.೧ ಭೌಗೋಳಿಕ ಪರಿಸರ

ರಾಜಧಾನಿಯಾದ ವಿದ್ಯಾರಣ್ಯವು (ವಿದ್ಯಾನಗರ) ಹಂಪಿಯ ಸುಂದರ ಪ್ರದೇಶದಲ್ಲಿ ದಕ್ಷಿಣಗಂಗೆ ಎಂದು ಪ್ರಸಿದ್ದವಾಗಿರುವ ತುಂಗಭದ್ರೆಯ ಮಡಿಲಿನಲ್ಲಿ ವಾಸ್ತುವಿನ ಕ್ರಮದಂತೆಯೇ ನಿರ್ಮಾಣವಾಗಿತ್ತು. ಮುಂದೆ ಕೃಷ್ಣದೇವರಾಯನ ಕಾಲದಲ್ಲಿ ಹಿಂದೆ ಪ್ರಸ್ತಾಪಿಸಿರುವ ಹಾಗೆ ವಿಜಯನಗರವೆಂಬುದಾಗಿ ಮರುನಾಮಕರಣ ಹೊಂದಿತು. ಪ್ರಸಿದ್ಧ ವಾಸ್ತುಗ್ರಂಥವೆಂದು ಪರಿಗಣಿಸಿರುವ “ಶುಕ್ರನೀತಿ”ಯಲ್ಲಿ ರಾಜಧಾನಿಗಳ ರಚನಾಕ್ರಮದ ಬಗ್ಗೆ ಯಾವ ರೀತಿಯ ವರ್ಣನೆ ಕಂಡುಬರುತ್ತದೋ ಅದಕ್ಕೆ ತಕ್ಕಂತೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯು ನಿರ್ಮಾಣವಾಗಿರುವುದನ್ನೂ ಕಾಣಬಹುದು, ಶುಕ್ರನೀತಿಯ ಪ್ರಕಾರ ರಾಜಧಾನಿಯು ಸಮುದ್ರ ತೀರದಲ್ಲಿ, ಬೆಟ್ಟಗಳ ಸಮೀಪದಲ್ಲಿ, ಮೃಗಗಳು ಹಾಗೂ ಪಕಿಷಗಳು ಹೇರಳವಾಗಿರುವ ಕಡೆಯಲ್ಲಿ ವಿವಿಧ ರೀತಿಯ ಹೂವು ಹಣ್ಣುಗಳು ಬೆಳೆಯುವ ಕಡೆಗಳಲ್ಲಿ, ಆಹಾರಧಾನ್ಯವನ್ನು ಸಮೃದ್ಧಿಯಾಗಿ ಬೆಳೆಯುವ ಫಲವತ್ತಾದಂತಹ ಪ್ರದೇಶದಲ್ಲಿ, ಸಾಕು ಪ್ರಾಣಿಗಳಿಗೆ ಯೋಗ್ಯವಾದಂತಹ ಸಮತಲ ಪ್ರದೇಶದಲ್ಲಿ ರಾಜಧಾನಿಯನ್ನು ನಿರ್ಮಿಸಬೇಕೆಂದು ಸಾರುತ್ತದೆ. ಆದರೆ ವಿಜಯನಗರದ ರಾಜಧಾನಿಗೆ ಮೇಲಿನ ಎರಡು ಅಂಶಗಳು ಅಂದರೆ ಸಮುದ್ರ ತೀರ ಮತ್ತು ಸಮತಲದ ಲಕ್ಷಣಗಳು ಹೊರತುಪಡಿಸಿ ಮಿಕ್ಕ ಎಲ್ಲಾ ಲಕ್ಷಣಗಳು ಎರುವುದು ಕಂಡುಬರುತ್ತದೆ.

ಪಾಶ್ಚಾತ್ಯ ದೇಶದ ಪ್ರಮಾಣಿಕನಾದ ಪೇಸನು (Paes) ವಿಜಯನಗರಕ್ಕೆ ಭೇಟಿ ನೀಡಿದಾಗ ‘ವಿಜಯನಗರವು ಬೆಟ್ಟಗುಡ್ಡಗಳ ನಡುವೆ ಕಂಗೊಳಿಸುತ್ತದೆ’ ಎಂದು ಅಭಿಮಾನದಿಂದ ನುಡಿದಿದ್ದಾನೆ, ಅಷ್ಟೇ ಅಲ್ಲದೆ ಕೆಲವು ಬೆಟ್ಟಗಳು ಈ ಪಟ್ಟಣಕ್ಕೆ ಇಪ್ಪತ್ನಾಲ್ಕು ಮುಖ್ಯ ರಸ್ತೆಗಳ ದೂರದಲ್ಲೂ, ಇನ್ನೂ ಕೆಲವು ಬೆಟ್ಟಗಳು ರಾಜಧಾನಿಗೆ ಹತ್ತಿರದಲ್ಲೂ ಸುತ್ತುವರಿದಿವೆ. ಬೆಟ್ಟದ ಸಾಳುಗಳನ್ನು ಒಂದೊಂದಾಗಿ ದಾಟಿದಂತೆಲ್ಲ ಎಲ್ಲೆಲ್ಲಿ ಸಮತಟ್ಟಾದ ಪ್ರದೇಶಗಳಿರುವುವೋ ಅಲ್ಲೆಲ್ಲ ಶತ್ರುಗಳು ರಾಜಧಾನಿಗೆ ಸುಲಭವಾಗಿ ಧಾಳಿ ಮಾಡಲಾಗದಂತೆ ಬಲವಾದ ಬೃಹತ್ ಗೋಡೆಗಳನ್ನು ಕಟ್ಟಿಸಿದ್ದರಿಂದ ಮೊದಲನೆಯ ಪರ್ವತ ಶ್ರೇಣಿಯಲ್ಲಿ ನಿರ್ಮಿಸಿದ ಮಹಾದ್ವಾರಗಳ ಮೂಲಕ ಪ್ರವೇಶವನ್ನು ಹೊರತುಪಡಿಸಿದರೆ ಈ ಪಟ್ಟಣಕ್ಕೆ ಬೇರೆ ದಾರಿಗಳಿರಲಿಲ್ಲವೆಂದು ರಾಜಧಾನಿಯ ಬಿಗಿಭದ್ರತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾನೆ. ಈ ನೂತನ ಪಟ್ಟವನ್ನು ತುಂಬ ಅದ್ಭುತವಾಗಿದೆ. ಒಂದು ಕಡೆ ಮೂರು ಕೋಟೆಗಳು, ಒಂದು ಕಡೆ ನದಿಯ ಅಂಚಿನಲ್ಲಿ ಭಯಂಕರವಾದಂತಹ ಕಾಡು. ಮತ್ತೊಂದು ಕಡೆ ಬೃಹತ್ ಕಣಿವೆ, ಮಗದೊಂದು ಕಡೆ ಕಾಡುಪ್ರಾಣಿಗಳು – ಇವು ಪಟ್ಟಣವನ್ನು ಸುತ್ತುವರಿದಿದ್ದುವೆಂದು ಪೇಸನು ರಾಜಧಾನಿಯ ಭದ್ರತೆಯನ್ನು ವಿವರವಾಗಿ ತನ್ನ ಪ್ರವಾಸಿ ಕಥನದಲ್ಲಿ ತಿಳಿಸಿದ್ದಾನೆ.

ಪ್ರಾಚೀನ ಕಾಲದಿಂದಲೂ ಹಿಂದೂ ಸಂಸ್ಕೃತಿಯಲ್ಲಿ ‘ಸಪ್ತ’ ಸಂಖ್ಯೆಗೆ ವಿಶಿಷ್ಟ ಸ್ಥಾನ ನೀಡಲಾಗಿದೆ. ಇದೊಂದು ರೀತಿಯಲ್ಲಿ ಬಹು ಅರ್ಥವನ್ನು ಸೂಚಿಸುವಂತಹ ಸಂಖ್ಯೆ ಎಂದೇ ಹೇಳಬಹುದು. ಸಪ್ತಸಮುದ್ರ ಸಪ್ತಸಾಗರ, ಸಪ್ತ ಮಹರ್ಷಿಗಳು, ಸಪ್ತ ಸ್ವರ, ಏಳುಕೋಟೆ (ಸಪ್ತಕೋಟೆ) ಹಾಗೆಯೇ ವಧೂವರರಿಗೆ ಲೋಕದಲ್ಲಿ ಸುಖಶಾಂತಿಯನ್ನು ನೀಡುವ ಸಪ್ತಪದಿ ಇವುಗಳಲ್ಲೆಲ್ಲವೂ ಸಪ್ತ ಸಂಖ್ಯೆಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಕಂಡುಬರುತ್ತದೆ. ಮೇಲಿನ ಈ ಸಪ್ತದ ಸ್ವರೂಪವನ್ನು ಇಲ್ಲೇಕೆ ಪ್ರಸ್ಥಾಲಿಸಲಾಯಿತೆಂದರೆ ಹಂಪಿ ಪ್ರದೇಶದಲ್ಲಿ ಹೇಮಕೂಟ, ಸುಗ್ರೀವ, ಜಾಂಬವಂತ, ಋಷ್ಕಶೃಂಗ, ಅಂಜನೀ, ಮಾಲ್ಯವಂತ, ಮಾತಂಗ ಎಂಬ ಸಪ್ತ ಪರ್ವತಗಳು ಪವಿತ್ರ ಸ್ಥಾನಪಡೆದಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಅಷ್ಟೇ ಅಲ್ಲದೆ ಈ ಸಪ್ತ ಪರ್ವತಗಳು ಕ್ಷಾಮ, ಶಮ, ದಮ, ತುಷ್ಟಿ, ಸತ್ಯ, ದಾನ, ಅಹಿಂಸಾಗಳಂತಹ ಸಪ್ತ ಮಾರ್ಗಗಳನ್ನು ಜನತೆಯಲ್ಲಿ ಬಿಂಬಿಸುವಂತಹ ಪ್ರತೀಕವಾಗಿದ್ದವೆನ್ನಬಹುದು. ಈ ಅಭಿಪ್ರಾಯವು ಹೆಚ್ಚಾಗಿ ಮೌಖಿಕವಾಗಿ ಸ್ಥಳೀಯವಾಗಿ ದೊರೆಯುತ್ತದೆ.

ರಾಜಧಾನಿಯ ನಿರ್ಮಾಣವನ್ನು ಒಂದನೆಯ ಹರಿಹರದೇವನು ಪ್ರಾರಂಭಿಸಿದ್ದನೆಂದು ಆಧಾರಗಳಿಂದ ತಿಳಿದುಬರುತ್ತದೆ. ಆದರೆ ಅವನ ಕಾಲದಲ್ಲಿ ಮುಗಿಯಲಿಲ್ಲ. ಮುಂದೆ ಬುಕ್ಕದೇವರಾಯನ ಕಾಲದಲ್ಲಿ ಮುಕ್ತಾಯವಾಗಿರಬೇಕೆಂದು ಕೆಲವು ಭೌಗೋಳಿಕ ಕಾರಣವೇ ಹಂಪಿಯನ್ನು ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ನೀಡಿತ್ತೇ ವಿನಃ ಇಲ್ಲಿವರೆಗೆ ನಾವು ಜನಪದರಿಂದ ಹಾಗೂ ಕೆಲವು ಇತಿಹಾಸಗಾರರು ಗುರುತಿಸಿರುವ ಹಾಗೆ ಮೊಲ ನಾಯಿಗಳ ಬೇಟೆಯ ಕಥೆಯು ಪ್ರಮುಖ ಕಾರಣವಾಗಿರಲಿಲ್ಲವೆಂದೇ ಹೇಳಬಹುದು. ನಮ್ಮ ಜನತೆ ಪುರಾಣಮಿಶ್ರಿತವಾದ ಚರಿತ್ರೆಗೆ ಹೆಚ್ಚಿನ ಒತ್ತು ನೀಡುತ್ತಾರೆಯೇ ಹೊರತು. ಸತ್ಯವಾದ ಶುದ್ಧ ಚರಿತ್ರೆಗೆ ಹೆಚ್ಚಾಗಿ ಆಸಕ್ತಿ ವಹಿಸುವುದಿಲ್ಲ ಎಂದೇ ಹೇಳಬಹುದು.

ತುಂಗಭದ್ರ ನದಿಗೆ ಪಂಪಾನದಿ ಎಂಬ ಇನ್ನೊಂದು ಹೆಸರಿದೆ. ಇಲ್ಲಿನ ಕೆಲವು ಪವಿತ್ರ ಜಾಗವನ್ನು ಪಂಪ ತೀರ್ಥ, ಪಂಪ ಸರೋವರ, ಪಂಪ ಕ್ಷೇತ್ರಗಳ ತಾಣವೆಂದು ಗುರ್ತಿಸಲಾಗಿದೆ. ಪಶ್ಚಿಮ ಚಾಳುಕ್ಯ ರಾಜನಾಗಿದ್ದಂತಹ ವಿನಯಾದಿತ್ಯ ಸತ್ಯಾಶ್ರಯನು (ಕ್ರಿ.ಶ. ೬೮೯ – ೬೯೦) ತನ್ನ ಪ್ರಸಾದ ಪತ್ರದಲ್ಲಿ ಹಂಪಾ ಎಂಬ ಮಾತನ್ನು ಉಲ್ಲೇಖಿಸಿರುವುದು ಕಂಡುಬರುತ್ತದೆ. ಹಾಗೆಯೇ ಪಶ್ಚಿಮ ಚಾಲುಕ್ಯರ ರಾಜನಾದ ಜಗದೇಕಮಲ್ಲ ಜಯಸಿಂಹನು ಪಂಪೆ(ಹಂಪೆ)ಯನ್ನು ಸಂದರ್ಶಿಸಿದ ಹಾಗೆ ಅವನ ಅನೇಕ ಶಾಸನಗಳಲ್ಲಿ (ಕ್ರಿ.ಶ. ೧೦೧೮ ರಿಂದ ೧೦೧೯) ಬರೆಸಿಕೊಂಡಿದ್ದಾನೆ. ಕ್ರಿ.ಶ. ೧೧ನೆಯ ಶತಮಾನದಲ್ಲಿ ಚೋಳವಂಶದ ಒಂದನೆಯ ರಾಜರಾಜನೂ, ಕ್ರಿ.ಶ.೧೩ನೇ ಶತಮಾನದಲ್ಲಿ ಅದೇ ವಂಶದವರಾದ ಮೂರನೆಯ ರಾಜರಾಜನೂ ಹಂಪಿಗೆ ಬಂದಿದ್ದರೆಂದು ತಿಳಿದುಬರುತ್ತದೆ. ಹಂಪಿಯನ್ನು “ಸ್ವಾಮಿ ಪಂಪಾಸ್ಥಳವೆಂದು” ಪಶ್ಚಿಮ ಚಾಳುಕ್ಯರ ಸೇನಾಧಿಪತಿಯಾದ ಮಹದೇವನು ಕರೆದುಕೊಂಡಿದ್ದಾನೆ.

ವಿಜಯನಗರದ ರಾಜಧಾನಿಯನ್ನು ದಟ್ಟವಾದ ಅರಣ್ಯವು ಸುತ್ತುವರೆದುಕೊಂಡಿತ್ತು. ಇದು ರಾಜಧಾನಿಯ ಮೊದಲ ಕವಚವಾಗಿತ್ತೆನ್ನಬಹುದು. ವಿದೇಶಿ ಪ್ರವಾಸಿಗನಾದ ಫರಿಸ್ತನು ಇದಕ್ಕೆ ಸಂಬಂಧಿಸಿದಂತೆ “ಈ ಪ್ರದೇಶದಲ್ಲಿ ಅತ್ಯಂತ ಎತ್ತರವಾದಂತಹ ಕೋಟೆಗಳು, ಕಾಡುಗಳೂ ತುಂಬಿದ್ದವು. ಹಾಗೆಯೇ ಮುಂದುವರೆದು ಈ ಕಾಡಿನೊಳಗೆ ಅಶ್ವದಳಗಳೂ ಸಹ ಪ್ರವೇಶಿಸಲು ಕಷ್ಟವಾಗಿತ್ತು. ಎರಡನೆಯ ಭದ್ರತಾ ವ್ಯವಸ್ಥೆಯಲ್ಲಿ ಸುಮಾರು ಐವತ್ತು ಗಜಗಳವರೆಗೆ ಸೈನ್ಯ ಪ್ರದೇಶಕ್ಕೆ ಅವಶ್ಯವಾಗುವಂತೆ ಅರ್ಧ ಅರ್ಧವಾಗಿ ಹೂತಿರುವಂತಹ ಕಲ್ಲಿನ ಗುಂಡುಗಳಿದ್ದವು. ಏಳುಕೋಟೆಯ ಗೋಡೆಗಳು ತುಂಬ ಬಲವಾಗಿ ನಿರ್ಮಿತವಾಗಿದ್ದವು. ಹೊರಗಿನ ಗೋಡೆಯಾದ ಮೇಲೆ ಬರುವಂತಹ ಸಮತಲವಾದಂತಹ ಮೈದಾನದಲ್ಲಿ ಒಂದರ ಹತ್ತಿರ ಮತ್ತೊಂದರಂತೆ ಗುಂಡುಗಳನ್ನು ಹೂಳಿದ್ದಿತು. ಇದರಿಂದಾಗಿ ಸೈನಿಕರ (ವೈರಿಪಡೆಗಳ) ಕಾಲ್ದಳಗಳೂ, ಅಶ್ವದಗಳಗಳೂ ರಾಜಧಾನಿಯೊಳಕ್ಕೆ ಧಾಳಿಮಾಡಲು ಕಷ್ಟವಾಗುತ್ತಿತ್ತು” ಎಂದು ವಿವರವಾಗಿ ವರ್ಣಿಸಿದ್ದಾನೆ. ಮತ್ತೊಬ್ಬ ವಿದೇಶಿ ಪ್ರವಾಸಿಗನಾದ ಅಬ್ದುಲ್ ರಜಾಕನು ತನ್ನ ಹೋಳಿಕೆಯಲ್ಲಿ “ದೊಡ್ಡ ದೊಡ್ಡ ಕಲ್ಲುಗಳಿಂದ ಕಟ್ಟಿದ ಕೋಟೆಯ ಗೋಡೆಗಳೂ, ಕಲ್ಲಿನ ಮಂಟಪಗಳೂ, ದ್ವಾರ ಬಾಗಿಲುಗಳು ಸಾಲುಸಾಲಾಗಿದ್ದವು. ಈ ಏಳು ಗೋಡೆಗಳ ಮಧ್ಯದಲ್ಲಿ ಜೀವಕಳೆಯಿಂದ ಕೂಡಿದಂತಹ ರಾಜಧಾನಿಯು ಶೋಭಿಸುತ್ತಿತ್ತು” ಎಂದು ಹೇಳಿದ್ದಾನೆ. ಇದು ರಾಜಧಾನಿಯ ನಿರ್ಮಾಣ ಹಾಗೂ ಅದರ ನಿರ್ಮಾಣದ ಹಿಂದಿರುವ ಸಂಸ್ಕೃತಿಯನ್ನು ಗ್ರಹಿಸಬಹುದಾಗಿದೆ.

೨.೨ ಕೋಟೆಯ ನಿರ್ಮಾಣ, ಶೈಲಿ

ಕೆಲವು ಆಧಾರಗಳನ್ನು ಗಮನದಲ್ಲಿಟ್ಟುಕೊಂಡು ಹಂಪಿಯ ಕೋಟೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಕೋಟೆಯ ಸ್ಥಾನಮಾನವನ್ನು ಈ ಕೆಳಗಿನ ರೀತಿಯಲ್ಲಿ ವರ್ಣಿಸಬಹುದಾಗಿದೆ. ವಿಜಯನಗರ ಸಾಮ್ರಾಜ್ಯದ ಕೋಟೆಯು ಏಳುಸುತ್ತಿನ ಕೋಟೆ ಎಂದು ಕರೆಸಿ ಕೊಂಡಿತ್ತೆಂದು ಹೇಳುವುದಕ್ಕೆ ನಿದರ್ಶನವಾಗಿಯೇ ಇತಿಹಾಸಗಾರರು ಈ ಕೆಳಗಿನ ರೀತಿ ಗುರುತಿಸುತ್ತಾರೆ. ಹೊಸಪೇಟೆಗೆ (ಹಿಂದಿನ ಹೆಸರು ತಿರುಮಲಾಂಬ ನಗರ) ನೈರುತ್ಯ ದಿಕ್ಕಿನಲ್ಲಿ ಮೊದಲನೆಯ ಕೋಟೆಯೂ, ಹೊಸಪೇಟೆಯಲ್ಲಿಯೇ ತನ್ನ ಎರಡನೆಯ ಕೋಟೆಯನ್ನು. ಹೊಸಪೇಟೆಗೆ ಉತ್ತರದಲ್ಲಿ ತನ್ನ ಮೂರನೆಯ ಕೋಟೆಯನ್ನೂ. ಮಲಪನಗುಡಿ ಗ್ರಾಮದ ದಕ್ಷಿಣಕ್ಕೆ ನಾಲ್ಕನೆಯ ಕೋಟೆಯೂ, ಮಲಪನಗುಡಿ ಗ್ರಾಮದ ಉತ್ತರಕ್ಕೆ ಐದನೆಯ ಕೋಟೆಯೂ, ಹಾಗೆಯೇ ಕಮಲಾಪುರದ ಕೆರೆಯ ದಕ್ಷಿಣಕ್ಕೆ ಆರನೆಯ ಕೋಟೆಯೂ ಮತ್ತು ಈಗ ಕಂಡುಬರುವಂತಹ ಅರಮನೆಯ ಕಟ್ಟಡಗಳ ಪ್ರಾಂತ್ಯದ (ಈ ಕೋಟೆಯ ಪರಿಸರದಲ್ಲಿ ಹಲವಾರು ಸ್ಮಾರಕಗಳನ್ನು ಕಾಣುತ್ತೇವೆ. ಉದಾಹರಣೆಗೆ ರಾಣಿಯರ ಸ್ನಾನದ ಗೃಹ, ವಿಜಯನಗರದ ಹೊಡಸುತ್ತಿನ ಸ್ಮಾರಕಗಳು, ರಾಜನ ಅರಮನೆ ಎಂದು ಹೇಳಲಾಗುವ ಸ್ಥಳ, ಸಭಾಮಂದಿರ, ಮಹಾನವಮಿ ದಿಬ್ಬ. ಅಂತಃಪುರ, ಕಮಲಮಂದಿರ, ಒಳಕೋಟೆ, ಹಜಾರರಾಮ ದೇವಾಲಯ, ಆನೆಲಾಯ ಮೊದಲಾದವುಗಳು) ಸುತ್ತಲೂ ಏಳನೆಯ ಕೋಟೆಯೂ ಇದ್ದವೆಂದು ಹೇಳಬಹುದು. ಈ ವರ್ಣನೆಯನ್ನೇ ವಿದೇಶಿಯಾತ್ರಿಕ ಸೇವೆಲ್ಲಿಯು ತನ್ನ ಪ್ರವಾಸಿ ಕಥನದಲ್ಲಿ ವಿವರಿಸಿರುವುದು ಕಂಡುಬರುತ್ತದೆ.

ವೀರಕಂಪಣ್ಣನ ಪತ್ನಿ ಗಂಗಾದೇವಿಯು ರಚಿಸಿರುವಂತಹ ಸಂಸ್ಕೃತಗ್ರಂಥ ಮಧುರಾ ವಿಜಯಂನಲ್ಲಿ ಕೋಟೆಯ ವೈಭವವನ್ನು ವರ್ಣನಾತ್ಮಕವಾಗಿ ವರ್ಣಿಸಿರುವುದು ಕಂಡುಬರುತ್ತದೆ. “ಮೇರು ಪರ್ವತದಂತೆ ಪ್ರಜ್ವಲವಾದ ಚಕ್ರರೂಪದ ಗೋಪುರಗಳೊಡನೆ ನಾಗಕೇಸರಿಯ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಚಕ್ರಾಕೃತಿಯುಳ್ಳ ಗೋಪುರಗಳು ಪಟ್ಟಣಕ್ಕೆ ಚಕ್ರಾಕೃತಿಯನ್ನು ನೀಡಿವೆ. ನೈಸರ್ಗಿಕವಾಗಿ ಸೃಷ್ಟಿಯಾಗಿರುವಂತಹ ಬೃಹತ್ ಬಂಡೆಗಳನ್ನೇ ಕೋಟೆಯ ನಿರ್ಮಾಣಕ್ಕೆ ಬಳಸಿಕೊಂಡು ಅವಶ್ಯವಿದ್ದಲ್ಲಿ ಕಲ್ಲಿನಿಂದ ಬೃಹತ್ ಗೋಡೆಗಳನ್ನು ನಿರ್ಮಿಸಲಾಗಿದೆ. ಬೃಹತ್ ಬಂಡೆಗಳ ತುತ್ತತುದಿಯಲ್ಲಿ ಕಾವಲು ಗೋಪುರವನ್ನು ನಿರ್ಮಿಸಿಕೊಂಡು ಶತ್ರುಗಳನ್ನು ಗಮನಿಸಲಾಗುತ್ತಿತ್ತೆಂದು ಸಂಕ್ಷಿಪ್ತವಾಗಿ ವಿವರಿಸಿದ್ದಾಳೆ. ಈ ದೃಷ್ಟಿಯಿಂದ ಈ ಗ್ರಂಥ ಐತಿಹಾಸಿಕವಾಗಿದೆ.

ಇಲ್ಲಿಯ ಪುರಾತತ್ವ ಮತ್ತು ಶಿಲ್ಪಗಳ ಅಧ್ಯಯನವೇ ಹತ್ತಾರು ಸಂಪ್ರದಾಯಕ್ಕೆ ತಕ್ಕದಾದುದರಿಂದ ಅವುಗಳ ವಿವರಣೆ ಹಾಗೂ ಚರ್ಚೆಗೆ ಇಲ್ಲಿ ತೊಡಗದೆ ಅಲ್ಲಿಯ ಪುರಾತತ್ವ ಅವಶೇಷಗಳು ಈ ಕೋಟೆಯನ್ನು ಸಂಗಮ ವಂಶದವರಾದ ಹರಿಹರ ಬುಕ್ಕರ ಕಾಲದಲ್ಲಿ ನಿರ್ಮಾಣದ ಕೆಲಸ ಪ್ರಾರಂಭವಾಗಿರಬೇಕೆಂದು ಸಾಬೀತುಪಡಿಸುತ್ತದೆ ಎಂದು ಹೇಳಬಹುದಷ್ಟೆ.

ಹಿಂದಿನ ಕಾಲದ ರಾಜಕೀಯ ವ್ಯವಸ್ಥೆಗೆ ಕೋಟೆಯ ತುಂಬ ಅವಶ್ಯಕವಾಗಿತ್ತು. ಈಗಲೂ ನಾವು ನಮ್ಮ ನಾಡಿನ ಪ್ರತಿಯೊಂದು ಐತಿಹಾಸಿಕ ಪಟ್ಟಣಗಳನ್ನೆ ಗಮನಿಸುವುದಾದರೆ ಕೋಟೆ ಇಲ್ಲದಿರುವ ಪಟ್ಟಣಗಳು ಒಂದೂ ಕಣ್ಣಿಗೆ ಬೀಳುವುದಿಲ್ಲ, ಸಣ್ಣ ಪುಟ್ಟ ಸಂಸ್ಥಾನಗಳು, ಪಾಳೇಗಾರಿಕೆಯ ಊರುಗಳಲ್ಲಿಯೂ ಕೋಟೆ ಇದ್ದವೆಂದು ಹೇಳಬಹುದು. ಇದಕ್ಕೆ ನಿದರ್ಶನವೆಂಬಂತೆ ಪ್ರಾಚೀನ ಗ್ರಾಮಗಳಲ್ಲಿ ಅಗ್ರಹಾರ, ಕೋಟೆಬೀದಿ ಮುಂತಾದ ಸ್ಥಳನಾಮಗಳನ್ನು ಗುರುತಿಸಬಹುದಾಗಿದೆ. ವಿಜಯನಗರದ ಅರಸರು ಕೋಟೆಯ ನಿರ್ವಹಣೆ ಹಾಗೂ ಸೈನ್ಯದ ವ್ಯವಸ್ಥೆಗಾಗಿ ಜನರ ಮೇಲೆ ಕೆಲವು ವಿಶೇಷ ತೆರಿಗೆಗಳನ್ನು ಹಾಕಿದ್ದುದು ಆಧಾರಗಳಿಂದ ತಿಳಿದುಬರುತ್ತದೆ.

ನಮ್ಮ ಜನರು ರಾಜಮಹಾರಾಜರ ಸಾಂಸ್ಕೃತಿಕ ಬದುಕನ್ನು ಅಧ್ಯಯನ ಮಾಡುವಲ್ಲಿ ಕೋಟೆ, ಅರಮನೆ, ಗುರುಮನೆಗಳ ಪಾತ್ರ ಪ್ರಮುಖವಾದ ಪಾತ್ರವಹಿಸುತ್ತವೆ. ಕೋಟೆ ಎಂಬ ಶಬ್ದಕ್ಕೆ ಸಂಕ್ಷಿಪ್ತವಾದ ಅರ್ಥವ್ಯಾಪ್ತಿಯನ್ನು ಬೆಟಗೇರಿ ಕೃಷ್ಣಶರ್ಮರವರು ಕೊಡುವ ಈ ಅರ್ಥಪೂರ್ಣ ವಿವರಣೆಯನ್ನು ಉಲ್ಲೇಖಿಸುವುದು ಇಲ್ಲಿ ಪ್ರಸ್ತುತವೆನ್ನಿಸುತ್ತದೆ. “ಕೋಟೆಗೆ ಹಳೆಗನ್ನಡದಲ್ಲಿ ‘ಕೊಂಟೆ’ ಎಂಬ ಮೂಲ ರೂಪವಿದೆ ಸಂಸ್ಕೃತದಲ್ಲಿ ಕೋಟೆಯನ್ನು ದುರ್ಗವೆಂದು ಹೇಳುವುದು ಕಂಡುಬರುತ್ತದೆ. ಒಟ್ಟಾರೆಯಾಗಿ ಕೋಟೆ ಎಂಬುವುದು ರಾಜಧಾನಿಯ ರಕ್ಷಣೆಯ ರಕ್ಷಕವಚ” ಎಂದು ತಿಳಿಸಿದ್ದಾರೆ. ಕೋಟೆಯ ಬಗ್ಗೆ ನಂದರಿಂದ ಅವಮಾನಿತನಾಗಿ ಅವರ ನಿರ್ಮೂಲನೆಗೆ ಪಣತೊಟ್ಟು ಮೌರ್ಯ ಸಾಮ್ರಾಜ್ಯದ ನಿರ್ಮಾಣಕ್ಕೆ ಕಾರಣನಾದನೆಂದು ಇತಿಹಾಸಗಾರರು ಹೇಳಿರುವ ಚಾಣಕ್ಯನ ಅರ್ಥಶಾಸ್ತ್ರ ಎಂಬ ಗ್ರಂಥದಲ್ಲಿ ಸುಂದರವಾದ, ಭೌಗೋಳಿಕ ಅಂಶವನ್ನು ಒಳಗೊಂಡ ವಿಶ್ಲೇಷಣೆ ಕಂಡುಬರುತ್ತದೆ. ಕೌಟಿಲ್ಯ ಅಥವಾ ಚಾಣಕ್ಯನು ಕೋಟೆಯನ್ನು ಪ್ರಮುಖವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಪ್ರತಿಯೊಂದರ ಪ್ರಾಮುಖ್ಯತೆಯ ಬಗ್ಗೆಯೂ ಚರ್ಚಿಸಿರುವುದು ಕಂಡುಬರುತ್ತದೆ. ಅವುಗಳೆಂದರೆ ೧. ಜಲದುರ್ಗ ೨. ಗಿರಿದುರ್ಗ, ೩. ವನದುರ್ಗ ೪. ಭೂದುರ್ಗ.

ನಮ್ಮ ಕನ್ನಡ ನಾಡಿನ ಸಾಂಸ್ಕೃತಿಕ ಬದುಕಿಗೆ ಮೇಲಿನ ನಾಲ್ಕು ರೀತಿಯ ಕೋಟೆಗಳು ಸಾಕ್ಷಿಯಾಗಿ ನಿಂತಿವೆ. ಜಲದುರ್ಗಕ್ಕೆ ಶ್ರೀರಂಗಪಟ್ಟಣ, ಲಿಂಗಸೂರು ಕೋಟೆಯನ್ನು ಸೂಚಿಸುವುದಾದರೆ, ಗಿರಿದುರ್ಗಕ್ಕೆ ಸಿಡಿಲಿಗೂ ಬೆಚ್ಚದ ಉಕ್ಕಿನಕೋಟೆ ಎಂದೆ ಹೆಸರಾಗಿರುವಂತಹ ಚಿತ್ರದುರ್ಗ ಹಾಗೂ ಸಾವನದುರ್ಗ, ಬಳ್ಳಾರಿ, ಕೊಪ್ಪಳ ಕೋಟೆಯನ್ನು ಸೂಚಿಸಬಹುದು. ವನದುರ್ಗಕ್ಕೆ ಭಾರತದಲ್ಲಿಯೇ ವಿಸ್ತಾರವಾದಂತಹ, ವಿಶಾಲವಾದಂತಹ ಕೋಟೆಗಳಲ್ಲಿ ಎರಡನೆಯ ಸ್ಥಾನಪಡೆದಿರುವ ಬಿಜಾಪುರದ ಸುಲ್ತಾನರ ಕೋಟೆಯನ್ನು ಹೆಸರಿಸಬಹುದಾಗಿದೆ. ಇದು ಉತ್ತರ ಕರ್ನಾಟಕ ಬೃಹತ್ ಬಯಲು ಪ್ರದೇಶದಲ್ಲಿ ವಿಶಾಲವಾದಂತಹ ಜಾಗದಲ್ಲಿರುವುದು ಕಂಡುಬರುತ್ತದೆ.

ಶ್ರೀರಂಗಪಟ್ಟಣದ ಕೋಟೆ : ಮೈಸೂರು ಒಡೆಯರ ಕಾಲದಲ್ಲಿಯೇ ಕೋಟೆಯ ಕೆಲಸ ಪ್ರಾರಂಭವಾದರೂ ಸಹ ಅದು ಪ್ರಖ್ಯಾತಿಗೆ ಬಂದದ್ದು ಹೈದರ್ ಮತ್ತು ಟಿಪ್ಪುವಿನ ಆಳ್ವಿಕೆಯ ಕಾಲದಲ್ಲಿ. ಇವರು ಸರ್ವಾಧಿಕಾರಿಯಾಗಿ ಮೈಸೂರು ಸಂಸ್ಥಾನವನ್ನು ಆಳ್ವಿಕೆ ನಡೆಸುತ್ತಿದ್ದಾಗ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು. ಈ ಕೋಟೆಯು ಕಾವೇರಿ ನದಿಯು ಎರಡು ಕವಲಾಗಿ ಹರಿಯುವ ಸ್ಥಳದಲ್ಲಿ ನಿರ್ಮಾಣವಾಗಿದೆ.

ಚಿತ್ರದುರ್ಗದ ಕೋಟೆ : ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಎಂದೇ ಜನಸಾಮಾನ್ಯರಲ್ಲಿ ಪ್ರಸಿದ್ಧವಾಗಿರುವ ಈ ಕೋಟೆಯನ್ನು ಚಿತ್ರದುರ್ಗದ ಪಾಳೇಗಾರರು ನಿರ್ಮಾಣಮಾಡಿದರು. ಅದರಲ್ಲಿಯೂ ಮದಕರಿನಾಯಕನ ಕಾಲದಲ್ಲಿ ಹೆಚ್ಚಿನ ಭದ್ರತೆಯ ವ್ಯವಸ್ಥೆಯನ್ನು ಅಳವಡಿಸಲಾಯಿತೆಂದು ತಿಳಿದುಬರುತ್ತದೆ. ಈ ಕೋಟೆಯು ಇಕ್ಕಟ್ಟಾದ ಇಳಿಜಾರು ಹಾಗೂ ಬೃಹತ್ ಬಂಡೆಗಳಿಂದ ಕೂಡಿರುವ ನೈಸರ್ಗಿಕ ಕಲ್ಲು ಬೆಟ್ಟಗಳನ್ನೆ ಅವಲಂಬಿಸಿ ಕೊಂಡು ನಿರ್ಮಾಣವಾಗಿರುವ ಕೋಟೆ. ಇದು ಇಂದಿಗೂ ಕರ್ನಾಟಕದ ಸುರಕ್ಷಿತವಾಗಿರುವ ಕೋಟೆ ಎನ್ನಬಹುದು. ಇದರ ಮೇಲೆ ದಾಳಿ ಮಾಡಿದ ಹೈದರ್ ಆಲಿಯು ಕೋಟೆಯ ಒಳಗಡೆ ದಾಳಿ ಮಾಡಲು ಒಂದು ವರ್ಷ ಕಾಯಬೇಕಾಯಿತೆಂಬುದು ಗಮನಾರ್ಹವಾದ ವಿಷಯವೆ.

ಮೇಲಿನ ಕೋಟೆಯ ವಿಧಗಳು ಹಾಗೂ ಅವುಗಳ ಸವರೂಪವನ್ನು ಈ ಅಧ್ಯಯನದಲ್ಲಿ ಚರ್ಚಿಸಲು ಪ್ರಮುಖ ಕಾರಣವೆಂದರೆ, ಮೇಲಿನ ನಾಲ್ಕು ರೀತಿಯ ಲಕ್ಷಣಗಳನ್ನು ತನ್ನ ಮಡಿಲಿನಲ್ಲಿ ಸೇರಿಸಿಕೊಂಡಿರುವ ಹಂಪಿಯ ಕೋಟೆಯ ಬಗ್ಗೆ ಚರ್ಚಿಸಲು. ಈ ಬೃಹತ್ ಕೋಟೆಯು ಜಲದುರ್ಗವೂ ಹೌದು, ಗಿರಿದುರ್ಗವೂ ಹೌದು, ವನ ಅಥವಾ ಭೂದುರ್ಗವೂ ಹೌದು. ತುಂಗಭದ್ರೆ ಕೋಟೆಯನ್ನು ಮುಕ್ಕಾಲುಭಾಗ ಸುತ್ತಿಕೊಂಡಿದ್ದರೆ ನೋಡಲು ಅಸಾಧ್ಯವಾದಂತಹ ಬೃಹತ್ ಕಲ್ಲು ಬಂಡೆಗಳಿಂದ ನಿರ್ಮಿತವಾಗಿರುವ ಬೆಟ್ಟ ಸಾಲುಗಳು ಅವುಗಳಲ್ಲಿಯೇ ಅವಕಾಶವಾದ ಕಡೆಯಲ್ಲಿ ಸ್ವಾಭಾವಿಕ ಬಂಡೆಗಳ ಜೊತೆಗೆ ಕೋಟೆಯ ನಿರ್ಮಾಣ ಹಾಗೂ ಬಯಲು ಪ್ರದೇಶದಲ್ಲಿ ವಿಸ್ತಾರವಾಗಿ ಕೋಟೆಯನ್ನು ನಿರ್ಮಿಸಿರುವುದು ಇದಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿವೆ.

.೩. ರಾಜಧಾನಿಯ ಜನಜೀವನ

ವಿಜಯನಗರ ಸಾಮ್ರಾಜ್ಯದ ರಾಜಧಾನಿಯ ಹಾಗೂ ಸಾಮ್ರಾಜ್ಯದ ಜನ ಜೀವನವನ್ನು ತಿಳಿಯಲು, ಅಂದಿನ ವೈಭವ ಹಾಗೂ ಅನಿಷ್ಟತೆಯನ್ನು ತಿಳಿಯಲು ದಾಸಸಾಹಿತ್ಯ ಹಾಗೂ ಲಿಖಿತ ಸಾಹಿತ್ಯಾಧಾರಗಳ ಜೊತೆಗೆ ವಿದೇಶಿಯರ ಬರವಣಿಗೆಗಳು ಹೆಚ್ಚಾಗಿ ಸಹಕಾರಿಯಾಗುತ್ತವೆ. ಒಂದರ್ಥದಲ್ಲಿ ದಾಸಸಾಹಿತ್ಯವನ್ನು ಅಂದಿನ ಕಾಲದ ಜನ ಜೀವನವನ್ನು ರೂಪಿಸಲು ನೆರವಾಗುವಂತಹ ‘ವಿಶ್ವಕೋಶ’ವೆಂದೇ ಕರೆಯಬಹುದು. ಇವುಗಳಲ್ಲಿ ನಾವು ಕಾಣದ, ಕೇಳದ ವಸ್ತುವೆಂಬುವುದೇ ಇರುವುದಿಲ್ಲ. ಈ ಹಂತದಲ್ಲಿ ಕನಕದಾಸರ ಮೋಹನತರಂಗಿಣಿಯು ಎರಕಹೊಯ್ದು ಮುತ್ತಿನ ನೀರಿನಂತೆ ಕಂಗೊಳಿಸುತ್ತದೆ. ಇವುಗಳ ಜೊತೆಗೆ ರಾಜಧಾನಿಗೆ ಭೇಟಿ ನೀಡಿದ್ದ ವಿದೇಶಿಯರ ಬರವಣಿಗೆಗಳು ಅಪಾರವಾಗಿಯೇ ದೊರಕಿದ್ದು ಅವುಗಳ (ಡಾ. ಎಚ್.ಎಲ್. ನಾಗೇಗೌಡರು ಸಂಪಾದಿಸಿರುವ ಪ್ರವಾಸಿ ಕಂಡ ಇಂಡಿಯಾ ಕೃತಿಗಳಿಂದ) ವರ್ಣನೆಯನ್ನು ಆಧಾರವನ್ನಾಗಿ ಮಾಡಿಕೊಳ್ಳಬಹುದು. ಆದರೆ ವಿದೇಶಿ ಪ್ರವಾಸಿಗರಾಗಿರುವ ಬಾರ್ಬೋಸ, ನ್ಯೂನಿಚ್, ಪೇಸ್, ಅಬ್ದುಲ್ ರಜಾಖ್, ನಿಕೋಲೂಕೌಟ್ ಮುಂತಾದವರು ನೀಡಿರುವ ಮಾಹಿತಿಯು ಕೇವಲ ರಾಜಧಾನಿಯ ಶ್ರೀಮಂತ ವರ್ಗದವರ ಆಚಾರ ವಿಚಾರಗಳನ್ನು ಮಾತ್ರ ತಿಳಿಸುತ್ತದೆ ಎನ್ನಬಹುದು. ಆದರೆ ಇವರು ಸಾಮ್ರಾಜ್ಯದ ಎಲ್ಲಾ ಜನಾಂಗದ ಜೀವನ ಹಾಗೂ ಬದುಕಿನ ವಿವರಣೆಗಳನ್ನು ತಾವು ಕಂಡು, ಕೇಳಿದ ರೀತಿಯಲ್ಲಿ ಸ್ವಲ್ಪ ವಿವರಿಸಿರುವುದು ಕಂಡು ಬರುತ್ತದೆ. ಹಾಗೆಯೇ ಜನರ ಕಾವ್ಯಗಳಾಗಿರುವ ಜನಪದ ಮಹಾಕಾವ್ಯಗಳಲ್ಲಿಯೂ ಹೆಚ್ಚಾಗಿ ಮಾಹಿತಿ ದೊರಕುತ್ತದೆ. ಇವು ಸ್ಥಳೀಯ ಭಾಷೆಯಲ್ಲಿಯೇ ಲಭ್ಯವಿರುವುದರಿಂದ ಒಂದು ರೀತಿಯಲ್ಲಿ ಇತಿಹಾಸಗಾರರಿಗೆ ಅದರಲ್ಲಿಯೂ ಸ್ಥಳೀಯ ಇತಿಹಾಸಗಾರರಿಗೆ ವರಪ್ರಸಾದವೆ.

ಕನಕದಾಸರು ರಾಜಧಾನಿಯ ವರ್ಣನೆಯನ್ನು ನೀಡುತ್ತಾ ರಾಜರ ಅರಮನೆಗಳು ರಾಜವೈಭವದಿಂದ ಮೆರೆಯುತ್ತಿದ್ದವು ಹಾಗೂ ಹಂಪಿಯಲ್ಲಿನ ಬ್ರಾಹ್ಮಣರುಗಳ ಮನೆಗಳನ್ನು ವರ್ಣಿಸುತ್ತಾ “ಅವು ಹೊಂದಗಡಿನ ಹೊದಿಕೆಯ ಮನೆಗಳಾಗಿದ್ದವು” ಎಂದು ಬ್ರಾಹ್ಮಣರು ಉತ್ತಮ ವಸತಿಯ ಸೌಕರ್ಯದ ಮನೆಗಳನ್ನು ಹೊಂದಿದ್ದರೆಂದುವ ಅರ್ಥೈಸುವ ರೀತಿಯಲ್ಲಿ ಚರ್ಚಿಸಿದ್ದಾರೆ. ಅಂದಿನ ಕಾಲದ ಮನೆಗಳು ಕಂಬಗಳಿಂದ ಕೂಡಿ ಚೌಕಾಕಾರವಾಗಿ ವಿಶಾಲವಾಗಿದ್ದವು. ಮನೆಯ ಅಳತೆಯೂ ಆ ಮನೆಯು ಒಳಗೊಂಡಿರುವ ಕಂಬದ ಆಧಾರದ ಮೇಲೆಯೇ ನಿರ್ಧಾರಿಸಲಾಗುತ್ತಿತ್ತು. (ಈ ಮಾದರಿಯ ಮನೆಗಳನ್ನು ನಮ್ಮ ಗ್ರಾಮಗಳಲ್ಲಿ ಇಂದಿಗೂ ಕಾಣಬಹುದಾಗಿದೆ.) ನಾಲ್ಕು ಕಂಬದ ಹಟ್ಟಿ, ಹನ್ನೆರಡು ಕಂಬದ ಹಟ್ಟಿ, ಹದಿನಾರು ಕಂಬದ ಹಟ್ಟಿ ಎಂದು ಕಂಬದ ಆಧಾರದ ಮೇಲೆಯೇ ಚಿಕ್ಕ ಹಾಗೂ ದೊಡ್ಡ ಮನೆಗಳಿಗೆ ಜನಪದರು ಸೂಚಿಸುತ್ತಿದ್ದುದು ಕಂಡುಬರುತ್ತದೆ. “ಅಷ್ಟ ಕಂಬವನಕ್ಕಿ ಚೌಕದುಪ್ಪರಿಗೆಯ ಕಟ್ಟಿದ ಮನೆಯು” ಎಂದು ಹಾಡಿರುವ ದಾಸರ ಕೀರ್ತನೆಯು ಇದಕ್ಕೆ ಉತ್ತಮ ನಿದರ್ಶನವಾಗಿದೆ. ಇಂದಿನಂತೆ ಅಂದೂ ಸಹ ಮನೆಯ ವಿವಿಧ ಭಾಗಗಳಿಗೆ ಅನೇಕ ಹೆಸರುಗಳಿಂದ ಕರೆಯುತ್ತಿದ್ದರೆಂದು ಅನೇಕ ಸಾಹಿತ್ಯಾಧಾರಗಳಿಂದ ತಿಳಿದುಬರುತ್ತದೆ. ಉದಾಹರಣೆಗೆ : ಕಿರುಮನೆ, ನೆಲೆಮನೆ, ಅಟ್ಟದಮನೆ, ದೇವರಮನೆ, ಹಿತ್ತಲಮನೆ, ಗದ್ದೆಮನೆ, ಮೂಲಿಮನೆ, ಎಂಬಿತ್ಯಾದಿ ಹೆಸರುಗಳು ಕೇಳಿಬರುತ್ತದೆ. ಮನೆಯ ಒಳಭಾಗದಲ್ಲಿ ಚೌಕಿ, ಜಗಲಿ, ಹಜಾರ, ಶಯನಗೃಹ, ಸ್ಥಾನದಮನೆ, ಊಟದಮನೆ, ಕೊಟ್ಟಿಗೆ, ಬಚ್ಚಲುಮನೆ ಮುಂತಾದ ಹೆಸರುಗಳು ಮನೆಯ ಎಲ್ಲಾರಿಗೂ ಪರಿಚಿತವಾದವುಗಳೇ ಆಗಿದ್ದವು, ಸಂಸ್ಕೃತಿ ನಿರಂತರವೆಂದಂತೆ ಮೇಲಿನ ಎಲ್ಲಾ ಪದಗಳೂ ಚಾಚು ತಪ್ಪದೆ ಇಂದಿಗೂ ಉಳಿದುಕೊಂಡು ಬಂದಿವೆ. ಇದಕ್ಕೆ ವರ್ತಮಾನವೆಂಬುದು ಭೂತದ ಬುತ್ತಿಯನ್ನು ಹೊತ್ತುಕೊಂಡು ಬರುತ್ತದೆನ್ನುವುದು. ರಾಜಧಾನಿಯ ಮನೆಗಳಲ್ಲಿ ಸಾಲುಗನ್ನಡಿಗಳು, ತಲೆಬಾಚಿಕೊಳ್ಳಲು ಬಾಚಣಿಗಿ, ಮಂಚ ಹಾಗೂ ಗೋಡೆಯ ಮೇಲೆ ರಂಗೋಲಿ ಹಾಗೂ ದೇವತೆಗಳ ಚಿತ್ರದ ಚಿತ್ತಾರ ಬಿಡಿಸಿಕೊಳ್ಳುತ್ತಿದ್ದರೆಂದು ಬಾರ್ಬೋಸ ವಿವರಿಸಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಪ್ರತಿಯೊಂದು ಮನೆಯ ಮುಂದೆ ಪಡಸಾಲೆ (ಜಗುಲಿ) ಇರುತ್ತಿದ್ದುದು ಸಾಮಾನ್ಯವಾಗಿತ್ತು. ಇದು ಮನೆಯ ಅನೇಕ ಸಾಂಸ್ಕೃತಿಕ ಕಾರ್ಯಗಳ ನೆಲೆಯಾಗಿತ್ತೆನ್ನಬಹುದು.

ರಾಜಧಾನಿಯ ಜನರ ಮುಖ್ಯ ಕಸುಬು ಪ್ರಮುಖವಾಗಿ ಎರಡು ರೂಪದ್ದಾಗಿತ್ತು. ಒಂದನೆಯದು; ದೇವತಾಕಾರ್ಯ ಬ್ರಾಹ್ಮಣರು ದೇವಾಲಯಗಳಲ್ಲಿ ಹಾಗೂ ರಾಜಸ್ಥಾನಗಳಲ್ಲಿ ದೇವದೂತರಾಗಿ ಕಾರ್ಯನಿರ್ವಹಿಸುವುದು ಎರಡನೆಯದು; ವ್ಯಾಪಾರಗಳು ರಾಜಧಾನಿಯ ಜನರು ಹೆಚ್ಚಾಗಿ ಕೈಗೊಳ್ಳುತ್ತಿದ್ದಂತಹ ಕಸುಬು ಇದಾಗಿತ್ತು. ಇನ್ನೂ ವ್ಯವಸಾಯ ರಾಜಧಾನಿಯ ಹೊರಗಿನವರ ಪ್ರಮುಖ ಕಸುಬು ಎಂಬುವುದು ಇತಿಹಾಸದಿಂದಲೇ ತಿಳಿದಿರುವ ವಿಷಯ, ಆದರೆ ಕೃಷಿಯ ಉತ್ಪನ್ನವನ್ನು ಮಾರಾಟ ಮಾಡಲು ರಾಜಧಾನಿಯಂತಹ ಬೃಹತ್ ವ್ಯಾಪಾರ ಮಳಿಗೆಗಳಿಗೆ ತರುವುದು ಸರ್ವೇ ಸಾಮಾನ್ಯವಾಗಿತ್ತು. ರಾಜಧಾನಿಯು ನೃತ್ಯಗಾರ್ತಿಯರಿಂದ, ಸಂಗೀತಕಾರರಿಂದ, ಜಾನಪದ ಕಲಾವಿದರಿಂದ ಕ್ರೀಡಾಪಟುಗಳಿಂದ, ದಾಸರುಗಳಿಂದ, ಸನ್ಯಾಸಿಗಳಿಂದ, ವೇಶ್ಯೆಯರುಗಳಿಂದ ಹಾಗೂ ದೇವದಾಸಿಯರಿಂದ ತುಂಬಿರುತ್ತಿತ್ತು. ಹೆಚ್ಚಾಗಿ ಇವರೆಲ್ಲರೂ ಉತ್ತಮ ಜೀವನ ನಡೆಸುತ್ತಿದ್ದರಂದು ಅನೇಕ ಮೂಲ ದಾಖಲೆಗಳಿಂದ ತಿಳಿಯಬಹುದು.

ಮಹಿಳೆಯರು ಹೆಚ್ಚಾಗಿ ವ್ಯಾಪಾರದಲ್ಲಿ ತಲ್ಲೀನರಾಗಿರುತ್ತಿದ್ದರು. ಸಾಮಾನ್ಯವಾಗಿ ಚೆನ್ನ, ಬೆಳ್ಳಿ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಿದ್ದವರು ಮಹಿಳೆಯರೇ ಇಂದಿಗೂ ಅಚ್ಯುತರಾಯ ದೇವಾಲಯದ ಬಜಾರು (ಸೂಳೇಬಜಾರು) ಹಾಗೂ ವಿಠ್ಠಲಸ್ವಾಮಿ ದೇವಾಲಯದ ಬಜಾರುಗಳಲ್ಲಿ ಮಹಿಳೆಯರು ವ್ಯಾಪಾರ ಮಾಡುತ್ತಿದ್ದರು ಎಂದು ಶಾಸನಾಧಾರಗಳು ತಿಳಿಸುತ್ತವೆ. ರಾಜಧಾನಿಯಲ್ಲಿ ಆರೋಗ್ಯ ತಪಾಸಣೆಗೆ ದವಾಖಾನೆಗಳ (ಆರೋಗ್ಯ ತಪಾಸಣಾ ಕೇಂದ್ರ) ಸೌಲಭ್ಯವಿದ್ದದ್ದು ಕಂಡು ಬರುತ್ತದೆ. ಈ ದವಾಖಾನೆಯ ಸೌಲಭ್ಯವು ಕೆಲವೇ ಕೆಲವು ಜನವರ್ಗಕ್ಕೆ ಮಾತ್ರ ಮೀಸಲಿದ್ದದ್ದು ಉಲ್ಲೇಖನೀಯವಾಗಿದೆ.

ರಾಜಧಾನಿಯಲ್ಲಿ ಅಸ್ಪೃಶ್ಯರೆಂದು ಕರೆಸಿಕೊಳ್ಳುತ್ತಿದ್ದ ಜನರ ಬದುಕು ಶೋಚನೀಯವಾಗಿದ್ದಿತು. ಹೊಲೆಯ ಮಾದಿಗರು ರಾಜಧಾನಿಯಿಂದ ಬಹುದೂರ ವಾಸಿಸುತ್ತಿದ್ದರು. ಇವರು ಪ್ರತಿದಿನವು ರಾಜಧಾನಿಗೆ ನಿಗದಿತ ಸಮಯದಲ್ಲಿ ಬಂದು ಅಲ್ಲಿನ ಬೀದಿ, ಬಚ್ಚಲು ಇನ್ನಿತರ ಕೊಳಕಾಗಿದ್ದ ಪ್ರದೇಶಗಳನ್ನು ಸ್ವಚ್ಚಗೊಳಿಸಬೇಕಾಗಿತ್ತು. ಇದಕ್ಕೆ ತಪ್ಪಿದರೆ ಘೋರಶಿಕ್ಷೆಗೆ ಒಳಗಾಗುತ್ತಿದ್ದರು. ಇವರುಗಳು ರಾಜಧಾನಿಯನ್ನು ಪ್ರವೇಶಿಸಬೇಕಾದರೆ ಅನುಸರಿಸಬೇಕಾಗಿದ್ದ ಆಚರಣೆಗಳು ನಿಜಕ್ಕೂ ಅಮಾನುಷವಾಗಿದ್ದವೆಂದೇ ಹೇಳಬಹುದು. ಆಮಾನುಷತೆಯ ವರ್ಣನೆ ಇಲ್ಲಿ ಬೇಕಿಲ್ಲವೆನ್ನಿಸುತ್ತದೆ. ಏಕೆಂದರೆ ಇಂದಿನ ಪ್ರಜಾಪ್ರಭುತ್ವದ ಆಧುನಿಕ ಯುಗದಲ್ಲಿಯೇ ನಾವು ದಿನಂಪ್ರತಿ ನೋಡುತ್ತಿರುವ ಜಾತಿವ್ಯವಸ್ಥೆ ಹಾಗೂ ಅಸ್ಪೃಶ್ಯತೆಯನ್ನು ಅಂದಿನ ಯುಗಕ್ಕೆ (ಅಜ್ಞಾನದ ಯುಗ, ಮೂಡನಂಬಿಕೆಯ ಯುಗ ಎಂದು ಕರೆದಿರುವ ಕಾಲ) ಹೋಲಿಸಿಕೊಂಡು ಚಿಂತಿಸಿದರೆ ನಿಖರವಾದ ಉತ್ತರ ದೊರಕಬಹುದೇನೊ. ಅಂದು ಬ್ರಾಹ್ಮಣರು ಹಿಂದೂ ಧರ್ಮದಲ್ಲಿಯೇ ಶ್ರೇಷ್ಠರಾದವರೆಂದು ಮಡಿವಂತಿಕೆಯಿಂದ ಜೀವನ ಮಾಡುತ್ತಿದ್ದದ್ದನ್ನು ಕಂಡು ಕನಕದಾಸರು ಬ್ರಾಹ್ಮಣರು ಯಾರು? ಎಂಬುವುದಕ್ಕೆ ನೀಡಿದ ವಿವರಣೆಯು ಸ್ವಾರಸ್ಯಕರವಾಗಿದೆ. ಧರ್ಮವು ನಿಜವಾದ ತತ್ವಗಳನ್ನು ಅರಿಯದೆ. ಕೇವಲ ನಾಮ ವಿಭುತಿ ಇತ್ಯಾದಿ ಧರಿಸಿಕೊಂಡು ಹೊರಗಿನ ಆಡಂಬರಗಳನ್ನು ತೋರಿಸುತ್ತಾ ನೀತಿ ತಪ್ಪಿ ನಡೆದರೆ ಅವರು ಬ್ರಾಹ್ಮಣರೂ ಅಲ್ಲ. ಲಿಂಗವಂತರೂ ಅಲ್ಲ. ಮುಸಲ್ಮಾನರೂ ಅಲ್ಲ. ಎಂಬುವ ಬಹುಸೂಕ್ಷ್ಮದ ನುಡಿಯನ್ನು ನುಡಿದಿದ್ದಾರೆ. ಅವರ ಮಾತಿನಲ್ಲಿಯೇ ಹೇಳುವುದಾದರೆ

ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪಮಾಡಿ
ಭಗವತ ಶಾಸ್ತ್ರಾದಿಗಳನೆಲ್ಲ ಓದಿ
ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ
ನೀತಿ ತಪ್ಪಿದವರೆಲ್ಲ ದೇವ ಬ್ರಾಹ್ಮಣರೇ
?                 ೧

ಲಿಂಗಾಂಗದೊಳಗಿರುವ ಚಿನುಮಯದ ತಿಳಿಯದೆ
ಅಂಗ ಲಿಂಗದ ನೆಲೆಯ ಗುರುತರಿಯದೆ
ಜಂಗಮ ಸ್ಥಾವರದ ಹೊಲಬನರಿಯದ ಇಂಥ
ಭಂಗಿ ಮುಕ್ಕುಗಳೆಲ್ಲ ಲಿಂಗವಂತರು ಅಹುದೇ
?            ೨

ಅಲ್ಲಾ ಖುದಾ ಎಂಬ ಅರ್ಥವನು ಅರಿಯದೆ
ಮುಲ್ಲಾ ಶಾಸ್ತ್ರ ನೆಲೆಯ ಗುರುತರಿಯದೆ
ಕಳ್ಳ ಕೂಗನೆ ಕೂಗಿ ಬೊಗಳಿ ಬಾಯ್ದೆರೆವಂಥ
ಕಳ್ಳರಿಗೆ ತಾ ವೀರಸ್ವರ್ಗ ದೊರಕುವುದೆ
?                     ೩

ಎಂದು ಬ್ರಾಹ್ಮಣರು, ಲಿಂಗವಂತರು, ಮುಸಲ್ಮಾನರುಗಳನ್ನು ನೇರವಾಗಿಯೇ ಪ್ರಶ್ನಿಸಿದ್ದಾರೆ. ಇವರುಗಳು ಮೇಲುಕೀಳು, ಶ್ರೇಷ್ಠ ಕುಲದವನು, ಹೀನ ಕುಲದವನೆಂದು ಭೇದಭಾವ ಮಾಡುತ್ತಿದ್ದಂತಹ ರಾಜಧಾನಿಯ ಜನರಿಗೆ ಅವರು ತಮ್ಮ ತಮ್ಮ ಧರ್ಮದ ತತ್ವ ತಿಳಿದು ಅವುಗಳನ್ನು ಮೌನವಾಗಿಯೇ ಆಚರಿಸಬೇಕು. ಹಾಗೆಯೇ ಅವುಗಳ ವಾಸನೆಗಳ ಗುಟ್ಟು ತಿಳಿದು ಆಸೆಗಳನ್ನು ಅರಿಯಬೇಕು ಎಂದು ಕಿವಿಮಾತ ನೇಳಿರುವುದು ಇಂದಿಗೂ ಪ್ರಸ್ತುತ ಹಾಗೂ ಸತ್ಯವಾಗಿದೆ. ಮೇಲಿನ ಕನಕರ ಕೀರ್ತನೆಗಳೇ ಅಂದಿನ ಸಾಮಾಜಿಕ ಜೀವನದ ಪರಿಪರಿಯನ್ನು ಸೂಕ್ಷ್ಮವಾಗಿ ಸೂಚಿಸುತ್ತವೆ.

ವೇಷ ಭಾಷೆಯ ಕಲಿತು ಗೋಸನಿಯ ಕಡೆಗಿಟ್ಟು
ಆಸೆಯನ್ನು ತೊರೆಯದೆ ತಪನ ಮಾಡಿ
ವಾಸನೆಯ ಗುರುತಿನಾ ಹೊಲಬನರಿಯದ ಇಂಥ
ವೇಷಧಾರಿಗಳು ಸನ್ಯಾಸಿಗಳು ಅಹುದೇ
?

ಎನ್ನುವಂತಹ ಪ್ರಶ್ನೆಯನ್ನು ಸನ್ಯಾಸಿಗಳ ನಡವಳಿಕೆಯ ಬಗ್ಗೆ ಹೇಳಿದ್ದಾರೆ. ವೇಷಧಾರಿಯಾದ ಮಾತ್ರಕ್ಕೆ ಸನ್ಯಾಸಿಯಾಗಲಾರ ಅದೇ ಅಂತರಂಗದಲ್ಲಿ ತುಂಬಿರುವ ದೇವರನ್ನು ಮನಮುಟ್ಟಿ ಭಜಿಸಿದರೆ ಎಂದೆಂದಿಗೂ ಅವನಿಗೆ ಸಾವಿನ ಭಯವಿಲ್ಲ ಎಂದು ಸನ್ಯಾಸಿಗಳಿಗೆ ಮಾನವರಿಕೆ ಮಾಡಿರುವುದು ಇಂದಿನ ಜಗದ್ಗುರುಗಳೆಂದು ಕರೆಸಿಕೊಳ್ಳುವ ಸ್ವಾಮಿಗಳಿಗೂ ಅನ್ವಯವಾಗುತ್ತದೆ.

ರಾಜಪರಿವಾರದವರು ಗುರುಹಿರಿಯರೆನ್ನಿಸಿಕೊಂಡವರಿಗೆ ಪೂಜಾರಿಗಳಿಗೆ ಸಲ್ಲಿಸುತ್ತಿದ್ದ ಗೌರವ ವಿಶೇಷವಾಗಿದ್ದಿತ್ತು. ಗುರುಗಳನ್ನು ರಾಜರು ಅಥವಾ ರಾಜಪರಿವಾರದವರು ಕಾಣಲು ಹೋದಾಗ ಅದರ ನೆನಪಿಗಾಗಿ ನೆನಪಿನ ಕಾಣಿಕೆ ಕೊಡುವುದು ಸಂಪ್ರದಾಯವಾಗಿದ್ದಿತು. ಸಾಮಾನ್ಯವಾಗಿ ಬೆಳ್ಳಿ, ಚಿನ್ನದ ವಸ್ತುಗಳ ಜೊತೆಗೆ ನಿಂಬೆ ಹಣ್ಣನ್ನು ಹೆಚ್ಚಾಗಿ ಕೊಡುತ್ತಿದ್ದದ್ದು ಶಾಸನಧಾರಗಳಿಂದ ತಿಳಿದುಬರುತ್ತದೆ. ರಾಜನನ್ನು ಕಾಣಲು ಬರುತ್ತಿದ್ದ ಯಾವುದೇ ಜಾತಿಗೆ ಸೇರಿದ ಪ್ರಜೆಗಳು ಬರಿಗೈಯಲ್ಲಿ ಬರುತ್ತಿರಲಿಲ್ಲ. ಆಯಾ ಜಾತಿಯವರು ಉತ್ಪಾದಿಸುವ ವಸ್ತುಗಳನ್ನೇ ಕಾಣಕೆಯನ್ನಾಗಿ ನೀಡಿ ರಾಜರಿಂದ ಹೊಗಳಿಕೆಯನ್ನು ಪಡೆಯುತ್ತಿದ್ದರು. ರಾಜರು ಎಷ್ಟೇ ಪ್ರಬಲರಾಗಿದ್ದರೂ ಸಹ ಧರ್ಮಕ್ಕೆ ತಲೆಬಾಗುತ್ತಿದ್ದರು. ಬ್ರಾಹ್ಮಣರು, ಗುರುಗಳು, ಆಚಾರ‍್ಯರು, ಸಾಧುಸಂತರನ್ನು ಕಂಡರೆ ಭಕ್ತಿಯಿಂದ ತಲೆ ಬಾಗುತ್ತಿದ್ದರು. ಹೊರನಾಡಿನಿಂದ ರಾಜಧಾನಿಗೆ ಬರುತ್ತಿದ್ದ ಮುನಿಗಳು, ಸಂತರು, ಕವಿಗಳು, ವಿದೇಶಿಯರನ್ನು ಸ್ವಾಗತಿಸಲು ರಾಜಪರಿವಾರವೇ ನೆರೆದಿರುತ್ತಿತ್ತು. ಈ ಸಂಪ್ರದಾಯವನ್ನು ಇಂದಿಗೂ ಸಹ ಆಧುನಿಕ ರೂಪದಲ್ಲಿ ಕಾಣಬಹುದಾಗಿದೆ.

.೪. ಸಾರಿಗೆ – ಸಂಪರ್ಕ

ರಾಜಧಾನಿಯ ಸಾರಿಗೆ ಸಂಪರ್ಕವು ಉತ್ತಮವಾದ ರೀತಿಯಲ್ಲಿ ಇದ್ದಿತ್ತೆಂದು ಹೇಳಬಹುದು. ಒಳಣಾಡಿನ ಸಾಗಾಣಿಕೆಯು ಸುಲಭವಾಗಿತ್ತೆಂದು ಕಂಡುಬರುತ್ತದೆ. ನಮ್ಮ ಪ್ರಾಚೀನ ಚರಿತ್ರೆಯಿಂದಲೂ ಹಾಗೂ ಪ್ರಾಚೀನ ಮಹಾಕಾವ್ಯ ಹಾಗೂ ಪುರಾಣ ಕಥೆಗಳಿಂದಲೂ ಸಾರಿಗೆಯು ಅಡ್ಡೆ, ತಲೆಹೊರೆ, ಕುದುರೆ, ಎತ್ತು. ಕತ್ತೆ ಹಾಗೂ ಒಂಟೆಗಳ ಮೇಲೆ ನಡೆಯುತ್ತಿತ್ತು. ಎಂಬುದು ಕಂಡುಬರುತ್ತದೆ. ವಿಜಯನಗರದ ರಾಜಧಾನಿ ಹಾಗೂ ಹೊರಗಿನ ಜನರ ಸಾರಿಗೆ ಸಂಪರ್ಕದ ಬಗ್ಗೆ ವಿದೇಶಿ ಪ್ರವಾಸಿಗರಾಗಿರುವ ಬಾರ್ಬೋಸ, ಪಾಯೇಸ್, ನ್ಯೂನಿಜ್, ನಿಕೋಲೂಕೌಂಟೆಯವರ ಬರವಣಿಗೆಯಿಂದ ಹೆಚ್ಚಿನ ವಿಷಯ ತಿಳಿಯಬಹುದಾಗಿದೆ. ಎತ್ತಿನಗಾಡಿ (ಬಂಡಿ) ಅಂದಿನ ಪ್ರಮುಖ ಸಾಗಾಣಿಕೆಯ ಸಂಚಾರಿ ವಾಹನವಾಗಿತ್ತೆನ್ನಬಹುದು (ಇಂದಿಗೂ ಸಹ ನಮ್ಮ ಗ್ರಾಮಗಳಲ್ಲಿ ಇದೆ ಪ್ರಮುಖ ಸಂಚಾರಿ ವಾಹನ). ಇದೂ ಸಹ ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರ ಸಾರಿಗೆಯ ಬಹುಮುಖ್ಯ ಸಾಧನವಾಗಿತ್ತೆಂದು ಕಂಡುಬರುತ್ತದೆ. ಪಾಯೇಸನು ಅರಮನೆಯ ಮುಂದಿರುವ ವಿಶಾಲವಾದ ಮೈದಾನದಲ್ಲಿ ದವಸ ಧಾನ್ಯಗಳನ್ನು ತುಂಬಿದ್ದ ಲೆಕ್ಕವಿಲ್ಲದಷ್ಟು ಬಂಡಿಗಳು ಸಂಚರಿಸುತ್ತಿದ್ದುದ್ದನ್ನು ತಾನು ಕಂಡಿದ್ದಾಗಿ ಹೇಳಿದ್ದಾನೆ. ಅಂದು ರತ್ತಿನ ಗಾಡಿಗಳನ್ನು ಹೊಂದಿರದವರನ್ನು ಕುರಿತು ಸರ್ವಜ್ಞ ಮಹಾಕವಿಯು “ಬಂಡಿ ಇಲ್ಲದ ಕೃಷಿಕರ ಆರಂಭ ವ್ಯರ್ಥ”ವೆಂದು ವಿಶ್ಲೇಷಿಸಿದ್ದಾನೆ ಇದರಿಂದ ಬಂಡಿಯು ಅಂದಿನ ದಿನ ಯಾವ ಸ್ಥಾನಮಾನ ಪಡೆದಿತ್ತೆಂದು ಊಹಿಸಬಹುದಾಗಿದೆ.

ಅಂದಿನ ಜನರು ಮುಖ್ಯವಾಗಿ ಭೂ ಸಂಚಾರದವರಾಗಿದ್ದರು. ಇದರಲ್ಲಿ ಪ್ರಮುಖವಾಗಿ ಮನುಷ್ಯರು ಹಾಗೂ ಪ್ರಾಣಿಗಳು ಸರಕು ಸಾಗಾಣಿಕೆ ಮತ್ತು ಪ್ರಯಾಣದ ಸಮಸ್ಯೆಯನ್ನು ಬಗೆಹರಿಸುತ್ತಿದ್ದರು. ರಾಜಪರಿವಾರದವರು ಸುಂದರವಾದ ಬೆಲೆಬಾಳುವ ಪಲ್ಲಕ್ಕಿಯಲ್ಲಿ ಕುಳೀತು ಸಂಪ್ರದಾಯಕವಾಗಿ ಪಲ್ಲಕ್ಕಿಯನ್ನು ಹೊರಲು ನೇಮಿಸಲಾಗಿದ್ದ ಬೋಯಿಗಳಿಂದ ಹೊರಿಸಿಕೊಂಡು ಹೋಗುವುದ ರೂಢಿಯಲ್ಲಿತ್ತು. ಇದನ್ನು ಹೊರಲು ನೇಮಿಸಲಾಗಿದ್ದ ಜನತೆಯು ತಮ್ಮದೇ ಕಸುಬಿನ ಆಧಾರದ ಮೇಲೆ ಪರಿವಾರದವರೆ ಎಂದು ಗುರ್ತಿಸಿಕೊಂಡರು. ಇಂದು ಇದೊಂದು ಜಾತಿಯಾಗಿ ಪರಿವರ್ತನೆಯಾಗಿದೆ. ಎತ್ತಿನಗಾಡಿ, ಎಮ್ಮೆಯಗಾಡಿ, ಕುದುರೆಗಾಡಿ, ಕತ್ತೆ ಮುಂತಾದವುಗಳೂ ಜನಸಾಮಾನ್ಯರ ಪ್ರಮಾಣದ ಮತ್ತು ಸರಕು ಸಾಗಿಸುವ ಬಹುಮುಖ್ಯ ಸಾರಿಗೆ ಸೌಕರ್ಯವಾಗಿತ್ತು, ಆನೆ ಕುದುರೆಗಳು ಹೆಚ್ಚಾಗಿ ಯುದ್ಧ ಭುಮಿಯಲ್ಲಿ ಬಳಕೆಯಾಗುತ್ತಿದ್ದವು. ವಿಜಯನಗರವು ದಕ್ಷಿಣ ಭಾರತದಲ್ಲಿಯೇ ಮುಖ್ಯ ಸಂಚಾರಿ ವ್ಯವಸ್ಥೆಯ ಕೇಂದ್ರವಾಗಿತ್ತೆಂದು ಡಾ. ಜಿ.ಎಸ್. ದೀಕ್ಷಿತ್ ಅಭಿಪ್ರಾಯಪಡುತ್ತಾರೆ. ಅಂದು ನದಿ ಸಾರಿಗೆಯು ಹೆಚ್ಚಿನ ಆದಾಯವನ್ನು ತರುವುದಾಗಿದ್ದಿತ್ತು. ಹೆಚ್ಚಾಗಿ ಸಾಮಾನು ಸರಂಜಾಮುಗಳನ್ನು ತೆಪ್ಪ, ದೋಣಿ, ನಾವೆ, ಹರಿಗೋಲುಗಳ ಮೂಲಕ ನದಿಯನ್ನು ದಾಟಿಸುತ್ತಿದ್ದರು. ಕೇವಲ ನದಿ ದಾಟುವುದಕ್ಕೆಂದೇ ಅಲ್ಲದೆ ಸಮುದ್ರದಲ್ಲಿ ಹಡಗಿದೆ ಪೂರಕವಾಗಿ, ಸಾಮಾನು ಮುಂತಾದವುಗಳನ್ನು ದಡಕ್ಕೆ ಸಾಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ದೋಣಿಗಳನ್ನು ಉಪಯೋಗಿಸುತ್ತಿದ್ದರು. ದೋಣಿ ನಡೆಸುವವನನ್ನು ‘ಅಂಬಿಗ’ ಎಂದು ಕರೆಯುತ್ತಿದ್ದರು.

ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಮೂಲಭೂತ ಸೌಕರ್ಯಗಳನ್ನು ದಾರಿಯ ಉದ್ದಕ್ಕೂ ವಿವಿಧ ರೀತಿಯಲ್ಲಿ ಪೂರೈಸಿಕೊಳ್ಳಲಾಗುತ್ತಿತ್ತು. ಹಸಿದು ಬಂದವರಿಗೆ ಊಟ ಹಾಕಲು ಅನ್ನಛತ್ರಗಳು, ಶ್ರಮಿಸುವವರಿಗೆ ನಿವಾಸಿಗಳು, ಬಾಯಾರಿಕೆಯನ್ನು ನಿವಾರಿಸಲು ಅರವಟ್ಟಿಗೆಗಳು ಇರುತ್ತಿದ್ದವು. ಇಷ್ಟೇ ಅಲ್ಲದೆ ದಾರಿಯುದ್ದಕ್ಕೂ ಪ್ರಯಾಣಿಕರಿಗೆ ತಂಪು ನೀಡಲು ಸಾಲು ಮರಗಳು ಇದ್ದವು. ಆಲದ ಮರ, ಅರಳಿ ಮರ, ಹುಣಸೇ ಮರ, ಮಾವಿನ ಮರ ಈ ಬಗೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದವು ಹಾಗೂ ವಿವಿಧ ರೀತಿಯ ಫಲವೃಕ್ಷಗಳು ಇದ್ದವೆಂದು ಹೇಳುತ್ತಾ, ನೀರಿನ ಅನುಕೂಲಕ್ಕಾಗಿ ಕೆರೆ, ಸರೋವರ, ಬಾವಿ, ಕಾಲುವೆ ಮುಂತಾದ ಸೌಕರ್ಯಗಳಿದ್ದವು, ಬೇಸಿಗೆಯ ಸಮಯದಲ್ಲಿ ಕೆಲವು ದಾನಿಗಳು ಪ್ರಮುಖ ಸ್ಥಳಗಳಲ್ಲಿ ಪಾನಕ, ಕೆನೆಮೊಸರನ್ನು ಪ್ರಯಾಣಿಕರಿಗೆ ಕೊಡುತ್ತಿದ್ದರು ಎಂದು ಸೀಜರ್ ಫ್ರೆಡ್ರಿಕ್ ಎಂಬ ವಿದೇಶಿ ಪ್ರವಾಸಿಗರು ಹೇಳಿರುವುದು ಅಂದಿನ ಸಾರಿಗೆ ವ್ಯವಸ್ಥೆಗೆ ಹಾಗೂ ಅದರ ಅನುಕೂಲಕ್ಕೆ ರಾಜರು ನೀಡಿದ ಪ್ರೋತ್ಸಾಹವನ್ನು ಸೂಚಿಸುತ್ತದೆ.

***