ಉತ್ಸವಗಳು

ಹಬ್ಬಗಳು, ರಥೋತ್ಸವಗಳು ಹಾಗೂ ಉತ್ಸವಗಳು ನಮ್ಮ ಜನರ ಸಾಮಾಜಿಕ ಹಾಗೂ ಧಾರ್ಮಿಕ ಜೀವನವನ್ನು ರೂಪಿಸುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಕಾಲಕಾಲಕ್ಕೆ ದೇವರ ಹೆಸರಿನಲ್ಲಿ ಸೇರುವ ಜಾತ್ರೆಗಳೂ, ಉತ್ಸವಗಳು ಜನರ ಸಾಂಸ್ಕೃತಿಕ ಸಂಬಂಧವನ್ನು ಶ್ರೀಮಂತಗೊಳಿಸುತ್ತದೆ ಹಾಗೂ ಅವರು ಕಲಿತಿರುವ ಸಕಲ ವಿದ್ಯೆಗಳನ್ನು ಇಂತಹ ಸ್ಥಳಗಳಲ್ಲಿ ಪ್ರದರ್ಶಿಸಿ ಸುತ್ತಮುತ್ತಲಿನ ಜನರಿಂದೆಲ್ಲ ಧೀರ, ವೀರ, ಎನ್ನಿಸಿಕೊಂಡು ಅವನ ಊರಿನ ನಾಡಿನ ಘನತೆಯನ್ನು ಎತ್ತಿಹಿಡಿಯಲು ಇದೊಂದು ರಂಗಮಂದಿರದಂತೆ ಕಂಡುಬರುತ್ತಿತ್ತು. ಮೈಸೂರು ಸಂಸ್ಥಾನದಲ್ಲಿ ಪ್ರಾರಂಭದಿಂದಲೂ ನಡೆದುಕೊಂಡು ಬರುತ್ತಿರುವ ಪ್ರಮುಖ ಜಾತ್ರೆ ಹಾಗೂ ರಥೋತ್ಸವಗಳೆಂದರೆ ಬಟ್ಟದಪುರದ ಪಿರಿಯಾಪಟ್ಟಣದಮ್ಮ ಹಾಗೂ ಕನ್ನಂಬಾಡಿಯಮ್ಮ ಜಾತ್ರೆ, ಚುಂಚನಕಟ್ಟೆಯ ರಾಮದೇವರ ರಥೋತ್ಸವ (ಭಾರಿ ದನಗಳ ಜಾತ್ರೆ), ತಿರುಮಕೊಡಲು ನರಸೀಪುರದ ಗುಂಜುನರಸಿಂಹ ಸ್ವಾಮಿ ಜಾತ್ರೆ (ಭಾರಿ ದನಗಳ ಜಾತ್ರೆ), ಮೂಗೂರಿನ ತಿಬ್ಬಾದೇವಿ ಜಾತ್ರೆ ಮತ್ತು ರಥೋತ್ಸವ, ಸೋಸಲೆ ಹೊನ್ನದೇವಿ ಜಾತ್ರೆ ಮತ್ತು ರಥೋತ್ಸವ ನಂಜನಗೂಡಿನ ಶ್ರೀಕಂಠೇಶ್ವರ ಜಾತ್ರೆ ಮತ್ತು ರಥೋತ್ಸವ ಮಲೆಮಾದೇಶ್ವರ ಜಾತ್ರೆ ಹಾಗೂ ರಥೋತ್ಸವ, ಮಂಡ್ಯದ ಮದ್ದೂರಮ್ಮನ ಜಾತ್ರೆ ಮೇಲುಕೋಟೆ ಚಲುವ ನಾರಾಯಣ ರಥೋತ್ಸವ ಹಾಗೂ ವೈರಮುಡಿ ಉತ್ಸವಗಳು, ಅದಿಚುಂಚನಗಿರಿ ಗಂಗಾಧರೇಶ್ವರ ಜಾತ್ರೆ ಉತ್ಸವ, ಕಿಕ್ಕೇರಮ್ಮನ ಜಾತ್ರೆ, ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ರಥೋತ್ಸವ, ಸುತ್ತೂರಿನ ಸುತ್ತೂರು ಶಿವರಾತ್ರೇಶ್ವರ ಸ್ವಾಮಿಜಿಯವರ ಉತ್ಸವ ಮತ್ತು ರಥೋತ್ಸವಗಳು, ಬೆಂಗಳೂರಿನ ಕರಗಮಹೋತ್ಸವ, ಬಸವನಗುಡಿಯ ಕಡ್ಲೆಜಾಯಿ ಜಾತ್ರೆ. ಚಿತ್ರದುರ್ಗದ ಸಿಗೆರೆಯಲ್ಲಿನ ತರಳಬಾಳು ಉತ್ಸವ, ಹಿರಿಯೂರಿನ ಉಮಾಮಹೇಶ್ವರ ದೇವರ ಜಾತ್ರೆ ಮತ್ತು ರಥೋತ್ಸವ, ಎಡೆಯೂರಿನ ಸಿದ್ದಲಿಂಗೇಶ್ವರ ಸ್ವಾಮಿಯ ರತೋತ್ಸವ ಹಾಗೂ ಬೃಹತ್ ಜಾತ್ರೆ ಹೀಗೆ ನೂರಾರು ಪ್ರಸಿದ್ದ ಜಾತ್ರೆ ಹಾಗೂ ರಥೋತ್ಸವಗಳನ್ನು ಗುರುತಿಸಬಹುದು. ಇಲ್ಲಿ ಅಂದಿನ ಸಂಸ್ಕೃತಿಯ ಪ್ರತಿಬಿಂಬ ವ್ಯಕ್ತವಾಗುವಂತೆ ಅನುವು ಮಾಡಿಕೊಡಲಾಗುತ್ತಿತ್ತು.

ಪ್ರತಿಯೊಂದು ಜಾತ್ರೆಯಲ್ಲಿಯೂ ಅವರ ಆರಾಧ್ಯ ದೇವರನ್ನು ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಿದ ಮೇಲೆ ಜಾತ್ರೆ ಮುಗಿಯುತೆಂದು ಅರ್ಥ. ಇಂತಹ ಸಂದರ್ಭದಲ್ಲಿಯೇ ಜನಪದರಲ್ಲಿ “ತೇಲ್ ಅರ್ದಮ್ಯಾಲೆ ಜಾತ್ರೆ ಅಳಿತು” ಎಂಬ ಮಾತು ಹುಟ್ಟಿರುವುದು. ಈ ನಾಡುನುಡಿಯೇ ಜಾತ್ರೆ ಹಾಗೂ ರಥೋತ್ಸವದ ಸಂಬಂಧವನ್ನು ವಿಶಾಲವಾಗಿ ತಿಳಿಸುತ್ತದೆ.

ತಲಕಾಡಿನ ಪಂಚಲಿಂಗ ದರ್ಶನ

ನಾಡಿನ ಪ್ರಾಚೀನ ಸ್ಥಳಗಳಲ್ಲಿ ತಲಕಾಡು ಒಂದಾಗಿದೆ. ಕರ್ನಾಟಕದ ಪ್ರಸಿದ್ಧ ರಾಜವಂಶವಾದ ಗಂಗರ ಎರಡನೇಯ ರಾಜಧಾನಿಯಾಗಿ ಮೆರೆದ ಪ್ರದೇಶ. ಇದೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸುಂದರ ಪ್ರಕೃತಿಯನ್ನು ತನ್ನ ಮಡಿಲಿನಲ್ಲಿ ಸೃಷ್ಟಿಸಿಕೊಂಡಿರುವುದರಿಂದ (ಕಾವೇರಿ ನದಿಯ ತಿರುವಿನಲ್ಲಿ ಹರಿಯುವ ಸೊಬಗು ಹಾಗೂ ಬೃಹತ್ ಮರಳಿನ ರಾಶಿಯಿಂದಾಗಿ) ಭಾರತದ ಭೂಪಟದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಈ ಊರು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು ಪಂಚಲಿಂಗ ದರ್ಶನದ ಉತ್ಸವಕ್ಕೆ ಖ್ಯಾತಿವೆತ್ತಿದೆ. ಈ ಉತ್ಸವವು ಸುಮಾರು ೪ ರಿಂದ ೧೪ ವರ್ಷಗಳ ಸಮಯದಲ್ಲಿ ಒಂದು ಸಲ ನಡೆಯುತ್ತದೆ. ಪುರಾಣದ ಪ್ರಕಾರ ಕಾರ್ತಿಕ ಬಹುಳ ಅಮಾವ್ಯಾಸೆಯು ಸೋಮವಾರವಾಗಿದ್ದು ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಅಂದಿನ ಉಷಃ ಕಾಲದಲ್ಲಿ ಬರುವ ಕುಹಯೋಗವು ಪಂಚಲಿಂಗ ದರ್ಶನಕ್ಕೆ ಸೂಕ್ತವಾದದೆಂದು ಹೇಳುತ್ತಾರೆ. ಜನಪದರು ನಂಬಿರುವ ಪ್ರಸಿದ್ಧ ಪಂಚಲಿಂಗಗಳೆಂದರೆ :

೧. ತುತ್ಪುರುಷ ಮುಖ : ಅರ್ಕೇಶ್ವರ ಕಾವೇರಿಯ ಉತ್ತರ ವಾಹಿನಿ ಬಳಿ (ವಿಜಯಪುರ)
೨. ಅಘೋರ ಮುಖ : ಪೂರ್ವವಾಹಿನಿ ಬಳಿ
೩. ಸದ್ಯೋಜಾತ ಮುಖ : ಮರಳೇಶ್ವರ, ದಕ್ಷಿಣಾವಾಹಿನಿ ಬಳಿ
೪. ವಾಮದೇವ ಮುಖ : ಮಲ್ಲಿ ಕಾರ್ಜುನೇಶ್ವರ, ಪಶ್ಚಿಮಾವಾಹಿನಿ (ಮುಡುಕುತೋರೆ)
೫. ಈಶಾನ್ಯ ಮುಖ : ವೈದ್ಯನಾಥೇಶ್ವರ (ತಲಕಾಡು)

ಇವುಗಳ ದರ್ಶನ ಪಡೆದು ಜೀವನವನ್ನು ಮುಕ್ತಿಗೊಳಿಸಿಕೊಳ್ಳಲು ಜನರು ರಾಜ್ಯದಲ್ಲಲ್ಲದೆ ನೆರೆಯ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲಸಿ ಐದು ಪ್ರಸಿದ್ಧ ಲಿಂಗಗಳನ್ನು ದರ್ಶನಮಾಡಿ ತಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಕಡೆ ಮುನ್ನಡೆಯುತ್ತಾರೆ. ಈ ಸಮಯದಲ್ಲಿ ನಡೆಯುವ ದೇವತಾಕಾರ್ಯಗಳು, ಉತ್ಸವಗಳು ಗತಕಾಲದ ಸಂಸ್ಕೃತಿಯನ್ನು ಹೊರಚೆಲ್ಲುವಂತೆ ಪ್ರೇರೇಪಿಸುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ನಡೆದ ಮೂರು ಪಂಚಲಿಂಗ ದರ್ಶನದಲ್ಲಿ ಸ್ವತಃ ತಾವೇ ಭಾಗವಹಿಸುವುದು ಕಂಡುಬರುತ್ತದೆ. (ಸಿ.ಕೆ ವೆಂಕಟರಮಣಯ್ಯನವರ ಆಳಿದ ಮಹಾಸ್ವಾಮಿಗಳು ಎಂಬ ಕೃತಿಯಿಂದ)

ವಿಶ್ವವಿಖ್ಯಾತ ಮೈಸೂರು ದಸರಾ

ಇಂದು ಕನಾಟಕದ ನಾಡಹಬ್ಬವಾಗಿ ಪರಿವರ್ತನೆಗೊಂಡಿರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಾಡಿನ ಮಣ್ಣಿನಲ್ಲಿ ಚಿರನೂತನವಾಗಿ ಕಂಗೊಳಿಸುತ್ತಿದೆ. ವಿಜಯನಗರದರಸರ ಆಳ್ವಿಕೆಯ ಕಾಲದಲ್ಲಿ ಪ್ರಾರಂಭವಾಗಿ ಅವರ ಅವನತಿಯ ನಂತರ ಅವರ ದಾರಿಯಲ್ಲಿಯೇ ಕರುನಾಡಿನ ಸಂಸ್ಕೃತಿಯನ್ನು ರಕ್ಷಿಸಿ, ಪೋಷಿಸಿ ಬೆಳೆಸಿಕೊಂಡು ಬಂದ ಮೈಸೂರು ಸಂಸ್ಥಾನವು ಮುಂದುವರೆಸಿಕೊಂಡು ಬರತೊಡಗಿತು. ಈ ವಿಶ್ವವಿಖ್ಯಾತ ದಸರಾ ಉತ್ಸವವು ಹಿಂದೂ ಧಾರ್ಮಿಕ ರೀತಿನೀತಿಗಳಲ್ಲಿ ಅಂದಿನಿಂದ ಇಂದಿನವರೆಗೂ ಆಚರಿಸಲ್ಪಡುತ್ತಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಲ್ಲಿಯೇ ಹೆಚ್ಚಾಗಿ ಬರುವ ದಸರೆ ಕೆಲವು ಸಮಯದಲ್ಲಿ ಮಾತ್ರ ಸೆಪ್ಟಂಬರ್ ತಿಂಗಳಿನ ಕೊನೆಗೂ ಬಂದು ಬಿಡುತ್ತದೆ. ದಸರಾ ಸಮಯದ ಪ್ರಯುಕ್ತ ಸಂಸ್ಥಾನದಲ್ಲಿ ಕೈಗೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಅರಮನೆಯ ಸರಸ್ಪತಿ ಪುಸ್ತಕ ಭಂಡಾರದಲ್ಲಿರುವ ದಾಖಲೆಗಳಿಂದ ತಿಳಿಯಬಹುದು.

ದಸರಾ ಹಬ್ಬದ ಪೌರಾಣಿಕ ಕತೆ : ಇಂದು ವಿಜಯದಶಮಿ ಎಂದು ಪ್ರಖ್ಯಾತವಾಗಿರುವ ನಾಡಹಬ್ಬವೇ ದಸರೆ. ದೇವರು ಒಬ್ಬನೇ ಎಂಬ ಮಾತನ್ನು ನಮ್ಮ ಪೂರ್ವಿಕರು ಒಪ್ಪಿಕೊಂಡಿದ್ದರೂ ಆ ಶಕ್ತಿಯನ್ನು ಬೇರೆ ಬೇರೆ ರೂಪಗಳಲ್ಲಿ ಹಲವಾರು ಆಕಾರಗಳಲ್ಲಿ ಪೂಜಿಸಿಕೊಂಡು ಪ್ರತಿಯೊಂದಕ್ಕೂ ತನ್ನದೆಯಾದ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡು ಬರತೊಡಗಿದರು ಹಾಗೂ ಪ್ರತಿರೂಪಕ್ಕೆ ಪ್ರತಿ ಆಕಾರಕ್ಕೆ, ಪ್ರತಿ ಉತ್ಸವಕ್ಕೆ ಒಂದೊಂದು ಗುರುತನ್ನು ನೀಡಬಯಸಿದರು. ಈ ದೃಷ್ಟಿಯಲ್ಲಿ ವಿಶೇಷ ಮಹತ್ವ ಪಡೆದ ಸಾಂಸ್ಕೃತಿಕ ಹಬ್ಬವೇ ದಸರಾ. ನವರಾತ್ರಿ ಅಥವಾ ವಿಜಯದಶಮಿಯ ಮುಖ್ಯ ಆರಾದ್ಯ ದೇವತೆ ಆದಿಶಕ್ತಿ. ಈ ಆದಿಶಕ್ತಿಯೇ ಮೈಸೂರಿನಲ್ಲಿ ಮಹಿಷಾಸುರ ಮರ್ದಿನಿಯಾಗಿ ಚಾಮುಂಡಿಯಾಗಿ ಕಂಗೊಳಿಸಿದ್ದಾರೆ. ದುಷ್ಟ ಮಹಿಷಾಸುರ ರಾಕ್ಷಕನ ದುರ್ನಡತೆಯನ್ನು ತಡೆಯಲಾರದ ದೇವಾನುದೇವತೆಗಳು ಆತನ ಸರ್ವನಾಶಕ್ಕಾಗಿ ಆದಿಶಕ್ತಿಯನ್ನು ವಿನಂತಿಸಿಕೊಳ್ಳುತ್ತಾರೆ. ಆಗ ಆದಿಶಕ್ತಿ ಸಾಗರವನ್ನೇ ಗುಟಕರಿಸಿಬಿಡುವ ಪರ್ವತ ಶಿಖರಗಳನ್ನೇ ಕಿತ್ತೆಸೆದು ಬಿಡುವ ಭಯವನ್ನೇ ಅಂಜಿಸಿ ಬಿಡುವ ಭಯಂಕರ ರೂಪವನ್ನು ಧರಿಸಿ ಮಹಿಷಾಸುರನ ಮೇಲೆ ನುಗ್ಗಿ ಹೋಗುತ್ತಾಳೆ. ಒಂಬತ್ತು ದಿನ ಹಗಲಿರುಳು ಭೀಕರ ಕಾಳಗ ನಡೆಯುತ್ತದೆ. ಅಶ್ವೀಜಶುದ್ಧ ದಶಮಿಯಂದು ಆದಿಶಕ್ತಿಗೆ ಗೆಲುವು ದೊರೆಯುತ್ತದೆ. ಅಂದೇ ವಿಜಯದ ದಶಮಿ. ಇದು ದಸರೆಯ ಹಿನ್ನೆಲೆಯ ಪೌರಾಣಿಕ ಕತೆ.

ವೆಂ.ಮು.ಜೋಶಿಯವರು ತಮ್ಮ “ಮೈಸೂರು ದಸರ” ಎಂಬ ಕಿರುಪುಸ್ತಕದಲ್ಲಿ ಶಕ್ತಿ ದೇವಿಯ ಹೋರಾಟಕ್ಕೆ ಒಂಬತ್ತು ದಿನಗಳ ಗಡಿಯನ್ನೇಕೆ ಹಾಕಿದರೆಂಬುವುದಕ್ಕೆ ಸುದೀರ್ಘವಾದ ವಿಶ್ಲೇಷಣೆ ನೀಡಬಯಸುತ್ತಾರೆ. ಅವರ ಪ್ರಕಾರ ನಮ್ಮ ಸಂಖ್ಯಾಶಾಸ್ತ್ರದಲ್ಲಿ ಒಂಬತ್ತು ಅಂಕೆಗೆ ಇರುವಷ್ಟು ಮಹತ್ವ ಮತ್ತೊಂದಕ್ಕಿಲ್ಲ. ಇದರಲ್ಲಿ ಇನ್ನುಳಿದ ಯಾವ ಅಂಕೆಯೂ ಸಮಾವೇಶಗೊಳ್ಳಬಲ್ಲದು. ಆದರೆ ಇನ್ನುಳಿದ ಯಾವ ಸಂಖ್ಯೆಯಲ್ಲಿಯೂ ಇದು ಸಮಾವೇಶಗೊಳ್ಳಲಾರದು. ಹಾಗೆಯೇ ಆದಿಶಕ್ತಿಯ ಅಮಿತ ಆಕಾರದಲ್ಲಿ ಇಡೀ ವಿಶ್ವ ಸಮಾವೇಶಗೊಳ್ಳಬಹುದೇ ವಿನಃ ವಿಶ್ವದ ಯಾವುದೇ ವಸ್ತುವಿನಲ್ಲಿ ಆದಿಶಕ್ತಿ ಸಮಾವೇಶಗೊಳ್ಳಲಾರಳು. ಸಿಂಧುವಿನಲ್ಲಿ ಬಿಂದು ಅಡಕವಾಗಬಹುದು, ಆದರೆ ಬಿಂದುವಿನಲ್ಲಿ ಸಿಂಧುವನ್ನು ಹಿಡಿದಿಡುವುದು ಅಸಾಧ್ಯ. ಒಂಬತ್ತು ಎಂಬ ಅಂಕೆಯೇ ಒಂದು ರೀತಿಯಲ್ಲಿ ಪೂರ್ಣಾಂಕ. ಈ ರೀತಿಯಾಗಿ ಅದ್ವೈತದ ಅಂಖೆ ‘೯’ ‘ದ್ವೈತ’ದಲ್ಲಿ ಕಾಲಿರಿಸಿತು. ‘೯’ ರ ಅಅಂಕೆ ಗುಣವನ್ನು ಪಡೆಯತೊಡಗಿತು. ೯ಕ್ಕೆ ಯಾವುದೇ ಅಂಕೆಯಿಂದ ಗುಣಿಸಿದರೂ ಬರುವ ಅಂಕೆಗಳ ಮೊತ್ತ ಪುನಃ ಒಂಬತ್ತೆಯಾಗಿರುತ್ತದೆ. ಉದಾಹರಣೆಗೆ, ೯ x ೨ – ೧೮ (೧+೮ =೯), ೯ x ೩ – ೨೭ (೨+೭ =೯), ೯ x ೪ – ೩೬ (೯+೪ = ೩೯), ೯ x ೫ – ೪೫ (೪+೫ = ೯), ೯ x ೬ – ೫೪ (೫+೪ = ೯), ೯ x ೭ – ೬೩ (೬+೩ = ೯), ೯ x ೮ – ೭೨ (೭+೨ = ೯), ೯ x ೯ – ೮೧ (೮+೧ =೯), ೯ x ೧೦ – ೯೦ (೧+೦ = ೯), ಈ ರೀತಿಯಾಗಿ ೯ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದ್ದೆಂದು ಸಂಖ್ಯಾಶಾಸ್ತ್ರದ ವಿವರಣೆಯನ್ನು ನೀಡಿ ಇದರ ಮಹತ್ವಕ್ಕೆ ಹೊಸ ಬೆಳಕನ್ನೆ ನೀಡಿದ್ದಾರೆ.

ಈ ನಾಡಹಬ್ಬವು ಪ್ರಥಮಬಾರಿಗೆ ವಿಜಯನಗರದರಸರು ವಿದ್ಯಾರಣ್ಯ(ಹಂಪಿ)ದಲ್ಲಿ ಪ್ರಾರಂಭಿಸಿದರು ಇದರ ಬಗ್ಗೆ ಪಾಯೇಸ್ ಅಪಾರವಾದ ವರ್ಣನೆಯಾದಂತಹ ಮಾಹಿತಿಯನ್ನು ತನ್ನ ಪ್ರವಾಸಿ ಕಥನದಲ್ಲಿ ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾದದೆಂದರೆ “ನಮ್ಮಲ್ಲಿರುವಂತೆ ಈ ಹಿಂದುಗಳಲ್ಲಿಯೂ ಹಬ್ಬ ಹರಿದಿನಗಳು ಜರುಗುತ್ತವೆ. ಉಪವಾಸ ದಿನಗಳೂ ಇವೆ. ಆಗ ಹಗಲಿಡೀ ಉಪವಾಸವಿದ್ದು ಮಧ್ಯರಾತ್ರಿಯಲ್ಲಿ ಊಟ ಮಾಡುತ್ತಾರೆ. ದಸರೆಯಲ್ಲಿ ರಾಜರು ಹೊಸನಗರದಿಂದ ರಾಜಧಾನಿಯಾದ ವಿಜಯನಗರಕ್ಕೆ ಬಂದು ಅಲ್ಲಿ ಹಬ್ಬವನ್ನು ಆಚರಿಸುತ್ತಾನೆ. ಆಗ ರಾಜ್ಯದ ನಾನಾ ಕಡೆಗಳಿಂದ ಎಲ್ಲ ದೇವದಾಸಿಯರೂ, ದಳವಾಯಿಗಳೂ, ಸಾಮಂತರೂ, ತಮ್ಮ ಪರಿವಾರದೊಂದಿಗೆ ಶ್ರೀಮಂತರೂ ಬಂದು ಸೇರುತ್ತಾರೆ. ದಸರ ಹಬ್ಬವು ಸೆಪ್ಟಂಬರ್ ಹನ್ನೆರಡನೇ ತಾರೀಖು ಪ್ರಾರಂಭವಾಗಿ ಒಂಬತ್ತು ದಿನಗಳು ನಡೆಯುತ್ತವೆ. ಹಾಗೂ ಹಬ್ಬವು ರಾಜರ ಅರಮನೆಯಲ್ಲಿ ಜರುಗುತ್ತದೆ” ಎಂದು ಹೇಳಿದ್ದಾನೆ* ಪೆಯಸ್ ಕಂಡ ವಿಜಯನಗರ, ಎಂ.ಪಿ. ಪ್ರಕಾಶ್, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ (ಮಹಾನವಮಿ ದಿಬ್ಬದ ಮುಂದುಗಡೆ ಇರುವ ಕಟ್ಟಡ ಅವಶೇಷಗಳನ್ನು ಇತಿಹಾಸಗಾರರು ಅರಮನೆಯ ಪ್ರದೇಶವೆಂದು ಗುರ್ತಿಸಿದ್ದಾರೆ. ಇದು ಇನ್ನೂ ಒಮ್ಮತನಕ್ಕೆ ಬಂದಂತೆ ಕಂಡುಬರುವುದಿಲ್ಲ). ನಂತರ ೧೮೬೫ರಲ್ಲಿ ಪ್ರಖ್ಯಾತ ವಿನಯನಗರವು ಒಂದು ಹಂತಕ್ಕೆ ಸಂಪೂರ್ಣವಾಗಿ ನಾಶಹೊಂದಿದ ನಂತರ ಈ ಸಂಪ್ರದಾಯವನ್ನು ಮೈಸೂರು ಒಡೆಯರು ಮುಂದುವರಿಸಿಕೊಂಡು ಬರತೊಡಗಿದರು.

ಮೈಸೂರಿನಲ್ಲಿ ದಸರೆಯ ಮೊದಲಿನ ದಿನ ಮುಂಜಾನೆ ಅರಮನೆಯ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಸಿಂಹಾಸನಕ್ಕೆ ಪೂಜೆಯನ್ನು ಸಲ್ಲಿಸಿ ರತ್ನ ಖಚಿತವಾದ ಸಿಂಹಾಸನಾರೋಹಣವನ್ನು ಮಹಾರಾಜನರು ಮಾಡುತ್ತಾರೆ. ಸಿಂಹಾಸನದಲ್ಲಿ ಕುಳಿತ ತಕ್ಷಣವೇ ಗೌರವಾರ್ಥವಾಗಿ ೨೧ ಕುಶಾಲುತೋಪುಗಳನ್ನು ಹಾರಿಸಿ ಹೂವಿನ ಮಳೆಗರೆಯಲಾಗುತ್ತಿತ್ತು. ಅರಮನೆಯ ಮುಂಭಾಗದ ಅರ್ಧಚಂದ್ರಾಕಾರವಾದ ಅಂಗಳದಲ್ಲಿ ಸೈನಿಕರು, ಅಶ್ವದಳ ಹಾಗೂ ಗಜದಳದ ಪದಾಧಿಕಾರಿಗಳು ಸಾಲಾಗಿ ನಿಲ್ಲಿಸಲಾಗುತ್ತಿತ್ತು. ಸಂಸ್ಥಾನದ ಪ್ರಮುಖ ದೇವಸ್ಥಾನ ಮತ್ತು ಮಠಗಳ ಪರವಾಗಿ ಗೌರವ ಬಹುಮಾನ ಹಾಗೂ ಪ್ರಸಾದಗಳನ್ನು ಸಲ್ಲಿಸಿ, ರಾಜರ ದರ್ಬಾರಿಗೆ ಆಹ್ವಾನಿಸಲ್ಪಟ್ಟಿರುವ ವೈದಿಕ ಬ್ರಾಹ್ಮಣರು ಫಲಪುಷ್ಪಗಳನ್ನು ನೀಡಿ ಆಶೀರ್ವಾದ ಗೌರವನ್ನು ಸಲ್ಲಿಸುತ್ತಿದ್ದರು. ನಂತರ ಸೈನ್ಯದಳದ ಕವಾಯಿತು. ಅಶ್ವದಳದ ಕವಾಯಿತು, ಮದ್ದುಗುಂಡುಗಳ ಪ್ರದರ್ಶನ, ಸಾಹಸ ಕ್ರೀಡೆಗಳ ಪ್ರದರ್ಶನಗಳು ನಡೆಯುತ್ತಿದ್ದವು.

ಪ್ರಾರಂಭದಿಂದ ಒಂಬತ್ತನೇ ದಿನದವರೆವಿಗೂ ಹಿಂದೂ ಪಂಚಾಂಗದಲ್ಲಿ ಬರುವ ಆಚಾರಗಳನ್ನು ಅವಲಂಬಿಸಿ ಸಂಜೆ ವೇಳೆಯಲ್ಲಿ ವೈಭವದ ದರ್ಬಾರು ನೆರವೇರುತ್ತಿತ್ತು. ಅರಮನೆಯ ಮುಂದೆ ಇರುವ ದೊಡ್ಡ ಕೆರೆ ಮೈದಾನದಲ್ಲಿ ಕುಸ್ತಿ ಪಂದ್ಯಗಳು, ಸೈನ್ಯವಾಯಿತು, ನಾನಾ ಗರಡಿಯವರಿಂದ ದೊಣ್ಣೆ, ಕತ್ತಿ ವರಸೆ, ಕೋಲಾಟಗಳು, ಹಳ್ಳಿಯ ಜನಗಳಿಂದ ಜನಪದ ಕ್ರೀಡೆ ನೃತ್ಯ, ಮುಂತಾದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರುತ್ತಿದ್ದವು.

ದಸರೆ ಹಬ್ಬದ ಒಂಬತ್ತನೆಯ ದಿನ ಅರಮನೆಯ ಮುಂಭಾಗದಲ್ಲಿ ಆನೆಯ ಬಾಗಿಲಿನ ಹತ್ತಿರ ಹಾಕಿರುತ್ತಿದ್ದ ವಿಶಿಷ್ಟ ಚಪ್ಪರದಲ್ಲಿ ಮಹಾರಾಜರು ಆಯುಧಪೂಜೆಯನ್ನು ನೇರವೇರಿಸುತ್ತಿದ್ದರು. ಪಟ್ಟದ ಆನೆ, ಕುದುರೆ, ರಾಷ್ಟ್ರೀಯ ಆಯುಧಗಳು, ವಿಶೇಷವಾಗಿ ಹಸುಗಳನ್ನು ಪೂಜಿಸುವರು. ಇದನ್ನೆ ಆಯುಧಪೂಜೆ ಎಂದು ಕರೆಯಲ್ಪಡುವುದು. ನೂರಾರು ವರ್ಷಗಳಿಂದ ನಡೆದು ಬಂದಿರುವ ಈ ವೈಭವಯುತ ಪದ್ಧತಿಯನ್ನು ಬಿಡಲು ಸಾಧ್ಯವಾಗದೆ ಇಂದಿಗೂ ನಾಡಹಬ್ಬವಾಗಿ ನಮ್ಮ ಕರ್ನಾಟಕ ಸರ್ಕಾರವು ಆಚರಿಸಿಕೊಂಡು ಬರುತ್ತಿದೆ.

ಸುಮಾರು ಮಧ್ಯಾಹ್ನ ಮೂರು ಗಂಟೆಗೆ ಗೌರವದ ೨೧ ಕುಶಾಲುತೋಪು ಹಾರಿಸಲ್ಪಡುವ ತುತ್ತೂರಿ ಮತ್ತು ಕಹಳೆಯ ಶಬ್ದ ಮೊಳಗಿಸಿ ಮೈಸೂರು ಸಂಸ್ಥಾನದ ಗೀತೆಯನ್ನು ಹಾಡುವುದರೊಂದಿಗೆ ಅರಮನೆಯಿಂದ ದಸರಾ ಮೆರವಣಿಗೆಯು ಹೊರಡುತ್ತಿತ್ತು. ಚಿನ್ನದ ಅಂಬಾರಿಯನ್ನು ಹೊತ್ತಿರುವ ಪಟ್ಟದ ಆನೆಯ ಮೇಲೆ ಕುಳಿತು ಸುತ್ತಲೂ ಅಂಗರಕ್ಷಕ, ಅಶ್ವದಳದ ಸವಾರರು, ಸರದಾರರು, ಅಧಿಕಾರಿಗಳನ್ನು ಬರಮಾಡಿಕೊಂಡು ಮಹಾರಾಜರು ಲಕ್ಷಾಂತರ ಜನಗಳು ಜಾತ್ರೆಗೆ ಬಂದರೆ ಅದೊಂದು ಅವಿಸ್ಮರಣೀಯ ದಿನವೆಂದೆನ್ನಬಹುದಾಗಿತ್ತು ಎಂದು ಇಂದಿಗೂ ಹಿರಿಯ ನಾಗರೀಕರು ಹೇಳುತ್ತಾರೆ.

ಪಟ್ಟದ ಆನೆಯ ಚಿನ್ನದಿಂದ ಸೂಕ್ಷ್ಮಕೆತ್ತನೆ ಕೆಲಸ ಮಾಡಿರುವ ಪೋಷಾಕನ್ನು ಧರಿಸಿ, ಆಡಂಬರದಿಂದ ತನ್ನ ಸರಿಸಮನರಾರಿಲ್ಲವೆಂಬ ರೀತಿಯಲ್ಲಿ ರಾಜಮನೆತನದ ತನ್ನ ಯಜಮಾನನನ್ನು ಹೊತ್ತು ಗಂಭೀರವಾಗಿ ನಿಂತು ನಿಂತು ಮುಂದೆ ನಡೆಯುತ್ತಿತ್ತು. ಮೆರವಣಿಗೆಯು ಕೋಟೆಯ ಉತ್ತರದ ದ್ವಾರದಿಂದ ಹೊರಡುತ್ತಿತ್ತು. ಮೊದಲು ಈಗಿನ ಅಶೋಕ ರಸ್ತೆಯಲ್ಲಿ ನಡೆದು ಬನ್ನಿಮಂಟಪವನ್ನು ಸೇರುತ್ತಿತ್ತು. ಆದರೆ ಈಗ ಅರಮನೆಯಿಂದ ಹೊರಟು ಚಾಮರಾಜ ಒಡೆಯರ ಅಮೃತ ಶಿಲೆಯ ವಿಗ್ರಹದಿಂದ ಮಾಡಿದ ಮಂಟಪದ ಎಡಗಡೆ ತಿರುಗಿ ನಾಲ್ವಡಿ ಕೃಷ್ಣರಾಜ ಒಡೆಯರ ವೃತ್ತದಿಂದ ಉತ್ತರಕ್ಕೆ ಇರುವ ಸಯ್ಯಾಜಿರಾವ್ ರಸ್ತೆಯಲ್ಲಿ ಸುಮಾರು ಎರಡು ಕಿಲೋಮೀಟರ್ ಹೋಗಿ ಉತ್ಸವ ಬನ್ನಿ ಮಂಟಪವನ್ನು ಸೇರುತ್ತದೆ. ಮೆರವಣಿಗೆಯು ಹೋಗುವ ರಸ್ತೆಯ ಇಕ್ಕೆಡೆಗಳಲ್ಲಿಯೂ ಲಕ್ಷಾಂತರ ಜನರು ಸೇರಿ ವೀಕ್ಷಿಸಿ ಮಹಾರಾಜರು ಹಾಗೂ ಚಿನ್ನದ ಅಂಬಾರಿಯನ್ನು ನೋಡಿ ಭಕ್ತಿಭಾವದಿಂದ ನಮಸ್ಕರಿಸಿ ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗುತ್ತಿದ್ದರು. ಈ ವೈಭವದ ಉತ್ಸವವು ವಿಶ್ವದಲ್ಲೆಲ್ಲೂ ನಡೆಯುವುದಿಲ್ಲವೆಂದು ಇದು ವಿಶ್ವವಿಖ್ಯಾತಿಯಾಗಿದೆ.

ದಸರ ಹಬ್ಬವು ಪ್ರಾರಂಭವಾದ ದಿನದಿಂದ ದಸರ ಮೆರವಣಿಗೆ ನಡೆಯುವವರೆಗಿನ ೧೦ ದಿನಗಳ ವರೆಗೂ ಸಂಸ್ಥಾನದ ವಿವಿಧ ಪ್ರದೇಶಗಳಿಂದ ಹಾಗೂ ವಿದೇಶಿಗಳಿಂದ ನರ್ತಕರು, ಗಾಯಕರು, ಬಯಲಾಟದವರು, ದೋಂಬೀ ದಾಸರು, ತೊಗಲು ಬೊಂಬೆಯವರು, ಹಗಲು ವೇಷದವರು, ದೊಂಬರು, ಗೋರವಯ್ಯಗಳು, ಕಣಿ ಹೇಳುವವರು, ಜೋತಿಷ್ಯ ಹೇಳುವವರು, ಸಾಮುದ್ರಿಕ ಶಾಸ್ತ್ರ ಹೇಳುವವರು, ಕೊಂಬು ಕಹಳೆಯ ವಾಲಗಗಳನ್ನೂದಿ ಹಣ ಕೇಳುವವರು, ಕೋಲೆ ಬಸವನವರು, ಹಾವಾಡಿಗರು, ಸರ್ಕಸ್ ನಿಪುಣರು ಮೈಸೂರು ನಗರದಲ್ಲೆಲ್ಲಾ ತುಂಬಿಕೊಂಡು ತಮ್ಮ ತಮ್ಮ ಸಾಮರ್ಥ್ಯದ ಪ್ರದರ್ಶನ ನೀಡಿ ಹಣ ಸಂಪಾದಿಸುವ ಕಾಯಕದಲ್ಲಿ ತಲ್ಲೀನರಾಗುತ್ತಿದ್ದರು. ದಸರಾ ಮೆರವಣಿಗೆಯಲ್ಲಿ ಜನರು ತೋರಿಸುತ್ತಿದ್ದ ಸಾಂಸ್ಕೃತಿಕ ಪ್ರದರ್ಶನವು ಅಂದಿನ ಸಂಸ್ಕೃತಿಯ ಪ್ರತೀಕವಾಗಿ ಮೆರೆದಿದೆ.

ಕ್ರೈಸ್ತ ಮಿಷನರಿ ಹಾಗೂ ಕ್ರೈಸ್ತಧರ್ಮ ಪ್ರಚಾರ

ಮೇಲೆ ಹೇಳಿದುದೆಲ್ಲವೂ ಬಹುಮಟ್ಟಿಗೆ ಕನ್ನಡ ನಾಡಿನಲ್ಲಿಯೇ ಮೈದುಳದ ಧರ್ಮ ಸಂಸ್ಕೃತಿಗಳು, ಇಷ್ಟರಲ್ಲಿ ಮೈಸೂರು ಸಂಸ್ಥಾನಕ್ಕೆ ನಾಡಿನ ಹೊರಗೆ ಹರಡುತ್ತಿದ್ದ ವಿದೇಶಿ ಧರ್ಮ ಹಾಗೂ ಸಂಸ್ಕೃತಿಗಳೂ ಸೇರಿಕೊಂಡು ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಭೀರಲಾರಂಭಿಸಿದವು. ಅವುಗಳಲ್ಲಿ ಕ್ರೈಸ್ತ ಧರ್ಮ ಹಾಗೂ ಇಸ್ಲಾಂ ಧರ್ಮಗಳು ಬಹುಮುಖ್ಯವಾದವುಗಳು.

ಕ್ರೈಸ್ತ ಧರ್ಮಕ್ಕೂ ಕನ್ನಡ ನಾಡಿಗೂ (ಮೈಸೂರು ಸಂಸ್ಥಾನ) ಇರುವ ಸಂಬಂಧ ಬಹು ಪ್ರಾಚೀನವಾದುದೆನ್ನಬಹುದು. ಪ್ರಾಚೀನ ಇತಿಹಾಸವನ್ನು ಗಮನಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹನ್ನೆರಡನೆಯ ಶತಮಾನದ ಸುಮಾರಿಗೆ ಚರ್ಚುಗಳಿದ್ದವೆಂದು ತಿಳಿದುಬರುತ್ತದೆ. ಫ್ರಜೋರ್ಡೆನ್ ಕಟಲನಸ್ ದಿ ಸೆವೆರೋ ಎಂಬ ಪಾದ್ರಿಯ ನೇತೃತ್ವದಲ್ಲಿ ಡಾಮಿನಿಕನ್ ಕ್ರೈಸ್ತರು ೧೩೨೫ರಲ್ಲಿ ಮೈಸೂರು ಸಂಸ್ಥಾನಕ್ಕೆ (ಆಗಿನ್ನೂ ವಿಜಯನಗರದರಸರ ಪ್ರಾರಂಭದ ಆಳ್ವಿಕೆಯ ಕಾಲ) ಬಂದು ಕ್ರೈಸ್ತ ಧರ್ಮದ ಪ್ರಸಾರದ ಪ್ರಯತ್ನವನ್ನು ಮೊದಲಬಾರಿಗೆ ಮಾಡಿದರು ಎಂದು ಆಧುನಿಕ ಮೈಸೂರು ಚರಿತ್ರೆಗಾರರಾದ ಹೇಟ್ನಿ ತಿಳಿಸುತ್ತಾರೆ.

೧೪೪೫ರಲ್ಲಿ ವಿಜಯನಗರದ ದಿವಾನನೊಬ್ಬನು ಕ್ರೈಸ್ತನಾಗಿದ್ದನೆಂಬ ಉಲ್ಲೇಖವು ಕಂಡುಬರುತ್ತದೆ. ಕೆಲವು ಮಾಹಿತಿಗಳ ಪ್ರಕಾರ ೧೩೩೫ರಷ್ಟು ಹಿಂದೆಯೇ ಬೈಬಲನ್ನು ಕನ್ನಡದಲ್ಲಿ ತರುವ ಪ್ರಯತ್ನ ನಡೆದಿತ್ತು. ಅದೇ ರೀತಿಯಲ್ಲಿ ಬೈಬಲ್ ಬೋಧನೆಯೂ ಆರಂಭವಾಯಿತು. ಹಾಗೆಯೇ ಮತ್ತೊಂದು ದಾಖಲೆಯ ಪ್ರಕಾರ ೧೫೪೨ರಲ್ಲಿ ಲೋಯೋಲಾದ ಸಂತ ಇಗ್ನೇಶಿಯಸ್ ನ ಶಿಷ್ಯ ಸಂತ ಫ್ರಾನ್ಸಿಸ್ ಕ್ಲೇವಿಯರ್ ಕನ್ನಡ ನಾಡಿನಲ್ಲೆಲ್ಲ ಸಂಚರಿಸಿ ಕ್ರೈಸ್ತಮತಕ್ಕೆ ಸ್ಥಳೀಯ ಜನತೆಯಿಂದ ಬೆಂಬಲ ಪಡೆಯಲು ಪ್ರಯತ್ನಪಟ್ಟಿರುವುದು ಕಂಡುಬರುತ್ತದೆ. ಈಗಿನ ತಮಿಳುನಾಡು ಪ್ರದೇಶದ ಸತ್ಯಮಂಗಲದ ಕಡೆಯಿಂದ ಬಂದ ಪೂರ್ಚುಗೀಸ್ ಜೆಸ್ಯೂಟ್ ಪಂಗಡದ ಪಾದ್ರಿಗಳು ‘ಕನ್ನಡ ಮಿಶನ್’ಎಂಬ ಧಾರ್ಮಿಕ ಸಂಸ್ಥೆಯೊಂದನ್ನು ಆರಂಭಿಸಿದರು. ಇದು ೧೭೦೪ರ ಸುಮಾರಿಗೆ ಪ್ರಬಲವಾದ ಸಂಸ್ಥೆಯಾಗಿ ಬೆಳೆಯಿತು. ಮುಂದೆ ಶ್ರೀರಂಗಪಟ್ಟಣವನ್ನು ತಮ್ಮ ಮೂಲ ಸ್ಥಳವನ್ನಾಗಿ ಮಾಡಿಕೊಂಡು ಅದನ್ನು ‘ರೊಂ ಸನ್ಯಾಸಿ’ಗಳ ಕೇಂದ್ರವನ್ನಾಗಿ ಪರಿವರ್ತಿಸಿಕೊಂಡರು. ಹೈದರ್ ಆಲಿಯ ಮಂಗಳೂರಿನಿಂದ ಒಂಬತ್ತು ಸಾವಿರ ಕೆಥೊಲಿಕ್ ಕ್ರೈಸ್ತರನ್ನು ಶ್ರೀರಂಗಪಟ್ಟಣಕ್ಕೆ ಕರೆಸಿಕೊಂಡನೆಂದು ಆ ಕಾಲದ ದಾಖಲೆಗಳು ತಿಳಿಸುತ್ತವೆ. ಮೈಸೂರು ಸಂಸ್ಥಾನದಲ್ಲಿ ಈ “ಕನ್ನಡ ಮಿಶನ್” (ಪೂರ್ಚುಗೀಸರದು) ಮತ ಪ್ರಚಾರದ ಕೆಲಸ ಮಾಡುತ್ತಿದ್ದರೆ, ಬೆಂಗಳೂರು ಕೋಲಾರಗಳಲ್ಲಿ ‘ತೆಲುಗು ಮಿಶನ್” (ಫ್ರೆಂಚರದ್ದು) ಸಕ್ರೀಯವಾಗಿ ಮತಪ್ರಚಾರದಲ್ಲಿ ತೊಡಗಿಸಿಕೊಂಡಿತ್ತು.

ಹೀಗೆ ಮತ ಪ್ರಚಾರಕ್ಕೆ ಬಂದ ಮಿಷನರಿಗಳವರು ಬುದ್ಧಿವಂತರಾಗಿಯೂ, ಕೆಲವರು ಯುರೋಪ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಪದವಿ ಪಡೆದವರಾಗಿದ್ದರು. ಇವರು ತಮ್ಮ ವಿದ್ಯಾಭ್ಯಾಸದ ಶಕ್ತಿಯಿಂದ ತಮ್ಮ ದೇಶದಲ್ಲಿಯೇ ಉತ್ತನ ಉದ್ಯೋಗ ದೊರಕಿಸಿಕೊಂಡು ಐಷಾರಾಮದ ಜೀವನ ನಡೆಸಬಹುದಿತ್ತು. ಆದರೆ ಅವರು ಸ್ವಧರ್ಮ ನಿಷ್ಠೆಯಿಂದ ಪ್ರೇರಿತರಾಗಿ ಕ್ರೈಸ್ತ ಸೇವಾದೀಕ್ಷೆಯನ್ನು ಪಡೆದುಕೊಂಡು, ಸವಂತ ದೇಶದ ಮಿಷನ್ ಸಂಸ್ಥೆಯಲ್ಲಿ ಸಕ್ರಿಯ ಸದಸ್ಯರಾಗಿ ಮೂರು ನಾಲ್ಕು ವರ್ಷಗಳ ಕಾಲ ಜ್ಞಾನಾರ್ಜನೆ ಪಡೆದು ಸಂಪೂರ್ಣ ತರಬೇತಿ ಹೊಂದಿದವರು. ತರುಣ ವಯಸ್ಸಿನಲ್ಲಿಯೇ ಕನ್ನಡ ಸಂಸ್ಥಾನಕ್ಕೆ ಬಂದು ಹೊಸ ನೆಲ, ಹೊಸ ಜನ, ಹೊಸ ಭಾಷೆ, ಹೊಸ ಸಂಸ್ಕೃತಿಯಲ್ಲಿ ಬೆರೆತು ನಮ್ಮವರಲ್ಲಿ ಅವರೊಬ್ಬರಾಗಿ ಮುಖ್ಯ ಕಾರ್ಯದಲ್ಲಿ ಅವರು ಜಯಿಸಬೇಕಾದದ್ದು. ಅವರು ಜಯಿಸಿದ್ದು ಅಮೂಲ್ಯವಾದದ್ದಾಗಿದೆ. ಪ್ರಾರಂಭದಲ್ಲಿ ಹಿಂದೂ ಮೂಲಭೂತವಾದಿಗಳ ತೀವ್ರ ವಿರೋಧವನ್ನು ಇವರು ಎದುರಿಸಬೇಕಾಯಿತು. ನಂತರ ಇವರು ಹಿಂದೂ ಧರ್ಮದಲ್ಲಿಯೇ ಇದ್ದ ತಾರತಮ್ಯ ಸಾಮಾಜಿಕ ಅನಿಷ್ಟ ಪದ್ಧತಿ ಹಾಗೂ ದೀನ ದಲಿತರ, ಬುಡಕಟ್ಟು ಜನರ ಹೀನಸ್ಥಿತಿಯ ಬದುಕಿನ ಕಡೆ ಹೆಚ್ಚಿನ ಗಮನಹರಿಸಿ ಅವರ ಮೂಲಭೂತ ಅವಶ್ಯಕ ವಸ್ತುಗಳಾದ ಆಹಾರ, ಬಟ್ಟೆ, ಮನೆ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ತೊಡಗಿದ್ದರು. ಮೈಸೂರು ಸಂಸ್ಥಾನದ ಚಾಮರಾಜನಗರ, ಮೈಸೂರು, ಕೋಲಾರ, ತುಮಕೂರು, ಚಿತ್ರದುರ್ಗ ಮುಂತಾದ ಪ್ರದೇಶದ ಹೆಚ್ಚಿನ ಸಂಖ್ಯೆಯ ದಲಿತರು ತಮ್ಮ ಪ್ರಾಥಮಿಕ ಸೌಕರ್ಯಗಳನ್ನು ಪಡೆಯುವುದಕ್ಕಾಗಿ ಸ್ವ ಇಚ್ಛೆಯಿಂದಲೇ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ ಕ್ರೈಸ್ತ ಧರ್ಮದ ಅನುಯಾಯಿಗಳಾದರು. ಈ ಪ್ರದೇಶಗಳಲ್ಲಿ ಇಂದಿಗೂ ಹೆಚ್ಚಿನ ಪ್ರಮಾಣದಲ್ಲಿ ದಲಿತ ಕ್ರೈಸ್ತರನ್ನು ಕಾಣಬಹುದಾಗಿದೆ. ಇದರ ಸಂಪೂರ್ಣ ವಿವರಣೆ ಇಲ್ಲಿ ಅವಶ್ಯಕವಲ್ಲವೆಂದೆನಿಸುತ್ತದೆ. ಕ್ರೈಸ್ತರು ಸಂಸ್ಥಾನದಲ್ಲಿ ಕೆಥೊಲಿಕ್ ಮತ್ತು ಪ್ರೊಟೆಸ್ಟೆಂಟ್ ಗಳೆಂಬ ಎರಡು ಪಂಗಡದ ರೀತಿ ನಿಯಮಗಳನ್ನು ಜನತೆಯ ಮೇಲೆ ಪ್ರಭಾವಬೀರಿ ಅವರ ಶಕ್ತಿಯ ಅನುಸಾರ ಅವರವರ ಅನುಯಾಯಿಗಳನ್ನಾಗಿ ಮಾಡಿಕೊಂಡರೆನ್ನಬಹುದು.

ಮೈಸೂರಿನ ಒಡೆಯರ್ ರವರು ಹಿಂದೂ ಧರ್ಮಗಳೆರಡನ್ನು ಸಮನಾಗಿ ಪೋಷಿಸಿಕೊಂಡು ಬಂದರೆನ್ನಬಹುದು. ಕೆಲವೊಮ್ಮೆ ಕ್ರೈಸ್ತ ಹಾಗೂ ಹಿಂದೂ ಧರ್ಮಗಳು ಒಂದು ಕಡೆ ವಿಚಿತ್ರವಾಗಿ ಕಲೆತು ಬಂದಿರುವುದೂ ಉಂಟು. ಅಂದರೆ ಮತಾಂತರ ಹೊಂದಿದ ಜನರು ತಮ್ಮ ಮೂಲ ಧರ್ಮದ ಸಂಪ್ರದಾಯವನ್ನು ಸಂಪೂರ್ಣವಾಗಿ ಬಿಡದೆ ದ್ವಂದ್ವದಲ್ಲಿ ಸಿಲುಕಿ ಈ ರೀತಿ ನಡೆದುಕೊಂಡು ಬರುತ್ತಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ಸ್ಥಾಪಿತವಾದ ರೋಮನ್ ಕ್ಯಾಥೊಲಿಕ್ ಸೇಂಟ್ ಫಿಲೋಮಿನಾ ಚರ್ಚ್‌ ಅಂದಿನ ಸಂಸ್ಥಾನದ ಸುಂದರ ಕಟ್ಟಡಗಳಲ್ಲಿ ಒಂದಾಗಿದೆ. ಎರಡು ಎತ್ತರದ ಶಿಖರಗಳನ್ನು ಹೊಂದಿರುವ ಚರ್ಚು ಭಾರತದಲ್ಲಿಯೇ ಇಲ್ಲವೆಂದು ಹೇಳಲಾಗಿದೆ. ಈ ಶಿಖರಗಳ ಎತ್ತರ ೧೬೫ ಅಡಿಗಳು. ಈ ಕಟ್ಟಡವು ಫ್ರೆಂಚರ ಶಿಲ್ಪ ಕಲಾ ಕೌಶಲ್ಯದಿಂದ ಕೂಡಿ, ಫ್ರೆಂಚ್ ಶಿಲ್ಪಗಳ ವೈಭವದ ವೈಖರಿಗೆ ಕನ್ನಡಿ ಹಿಡಿದಂತೆ ಕಂಗೊಳಿಸುತ್ತಿದೆ. ೧೯೩೩ರಲ್ಲಿ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಈ ಚರ್ಚ್‌ಗೆ ಅಸ್ತಿಭಾರ ಹಾಕಿದರು. ೧೯೩೮ರಲ್ಲಿ ಕೆಲಸ ಸಂಪೂರ್ಣಗೊಂಡು ಭಕ್ತರಿಗೆ ತೆರೆಯಲಾಯಿತು. ನಂತರದ ಬೆಂಗಳೂರು ನೀಲಗಿರಿ ರಸ್ತೆಯಲ್ಲಿರುವ ಭಕ್ತ ರೋಮೊಯೋ ಚರ್ಚ್‌ ಯುರೋಪಿಯನ್ನರ ಸಹಾಯವಿಲ್ಲದೆ ೧೮೩೦ – ೩೧ರಲ್ಲಿ ನಿರ್ಮಾಣವಾಯಿತು. ಮತ್ತೊಂದು ವೆಸ್ಲಿಯನ್ ಚರ್ಚ್. ಇದು ಚರ್ಚ್ ರಸ್ತೆಯಲ್ಲಿ ವೆಸ್ಲೆಯನ್ ಪ್ರೆಸ್ಸಿನ ಪಕ್ಕದಲ್ಲಿ ಕಂಡುಬರುತ್ತದೆ. ಸುಮಾರು ೧೦೦ ವರ್ಷದ ಇತಿಹಾಸ ಹೊಂದಿರುವ ಈ ಚರ್ಚ್ ಚಿಕ್ಕದಾಗಿದ್ದರೂ ಸುಂದರವಾಗಿದೆ. ಸಂಸ್ಥಾನದಲ್ಲಿ ಹೆಚ್ಚಾಗಿ ಕೊಳ್ಳೆಗಾಲ, (ಅಂದು ಮದ್ರಾಸ್ ಪ್ರಾಂತ್ಯ) ಚಾಮರಾಜನಗರ, ಕೋಲಾರಗಳಲ್ಲಿ ಹೆಚ್ಚಾಗಿ ಚರ್ಚ್‌ಗಳನ್ನು ಕಾಣಬಹುದಾಗಿದೆ. ಹಾಗೆಯೇ ಇಲ್ಲಿ ಹೆಚ್ಚಾಗಿ ದಲಿತರು (ಹೊಲೆಯ ಮಾದಿಗರು) ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವುದು ಕಂಡುಬರುತ್ತದೆ.

ಮೈಸೂರು ಸಂಸ್ಥಾನದಲ್ಲಿ ಇಸ್ಲಾಂ ಧರ್ಮ

ಇಸ್ಲಾಂ ಧರ್ಮವು ಭಾರತದ ನೆರೆಯ ರಾಷ್ಟ್ರಗಳಾಗಿದ್ದ ಅರೇಬಿಯದಿಂದ ಕ್ರಿ.ಶ. ೯೯೧ರ ಸುಮಾರಿಗೆ ಮೈಸೂರಿಗೆ ತಲುಪಿತ್ತೆಂದು ಪ್ರಾಚೀನ ದಾಖಲೆಗಳು ತಿಳಿಸುತ್ತವೆ. ಕ್ರಿ.ಶ. ೧೧೯೧ರ ವೇಳೆಗೆ ಇದರ ಪ್ರಭಾವವು ಭಾರತದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಕ್ರಿ.ಶ. ೧೨೦೬ ರಿಂದ ೧೫೨೬ರವರೆಗೆ ದೆಹಲಿ ಸಿಂಹಾಸನದಲ್ಲಿ ಸುಲ್ತಾನರು ಕಾರುಬಾರು ನಡೆಸಲು ಪ್ರಾರಂಭಿಸಿದಾಗ ಇಸ್ಲಾಂ ಧರ್ಮವು ದೇಶದ ಎಲ್ಲಾ ಪ್ರಾಂತ್ಯಗಳಿಗೂ ಹರಡಲು ಕಾರಣವಾಯಿತೆಂದು ಹೇಳಬಹುದು. ಈ ದೃಷ್ಟಿಯಲ್ಲಿ ಕನ್ನಡನಾಡಿಗೆ ಇಸ್ಲಾಂ ಧರ್ಮವು ರಾಷ್ಟ್ರಕೂಟ ಅರಸರ ಕಾಲದಲ್ಲಿ ಬಂದಿತ್ತೆಂದು ನಿಖರವಾಗಿ ಹೇಳಬಹುದು. ಇದಕ್ಕೆ ವಿದೇಶಿಯರ ಬರವಣಿಗೆ ಹಾಗೂ ದೇಶಿಯ ಬರವಣಿಗೆಗಳು ಸಾಕ್ಷಿಯಾಗಿವೆ. ಗುಲ್ಬರ್ಗದಲ್ಲಿ ೧೩೪೭ರ ಸುಮಾರಿನಲ್ಲಿ ಬಹಮಾನಿ ರಾಜ್ಯವು ಸ್ಥಾಪನೆಗೊಂಡ ಮೇಲೆ ಇಸ್ಲಾಂ ಧರ್ಮವು ಭದ್ರವಾಗಿ ನೆಲೆಯೂರಲು ತೊಡಗಿತು. ಸುಲ್ತಾನರುಗಳು ಕನ್ನಡ ನಾಡಿನಲ್ಲಿ ಪರ್ಶಿಯ ಅರೇಬಿಯಗಳಿಂದಲೂ ಹಾಗೂ ಉತ್ತರ ಭಾರತದ ಮೊಗಲ್ ಸಾಮ್ರಾಜ್ಯಗಳಿಂದಲೂ ಮುಸಲ್ಮಾನರನ್ನು ಕರೆಸಿಕೊಂಡು ಸ್ಥಿರವಾಗಿ ನೆಲೆಸಲು ಅವಕಾಶ ಮಾಡಿಕೊಟ್ಟರು. ಇದೇ ಸಮಯದಲ್ಲಿ ಆಫ್ರಿಕಾದಿಂದ ಸಿದ್ದಿ ಜನಾಂಗದವರೂ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕಕ್ಕೆ ಬರಲಾರಂಭಿಸಿದರು. ಹದಿನೈದನೆಯ ಶತಮಾನದ ಕಡೆಯ ಭಾಗದಲ್ಲಿ ಮತ್ತೆ ಮುಸಲ್ಮಾನರ ಪ್ರಾಬಲ್ಯವು ಹೆಚ್ಚಾಯಿತು. ಬಿಜಾಪುರದ ಆದಿಲ್‌ಶಾಹಿ ಮತ್ತು ಗೋಲ್ಕಂಡದ ಕುತುಬ್ ಶಾಹಿ ಅರಸರು ಮುಸ್ಲಿಂ ಜನಾಂಗದ ಅಭಿವೃದ್ಧಿಗೆ ಹೆಚ್ಚಾಗಿ ಸಹಕರಿಸಿದರು. ಮೈಸೂರು ಸಂಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂಮರು ೧೬೩೭ರಲ್ಲಿ ರಣದುಲ್ಲಾಖಾನ್‌ನು ಬಿಜಾಪುರವನ್ನು ಗೆದ್ದು, ೧೬೮೭ರಲ್ಲಿ ಖಾಸಿಂ ಖಾನನ್ನು ಮೈಸೂರು ಸಂಸ್ಥಾನದಲ್ಲಿ ದಾಳಿ ಮಾಡಿಸಿದಾಗಿನಿಂದ ಹೆಚ್ಚಾಗಿ ಪ್ರಾರಂಭವಾಯಿತ್ತೆನ್ನಬಹುದು.

ತದನಂತರ ೧೭೬೧ರಿಂದ ಹೈದರ್ ಆಲಿ ಸರ್ವಾಧಿಕಾರಿಯಾಗಿ ಸಂಸ್ಥಾನದಲ್ಲಿ ಮೆರೆಯಲು ಪ್ರಾರಂಭಿಸಿದ ಮೇಲೆ ಮೈಸೂರು, ಬಿದನೂರು (ಹೈದರ್ ನಗರ ಎಂದೇ ನಾಮಕರಣಗೊಂಡಿತು) ಚಿತ್ರದುರ್ಗ, ಬೆಂಗಳೂರು, ಮಂಡ್ಯ ಮತ್ತಿತರ ಪ್ರದೇಶಗಳಲ್ಲಿ ಸೈನ್ಯ ಹಾಗೂ ಆಡಳಿತ ವರ್ಗದವರನ್ನು ಅಧಿಕ ಸಂಖ್ಯೆಯಲ್ಲಿ ಸೇರಿಸಿದ್ದುದರಿಂದ ಈ ಪ್ರದೇಶಗಳಲ್ಲಿ ಇಸ್ಲಾಂ ಧರ್ಮ ಭದ್ರವಾಗಿ ಬೇರೂರಲು ಕಾರಣವಾಯಿತು. ನಂತರ ಇವನ ಮಗ ಟೀಪೂಸುಲ್ತಾನನು ಇಸ್ಲಾಂ ಧರ್ಮವನ್ನು ಹರಡಲು ಹೆಚ್ಚಾಗಿಯೇ ಶ್ರಮಿಸಿದನೆನ್ನಬಹುದು. ಮೈಸೂರು ಸಂಸ್ಥಾನವನ್ನು ಹೈದರ್ ಮತ್ತು ಟೀಪು ಆಡಳಿತ ನಡೆಸುತ್ತಿದ್ದಾಗ ಶ್ರೀರಂಗಪಟ್ಟಣ, ಬಿಜಾಪುರದ, ಬಿಜಾಪುರ, ಬೆಂಗಳೂರು, ಗುಲ್ಬರ್ಗಾ, ಬಳ್ಳಾರಿ ಮುಂತಾದವುಗಳು ಪ್ರಮುಖ ಮುಸ್ಲಿಂ ಕೇಂದ್ರಗಳಾಗಿದ್ದವು. ಮೈಸೂರು ಸಂಸ್ಥಾನದಲ್ಲಿ ಅಂದು ಶೇಖ್, ಸೈಯದ್, ಪಠಾನ್, ಮುಘಲ್. ಲಬ್ಬೆ, ಪಿಂಜಾರಿಗಳ ಮುಸ್ಲಿಂ ಪಂಗಡಗಳು ನೆಲಸಿದ್ದರು. ಟೀಪೂಸುಲ್ತಾನನ ಕಾಲದಲ್ಲಿ ಮಲಬಾರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತಾಂತರಗೊಂಡ ಹಿಂದೂಗಳು ಲಬ್ಬೆ, ಮಾಪ್ಪಾ ಎಂದು ಇಂದು ಕರೆಸಿಕೊಳ್ಳುತ್ತಿದ್ದಾರೆ. ಲಬ್ಬೆಯರು ತಮಿಳು ಭಾಷೆಯನ್ನು. ಮಾಪ್ಗಾಗಳು ಮಲೆಯಾಳಿ ಭಾಷೆಯನ್ನು ತಮ್ಮ ಮಾತೃಭಾಷೆಯಾಗಿ ಹೊಂದಿದ್ದಾರೆ. ಇವರ ಮೂಲ ಕಸುಬು ವ್ಯಾಪಾರವಾಗಿದೆ.

ವಿಜಯನಗರದ ಕಡೆಗಾಲದ ಅರಸರು. ಕೆಳದಿ ಅರಸರು ಹಾಗೂ ಮೈಸೂರು ಸಂಸ್ಥಾನದ ಒಡೆಯರು ಹಿಂದೂ ಇಸ್ಲಾಂ ಧರ್ಮಗಳೆರಡನ್ನೂ ಸಮನಾಗಿಯೇ ಪೋಷಿಸಿಕೊಂಡು ಬಂದರೆಂದು ಹೇಳಬಹುದು. ಕೆಲವೊಮ್ಮೆ ಇಸ್ಲಾಂ ಮತ್ತು ಹಿಂದೂ ಧರ್ಮಗಳೆರಡೂ ಕಲೆತುಕೊಂಡು ದೇವತಾಕಾರ್ಯಗಳನ್ನು, ಉತ್ಸವಗಳನ್ನು ಏರ್ಪಡಿಸಿರುವುದಕ್ಕೆ ಮೈಸೂರು ಸಂಸ್ಥಾನದಲ್ಲಿ ಉದಾಹರಣೆಗಳಿವೆ. ಉದಾಹರಣೆಗೆ ಹೇಳುವುದಾದರೆ ಚಿಕ್ಕಮಗಳೂರಿನ ಪ್ರಕೃತಿಯ ಮಡಿಲನಲ್ಲಿ ತಲೆ ಎತ್ತಿನಿಂತಿರುವ ಬಾಬಾಬುಡನ್ ಗಿರಿ ಉತ್ತಮ ನಿದರ್ಶನವಾಗಿದೆ. ಈ ಪ್ರಸಿದ್ಧ ಬೆಟ್ಟ ಹಿಂದೂಗಳಿಗೆ ದತ್ತಾತ್ರೇಯ ಪೀಠ. ಇದು ಮುಸಲ್ಮಾನರಿಗೆ ದಾದಾ ಹಯೂತ್ ಮೀರ್ ಖಲಂದರ್ ಎಂಬ ಸಂತನ ಪೀಠವೆಂದೂ ಅಂದಿನಿಂದ ಇಂದಿನವರೆಗೂ ಪವಿತ್ರ ಸ್ಥಳವಾಗಿ ಉಳಿದುಕೊಂಡು ಬಂದಿದೆ. ಮೇಲಿನ ಎರಡು ಹೆಸರನ್ನು ಹೊಂದಿರುವ ಸಂತನು ಇಲ್ಲಿಗೆ ಬಂದ ಕಾಲ ಕ್ರಿ.ಶ. ೧೦೦೫ ಎಂದು ಹೇಳುತ್ತಾರೆ. ಅವನ ಪರಂಪರೆಯಲ್ಲಿ ಬಂದ ಫಕೀರರು ಈಗಲೂ “ಶ್ರೀ ದತ್ತಾತ್ರೇಯ ಸ್ವಾಮಿ ಬಾಬಾಬುಡನ್‌ಸ್ವಾಮಿ ಜಗದ್ಗುರು” ಎಂಬ ಬಿರುದನ್ನು ಬಳಸಿಕೊಂಡು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಂದಿನಿಂದಲೂ ಗೋಕುಲಾಷ್ಟಮಿಯಲ್ಲಿ ಇಸ್ಲಾಂ ಧರ್ಮಿಯರೂ. ಮೊಹರಂ ಹಬ್ಬದಲ್ಲಿ ಹಿಂದೂಗಳೂ ಪಾಲ್ಗೊಳ್ಳುವ ಪದ್ಧತಿ ಇಂದಿಗೂ ಬೆಳೆದು ಬರುತ್ತಿದೆ. ಹಿಂದೂಗಳು ಅಲ್ಲಿರುವ ಮುಸ್ಲಿಂ ಸಂತರ ಸಮಾಧಿಗಳಿಗೆ ಭಕ್ತಿಭಾವದಿಂದ ಪೂಜೆ ಸಲ್ಲಿಸುವುದೂ ಕಂಡುಬರುತ್ತದೆ. ಇಂದು ಇದು ವಿವಾದದ ಕೇಂದ್ರವಾಗಿ ಪರಿವರ್ತನೆಗೊಂಡಿರುವುದು ಶೋಚನೀಯ ಸಂಗತಿಯಾಗಿದೆ. ಈ ಪ್ರದೇಶದ ಪ್ರಾಚೀನ ಇತಿಹಾಸವನ್ನು ಇಂದಿನವರು ತಿಳಿದರೆ ಈ ರೀತಿಯ ವಿವಾದಕ್ಕೆ ಅಸ್ಪದವಿರಲಾರದೇನೋ.

ಒಟ್ಟಾರೆ ಚರ್ಚೆಯಿಂದ ತಿಳಿಯುವುದೇನೆಂದರೆ ದುಡಿಮೆ ಚಲನಶೀಲತೆಯನ್ನು ಮೈಗೂಡಿಸಿಕೊಂಡು ಧರ್ಮಗಳನ್ನು ಜನಪದ ಧರ್ಮಗಳೆಂದು ಅರೆಯಬಹುದೆಂಬುದು. ಏಕೆಂದರೆ ಇವು ಅಭಿಜಾತ ಧರ್ಮಗಳ ಪರಕಲ್ಪನೆಗೆ ವಿರುದ್ಧವಾಗಿರುತ್ತವೆ. ಸ್ಥಿರತೆ ಮತ್ತು ಸನಾತನತೆ ಎಂಬುವುದು ಅಭಿಜಾತ ದರ್ಮಗಳ ಮುಖ್ಯ ಗುಣಲಕ್ಷಣಗಳಾದರೆ, ಬದಲಾವಣೆ ಮತ್ತು ನಿಸರ್ಗದೊಳಗಿರುವ ಸಂಬಂಧ ಜನಪದ ಧರ್ಮಗಳ ಮುಖ್ಯ ಲಕ್ಷಣಗಳು, ತಾವು ಪವಿತ್ರವೆಂದು ನಂಬಿರುವ ಕಾಡು, ಮರ, ಬಳ್ಳಿ ಪ್ರಾಣಿಗಳ ಬಗ್ಗೆ ಅವರಿಗೆ ಗೌರವ ಭಾವನೆ ಇದ್ದು. ಅವುಗಳ ವಂಶ ವೃದ್ಧಿಯಾಗುವಂತೆ ನೋಡಿಕೊಳ್ಳುವುದು ಜಾನಪದ ಧರ್ಮದ ತಾತ್ವಿಕತೆಯಾಗಿದೆ. ಉಳಿಕೆ ಮತ್ತು ಪುನರುಜ್ಜೀವನ ಈ ಎರಡು ಸಂಗತಿಗಳು ಜನಪದ ಧರ್ಮವನ್ನು ರೂಪಿಸುತ್ತಾ, ಬೆಳಸುತ್ತಾ ಬಂದಿವೆ. ಆರ್ಥಿಕ ಮತ್ತು ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ಈ ಎರಡು ಸಂಗತಿಗಳು ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಬುಡಕಟ್ಟು ಅಥವಾ ಆದಿ ಮಾನವನ ಮನೋವ್ಯಾಪಾರವನ್ನು ವಿವರಿಸಲು ಸಹಾಯಕವಾಗಿವೆ. ಉಳಿಕೆಯ ಸಿದ್ದಾಂತ ಮತ್ತು ಪುನರುಜ್ಜೀವನ ಕಾರ್ಯ ಮಾನವನ ವಿಕಾಸ ಪಥದಲ್ಲಿ ಸಂಸ್ಕೃತಿ ಧರ್ಮವನ್ನು ರೂಪಿಸಲು ಪ್ರಧಾನ ಪಾತ್ರವಹಿಸಿವೆ ಎಂದು ಹೇಳಬಹುದು ಇದು ಇಂದಿಗೂ ಮೈಸೂರು ಸಂಸ್ಥಾನದ ನಾಡಿನಲ್ಲಿ ಕಾಣಬಹುದು.

* * *