ಇತಿಹಾಸವೆಂದರೆ ಗತಕಾಲದ ಬದುಕಿನ ಅಧ್ಯಯನವೆಂದು ಹೇಳಿದರೆ ಸರಳ ನಿರೂಪಣೆಯಾಗುತ್ತದೆ. ಹೀಗೇ ನಡೆಯಿತು ಎಂಬುದನ್ನು ಖಚಿತವಾಗಿ ಹೇಳುವುದಾದರೆ ಹೇಗೆ? ಅದನ್ನು ಸತ್ಯವೆಂದು ನಿರ್ಧರಿಸಲು ಸಾಮಗ್ರಿಗಳು ಅಗತ್ಯ. ಆದರೆ ಸಾಮಗ್ರಿಗಳು ಸಂಪೂರ್ಣವಾಗಿ ದೊರೆಯುವುದಿಲ್ಲ. ಅಲ್ಲದೆ ಲಭ್ಯವಿರುವ ಸಾಮಗ್ರಿಗಳಲ್ಲೂ ಅನೇಕ ವೇಳೆ ಕೊರತೆ. ಪೂರ್ವಗ್ರಹ ಭಾವನೆ, ವೈಭವೀಕರಣ ಇತ್ಯಾದಿ ಅಂಶಗಳು ತಮಗರಿವಿಲ್ಲದೇ ಎನ್ನುವುದು ಕಷ್ಟ. ಈ ರೀತಿಯ ಸಮಸ್ಯೆಗಳನ್ನು ಇತಿಹಾಸಕಾರನು ಸಾಧ್ಯವಾದಷ್ಟು ವಸ್ತುನಿಷ್ಠವಾಗಿ ವಿಶ್ಲೇಷಿಸಿ ಅಂತಿಮ ತೀರ್ಮಾನಕ್ಕೆ ಬರುವಲ್ಲಿ ಸಫಲನಾಗಬೇಕಾಗಿದೆ.

ಇತಿಹಾಸದ ವಸ್ತು ಮುಖ್ಯವಾಗಿ ‘ಗತಕಾಲ’ ಎಂಬುದು ಸಾಮಾನ್ಯವಾಗಿ ಎಲ್ಲರ ಅಭಿಪ್ರಾಯ. ಆದರೆ ಗತಕಾಲದ ಎಲ್ಲಾ ಸಂಗತಿಗಳನ್ನು ಇತಿಹಾಸಕಾರ ಅಭ್ಯಾಸ ಮಾಡುವುದಿಲ್ಲ. ಏಕೆಂದರೆ ಇತಿಹಾಸವು ಕೇವಲ ವಿಶಿಷ್ಟವಾದ ವಿಷಯಗಳನ್ನು ಮಾತ್ರ ತನ್ನ ಮೂಲ ವಸ್ತುವಾಗಿ ಸ್ವೀಕರಿಸುತ್ತದೆನ್ನಬಹುದು. ನಮ್ಮ ದೈನಂದಿನ ಬದುಕಿನ ಸಂಬಂಧಿಸಿದ ಊಟ, ವಸತಿ, ಬಟ್ಟೆ, ವಸ್ತುಗಳು ಇಲ್ಲಿ ಸಂಪೂರ್ಣವಾಗಿ ಗೌಣವಾಗಿರುತ್ತವೆ. ಆದರೆ ಮತ, ಧರ್ಮ, ಸಾಹಿತ್ಯ, ರಾಜ್ಯವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಆಡಳಿತ ಹಾಗೂ ಸಂಸ್ಕೃತಿಯ ವಿವಿಧ ಮುಖಗಳು ಇದರ ಮುಖ್ಯ ವಸ್ತುಗಳಾಗಿ ಕಂಗೊಳಿಸುತ್ತವೆ.

ಇಂದಿನ ಯುಗಕ್ಕಂತು ಇತಿಹಾಸದ ಅಧ್ಯಯನ ಎಂದಿಗಿಂತಲೂ ಅತಿಹೆಚ್ಚು ಅವಶ್ಯಕವಾಗಿದೆ ಎನ್ನಬಹುದು History makes men wise ಎಂಬ ಮಾತೊಂದಿದೆ. ಹಾಗೆಯೇ ಇತಿಹಾಸವು ಮಾನವನನ್ನು ವಿವೇಕಿಯನ್ನಾಗಿ ಮಾಡುತ್ತದೆ ಎಂದೂ ಹೇಳುತ್ತಾರೆ. ಬೆಳಗಿನ ಸೂರ್ಯನ ಹೊಂಗಿರಣವನ್ನು ನೆನಪಿಸುವ ಹಾಗೆ ಪ್ರಾರಂಭವಾಗಿರುವ ೨೧ನೇ ಶತಮಾನದ ಪ್ರಾರಂಭದ ದಿನಗಳಲ್ಲಿಯೇ ಆ ಸೊಬಗಿನ ಹೊಂಗಿರಣವನ್ನು ನಿರ್ಲಕ್ಷಿಸುತ್ತಿರುವ ಮಾನವನು ಸಾವಿರಾರು ವರ್ಷಗಳ ಇತಿಹಾಸದ ಅಧ್ಯಯನದಿಂದ ವಿವೇಕಿ ಆಗಿದ್ದಾನೆಯೇ ಎಂಬುವುದು ಪ್ರಮುಖವಾಗಿ ಮೂಡುವ ಪ್ರಶ್ನೆ. ಇದಕ್ಕೆ ಯಾವುದೇ ಸಂಕೋಚವಿಲ್ಲದೆ ‘ಇಲ್ಲ’ ಎಂದೇ ಉತ್ತರ ಕೊಡಬೇಕಾಗುತ್ತದೆ ಏಕೆಂದರೆ ಅನಾಗರಿಕ ಸ್ಥಿತಿಯಲ್ಲಿದ್ದ ಹಾಗೆಯೇ ಶಿಲಾಯುಗಗಳಲ್ಲಿದ್ದ ಮಾನವನು ಬಿಲ್ಲು, ಕಲ್ಲುಗಳನ್ನು ಉಪಯೋಗಿಸಿ ನಂತರ ಲೋಹಗಳನ್ನು ಬಳಸಿ ತದನಂತರ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಅಂದು ಸಮರದಲ್ಲಿ ತೊಡಗಿದ್ದರೆ. ಇಂದು ಅದೇ ಮಾನವನು ವೈಜ್ಞಾನಿಕ ಪ್ರಗತಿಯಿಂದಾಗಿ ಅತ್ಯಂತ ಭಯಂಕರವಾದ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿಕೊಂಡು ಸಮಗ್ರ ಬದುಕನ್ನೇ ಸಂಪೂರ್ಣ ನಾಶಮಾಡುವ ಸ್ಥಿತಿಯಲ್ಲಿದ್ದಾನೆ. ಇದೇನು ಇತಿಹಾಸದಿಂದ ಬಂದಂತಹ ವಿವೇಕವೇ? ಈ ಹಂತದಲ್ಲಿ ನಾವು ನಾಗರಿಕತೆಯಲ್ಲಿ ಮುಂದುವರಿಯುತ್ತಿದ್ದೇವೆ ಎಂದನ್ನಿಸಬಹುದು. ಆದರೆ ಸಂಸ್ಕೃತಿಯಿಂದಲ್ಲ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೌತಮಬುದ್ಧ, ಮಹಾವೀರ ಬಸವಣ್ಣ, ಕನಕ – ಪುರಂದರರ ಕಾಲದಲ್ಲಿ ಇಂದಿನ ರೀತಿಯ ಅಧುನಿಕ ಸೌಕರ್ಯಗಳಿರಲಿಲ್ಲ. ಆದರೆ ಅವರು ಹಾಗೂ ಅವರ ಅಲೋಚನೆಗಳು ಇಂದಿಗೂ – ಮುಂದಿಗೂ ಪ್ರಸ್ತುತವೆನಿಸುತ್ತವೆ. ಆದುದರಿಂದಲೇ ಒಬ್ಬ ಪ್ರಸಿದ್ಧ ಇತಿಹಾಸಕಾರ ಹೇಳಿರುವುದು “One of the important lessons that we have to, draw from history is that nobody ever learns from History” ಇತಿಹಾಸದಿಂದ ಮಾನವ ಎಂದೂ ಪಾಠವನ್ನು ಕಲಿಯುವುದಿಲ್ಲ ಎಂಬ ಮುಖ್ಯವಾದ ಪಾಠವನ್ನು ನಾವು ಚರಿತ್ರೆಯಿಂದ ಕಲಿಯಬಹುದು. ಆದುದರಿಂದಲೇ ಇಂದಿಗೂ. ಎಂದೆಂದಿಗೂ ಇತಿಹಾಸದ ಅವಶ್ಯಕತೆ ಇದ್ದೇ ಇರುತ್ತದೆ.

ಗತಕಾಲದ ಬದುಕಿಗೂ ಮತ್ತು ಇಂದಿನ ಹತ್ತಿರದ ಬದುಕಿಗೂ ಬಹುಮುಖ್ಯವಾದಂತಹ ಸುಮಧುರ ಸಂಬಂಧವಿದೆ. ಅಂದಿನಿಂದ ಇಂದಿನವರೆಗೂ ಮಾನವನ ದೈನಂದಿನ ಬದುಕಿನಲ್ಲಿ ತೋರಬಹುದಾದಂತಹ ಆಸೆ ಆಕಾಂಕ್ಷೆಗಳ ಪೂರೈಕೆಯಲ್ಲಿ, ವಿಧಾನದಲ್ಲಿ ವ್ಯತ್ಯಾಸವಿದ್ದರೂ ಸಹ ಗುರಿಯಲ್ಲೇನೂ ಬದಲಾವಣೆ ಕಂಡುಬರುವುದಿಲ್ಲ. ಆದರೆ ಜೀವನದ ಶ್ರೇಷ್ಠ ಮೌಲ್ಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಶತಮಾನಗಳಿಂದಲೂ ಅವುಗಳು ಹಾಗೆಯೇ ಉಳಿದಿರುವುದು ಸತ್ಯ. ಅವುಗಳನ್ನು ಮತ್ತೆ ಜೀವಂತಗೊಳಿಸುವ ಕಾರ್ಯದಲ್ಲಿ ಇಂದು ಇತಿಹಾಸವು ವರ್ತಮಾನದ ಬದುಕಿಗೆ ಮಾರ್ಗದರ್ಶನ ಮಾಡುತ್ತಿದೆ ಎನ್ನಬಹುದು. ಇದರ ಜೊತೆಗೆ ಸುಸಂಸ್ಕೃತವಾದಂತಹ ಭವಿಷ್ಯವನ್ನು ರೂಪಿಸಲು ನೆರವಾಗುತ್ತದೆನ್ನಲೂಬಹುದು. ಈ ಅರ್ಥದಲ್ಲಿಯೇ “HIstory is a dialogue between past and present” ಎಂದು ಕರೆದಿರುವುದು.

ಕರ್ನಾಟಕ ಸಂಸ್ಕೃತಿ ಇತಿಹಾಸವು ಶ್ರೀಮಂತವೂ, ವೈವಿಧ್ಯವೂ ಆಗಿರುವುದು ಸಣ್ಣ ಪುಟ್ಟ ಭೌಗೋಳಿಕ ಘಟಕಗಳು ನೀಡಿರುವ ಕಾಣಿಕೆಗಳಿಂದ. ಆದುದುರಿಂದಲೇ ಇಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೂ ನೂರಾರು ರಾಜಸಂಸ್ಥಾನಗಳೂ ಆಳ್ವಿಕೆ ನಡೆಸಿ ತಮ್ಮ ಸೇವೆಯನ್ನು ಈ ನಾಡಿಗೆ ಸಲ್ಲಿಸಿ ಇತಿಹಾಸದ ಪುಡಗಳಲ್ಲಿ ಸೇರಿಕೊಂಡಿವೆ. ಈ ಎಲ್ಲ ಸಂಸ್ಥಾನಗಳಲ್ಲಿ ಕರ್ನಾಟಕದ ಮಧ್ಯಯುಗದಲ್ಲಿ ಆಳ್ವಿಕೆ ನಡೆಸಿದಂತಹ ವಿಜಯನಗರ, ಇಕ್ಕೇರಿ, ಮೈಸೂರಿನ ದೊರೆಗಳು ಅವರಿಗೆ ದೊರೆಕಿದಂತಹ ಭೌಗೋಲಿಕ ಹಿನ್ನೆಲೆಯ ದೃಷ್ಟಿಯಿಂದ ತಮ್ಮದೆ ಆದ ಸೇವೆ ಮಾಡಿ ಕರ್ನಾಟಕ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸುವಂತ ಮುನ್ನಡೆದರು. ಪ್ರಸ್ತುತ ಈ ಅಧ್ಯಯನದಲ್ಲಿ ಮೇಲೆ ಸೂಚಿಸಿರುವ ಮೂರು ಅರಸರ ಕಾಲದಲ್ಲಿ ಕನ್ನಡದ ಮಣ್ಣಿನಲ್ಲಿ ಕಂಡುಬಂದಂತಹ ಸಂಸ್ಕೃತಿಯ ಅಧ್ಯಯನವನ್ನು ಕೈಗೊಂಡಿರುವುದು ಅಧ್ಯಯನದ ದೃಷ್ಟಿಯಲ್ಲಿ ಹೆಚ್ಚು ಫಲಕಾರಿಯಾಗಿರುತ್ತದೆ ಎನ್ನಬಹುದು.

ಸಂಸ್ಕೃತಿ ಎಂದರೇನು ?

‘ಸಂಸ್ಕೃತಿ’ ಎಂಬ ಶಬ್ದ ಬಹುವಿಶಾಲವಾದದ್ದು, ಬಹುಮುಖವಾದದ್ದು ಹಾಗೆಯೇ ನಮ್ಮ ಜೀವನಕ್ಕೆ ಬಹುಮುಖ್ಯವಾದದ್ದು, ಯಾವುದೇ ಅಧಿಕಾರವಾಗಲಿ ಯಾವುದೇ ನಿಘಂಟಾಗಲಿ ಅದಕ್ಕೆ ಸರಿಯಾದ ಅರ್ಥವಿವರಣೆ ಕೊಡದಿದ್ದರೂ ಜ್ಞಾನದ ಪ್ರಯೋಗದಿಂದ ಆ ಪದದ ಅರ್ಥವನ್ನು ನಮ್ಮನಮ್ಮ ಮನಸ್ಸುಗಳಲ್ಲಿ ವಿವರಿಸಿಕೊಳ್ಳಬಹುದಾಗಿದೆ. ನಾವು ಅತ್ಯಂತ ಸುಲಭವಾಗಿ ನಮ್ಮ ದಿನನಿತ್ಯ ಉಪಯೋಗಿಸುವ ಎಷ್ಟೋ ಪದಗಳಿಗೆ ಅರ್ಥವನ್ನು ಕಂಡುಹಿಡಿಯುವುದು ಸುಲಭವಲ್ಲ. ಉದಾಹರಣೆಗೆ ಪ್ರಾಣಿ ಎಂದರೇನು? ಸತ್ಯ ಎಂದರೇನು? ಧರ್ಮ ಎಂದರೇನು? ಸುಳ್ಳು ಎಂದರೇನು? ಇಂಥ ಅನೇಕ ಪ್ರಶ್ನೆಗಳನ್ನು ಕೇಳಲಿಕ್ಕೆ ಎಷ್ಟು ಸುಲಭವೊ ಉತ್ತರಗಳನ್ನು ಹೇಳುವುದೂ ಸಹ ಅಷ್ಟೆ ಕಷ್ಟಕರವಾಗಿರುತ್ತದೆ. ಈ ಸಾಲಿನಲ್ಲಿ ಪ್ರಮುಖವಾಗಿ ಕಂಡುಬರುವ ಪ್ರಶ್ನೆಯೇ ಸಂಸ್ಕೃತಿ ಎಂದರೇನು ಎಂಬುವುದು. ಸಂಸ್ಕೃತಿ ಎಂಬ ಪದಕ್ಕೆ ಒಂದರ್ಥದಲ್ಲಿ “ಮನುಷ್ಯನು ತಾನು ಜೀವಿಸುತ್ತಿರುವಂತಹ ಪ್ರದೇಶದಲ್ಲಿ ತನ್ನ ಮಾನಸಿಕವಾದ ಬೆಳವಣಿಗೆಯ ಸ್ಥಿತಿಯನ್ನು ಜೀವಿಸುತ್ತಿರುವಂತಹ ಪ್ರದೇಶದಲ್ಲಿ ತನ್ನ ಮಾನಸಿಕವಾದ ಬೆಳವಣಿಗೆಯ ಸ್ಥಿತಿಯನ್ನು ಪದೇಪದೇ ಬದಲಾಯಿಸಿಕೊಳ್ಳ ಬಯಸಿರುತ್ತಾನೆ. ಹಾಗೆಯೇ ಬದಲಾವಣೆ ಕಂಡುಬರುವಂತಹ ಮಾನಸಿಕವಾದಂತಹ ಬೆಳವಣಿಗೆಯನ್ನೇ “ಸಂಸ್ಕೃತಿ” ಎನ್ನಬಹುದಾಗಿದೆ

ಒಂದು ದೇಶದ ಅಥವಾ ಸಾಮ್ರಾಜ್ಯದ ಅದರಲ್ಲಿಯೂ ಅಲ್ಲಿ ವಾಸಿಸುತ್ತಿದ್ದಂತಹ ಜನರ ಸಂಸ್ಕೃತಿಯನ್ನು ಕುರಿತು ಅಧ್ಯಯನ ಮಾಡುವಾಗ ಇತರರು ಈ ವಿಷಯದ ಬಗ್ಗೆ ಏನೇನು ಹೇಳಿದ್ದಾರೆಂಬುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಒಂದರ್ಥದಲ್ಲಿ ಜನಾಂಗದ ಜಾತಿ, ಕುಲ, ಧರ್ಮಗಳ ಸಂಸ್ಕೃತಿಯನ್ನು ನಾವು ಸಾಮಾನ್ಯ ಜನತೆಯ ಸಂಸ್ಕೃತಿ ಅಥವಾ ಜನತೆಯ ಸಂಸ್ಕೃತಿಯಂತಲೂ ಕರೆಯಬಹುದು. (ಇದನ್ನೇ ಇಂಗ್ಲಿಷನಲ್ಲಿ Folklore ಎಂದು ಕರೆಯುವುದು.) ಇದನ್ನೆ ನಾವು ಇಂದಿನ ಅಧ್ಯಯನದ ಅನುಕೂಲಿಕೆಯ ದೃಷ್ಟಿಯಿಂದ “ಜನತೆಯ ಸಂಸ್ಕೃತಿ” ಎಂದು ಕರೆದರೆ ಮಹತ್ವವೆನ್ನಿಸಬಹುದೇನೋ, ಹಾಗಾದರೆ “ಜನತೆಯ ಸಂಸ್ಕೃತಿ” ಎಂದರೇನು? ಇದಕ್ಕೆ Encyclopaedia Britannica, XI Ed; ವಿಶ್ವಕೋಶವು “ನಾಗರಿಕ ಜನಾಂಗದ ವಿವಿಧ ಕುಲಗಳಲ್ಲಿ ಕಂಡುಬರುವ ಪರಂಪರಾಗತವಾದಂತಹ ತಿಳಿವು, ಅರಿವು, ಅದೇ ಜನತೆಯ ಸಂಸ್ಕೃತಿ” ಎಂದೂ, ಅದೆ ರೀತಿಯಲ್ಲಿ Encyclopaedia of Relegion and ethics ಎಂಬ ಮಹತ್ವದ ವಿಶ್ವಕೋಶವು “ಒಂದು ಸಾಮ್ರಾಜ್ಯದಲ್ಲಿರುವ ಕುಲಗಳ, ವ್ಯಕ್ತಿಗಳ, ಗುಂಪುಗಳ ಪದ್ಧತಿಗಳು, ಆಚಾರ ವಿಚಾರಗಳು, ನಂಬಿಕೆಗಳು ಹಾಗೂ ಇವುಗಳೆಲ್ಲದರ ಸಮೂಹವೇ ಜನತೆಯ ಸಂಸ್ಕೃತಿ” ಎಂದು ಹೇಳುವುದರ ಜೊತೆಗೆ ಸಂಪ್ರದಾಯಬದ್ಧವಾದ ಆಚಾರಗಳು, ಪದ್ಧತಿಗಳು, ನಂಬಿಕೆಗಳು ಇವುಗಳೆಲ್ಲಕ್ಕೂ ಈ ಜನತೆಯ ಸಂಸ್ಕೃತಿಯು ವಿರುದ್ಧವಾದುದು ಎಂದೂ ಹೇಳಿರುವುದನ್ನು ಕಾಣಬಹುದಾಗಿದೆ.

ಮೇಲಿನ ಅಭಿಪ್ರಾಯಗಳಲ್ಲಿಯೇ ಕಂಡುಬರುವಂತಹ ಪ್ರಮುಖ ಲಕ್ಷಣಗಳನ್ನೇ ಒಟ್ಟಿಗೆ ಸೇರಿಸಿ ನಾವೂ ನಮ್ಮ ಜನಾಂಗದ, ನಮ್ಮ ಸಾಮ್ರಾಜ್ಯಗಳ ಸಂಸ್ಕೃತಿಯನ್ನು ಸಂಕ್ಷಿಪ್ತವಾಗಿ ವಿವರಸಬಹುದು. ಆದರೆ ಮೇಲೆ ಉಲ್ಲೇಖಿಸಿರುವ ಗ್ರಂಥಗಳು ಹೇಳುವಂತೆ, ನಮ್ಮ ಸಾಮ್ರಾಜ್ಯದ ಕೀಳುಕುಲವೆಂದೆನ್ನಿಸಿಕೊಂಡಿರುವ ಜನಾಂಗದವರನ್ನು ಮಾತ್ರ ಗಮನದಲ್ಲಿರಿಸಿಕೊಂಡು ನಮ್ಮ ನಮ್ಮ ಸಂಸ್ಕೃತಿಯನ್ನು ಕುರಿತು ಬರೆಯುವುದು ಅಸಾಧ್ಯವಾದದ್ದು. ಏಕೆಂದರೆ ಅದು ನಮ್ಮ ಹಿಂದಿನ ವೈಭವೀಕೃತ ಸಾಮ್ರಾಜ್ಯಗಳ ಅಧ್ಯಯನಕ್ಕೆ ಒಪ್ಪದ ಮಾತು, ಏಕೆಂದರೆ ವಿಜಯನಗರ ಸಾಮ್ರಾಜ್ಯದಲ್ಲಿಯೇ ಆಗಲಿ, ಮೈಸೂರು ಒಡೆಯರ ಆಸ್ಥಾನದಲ್ಲಿಯೇ ಆಗಲಿ ರಾಮಾಯಣ, ಮಹಾಭರತ, ಭಗವದ್ ಗೀತೆಯನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿ ಆ ಕೊನೆಯಿಂದ ಈ ಕೊನೆಯವರೆಗೆ ಹೇಳುತ್ತಿದ್ದವರೂ ಇದ್ದರು; ನಿಮಿಷದಲ್ಲಿಯೇ ಹಾಡು, ಲಾವಣಿ, ವಚನಗಳನ್ನು ಸೃಷ್ಟಿಸಿ ಹೇಳುವವರೂ ಇದ್ದರು; ಸಾವಿರಾರು ನುಡಿಗಳನ್ನೊಳಗೊಂಡಿರುವ ಹಾಡುಗಳು ಸ್ವಲ್ಪವೂ ತಪ್ಪಾಗದೆ ಹಾಗೆ ಇತರರ ಸಹಾಯವಿಲ್ಲದೆ ಬಾಯಲ್ಲಿ ಹೇಳಿರುವ ಪುರುಷ ಹಾಗೂ ಮಹಿಳಾ ಮೇಧಾವಿಗಳೂ ಸಹ ಇದ್ದರು. ಇಂತವರು ಇದ್ದಂತಹ ನಾಡುಗಳಲ್ಲಿ ಇದು ಪಂಡಿತರ ಸಂಸ್ಕೃತಿ, ಇದು ಕೀಳುಜಾತಿಯವರ ಸಂಸ್ಕೃತಿ, ಮೇಲು ಜಾತಿಯವರ ಸಂಸ್ಕೃತಿ, ಬಹುಸಂಸ್ಕೃತಿ, ಉಪಸಂಸ್ಕೃತಿ ಎಂಬ ವಿಭಾಗ ಮಾಡಿಕೊಳ್ಳದೆ ಒಟ್ಟಾರೆಯಾಗಿ “ನಮ್ಮ ಸಂಸ್ಕೃತಿ ಅಥವಾ ಕರ್ನಾಟಕ ಸಂಸ್ಕೃತಿ” ಎಂದು ಒಂದೇ ವ್ಯಾಖ್ಯಾನದಲ್ಲಿ ಕರೆಯುವುದು ಅತ್ಯಂತ ಸೂಕ್ತ.

ನಮ್ಮ ಸಂಸ್ಕೃತಿ ಅಥವಾ ಕರ್ನಾಟಕ ಸಂಸ್ಕೃತಿ ಎಂದೂ ಒಟ್ಟಾಗಿ ಕರೆಯುವುದಾದರೆ ಇಲ್ಲಿ ಮತ್ತೊಂದು ವಿಷಯ ಪ್ರಸ್ತಾಪಕ್ಕೆ ಬರದೇ ಇರಲಾರದು. ಇಂದಿನ ಆಧುನಿಕ ಕರ್ನಾಟಕ ಎಂದೂ ಹೇಳಿಕೊಳ್ಳುವುದರಲ್ಲಿಯೂ ನಾನಾ ಆಚಾರ ಸಂಪ್ರದಾಯಗಳು ಬೆಳೆಯುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಬ್ರಾಹ್ಮಣ, ವೀರಶೈವ, ಒಕ್ಕಲಿಗ ಎಂಬ ಶ್ರೀಮಂತ ಹಾಗೂ ಉತ್ತಮರೆಂದು ಸ್ವಘೋಷಿಸಿಕೊಂಡಂತಹ ಜಾತಿಗಳು ಇಂದಿನ ಎಲ್ಲಾ ಜನತೆಯು (ಕೆಲವು ಪ್ರತಿಗಾಮಿಗಳನ್ನು ಹೊರತುಪಡಿಸಿ) ಬ್ರಾಹ್ಮಣರನ್ನೇ ಧಾರ್ಮಿಕ ಹಾಗೂ ಪೌರೋಹಿತ್ಯ ಕಾರ್ಯಗಳಿಗೆ ಅವಲಂಬಿಸಿಕೊಂಡು ಜೀವನ ಅವಲಂಬಿಸಿರುವುದು. ವೀರಶೈವ ಜಂಗಮರು ಹಾಗೂ ಒಕ್ಕಲಿಗರ ಮಠಗಳಲ್ಲಿ ಸ್ವಾಮೀಜಿಯವರನ್ನು ಸೃಷ್ಟಿಸಿಕೊಂಡು ಅವರನ್ನೇ ತಮ್ಮೆಲ್ಲರ ಗುರುಗಳೆಂದು ನಂಬಿಕೊಂಡು ತಮ್ಮ ತಮ್ಮ ದಿನನಿತ್ಯದ ಕಾರ್ಯಗಳನ್ನು ಮಾಡಿಕೊಂಡು, ಚಾಚುತಪ್ಪದೆ ತಮ್ಮ ಜೀವನ ಮುಂದುವರಿಸಿಕೊಂಡು ಬರುತ್ತಿರುವುದು ಕಾಣಬಹುದು. ಆದರೆ ಇತ್ತೀಚಿನ ಬೆಳವಣಿಗೆಯನ್ನು ಗಮನಿಸುವುದಾದರೆ ಎರಡನೆಯ ಗುಂಪು ಸಹ ವೇದಗಳ ಅಧ್ಯಯನಗಳನ್ನು ಹೆಚ್ಚಾಗಿ ಮೈಗೂಡಿಸಿಕೊಂಡು ಮೊದಲನೆ ಗುಂಪಿನ ಕಡೆಗೆ ಹೆಚ್ಚಾಗಿ ವಾಲುತ್ತಿರುವುದು ಕಂಡುಬರುತ್ತಿದೆ. ಒಂದರ್ಥದಲ್ಲಿ ಇದು ಐಡೆಂಟಿಟಿ ಕ್ರೇಸಿ ಎಂದೂ ಕರೆಯಬಹುದು. ಕಡೆಗಣಿಸಲ್ಪಟ್ಟವರಲ್ಲಿ ವಿಶೇಷತೆ ಹುಡುಕುವುದು; ವಿಶೇಷತೆ ಹೊಂದಿರುವ ವರ್ಗದಲ್ಲಿ ಸಾಮ್ಯಾನತೆ ನೋಡುವುದು; ಹಾಗೆಯೇ ನಡೆಗಣಿಸಲ್ಪಟ್ಟವರಿಂದ ವಿಶೇಷತೆ ಮತ್ತೆ ವಿಶೇಷದಲ್ಲಿ ಕೆಳಮಟ್ಟದ ವರ್ತನೆಯನ್ನು ಕಂಡುಹಿಡಿಯುವುದು. ಈ ರೀತಿಯಲ್ಲಿ ನಮ್ಮ ಸಂಸ್ಕೃತಿ ಬೆಳೆಯುತ್ತಿದೆ ಎಂದೆನ್ನಬಹುದು. ಕಣ್ಣು, ಕಿವಿ, ಮೂಗು, ಬಾಯಿ, ಕೈ, ಕಾಲು ಮೊದಲಾದ ಅಂಗಾಂಗಗಳು ಕ್ರಮವಾಗಿ ಎಲ್ಲಾ ಮನುಷ್ಯರಿಗೂ ಇರುತ್ತದೆ. ಇಷ್ಟರಮಟ್ಟಿಗೆ ಎಲ್ಲ ಮನುಷ್ಯರ ಲಕ್ಷಣಗಳು ಒಂದೇ; ಆದರೆ ಒಬ್ಬ ವ್ಯಕ್ತಿಯ ಮುಖದಂತೆ ಮತ್ತೊಬ್ಬ ನದಿಲ್ಲ; ಒಬ್ಬನ ಮೂಗಿನಂತೆ ಇನ್ನೊಬ್ಬನದಿಲ್ಲ; ಮತ್ತೊಬ್ಬನ ಬುದ್ದಿಶಕ್ತಿಯಂತೆ ಮಗದೊಬ್ಬನಿಗೆ ಹೋಲಿಸಿದರೆ ಅನೇಕ ವ್ಯತ್ಯಾಸಗಳಿರುವುದು ಕಂಡು ಬರುತ್ತದೆ. ಮೇಲಿನ ರೂಪುರೇಷೆಯಲ್ಲಿ ಹೇಗೋ ಹಾಗೆ ಅಂತರಂಗದ ರಚನೆಯ ವಿಧಾನದಲ್ಲಿಯೂ ಒಬ್ಬೊಬ್ಬ ಮನುಷ್ಯನೂ ಒಂದೊಂದು ರೀತಿಯಲ್ಲಿ ಪ್ರತ್ಯೇಕತೆಯನ್ನು ಹೊಂದಿರುತ್ತಾನೆ. ಒಂದೇ ಮರದ ಹಣ್ಣುಗಳಲ್ಲಿ ಒಂದೇ ರುಚಿ ಇರುವುದಿಲ್ಲವೆಂಬಂತೆ ಒಂದೇ ಕುಟುಂಬದಲ್ಲಿ ಜನಿಸಿದಂತಹ ಐವರು ಮಕ್ಕಳ ಆಟಪಾಠಗಳೂ ಬೇರೆ ಬೇರೆಯಾಗಿರುತ್ತವೆಂದು ನಿಸ್ಸಂಕೋಚವಾಗಿ ಹೇಳಬಹುದು. ಒಟ್ಟಿನಲ್ಲಿ ಸಂಸ್ಕೃತಿಯ ದೃಷ್ಟಿಯಲ್ಲಿ ವರ್ಗವೆಂಬುವುದು ಒಂದೇಯಾಗಿದ್ದರೂ ಸಹ ವ್ಯಕ್ತಿ ಎನ್ನುವುದು ಹೆಚ್ಚಾಗಿರುತ್ತದೆ.

ಸಂಸ್ಕೃತಿಯಲ್ಲಿ ಪ್ರಮುಖವಾಗಿ ಎರಡು ವಿಧಗಳನ್ನು ನಾವು ಗುರುತಿಸಬಹುದು. ಅವುಗಳಲ್ಲಿ

೧. ಭೌತಿಕ ಸಂಸ್ಕೃತಿ (ಗೋಚರಿಸುವ ಸಂಸ್ಕೃತಿ)

೨. ಅಭೌತಿಕ ಸಂಸ್ಕೃತಿ (ಗೋಚರವಾಗುವ ಸಂಸ್ಕೃತಿ) ಎಂದು ಗುರ್ತಿಸಬಹುದಾಗಿದೆ. ಈ ರೀತಿಯ ಸಂಸ್ಕೃತಿಗಳು ಪ್ರತಿಯೊಬ್ಬರ ಜೀವನದಲ್ಲಿಯೂ ಅನುಭವಕ್ಕೆ ಬಂದಿರುತ್ತದೆ. ನಮ್ಮ ನಾಡಿನ ವರ ನದಿಗಳಾಗಿರುವಂತಹ ಕಾವೇರಿ, ಕೃಷ್ಣ, ತುಂಗಭದ್ರ ನದಿಗಳು ತಾವು ಹರಿದುಹೋಗುವ ದಾರಿಯಲ್ಲಿ ಆ ಪಕ್ಕ ಈ ಪಕ್ಕಗಳಿಂದ ಹತ್ತಾರು ಉಪನದಿಗಳನ್ನು ತಮ್ಮ ಮಡಿಲಿಗೆ ಸೇರಿಸಿಕೊಂಡು. ಒಂದಾಗಿ ಹರಿದು ಸಮುದ್ರಕ್ಕೆ ಅನೇಕ ಮುಖಗಳಿಂದ ನೀರನ್ನು ಸೇರಿಸುತ್ತವೆ. ಇಲ್ಲಿ ನದಿಯು ಭೌತಿಕ ಸಂಸ್ಕೃತಿಯ ರೂಪವಾಗಿ ಗೋಚರವಾಗುತ್ತದೆ. ಅದೇ ರೀತಿಯಲ್ಲಿ ಅಭೌತಿಕ ಸಂಸ್ಕೃತಿಯನ್ನು ಗುರ್ತಿಸುವುದಕ್ಕೆ ಕಲ್ಪವೃಕ್ಷವನ್ನು ಆಯ್ಕೆಮಾಡಿಕೊಳ್ಳಬಹುದು. ಕಲ್ಪವೃಕ್ಷದ ಪಾದ ತನ್ನದೆ ಆದಂತಹ ಸೀಮಿತ ಆಗಲದ ನೆಲದಲ್ಲಿ ನಿಂತು ಅಲ್ಲಿಯೇ ಸ್ಥಿರವಾಗಿರುತ್ತದೆ. ಆದರೆ ಬುಡದಿಂದ ತಲೆಯ ಕಡೆಯವರೆವಿಗೂ ಮರದ ನರನಾಡಿಗಳು ನೂರಾರು ಕಡೆಯಿಂದ ಸಾರವನ್ನು ಹೀರಿಕೊಳ್ಳುತ್ತಾ ಸಾವಿರಾರು ಮನುಷ್ಯರಿಗೆ, ಪಕ್ಷಿಗಳಿಗೆ ವಿವಿಧ ರೀತಿಯಲ್ಲಿ ಆಸರೆಯಾಗಿರುತ್ತದೆ. ಮೂಲದಲ್ಲಿ ಅದೊಂದು ಶಾಶ್ವತವಾದ ಸಂಸ್ಕೃತಿಯನ್ನು ತನ್ನ ಮಡಿಲಿನಲ್ಲಿ ಗೋಚರಿಸದೆಯೇ ಪೋಷಿಸಿಕೊಂಡಿರುತ್ತದೆನ್ನಬಹುದು. ಇದೇ ಒಂದು ದೃಷ್ಟಿಯಲ್ಲಿ ಅಭೌತಿಕ ಸಂಸ್ಕೃತಿ ಎಂದೆನ್ನಿಸಿಕೊಳ್ಳುತ್ತದೆ. ಸಂಸ್ಕೃತಿಯು ಹೀಗೆ ಭೌತಿಕ ಹಾಗೂ ಅಭೌತಿಕ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಮೂಲವಾಗಿ ಒಂದೇ ಸಮಾಜದ ಏಕಜನಪದ ಮೂಲವಾಗಿ ಹುಟ್ಟಿಕೊಂಡು. ಬೆಳೆದು ಬೆಳೆದಂತೆಲ್ಲಾ ಎಲ್ಲಾ ಜನರ ಜಾತಿಯ ಧರ್ಮದ ಸಾರವನ್ನು ತನ್ನೊಳಗೆ ಸೇರಿಸಿಕೊಂಡು ಅಖಂಡ ಲೋಕದ ಜನತೆಗೆ ಒಂದು ಪ್ರತ್ಯೇಕ ಸಂಪತ್ತಾಗುವುದರಲ್ಲಿ ಸಂದೇಹವಿರಲಾರದು. ಹೀಗೆ ಭೌತಿಕ ಅಭೌತಿಕಗಳ ಸಮ್ಮಿಶ್ರಣವೇ “ಸಂಸ್ಕೃತಿ” ಎನ್ನುವುದಾದರೆ ಮಾನವರ ದೃಷ್ಟಿಯಲ್ಲಿ ಈ ಬೌತಿಕ ಹಾಗೂ ಅಭೌತಿಕ ಸಂಸ್ಕೃತಿಯ ಅರ್ಥವೇ ಬೇರೆ ರೂಪ ಪಡೆದಿರುತ್ತದೆ.

ಪ್ರಪಂಚದ ಪ್ರಾಚೀನ ಇತಿಹಾಸವನ್ನು ಗಮನಿಸಿದರೆ ಮನುಷ್ಯ ತನ್ನ ಅಧ್ಯಾತ್ಮಿಕ ಹಾಗೂ ಭೌತಿಕ ಭಾವನೆಗಳನ್ನು ಕಾಲದಿಂದ ಕಾಲಕ್ಕೆ, ದೇಶದಿಂದ ದೇಶಕ್ಕೆ ಸಮಯಕ್ಕೆ ಸರಿಯಾಗಿಯೇ ಭದ್ರಮಾಡಿಕೊಂಡು, ಜೋಪಾನ ಮಾಡಿಕೊಂಡು ತನ್ನ ಬುದ್ಧಿಶಕ್ತಿಯಿಂದ ಆತ್ಮ ಸಿದ್ಧಿಗಾಗಿ ಉಪಯೋಗಿಸಿಕೊಂಡನೆಂಬುದನ್ನು ಕೇಳಿದಾಗ ನೋವಾಗುತ್ತದೆ. ಏಕೆಂದರೆ ಸಂಸ್ಕೃತಿಯು ಮುಖ್ಯವಾಗಿ ಆಧ್ಯಾತ್ಮಿಕ ಮತ್ತು ವ್ಯಕ್ತಿಪರವಾದದ್ದು. ಆದರೆ ಇಲ್ಲಿ ಗುಪ್ತವಾಗಿ ಆಯಾ ದೇಶ ಸಾಮ್ರಾಜ್ಯ ಕಾಲಲ್ಲಿನ ಆರ್ಥಿಕ ಸ್ಥಿತಿಗತಿ ಮುಂತಾದವನ್ನು ಅನುಸರಿಸಿ ಜೋಡಿಸಿ ನೋಡಿದರೆ ಸಂಸ್ಕೃತಿಗೆ ಭೇದಗಳಿರುವುದೆಂದು ಧೈರ್ಯವಾಗಿಯೇ ಹೇಳಬಹುದು. ಪ್ರತಿಯೊಬ್ಬ ಮಾನವನ ಪ್ರಗತಿಯಲ್ಲಿ ಪ್ರಮುಖವಾಗಿ ಸಂಸ್ಕೃತಿಯು ಜೀವ ಸ್ವರೂಪವಾಗಿರುತ್ತದೆ. ಏಕೆಂದರೆ ಆಸೆ, ಜ್ಞಾನ ಹಾಗೂ ಕಾರ್ಯ ಪ್ರವೃತ್ತನಾಗುವ ಗುಣವು ಸಂಸ್ಕೃತಿಯಿಂದ ಕಂಡುಬರುತ್ತದೆ.

ಮೇಲೆ ಚರ್ಚಿಸಬಯಸಿರುವಂತಹ ‘ಸಂಸ್ಕೃತಿಗೆ ಭೇದಗಳಿರುವುದು’ ಎಂಬ ವಿಷಯಕ್ಕೆ ಸಾಕ್ಷಿಯಾಗಿ ಈ ಕೆಳಗಿನ ಉದಾಹರಣೆಯನ್ನು ನೀಡಬಹುದು. ನಮ್ಮ ಪ್ರಪಂಚದ ಸಂಸ್ಕೃರಿಗೆ ಒಟ್ಟಾರೆ ಹೋಲಿಸಿಕೊಂಡರೆ ಅನೇಕ ರೀತಿಯ ವೈಶಿಷ್ಟ್ಯತೆಯಿರುವುದು ಕಂಡು ಬರುತ್ತದೆ ಹೇಗೆಂದರೆ ಚೀನಾ ಸಂಸ್ಕೃತಿಯಲ್ಲಿ ಹೆಚ್ಚಾಗಿ ನೀತಿಬೋಧನೆಯನ್ನು ಕಾಣಬಹುದಾದರೆ. ಭಾರತೀಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕವಾದಂತಹ ವಿವೇಚನೆಗೆ ಹೆಚ್ಚಿನ ಒತ್ತು ನೀಡಿರುವುದು ಕಾಣಬಹುದಾಗಿದೆ. ಮೆಸಪಟೋಮಿಯಾದ ಸಂಸ್ಕೃತಿಗಳಲ್ಲಿ ಪ್ರಥಮ ಸ್ಥಾನವನ್ನು ಕೈಗಾರಿಕೆ ಮತ್ತು ವಾಣಿಜ್ಯ ವ್ಯಾಪಾರಗಳು ಅಲಂಕರಿಸಿಕೊಂಡಿದ್ದರೆ, ಈಜಿಪ್ಟ್‌ನಲ್ಲಿ ಸಾಮ್ರಾಜ್ಯಶಾಹಿ ತತ್ವ ಪ್ರಮುಖವಾಗಿ ಎದ್ದು ಕಾಣುತ್ತದೆ. ಅದೇ ರೀತಿಯಲ್ಲಿ ಗ್ರೀಕರು ಕಲಾ ಮತ್ತು ಸ್ವಾತಂತ್ರ್ಯಕ್ಕೆ ಅದರಲ್ಲಿಯೂ ವ್ಯಕ್ತಿಸ್ವಾತಂತ್ರ ಕಲೆ ಹೆಚ್ಚಿನ ಗಮನ ನೀಡಿರುವುದು ಕಂಡುಬರುತ್ತದೆ. ಹಾಗೆಯೆ ರೋಮ್ ಸಂಸ್ಕೃತಿಯಲ್ಲಿ ಕಟ್ಟಳೆ, ಕಾನೂನುಗಳಿಗೆ ಪ್ರೋತ್ಸಾಹ ನೀಡಿದರೆ ಅರಬ್ ಸಂಸ್ಕೃತಿಯಲ್ಲಿ ಮತಾಭಿಮಾನ, ಧರ್ಮಾಭಿಮಾನಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕಂಡುಬರುತ್ತದೆ.

ಮೇಲಿನ ಒಂದೊಂದು ಸಂಸ್ಕೃತಿಯನ್ನು ಒಟ್ಟಾಗಿ ಚಿಂತಿಸತೊಡಗಿದಾಗ ಒಂದೇ ಒಂದು ಅಂಶ ಪ್ರಧಾನವಾಗಿ ಕಂಡುಬರುವುದು. ಅದೇನೆಂದರೆ ಅಲ್ಲಿನ ಜನರಲ್ಲಿದ್ದಂತಹ ಆತ್ಮಗುಣಗಳು, ಇದಕ್ಕೆ ಪೂರಕವಾಗಿ ಅಲ್ಲಿನ ದೇಶ ಕಾಲ ಚಾರಿತ್ರಿಕ ಸನ್ನಿವೇಶಗಳು ಅತ್ಯಂತ ಹೆಚ್ಚಿನ ರೀತಿಯಲ್ಲಿ ಪ್ರೇರಣೆ ನೀಡಿರಬಹುದು. ಈ ದೃಷ್ಟಿಯಿಂದಲೇ ತೌಲನಿಕವಾಗಿ ಅಧ್ಯಯನ ಕೈಗೊಂಡಿದ್ದೇ ಆದರೆ ನಮ್ಮ ಕರ್ನಾಟಕದ ಸಂಸ್ಕೃತಿಯನ್ನು ವಿವಿಧ ರಾಜಮನೆತನಗಳ, ದೊರೆಗಳ, ಪಾಳೆಗಾರರ ಆಳ್ವಿಕೆಯ ಕಾಲದಲ್ಲಿಯೂ ಗುರುತಿಸಬಹುದಾಗಿದೆ.

ನಮ್ಮ ಇತಿಹಾಸಗಾರರು ಕರ್ನಾಟಕದ ಸಂಸ್ಕೃತಿಯು ವಿಜಯನಗರ, ಇಕ್ಕೇರಿ ಮೈಸೂರು ಅರಸರುಗಳ ಆಳ್ವಿಕೆಯ ಕಾಲದಲ್ಲಿ ಇಡಿ ದಕ್ಷಿಣ ಭಾರತದಲ್ಲಿಯೇ ಅಖಂಡ ಹಾಗೂ ಅನಾದಿಯಾಗಿ ಮೆರೆಯಿತೆಂದು ಅಭಿಪ್ರಾಯ ಪಟ್ಟಿದ್ದಾರೆ. ಗೋದಾವರಿ ನದಿಯಿಂದ ಕನ್ಯಾಕುಮಾರಿವರೆವಿಗೂ ಹರಿಹರ ಹಕ್ಕಬುಕ್ಕರಿಂದ ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ವರಿವಿಗೂ ಹೇಗೆ ಕನ್ನಡ ನಾಡು ಅನೇಕ ಅಡೆತಡೆಗಳ ನಡುವೆಯೂ ಮೆರೆಯಿತೋ. ಹಾಗೆಯೇ ಸಾಹಿತ್ಯ ರತ್ನಗಳೆನ್ನಿಸಿಕೊಂಡಿರುವಂತಹ ಪಂಪ, ರನ್ನ, ಜನ್ನ, ರಾಘವಾಂಕ, ಹರಿಹರ, ಬಸವಣ್ಣ, ಕುಮಾರವ್ಯಾಸ, ಸರ್ವಜ್ಞ, ಕನಕ, ಪುರಂದರದಾಸರುಗಳಲ್ಲದೆ ಇತ್ತೀಚಿನ ಕುವೆಂಪು, ಬೇಂದ್ರೆ, ಮಾಸ್ತಿ, ಗೋಕಾಕ, ಅನಂತ ಮೂರ್ತಿ, ಕಂಬಾರ, ತೇಜಸ್ವಿಯವರವರೆವಿಗೂ ಅಖಂಡ ಕನ್ನಡ ನಾಡಾಗಿಯೇ ಮುನ್ನಡೆಯುತ್ತಿದೆ. ಈ ನಡುವೆ ಅನೇಕ ಅನ್ಯ ಧರ್ಮೀಯರ ದಾಳಿಗೆ ಕರ್ನಾಟಕ ತುತ್ತಾದರೂ ಸಹ ಕನ್ನಡದ ಸಂಸ್ಕೃತಿಯು ತನ್ನ ಮೂಲರೂಪವನ್ನು ಕಾಪಾಡಿಕೊಂಡು ಬರುವುದರಲ್ಲಿ ತಪ್ಪು ಮಾಡಿದಂತೆ ಕಂಡುಬರುವುದಿಲ್ಲ. ಇದಕ್ಕೆ ಪ್ರಬಲವಾದಂತಹ ಕಾರಣವೆಂದರೆ ಕನ್ನಡ ನಾಡಿನ ರಾಜಮಹಾರಾಜರುಗಳು ಅನುಸರಿಸಿಕೊಂಡು ಬಂದಂತಹ ಆಧ್ಯಾತ್ಮಿಕ ನೀತಿಸಾರವೆನ್ನಬಹುದು.

ಕರ್ನಾಟಕ ಸಂಸ್ಕೃತಿಯಲ್ಲಿ ವ್ಯಕ್ತಿಯ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ಇದೆ. ಹಾಗೆಯೇ ಆಧ್ಯಾತ್ಮಿಕ ವಿವೇಚನೆಗೆ ಅಧಿಕ ಪ್ರಾಶಸ್ತ್ಯ ನೀಡಿದರೂ ಸಹ ಧರ್ಮಕ್ಕೆ ವಿರುದ್ಧವಾಗಿರುವಂತಹ ಕಾಮ, ಧರ್ಮದ ದುರುಪಯೋಗ, ಹಣದ ಸಂಪಾದನೆ, ವರ್ಣಾಶ್ರಮಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗಿತ್ತು. ಆದ್ದರಿಂದ ಈ ಸಂಸ್ಕೃತಿಯೂ ಕೂಡ ವ್ಯಕ್ತಿಯ ಸಂಪೂರ್ಣ ಅಭಿವೃದ್ದಿಗೆ ಅವಶ್ಯಕವೆಂದು ನಿರ್ಣಯಿಸುವುದು ತಪ್ಪು. ಏಕೆಂದರೆ ಕರ್ನಾಟಕದ ಜನತೆ ಕೇವಲ ತಪ್ಪು ಕಲ್ಪನೆಯನ್ನು ಹೊಂದಿದವರೆಂಬ ಅಪಾದನೆಯು ಆಧಾರ ರಹಿತವಾದುದೆನ್ನಬಹುದು. ಮೇಲಿನ ವಿಷಯಕ್ಕೆ ಉದಾಹರಣೆ ನೀಡುವುದಾದರೆ ಕರ್ನಾಟಕದಲ್ಲಿ ಅದರಲ್ಲಿಯೂ ವಿಜಯನಗರ ಸಾಮ್ರಾಜ್ಯದಲ್ಲಿನ ಸಂಸ್ಕೃತಿಯು ವಿದ್ವಾಂಸರಿಂದ ಕಲಿತ ವಿದ್ಯೆಯ ಪ್ರಭಾವವೆನ್ನುವುದಕ್ಕಿಂತಲೂ, ಸ್ವತಃ ಕರಗತ ಮಾಡಿಕೊಂಡ ಪರಿಣಾಮದಿಂದ ಉಂಟಾದ ಅನುಭವದ ಅನಂದವೇ ಸಂಸ್ಕೃತಿಯಾಗಿ ಇಲ್ಲಿ ಹೊರಹೊಮ್ಮಿರುವುದು ಕಂಡುಬರುತ್ತದೆ. ಇದಕ್ಕೆ ವಿಜಯನಗರದ ಅರಸ ಕೃಷ್ಣದೇವರಾಯನ ಕಾಲದಲ್ಲಿ ವ್ಯಾಸತೀರ್ಥರು ಒಡ್ಡಿದಂತಹ ಸಣ್ಣ ಪ್ರಮಾಣದ ಪರೀಕ್ಷೆಯೇ ನಿದರ್ಶನವಾಗಿದೆ. ಒಮ್ಮೆ ಸಾಮ್ರಾಜ್ಯದ ಅಸ್ಥಾನದ ಮೇಧಾವಿಗಳಾಗಿದ್ದಂತಹ ವ್ಯಾಸರಾಯರು ಕನಕದಾಸರೂ ಸೇರಿದಂತೆ ಅನೇಕ ಶಿಷ್ಯರನ್ನು ಕರೆದು ದೇವರಿಗೆ ಪೂಜೆ ಸಲ್ಲಿಸಲಾಗಿದ್ದಂತಹ ಬಾಳೆಯ ಹಣ್ಣುಗಳನ್ನು ಕೊಟ್ಟು ‘ಯಾರೂ ಇಲ್ಲದೆಡೆ ಯಾರಿಗೂ ತೋರಿಸದೆ ತಿಂದು ಬನ್ನಿ’ ಎಂದು ಅಪ್ಪಣೆ ಮಾಡಿದರಂತೆ. ಪಂಡಿತರುಗಳು ಶಿಷ್ಯರುಗಳು ತಮಗೆ ತೋರಿದಂತೆ ಅನೇಕ ಗೌಪ್ಯ ಸ್ಥಳಗಳಲ್ಲಿ ತಿಂದುಬಂದರು. ಆದರೆ ಕನಕದಾಸರಿಗೆ ಮಾತ್ರ ಎಲ್ಲೆಲ್ಲಿ ಹೋದರೂ ತಮ್ಮ ನೆಚ್ಚಿನ ಗುರುಗಳು ಹಾಗೂ ಅವನ ಆರಾಧ್ಯದೈವ ಕೃಷ್ಣ ಇದ್ದೇ ಇರುವುದು ಕಂಡುಬರುತ್ತಿತ್ತು. ಅವನು ಈ ದೃಷ್ಟಿಯಲ್ಲಿ ಯಾರೂ ಇಲ್ಲದ ಎಡೆಯೇ ಈ ಲೋಕದಲ್ಲಿಲ್ಲವೆಂದು ತಿಳಿದು ಹಣ್ಣನ್ನು ತಿನ್ನದೆ ಹಿಂದಕ್ಕೆ ತಂದನಂತೆ, ಇದನ್ನೆ ನಾವು ಇಲ್ಲಿ ಶಿಷ್ಯರದು (Knowledge) ವಿದ್ವತ್ತು ಎಂದೆನ್ನಿಸಿಕೊಂಡರೆ. ಕನಕದಾಸರದನ್ನು ಸಂಸ್ಕೃತಿ (Culture) ಎಂದು ಹೇಳಬಹುದಾಗಿದೆ. ಮೇಲಿನ ಉದಾಹರಣೆಯಿಂದ ನಡೆನುಡಿಗಳೆರಡರಲ್ಲಿಯೂ ಸಡಲಿಕೆ ಮಾಡಿಕೊಳ್ಳದಂತೆ “ಎರಡನ್ನೂ ಒಂದೇ ನಾಣ್ಯದ ಎರಡು ಮುಖಗಳಂತೆ ಕೊಂಡೊಯ್ಯುವ ಮನಸ್ಸಿನ ಹಿಡಿತವೇ ಸಂಸ್ಕೃತಿ” ಎಂದು ತಿಳಿಯಬಹುದಾಗಿದೆ. ಏಕೆಂದರೆ ವಿಚಾರ ಮಾಡುವುದೇ ಒಂದು, ಆಚಾರ ಮಾಡುವುದೇ ಮತ್ತೊಂದಾಗಿಸಿಕೊಂಡಿದ್ದರೆ, ಅಂಥಹವರ ಮನಸ್ಸಿನ ಕಾರ್ಯವು ಸಂಸ್ಕೃತಿಯಾಗುವುದಿಲ್ಲ. ಮನುಷ್ಯನ ದಿನನಿತ್ಯದ ಬದುಕು ಅವನ ಜೀವನವೆಲ್ಲವೂ ನಡೆನುಡಿಗಳೆರಡರಲ್ಲಿಯೇ ಅಡಕವಾಗಿರುತ್ತದೆನ್ನಬಹುದು. ಸಂಸ್ಕೃತಿಯ ಪರಿಶೋಧನೆಯನ್ನು ಕೈಗೊಂಡಿರುವಂತವರು ಮೊದಲು ಈ ನಡೆನುಡಿಗಳನ್ನು ಗಮನಿಸಬೇಕೆನ್ನಿಸುತ್ತದೆ. ಈ ಎರಡರಲ್ಲಿ ತಕ್ಷಣ ಕೈಗೆ ಸಿಗುವುದೆಂದರೆ ‘ನುಡಿ’ ನುಡಿಯ ಬಗ್ಗೆ ಹೇಳುವುದಾದರೆ ಇಲ್ಲಿ ಹಾಡು, ಕಥೆ, ಒಗಟು, ಗಾದೆ, ಸಂಗೀತ ಪುರಾಣಕಥೆಗಳು, ಲಾವಣಿ, ತತ್ವಪದಗಳು ಮುಂತಾದವುಗಳು ಒಟ್ಟಾಗಿ ಬರುತ್ತವೆನ್ನಬಹುದು. ಇಂದಿಗೂ ಕೂಡ ಸಂಸ್ಕೃತಿಯು ತನ್ನದೆಯಾದ ವೈಶಿಷ್ಟ್ಯತೆಯನ್ನು ಪಡೆದಿರಲು ಕಾರಣವೆಂದರೆ ನುಡಿಯ ಪಾತ್ರ ಎದ್ದು ಕಾಣುತ್ತದೆ. (ಇಂದು ಪ್ರಪಂಚದ ಎಲ್ಲಾ ರಾಷ್ಟ್ರಗಳು ಒಂದು ಕಡೆ ಸೇರಿಸಿರುವ ಭಾಷೆ “ಇಂಗ್ಲಿಷ್’ ಎನ್ನುವುದು ನಮಗೆಲ್ಲ ತಿಳಿದಿರುವ ವಿಷಯವೇ.)

ಸಂಸ್ಕೃತಿಯ ಬಗ್ಗೆ ಚಿಂತಿಸುತ್ತಾ ಮುಂದುವರೆದರೆ ಸಂಸ್ಕೃತಿಯು ವ್ಯಕ್ತಿ ಪ್ರಧಾನವೇ? ಅಥವಾ ಸಮಾಜ ಪ್ರಧಾನವೇ? ಅಥವಾ ವ್ಯಕ್ತಿಗೆ ವಿಧೇಯವಾಗಿರುವುದೇ? ಅಥವಾ ಸಮಾಜಕ್ಕೆ ವಿಧೇಯಿಯಾಗಿರುವುದೇ? ಎಂಬ ಪ್ರಶ್ನೆ ಉಂಟಾಗುವುದು ಸಹಜವೇ, ಆದರೆ ಇಲ್ಲಿ. ಈ ಪ್ರಶ್ನೆ ವ್ಯಕ್ತಿ ಮತ್ತು ಸಮಾಜಗಳೆಲ್ಲವೂ ತನ್ನದೆಯಾದ ರೀತಿಯಲ್ಲಿ ಬೇರೆ ಬೇರೆಯಾದವುಗಳೆನ್ನಬಹುದು. ಹಾಗೆಯೇ ಇವುಗಳ ಸಾಮಾನ್ಯವಾಗಿ ಒಂದನ್ನೊಂದು ಬಿಟ್ಟಿರಲೂಬಲ್ಲವು ಎಂಬ ಭಾವನೆಯಿಂದ ಉಂಟಾಗುತ್ತದೆ ಎಂದೂ ಹೇಳಬಹುದು. ಇಂದಿನ ಪ್ರಪಂಚದಲ್ಲಿ ಲೋಕದ ಪರಿಜ್ಞಾನವನ್ನು ಹೆಚ್ಚಾಗಿ ಹೊಂದಿರುವವರಂತೂ ಆ ಭೇದ ಭಾವನೆಗಳಿಗೆ ಯಾವುದೇ ರೀತಿಯ ಆಧಾರವಿಲ್ಲವೆಂದು ವಾದಿಸುತ್ತಿರುವುದು ಕಂಡುಬರುತ್ತದೆ. ಮನೆ, ಕಾಲ, ಜಾತಿ, ಉದ್ಯೋಗ, ರಾಜಕೀಯಗಳೆಲ್ಲವೂ ವ್ಯಕ್ತಿಯ ಮೇಲೆ ಕ್ಷಣಕ್ಷಣವೂ ತನ್ನದೆಯಾದ ಪ್ರಭಾವ ಬೀರುತ್ತಿರುತ್ತದೆ. ವ್ಯಕ್ತಿಯ ಪಾತ್ರವೂ ಇಲ್ಲಿ ತನ್ನದೇ ಪ್ರಮಾಣದಲ್ಲಿ ಪ್ರಭಾವವನ್ನು ಅವುಗಳ ಮೇಲೆ ಸತತವಾಗಿ ಬೀರಲು ಪ್ರಭಾವಿತರಾಗುವಂತೆ ಮಾಡುತ್ತದೆ. ಈ ರೀತಿಯಲ್ಲಿ ಕಣ್ಣಿಗೆ ಕಾಣುವ ಹಾಗೂ ಕಾಣದೆ ಇರುವ ಸಂಸ್ಕೃತಿಯು ರೂಪಗೊಳ್ಳುತ್ತಿರುತ್ತದೆಂದು ಹೇಳಬಹುದು.

ಕರ್ನಾಟಕ ಸಂಸ್ಕೃತಿ ಚರಿತ್ರೆಗೆ ವಿಶೇಷ ಕೊಡುಗೆ ನೀಡಿರುವಂತಹ ಡಾ. ಎಸ್.ಎಸ್. ತಿಪ್ಪೇರುದ್ರಸ್ವಾಮಿಯವರು ‘ಸಂಸ್ಕೃತಿ’ ಎಂಬ ಪದಕ್ಕೆ ಅನೇಕ ರೀತಿಯ ವಿಶ್ಲೇಷಣೆಯನ್ನು ನೀಡಿರುತ್ತಾರೆ. ಅವರ ಪ್ರಕಾರ “ಸಂಸ್ಕೃತಿಯೆಂಬುವುದು ಸೂತ್ರ ರೂಪದಲ್ಲಿ ಹಿಡಿದಿಡಲಾಗದ ವಿರಾಟ್ ಶಕ್ತಿ ಎಂಬುದನ್ನು ನಮಗೆ ತೋರಿಸುತ್ತದೆ. ಹಂತ ಹಂತವಾಗಿ ಅದು ವಿಕಾಸಗೋಲ್ಳುತ್ತದೆ. ಪದರ ಪದರವಾಗಿ ಜೀವನವನ್ನು ವ್ಯಾಪಿಸುತ್ತದೆ. ಸಂಸ್ಕೃತಿ ಎನ್ನುವುದು ಅಂತರಂಗದ ವಿಕಾಸ; ನಿಜ ಆ ವಿಕಾಸಕ್ಕೆ ಕಾರಣವಾದ ಸಾಮಾಜಿಕ ಪರಿಕರಗಳು; ಅದೂ ಹೌದು” ಎಂದು ಹೇಳಬಯಸಿರುತ್ತಾರೆ. ಅವರು ಮುಂದುವರೆದು ನುಡಿದಂತೆ ನಡೆಯುವುದೇ ಸಂಸ್ಕೃತಿ; ಸಮಾಜದೊಡನೆ ಸಹಬಾಳ್ವೆಯ ಸೌಜನ್ಯದ ಮಾರ್ಗವೇ ಸಂಸ್ಕೃತಿ; ಶೀಲದ ಸೌಭಾಗ್ಯವೇ ಸಂಸ್ಕೃತಿ; ಆತ್ಮ ಶಿಕ್ಷಣವೇ ಸಂಸ್ಕೃತಿ, ಸಾಹಿತ್ಯದ ಸರಸ ಕಲೆಗಳೇ ಸಂಸ್ಕೃತಿ, ಇವೆಲ್ಲವೂ ನಿಜ. ಈ ಎಲ್ಲ ಮುಖಗಳನ್ನು ಒಳಗೊಂಡಿರುವುದೆ ಸಂಸ್ಕೃತಿ ಎಂದು ಅವರ ಮಹತ್ವದ ಕೃತಿಯಾಗಿರುವ “ಕರ್ನಾಟಕ ಸಂಸ್ಕೃತಿ ಸಮೀಕ್ಷೆ”ಯಲ್ಲಿ ನಿರೂಪಿಸಿರುತ್ತಾರೆ. ಅವರ ಅಭಿಪ್ರಾಯ ಒಂದರ್ಥದಲ್ಲಿ ನಿಜವೆನ್ನಬಹುದು. ಏಕೆಂದರೆ ನಮ್ಮ ಉಡುಗೆ, ತೊಡುಗೆಗಳಲ್ಲಿ, ನಡೆನುಡಿಗಳಲ್ಲಿ, ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆಗಳಲ್ಲಿ ಜೀವನ ಪದ್ಧತಿಯ ಒಂದೊಂದು ಹಂತದಲ್ಲಯೂ ಅದರ ಪ್ರಭಾವ ಹೆಚ್ಚಾಗಿಯೇ ಕಂಡುಬರುತ್ತದೆ. ಇದೇ ರೀತಿಯಾಗಿ ಕೇವಲ ಬಾಹ್ಯವೆನ್ನಬಹುದಾದ ನಾಗರಿಕತೆಯ ಅಂಶಗಳ ಮೇಲೂ ಇದು ತನ್ನ ಪ್ರಭಾವವನ್ನು ಬೀರದೆ ಇರಲಾರದು.

ಚಾರಿತ್ರಿಕವಾಗಿ ಸಂಸ್ಕೃತಿಯನ್ನು ಜೀವನ ವಿಧಾನಗಳಿಂದ ಒಂದುದೆನ್ನಬಹುದು. ಇದು ನೋಡುವುದರಿಂದಾಗಲಿ, ಕಲಿಯುವುದರಿಂದಾಗಲಿ ಹೆಚ್ಚಾಗಿ ಬರುತ್ತದೆಯನ್ನುವುದು ಹೆಚ್ಚು ಮನಶಾಸ್ತ್ರಜ್ಞರ ಅಭಿಪ್ರಾಯ, ತಂತಾನೆ ಅನುವಂಶಿಕವಾಗಿ ಬರದೆ, ವ್ಯಕ್ತಿಯೊಬ್ಬನು ಬೆಳೆಯುತ್ತಿರುವ ವಾತಾವರಣದಿಂದ ಅವನ ಸಂಸ್ಕೃತಿಯು ತನ್ನದೆ ಆದ ರೀತಿಯಲ್ಲಿ ಬೆಳೆಯುತ್ತಿರುತ್ತದೆ. ವಾಸ್ತವವಾಗಿ ವ್ಯಕ್ತಿಯು ಬದುಕುತ್ತಿರುವ ಭಾಗದ ಸಂಸ್ಕೃತಿಯೇ ಅವನ ಪ್ರಧಾನ ಸಂಸ್ಕೃತಿಯಾಗಿ ರೂಪಗೊಂಡಿರುತ್ತದೆ. ಹಾಗೆಯೇ ವ್ಯಕ್ತಿ ಅಥವಾ ಅನೇಕ ಜನರಿಂದ ಕೂಡಿರುವ ಸಮೂಹವೊಂದು ಅಸ್ತಿತ್ವದಲ್ಲಿರುವ ಸಂಸ್ಕೃತಿಗಿಂತ ಭಿನ್ನ ಭಿನ್ನವಾದಾಗ ಮಾತ್ರ ಹಾಗೂ ಇದರ ಜೊತೆಗೆ ಈ ಭಿನ್ನ ಭಾವವು ಹೆಚ್ಚು ಒತ್ತಡದಿಂದ ಕೂಡಿದಾಗ ಮಾತ್ರ ಬದಲಾವಣೆಯ ಕ್ರಿಯೆ ಕಂಡುಬರುತ್ತದೆ. ಈ ಮೇಲಿನ ಮಾತನ್ನು ನಾವು ನಮ್ಮ ಹಿಂದಿನ ಇತಿಹಾಸ ಪ್ರಸಿದ್ಧ ಸಾಮ್ರಾಜ್ಯಗಳಿಗೆ ಎಷ್ಟರಮಟ್ಟಿಗೆ ಹೋಲಿಸಬೇಕೆನ್ನುವುದೇ ಕಷ್ಟವಾಗಿ ಪರಿಣಮಿಸುತ್ತದೆ. ಏಕೆಂದರೆ ಯಾವುದೇ ಸಂಸ್ಕೃತಿಯು ಬದಲಾವಣೆಯನ್ನು ಸುಲಭವಾಗಿ ಒಪ್ಪಿಸಿಕೊಳ್ಳುವುದಿಲ್ಲ. ಅದೇ ರೀತಿಯಲ್ಲಿ ಸಂಸ್ಕೃತಿಯು ವ್ಯಕ್ತಿಯನ್ನು ಅಲ್ಲಿನ ಪರಿಸರವು ಸಂಪೂರ್ಣವಾಗಿ ಅವರಿಸಿ ಅಂತರಂಗದಲ್ಲಿ ಮನೆ ಮಾಡಿಕೊಳ್ಳುತ್ತದೆ. ಇದರಿಂದಾಗಿ ನಾವು ಹುಟ್ಟಿ ಬೆಳೆಯುವಾಗಲೇ ಜಗತ್ತಿನ ವಾಸ್ತವ ವಿಷಯಕ್ಕಿಂತಲೂ ಹೆಚ್ಚಾಗಿ ಭ್ರಮೆ ಎಂಬ ದೈತ್ಯವನ್ನು ಬುದ್ಧಿ, ಭಾವಗಳಿಗೆ ಬೆಸೆದುಕೊಂಡೇ ಬೆಳೆಯುತ್ತೇವೆ. ಈ ಬೆಳವಣಿಗೆಯಲ್ಲಿಯೇ ವಿಜಯನಗರ, ಮೈಸೂರು ಅರಸರ ಕಾಲದಲ್ಲಿನ ಸಂಸ್ಕೃತಿ ಭವ್ಯ ಸಂಸ್ಕೃತಿ, ನಮ್ಮ ಭೂಮಿ ಪುಣ್ಯಭೂಮಿ, ಸ್ನೇಹಭೂಮಿ, ಗಂಡುಭೂಮಿ, ಸೌಂದರ್ಯಯುಗದ ನಾಡು ಎಂದೆಲ್ಲಾ ಬಾಯಿಪಾಠ ಮಾಡಿಕೊಂಡು ನಮ್ಮ ಕಿರಿಯರಿಗೂ ಚಾಚು ತಪ್ಪದೆಯೇ ಒಪ್ಪಿಸತೊಡಗುತ್ತೇವೆ. ಇಂತಹ ಸಮಯದಲ್ಲಿ ಆ ಭವ್ಯ ನಾಡಿನಲ್ಲಿಯೇ ಅದೇ ಪ್ರದೇಶದಲ್ಲಿದ್ದಂತಹ ದೀನದಲಿತರು, ಬಡವರು, ಭಿಕ್ಷಕರು, ರೋಗಿಗಳು, ನಿರ್ಗತಿಕರು ಒಟ್ಟಾರೆಯಾಗಿ ಪಾಮರರುಗಳು ಈ ಭೂಮಿಯ ಪಾಪಪುಣ್ಯಕ್ಕೆ ಒಕ್ಕರಿಸಿದಂತಹ ಪಾಪಿಗಳಾಗಿ ಕಂಡುಬರುತ್ತಾರೆ. ಆದರೆ ಯಾರಿಗೂ ಯಾವ ಸಂಸ್ಕೃತಿ ಚರಿತ್ರೆಗಾರನಿಗೂ ಸಹ ಈ ಪಾಪದ ಕಾರಣಗಳು ಮಾತ್ರ ಸ್ವಲ್ಪವೂ ಗೋಚರಿಸಿದಂತೆ ಕಂಡುಬರುವುದಿಲ್ಲ. ಇದು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿಯೇ ಇದೆ. ಏಕೆಂದರೆ ರಾಜ್ಯದಲ್ಲಿ ರಾಷ್ಟ್ರಮಟ್ಟದಲ್ಲಿ ಜಾತೀಯತೆಯು ತಾಂಡವಾಡುತ್ತಿದ್ದರೂ, ಮೇಲುಕೀಳು ಎಂಬ ಭಾವನೆ ಹುಟ್ಟುವ ಮಕ್ಕಳಿಗೂ ಗೋಚರವಾಗುವಂತಿದ್ದರೂ ಮೇಲ್ನೋಟಕ್ಕೆ ನಮ್ಮ ದೇಶವನ್ನು “ಜಾತ್ಯಾತೀತ ದೇಶ” ಎಂದು ಕರೆದುಕೊಳ್ಳುತ್ತೇವೆ. ನಮ್ಮ ಸಂಸ್ಕೃತಿ ಪ್ರಪಂಚದಲ್ಲಿಯೇ ಶ್ರೇಷ್ಠವಾದುದೆಂದು ಹೇಳಿಕೊಂಡು ನಮಗೆ ನಾವೇ ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.

ಡಾ. ಬರಗೂರು ರಾಮಚಂದ್ರಪ್ಪನವರು ಈ ದೇಶದ ಸಂಸ್ಕೃತಿಯ ಮೂಲದ ಬಗ್ಗೆ ಪ್ರಸ್ಥಾಪಿಸುತ್ತಾ ನೀಡಿರುವ ಹೇಳಿಕೆ ಹಾಗೂ ಅದಕ್ಕೆ ತಕ್ಕ ಸಲಹೆಯನ್ನು ಗಮನಿಸುವುದು ಇಲ್ಲಿ ಅವಶ್ಯಕತೆಯನ್ನಿಸುತ್ತದೆ. ಅವರ ಪ್ರಕಾರ “ವಿಧೇಯತೆ ಒಂದು ಮುಖ್ಯ ಮೌಲ್ಯವಾಗಿ ನಮ್ಮ ಜೀವನ ವಿಧಾನದಲ್ಲಿ ಸೇರಿಕೊಂಡಿದೆ. ಇದರಿಂದ ಆದ ಪ್ರಯೋಜನವಾದರೂ ಏನು? ವಿಧೇಯತೆಯಲ್ಲಿ ಕುಗ್ಗಿ ಹೋದವರು ಪ್ರತಿಭಟನೆಯ ಪರಿಭಾಷೆಯನ್ನೇ ‘ಪ್ರತಿಭಟಿಸುವಷ್ಟರ’ ಮಟ್ಟಿಗೆ ಹೂತುಹೋದರು. ಇದಕ್ಕೆ ಹೊಂದಿಕೊಂಡಂತೆ ಸೃಷ್ಟಿಯಾದಂತಹ ಪೂಜ್ಯತೆ ಮತ್ತು ಶರಣಾಗತಿಗಳು ಶ್ರೀಣೀಕೃತ ಸಮಾಜದ ಶೋಷಣೆಯ ಸಾಧನೆಗಳೆಂದು ಅರಿವಾಗಲು ಸಾಕಷ್ಟು ಕಾಲವೇ ಹಿಡಿಯಿತು. ಪೂಜ್ಯತೆ ವಿಧೇಯತೆಗಳು ಅನಿವಾರ್ಯ ಹಾಗೂ ಅಗತ್ಯವೆಂಬ ‘ಅರಿವು’ ಇಂದು (ಪ್ರಜ್ಞಾವಂತ ದಲಿತರನ್ನೊಳಗೊಂಡಂತೆ) ದಟ್ಟವಾಗಿರುವುದಿಂದಲೇ ಶೋಷಿತ ಸಮೂಹ ಶರಣಾಗತಿಯ ಸ್ಥಿತಿ ತಲುಪುತ್ತಿದೆ’ ಎಂದೇಳಿ, ಮುಂದೆ ನಮ್ಮಕ ಸಂಸ್ಕೃತಿಯು ನ್ಯಾಯವಾಗಿ ವಿಧೇಯತೆಯ ಬದಲು ವಿನಯವನ್ನು, ಪೂಜ್ಯತೆಯ ಬದಲು ಪ್ರಜ್ಞೆಯನ್ನು ಸ್ಥಾಪಿಸಬೇಕಾಗಿದ್ದುದು. ವಿನಯ. ಪ್ರಜ್ಞೆ ಸೌಜನ್ಯ ಸ್ವಾಭಿಮಾನಗಳ ಬದಲು ವಿಧೇಯತೆ ಪೂಜ್ಯತೆ, ಶರಣಾಗತಿಗಳನ್ನು ಕಲಿಸಿದ ಸಂಸ್ಕೃತಿ ಸಂಸ್ಕೃತಿಯೇ ಅಲ್ಲ. ಇದೊಂದು ಸಾಮಾನ್ಯ ಜನರ ಬೆನ್ನಿಗೆ ಪೊರೆ ಕಟ್ಟಿದ ಜೇಡವಿದ್ದಂತೆ ಎಂಬ ಮಾತುಗಳನ್ನು ಹೇಳಿದ್ದಾರೆ.

ಬರಗೂರರ ಮಾತನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ ಹೊಗಳಿಕೆ, ಪ್ರಶಂಸೆ, ಸನ್ಮಾನಗಳಿಲ್ಲದ ಸಮಾಜವಿಲ್ಲವೆಂದೇ ಹೇಳಬಹುದು. ಉತ್ತಮ ಕೆಲಸವಾದಾಗ ಅದಕ್ಕೆ ಸಂಬಂಧಿಸಿದವರನ್ನು ಹೊಗಳುವುದು ತಪ್ಪೇನಲ್ಲ. ಆದರೆ ಇಂಥ ಹೊಗಳಿವಿಕೆ ಅನಗತ್ಯವಾಗಿ ಮಿತಿಮೀರಿ ಒಂದು ಸಾಮಾಜಿಕ ಕ್ರಿಯೆಯಾದಾಗ ಅದೇ ಮುಂದೆ “ಸ್ತೋತ್ರ’ ವಾಗುತ್ತದೆ ಇಂದಿನ ದಿನಕ್ಕಾಗಲೇ ಇದು ಸ್ತೋತ್ರವಾಗಿಬಿಟ್ಟಿದೆ ಎಂದು ಹೇಳಬಹುದು. ಏಕೆಂದರೆ ಅಂದಿನಿಂದ ಇಂದಿನವರೆಗೂ ವ್ಯಕ್ತಿಯೊಬ್ಬನಿಂದ ಮತ್ತೊಬ್ಬ ವ್ಯಕ್ತಿಗೆ ಸಲ್ಲುವ ಗೌರವದ ಸಂದರ್ಭದಲ್ಲೂ ಅವನ ಹಿನ್ನೆಲೆಗೆ ಅವನ ಸಾಮಾಜಿಕ ನೆಲೆಯೊಂದಿಗೆ ತಾಳೆಮಾಡಿ ನೋಡಲಾಗುತ್ತದೆ. ಈ ಸಂದರ್ಭದಲ್ಲಿ ಹೊಗಳುವಿಕೆಯು ತನ್ನೆಲ್ಲಾ ಮಿತಿಯನ್ನು ಮೀರಿದ ಒಂದು ಬೂಟಾಟಿಕೆಯ ಕ್ರಿಯೆಯಾಗಿರುತ್ತದೆನ್ನಬಹುದು. ಇದು ಬೂಟಾಟಿಕೆಯ ಕ್ರಿಯೆಯಾಗಿರುವುದರಿಂದಲೇ ಅದು ಸ್ವಾಭಾವಿಕವಾಗಿಯೇ ‘ನಿಷ್ಕ್ರಿಯ’ವಾಗಿರುತ್ತದೆ. ಇದು ಇಂದು ನಮ್ಮ ಮುಂದೆ ಕಾಣುತ್ತಿರುವ ನೈಜವಸ್ತು.

ರಾಜ್ಯ ಅಥವಾ ಸಾಮ್ರಾಜ್ಯ ಎಂಬ ವ್ಯವಸ್ಥೆಯನ್ನು ಮಾನವನು ತಾನು ಬದುಕುತ್ತಿರುವ ಸಮಾಜಗಳು ಹಾಗೂ ನಾಗರಿಕ ವ್ಯವಸ್ಥೆಯಲ್ಲಿ ರೂಢಿಸಿಕೊಂಡಿರುತ್ತಾನೆ. ಈ ವ್ಯವಸ್ಥೆಯು ಕೆಲವು ಪ್ರಾಥಮಿಕ ರೂಪುರೇಷೆಗಳ ನಿರ್ಮಾಣಕ್ಕೂ ಸಾವಿರಾರು ವರ್ಷಗಳನ್ನೆ ತೆಗೆದುಕೊಳ್ಳುತ್ತದೆ ಎನ್ನಬಹುದು. ಇಲ್ಲಿ ಸಾಮ್ರಾಜ್ಯವು ಒಂದು ಸುವ್ಯವಸ್ಥಿತ ಆಳ್ವಿಕೆಯ ವ್ಯವಸ್ಥೆಯಾಗಿರುತ್ತದೆ. ಅಷ್ಟೇ ಅಲ್ಲದೆ ಅದು ಒಂದು ನಿರ್ದಿಷ್ಠ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನರನ್ನು ಆಳುವ ಸೌರ್ವಭೌಮತ್ವದ ಶಕ್ತಿಯಾಗಿರುತ್ತದೆ. ಈ ಆಳ್ವಿಕೆಯನ್ನು ಒಂದು ಆಡಳಿತ ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ. ಈ ರೀತಿಯಲ್ಲಿ ರಾಜ್ಯ ಅಥವಾ ಸಾಮ್ರಾಜ್ಯ ಎಂಬುವುದು ಒಂದು ಸಂಕೀರ್ಣ ಅಧಿಕಾರ ವ್ಯವಸ್ಥೆಯಾಗಿರುತ್ತದೆ.

ಕ್ರಿ.ಪೂ. ಆರು ಅಥವಾ ಐದನೆಯ ಶತಮಾನದಲ್ಲಿ ಇಂತಹ ವ್ಯವಸ್ಥೆಗಳು ಪ್ರಾಚೀನ ಕರ್ನಾಟಕದಲ್ಲಿ ಬೆಳೆದುಬರಲು ಪ್ರಾರಂಭವಾದವೆಂದು ಹೇಳಬಹುದು. ಆದರೆ ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ರಾಜಪ್ರಭುತ್ವದ ಸಾಮ್ರಾಜ್ಯಗಳು ನಿರ್ಮಾಣವಾಗಿರುವುದು ಇತಿಹಾಸದಿಂದಲೇ ತಿಳಿದುಬರುತ್ತದೆ. ಇಂದಿಗೂ ನಾವು ಕನ್ನಡದ ಪ್ರಥಮ ಸಾಹಿತ್ಯ ಕೃತಿ ಎಂದು ಪರಿಗಣಿಸಿರುವಂತಹ ಕವಿರಾಜಮಾರ್ಗದ ಇಂತಹ ರಾಜ್ಯದ ಆಳ್ವಿಕೆಯನ್ನು ಗಳಿಸುವ ಹಾಗೂ ನಡೆಸುವ ಮಾರ್ಗಗಳನ್ನು ಬೋಧಿಸುತ್ತದೆ. ಈ ರೀತಿಯಾಗಿ ಕರ್ನಾಟಕದ ಇತಿಹಾಸವು ಈ ಕಾಲಗಳ ನಂತರ ಕೇವಲ ರಾಜಮನೆತನಗಳು ಇತಿಹಾಸವಾಗಿ ಮಾರ್ಪಟ್ಟಿದೆ ಎನ್ನಬಹುದು. ರಾಷ್ಟ್ರೀಯ ಯುಗದಲ್ಲಿ ಹಾಗೂ ಅದಕ್ಕೂ ಸ್ವಲ್ಪ ಪೂರ್ವದ ವಸಾಹತುಶಾಹಿ ಇತಿಹಾಸದ ಆಚಾರ ವಿಚಾರದಲ್ಲಿ ರಾಜಮನೆತನಗಳ ರಾಜಕೀಯ ಇತಿಹಾಸಕ್ಕೆ ಹೆಚ್ಚಿನ ಒತ್ತು ಬಿದ್ದಿದೆ. ಈ ರೀತಿಯ ಇತಿಹಾಸವು ಶಾತವಾಹನರು, ರಾಷ್ಟ್ರಕೂಟರು, ಚಾಳುಕ್ಯರು, ವಿಜಯನಗರದ ಅರಸರಿಂದ ಕೊನೆಗೆ ಮೈಸೂರು ಒಡೆಯರವರೆವಿಗೂ ಪುರಾಣಗಳು, ಶಾಸನಗಳು, ಜಾನಪದ ಕಥೆಗಳು ಅನೇಕ ರಾಜವಂಶಗಳನ್ನು ಪ್ರಾಚೀನ ಕರ್ನಾಟಕದ ಇತಿಹಾಸದ ಕೇಂದ್ರದಲ್ಲಿಟ್ಟು ನೋಡಿರುವುದು ಕಂಡುಬರುತ್ತದೆ. ಈ ಎಲ್ಲಾ ಆಧಾರಗಳು ಪ್ರಕಾರ ಒಂದು ಸಾಮ್ರಾಜ್ಯವಾಗಲಿ ಅಥವಾ ಒಂದು ರಾಜ್ಯವಾಗಲಿ ಸ್ಥಾಪನೆಯಾಗಬೇಕಾದರೆ ಒಂದು ರಾಜವಂಶದ ನಿರ್ಣಾಮದೊಂದಿಗೆ ಆ ರಾಜ್ಯವೂ ಅಥವಾ ಸಾಮ್ರಾಜ್ಯವೂ ನಾಶವಾಗುತ್ತದೆ ಎಂದು ಸೂಚಿಸುತ್ತದೆ. ಈ ದೃಷ್ಟಿಯಿಂದ ನಮ್ಮ ನಾಡಿನ ಚರಿತ್ರೆಯನ್ನು ಅದರಲ್ಲಿಯೂ ಸಂಸ್ಕೃತಿ ಚರಿತ್ರೆಯನ್ನು ಬರೆಯುವಾಗ ಪೂರ್ವದಲ್ಲಿನ ಪುರಾಣಗಳ ವಂಶಾನುಚರಿತದ ಮೊರೆ ಹೊಗಲೇಬೇಕಾಗುತ್ತದೆ. ನಮ್ಮ ಇಂದಿನ ಸಂಸ್ಕೃತಿಗೆ ಹೊಂದಿಕೊಂಡಂತೆ ನಮ್ಮ ನಾಡಿನ ಅದರಲ್ಲಿಯೂ ಸಾಮ್ರಾಜ್ಯಗಳ ಅರಸರ ಮೂಲದ ಬಗ್ಗೆ ಬರೆಯುವಾಗ ಸೂರ್ಯ ಚಂದ್ರ ಮುಂತಾದ ದೇವತೆಗಳಿಂದ ಪ್ರಾರಂಭಿಸಿ, ಮಹಾಕಾವ್ಯಗಳ ಪುರಾಣ ಪುರುಷರೆ ವಂಶಗಳಿಂದ ಮುಂದುವರಿದು ಮನಬಂದಂತೇ ವೈಭವೀಕೃತವಾಗಿ ಚಿತ್ರಿಸಿರುವುದನ್ನು ನಾವು ಓದಿದ್ದೇವೆ. ಈ ವೈಭವೀಕರಣದ ಮುಖ್ಯ ಉದ್ದೇಶವೆಂದರೆ ರಾಜವಂಶಾವಳಿಗಳ ಆಳ್ವಿಕೆ ಅನಾದಿ ಹಾಗೂ ಸೃಷ್ಠಿಯ ನಿಯಮ ಎಂಬಂತೇ ತೋರಿಸುವುದಾಗಿರುತ್ತದೆ. ಇತ್ತೀಚಿನ ರಾಷ್ಟ್ರೀಯವಾದಿ ಇತಿಹಾಸಕಾರರು ಈ ಪುರಾಣ ಪುರುಷರನ್ನೇ ಇತಿಹಾಸದ ಕಾಲಾನುಕ್ರಮಕ್ಕೆ ಅಳವಡಿಸಿ ರಾಜಕೀಯ ಇತಿಹಾಸದ ಜೊತೆಗೆ ಸಾಂಸ್ಕೃತಿಕ ಇತಿಹಾಸವನ್ನು ಬರೆಯಲು ಪ್ರಾರಂಭಿಸಿದರೆನ್ನಬಹುದು. ಇಷ್ಟೆಲ್ಲ ದೊಡ್ಡ ಪ್ರಯತ್ನಗಳು ನಡೆಯುತ್ತಿದ್ದರೂ ಇಂದು ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸ ಇಂದು ರೀತಿಯಲ್ಲಿ ದೊಡ್ಡ ಕಗ್ಗಂಟಾಗಿಯೇ ಉಳಿದಿದ್ದೆನ್ನಬಹುದು.

ಮೇಲಿನ ಕಗ್ಗಂಟಿಗೆ ಪ್ರಮುಖ ಕಾರಣವೆಂದರೆ ನಮ್ಮ ನಾಡಿನ ರಾಜಕೀಯ ಚರಿತ್ರೆಯ ರಾಜ್ಯ ಅಥವಾ ಸಾಮ್ರಾಜ್ಯ ಕುರಿತು ಸೃಷ್ಟಿಸಿದಂತಹ ಕೆಲವು ಮಿತವಾದಂತಹ ಕಲ್ಪನೆಗಳೆನ್ನಬಹುದು. ಏಕೆಂದರೆ ಸಾಮ್ರಾಜ್ಯವನ್ನು ಅವರು ಒಂದು ಸಾಮಾಜಿಕ ಪ್ರಕ್ರಿಯೆಯ ಸಾವಯವ ಅಂಗವನ್ನಾಗಿ ನೋಡದೆ ಇದ್ದದಾಗಿದೆ. ಇಲ್ಲ ಸಾಮ್ರಾಜ್ಯ ಅಥವಾ ರಾಜ್ಯವನ್ನು ರಾಜಮನೆತನದ ಒಂದು ಖಾಸಗಿ ಚಟುವಟಿಕೆ ಎಂಬಂತೆ ನೋಡಲಾಗಿರುವುದೇ ದೊಡ್ಡ ಅಪರಾಧವಾಗಿ ಪರಿಣಮಿಸಿದೆ. ರಾಜಕೀಯ ಎಂಬುದನ್ನು ಕೇವಲ ಸೈನ್ಯ, ಯುದ್ಧ, ರಾಜವಂಶಗಳ ಸಂಬಂಧ, ರಾಣಿಯರ ಜೀವನ, ಸಾಮ್ರಾಜ್ಯದ ರಾಜಧಾನಿಯ ವೈಭವದ ವರ್ಣನೆ, ಕೆಲವು ಅಂತರಿಕ ಹಾಗೂ ಬಾಹ್ಯ ವಿದ್ವಾಂಸರಿಗೆ ಆಶ್ರಯ, ಇವುಗಳನ್ನೆ ಮೇಲಿಂದ ಮೇಲೆ ವೈಭವೀಕರಿಸಿರುವುದು ಕಂಡುಬರುತ್ತದೆ. ಅದ್ದರಿಂದ ಇಲ್ಲಿ ನಾಡಿನ ಜನರ (ಸಾಮಾನ್ಯ ಜನರ) ಸಾಮಾಜಿಕ ಜೀವನ, ಅವರ ಅಧಿಕಾರ ಹಂಚಿಕೆಯ ಹಾಗೂ ಅವರ ಗಳಿಕೆಯ ವ್ಯವಸ್ಥೆ ಎಂಬುವುದು ಸಂಪೂರ್ಣವಾಗಿ ಗೌಣವಾಗಿರುತ್ತದೆ. ಇಂಥಹ ಸಂದರ್ಭದಲ್ಲಿಯೂ ಇತಿಹಾಸಕಾರನಿಗೆ ಈ ರಾಜವಂಶಗಳು ಹೇಗೆ ಉದ್ಭವವಾದವು. ರಾಜವಂಶಗಳ ಹೊರತಾಗಿಯೂ ರಾಜ್ಯ ಅಥವಾ ಸಾಮ್ರಾಜ್ಯಗಳು ಅಸ್ತಿತ್ವದಲ್ಲಿರಬಹುದೇ ಎಂಬುವಂತಹ ಪ್ರಶ್ನೆಗಳು ಒಮ್ಮೆಗೆ ಮೂಡಲಾರಂಭಿಸುತ್ತವೆ.

ಸಾಮ್ರಾಜ್ಯವೆಂಬುವುದು ಭಾರತೀಯ ಪರಿಭಾಷೆಯಲ್ಲಿ “ಸಾಮ್ರಾಟ” ಎಂಬ ಶಬ್ದದಿಂದ ಹುಟ್ಟಿದ್ದೆನ್ನಬಹುದು. ಆದರೆ ಸಾಮ್ರಾಜ್ಯವನ್ನು ‘ಡೈನೇಸ್ಟಿ’ ಎಂಬರ್ಥದಲ್ಲಿಯೇ ಗ್ರಹಿಸಿದರೆ ಇದೊಂದು ಪ್ರಭುತ್ವದ ವ್ಯವಸ್ಥೆಯಾಗಿ ಅರ್ಥೈಸುತ್ತದೆ. ಪ್ರಭುತ್ವವೆಂಬುದು ‘ಸಾಮ್ರಾಟ’ನಲ್ಲೇ ಇರಬೇಕೆಂದೇನೂ ಇಲ್ಲ ಎಂಬುವುದು ತಪ್ಪಾಗುತ್ತದೆ. ಏಕೆಂದರೆ ಈ ರೀತಿಯ ರಚನೆಯು ಮನುಷ್ಯ ಸಮಾಜದಲ್ಲಿ ಒಂದು ಪ್ರಮುಖ ಸಂಕೀರ್ಣವಾದ ಬೆಳವಣಿಗೆಯಾಗಿದೆ. ಅಂದರೆ ಇಲ್ಲಿ ಸಾಮ್ರಾಜ್ಯದ ವ್ಯವಸ್ಥೆಯು ಹುಟ್ಟಬೇಕಾದರೆ ಮೊದಲು ಅದಕ್ಕೆ ತನ್ನದೆ ಆದಂತಹ ಸಾಮಾಜಿಕ ಬೆಳವಣಿಗೆ ತಡೆದಿರುತ್ತದೆ. ಇದರ ಜೊತೆಗೆ ಸಮಾಜದಲ್ಲಿನ ಪ್ರತಿಯೊಂದು ಉತ್ಪಾದನಾ ಸಂಬಂಧಗಳು ತಂತ್ರಜ್ಞಾನದ ಪೂರಕವಾಗಿ ಬೆಳೆದಿರುತ್ತವೆ. ಸಾಮ್ರಾಜ್ಯದ ದೊರೆಗಳಲ್ಲಿ ಹಾಗೂ ಅವರ ಸಾಮಂತ ಪಾಳೆಗಾರರುಗಳಲ್ಲಿ ಆಳುವ ವರ್ಗಗಳಲ್ಲಿ ಅಧಿಕಾರ ಕೇಂದ್ರಕೃತವಾದಂತೆಲ್ಲಾ ಅವರವರ ಹಿತಾಸಕ್ತಿಗನುಗುಣವಾಗಿ ಕಾಯಿದೆ. ಕಾನೂನು, ತಾತ್ವಿಕ ತಿಳುವಳಿಕೆಗಳು, ಸ್ಥಾನಮಾನ, ಮೇಲುಕೀಳು ಮುಂತಾದವುಗಳ ನಿರೂಪಣೆಯಾಗುತ್ತದೆ. ಇಲ್ಲಿ ರಾಜ್ಯದ ಬೆಳವಣಿಗೆಯು ಆ ಸಾಮ್ರಾಜ್ಯದ ಸಂಸ್ಕೃತಿಯ ಬೆಳವಣಿಗೆಯ ಜೊತೆಜೊತೆಗೆ ಮುನ್ನಡೆಯಬೇಕಾಗಿರುತ್ತದೆ. ಹಾಗಾಗಿ ಸಾಮ್ರಾಜ್ಯದ ಉಗಮವು ಒಂದು ಸಮಾಜದ ಸಮಗ್ರವಾದಂತಹ ಪರಿವರ್ತನೆಯನ್ನು ಹುಟ್ಟು ಹಾಕುತ್ತದೆ. ಸಾಮ್ರಾಜ್ಯದ ಜನರನ್ನೆಲ್ಲ ‘ಪ್ರಜಾಸಮೂಹವನ್ನಾಗಿ’ ಪರಿವರ್ತಿಸುವುದಾದರೆ ಅದು ನಾಡಿನ ಸಂಸ್ಕೃತಿಯನ್ನು ಬೆಳೆಸಿಕೊಂಡಂತೆ ಏಕೆಂದರೆ ಪ್ರಾಚೀನ ‘ರಾಜ’ಕೇಂದ್ರಿತ ರಾಜ್ಯಗಳು ರಾಜನ ಅತಿಯಾದ ಮಾನವೀಯತೆ, ದೈವತ್ವಗಳನ್ನು ರಾಜವಂಶದವರ ದಿನನಿತ್ಯದ ಕಾರ್ಯವೈಖರಿಗಳನ್ನು ಹಾಗೂ ಅವುಗಳ ಅನಿವಾರ್ಯತೆಯನ್ನು ಕುರಿತಂತಹ ವಿಷಯವನ್ನು ಪ್ರತಿಪಾದಿಸುತ್ತದೆ ಎಂದರೆ ಸರಿಯಾಗಬಹುದೇನೋ.

ಸಾಮಾಜಿಕ ಬದಲಾಣೆಗಳನ್ನು ಸರಿಸಿಯೇ ವೈದಿಕರಲ್ಲಿ ವರ್ಣಕಲ್ಪನೆ ರೂಪು ತಳೆಯಿತೆಂದು ಹೇಳಿರುವುದು ಸತ್ಯ. ಏಕೆಂದರೆ ತಮಗೆ ಋಗ್ವೇದದ ೧೦ ನೇ ಮಂಡಲದಲ್ಲಿನ ಪುರುಷಸೂಕ್ತವು ನಾಲ್ಕು ವರ್ಣಗಳ ಒಂದು ಸಮಾಜದ ಕಲ್ಪನೆಯನ್ನು ನೀಡುತ್ತದೆ. ಈ ೧೦ ನೇ ಮಂಡಲವನ್ನು ಕ್ರಿ.ಪೂ. ೮೦೦ ರ ವೇಳೆಗೆ ಆರ್ಯರಲ್ಲಿ ನಾಲ್ಕು ವರ್ಣನೆಗಳ ಕಲ್ಪನೆ ಬೆಳೆಯಲಾರಂಭಿಸಿತ್ತು. ಇದೇ ಕಾಲ ಹಾಗೂ ಇದರ ನಂತರದ ಕಾಲದ ವೈದಿಕ ಸಾಹಿತ್ಯದಲ್ಲಿ ವರ್ಣಕಲ್ಪನೆ ಮತ್ತೆ ಮತ್ತೆ ಕಂಡುಬರುತ್ತದೆ.

ಭಾರತದ ಪ್ರಾಚೀನ ಇತಿಹಾಸದಿಂದಲೂ ಬ್ರಾಹ್ಮಣ, ಕ್ಷತ್ರಿಯ ಹಾಗೂ ವೈಶ್ಯ ಈ ಮೂರು ವರ್ನಗಳು ದ್ವಿಜ ವರ್ಣಗಳೆನಿಸಿಕೊಂಡಿವೆ. ಪ್ರಮುಖವೆಂದು ಹೇಳಿಕೊಂಡಿದ್ದಂತಹ ಈ ಮೂರು ವರ್ಣಗಳೂ ಆರ್ಯರ ಬ್ರಾಹ್ಮಣ, ರಾಜನ್ಯ ಹಾಗೂ ವಿಶಃ ಋಗ್ವೇದದ ಕಾಲದ ಪಂಗಡಗಳಿಂದಲೇ ಉದಿಸಿದ್ದು ಎಂದು ಹೇಳುವುದು ಸತ್ಯಸಂಗತಿಯೇ ಏಕೆಂದರೆ ಅಂದಿನ ಕಾಲದಲ್ಲಿ ಇವರಿಗೆಲ್ಲ ಯಜ್ಞ ಸಂಸ್ಕೃತಿ ಎಂಬುವುದು ಸರ್ವೇಸಾಮಾನ್ಯವಾಗಿದ್ದಿತು. ಹಾಗೆಯೇ ಉಪನಯನ ಸಂಸ್ಕಾರ ಹಾಗೂ ಮಂತ್ರೋಚ್ಛಾರಣೆಗಳು ಆಯಾ ವರ್ಗಕ್ಕೆ ಬೇರೆ ಬೇರೆ ಪದ್ಧತಿಯಲ್ಲಿದ್ದವು. ಉಪನಯನ ಸಂಸ್ಕಾರವನ್ನು ಇವರು ಎರಡನೆಯ ಹುಟ್ಟು ಎಂದು ಪರಿಗಣಿಸಿದ್ದರಿಂದ ಇವರು “ದ್ವಿಜ” ಎಂದು ಕರೆದುಕೊಳ್ಳುತ್ತಿದ್ದರೆಂದು ತಿಳಿದುಬರುತ್ತದೆ. ಆದರೆ ವರ್ಣವ್ಯವಸ್ಥೆಯಲ್ಲಿ ವೈಶ್ಯರು ಉತ್ಪಾದಕರಾಗಿ ರಾಜ ಹಾಗೂ ಬ್ರಾಹ್ಮಣರಿಗಿಂತಲೂ ಕೆಳಹಂತದಲ್ಲಿ ಬರುತ್ತಿದ್ದರು. ಈ ವರ್ಣ ವ್ಯವಸ್ಥೆಯಲ್ಲಿ ನಾಲ್ಕನೆಯ ವರ್ಣವೆನ್ನಿಸಿಕೊಂಡಿರುವ “ಶೂದ್ರ” ವರ್ಣವು ಮಾತ್ರ ದ್ವಿಜ ವರ್ಣವಾಗಿರಲಿಲ್ಲ. ಅಂದರೆ ಇದು ಆರ್ಯ ಮೂಲದ್ದಾಗಿರಲಿಲ್ಲವೆಂಬ ಅರ್ಥ ಸ್ಪಷ್ಟವಾಗಿ ತಿಳಿಯುತ್ತದೆ. ಆರ್ಯರ ವೈದಿಕ ವಿಧಿ. ವಿಧಾನಗಳಾವುವು ಸಹ ಈ ಜನರ ಸಂಸ್ಕೃತಿಯಾಗಿರಲಿಲ್ಲ. ಇಂತಹ ಸಮಯದಲ್ಲಿ ಶೂದ್ರರು ಆರ್ಯರ ವರ್ಣಕಲ್ಪನೆಯಲ್ಲಿ ಹೇಗೆ ಅಂತರ್ಗತರಾದರು? ಎಂಬುವ ಪ್ರಶ್ನೆ ಸಹಜವಾಗಿಯೇ ಪ್ರತಿಯೊಬ್ಬರಲ್ಲಿಯೂ ಮೂಡುತ್ತದೆ.

ಕರ್ನಾಟಕದ ಸಂಸ್ಕೃತಿಯಲ್ಲಿಯೇ ಪ್ರಮುಖವಾಗಿ ‘ಶೂದ್ರ’ ಎನ್ನುವ ಶಬ್ದ ಮೂಲತಃ ಒಂದು ಬುಡಕಟ್ಟಿನ ಹೆಸರಾಗಿತ್ತು ಎಂದು ಕಂಡುಬರುತ್ತದೆ. ಮಧ್ಯಕಾಲದಲ್ಲಿ ವಿಜಯನಗರದ ಅರಸರು ಪ್ರಾಬಲ್ಯಕ್ಕೆ ಬಂದಾಗ ಇವರೂ ವೈದಿಕ ಬುಡಕಟ್ಟುಗಳಂತೇ ಪಶುಸಂಗೋಪನೆ ಮಾಡಿಕೊಂಡಿದ್ದಂತೆ ಕಂಡುಬರುತ್ತದೆ. ಬಹುಶಃ ನಾಲ್ಕು ವರ್ಣಗಳ ಕಲ್ಪನೆಯನ್ನು ಹುಟ್ಟುಹಾಕಿದ ಬುಡಕಟ್ಟುಗಳಿಗೆ ಶೂದ್ರರೇ ದಾಸ – ದಾಸಿಯರಾಗಿದ್ದರಿಂದ ‘ಶೂದ್ರ’ ಶಬ್ದವನ್ನು ದಾಸ್ಯಕ್ಕೆ ಸಮೀಕರಿಸಿರಬಹುದೆಂದು ತೋರಿಸುತ್ತದೆ. ಪ್ರಾಚೀನ ಚರಿತ್ರೆಯನ್ನು ಗಮನಿಸಿದರೆ ಉತ್ತರ ವೈದಿಕ ಸಮಾಜದ ಪ್ರಾರಂಭದಲ್ಲಿ ಬ್ರಾಹ್ಮಣರಾದಿಯಾಗಿ ಆರ್ಯವರ್ಣದವರಿಗೆಲ್ಲರಿಗೂ ಈ ಶೂದ್ರರೇ ದಾಸರಾಗಿದ್ದರೆಂದು ತೋರುತ್ತದೆ. ಅಂದರೆ ಸಾಮ್ರಾಜ್ಯದಲ್ಲಿ ಅವರು ಅತ್ಯಂತ ಕಷ್ಟದ. ಶ್ರಮದ ಹಾಗೂ ಅಸಹ್ಯ ತರುವಂತಹ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಇದಕ್ಕಾಗಿಯೇ ಶೂದ್ರರನ್ನು ಪುರುಷನ ಪಾದದಿಂದ ಹುಟ್ಟಿಬಂದರು. ಹಾಗೂ ಅವರ ಕರ್ತವ್ಯವೆಂದರೆ ಮೇಲಿನ ಮೂರು ವರ್ಣಗಳ ಸೇವೆ ಮಾಡಲು ಜನ್ಮವೆತ್ತಿದ ಜನರೆಂದು ನಿರೂಪಿಸಲಾಗಿದೆ. ಆರ್ಯ ಸೇವಕ ವರ್ಗವಾದ್ದರಿಂದ ಇವರೂ ಸಹ ಆರ್ಯರ (ಸಮಾಜದ) ಒಂದು ಭಾಗವಾಗಿದ್ದರಿಂದ ಹೇಳಲಾಗಿದೆ. ಆದರೆ ಶೂದ್ರರು ಎಲ್ಲ ವರ್ಗಗಳಿಗಿಂತಲೂ ಸ್ಥಾನಮಾನದಲ್ಲಿ ಕೀಳಾಗಿದ್ದರು. ಆರ್ಯರ ವರ್ಣಕಲ್ಪನೆಯು ಭೌಗೋಳಿಕವಾಗಿ ವಿಸ್ತರಿಸಿದಂತೆಲ್ಲ. ‘ಶೂದ್ರ’ ವರ್ಣದ ಅರ್ಥ ಹಾಗೂ ವ್ಯಾಪ್ತಿಯು ಸಂಪೂರ್ಣವಾಗಿ ಬದಲಾವಣೆ ಕಾಣುತ್ತಿರುವುದನ್ನು ನೋಡಬಹುದಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ವ್ಯವಸಾಯವನ್ನಳವಡಿಸಿಕೊಂಡ ಉನ್ನತ ವರ್ಗದ ಜನರು ಶ್ರಮಜೀವಿಗಳನ್ನು ಹೆಚ್ಚು ಹೆಚ್ಚಾಗಿ ಅಲಂಬಿಸತೊಡಗಿದರು. ವಿಭಿನ್ನ ಅವೈದಿಕ ಹಿನ್ನಲೆಯ ಜನರನ್ನು ಹೊಸದಾಗಿ ಉದಯಿಸಿದ ರಾಜ್ಯವು ಶೂದ್ರರನ್ನು ಶ್ರಮಿಕರನ್ನಾಗಿ ಅಳವಡಿಸಿಕೊಂಡು ಇವರಿಗೆಲ್ಲ ‘ಶೂದ್ರ’ರೆಂಬ ಪರಿಭಾಷೆಯು ಬೆಳೆದುಕೊಂಡು ಬಂದಿತು.

ವಿಜಯನಗರ ಕಾಲದಲ್ಲಿ ಈ ನಾಲ್ಕು ವರ್ಣದ ಕಲ್ಪನೆ ವೈದಿಕ ಪಂಗಡಗಳಿಗೆ ಸೀಮಿತವಾದ ಒಂದು ಲೋಕದೃಷ್ಟಿಯಾಗಿತ್ತು. ಏಕೆಂದರೆ ಇದೊಂದು ವೈದಿಕ ಕೇಂದ್ರಿತ ಸಾಮಾಜಿಕ ನಿರೂಪಣೆ. ವೈದಿಕ ಸಮಾಜದಲ್ಲಿ ಈ ಕಾಲದಲ್ಲಿ ಕಂಡುಬರುತ್ತವೆ. ಉದಾ: ಚಂಡಾಳರು, ಹೊಲೆಯರು, ಮಾದಿಗರು, ನಿಷಾದರು, ಪುಶಿಂದರು, ದಸ್ಯು, ಕೋಚ್ಚ ಕೊರಮ ಮುಂತಾದವರು, ಮೇಲ್ಕಂಡವರೆಲ್ಲರನ್ನು ವರ್ಣವ್ಯವಸ್ಥೆಯ ಒಂದು ಭಾಗವನ್ನಾಗಿ ನೋಡಲಾಗುತ್ತಿತ್ತೆಂದು ಹೇಳಬಹುದು. ಮಧ್ಯಯುಗದ ಚರಿತ್ರೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜಾರಿಯಲ್ಲಿದ್ದಂತಹ ವ್ಯವಸ್ಥೆಯೇ “ಸಂಕೀರ್ಣ ಜಾತಿ ವ್ಯವಸ್ಥೆ: ಈ ಕಾಲದಲ್ಲಿದ್ದಂತಹ ವರ್ನ ಪ್ರತಿಪಾದಕರು ತಮ್ಮ ತಿಳುವಳಿಕೆಗೆ ಬಂದಂತಹ ಹೊಸ ಸಮಾಜವನ್ನು ಸಂಕೀರ್ಣ ಜಾತಿಗಳೆಂದು ತಿಳಿಸಿ ಅವು ಯಾವ ಸನ್ನಿವೇಶದಲ್ಲಿ ಉದಯಿಸಿದವೆಂಬುದನ್ನು ವಿವರಿಸಿ ವರ್ಣವ್ಯವಸ್ಥೆಗೆ ಅವನ್ನು ಜೋಡಿಸುತ್ತಿದ್ದರು ಎಂದು ತಿಳಿಸುವ ಅನೇಕ ಆಧಾರಗಳು ನಮಗೆ ಲಭ್ಯವಾಗುತ್ತವೆ. ಈ ರೀತಿಯ ಸಂಕೀರ್ಣ ಜಾತಿಯ ಕಲ್ಪನೆಯನ್ನು ಬೆಳೆಸಲು ಮತ್ತೊಂದು ಮುಖ್ಯ ಕಾರಣವೆಂದರೆ ಅಂದಿನ ಕಾಲದಲ್ಲಿ ಹೆಚ್ಚುತ್ತಿದ್ದಂತಹ ವೃತ್ತಿಗಳು, ವಿಜಯನಗರ ಕಾಲದಲ್ಲಿ ವಿಭಿನ್ನ ಲೋಹಗಳ ಕೆಲಸಗಾರರು, ಬುಟ್ಟಿ ಹೆಣೆಯುವವರು, ನೇಯ್ಗೆಯವರು, ಬಣ್ಣ ಹಾಕುವವರು, ಬಡಗಿಗಳು, ಕುಂಬಾರರು, ಚರ್ಮಕಾರರು, ಮಣಿಕಾರರು, ನರ್ತಕರು, ಕಣಿ ಹೇಳುವವರು, ಸೋತರು, ಡೊಂಬರು ಮುಂತಾದ ಅನೇಕ ವೃತ್ತಿಪರ ಪಂಗಡಗಳನ್ನು ಅಂದೇ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿತ್ತು.

ಈ ಮೇಲಿನ ಜಾತಿವ್ಯವಸ್ಥೆ ಹಾಗೂ ಮೇಲುಕೀಳಿ ಎಂಬ ಭೇದಭಾವವನ್ನು ಅಂದಿನ ಕಾಲದಲ್ಲಿ ಯಾವ ರೀತಿಯಲ್ಲಿ ಅನುಸರಿಸಲಾಗುತ್ತಿತ್ತೆಂದು ಅಂದಿನ ದಾಸಸಾಹಿತ್ಯ ಹಾಗೂ ಸಾಹಿತ್ಯ ಕೃತಿಗಳಿಂದ ತಿಳಿಯಬಹುದಾಗಿದೆ. ಆಧಾರವಿಲ್ಲದೆ ಇತಿಹಾಸವಿಲ್ಲವೆಂಬ ವಿಷಯ ಸತ್ಯ. ಇದು ಅಂದಿನ ಕಾಲದ ಜನರಿಗೂ ತಿಳಿದಿತ್ತೆಂದು ಹೇಳಬಹುದು. ವಿಜಯನಗರದ ಹಾಗೂ ಮೈಸೂರಿನ ಇತಿಹಾಸವನ್ನು ಪ್ರಮುಖವಾಗಿ ಐತಿಹ್ಯ, ಗಾಥೆ, ಜನಪದ, ಶಾಸನ ಪ್ರಶಸ್ತಿಪತ್ರ ನಾಣ್ಯ, ಸ್ಮಾರಕ ಮುಂತಾದ ಆಕಾರಗಳ ಸಹಾಯದಿಂದ ರಚಿಸಬಹುದಾಗಿದೆ. ಕರ್ನಾಟಕದ ಪ್ರಾಚೀನ ಕವಿಗಳಾದ ಪಂಪ, ರನ್ನ, ಜನ್ನ, ರಾಘವಾಂಕ, ಹರಿಹರ ಹಾಗೂ ದಾಸರುಗಳು ಇಂದಿನ ಲೇಖಕರಿಗೆ ಪರಾಮರ್ಶಿತರಾಗಿದ್ದಾರೆ. ಇದರಿಂದಾಗಿ ಅಂದಿನ ಸಾಹಿತ್ಯ ಕೃತಿಗಳು ಪಾಂಡಿತ್ಯಪೂರ್ಣ ಮಾತ್ರವಲ್ಲದೆ ವಿಶ್ವಾಸನೀಯವೂ ಹೌದು. ಕಥೆ – ಪುರಾಣ – ಮೂಡನಂಬಿಕೆಗಳು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆಂದು ತೀರ್ಮಾನಿಸಿ ಅವುಗಳನ್ನು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ ಎನ್ನಬಹುದು. ಆದರೆ ಚಾರಿತ್ರಿಕ ವಿಷಯಗಳನ್ನು ವಿಮರ್ಶಾತ್ಮಕವಾಗಿ (ಜಾತಿವ್ಯವಸ್ಥೆಯ ವಿರುದ್ಧ) ನೋಡಿದವರಲ್ಲಿ ದಾಸರುಗಳನ್ನು ಮೊದಲಿಗರೆನ್ನಬಹುದು. ವಸ್ತುಸ್ಥಿತಿ ಹೀಗಿರುವಾಗ “ಕರ್ನಾಟಕದವರಿಗೆ ಅದರಲ್ಲಿಯೂ ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆ ಇರಲಿಲ್ಲ”ವೆಂದು ಹೇಳಿರುವಂತಹ ಆಲ್ಬೋರೊನಿಯು ಇಲ್ಲಿ ಚರ್ಚಾಸ್ಪದ ವ್ಯಕ್ತಿಯಾಗುತ್ತಾನೆ.

ಕವಿಗಳು ಸಂಗೀತಗಾರರು ಆಗಿ ಈ ಮೂಲಕ ಇತಿಹಾಸಕಾರರೂ ಆಗಿರುವಂತಹ ದಾಸರನ್ನು ಹಾಗೂ ಅವರ ಸಾಮಾಜಿಕ ಕಾಳಜಿಯನ್ನು ಮೆಚ್ಚುವಂತಾದ್ದೆ. ವಿಜಯನಗರ ಸಾಮ್ರಾಜ್ಯವು ಭವ್ಯ – ವೈಭವದ ನಾಡು, ಚಿನ್ನವನ್ನು ಬೀದಿಯಲ್ಲಿಯೇ ಸೇರಿನಿಂದ ಅಳೆದು ಮಾರುತ್ತಿದ್ದ ನಾಡು. ಎಲ್ಲಾ ಜನರು ಸುಖಶಾಂತಿಯಿಂದ ಸುಖಜೀವನ ನಡೆಸುತ್ತಿದ್ದು, ಇದೊಂದು ರಾಮ ರಾಜ್ಯವಾಗಿತ್ತೆಂದು ನಾವು ಇದುವರೆಗೆ ಏನೆಲ್ಲ ಉತ್ಪ್ರೇಕ್ಷೆಯಿಂದ ಅಭಿಮಾನದಿಂದ ಹೇಳಿಕೊಂಡು ಬಂದಿದ್ದೇವೆ ಎಂದರೆ ಈ ಹೇಳಿಕೆಗಳಿಂದ ನಮ್ಮ ಅಭಿಮಾನಕ್ಕೆ ಸ್ವಲ್ಪವಾದರೂ ಧಕ್ಕೆ ಉಂಟಾಗಬಹುದೆಂದು ಸ್ವಲ್ಪವೂ ಚಿಂತಿಸಿದಂತೆಯೇ ಕಂಡುಬರುವುದಿಲ್ಲ, ಇದು ಸತ್ಯವೂ ಕೂಡ, ಏಕೆಂದರೆ ಅಂದಿನ ಕಾಲದಲ್ಲಿ ಸುಮಾರು ಶೇ. ೯೦ ಜನ ಬಡವರು ಒಪ್ಪೊತ್ತಿನ ಗಂಜಿಗಾಗಿ ಪೇಚಾಡುತ್ತಿದ್ದುದ್ದು. ಜೀತದಾಳುಗಳಾಗಿ ಹೀನಾಯ ಸ್ಥಿತಿಯಲ್ಲಿದ್ದು, ಪ್ರಾಣಿಗಳಿಗಿಂತಲೂ ಕೀಳುಜೀವನ ನಡೆಸುತ್ತಿದ್ದು, ಮೇಲು ಕೀಳೆಂಬ ಭಾವನೆಯಿಂದ ಕೀಳು ಕಾತಿಯವರು ಪಡುತ್ತಿದ್ದ ಕಷ್ಟವನ್ನು ಇತಿಹಾಸದಿಂದ ತಿಳಿದದ್ದೇ ಆದರೆ ಇಲ್ಲಿ ಶ್ರೇಷ್ಠ ರಾಜನಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇತಿಹಾಸಗಾರ ಇದರ ಅರ್ಥವಾದರೂ ಏನೆಂದು ಪ್ರಶ್ನಿಸಿ ಓದುಗರ ತೀರ್ಮಾನಕ್ಕೆ ಬಿಟ್ಟಿದಾನೆಯೇ? ಏಕೆಂದರೆ ಅಂದಿನ ಕಾಲದ ದಾಸರು (ಕನಕ – ಪುರಂದರ) ಹೇಳಿರುವಂತಹ ಕೀರ್ತನೆಯ ಸಾಲುಗಳನ್ನು ಗಮನಿಸಿದರೆ ಅಂದಿನ ಕಾಲದ ಸಾಮಾಜಿಕ ಜೀವನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅದೆಷ್ಟೂ ಶಾಸನಗಳು, ಸಾಹಿತ್ಯ ಕೃತಿಗಳು ಅಂದಿನ ಉಳಿಗಮಾನ್ಯ ಪದ್ಧತಿ, ದೇವದಾಸಿ ಪದ್ಧತಿ, ಸತಿ ಪದ್ಧತಿ, ಜಾತಿ ಪದ್ಧತಿಗಳು ಮುಂತಾದ ಅನಿಷ್ಟ ಆಚರಣೆಗಳ ಬಗ್ಗೆ ಹೆಚ್ಚು ಹೆಚ್ಚಾಗಿ ಭವ್ಯ ವಿಜಯನಗರ ಎಂದು ಹೇಳಿಕೊಂಡಿರುವುದರ ಬುಡದಲ್ಲಿಯೇ ಬೆಂಕಿಯ ಜ್ವಾಲೆಯಾಗಿ ಉರಿಯುತ್ತಿದ್ದಂತಹ ಹಾಗೂ ಉರಿದು ಹೋದಂತಹ ಕ್ಷಣಗಳನ್ನು ಉಲ್ಲೇಖಿಸಿವೆ. ಅಷ್ಟೇ ಅಲ್ಲದೆ ಅಂದಿನ ಕಾಲದ ಗಂಡು ಹೆಣ್ಣುಗಳ ಸಂಬಂಧಗಳು ಅವರ ಒಲವು ನಿಲುವುಗಳು, ಸಾಮ್ರಾಜ್ಯದ ತಿಂಡಿ ತಿನಿಸು ಉಡುಗೆ ತೊಡುಗೆ ಆಚಾರ ವಿಚಾರ ನಡೆ ನುಡಿಗಳು ಸಂದರ್ಭೋಚಿತವಾಗಿ ತಿಳಿ ಹೇಳಲ್ಪಟ್ಟಿವೆ. ಕೇವಲ ಅರಮನೆ ಗುರುಮನೆಗಳನ್ನೇ ಹೊಗಳಿ ವೈಭವೀಕರಿಸುವುದೇ ಇತಿಹಾಸವಲ್ಲ ಎಂಬುವುದಕ್ಕೆ ಈ ದಾಸಪದಗಳೆ ಅಲ್ಲದೆ ಅನೇಕ ಶಾಸನಗಳು ಹಾಗೂ ಲಾವಣಿಗಳು ಇತರ ಸಾಹಿತ್ಯಾಧಾರಗಳೂ ಉತ್ತಮ ಸಾಕ್ಷಿಗಳಾಗಿವೆ.

ವಿಜಯಗರ ಸಾಮ್ರಾಜ್ಯದಲ್ಲಿ ಅಸ್ಪೃಶ್ಯರಲ್ಲಿಯೇ ಅತ್ಯಂತ ಕೆಳವರ್ಗದವರಾದ ಹೊಲೆಯರು ಮತ್ತು ಮಾದಿಗರು ಊರ ಹೊರಗೆ ಒಟ್ಟಾಗಿ ವಾಸಮಾಡುತ್ತಿದ್ದರು. ಆ ಕೇರಿಗಳನ್ನು ಹೊಲಗೇರಿ ಎಂದು ಕರೆಯುತ್ತಿದ್ದರೆಂಬುದನ್ನು ಸಾಹಿತ್ಯಾಧಾರಗಳು, ಶಾಸನಧಾರಗಳು ಹಾಗೂ ಜನರಿಂದ ಜನರಿಗೆ ಬಾಯಿಂದ ಬಾಯಿಗೆ ಬಳುವಳಿಯಾಗಿ ಬಂದಿರುವ ಜಾನಪದ ಸಾಹಿತ್ಯಾಧಾರಗಳಲ್ಲಿ ಲಭ್ಯವಿದೆ. ಹೊಲೆಯ ಮಾದಿಗ ಎಂಬ ಜಾತಿಸೂಚಕವನ್ನು ಸೂಚಿಸುವ ಹೆಸರುಗಳವರೂ ಇದ್ದರು. (ಉದಾ. ಹೊಲೆಯರ ಹುಳ್ಳ ಮಾದಿಗರ ಕಂಪ ಮುಂತಾದವರು.) ಹಾಗೆಯೇ ಹಂಪಿ ಪರಿಸರದಲ್ಲಿರುವ ಮಾತಂಗಿಯನ್ನು ಕವಿ ‘ಮಾದಿಗಿತ್ತಿ’ ಎಂದು ಕರೆದಿರುವುದಕ್ಕೂ ಆಧಾರಗಳಿವೆ. ಅಸ್ಪೃಶ್ಯತೆ ನಿವಾರಣೆಯ ಬಗೆಗೆ ನಮ್ಮ ಸಂವಿಧಾನದಲ್ಲಿಯೇ ಕಾನೂನುಗಳಾಗಿದ್ದರೂ ಇವತ್ತಿಗೂ ಹಳ್ಳಿ ಹಾಗೂ ಗ್ರಾಮಗಳಲ್ಲಿ ಹೊಲಗೇರಿ ಎಂಬುದಿದೆ. ಕೆಲವು (ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ) ಕಡೆ ‘ಹೊಲೇರಿ ಹಟ್ಟಿ’ ಎಂದೂ ಮತ್ತೆ ಕೆಲವು ಕಡೆ ‘ಮಾದಿಗ ಹಟ್ಟಿ’ ಎಂದು ಇಂದಿಗೂ ಕರೆಯುವ ವಾಡಿಕೆ ಇರುವುದು ಕಂಡುಬರುತ್ತದೆ. ಶತಶತಮಾನಗಳಿಂದಲೂ ಅಸ್ಪೃಶ್ಯತೆ ಯಾವ ರೂಪದಲ್ಲಿತ್ತೆಂಬುದಕ್ಕೆ ನಿದರ್ಶನವಾಗಿ ಈ ಕೆಳಗಿನ ಗಾದೆಗಳು ಉದಾಹರಿಸಬಹುದು. ಊರು ಅಂದ ಮೇಲೆ ಹೊಲಗೇರಿ ಇರಲೇ ಬೇಕು’, ‘ಊರು ಹೊಲಗೇರಿ ಒಂದು ಮಾಡಿಬಿಟ್ಟ’ ಈ ರೀತಿಯ ಇನ್ನೂ ಅನೇಕ ಗಾದೆಗಳನ್ನು ಸಾಕ್ಷಿಯಾಗಿ ನೀಡಬಹುದು. ಈ ಮೇಲಿನವೆಲ್ಲವೂ ತಿಳಿಯುವುದು ದೇಶಿಯ ಸಾಹಿತ್ಯಧಾರಗಳಿಂದ ಮಾತ್ರ ಆದರೆ ವಿದೇಶಿ ಪ್ರವಾಸಿಗರ ವರದಿಯಲ್ಲಾಗಲೀ, ಶಾಸನಗಳಲ್ಲಾಗಲೀ ಅಸ್ಪೃಶ್ಯರ ಜೀವನದ ಒಂದು ಸಂಪೂರ್ಣ ಚಿತ್ರ ನಮಗೆ ಸರಿಯಾಗಿ ದೊರಕದಿರುವುದು ದುರಾದೃಷ್ಟಕರ. ಇದಕ್ಕೆ ಕಾರಣ ನೀಡುವುದಾದರೆ ವಿದೇಶಿ ಯಾತ್ರಿಕರು ಹೆಚ್ಚಾಗಿ ರಾಜರ ಆಸ್ಥಾನದಲ್ಲಿಯೇ ಸಕಲ ಸೌಕರ್ಯಗಳಿಂದ ಜೀವಿಸಿ ಅಲ್ಲಿ ಕಂಡು ಕೇಳಿದ ಅನುಭವಿಸಿದ ಅನುಭವವನ್ನು ಮಾತ್ರ ಹೆಚ್ಚಾಗಿ ಬರೆದಿರುವುದು ಕಂಡುಬರುತ್ತದೆ. ಇವರಿಗೆ ಹೊರಗಿನ ಜನರ ಜೀವನದ ಬವಣೆಯನ್ನು ಚಿತ್ರಿಸಲು ಸಾಧ್ಯವಾಗದ ಮಾತಾಗಿತ್ತು.

ಮಧ್ಯಕಾಲಿನ ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುತ್ತಾ ಹೋದಂತೆಲ್ಲಾ ಅಲ್ಲಿನ ಆಡಳಿತದಲ್ಲಿ ಕಂಡುಬರುವ ಪ್ರಮುಖವಾದ ಅಂಶವೆಂದರೆ ನಾಯಕರ ಪದ್ಧತಿ, ನಾಯಕರು ಗ್ರಾಮಗಳಲ್ಲಿ ಪಟ್ಟಣಗಳಲ್ಲಿ ಸೈನಿಕ ದಂಡನಾಯಕನ ಸ್ಥಾನಮಾನ ಮಡೆದವರಾಗಿದ್ದರು. ಈ ನಾಯಕ ಪದ್ಧತಿಯು ಅಂದು ಊಳಿಗಮಾನ್ಯ ಪದ್ಧತಿಯನ್ನು ಹೋಲುತ್ತಿತ್ತೆಂದು ಇತಿಹಾಸಗಾರರು ಅಭಿಪ್ರಾಯ ಪಡುತ್ತಾರೆ. ಅಸ್ಪೃಶ್ಯರ ಮೇಲೆ ದೌರ್ಜನ್ಯ ಹೆಚ್ಚಾಗಿತ್ತೆಂದು ಆಧಾರಗಳು ಸೂಚಿಸುತ್ತವೆ. ಇಂತಹ ಸನ್ನಿವೇಶದಲ್ಲಿಯೇ ವಿಜಯನಗರ ಸಾಮ್ರಾಜ್ಯದಲ್ಲಿ ಕವಿಗಳು, ನೀತಿಶಾಸ್ತ್ರಜ್ಞರುಗಳು, ತತ್ವಜ್ಞಾನಿಗಳು ಸಾಮಾಜಿಕ ದೋಷಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಈ ಹಂತದಲ್ಲಿ ಪ್ರಮುಖರಾದವರೆಂದರೆ ಸರ್ವಜ್ಞ, ಕನಕ, ಪುರಂದರ, ಪಪಿಲಾರ್, ವೇಮನರು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಜಾತಿಪದ್ಧತಿ ಹಾಗೂ ಅಸ್ಪೃಶ್ಯತೆಯ ನಿವಾರಣೆಗೆ ಚಳುವಳಿಯನ್ನು ಆರಂಭಿಸಿರುವುದಕ್ಕೆ ಇಂದಿಗೂ ಸಹ ನಿದರ್ಶನವಾಗಿ ಸಾಕ್ಷಿಯಾಗಿ ನಿರಂತರವಾಗಿದ್ದಾರೆ.

* * *