ನಮ್ಮ ಸಂಸ್ಕೃತಿಯಲ್ಲಿ ತಂದೆ ತಾಯಿಯರಿಗಿಂತಲೂ ತನ್ನ ಕರುಳು ಬಳ್ಳಿಯ ಸಹೋದರ – ಸಹೋದರಿಯರ ಅಕ್ಕರೆಯ ಮಾತುಗಳು ಇಲ್ಲಿ ಪ್ರಸ್ತುತವೆನ್ನಿಸುತ್ತವೆ. ಅಕ್ಕ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತಮ್ಮನಾದವನು ಆ ಸಂದರ್ಭವನ್ನು,

ಒಮ್ಮನ ಮದ್ದಿಗೆ ಬೆಂಕಿ ಒಮ್ಮೆಲೆ ಕೊಟ್ಟಾಂಗ |
ತಮ್ಮನ ಹೊಟ್ಟೆ ತಳಮಳಿಸಿ | ಅಕ್ಕ ನನಗೆ
ರಮಿಸಿ ಹಣ್ಣು ಕೊಡುತ್ತಿದ್ದೊ ||

ಎಂದು ತಾನು ಹಾಗೂ ಅಕ್ಕ ದಿನ ಕಳೆಯುತ್ತಿದ್ದ ಕ್ಷಣವನ್ನು ನೆನೆಸಿಕೊಂಡು ದುಃಖಿಸಿರುವುದು ಕಂಡುಬರುತ್ತದೆ. ಇಷ್ಟೆಲ್ಲಾ ಆದರೂ ಮದುವೆಯಾದ ಮೇಲೆ ಹೆಣ್ಣು ಗಂಡನ ಮನೆಗೆ ಹೋಗಲೇಬೇಕು, ಇದಕ್ಕಾಗಿ ತಾಯಿ ತನ್ನಲ್ಲಿಯೇ ಧೈರ್ಯ ತಂದುಕೊಂಡು ಮಗಳೀಗೆ ಒಳ್ಳೆಯದಾಗಲೆಂದು ದೇವರಲ್ಲಿ,

ಗಂಡು ಮಕ್ಕಳ ಒಂಬತ್ತು ಕೊಡು ಸ್ವಾಮಿ
ಬಂಡೀಯ ಮುಂದೆ ಕಳಸಕ್ಕೆ ಒಪ್ಪುವಂಥ
ಒಬ್ಬ ಹೆಣ್ಣು ಮಗಳ ಕೊಡು ದೇವ
……

ಎಂದು ಪ್ರಾರ್ಥಿಸಿಕೊಂಡು ಮಗಳನ್ನು ಗಂಡನ ಮನೆಗೆ ಕಳುಹಿಸುವ ಸಂದರ್ಭ ಬರುತ್ತದೆ. ತಾಯಿಗೆ ಮಗಳು ಹೋದ ಕೆಲವು ದಿನಗಳವರೆಗೆ ತನ್ನ ಮನೆ ಹಾಗೂ ಮನದಲ್ಲಿ ಶೂನ್ಯ ಅವರಿಸಿಕೊಂಡಂತೆ ಕಾಣಿಸಿಕೊಳ್ಳುತ್ತದೆ. ಅವಳು ಮನೆಯಲ್ಲಿ ಇದ್ದಾಗ ಆಡುತ್ತಿದ್ದ ಆಟ, ಲವಲವಿಕೆ ಮುಂತಾದವುಗಳನ್ನು ನೆನೆಸಿಕೊಂಡು ದುಃಖಿಸುತ್ತಾಳೆ. ಇತ್ತ ಗಂಡನ ಮನೆಗೆ ಹೋದ ಮಗಳೂ ಸಹ ಅಲ್ಲಿನ ಹೊಸ ಜೀವನವನ್ನು ಆರಂಭಿಸಿದ ನಂತರವೂ ತವರು ಮನೆಯನ್ನು ನೆನೆಸಿಕೊಳ್ಳುತ್ತಾ ಬದುಕುವ ಸನ್ನಿವೇಶದಲ್ಲಿ ಈ ಕೆಳಗಿನ ಸುಂದರ ಗೀತೆಯ ಸೃಷ್ಟಿಯಾಗಿರುತ್ತದೆನ್ನಬಹುದು.

ತಾಯಿ ಕಾಣದ ಜೀವ ತಾವೂರಿ ಬಾವೂರಿ
ಭಾಳ ಬಿಸಿಲಾನ ಅವರೀಯ
| ಹೂವಿನಾಂಗ
ಬಾಡತೇತಿ ತಾಯಿ ಕರೆದೊಯ್ಯ ||

ಮಳೆಬಿಟ್ಟರೂ ಮರದ ಹನಿ ಬಿಡದು ಹಡೆದವ್ವ
ನೀ ಬಿಟ್ಟರೂ ನಿನ್ನ ಮನಿ ಬಿಡದು ಹಡೆದವ್ವ
ನಿನ್ನಾಸೆ ನನಗೆ ಬಿಡದಲ್ಲೆ

ತಂದಿಯ ನೆನೆದರೆ ತಂಗೂಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ವ
| ನೆನೆದರೆ
ಮಾಸಿದ ತಲೆಯ ಮಡಿಯಾಯ್ತು

ಎನ್ನುವ ಮಾತುಗಳು ಅವಳ ತವರು ಹಂಬಲವನ್ನು ಹಾಗೂ ತನ್ನ ತವರು ಮನೆಯ ಬಿಡಲಾರದ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ನಿಜಕ್ಕೂ ಈ ಮಾತುಗಳಲ್ಲಿ ಮನುಷ್ಯ ಜೀವಿಯ ಮಾನವೀಯತೆಯ ಅಮೂಲ್ಯ ಲಕ್ಷಣಗಳು ಎದ್ದುಕಾಣುತ್ತವೆ.

ಇಂದಂತೂ ವರದಕ್ಷಿಣೆ ಎಂಬುದು ಒಂದು ಸಾಮಾಜಿಕ ಪಿಡುಗಾಗಿ ಪರಿವರ್ತಿಸಿದೆ ಆದರೆ ನೂರಾರು ವರ್ಷಗಳ ನಮ್ಮ ಇತಿಹಾಸವನ್ನು ಗಮನಿಸಿದರೆ ಅದೊಂದು ಪಿಡುಗಾಗಿರದೆ ನಮ್ಮ ಸಂಸ್ಕೃತಿಯ ಒಂದು ಭಾಗವಾಹಿತ್ತೆಂದು ಕಂಡುಬರುತ್ತದೆ. ಪ್ರತಿಯಿಂದ ಸಾಕಿಸಲುಹಿದ ಮಗಳು ತವರುಮನೆಯಿಂಸ ಮದುವೆಯಾಗಿ ಗಂಡನಮನೆಗೆ ಹೋಗುವಾಗ ಅವಳಿಗೆ ತವರಿನ ಕಾಣಿಕೆಯಾಗಿ ತಮ್ಮಲ್ಲಿರುವ ಹಸು, ಎಮ್ಮೆ, ಕುರಿ ಆಡುಗಳನ್ನೂ ಅಥವಾ ಚಿನ್ನಾಭರಣಗಳನ್ನು ನೀಡುತ್ತಿದ್ದುದ್ದಕ್ಕೆ ಅನೇಕ ಆದಾರಗಳಿಂದ ಇದಕ್ಕೆ ನಿದರ್ಶನವೆಂಬಂತೆ.

ತೊಟ್ಟಿಲ ಹೊತುಕೊಂಡು, ತೌರ್ ಬಣ್ಣ ಉಡುಕೊಂಡು
ಅಪ್ಪ ಕೊಟ್ಟೆಮ್ಮ ಹೊಡಕೊಂಡು | ತವರೂರ
ತಿಟ್ಟತ್ತಿ ತಿರುಗಿ ನೋಡ್ಯಾಳ

ಎಂಬುವ ಜಾನಪದರ ಸಾಲುಗಳು ಇಲ್ಲಿ ಮಾದರಿಯಾಗಿವೆ. ಈ ಮೇಲಿನ ಸಾಲುಗಳು ವರದಕ್ಷಿಣೆಯ ಅಂಶವನ್ನು ಸೂಚಿಸಿದರೂ ಸಹ ಒಂದರ್ಥದಲಿ ಪ್ರೀತಿಯ ಸಂಕೇತವಾಗಿ ಗೋಚರಿಸುತ್ತದೆಯೇ ವಿನಃ ಕೆಟ್ಟ ಪಿಡುಗಾಗಿ ಗೋಚರಿಸುವುದಿಲ್ಲ. ತಂಗಿಯನ್ನು ತವರೂರಿಗೆ ಕರೆತರುವಾಗ ತಂಗಿಯ ಅಣ್ಣನಿಗೆ ಹೇಳುವ ಮಾತು ಇಲ್ಲಿ ಚಾರಿತ್ರಿಕವಾಗಿದೆ.

ತವರೂರ ಹಾದೀಲಿ ತೆಗೆಸಣ್ಣ ಬಾವಿಯ |
ಅಕ್ಕ ತಂಗೇರು ತಿರುಗಾಡೂ | ದಾರೀಲಿ
ತೆಗೆಸಣ್ಣ ಕಲ್ಯಾಣದ ಕೊಳಗಳ |

ಅಕ್ಕ ತಂಗಿಯರು ತಿರುಗಾಡುವ ಈ ದಾರಿಯಲ್ಲಿ ಬಾವಿ, ಕೊಳ, ಕೆರೆಗಳನ್ನು ನಿರ್ಮಿಸಬೇಕೆಂಬ ಬಯಕೆಯನ್ನು ತನ್ನ ಅಣ್ಣನಿಗೆ ತಂಗಿ ವ್ಯಕ್ತಪಡಿಸುತ್ತಾಳೆ. ಇಂತಹ ಅಮೂಲ್ಯ ಸಲಹೆಯನ್ನು ಪ್ರೀತಿಯಿಂದ ನೀಡಿದ ತಂಗಿ ಮತ್ತೆ ತನ್ನ ತವರೂರಿನಲ್ಲಿ ತಾಯಿ ಮರಣ ಹೊಂದಿ, ಅಣ್ಣಂದಿರುಗಳು ಮದುವೆಯಾಗಿ ಊರಿನಲ್ಲಿ ಅತ್ತಿಗೆಯರು ಮನೆ ಒಡೆಯರಾಗಿದ್ದಾಗ ತಂಗಿ ತನ್ನ ತವರಿನ ಬಗ್ಗೆ ಹಾಡುವ ಮಾತುಗಳು ಗಮನಾರ್ಹವಾಗಿವೆ.

ತಾಯಿಲ್ಲ ತವರೀಗೆ ಹೋಗಬಾರದು ಹೆಣ್ಣು
ನೀರಿಲ್ಲ ಕೆರೆಗೆ ಕುರಿ ಬಂದು
| ಹೋದಾಗ
ಆಗ ನೋಡದರ ಬಳಲಿಕೆ

ತಾಯಿದ್ರೆ ತವರೂರು ನೀರಿದ್ರೆ ಹೆಗ್ಗೆರೆ |
ಆನೆಯಿದ್ರರಸು ದೊರೆತನ | ತಾಯವ್ವ
ನೀನಿದ್ರೆ ಲೇಸು ತವರ್ಮನಿ

ಯಾರು ಇದ್ದರು ತನ್ನ ತಾಯವ್ವನ್ಹೋಲರ |
ಸಾವಿರಕೊಳಿ ಒಲಿಯಾಗ | ಇದ್ದರ
ಜೋತಿ ನೀನ್ಯಾರು ಹೋಲ್ಯಾರ

ಎಂದು ತಾಯಿಯ ಅಮರವಾದ ಪ್ರೇಮವನ್ನು ಕೊಂಡಾಡಿರುವುದು ಕಂಡುಬರುತ್ತದೆ. ಒಬ್ಬ ವ್ಯಕ್ತಿಗೆ ಅದರಲ್ಲಿಯೂ ಮಗಳಿಗೆ ಬೇರೆ ಯಾರೋ ಏನೆಲ್ಲಾ ಪ್ರೀತಿ ತೋರಿಸಿದರೂ ಅದು ತಾಯಿಯ ಪ್ರೀತಿಗೆ ಸರಿಸಮನಾದ ಪ್ರೀತಿಯಾಗಲಾರದು ಎಂದು ತಾಯಿಗೆ ನಮ್ಮ ಸಂಸ್ಕೃತಿಯು ನೀಡಿರುವ ವಿಶಿಷ್ಠ ಸ್ಥಾನವನ್ನು ವ್ಯಕ್ತಪಡಿಸುತ್ತಾಳೆ.

ತಂದೆ ತಾಯಿ ಹಾಗೂ ತೌರುಮನೆಯ ಪ್ರೀತಿಯ ಒಂದು ರೀತಿಯದಾದರೆ ತನ್ನ ಕರುಳು ಬಳ್ಳಿಗಳೊಂದಿಗಿನ (ಅಣ್ಣ, ತಮ್ಮ, ಅಕ್ಕ, ತಂಗಿ) ಸಂಬಂಧವನ್ನು ಕುರಿತಂತೆ ಅನೇಕ ವಿಶಿಷ್ಟ ಪದಗಳು ನಮ್ಮ ಜಾನಪದರಲ್ಲಿ ಹರಿದಾಡಿರುವುದಕ್ಕೆ ಈ ಕೆಳಗಿನ ಸಾಲುಗಳು ಸಾಕ್ಷಿಯಾಗಿವೆ. ಹೆಣ್ಣೂ ಎಂದಿದ್ದಿರೂ ಮದುವೆಯಾಗಿ ಗಂಡನ ಮನೆಗೆ ಹೋಗುವವಳು, ಗಂಡನ ಮನೆಯಲ್ಲಿ ಅವಳಿಗೆ ಏನಾದರೂ ತೋಂದರೆ ಸಂಭವಿಸಿದರೆ ಅಥವಾ ಇನ್ಯಾವುದೇ ಅಹಿತಕರ ಸನ್ನಿವೇಶಗಳಲ್ಲಿ ಹೆಣ್ಣು ಕಷ್ಟಕ್ಕೆ ಸಿಲುಕಿದಾಗ ಅವಳಾಡುವ ಮಾತು ಗಮನಾರ್ಹ.

ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು |
ಬೆನ್ನ ಕಟ್ಟುವರು ಸಭೆಯೊಳಗೆ | ಸಾವಿರ
ಹೊನ್ನು ಕಟ್ಟುವರು ಗುಡಿಯೊಳಗೆ

ಮನೆಯ ಹಿಂದಿನ ಮಾವು ನೆನೆದರೆ ಘಮ್ಮೆಂದು ನೆನೆದಂಗೆ ಬಂದ ನನ್ನ ಅಣ್ಣ

ಬಾಳೀಯ ಗೊನಿಹಾಂಗ ತೋಳ ತಿರುವೂತ ||
ಸರದಾರ ಬರುವಾಗ ಸುರಿದಾದ ಮಲ್ಲಿಗಿ |
ದೊರೆ ನನ್ನ ತಮ್ಮ ಬರುವಾಗ | ಯಾಲಕ್ಕಿ
ಗೊನಿಬಾಗಿ ಹಾಲ ಸುರಿದಾವ |

ಈ ಮೇಲಿನ ಪದಗಳು ಗಂಡನ ಮನೆಯಲ್ಲಿರುವ ಹೆಣ್ಣು ತನ್ನ ಅಣ್ಣ ತಮ್ಮಂದಿರು ತನ್ನ ಮನೆಗೆ ಬಂದಾಗ ತನಗಾದ ಸಂತೋಷವನ್ನು ವ್ಯಕ್ತಪಡಿಸುವ ರೀತಿಯದು. ಈ ಮೇಲಿನ ಸಾಲುಗಳು ಎಷ್ಟು ಸುಂದರವಾಗಿ ಮೂಡಿ ಬಂದಿದೆ ಎಂದರೆ ಇದಕ್ಕೆ ನಮ್ಮ ಯಾವ ಸಾಹಿತ್ಯವೂ ಸಾಟಿಯಾಗಲಾರದೆನೋ ಎಂದೆನ್ನಬಹುದು.

ತನ್ನ ಅಣ್ಣ ತಮ್ಮಂದಿರ ಮೇಲೆ ವ್ಯಕ್ತಪಡಿಸಿದ ರೀತಿಯಲ್ಲಿ ಹೆಮ್ಮೆಯಿಂದ ವ್ಯಕ್ತಪಡಿಸಿದ ತಂಗಿ, ಮುಂದೆ ತಾನು ತನ್ನ ತವರಿಗೆ ಹೋದಾಗ ತಾಯಿ ಇಲ್ಲದ ತವರು ಹಾಗೂ ತವರಿಗೆ ಮನೆಯ ಒಡತಿಯರಾಗಿ ಬಂದಿದ್ದ ಅತ್ತಿಗೆಯರ ಮಾರ್ಮಿಕ ಮಾತುಗಳನ್ನು ಗಮನಿಸಿ, ಮನನೊಂದು

ಅಣ್ಣನ ಹೆಂಡಿತಿ ಕಣ್ಣಿಗೆ ಒಳ್ಳೆವಳು
ಸುಣ್ಣದ ನೀರ ಒಲಿಮುಂದ
| ಇಟುಕೊಂಡು
ಎಮ್ಮೆ ಹಾಲೆಂದು ಬಡಿಸ್ಯಾಳು ||

ಹಡೆದಮ್ಮ ಇದ್ದಾಗ ನಡುಮನಿ ನನಗಿತ್ತು |
ಕಡಗದ ಕೈಯ್ಯ ಸೂಸಿ ಬಂದು | ನಡೆದಾಗ
ತುದಿಗಟ್ಟಿ ನನಗೆ ಎರವಾಯ್ತು ||

ಎನ್ನುವ ತಾಯಿ ತಂದೆಯರಿದ್ದಾಗಿನ ತನ್ನ ತವರು ಮನೆಗೂ, ನಂತರದ ತನ್ನ ಮನೆಯ ಅನುಭವವನ್ನು ದುಃಖಕರವಾಗಿ ವ್ಯಕ್ತಪಡಿಸಿರುವುದು ಕಂಡುಬರುತ್ತದೆ. ಇಷ್ಟಾದರೂ ಇವಳು ತವರಿನ ಮಮಕಾರವನ್ನು ಮರೆಯಲಾರಳು, ತನ್ನ ಅತ್ತಿಗೆಯರಿಂದ ಎಷ್ಟೇ ತೊಂದರೆಯಾದರೂ ತನ್ನ ತವರಿನ ಕುಡಿ ಚಿರಾಯುವಾಗಲೆಂದು ಅವಳಾಡಿರುವ ಮಾತುಗಳು ಜನಪದೀಯವಾದ ನುಡಿಮುತ್ತುಗಳೆನ್ನಬಹುದು.

ಹಾಳುಂಡ ತವರಿಗೆ ಏನೆಂದು ಹರಸಾಲಿ
ಹೊಳೆದಂಡೇಲಿರುವ ಕರಕೀಯ
| ಕುಡಿಹಾಂಗ
ಹಬ್ಬಲಿ ಅವರ ಸರಬಳ್ಳಿ.

ಎಂದು ತನ್ನ ತವರುಮನೆಯನ್ನೆ ಅರಸುತ್ತಾಳೆ, ಇದಕ್ಕಾಗಿಯೇ ಏನೋ ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ವಿಶಿಷ್ಟ ಸ್ಥಾನಮಾನ ನೀಡಿರುವುದು. ಇಂದಿಗೂ ನಾವು ನಮ್ಮ ದೇಶವನ್ನು ಮಾತೃಭೂಮಿ ಎನ್ನುತ್ತೇವೆ. ಮಾತೃಭಾಷೆ, ಭೂಮಿತಾಯಿ ಇತ್ಯಾದಿ ಪದಗಳಿಂದ ಕರೆಯುತ್ತೇವೆ. ಈ ಪದಗಳನ್ನು ಉಚ್ಚರಿಸುವಾಗಲೇ ಪ್ರತಿಯೊಬ್ಬರಲ್ಲಿಯೂ ಸ್ವಾಭಿಮಾನದ ಗೌರವ ಕಂಡುಬರುವುದು ಸ್ವಾಭಾವಿಕವೇ ‘ಸಂಸ್ಕೃತಿ’ ಎಂಬ ಶಬ್ದದ ಅರ್ಥವೇ ಒಂದು ರೀತಿಯಲ್ಲಿ ಧರ್ಮ, ದೇವರು, ಸತ್ಯ, ಮೋಕ್ಷ ಇತ್ಯಾದಿ ಶಬ್ದಗಳ ವಿಶಾಲತೆಯನ್ನು ಸೂಚಿಸುತ್ತದೆ. ಇದನ್ನು ಬಿಟ್ಟು ‘ಸಂಸ್ಕೃತಿ’ ಎಂಬ ಶಬ್ದಕ್ಕೆ ಇದುವರೆವಿಗೂ ಸರಿಯಾಗಿ ಯಾರು ಅರ್ಥ ನೀಡಿರುವುದು ಕಂಡುಬರುವುದಿಲ್ಲ. ಈ ದೃಷ್ಟಿಯಿಂದ ಸಭ್ಯತೆ, ನಾಗರಿಕತೆ, ವಿನಯಶೀಲತೆ, ಗುಣಗ್ರಾಹಕತೆ, ಕೃತಜ್ಞತೆ, ರಸಿಕತೆ, ವಿಚಾರಪರತೆ, ಕರ್ತವ್ಯ ದಕ್ಷತೆ, ಸತ್ಯಶೀಲತೆ, ನಾಡಿನ ಊರಿನ ಅಭಿಮಾನ ಇತ್ಯಾದಿ ಸದ್ಗುಣಗಳನ್ನು ತನ್ನ ಮಡಿಲಿನಲ್ಲಿ ಸೃಷ್ಟಿಸಿಕೊಂಡಿರುವ ಮೇಲಿನ ಜನಪದ ಹಾಡುಗಳು ಅಂದಿನಿಂದ ಇಂದಿನ ವಾಸ್ತವಿಕ ಬದುಕಿನವರೆವಿಗೂ ಮಾದರಿಯಾಗಿವೆ. ಇವುಗಳನ್ನೆ ನಮ್ಮ ಶ್ರೀಮಂತ ಸಂಸ್ಕೃತಿ ಎನ್ನಬಹುದಾಗಿದೆ.

ಅಂದಿನಿಂದ ಇಂದಿನವರೆವಿಗೂ ನಮ್ಮ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿರುವುದು ಸತಿಪತಿಗಳು, ವಿಜಯನಗರದ ಕಾಲದಲ್ಲಿನ ಅನೇಕ ಚಾರಿತ್ರಿಕ ಆಧಾರಗಳಲ್ಲಿ (ಉದಾಹರಣೆಗೆ, ಶಾಸನಗಳಲ್ಲಿ, ಸಾಹಿತ್ಯ ಗ್ರಂಥಗಳಲ್ಲಿ) ವರ್ಣರಂಜಿತವಾಗಿ ಚಿತ್ರಿತವಾಗಿರುವುದನ್ನು ಕಾಣಬಹುದಾಗಿದೆ. ಈ ಹಂತದಲ್ಲಿ ಜನಪದರ ಹಾಡುಗಳು ಹೆಚ್ಚಿನ ಬೆಳಕನ್ನು ನೀಡುತ್ತವೆ. ಈ ಹಿಂದೆ ಹೆಣ್ಣು ವಿವಾಹದ ಸಮಯ, ವಿವಾಹದನಂತರದ ತಂದೆ ತಾಯಿಯರ ನುಡಿಮುತ್ತಿಗಳಲ್ಲಿ ನಮ್ಮ ಸಂಸ್ಕೃತಿಯನ್ನು ನೋಡಿದೆವು. ಮದುವೆಯಾದ ಹೆಣ್ಣು ತನ್ನ ಗಂಡನ ಮನೆಗೆ ಬಂದಾಗ ತನ್ನ ಹುಟ್ಟಿನ ಪರಿಸರವನ್ನು ಮರೆತು ಹೊಸ ಹೊಸ ಜನರ, ಅವರ ಭಾವನೆಗಳ, ಹೊಸ ಪರಿಸರಕ್ಕೆ ಹೊಂದಿಕೊಂಡು ಮದುವೆಯೆಂಬುವುದು ಹೆಣ್ಣಿನ ದುಖಕ್ಕಾಗಿ ಮಾಡಿದ ಸಂಕೋಲೆಯಲ್ಲ ಎಂಬ ಮಾತನ್ನು ನಿಜ ಮಾಡುವಂತಾಗುತ್ತಾಳೆ. ತನ್ನ ಜೀವನದ ಸಾರ್ಥಕತೆಗಾಗಿ, ಗಂಡು ಹೆಣ್ಣುಗಳು ತಮ್ಮ ಜೀವನದ ಹರಕೆಯನ್ನು ಪರಸ್ಪರ ತುಂಬಿಕೊಳ್ಳುವುದಕ್ಕಾಗಿ, ಸಮಾಜವು ಕೈಗೊಂಡ ಒಂದು ಪವಿತ್ರ ವ್ಯವಸ್ಥೆಯೇ ಈ ಮದುವೆ ಎಂದು ಮನವರಿಕೆ ಮಾಡಿಕೊಳ್ಳುತ್ತಾಳೆ. ಇಂಥ ಸಮಯದಲ್ಲಿ ಸೃಷ್ಟಿಸಿಕೊಂಡಿರುವ ಜನಪದ ಪದಗಳು ಒಂದರ್ಥದಲ್ಲಿ ಜೀವನದ ಸಾರ್ಥಕತೆ, ರಸಿಕತೆಯಿಂದ ಕೂಡಿ ಮಾನವ ಸಂಸ್ಕೃತಿಯನ್ನೇ ಶ್ರೀಮಂತಗೊಳಿಸಿವೆ. ಉದಾಹರಣೆಗೆ, ಗಂಡ ಹೆಂಡಿರ ನಡುವೆ ಜಗಳ ಬರುವುದು ಸಹಜವೇ, ಆದರೆ ಇಂಥಹ ಜಗಳಕ್ಕೆ ಸಮಾಧಾನಕರವಾದ ಉತ್ತರ ನೀಡಿರುವುದು ಈ ಕೆಳಗಿನ ಸಾಲುಗಳಿಂದ ಗಮನಿಸಬಹುದು.

ಗಂಡ ಹೆಂಡಿರ ಜಗಳ ಗಂಧತೀಡಿದಾಂಗ
ನಿಂಗಕ್ಕೆ ನೀರು ಎರೆಧಾಂಗ
| ಹಿರೆಹೊಳೆಯ
ಗಂಗವ್ವ ಸಾರಿ ಹರಿದಾಂಗ ||

ಈ ಜನಪದದ ಸಾಲುಗಳು ಗಂಡ ಹೆಂಡತಿಯರಿಬ್ಬರೂ ಪರಸ್ಪರ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗುತ್ತವೆ. ಇಷ್ಟಾದರೂ ಒಮ್ಮೊಮ್ಮೆ ಗಂಡ ಕೋಪಗೊಳ್ಳುವುದುಂಟು. ಇಂತಹ ಸಮಯದಲ್ಲಿ ತಾಳ್ಮೆಗೆ ಹೆಸರಾದ ಹೆಂಡತಿಯೇ ತಗ್ಗಿ ನಡೆದು ಅವನ ಕೋಪಕ್ಕೆ ಈ ಕೆಳಗಿನ ರೀತಿಯಲ್ಲಿ ಮುದ್ದು ನೀಡಬಯಸುತ್ತಾಳೆ.

ಮಡದೀನ ಬಡಿದಾನು, ಮನದಾಗ ಮರುಗ್ಯಾನು |
ಒಳಗ್ಹೋಗಿ ಕಾಲ ಹಿಡಿದಾನು | ಕೇಳ್ಯಾನು
ನಾಹೆಚ್ಚೂ ನಿನ್ನ ತವರ‍್ಹೆಚ್ಚೊ ||

ಎಂಬ ಅರ್ಥ ಗಾಂಭೀರ್ಯವಾದ ಹೆಣ್ಣು ಗಂಡುಗಳ ಅಂತರಂಗದ ಸಂಬಂಧವನ್ನು ಸೂಚಿಸುತ್ತದೆ. ಗಂಡ ಹೆಂಡತಿಯರ ನಡುವೆ ನಡೆಯುವ ಒಂದು ದೊಡ್ಡ ಕಥೆಯೇ ಈ ಚಿಕ್ಕ ಸಾಲುಗಳಲ್ಲಿ ಸೇರಿಕೊಂಡಿದೆ ಎನ್ನಬಹುದು. ಸತಿಪತಿಗಳ ಪ್ರಣಯದ ಒಂದು ಸುಂದರ ಚಿತ್ರಣವನ್ನು ನಮ್ಮ ಜನಪದರು ತುಂಬ ಸೊಗಸಾಗಿ ರಚಿಕೆಯ ಪದಗಳಿಂದ ವರ್ಣಿಸಿರುವುದಕ್ಕೆ ಬಡತನವಿಲ್ಲ. ಆದರ್ಶ ಮಡದಿಯು ತನ್ನ ಗಂಡನೇ ಜೀವನದ ಸರ್ವಸ್ವವೆಂದು ತಿಳಿದು ಅವನಿಂದ ತನ್ನ ಜೀವನ ಹಸನಾಗಲೆಂದೆ ತನ್ನಲ್ಲಿಯೇ ಹೇಳಿಕೊಳ್ಳುವ ಸುಂದರ ಜನಪದ ಸಾಲುಗಳು ಮಹತ್ವವೆನ್ನಿಸುತ್ತವೆ. ಉದಾಹರಣೆಗೆ,

ಕಾಣದೆ ಇರಲಾರೆ ಕನ್ನಡಿ ಮುಖದವರ |
ಕಾಮನಿಗಿಂತ ಚಲುವರ | ಚೆನ್ನಿಗರ |
ಕಾಣದರಗಳಿಗೆ ಇರಲಾರೆ ||

ಎಲ್ಲೆಲ್ಲಿ ನೋಡಿದರೆ ನಲ್ಲನಂಥವರಿಲ್ಲ |
ಹಲ್ಲು ನೋಡಿದರೆ ಹವಳವು | ನಲ್ಲನ
ಸೊಲ್ಲು ಕೇಳಿದರೆ ಸಮಾಧಾನ ||

ಹೇಸಗೆಯ ಬದುಕಿಗೆ ಆಸೆಯ ಮಾಡಲಿಲ್ಲ |
ರೇಸಿಮೆಯ ನುಡುವ ನನ್ನ ದೊರೆ | ರಾಯರ
ಆಸೆ ಮಾಡೇನು ಅನುಗಾಲ ||

ಕೂಲಿ ಮಾಡಿದರೇನು, ಕೋರೆ ಹೊತ್ತರೇನು
ನಮಗ ನಮರಾಯ ಬಡವೇನ | ಬಂಗಾರ
ಮಾಲು ಇದ್ದಾಂಗ ಮನೆಯಾಗ

ಎನ್ನುವ ಮಾತುಗಳು ಆಕೆಯ ಸುಂದರ ಸುಮಧುರ ದಾಂಪತ್ಯ ಜೀವನದ ಪ್ರತಿಬಿಂಬಗಳಲ್ಲದೆ ಮತ್ತೇನು? ನಮ್ಮ ಸಂಸ್ಕೃತಿಯಲ್ಲಿ ಎಂದೋ ಜನರು ಸಂಪತ್ತಿಗೆ ಆಸೆ ಪಟ್ಟವರಲ್ಲ. ಅದರ ಬದಲಿಗೆ ಒಲಿದ ಹೆಣ್ಣಿಗೆ ಪುರುಷನೆ ಇಂದ್ರ, ಚಂದ್ರ, ಸರ್ವಸ್ವವನ್ನಾಗಿ ಕಾಣಿಸುವುದಾಗಿರುತ್ತದೆ. ಜಾತ್ರೆಗೆ ಅಥವಾ ನೆಂಟರ ಮನೆಗೆ ಹೋದ ತನ್ನ ಗಂಡನನ್ನು ನೆನೆದು ಅವಳಾಡುವ ಪದಗಳೇ ಇಲ್ಲಿನ ಸಂಸ್ಕೃತಿಗೆ ಸಾಕ್ಷಿಯಂತಿವೆ.

ಯಾಲಕ್ಕಿ ಕಾಯ ಸುಲಿದು ಯಾವ ಅಡಗಿ ಮಾಡಲಿ |
ಊರಿಗ್ಹೋಗಾರ ರಾಯರು | ಬಾರದೆ
ಯಾವಡಗಿ ಮಾಡಿ ಫಲವೇನು ||

ಎಂದು ತನ್ನ ಗಂಡನಿಲ್ಲದ ಮನೆ ಅವಳಿಗೆ ಕತ್ತಲಾಗಿ ಕಂಡಿರುವುದು ನಮ್ಮ ಸಂಸ್ಕೃತಿಗೆ ಜೀವತುಂಬುತ್ತದೆ. ಈ ವಿಷಯದಲ್ಲಿ ಕೇವಲ ಹೆಂಡತಿ ಮಾತ್ರ ಈ ರೀತಿಯ ವಿರಹವೇದನೆಯನ್ನು ಅನುಭವಿಸುವುದಿಲ್ಲ. ಹೆಂಡತಿಯು ತವರು ಮನೆಗೆ ಹೋಗಿದ್ದಾಗ ಗಂಡನಾದವನು ತಾನು ಅನುಭವಿಸುವ ಕಷ್ಟವನ್ನು ವ್ಯಕ್ತಪಡಿಸುವ ರೀತಿಯೇ ಬೇರೆಯಾಗಿರುತ್ತದೆ. ಉದಾಹರಣೆಗೆ :

ಅಡಗೀಯ ಮನೆಯಾಗ ಮಡದೀಯ ಸುಳಿವಿಲ್ಲ |
ಅಡಗಿ ಬಾಯಿಗೆ ರುಚಿಯಿಲ್ಲ | ಹಡೆದವ್ವ
ಮಡದಿ ತವರಿಗೆ ಹೋಗ್ಯಾಳ ||

ಎಂದು ತನ್ನ ತಾಯಿಯ ಅಡುಗೆಯೇ ಅವನಿಗೆ ರುಚಿಸಿದಂತೆ ಭಾಸವಾಗುತ್ತದೆ. ಮದುವೆಯಾಗುವ ಸಮಯ, ಮದುವೆಯ ಸಮಯ, ಮದುವೆಯ ನಂತರದ ಜೀವನ ಹಾಗೂ ಗಂಡ ಹೆಂಡಿರ ಸುಮಧುರ ಸಂಬಂಧದ ಬಗ್ಗೆ ಹುಟ್ಟಿರುವ ಜನಪದಗಳಲ್ಲದೆ ಮದುವೆಯೇ ಆಗದೆ ಇರುವ ಯುವಕ ಯುವತಿಯರಲ್ಲಿ ಮೋಹಕವಾದ ಸನ್ನಿವೇಶಗಳನ್ನು ಸೃಷ್ಟಿಸುವ ಜನಪದ ಗೀತೆಗಳನ್ನು ಕಾಣಬಹುದಾಗಿದೆ. ಇವುಗಳು ಹೆಚ್ಚಾಗಿ ಸ್ವಾರಸ್ಯವು ಹಾಗೂ ರಸಿಕತೆಯಿಂದ ಕೂಡಿರುವುದೂ ಆಗಿರುತ್ತವೆ. ಸಾಮಾನ್ಯವಾಗಿ ಹಿಂದೆ ಮದುವೆಗೆ ಬಂದ ಹೆಣ್ಣು ಗಂಡುಗಳು ಅನೇಕ ಸಂದರ್ಭಗಳಲ್ಲಿ ಸಂಧಿಸುವ ಅವಕಾಶ ಹಳ್ಳಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. (ಇದರಿಂದ ಇಂದೇನೋ ಹೊರತಾಗಿಲ್ಲ.) ಅವರಲ್ಲಿ ಪರಸ್ಪರ ಮದುವೆಯಾಗುವವರಿರಬಹುದು. ಆಗುವ ನಿರೀಕ್ಷೆಯವರಿರಬಹುದು ಅಥವಾ ಮೇಲಿನವೆರಡೂ ಇಲ್ಲದಿರಬಹುದು. ಇಂತಹ ಸನ್ನಿವೇಶದಲ್ಲಿ ತಮ್ಮದೆ ಮಿತಿಯೊಳಗೆ ಸರಸ ಸಲ್ಲಾಪಗಳನ್ನು ಸೂಚಿಸುವುದರ ಜೊತೆಗೆ ಒಮದು ಸಾಮಾಜಿಕ ಬದುಕಿಗೆ, ರೀತಿ ನೀತಿಗಳಿಗೆ ಒಳಪಟ್ಟು ಮೌಲ್ಯಯುತ ಜನಪದ ಗೀತೆಗಳು ಸೃಷ್ಟಿಗೊಂಡು ಇಂದಿನ ಆಧುನಿಕ ರಸಿಕ ಸಾಹಿತ್ಯವುನಾಚುವಂತೆ ಮಾಡಿವೆ. ಉದಾಹರಣೆಗೆ,

ನೀರಿಗೆ ಹೋಗೋಳೆ, ನೀಲದುಂಗುರದವಳೆ
ವೈಯ್ಯಾರಿ ಸಣ್ಣ ದನಿಯವಳೇ | ಮಾವನ ಮಗಳೆ
ವೈಯ್ಯಾರ ಬಿಟ್ಟು ತೆರಹೇಳೆ

ಎಂದು ಬಾವಿ ನೀರಿಗೆ ಹೋಗುತ್ತಿರುವವಳನ್ನು ನಿಲ್ಲಿಸಿಕೊಂಡು ರೇಗಿಸುತ್ತಾನೆ. ಅಷ್ಟೇ ಅಲ್ಲದೆ ಆಕೆಯನ್ನು ತಾನೇ ಮದುವೆಯಾಗುವುದೆಂಬ ಧೈರ್ಯದಿಂದ ಅವಳ ಸೆರಗನ್ನು ಹಿಡಿಯುತ್ತಾನೆ. ಅದಕ್ಕೆ ಅವಳ ವೈಯಾರದ ನಾಚಿಕೆ ಹಾಗೂ ಮನಸಿಲ್ಲದ ಮುನಿಸಿನಿಂದ ಸಿಡಿದು ನಿಂತು

ಸೀರೆ ಸೆರಗ ಬಿಡೋ
ಸೀರೆ ಸೆರಗ ಬಿಡೋ ನನಗೆಣಿಯ
ಮೂರ ಬೀದಿ ಜನರು ನೋಡ್ಯಾರು
||

ಎಂದು ಹೇಳಿ ವೈಯಾರದಿಂದ ಮುಂದೆ ಹೋಗಲು ಯತ್ನಿಸಿದರೆ ಅವನು ಸುಲಭವಾಗಿ ಅವಳ ಸೆರಗ ಬಿಡಲಾರದೆ ಅವಳ ಸೌಂದರ್ಯವನ್ನು ಹೊಗಳುವುದರ ಮೂಲಕ ಆಕೆಯ ಮನಸ್ಸನ್ನು ಒಲಿಸಿಕೊಳ್ಳಲು ಬಯಸುವ ರೀತಿ ಎಂದರೆ,

ಮಾವನ ಮಗಳೇ ಕೋಗಿಲೆ ದನಿಯೋಳೆ
ತಾವರೆ ಮೊಗ್ಗಿನ ಮೊಲೆಯೋಳೆ
| ಮಾವನ ಮಗಳೆ
ಬಾಯಾರಿ ಬಂದೇ ನೀರ್ ಕೊಡೆ ||

ಎಂದು ಅರ್ಥವತ್ತಾದ ತನ್ನ ಬಯಕೆಯನ್ನು ಸೂಚಿಸುತ್ತಾನೆ. ಇಂತಹ ಸನ್ನಿವೇಶದಲ್ಲಿ ಪದ್ಯದ ಸಾಲುಗಳು ಕಾಮ ಪ್ರೇಮಗಳ ಸಮ್ಮಿಳನದ ವಾಸ್ತವ ದೃಷ್ಟಿಯಿರುವುದು ಕಂಡು ಬರುತ್ತದೆ. ಮನುಷ್ಯನು ಸಹಜ ಪ್ರವೃತ್ತಿಗಳನ್ನು ಅರಿತು ಅನುಸರಿಸಿ ಆ ಮೂಲಕ ಅವುಗಳನ್ನು ಅನುಷ್ಟಾನಕ್ಕೆ ತರುವ ಪ್ರಯತ್ನವನ್ನು ಅಂದಿನ ಜನಪದರು ತಮ್ಮ ಸಂಸ್ಕೃತಿಯಲ್ಲಿ ಬೆಸೆದುಕೊಂಡಿದ್ದರೆನ್ನಬಹುದು.

ನಮ್ಮ ಜನಪದರು ಸಂಸಾರದ ಸರಸ ವಿರಸಗಳನ್ನು ಹೇಳುವಾಗ ‘ಸಂಗಾತಿ ಹೆಣ್ಣು ಜಂಬು ನೇರಳೆ ಹಣ್ಣು’ ‘ಮುಖಭಾವ ಮಿಂಚು ಹೊಳೆದಂತೆ’ ‘ಮೈಬಣ್ಣ ನಿಂಬೆ ಹಣ್ಣಂತೆ’ ಎಂದು ತನ್ನೆಲ್ಲಾ ರಸಿಕತೆಯ ಭಾವನೆಯನ್ನು ವ್ಯಕ್ತಪಡಿಸುವುದು ಕಂಡು ಬಂದರೆ, ಮುಂದುವರೆದು ಅವಳ ಸೀರೆಯ ನೆರಿಗೆಯನ್ನು ಬೀಸಣಿಗೆಗೂ, ಗುಲಗಂಜಿಗೂ ಜಡೆಯನ್ನು ಜಾಲದ ಹೂವಿಗೂ, ನಾಗರ ತೆಕ್ಕೆಗೂ, ಬಳಕುವ ಬಾಲೆಯನ್ನು ನಲಿದಾಡುವ ನವಿಲಿಗೂ ಹೋಲಿಸಿ ಅವರ ರಸಿಕ ಸಂಸ್ಕೃತಿ ಮೆರೆದಿರುವುದಕ್ಕೆ ಇಂದಿಗೂ ಅವು ನಿದರ್ಶನವಾಗಿವೆ. ಶತಶತಮಾನಗಳಿಂದಲೂ ನಮ್ಮ ಜನಪದರ ಮಾದರಿಯಲ್ಲಿಯೇ ಮುಂದುವರೆದ ನಾವು ಕೆಲವು ಬದಲಾವಣೆಗಳೊಂದಿಗೆ ಈ ಜಾಡಿನಲ್ಲಿಯೇ ಮುಂದುವರಿದಿರುವುದಕ್ಕೆ ಅಂದಿನ ಭದ್ರವಾದ ಬುನಾದಿಯೇ ಕಾರಣವಾಗಿದೆ.

.೪. ಜಾತಿ ವ್ಯವಸ್ಥೆ

ಭವ್ಯ – ಸುಂದರ – ವೈಭವದ ಸಾಮ್ರಾಜ್ಯವೆಂದು ಇತಿಹಾಸಕಾರರಿಂದ ಕರೆಸಿಕೊಂಡ ವಿಜಯನಗರ ಸಾಮ್ರಾಜ್ಯದ ನಿಜವಾದ ಭವ್ಯತೆ ಸುಂದರತೆಯ ಹಾಗೂ ಅದರ ಉಜ್ವಲವಾದ ಸಂಸ್ಕೃತಿಯನ್ನು ನಿರ್ದಿಷ್ಟವಾಗಿ ಅರ್ಥ ಮಾಡಿಕೊಳ್ಳಲು ಅಂದಿನ ಕಾಲದಲ್ಲಿದ್ದ ಜಾತಿ ವ್ಯವಸ್ಥೆ ಹಾಗೂ ಅದರ ವಿವಿಧ ಸ್ತರಗಳ ಅಧ್ಯಯನವು ಅತ್ಯಾವಶ್ಯಕ್ವೆನ್ನಿಸುತ್ತದೆ. ವಿಜಯನಗರದಲ್ಲಲ್ಲದೆ ಭರತ ಖಂಡದಲ್ಲಿಯೇ ಜಾತಿಯು ಸಮಾಜದ ಮೂಲಭೂತ ಹಾಗೂ ವಿಶಿಷ್ಟವಾದ ಸಂಸ್ಥೆಯಾಗಿ ಬೆಳೆದುಬಂದಿದೆ ಎಂದರೆ ತಪ್ಪಾಗದು. ಏಕೆಂದರೆ ಭಾರತದ ಜಾತಿ ವ್ಯವಸ್ಥೆಯನ್ನು ಹೋಲುವ ಕೆಲವು ಪದ್ಧತಿಗಳಂತೂ ಪ್ರಪಂಚದ ಇತರೆ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುವುದೇ ಇಲ್ಲ. (ಜಪಾನ್, ಇಂಡೋಚೈನ, ಇಂಡೋ ನೇಷ್ಯ, ಬಲೋಚಿಸ್ಥಾನ ಮುಂತಾದವುಗಳಲ್ಲಿ ಅಲ್ಪ ಪ್ರಮಾಣದಲ್ಲಿ ಕಾಣಬಹುದು)ವಿಜಯನಗರ ಸಾಮ್ರಾಜ್ಯದಲ್ಲಿ ಜಾತಿಯು ಸಾಮ್ರಾಜ್ಯದ ಹಾಗೂ ಸಮಾಜದ ವಿಶಿಷ್ಟ ಸಂಸ್ಥೆಯಾಗಿತ್ತೆಂದು ಹೇಳಿದರೆ ತಪ್ಪಾಗಲಾರದು.

ಜಾತಿ ಪದ್ಧತಿಯು ವಿಜಯನಗರ ಸಾಮ್ರಾಜ್ಯದಾದ್ಯಂತ ಸಾಮಾಜಿಕ ಸಂಘಟನೆಯ ಎಲ್ಲಾ ಮೂಲಗಳಲ್ಲಿಯೂ ತನ್ನದೆ ಆದ ರೀತಿಯಲ್ಲಿ ಆಕ್ರಮಿಸಿಕೊಂಡಿತು. (ಇಂದು ಅಂದಿಗಿಂತಲೂ ಹೆಚ್ಚಾಗಿಯೇ ಆಕ್ರಮಿಸಿಕೊಳ್ಳುತ್ತಿದೆ) ಅಂದಿನ ಇತಿಹಾಸಕ್ಕೆ ಸಂಬಂಧಿಸಿದ ಏನೆಲ್ಲಾ ದಾಖಲೆಗಳು ದೊರಕಿಸಿದರೂ ಸಹ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಜಾತಿಯಿಂದ ಪ್ರಭಾವಿತವಾಗಿರದ ಅಂಶಗಳು ವಿರಳವೆಂದೇ ಹೇಳಬಹುದು. ಜನರು ಆಚರಿಸಿಕೊಂಡು ಬರುತ್ತಿದ್ದ ಸಂಪ್ರದಾಯಗಳು, ಹಬ್ಬ, ಹರಿದಿನ, ಜಾತ್ರೆ, ಉತ್ಸವ ಮುಂತಾದವುಗಳು ಹೇಗೆ ತಮ್ಮ ಜೀವನದಲ್ಲಿ ಮಹತ್ವದ ಸ್ಥಾನವನ್ನು ಹೊಂದಿವೆಯೋ ಹಾಗೆಯೇ ಸಾಮಾಜಿಕ ವ್ಯವಸ್ಥೆಯ ಆದಿ ಮತ್ತು ಅಂತ್ಯ ಎಲ್ಲವೂ ಕೂಡ ಜಾತಿಯೇ ಆಗಿತ್ತೆಂದರೆ ಉತ್ಪ್ರೇಕ್ಷೆಯೆನಿಸಲಾರದೇನೋ. ಇದು ಒಂದು ರೀತಿಯಲ್ಲಿ ಹಿಂದೂ ಧರ್ಮದ ಹಕ್ಕನ್ನು ನಿರ್ಧರಿಸುತ್ತದೆನ್ನಬಹುದು. ಒಬ್ಬ ಹಿಂದೂ ಧರ್ಮಿಯನು ಜನನದಿಂದ ಮರಣದವರೆಗೂ ಮತ್ತು ಅದರಾಚೆಯೂ ಕೂಡ ಜಾತಿಯ ಆಧಾರದಲ್ಲಿಯೇ ಬದುಕುವಂತಾಗಿದೆ. ಹೀಗಾಗಿ ಅಂದು ಜಾತಿಯೇ ಎಲ್ಲವನ್ನು ನಿರ್ಧರಿಸುತ್ತಿತ್ತು. ಉದಾಹರಣೆಗೆ : ಒಬ್ಬ ವ್ಯಕ್ತಿ ಯಾರನ್ನು ಮದುವೆಯಾಗಬೇಕು, ಹೇಗೆ ಮದುವೆಯಾಗಬೇಕು, ಎಲ್ಲಿ ವಾಸಿಸಬೇಕು, ಹೇಗೆ ಬದುಕಬೇಕು, ಏನನ್ನು ತಿನ್ನಬೇಕು, ಹೇಗೆ ತಿನ್ನಬೇಕು, ಎಲ್ಲಿ ಕೆಲಸ ಮಾಡಬೇಕು, ಹೇಗೆ ಕೆಲಸ ಮಾಡಬೇಕು, ಎಲ್ಲಿ ಹಾಗೂ ಹೇಗೆ ಅವನು ಸಾಯಬಹುದು, ಅವನನ್ನು ಎಲ್ಲಿ ಶವಸಂಸ್ಕಾರ ಮಾಡಬೇಕು, ಹೇಗೆ ಮಾಡಬೇಕು ಹಾಗೂ ಇನ್ನೂ ಮುಂದುವರೆದು ಸಾವಿನ ನಂತರ ಅವನಿಗೆ ಏನಾಗುತ್ತದೆ ಎನ್ನುವ ಪ್ರತಿಯೊಂದು ವಿಷಯವೂ ಕೂಡ ಜಾತಿಯಿಂದಲೇ ನಿರ್ಣಯವಾಗುತ್ತಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ವಿಜಯನಗರದರಸರ ಕಾಲದಲ್ಲಿ ಜಾತಿಯೇ ಅಂದಿನ ಜೀವನದ ಎಲ್ಲ ಅಂಶಗಳನ್ನು ನಿರ್ಧರಿಸುತ್ತಿತ್ತೆನ್ನಬಹುದು.

ಈ ಕೆಟ್ಟ ಸಾಮಾಜಿಕ ಪಿಡುಗನ್ನು ನಿರ್ಮೂಲನೆ ಮಾಡಲು ವಿಜಯನಗರದ ಅರಸರ ಕಾಲದಲ್ಲಿಯೇ ಅಲ್ಲದೆ ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ನಡೆದ ಕೆಲವು ಪ್ರಯತ್ನಗಳನ್ನು ಇಲ್ಲಿ ಉದಾಹರಣೆಯಾಗಿ ನೀಡಬಹುದು, ಜಾತಿ ಪದ್ಧತಿಯ ವಿರುದ್ಧ ಯುದ್ಧವನ್ನೇ ಸಾರಿದವನೆಂದರೆ ಪ್ರಾಚೀನ ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕರಲ್ಲಿ (ಕ್ರಿ.ಪೂ.ದಲ್ಲಿಯೇ) ಗೌತಮ ಬುದ್ಧನು ಮೊದಲಿಗ, ಈ ಮಹಾನ್ ವ್ಯಕ್ತಿಯ ಧರ್ಮ ಹಾಗೂ ತತ್ವ ಬೋಧನೆಯು ಈತನ ಜೀವಿತ ಕಾಲದಲ್ಲಿ ಜಾತಿಪದ್ಧತಿಯ ವಿರುದ್ಧ ಕೈಗೊಂಡ ನಿರ್ಣಯಗಳಿಂದ ದೇಶದಲ್ಲಿ ಇನ್ನೇನು ಜಾತಿ ಎಂಬ ಪದವೆ ಸಂಪೂರ್ಣವಾಗಿ ಕಣ್ಮರೆಯಾಗುತ್ತದೆಯೇನೋ ಎಂಬುವಷ್ಟರ ಭ್ರಮೆಯನ್ನು ಉಂಟುಮಾಡಿತು. ಆದರೆ ಅವನ ನಂತರದ ಘಟನೆಗಳು ಈ ಅಭಿಪ್ರಾಯವನ್ನು ಖಚಿತಪಡಿಸುವಲ್ಲಿ ವಿಫಲವಾದವು ಪ್ರಾರಂಭದ ಸಮಾಜ ಸುಧಾರಕರ ಉತ್ಸಾಹ ಕಳೆಗುಂದಿ, ಜಾತಿ ಪದ್ಧತಿಯು ನಿಧಾನವಾಗಿ ತಾನಾಗಿಯೇ ಪುನಃ ಪ್ರತಿಸ್ಥಾಪಿಸಲ್ಪಟ್ಟಿತು. ಇಂಥ ಸಮಯದಲ್ಲಿ ಜಾತಿಯು ತನ್ನ ವಿವಿಧ ಮುಖವನ್ನೊತ್ತ ಕವಲುಗಳನ್ನು ಹೊಸ ಧರ್ಮದಲ್ಲಿ ತೋರಿಸಿತು. ಆ ಹೊಸ ಧರ್ಮದ ಹಿಂಬಾಲಕರಲ್ಲಿ ಹಾಗೂ ಅದರದೇ ಆದ ಚೌಕಟ್ಟಿನೊಳಗೆ ವಿವಿಧ ಜಾತಿ ಗುಂಪುಗಳಾಗಿ ಛಿದ್ರಛಿದ್ರವಾಗಿ ವಿಂಗಡಿಸಲ್ಪಟ್ಟಿತು.

ಬುದ್ಧನ ನಂತರ ಭಾರತದ ಇತರ ಭಾಗಗಳಲ್ಲಿ ಅನೇಕ ಮಹಾನ್ ವ್ಯಕ್ತಿಗಳು ಜಾತಿಪದ್ಧತಿಯನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದರು. ಉದಾಹರಣೆಗೆ ಹೇಳುವುದಾದರೆ ಮಹಾರಾಷ್ಟ್ರದಲ್ಲಿ ಸಂತಜ್ಞಾನೇಶ್ವರ ಹಾಗೂ ನಾಮದೇವ, ಗುಜರಾತಿನಲ್ಲಿ ನರ್ಸಿಮೆಹ್ತಾ, ಬಂಗಾಳದಲ್ಲಿ ಚೈತನ್ಯ ಮಹಾಫ್ರಭು, ಉತ್ತರ ಪ್ರದೇಶದಲ್ಲಿ ಮಹಾತ್ಮ ಕಬೀರ, ಅಂದ್ರದಲ್ಲಿ ವಲ್ಲಭಚಾರ್ಯರುಗಳಾದರೆ ಕನ್ನಡ ನಾಡಿನಲ್ಲಿ ಬಸವೇಶ್ವರ ಮತ್ತು ಅಕ್ಕಮಹಾದೇವಿಯರುಗಳು ಜಾತಿರಹಿತ ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸಿ ಕ್ರಾಂತಿ ನಡೆಸಿರುವುದ ನಮಗೆಲ್ಲ ತಿಳಿದಿರುವ ವಿಷಯವೆ. ಆದರೆ ಅವರ ಕ್ರಾಂತಿ, ಪ್ರಯತ್ನಗಳೆಲ್ಲವೂ ಕೂಡ ಇಂದಿಗೆ ಹೋಲಿಸಿ ನೋಡಿದರೆ ಸಂಪೂರ್ಣ ವ್ಯರ್ಥವಾಗಿ ಶೂನ್ಯರೂಪದಲ್ಲಿ ಕಾಣಿಸುತ್ತದೆ.