ವಿಜಯನಗರದ ಕಲೆ, ಸಾಹಿತ್ಯ, ಆಚಾರ, ವಿಚಾರ, ಸಾಂಸ್ಕೃತಿಕ ಇತಿಹಾಸವನ್ನು ತಿಳಿಯುವ ಮೊದಲು ಆ ಸಾಮ್ರಾಜ್ಯದ ಪ್ರಾರಂಭಿಕ ಇತಿಹಾಸದ ಅಧ್ಯಯನ ಅವಶ್ಯವೆನ್ನಿಸುತ್ತದೆ. ೧೩೩೬ರಲ್ಲಿ ವಿಜಯನಗರ ಸ್ಥಾಪನೆಯಾಯಿತೆಂದು ಆಧಾರಗಳಿಂದ ಹೇಳಿ ಕೊಂಡಿರುವ ನಾವು ಅದಕ್ಕೂ ಮುಂಚೆ ದಕ್ಷಿಣ ಭಾರತದಲ್ಲಿ ಪ್ರಮುಖವಾಗಿ ಆರು ಹಿಂದೂ ಸಾಮ್ರಾಜ್ಯಗಳು ರಾಜ್ಯವಾಳಿ ಮೆರೆದು ಅಳಿವಿನ ಸ್ಥಿತಿಯಲ್ಲಿದ್ದವೆಂದು ಹೇಳಬಹುದು. ಅವುಗಳನ್ನು ಈ ಕೆಳಕಂಡಂತೆ ಗುರುತಿಸಬಹುದು.

೧. ಯಾದವರ ರಾಜ್ಯ : ದೇವಗಿರಿ ಅವ ರಾಜಧಾನಿ. ಇದು ಮುಂದೆ ಬಂದಂತಹ ವಿಜಯನಗರ ಸಾಮ್ರಾಜ್ಯದ ಪಶ್ಚಿಮೋತ್ತರ ಭಾಗಗಳನ್ನು ವ್ಯಾಪಿಸಿತ್ತು.

೨. ಕಾಕತೀಯರ ರಾಜ್ಯ : ಓರಂಗಲ್ಲು ಇದರ ರಾಜಧಾನಿ.

೩. ಚೋಳರ ರಾಜ್ಯ : ತಂಜಾವೂರು ಅವರ ರಾಜಧಾನಿ

೪. ಪಾಂಡ್ಯರ ರಾಜ್ಯ : ಮಧುರೆ ಅವರ ರಾಜಧಾನಿ

೫. ಚೇರರ ರಾಜ್ಯ : ತಿರುವನಂತಪುರ, ಕೊಚ್ಚಿನ್, ಕಲ್ಲಿಕೋಟೆಯ ಪ್ರಾಂತ್ಯಗಳನ್ನು ಇದು ವ್ಯಾಪಿಸಿತ್ತು.

೬. ಹೊಯ್ಸಳರ ರಾಜ್ಯ : ಹಳೆಬೀಡು ಇವರ ರಾಜಧಾನಿಯಾಗಿತ್ತು.

ದೇವಗಿರಿಯ ಯಾದವರನ್ನು ಹೊಯ್ಸಳರಿಂದ ಈಗಿನ ಬೊಂಬಾಯಿ ಪ್ರಾಂತ್ಯದ ಮಧ್ಯೆ ಮತ್ತು ದಕ್ಷಿಣಭಾಗಗಳನ್ನು ಗೆದ್ದುಕೊಂಡಿದ್ದರು. ಕ್ರಿ.ಶ. ೧೨೯೪ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯು ಯಾದವ ವಂಶಸ್ಥರನ್ನು ಸೋಲಿಸಿ ದೆಹಲಿಗೆ ಹಿಂದಿರುಗುವಾಗ ಆರುನೂರು ಮಣಗಳಷ್ಟು (ಒಂದು ಮಣವೆಂದರೆ ನಲವತ್ತು ಸೇರು) ಮುತ್ತುಗಳನ್ನೂ, ಒಂದು ಸಾವಿರ ಮಣಗಳಷ್ಟು ಬೆಳ್ಳಿಯನ್ನು, ಎರಡು ಮಣಗಳಷ್ಟು ವಜ್ರ, ಕೆಂಪು ಪಚ್ಚೆ, ನೀಲ ಮುಂತಾದ ರತ್ನಗಳನ್ನು ಹಾಗೆಯೇ ಸುಮಾರು ನಾಲ್ಕು ಸಾವಿರ ರೇಷ್ಮೆ ಬಟ್ಟೆಗಳ ಸುರುಳಿಗಳನ್ನು ಮುಂತಾದಂತಹ ಅಮೂಲ್ಯ ವಸ್ತುಗಳನ್ನು ಅಪಹರಿಸಿಕೊಂಡು ಹೋದನೆಂದು ಫರಿಷ್ತಾ ಸ್ಪಷ್ಟವಾಗಿ ತಿಳಿಸಿದ್ದಾನೆ.

೧೪ನೇ ಶತಮಾನದ ಪ್ರಾರಂಭದಲ್ಲಿ ಮುಸಲ್ಮಾನರು ದಕ್ಷಿಣ ಭಾರತಕ್ಕೆ ದಂಡಯಾತ್ರೆ ಕೈಗೊಂಡು ಪ್ರಸಿದ್ಧ ಹಿಂದೂ ಸಾಮ್ರಾಜ್ಯಗಳನ್ನು ಕೊಳ್ಳೆಹೊಡೆದರು, ಅಲ್ಲಾವುದ್ದೀನನ ಪ್ರಸಿದ್ಧ ಸೇನಾಧಿಪತಿಯಾಗಿದ್ದಂತಹ ಮಲ್ಲಿಕಾಫರನು ಕ್ರಿ.ಶ. ೧೩೦೬ ರಿಂದ ಕ್ರಿ.ಶ. ೧೩೩೦ರವರೆಗೆ ದಕ್ಷಿಣ ಭಾರತವನ್ನು ತನ್ನ ಹತೋಟಿಗೆ ಒಳಪಡಿಸಿಕೊಳ್ಳಲು ಪ್ರಯತ್ನಿಸಿದನು. ದೇವಗಿರಿಯನ್ನು ಗೆದ್ದು ಅಲ್ಲಿಯ ರಾಜನನ್ನು ಶೂಲಕ್ಕೇರಿಸಿದನು. ತದನಂತರ ಓರಂಗಲ್ಲಿನ ಉತ್ತರ ಪ್ರಾಂತ್ಯವನ್ನು ಜಯಿಸಿದನು. ಮುಂದುವರೆದು ಕೇರಳದ ಅನೇಕ ದೇವಾಲಯಗಳನ್ನು ನಾಶ ಮಾಡಿ ತನ್ನ ಪ್ರತಿನಿಧಿಯನ್ನು ರಾಮೇಶ್ವರದಲ್ಲಿ ಸ್ಥಳ ಊರಿಸಿದನು. ಪಾಂಡ್ಯ ರಾಜ್ಯಕ್ಕೆ ಬಂದು ವಿಶ್ವವಿಖ್ಯಾತ ಮಧುರೆ ದೇವಾಲಯವನ್ನು ಕೊಳ್ಳೆಹೊಡೆದನು. ವೀರಕಂಪಣ್ಣನ ರಾಣಿ ಕವಯತ್ರಿ ಗಂಗಾದೇವಿಯ ತನ್ನ ಮಧುರಾವಿಜಯಂ ಎಂಬ ಐತಿಹಾಸಿಕ ಕಾವ್ಯದಲ್ಲಿ ಈ ಮೇಲ್ಕಂಡ ಸ್ಥಳಗಳಲ್ಲದೆ. ಶ್ರೀರಂಗ ಮೊದಲಾದ ಸ್ಥಳಗಳು ಇವರ ದಬ್ಬಾಳಿಕೆಗೆ ಹಾಳಾದುದನ್ನು ತುಂಬ ದುಃಖಕರವಾದ ರೀತಿಯಲ್ಲಿ ವರ್ಣಿಸಿದ್ದಾಳೆ.

ಉತ್ತರ ಭಾರತವನ್ನಾಳುತ್ತಿದ್ದಂತಹ ಮುಸ್ಲಿಂ ದೊರೆ ಮಹಮದ್ ಬಿನ್ ತುಘಲಕ್ ಕಾಲದಲ್ಲಿಯೇ ಅವನ ಸಾಮ್ರಾಜ್ಯದಲ್ಲಿ ಒಡಕು ಹುಟ್ಟಿಕೊಂಡಿತು. ಈ ದೃಷ್ಟಿಯಿಂದ ದಕ್ಷಿಣ ಭಾರತದಲಿದ್ದಂತಹ ಮುಸ್ಲಿಂ ರಾಜ್ಯಗಳಲ್ಲಿ ಒಡಕುಂಟಾಯಿತು. ಅಖಂಡವಾಗಿದ್ದಂತಹ ದಕ್ಷಿಣದ ಮುಸ್ಲಿಂ ರಾಜ್ಯವು ಗುಲ್ಬರ್ಗಾ, ಬಿಜಾಪುರ, ಗೋಲ್ಕಂಡ, ಅಹಮದ್ ನಗರ, ಬೀದರ್‌ಗಳಾಗಿ ವಿಂಗಡಣೆಯಾಯಿತು. ಮಲ್ಲಿಕಾಫರನ ಕನಸು ನುಚ್ಚು ನೂರಾಯಿತು. ಇದೇ ವೇಳೆಗೆ ದೆಹಲಿಯ ಸುಲ್ತಾನರಿಗೆ ತಿಳಿಯದೆಯೇ ದಕ್ಷಿಣದ ಹಿಂದೂ ಸಾಮ್ರಾಜ್ಯವೆನ್ನಿಸಿಕೊಂಡಿದ್ದಂತಹ ಹೊಯ್ಸಳರ ರಾಜ್ಯವು ಸಂಗಮ ವಂಶದ (ವಿಜಯನಗರ ಪ್ರಾರಂಭಿಕ ದೊರೆಗಳ ವಂಶ) ರಾಜರಿಗೆ ಹಸ್ತಾಂತರವಾಯಿತು. ದಕ್ಷಿಣ ಭಾರತದಲ್ಲಿನ ಮಧುರೆಯಲ್ಲಿದ್ದಂತಹ ದೆಹಲಿಯ ಪ್ರತಿನಿಧಿಗೂ ಇದು ತಿಳಿದಿರಲಿಲ್ಲ. ಹಕ್ಕಬುಕ್ಕ ಎಂಬ ಸಹೋದರರು ವಿದ್ಯಾರಣ್ಯ ಮತ್ತು ವೇದಾಂತ ದೇಶಿಕರ ಸಹಾಯದಿಂದಾಗಿ ೧೩೩೬ರಲ್ಲಿ ವಿಜಯನಗರ ರಾಜ್ಯವನ್ನು ಸ್ಥಾಲಿಸಿ ರಾಜ್ಯವನ್ನಾಳತೊಡಗಿದರು.

ಅನೇಕ ರಾಜಕೀಯ ಒತ್ತಡದಲ್ಲಿ ಉದಯಿಸಿದ ವಿಜಯನಗರ ರಾಜ್ಯವು ಸುಮಾರು ನಾಳ್ಕು ಶತಮಾನಗಳ ಕಾಲ ತನ್ನದೇ ಆದಂತಹ ತತ್ವ ಹಾಗೂ ಪರಾಕ್ರಮದಿಂದಾಗಿ ಆಳ್ವಿಕೆ ಮಾಡಿ ಬೃಹತ್ ಸಾಮ್ರಾಜ್ಯವೆನ್ನಿಸಿಕೊಂಡು ಭಾರತದ ಚರಿತ್ರೆಯಲ್ಲಿಯೇ ಅಲ್ಲದೆ ಪ್ರಪಂಚದ ಚರಿತ್ರೆಯ ಪುಟಗಳಲ್ಲಿ ತನ್ನ ಚಾಪನ್ನು ಮೂಡಿಸಿ ಮರೆಯಾಗಿದೆ. ಇಂಥಹ ಬೃಹತ್ ಸಾಮ್ರಾಜ್ಯವನ್ನು ಕ್ರಮವಾಗಿ ನಾಲ್ಕು ವಂಶದವರು ಆಳ್ವಿಕೆ ಮಾಡಿದರೆಂದು ಆಧಾರಗಳಿಂದ ಆಳ್ವಿಕೆ ನಡೆಸಿದ ರಾಜ ವಂಶ ಹಾಗೂ ರಾಜರುಗಳನ್ನು ಪಟ್ಟಿಮಾಡುವುದಾದರೆ,

ಸಂಗಮ ವಂಶ

೧. ಒಂದನೆಯ ಹರಿಹರ ಕ್ರಿ.ಶ. ೧೩೦೫ – ೧೪೦೧
೨. ಒಂದನೆಯ ಬುಕ್ಕರಾಯ ಕ್ರಿ.ಶ. ೧೩೦೫ – ೧೪೦೧
೩. ಎರಡನೆಯ ಹರಿಹರ ಕ್ರಿ.ಶ. ೧೩೭೭ – ೧೪೦೪
೪. ಎರಡನೆಯ ಬುಕ್ಕರಾಯ ಕ್ರಿ.ಶ. ೧೪೦೪ – ೧೪೦೬
೫. ಒಂದನೆಯ ದೇವರಾಯ ಕ್ರಿ.ಶ. ೧೪೦೬ – ೧೪೨೨
೬. ವೀರ ವಿಜಯರಾಮ ಕ್ರಿ.ಶ. ೧೪೨೨ – ೧೪೨೩
೭. ಪ್ರೌಢದೇವರಾಯ ಕ್ರಿ.ಶ. ೧೪೨೩ – ೧೪೪೭
೮. ಮಲ್ಲಿಕಾರ್ಜುನರಾಯ ಕ್ರಿ.ಶ. ೧೪೪೭ – ೧೪೬೫
೯. ವಿರೂಪಾಕ್ಷರಾಯ ಕ್ರಿ.ಶ. ೧೪೬೫ – ೧೪೮೫

 

ಸಾಳ್ವವಂಶ

೧೦. ಸಾಳ್ವ ನರಸಿಂಹ ಕ್ರಿ.ಶ. ೧೪೭೮ – ೧೪೯೦
೧೧. ಇಮ್ಮಡಿ ನರಸಿಂಹ ಕ್ರಿ.ಶ. ೧೪೯೦ – ೧೫೦೩

 

ತುಳುವ ವಂಶ

೧೨. ವೀರ ನರಸಿಂಹರಾಯ ಕ್ರಿ.ಶ. ೧೫೦೩ – ೧೫೦೯
೧೩. ಕೃಷ್ಣದೇವರಾಯ ಕ್ರಿ.ಶ. ೧೫೦೯ – ೧೫೩೦
೧೪. ಅಚ್ಯುತರಾಯ ಕ್ರಿ.ಶ. ೧೫೩೦ – ೧೫೪೨
೧೫. ವೆಂಕಟದೇವರಾಯ ಕ್ರಿ.ಶ.೧೫೪೨ – ೧೫೪೩
೧೬. ಸದಾಶಿವರಾಯ ಕ್ರಿ.ಶ. ೧೫೪೩ – ೧೫೭೦

 

ಅರವಿಡು ವಂಶ

೧೭. ಅಳಿಯ ರಾಮರಾಯ ಕ್ರಿ.ಶ. ೧೫೪೧ – ೧೫೬೯
೧೮. ತಿರುಮಲ ದೇವರಾಯ ಕ್ರಿ.ಶ. ೧೫೬೯ – ೧೫೭೨
೧೯. ಶ್ರೀರಂಗರಾಯ ಕ್ರಿ.ಶ. ೧೫೭೨ – ೧೫೮೫
೨೦. ವೆಂಕಟಪತಿ ಕ್ರಿ.ಶ.೧೫೮೫ – ೧೬೧೪
೨೧. ರಂಗರಾಯ ಕ್ರಿ.ಶ. ೧೬೧೪ – ೧೬೭೮
೨೨. ಪೆದ್ದ ವೆಂಕಟಪತಿರಾಯ (ಅಥವಾ ಗೋಪಾಲರಾಯ) ಕ್ರಿ.ಶ. ೧೬೭೮ – ೧೬೮೦

ವಿಜಯನಗರ ಸಾಮ್ರಾಜ್ಯವು ಕ್ರಿ.ಶ. ೧೩೦೫ ರಿಂದ ಕ್ರಿ.ಶ. ೧೬೮೦ರವರೆಗೆ ಒಟ್ಟು ೩೭೫ ವರ್ಷಗಳ ಕಾಲ ಕನ್ನಡನಾಡಿನಲ್ಲಿ ತನ್ನ ಏಳುಬೀಳುಗಳನ್ನು ಕಂಡಿತು. ಒಟ್ಟಾರೆ ಹೇಳುವುದಾದರೆ ಈ ಸಾಮ್ರಾಜ್ಯವು ಮೊದಲನೆಯ ಮತ್ತು ಎರಡನೆಯ ವಂಶಗಳ ಆಳ್ವಿಕೆಯ ಕಾಲದಲ್ಲಿ ಹುಟ್ಟಿ ಬೆಳೆದು ಪ್ರಾಯಕ್ಕೆ ಬಂದಿತ್ತೆನ್ನಬಹುದು. ತುಳುವಂಶದ ಕಾಲದಲ್ಲಿ ಅದರಲ್ಲಿಯೂ ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ ತನ್ನ ವೈಭವದ ತುತ್ತತುದಿಯನ್ನು ಮುಟ್ಟಿ ವಿಶ್ವದಲ್ಲೆಲ್ಲ ಬೆಳಗಿತು ಎಂದರೆ ತಪ್ಪಾಗದು. ಕೃಷ್ಣದೇವರಾಯನ ನಂತರ ಸಂಸ್ಥಾನವು ಕ್ಷೀಣಸ್ಥಿತಿಗೆ ಆರಂಭಿಸಿತು. ಕ್ರಿ.ಶ. ೧೫೬೫ರಲ್ಲಿ ನಡೆದಂತಹ ರಕ್ಕಸ ತಂಗಡಿಗೆ (ತಾಳೀಕೋಟೆ) ಯುದ್ಧದಲ್ಲಿ ಮುಸಲ್ಮಾನ್ ರಾಜ್ಯಗಳಿಂದ ಸೋಲನ್ನು ಅನುಭವಿಸಿತು. ಇದರ ನಂತರವೂ ಅದು ಸಂಪೂರ್ನವಾಗಿ ನಶಿಸಿಹೋಗದೆ ಸುಮಾರು ೧೧೫. ವರ್ಷಗಳ ಕಾಲ ತನ್ನದೆ ಆದಂತಹ ಮಿತಿಯಲ್ಲಿ ಮುಂದುವರೆದು ಕ್ರಿ.ಶ. ೧೬೮೦ರಲ್ಲಿ ಸಂಪೂರ್ಣವಾಗಿ ಅಂತ್ಯವನ್ನು ಕಂಡಿತು.

ಅರವೀಡು ವಂಶದ ಪ್ರಸಿದ್ಧ ದೊರೆ ತಿರುಮಲ ದೇವನ ಕಾಲದವರೆವಿಗೂ ಹಂಪಿಯ ವಿರೂಪಾಕ್ಷನ ಅಂಕಿತವು ರಾಜಶಾಸನಗಳಲ್ಲಿ ಅಳಿಯದೆ ಉಳಿದಿದ್ದಿತು. ಅನಂತರವೇ ತಿರುಪತಿಯ ವೆಂಕಟರಮಣನ ಹೆಸರಿನಲ್ಲಿ ಶಾಸನಗಳು ಬರಲಾರಂಭಿಸಿದವೆಂದು ಇತಿಹಾಸಗಾರರು ಅಭಿಪ್ರಾಯಪಡುತ್ತಾರೆ. ಇಂದಿಗೂ ದಿನನಿತ್ಯದ ಜ್ವಲಂತ ಸಮಸ್ಯೆಯಾಗಿರುವ ಕರ್ನಾಟಕ ಮತ್ತು ಆಂಧ್ರ ಭಾಗದ ಗಡಿ ಸಮಸ್ಯೆ ಹಾಗೂ ಭಾಷೆಯ ಸಮಸ್ಯೆಯೂ ಕೂಡ ಈ ಕಾಲದಲ್ಲಿಯೇ ತಲೆದೋರಿತೆಂದು ಹೇಳುತ್ತಾರೆ, ರಾಮರಾಯನಿಗೆ ತೆಲುಗು ಭಾಷೆಯಲ್ಲಿ ಪಕ್ಷಪಾತವಿತ್ತೆಂದು ಹೇಳಬಹುದು. ಏಕೆಂದರೆ ಇವನು ತೆಲುಗು ನಾಡಿನವನಾಗಿದ್ದು ತದನಂತರ ಕನ್ನಡನಾಡಿನೆಡೆಗೆ ಬಂದು ಕೃಷ್ಣದೇವರಾಯ ಮತ್ತು ಅಚ್ಯುತರಾಯರೊಡನೆ ಬೆಳೆಸಿದ್ದಂತಹ ಬಾಂಧವ್ಯದಿಂದ ಆತನು ಕನ್ನಡನಾಡಿನಲ್ಲಿ ಬೇರೂರಲು ಕಾರಣನಾದನು. ಅಚ್ಯುತರಾಯನ ಆಸಕ್ತಿಯಿಂದಾಗಿ ಅವನು ಪ್ರವರ್ಧಮಾನಕ್ಕೆ ಬಂದಿದ್ದನು. ಕೃಷ್ಣ ದೇವರಾಯನು ತೆಲುಗಿನಲ್ಲಿಯೂ ಅದ್ಬುತವಾದಂತಹ ಪಾಂಡಿತ್ಯವನ್ನು ಪಡೆದು ಐತಿಹಾಸಿಕ ಗ್ರಂಥಗಳನ್ನು ರಚಿಸಿರುವುದರಿಂದ (ಅಮುಕ್ತಮೌಲ್ಯದ ಜಾಂಬವತೀ ಪರಿಣಯ) ಅವನಿಗೆ ಯಾವ ಭಾಷೆಯ ಪಕ್ಷಪಾತವಾಗಲಿ ಇರಲಿಲ್ಲವೆಂದು ಹೇಳಬಹುದು. ಒಂದು ಕಡೆಯಿಂದ ಭಾವ ಮೈದುನನೂ, ಇನ್ನೊಂದು ಕಡೆಯಿಂದ ಅಳಿಯನೂ ಆದ ಅರವೀಡು ವಂಶದ ರಾಮರಾಯನು ಕೃಷ್ಣದೇವರಾಯನ ಕಾಲದಲ್ಲಿ ತಲೆಎತ್ತಲಿಲ್ಲ. ಇತ್ತೀಚಿನ ಇತಿಹಾಸಗಾರರು ಅಭಿಪ್ರಾಯ ಪಡುವಂತೆ ವಿಜಯನಗರ ಕ್ಷೀಣತೆಯ ಅಚ್ಚುತರಾಯನ ಕಾಲದಲ್ಲಿಯೇ ಪ್ರಾರಂಭವಾಯಿತೆಂದು ಹೇಳುತ್ತಾರೆ. ಸೂಕ್ಷ್ಮವಾಗಿ ಅಧ್ಯಯನಕ್ಕೆ ಒಳಪಡಿಸಿಕೊಂಡರೆ ಈ ವಿಷಯದಲ್ಲಿ ಸತ್ಯಾಂಶವನ್ನು ಕಾಣಬಹುದಾಗಿದೆ.

ಅತಿಯಾದ ಬಹಮನಿ ರಾಜ್ಯಗಳೊಂದಿಗಿನ ಬಾಂಧವ್ಯಗಳು, ಇದನ್ನು ದುರುಪಯೋಗ ಪಡಿಸಿಕೊಂಡು ಅವರ ಕುತಂತ್ರಿಕೆಗಳು ಮತ್ತು ವಿಜಯನಗರದ ಆಡಳಿತದಲ್ಲಿ ತಲೆದೋರಿದ ದುರಾಚಾರಗಳು ಪ್ರಮುಖವಾಗಿ ವಿಜಯನಗರದ ದೌರ್ಬಲ್ಯಕ್ಕೆ ಪ್ರಮುಖ ಕಾರಣಗಳಾದವು. ರಾಜ್ಯವನ್ನು ಸ್ಥಾಪಿಸುವ ಸಮಯದಲ್ಲಿದ್ದ ಬಲವಾದ ಹಿಂದೂ ಧರ್ಮವು ಕೊನೆಯಲ್ಲಿ ಅನೇಕ ತೊಂದರೆಗೆ ಸಿಲುಕಿಕೊಂಡು ಬಲಹೀನವಾಯಿತು. ಇದು ಹಿಂದೂ ಸಾಮಂತರ ಬೆಂಬಲವನ್ನು ಸಂಪೂರ್ಣವಾಗಿ ಕಳೆದುಕೊಂಡಿತು. ಮುಸ್ಲಿಮರ ದಬ್ಬಾಳಿಕೆಯು ಮನೆಗೆ ನುಗ್ಗಿದ ಮಾರಿಯಂತೆ ಸಾಮ್ರಾಜ್ಯವನ್ನು ನಾಶಮಾಡಿತು. ಆದರೆ ಇಂದು ನಾಶವಾಗಿರುವ ಹಂಪಿಗೆ, ಅದರ ದೇವಸ್ಥಾನಗಳೂ ಕೋಟೆಕೊತ್ತಲಗಳು ನಾಶವಾದುದಕ್ಕೆ ಕೇವಲ ಮುಸ್ಲಿಮರ ದಾಳಿಯೊಂದೇ ಕಾರಣವೆಂದು ನಮ್ಮ ಇತಿಹಾಸಕಾರರು ಉಲ್ಲೇಖಿಸಿರುವುದು. ಹೆಚ್ಚಾಗಿ ಕಂಡುಬರುತ್ತದೆ. ಆದರೆ ಹಂಪಿಯ ಅಂದಿನ ಸ್ಥಿತಿಗೆ ಮುಸ್ಲಿಂರ ದಾಳಿಗಿಂತಲೂ ಹೆಚ್ಚಾಗಿ ಶತಮಾನಗಳಿಂದಲೂ ತಮ್ಮ ಅಸೂಯೆಯನ್ನು ತೋರಿಸಲು ಬೇಡರು ಹಾಗೂ ಸ್ಥಳೀಯ ಜನರೇ ಕಾರಣವೆಂದು ಚರಿತ್ರೆಕಾರರು ಹೇಳಿರುವ ಹೇಳಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗದು. ಇದಕ್ಕೆ ನಿದರ್ಶನವೆಂದರೆ ರಕ್ಕಸತಂಗಡಿ ಯುದ್ಧದ ನಂತರ ಏನೆಲ್ಲಾ ನಾಶವಾದರೂ ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಸ್ಪಲ್ಪವೂ ಅಪಾಯವಾಗಿಲ್ಲದಿರುವುದು ಅನೇಕ ಚರ್ಚೆಗೆ ಎಡೆಮಾಡಿಕೊಡುತ್ತದೆ.

ವಿಜಯನಗರದ ಅರಸರಲ್ಲಿಯೇ ಕಲೆಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟವರೆಂದರೆ ಸಂಗಮ ವಂಶಸ್ಥರು. ಅದರಲ್ಲಿಯೂ ಮಹಾರಾಜಾಧಿರಾಜ ಪರಮೇಶ್ವರ ಎಂಬ ಬಿರುದಾಂಕಿತನಾಗಿದ್ದ ಎರಡನೆಯ ಹರಿಹರನೂ, ಒಂದನೇಯ ದೇವರಾಯನೂ ಪ್ರಸಿದ್ಧರಾಗಿದ್ದಾರೆ. ತದನಂತರ ಸಾಳ್ವ ಮನೆತನದಲ್ಲಿ ನರಸಿಂಹರಾಯನು ಹೆಸರುವಾಸಿಯಾದರೆ, ತುಳು ಅರಸರ ಮನೆತನದಲ್ಲಿ ಕೃಷ್ಣದೇವರಾಯ, ಅಚ್ಚುತರಾಯ ಹೆಚ್ಚಾಗಿ ಬೆಳಕಿಗೆ ಕಂಡುಬರುತ್ತಾರೆ. ಕೊನೆಯ ವಂಶ ಅರವೀಡುವಿನಲ್ಲಿ ಅಳಿಯ ರಾಯರಾಯ, ತಿರುಮಲ ದೇವರಾಯ, ವೆಂಕಟಪತಿರಾಯ ಮುಖ್ಯರಾಗಿದ್ದಾರೆ.

ಎರಡನೇ ಹರಿಹರನ ಐದು ಜನ ಮಹಾಮಂತ್ರಿಗಳಾಗಿದ್ದ ಸಯನಾಚಾರ್ಯರು, ಮಾಧವಚಾರ್ಯರು (ವೇದಭಾಷ್ಯದ ಕರ್ತೃ) ಮುದ್ದಪ್ಪ ದಂಡನಾಥ, ಇರುಗಪ್ಪ ದಂಡನಾಥ (ಗಾಣಗಿತ್ತಿ ದೇವಸ್ಥಾನವನ್ನು ಕಟ್ಟಿಸಿದವನು), ಗುಂಡಪ್ಪ ದಂಡನಾಥ ಮುಂತಾದವರು ರಾಜ್ಯವನ್ನು ಸುಭದ್ರಗೊಳಿಸಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ದರು, ಶಂಕರಾಚಾರ್ಯರ ಸೌಂದರ್ಯಲಹರಿಗೆ ಟಿಪ್ಪಣಿ ಬರೆದಂತಹ ಲಕ್ಷ್ಮಣನು ಒಂದನೆಯ ದೇವರಾಯನ ಆಸ್ಥಾನದಲ್ಲಿ ಮಂತ್ರಿಯಾಗಿದ್ದನು. ಇವನು ಹಂಪಿಯ ಸಮೀಪದಲ್ಲಿರುವ ಮಾಲ್ಯವಂತ ಬೆಟ್ಟದ ಮೇಲೆ ವಿನಾಯಕನನ್ನು ಪ್ರತಿಸ್ಥಾಪಿಸಿದನು. ವಿಜಯನಗರದ ರಾಜಧಾನಿಯಾಗಿದ್ಧ ವಿದ್ಯಾರಣ್ಯಕ್ಕೆ ಭದ್ರವಾದ ಕೋಟೆಕೊತ್ತಲುಗಳನ್ನು ಕಟ್ಟಿಸಿದನು. ತುಂಗಭದ್ರೆಯಿಂದ ಅರಮನೆಯ ಸಮೀಪಕ್ಕೆ ನೀರು ಸರಬರಾಜಾಗುವಂತೆ ಕಾಲುವೆಗಳನ್ನು ಕಲ್ಲಿನ ಕೊಳವೆಗಳನ್ನು ಹಾಕಿಸಿದನು. ಕೆಲವು ಮೂಲಗಳ ಪ್ರಕಾರ ರಾಜ್ಯಕ್ಕೆ ೧೨ ಲಕ್ಷ ವರಮಾನವು ಬರುವಂತೆ ಅಣೆಕಟ್ಟುಗಳನ್ನು ವಿಸ್ತರಿಸಿದನೆಂದು ತಿಳಿದುಬರುತ್ತದೆ.

ಎರಡನೆಯ ದೇವರಾಯನು ಸಿಂಹಳ ದ್ವೀಪದವರೆವಿಗೂ ಸಮುದ್ರಯಾನವನ್ನು ಮಾಡಿದ್ದನು. ಹಾಗೆಯೇ ಜೈನ ಮತೋದ್ಧಾರಕನಾಗಿದ್ದ ರಾಜಧಾನಿ ವಿಜಯನಗರವನ್ನು ಕಲಾವೈಭವದಲ್ಲಿ ಸರ್ವತೋಮುಖವಾಗಿ ಊರ್ಜಿತಕ್ಕೆ ತಂದನು. ನಾಡಿನಲ್ಲಿ ನೀರಾವರಿಗಾಗಿ ಕೈಗೊಂಡ ಕ್ರಮಗಳು, ರಾಜಧಾನಿಯ ಶೃಂಗಾರಕ್ಕೆ, ಸೈನ್ಯವಿಸ್ತರಣೆಗೆ ಅವನು ತೆಗೆದುಕೊಂಡಂತಹ ಆಸಕ್ತಿಯಿಂದ ಕರ್ನಾಟಕ ಮತ್ತು ಆಂಧ್ರ ಸಂಸ್ಥಾನಗಳಲ್ಲಿ ಹೆಚ್ಚು ಪ್ರಖ್ಯಾತಿಗೆ ಬಂದನು. ಇದಕ್ಕಾಗಿಯೇ ಇವನನ್ನು ‘ದಕ್ಷಿಣ ಸಮುದ್ರಾಧೀಶ್ವರ’ ಫ್ರೌಢ ದೇವರಾಯ’ ‘ವೀರ ಪ್ರತಾಪ ದೇವರಾಯ’ ಎಂಬಿತ್ಯಾದಿ ಬಿರುದುಗಳು ಇವನಿಗೆ ಬಂದಿದ್ದವು. ವಿದೇಶಿಯಾತ್ರಿಕರಾಗಿರುವ ಪೋರ್ಚುಗಲ್‌ನ ಅಬ್ದುಲ್ ರಜಾಕ್, ನಿಕಲೋ ಕೊಂಟಿ ಮುಂತಾದವರು ವಿಜಯನಗರಕ್ಕೆ ಭೇಟಿ ನೀಡಿದ್ದು ಇವನ ಕಾಲದಲ್ಲಿಯೇ ‘ವಿಥಿನಾಟಕಂ’ ಕಳಾಹಸ್ತಿ ಮಾಹಾತ್ಮ್ಯಂ’ ಮುಂತಾಧ ಗ್ರಂಥಗಳ ರಚನಕಾರರಾದ ಮಹಾಕವಿ ಶ್ರೀನಾಥನು ಇವನ ಆಸ್ಥಾನದ ಕವಿಯಾಗಿದ್ದನು. ಸಂಗಮ ಮಲ್ಲಿಕಾರ್ಜುನ ರಾಯನ ಯುವರಾಜನಾಗಿದ್ದಂತಹ ಸಾಳ್ವ ನರಸಿಂಹರಾಯನ ಕಾಲದಲ್ಲಿ ರಾಮಾಭ್ಯುದಯವೆಂಬ ಕರತಿಯ ಮೂಲಕ ಮಲ್ಲಿಕಾರ್ಜುನನ ದಿಗ್ವಿಜಯವು ವರ್ಣಿತವಾಗಿರುವುದು ಕಂಡುಬರುತ್ತದೆ.

ತುಳುವ ವಂಶದ ನರಸರಾಯ ವೀರನು, ಅಂದಿನ ಕಾಲದಲ್ಲಿಯೇ ಪ್ರವಾಹದಿಂದಾಗಿ ಅನೇಕ ತೊಂದರೆಗಳನ್ನು ಉಂಟುಮಾಡುತ್ತಿದ್ದ ಕಾವೇರಿ ನದಿಗೆ ಸೇತುವೆ ಹಾಗೂ ಅಡ್ಡಗೋಡೆಯನ್ನು ಕಟ್ಟಿಸಿದನೆಂದು ಇತಿಹಾಸವು ಉಲ್ಲೇಖಿಸುತ್ತದೆ. ಇವನ ಆಸ್ಥಾನದಲ್ಲಿ ಘಂಟಾಸಿಂಗಯ್ಯ, ನಂದಿಮಲ್ಲಯ್ಯರಂಥಹ ಕವಿಶ್ರೇಷ್ಟರಿದ್ದರು. ಇವನೊಬ್ಬ ಕಲಾಪ್ರೇಮಿಯಾಗಿದ್ದನ್ನಲ್ಲದೆ ವಿಜಯನಗರವನ್ನು ಒಂದು ‘ಸಾಮ್ರಾಜ್ಯದ’ ಮಟ್ಟಕ್ಕೆ ಕೊಂಡೊಯ್ದವನಾಗಿದ್ದನೆಂದು ತಿಳಿದುಬರುತ್ತದೆ. ಇವನ ನಂತರ ಬಂದ ದೊರೆ ಕೃಷ್ಣದೇವರಾಯ. ಇವನು ಸುಮಾರು ೨೮ ವರ್ಷಗಳ ಕಾಲ ಈ ನಾಡಿನಲ್ಲಿ ಇಲ್ಲಿನ ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದನೆಂದು ಹೇಳಬಹುದು. ಇವನು ವಿಜಯನಗರ ಚರಿತ್ರೆಯಲ್ಲಿಯೇ ಪ್ರಖ್ಯಾತ ದೊರೆಯಾಗಿ ಕಂಗೊಳಿಸಿದ್ದಾನೆ. ಕೃಷ್ಣದೇವರಾಯನಿಗೆ ಒಬ್ಬ ಮಗನೂ ಇಬ್ಬರು ಹೆಣ್ಣು ಮಕ್ಕಳೂ ಇದ್ದರು. ತಿರುಮಲ ದೇವಿಯಿಂದ ಜನಿಸಿದ ತಿರುಮಲಾಂಬೆಯನ್ನು ಅರವೀಡು ರಾಮರಾಯನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮತ್ತೊಬ್ಬ ಹೆಂಡತಿ ಚಿನ್ನಾಂಬಿಕೆಗೆ ಜನಿಸಿದ ಮಂಗಳಾಂಬಿಕೆಯನ್ನು ರಾಯರಾಯನ ತಮ್ಮನಾದಂತಹ ತಿರುಮಲದೇವರಾಯನಿಗೆ ಮದುವೆ ಮಾಡಿಕೊಟ್ಟಿದ್ದನು. ಕ್ರಿ.ಶ. ೧೫೧೫ ರಲ್ಲಿ ಕೃಷ್ಣದೇವರಾಯನು ಶ್ರೀ ಶೈಲ ಯಾತ್ರೆ ಕೈಗೊಂಡು ಅಲ್ಲಿನ ಮಲ್ಲಿಕಾರ್ಜುನ ದೇವಾಲಯಕ್ಕೆ ಉತ್ತಮ ಶಿಲ್ಪಕಲಾಕೃತವಾದಂತಹ ಪ್ರಾಕಾರವನ್ನು ನಿರ್ಮಿಸಿದ್ದನು. (ಕಲೆ ಮತ್ತು ವಾಸ್ತುಶಿಲ್ಪ ಎಂಬ ಅಧ್ಯಯನದಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ) ೧೫೧೬ರಲ್ಲಿ ಕೃಷ್ಣದೇವರಾಯನು ಕಳಿಂಗದ ಮೇಲೆ ದಿಗ್ವಿಜಯಕ್ಕೆ ಹೊರಟು ಪುತ್ತನೂರಿನಲ್ಲಿ ಜಯಸ್ತಂಭವನ್ನು ಸ್ಥಾಪಿಸಿದನು. ಕಾಳಹಸ್ತಿಯಲ್ಲಿ ನೂರು ಕಂಬಗಳ ಮಂಟಪವನ್ನೂ ಪೂರ್ವ ದಿಕ್ಕಿನ ಗೋಪುರವನ್ನು ಕಟ್ಟಿಸಿದ್ದ ಕೃಷ್ಣದೇವರಾಯ ನಂತರ ತಿರುಮಣ್ಣಮಲೆಗೂ ಹಾಗೂ ಚಿದಂಬರಕ್ಕೂ ಪ್ರಯಾಣ ಬೆಳೆಸಿದನು. ತಿರುಮಣ್ಣಾಮಲೆಯಲ್ಲಿ ಸಾವಿರ ಕಂಬಗಳ ಮಂಟಪವನ್ನು ನಿರ್ಮಿಸಿದ್ದನು. ಚಿದಂಬರಂನಲ್ಲಿರುವ ದೇವಾಲಯದ ಉತ್ತರ ದಿಕ್ಕಿನ ಬೃಹತ್ ಗೋಪುರವನ್ನು ಕಟ್ಟಿಸಿದನು. ಇದೆಲ್ಲವೂ ಸಹ ಸಾಹಿತ್ಯ ಹಾಗೂ ಶಾಸನಾಧಾರಗಳಿಂದ ತಿಳಿದುಬರುತ್ತದೆ.

ಮೇಲೆ ತಿಳಿಸಿದ ದಿಗ್ವಿಜಯದಿಂದ ರಾಜಧಾನಿಗೆ ಹಿಂದಿರುಗಿದ ಕೃಷ್ಣದೇವರಾಯನು ರಾಜಧಾನಿ ವಿದ್ಯಾನಗರಕ್ಕೆ “ವಿಜಯನಗರ” ಎಂದು ನಾಮಕರಣ ಮಾಡಿದನು. ರಾಯನು ಸಂಸ್ಕೃತ ಹಾಗೂ ತೆಲುಗಿನಲ್ಲಿ ಉತ್ತಮ ಪಾಂಡಿತ್ಯ ಪಡೆದಿದ್ದನಲ್ಲದೆ ಆ ಭಾಷೆಯಲ್ಲಿಯೇ ಉತ್ತಮ ಕೃತಿಗಳನ್ನು ರಚಿಸಿದ್ದಾನೆ. ಜಾಂಬವತೀ ಕಲ್ಯಾಣಂ, ಮದಾಲಸಾಚರಿತ್ರಂ, ಸತ್ಯವಧೊಪ್ರೀಣನಂ, ರಸಮಂಜರಿ, ಜ್ಞಾನಚಿಂತಾಮಣಿ, ಸಕಲಕಥಾಸಾರ ಇವೇ ಮೊದಲಾದ ಸಂಸ್ಕೃತ ಕೃತಿಗಳ ಜೊತೆಗೆ ಅಮುಕ್ತಮೌಲ್ಯದ ಎಂಬುವ ಐತಿಹಾಸಿಕಗ್ರಂಥವನ್ನು ತೆಲುಗಿನಲ್ಲಿ ಬರೆದಿದ್ದಾನೆ. ಅಚ್ಚುತರಾಯನು ಕೂಡ ಕಲಾಪ್ರೇಮಿ, ಅವನು ಕಟ್ಟಿಸಿದ ದೇವಾಲಯಗಳಲ್ಲಿ ಹಂಪಿಯ ಅಚ್ಚುತರಾಯ ದೇವಾಲಯ, ಕಮಲಾಪುರದಲ್ಲಿರುವ ಪಟ್ಟಾಭಿರಾಯ ದೇವಾಲಯಗಳು ಇಂದಿಗೂ ಉಳಿದುಕೊಂಡಿವೆ.

ಅರವಿಡು ವಂಶದ ರಾಮರಾಯನ ರಾಣಿ ತಿರುಮಲಾಂಬಿಕೆ ಮೋಹನಾಂಬಿಕೆ ಎಂಬ ಇನ್ನೊಂದು ಹೆಸರಿದೆ. ಈ ಮೋಹನಾಂಬಿಕೆಯು ಕವಿಯಾಗಿದ್ದುದರಿಂದ ‘ಮಾರೀಚಿ ಪರಿಣಯ’ ಎಂಬ ಕೃತಿ ಹೊರಬಂದಿತು. ಸವತಃ ರಾಮರಾಯನಿಗೂ ಕಲೆ, ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇದ್ದಂತೆ ಕಾಣೂತ್ತದೆ. ಇವನ ಉತ್ತೇಜನದಿಂದಲೆ ರಾಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುವ ಉದ್ದೇಶದಿಂದಾಗಿ ತೋದರ ಮಲ್ಲರಾಂಯ್ಯ ಮಾತ್ಯನಿಂದ ‘ಸರ್ವಮೇಳ ಕಳಾನಿಧಿ’ ಎಂಬ ಸಂಗೀತ ಶಾಸ್ತ್ರವು ರಚಿತವಾಯಿತೆಂದು ನಂಬಲಾಗಿದೆ. ರಾಮರಾಯನ ತಮ್ಮ ತಿರುಮಲರಾಯನೂ ಸಹ ಸ್ವತಹ ಪಂಡಿತನಾದ್ದರಿಂದ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದವನಾಗಿದ್ದನು. ಇವನು ಜಯದೇವನ ‘ಗೀತ ಗೋವಿಂದ’ದ ಮೇಲೆ ‘ಸ್ಮೃತಿರಂಜಿನಿ’ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ, ತೆನಾಲಿ ರಾಮಕೃಷ್ಣನೂ, ಶಾಸನದ ಕರ್ತನಾದಂತಹ ಕೃಷ್ಣಕವಿಯೂ ಇವನ ಆಸ್ಥಾನದಲ್ಲಿ ತಮ್ಮದೇ ಆದ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ಇವರೆಲ್ಲರ ಪರಿಶ್ರಮ ಮತ್ತು ಆಸಕ್ತಿಯಿಂದಾಗಿ ಅಂದು ಕರ್ನಾಟಕದ ಸಂಸ್ಕೃತಿ ವಿಶಿಷ್ಟ ದಿಕ್ಕಿನೆಡೆಗೆ ಮುಖ ಮಾಡುವಂತಾಯಿತು.

***