ಸಂಸ್ಕೃತಿ ಎಂಬುದು ಮಾನವ ಸಮಾಜದಲ್ಲಿ ಒಂದು ಸೂಕ್ಷ್ಮವಾದ ವಿಚಾರವಾಗಿದೆ. ಏಕೆಂದರೆ ಸಾಂಸ್ಕೃತಿಕವಾಗಿ ಸಮಾಜದಲ್ಲಿ ಎಲ್ಲರಿಗೂ ಸಮಾನಾವಕಾಶವಿರಬೇಕೆಂಬುದು ಸಾಮಾಜಿಕ ನ್ಯಾಯದ ದೃಷ್ಟಿಯಲ್ಲಿ ಅಪೇಕ್ಷಣೀಯವಾದುದು. ಆದರೆ ಭಾರತದಂತಹ ಜಾತಿ ಹಾಗೂ ವರ್ಣ ವ್ಯವಸ್ಥೆಯ ಸಂಸ್ಕೃತಿಗೆ ಇದು ಮರೀಚಿಕೆಯಾಗಿಯೆ ಇರುತ್ತದೆ. ಚರಿತ್ರೆಯುದ್ದಕ್ಕೂ ನಾವು ನಮ್ಮ ಸಾಂಸ್ಕೃತಿಕ ವಿಷಯಗಳನ್ನು ಗಮನಿಸಿದಾಗ ಒಂದು ವರ್ಗ ಸುಖಭೋಗದಲ್ಲಿ ಜೀವನ ನಡೆಸಿದರೆ, ಮತ್ತೊಂದು ವರ್ಗ ಜೀವನಕ್ಕೆ ಬೇಕಾಗುವ ಪ್ರಾಥಮಿಕ ಸೌಕರ್ಯಗಳಿಂದಲೂ ವಂಚಿತರಾಗಿರುವುದು ಕಣ್ಮುಂದೆ ಇರುವ ಸತ್ಯದ ವಸ್ತುವೆ. ಈ ಜನರಲ್ಲಿ ಅಸಮಾನತೆ ಏಕಿದೆ ಅದರ ಕಾರಣಗಳೇನು ಅದನ್ನು ಕಡಿಮೆ ಮಾಡಬಹುದೊ ಅಥವಾ ಸಂಪೂರ್ಣ ನಿರ್ಮೂಲಗೊಳಿಸಬಹುದೊ ಅಥವಾ ಸಮಾಜದಲ್ಲಿ ಇದು ಅನಿವಾರ್ಯ ಅಥವಾ ಅವಶ್ಯಕವೆಂದು ಒಪ್ಪಿಕೊಳ್ಳಬೇಕೋ ಎಂಬುವ ಪ್ರಶ್ನೆಗಳು ಪ್ರತಿಯೊಬ್ಬ ಪ್ರಜ್ಞಾವಂತರನ್ನು ಕಾಡದೆ ಇರದು. ಇದರ ಬಗ್ಗೆ ಚರಿತ್ರೆ ತಿರುಗಿ ನೋಡಿದರೆ ಹಿಂದಿನಿಂದಲೂ ದಾರ್ಶನಿಕರು ಹಾಗೂ ಸಾಮಾಜಿಕ ಚಿಂತಕರು ಚಿಂತನೆ ಮಾಡಿದ್ದಾರೆ. ಆದರೆ ಇವುಗಳ ಫಲ ಮಾತ್ರ ಶೂನ್ಯವೆಂದರೆ ತಪ್ಪಾಗದು. ಈ ಕೃತಿಯಲ್ಲಿ ನಾನು ವಿಜಯನಗರ, ಇಕ್ಕೇರಿ ಹಾಗೂ ಮೈಸೂರು ಅರಸರುಗಳ ಆಳ್ವಿಕೆಯ ಕಾಲದಲ್ಲಿದ್ದಂತಹ ಸಾಂಸ್ಕೃತಿಕ ಚರಿತ್ರೆಯನ್ನು ಹೇಳಲು ಬಯಸಿದ್ದೇನೆ. ಈ ವಿಷಯ ಕುರಿತು ದಾಖಲೆಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ತೊಡಗಿದ್ದಾಗ ಅಂದಿನ ದಾಖಲೆಗೂ ಇಂದಿನ ವಾಸ್ತವ ಸ್ಥಿತಿಗೂ ಯಾವ ವ್ಯತ್ಯಾಸವೂ ಕಂಡುಬರುವುದಿಲ್ಲವೆನ್ನಿಸಿತು. ಈ ಹಂತದಲ್ಲಿ ಮೇಲಿನ ಪ್ರಶ್ನೆಗಳು ಸಹಜವಾಗಿಯೇ ಮೂಡಿ ಉತ್ತರ ದೊರಕದೆ ಪ್ರಶ್ನೆಯಾಗಿಯೇ ಉಳಿಯಿತು.

ಮಾನವ ಸಮಾಜ ಸಂಕೀರ್ಣಗೊಂಡಂತೆ ಮುಂದೆ ಭಿನ್ನತೆ ಹಾಗೂ ವೈವಿಧ್ಯತೆ ಹೊಂದುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇಂತಹ ಸಮಾಜದಲ್ಲಿ ದೊರಕುವ ಹಾಗೂ ಇರುವಂತಹ ಸಾಧನ ಸಂಪತ್ತುಗಳು ಸಮಾನವಾಗಿ ಹಂಚಿಕೆಯಾಗುವುದು ವಿರಳ. ಏಕೆಂದರೆ ಈ ಹಂಚಿಕೆಯು ವ್ಯಕ್ತಿಯ ಶ್ರಮ ಮತ್ತು ದಕ್ಷತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ಶ್ರಮ ಮತ್ತು ದಕ್ಷತೆಯ ಎಲ್ಲರಲ್ಲೂ ಏಕರೀತಿಯಿರದೆ ಭಿನ್ನಭಿನ್ನವಾಗಿರುತ್ತದೆ. ಇದರಿಂದಲೇ ನಮ್ಮ ಸಂಸ್ಕೃತಿಯ ಜನಜೀವನದ ಸ್ಥಿತಿಗತಿಯಲ್ಲಿ ಅನೇಕ ವ್ಯತ್ಯಾಸಗಳನ್ನು ಕಾಣಬಹುದು. ಈ ರೀತಿಯ ವ್ಯತ್ಯಾಸಗಳನ್ನು ಅವಳಿ ಮಕ್ಕಳಲ್ಲಿಯೂ, ಅಣ್ಣತಮ್ಮಂದಿರಲ್ಲಿಯೂ ಕಾಣಬಹುದು. ಅಂದರೆ ಯಾರಿಬ್ಬರೂ ಸಹ ಒಂದೆ ತರಹದವರಾಗಿರುವುದಿಲ್ಲ. ಇದನ್ನೇ ನಾವು ಸಾಂಸ್ಕೃತಿಕ ಅಸಮಾನತೆಯ ಮೂಲವೆಂದು ಕರೆಯಬಹುದು. ಇದರಿಂದಾಗಿಯೇ ಸಮಾಜದಲ್ಲಿ ಮೇಲುಕೀಳು, ಉಚ್ಚ ನೀಚವೆಂಬ ಭೇದಗಳು ಸೃಷ್ಟಿಯಾಗುವುದು, ಈ ಭೇದದಿಂದಾಗಿ ಸಮಾಜವು ವಿವಿಧ ರೂಪಗಳನ್ನು ಹೊಂದುವುದು ಎಂದು ನಮ್ಮ ಸಂಸ್ಕೃತಿ ಚರಿತ್ರೆಯನ್ನು ಅಧ್ಯಯನ ಮಾಡಲು ತೊಡಗಿದ್ದಾಗ ನಾನು ಕಂಡುಕೊಂಡ ಪ್ರಮುಖ ಅಂಶ.

ಈ ಕೃತಿಯು – ಮೊದಲೇ ತಿಳಿಸಿರುವ ಹಾಗೆ – ಕರ್ನಾಟಕದ ಪ್ರಸಿದ್ಧ ಮೂರು ರಾಜವಂಶಗಳ ಕಾಲದ ಸಂಸ್ಕೃತಿ ಚರಿತ್ರೆಯನ್ನು ಚರ್ಚಿಸುತ್ತದೆ. ಮೊದಲ ಭಾಗದಲ್ಲಿ ವಿಜಯನಗರದ ಅರಸರ ಕಾಲದ ಸಾಂಸ್ಕೃತಿಕ ವಿಷಯದಲ್ಲಿ ದೃಷ್ಟಿಹರಿಸಿ, ವಿಶ್ವವಿಖ್ಯಾತವಾದ ಹಾಗೂ ಶ್ರೀಮಂತ ಸಾಮ್ರಾಜ್ಯವೆಂದು ನಮ್ಮ ಇತಿಹಾಸಕಾರರು ಹೇಳಿರುವುದರ ಹಾಗೂ ಅದನ್ನೇ ನಾವು ಓದಿಕೊಂಡು ಬಂದಿರುವುದರ ಅಧ್ಯಯನದ ಪರಿಸ್ಥಿತಿ ಏನು ಎಂದು ವಿಶ್ಲೇಷಿಸಬಯಸುತ್ತದೆ. ಅಂದಿನ ಕಾಲದ ಅನಿಷ್ಟ ಪದ್ಧತಿಗಳಾಗಿದ್ದಂತಹ ದೇವದಾಸಿ, ಬಸವಿ ಬಿಡುವ ಪದ್ಧತಿ, ಗೆಜ್ಜೆಪೂಜೆ, ಸತಿ ಸಹಗಮನ ಹಾಗೂ ವಿಧವೆಯರ ಸ್ಥಿತಿಗತಿ, ಅನಕ್ಷರತೆ, ದಾರಿದ್ರ‍್ಯ, ಆರೋಗ್ಯದ ಕೊರತೆ, ಬರ, ಅಸ್ಪೃಶ್ಯತೆ ಮುಂತಾದವುಗಳನ್ನು ಅಂದಿನ ಕಾಲದ ಚರಿತ್ರೆ ಹಾಗೂ ಸಮಾಜದ ಜೊತೆಗೆ ತುಲನೆ ಮಾಡಿ ವಿಜಯನಗರ ಕಾಲದ ಸಂಸ್ಕೃತಿಯ ಪರಿಸ್ಥಿತಿಯನ್ನು ಮನಗಾಣನಲು ಪ್ರಯತ್ನಿಸಲಾಗಿದೆ. ಎರಡು ಹಾಗೂ ಮೂರನೆಯ ಅಧ್ಯಯನದಲ್ಲಿ ಇಕ್ಕೇರಿ ನಾಯಕರು ಹಾಗೂ ಮೈಸೂರಿನ ಒಡೆಯರ ಕಾಲದ ಸಂಸ್ಕೃತಿ ಚರಿತ್ರೆಯನ್ನು ಚರ್ಚಿಸಲಾಗಿದೆ. ಇವರ ಕಾಲವನ್ನೂ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ವಿಜಯನಗರದ ಕಾಲಕ್ಕಿಂತ ಭಿನ್ನವಾದಂತೆ ಕಂಡುಬರುವುದಿಲ್ಲವೆನ್ನಬಹುದು. ಏಕೆಂದರೆ ಸಾಮಂತ ಸಂಸ್ಥಾನಗಳಾಗಿದ್ದಂತಹ ಈ ಎರಡು ಸಂಸ್ಥಾನಗಳು ಪ್ರಬಲ ವಿಜಯನಗರದ ಸಂಸ್ಕೃತಿಯನ್ನು ತಮ್ಮ ತಮ್ಮಲ್ಲಿ ಅಳವಡಿಸಿಕೊಂಡು, ರಕ್ಷಿಸಿಕೊಂಡು ಮುಂದುವರಿಸಿಕೊಂಡು ಬರಲು ಬಯಸಿತ್ತೇ ವಿನಃ ಅದರ ವಿರುದ್ಧವಾಗಲಿ ಅಥವಾ ಅದನ್ನು ಅನುಸರಿಸದೆ ಇರುವುದಕ್ಕಿಲ್ಲಿ ಕಷ್ಟ ಸಾಧ್ಯವೇ ಆಗಿತ್ತು. ಏಕೆಂದರೆ ಇಂದಿನ ಆಧುನಿಕ ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿಯೇ ಅನ್ಯಾಯ ಅಸಮಾನತೆ ತುಂಬಿ ತುಳುಕುತ್ತಿದ್ದು, ಕೆಲವೇ ಕೆಲವು ಜನ ಸಂಪತ್ತು ಸಮೃದ್ಧಿಯಲ್ಲಿ ಹೊರಳಾಡುತ್ತಿರುವಾಗ ಇದಕ್ಕೆ ವಿರುದ್ಧವಾಗಿ ಬಹುಸಂಖ್ಯಾತ ಜನಕೋಟಿ ತಿನ್ನಲು ಒಪ್ಪೊತ್ತಿನ ಕೂಳಿಗೂ ದಿಕ್ಕಿಲ್ಲದೆ ನರಳುತ್ತಿರುವುದನ್ನು ಕಾಣುತ್ತಿರುವಾಗ ಇನ್ನೂ ನಾವು ಚರಿತ್ರೆಯನ್ನು ತಿರುವಿಹಾಕಲು ಸಾಧ್ಯವೆ? ವರ್ತಮಾನ ಕೇವಲ ವರ್ತಮಾನವಾಗಿ ಇರುವುದಿಲ್ಲ. ಅದು ತನ್ನ ಮಡಿಲಿನಲ್ಲಿ ಭೂತದ ಬುತ್ತಿಯನ್ನು ಹೊತ್ತು ತಂದಿರುತ್ತದೆ. ಹಾಗೆಯೇ ಭವಿಷ್ಯಕ್ಕೂ ಕೊಂಡೊಯ್ಯುತ್ತದೆ ಎಂದು ಹೇಳಿದರೆ ನಮ್ಮ ಸಂಸ್ಕೃತಿಗೆ ಹೆಚ್ಚಿನ ಅರ್ಥ ಬರುವುದೇನೋ. ಏಕೆಂದರೆ ನಮ್ಮ ಸಂಸ್ಕೃತಿ ಎಂದು ಹೇಳಿಕೊಳ್ಳುವುದೆಲ್ಲವೂ ನಿನ್ನೆಯದು ಹಾಗೂ ಇಂದಿನದಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸವಿರುವುದು ನಮಗೆ ಆಧಾರಗಳಿಂದ ತಿಳಿದುಬರುತ್ತದೆ.

ಇಂದಿನ ಆಧುನಿಕ ಕಾಲದ ಸನ್ನಿವೇಶದಲ್ಲಿ ಬ್ರಿಟಿಷ್‌ರಿಂದ ನಮ್ಮ ರಾಷ್ಟ್ರವನ್ನು ಮುಕ್ತಗೊಳಿಸಿವೆಂದುಕೊಂಡು ಹಾಗೂ ಇಂದು ಭಾರತವು ಪ್ರಜಾತಂತ್ರ ದಾರಿಯಲ್ಲಿ ದಾಪುಗಾಲು ಹಾಕುತ್ತಾ ಸಾಧಿಸಿದ ಹಾಗೂ ಸಾಧಿಸುತ್ತಿರುವ ಅಭಿವೃದ್ಧಿಯ ಕುರಿತು, “ಮಹಾನ್ ಸಾಧನೆ” ಕುರಿತು ನಮ್ಮ ರಾಷ್ಟ್ರ ನಾಯಕರೆನ್ನಿಸಿಕೊಂಡವರು ಆಗಾಗ ನೆನಪಿಸುತ್ತಲೇ ಇದ್ದಾರೆ. ವಿಶ್ವದಲ್ಲಿಯೇ ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಘಂಟಾಘೋಷವಾಗಿ ಹೇಳುತ್ತ ಅಭಿಮಾನದಿಂದ ಬೀಗುತ್ತಿದ್ದಾರೆ. ಅಷ್ಟೇ ಅಲ್ಲದೆ, “ಇಂದು ಭಾರತ ವಿಶ್ವದ ಪ್ರಮುಖ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಜಾಗತಿಕ ವಿಜ್ಞಾನ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಮುಂಚೂಣಿಯ ಸ್ಥಾನ ಅಲಂಕರಿಸಿದೆ ಹಾಗೂ ಆಧುನಿಕ ಕೈಗಾರಿಕೋದ್ಯಮದಲ್ಲಿಯೂ ಅಷ್ಟೇ ಮುನ್ನಡೆಯನ್ನು ಸಾಧಿಸಿದೆ.” ಎಂದು. ಹಾಗಿದ್ದರೆ ನವು ಚರಿತ್ರೆಯಲ್ಲಿ ಅಧ್ಯಯನ ಮಾಡಿರುವ ಪ್ರಗತಿಯ ನೋಟ ಸುಳ್ಳಾದಂತಾಗುವುದಿಲ್ಲವೆ. ಇದರ ಜೊತೆಗೆ ಈ ಸರ್ವಾಂಗೀಣ ಬೆಳವಣಿಗೆಯು ಭಾರತದ ಕೋಟ್ಯಾಂತರ ಪ್ರಜೆಗಳ ಬದುಕಿನ ಮಟ್ಟ ಎತ್ತರಿಸುವಲ್ಲಿ ವಿಫಲವಾದದ್ದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಬಡತನದ ರೇಖೆಯ ಕೆಳಗೆ ಅರೆ ಮಾನವ ಜೀವನ ನಡೆಸುತ್ತಿರುವ ಲಕ್ಷ ಲಕ್ಷ ಪ್ರಜೆಗಳ ದಾರುಣದ ಅಸ್ತಿತ್ವಕ್ಕೆ ಕಾರಣರಾರು? ತನ್ನ ಕೋಟ್ಯಾಂತರ ಪ್ರಜೆಗಳನ್ನು ಇಂಥಾ ಔದಾಸೀನ್ಯ, ನಿರ್ಲಕ್ಷತೆಯಿಂದ ನೋಡಿಕೊಳ್ಳುತ್ತಿರುವ ದೇಶವನ್ನು ನಾವು ಒಂದು ಸುಸಂಸ್ಕೃತ ನಾಗರಿಕ ದೇಶವೆಂದು ಕರೆಯಬಹುದೆ? ರಾಷ್ಟ್ರದ ವ್ಯವಹಾರವನ್ನು ಸಂಘಟಿಸುವ, ದೇಶದ ಆಡಳಿತವನ್ನು ನಡೆಸುವ ಅನೇಕ ಪ್ರಕಾರಗಳಲ್ಲಿ ಪ್ರಜಾಪ್ರಭುತ್ವವೇ ಅತ್ಯಂತ ಉತ್ತಮವಾದ, ಉದಾತ್ತವಾದ ವಿಧಾನವೆಂದು ಹೇಳಲಾಗುತ್ತದೆ. ಇದಕ್ಕಾಗಿ ನಾವು ನಮ್ಮ ಅಖಂಡ ಭಾರತಕ್ಕೆ ಈ ವಿಧಾನವನ್ನೇ ಅಳವಡಿಸಿಕೊಂಡಿದ್ದೇವೆ. ಆದರೆ ಈ ಕುರಿತು ಸಾದರಪಡಿಸಲಾಗುವ ವಾದ ಹೀಗಿರುತ್ತದೆ. ಎಲ್ಲಾ ರೀತಿಯ ಅವಕಾಶಗಳಿಂದ ವಂಚಿತರಾದ, ಸೇವಾಸೌಲಭ್ಯಗಳಿಂದ ದೂರಾಗಿ ಮೂಲೆಗೆ ತಳ್ಳಲ್ಪಟ್ಟ ಜನಸಮುದಾಯ ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ವಾತಂತ್ರ‍್ಯದ ಮೂಲಕ ಮಾತ್ರ ಮಾನವೀಯ ಘನತೆಯೊಂದಿಗೆ ಬದುಕಿ ಬಾಳುವ ಹಕ್ಕನ್ನು ಪಡೆದು ಕೊಳ್ಳಲು ಸಾಧ್ಯವಿದೆ. ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ವಾತಂತ್ರ‍್ಯದ ಮೂಲಕ ಮಾತ್ರ ಪ್ರಜಾತಾಂತ್ರಿಕ ಹಕ್ಕುಗಳೊಂದಿಗೆ ಲಭಿಸುವ ಎಲ್ಲಾ ಸೇವಾ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ. ಆದರೆ ಸ್ವಾತಂತ್ರ‍್ಯ ನಂತರದ ಅರ್ಧ ಶತಮಾನಕ್ಕಿಂತಲೂ ಹೆಚ್ಚಿನ ದೀರ್ಘ ಪಯಣದ ನಂತರವೂ ನಮ್ಮ ಪ್ರಜಾಪ್ರಭುತ್ವ, ಭಾರತೀಯ ನಾಗರಿಕರ ಅರ್ಧದಷ್ಟು ಜನರಿಗೆ ಘನತೆ ಗೌರವದ ಬದುಕಿನ ಸಾಧ್ಯತೆಗಳನ್ನು ಕಲ್ಪಿಸಿಕೊಡಲು ವಿಫಲವಾಗಿರುವುದೇಕೆ? ಇದನ್ನೇ ಬೇರೆ ಮಾತುಗಳಲ್ಲಿ ಕೇಳುವುದಾದರೆ, ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ತಮ್ಮ ಪ್ರಜಾತಾಂತ್ರಿಕ ಹಕ್ಕುಗಳನ್ನು ಮತ್ತು ರಾಜಕೀಯ ಸ್ವಾತಂತ್ರ‍್ಯವನ್ನು ಬಳಸಿ ತಮ್ಮ ಬದುಕಿನ ಸ್ಥಿತಿಗತಿಗಳನ್ನು ಸುಧಾರಿಸಿಕೊಳ್ಳುವಲ್ಲಿ ಸೋತದ್ದೇಕೆ? ಭಾರತದ ಕೆಳವರ್ಗದ ಅರ್ಧದಷ್ಟು ಜನರು ಮಾನವೀಯ ಘನತೆಯಿಂದ ಬದುಕಲೂ ಸಾಧ್ಯವಾಗದೇ ಇರುವ ಸ್ಥಿತಿಯಲ್ಲಿ ಅವರು ಮೂಲಭೂತ ಹಕ್ಕುಗಳನ್ನು ಪ್ರಜಾಪ್ರಭುತ್ವದ ಅವಕಾಶಗಳನ್ನು ಅನುಭೋಗಿಸಲು ಸಾಧ್ಯವೇ? ಕಳೆದ ಐದು ದಶಕಗಳಿಂದಲೂ ಹೆಚ್ಚು ಕಾಲದಿಂದ ಜೀವಂತಿಕೆಯಿಂದ ಪುಟಿಯುತ್ತಿರುವ ಪ್ರಜಾಪ್ರಭುತ್ವದ ಹೊರತಾಗಿಯೂ ಬಹುಸಂಖ್ಯೆಯ ಜನರು ಕಡುಬಡತನದಲ್ಲಿ ತೊಳಲಾಡುತ್ತಿರುವುದನ್ನು ಹಾಗೂ ಅರ್ಧದಷ್ಟು ಜನರು ಅನೇಕ ಅವಕಾಶಗಳಿಂದ ವಂಚಿತರಾಗುತ್ತಿರುವುದನ್ನು ನಾವು ಸಮರ್ಥಿಸಿಕೊಳ್ಳಲು ಸಾಧ್ಯವೆ? ಜೀವಂತ ಪ್ರಜಾಪ್ರಭುತ್ವದಲ್ಲಿಯೇ ಈ ರೀತಿಯ ಕಡುಬಡತನ, ದಾರಿದ್ರ‍್ಯ, ಸಾಮೂಹಿಕ ದುಃಸ್ಥಿತಿ ಇವೆಲ್ಲವೂ ಕಲ್ಪನೆಗೂ ನಿಲುಕದ ಅಸಂಗತಗಳಾಗಿರುವಾಗ ಇನ್ನು ನಮ್ಮ ರಾಜಪ್ರಭುತ್ವದ ಕಲ್ಪನೆಯನ್ನು ಕೆಲವು ಕ್ಷಣ ಕಣ್‌ಮುಚ್ಚಿ ಕುಳಿತರೆ ಕತ್ತಲಲ್ಲೇ ಬೆಳಕಾಗಿ ಸುಳಿದಾಡಿ ಬಿಡುತ್ತದೆ. ಮಧ್ಯಕಾಲೀನ ಕರ್ನಾಟಕದ ಸಂಸ್ಕೃತಿಯನ್ನು ಕುರಿತು ಬರೆಯುವಾಗ ಮೇಲಿನ ಅಂಶಗಳು ಹೆಚ್ಚಾಗಿ ನನಗೆ ಕಾಡಿವೆ. ಮುಂದೆಯೂ ಕಾಡುತ್ತಿರುತ್ತವೆ.

ಇಂದಿಗೂ ಸಹ ಭಾರತದ ಸಂಸ್ಕೃತಿಯಲ್ಲಿ ಬಡವ ಶ್ರೀಮಂತರ ನಡುವಿನ ಕಂದರ ದಿನೇ ದಿನೇ ಹೆಚ್ಚು ಅಗಲವಾಗುತ್ತಿದ್ದು ಇನ್ನೇನು ಮುಚ್ಚಲಾಗದ ಸ್ಥಿತಿಗೆ ಬಂದು ತಲುಪಿದೆ. ಕೆಳಭಾಗದ ಶೇ. ೪೦ ರಷ್ಟು ಭಾರತೀಯ ದಲಿತರ ಸ್ಥಿತಿಗತಿ ಮತ್ತು ಮೇಲಂತಸ್ತಿನ ೧೦ ರಿಂದ ೧೫ ರಷ್ಟು ಭಾರತೀಯರ ಬದುಕಿನ ಸ್ಥಾನಮಾನ ಇವೆರಡರ ನಡುವಿನ ಹೋಲಿಕೆ ಕಲ್ಪನೆಗೂ ಕಷ್ಟಸಾಧ್ಯವಾಗಿದೆ. ಮೇಲಿನವರ ಬದುಕಿನ ವೈಭವದ ಸಮ್ಮುಖದಲ್ಲಿ ಕೆಳಹಂತದ ಕೋಟ್ಯಾಂತರ ಜನರ ಬದುಕಿನ ಬವಣೆ ನೋಡಿದರೆ ಇವರೂ ಭಾರತೀಯರೇ? ಎಂದು ಉದ್ಗಾರ ತೆಗೆಯದೆ ವಿಧಿಯಿಲ್ಲ. ಶತಶತಮಾನಗಳಿಂದ ಭಾರತದ ಶೇ. ೪೦ ರಷ್ಟು ಜನರ ಬದುಕು ಸಿರಿವಂತರ ಸಾಕುಪ್ರಾಣಿಗಳಿಗೆ ಲಭ್ಯವಾಗಿರುವ ಬದುಕಿನ ಮಟ್ಟದೊರಕಿಸಿಕೊಳ್ಳುವುದಕ್ಕಿಂತಲೂ ಕಷ್ಟವಾಗಿದೆ. ಸಿರಿವಂತರು ತಮ್ಮ ಪ್ರೀತಿಯ ಪ್ರಾಣಿಗಳ ಮೇಲೆ ಖರ್ಚು ಮಾಡುವ ಮೊತ್ತ ಕೆಳಹಂತದ ಶೇ. ೪೦ ರಷ್ಟು ಭಾರತೀಯರ ತಲಾ ಖರ್ಚಿಗಿಂತಲೂ ಎಷ್ಟೊ ಪಟ್ಟು ಹೆಚ್ಚಾಗಿರುತ್ತದೆ. ಈ ಶೇ. ೪೦ ರಷ್ಟು ಬಡಭಾರತೀಯರು ಸಿರಿವಂತರ ನಾಯಿಗಳಿಗೆ ಸಿಗುವ ಸೌಭಾಗ್ಯದಿಂದಲೂ ಶತ ಶತಮಾನಗಳಿಂದ ವಂಚಿತರಾಗಿದ್ದಾರೆ. ಈ ವಂಚಿತರ ಕುರಿತು ಅಧ್ಯಯನಗಳು ಇಂದು ಹೆಚ್ಚುಹೆಚ್ಚಾಗಿ ನಡೆಯುತ್ತಿದೆ.

ಅಂದು ನಾವು ಚರಿತ್ರೆಯಲ್ಲಿ ತಿಳಿಯುವುದೆಲ್ಲವೂ ಸಹ ಒಂದು ದೇಶದ ಚರಿತ್ರೆ ಮಾತ್ರವಾಗಿತ್ತು. ಒಂದು ದೇಶದ ಚರಿತ್ರೆಯೆಂದರೆ ಅದು ಕೇವಲ ರಾಜಮಹಾರಾಜರ ವೈಭವದ ವಿಲಾಸಮಯ ಜೀವನಚಿತ್ರವೆಂದಾಗಲೀ, ಅವರು ನಡೆಸಿದ ಯುದ್ಧಗಳ ವರ್ಣನೆಯಾಗಲೀ ಅಲ್ಲ. ಅಂದು ಆ ದೇಶದ ಜೀವನಾಡಿಯಾದ ಜನತೆಯ ಇತಿಹಾಸವಾಗಿರಬೇಕು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿರುತ್ತಾರೆ. ಅಂದರೆ ಈ ಕನ್ನಡ ಭೂಮಿಯಲ್ಲಿ ದಲಿತರು, ಪಂಚಮರು ಹಾಗೂ ಸಾಮಾನ್ಯ ಜನರ ಬದುಕಿನ ರೀತಿ ನೀತಿ, ಜನತೆಯ ನಡೆನುಡಿಗಳು, ಆಚಾರ ಸಂಪ್ರದಾಯಗಳು, ಅನುಸರಿಸಿದ ಧರ್ಮ, ಬೆಳಗಿಸಿದ ಕಲೆ ಹಾಗೂ ಜೀವನ ಸಮಸ್ಯೆಗಳು, ಮನೆಯ ಹಾಗೂ ಕೋಟೆಗಳ ರಚನಾವಿನ್ಯಾಸ ಮುಂತಾದ ಮಾನವನ ಸಹಜ ಚಟುವಟಿಕೆಯ ವಿವರಗಳನ್ನು ಒಳಗೊಂಡಿವೆ. ಅಂತಹ ಚರಿತ್ರೆಯ ರಚನೆಯು ಇಂದಿನ ಜನಾಂಗದ ಪ್ರತಿಯೊಬ್ಬರ ಜ್ಞಾನದ ಅರಿವಿಗೆ ಉತ್ತಮ ವಾದ ರೀತಿಯಲ್ಲಿ ಪ್ರತಿಬಿಂಬಿಸುತ್ತದೆ. ಏಕೆಂದರೆ ಸಂಸ್ಕೃತಿ ಚರಿತ್ರೆಯ ಅರ್ಥ ಹಾಗೂ ವ್ಯಾಪ್ತಿಯು ಕಾಲಕಾಲಕ್ಕೆ ವಿಶಾಲವಾಗುತ್ತದೆ ಎಂಬುದು ಸತ್ಯವಾದ ಮಾತು. ಚರಿತ್ರೆಯು ಪ್ರಾರಂಭವಾದ ಹಂತದಲ್ಲಿ ರಾಜಮಹಾರಾಜರು ಹಾಗೂ ಘಟನೆಗಳೇ ಕಥಾವಸ್ತುಗಳಾಗಿದ್ದು, ಜನಸಾಮಾನ್ಯರ ವಿಷಯ ಸಂಪೂರ್ಣವಾಗಿ ಗೌಣವಾಗಿತ್ತು. ಈ ದೃಷ್ಟಿಯಿಂದ ನಮ್ಮ ವಿಭಾಗವು ಕರ್ನಾಟಕ ಸಂಸ್ಕೃತಿ ಚರಿತ್ರೆ ಎಂಬ ಮೌಲಿಕೆಯಲ್ಲಿ ಕ್ರಿಸ್ತಪೂರ್ವ ದಿನದಿಂದ ಹಂತಹಂತವಾಗಿ ಇಂದಿನವರೆಗೂ ಆರು ಸಂಪುಟಗಳಲ್ಲಿ ಅಧ್ಯಯನ ಕೈಗೊಂಡಿದೆ.

ಈ ಯೋಜನೆಯನ್ನು ವಿಭಾಗವು ಕೈಗೆತ್ತಿಕೊಳ್ಳಲು ನಮ್ಮ ಮಾಜಿ ಕುಲಪತಿಗಳಾದ ಡಾ. ಎಂ. ಎಂ. ಕಲಬುರ್ಗಿಯವರು ಕಾರಣ. ಇಂತಹ ಮಹತ್ವದ ಯೋಜನೆಯನ್ನು ಕೈಗೊಂಡು ಕೆಲಸ ಮಾಡಲು ತೊಡಗಿಸಿದ ಕಲ್ಬುರ್ಗಿಯವರಿಗೂ ಹಾಗೂ ಈ ಯೋಜನೆಯು ಪೂರ್ಣಗೊಳ್ಳಲು ಸಹಕರಿಸಿದ ಮಾಜಿ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡರಿಗೂ ನಾನು ಆಭಾರಿಯಾಗಿರುತ್ತೇನೆ. ಈ ನಾಡಿನ ಸಾಂಸ್ಕೃತಿಕ ಚಿಂತಕರೂ ಹಾಗೂ ನೆಚ್ಚಿನ ಕುಲಪತಿಗಳೂ ಆಗಿರುವ ಪ್ರೊ. ಬಿ.ಎ. ವಿವೇಕ ರೈ ರವರ ಪ್ರೋತ್ಸಾಹ ಹಾಗೂ ಬೆಂಬಲದಿಂದ ಈ ಕೃತಿಯು ಹೊರಬರುತ್ತಿದೆ. ನನ್ನ ಎಲ್ಲ ಸಂಶೋಧನಾ ಕೆಲಸಗಳಿಗೂ ಪ್ರೋತ್ಸಾಹ ನೀಡುತ್ತಿರುವ ಪ್ರೊ.ಕೆ.ವಿ. ನಾರಾಯಣ, ಪ್ರೊ. ಲಕ್ಷ್ಮಣ್ ತೆಲಗಾವಿ, ಪ್ರೊ. ಹಿ.ಚಿ. ಬೋರಲಿಂಗಯ್ಯ, ಪ್ರೊ. ಕರೀಗೌಡ ಬೀಚನಹಳ್ಳಿ ಹಾಗೂ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ರವರಿಗೆ ಕೃತಜ್ಞನಾಗಿರುತ್ತೇನೆ. ಈ ಯೋಜನೆಗೆ ಉತ್ತಮ ಸಲಹೆಸೂಚನೆಗಳನ್ನು ನೀಡಿದಂತಹ ವಿಷಯತಜ್ಞರಾಗಿದ್ದ ಪ್ರೊ. ಓ. ಅನಂತರಾಮಯ್ಯ ನವರಿಗೆ ಅಭಾರಿಯಾಗಿರುತ್ತೇನೆ. ಅಧ್ಯಯನದ ಪ್ರತಿಹಂತದಲ್ಲಿಯೂ ಉತ್ತಮ ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿರುವ ಆತ್ಮೀಯ ಸಹೋದ್ಯೋಗಿ ಮಿತ್ರರಾದಂತಹ ಡಾ. ಟಿ.ಪಿ. ವಿಜಯ್‌, ಡಾ. ಸಿ.ಆರ್. ಗೋವಿಂದರಾಜು, ಡಾ. ಮೋಹನಕೃಷ್ಣ ರೈ ಹಾಗೂ ಡಾ. ವಿರೂಪಾಕ್ಷಿ ಪೂಜಾರಹಳ್ಳಿಯವರಿಗೆ ವಂದನೆಗಳು.

ಹಸ್ತಪ್ರತಿಯ ಕರುಡನ್ನು ತಿದ್ದಲು ನನ್ನೊಂದಿಗೆ ತನ್ನ ಸಮಯವನ್ನೆಲ್ಲ ಕಳೆದ ಪ್ರೀತಿಯ ಧರ್ಮಪತ್ನಿ ಬಿ.ವಿ. ನಾಗವೇಣಿಗೆ ಋಣಿಯಾಗಿರುತ್ತೇನೆ. ನಮ್ಮಿಬ್ಬರ ಈ ಕೆಲಸಕ್ಕೆ ತುಂಟಾಟದ ನಡುವೆಯೂ ಸಹಕರಿಸಿದ ಪುಟಾಣಿ ಮಗಳು ಸ್ಫೂರ್ತಿಯನ್ನು ನೆನೆಯದೆ ಇರಲಾರೆ. ಈ ಕೃತಿಯು ಸುಂದರವಾಗಿ ಹೊರಬರಲು ಸಹಕರಿಸಿದ ಆತ್ಮೀಯ ಗೆಳೆಯರಾದ ಶ್ರೀ ಮಲ್ಲಿನಾಥ್, ಶ್ರೀ ಸುಜ್ಞಾನಮೂರ್ತಿ, ಶ್ರೀ ಕೆ.ಎಲ್. ರಾಜಶೇಖರ್, ಶ್ರೀ ಎಚ್.ಬಿ. ರವೀಂದ್ರ, ಶ್ರೀ ಕೆ.ಕೆ. ಮಕಾಳಿ, ಶ್ರೀ ಶ್ರೀಧರರಾವ್ ಪಿಸ್ಸೆ, ಶ್ರೀ ಗಾದಲಿಂಗಪ್ಪರವರುಗಳಿಗೆ ಹಾಗೂ ಅಚ್ಚುಕಟ್ಟಾಗಿ ಬೆರಳಚ್ಚು ಮಾಡಿಕೊಟ್ಟಂತಹ ಆತ್ಮೀಯ ಗೆಳೆಯ ಶ್ರೀ ವೈ.ಎಂ. ಶರಣಬಸವರವರಿಗೆ ಕೃತಜ್ಞನಾಗಿರುತ್ತೇನೆ. ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಈ ಅಧ್ಯಯನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಬಯಸುತ್ತೇನೆ.

ಡಾ. ಎನ್. ಚಿನ್ನಸ್ವಾಮಿ ಸೋಸಲೆ