೧೩೯೯ರಲ್ಲಿಯೇ ಅಸ್ತಿತ್ವಕ್ಕೆ ಬಂದ ಮೈಸೂರು ಒಡೆಯರು ತಮಗೆ ಸಿಕ್ಕಿದ್ದ ಅವಕಾಶವನ್ನು ಉತ್ತಮ ಕೆಲಸಗಳಿಗಾಗಿ ವಿನಿಯೋಗಿಸಿಕೊಂಡು ಚಾರಿತ್ರಿಕ ವ್ಯಕ್ತಿಗಳೆನ್ನಿಸಿಕೊಂಡಿದ್ದಾರೆ. ಇವರ ಕಾಲದಲ್ಲಿ ವಾಸ್ತುಶಿಲ್ಪ, ಮೂರ್ತಿಶಿಲ್ಪ ಮತ್ತು ಚಿತ್ರಕಲೆಗಳು ಹೆಚ್ಚಿನ ಪ್ರೋತ್ಸಾಹ ಪಡೆದವು ವಿಶ್ವವಿಖ್ಯಾತವೆನ್ನಿಸಿರುವ ಮೈಸೂರು ಅರಮನೆಯ ಇದಕ್ಕೆ ಸಾಕ್ಷಿಯಾಗಿದೆ.

ವಾಸ್ತುಶಿಲ್ಪ

ಭಾರತದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯು ಬೀರಿದ ಪ್ರಭಾವದ ಫಲವಾಗಿ ಮೈಸೂರು ಅರಸರು ಯುರೋಪಿನ ಪುರಾತನ ಶೈಲಿಯನ್ನೂ, ದೇಶಿಯ ಶೈಲಿಯನ್ನೂ ಮಿಶ್ರಣಗೊಳಿಸಿದ ವಾಸ್ತುವನ್ನು ಬಳಕೆಗೆ ತಂದರು. ಮೊದಲು ಎತ್ತಕಡೆ ನೋಡಿದರೂ ಪಾಶ್ಚಾತ್ಯರ ಗಾಥಿಕ್ ಶೈಲಿಯಲ್ಲೋ, ಗ್ರೀಕರ ಮತ್ತು ರೋಮನ್ನರ ಅನುಕರಣ ರೂಪವಾದ ಪುನರುಜ್ಜೀವನ ರೆನ್‌ಸೆಗ್ಸ್ ಶೈಲಿಯಲ್ಲೋ ಕಟ್ಟಡಗಳು ನಿರ್ಮಿತವಾಗ ತೊಡಗಿದವು. ನಂತರ ದೇಶೀಯ ಶೈಲಿಯಲ್ಲೇ ಕಟ್ಟಬೇಕೆಂಬ ಆಸೆ ಮೂಡತೊಗಿತು. ಸಂಸ್ಥಾನದಲ್ಲಿ ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡ ಪ್ರಮುಖ ಕಟ್ಟಡಗಳೆಂದರೆ ಜಯಲಕ್ಷ್ಮಿ ವಿಲಾಸ ಅರಮನೆ, ಮಾನಸ ಗಂಗೋತ್ರಿ, ಮೈಸೂರು (೧೯೧೦), ರಾಜೇಂದ್ರ ವಿಲಾಸ ಅರಮನೆ, ಚಾಮುಂಡಿಬೆಟ್ಟ, ಮೈಸೂರು (೧೯೦೦-೧೯೧೦) ಕಾವೇರಿ ಪಟ್ಟನಂ ಛತ್ರ, ಗಾಂಧೀ ಚೌಕ, ಮೈಸೂರು (೧೯೧೦) ಗನ್ ಹೌಸ್ ಕಟ್ಟಡ, ಅರಮನೆಯ ದಕ್ಷಿಣಕ್ಕೆ, ಮೈಸೂರು (೧೯೧೦) ಬೆಂಗಳೂರು ಅರಮನೆ (೧೯೧೦ – ೨೦) ಸೆಂಟ್ರಲ್ ಕಾಲೇಜು, ಬೆಂಗಳೂರು (೧೯೧೦ – ೨೦) ಲೋಕರಂಜನ್ ಮಹಾಲ್, ಇಟ್ಟಿಗೆ ಗೂಡು, ಮೈಸೂರು (೧೯೦೦), ಅಂಬಾ ವಿಲಾಸ ಅರಮನೆ ಮೈಸೂರು ಅರಮನೆ (೧೯೧೧ – ೧೨) ಚಾಮುಂಡಿ ಗೆಸ್ಟ್ ಹೌಸ್, ಮೈಸೂರು (೧೯೧೦ – ೧೨), ಚಾಮರಾಜೇಂದ್ರ ಶೈಕ್ಷಣಿಕ ಶಾಲೆ, ಸಯ್ಯಾಜಿರಾವ್ ರಸ್ತೆ, ಮೈಸೂರು (೧೯೦೬ ೧೯೧೭), ಬನುಮಯ್ಯ ಶಾಲೆ, ಮೈಸೂರು (೧೯೧೭) ಕ್ಯಾಪ್ಟನ್ ಕೃಷ್ಣರವರ ವಸತಿಗೃಹ, ಮೈಸೂರು (೧೯೧೦-೧೯೨೦), ಕೇಂದ್ರ ಅಂಚೆ ಮತ್ತು ತಂತಿ ಕಛೇರಿ, ಮೈಸೂರು (೧೯೧೬ – ೧೯೧೮), ಕೃಷ್ಣರಾಜೇಂದ್ರ ಅಸ್ಪತ್ರೆ, ಮೈಸೂರು (೧೯೧೮) ಜನತಾ ಬಜಾರ್ ಕಟ್ಟಡ, ಮೈಸೂರು (೧೯೨೦) ವಿಕ್ಟೋರಿಯಾ ಅಸ್ಪತ್ರೆ ಬೆಂಗಳೂರು (೧೯೨೦) ಬ್ಯಾಂಡ್ ಹೌಸ್ ಮಿಜಾನ್ ರಸ್ತೆ ಮೈಸೂರು(೧೯೨೦) ಸಾರ್ವಜನಿಕ ಕಛೇರಿಗಳು, ಸಯ್ಯಾಜಿರಾವ್ ರಸ್ತೆ ಮೈಸೂರು (೧೯೨೧), ಮೈಸೂರು ಮಹಾನಗರ ಪಾಲಿಕೆ. ಮೈಸೂರು (೧೯೨೧) ಲಲಿತ ಮಹಲ್ ಅರಮನೆ, ಮೈಸೂರು(೧೯೨೧) ಸರ್ಕಾರಿ ವೈದ್ಯಕೀಯ ಕಾಲೇಜು (೧೯೨೪), ಯುವರಾಜ ಕಾಲೇಕು, ಮೈಸೂರು (೧೯೨೭) ವಾಣಿವಿಲಾಸ ಮಾರುಕಟ್ಟೆ ಮೈಸೂರು (೧೯೨೮) ವುಡ್ ಲ್ಯಾಂಡ್ಸ್ ಸಿನಿಮಾ ಮಂದಿರ (ಲಿಜೆನ್ಸಿ) ಮೈಸೂರು (೧೯೨೮ – ೩೨), ಚಲುವಾಂಬ ಅಸ್ಪತ್ರೆ ಮೈಸೂರು (೧೯೩೮) ಶ್ರೀ ಜಯದೇವ ಮುರುಘರಾಜೇಂದ್ರ ಪೆಥಾಲಜಿಕಲ್ ಅಸ್ಪತ್ರ ಮೈಸೂರು(೧೯೩೮) ಇನ್ನೂ ಹಲವಾರು ವಾಸ್ತುಶಿಲ್ಪ ಕಟ್ಟಡಗಳು, ಇವುಗಳಲ್ಲಿ ಮುಖ್ಯವಾದ ವಾಸ್ತುಶಿಲ್ಪಗಳ ಬಗ್ಗೆ ವಿವರಗಳನ್ನು ಕೊಡಲಾಗಿದೆ. ಬಹುಮುಖ್ಯವಾಗಿ ಅಂದಿನ ಐರೋಪ್ಯ ವಾಸ್ತುಶೈಲಿಯ ಸ್ವಾರಸ್ಯವನ್ನು ಸೆಳೆಯುವಲ್ಲಿ ಆ ಕಾಲದ ಕಟ್ಟಡಗಳತ್ತ ಕಣ್ಣು ಹಾಯಿಸಬೇಕು. ಮುಖ್ಯವಾಗಿ ಹಳೇ ಮೈಸೂರು ಸಂಸ್ಥಾನದಲ್ಲಿ ಐರೋಪ್ಯ ಶೈಲಿ ಜನಪ್ರಿಯವಾಯಿತು. ಇದರಿಂದ ನಾಡಿನ ವಾಸ್ತಿಶಿಲ್ಪಕ್ಕೆ ಹೊಸ ಆಯಾಮ ಸೇರಿಕೊಂಡಿತ್ತೆಂದರೂ ತಪ್ಪಾಗದು, ಐರೋಪ್ಯ ಇಂಜನಿಯರ್ ಗಳು ತಮಗೆ ಪರಿಚಿತವಾಗಿ ಆಯೋನಿಕ್, ಡೋಲಿಕ್, ಕೊರಿಂತಿಯನ್, ಗಾಂಥಿಕ್, ರಿನೋಸಾನ್ಸ್, ಅಮೆರಿಕನ್ ಮುಂತಾದ ವಿವಿಧ ವಿದೇಶಿ ಶೈಲಿಗಳನ್ನು ಈ ನಾಡಿಗೆ ಎರವಲು ತಂದರು. ಐರೋಪ್ಯ ವಾಸ್ತುಶೈಲಿಯಲ್ಲೇ ಗಂಡು ಶೈಲಿ ಎಂದು ಹೆಸರಾದ ಡೋರಿಕ್ ಮಾದರಿಯ ಕಂಬ ಸಾಲುಗಳನ್ನು ಸೊಗಸಾಗಿ ಅಳವಡಿಸಲಾಯಿತು. ಇದಕ್ಕೆ ಉದಾಹರಣೆ ಎಂದರೆ ಜಯಲಕ್ಷ್ಮಿ ಅರಮನೆ, ಲಲಿತ ಮಹಲ್ ಕಟ್ಟಡ ಚಲುವಾಂಬ ಮಹಿಳೆ, ಮೈಸೂರು ವಿಶ್ವವಿದ್ಯಾಲನಿಲಯ ಕೇಂದ್ರ ಕಛೇರಿ, ಕೃಷ್ಣರಾಜೇಂದ್ರ ಅಸ್ಪತ್ರೆ ಮುಂತಾದವುಗಳನ್ನು ಗುರುತಿಸಬಹುದು. ಈ ಕಂಬಗಳು ಅಲಂಕರಣದಲ್ಲಿ ಕಡಿಮೆಯಾದರೂ ನೋಟಕ್ಕೆ ಸೊಗಸಾಗಿರುತ್ತವೆ. ಒಂದೇ ಕಲ್ಲಿನಲ್ಲಿ ಕೆತ್ತಿದಂತೆ ಕಾಣುವ ಇಟ್ಟಿಗೆ ಗಾರೆ ಕಂಬಗಳು ಬುಡದಲ್ಲಿ ದಪ್ಪಾಗಿದ್ದು ಮೇಲೆ ಹೋದಂತೆ ತೆಳುವಾಗಿರುತ್ತವೆ. ದೂರದ ನೋಟಕ್ಕೆ ಈ ಸ್ತಂಭ ಮಾದರಿ ಅದ್ಬುತವಾಗಿರುತ್ತದೆ.

ಮೈಸೂರು ಅರಮನೆ

ಮೈಸೂರಿನ ಅರಮನೆಗಳ ನಗರ. ಈ ಅರಮನೆಗಳಲ್ಲೇ ಬಹುಮುಖ್ಯವಾದದ್ದು ವಿಶ್ವವಿಖ್ಯಾತವೆಂದೇ ಹೆಸರುವಾಸಿಯಾಗಿರುವ ಮೈಸೂರು ಅರಮನೆ ಅಥವಾ ಅಂಬಾ ವಿಲಾಸ ಅರಮನೆ. ಕ್ರಿ.ಶ. ೧೪ನೇ ಶತಮಾನದಲ್ಲಿಯೇ ಇಲ್ಲಿ ಅರಮನೆ ಇತ್ತೆಂದು ಮೈಸೂರು ರಾಜವಂಶಾವಳಿಯಿಂದ ತಿಳಿದುಬರುತ್ತದೆ. ಕ್ರ.ಶ. ೧೬೩೦ರಲ್ಲಿ ಸಿಡಿಲು ಬಡಿದು ಹಾನಿಯಾದ ಅರಮನೆಯನ್ನು ಕಂಠೀರವ ನರಸರಾಜ ಒಡೆಯರು ಅದೇ ಸ್ಥಳದಲ್ಲಿಯೇ ಪುನಃ ನಿರ್ಮಿಸಿದರು. ೧೮೦೧ರ ಒಳಗೆ ಪ್ರಾಚೀನ ಅರಮನೆ ಇದ್ದ ಸ್ಥಳದಲ್ಲಿಯೇ ಅದೇ ನಕ್ಷೆಯಂತೆ ಮರದ ಅರಮನೆಯೊಂದು ನಿರ್ಮಾಣವಾಯಿತ್ತೆಂದು ಐತಿಹಾಸಿಕ ದಾಖಲೆಗಳಿಂದ ನಮಗೆ ತಿಳಿದುಬರುತ್ತದೆ. ೧೮೯೭ರಲ್ಲಿ ಆಕಸ್ಮಿಕ ಅಗ್ನಿಸ್ಪರ್ಶದಿಂದಾಗಿ ಈ ಮರದ ಅರಮನೆಯು ನಾಶವಾಯಿತು. ಹೆನ್ರಿ ಇರ‍್ಸಿನ್ ಎಂಬ ಐರೋಪ್ಯ ವಾಸ್ತುಶಿಲ್ಪಿಯ ನಕ್ಷೆಯಂತೆ ಇಂದು ನಾವು ನೋಡುವ ಅರಮನೆಯನ್ನು ನಿರ್ಮಿಸಲಾಯಿತು. ೧೫ ವರ್ಷಗಳು ನಿರ್ಮಾಣ ಕಾರ್ಯ ನಡೆದಿರುವ ಇಂಡೋ ಸಾರಸನಿಕ್ ಶೈಲಿಯ ಮೈಸೂರು ಅರಮನೆ ಸುವಿಖ್ಯಾತವಾದದ್ದು. ಇದು ೧೯೧೧ – ೧೨ರಲ್ಲಿ ಸಂಪೂರ್ಣವಾಯಿತು. ಅಂದ, ಚಂದ, ಕುಸುರಿ, ಕೆಲ, ನಯಗಾರಿಕೆ, ಭವ್ಯತೆ, ತಂತ್ರಗಾರಿಕೆಯ ಸಮನ್ವಯದಲ್ಲಿ ಅದ್ಭುತವಾದ ಈ ಅರಮನೆಯಂಥದ್ದು ಇನ್ನೊಂದಿಲ್ಲ. ಈ ಅರಮನೆಯ ಹಿಂದೂ, ಮುಸ್ಲಿಂ ಮತ್ತು ಐರೋಪ್ಯ ಶೈಲಿಗಳ ಆಕರ್ಷಣೆಯ ಸಂಗಮ. ಈ ಕಟ್ಟಡ ಮೈಸೂರಿನ ವಾಸ್ತುಶಿಲ್ಪಿಗೆ ಕೈಗನ್ನಡಿಯಂತಿದೆ.

ಮೂರ್ತಿಶಿಲ್ಪ

ಒಡೆಯರ್ ರವರು ಮೂರ್ತಿಶಿಲ್ಪಕ್ಕೆ ಹೆಚ್ಚಿನ ಅದ್ಯತೆ ನೀಡಿರುವುದು ಆಧಾರಗಳಿಂದ ತಿಳಿದುಬರುತ್ತದೆ. ಶಿಲ್ಪಶಾಸ್ತ್ರ ಮತ್ತು ಆಗಮಶಾಸ್ತ್ರಗಳಲ್ಲಿ ನಿರೂಪಿತವಾದ ಲಕ್ಷಣಗಳಿಗನುಸಾರವಾಗಿ ಪ್ರತಿಮೆಗಳನ್ನು ಕಲ್ಲಿನಲ್ಲಿ, ಗಾರೆಯಲ್ಲಿ, ಕಂಚಿನಲ್ಲಿ ರೂಪಿಸಿರುವುದನ್ನು ಹೆಚ್ಚು ಕಟ್ಟುನಿಟ್ಟಾಗಿ ಅನುಸರಿಸಿದ ಕಾರಣ ಶಿಲ್ಪಿಯ ಸ್ವಾತಂತ್ರ್ಯ ಮೊಟಕಾಗಿ ವಿಗ್ರಹಗಳು ಕೃತಕವೆಂಬಂತೆ ಕಾಣುತ್ತವೆ. ಮೈಸೂರು ಒಡೆಯರು ಈ ಕಲೆಯ ಅಭಿವೃದ್ಧಿಗಾಗಿಯೇ ಚಾಮರಾಜೇಂದ್ರ ಟೆಕ್ನಿಕಲ್ ಇನ್ ಸ್ಟಿಟ್ಯೂಟ್ ಸ್ಥಾಪಿಸಿದರು. ಲೋಹ ಶಿಲ್ಪಿ ಚಿನ್ನಾವಾರ್, ಮರದ ಶಿಲ್ಪಿ ಎಸ್. ನರಸಿಂಹಾಚಾರ್, ಶಿಲ್ಪಿ ಸಿದ್ಧಾಂತಿ ಅಭಿನವ ಜಕಣಾಚಾರ್ಯರೆಂದು ಪ್ರಸಿದ್ಧರಾದ ಸಿದ್ಧಲಿಂಗಸ್ವಾಮಿಗಳು ಪ್ರಾಚೀನ ಶಿಲ್ಪಶಾಸ್ತ್ರದ ನಿಯಮಗಳಿಗೆ ತಕ್ಕಂತೆ ದೇವರಮೂರ್ತಿ ಹಾಗೂ ವರ್ಣಚಿತ್ರಗಳನ್ನು ನಿರ್ಮಿಸಿ ಖ್ಯಾತರಾಗಿದ್ದಾರೆ. ಬೆಳ್ಳಿಯಲ್ಲಿನ ಕುಸುರಿ ಕೆಲಸಕ್ಕೆ ಹೆಸರಾಗಿದ್ದ ಡಿ.ವಿ ಸುಬ್ಬಣ್ಣಾಚಾರ್ಯರು ರಚಿಸಿರುವ ಸರಸ್ಪತಿ, ಚಾಮುಂಡಿ, ಉಡುಪಿ ಕೃಷ್ಣ ಮೊದಲಾದವು ಸೇರಿವೆ. ಅಂಕಾಪ್ಪಾಚಾರ್ಯರು, ರೇಣುಕಾಚಾರ್ಯರು, ವಿ.ವಿ. ಚಿನ್ನಾಚಾರ್‌ರವರು ಪಂಚಲೋಹದ ವಿಗ್ರಹ ಕೆತ್ತನೆಯಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು, ಚಿನ್ನಾಚಾರ್ ರವರು ನಿರ್ಮಿಸಿರುವ ಕೈಜೋಡಿಸಿ ನಿಂತಿರುವ ನಾಲ್ವಡಿ ಕೃಷ್ಣರಾಜರ ಪಂಚಲೋಹ ಪ್ರತಿಮೆ ಬೇಲೂರಿನ ದೇವಾಲಯದಲ್ಲಿದೆ. ಅಪೂರ್ವ ಶಿಲ್ಪಿಗಳೆನ್ನಿಸಿದ್ದ ಬಿ. ಬಸಪ್ಪನವರು ಮೈಸೂರು ಅರಮನೆಯಲ್ಲಿ ನಿರ್ಮಿಸಿರುವ ನಾಲ್ವಡಿ ಕೃಷ್ಣರಾಜರೇ ಯಥಾವತ್ತಾಗಿ ರಾಜಠೀವಿಯಿಂದ ಹಸನ್ಮುಖಿಗಳಾಗಿ ಕುಳಿತಿರುವ ಅಪೂರ್ವ ಪ್ರತಿಮೆ ಯಾರನ್ನಾದರೂ ಆಶ್ಚರ್ಯಪಡಿಸುವಂತೆ ಮಾಡದೆ ಇರದು. ಅಂದಿನ ಕಾಲದ ಶಿಲ್ಪ ಚಾತುರ್ಯಕ್ಕೆ ಇದೊಂದು ಕೃತಿ ಸಾಕು ಎಂದೆನ್ನಿಸುತ್ತದೆ.

ಚಿತ್ರಕಲೆ

ವಿಜಯನಗರದ ನಂತರ ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟವರು ಮೈಸೂರು ಅರಸರು. ಇವರ ಕಾಲದಲ್ಲಿ ಅನೇಕ ದೇವಾಲಯ, ಕಟ್ಟಡ ಹಾಗೂ ಅರಮನೆಗಳಲ್ಲಿ ವರ್ಣರಂಜಿತವಾದ ಅಪರೂಪದ ಭಿತ್ತಿ ಚಿತ್ರಗಳ ರಚನೆಯಾಗಿದೆ. ಆಧುನಿಕ ಕಾಲದ ಅರಸರ ಆಳ್ವಿಕೆಯಲ್ಲಿ ಮೈಸೂರು ದೇಶಿಯ ಶೈಲಿಯ ಅಪೂರ್ವ ಚಿತ್ರಪಟಗಳು, ಮನೆ, ಮಂದಿರ ಅರಮನೆ, ಗುರುಮನೆ, ಪಾಠಶಾಲೆಗಳಲ್ಲಿ ಹೆಚ್ಚಾಗಿ ದೊರಕುತ್ತವೆ. ಇವುಗಳನ್ನು ಮನೆಯಗೋಡೆ, ರಾಜ್ಯ ಹಲಗೆ, ತಾಟಗಳು ಹಾಗೂ ಬಟ್ಟೆಯ ಮೇಲೆ ಬರೆಯಲಾಗಿದೆ. ಹೆಚ್ಚಾಗಿ ಈ ಚಿತ್ರಕಲೆ ಇಂದು ದೇವಾಲಯಗಳು, ಮಠಗಳು, ಮಹಲುಗಳು, ಗೋಡೆ ಹಾಗೂ ಚಾವಣಿಗಳು ಮೇಲೆ ಅವು ಇಂದು ಉಳಿದುಬಂದಿವೆ. ಜಲ ಅಥವಾ ತೈಲವರ್ಣದಿಂದ ಗೋಡೆಗಳನ್ನೋ, ಚಾವಣಿಗಳನ್ನೋ, ತೊಲೆಗಳನ್ನೋ ಆಧಾರವಾಗಿ ಮಾಡಿಕೊಂಡು ವಿಸ್ತಾರವಾದ ಚಿತ್ರರಚನೆ ಮಾಡಿರುವುದು ಕಂಡುಬರುತ್ತದೆ.

ಅಂದು ಇದ್ದ ಚಿತ್ರ ಕಲಾಗಾರರೆಂದರೆ ಜರ್ಮನಿಯ ಜಿಲಾದೀನ್ ಉಡ್ ವಿಲ್ ಇಂಗ್ಲಿಂಡಿನ ಸ್ಟರ‍್ಲಿಂಗ್, ಇಟಲಿಯ ಕೊಲ್ ಟನ್, ಮೈಕ್ ಸ್ಲರ್, ತಿರುವಾಂಕೂರಿನ ರಾಜು ರವಿವರ್ಮ, ಇವರ ತಮ್ಮ ರಾಮವರ್ಮ ಮುಂತಾದವರನ್ನು ಸೂಚಿಸಬಹುದು. ಸ್ಥಳೀಯ ಕಲಾವಿದರಾದ ಕೆ. ಕೇಶವಯ್ಯ, ವೈ. ನಾಗರಾಜು, ಎಸ್. ನಂಜುಂಡಸ್ವಾಮಿ ವೈ. ಸುಬ್ರಹ್ಮಣ್ಯರಾಜು, ಎಸ್. ಆರ್. ಆಯ್ಯಂಗಾರ್, ಶಂಕರಾಜು, ಎಸ್. ಎನ್ ಸ್ವಾಮಿಗಳವರಿಂದ ಅರಮನೆಯ ಗೋಡೆಗಳ ಮೇಲೆ ಅಂದಿನ ಸಾಂಸ್ಕೃತಿಕ ಅಂಶವನ್ನು ಸೂಚಿಸುವ ಸನ್ನಿವೇಶಗಳನ್ನು ವರ್ಣನಾತ್ಮಕವಾಗಿ ಬರೆಸಿರುವುದು ಕಂಡುಬರುತ್ತದೆ. ಅರಮನೆಯ ಕಲಾವಿದರಾಗಿದ್ದ ಎಂ.ಎ. ಅಜೀಜ್ ರವರು ಹಿರಿಯ ವರ್ಣಚಿತ್ರಕಾರರಾಗಿದ್ದರು. ಜಲವರ್ಣ ಹಾಗೂ ತೈಲ ವರ್ಣದಲ್ಲಿ ಇವರು ರಚಿಸಿರುವ ಚಿತ್ರಗಳು ವಿಶ್ವವಿಖ್ಯಾತವಾಗಿವೆ.

ಹೀಗೆ ಮೈಸೂರಿನ ಅರಸರು ತಮ್ಮ ಆಳ್ವಿಕೆಯ ಕಾಲದಲ್ಲಿ ಸಂಸ್ಥಾನದಲ್ಲಿ ವಾಸ್ತುಶಿಲ್ಪ, ಮೂರ್ತಿಶಿಲ್ಪ ಹಾಗೂ ಚಿತ್ರಕಲೆಗಳಿಗೆ ಅಪಾರ ಪ್ರೋತ್ಸಾಹವನ್ನು ಕೊಟ್ಟು ಅವುಗಳ ಬೆಳವಣಿಗೆಗೆ ಕಾರಣಕರ್ತರಾದರು. ಒಂದು ರೀತಿಯಲ್ಲಿ ಆಧುನಿಕ ಶಿಲ್ಪಕಲೆಗೆ ಬುನಾದಿ ಹಾಕಿದವರೆಂದರೆ ಮೈಸೂರಿನ ಅರಸರು.

ಸಂಗೀತ

ಮೈಸೂರು ಅರಸರ ಕಾಲದಲ್ಲಿ ಕರ್ನಾಟಕ ಸಂಗೀತವು ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತೆನ್ನಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರು ಮತ್ತು ಚಾಮರಾಜ ಒಡೆಯರು ಈ ಕಲೆಯನ್ನು ಅತ್ಯಂತ ಆಸಕ್ತಿ ಮತ್ತು ಶ್ರದ್ಧೆಯಿಂದ ಪೋಷಿಸಿಕೊಂಡು ಬಂದಿದ್ದರು. ಆಧುನಿಕ ಮೈಸೂರಿನ ಶಿಲ್ಪಿ ಎಂದೇ ಹೆಸರಾಗಿರುವ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಕರ್ನಾಟಕ ಸಂಗೀತ, ಹಿಂದೂ ಸ್ಥಾನಿ ಸಂಗೀತ, ಪಾಶ್ಚಿಮಾತ್ಯ ಸಂಗೀತಗಳಲ್ಲಿ ಸಮಾನವಾದ ಆಸಕ್ತಿ ಹಾಗೂ ಪರಿಣಿತಯನ್ನು ಪಡೆದಿದ್ದರೆಂದು ಸಿ.ಕೆ ವೆಂಕಟರಾಮಯ್ಯನವರು ತಮ್ಮ ‘ಆಳಿದ ಮಹಾಸ್ವಾಮಿಗಳು’ ಎಂಬ ಪುಸ್ತಕದಲ್ಲಿ ಚರ್ಚಿಸುತ್ತಾರೆ.

ನಾಲ್ವಡಿಯವರ ಅಸ್ಥಾನದಲ್ಲಿ ಕರ್ನಾಟಕ ಸಂಗೀತದ ದಿಗ್ಗಜರೆನ್ನಿಸಿಕೊಂಡಿದ್ದ ಮೈಸೂರು ವಾಸುದೇವಾಚಾರ್ಯ, ವೀಣೇ ಶೇಷಣ್ಣ, ವೀಣೆ ವೆಂಕಟಗಿರಿಯಪ್ಪ ಚಂದ್ರಶೇಖರ ಶಾಸ್ತ್ರಿ, ಜಯರಾವ್, ಶ್ರೀಕಂಠಶಾಸ್ತ್ರಿ, ತಮ್ಮಯ್ಯ, ವೀಣೆ ಸುಬ್ಬಣ್ಣ ಶಿವರಾಮಯ್ಯ, ಬಿಡಾರ ಕೃಷ್ಣಪ್ಪ ಭೈರವಿ, ಕೆಂಪೇಗೌಡ, ಲಕ್ಷ್ಮಿ ನಾರಾಯಣಪ್ಪ ತಿಕಟ್ಟೆ ಕೃಷ್ಣಯ್ಯಾಂಗಾರ್, ಪಟೇಲ್ ಚೌಡಯ್ಯ. ಪಟೇಲು ಶಿವರುದ್ರಪ್ಪ, ದೇವೇಂದ್ರಪ್ಪ ವೆಂಕಟಗಿರಿಯಪ್ಪ. ದೊರೆಸ್ವಾಮಿ ಐಯ್ಯಂಗಾರ್, ಮೃದುಂಗದ ಮುತ್ತು ತೇವರ್, ಬಿ ಪುಟ್ಟಸ್ವಾಮಯ್ಯ, ಬೆಂಗಳೂರು ನಾಗರತ್ನಮ್ಮ, ಆರ್.ಎಸ್. ಕೇಶವಮೂರ್ತಿಗಳಿಗೆ ಆಶ್ರಯ ನೀಡಿ ಸಂಗೀತ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತ ಹೀಗೆ ಅಂದಿನ ಆಸ್ಥಾನವು ಅನೇಕ ಪ್ರಸಿದ್ದ ಕಲಾವಿದರಿಗೆ ಆಶ್ರಯ ಸ್ಥಾನವಾಗಿತ್ತು.

ಹಿಂದೂಸ್ತಾನಿ ಸಂಗೀತವು ಆಧುನಿಕ ಮೈಸೂರು ಸಂಸ್ಥಾನದಲ್ಲಿ ವಿಜೃಂಭಿಸಿ ನಾಡಿನ ಸಂಸ್ಕೃತಿಯನ್ನು ಹೆಚ್ಚಿಸಿದೆ. ಪ್ರಸಿದ್ಧ ಸಂಗೀತಗಾರಾದ ಆಗ್ರಾ ಘರಾನೆಯ ನಿಸ್ಸಾರ್ ಹುಸೇನ್ (ನತ್ತನ್ ಖಾನ್) ಅವರು ನಾಲ್ವಡಿಯವರ ಆಸ್ಥಾನದಲ್ಲಿದ್ದರು. ಫಯಜ್ ಹುಸೇನ್‌ಖಾನ್ ರವರು ಮೈಸೂರಿನಲ್ಲಿ ಅನೇಕ ವರ್ಷಗಳ ಕಾಲ ನೆಲೆನಿಂತು ಹಿಂದೂಸ್ಥಾನಿ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ನಾಲ್ವಡಿಯವರ ಅಸ್ಥಾನದಲ್ಲಿದ್ದ ಹಿಂದೂಸ್ತಾನಿ ಸಂಗೀತಗಾರರೆಂದರೆ ಜೈಪುರದ ರಹಿಮತ್, ಹುಸೇನ್‌ಖಾನ್, ಷಂಸುದ್ದೀನ್‌ಖಾನ್, ಇಂದೂರಿನ ಜಮಾರ್ ಖಾನ್, ಇನಾಯತ್‌ಖಾನ್, ಲತೀಫ್‌ಖಾನ್ ಉದಯಪುರದ ಬೋರಾಖಾನ್, ಬರ್‌ಹಾಂಪುರದ ವಜೀರ್ ಖಾನ್, ಹಸನ್‌ಖಾನ್, ಬೊಂಬಾಯಿಯ ಕೃಷ್ಣಬಾಯಿ ಮತ್ತು ಅಬಸುಲ್ ಕರೀಂಖಾನ್ ಹಾಗೂ ದೆಹಲಿಯ ಮಹಮದ್‌ಖಾನ್ ಮೊದಲಾದವರು ಪ್ರಮುಖರೆನ್ನಿಸಿದ್ದಾರೆ. ಇದರಿಂದ ಮೈಸೂರಿನಲ್ಲಿ ಹಿಂದೂಸ್ತಾನಿ ಸಂಗೀತ ಭಾರತದಲ್ಲಿಯೇ ಪ್ರಸಿದ್ಧಿ ಪಡೆಯಿತು.

ನಾಟಕ

ಮೈಸೂರು ಸಂಸ್ಥಾನದ ಜನರ ಸಾಂಸ್ಕೃತಿಕ ಬದುಕಿನಲ್ಲಿ ಪ್ರಮುಖವಾಗಿ ರಂಗಭೂಮಿ ಕಲೆಯು ವಿಶಿಷ್ಟವಾದ ಇತಿಹಾಸ ಸೃಷ್ಟಿಸಿಕೊಂಡಿದೆ ಎನ್ನಬಹುದು. ಅಕ್ಷರಜ್ಞಾನ ತಿಳಿಯದಿದ್ದಾಗ ಮೌಖಿಕವಾಗಿಯೇ ಸೃಷ್ಟಿಗೊಂಡ ಈ ಕಲೆ ಮೊದಲು ಪ್ರಮುಖವಾಗಿ ಅಣಕು ದನಿಯಲ್ಲಿಯೇ ಪ್ರಯೋಗವಾಗುತ್ತಿತ್ತೆಂದು ಹೇಳಬಹುದು.

ಮೈಸೂರು ಸಂಸ್ಥಾನದ ಅರಸರು ಆಳ್ವಿಕೆಯು ರಂಗಭೂಮಿ ನಾಟಕಕ್ಕೆ ಹಾಗೂ ಕನ್ನಡ ನಾಟಕ ರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕನ್ನಡದ ಪ್ರಪ್ರಥಮ ನಾಟಕ ಕೃತಿಯೆನ್ನಿಸಿಕೊಂಡಿರುವ ಸಿಂಗರಾರ‍್ಯನ “ಮಿತ್ರಾವಿಂದ ಗೋವಿಂದ ಕೃತಿಯು ಇವರ ಕಾಲದಲ್ಲಿಯೇ ರಚನೆಗೊಂಡು ರಂಗ ಪ್ರವೇಶಿಸಿತ್ತೆಂದರೆ ಅದ್ಬುತವೇ ಸರಿ. ಏಕೆಂದರೆ ನಮ್ಮ ನಾಡಿಗೆ ಸಾವಿರಾರು ವರ್ಷಗಳಷ್ಟು ಇತಿಹಾಸವಿದ್ದರೂ, ವೀರ ಪರಾಕ್ರಮ ರಾಜಮಹಾರಾಜರ ವಂಶಗಳೂ ಆಳ್ವಿಕೆ ನಡೆಸಿ ಮೆರೆದು ಮಣ್ಣಾಗಿದ್ದರೂ ಇವರೆಲ್ಲರ ಸಾಲಿನಲ್ಲಿ ಈ ಹಂತದಲ್ಲಿ ಪ್ರಮುಖವಾಗಿ ನಿಲ್ಲುವ ಸಂಸ್ಥಾನವೇ ಮೈಸೂರು. ಈ ಕನ್ನಡದ ಪ್ರಥಮ ನಾಟಕವು ಕೂಡ ಮೂಲ ರಚನೆಯಾಗಿದೆ. ಶ್ರೀಹರ್ಷನು ಬರೆದ ರತ್ನಾವಳೀ ಎಂಬ ಕೃತಿಯ ರೂಪಾಂತರವೆಂಬುದನ್ನು ನೆನಪಿನಲ್ಲಿಡಬೇಕಾಗಿದೆ. ಕ್ರಿ.ಶ. ೯ನೇ ಶತಮಾನದಷ್ಟು ಹಿಂದೆಯೇ ಈ ನಾಟಕ ರಂಗ ಪ್ರವೇಶಗಳ ಇತಿಹಾಸ ಉಲ್ಲೇಖವಿದ್ದರೂ ಅದನ್ನು ಸ್ವಸಂಸ್ಥಾನಕ್ಕೆ ಹೋಲಿಸಿಕೊಂಡರೆ ದೇಶಿ ಎನ್ನಲಾಗುವುದಿಲ್ಲ. ಏಕೆಂದರೆ ಅವುಗಳೆಲ್ಲವೂ ಸಂಸ್ಕೃತ ಮಯವಾಗಿರುತ್ತಿದ್ದವು.

ದೇಶದ ಮಹತ್ವದ ತತ್ವ ನೀತಿಯನ್ನು ಮೈಗೂಡಿಸಿಕೊಂಡು ರಚನೆಯಾಗಿರುವ ರಾಮಾಯಣ ಮತ್ತು ಮಹಾಭಾರತದ ಕಥೆಗಳು ತೋಂಡಿ ಸಂಪ್ರದಾಯದಲ್ಲಿ ದೊರಕಿದಾಗ ಸಂಸ್ಥಾನದ ಜನರಲ್ಲಿ ರಂಗಭೂಮಿಯ ಕ್ರಾಂತಿ ಉಂಟಾಗಿತ್ತೆನ್ನಬಹುದು, ಕಥೆ, ಧರ್ಮ, ನೀತಿ, ಮುಕ್ತಿ, ಕಾವ್ಯ ತತ್ವಭೋದನೆ, ರಸಿಕತೆಗಳೆಲ್ಲವೂ ಈ ಮಹಾ ಕಾವ್ಯಗಳಿಂದ ದೊರಕಲಾರಂಭಿಸಿತು. ಇಂದಿಗೂ ಸಹ ನಮ್ಮ ಹಳ್ಳಿಗಾಡಿನ ಅನಕ್ಷರಸ್ಥ (ಅಕ್ಷರಸ್ಥರೂ ಸಹ ಇತ್ತೀಚೆಗೆ ಹೆಚ್ಚಾಗಿ ಇಂತಹ ರಂಗ ಪ್ರದರ್ಶನಕ್ಕೆ ಒಲಿಯುತ್ತಿರುವುದು ಕಂಡುಬರುತ್ತದೆ) ಜನ ಸಾಮಾನ್ಯರ ಕಲ್ಪನೆಯ ಮೇಲೆ ಮನೆ ಮಾಡಿಕೊಂಡಿರುವ ಈ ಸಂಸ್ಕೃತಿಯು ಆಧುನಿಕತೆಯ ಅಲೆಯಲ್ಲಿಯೂ ಬೆಳೆದು ಬರುತ್ತಿದೆ. ಅಂದು ಈ ಕಾವ್ಯಗಳನ್ನು ತಿಳಿದಿದ್ದ ಕೆಲವೇ ಪಂಡಿತರು ಹಳ್ಳಿಯಲ್ಲಿಗೆ ಹೋಗಿ ನಾಟಕ ಕಲಿಸಿ ಜಾತ್ರೆ, ಹಬ್ಬ, ಉತ್ಸವ, ಸಂತೆಗಳ ಸಮಾರಂಭಗಳಲ್ಲಿ ಅಭಿನಯಿಸುವಂತೆ ಮಾಡುವಲ್ಲಿ ತಲ್ಲಿನರಾಗಿರುತ್ತಿದ್ದರು. ನಂತರ ದೇವತಾ ಕಥೆಗಳು ಹಾಗೂ (ಧಾರ್ಮಿಕ ಅಂಶ ಸೂಚಿಸುವ ಕಥೆ) ರಾಕ್ಷಸ ಕಥೆಗಳನ್ನು (ಕೆಟ್ಟದ್ದನ್ನು ತೊಲಗಿಸುವ ಸಂಕೇತವಾಗಿ) ಸೃಷ್ಟಿಸಿ ರಂಗದಲ್ಲಿ ಪ್ರದರ್ಶಿಸಲಾರಂಭಿಸಿದರು. ಹಳ್ಳಿಯ ನಾಟಕಗಳಲ್ಲಿ ಬಹುಪಾಲು ರೀತಿಯಲ್ಲಿ ಪೌರಾಣಿಕ ವಸ್ತುಗಳಿದ್ದು ಅಲ್ಲಿಯ ಪಾತ್ರಗಳು ಆ ಸನ್ನಿವೇಶಕ್ಕೆ ತಕ್ಕಂತೆ ಕಥೆಗೆ ಹೊಂದಿಕೊಂಡಂತೆ ಪುನರ್ ನಿರ್ಮಾಣ ಮಾಡಿಕೊಳ್ಳಲಾಗುತ್ತಿತ್ತೆನ್ನಬಹುದು.

ಈ ನಾಟಕಗಳಲ್ಲಿ ಮನೋರಂಜನೆಗೆ ಹೆಚ್ಚಿನ ಮಹತ್ವ ನೀಡಲಾಗಿರುತ್ತಿತ್ತು. ಸಂಸ್ಥಾನದಲ್ಲಿನ ರಂಗಭೂಮಿಯು ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ಲಗ್ಗೆ ಹಾಕಿ ಅಲ್ಲಿನ ವ್ಯಾಪಾರಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಹಣಸಂಪಾದಿಸಲು ತೊಡಗಿದ ಮೇಲೆ ಇಲ್ಲಿನ ವ್ಯಾಪಾರಿ ಸಂಸ್ಥೆಗಳು ಪ್ರಮುಖ ಸ್ಥಾನವನ್ನು ಪಡೆಯತೊಡಗಿದ್ದವು. ಆಧುನಿಕ ಮೈಸೂರಿನ ಇತಿಹಾಸದಲ್ಲಿ ಇದು ಹೆಚ್ಚಾಗಿ ಕಂಡುಬಂದಿತ್ತು. ಇದರಲ್ಲಿ ವರದಾಚಾರ್ಯ ಕಂಪನಿ, ಗುಬ್ಬಿ, ವೀರಣ್ಣ ಕಂಪನಿ, ಮಹಮದ್ ಪೀರ್ ಕಂಪನಿ, ಮಳವಳ್ಳಿ ಸುಂದರಮ್ಮ ಕಂಪನಿ, ಹಿರಣ್ಣಯ್ಯ ಕಂಪನಿ ಮೊದಲಾದ ಮಹಾನ್ ಕಲಾವಿದರು ನಾಟಕ ಕಂಪನಿಗಳನ್ನು ಸ್ಥಾಪಿಸಿ ಕನ್ನಡ ನಾಟಕ ಸಂಸ್ಕೃತಿಯನ್ನು ಸಂಸ್ಥಾನದಲ್ಲಿಯೇ ಅಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಉತ್ತಮ ರೀತಿಯಲ್ಲಿ ಪ್ರದರ್ಶಿಸಿ ಪ್ರಸಿದ್ಧವಾಗಿ ಮೆರೆದವು. (ಇಂದಿಗೂ ಸಹ ಇವುಗಳ ಕಂಪು ಉಳಿದುಕೊಂಡಿರುವುದನ್ನು ಕಾಣಬಹುದಾಗಿದೆ) ಗುಬ್ಬಿ ವೀರಣ್ಣನವರ ನಾಟಕವನ್ನು ಸ್ವತಃ ಮಹಾರಾಜರೇ ಕುಳಿತು ಸಂಪೂರ್ಣವಾಗಿ ನೋಡಿ ಅನಂದಿಸಿರುವುದು ಅನೇಕ ದಾಖಲೆಗಳಿಂದ ಕಂಡುಬರುತ್ತದೆ. ಅಂದು ಉತ್ತಮ ನಟನೆ ಮಾಡುವವರಿಗೆ ಹಾಗೂ ಉತ್ತಮ ಹಾಡುಗಾರರಿಗೆ ವಿಶೇಷ ಪ್ರಶಸ್ತಿ ಸನ್ಮಾನಗಳನ್ನು ಮಾಡಿ ಗೌರವಿಸಲಾಗುತ್ತಿತ್ತು. ೨೦ನೇ ಶತಮಾನದ ಪ್ರಮುಖ (ಮೈಸೂರು ಸಂಸ್ಥಾನದ) ನಾಟಕಕಾರರೆಂದರೆ ಟಿ.ಪಿ. ಕೈಲಾಸಂ, ಕ್ಷೀರಸಾಗರ, ಅ.ನ. ಕೃಷ್ಣರಾಯರು ಹಾಗೂ ಪರ್ವತವಾಣಿ ಎಂದು ಹೆಸರಿಸಬಹುದು. ಆಧುನಿಕ ಸಂಸ್ಥಾನದಲ್ಲಿ ನಾಟಕಗಳನ್ನು ಹೆಚ್ಚಾಗಿ ಗಣೇಶೋತ್ಸವ ದಸರ ಮಹೋತ್ಸವ ಮೊದಲಾದ ಹಬ್ಬಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ಇಂದು ಇವು ಸಾರ್ವಜನಿಕ ಉತ್ಸವಗಳನ್ನು ಬಿಟ್ಟು ಸ್ವಾತಂತ್ರ ಪ್ರದರ್ಶನಗಳನ್ನು ನಡೆಸಿಕೊಂಡು ಬರುತ್ತಿವೆ. ಅಂದು ಮಹಾರಾಜರ ಪ್ರೋತ್ಸಾಹವಿದ್ದ ಹಾಗೆ ಇಂದಿನ ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಪ್ರೋತ್ಸಾಹದಿಂದ ತನ್ನದೆ ಆದ ಆಕಾಡೆಮಿಗಳನ್ನು ಸ್ಥಾಪಿಸಿಕೊಂಡು ನಾಟಕ ರಂಗವು ಬೆಳೆದುಬರುತ್ತಿದೆ.

***