ದೇಶದಲ್ಲೆಲ್ಲ ಇದ್ದಂತೆ ಮೈಸೂರು ಸಂಸ್ಥಾನದಲ್ಲಿಯೂ ವಿವಿಧ ಧಾರ್ಮಿಕ, ಸಾಮಾಜಿಕ, ವೃತ್ತಿ ಸಂಬಂಧಿ, ಭಾಷಿಕ ಸಂಬಂಧಿ, ಬುಡಕಟ್ಟು ಹಾಗೂ ಮೇಲು ಕೀಳೆಂಬ ಜಾತಿಯ ಗುಂಪುಗಳು ಇದ್ದವು. ಪ್ರಾರಂಭದಲ್ಲಿ ಹೆಚ್ಚಾಗಿ ವರ್ಣಾಶ್ರಮ ಪದ್ಧತಿಯು ಆಚರಣೆಯಲ್ಲಿದ್ದಿದ್ದು ಕಂಡುಬಂದಿದೆ. ನಂತರದಲ್ಲಿ ಅದರ ಬಿಗಿಯಲ್ಲಿ ಸ್ವಲ್ಪ ಸಡಿಲಿಕೆ ಕಂಡುಬರುವ ಹಾಗೆ ಸಂಸ್ಥಾನದಲ್ಲಿ ಸಮಾಜ ಬದಲಾವಣೆಯಾಗತೊಡಗಿತ್ತೆಂದು ಹೇಳಬಹುದು. ಜಾತಿ ಪದ್ಧತಿಯು ಇಂದಿನ ಹಾಗೆಯೇ ಅಂದೂ ಸಹ ಸರ್ವೇ ಸಾಮಾನ್ಯವಾಗಿದ್ದಿತು. ಮೇಲು ಜಾತಿಯವರು ಕೀಳು ಜಾತಿಯವರನ್ನು ಹೀನಾಯವಾದ ಸ್ಥಿತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಜಾತಿಗಳು ಅವರು ಕೈಗೊಂಡಿದ್ದ ಕಸುಬಿನ ಆಧಾರದ ಮೇಲೆ ಸೃಷ್ಟಿಯಾದವೆಂದು ಕಂಡುಬರುತ್ತದೆ. ಸಂಸ್ಥಾನದಲ್ಲಿ ಇದ್ದ ಸಾಮಾಜಿಕ ರಚನೆಯನ್ನು ಈ ಕೆಳಕಂಡಂತೆ ವಿಶ್ಲೇಷಿಸಬಹುದು.

ಸಮಾಜದಲ್ಲಿ ಬ್ರಾಹ್ಮಣರು ಉನ್ನತ ಸ್ಥಾನದಲ್ಲಿದ್ದರು. ಇವರು ಬಹುತೇಕವಾಗಿ ಪೌರೋಹಿತ್ಯ ಮತ್ತು ಶಾಸ್ತ್ರೀಯ ಪಾಂಡಿತ್ಯಗಳಲ್ಲಿ ತೊಡಗಿರುತ್ತಿದ್ದವರಾಗಿ. ಅರಸನಂತೆಯೇ ಶ್ರೀಮಂತನಾದವನೊಬ್ಬನು ದಾನರೂಪದಲ್ಲಿ ಸ್ಥಾಪಿಸುವ ಅಗ್ರಹಾರಗಳಲ್ಲಿ ಅವರು ವಾಸಿಸುತ್ತಿದ್ದರು. ಇವರು ತಮ್ಮ ಸಂಪ್ರದಾಯದಲ್ಲಿಯೇ ಷಟ್ ಕರ್ಮ ನಿರತರಾಗಿರಬೇಕೆಂದು ಬಯಸುತ್ತಿದ್ದರು. ಯಜ್ಞ (ಪುರೋಹಿತನಾಗಿ ಯಜ್ಞ ಮಾಡಿಸುವುದು), ಯಾಜನ (ಯಜ್ಞ ಕರ್ಮಗಳ ಪ್ರೇರೇಪಣೆ ಮಾಡುವುದು) ಅಧ್ಯಯನ (ಶಾಸ್ತ್ರ ಪಾಂಡಿತ್ಯ ಪಡೆಯಲು ಅಭ್ಯಾಸ ಮಾಡುವುದು) ಅಧ್ಯಾಪನ (ಇತರರಿಗೆ ಬೋಧಿಸುವುದು ಶಿಕ್ಷಕನಾಗುವುದು) ದನ (ಕೊಡುವುದು ಮತ್ತು ದಾನ ಸ್ವೀಕರಿಸುವುದು) ಮೇಲಿನವು ಅವರ ಆರು ನಿಯಮಗಳಾಗಿದ್ದವು. ಚಾಚೂತಪ್ಪದೆ ಅವುಗಳನ್ನು ಅವರದೇ ಆದ ಸಾಮಾಜಿಕ ಕಟ್ಟುಪಾಡುಗಳಿಂದ ನಡೆಸಿಕೊಂಡು ಬರುತ್ತಿದ್ದರು. ಇವರನ್ನು ರಾಜ ಮಹಾರಾಜರುಗಳು ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಬ್ರಾಹ್ಮಣರು ಸಂಸ್ಥಾನದಲ್ಲಿ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಬ್ರಾಹ್ಮಣರು ಸಂಸ್ಥಾನದಲ್ಲಿ ಸುಖಿಗಳಾಗಿದ್ದರೆನ್ನಬಹುದು. ಬ್ರಾಹ್ಮಣರಲ್ಲಿ ಇಂದು ಇರುವ ಹಾಗೆಯೇ ಅಂದು ಸಹ ಮುಖ್ಯವಾಗಿ ಮೂರು ವಿಭಾಗಗಳಿದ್ದವು. ಅವುಗಳೆಂದರೆ ೧. ಶ್ರೀ ಶಂಕರರ ಅದ್ವೈತ ತತ್ವ ಅನುಸರಿಸಿದ ಸ್ಮಾರ್ತರು, ೨. ಮಧ್ವಾಚಾರ್ಯರ ದ್ವೈತ ತತ್ವ ಅನುಸರಿಸಿದ ವೈಷ್ಣವರು ಹಾಗೂ ೩.ರಾಮಾನುಜರ ಅನುಯಾಯಿಗಳಾದ ಶ್ರೀ ವೈಷ್ಣವರು. ಈ ಪ್ರತಿಯೊಂದು ವಿಭಾಗದಲ್ಲಿಯೂ ಮತ್ತೆ ಹಲವಾರು ಉಪ ಪಂಗಡಗಳು ಸ್ವಷ್ಟವಾಗಿ ಜಾತಿಜಾತಿಗಳಲ್ಲಿ ವೈಷಮ್ಯದ ಮನೋಭಾವನೆ ಮೂಡಿಸುತ್ತಿವೆ.

ಮೈಸೂರು ಸಂಸ್ಥಾನದ ಮೂಲ ಪುರುಷರು ಯದು ವಂಶಸ್ಥರಾಗಿದ್ದರೂ ರಾಜ್ಯವನ್ನು ಕಟ್ಟಿ, ಬೆಳೆಸಿ ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಲು ತೊಡಗಿದ ಮೇಲೆ ಕ್ಷತ್ರಿಯರಾಗಿ ಪರಿವರ್ತನೆಗೊಂಡರು. ಏಕೆಂದರೆ ಯಾವುದೇ ರಾಜಮನೆತನದ ಪ್ರಾರಂಭಿಕ ದೊರೆಗಳು ಕೃಷಿಕರೂ ಅಥವಾ ಪಶುಪಾಲಕರೂ ಆಗಿರುವುದು ಕಂಡುಬರುತ್ತದೆ. ಕ್ಷತ್ರಿಯರು ದೇಶದ ಪ್ರಜೆಗಳ ರಕ್ಷಣೆಯ ಜವಾಬ್ದಾರಿಯನ್ನು ಸಂಪೂರ್ಣವಾಗಿ ವಹಿಸಿಕೊಂಡು ವೈಭವದ ಜೀವನ ನಡೆಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರು.

ಸಂಸ್ಥಾನದಲ್ಲಿ ವ್ಯಾಪಾರೋದ್ಯಮದಲ್ಲಿ ತೊಡಗಿದ್ದ ಜನಸಮುದಾಯವನ್ನೆಲ್ಲ ಮೂರನೆಯ ವರ್ಣವಾಗಿರುವ ವೈಶ್ಯರ ಗುಂಪಿಗೆ ಸೇರಿಸಲಾಗಿತ್ತು. ಈ ಮೂರನೆಯ ಗುಂಪಿನಲ್ಲಿಯೂ ಇದೇ ಕಸುಬನ್ನು ನಡೆಸುತ್ತಿದ್ದ ಬಣಜಿಗ, ಬಲಿಜ ಅಥವಾ ಬಲಂಜು ಎಂದು ಕರೆಸಿಕೊಳ್ಳುತ್ತಿದ್ದ ಉಪಜಾತಿಗಳೂ ಇದ್ದವು. ಇವರ ಬಗ್ಗೆ ಮಾಹಿತಿಗಾಗಿ ಅನೇಕ ಶಾಸನಗಳು, ಸಾಹಿತ್ಯಾಧಾರಗಳು ಲಭ್ಯವಿವೆ. ಬಣಜಿಗರೆಲ್ಲರೂ ವೈದಿಕ ಸಂಪ್ರದಾಯ ದವರಾಗಿರಲಿಲ್ಲ. ಜೈನ ಬಣಜಿಗರು, ವೀರಶೈವ ಬಳಜಿಗರುಗಳೂ ಇದ್ದರು. ಇಂದಿಗೂ ಇದ್ದಾರೆ.

ಭೂಮಿಯನ್ನು ಉತ್ತಿಬಿತ್ತಿ ಬೆಳೆ ತೆಗೆಯಲು ಸೃಷ್ಟಿಯಾದವನೇ ಶೂದ್ರ. ಆದರೆ ಹೀಗೆ ಹೇಳಿರುವುದು ಕಂಡುಬಂದರೂ ನಂತರದಲ್ಲಿ ಈ ಕಾಯಕವನ್ನು ಕೈಗೊಂಡವರನ್ನು ಒಕ್ಕಲಿಗರು ಎಂದು ಗುರ್ತಿಸಿರುವುದು ಸಂಸ್ಥಾನದ ಸಾಮಾಜಿಕ ರಚನೆಯಲ್ಲಿ ಕಂಡು ಬರುತ್ತದೆ. ಜೀವನದ ಉಳಿವಿಗಾಗಿ ಕೈಗೊಂಡ ಕೆಲಸದ ಆಧಾರದ ಮೇಲೆ ಸೃಷ್ಟಿಸಿಕೊಂಡ ಜಾತಿಗಳು ಈ ರೀತಿ ಇದ್ದವು. ಪಾಂಚಾಲರು (ಕಮ್ಯಾರರು, ಬಡಗಿಗಳು, ಶಿಲ್ಪಿಗಳು), ಅಗಸ (ಬಟ್ಟೆ ಒಗೆಯುವವನು), (ನಾಯಿಂದ ಹಜಾಮ) ಜೇಡ ಅಥವಾ ದೇವಾ (ನೇಯ್ಗೆಯವನು), ಚಿಪ್ಪಿಗ (ಬಟ್ಟೆ ಹೊಳಿಯುವವನು) ತೆಲ್ಲಿಬ (ಎಣ್ಣೆ ಮಾಡುವವ ಗಾಣಿಗ), ಕುಂಬಾರ (ಮಡಿಕೆ ಮಾಡುವವನು) ಮೋಚಿ (ಪಾದರಕ್ಷೆ ಮಾಡುವವನು ಚಮ್ಮಾರ) ಮೇದ (ಬುಟ್ಟಿ ಹೆಣೆಯುವವನು) ಗೊಲ್ಲ (ದನ ಕಾಯುವವನು), ತಂಬುಳಿಗ (ವೀಳ್ಯೆದೆಲೆ ವ್ಯಾಪಾರ ಮಾಡುವವನು) ಡೊಂಬ (ದೊಂಬರಾಟ ಆಡುವವನು) ಉಪ್ಪಾರ (ಕಲ್ಲು ಕುಟ್ಟಿಗ) ಕೊನೆಯಿಂದಾಗಿ ಹೊಲೆಯ – ಮಾದಿಗರು ಈ ಎಲ್ಲ ಜಾತಿಯವರ ಜೀವನ, ಬದುಕು, ಸಂಪ್ರದಾಯಗಳನ್ನು ತಿಳಿಯಲು ಹೆಚ್ಚಾಗಿ ಅಂದಿನ ಕಾಲದ ಸಾಹಿತ್ಯಾಧಾರಗಳು ಹಾಗೂ ಮೌಖಿಕವಾಗಿ ಇಂದಿಗೂ ಬೆಳೆದು ಬಂದಿರುವ ಗಾದೆ ಮಾತುಗಳೇ ಮೂಲ ಆಧಾರವಾಗಿವೆ. ಜಾತಿ ಜಾತಿಗಳಲ್ಲಿಯೇ ಕೆಲವುಗಳು ಶ್ರೇಷ್ಟ ಎಂದು ಹೋರಾಟ ಮಾಡಿಕೊಂಡು ಬಂದಿರುವುದು. ಬರುತ್ತಿರುವುದು ಸಾಮಾನ್ಯವಾಗಿ ಮೈಸೂರು ಸಂಸ್ಥಾನದಲ್ಲಿಯೇ ಅಲ್ಲದೆ ಪ್ರಾಚೀನ ಕಾಲದಿಂದ ಪ್ರಾರಂಭವಾಗಿ ಇಂದಿನವರೆಗೂ ರಕ್ತಗತವಾಗಿ ಬೆಳೆದುಬರುತ್ತಿದೆ. ಸಮಾಜದಲ್ಲಿ ಅಸ್ಪೃಶ್ಯತೆಯು ಯಥೇಚ್ಛವಾಗಿ ರೂಢಿಯಲೊಲಿದ್ದಿತ್ತು. ಮೈಸೂರು ಸಂಸ್ಥಾನದಲ್ಲಿ ದೊರೆತಿರುವ ಅನೇಕ ಶಾಸನಗಳಲ್ಲಿ ಹೊಲೆಗೇರಿಯೂ ಊರಿನ ಹೊರಗೆ ಇತ್ತೆಂಬ ವಿಚಾರವನ್ನು ತಿಳಿಸುತ್ತವೆ. ಈ ಆಧಾರದಿಂದಲೇ ಅಂದಿನ ಅಸ್ಪೃಶ್ಯತೆಯ ಮಟ್ಟವನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಮೈಸೂರು ಸಂಸ್ಥಾನದಲ್ಲಿ ಸಾಮಾಜಿಕ ರಚನೆಯು ತನ್ನದೆ ಆದ ಸಾಂಸ್ಕೃತಿಕ ಬದುಕನ್ನು ಅವಲಂಬಿಸಿಕೊಂಡು ರಚನೆಯಾಗಿತ್ತು. ಸಂಸ್ಥಾನದಲ್ಲಿದ್ದ (ಇಂದಿಗೂ ಅದೇ ರೀತಿಯ ಸಾಮಾಜಿಕ ರಚನೆ ಇರುತ್ತದೆ) ಕೆಲವು ಪ್ರಮುಖ ಧಾರ್ಮಿಕ ಸಮೂಹಗಳ, ಜಾತಿಗಳ ಮತ್ತೆ ಸಮುದಾಯಗಳ ಉದ್ಯೋಗ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ತಿಳಿಯಬಹುದು.

ಹೊಲೆಯ ಮಾದಿಗರು : ಇವರು ಸಂಸ್ಥಾನದ ಎಲ್ಲೆಡೆಗಳಲ್ಲಿಯೂ ಕಂಡುಬರುತ್ತಿದ್ದರು. ಇವರು ಹೆಚ್ಚಾಗಿ ಚರ್ಮದ ಕೆಲಸವನ್ನು ಮಾಡುತ್ತಿದ್ದರು. ಹಾಗೆಯೇ ಜೀವನೋಪಾಯಕ್ಕಾಗಿ ಕೃಷಿ ಕೂಲಿಕಾರರಾಗಿ, ಬೇಸಾಯಗಾರರಾಗಿ, ಜೀತಗಾರರಾಗಿ ಸಣ್ಣ ಪುಟ್ಟ ಕೈಕೆಲಗಾರರ ಹಾಗೆ ಜೀವನ ಸಾಗಿಸುತ್ತಿದ್ದರು. ಗ್ರಾಮಗಳಲ್ಲಿ ನಗರಗಳಲ್ಲಿ ಸತ್ತ ಜಾನುವಾರುಗಳನ್ನು ತೆಗೆಯುವ, ಕೊಳಕನ್ನು ತೆಗೆಯುವ ಕೆಲಸ ಇವರಿಗೆ ಮೀಸಲಾಗಿದ್ದಿತ್ತು. ಸಂಸ್ಥಾನದಲ್ಲಿ ಪ್ರತಿಯೊಂದು ಹಳ್ಳಿಯಲ್ಲಿಯೂ ಇವರೇ ಓಲೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಾಮಾಜಿಕ ಸ್ಥಾನಮಾನ, ಬದುಕು ಬವಣೆ ಇಲ್ಲಿ ಚರ್ಚಿಸ ಬಯಸುವುದಿಲ್ಲ.

ಅಗಸ : ಅಗಸರು ಸಂಸ್ಥಾನದಲ್ಲಿ ಮಡಿವಾಳರು, ಸಾಕಲವಾಡರು, ರಜಕರು, ದೋಬಿಯವರುಗಳೆಂದು ಹಲವಾರು ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದರು. ಬಟ್ಟೆ ತೊಳೆಯುವುದು ಅವರ ವಂಶಪಾರಂಪಾರ್ಯವಾದ ವೃತ್ತಿ, ಕೆಲವರು ಕೃಷಿಕರಾಗಿ ಮುಂದುವರಿದುಕೊಂಡು ಬರುತ್ತಿದ್ದರು. ಮೈಸೂರು ಸಂಸ್ಥಾನದ ಅಗಸರು ಪ್ರಮುಖವಾಗಿ ಗೌರಿಹಬ್ಬದಲ್ಲಿ ಭೂಮದೇವರನ್ನು ವಿಶೇಷವಾಗಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ. ನಂತರ “ಉಬ್ಬೆ ಪೂಜೆ” ಮಾಡುತ್ತಾರೆ. (ಉಬ್ಬೆ ಎಂದರೆ ಅವರ ಸಂಪ್ರದಾಯದಲ್ಲಿ ಬಟ್ಟೆಗಳನ್ನು ಬಿಸಿನೀರಿನಲ್ಲಿ ಕುದಿಸುವುದು) ಇವರಲ್ಲಿ ಶೈವರು, ವೈಷ್ಣವರೂ ಇದ್ದು ಅವರ ಮುಖ್ಯ ದೇವರು ಮೈಲಾರ. ಬಸವೇಶ್ವರನ ಅನುಯಾಯಿಗಳಾಗಿ ಮಡಿವಾಳ ಮಾಚಯ್ಯನನ್ನು ಗೌರವಿಸಿಕೊಂಡು ಬಂದಿರುವುದು ಕಂಡುಬರುತ್ತದೆ.

ಬಣಜಿಗರು : ಇವರು ಸಂಸ್ಥಾನದಲ್ಲೆಡೆಯೂ ಕಂಡುಬರುತ್ತಾರೆ. ಇವರ ಮುಖ್ಯ ಕಸುಬು ವ್ಯಾಪಾರ. ಅಂದು ಸಂಸ್ಥಾನದಲ್ಲಿ ನಾಯ್ಡು. ಬಲಿಜ ಇತ್ಯಾದಿ ಹೆಸರುಗಳಿಂದಲೂ ಕರೆಸಿಕೊಳ್ಳತ್ತಿದ್ದರು. ಇವರು ಜೀವನೋಪಾಯಕ್ಕೆ ಕೃಷಿಯನ್ನೆ ಅವಲಂಬಿಸಿಕೊಂಡಿದ್ದರು. ಇವರ ಮಾತೃಭಾಷೆ ಸಾಮಾನ್ಯವಾಗಿ ತೆಲುಗು ಆಗಿತ್ತೆಂದು ಹೇಳಬಹುದು.

ಬೇಡರು : ಇವರು ಸಂಸ್ಥಾನದ ಉತ್ತರ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದರು. ಒಂದೊಂದು ಸ್ಥಳಗಳಲ್ಲಿ ಒಂದೊಂದು ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಬೇಡರು ಸಾಮಾನ್ಯವಾಗಿ ಬ್ಯಾಡರು, ನಾಯಕ ಮಕ್ಕಳು, ವಾಲ್ಮೀಕಿ, ತಳವಾರ, ಬೇರಡ, ನಾಯಕ ಮತ್ತು ಪಾಳಯಗಾರರೆಂದು ಸ್ಥಳೀಯರಿಂದ ಕರೆಸಿಕೊಳ್ಳುತ್ತಿದ್ದರು. ಇವರು ವಿಜಯನಗರದ ಅರಸರ ಸೈನ್ಯ ಹಾಗೂ ಹೈದರ್ ಆಲಿ, ಟೀಪೂಸುಲ್ತಾನರ ಸೈನ್ಯದಲ್ಲಿ ಹೆಚಾಗಿ ಕಾರ್ಯ ನಿರ್ವಹಿಸಿರುವುದು ಕಂಡುಬರುತ್ತದೆ. ಇವರು ಹನುಮಂತನ್ನು ಹೆಚ್ಚಾಗಿ ಪೂಜಿಸುವುದು ಕಂಡುಬರುತ್ತದೆ. ಇದರಲ್ಲಿಯೂ ಶೈವ ವೈಷ್ಣವರಿಬ್ಬರೂ ಇದ್ದು ತಮ್ಮ ಹೆಣ್ಣು ಮಕ್ಕಳನ್ನು ಇವರು ಹರಿಸುತ್ತಿದ್ದರು. ಬೇಡರಲ್ಲಿ ಎರಡು ಪಂಗಡಗಳುಂಟು ೧. ಊರ ಬ್ಯಾಡರು. ೨. ಮ್ಯಾಸಬ್ಯಾಡರು. ಇವುಗಳು ತಮ್ಮದೆಯಾದ ಸಂಪ್ರದಾಯಗಳನ್ನು ಒಳಗೊಂಡು ಬೆಳೆದುಬರುತ್ತಿವೆ.

ಬೆಸ್ತರು: ಇವರಿಗೆ ಸಂಸ್ಥಾನದಲ್ಲಿ ಅನೇಕ ಹೆಸರುಗಳು ಇದ್ದವೆಂದು ಕಂಡುಬರುತ್ತದೆ. ಗಂಗಕುಲ, ಗಂಗಮತ, ಗಂಗೆ ಮಕ್ಕಳು, ಗಂಗಾಪುತ್ರ, ಗೌರಿಮತ, ಅಂಬಿಗ ಇತ್ಯಾದಿ ಹೆಸರುಗಳು ಅಂದಿನಿಂದ ಇಂದಿಗೂ ಸಹ ಬಳಕೆಯಲ್ಲಿ ಬಂದಿವೆ. ಇವರ ಮುಖ್ಯ ಕಸುಬು ಮೀನು ಹಿಡಿಯುವುದು. ಸಾಮಾನ್ಯವಾಗಿ ಇವರು ರಾಜಪರಿವಾರದವರನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೋರುವ ಕೆಲಸವನ್ನಬು ಮಾಡುತ್ತಿದ್ದರು. ನದಿಯಲ್ಲಿ ದೋಣಿ ನಡೆಸುವುದು, ಬೇಸಾಯ ಮಾಡುವುದು ಕೂಡ ಇವರ ಉಪ ಕಸುಬಾಗಿ ಕಂಡುಬರುತ್ತದೆ. ಬಿಳಿಗಿರಿರಂಗನ ಬೆಟ್ಟದ ರಂಗನಾಥನು ಇವರ ಪ್ರಧಾನ ದೇವರು.

ದೇವಡಿಗರು : ಇವರು ದೇವರ ಸನ್ನಿಧಾನದಲ್ಲಿ ಸಂಗೀತ ಹಾಡುವವರಾಗಿದ್ದರು. ಸಂಸ್ಥಾನದ ಎಲ್ಲಾ ಕಡೆಯೂ ಇವರು ಸಪ್ಪಲಿಗ, ಮೋಯ್ಲಿ. ದೇವಳಿ, ಶೇರಿಗಾರ ಮುಂತಾದ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದರು. ಇವರು ವೈಷ್ಣವ ಪಂಥದವರಾಗಿದ್ದು ತಿರುಪತಿ ವೆಂಕಟರಮಣನನ್ನು ತಮ್ಮ ಮನೆದೇವರನ್ನಾಗಿ ಪೂಜಿಸಿಕೊಂಡು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಇಂದಿಗೂ ಉಳಿದಿದ್ದಾರೆ.

ದರ್ಜಿಯವರು : ಹೊಲಿಗೆ ಕೆಲಸವನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುವ ಇವರು ಸಂಸ್ಥಾನದಲ್ಲಿ ಭಾವಸೂರ ಕ್ಷತ್ರಿಯ, ಚಿಪ್ಪಿಗ, ನಾಮದೇವ ಶಿಂಪಿಗಳೆಂದು ಕರೆಸಿಕೊಂಡು ತಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಇವರಲ್ಲಿ ಶೈವ ಹಾಗೂ ವೈಷ್ಣವ ಪಂಥಗಳ ಎರಡು ಗುಂಪಿಗೂ ಸೇರಿದವರು ಕಂಡು ಬರುತ್ತಾರೆ. ಚಂದ್ರಿಕಾ ಇವರ ವಿಶೇಷ ದೇವತೆ. ಹಿಂದೂ ಧರ್ಮದ ಎಲ್ಲಾ ದೇವರುಗಳನ್ನು ಪೂಜಿಸಿಕೊಂಡು ಗೌರವಿಸಿಕೊಂಡು ಬರುತ್ತಿರುವುದು ಕಂಡುಬರುತ್ತದೆ.

ದೇವಾಂಗ : ದೇವಾಂಗದವರ ಪ್ರಮುಖ ವೃತ್ತಿ ನೇಕಾರಿಕ. ಜೀವನೋಪಾಯಕ್ಕೆ ಕೃಷಿಯನ್ನು ಕೈಗೊಳ್ಳುವುದು ಸರ್ವೇಸಾಮಾನ್ಯ ಸಂಸ್ಥಾನದಲ್ಲಿ ಕೆಲವರು ವ್ಯಾಪಾರ ಬಡಗಿತನ, ಕಟ್ಟಡ ಕಟ್ಟುವ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು. ಇವರೆಲ್ಲರೂ ಸಾಮಾನ್ಯವಾಗಿ ಶೈವರಾಗಿದ್ದು ಇವರ ಮುಖ್ಯ ದೇವತೆ ಬನಶಂಕರಿ (ಈಕೆಯ ಮುಖ್ಯ ಪುಣ್ಯಕ್ಷೇತ್ರ ಬಾದಾಮಿಯ ಹತ್ತಿರವಿದೆ).

ದೊಂಬರು : ಹೆಚ್ಚಾಗಿ ದೊಂಬರೆಂದು ಕರೆಸಿಕೊಳ್ಳುತ್ತಿದ್ದ. ಇವರು (ಇಂದಿಗೂ ದೊಂಬರೆಂದೇ ಸಂಬೋಧಿಸಿಕೊಳ್ಳುತ್ತಾರೆ) ಸಾಂಪ್ರದಾಯಿಕವಾಗಿ ದೊಂಬರಾಟವಾಡಿ ಕೊಂಡು ಬರುವವರಾಗಿದ್ದಾರೆ. ಲಾಗ ಹಾಕುವವರು. ಸರ್ಕಸ್ ಮಾಡುವವರು. ಹಾವಾಡಿಗರು ತಮ್ಮ ಸಂಸ್ಕೃತಿಗೆ ತಮ್ಮ ಕೆಲಸಕ್ಕೆ ದೊಂಬ, ಡೊಮ್ಮರ ಅಥವಾ ದೊಂಬರಿಗಳೆಂದು ಕರೆದುಕೊಳ್ಳುತ್ತಾರೆ. ಮೈಸೂರು ಸಂಸ್ಥಾನದಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಿದ್ದರು. ವಿವಿಧ ಅಂಗಸಾಧನೆಯ ಕಸರತ್ತುಗಳು ಇವರ ಆಟದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಕರಕುಶಲ ವಸ್ತುಗಳಾದ ಬಾಚಣಿಗೆ ಮಹಿಳೆಯರಿಗೆ (ಚೌಲಿ) ಉದ್ದನೆಯ ಕೂದಲು ತಯಾರಿಸುವುದು ಹಾಗೂ ಮಾರಾಟ ಮಾಡುವುದು ಇವರ ಹೆಚ್ಚನವರ ಕೆಲಸ ಇವರ ಆರಾಧ್ಯ ದೇವತೆ ಗುರುಮೂರ್ತಿ.

ಗಾಣಿಗರು : ಸಾಂಪ್ರದಾಯಿಕವಾಗಿ ವ್ಯಾಪಾರ, ಎಣ್ಣೆ ಹಿಂಡುವುದು ಹಾಗೂ ಎಣ್ಣೆ ಮಾರುವುದನ್ನೆ ತಮ್ಮ ಕಸುಬಾಗಿಸಿಕೊಂಡಿದ್ದ ಇವರು ವಿವಿಧ ಪ್ರದೇಶಗಳಲ್ಲಿ ಅಲ್ಲಿನ ಭಾಷೆಗೆ ಸಂಬಂಧಿಸಿದಂತೆ ಗಾಣಿಗ, ಗಾಂಡ್ಲಾ, ಸಜ್ಜಿನ ಗಾಣಿಗ ಎಂದು ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳುತ್ತಿದ್ದರು. ಇಂದಿಗೂ ಈ ಅರ್ಥದಲ್ಲಿಯೇ ಇವರನ್ನು ಗುರುತಿಸುತ್ತಿರುವುದನ್ನು ಗಮನಿಸಬಹುದು. ಸಂಸ್ಥಾನದಲ್ಲಿ ಇವರಿಗೆ ವಿಶೇಷ ಗೌರವಿದ್ದಿತ್ತು. ಏಕೆಂದರೆ ಅಂದು ವಿದ್ಯುತ್ ಸೌಕರ್ಯವಿಲ್ಲದ ದಿನವಾಗಿತ್ತು. ಈ ದೃಷ್ಟಿಯಲ್ಲಿ ಎಣ್ಣೆ ದೀಪಕ್ಕೆ ವಿಶೇಷ ಮಹತ್ವವಿದ್ದಿತ್ತು. ಇದನ್ನು ನಮ್ಮ ಜನಪದರು ದೈವ ಸಂಭೂತವೆಂದೇ ನಂಬಿರುವುದಕ್ಕೆ ಅನೇಕಾನೇಕ ಗಾದೆ. ಒಗಟು ಹಾಗೂ ನಂಬಿಕೆಗಳು ಇಂದಿಗೂ ಇವೆ. ಈ ಹಂತದಲ್ಲಿ ಬೆಳಕು ಕೊಡುವ ಪ್ರಮುಖ ಸಾಧನ ದೀಪ. ಈ ದೀಪಗಳಿಗೆ ಎಣ್ಣೆಯೊಂದೆ ಉರುವಲು ಸಾಧನವಾಗಿದ್ದಿತ್ತು. ಇದರಿಂದ ಜನರು ಇವರನ್ನು ಹೆಚ್ಚಿನ ಪ್ರಮಾಣದಲ್ಲಿ ಗೌರವಿಸುತ್ತಿದ್ದರು. ಗಾಣಿಗರಲ್ಲಿ ನಾಲ್ಕು ಪಂಗಡಗಳಿದ್ದವು, ಜ್ಯೋತಿಪಣ, ಜ್ಯೋತಿನಗರ, ದೇವಗಾಣಿಗ ಮತ್ತು ಸಜ್ಜನ ಗಾಣಿಗ ಎಂದು. ಇವುಗಳಲ್ಲಿ ಮೇಲಿನ ಮೂರು ವಿಭಾಗಗಳು ಮೈಸೂರು ಸಂಸ್ಥಾನದಲ್ಲಿ ಹೆಚ್ಚಾಗಿ ಕಂಡುಬಂದರೆ, ಸಜ್ಜನಗಾಣಿಗರನ್ನು ಬೆಳಗಾವಿಯ ಪ್ರದೇಶದಲ್ಲಿ ಕಂಡುಬರುವವರಾಗಿದ್ದರು. ಇವರು ಶೈವ – ವೈಷ್ಣವ ಪರಂಪರೆಯ ದೇವರುಗಳನ್ನು ಪೂಜಿಸುವವರಾಗಿದ್ದು ಇತ್ತೀಚೆಗೆ ಕೃಷಿಯಲ್ಲಿ ಹೆಚ್ಚಾಗಿ ತೊಡಗುತ್ತಿರುವುದು ಕಂಡುಬರುತ್ತದೆ.

ಕುರುಬರು: ಇವರು ಸಾಂಪ್ರದಾಯಿಕವಾಗಿ ಕುರಿ ಸಾಗಾಣಿಕೆಯ ಕೆಲಸವನ್ನು ಮೈಗೂಡಿಸಿಕೊಂಡವರು ಹಾಗೂ ಕುರಿಯ ಕೂದಲಿನಿಂದ ಕಂಬಳಿ ನೇಯುವುದು ಪ್ರಮುಖ ಉದ್ಯೋಗವಾಗಿತ್ತು. ಇತ್ತೀಚೆಗೆ ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿಕೊಂಡು ತಮ್ಮದೇ ಆದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ. ಅಂದು ಸಂಸ್ಥಾನದಲ್ಲಿ ಇವರಲ್ಲಿಯೇ ಹಾಲು ಕುರುಬರು. ಅಂಡೆ ಕುರುಬರು, ಕಂಬಳಿ ಕುರುಬರುಗಳ ಉಪ ಪಂಗಡದವರುಗಳೂ ಇದ್ದರು. ಇವರು ಹೆಚ್ಚಾಗಿ ಶೈವ ಪಂಥಕ್ಕೆ ಸೇರಿದವರಾಗಿದ್ದರೂ ಬೀರದೇವರನ್ನು ತಮ್ಮ ಆರಾಧ್ಯ ದೇವರಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಕುರುಬರು ಒಂದು ಪಂಗಡಕ್ಕೆ ಒಡೆಯರ್ ಎಂಬ ಉಪ ನಾಮಕರಣವಿರುವುದು ಕಂಡುಬರುತ್ತದೆ. ಸಂಸ್ಥಾನದ ಅರಣ್ಯ ಪ್ರದೇಶಗಳಲ್ಲಿ ಬೆಟ್ಟದ ಕುರುಬ ಜೂನು. ಕುರುಬ, ಕಾಡು ಕುರುಬರೆಂಬ ತಮ್ಮದೆಯಾದ ವೃತ್ತಿಯಲ್ಲಿ ತೊಡಗಿದ್ದ ಕುರುಬರನ್ನು ಕಾಣಬಹುದಾಗಿದೆ.

ಲಿಂಗಾಯಿತರು: ಲಿಂಗಾಯಿತ ಎಂಬ ಪದವು ವೀರಶೈವ ಎಂಬ ಒಂದು ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ೧೨ನೇ ಶತಮಾನದಲ್ಲಿ ವೈದಿಕ ಧರ್ಮದ ಅನಿಷ್ಟ ಪದ್ಧತಿಗಳ ವಿರುದ್ಧವಾಗಿ ಹುಟ್ಟಿಕೊಂಡ ಪ್ರತಿಭಟನೆಯ ರೂಪವು ಬಸವಣ್ಣನವರ ನೇತೃತ್ವದಲ್ಲಿ ಬಲಶಾಲಿಯಾಗಿ ಒಂದು ಧರ್ಮವಾಗಿ ರೂಪತಾಳಿತು. ಇವರು ಸಂಸ್ಥಾನದ ಎಲ್ಲಾ ಕಡೆಯೂ ಕಂಡುಬರುತ್ತಿದ್ದರು. ಸಂಸ್ಥಾನದಲ್ಲಿ ಇವರ ಪ್ರಮುಖ ಧಾರ್ಮಿಕ ಕೇಂದ್ರವಾದ ‘ಮಠ’ಗಳಿಗೆ ವಿಶೇಷ ಗೌರವ ದೊರಕುತ್ತಿತ್ತು. ಇವರು ಹೆಚ್ಚಾಗಿ ಕೃಷಿ ಹಾಗೂ ವ್ಯಾಪಾರವನ್ನು ತಮ್ಮ ಮೂಲ ಕಸುಬಾಗಿ ಹೊಂದಿದವರಾಗಿದ್ದರು.

ಮೇದರು: ಮೇದರು ತಲತಲಾಂತರದಿಂದಲೂ ಕುಶಲ ಕೈಗಾರಿಕೆ ಮತ್ತು ಕೃಷಿ ಮಾಡಿಕೊಂಡು ಬರುತ್ತಿರುವ ಜನ. ಇವರು ಹೆಚ್ಚಾಗಿ ಬಿದಿರು ಕೆಲಸಗಾರರು. ಶಿವ ಮತ್ತು ಪಾರ್ವತಿಯನ್ನು ಆರಾಧಿಸುವವರು. ಮದುವೆ ಹಾಗೂ ಶುಭ ಸಮಾರಂಭಗಳಿಗೆ ಶೈವರು ಹಾಗೂ ಜಂಗಮರನ್ನು ಆಮಂತ್ರಿಸುವುದು ಸಾಮಾನ್ಯವಾಗಿರುತ್ತಿತ್ತು. ಇಂದಿಗೂ ಇದೇ ಸಂಪ್ರದಾಯ ಮುಂದುವರಿಯುತ್ತಿದೆ.

ಉಪ್ಪಾರ: ಇವರ ಹೆಸರೇ ಹೇಳುವಂತೆ ಇವರ ಮುಖ್ಯ ಕಸುಬು ಉಪ್ಪನ್ನು ತಯಾರಿಸುವುದಾಗಿತ್ತು. ಅದರಲ್ಲಿಯೂ ವಿಶೇಷವಾಗಿ ನೆಲದ ಉಪ್ಪನ್ನು ತಯಾರಿಸುವುದು. ಅಂದು ಇವರ ಪಾತ್ರ ಹೆಚ್ಚಾಗಿತ್ತು. ಹಾಗೂ ವಿಶೇಷ ಗೌರವ ಪಡೆದಿದ್ದವರಾಗಿದ್ದರು. ಇವರು ತಮ್ಮ ಹೆಸರಿನ ಕೊನೆಯಲ್ಲಿ ‘ಶೆಟ್ಟಿ’ ಅಥವಾ ‘ಗೌಡ’ ಎಂದು ಸೇರಿಸಿಕೊಂಡು ಬರುತ್ತಿದ್ದರು. ಇವರಲ್ಲಿ ಹೆಚ್ಚಿನವರು ವೈಷ್ಣವರಾಗಿದ್ದು ಚೆನ್ನಕೇಶವ, ಮೈಲಾರೇಶ್ವರ, ಬಾಲಾಜಿ ಮತ್ತು ಭವಾನಿಯರನ್ನು ಹೆಚ್ಚಾಗಿ ಪೂಜಿಸಿಕೊಂಡು ಬರುವವರಾಗಿದ್ದರು.

ಒಕ್ಕಲಿಗರು: ಮೈಸೂರು ಸಂಸ್ಥಾನದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದಂತವರೆಂದರೆ ಒಕ್ಕಲಿಗರು. ಇವರುಗಳಲ್ಲಿ ಹಳ್ಳಿಕಾರ, ಕುಂಚಿಟಿಗ, ರೆಡ್ಡಿ, ಕಾಪು ಕಮ್ಮ ಮತ್ತು ಮೊರಸು ಒಕ್ಕಲಿಗರೆಂದು ವಿವಿಧ ವಿಭಾಗಗಳಿವೆ. ಕನ್ನಡ ಭಾಷೆಯಲ್ಲಿ ಒಕ್ಕಲುತನವೆಂದರೆ ಬೇಸಾಯ ಮಾಡುವುದು ಎಂದರ್ಥ. ಶಿವಮೊಗ್ಗದ ಕಡೆ ಇವರು ನಾಯಕ ಮತ್ತು ಹೆಗ್ಗಡೆ ಎಂಬುವ ಅಡ್ಡ ಹೆಸರುಗಳನ್ನು ಇಟ್ಟುಕೊಳ್ಳುವ ಸಂಪ್ರದಾಯವಿರುವುದು ಕಂಡುಬರುತ್ತದೆ. ಇವರು ಕೆಲವರು ಶೈವರಾದರೆ ಮತ್ತೆ ಕೆಲವರು ವೈಷ್ಣವರಾಗಿ ಕಂಡು ಬರುತ್ತಾರೆ. ಇವರ ಕುಲದೇವರು ಚುಂಚನಗಿರಿಯ ಗಂಗಾಧರೇಶ್ವರ ಈ ಮಠಕ್ಕೆ ಇವರು ಭಕ್ತಿಭಾವದಿಂದ ನಡೆದುಕೊಳ್ಳುತ್ತಾರೆ.

ಸಂಸ್ಥಾನದಲ್ಲಿ ಇದ್ದ ಇತರ ಗುಂಪುಗಳು: ಜೀವನೋಪಾಯಕ್ಕಾಗಿ ತಾವುಗಳು ಅವಲಂಬಿಸಿ ಹೊಂಡಿದ್ದ. ಕಸುಬಿನ ಆಧಾರದ ಮೇಲಕ್ಕೆ ನೂರಾರು ಜಾತಿಯ ಜನರು ಸಂಸ್ಥಾನದಲ್ಲಿ ನೆಲೆಸಿದ್ದರು. ಅವರು ಇಂದಿಗೂ ಕಂಡುಬರುತ್ತಾರೆ. ಅವುಗಳನ್ನು ಪಟ್ಟಿಮಾಡುವುದಾದರೆ –

ಅಂಬಲವಾಸಿ (ದೇವಾಸ್ಥನದ ನಿರ್ವಹಣೆಯಲ್ಲಿ ತೊಡಗಿದವರು), ಅರಸು (ಭೂ ಒಡೆಯರು. ಮೈಸೂರನ್ನು ಆಳುತ್ತಿದ್ದ ವರ್ಗ) ಬಾಂದಿ (ಮನೆಗೆಲಸದಲ್ಲಿ ಸಹಾಯ ಮಾಡುವವರು) ಬನಿಯ (ವ್ಯಾಪಾರಗಳು) ಭಾಟ (ವಂಶಾವಳಿ ಬರೆದಿಡುವವರು) ಬೋಗಾಡ (ಕಂಬಳಿ ಹೆಣೆಯುವವರು) ಬುಂಡೇ ಬೆಸ್ತ (ಮೀನುಗಾರರು, ಪಲ್ಲಕ್ಕೆ ಹೋರುವವರು) ಚಕ್ಕನ್ (ಎಣ್ಣೆ ತೆಗೆಯುವವರು), ಚಾಳಿಯಾನ್ (ನೂಲುಬಟ್ಟೆ ನೆಯುವವರು), ಚಿಟ್ಟೆ (ವ್ಯಾಪಾರಿಗಳು), ಗಾಬಿಟ್ (ಸಮುದ್ರ ಸಂಚಾರಿಗಳು, ಮೀನಾಗಾರರು), ಗಾರುಡಿ (ಬಿಕ್ಷಕರು, ಹಾವಾಡಿಗರು, ಅಲೆಮಾರಿ, ಮೋಜಿಕಾರರು) ಗಟ್ಟ (ಬೇಸಾಯಗಾರರು) ಗೌರಿಗ (ಬಿದಿರು ಕೆಲಸಗಾರ), ಘಾಡಿ (ಕಣಿ ಹೇಳುವವರು), ಗೋಣಿಗ (ಗೋಣಿ ಚೀಲ ನೆಯುವವನು) ಗೋಸಾವಿ (ಧರ್ಮದ ಹೆಸರಿನಲ್ಲಿ ಭಿಕ್ಷೆಯತ್ತಿ ತಿರುಗುವವನು), ಗುರುವ (ಸಂಗೀತಗಾರ, ದೇವಾಲಯದ ಸೇವಕ), ಹರಿಣಶಿಕಾರಿ (ಭೇಟೆಗಾರರು), ಹೆಳವ (ಲಾವಣಿಕಾರರು, ಕೃಷಿಕರು), ಹೂವಾಡಿಗ (ಹೂವು ಬೆಳೆಸುವವನು, ಮಾರುವವರು) ಐರೀ (ಕಮ್ಮಾರರು), ಕಾಡುಗೊಲ್ಲ (ದನ ಕಾಯುವವರು, ಕಣಬಿ (ಬೇಸಾಯಗಾರರು), ಕಣ್ ಸನ್ (ಭವಿಷ್ಯ ಹೇಳುವವರು), ಕರುಣೀಕರು (ಚಿಲ್ಲರೆ ವ್ಯಾಪಾರಿಗಳು ಹಾಗೂ ಗೃಹ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು), ಕಾಸಾರ್ (ಹಿತ್ತಾಳೆ, ತಾಮ್ರ, ಪಾತ್ರೆಗಳನ್ನು ತಯಾರಿಸುವವರು), ಕೋಟೆಗಾರರು (ಕಾವಲುಗಾರರು), ವೀಳ್ಯೆಗಾರರು (ಬೀಡಿ ಕಟ್ಟುವವರು) ಲಾಡರ (ಯಲೆಗಾರ ರಾವುಕರು, ಕುದುರೆ ವ್ಯಾಪಾರಿಗಳು), ನಾಮಧಾರಿಗೌಡ (ಕೃಷಿಕರು) ನಟವರು (ವೃತ್ತಿ ನೃತ್ಯಕಾರರು) ನಾಯುಡು (ಗವರ, ಬಳೆ ಮಾರುವವರು) ಪಾತ್ರದವರು (ನೃತ್ಯ ಮಾಡುವವರು) ಸನ್ಯಾಸಿ (ಪರಿತ್ಯಾಗಿಗಳಾಗಿ ಭಿಕ್ಷೆ ಎತ್ತುವರು). ಪಂಚಮರು (ಹೊಲೆಯ, ಮಾದಿಗ ಜಾಡಮಲ್ಲಿ ಜನಾಂಗದವರು) ಈ ರೀತಿಯಲ್ಲಿ ಸಂಸ್ಥಾನದ ಸಾಮಾಜಿಕ ರಚನೆಯಾಗಿತ್ತೆಂದು ಹೇಳಬಹುದಾಗಿದೆ. ಇವರುಗಳು ಕೈಗೊಂಡಿರುವ ಕೆಲಸಗಳ ಆಧಾರದ ಮೇಲೆ ಸ್ಪೃಶ್ಯ ಅಸ್ಪೃಶ್ಯ ಎಂದು ವರ್ಗೀಕರಣ ಮಾಡಲಾಗಿದೆ.

ಸಂಸ್ಥಾನದಲ್ಲಿ ಸಾಮಾಜಿಕ ಜೀವನ : ಪ್ರಾಚೀನ ಕಾಲದಲ್ಲಿದ್ದಂತೆ ಮಧ್ಯ ಯುಗದಲ್ಲಿಯೂ ಹಾಗೂ ಇಂದಿಗೂ ಸಹ ವ್ಯಕ್ತಿ ಸಮಾಜದ ಮೇಲೆ ಹೆಚ್ಚಿನ ಪ್ರಭಾವ ಬೀರಿದ ಶಕ್ತಿಯೆಂದರೆ ಧರ್ಮ. ಈ ಧರ್ಮದ ಚೌಕಟ್ಟಿನಲ್ಲಿಯೇ ಪ್ರಾರಂಭದಲ್ಲಿ ಒಡೆಯರ್ ರವರು ವರ್ಣಾಶ್ರಮ ಧರ್ಮಪಾಲನೆಗಾಗಿ ಹಗಲು ರಾತ್ರಿ ಶ್ರಮಿಸಿದವರಾಗಿದ್ದರು. ಅದೇ ರೀತಿಯಲ್ಲಿ ತಮ್ಮ ತಮ್ಮ ಜಾತಿ ಮತಗಳ ಆಚಾರ ವಿಚಾರಗಳನ್ನು ಅವರವರ ಧರ್ಮಶಾಸ್ತ್ರಜ್ಞರು ವಿಧಿಸುವ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರಲು ಪ್ರಜೆಗಳು ಉತ್ಸುಕರಾಗಿದ್ದರು. ಈ ಹಂತದಲ್ಲಿ ಸಂಸ್ಥಾನದ ಸಾಮಾಜಿಕ ಸ್ಥಿತಿಯಲ್ಲಿ ಮೇಲು ಕೀಳುಗಳಂಬ ಅಸ್ಪೃಶ್ಯತೆಯು ಯಥೇಚ್ಛವಾಗಿ ಕಂಡುಬಂದು ಅನೇಕ ಸಮಯದಲ್ಲಿ ಕಲಹಗಳು ಸಂಭವಿಸುತ್ತಿತ್ತು. ಇಂತಹ ಸಮಯದಲ್ಲಿ ಒಡೆಯರ್ ರವರು ಒಗ್ಗಟ್ಟನ್ನು ಕಾಪಾಡಿಕೊಂಡು ಬರಲು ಕೈಗೊಂಡ ಕ್ರಮಗಳು ಅಂದು ಅವರು ಹೊಂದಿದ್ದ ಬಿರುದುಗಳಿಂದ ತಿಳಿಯಬಹುದಾಗಿದೆ. ಒಡೆಯ ವಂಶದಲ್ಲಿಯೇ ಸಮಾಜದ ಸಾಮರಸ್ಯವನ್ನು ಕುದುರಿಸಿ ಹಾಗೂ ರಾಜಕೀಯ ಭದ್ರತೆಯನ್ನೂ ವ್ಯಕ್ತಿ ಹಿತವನ್ನೂ ರಕ್ಷಿಸುವುದಕ್ಕಾಗಿ ತಮ್ಮ ಬಾಳನ್ನೆ ಮುಡಿಪಾಗಿಟ್ಟಿದ್ದರೆಂದು ಅಂದಿನ ಮೂಲಭೂತ ವ್ಯಕ್ತಿಗಳು ಬರೆದಿರುವ ಸಾಹಿತ್ಯಗಳಿಂದ ತಿಳಿದುಬರುತ್ತದೆ ಎಂದು ಹೇಳಬಹುದು ಹಾಗೂ ಆಯಾ ಜಾತಿ ಮತಗಳಿಗೆ ಸ್ಪಧರ್ಮ ಪಾಲನೆಯನ್ನು ಕಟ್ಟುನಿಟ್ಟಾಗಿ ವಿಧಿಸಿದ್ದರು. ಇದಕ್ಕೆ ಸಾಕ್ಷಿಯಾಗಿ ಅವರೇ ರಚಿಸಿರುವುದರಂದು ಹೇಳಲಾಗಿರುವ “ಸಚ್ಛೂದ್ರಾಚಾರ ನಿರ್ಣಯ” ಎಂಬ ಸಾಮಾಜಿಕ ಗ್ರಂಥದಲ್ಲಿ ಅವರು ವರ್ಣಗಳಿಗೂ ಆಶ್ರಯಗಳಿಗೂ ಪುರಾತನ ಕಾಲದಿಂದ ನಡೆದು ಬಂದ ಧರ್ಮವನ್ನು ಮನಃಪೂರ್ವಕವಾಗಿ ಈಡೇರಿಸುವಂತೆ ಸಕಲರನ್ನು ವಿನಂತಿಸಿಕೊಂಡಿರುವುದೇ ಆಗಿದೆ ಎಂದು ಹೇಳಬಹುದು. ಅಂದರೆ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಶೂದ್ರಗಳೆಂದು ವರ್ಣಗಳನ್ನು ಸೃಷ್ಟಿಸಿ ಅವುಗಳಿಗೆ ವಿಧಿಸಿರುವ ಉತ್ತಮ ಹಾಗೂ ಕೆಳಸ್ತರದ ಕೆಲಸಗಳಿಗೆ ಕರುಬದೆ ಸರ್ವರನ್ನೂ ಸಮನಾಗಿ ಕಾಣುವ ತತ್ವವನ್ನು ಈ ಗ್ರಂಥ ತಿಳಿಸುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲೂ ಜಾತಿ ಸಂಪ್ರದಾಯಗಳ ಉಲ್ಲಂಘನೆಗೆ ಕಠಿಣ ಶಿಕ್ಷೆವಿಧಿಸುವ ಶಾಸನ ಹೊರಡಿಸಲಾಗಿತ್ತು. ಇದು ಹೆಚ್ಚಾಗಿ ಆಧುನಿಕ ಮೈಸೂರಿನ ಶಿಲ್ಪಗಳಾಗಿರುವ ೧೦ನೇ ಚಾಮರಾಜ ಒಡೆಯರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಆಳ್ವಿಕೆಯ ಕಾಲದಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಬಂದು ದೀನದಲಿತರ ಸಾಂಸ್ಕೃತಿಕ ಬದುಕಿನ ಕಡೆಗೆ ಹೆಚ್ಚಿನ ಗಮನಹರಿಸಿ ಅಮರರಾಗಿದ್ದಾರೆ ಎನ್ನಬಹುದು.

ಸಂಸ್ಥಾನದ ಪ್ರಮುಖ ಕಸುಬಾಗಿದ್ದ ಕೃಷಿಯಲ್ಲಿ ದುಡಿಯುವ ವರ್ಗ ಚಂಡಾಲರು ಅಥವಾ ಅಸ್ಪೃಶ್ಯರೆ ಹೆಚ್ಚಿನವರಾಗಿದ್ದರು. ಇವರು ಕೃಷಿ ಕಾರ್ಯದ ಜೊತೆಗೆ ಕೃಷಿ ಉತ್ಪನ್ನಗಳನ್ನು ತಯಾರಿಸುವ ಕೆಲಸದಲ್ಲಿಯೂ ತೊಡಗಿದವರಾಗಿದ್ದರು. ಹೆಚ್ಚಾಗಿ ಈ ಜನಾಂಗವು ನಗರ, ಪಟ್ಟಣಗಳಿಂದ ದೂರವಿದ್ದು ಹಳ್ಳಿಗಳಲ್ಲಿ ವಾಸಮಾಡುತ್ತಿದ್ದರು. ಸಮಾಜದ ದೃಷ್ಟಿಯಲ್ಲಿ ಇವರ ಸ್ಥಾನಮಾನವು ಅತ್ಯಂತ ಕೀಳಿನದಾಗಿದ್ದಿತ್ತು. ಒಂದು ದೃಷ್ಟಿಯಲ್ಲಿ ಅಂದು ಅಸ್ಪೃಶ್ಯನಾಗಿ ಜನಿಸುವುದೆಂದರೆ ಅದು ಆ ವ್ಯಕ್ತಿಯು ಮಾಡಿರುವ ಪೂರ್ವ ಜನ್ಮದ ಪಾಪದ ಫಲವೆಂದು ಭಾವನೆಯು ಎಲ್ಲಾ ಉನ್ನತ ಸಮುದಾಯಗಳಲ್ಲಿಯೂ ಮೂಡಿದ್ದಿತು. ಒಂದು ಹಂತದಲ್ಲಿ ಅಂದು ಬ್ರಾಹ್ಮಣರ ಹೆಚ್ಚಿನ ಪ್ರಬಲ್ಯವನ್ನು ವೀರಶೈವರೂ ಹಾಗೂ ಜೈನರೂ ಭಗ್ನಗೊಳಿಸಲು ಸವಾಲಾಗಿ ಬಂದೊದಗಿದ್ದ ಕಾಲವೆನ್ನಬಹುದು. ಆದರೆ ೧೨ನೇ ಶತಮಾನದಲ್ಲಿ ಕರ್ಮ ಸಿದ್ಧಾಂತ ಹಾಗೂ ಜಾತಿ ಭೇದದ ವೈಷಮ್ಯಗಳನ್ನು ಸಂಪೂರ್ಣವಾಗಿ ಕಿತ್ತೆಸೆಯುವ ಉದ್ದೇಶದಿಂದ ಹುಟ್ಟಿದ ವೀರಶೈವ ಪಮಥವು ಒಂದು ಪ್ರಬಲ ಜಾತಿಯಾಗಿ ನೆಲೆಯೂರಲಾರಂಭಿಸಿತು. ಬ್ರಾಹ್ಮಣರ ನಂತರ ಸಂಸ್ಥಾನದಲ್ಲಿ ಅಸ್ಪೃಶ್ಯರನ್ನು ಹೆಚ್ಚಾಗಿ ಶೋಷಣೆಗೆ ಒಳಪಡಿಸಿದವರೆಂದರೆ ವೀರಶೈವ ಸಮಾಜದವರೆನ್ನಬಹುದು. ಇದು ಇಂದಿಗೂ ಸಹ ಹೆಚ್ಚಾಗಿಯೇ ಕಂಡು ಬರುತ್ತದೆ. ದಿನನಿತ್ಯ ದಲಿತರು ಸವರ್ಣಿಯರಿಂದ ದೌರ್ಜನ್ಯಕ್ಕೆ ತುತ್ತಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಸಂಸ್ಥಾನದಲ್ಲಿ ಮಹಿಳೆಯರ ಸ್ಥಾನಮಾನ : ವಿಜಯನಗರದರಸರ ಆಳ್ವಿಕೆಯಲ್ಲಿದ್ದ ಮಹಿಳೆಯರ ಸ್ಥಾನಮಾನಕ್ಕೆ ತಾಳೆ ಹಾಕಿ ನೋಡುವುದಾದರೆ ಮೈಸೂರು ಸಂಸ್ಥಾನದ ಸ್ತ್ರೀಯರು ಹಲವಾರು ಬದಲಾವಣೆ ಕಂಡು ಮುನ್ನಡೆಯಲು ಪ್ರಯತ್ನಿಸಿದಳೆನ್ನಬಹುದು. ಏಕೆಂದರೆ ಈ ಸಮಯದಲ್ಲಿ ಸ್ತ್ರೀಗೆ ಧಾಮಿಕ ಇಲ್ಲವೆ ಸಾಮಾಜಿಕ ಕಟ್ಟುಪಾಡುಗಳೇನೋ ಹೆಚ್ಚಾಗಿ ಅಂಟಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಅದಕ್ಕೆ ಬದಲಾಗಿ ಅಂಟಿಕೊಂಡಿರುವ ಅನಿಷ್ಟ ಪದ್ಧತಿಗಳನ್ನು ತೆಗೆದು ಹಾಕುವ ಕಾಯ್ದ ಕಡೆಗೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲು ಮುಂದಾಯಿತು. ಇದಕ್ಕ ಸಾಕ್ಷಿಯಾಗಿ ಸಂಚಿ ಹೊನ್ನಮ್ಮಳು ಅಂದೇ ಸ್ತ್ರೀ ಪುರುಷರ ಸಮನತಾ ತತ್ವವನ್ನು ಪ್ರತಿಪಾದಿಸಿ ಇಂದಿಗೂ ಸಹ ಚಾರಿತ್ರಿಕ ವ್ಯಕ್ತಿಯಾಗಿ ಉಳಿದಿದ್ದಾಳೆ. ವಿದೇಶಿ ಪ್ರವಾಸಿಗರಾದ ಫಾದರ್ ಸಿನಾಮಿ, ಬುಕನಸ್ ಮುಂತಾದವರು ಅಂದಿನ ಸ್ತ್ರೀಯರನ್ನು ಅವರ ಸ್ಥಾನಮಾನವನ್ನು ಶ್ಲಾಘಿಸಿದ್ದಾರೆ.

ಅಂದು ಬಾಲ್ಯ, ವಿವಾಹ ಹೆಚ್ಚಾಗಿ ಬಳಕೆಯಲ್ಲಿದ್ದಿತ್ತು. ಅದರಲ್ಲಿಯೂ ಬ್ರಾಹ್ಮಣ ಸಮಾಜವು ಹೆಚ್ಚಾಗಿ ತೊಡಗಿದ್ದಿತ್ತು. ತದನಂತರ ಬ್ರಾಹ್ಮಣೇತರ ಸಮಾಜದಲ್ಲಿಯೂ ಬಾಲ್ಯವಿವಾಹ ಬೆಳೆದು. ಮುಂದೆ ಸಾಮಾಜಿಕ ತೊಂದರೆಗಳಿಗೆ ಎಡೆ ಮಾಡಿಕೊಡುವ ಪರಿಸ್ಥಿತಿ ಉದ್ಬವವಾಗುವಂತೆ ಸೃಷ್ಟಿಸುತ್ತಿತ್ತು. ಅಂದಿನ ಮತ್ತೊಂದು ಕೆಟ್ಟ ಸಂಪ್ರದಾಯವೆಂದರೆ ಅತಿ ವೃದ್ಧರು ಸಹ ಚಿಕ್ಕ ವಯಸ್ಸಿನ ಬಾಲಕಿಯರನ್ನು ಮದುವೆಯಾಗುವ ಪದ್ಧತಿ ಸರ್ವೇಸಾಮಾನ್ಯವಾಗಿ ಬಂದದ್ದು. ಹೀಗೆ ತಮ್ಮ ಇಳಿವಯಸ್ಸಿನಲ್ಲಿ ಪ್ರಾಯದ ಹುಡುಗಿಯನ್ನು ಮದುವೆ ಮಾಡಿಕೊಂಡರೆ ಅವರ ಮನೆತನದ ಘನತೆ ಗೌರವ ಹೆಚ್ಚುತ್ತದೆಂಬ ಕೆಟ್ಟ ಅಲೋಚನೆ ಅವರಲ್ಲಿ ಮನೆಮಾಡಿಕೊಂಡಿತ್ತು. ಅಂದು ಅರಸರು ವ್ಯಭಿಚಾರದಲ್ಲಿ ತೊಡಗಿದವರಿಗೆ, ಅನೀತಿಯಲ್ಲಿ ತಲ್ಲೀನರಾದವರಿಗೆ ಜಾತಿ ಬಹಿಷ್ಕಾರ, ವಿವಾಹ ವಿಚ್ಚೇದನ. ಮುಂತಾದ ಅನಿಷ್ಟ ಕೆಲಸಗಳಿಗೆ ಕೈಹಾಕಿದವರಿಗೆ ಜುಲ್ಮಾನೆಗೆ ಒಳಪಡಿಸುತ್ತಿದ್ದರು. ಅಲ್ಲದೆ ಕಾರಾಗೃಹದ ಶಿಕ್ಷೆ ಹಾಗೂ ಅತಿಯಾಗಿದ್ದರೆ ಮರಣ ದಂಡನೆಯ ಶಿಕ್ಷೆಗೆ ಗುರಿಯಾಗಬೇಕಾಗಿತ್ತು. ಆದರೆ ಇವುಗಳಾವುವೂ ಮೇಲ್ಜಾತಿಯವರಿಗೆ ಅನ್ವಯಿಸುತ್ತಿರಲಿಲ್ಲವೆಂದೇ ಹೇಳಬಹುದು. ಕೆಳಜಾತಿಯ ಸ್ತ್ರೀಯರ ಬದುಕು ಶೋಚನೀಯ ಸ್ಥಿತಿಯಲ್ಲಿದ್ದಿತು. ಇವರು ಆಹಾರ, ಮನೆ, ಬಟ್ಟೆಗಳಿಂದಲೂ ಸಂಪೂರ್ಣವಾಗಿ ವಂಚಿತರಾಗಿ ಶೋಚನೀಯ ಬದುಕನ್ನು ಕಳೆಯುತ್ತಿದ್ದರು. ಇಷ್ಟೆಲ್ಲ ಇದ್ದರೂ ಅಂದು ಮಹಿಳೆಯರ ಸ್ಥಾನದ ಬಗ್ಗೆ ಪ್ರಸಿದ್ದ ವಿದೇಶೀ ಕ್ರೈಸ್ತ ಪಾದ್ರಿ ಹಾಗೂ ಪ್ರವಾಸಿ ಲೇಖಕ ಅಬೆ ದೂಬಾಯಿರವರು ಈ ರೀತಿಯ ವರ್ಣನೆ ನೀಡುತ್ತಾರೆ. “ಯಾರೂ ಏನೇ ಹೇಳಿದರೂ ಹಿಂದೂ ಸ್ತ್ರೀಯರು ಸಾದ್ವಿಗಳು, ನಾಗರಿಕ ದೇಶಗಳೆಂದು ಹೇಳಿಕೊಳ್ಳುವ ಬೇರೆ ಹಲವಾರು ದೇಶಗಳ ಸ್ತ್ರೀಯರಿಗಿಂತ ಹಿಂದೂ ಸ್ತ್ರೀಯರೇ ಸಾಧ್ವಿಗಳೆಂದು ನಾನು ಹೇಳಬಲ್ಲೆ. ಜನ ಕಿಕ್ಕಿರಿದು ತುಂಬಿದ ಕಡೆಗಳಲ್ಲಿ ಹಿಂದೂ ರಮಣಿ ಒಬ್ಬಳೇ ಸಂಚರಿಸಬಲ್ಲಳು. ಬೀದಿ ಕಾಮಣ್ಣರ ದೃಷ್ಟಿ ದೀಕ್ಷೆಪಗಳಿಗಾಗಿ ಅಪಹಾಸ್ಯದ ಮಾತುಗಳಿಗಾಗಲಿ ಅವಳು ಬೆದರುವಂತಿರಲಿಲ್ಲ. ಕಲೀನೆಯೊಬ್ಬಳನ್ನು ಬೆರಳ ತುಸಿಯಿಂದ ಸ್ಪರ್ಶಿಸುವುದೂ ಅಸಭ್ಯತೆಯೆಂದು ಪರಿಗಣಿತವಾಗಿದ್ದಿತ್ತು. ಗಂಡನೊಬ್ಬನು ಪರಿಚಿತ ಸ್ತ್ರೀಯನ್ನು ದಾರಿಯಲ್ಲಿ ಕಂಡಾಗ ಅವಳನ್ನು ನಿಲ್ಲಿಸಿ ಮಾತನಾಡಿಸುವ ಧೈರ್ಯ ಅವನಿಗಿರಲಿಲ್ಲ” ಎಂಬ ಸುದೀರ್ಘವಾದ ಹೇಳಿಕೆ ನೀಡಬಯಸುತ್ತಾನೆ. ಆದರೆ ಈ ಹೇಳಿಕೆಯು ಕೆಲವೇ ಕೆಲವು ಉನ್ನತ ವರ್ಗದ ಸ್ತ್ರೀಯರ ಜೀವನಕ್ಕೆ ಮಾತ್ರ ಅನ್ವಯಿಸುವುದಾಗಿತ್ತು. ಸಾಮಾನ್ಯ ಸ್ತೀಯರು ಕಷ್ಟಕರವಾದ ಜೀವನದಲ್ಲಿದ್ದದ್ದು ಅನೇಕ ಆಧಾರಗಳಿಂದ ಗೋಚರವಾಗುತ್ತದೆ. ಏಕ ಪತ್ನಿತ್ವವು ಅಸ್ಥಿತ್ವದಲ್ಲಿದ್ದರೂ ಅರಸು ಮನೆತನದವರು, ಶ್ರೀಮಂತರುಗಳು ಬಹು ಪತ್ನಿತ್ವವನ್ನು ಹೆಚ್ಚಾಗಿ ಹೊಂದಿದ್ದರು. ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿದ್ದ ಸಹಗಮನವೆಂಬ ಅನಿಷ್ಟ ಪದ್ಧತಿಯು ಸಂಸ್ಥಾನದಲ್ಲಿಯೂ ಜೀವಂತವಾಗಿದ್ದಿತ್ತು. ಹದಿನೇಳನೆಯ ಮತ್ತು ಹದಿನೆಂಟನೆಯ ಶತಮಾನದಲ್ಲಿ ರಚಿತವಾದ ‘ಹದಿಬದೆಯ ಧರ್ಮ’ಗೂ ಸಚ್ಚೂದ್ರಾಚಾರ ನಿರ್ಣಯ’ಗಳ ಗ್ರಂಥದಲ್ಲಿ ವ್ಯಕ್ತಪಡಿಸಲಾಗಿರುವ ಸಂಪ್ರದಾಯಗಳನ್ನು ಗಮನಿಸುವುದಾದರೆ ಅಂದು ಸಹಗಮನಕ್ಕೆ ಸಾರ್ವಜನಿಕವಾಗಿ ಒಪ್ಪಿಗೆ ಇರಲಿಲ್ಲವೆಂದನ್ನಬಹುದು, ತದನಂತರದಲ್ಲಿ ಸಂಸ್ಥಾನದಾದ್ಯಂತ ಬಲವಂತವಾಗಿ ಬೇರೂರಲಾರಂಭಿಸಿದ ವೈಷ್ಣವ ಮತದ ಪ್ರಾಬಲ್ಯದಿಂದಾಗಿ ಮೈಸೂರು ಸಂಸ್ಥಾನದಲ್ಲಿ ಸತಿ ಸಹಗಮನದ ಅನಿಷ್ಟ ಪದ್ಧತಿಯು ನಿಂತು ಹೋಗಲು ಕಾರಣವಾಯಿತ್ತೆನ್ನುವುದು ಇತಿಹಾಸಗಾರರೊಬ್ಬರ ಅಭಿಪ್ರಾಯವಾಗಿದೆ. ಆಧುನಿಕ ಮೈಸೂರಿನಲ್ಲಿ ಇದು ಎಲ್ಲೂ ಸುಳಿಯುವುದಿಲ್ಲ. ಇದರ ಮರೆಯ ನೆರಳಿನಲ್ಲಿಯೇ ಬೇರೊಂದು ಬಗೆಯ ದುಷ್ಟ ಸಂಪ್ರದಾಯ ಸಂಸ್ಥಾನದುದ್ದಕ್ಕೂ ಬಳಕೆಯಲ್ಲಿದ್ದಿತ್ತು. ಅದೆಂದರೆ ವಿಧವೆಯರ ಶೋಷಣೆ. ಬುಕನೆನ್ ಮತ್ತು ಅಬೆ ದುಬಾಯಿಯವರು ಅಂದು ಬ್ರಾಹಣ ವರ್ಗದಲ್ಲಿದ್ದ ವಿಧವೆಯರು ಅದರಲ್ಲಿಯೂ ವಿಶೇಷವಾಗಿ ಬಾಲ ವಿಧವೆಯರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿರುವುದು ಕಂಡುಬರುತ್ತದೆ. ಇವರ ಸ್ಥಾನವು ಸಮಾಜದಲ್ಲಿ ಗೌರವಪೂರ್ಣವಾಗಿರಲಿಲ್ಲ. ಇವರು ಸಹಗಮನಕ್ಕೆ ಬದಲಾಗಿ ಅದಕ್ಕಿಂತಲೂ ಕಠಿಣವಾದ ನಿರ್ಬಂಧನೆಗಳನ್ನು, ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಜೀವನ ಪೂರ್ತಿ ಜೀವಂತ ಶವವಾಗಿ ಬದುಕಬೇಕಾಗುವ ಸಂಪ್ರದಾಯ ಪಾಲಿಸಬೇಕಾಗಿದ್ದಿತ್ತು. ಪ್ರಮುಖವಾಗಿದ್ದ ಸಂಪ್ರದಾಯಗಳೆಂದರೆ ತಿಂಗಳಿಗೊಮ್ಮೆ ಕೇಶ ಮುಂಡನ ಮಾಡಿಸಿಕೊಳ್ಳಬೇಕಿತ್ತು. ತಾಂಬುಲ ಸೇವನೆ ಮಾಡಲು ಅವರಿಗೆ ಅಧಿಕಾರವಿರಲಿಲ್ಲ. ಬಿಳಿಸೀರೆಯನ್ನುಡದೆ ಬಣ್ಣದ ಸೀರೆಯನ್ನುಡಬಾರದಾಗಿತ್ತು. ಅವರು ಮುಖಕ್ಕೆ ಹರಿಶಿಣ. ಕುಂಕುಮ ಹಾಕಿಕೊಳ್ಳಕೂಡದಾಗಿದ್ದಿತ್ತು. ಸಂತೋಷದ ಸಮಾರಂಭಗಳಲ್ಲಿ ಇವರು ಭಾಗವಹಿಸಕೂಡದಾಗಿತ್ತು. ಸ್ವಂತ ಮನೆಯಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ಅವರಿಗೆ ಯಾವುದೇ ಸ್ಥಾನಮಾನವಿರಲಿಲ್ಲ. ಅವರ ಆಗಮನವೂ, ದರ್ಶನವೂ ಅಪಶಕುನವೆಂಬ ಕಲ್ಪನೆಯು ಅಂದು ಯಥೇಚ್ಛವಾಗಿ ಮನೆಮಾಡಿಕೊಂಡಿದ್ದಿತ್ತು. ಬ್ರಾಹ್ಮಣರು ಹಾಗೂ ವೈಶ್ಯರಲ್ಲಿ ವಿಧವೆಯರ ಪುನರ್ವಿವಾಹವು ಸಂಪೂರ್ಣವಾಗಿ ನಿಷೇದವಾಗಿದ್ದಿತ್ತು. ಆದರೆ ಮಿಕ್ಕ ವರ್ಗ ಹಾಗೂ ಕೆಳವರ್ಗದವರಲ್ಲಿ ಪುನರ್ವಿವಾಹ ಜಾರಿಯಲ್ಲಿದ್ದಿತ್ತು. ಇದನ್ನು ಅವರು ದಾಂಪತ್ಯ “ಕೊಡಿಕೆ” ಎಂಬ ಹೆಸರಿನಿಂದ ಕರೆಯುತ್ತಿದ್ದರೆನ್ನಬಹುದು. ಈ ಪದವು ಈ ಭಾಗದಲ್ಲಿ ಈಗಲೂ ಹೆಚ್ಚಾಗಿ ಬಳಕೆಯಲ್ಲಿರುವುದು ಕಂಡು ಬರುತ್ತದೆ.