಂಡುಬಂದರೆ ದೇವಾಲಯಗಳಲ್ಲಿ, ಛತ್ರಗಳಲ್ಲಿ ನಡೆಯುತ್ತಿದ್ದನ್ನು ಗಮನಿಸಬಹುದು, (ಮಹಾರಾಜರು ಮೈಸೂರು ನಗರದಲ್ಲಿ ನಂಜಬಹದ್ದೂರ್ ಛತ್ರವನ್ನು ಕಟ್ಟಿಸಿ ವಿವಾಹ ಕಾರ್ಯಕ್ಕೆ ಅನುಕೂಲ ಮಾಡಿಕೊಟ್ಟಿದ್ದರು). ಇವರ ಎಷ್ಟೋ ಮದುವೆ ಸಂಪ್ರದಾಯಗಳು ನಮ್ಮ ಕೆಳಜಾತಿಗಳೆಂದು ಹೇಳಿಕೊಂಡಿರುವ ಸಮಾಜದಲ್ಲಿ ಬರುತ್ತವೆ. ಸಾಮಾನ್ಯವಾಗಿ ಮದುವೆ ಎಂದರೆ ಮೇಲೆ ತಿಳಿಸಿದಂತೆ ವೀಳ್ಯದ ಶಾಸ್ತ್ರ ನಿಶ್ಚಿತಾರ್ಥದ ನಂತರ ಪ್ರಸ್ತಾಪಗಳು ನಿಶ್ಚಿತವಾದ ರೂಪ ಪಡೆದುಕೊಳ್ಳುತ್ತವೆ. ವೇಶ್ಯರಲ್ಲಿ ವರನು ವಧುಗೃಹಕ್ಕೆ ಬಂದ ನಂತರ ವರನ ಪೂಜೆ, ಮದುಮಗನನ್ನು ಅವನ ತಂದೆತಾಯಿಗಳನ್ನು ಎದುರುಗೊಂಡು ಸತ್ಯರಿಸುವುದು, ವಧೂವರರ ಪೂರ್ವಜರನ್ನು ಆಹ್ವಾನಿಸುವುದು, ಕಂಕಣ ಧಾರನೆ, ವಧೂವರರ ಪರಸ್ಪರ ಕೈಗಳಿಗೆ ದಾರ ಕಟ್ಟುವುದು ಇವು ಬ್ರಾಹ್ಮಣರ ಪ್ರಮುಖ ವಿವಾಹ ಬದ್ಧವಾದ ಸೂಚನೆಗಳು, ನಂತರ ಕೆಂಬಣ್ಣದ ಅಕ್ಕಿಯನ್ನು ವಧೂವರರು ಪರಸ್ಪರ ತಲೆಗಳ ಮೇಲೆ ಎರಚಿಕೊಳ್ಳುವುದು, ಮಂಗಳ ಸೂತ್ರ ಕಟ್ಟುವುದು, ಈ ಸಮಯದಲ್ಲಿ ನೆರೆದಿದ್ದ ಎಲ್ಲ ಜನರೂ ಅಕ್ಕಿಯನ್ನು ವಧೂವರರಿಗೆ ಎದಚುವುದು, ಗಟ್ಟಿಮೇಳ ಮೊಳಗುವುದು ಸರ್ವೇಸಾಮಾನ್ಯವಾಗಿ ಬೆಳೆದುಬಂದಿರುವ ಸಂಪ್ರದಾಯ. ಈ ಪದ್ಧತಿಯನ್ನು ಸಾಮಾನ್ಯವಾಗಿ ಎಲ್ಲಾ. ಜಾತಿಯಲ್ಲಿಯೂ ಅನುಸರಿಸುತ್ತಿರುವುದು ಕಂಡುಬರುತ್ತದೆ.

ವೀರಶೈವ ಮದುವೆ : ವೀರಶೈವರು, ಲಿಂಗಾಯತರು ಸಂಸ್ಥಾನದಲ್ಲಿ ಅಂದು ಹೊಸ ಹೊಸ ಆಚಾರ, ವಿಚಾರ, ಸಂಸ್ಕೃತಿಯನ್ನು ಬೆಳಸಿಕೊಂಡು ಬರತೊಡಗಿದರು ಎನ್ನಬಹುದು. ಮೂಲದಲ್ಲಿ ವೈದಿಕ ಸಂಪ್ರದಾಯದಿಂದಲೇ ಬೇರ‍್ಪಟ್ಟು ಬಂದವರಾದರೂ ಅವರು ತಮ್ಮ ವಿವಾಹ ಪದ್ಧತಿಯ ಆಚರಣೆಗಳಲ್ಲಿ ಬ್ರಾಹ್ಮಣ ವಿವಾಹ ಪದ್ಧತಿಯನ್ನು ಆಚರಣೆ ಮಾಡಿಕೊಂಡು ಬರತೊಡಗಿದ್ದರು. ಇಂದಿಗೂ ಈ ಜನಾಂಗದಲ್ಲಿ ಇದನ್ನು ಕಾಣಬಹುದು. ಇವರಲ್ಲಿ ಪಂಚಕಲಶಗಳನ್ನಿಟ್ಟು ವಿವಾಹ ವಿಧಿಗಳನ್ನು ಪೂರೈಸುತ್ತಿದ್ದರು. ಅಂದು ಇವರ ಮದುವೆ ಸಂಪ್ರದಾಯವು ಐದು ದಿನಗಳ ಕಾಲ ನಡೆಯುತ್ತಿದ್ದಿತ್ತು. ಸಾಮಾನ್ಯವಾಗಿ ಇವರು ತುಲಸಿ ವಿವಾಹದಿಂದ ಕಾರಹುಣ್ಣಿಮೆಯ ಒಳಗಾಗಿ ಮದುವೆ ಕಾರ್ಯವನ್ನು ಪೂರೈಸುವ ಸಂಪ್ರದಾಯ ಹೊಂದಿದ್ದರು. ಸಾಮಾನ್ಯವಾಗಿ ಇವರು ಮಠಗಳಲ್ಲಿ ಶಿವದೇವಾಲಯಗಳಲ್ಲಿ ತಮ್ಮ ಧರ್ಮದ ಸ್ವಾಮಿಯವರಾದ ಗುರು – ಜಂಗಮರ ಸಮ್ಮುಖದಲ್ಲಿ ಮಾಂಗಲ್ಯಧಾರಣೆಯನ್ನು ಮಾಡಿ ಅವರ ಆಶೀರ್ವಾದ, ತೀರ್ಥ, ಪ್ರಸಾದಗಳನ್ನು ಪಡೆದು ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುವರು.

ಒಕ್ಕಲಿಗರ ಮದುವೆ : ಸಂಸ್ಥಾನದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದ್ದ ಒಕ್ಕಲಿಗರು ಪ್ರಮುಖವಾಗಿ ತಮ್ಮ ಆಧಾರ ಕಸುಬಾಗಿ ಹೊಂದಿದವರಾಗಿದ್ದರು. ಇವರು ವಿವಾಹಗಳನ್ನು ಪ್ರಾರಂಭದಲ್ಲಿ ತಮ್ಮ ಹತ್ತಿರದ ಸಂಬಂಧದಲ್ಲಿಯೇ (ಸೋದರ ಮಾವನ ಮಗ ಅಥವಾ ಮಗಳು, ಅಕ್ಕನ ಮಗಳು ಇತ್ಯಾದಿ) ಹೆಚ್ಚಾಗಿ ನಡೆಸಿಕೊಂಡು ಬರುತ್ತಿದ್ದದ್ದು ಕಂಡು ಬರುತ್ತದೆ. ಕಾರಣ ಇವರು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯನ್ನು ಹೊಂದಿದವರಾಗಿದ್ದರಿಂದ ಅವರ ಆಸ್ತಿಗೆ ಬೇರೆಯವರ ಮಗಳು ಅಥವಾ ಮಗ ಬಂದು ಹಕ್ಕುದಾರನಾಗುವುದನ್ನು ಸಹಿಸುತ್ತಿರಲಿಲ್ಲ. ಇತ್ತೀಚೆಗೆ ಇವರಲ್ಲಿ ಸಂಪೂರ್ಣ ಬದಲಾವಣೆಯಾಗಿದೆ.

ಅಂದು ವರನ ಕಡೆಯವರು ವಧು ಪರೀಕ್ಷೆಗೆ ಹೋದಾಗ ವಧುವನ್ನು ಅನೇಕ ಪರೀಕ್ಷೆಗೆ ಒಳಪಡಿಸಿ ನಂತರ ಒಪ್ಪಿಗೆಯಾದರೆ ‘ಒಪ್ಪು ವೀಳ್ಯಕ್ಕೆ’ ಬರುವುದಾಗಿ ತಿಳಿಸಿ ಬರುತ್ತಿದ್ದರು. (ವಧು ಪರೀಕ್ಷೆಯಲ್ಲಿ ವಧುವಿನ ನಡೆ ನೋಡಲು ಸುಣ್ಣ ತರಲು ಹೇಳುವುದು. ಈರುಳ್ಳಿ ಸಿಪ್ಪೆಯ ಕಸಗುಡಿಸು ಎಂದು ಹೇಳುವುದು ಮುಂತಾದವುಗಳಾಗಿದ್ದವು) ಅಂದು ಇವರಲ್ಲಿ ವರದಕ್ಷಿಣೆಯು ‘ತೆರ’ದ ರೂಪದಲ್ಲಿದ್ದಿತು. ಇಲ್ಲಿ ಗಂಡಿನ ಕಡೆಯವರು ಹೆಣ್ಣಿಗೆ ಕೊಡುವ ಒಡವೆ ವಸ್ತುಗಳು ಹಾಗೂ ಹೆಣ್ಣಿನ ಕಡೆಯವರು ಗಂಡಿಗೆ ಕೊಡುವ ವಸ್ತುಗಳ ಬಗ್ಗೆ ಮಾತುಕತೆ ನಡೆದು ಒಂದು ಒಪ್ಪಂದಕ್ಕೆ ಬರುತ್ತಿದ್ದರು. ಇದಾದ ಮೇಲೆ ಒಪ್ಪು ವೀಳ್ಯ ಶಾಸ್ತ್ರ ಇದಾದ ಮೇಲೆ ವಧುವನ್ನು ಬೇರೆಯವರಿಗೆ ಕೊಡುವಂತಿಲ್ಲ. ನಂತರ ಮದುವೆ ವೈಭವದಿಂದ ಅವರದೇ ಆದ ಸಂಪ್ರದಾಯದಲ್ಲಿ ನಡೆಯುತ್ತದೆ. ತಾಳಿಟ್ಟಿಸಿ, ಧಾರೆ ಮುಹೂರ್ತ ನಡೆಸಿ ನಂತರ ಗಂಡು ಹೆಣ್ಣುಗಳಲ್ಲಿ ಸಲುಗೆ ಬೆಳೆಸುವುದಕ್ಕಾಗಿ ಪಾದ ತೊಳೆಸುವ ಶಾಸ್ತ್ರ, ಹಸೆ ಕೂರಿಸುವ ಶಾಸ್ತ್ರ, ಸೆರಗು ಬಿಡಿಸುವ ಶಾಸ್ತ್ರ, ಅಕ್ಕಿಯಲ್ಲಿ ನಾಣ್ಯವನ್ನು ಹಾಕಿ ಹುಡುಕಿಸುವ ಶಾಸ್ತ್ರ. ನೀರನ್ನು ಎರಚಾಡುವ ಶಾಸ್ತ್ರ ಮುಂತಾದವುಗಳನ್ನು ನಡೆಸುತ್ತಿದ್ದರು. ನಂತರ ವಧುವು ವರನ ಮನೆಗೆ ಹೊರಡುವ ಮೊದಲು ತನ್ನ ತವರೂರಿನ ಬಂಧು ಬಳಗದವರೆಲ್ಲರಿಗೂ ವೀಳ್ಯ ನೀಡಿ ಕಾಲುಗಳಿಗೆ ನಮಸ್ಕರಿಸಿ ಆರ್ಶೀವಾದ ಪಡೆದು ಹೊರಡುತ್ತಾಳೆ. ಈ ಸನ್ನಿವೇಶ ಒಂದು ರೀತಿಯಲ್ಲಿ ಆನಂದದ ದುಃಖದ ಸಮಯವಾಗಿರುತ್ತದೆ.

ಸಂಸ್ಥಾನದಲ್ಲಿ ಹಿಂದುಳಿದ, ದಲಿತರ (ಹೊಲೆಯ, ಮಾದಿಗ) ವಿವಾಹಗಳು ಒಕ್ಕಲಿಗರ ಮಾದರಿಯಲ್ಲಿಯೇ ಕೆಲವೇ ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ನಡೆಯುತ್ತಿದ್ದವು. ಎಲ್ಲ ಜಾತಿಯವರೂ ಸಹ ಪ್ರಮುಖವಾಗಿ (ವೀರಶೈವರನ್ನು ಹೊರತುಪಡಿಸಿ) ಬ್ರಾಹ್ಮಣ ಪುರೋಹಿತರನ್ನು ಮದುವೆ ಕಾರ್ಯಕ್ಕೆ ಅರ್ಚಕರಾಗಿ ಆಹ್ವಾನಿಸುತ್ತಿದ್ದರು. ಒಂದು ದೃಷ್ಟಿಯಲ್ಲಿ ಬ್ರಾಹ್ಮಣರೇ ತಮ್ಮನ್ನು ಕರೆಯುವ ಸನ್ನಿವೇಶವನ್ನು, ಧಾರ್ಮಿಕ ಕಾನೂನನ್ನು, ಸಾಮಾಜಿಕ ಸಂಪ್ರದಾಯವನ್ನು ಸೃಷ್ಟಿಸಿ ಪ್ರತಿಯೊಂದು ಹಂತದಲ್ಲಿಯೂ ಮೊದಲನೇ ಸ್ಥಾನದಲ್ಲಿಯೇ ಉಳಿದುಕೊಂಡು ಬರುತ್ತಿರುವರು.

ರಾಜ ವಂಶದವರ ಮದುವೆಯು ಅನೇಕ ಆಚಾರ, ವಿಚಾರ, ಧಾರ್ಮಿಕ ಸಂಪ್ರದಾಯಗಳಲ್ಲಿ ಬ್ರಾಹ್ಮಣರ ಮಾರ್ಗದರ್ಶನದಲ್ಲಿಯೇ ನಡೆಯುತ್ತಿತ್ತು. ಒಟ್ಟಿನಲ್ಲಿ ವಿವಾಹವೆಂಬುದು ಪ್ರತಿಯೊಂದು ಮನುಷ್ಯನಲ್ಲಿಯೂ ಹೊಸಹೊಸ ವಿಚಾರಗಳಿಗೆ, ಬಾಳ್ವಿಗೆ ಹೆದ್ದಾರಿಯನ್ನು ತೆರದಿಡುತ್ತದೆ ಎನ್ನಬಹುದು.

***