ಮೈಸೂರು ಒಡೆಯರ ಕಾಲದಲ್ಲಿನ ಸಂಸ್ಕೃತಿಯನ್ನು ತಿಳಿಯಲು ಹೆಚ್ಚಾಗಿ ನೆರವಾಗುವ ಸಾಧನವೆಂದರೆ ಸಾಹಿತ್ಯ, ಇದಕ್ಕೇನೂ ಸಂಸ್ಥಾನದಲ್ಲಿ ಕೊರತೆ ಇದ್ದಂತೆ ಕಂಡುಬರುವುದಿಲ್ಲ. ಅಂದಿನ ದಿನಗಳಲ್ಲಿ ರಚನೆಯಾಗಿರುವ ಕೃತಿಗಳಿಂದ ಸಾಮಾಜಿಕ, ಧಾರ್ಮಿಕ, ರಾಜಕೀಯ ಒಟ್ಟಾರೆ ಸಾಂಸ್ಕೃತಿಕ ಚರಿತ್ರೆಯನ್ನು ವಿವರವಾಗಿ ತಿಳಿಯಬಹುದಾಗಿದೆ.

ರಾಜ ಒಡೆಯರು ೧೫೭೮ ರಿಂದ ೧೬೩೭ರಲ್ಲಿ ರಾಜರಾಗಿ ಆಳ್ವಿಕೆ ನಡೆಸುತ್ತಿದ್ದ ಕಾರ್ಯ ವೈಖರಿಯನ್ನು ಚಿದಾನಂದ ಕವಿಯು ತನ್ನ “ಮುನಿವಂಶಾಭ್ಯುದಯ”ದಲ್ಲಿ ಸಂಪೂರ್ಣವಾಗಿ ವರ್ಣಿಸಿದ್ದಾನೆ. ಅವರು ಅಂದು ಹೇಗೆ ಜನಮತಗಳಿಸಿದ್ದನು ಹಾಗೂ ರೈತಾಪಿ ಪ್ರಜೆಗಳು ಹಿಂದಿನಿಂದ ಕೊಡುತ್ತಿದ್ದ ತೆರಿಗೆಯನ್ನು ಈಗ ಕೊಟ್ಟರೆ ಸಾಕು ಅದಕ್ಕಿಂತ ಹೆಚ್ಚೇನನ್ನೂ ಕೊಡಬೇಕಾಗಿಲ್ಲವೆಂದು ಹೇಳಿ ರೈತರ ಅನುರಾಗವನ್ನು ಪಡೆದು ಕೊಂಡಿದ್ದರ ಬಗ್ಗೆ ಬೆಳಕು ಚೆಲ್ಲುತ್ತಾನೆ. ಹಾಗೆಯೇ ಅವಿಧೇಯರಾಗಿ ವರ್ತಿಸಿದವರನ್ನು ಕಟು ಶಿಕ್ಷೆಗೆ ಗುರಿಪಡಿಸುತ್ತಿದ್ದದ್ದನ್ನು ಸುದೀರ್ಘವಾಗಿ ವಿವರಿಸಿದ್ದಾನೆ.

ಪ್ರಖ್ಯಾತ ದೊರೆ ಕಂಠೀರವ ನರಸರಾಜರ ಕಾಲದಲ್ಲಿ ಪ್ರಸಿದ್ದ ಕವಿ ಗೋವಿಂದ ವೈದ್ಯ ರಚಿಸಿದ “ಕಂಠೀರವ ನರಸರಾಜ ವಿಜಯ” ಎಂಬ ಸಾಂಗತ್ಯ ಕೃತಿಯು ಚಾರಿತ್ರಿಕ ಗ್ರಂಥಗಳಲ್ಲಿ ಒಂದಾಗಿದೆ. ಅಂದಿನ ಕಾಲದಲ್ಲಿ ನಡೆದ ಯುದ್ಧದ ತಂತ್ರ ಹಾಗೂ ಸಾಹಸದ ಬಗ್ಗೆ ತಿಳಿಸುತ್ತದೆ. ಒಡೆಯರು ನಡೆಸುತ್ತಿದ್ದ ಯುದ್ಧ ಕಾರ್ಯ ತಂತ್ರಗಳ ಬಗ್ಗೆ ಹೇಳುತ್ತಾ ಈ ಕಾವ್ಯಕ್ಕೆ ಆಧಾರವಾಗಿ ಕಂಠೀರವ ನರಸರಾಜರನ್ನೇ ಅರಿಸಿಕೊಂಡು ಆತ ನಡೆಸಿದ ಮುಸ್ಲಿಂ ಸುಲ್ತಾನ ರಣದುಲ್ಲಾಖಾನನ ಮೇಲಿನ ವಿಜಯ ಮತ್ತು ಆತನು ಸೋತು ಪಲಾಯನ ಮಾಡಿದ ವಿವರಗಳು ಹೆಚ್ಚಾಗಿ ವಿವರಿಸುತ್ತದೆ. ಮುಂದುವರೆದು ಮೈಸೂರು ಮತ್ತು ಬಂಕಾಪುರದ ಸಂಬಂಧವನ್ನು ವಿವರಿಸುತ್ತಾನೆ. ಹಾಗೆಯೇ ಸಾಂಬಳ್ಳಿ, ಪಿರಿಯಾಪಟ್ಟಣಗಳ ಮುತ್ತಿಗೆ ಮತ್ತು ಅವುಗಳ ವಶವಾದ ವರ್ಣನೆಯು ಸಹ ಕಂಡುಬರುತ್ತದೆ. ಅಂದು ರಾಜರಿಗೆ ನೆರವಾಗಿ ನಿಂತಿದ್ದ ದಳಪತಿಗಳ ಕಾರ್ಯ ಕೌಶಲತೆಯ ಬಗ್ಗೆಯು ಮತ್ತು ಈ ಕಾವ್ಯದಲ್ಲಿ ಕಂಠೀರವ ನರಸರಾಜರು ಹೊಂದಿದ್ದ ಅನೇಕ ಬಿರುದುಗಳನ್ನು ಸಹ ಕಾಣಬಹುದಾಗಿದೆ ಉದಾ: ಏಕಾಂಗ ವೀರ, ಕರ್ನಾಟಕ ಚಕ್ರೇಶ, ಪರಬಲ, ಮೇಘಾನಿಲ, ಕೋಟಿ ಕೋಲಾಹಲ, ಆಂದ್ರ ಬಲ ಸಂಘ, ಕರಿಕುಲ, ಕಂಠೀರವೇಂದ್ರ, ಕೊಂಕಣ ಮಲೆಯಾಳ, ಕೊಡಗು ಭೂಪಾಲರ ಮರ್ಧಿಪಶೂರ ಮುಂತಾದ ಅನೇಕ ಬಿರುದುಗಳನ್ನು ಹೊಂದಿದ್ದ ಬಗ್ಗೆ ವಿವರವಾಗಿ ಈ ಕಾವ್ಯವು ತಿಳಿಸುತ್ತದೆ. ಕಾವ್ಯದ ಮುಕ್ತಾಯವು ಕಂಠೀರವನ ಧಾರ್ಮಿಕ ಕಾರ್ಯಗಳ ಚಿತ್ರಣದೊಂದಿಗೆ ಮುಗಿಯುತ್ತದೆ. ಈ ಕೃತಿಯು ಅರ್ಥಾಲಂಕಾರಗಳಿಂದ ಕೂಡಿದ್ದು. ಕಂಠೀರವ ನರಸರಾಜನ ವಿಜಯ ಕಾವ್ಯವಾಗಿ ಇಂದಿಗೂ ಐತಿಹಾಸಿಕ ದಾಖಲೆಯಾಗಿ ಉಳಿದಿದೆ.

ಚಾಮಯ್ಯನೆಂಬ ಕವಿಯು ಕ್ರಿ.ಶ. ೧೭೦೦ರ ಅವಧಿಯಲ್ಲಿ ದೊಡ್ಡ ದೇವರಾಜರನ್ನು ಕುರಿತು “ದೇವರಾಜ ಸಾಂಗತ್ಯ’ವನ್ನು ಬರೆಯುತ್ತಾ ಈ ರಾಜರ ಆಳ್ವಿಕೆಯ ಬಗ್ಗೆ ಹೃದಯಂಗಮವಾಗಿ ಬಣ್ಣಿಸಿದ್ದಾನೆ. ಅವರ ಶೌರ್ಯ ಅಪಾರ ಸಾಮರ್ಥ್ಯಕ್ಕಾಗಿ ಮೂರು ಮನ್ನೆಯರ ಗಂಡ’, ‘ಪರರಾಯ ಭಯಂಕರ’ ಹಿಂದೂರಾಯ ಸುರತಾಣ’ ಎಂಬ ಬಿರುದುಗಳನ್ನು ಇಲ್ಲಿ ರಸವತ್ತಾಗಿ ವರ್ಣಿಸಲಾಗಿದೆ. ಇವರ ಆಳ್ವಿಕೆಯ ಕಾಲದಲ್ಲಿ ಮೈಸೂರು ಸಂಸ್ಥಾನವು ಇಕ್ಕೇರಿಯವರೆಗೂ ಹರಿಡಿತ್ತೆಂದು ತಿಳಿಸಲಾಗಿದೆ. (ಇದು ಸಮಕಾಲೀನ ಕೆಳದಿ ನೃಪವಿಜಯದಲ್ಲಿಯೂ ಕಂಡುಬರುತ್ತದೆ). ಹೀಗೆ ಮೈಸೂರು ಪ್ರಭುತ್ವದ ಎಲ್ಲೆಯನ್ನು ಗುರ್ತಿಸುವಲ್ಲಿ ಈ ಕೃತಿಗಳು ತುಂಬಾ ಸಹಕಾರಿಯಾಗಿವೆ. ಇವರ ಕಾಲದಲ್ಲಿಯೇ ಮೊದಲ ಬಾರಿಗೆ ಯುರೋಪಿನ ಒಬ್ಬ ಪ್ರವಾಸಿಗ ಪ್ಲೇಕರ್ ಎಂಬುವನು ಮೈಸೂರಿಗೆ ಭೇಟಿ ನೀಡಿದ್ದ ಹಾಗೂ ಅವನ ಸಂದರ್ಶನದ ವಿಷಯಗಳು ದೊರೆಯುತ್ತವೆ. ಇದರಿಂದ ಹೊರ ರಾಷ್ಟ್ರಗಳೊಂದಿಗೆ ಮೈಸೂರಿನ ಹಿರಿಮೆ ಮತ್ತು ಸಂಬಂಧಗಳನ್ನು ತಿಳಿಯಬಹುದಾಗಿದೆ.

ಸಂಸ್ಥಾನದಲ್ಲಿಯೇ ನವಕೋಟಿ ನಾರಾಯಣನೆನಸಿಕೊಂಡಿದ್ದ ಚಿಕ್ಕದೇವರಾಜ ಒಡೆಯರ್ ಕಾಲದಲ್ಲಿ ವಿದ್ಯಾಭ್ಯಾಸ ಮತ್ತು ಸಾಹಿತ್ಯದ ಅಭಿವೃದ್ಧಿಯು ಉತ್ತುಂಗ ಶಿಖರಕ್ಕೆ ಏರಿತ್ತೆಂದೇ ಹೇಳಬಹುದಾಗಿದೆ. ಇವರ ಕಾಲದಲ್ಲಿ ಸಾಹಿತ್ಯವು ತನ್ನ ವೈಭವದ ತುತ್ತತುದಿಯನ್ನು ತಲುಪಲು ಕಾರಣರಾದ ಗೋವಿಂದ ವೈದ್ಯ, ತಿರುಮಲಾರ್ಯ, ಚಿಕ್ಕೊಪಾದ್ಯಾಯ, ಸಿಂಗರಾರ್ಯ, ಸಂಚಿ ಹೊನ್ನಮ್ಮ, ಕೆಂಪು ನಾರಾಯಣ, ಲಿಂಗರಾಜ, ಅಲ್ಲದೆ ಸ್ವತಃ ಚಿಕ್ಕದೇವರಾಜ ಒಡೆಯರೇ ಅನೇಕ ಕೃತಿಗಳನ್ನು ಕಾವ್ಯಗಳನ್ನು ರಚಿಸಿದ್ದಾರೆ. ಚಿಕ್ಕದೇವರಾಜರ ಸಾಹಿತ್ಯ ಶ್ರೇಷ್ಟತೆಯನ್ನು ಕುರಿತು ಹಸ್ತಗಿರಿ ಮಹಾತ್ಮೆಯಲ್ಲಿ ನೂತನ ಸಾಹಿತ್ಯದ ಬ್ರಹ್ಮಾಂಗನುಪಮ ‘ಚಿಕ್ಕದೇವ ಭೂಪತಿ’ ಎಂದು ಪ್ರಶಂಶಿಸಿದ್ದಾನೆ.

ಚಿಕ್ಕದೇವರಾಜ ಒಡೆಯರ್ ರವರು ಸ್ವತಃ ಸಪ್ತಪತಿ, ಚಿಕ್ಕದೇವರಾಜ ಸೂಕ್ತಿ ವಿಲಾಸ, ಚಿಕ್ಕದೇವರಾಯ ಭಿನ್ನಪಂ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ಸೂಕ್ತಿವಿಲಾಸದಲ್ಲಿ ವರ್ಣಾಶ್ರಮ ಧರ್ಮದಲ್ಲಿನ ನಾಲ್ಕನೆಯದಾದ ಶೂದ್ರ ಆದರ್ಶ ಹಾಗೂ ಕರ್ತವ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದಾರೆ. ವರ್ಣಾಶ್ರಮ ಧರ್ಮವನ್ನು ಉಳಿಸಿಕೊಂಡು ಶೂದ್ರರ ಉನ್ನತಿಗಾಗಿ ರಚಿಸಿರುವ ಈ ಕೃತಿಯು ಶ್ರೀ ಶೈಲಾರ್ಯನ ಸೂಕ್ತಿಯೊಂದಿಗೆ ಪ್ರಾರಂಭವಾಗುತ್ತದೆ. ಒಡೆಯರು ನಂಬಿದ್ದ ವಿಷ್ಣು ಭಕ್ತಿಯ ಬಗ್ಗೆ ಮತ್ತು ಇದರಲ್ಲಿನ ಶ್ರೀವೈಷ್ಣವ ಮತದ ತತ್ವಸಾರದ ಬಗ್ಗೆ ಸಂಕ್ಷಿಪ್ತವಾಗಿ ನಿರೂಪಿತವಾಗಿರುತ್ತದೆ.

‘ಚಿಕ್ಕ ದೇವರಾಜ ವಂಶಾವಳಿ’ ಕೃತಿಯು ಮೈಸೂರು ಮಹಾರಾಜರ ಚರಿತ್ರಾ ರೂಪವಾದ ವಚನ ಗ್ರಂಥಕರ್ತನ ಹೆಸರು ತಿರುಮಲಾರ್ಯ, ಇದು ಚಿಕ್ಕದೇವರಾಜರ ಅವಸಾನದ ಕಾಲದಲ್ಲಿ (ಅಂದರೆ ಕ್ರಿ.ಶ. ೧೭೦೪) ಮಂತ್ರಿ ತಿರುಮಲೈಂ ಗಾರ್ಯನನ್ನು ಪ್ರದಾನಿ ಅಪ್ಪಾಜಿಯನ್ನು ಕರೆಸಿ ತನ್ನ ಮಗನನ್ನು ಹಾಗೂ ರಾಜ್ಯವನ್ನು ನೋಡಿಕೊಳ್ಳುವಂತೆ ಹೇಳಿ ಅವರಿಗೆ ರಾಜ್ಯದ ಸಂಪೂರ್ಣ ಅಧಿಕಾರವನ್ನು ಕೊಟ್ಟಂತೆಯೂ, ಬಳಿಕ ಮಂತ್ರಿ ಪ್ರಧಾನಿಗಳು ಕಂಠೀರವ ನರಸರಾಜ ಒಡೆಯರಿಗೆ ಮಟ್ಟವನ್ನು ಕಟ್ಟಿ ತಾವೇ ರಾಜ್ಯದ ಆಡಳಿತವನ್ನು ನೋಡುತ್ತಿದ್ದುದನ್ನು ತಿಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಅಂತೆಯೇ ರಾಜ ನೃಪನಂ ಕಾರುಗಳ್ಳಿ, ಕನ್ನಂಬಾಡಿ, ತಲಕಾಡು, ಅಮ್ಮ ಚಾವಡಿಗಳ ಪ್ರಭುಗಳು ತನ್ನ ವಿಚಾರವಾಗಿ ತರುಮಲೆ ರಾಜನಿಗೆ ತಿಳಿಸಿದ್ದ ಅಂಶಗಳನ್ನು ಬೇಹುಗಾರರಿಂದ ಹೇಗೆ ಯಾವ ರೀತಿಯಿಂದ ತಿಳಿಯುತ್ತಾನೆ ಎಂಬ ವಿಚಾರಗಳನ್ನು ತಿಳಿಸುವಲ್ಲಿ ಈ ಗ್ರಂಥವು ಅತ್ಯಂತ ಅಮೂಲ್ಯವಾದುದಾಗಿದೆ. ಇದರ ಜೊತೆಗೆ ನರಸರಾಜನು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಳ್ಳುವನೆಂಬ ಹೆದರಿಕೆಯಿಂದ ತಿರುಮಲೆ ರಾಜನು ಊರನ್ನೇ ಬಿಟ್ಟು ಮಾಲಂಗಿಯ ಮಡುವಿನಲ್ಲಿ ಪ್ರಾಣ ಬಿಡುವ ಸನ್ನವೇಶವನ್ನು ಈ ಗ್ರಂಥವು ತಿಳಿಸುತ್ತದೆ. ಚಿಕ್ಕದೇವರಾಜ ಒಡೆಯರ ಬಾಲ್ಯ, ಪಟ್ಟಾಭಿಷೇಕ ಇತ್ಯಾದಿ ವಿಷಯಗಳ ಬಗ್ಗೆಯೂ ಸಹ ಬೆಳಕು ಹರಿಸುತ್ತದೆ.

“ಚಿಕ್ಕ ದೇವರಾಜ ವಿಜಯ ಅಥವಾ ಅಪ್ರತಿಮ ವೀರಚರಿತ” ಕೃತಿಯು ಚಂಪು ಕಾವ್ಯದಲ್ಲಿ ಇದೆ. ಇದು ತಿರುಮಲಾರ್ಯನಿಂದ ರಚನೆಯಾಗಿದೆ. ಇದರ ಹೆಸರೇ ಸೂಚಿಸುವಂತೆ ಮುಖ್ಯವಾಗಿ ಇಲ್ಲಿ ಚಿಕ್ಕದೇವರಾಯರು ಸಾಧಿಸಿದ ವಿಜಯಗಳನ್ನು ನೋಡಬಹುದಾಗಿದೆ. ಒಡೆಯರ್ ರವರು ಮಧುರೆಯ ನಾಯಕ, ಮಹಮ್ಮದೀಯರನ್ನು ಮತ್ತು ಮರಾಠರನ್ನು ಸೋಲಿಸಿದ ವಿವರಗಳನ್ನು ಹೆಚ್ಚಾಗಿ ನೋಡಬಹುದು. ೧೬೮೨ರಲ್ಲಿ ಶ್ರೀರಂಗಪಟ್ಟಣವನ್ನು ಮರಾಠರು ಮುತ್ತಿದ್ದ ಸಂದರ್ಬದಲ್ಲಿ ಚಿಕ್ಕದೇವರಾಜ ಒಡೆಯರು ಸಾಧಿಸಿದ ವಿಜಯವನ್ನು ಇಲ್ಲಿ ಚತ್ರಿಸಲಾಗಿದೆ. ಮುಖ್ಯವಾಗಿ ಯದುವಂಶದ ಮೂಲ, ರಾಜಕುಮಾರರು ಮೇಲು ಕೋಟೆಗೆ ಬಂದದ್ದು. ರಾಜವಂಶದ ಮೂಲ ಪುರುಷರಾಗಿ ನಿಂತದ್ದು ಇತ್ಯಾದಿ ವಿವರಗಳನ್ನು ಈ ಗ್ರಂಥದಲ್ಲಿ ವರ್ಣಿಸಲಾಗಿದೆ. ಸ್ವತಂತ್ರರಾದ ನಂತರ ಒಡೆಯರು ಮೊಗಲರ ಸಾಮ್ರಾಜ್ಯಕ್ಕೆ ಮಿತ್ರರಾದ ರೀತಿ, ಅಂತರಿಕ ಹಾಗೂ ಬಾಹ್ಯ ತೊಂದರೆಗಳಿಂದ ಸುರಕ್ಷಿತರಾದ ಬಗ್ಗೆ, ನೂತನ ರಾಜ್ಯಭಾರ ಪದ್ಧತಿಯ ಬಗ್ಗೆ ಮೇಲಿನ ಗ್ರಂಥದಲ್ಲಿ ತಿಳಿಸಲಾಗಿದೆ. ಇದರಲ್ಲಿ ಮುಖ್ಯವಾಗಿ ಶಿವಾಜಿಯ ಸೊಕ್ಕನ್ನು ಮುರಿದು ಕಪ್ಪವನ್ನು ಪಡದನೆಂದು ತಿಳಿಸುತ್ತಾ ‘ಅಪ್ರತಿಮ ವೀರ’ ‘ಮಹಾರಾಜಾಧಿರಾಜಾ’ ‘ರಾಜಾ ಪರಮೇಶ್ವರ’ ‘ಪ್ರೌಢಪ್ರತಾಪ’ ಮುಂತಾದ ಬಿರುದುಗಳನ್ನು ಚಿಕ್ಕದೇವರಾಜ ಒಡೆಯರು ಹೊಂದಿದ್ದರೆಂದು ಸಂಕ್ಷಿಪ್ತವಾಗಿ ವಿವರಿಸುತ್ತದೆ.

ಚಿಕ್ಕದೇವರಾಜರ ‘ಗೀತಗೋಪಾಲ’ ಚಿಕ್ಕದೇವ ರಾಜ ಬಿನ್ನಪಂ’ಗಳಲ್ಲಿ ವಿಷ್ಣು ಭಕ್ತಿಯ ಬಗ್ಗೆ ಹಾಗೂ ಸಂಗೀತದ ಬಗ್ಗೆ ಹೇಳುತ್ತಾ ಚಿಕ್ಕದೇವರಾಜರು ವೀಣೆ ನುಡಿಸಿದರೆಂದರೆ ಕಸ್ತೂರಿಯ ಕಂಪಿನಂಥೆ ಎಂದು ತಿರುಮಲಾರ್ಯರು ಹೇಳಿರುವುದು ಕಂಡುಬರುತ್ತದೆ. ಚಿಕ್ಕದೇವರಾಜ ಒಡೆಯರು ಆಡಳಿತಕ್ಕೆ ಕೊಟ್ಟ ಗಮನವನ್ನೇ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೂ ಕೊಟ್ಟಿದ್ದನೆಂಬುದು ಅನೇಕ ಗ್ರಂಥಗಳಿಂದ ತಿಳಿದುಬರುತ್ತದೆ. ಆಡಳಿತ ಕ್ರಮ, ತೆರಿಗೆ, ಕಂದಾಯ ವಸೂಲಿ, ಪ್ರಾಂತ್ಯಗಳನ್ನು ಅನೇಕ ಸೀಮೆಗಳನ್ನಾಗಿಸಿ ಅವುಗಳಿಂದ ಹೆಚ್ಚು ಕಂದಾಯವನ್ನು ಸಂಗ್ರಹಿಸಿ ನವಕೋಟಿ ನಾರಾಯಣ ಎಂಬ ಹೆಸರಿಗೆ ಕಾರಣವಾದ ಎಲ್ಲಾ ಅಂಶಗಳನ್ನು ಚಿಕ್ಕದೇವರಾಜ ವಿಜಯದಲ್ಲಿ ವರ್ಣಿಸಲಾಗಿದೆ. ಕನ್ನಡದ ಪ್ರಥಮ ನಾಟಕ ಕೃತಿಯೆಂದು ಗುರುತಿಸಿಕೊಂಡಿರುವ ಸಿಂಗರಾರ‍್ಯರ “ಮಿತ್ರಾವಿಂದಾ ಗೋವಿಂದಾ” ಎಂಬ ಕೃತಿಯು ಪ್ರಕಟವಾದದ್ದು ಇವರ ಕಾಲದಲ್ಲಿಯೇ.

ಚಿಕ್ಕದೇವರಾಜ ಒಡೆಯರ ಸಮಕಾಲೀನ ಪ್ರತಿಭಾನ್ವಿತ ಕವಯತ್ರಿ ಸಂಚಿಯು ಹೊನ್ನಮ್ಮನಿಂದ ಪ್ರಸಿದ್ಧ ಕೃತಿ “ಹದಿಬದೆಯ ಧರ್ಮ” ರಚನೆಯಾಯಿತು. ಈ ಉತ್ತಮ ಕೃತಿಯಲ್ಲಿ ಅಂದಿನ ಸ್ತ್ರೀಯರ ಜೀವನವು ವಿಶದವಾಗಿ ನಿರೂಪಿತವಾಗಿದೆ. ರಾಮಾಯಣ, ಮಹಾಭಾರತ, ಮನ್ವಾದಿ ಧರ್ಮಶಾಸ್ತ್ರಗಳು ಮೊದಲಾದ ಗ್ರಂಥಗಳಲ್ಲಿ ಹಿರಿಯರು ಹೇಳಿದ್ದನ್ನೇ ತಾನು ಸಂಗ್ರಹಿಸಿದ್ದಾಗಿ ಈಕೆ ಹೇಳಿಕೊಂಡಿದ್ದು, ಜೊತೆಗೆ ಸಮಾಜವು ಸ್ತ್ರೀಯರಿಗೆ ಕೊಟ್ಟ ಸ್ಥಾನಮಾನ, ರೂಢಿ, ಸಂಪ್ರದಾಯಗಳ ಶ್ರೇಷ್ಠತೆಯನ್ನು ಅಂದಿನ ಕಾಲಕ್ಕೆ ಯೋಗ್ಯವಾದ ರೀತಿಯಲ್ಲಿ ಬರೆದಿದ್ದಾಳೆ. ಈ ಗ್ರಂಥದಲ್ಲಿ ಪತಿವ್ರತಾ ಧರ್ಮದ ನಿಯಮಗಳು, ಭಾರತೀಯರ, ಸ್ತ್ರೀಯರ ಸ್ಥಾನಮಾನಗಳು ಹಾಗೂ ಪತಿಯೊಂದಿಗೆ, ಅತ್ತೆಮಾವರೊಂದಿಗೆ, ಗುರು ಹಿರಿಯರೊಂದಿಗೆ ಬಂಧು – ಬಳಗದವರೊಂದಿಗೆ ಹೆಣ್ಣು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕವಯತ್ರಿ ಸುಂದರವಾಗಿ ವರ್ಣಿಸಿದ್ದಾಳೆ. ಅದರಲ್ಲಿಯೂ ಮುಖ್ಯವಾಗಿ ಹೆಣ್ಣನ್ನು ಕಂಡು ತಾತ್ಸಾರ ಪಡುವವರ ವಿರುದ್ಧ ಹೇಳಿರುವ ಸಾಲುಗಳನ್ನು ಗಮನಿಸುವುದಾದರೆ :

ಪೆಣ್ಣಲ್ಲವೆ ತಮ್ಮನೆಲ್ಲ ಹಡೆದ ತಾಯಿ?
ಪೆಣ್ಣಲ್ಲವೆ ಪೊರೆದವಳು?
ಪೆಣ್ಣು ಪೆಣ್ಣುಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು?

ಎಂದು ನುಡಿದ ಹೆಣ್ಣಿನ ಸರ್ವಶ್ರೇಷ್ಠತೆಯನ್ನು ಎತ್ತಿ ಹಿಡಿದಿರುವುದು ಕಂಡುಬರುತ್ತದೆ. ದಾನ, ಧರ್ಮಗಳ ಬಗ್ಗೆ, ಅಗ್ರಹಾರ, ಕೆರೆಕಟ್ಟೆಯನ್ನು ಕಟ್ಟಿಸಿದ್ದರ ಬಗ್ಗೆ ಈಕೆಯ ಬರವಣಿಗೆಯಲ್ಲಿ ನೋಡಬಹುದಾಗಿದೆ.

ವೈದ್ಯಕೀಯ ಶಾಸ್ತ್ರದ ಬಗ್ಗೆ ವೀರರಾಜನು ರಚಿಸಿದ “ವೀರ ರಾಜೋಕಿ ವಿಲಾಸ” “ಸಕಲ ವೈದ್ಯ ಸಂಗೀತಾ ಸಾರಾರ್ಣವ” ಎಂಬ ಕೃತಿಯಲ್ಲಿ ಸಕಲ ವೈದ್ಯಕೀಯವನ್ನು ಹಾಗೂ ಎಂ.ಎ.ಶ್ರೀ ಅಯ್ಯಂಗರ್ ಅವರು ಬರೆದ ಆಯುರ್ವೇದದ ಸುಲಭ ಚಿಕಿತ್ಸೆ ಎಂಬ ಕೃತಿಗಳನ್ನು ಒಡೆಯರು ತಮ್ಮ ಸರ್ಕಾರದ ಮೂಲಕ ೧,೦೦೦ ಪ್ರತಿಗಳನ್ನು ಅಚ್ಚು ಹಾಕಿಸಿ ಸಂಸ್ಥಾನದ ಗ್ರಾಮ ಪಂಚಾಯ್ತು ವೈದ್ಯ ಶಾಲೆಗಳಿಗೆ ಒದಗಿಸಿದ್ದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ತಿಳಿದುಬರುತ್ತದೆ.

ಕಂಠೀರವ ನರಸರಾಜರ ಕಾಲದಲ್ಲಿ ಶಾರದೆ ಗುವರ, ಗಣಿತ ವಿಲಾಸ ಎನ್ನುವ ಬಿರುದುಗಳಿದ್ದ ಬಾಸ್ಕರನು “ಬೇಹಾರ ಗಣಿತ”ವನ್ನು ಬರೆದಿದ್ದನು. ಇದು ಅಂದಿನ ಖಗೋಳಜ್ಞಾನ, ಕಾಲಮಾನವನ್ನು ತಿಳಿಸುವ ಹಾಗೂ ಹಬ್ಬಗಳನ್ನು, ಶುಭದಿನಗಳನ್ನು ತಿಳಿಯಲು ಸಹಕಾರಿಯಾಗಿತ್ತು. ಕೃಷ್ಣರಾಜ ಒಡೆಯರ್ ವರನಂದೀ ಕಲ್ಯಾಣ, ವೆಂಕಟಾಚಲ ಮಹಾತ್ಮೆ ಕೃತಿಗಳಲ್ಲಿ ಸ್ತ್ರೀಯರಿಗೆ ಅದರಲ್ಲಿಯೂ ಮದುವೆಯ ಸಮಯದ ವರ್ಣನೆ ಕಂಡುಬರುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರಿಂದಲೇ ೧೭೯೯ ರಿಂದ ೧೮೩೦ರ ಅವಧಿಯ ಆಡಳಿತ ವಿವರಣೆಯನ್ನು “ಶ್ರೀ ತತ್ವನೀಧಿ’ ಎಂಬ ಗ್ರಂಥದಿಂಧ ತಿಳಿಯಬಹುದು. ಅದರಲ್ಲಿ ಶಕ್ತಿ ನಿಧಿ, ವಿಷ್ಣು ನಿಧಿ, ಬ್ರಹ್ಮ ನಿಧಿ, ಗ್ರಹ ನಿಧಿ ಹೀಗೆ ಒಂಬತ್ತು ನಿಧಿಗಳಿದ್ದು ಅವುಗಳಲ್ಲಿ ಉಲ್ಲೇಖಗೊಂಡಿವೆ. ಅವುಗಳ ಜೊತೆಗೆ ಆ ವಿಷಯಗಳ ಗ್ರಹಣಕ್ಕೆ ಅನುಕೂಲವಾಗುವಂತೆ ಚಿತ್ರಗಳನ್ನು ಸಹ ಬರೆದಿರುವುದನ್ನು ಕಾಣಬಹುದಾಗಿದೆ. ಅಲ್ಲದೆ ಈಜುಗಾರಿಕೆ, ದೊಣ್ಣೆವರಸೆ, ಕುಸ್ತಿ, ರಥ, ಗಜಿ, ಆಶ್ವ ಆರೋಹಣಗಳ ತರಭೇತಿಯ ಬಗ್ಗೆ ಜಟ್ಟಿಗಳ ಪ್ರಮುಖ್ಯ ಎಷ್ಟಿತ್ತು ಎಂಬ ಬಗ್ಗೆಯ ಸಂಕ್ಷಿಪ್ತ ವಿವರವನ್ನು ಶ್ರೀತತ್ವನಿಧಿಯಲ್ಲಿ ಕಾಣಬಹುದಾಗಿದೆ.

ಬಸಪ್ಪ ಶಾಸ್ತ್ರಿಗಳು ೧೮೪೩ – ೧೮೯೧ರ ಅವಧಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಚಾಮರಾಜ ಒಡೆಯರ ಅಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಇವರು ಕಾಳಿದಾಸನ ಶಾಕುಂತಲವನ್ನು ಅಪೂರ್ಣವಾಗಿ ಭಾಷಾಂತರಿಸಿ “ಅಭಿನವ ಕಾಳಿದಾಸ” ಎಂಬ ಬಿರುದಿಗೆ ಪಾತ್ರರಾಗಿದ್ದ ವಿಷಯವನ್ನು ಪ್ರಸ್ಥಾಪಿಸುತ್ತಾರೆ. ಆರನೇ ಚಾಮರಾಜ ಒಡೆಯರು ವಾಲ್ಮೀಕಿ ರಾಮಾಯಾಣವನ್ನು ಕನ್ನಡದಲ್ಲಿ ಮೊದಲಿಗೆ ಗದ್ಯಾನುವಾದವನ್ನಾಗಿ “ಚಮರಾಜೋಕ್ತಿ ವಿಲಾಸ” ಎಂಬ ಕೃತಿಯ ರೂಪದಲ್ಲಿ ರಚಿಸಿದ್ದಾರೆ. ಕವಿ ಮಲ್ಲಿಕಾರ್ಜುನರು “ಶ್ರೀರಂಗ ಮಹಾತ್ಮೆ’’ ಎಂಬ ಕಾವ್ಯವನ್ನು ರಚಿಸಿದ್ದು, ಮತ್ತೊಬ್ಬ ಕವಿ ಚಿದಾನಂದ ಎಂಬುವರು “ಮುನಿವಂಶಾಭ್ಯುದಯ” ಎಂಬ ಗ್ರಂಥವನ್ನು ರಚಿಸಿ ಅಂದಿನ ಸಂಸ್ಕೃತಿಯ ಎಳೆಬಳೆಗಳನ್ನು ಹೊರಚೆಲ್ಲಿದ್ದಾರೆ. ದೊಡ್ಡ ಕೃಷ್ಣರಾಜ ಒಡೆಯರು ಬಾಲವೃದ್ಧ ಎಂಬ ಕವಿಗೆ ಪ್ರೋತ್ಸಾಹಕೊಟ್ಟು ಅವರಿಂದ ‘ರತ್ನ ಶಾಸ್ತ್ರ’ವನ್ನು ಬರೆಸಿದ್ದಾರೆ ಇದರಲ್ಲಿ ಹೆಚ್ಚಿನದಾಗಿ ಅಂದಿನ ಗಣಿತ ವಿಷಯದ ಬಗ್ಗೆ ಗಮನ ಹರಿಸಿರುವುದು ಕಂಡುಬರುತ್ತದೆ. ಕೃಷ್ಣರಾಜ ಒಡೆಯರ್ ರವರ ಮಹಿಷಿಯವರಾದ ಚಲುವಾಂಬೆಯು “ವರನಂದೀ ಕಲ್ಯಾಣ” “ವೆಂಕಟಾಚಲ ಮಹಾತ್ಮ್ಯ” “ಲಾಲಿಯ ಪದ” “ಆಲಮೇಲು ಮಂಗಮ್ಮನ ಪದ” ತಲಕಾವೇರಿ ಮಹಾತ್ಮೆ” ಎಂಬ ಗ್ರಂಥಗಳನ್ನು ಬರೆದಿದ್ದಾಳೆ. ಮೈಸೂರು ಸಂಸ್ಥಾನದಲ್ಲಿ ಪ್ರಮುಖ ಕ್ಷಿಪ್ರಕ್ರಾಂತಿಯಿಂದಾಗಿ ಪ್ರಸಿದ್ದವಾಗಿರುವ ದಳವಾಯಿಗಳಾಗಿದ್ದ ಕಳಲೆಯ ನಂಜರಾಜರು ಕನ್ನಡ ಮತ್ತು ಸಂಸ್ಕೃತ ಭಾಷೆಗಳೆರಡರಲ್ಲಿಯೂ ಪಾಂಡಿತ್ಯ ಪಡೆದವರಾಗಿದ್ದು ಅವರು “ಕುಕುದ್ಗಿರಿ ಮಹಾತ್ಮಾ” ಕಾಶೀ ಮಹಿಮೆ” “ಗಳಗಪುರಿ ಮಹಿಮೆ” “ಶಿವಭಕ್ತ ವಿಲಾಸ ದರ್ಪಣ” ಮಾರ್ಖಂಡೇಯ ಪುರಾಣ” ಗ್ರಂಥಗಳನ್ನು ಕನ್ನಡದಲ್ಲಿಯೂ ಹಾಗೂ “ಗೀತ ಗಂಗಾಧರ” ಮತ್ತು “ಶಿವಪದ ರೇಣುಕಾ ಸಹಸ್ರಂ” ಎಂಬ ಸಂಸ್ಕೃತ ಗ್ರಂಥಗಳನ್ನು ರಚಿಸಿ ಅಂದಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. ಬೆಟ್ಟದ ಚಾಮರಾಜ ಒಡೆಯರ ಕಾಲದಲ್ಲಿ ಉಪಾಧ್ಯಾಯರಾಗಿದ್ದ ಸಿಂಗರಾಚಾರ‍್ಯರು “ಶ್ರೀರಂಗ ಮಹಾತ್ಮೆ” ಎಂಬ ಗ್ರಂಥವನ್ನು ರಚಿಸಿರುವುದು ಕಂಡುಬರುತ್ತದೆ.

ಕರ್ನಾಟಕ ಭೋಜ ಎಂಬ ಹೆಸರಿನಿಂದ ಪ್ರಖ್ಯಾತರಾದ ಮುಮ್ಮಡಿ ಕೃಷ್ಣರಾಜ ಒಡೆಯರು ಮಹಾಕವಿಗಳೂ ಹಾಗೂ ಕವಿಗಳ ಪೋಷಕರೂ ಅಗಿದ್ದರೆನ್ನಬಹುದು. ಇದಕ್ಕೆ ನಿದರ್ಶನವೆಂಬಂತೆ ಆಧ್ಯಾತ್ಮ ರಾಮಾಯಣ, ಉಷಾ ಪರಿಣಯ್ಯ ಶಾಕುಂತಲ ಟೀಕೆ, ಸಿರಿ ನಂಜುಂಡ ಶತಕ, ಶಂಕರ ಸಂಹಿತೆ, ಹರಿವಂಶ ಹಾಲಾಸ್ಯ ಮಹಾತ್ಮೆ ಗ್ರಂಥಗಳನ್ನು ಬರೆದಿದ್ದಾರೆ. ಇದರ ಫಲವಾಗಿ ಇವರು ಸಂಸ್ಥಾನದಲ್ಲಿ “ಉಭಯ ಕವಿತಾ ವಿಚಕ್ಷಣ” ಎಂಬ ಬಿರುದನ್ನು ಪಡೆದಿದ್ದರೆನ್ನಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ್ರವರ ಅಳಿಯರಾಗಿದ್ದ ಕವಿ ಲಿಂಗರಾಜರು ಹಲವು ಭಾಷಾ ಪಂಡಿತರಾಗಿದ್ದರೆಂದು ಕಂಡು ಬರುತ್ತದೆ. ಇವರು ಇಂದ್ರ ಕೀಲ, ನರಪತಿ ಬರಿತೆ, ಲಂಕಾದಹನ, ವೀರಭದ್ರ ಶತಕ, ಶಿವಭಕ್ತ, ರತ್ನಾಕರ, ಗಿರಿಜಾ ಕಲ್ಯಾಣ, ಗಯ ಚರಿತ್ರೆ ಮುಂತಾದ ಸುಮಾರು ೪೭ ಅಮೂಲ್ಯ ಗ್ರಂಥಗಳ ಕರ್ತೃ ಆಗಿದ್ದರೆಂದು ತಿಳಿಯಬಹುದು. ಇವರು ಕಲೆ, ಸಂಗೀತ ಸಾಹಿತ್ಯ, ವೇದಾಂತ ಮುಂತಾದ ಕ್ಷೇತ್ರಗಳಲ್ಲಿಯೂ ಪಂಡಿತರಾಗಿದ್ದುದರ ಫಲವಾಗಿ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗ್ರಂಥಗಳನ್ನು ರಚಿಸಿ ಅಂದಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಈ ರಾಜರ ಆಸ್ಥಾನದಲ್ಲಿಯೇ ದೇವಲಾಪುರದ ನಂಜುಂಡ ಎಂಬ ಮತ್ತೊಬ್ಬ ಕವಿ ಇದ್ದರೆನ್ನಬಹುದು ಇವರು ಅಪರಾಧಿ ಸ್ತೋತ್ರ, ಪಟ್ಟಾಭಿಷೇಕ ವರ್ಣನೆ, ಭಕ್ತಸಾರ, ಭೋಗಾವಳಿ, ವೃತ್ತರತ್ನಾವಳಿ, ಟೀಕೆ, ಶಂಕರಾಷ್ಟಕ ಸೌಗಂಧಿಕಾದಂತಹ ಪ್ರಮುಖವಾದ ಗ್ರಂಥಗಳನ್ನು ಬರೆದಿದ್ದಾರೆ. ಅಂದಿನ ಹಾಸ್ಯರಸ ಪ್ರವಿಣರಾಗಿದ್ದ ಪುರೋಹಿತ ಮಾದಪ್ಪ ಶಾಸ್ತ್ರೀಯು ಮುಮ್ಮಡಿ ಕೃಷ್ಣರ ಆಸ್ಥಾನದಲ್ಲಿದ್ದರಂಬುವುದು ಗಮನ ಸೆಳೆಯುವ ವಿಷಯವೇ. ಇವನ ಮಗನೇ ಮೇಲೆ ತಿಳಿಸಿದ ಅಭಿನವ ಕಾಳಿದಾಸರೆಂದು ಬಿರುದು ಪಡೆದಿದ್ದ. ಬಸಪ್ಪ ಶಾಸ್ತ್ರಿ.

ಒಟ್ಟಾರೆ ಮೈಸೂರು ಒಡೆಯರ ಆಳ್ವಿಕೆಯ ಕಾಲದಲ್ಲಿ ಕನ್ನಡ ಹಾಗೂ ಸಂಸ್ಕೃತಿ ಭಾಷೆಯಲ್ಲಿ ಅಮೂಲ್ಯ ಕೃತಿಗಳು ರಚಿತವಾಗಿದ್ದವು. ರಚಿತವಾಗಿ ಅಂದು ಕನ್ನಡ ನಾಡಿನ ಸಂಸ್ಕೃತಿಯು ಭರತ ಖಂಡದಲ್ಲಿಯೇ ವಿಶೇಷತೆಯನ್ನು ಪಡೆದುಕೊಳ್ಳಲು ಸಹಕಾರಿಯಾದವೆನ್ನಬಹುದು ಇದರಿಂದಾಗಿ ಕರ್ನಾಟಕ ಸಂಸ್ಕೃತಿಯು ಸರ್ವತೋಮುಖವಾಗಿ ಪ್ರಗತಿ ಹೊಂದಿತ್ತೆಂದು ಹೇಳಬಹುದು.

ಜನಪದ ಸಾಹಿತ್ಯವು ಒಡೆಯರ ಸಂಸ್ಕೃತಿ ಚರಿತ್ರೆಯ ಅಧ್ಯಯನಕ್ಕೆ ಹೆಚ್ಚಿನ ಸಹಕಾರಿಯಾಗಿವೆ. ಮಲೆಮಹದೇಶ್ವರನ ಮೇಲಿನ ಕಾವ್ಯ, ಮಂಟೇಸ್ವಾಮಿಯ ಮೇಲಿನ ಕಾವ್ಯಗಳು ಇದಕ್ಕೆ ಹೆಚ್ಚಿನ ಸಾಕ್ಷಿಯಾಗಿವೆ. ಈ ಕಾವ್ಯಗಳು ಅಂದಿನ ಗ್ರಾಮೀಣ ಜನರ ಸಂಸ್ಕೃತಿಯನ್ನು ಹೊರ ಚೆಲ್ಲುತ್ತವೆ.

ಈ ಜನಪದ ಮಹಾಕಾವ್ಯಗಳೇ ಅಂದಿನ ಸಾಮಾನ್ಯ ಆಹಾರಪದ್ಧತಿ, ವಸತಿ, ಬಟ್ಟೆ, ಹಬ್ಬ, ಜಾತ್ರೆ ರಥೋತ್ಸವ, ಮದುವೆ, ಜನನ, ಮರಣ ಮುಂತಾದ ಸಂಸ್ಕೃತಿಯ ಅಧ್ಯಯನಕ್ಕೆ ಅರ್ಥವಾಗಿವೆ. ಸಂಸ್ಕೃತಿ ಅಧ್ಯಯನಕ್ಕೆ ಜನಪದ ಸಾಹಿತ್ಯವೇ ಮೂಲಬೇರು ಎಂದು ಹೇಳಬಹುದು.

***