ಮೈಸೂರಿನ ಯದುವಂಶದವರಾದ ಒಡೆಯರ್‌ರವರು ತಮ್ಮ ಸಂಸ್ಥಾನದಲ್ಲಿ ಜೈನ, ಶೈವ, ವೀರಶೈವ, ವೈಷ್ಣವ ಮುಂತಾದ ಧರ್ಮಗಳಿಗೂ ಸಮನಾದ ಆಶ್ರಯನೀಡಿ ಸರ್ವಧರ್ಮ ಸಮನ್ವಯವನ್ನು ಕಾಪಾಡಿಕೊಂಡು ಬಂದರೆನ್ನಬಹುದು. ಸಂಸ್ಥಾನದಲ್ಲಿ ಮೊದಲಿಗೆ ವೈದಿಕ ಧರ್ಮ ಬಲವಾದ ಬೇರು ಬಿಟ್ಟಿತ್ತು. ನಂತರ ಜೈನ, ಬೌದ್ಧ, ಶೈವ, ವೈಷ್ಣವ ಧರ್ಮಗಳು. ಮೈಸೂರಿನ ಮಣ್ಣಿನಲ್ಲಿ ಬೆಳೆಯಲಾರಂಭಿಸಿದವು. ಅನಂತರ ಬಸವೇಶ್ವರನ ತತ್ವಗಳು ಸಂಸ್ಥಾನದ ಜನತೆಯಲ್ಲಿ ಹೆಚ್ಚಿನ ಪರಿಣಾಮ ಬೀರಿ ವೀರಶೈವ ಧರ್ಮಕ್ಕೂ ಹೆಚ್ಚಿನ ಪ್ರೋತ್ಸಾಹ ದೊರಕಲಾರಂಭಿಸಿತು. ಕ್ರಿ.ಶ. ೧೪ನೇ ಶತಮಾನದಿಂದ ಇಸ್ಲಾಂ ಧರ್ಮ, ಪೋರ್ಚುಗೀಸ್ ಹಾಗೂ ಇಂಗ್ಲಿಷರಿಂದ ಕ್ರೈಸ್ತಧರ್ಮವೂ ಈ ನಾಡಿಗೆ ಲಗ್ಗೆ ಹಾಕಿದವೆಂದು ಹೇಳಬಹುದಾಗಿದೆ. ವರ್ಧಮಾನದೇವ, ಚಾಮುಂಡರಾಯ, ಅದಿಪಂಪ, ಅಬಿನವ ಪಂಪ. ನೇಮಿಚಂದ್ರ, ಪೂಜ್ಯಪಾದ, ಜನ್ನ, ಕವಿಪರಮೇಷ್ಠಿ, ಪೊನ್ನ, ರನ್ನ, ಮೊದಲಾದ ಮಹಾನ್ ಕವಿಗಳು ಜೈನಧರ್ಮವನ್ನು ಕುರಿತು ಕನ್ನಡದಲ್ಲಿಯೂ ಸಂಸ್ಕೃತದಲ್ಲಿಯೂ ಬಹುಮುಖ್ಯವಾದ ಗ್ರಂಥಗಳನ್ನು ಬರೆದಿದ್ದಾರೆ. ಹಾಗೆಯೇ ನಂದಿಕೇಶ್ವರ, ಶಿವಯೋಗಿ ಶಿವಾಚಾರ‍್ಯ, ನಂಜಣಾಚಾರ‍್ಯ, ಆಚಾರ‍್ಯ ನೀಲಕಂಠ, ಸಿದ್ಧವೀರಣಾಚಾರ‍್ಯ, ಬಸವೇಶ್ವರ, ಪ್ರಭುದೇವರು, ಚೆನ್ನ ಬಸವೇಶ್ವರ, ಸಿದ್ದರಾಮೇಶ್ವರ ಮೊದಲಾದ ಕ್ರಾಂತಿಕಾರಿ, ಸಾಹಿತಿಗಳು ಕನ್ನಡ ಸಂಸ್ಕೃತಗಳೆರಡರಲ್ಲಿಯೂ ಪರಣಿತರಾಗಿ ವೀರಶೈವ ಧರ್ಮವನ್ನು ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಮೇಲಿನವರು ಅಂದಿನ ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಬೆಳಕನ್ನು ಹರಿಸಿದ್ದಾರೆ. ಅಂದು ಶ್ರೀ ಮಾಧವಾಚಾರ‍್ಯರು ಸರ್ವರನ್ನೂ ಸಮಾನವಾಗಿ ಕಾಣುವ ಸರ್ವದರ್ಶನ ಸಂಗ್ರಹದಂತಹ ಅಮೂಲ್ಯ ಗ್ರಂಥ ಬರೆದು ಸನಾತನ ಧರ್ಮವನ್ನು ಎತ್ತಿ ಹಿಡಿದಿದ್ದಾರೆ. ವ್ಯಾಸರಾಜರು, ವಾದಿರಾಜರು ಮೊದಲಾದವರು ದ್ವೈತ ಸಿದ್ದಾಂತವನ್ನು ಅಂದು ಬೋಧಿಸಿ ಗ್ರಂಥಗಳನ್ನು ರಚಿಸಿದ್ದಾರೆ. ಮೈಸೂರು ಸಂಸ್ಥಾನದಲ್ಲಿ ಬೌದ್ಧ ಧರ್ಮವು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿತ್ತೆಂದು ಕೇಳಿಬಂದರೂ ನಿಖರವಾದ ಮಾಹಿತಿ ದೊರಕದೆ, ಅದು ಗೌಣವಾಗಿಯೇ ಉಳಿದುಕೊಂಡಿದೆ. ಸರ್ವಾಧಿಕಾರಿಯಾಗಿ ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಹೊಸ ಪುಟಗಳನ್ನು ನಿರ್ಮಿಸಿದ್ದ ಹೈದರ್ ಆಲಿ ಹಾಗೂ ಟಿಪ್ಪುರವರು ನಂಜನಗೂಡು ಮಲೆಮಹದೇಶ್ವರ ಬೆಟ್ಟ ಹಾಗೂ ಶೃಂಗೇರಿ ಪೀಠಕ್ಕೆ ತೋರಿಸಿಕೊಂಡು ಬಂದ ಭಕ್ತಿ ಅಮೂಲ್ಯವಾದ ನಿದರ್ಶನವಾಗಿವೆ. ಮುಸ್ಲಿಂ ಧರ್ಮದವರಾದರೂ ಹಿಂದೂ ಧರ್ಮೀಯರ ಬಗ್ಗೆ. ಹಿಂದೂ ದೇವಾಲಯಗಳ ಬಗ್ಗೆ ಅವರಿಟ್ಟಿದ್ದ ಭಕ್ತಿ. ಗೌರವ ಇಲ್ಲಿ ಅಪಾರವೆನ್ನಿಸುತ್ತದೆ. ಈ ಸಮಯದಲ್ಲಿಯೇ ಮೈಸೂರು ಸಂಸ್ಥಾನಕ್ಕೆ (ಕನ್ನಡ ನಾಡಿಗೆ)ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ಬಂದ ಡಾ. ಕಿಟ್ವೆಲ್ (ಇವರು ನಿರೂಪಿಸಿಕೊಟ್ಟ ಕನ್ನಡ ನಿಘಂಟು ಕನ್ನಡಿಗರಿಗೂ ನಾಚಿಸುವ ಅದ್ಬುತ ಕೆಲಸವಾಗಿದ್ದು ಇವರ ಕೊಡುಗೆ ಅಪಾರವೆನಿಸಿದೆ,) ಡಾ. ರೈಸ್, ಡಾ. ಥಾಮ್ಸನ್, ಡಾ. ಪ್ಲೀಟ್ ರವರು ಕನ್ನಡದಲ್ಲಿಯೇ ವ್ಯವಹರಿಸಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅಮೂಲ್ಯಗ್ರಂಥಗಳನ್ನು ಬರೆದು ಪ್ರಕಟಿಸಿ ಕ್ರೈಸ್ತಧರ್ಮದ ಪ್ರಚಾರ ಕೈಗೊಂಡಿದ್ದಾರೆ. ಇವರಿಗೆ ಮೈಸೂರಿನ ಒಡೆಯರ್‌ರವರು ಸರ್ವಧರ್ಮವನ್ನೂ ಸಮನಾಗಿ ಕಾಣುವ ದೃಷ್ಟಿಯಿಂದ ರಾಜಾಶ್ರಯದಲ್ಲಿ ಸ್ವಾಗತಿಸಿ ಸಹಕರಿಸಿದರು.

ಒಂದು ದೃಷ್ಟಿಯಲ್ಲಿ ವಿಶ್ಲೇಷಿಸುವುದಾದರೆ ಮೈಸೂರು ಸಂಸ್ಥಾನದ ಧಾರ್ಮಿಕ ಪರಂಪರೆಯ ಭರತಖಂಡದ ಧಾರ್ಮಿಕ ಪರಂಪರೆಯ ಚೌಕಟ್ಟಿನಲ್ಲೇ ಬೆಳೆದು ಬಂದದ್ದು ಎನ್ನಬಹುದು. ಏಕೆಂದರೆ ಸಂಸ್ಥಾನವು ದೇಶದ ಪ್ರಮುಖ ಎಲ್ಲಾ ಧರ್ಮಗಳನ್ನು ತನ್ನ ಮಡಿಲಿನಲ್ಲಿ ಬೆಳೆಸಿ. ಪೋಷಿಸಿ, ರಕ್ಷಿಸಿಕೊಂಡು ಬಂದಿರುವುದಕ್ಕೆ ಅಪೂರ್ವವಾದ ದಾಖಲೆಗಳು ದೊರಕುತ್ತವೆ. ಸಂಸ್ಥಾನದಲ್ಲಿ ಪ್ರಧಾನವಾಗಿ ಹಿಂದೂಗಳು ಇದ್ದರೂ ಅದರಲ್ಲಿಯೇ ಶೈವ ಹಾಗೂ ವೈಷ್ಣವ ಮತಗಳನ್ನು ಅನುಸರಿಸಿಕೊಂಡು ಬಂದವರ ಸಂಖ್ಯೆಯೇ ಹೆಚ್ಚೆನ್ನಬಹುದು. ಸಂಸ್ಥಾನದ ಪ್ರಾಚೀನ ಕಾಲದ ಇತಿಹಾಸವನ್ನು ಅಧ್ಯಯನ ಮಾಡಿದರೆ ಈ ಭಾಗದ ಪ್ರಾಚೀನ ಧಾರ್ಮಿಕ ನಂಬಿಕೆಗಳ ಬಗೆಗೆ ಹೆಚ್ಚಿನ ಮಾಹಿತಿ ದೊರಕುತ್ತವೆ. ಏಕೆಂದರೆ ಸಂಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚಾಗಿ ಕಂಡು ಬರುವ ಜೈನ ಬಸದಿಗಳು ಗ್ರಾಮೀಣ ಆರಾಧ್ಯ ಗ್ರಾಮದೇವತೆಯ ದೇಗುಲವಾಗಿ (ಮಾರಿ ದೇವತೆ ಹಾಗೂ ವೀರಭದ್ರನ ದೇವಾಲಯಗಳಾಗಿವೆ) ಪರಿವರ್ತನೆಗೊಂಡಿರುವುದಕ್ಕೆ ದಾಖಲೆಗಳು ದೊರಕುತ್ತವೆ. ಇವನ್ನು ಪರಿಗಣಿಸಿದರೆ ಜೈನಧರ್ಮವು ಈ ಸಂಸ್ಥಾನದ ಪ್ರಾಚೀನ ಧರ್ಮಗಳಲ್ಲಿ ಒಂದಾಗಿತ್ತೆನ್ನಬಹುದು. ಇದಕ್ಕೆ ಸಾಕ್ಷಿ ಎಂಬಂತೆ ತಲಕಾಡಿನ ಗಂಗರು. ತದನಂತರ ಆಳ್ವಿಕೆ ನಡೆಸಿದ ಹೊಯ್ಸಳರ ಕಾಲದಲ್ಲಿ ಈ ಧರ್ಮವು ರಾಜಧರ್ಮವಾಗಿ ಮೆರೆದಿತ್ತೆಂಬುದ್ದಕ್ಕೆ ದೊರೆತಿರುವ ಸಾವಿರಾರು ಜೈನಶಾಸನಗಳು, ಬಸದಿಗಳು, ತೀರ್ಥಂಕರ ವಿಗ್ರಹಗಳು ಮೂಕಸಾಕ್ಷಿಯಾಗಿವೆ. ಇದಲ್ಲದೆ ವೈಷ್ಣವ ಮತಗಳಂತೂ ಪ್ರಾಚೀನ ಕಾಲದಿಂದಲೂ ಬೆಳೆದು ಬಂದ ಜನಪ್ರಿಯತೆಯ ಫಲದಿಂದಾಗಿ ಇಂದು ಹಿಂದೂ ಧರ್ಮವಾಗಿ ಪರಿವರ್ತನೆಗೊಂಡು ಸಂಸ್ಥಾನದ ರಾಜಧರ್ಮವಾಗಿ ಕಂಗೊಳಿಸಿದೆ. ಮೈಸೂರಿನ ಒಡೆಯರ್‌ರವರು ಹಲವಾರು ಶೈವ, ವೈಷ್ಣವ ದೇವಾಲಯಗಳನ್ನು ಕಟ್ಟಿಸಿರುವುದು ಕಂಡುಬರುತ್ತದೆ. ಹಾಗೇಯೇ ಇವರಿಗಿಂತ ಮುಂಚೆಯೇ ನಿರ್ಮಿಸಿದ್ದ ದೇವಾಲಯಗಳನ್ನು ದುರಸ್ಥಿಗೊಳಿಸಿ ದಾನದತ್ತಿ ನೀಡಿರುವುದೂ ಅನೇಕ ಸಾಹಿತ್ಯ ಶಾಸನಾಧಾರಗಳಿಂದ ತಿಳಿದುಬರುತ್ತದೆ. ಉದಾಹರಣೆಗೆ ಚಾಮರಾಜ ನಗರದಲ್ಲಿರುವ ಚಾಮರಾಜೇಶ್ವರ ದೇವಾಲಯ, ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಹಾಗೂ ಬೃಹತ್ ನಂದಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಬೃಹತ್ ಗೋಪುರ, ಉಮ್ಮತೂರಿನ ದೇವಾಲಯ, ಮೂಗೂರು ತಿಬ್ಬದೇವಿ, ಸೋಸಲೆಯಲ್ಲಿರುವ ಕೃಷ್ಣರಾಜೇಂದ್ರ ದೇವಾಲಯ, ಹೊನ್ನದೇವಿ ಹಾಗೂ ವೀರಭದ್ರೇಶ್ವರ ದೇವಾಲಯ, ಮೈಸೂರು ಅರಮನೆಯಲ್ಲಿರುವ ಶೈವ ಹಾಗೂ ವೈಷ್ಣವ ದೇವಾಲಯಗಳಾದ ಗಾಯತ್ರಿದೇವಿ ದೇವಾಲಯ, ಶ್ವೇತವರಹ ಸ್ವಾಮಿ ದೇವಾಲಯ, ವೆಂಕಟರಮಣ ಸ್ವಾಮಿ ದೇವಾಲಯ, ಗೋಪಾಲಕೃಷ್ಣ ದೇವಾಲಯಗಳು ಹಾಗೂ ಶ್ರೀರಂಗಪಟ್ಟಣದಲ್ಲಿರುವ ರಣಧೀರ ಕಂಠೀರವ ನರಸರಾಜ ಒಡೆಯರ್ ನಿರ್ಮಿಸಿರುವ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯಗಳು ಪ್ರಮುಖವಾಗಿ ಕಂಡುಬರುತ್ತದೆ. ಇಂತಹ ಪಥದಲ್ಲಿಯೇ ನೂರಾರು ದೇವಾಲಯಗಳು ಇವರ ಕಾಲದಲ್ಲಿ ನಿರ್ಮಾಣವಾಗಿ ಅಭಿವೃದ್ಧಿ ಹೊಂದಿ ಇಂದಿಗೂ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿ ಬೆಳೆದು ಬರುತ್ತವೆ. ಇವುಗಳಲ್ಲಿ ಮಲೆ ಮಹದೇಶ್ವರ ಬೆಟ್ಟ, ಚಿಕ್ಕಲ್ಲೂರು, ಕಪ್ಪಡಿ, ಬೋಪ್ಪಣ್ಣಪುರ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ, ಮುಡುಕು ತೋರೆ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ತಲಕಾಡಿನ ದೇವಾಲಯ, ಕೆ.ಆರ್. ನಗರದ ಬಳಿಯಲ್ಲಿರುವ ಚುಂಚನಕಟ್ಟೆ ಶ್ರವಣಬೆಳಗೋಳ, ಬೇಲೂರು, ಸೋಮನಾಥಪುರ, ತಿರುಮಕೊಡಲು ನರಸೀಪುರ, ಶೃಂಗೇರಿ, ಮೇಲುಕೋಟೆ, ಶ್ರೀರಂಗಪಟ್ಟಣ, ಗೋಪಾಲಸ್ವಾಮಿ ಬೆಟ್ಟ, ನಂಜನಗೂಡು ಮುಂತಾದ ಅನೇಕ ಧಾರ್ಮಿಕ ಕ್ಷೇತ್ರಗಳು ಇವರ ಆಳ್ವಿಕೆಯ ಕಾಲದಲ್ಲಿ ಅಭಿವೃದ್ಧಿ ಹೊಂದಿ ಧಾರ್ಮಿಕ ಸಂಸ್ಕೃತಿಯನ್ನು ಹೊರಚೆಲ್ಲುವ ಪವಿತ್ರ ಕ್ಷೇತ್ರಗಳಾಗಿ ಕಂಗೊಳಿಸಿದ್ದವು. ಇವು ಇಂದಿಗೂ ಅದೇ ರೀತಿಯ ಮಹತ್ವವನ್ನು ಉಳಿಸಿ ಪ್ರಾಚೀನ ಸಂಸ್ಕೃತಿಯನ್ನು ಬೆಳಸಿಕೊಂಡು ಬರುತ್ತಿವೆ.

ಕಾಯಕವೇ ಕೈಲಾಸ ಎಂದು ಕಾಯಕಕ್ಕೆ ವಿಶೇಷವಾದ ಮಹತ್ವ ಕಲ್ಪಿಸಿದ ವೀರಶೈವ ಧರ್ಮವು ಇವರ ಕಾಲದಲ್ಲಿ ಪ್ರಾಬಲ್ಯಕ್ಕೆ ಬರತೊಡಗಿತ್ತು. ವೀರಶೈವ ಧರ್ಮದ ರಕ್ಷಾ ಕವಚಗಳಂತಿರುವ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ ಮಂತ್ರಗಳು ಸಂಸ್ಥಾನದ ಕೆಳವರ್ಗದ ಜನರನ್ನು ಅಕರ್ಷಿಸಿ ಅನೇಕ ಜನರು ಈ ಧರ್ಮಕ್ಕೆ ಮತಾಂತರ ಹೊಂದಿದ್ದು ಕಂಡುಬರುತ್ತದೆ. ಮತಾಂತರದಲ್ಲಿ ವೀರಶೈವ ಧರ್ಮದ ನಂತರ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಧರ್ಮವಾದ ಕ್ರೈಸ್ತಧರ್ಮ ಮೈಸೂರು ಸಂಸ್ಥಾನವನ್ನು ಆಕರ್ಷಿಸಿತ್ತೆನ್ನಬಹುದು. (ಇದರ ಬಗ್ಗೆ ಪ್ರತ್ಯೇಕವಾಗಿ ಮತಾಂತರ ಎಂಬ ವಿಷಯದಡಿ ಮುಂದೆ ಚರ್ಚಿಸಬಹುದಾಗಿದೆ). ಸಂಸ್ಥಾನದಲ್ಲಿ ಅಂದು ವೀರಶೈವ ಧರ್ಮದ ಪ್ರಚಾರ ಕಾರ್ಯವು ಸುತ್ತೂರಿನ ಶಿವರಾತ್ರೇಶ್ವರ ಸ್ವಾಮಿಮಠ, ದೇವನೂರಿನ ಗುರುಮಲ್ಲೇಶ್ವರ ಮಠ. ಅರಮನೆ ಜಪದಕಟ್ಟಿಮಠ, ಕುಂತೂರಿನ ವೀರಶೈವಮಠ, ಬೆಟ್ಟದ ಪುರದ ವೀರಶೈವಮಠ, ಚಿತ್ರದುರ್ಗ ಮುರುಘರಾಜೇಂದ್ರಮಠ, ತರಳಬಾಳು ಮಠ, (ತರಳಬಾಳು ಮಠವು ಸಂಸ್ಥಾನದ ಅರಸರ ಕಾಲದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿತ್ತೆನ್ನಬಹುದು). ಶ್ರೀ ಮರುಳಸಿದ್ದರ ಉಜ್ಜಯಿನಿ ಕ್ಷೇತ್ರಮಠಗಳು ಪ್ರಮುಖ ಪಾತ್ರ ವಹಿಸಿದ್ದವು.

ಮಠಗಳು ಅಂದು ನುಡಿಗಿಂತ ನಡೆಗೆ, ವಿಚಾರಕ್ಕಿಂತ ಆಚಾರಕ್ಕೆ, ಬುದ್ದಿಗಿಂತ ಭಾವಕ್ಕೆ, ತರ್ಕಕ್ಕಿಂತ ಅನುಬಾವಕ್ಕೆ, ಕುಲಕ್ಕಿಂತ ಶೀಲಕ್ಕೆ ಹಾಗೂ ಪ್ರತಿಯೊಂದು ಅಹಿಂಸಾತ್ಮಕ ಕಾಯಕಗಳಿಗೂ ಹೆಚ್ಚಿನ ಪ್ರಾಧಾನ್ಯವನ್ನು ಕೊಟ್ಟು ವೀರಶೈವ ಧರ್ಮದ ಅಭಿವೃದ್ಧಿಗೆ ಕಾರಣಕರ್ತರಾದರು. ಆದರೆ ಇಂದು ಇದೊಂದು ಜಾತಿಯಾಗಿ ಪರಿವರ್ತನೆಯಾಗಿ ತನ್ನ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡು, ಯಾವ ಧರ್ಮ ಜಾತಿಪದ್ಧತಿಯನ್ನು ಕಠೋರವಾಗಿ ವಿರೋಧಿಸಿತ್ತೋ ಅದೇ ಧರ್ಮದ ಹೆಸರೇಳಿಕೊಂಡು ಜಾತಿ ಪದ್ಧತಿಯನ್ನು ಮತ್ತೆ ವೇದಗಳ ಕಾಲದವರೆಗೆ ಕೊಂಡೊಯ್ಯುತ್ತಿರುವ ಸಮಾಜವಾಗಿ ರೂಪಗೊಳ್ಳುತ್ತಿದೆ. ಇದರ ಕೊನೆಯನ್ನು ಕಾಲವೇ ನಿರ್ಧರಿಸಬೇಕು. ಈಗಂತೂ ಕರ್ನಾಟಕದಲ್ಲಿ ವೀರಶೈವ ಧರ್ಮದವರು ತಮ್ಮಧರ್ಮದ ಪ್ರಚಾರದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ. ಸೃಷ್ಟಿಯಲ್ಲಿ ಜೀವದ ತೊಳಲಾಟದ ಗುಟ್ಟೇನು? ಜೀವನ ಇದರಿಂದ ಮುಕ್ತವಾಗುವ ಬಗೆಯೆಂತು? ಎನ್ನುವ ಮೂಲಭೂತ ಪ್ರಶ್ನೆಗಳೊಂದಿಗೆ ಉತ್ತರವನ್ನು ಕಂಡುಕೊಳ್ಳುತ್ತಾ ಧರ್ಮ ತನ್ನ ಉಗಮವನ್ನು ಪಡೆಯುತ್ತ್ತದೆಂದು ಹಿರಿಯರು ಹೇಳುತ್ತಾರೆ. ಆದರೆ ಈ ಧರ್ಮಗಳ ಉಗಮಕ್ಕೆ ಮೂಲಕಾರಣಕರ್ತರಾದ ಜೀವಿಗಳು ತಮ್ಮ ತಮ್ಮ ಸಂಕುಚಿತ ಮಾರ್ಗವನ್ನು ಮಾತ್ರ ಹುಡುಕಿ ಹೊರತೆಗೆದವು ಈ ದೃಷ್ಟಿಯಲ್ಲಿ ಗಮನಿಸಬಹುದಾದದ್ದೆಂದರೆ ಇಲ್ಲಿ ಸ್ಥೂಲ ಮನಸ್ಸು ಹಾಗೂ ಸೂಕ್ಷ್ಮ ಆತ್ಮವನ್ನು ವಂಚಿಸಲು ಯಾವುದೋ ಒಂದು ಶಕ್ತಿ ಇವರಲ್ಲಿ ಮನೆಮಾಡಿಕೊಂಡಿರುತ್ತದೆಂದು ಹೇಳಿದರೆ ತಪ್ಪಾಗದೇನೋ. ಈ ರೀತಿಯಲ್ಲಿ ಇಂದಿನ ವೀರಶೈವ ಧರ್ಮ ಹಾಗೂ ಮಠಗಳು ಬೆಳೆದು ಬರುತ್ತಿರುವುದೇನೋ ಎಂಬ ಭಾವನೆ ಮೂಡದಿರದು.

ಮೈಸೂರು ಒಡೆಯರ ಮನೆದೇವರು ಮೇಲುಕೋಟೆಯ ಚಲುವ ನಾರಾಯಣಸ್ವಾಮಿ. ಈ ಚಲುವನಾರಾಯಣ ಸ್ವಾಮಿ ದೇವಾಲಯವು ಹೊಯ್ಸಳರ ಕಾಲದಲ್ಲಿ ಜೀರ್ಣೋದ್ಧಾರ ಕಂಡಿತ್ತು. ನಂತರ ೧೪ನೇ ಶತಮಾನದಲ್ಲಿ ಮುಸ್ಲಿಮರ ದಾಳಿಗೆ ತುತ್ತಾಗಿ ಸ್ವಲ್ಪ ನಾಶ ಹೊಂದಾಲಾರಂಭಿಸಿತು. ಮಧ್ಯಯುಗದಲ್ಲಿ ಕ್ರಿ.ಶ. ೧೪೬೦ರ ಸುಮಾರಿನಲ್ಲಿ ವಿಜಯನಗರದ ದೊರೆಯಾಗಿದ್ದ ಮಲ್ಲಿಕಾರ್ಜುನ (ಫ್ರೌಡ ದೇವರಾಯ) ಮಹಾ ಪ್ರಧಾನ ಎಂಬ ಹುದ್ದೆಯನ್ನು ಹೊಂದಿದ್ದ ನಾಗಮಂಗಲದ ತಿಮ್ಮಣ್ಣ ಎಂಬ ದಂಡನಾಯಕನು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದ. ಇವನನ್ನು ಮೇಲುಕೋಟೆಗೆ ಮರುಜೀವ ತುಂಬಿದ “ಜೀರ್ಣೋದ್ದಾರಕ ಎಂಬ ಬಿರುದನ್ನು ಪಡೆದಿದ್ದನು. ಇವನ ಪತ್ನಿ ರಂಗಾಬಿಕಯೊಡನೆ ದೇವಾಲಯದ ಸಭಾಂಗಣದಲ್ಲಿ ಕಲ್ಯಾಣ ಮಂಟಪ (ವಸಂತ ಮಂಟಪವೆಂದು ಇಂದು ಪ್ರಸಿದ್ಧವಾಗಿದೆ) ಕಟ್ಟಿಸಿದನು. ಈ ಮಂಟಪವು ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದ್ದು ರಾಮಾಯಣ, ಭಗವದ್ಗೀತೆ ಮಹಾಭಾರತದ ಹಿನ್ನೆಲೆಯ ಕಥೆಗಳನ್ನು ಸೂಚಿಸುವ ಸುಂದರ ಕೆತ್ತನೆಯು ಇಂದಿಗೂ ಜೀವಂತವಾಗಿ ಉಳಿದುಕೊಂಡು ಹಿಂದೂ ಸಂಸ್ಕೃತಿಯನ್ನು ಹೊರಚೆಲ್ಲುತ್ತ ನಿಂತಿದೆ.

ಮುಂದೆ ಮೇಲುಕೋಟೆಯಲ್ಲಿ ಮೈಸೂರು ಅರಸರ ರಚನೆಗಳು ಹಾಗೂ ಅಪಾರ ಕೊಡುಗೆಗಳು ಸ್ವಷ್ಟವಾಗಿ ಕಂಡುಬರುತ್ತವೆ. ಚಲುವನಾರಾಯಣ ಸ್ವಾಮಿ ದೇವಾಲಯದ ನವರಂಗದ ಒಂದುಕಂಬದಲ್ಲಿ ಮೈಸೂರಿನ ಪ್ರಥಮ ಸ್ವಾತಂತ್ರ್ಯ ಅರಸ ರಾಜ ಒಡೆಯರ್ ರವರ ಭಕ್ತಿ ಭಾವದ ಚಿಕ್ಕಮೂರ್ತಿಯನ್ನು ಕಲ್ಲಿನಲ್ಲಿ ಕಡೆಯಲಾಗಿದೆ. ರಾಜ ಒಡೆಯರು ಚಲುವನಾರಾಯಣನಿಗೆ ವಜ್ರ ಹಾಗೂ ಬಂಗಾರದಿಂದ ನಿರ್ಮಿತವಾಗಿರುವ ವೈರಮುಡಿಯನ್ನು ಅರ್ಪಿಸಿದ್ದನೆಂದು ದಾಖಲೆಗಳಿಂದ ತಿಳಿದುಬರುತ್ತದೆ. ಇಂದಿಗೂ ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆಯಂದು ವೈರಮುಡಿ ಉತ್ಸವ ನಡೆಯುತ್ತದೆ. ಇದರ ವರ್ಣನೆ ಅಪೂರ್ವವಾದದ್ದಾಗಿದೆ. ರಾಮಾನುಜಾಚಾರ್ಯರು. ಈ ಕ್ಷೇತ್ರದಲ್ಲಿ ನೆಲೆಸಿ ಇದನ್ನೊಂದು ಸಾಂಸ್ಕೃತಿಕ ಕ್ಷೇತ್ರವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಸಂಸ್ಥಾನದಲ್ಲಿ ಮತ್ತೊಂದು ಪವಿತ್ರ ಧಾರ್ಮಿಕ ಕ್ಷೇತ್ರವೆಂದರೆ ಆದಿ ಚುಂಚನಗಿರಿ. ಇದು ನಾಗಮಂಗಲದ ಬಳಿಯಿರುವ ಚುಂಚನಗಿರಿ ಕ್ಷೇತ್ರ ಎಂಬ ಗ್ರಾಮದಲ್ಲಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಸಿದ್ಧವಾದ ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠವನ್ನು ನಿರ್ಮಿಸಿಕೊಂಡು ಮುನ್ನಡೆದುಕೊಂಡು ಬರುತ್ತಿದ್ದಾರೆ. ಇದರ ಗುರು ಪರಂಪರೆಯ ಪ್ರಕಾರ ಈಗಿನ ಪೀಠಾಧ್ಯಕ್ಷರಾದ ಬಾಲಗಂಗಾಧರನಾಥ ಸ್ವಾಮಿಗಳು ೭೧ನೇ ಯವರೆಂದು ತಿಳಿದುಬರುತ್ತದೆ. ಈ ಮಠಕ್ಕೆ ಸಂಬಂಧಿಸಿದಂತೆ ಕಾಲಬೈರವೇಶ್ವರ, ಗಂಗಾಧರೇಶ್ವರ, ಗವಿಸಿದ್ದೇಶ್ವರ, ಮಲ್ಲೇಶ್ವರ, ಕಂಬಡಮ್ಮ, ಗಳಗಕಲ್ಲೇಶ್ವರ ಇತ್ಯಾದಿ ದೇವಾನುದೇವತೆಗಳಿಗೆ ಪೂಜಾ ಪುರಸ್ಕಾರ ನಡೆಯುತ್ತದೆ. ಕ್ಷೇತ್ರದಲ್ಲಿ ಹಿಂದೆ ಒಕ್ಕಲಿಗರು, ಲಿಂಗಾಯಿತರು, ಹೊಲೆಯ, ಮಾದಿಗರು, ನೇಯ್ಗಯವರು ಹೆಚ್ಚಾಗಿ ಪೂಜಿಸಿಕೊಂಡು ಬರುತ್ತಿದ್ದರು. ಆದರೆ ಪ್ರಸ್ತುತ ಒಕ್ಕಲಿಗರ ಕ್ಷೇತ್ರವಾಗಿ ಮಾತ್ರ ಬೆಳೆದು ಬರುತ್ತಿರುವುದು ಶೋಚನೀಯ ಸಂಗತಿ.

ಮೈಸೂರು ಅರಸರ ರಾಜಗುರುಗಳೆಂದು ಹೆಸರು ಪಡೆದಿದ್ದ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಯತಿಗಳ ಮಠವು ಶ್ರೀರಂಗಪಟ್ಟಣದಲ್ಲಿದೆ. ಈ ಮಠಕ್ಕೂ ಮೈಸೂರು ಅರಸರ ಪ್ರಾರಂಭದ ದೊರೆಯೆನಿಸಿಕೊಂಡಿರುವ ಯದುರಾಯರಿಗೂ ಪ್ರಾರಂಭದಿಂದಲೇ ಆತ್ಮೀಯ ಸಂಬಂಧ ಬೆಳೆದು ಬಂದಿತ್ತು. ಪ್ರಾರಂಭದಲ್ಲಿ ಈ ಮಠದ ಕೆಂದ್ರವು ತಿರುಪತಿಯಾಗಿದ್ದಿತ್ತು. ಕ್ರಿ.ಶ. ೧೬೭೬ – ೧೭೦೦ರ ಸಮಯದಲ್ಲಿ ದೊಡ್ಡಪರಕಾಲ ಸ್ವಾಮಿಗಳ ಕಾಲದಲ್ಲಿ ಶ್ರೀರಂಗಪಟ್ಟಣಕ್ಕೆ ಇದು ವರ್ಗಾವಣೆ ಆಗಿತ್ತೆಂದು ತಿಳಿದುಬರುತ್ತದೆ. ಇದು ಅಂದು ವೈಷ್ಣವ ಧರ್ಮ ಪೋಷಣೆ ಪ್ರಮುಖ ಕೇಂದ್ರವಾಗಿದ್ದಿತ್ತು. ತಮ್ಮ ಮೂಲಪುರುಷನಿಂದ ಪೋಷಿಸಿಕೊಂಡು ಬಂದ ಈ ಮಠಕ್ಕೆ ಮೈಸೂರಿನ ಅರಸರು ತಮ್ಮ ಕೊನೆ ಕಾಲದವರೆಗೂ ವಿಶೇಷ ಗೌರವ ಭಕ್ತಿಯನ್ನು ಅರ್ಪಿಸಿಕೊಂಡು ಬಂದರೆಂದು ಹೇಳಬಹುದು.

ಮೈಸೂರು ಅರಸರ ಕಾಲದ ದೇವಾಲಯಗಳು

ಮೈಸೂರು ಸಂಸ್ಥಾನದಲ್ಲಿನ ಅನೇಕ ದೇವಾಲಯಗಳು ಹೊಯ್ಸಳ ದ್ರಾವಿಡ ಮತ್ತು ಹಿಂದೂ ಶಿಲ್ಪಕಲಾ ಕೌಶಲ್ಯದಿಂದ ಕೂಡಿ ಪ್ರಸಿದ್ಧವಾಗಿವೆ. ಈ ದೇವಾಲಯಗಳು ಕೇವಲ ಧಾರ್ಮಿಕ ಕ್ಷೇತ್ರಗಳಾಗಿರದೆ ಕೆಲವು ಆಸಕ್ತಿಗಳನ್ನು ಕೆರಳಿಸುವ ರೀತಿಯಲ್ಲಿ. ತಮ್ಮದೇ ಆದ ರಾಜಕೀಯ ಮತ್ತು ಚಾರಿತ್ರಿಕ ಹಿನ್ನೆಲೆಗಳನ್ನು ಸೃಷ್ಟಿಸಿರುವುದು ಕಂಡುಬರುತ್ತದೆ. ಈ ದೇವಾಲಯಗಳಲ್ಲಿ ಕೆಲವು ೧೫ನೇ ಶತಮಾನಕ್ಕೂ ಹಿಂದಿನವುಗಳಾಗಿದ್ದರೆ ಮತ್ತೆ ಕೆಲವು ಈಚೆಗೆ ಕಟ್ಟಿಲ್ಪಟ್ಟವಾಗಿವೆ. ಇವುಗಳಿಂದ ಒಡೆಯರ್ ರವರ ದೈವಭಕ್ತಿ ಮತ್ತು ಶಿಲ್ಪಕಲಾ ಕ್ಷೇತ್ರವನ್ನು ಅಧ್ಯಯನ ಮಾಡಬಹುದಾಗಿದೆ.

ಕೋಡಿ ಭೈರವಸ್ವಾಮಿ (ಸೋಮೇಶ್ವರ ದೇವಾಸ್ಥಾನ : ಈ ದೇವಾಲಯವು ದೊಡ್ಡ ಕೆರೆಯ ಕೋಡಿಯ ಹತ್ತಿರ ಇರುವುದರಿಂದಾಗಿ ಕೋಡಿ ಭೈರವ ಎಂದು ಕರೆಸಿಕೊಂಡು ಬರುತ್ತಿದೆ. ಈ ದೇವಾಲಯವು ಸುಂದರವಾಗಿದ್ದು ಮೈಸೂರಿನ ಚರಿತ್ರೆಯಲ್ಲಿ ಅದ್ಭುತವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಮೈಸೂರು ರಾಜ್ಯದ ಸ್ಥಾಪನೆಯು ಈ ದೇವಾಲಯದಲ್ಲಿ ಸಂಭವಿಸಿತ್ತೆಂದು ಪ್ರತೀತಿ. ಈ ಸೃಷ್ಟಿಯಿಂದಾಗಿ ಇದು ತನ್ನ ಕೀರ್ತಿಯನ್ನು ಹೆಚ್ಚಿಸಿಕೊಂಡು ಬರುತ್ತಿದೆ, ಭೈರವಮೂರ್ತಿ ಸುಮಾರು ಮೂರು ಅಡಿ ಎತ್ತರವಿದ್ದು ನಾಲ್ಕು ಕೈಗಳಲ್ಲೂ ತ್ರಿಶೂಲ, ತಲೆಬುರುಡೆ, ಕತ್ತಿಯನ್ನು ಹಿಡಿದು ರೌದ್ರಾವತಾರದಿಂದ ನಿಂತಿದೆ. ಇದರ ಬಲಗಡೆ ಪಕ್ಕಕ್ಕೆ ಚೌಲಿಯನ್ನು ಹೊಂದಿರುವ ಸ್ತ್ರೀ ವಿಗ್ರಹ ಮತ್ತು ಎಡಕ್ಕೆ ಪಕ್ಷಿಯ ತಲೆ ಮತ್ತು ಕುಡುಗೋಲನ್ನೂ ಬಲಗೈಯಲ್ಲಿ ಎತ್ತಿ ಹಿಡಿದ ಭದ್ರಕಾಳಿ ಎಂಬ ಹೆಣ್ಣುದೇವತೆ ನಿಂತಿದ್ದಾಳೆ. ಇಂದು ಈ ದೇವಾಲಯವು ವಿದ್ಯುದ್ವೀಪಗಳಿಂದ ಕಂಗೊಳಿಸುತ್ತಿದೆ. ಇದರ ಪಕ್ಕದಲ್ಲಿಯೇ ಮೂರು ಕೋಣೆಯಲ್ಲಿ ನಾರಾಯಣ, ಇನ್ನೊಂದು ಕೋಣೆಯಲ್ಲಿ ಅಮ್ಮನವರು ಎಂಬ ದೇವತೆ ಇದೆ. ದೇವಾಲಯವು ಮೈಸೂರು ಅರಮನೆಯ ಪಕ್ಕದಲ್ಲಿರುವ ದೊಡ್ಡ ಕೆರೆಯ ಪಕ್ಕದಲ್ಲಿದೆ.

ವರಹಾಸ್ವಾಮಿ ದೇವಾಲಯ : ಈ ದೇವಾಲಯವು ಸಂಸ್ಥಾನದಲ್ಲಿಯೇ ಅತ್ಯಂತ ಉತ್ಕೃಷ್ಟ ಶಿಲ್ಪ ಕಲಾ ಕೌಶಲ್ಯದಿಂದ ಕೂಡಿದ ದೇವಾಲಯ ಎಂದು ಹೆಸರುಗಳಿಸಿದೆ. ಒಂದು ದೃಷ್ಟಿಯಲ್ಲಿ ಬೇಲೂರು ಮತ್ತು ಸೋಮನಾಥಪುರ ದೇವಾಲಯಗಳ ಕಲಾ ನೈಪುಣ್ಯತೆಯನ್ನು ತನ್ನ ಮಡಿಲಿನಲ್ಲಿ ಅಡಗಿಸಿಕೊಂಡಿರುವ ಈ ದೇವಾಲಯವು ಪ್ರೇಕ್ಷಕರನ್ನು ತನ್ನಡೆಗೆ ಆಕರ್ಷಿಸಿಕೊಳ್ಳುತ್ತದೆ. ಇದು ಮೈಸೂರು ಅರಮನೆ ಕೋಟೆಯ ದಕ್ಷಿಣ ಬಾಗಿಲಿನ ಬಳಿಯಲ್ಲಿದೆ. ಈ ದೇವಾಲಯವು ಹೊಯ್ಸಳ ಕಲಾಕೃತಿಗಳಿಂದ ಕೂಡಿದೆ. ದೇವಿ ಗುಡಿಯ ಸುಂದರವಾದ ಬಾಗಿಲು ಮತ್ತು ಕಂಬಗಳನ್ನು ಕೆತ್ತನೆಯ ಕೆಲಸದಿಂದ ನಿರ್ಮಿಸಿರುವ ರೀತಿ ಮನಸೂರೆಗೊಳ್ಳುತ್ತದೆ. ಅಲ್ಲಿರುವ ಅನೇಕ ಪೀಠಗಳೊಂದರಲ್ಲಿ ಚಿಕ್ಕದೇವವರಾಯ ಒಡೆಯರ “ಸೇವಾರ್ಥ” (೧೬೭೨ – ೧೭೦೪) ಎಂದು ಬರೆಯಲಾಗಿದೆ. ಈ ಶ್ವೇತ ವರಾಹಸ್ವಾಮಿ ವಿಗ್ರಹವನ್ನು ಚಿಕ್ಕದೇವರಾಜ ಒಡೆಯರು “ಶ್ರೀಮುಷ್ಣಂ” ಎಂಬ ಗ್ರಾಮದಿಂದ ತಂದರೆಂದು ತಿಳಿದುಬರುತ್ತದೆ.

ಲಕ್ಷ್ಮೀ ರಮಣಸ್ವಾಮಿ ದೇವಸ್ಥಾನ : ಸಂಸ್ಥಾನದ ಪುರಾತನ ದೇವಾಲಯಗಳಲ್ಲಿ ಇದೊಂದು. ಮೈಸೂರಿನ ಕೋಲ್ ಸಾಹೇಬರ ತೋಟದಲ್ಲಿ ದೊರೆತ ಕ್ರಿ.ಶ. ೧೪೯೯ರ ಶಿಲಾಶಾಸನದ ಪ್ರಕಾರ ವಿಜಯನಗರದ ಅರಸರಾದ ಕೃಷ್ಣದೇವರಾಯರ ಅಜ್ಞೆಯ ಮೇರೆಗೆ ಈ ದೇವಾಲಯಕ್ಕೆ ದಾನದತ್ತಿ ನೀಡಿದ್ದರೆಂದು ತಿಳಿದುಬರುತ್ತದೆ.

ತ್ರಿನಯನೇಶ್ವರ ಸ್ವಾಮಿ ದೇವಾಲಯ : ಇದು ದ್ರಾವಿಡ ನಾಗರಿಕತೆಯನ್ನು ಪ್ರತಿಬಿಂಬಿಸುವ ದೇವಾಲಯ. ಅರಮನೆಯ ಎದುರು ಭಾಗದಲ್ಲಿ ಪಶ್ಚಿಮಾಭಿಮುಖವಾಗಿದೆ. ಹೀಗಿರುವ ದೊಡ್ಡಕೆರೆಯ ಪಕ್ಕದಲ್ಲಿ ಇರುವುದರಿಂದ ಅಂದು ಕೆರೆ ನೀರಿನಿಂದ ತುಂಬಿ ದೇವಾಲಯಕ್ಕೆ ನೀರಿನ ಅಲೆಗಳು ಬಂದಪ್ಪಳಿಸಿ ದೇವಾಲಯವನ್ನು ದುಃಸ್ಥಿತಿಗೆ ತಂದೊಡ್ಡಿತ್ತು. ಇಂಚಗ ಸಮಯದಲ್ಲಿ ಕಮಠೀರವ ನರಸರಾಜ ಒಡೆಯರ್ ಹಾಗೂ ದೇವರಾಜ ಒಡೆಯರ್ ರವರು ದೇವಸ್ಥಾನದ ಸುತ್ತಲೂ ಮಣ್ಣಿನಿಂದ ಭರ್ತಿ ಹಾಕಿಸಿ ಕೋಟೆ ನಿರ್ಮಿಸಿ ದೇವಾಲಯ ರಕ್ಷಿಸಿದರು. ಈದೇವಾಲಯದ ಹೊರವಲಯದ ಮಹಾದ್ವಾರ ಬಹಳ ಸುಂದರವಾಗಿದೆ. ಒಳಭಾಗದ ಅಂಗಳಗಳೆಲ್ಲವೂ ಲಿಂಗಗಳು ಹಾಗೂ ಸಣ್ಣ ಸಣ್ಣ ಮಂಟಪಗಳಿಂದ ಕೂಡಿವೆ.

ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ : ೧೮೨೫ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಈ ದೇವಾಲಯವು ಅರಮನೆಯ ಪಶ್ಚಿಮ ಮಹಾದ್ವಾರದ ಹತ್ತಿರವಿದೆ. ಒಂದು ದಾಖಲೆಯ ಪ್ರಕಾರ ಈ ದೇವಾಲಯವನ್ನು ಮಾಧ್ವ ಧರ್ಮ ಪ್ರಚಾರಕರಾದ ಸುಬ್ಬರಾಯದಾಸ ಎಂಬುವನು ಈ ದೇವಾಲಯ ಕಟ್ಟಿಸಿದನೆಂದು ತಿಳಿದುಬರುತ್ತದೆ. ಈತನ ಮೂರು ಅಡಿ ಎತ್ತರದ ವಿಗ್ರಹ ದೇವಾಲಯದಲ್ಲಿ ಕಂಡುಬರುತ್ತದೆ.

ಗಾಯತ್ರಿ ದೇವಾಲಯ ಮತ್ತು ಕಾಮ ಕಾಮೇಶ್ವರೀ ದೇವಸ್ಥಾನ : ಮೈಸೂರು ಅರಮನೆಯ ಕೋಟೆಯ ಜಯಮಾರ್ತಾಂಡ ಮಹಾದ್ವಾರದ ದಕ್ಷಿಣಕ್ಕಿದೆ. ಈ ದೇವಾಲಯ ರಚನೆಯಲ್ಲಿ ಚಿಕ್ಕದಾದರೂ ಬಹು ಸುಂದರವಾಗಿದೆ. ೧೯೫೩ರಲ್ಲಿ ಇದರ ಕೆಲಸ ಪೂರ್ಣಗೊಂಡಿತು ಎಂದು ಶಾಸನಾಧಾರಗಳಿಂದ ತಿಳಿಯಬಹುದು. ಸಂಸ್ಥಾನದ ಕೊನೆಯ ದೊರೆಯಾದ ಶ್ರೀ ಜಯಚಾಮರಾಜ ಒಡೆಯರ್ ರವರು ಕಟ್ಟಿಸಿದ ಮೂರು ದೇವಾಲಯಗಳಲ್ಲಿ ಗಾಯತ್ರಿದೇವಾಲಯ, ಶ್ರೀಭುವನೇಶ್ವರಿ ದೇವಾಲಯ ಹಾಗೂ ಹಳೇ ಅಗ್ರಹಾರದಲ್ಲಿ ಸಿದ್ದಲಿಂಗ ಸ್ವಾಮಿಗಳ ಮಠದ ಪಕ್ಕದಲ್ಲಿರುವ ಕಾಮೇಶ್ವರೀ ದೇವಸ್ಥಾನಗಳು ಪ್ರಸಿದ್ಧವಾದವು. ಈ ಮೂರು ದೇವಾಲಯಗಳೂ ಸಹ ಚಿಕ್ಕದಾದರೂ ಸುಂದರವಾಗಿವೆ.

ಚಾಮುಂಡೇಶ್ವರಿ ದೇವಾಲಯ : ಮೈಸೂರು ನಗರಕ್ಕೆ ಹಿಂಬದಿಯಲ್ಲಿ ಸೌಂದರ್ಯ ದೇವತೆಯಂತೆ ನಿಂತು ವೀಕ್ಷಕರ ಮನಸ್ಸನ್ನು ಸೂರೆಗೊಳ್ಳುತ್ತಿರುವ ಈ ಬೆಟ್ಟ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಸೂರ್ಯನ ಉಗಮ ಮತ್ತು ಅಸ್ಥಮಗಳೊಂದಿಗೆ ಬಹುಸುಂದರವಾಗಿ ಆಟವಾಡುತ್ತದೆ. ದೊಡ್ಡ ದೇವರಾಜ ಒಡೆಯರ್ ರವರು ಈ ಬೆಟ್ಟಕ್ಕೆ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿದರು. ಈಗ ಬಸ್ ಮಾರ್ಗದ ಡಾಂಬರ್ ರಸ್ತೆಯ ಸೌಕರ್ಯವಿದೆ. ದೇವಾಲಯವು ದ್ರಾವಿಡ ಶೈಲಿಯಲ್ಲಿ ಬೃಹದಾಕಾರವಾಗಿ ನಿರ್ಮಿತವಾಗಿದೆ. ಈ ದೇವತೆಯ ರಾಜಮನೆತನದವರ ಕುಲದೇವತೆ. ಇದನ್ನು ಪಾರ್ವತಿ, ದುರ್ಗಿ, ಕಾತ್ಯಾಯಿನಿ, ಚಾಮುಂಡಿ ಅವತಾರವೆಂದು ಜನ ನಂಬಿದ್ದಾರೆ. ದೇವಾಲಯದ ಒಳ ಭಾಗದಲ್ಲಿ ಸೊಗಸಾದ ಬಿಲ್ವಪತ್ರೆಯ ಮರವಿದೆ. ಹಿಂದೂ ಸಂಪ್ರದಾಯದಲ್ಲಿ ಈ ಬಿಲ್ವ ಪತ್ರೆ ಪೂಜೆಗೆ ಬಹಳ ಮಹತ್ವವಿದೆ. ಹೊಯ್ಸಳರ ದೊರೆ ವಿಷ್ಣುವರ್ಧನನು ೧೧೨೮ರಲ್ಲಿ ಹಾಗೂ ೧೬೨೦ರಲ್ಲಿ ವಿಜಯನಗರದ ಅರಸರು ಈ ದೇವಾಲಯದ ವೈಭವವನ್ನು ಹೆಚ್ಚಿಸಿದ್ದರು. ನೆಲದಿಂದ ಬೆಟ್ಟಕ್ಕೆ ಮೆಟ್ಟಿಲಿನ ಮೂಲಕ ಹತ್ತುತ್ತಾ ಹೋದರೆ ಸರಿಯಾಗಿ ೨೦೦ ಮೆಟ್ಟಿಲುಗಳನ್ನು ಹತ್ತಿದರೆ ಬೃಹತ್ ಏಕಶಿಲಾ ಬಸವಣ್ಣ ಗೋಚರಿಸುತ್ತದೆ. ಇದನ್ನು ದೊಡ್ಡ ದೇವರಾಜ ಒಡೆಯರ್ ನಿರ್ಮಿಸಿದ್ದನೆಂದು ತಿಳಿದುಬರುತ್ತದೆ. ಬೆಟ್ಟದ ಮೇಲೆ ದೇವೀ ಕೆರೆ ಸಿಗುತ್ತದೆ. ನವರಾತ್ರಿ ಹಬ್ಬದ ಸಮಯದಲ್ಲಿ ಇಲ್ಲಿ ವೈಭವದ ಚಾಮುಂಡೇಶ್ವರಿ ತೆಪ್ಪೋತ್ಸವ ನಡೆಯುತ್ತದೆ. ಈ ಸಮಯದಲ್ಲಿ ಸಾವಿರ ದೀಪಗಳನ್ನು ಕೆರೆಗೆ ಅರ್ಪಿಸುವುದರಿಂದ ಇದು ಸಾವಿರ ದೀಪಗಳ ಸರೋವರವೆಂದು ಪ್ರಸಿದ್ದಿಯಾಗಿದೆ.

ಹಬ್ಬ ಮತ್ತು ಉತ್ಸವಗಳು

ಮೈಸೂರು ಸಂಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಹರಿದಿನಗಳ ಹಿನ್ನೆಲೆಯಲ್ಲಿ ಜರುಗುತ್ತಿದ್ದ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಸಂಪ್ರದಾಯಗಳನ್ನು ಅವಲೋಕಿಸಿದಾಗ, ಅಲ್ಲಿನ ಸಾಮಾನ್ಯ ಜನತೆಯ ಧಾರ್ಮಿಕ ಸಂಸ್ಕೃತಿಯು ವಿಶಾಲವಾಗಿ ಹರಡಿಕೊಳ್ಳುತ್ತದೆ. ಪ್ರಮುಖವಾಗಿ ದೀಪಾವಳಿ ನಾಡಿದ ಪ್ರಮುಖ ನಾಡಹಬ್ಬಗಳಲ್ಲಿ ಒಂದಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಿಶಿಷ್ಟವಾದ ಪರಿಣಾಮ ಬೀರುತ್ತಿತ್ತು. ಅದು ಎತ್ತುಗಳ ಓಡದ ಸ್ಪರ್ಧೆಯಿಂದಾಗಲಿ, ಭಾರವಾದ ಕಲ್ಲಿನ ಗುಂಡುಗಳನ್ನು ಎತ್ತುವ ಸ್ಪರ್ಧೆಯಾಗಲಿ, ಬಣ್ಣದ ನೀರಿನ ಕೊಳದಲ್ಲಿ ಬಿದ್ದು ಅಥವಾ ಬಣ್ಣದ ನೀರನ್ನು ಎರಚಾಡುವ ಓಕುಳಿ ಆಟವಾಗಲಿ, ಇತ್ತೀಚೆಗೆ ನಿಂತುಹೋಗಿರುವ ಅತಿ ಉದ್ದನೆಯ ಅಡಕೆ ಮಗಳ ತುದಿಯಲ್ಲಿ ನೇತಾಡುತ್ತ ಶೂಲ – ಬಲಿಯಾಗುವ ರೋಮಾಂಚಕ ಜನಪದೀಯ ಕಲೆಗಳು ಪ್ರದರ್ಶನಗೊಳ್ಳುತ್ತಿದ್ದವು. ಕೆಲವು ಗ್ರಾಮಗಳಲ್ಲಿ ಗ್ರಾಮ ದೇವತೆಯ ಹಬ್ಬದ ಸಮಯದಲ್ಲಿ ಓಕುಳಿಯಾಟ, ರಂಗದ ಕುಣಿತ, ಕೋಲಾಟವನ್ನು ಹಾಗೂ ಕುಸ್ತಿ, ದೊಣ್ಣೆವರೆಸೆ ನಡೆಸುವುದು ಸರ್ವೇಸಾಮಾನ್ಯವಾಗಿತ್ತು. ಇವೆಲ್ಲವೂ ಸಾಮಾನ್ಯವಾಗಿ ಮಾತೃದೇವತೆಗಳ ಹೆಸರಿನಲ್ಲಿ ನಡೆಯುತ್ತವೆ. ಗಂಡು ದೇವರುಗಳಾದರೆ ಬೀರೇಶ್ವರ, ಶಿವ ಮುಂತಾದ ಶೈವ ಗಂಡು ದೇವರ ಜಾತ್ರೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಭಕ್ತರು ಹೆಚ್ಚಾಗಿ ದೇವರಿಗೆ ಹರಕೆ ಹೊತ್ತುಕೊಂಡು ಕೊಂಡಬಂಡಿ, ಸಿಡಿ, ಮಡೆ, ನಡೆಮುಡಿ, ಕಳಸ ಸೇವೆ, ಕರಗ ಸೇವೆ, ಬಾಯಿಬೀಗಸೇವೆ, ಪಂಜಿನಸೇವೆ ದೇವರ ಮರೆತ, ದೇವರಿಗೆ ಹೊಸ ಬಟ್ಟೆಗಳ ಅರ್ಪಿಸುವಿಕೆ ಇತ್ಯಾದಿ ಸಂಪ್ರದಾಯಗಳು ಹಾಗೂ ತಮಟೆ, ನಗಾರಿ, ಯಬ್ರಗಳ ಜನಪದೀಯ ವಾದ್ಯ ವಿಶೇಷಗಳೊಂದಿಗೆ ಸಾಗಿ ಹಬ್ಬ ಮುಗಿಸುತ್ತಿದ್ದರು. ಇದು ಇಂದಿಗೂ ಕೆಲವು ಬದಲಾವಣೆಗಳೊಂದಿಗೆ ನಡೆದುಕೊಂಡು ಬರುತ್ತಿದೆ. ಏಕೆಂದರೆ ವರ್ತಮಾನ ಎಂದಿಗೂ ಭೂತದ ಬುತ್ತಿಯನ್ನು ಹೊತ್ತುಕೊಂಡು ಬಂದಿರುತ್ತದೆ. ಹಾಗೆಯೇ ವರ್ತಮಾನ ಮುಂದಿನ ಭವಿಷ್ಯಕ್ಕೆ ಇದನ್ನು ಕೊಂಡೊಯ್ಯುತ್ತದೆ.

ಗ್ರಾಮದೇವತೆಯ ಹಬ್ಬಗಳು ರೈತರ ಹಬ್ಬಗಳಾಗಿದ್ದರಿಂದ ರೈತರಿಗೆ ಬಿಡುವು ಎನ್ನುವ ದೊರೆಯುವ ಕಾಲದಲ್ಲಿಯೇ ಹೆಚ್ಚಾಗಿ ನಡೆಯುತ್ತವೆ. ರೈತರಿಗೆ ಅನುಕೂಲವಾಗುವ ಸಲುವಾಗಿ ದನಗಳ ಜಾತ್ರೆಯೂ ಬೇಸಿಗೆಯ ಕಾಲದಲ್ಲಿಯೇ ನಡೆಯುತ್ತಿದ್ದವು. ಇವು ಅದೇ ರೀತಿಯಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿರುವುದು ಕಂಡುಬರುತ್ತದೆ. ಸಂಸ್ಥಾನದಲ್ಲಿ ಹೇಮಗಿರಿ. ಮದ್ದೂರು, ಅಂಕಲಹಳ್ಳಿ ಚುಂಚನಕಟ್ಟೆ. ಮುಡುಕು ತೋರೆ, ಟಿ. ನರಸೀಪುರ, ಬನ್ನೂರು ದನಗಳ ಜಾತ್ರೆ ಪ್ರಖ್ಯಾತವಾಗಿತ್ತು. ಸ್ಥಳೀಯರು ಆಯಾ ಗ್ರಾಮದೇವತೆಗಳ ಅಥವಾ ದೇವರುಗಳ ಮೇಲೆ ಹಾಡುವ ಕನಪದ ಹಾಡುಗಳೂ ಮನಮೋಹಕವಾಗಿ ಮೂಡಿಬಂದು ನಮ್ಮ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಿವೆ.

ಗ್ರಾಮೀಣ ಧಾರ್ಮಿಕ ಸಂಸ್ಕೃತಿಯು ಅಲ್ಲಿನ ಜನರ ಕಲೆ, ವೇಷ – ಭೂಷಣ, ಅವರ ವೈಯ್ಯಾರ ಹಾಗೂ ಜನಪದರ ರಸಿಕತೆಯ ಬದುಕಿನ ಕನ್ನಡಿಯಂತಿರುತ್ತವೆ. ಶೈವ ಸಂಪ್ರದಾಯದ ಜನಪದ ಗಂಡುಕಲೆ ಎನಿಸಿಕೊಂಡಿರುವ ನಂದೀಧ್ವಜಕುಣಿತ, ವೀರಭದ್ರನ ಕುಣಿತಗಳು ಹೆಚ್ಚಾಗಿ ಸಂಸ್ಥಾನದಲ್ಲಿ ಕಂಡುಬರುತ್ತಿತ್ತು. ಗ್ರಾಮೀಣ ಪ್ರದೇಶದಲ್ಲಿ ದಲಿತ ವರ್ಗದವರ ಆರಾಧ್ಯ ದೈವವಾಗಿರುವ “ಮಾರಮ್ಮದೇವಿಗೆ” ಹಬ್ಬ ಏರ್ಪಡಿಸಿ ಅದಕ್ಕೆ ಇಷ್ಟವಾದ ಮಾಂಸಹಾರ ಭೋಜನವನ್ನು ಅರ್ಪಿಸಿ ಕುಣಿದು ಕುಪ್ಪಳಿಸುವುದು ಕಂಡುಬರುತ್ತದೆ. ಇದನ್ನು ‘ಮಾರಿಕುಣಿತ’ ಎಂದು ಕರೆಯುತ್ತಾರೆ. ಮಾರಿ ದೇವತೆಗೆ ಶಾಂತಿಗೈಯ್ಯವುದೇ ಈ ಕುಣಿತದ ಉದ್ದೇಶ. ತಲೆಗೆ ತೆಂಗಿನಕಾಯಿ ಹೊಡೆದುಕೊಳ್ಳುವುದು. ಕತ್ತಿಯಿಂದ ಮೈಯನ್ನು ಕುಯಿದುಕೊಳ್ಳುವುದು, ಚಾವುಟಿಯಿಂದ ಹೊಡೆದುಕೊಳ್ಳುವುದು, ಬೆಂಕಿಯನ್ನು ತುಳಿದುಕೊಂಡು ನಡೆಯುವುದು ಮುಂತಾದ ಅನಿಷ್ಟ ಪದ್ಧತಿಗಳನ್ನು ಹಾಗೂ ಕೆಲ ಪವಾಡಗಳನ್ನು ಮಾರಮ್ಮನ ಭಕ್ತರು ನಡೆಸುತ್ತಾರೆ. ಗ್ರಾಮೀಣ ಪ್ರದೇಶದ ದಲಿತ ಜನರು ಹೆಚ್ಚಾಗಿ ದೀಪಾವಳಿ ಹಬ್ಬಕ್ಕೆ ಕಜ್ಜಾಯವನ್ನು ಮಾಡುತ್ತಾರೆ. ಗೌರಿ ಹಬ್ಬಕ್ಕೆ ಎಳ್ಳು – ಸೂಸಲು, ಸಿಹಿ ಉಂಡೆಗಳನ್ನು ಮಾಡುತ್ತಾರೆ. ಯುಗಾದಿ ಹಬ್ಬಕ್ಕೆ ಇಡ್ಲಿ ಮಾಡುತ್ತಾರೆ. ಸಂಕ್ರಾಂತಿ ಹಬ್ಬಕ್ಕೆ ಪೊಂಗಲ್ ಅನ್ನಮಾಡಿ ದೇವರಿಗೆ ಅರ್ಪಿಸಿ ನಂತರ ತಾವು ಸೇವಿಸುತ್ತಾರೆ. ಇವು ಈಗಲೂ ಚಾಚುತಪ್ಪದೆ ನಡೆದುಕೊಂಡು ಬರುತ್ತಿದೆ. ಆದರೆ ಇಂದಿನ ಆಧುನೀಕರಣದಿಂದಾಗಿ ಸ್ವಲ್ಪ ನಶಿಸುತ್ತಿರುವುದೂ ಕಂಡುಬರುತ್ತದೆ.

ಹೊಸವರ್ಷದ ಹೊಸ ಋತುವಿನ ಹಸಿರಿನ ಹಬ್ಬವೇ ಯುಗಾದಿ. ಈ ಹಬ್ಬವನ್ನು ಸಂಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಈ ಹಬ್ಬದ ದಿನ ಉತ್ತಮ ಫಸಲನ್ನು ಬೆಳೆದ ರೈತರಿಗೆ ಬಹುಮಾನವನ್ನು ರಾಜರು ನೀಡುತ್ತಿದ್ದರು. ಸಂಸ್ಥಾನದ ಜೀವನದಿಯಾಗಿದ್ದ ಕಾವೇರಿ ನದಿ ತನ್ನ ಮಡಿಲಲ್ಲಿ ನಿರ್ಮಿಸಿಕೊಂಡಿರುವ ಪವಿತ್ರ ಸ್ಥಳಗಳಲ್ಲಿ ಭಕ್ತಿ ಭಾವದಿಂದ ಜನರನ್ನು ಬರಮಾಡಿಕೊಂಡು ಅವರಿಂದ ನದಿಯಲ್ಲಿ ಪವಿತ್ರ ಸ್ನಾನ ಮಾಡಿಸಿ ಉಗಾದಿ ಹಬ್ಬವನ್ನು ಅಚರಿಸುವಂತೆ ವ್ಯವಸ್ಥೆ ಮಡಲಾಗಿತ್ತು. ಉದಾಹರಣೆ : ಶ್ರೀರಂಗಪಟ್ಟಣದ ಬಳಿಯಿರುವ ಬೋರೇದೇವರ ಗುಡಿಯ ಸನ್ನಿಧಿ ಹಾಗೂ ತ್ರಿವೇಣಿ ಸಂಗಮ [ಕಾವೇರಿ, ಕಪಿಲೆ, ಸ್ಪಟಿಕಸರೋವರ (ಗುಪ್ತಗಾಮಿನಿ)] ಎನಿಸಿಕೊಂಡಿರುವ ತಿರುಮಕೊಡಲು ನರಸೀಪುರ ಗುಂಜುನರಸಿಂಹ ಸ್ವಾಮಿ ದೇವರ ಸನ್ನಿಧಿಯಲ್ಲಿ ಯುಗಾದಿಯ ದಿನ ಪವಿತ್ರ ಸ್ನಾನ ವೈಭವ ಪೂರಕವಾಗಿ ಇಂದಿಗೂ ನಡೆಯುತ್ತಿದೆ. ಈ ಸ್ಥಳಗಳಿಗೆ ಸಮೀಪದ ಹತ್ತು ಹದಿನೈದು ಪ್ರದೇಶಗಳಿಂದಲೂ ಜನರು ಬಂದು ಅವರು ಶತಶತಮಾನಗಳಿಂದಲೂ ಹೊತ್ತು ತಂದಿದ್ದ ಜನಪದ ಕಲೆಗಳನ್ನು ಪ್ರದರ್ಶಿಸಿ ಮೆರಗು ನೀಡುತ್ತಾರೆ. ಸಂತೋಷ ಸಂಭ್ರಮದಿಂದ ಜನರು ನದಿಯಲ್ಲಿ ಸ್ನಾನಮಾಡಿ ತಾವುಗಳು ಹೊತ್ತುತಂದ ತಮ್ಮ ತಮ್ಮ ದೇವರ ಸಾಮಾಗ್ರಿಗಳನ್ನು ಶುಚಿಗೊಳಿಸಿ ಗಂಗಾಪೂಜೆ ನಡೆಸಿ ಪೂರ್ವದಿಕ್ಕಿಗೆ ನಮಸ್ಕರಿಸಿ ತಮ್ಮ ಮುಂದಿನ ಕಾರ್ಯದಲ್ಲಿ ತೊಡಗುತ್ತಾರೆ. ದೇವಾಲಯದ ನಂದಿಕಂಬ, ಪಟದ ಕುಣಿತ, ಭಾಗವಂತಿಕೆ, ಹುಲಿವಾಹನಗಳು ಸಿದ್ಧವಾಗಿ ಉತ್ಸವಕ್ಕೆ ಸಿದ್ಧವಾಗಿರುತ್ತದೆ. ವೀರಭದ್ರಕುಣಿತ, ವೀರ ಮಕ್ಕಳ ಕುಣಿತ, ಸೀಮನ ಕುಣಿತ, ಕೋಲಾಟ, ಪೂಜಾ ಕುಣಿತಗಳು ಪ್ರಾರಂಭವಾಗುತ್ತವೆ. ಕೊಂಬು ಕಹಳೆಗಳು ಮೊಳಗುತ್ತವೆ. ತಮಟೆ, ನಗಾರಿ, ಚಕ್ರಾದಿ ಬಳೆಗಳ ಜನಪದ ವಾದ್ಯಗಳು ನಾದ ಹೊಮ್ಮಿಸುತ್ತವೆ. ದಾಸಯ್ಯನವರು, ಜೋಗಯ್ಯನವರು, ತಂಬೂರಿಯವರು, ದೊಂಬಿದಾಸರು, ನೀಲಗಾರರು, ಪಂಡರೀಭಜನೆಯವರು, ಹುಲಿವೇಷದವರು, ಬುಡಬುಡಕೆಯವರು, ಭಜನೆಯವರು, ಮರಗಾಲು ವೇಷದವರು, ರಂಗದ ಕುಣಿತದವರು, ಕರಗದವರು, ಕಂಸಾಳೆಯವರು, ಒನಕೆ ಕುಣಿತದವರು ಇತ್ಯಾದಿ ಜನಪದ ಕಲೆಗಾರರು ಹರ್ಷದ ಹೊನಲನ್ನು ಭಕ್ತಿ ಪೂರ್ವಕವಾಗಿ ಸುಂದರ ಪ್ರಕೃತಿಯ ಮಡಿಲಿನಲ್ಲಿ ತಮ್ಮನ್ನು ತಾವೇ ಕಲಾಸೇವೆಯಲ್ಲಿ ಸಮರ್ಪಿಸಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಇದು ಜನಪಾತ್ರೆಯಂತೆ ಕಂಗೊಳಿಸುತ್ತದೆ. ನಂತರ ಕೀರುಬೇವು – ಬೆಲ್ಲವನ್ನು ತಿಂದು ದೇವಸ್ಥಾನದಲ್ಲಿ ತೀರ್ಥ ಪ್ರಸಾದವನ್ನು ತೆಗೆದುಕೊಂಡು ತಮ್ಮ ತಮ್ಮ ಸ್ಥಳದ ಕಡೆಗೆ ನಿರ್ಗಮಿಸತೊಡಗುತ್ತಾರೆ. ಹೋಗುವಾಗ ರಸ್ತೆಯಲ್ಲಿ ತಮ್ಮ ಕಲೆಯನ್ನು (ದೇವರುಗಳನ್ನು) ಹೊತ್ತು ಹೋಗುವಾಗಿನ ನೋಟ ನೋಡುಗರಿಗೆ ಮನಮೋಹಕವಾಗಿರುತ್ತದೆ. ಇದರಿಗಾಗಿ ದಾರಿಯ ಇಕ್ಕೆಕಗಳಲ್ಲಿ ಗ್ರಾಮಸ್ಥರು ಅರವಟ್ಟಿಗೆಗಳನ್ನು ತೆರೆದು ಪಾನಕ, ಮಜ್ಜಿಗೆ, ಮುಂತಾದ ಪಾನೀಯಗಳ ಸೌಲಭ್ಯವನ್ನು ಒದಗಿಸಿಕೊಡುವ ಸಂಸ್ಖರತಿ ಅನನ್ಯವಾದುದು. ಒಟ್ಟಾರೆ ಹೇಳುವುದಾದರೆ ದೈವ ಸ್ವರೂಪದಲ್ಲಿ ಪ್ರಕೃತಿಯ ಆರಾಧನೆ ನಡೆಯುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇವುಗಳೆಲ್ಲವೂ ಸಂಸ್ಥಾನ ಸಂಸ್ಕೃತಿಯ ಪ್ರತಿಬಿಂಬಗಳಂತಿವೆ.