.೫. ದೇವದಾಸಿಯರು ಮತ್ತು ವೇಶ್ಯೆಯರು

ವೇಶ್ಯಾವಾಟಿಕೆಯು ವಿಜಯನಗರದಲ್ಲಿ ಒಂದು ರಾಜಪೋಷಿತವಾದ ವೃತ್ತಿಯಾಗಿದ್ದಿತ್ತು ಎಂದು ಹೇಳುವುದಕ್ಕೆ ಅನೇಕ ಆಧಾರಗಳು ದೊರಕುತ್ತವೆ. ಪುರುಷನೊಂದಿಗೆ ಸ್ತ್ರೀಯೊಬ್ಬಳು ತಾತ್ಕಾಲಿಕವಾಗಿ ಮಾಡಿಕೊಳ್ಳುವ ಲೈಂಗಿಕ ಒಪ್ಪಂದವೇ ವೇಶ್ಯಾವೃತ್ತಿ. ಇದನ್ನು ಸಮಾಜದಲ್ಲಿ ಆಕ್ರಮ ಲೈಂಗಿಕ ಸಂಬಂಧವೆಂತಲೂ ಭಾವಿಸಲಾಗುತ್ತದೆ. ಪ್ರತಿಯೊಂದು ಸಮಾಜವೂ ಸಹ ಇದನ್ನು ಕೆಟ್ಟದೆಂದು ಹೇಳುತ್ತಲೆ ತಮ್ಮ ತಮ್ಮ ವ್ಯವಸ್ಥೆಯಲ್ಲಿ ಮಾರ್ಪಾಟು ಮಾಡಿಕೊಂಡೆ ಬರುತ್ತಲಿವೆ. ವಿಜಯನಗರದ ಕಾಲದಲ್ಲಿಯೇ ಅಲ್ಲದೆ ನಮ್ಮ ಪ್ರಾಚೀನ ಭಾರತದ ಚರಿತ್ರೆಯನ್ನು ಗಮನಿಸುವುದಾದರೂ ರಾಜರ ಆಸ್ಥಾನದಲ್ಲಿಯೇ ಎಲ್ಲಾ ವೃತ್ತಿಗಳಿಗಿಂತಲೂ ಸ್ವಾಭಾವಿಕ ವೃತ್ತಿಯಾಗಿ ಬೆಳೆದುಬಂದಿರುವುದು ಕಂಡುಬರುತ್ತದೆ. ವಿಜಯನಗರದಲ್ಲಿ ವೇಶ್ಯಾಪದ್ಧತಿಯು ಆಳವಾಗಿ ಬೇರೂರಲು ಅನೇಕ ಕಾರಣಗಳನ್ನು ಕೊಡಬಹುದು, ಪ್ರಮುಖವಾಗಿ

ಅ. ಬಡತನ
ಆ. ಅಜ್ಞಾನ
ಇ. ಆಸ್ಥಾನದ ನೃತ್ಯಗಾರ್ತಿಯರು ಹಾಗೆ ವೇಶ್ಯಾವೃತ್ತಿ
ಈ. ಯುದ್ಧದ ಸಂದರ್ಭದಲ್ಲಿ ವೇಶ್ಯಯರಿಗೂ ಕನ್ಯೆಯರಿಗೂ ಸ್ಥಾನಮಾನ
ಉ. ಬದುಕಲು ಬೇರೆ ಮಾರ್ಗವಿಲ್ಲದೆ ವೇಶ್ಯಾವೃತ್ತ ಕೈಗೊಂಡಿದ್ದು.

ವಿದೇಶಿ ಪ್ರವಾಸಿಗನಾದ ಬಾಬೋಸಾನು “ಕೆಲವು ಶ್ರೀಮಂತ ವೇಶ್ಯೆಯರು ಬಡತನದ ಬೇಗೆಯಲ್ಲಿರುವ ಪೋಷಕರನ್ನು ತಮ್ಮ ಹೆಣ್ಣು ಮಕ್ಕಳನ್ನು ವೇಶ್ಯವೃತ್ತಿಗೆ ಕಳುಹಿಸಲು ಒತ್ತಾಯಿಸುತ್ತಾರೆ. ಇ. ಸಂದರ್ಭದಲ್ಲಿ ತಮ್ಮ ತಮ್ಮ ಮಕ್ಕಳ ಮಾರಾಟ ಅಥವಾ ವೃತ್ತಿ ಪರಿಣಿತಿಗಾಗಿ ಅಂಥವರ ಹತ್ತಿರ ಕಳುಹಿಸುತ್ತಾರೆ” ಎಂದು ಬರೆದಿರುವನು.

ಗಂಡ ಸತ್ತ ನಂತರ ಹೆಂಡಿತಿಯು ಗಂಡನ ಚಿತೆಯಲ್ಲಿಯೇ ಜೀವಂತವಾಗಿ ಬಿದ್ದು ಸಾಯುವುದನ್ನು “ಸತಿಸಹಗಮನ” ಎಂದು ಕರೆಯುವುದು, ಇಂಥ ಸಂದರ್ಭದಲ್ಲಿ ಹೆಂಡತಿಯು ಸಹಗಮನ ಮಾಡದೆ ಉಳಿದುಕೊಂಡರೆ ಅಂಥವಳನ್ನು ಅಗೌರವದಿಂದ ಕಾಣಲಾಗುತ್ತಿತ್ತು. ಅವರ ತಲೆಯನ್ನು ಬೋಳಿಸಿ ಮನೆತನಕ್ಕೆ ಅಮಂಗಳವೆಂದು ಬಗೆದು ಹೊರಗೆ ಕಳುಹಿಸುವುದು, ಕೊನೆಗೆ ದಿಕ್ಕಿಲ್ಲದೆ ಅವಳು ದೇವಾಲಯವೊಂದರಲ್ಲಿ ದೇವದಾಸಿಯಾಗಿ ನಂತರ ವೇಶ್ಯಾವೃತ್ತಿಯಲ್ಲಿ ತೊಡಗುವುದಾಗಿ ಬಾರ್ಬೋಸಾನು ಹೇಳಿದ್ದಾನೆ.

ವಿಜಯನಗರದ ಅರಸರು ಯುದ್ಧ ಸಂದರ್ಭದಲ್ಲಿಯೂ ಸೈನಿಕ ಶಿಬಿರಗಳಲ್ಲಿ ವೇಶ್ಯೆಯರಿಗೂ, ಕನ್ಯೆಯರಿಗೂ ಪ್ರಮುಖ ಸ್ಥಾನ ಕಲ್ಪಿಸಿ ಕೊಡುತ್ತಿದ್ದರು. ಯುದ್ಧದ ಸಮಯದಲ್ಲಿ ಸೈನಿಕರು ಕೇಳುತ್ತಿದ್ದದು ಹೆಚ್ಚಿನ ಸಂಬಳವನ್ನಲ್ಲ ಬದಲಿಗೆ ಮದುವೆಯಾಗದ ಹುಡುಗಿಯರನ್ನು. ಇವರು ಯುದ್ಧ ಮಾಡದಿದ್ದರೂ ಸಹ ಅವರನ್ನು ಯುದ್ಧದಲ್ಲಿ ವೀರಾವೇಶದಿಂದ ಹೋರಾಡುವಂತೆ ಮಾಡುತ್ತಾರೆ. ಈ ಯುವತಿಯರ ಮೇಲಿನ ಆಸೆಗಾಗಿ ಬೇರೆ, ಸಾಮಂತ ರಾಜ್ಯಗಳಿಂದಲೂ ಶ್ರೀಮಂತರು, ಸರದಾರರು ಬಂದು ರಾಜನ ಸೈನ್ಯವನ್ನು ಸೇರಿಕೊಳ್ಳುತ್ತಿದ್ದರು. ಪ್ರತಿಯೊಬ್ಬರೂ ಏಳೆಂಟು ಮುದ್ದು ಯುವತಿಯರನ್ನು ತಮ್ಮ ಸೇವೆಗೆ ಸೇರಿಸಿಕೊಂಡಿರುತ್ತಾರೆ. ಇವರಿಗೆ ರಾಜನ ಬೊಕ್ಕಸದಿಂದ ಸಂಬಳ ದೊರೆಯುತ್ತದೆ…. ಎಂಬ ಬಾರ್ಬೋಸನ ಹೇಳಿಕೆಯು ಯುದ್ಧಗಳು ಕೂಡ ವಿಜಯನಗರದಲ್ಲಿ ವೇಶ್ಯಾವೃತ್ತಿಯ ವೃದ್ದಿಗೆ ಮೂಲಕಾರಣವಾಗಿತ್ತೆಂಬುದನ್ನು ಸೂಚಿಸುತ್ತದೆ.

ಮದುವೆಯಾಗದ ಇಂತಹ ಯುವತಿಯರು ಯುದ್ಧರಂಗದಿಂದ ಬದುಕಿ ಬಂದರೆ ಅವರು ಮುಂದೆ ಅನುಸರಿಸಬೇಕಾಗಿದ್ದದ್ದು ವೇಶ್ಯಾವೃತ್ತಿಯೊಂದನ್ನೇ, ಯೋಧರು, ಸರದಾರರು, ಶ್ರೀಮಂತರುಗಳು ಸೈನ್ಯದಲ್ಲಿ ಬಂದು ಸೇರಿಕೊಳ್ಳುತ್ತಿದ್ದುದ್ದು ಯುವತಿಯರಿಗಾಗಿಯೇ ಹೊರತು ಹೋರಾಡುವುದಕ್ಕಲ್ಲ. ಈ ಸಮಯದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ವಿಜಯನಗರದ ಸೈನಿಕರಲ್ಲಿಯೇ ಯುವತಿಯರಿಗಾಗಿ ಅಂತಃಕಲಹ ಉಂಟಾಗಿ ಸಾಮ್ರಾಜ್ಯದ ಐಕ್ಯತೆಗೆ ಭಂಗ ತಂದುಕೊಂಡ ಸಂದರ್ಭಗಳು ಅನೇಕವಿದೆ. ವಿಜಯನಗರದ ಪತನಕ್ಕೆ ಇದೊಂದು ಕಾರಣವೆಂದೂ ಅಭಿಪ್ರಾಯ ಪಡಲಾಗಿದೆ.

ವಿಜಯನಗರದ ಸಾಹಿತ್ಯ ಕೃತಿಗಳಲ್ಲಿ ವೇಶ್ಯೆಯರ ಬಗೆಗೆ ವಿಸ್ತಾರವಾದ ವರ್ಣನೆಗಳು ದೊರೆಯುತ್ತವೆ. ರಾಜಸಭೆಯು ಶೋಭಿಸಬೇಕಾದರೆ ಅದರಲ್ಲಿ ಇರಬೇಕಾದ ನಾನಾ ವೃತ್ತಿಯ ಜನರುಗಳಲ್ಲಿ ಪ್ರಮುಖರಾದವರೆಂದರೆ ವೇಶ್ಯೆಯರು ಎಂದು ಸೋಮನಾಥ ಕವಿ ಹೇಳಿರುವುದು ಕಂಡುಬರುತ್ತದೆ. ಏಕೆಂದರೆ ವೇಶ್ಯೆಯರನ್ನು ಶುಭ ಶಕುನದ ಚಿಹ್ನೆಗಳಲ್ಲಿ ಒಂದೆಂದು ನಂಬಲಾಗಿತ್ತೆಂದು ಇದೇ ಕವಿ ವಿವರಿಸುತ್ತಾನೆ. ವೇಶ್ಯಾ ವೃತ್ತಿಯ ಆರಂಭದ ಬಗ್ಗೆ ಡಾ. ಎನ್. ಸರಸ್ಪತಿಯವರು ತಮ್ಮ “The Position of women during the vijayangar period” ಎಂಬ ಕೃತಿಯಲ್ಲಿ ವೇಶ್ಯಾವೃತ್ತಿಯನ್ನು ಆರಂಭಿಸುವ ಮುನ್ನ ಆ ಸಮುದಾಯವು “ಮುದ್ರಾದಿಕೋತ್ಸವಂ” (Showing the mirror) ಎಂಬ ಧಾರ್ಮಿಕ ಆಚರಣೆಯೊಂದನ್ನು ನಡೆಸುತ್ತದೆ. ಚೈತ್ರ ಮಾಸದ ಪೂರ್ಣಿಮೆಯ ದಿನವೆಂದು ಜರುಗುವ ಈ ಕಾರ್ಯಕ್ರಮಕ್ಕೆ ಸಮುದಾಯದ ಸದಸ್ಯರೆಲ್ಲರನ್ನೂ ಆಮಂತ್ರಿಸಲಾಗುತ್ತದೆ. ತಂದೆಯು ತನ್ನ ಮಗಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಅವಳ ಮುಖವನ್ನು ಕನ್ನಡಿಯಲ್ಲಿ ನೋಡುತ್ತಾನೆ. ಏಕೆಂದರೆ ಕನ್ನಡಿಯನ್ನು ಅವರು ಮಹಾಲಕ್ಷ್ಮೀ ಎಂದು ಭಾವಿಸುತ್ತಾರೆ. ನಂತರ ಆಶೀರ್ವದಿಸುತ್ತಾನೆ. ಪ್ರೌಢರಾದ ನಂತರ ವೇಶ್ಯಾವೃತ್ತಿಗಿಳಿಯುವ ಎಲ್ಲಾ ಕನ್ಯೆಯರಿಗೂ ಇದು ಅನ್ವಯಿಸುತ್ತಿತ್ತು ಎಂದು ಬರೆದಿರುವುದು ಕಂಡುಬರುತ್ತದೆ. ಇಂದಿಗೂ ಸಹ ಹಂಪಿಯ ಸುತ್ತಮುತ್ತಲ ಪರಿಸರದಲ್ಲಿ ಗೌಪ್ಯವಾಗಿ ನಡೆದು ಬರುತ್ತಿರುವುದನ್ನು ಕಾಣಬಹುದಾಗಿದೆ.

ವಿಜಯನಗರದ ರಾಜಧಾನಿ ವಿದ್ಯಾರಣ್ಯದಲ್ಲಿದ್ದ ಪ್ರಸಿದ್ಧ ಪೇಟೆಗಳಲ್ಲಿ ಅಚ್ಯುತ ಪೇಟೆಯೂ ಒಂದು. ಅದನ್ನು ‘ಸೂಳೆ ಬಜಾರ್’ ಎಂತಲೇ ಕರೆಯಲಾಗುತ್ತಿತ್ತು. ಆದರೆ ಈ ಬಗೆಯ ಅಭಿಪ್ರಾಯದಲ್ಲಿ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿರುವುದು ಕಂಡುಬರುತ್ತದೆ. ವಿಜಯನಗರಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರು ತಮ್ಮ ಬರವಣಿಗೆಯಲ್ಲಿ ನೀಡಿರುವ ವಿವರಣೆಗಳು ಐಷಾರಾಮದ ಜೀವನ ನಡೆಸುತ್ತಿದ್ದ ವೇಶ್ಯೆಯರ ಬದುಕನ್ನು ಮಾತ್ರ. ಆದರೆ ರಾಜಧಾನಿಯ ಪರಿಸರವನ್ನು ಕಂಡ ಸಮಕಾಲೀನ ಕವಿಗಳು ತಮ್ಮ ಕೃತಿಗಳಲ್ಲಿ, ವೇಶ್ಯೆಯರ ಸ್ಥಿತಿಗತಿ, ಸ್ವಭಾವ ಹಾಗೂ ಅವರ ಪರಿಸರವನ್ನು ಭಿನ್ನಭಿನ್ನವಾಗಿ ಹೇಳಿರುವುದು ಕಂಡುಬರುತ್ತದೆ. ಉದಾಹರಣೆಗೆ: ಚೆನ್ನ ಬಸವ ಪುರಾಣದಲ್ಲಿ ವೇಶ್ಯೆಯನ್ನು ಸುಳ್ಳಿನಂಗಡಿ, ಮತ್ಸರದ ಮನೆ, ಮೋಸ ಕಪಟಗಳ ವಾಸಸ್ಥಾನ, ಆಸೆಯ ಆಶ್ರಯ, ಅತೀ ಆಸೆಯ ಅಂಗಡಿ, ಸ್ವಾರ್ಥಿಗಳು ನಡೆಸುವ ಮಂದಿರ, ಜಗಳಗಳು ನಡೆಯುವ ಕೇಂದ್ರಸ್ಥಾನ, ನೆಪಗಳ ನೆಲೆ, ಹೊಸ ಹೊಸ ರೀತಿಯ ಚತುರತೆಯ ಚಾವಡಿ, ಮೋಸಗಳ ಮೂಲಸ್ಥಾನ, ಅಸಾಧ್ಯವಾದ ಸಾಮರ್ಥ್ಯದ ಮನೆಯಾಗಿದ್ದಿತ್ತು ಎಂದು ಹೇಳಿರುವುದು ಕಂಡುಬರುತ್ತದೆ. ಒಂದರ್ಥದಲ್ಲಿ ಇದು ಸತ್ಯವೇ. ಅಂದು ವೇಶ್ಯೆಯರ ಸಹವಾಸ ಮಾಡಿದವರ ಬದುಕನ್ನು ಸೂಚಿಸುವ ಜಾನಪದ ಹಾಡುಗಳು ನಿಜಕ್ಕೂ ಇಂದಿಗೂ ಸಹ ಮನುಷ್ಯನ ಬದುಕಿಗೆ ನಿದರ್ಶನವೆನ್ನಬಹುದು. ಉದಾಹರಣೆಗೆ,

ತುಂಬಿಟ್ಟುಗುಪ್ಪುಂಟೆ ತವರಿಗೆ ಮುಪ್ಪುಂಟೆ
ದೊಂಬನಾ ಮನೆಗೆ ಕದವುಂಟೆ
… ಅಣ್ಣಯ್ಯ
ಸೂಳೇಯ ನಂಬಿದವಗುಂಟೆ ಸಂಸಾರ ….೧

ಮಂಜು ಮರಾಳಲ್ಲಿ ಮರಳು ಸಕ್ಕರೆಯಲ್ಲಿ
ಮಡಗಿದ್ದ ಸೂಳೆ ಸ್ಥಿರವಲ್ಲ
….ಅಣ್ಣಯ್ಯ
ಮನೆಗೆ ತಂದಿರಿಸು ಮಡದಿಯ

ಸೂಳೇಯ ಮನೆಯಲ್ಲಿ ಸೂರೆಲ್ಲಿ ಮಲ್ಲೀಗೆ
ಜಾಣ ನಾ ಹೋಗಿ ಮಲಗೂವೆ
….ಮಂಚದ್ಮೇಲೆ
ತಾಳೆ ಹೂವಿನ ತಲೆದಿಂಬು

ಎಲ್ಲಿಗೆ ಹೋಗಿದ್ದೆ ಯಾವ್ಹೂವ್ ಮುಡಿದಿದ್ದೆ
ಯಾರ ತೋಳಲ್ಲಿ ಒರಗಿದ್ದೆ
….ಕಂದಯ್ಯ
ವಲ್ಲಿ ಸೆರಗೆಲ್ಲಾ ಪರಿಮಾಳ

ಕಾಕಾನ ಕೋಟೆಯ ನೀಟ್ಗಾತಿ ಬಂದವಳೆ
ಜಾತ್ರೇಲಿ ಗಂಡ್ನ ಸುಳಿವಿಲ್ಲ
. ಅವಳೊಡನೆ
ಸೂಳೇರಿ ಬೀದಿ ಮೆರೆದಾನೋ

ಎಂಬುವ ಜನಪದವು ಅನುಭವದ ಹಾಗೂ ಸನ್ನಿವೇಶದ ಒತ್ತಡಗಳಿಂದ ಸೃಷ್ಟಿಯಾಗಿವೆ. ಇವು ಇಂದಿಗೂ ಪ್ರಸ್ತುತವಾಗಿವೆ.

ಅಂದಿನ ಶ್ರೀಮಂತ ವೇಶ್ಯೆಯರು ತಮ್ಮ ಮನೆಗಳಲ್ಲಿ ವೀಣೆ, ಕೊಳಲು, ಸಂಗೀತ ಲಹರಿಯನ್ನು ಸೃಷ್ಟಿಸುತ್ತಿದ್ದರು. ಕರ್ಪೂರದ ದೀಪಗಳು, ಸುಗಂಧ ಧೂಪಗಳು, ಸಂಗೀತ ಧಾರೆಗಳೆಂಬ ಬಂಧನಗಳು ಯಾವ ಪುರುಷನನ್ನು ಮನೆಯಿಂದ ಆಚೆ ಹೋಗುವ ಹಾಗೆ ಮಾಡುತ್ತಿರಲಿಲ್ಲ. ವಿಜಯಗರದ ವೇಶ್ಯೆಯರು ಶಿಕ್ಷಣ ಪಡೆಯುವ ಹಕ್ಕುಳ್ಳವರಾಗಿದ್ದರು. ಸ್ವತಃ ಅರಸರೇ ವೃತ್ತಿಪರ ಶಿಕ್ಷಣ ನೀಡಲು ದತ್ತಿಗಳನ್ನು ನೀಡುತ್ತಿದ್ದುದ್ದಕ್ಕೆ ಅನೇಕ ಸಾಕ್ಷಿಗಳಿವೆ. ನವರಾತ್ರಿಯ ಸಮಯದಲ್ಲಿ ವೇಶ್ಯೆಯರ ಕುಸ್ತಿಗಳೂ ನಡೆಯುತ್ತಿದ್ದವೆಂದು ಅಬ್ದುಲ್ ರಜಾಕ್ ತಿಳಿಸಿದ್ದಾನೆ.

ವಿಜಯನಗರದ ರಾಜಕೀಯ ರಂಗದಲ್ಲಿಯೂ ವೇಶ್ಯೆಯರು ತಮ್ಮನ್ನು ಉನ್ನತ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆಂಬುವುದು ಕಂಡುಬರುತ್ತದೆ. ಒಂದು ದೃಷ್ಟಿಯಲ್ಲಿ ವೇಶ್ಯಾವೃತ್ತಿಯೇ ರಾಜರಕ್ಷಿತವಾಗಿತ್ತು ಎನ್ನಬಹುದು. ಸ್ವಾತಂತ್ರ್ಯವಾಗಿದ್ದ ವೇಶ್ಯೆಯರು ತಮ್ಮದೇ ಒಂದು ವರ್ಗವೆಂದು ಗುರುತಿಸಿಕೊಳ್ಳುತ್ತಿದ್ದರು. (ಅಂದರೆ ದೇವದಾಸಿಯರಲ್ಲ ದವರು) ಇವರುಗಳು ಅರಸರ, ಸರದಾರರ, ಶ್ರೀಮಂತರ ಆಶ್ರಮವನ್ನು ಪಡೆದಿದ್ದರು. ಈ ವರ್ಗದಲ್ಲಿಯೇ ಕೆಲವರು ಅರಸರಿಗೆ ಮತ್ತು ಸರದಾರರಿಗೆ ಸೂಳೆಯರಾಗಿದ್ದರು. ಪ್ರಖ್ಯಾತ ದೊರೆ ಎನ್ನಿಸಿಕೊಂಡಿರುವ ಕೃಷ್ಣದೇವರಾಯನ ಪಟ್ಟದ ರಾಣಿಯರಲ್ಲಿ ಚಿನ್ನಾದೇವಿ ಒಬ್ಬ ವೇಶ್ಯೆ ಎಂಬುವುದು ಇಲ್ಲಿ ಮುಖ್ಯವಾಗಿ ಗೋಚರಿಸುತ್ತದೆ. ಇದರಿಂದಾಗಿ ವೇಶ್ಯೆಯರಿಗೆ ಅಪಾರ ಗೌರವವಿತ್ತು. ಅರಸರು ತಮ್ಮ ಸಾಮರ್ಥ್ಯದ ಪ್ರದರ್ಶನದ ನೆಪದಲ್ಲಿ ಭವ್ಯವಾಗಿ ಆಚರಿಸುತ್ತಿದ್ದ. ದಸರೆಯ ಹಬ್ಬಗಳಲ್ಲಿ ರಾಜರು ಹೊಸನಗರದಿಂದ ರಾಜಧಾನಿಯವರೆಗೆ ಹಬ್ಬವನ್ನು ಆಚರಿಸುತ್ತಾನೆ. ಆಗ ರಾಜ್ಯದ ಎಲ್ಲಾ ಭಾಗಗಳಿಂದ ದೇವದಾಸಿಯರು, ದಳವಾಯಿಗಳೂ, ಸಾಮಂತರೂ ತಮ್ಮ ಪರಿವಾರದ ಸಮೇತ ಬರುತ್ತಾರೆ” ಎಂದು ಪೇಸ್ ಹೇಳಿದ್ದಾನೆ.

ವೇಶ್ಯೆಯರಿಂದ ತೆರಿಗೆ ಪಡೆದು ರಾಜ್ಯದ ವೆಚ್ಚಕ್ಕೆ ಬಳಸುತ್ತಿದ್ದುದ್ದು ನಮ್ಮ ಭವ್ಯ ಚರಿತ್ರೆಯ ದುರಂತಗಳಲ್ಲೊಂದು. ವೇಶ್ಯೆಯರು ನೀಡುತ್ತಿದ್ದ ತೆರಿಗೆಯ ರೀತಿನೀತಿಯನ್ನು ಅಬ್ದುಲ್ ರಜಾಕ್ ಈ ರೀತಿ ವಿವರಿಸುತ್ತಾನೆ. “ವಿಜಯನಗರದ ಏಳು ಕೋಟೆಗಳಲ್ಲಿ ಈ ರೀತಿಯ ಅನೇಕ ವೇಶ್ಯಾಗೃಹಗಳಿದ್ದವು. ಈ ವೇಶ್ಯಾಗೃಹಗಳ ಮೇಲೆ ಹಾಕಿದ ತೆರಿಗೆಯಿಂದ ಬೊಕ್ಕಸಕ್ಕೆ ಹನ್ನೆರಡು ಸಾವಿರ ಘನ ಆದಾಯ ಬರುತ್ತಿತ್ತು. ಈ ಹಣದಿಂದ ಸೈನಿಕರಿಗೆ ಸಂಬಳವಾಗಿ ಕೊಡುತ್ತಿದ್ದರು” ಎಂದು ಹೇಳಿರುವುದು ವೇಶ್ಯೆಯರ ಆದಾಯವನ್ನು ಸೂಚಿಸುತ್ತದೆ ಹಾಗೂ ವಿಜಯನಗರದಲ್ಲಿ ಈ ವೃತ್ತಿಯ ಸ್ಥಾನಮಾನವನ್ನು ತಿಳಿಸುತ್ತದೆ.

.೬. ಸತಿ ಪದ್ಧತಿ

ವಿಜಯನಗರದ ಕಾಲದಲ್ಲಿ ಸತಿ ಸಹಗಮನ ಪದ್ಧತಿಯು ವ್ಯಾಪಕವಾಗಿ ಕಂಡುಬರುತ್ತದೆ. ಈ ಪದ್ಧತಿಯು ವಿಜಯನಗರದ ಅಥವಾ ಭಾರತದಲ್ಲಿಯೇ ಅಲ್ಲದೆ ಈಜಿಪ್ಟ್, ಗ್ರೀಕ್, ಚೀನಾ, ಸಿರಿಯಾ ಮುಂತಾದ ದೇಶಗಳಲ್ಲಿಯೂ ಆಚರಣೆಯಲ್ಲಿದ್ದದ್ದು ಕಂಡುಬರುತ್ತದೆ. ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನು ಕೇವಲ ಉಪಭೋಗದ ವಸ್ತುವನ್ನಾಗಿಸಿಕೊಂಡಿರುವುದರ ಪ್ರತೀಕವಾಗಿ ಇದು ಗೋಚರಿಸುತ್ತದೆ. ಸತಿಯ ಸಹಗಮನವಾಗುತ್ತಿದ್ದದ್ದು ಎರಡು ರೀತಿಯಲ್ಲಿ

. ಸಹಗಮನ : ಅಂದರೆ ಗಂಡ ಸತ್ತರೆ ಅವನ ಜೊತೆಯಲ್ಲಿಯೇ ಜೀವಂತವಾಗಿ ಚಿತೆಗೆ ಅಥವಾ ಹೂಳುವುದಾದರೆ ಜೀವಂತವಾಗಿ ಸಮಾಧಿ ಮಾಡಿಸಿಕೊಳ್ಳುವುದು ಇದಕ್ಕೆ ಸಹಗಮನ ಎಂದು ಕರೆಯಲಾಗಿದೆ.

. ಅನುಗಮನ : ಗಂಡನು ಎಲ್ಲೋ ದೂರದಲ್ಲಿ ಸತ್ತರೆ, ಅದು ಯುದ್ಧ ರಂಗದಲ್ಲಾಗಬಹುದು ಅಥವಾ ಬೇಟೆಯಾಡುವ ಸಮಯದಲ್ಲಿ ಮರಣಹೊಂದಿದರೆ ಗಂಡನನ್ನು ನೆನೆದುಕೊಂಡು ಬೆಂಕಿಯಲ್ಲಿ ಜೀವ ಅರ್ಪಣೆ ಮಾಡಿಕೊಳ್ಳುವ ಕ್ರಿಯೆಗೆ ಅನುಗಮನ ಎಂತಲೂ ಕರೆಯಲಾಗುತ್ತಿತ್ತು.

ವಿಜಯನಗರ ಸಾಮ್ರಾಜ್ಯದಾದ್ಯಂತ ಇದಕ್ಕೆ ಸಂಬಂಧಿಸಿದ ಅನೇಕ ಶಿಲ್ಪಗಳು, ಶಾಸನಗಳು ದೊರಕುತ್ತವೆ. ಸತಿ ಸಹಗಮನವು ಬೆಂಕಿಗೆ ಹಾರಿ ಜೀವ ಬಿಡುವ ರೂಪ ಒಂದಾದರೆ, ಜೀವಂತವಾಗಿ ಸಮಾಧಿ ಮಾಡಿಸಿಕೊಳ್ಳುವುದು ಮತ್ತೊಂದಾಗಿತ್ತು. ಕೆಲವು ಕಡೆ ನೀರಿಗೆ ಹಾರುವುದು ಹಾಗೂ ಎತ್ತರದ ಪ್ರದೇಶಗಳಿಂದ ಕಮರಿಗಳಿಗೆ ಹಾರಿ ಜೀವ ಬಿಡುವ ಪದ್ಧತಿಯೂ ಇತ್ತೆಂದು ತಿಳಿದುಬರುತ್ತದೆ.

ವಿಜಯನಗರದಲ್ಲಿ ಆಚರಣೆಯಲ್ಲಿದ್ದ ಸತಿ ಪದ್ಧತಿಯ ಕುರಿತು ವಿಪುಲವಾಗಿ ದೇಶೀಯ ಮತ್ತು ವಿದೇಶಿಯ ಸಾಕ್ಷ್ಯಾಧಾರಗಳು ದೊರೆಯುತ್ತವೆ. ಈ ಅನಿಷ್ಟ  ಪದ್ಧತಿಯ ಉಗಮ ಮತ್ತು ಬೆಳವಣಿಗೆಗಳಿಗೆ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕಾರಣಗಳನ್ನೇ ಇದ್ದರೂ ಸಹ ವಿಜಯನಗರದಲ್ಲಿ ಇದೊಂದು ಸಾಮಾಜಿಕ ಮೌಢ್ಯ ವಿಧಿಯಾಗಿದ್ದಿತ್ತೆನ್ನಬಹುದು. ಕನ್ನಡದ ಧ್ವಜಪತಾಕೆಯನ್ನು ಜಗತ್ತಿಗೆ ಸಾರಿದ ಸಾಮ್ರಾಜ್ಯವೆಂದು, ಕನ್ನಡದ ನಾಡಿನ ಚರಿತ್ರೆಯನ್ನು ಶ್ರೀಮಂತಗೊಳಿಸಿದ ರಾಜಮಹಾರಾಜರ ತಾಣವೆಂದು ಹೆಸರು ಪಡೆದಿರುವ ವಿಜಯನಗರ ಸಾಮ್ರಾಜ್ಯದಲ್ಲಿಯೇ ಅತ್ಯಂತ ಹೆಚ್ಚಿನ ಸಂಘಟನೆಗಳು ನಡೆದಿರುವುದು ಕಂಡುಬರುತ್ತದೆ. ಹಿಂದೂ ಧರ್ಮದ ರಕ್ಷಣೆಯ ಹೆಸರಿನಲ್ಲಿಯೇ ದಕ್ಷಿಣ ಭಾರತದಲ್ಲಿ ಹುಟ್ಟಿಕೊಂಡ ವಿಜಯನಗರ ಸಾಮ್ರಾಜ್ಯದ ಆಳುವ ವರ್ಗದ ಅತಿಯಾದ ಪ್ರೋತ್ಸಾಹವೇ ಈ ಜೀವ ವಿರೋಧಿ ಆಚರಣೆಗೆ ಕಾರಣವೆನ್ನಬಹುದಾಗಿದೆ. ಈ ಕೆಟ್ಟ ಪದ್ಧತಿಯ ಆಚರಣೆಯ ವಿಧಿ ವಿಧಾನಗಳನ್ನು ಅಂದು ವಿಜಯನಗರಕ್ಕೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರು ಸ್ವತಃ ವೀಕ್ಷಿಸಿ ತಮ್ಮ ಬೆಳವಣಿಗೆಗಳಲ್ಲಿ ದಾಖಲಿಸಿದ್ದಾರೆ. ಸಾಮ್ರಾಜ್ಯದ ಹಳ್ಳಿ, ಗ್ರಾಮಗಳಲ್ಲಿ ನಡೆಯುತ್ತಿದ್ದ ಭೀಕರ ಸ್ವರೂಪದ ಸತಿ ಪದ್ಧತಿಯನ್ನು ತಿಳಿಯಲು ವಿದೇಶೀಯರ ಬರವಣಿಗೆಗಿಂತಲೂ ಸಮಕಾಲೀನ ದೇಶೀಯ ಸಾಹಿತಿಗಳ ಸಾಹಿತ್ಯವು ಹೆಚ್ಚಿನ ರೀತಿಯಲ್ಲಿ ನೆರವಾಗುತ್ತವೆ.

ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸತಿಗೆ ಸಿದ್ಧವಾಗುತ್ತಿದ್ದ ರೀತಿ ಹಾಗೂ ಸತಿ ನಡೆಯುವಾಗಿನ ಸನ್ನಿವೇಶವನ್ನು ಹೆಚ್.ಎಲ್. ನಾಗೇಗೌಡರು ತಮ್ಮ ಪ್ರವಾಸಿ ಕಂಡ ಇಂಡಿಯಾ ಸಂಪುಟ ೨ರಲ್ಲಿ ಬಾರ್ಬೋಸಾನ ಹೇಳಿಕೆಯನ್ನು ತಿಳಿಸಿದ್ದಾರೆ. ಅದರ ಪ್ರಕಾರ ನೋಡುವುದಾದರೆ, ನಾನಿದ್ದ ಏಳು ತಿಂಗಳುಗಳ ಕಾಲದಲ್ಲಿ ಇಲ್ಲಿನ ಸಮಾಜದಲ್ಲಿ ನಡೆಯುತ್ತಿದ್ದ ಅನೇಕ ವಿಚಿತ್ರ ಹಾಗೂ ಅಮಾನುಷ ಕೃತ್ಯಗಳನ್ನು ಕಂಡೆ, ಗಣ್ಯರಾದ ಗಂಡಸರಾಗಲಿ, ಹೆಂಗಸರಾಗಲಿ ಸತ್ತರೆ ಇವರು ಸುಡುತ್ತಾಳೆ, ಗಂಡ ಸತ್ತ ಮೇಲೆ ಹೆಂಡತಿ ಒಂದು ಅಥವಾ ಮೂರು ತಿಂಗಳೂಗಳ ನಂತರ ಚಿತೆಯಲ್ಲಿ ಬೀಳುವುದಕ್ಕೆ ಸಿದ್ಧಳಾಗುತ್ತಾಳೆ. ನಿರ್ದಿಷ್ಟವಾದ ದಿನದಂದು ಬಹಳ ಹೊತ್ತಿಗೆ ಮುಂಚೆ ಎದ್ದು ಕುದುರೆಯ ಮೇಲೋ ಅಥವಾ ಎಂಟು ಜನ ಹೊತ್ತ ಪಲ್ಲಕ್ಕಿಯ ಮೇಲೋ ಕುಳಿತು ಚಿತೆಯು ಸಿದ್ದವಾಗಿರುವ ಸ್ಥಳಕ್ಕೆ ಹೊರಡುತ್ತಾಳೆ. ಆಕೆ ಮದುವೆಗೆ ಸಿದ್ಧವಾಗಿರುವ ವಧುವಿನಂತೆ ಅಲಂಕಾರ ಮಾಡಿಕೊಂಡಿರುತ್ತಾಳೆ. ತಲೆಯ ಕೂದಲನ್ನು ಇಳಿ ಬಿಟ್ಟಿರುತ್ತಾಳೆ. ತನ್ನ ಯೋಗ್ಯತೆ ಗನುಸಾರವಾಗಿಯೇ ಒಡವೆ ವಸ್ತ್ರಗಳನ್ನು ಹಾಕಿಕೊಂಡಿರುತ್ತಾಳೆ, ಊರನ್ನು ಆಳುವ ಅರಸನ, ಪಾಳೆಯಗಾರನ ಅಪ್ಪಣೆಯನ್ನು ಪಡೆದು, ಅರಿಶಿನದ ಸೀರೆಯನ್ನುಟ್ಟು, ಆಭರಣಗಳನ್ನು ತೊಟ್ಟು ಪರಿಪರಿಯಾದ ಪುಷ್ಪಗಳಿಂದ ಅಲಂಕರಿಸಿಕೊಂಡು ಅವಳನ್ನು ಊರಿನ ಸುತ್ತೆಲ್ಲಾ ಮೆರವಣಿಗೆ ಮಾಡಲಾಗುತ್ತಿತ್ತು. ವೆನೀಸ್‌ನಲ್ಲಿ ಮದುವೆಗೆ ಹೊರಟ ಹೆಣ್ಣಿನ ಮೆರವಣಿಗೆಯಂತೆ, ಅವಳ ಎಡಗೈಯಲ್ಲಿ ಅವಳು “ನಾನು ನನ್ನ ನಲ್ಲನೊಡನೆ ಚಿರನಿದ್ರೆ ಮಾಡಲು ಹೋಗುತ್ತಿರುವೆ” ಎಂದು ಹಾಡುತ್ತಾ ಹಾಡುತ್ತಾ ಮುಂದುವರಿಯುತ್ತಾಳೆ. ಮೆರವಣಿಗೆಯಲ್ಲಿ ಆಕೆಯ ನೆಂಟರಿಷ್ಟರು, ಬಮಧು ಬಳಗದವರೆಲ್ಲರೂ ಭಾಗವಹಿಸುತ್ತಾರೆ ಎಂದು ಸಂಪೂರ್ಣ ಚಿತ್ರಣವನ್ನು ನೀಡಿದ್ದಾನೆ.

ಬಾರ್ಬೋಸಾನು ಇನ್ನೂ ಮುಂದುವರಿದು ಸತಿಯು ನಡೆಯುತ್ತಿದ್ದ ಅಂತಿಮ ಕ್ಷಣಗಳನ್ನು ಸಹ ಸಂಕ್ಷಿಪ್ತವಾಗಿ ವಿವರಿಸಿದ್ದಾನೆ. ಸಾಮಾನ್ಯವಾಗಿ ಸತಿ ಆಚರಣೆಯು ನದಿಯ ದಡದಲ್ಲಿ ನಡೆಯುತ್ತಿತ್ತು. ಬೆಳಿಗ್ಗೆ ಸತಿಗೆ ಆಹುತಿಯಾಗುವವಳನ್ನು ಮೆರವಣಿಗೆಯಲ್ಲಿ ಕರೆದೊಯ್ದು ಮಧ್ಯಾಹ್ನದ ವೇಳೆಗೆ ನದಿಯ ದಡ ಸೇರುತ್ತಾರೆ. ಅಲ್ಲಿ ಚಿತೆಗೆ ಅಗತ್ಯವಾಗಿ ಬೇಕಾಗಿರುವ ಕಟ್ಟಿಗೆ, ಎಣ್ಣೆ ಮುಂತಾದವುಗಳೆಲ್ಲವೂ ಸಿದ್ಧವಾಗಿರುತ್ತಿದ್ದವು. ಈ ಅನಿಷ್ಟ ಪದ್ಧತಿಯನ್ನು ನೋಡಲು ಬಂದವರೆಲ್ಲರಿಗೂ ಊಟದ ವ್ಯವಸ್ಥೆಯು ತುಂಬ ವಿಜೃಂಭಣೆಯಿಂದಲೇ ನಡೆದಿರುತ್ತದೆ. ಚಿತೆಗೆ ಸಿದ್ಧಳಾಗಿರುವ ವಿಧವೆಯೂ ಸಹ ಎಲ್ಲರ ಜೊತೆಯಲ್ಲಿಯೇ ಸಂತೋಷದಿಂದ ಊಟ ಮಾಡಿ, ಸವಲ್ಪ ಹೊತ್ತು ಕಾಲ ಕಳೆಯುತ್ತಾಳೆ. ಒಂದು ವರ್ಗವು ಚಿತೆಯನ್ನು ಸಿದ್ದಮಾಡುತ್ತದೆ. (ಸಾಮಾನ್ಯವಾಗಿ ಹೊಲೆಯರು ಹಾಗೂ ಮಾದಿಗರು ಈ ಕಾರ್ಯವನ್ನು ನಿರ್ವಹಿಸುತ್ತಿದ್ದರೆಂದು ಕಂಡುಬರುತ್ತದೆ) ವಿಧವೆಯು ತನ್ನ ಗಂಡನ ಹತ್ತಿರದ ಸಂಬಂಧಿಯೊಬ್ಬನ ಕೈಹಿಡಿದು ನದಿಯ ಬಳಿಗೆ ಹೋಗುತ್ತಾಳೆ. ತನ್ನ ವಸ್ತುಗಳನ್ನೆಲ್ಲಾ ಕಳಚಿ ತಂದೆತಾಯಿಯರಿಗೆ ಕೊಟ್ಟು ನದಿಯಲ್ಲಿ ಸ್ಥಾನಮಾಡಿ ಹದಿನಾಲ್ಕು ಮೊಳದ ಅರಿಶಿಣ ಬಟ್ಟೆಯನ್ನು ಉಟ್ಟುಕೊಳ್ಳುತ್ತಾಳೆ. ಮತ್ತೆ ಗಂಡನ ಕಡೆಯವರ ಕೈ ಹಿಡಿದು ಚಿತೆಯ ಬಳಿ ಇರುವ ವೇದಿಕೆಯ ಮೇಲೆ ನಿಂತು ಮಕ್ಕಳಿಗೆ, ನೆಂಟರಿಷ್ಟರಿಗೆ ಬುದ್ಧಿ ಮಾತನಾಡುತ್ತಾಳೆ. ನಂತರ ಸತಿಯಾಗುವ ಬಗ್ಗೆ ಮಾತನಾಡಿ, ಸತಿಗೆ ಸಿದ್ಧಳಾಗುತ್ತಾಳೆ. ಒಬ್ಬರು ಅವಳ ತಲೆಯ ಮೇಲೆ ಒಂದು ಗಡಿಗೆ ಎಣ್ಣೆಯನ್ನು ಸುರಿಯುತ್ತಾರೆ. ಬರಿದಾದ ಗಡಿಗೆಯನ್ನು ಬೆಂಕಿಗೆ ಬಿಸಾಡುತ್ತಾರೆ. ಹಾಗೆ ಬಿಸಾಡಿದ ಕೂಡಲೇ ವಿಧವೆಯು ಚಿತೆಗೆ ಹಾರಿ ಆತ್ಮ ಹಾಗೂ ದೇಹಗಳನ್ನು ಸಹನ ಮಾಡಿಕೊಳ್ಳುತ್ತಾಳೆ. ನೆರೆದವರೆಲ್ಲರೂ ಜೋರಾಗಿ ಬೊಬ್ಬೆ ಹಾಕುತ್ತಾರೆ. ಏಕೆಂದರೆ ಚಿತೆಗೆ ಹಾರಿದ ವಿಧವೆಯು ದಾಯುವ ತನಕ ಅವಳೂ ಸಹ ಕಿರಾಚಾಡುವುದು ಸಹಜ. ಅವಳ ಕೂಗು ನೆರೆದಿರುವವರಿಗೆ ಕೇಳಿಸದಿರಲಿ ಎಂದು ಇವರು ಜೋರಾಗಿ ಬೊಬ್ಬೆ ಹಾಕುತ್ತಿದ್ದರು ಎಂದು ವಿವರಿಸಿದ್ದಾರೆ. ಇದೆ ಹೀನ ಸಂಸ್ಕೃತಿಯಾಗಿತ್ತು?

ಕೇವಲ ಆಳುವ ವರ್ಗಕ್ಕಷ್ಟೆ ಈ ಪದ್ಧತಿಯು ಸೀಮಿತವಾಗಿರದೆ. ಇತರ ವರ್ಗಗಳೂ ಸಹ ಪರಿಸರದ ಪ್ರಭಾವದಿಂದಾಗಿ ಆ ಆಚರಣೆಗೆ ಒಳಗಾಗಿದ್ದವೆಂಬುವುದ ಕಂಡು ಬರುತ್ತದೆ. ಬ್ರಾಹ್ಮಣ ವರ್ಗದ ಸ್ತ್ರೀಯರು ಸತಿ ಹೋಗುವುದನ್ನು ಅವರ ಶಾಸ್ತ್ರಗಳು ನಿಷೇಧಿಸಿವೆಯಾದರೂ ಕ್ರಮೇಣ ಅನೇಕ ಪ್ರಭಾವಗಳಿಂದ ಸತಿ ಪದ್ಧತಿಯು ಇವರಲ್ಲಿಯೂ ಆಚರಣೆಗೆ ಬಂದಿರುವುದು ಕಂಡುಬರುತ್ತದೆ. ವಿಜಯನಗರದ ರಾಜಧಾನಿಯಲ್ಲಿ ಬ್ರಾಹ್ಮಣ ಸ್ತ್ರೀಯರು ಸತಿ ಹೋಗುತ್ತಿದ್ದರೆಂಬುದನ್ನು ಕುರಿತು ಇಟಲಿಯ ನಿಕಿಲೂಕೊಂಟಿ ತನ್ನ ವರದಿಯಲ್ಲಿ ವಿವರಿಸಿದ್ದಾನೆ. ಹಾಗೆಯೇ ಜೈನ ಧರ್ಮದ ಅನುಯಾಯಿಗಳು ಸತಿ ಪದ್ಧತಿಯನ್ನು ಸಾಮ್ರಾಜ್ಯದ ಇತರೆ ಕಡೆಗಳಲ್ಲಿ ಆಚರಿಸುತ್ತಿದ್ದು ಸಮಕಾಲೀನ ಶಾಸನಗಳಿಂದ ತಿಳಿದುಬರುವುದಾದರೂ ರಾಜಧಾನಿಯಲ್ಲಿದ್ದ ಜೈನರು ಸತಿ ಆಚರಿಸಿದ ಬಗ್ಗೆ ಮಾಹಿತಿ ದೊರೆಯುವುದಿಲ್ಲ.

ವಿಜಯನಗರದ ಅರಸರುಗಳು ಭಾರತದ ಇನ್ಯಾವುದೇ ಸಂಸ್ಥಾನದ ರಾಜರುಗಳಿಗಿಂತಲೂ ಹೆಚ್ಚಿನ ಬಲಾಢ್ಯನಾಗಿದ್ದೆರೆ ಸಾಮಾನ್ಯವಾಗಿ ಪ್ರತಿಯೊಬ್ಬ ರಾಜನು ಹನ್ನೆರಡು ಸಾವಿರ ಹೆಂಡತಿಯರನ್ನು ಹೊಂದಿರುತ್ತಿದ್ದನೆಂದೂ ಇವರಲ್ಲಿ ನಾಲ್ಕು ಸಾವಿರ ಜನ ಇವನು ಹೋದೆಡೆಯಲ್ಲೆಲ್ಲಾ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದರೆಂದು ಇವರಿಗಿಂತಲೂ ಹೆಚ್ಚು ರೂಪವತಿಯರಾದ ನಾಲ್ಕು ಸಾವಿರ ಹೆಂಡತಿಯರು, ಕುದುರೆಯ ಮೇಲೆ ಸವಾರಿ ಮಾಡುತ್ತಾ ಹೋಗುತ್ತಿದ್ದರೆಂದೂ ಹಾಗೆಯೇ ಇವರುಗಳಲ್ಲಿ ಸುಮಾರು ಎರಡು ಸಾವಿರ ಹೆಂಡತಿಯರು ರಾಜನು ಸತ್ತಾಗ ತಮ್ಮ ಆತ್ಮಸಂತೋಷದಿಂದ ಚಿತೆಯೊಳಗೆ ಬಿದ್ದು ಪ್ರಾಣತ್ಯಾಗ ಮಾಡುತ್ತೇವೆಂಬ ವಾಗ್ದಾನ ಮಾಡಿ ರಾಜನ ಕೈಹಿಡಿಯುತ್ತಿದ್ದರೆಂದು ಬಾರ್ಬೋಸಾ ವಿವರಿಸಿದ್ದಾನೆ. ಇಷ್ಟೇ ಅಲ್ಲದೆ ಅವನು ಮುಂದುವರೆದು ಬರೆಯುತ್ತಾ : “ರಾಜ ಸತ್ತರೆ ಅಂತಃಪುರದ ಸುಮಾರು ನಾನೂರು ಐನೂರು ಸ್ತ್ರೀಯರು ಅವನೊಡನೆ ಚಿತೆಯಲ್ಲಿ ಬೀಳುತ್ತಾರೆ. ಇದಕ್ಕಾಗಿಯೇ ಚಿತಾಗ್ನಿಯನ್ನು ತುಂಬ ದೊಡ್ಡದಾಗಿ ಮಾಡಿರುತ್ತಾರೆ. ಶ್ರೀಗಂಧ, ತೇಗ, ಹೊನ್ನೆ ಮುಂತಾದ ಮರಗಳ, ಎಣ್ಣೆ, ತುಪ್ಪವನ್ನು ಹೇರಳವಾಗಿ ಶೇಖರಿಸುತ್ತಾರೆ. ಈ ಚಿಂತೆಯಲ್ಲಿ ಬೀಳುವುದಕ್ಕಾಗಿ ನಾಮುಂದು ತಾಮುಂದು ಎಂದು ನುಗ್ಗಿ ಬರುತ್ತಾರೆ. ಇದೊಂದು ಅಪೂರ್ವವಾದ ದೃಶ್ಯ” ಎಂದು ಅಂದಿನ ರಾಜಾಸ್ಥಾನದಲ್ಲಿ ಇದ್ದ ಸತಿ ಪದ್ಧತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾನೆ.

ಮೇಲಿನ ಎಲ್ಲ ಉಲ್ಲೇಖಗಳು ಭವ್ಯ ಸಾಮ್ರಾಜ್ಯವೆಂದೆನ್ನಿಸಿಕೊಂಡಿರುವ ವಿಜಯ ನಗರದಲ್ಲಿ ಮನೆಮಾಡಿಕೊಂಡಿದ್ದ ಅನಿಷ್ಟತೆಯನ್ನು ಸೂಚಿಸುತ್ತದೆ. ಧರ್ಮ ಸಂಸ್ಕೃತಿಗೆ ಹಾಗೂ ಅದರ ರಕ್ಷಣೆಗೆ ಬದ್ಧರಾಗಿದ್ದ ಆಡಳಿತಗಾರರುಗಳು ಇಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡದೆ, ತಾವೇ ಪ್ರೋತ್ಸಾಹಿಸಿಕೊಂಡು ಬಂದಿರುವುದು ಖೇದ ತರುವ ವಿಷಯವೇ, ೨೦ನೇ ಶತಮಾನದ ಪ್ರಾರಂಭದಲ್ಲಿ ಬಂಗಾಳದ ರಾಜಾರಾಮ್ ಮೋಹನ್ ರಾಯ್ ರವರು “ಬ್ರಹ್ಮ ಸಮಾಜ”ವನ್ನು ಸ್ಥಾಪಿಸಿಕೊಂಡು ಈ ಅನಿಷ್ಟಪದ್ಧತಿಯ ವಿರುದ್ಧ ಹೋರಾಡಲು ಪ್ರಯತ್ನಿಸಿ ತಮ್ಮ ಜೀವಿತದ ಕೊನೆಯವರೆಗೆ ಹೋರಾಡಿದರೆ ಅವರ ಹೋರಾಟಕ್ಕೆ ಅಂದಿನ ಬ್ರಿಟಿಷ್ ಗೌವರ್ನರ್ ಜನರಲ್ ಆಗಿದ್ದ ಲಾರ್ಡ್ ವಿಲಿಯಂ ಬೆಂಟಿಂಗ್ ಹೆಚ್ಚಿನ ಪ್ರೋತ್ಸಾಹ ನೀಡಿರುವುದು ಸಹ ಇಂದು ಇತಿಹಾಸವಾಗಿದೆ. ಇಂದಿಗೂ ಸಹ ಇಂತಹ ಅನಿಷ್ಟ ಪದ್ಧತಿಯು ಆಚರಿಸುತ್ತಿರುವುದನ್ನು ಪತ್ರಿಕೆಯಲ್ಲಿ ನೋಡಿದ್ದೇವೆ. ಈ ಕೆಟ್ಟ ಆಚರಣಾ ಸಂಸ್ಕೃತಿಯು ಹಿಂದೂ ಸಂಸ್ಕೃತಿಯನ್ನು ಉಳಿಸಲು ಉದಯಿಸಿದ ಸಾಮ್ರಾಜ್ಯವೆಂದು ಕೆಲವು ಮೂಲಭೂತ ಇತಿಹಾಸಕಾರರರಿಂದ ಕರೆಸಿಕೊಂಡ ವಿಜಯನಗರದಲ್ಲಿ ಹೆಚ್ಚಾಗಿ ಬೇರೂರಿತು.

.೭. ಮಹಿಳೆಯರ ಸ್ಥಾನಮಾನಗಳು

ವಿಜಯನಗರದ ಇತಿಹಾಸದ ಬಗ್ಗೆ ವಿಶಿಷ್ಟ ರೀತಿಯ ಬೆಳಕು ಚೆಲ್ಲಲು ಇಂದು ನಮ್ಮ ಮುಂದೆ ಅನೇಕ ಸಾಹಿತ್ಯಾಧಾರಗಳು ಹಾಗೂ ದೇವಾಲಯಗಳು ತೆರೆದ ಪುಸ್ತಕದಂತೆ ಕಂಗೊಳಿಸುತ್ತಿವೆ. ಅವುಗಳ ಸಹಾಯದಿಂದ ಅಂದಿನ ಕಾಲದಲ್ಲಿ ಸ್ತ್ರೀಯರ ಸ್ಥಾನ ಹಾಗೂ ಅವರು ಅಸ್ಥಾನದಲ್ಲಿ ಹಾಗು ಸಮಾಜದಲ್ಲಿ ಬದುಕುತ್ತಿದ್ದ ಸ್ಥಿತಿಗತಿಯ ಬಗ್ಗೆ ತಿಳಿಯಲು ಸಹಕಾರಿಯಾಗಿವೆ ಎನ್ನಬಹುದು. ಮೇಲಿನ ಆಧಾರಗಳಿಂದ ಮಹಿಳೆಯರು ರಾಜಕೀಯ, ಆರ್ಥಿಕ ಹಾಗೂ ಆಡಳಿತ ವಿಷಯಗಳಲ್ಲಿಯೂ ಪ್ರಮುಖ ಸ್ಥಾನ ಪಡೆದಿದ್ದರೆಂದು ಕಂಡುಬರುತ್ತದೆ. ಆದರೆ ಮೇಲಿನ ಹೇಳಿಕೆಯು ಸಾಮ್ರಾಜ್ಯದ ಕೇವಲ ಶೇ. ೩ರಷ್ಟು ಮಹಿಳೆಯರಿಗೆ ಮಾತ್ರ ಸಂಬಂಧಪಟ್ಟದ್ದು. ಮಿಕ್ಕ ಮಹಿಳೆಯರು ಹಲವಾರು ರೀತಿಯ ಸಾಮಾಜಿಕ ಸಂಕೋಲೆಗೆ ಬಲಿಯಾಗಿ ಬದುಕುತ್ತಿದ್ದರು.

ಕರ್ನಾಟಕದ ಪ್ರಾಚೀನ ಇತಿಹಾಸವನ್ನು ಗಮನಿಸಿದರೆ ಅದು ಗಂಗರ ಕಾಲದಿಂದ ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ಇಕ್ಕೇರಿ ಅರಸರು, ಮೈಸೂರು, ಒಡೆಯರವರೆಗೂ ಸಹ ಮಹಿಳೆಯರು ಪ್ರಮುಖ ಪಾತ್ರವಹಿಸಿರುವುದು ಕಂಡುಬರುತ್ತದೆ. ವಿಜಯನಗರದ ಅರಸರ ಕಾಲದಲ್ಲಿ ರಾಜರ ಅನುಪಸ್ಥಿತಿಯಲ್ಲಿ ರಾಣಿಯರೇ ಆಳ್ವಿಕೆ ನಡೆಸಿರುವುದಕ್ಕೆ ಅನೇಕ ಆಧಾರಗಳಿವೆ, ಕೃಷ್ಣದೇವರಾಯನು ತನ್ನ ರಾಣಿಯಾದ ಜಗನ್ ಮೋಹಿನಿಗೆ ಆಂಧ್ರಪ್ರದೇಶದ ಉಸ್ತುವಾರಿಯನ್ನು ವಹಿಸಿದ್ದದ್ದು ಕಂಡುಬರುತ್ತದೆ. ಅಂದಿನ ಕಾಲದ ಮಹಿಳೆಯರು ಗೃಹಿಣಿಯರಾಗಿ, ಯುದ್ಧದ ಸಮಯದಲ್ಲಿ ಹೋರಾಟಗಾರ್ತಿಯರಾಗಿ, ವ್ಯಾಪಾರಗಾರರಾಗಿ, ಕುಸ್ತಿ ಮಾಡುವವಳಾಗಿ, ಕವಯತ್ರಿಯರಾಗಿ, ಸಾಹಿತಿಗಳಾಗಿ ಹಾಗೂ ಗವರ್ನರ್ ಗಳಾಗಿ ಆಡಳಿತಾಧಿಕಾರಿಗಳಾಗಿ, ರಾಣಿಯರ ಸಖಿಯರಾಗಿ, ಕೃಷಿಕರಾಗಿ, ಸಂಸಾರದ ಭಾರ ಹೊರುವವರಾಗಿ, ವೇಶ್ಯೆಯಾಗಿ ಕಂಗೊಳಿಸಿರುವುದು ಕಂಡುಬರುತ್ತದೆ.

ಗೃಹಿಣಿಯಾಗಿ : ಮದುವೆಯಾದ ಹೆಣ್ಣು ಮಕ್ಕಳು ಸೌಭಾಗ್ಯ ಸೂಚಕವಾಗಿ ಅನೇಕ ಚಿಹ್ನೆಗಳನ್ನು ಧರಿಸುತ್ತಿದ್ದರು. ಈಗಲೂ ಧರಿಸುತ್ತಾದೆ. ಆದರೆ ಆ ಚಿಹ್ನೆಗಳು ಯಾವುವು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಕಾಲದಿಂದ ಕಾಲಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅವುಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ. ತಾಳಿ (ಮಂಗಳ ಸೂತ್ರ), ಬಳೆ, ಓಲೆ, ಮೂಗುತಿ, ಕಾಲುಂಗರ, ಅರಿಶಿನ, ಕುಂಕುಮ, ಹೂವು, ಕಾಡಿಗೆ ಇವು ಸಾಮಾನ್ಯವಾಗಿ ಸೌಭಾಗ್ಯ ಸೂಚಕಗಳು, ಮೇಲಿನ ಸೌಭಾಗ್ಯದ ಲಕ್ಷಣಗಳಲ್ಲಿ ಐದನ್ನೂ ವಿಶೇಷವಾಗಿ ಹೆಚ್ಚಾಗಿ ಹೆಸರಿಸಿರುವುದು ಕಂಡುಬರುತ್ತದೆ. ಕೆಲವರ ಪ್ರಕಾರ ಅರಿಶಿಣ, ಕುಂಕುಮ, ಸಿಂಧೂರ (ಬೈತಲೆಗೆ ಹಚ್ಚುವ ಕೆಂಪು ಪುಡಿ) ಕಾಡಿಗೆ ಮತ್ತು ಮಂಗಳ ಸೂತ್ರ ಇವೇ ಆ ಐದು. ಇನ್ನೊಂದು ಪಟ್ಟಿಯ ಪ್ರಕಾರ ಮಂಗಳಸೂತ್ರ ಅರಿಶಿನ, ಕುಂಕುಮ, ಬಳೆ, ಓಲೆ ಇವೇ ಆ ಐದುಗಳಾಗಿವೆ. (‘ಐದೆ’ ಎಂದರೆ ಈ ಐದು ಲಕ್ಷಣವಿರುವವಳು ಎಂಬ ಅರ್ತ ಸೂಚಿಸುತ್ತದೆ. ಎಂದು ಡಾ. ಚಿದಾನಂದಮೂರ್ತಿಯವರು ತಮ್ಮ ‘ಹೆಣ್ಣು ಸೌಭಾಗ್ಯದ ಲಕ್ಷಣಗಳು” ಎಂಬ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ).

ಮೇಲಿನದರ ಪ್ರಕಾರ ಮುತ್ತೈದೆಯರಿಗೆ ವಿಶೇಷವಾದ ಪವಿತ್ರ ಸ್ಥಾನಮಾನಗಳಿದ್ದವೆಂದು ಗಮನಿಸಬಹುದು. ಸಾಮಾನ್ಯವಾಗಿ ಮದುವೆ, ಉಪನಯನ ಮುಂತಾದ ಶುಭಕಾರ್ಯಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಮಹಿಳೆಯರು ಸುಂದರವಾಗಿ ಅಲಂಕರಿಸಿಕೊಳ್ಳುತ್ತಿದ್ದರೆಂದು ವಿದೇಶಿ ಪ್ರವಾಸಿಗರಾದ ಪಾಯಸ್ ಹೇಳಿದ್ದಾರೆ. ಹೆಂಗಸರುಗಳು, ದೇವಗಿರಿ, ಹೊಲಿ, ಮಗರಿ ಹಾಗೂ ಕಾಡಿಗೆ ನೀರಿನ ಸೀರೆಗಳನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಪಾಯಿಸ್ ಇನ್ನು ಮುಂದುವರೆದು ಅಂದಿನ ಸ್ತ್ರೀಯರು ತುಂಬ ಸುಂದರಿಯರಾಗಿದ್ದರು, ಒಬ್ಬಳಿಗೂ ಒಂದು ಗುಂಜಿಯ ಕೊಬ್ಬಾಗಲಿ, ಬೊಜ್ಜು ಆಗಲಿ ಇರಲಿಲ್ಲ. ಸೀರೆಯಂಥ ಸರ್ವೆ ಸಾಧಾರಣವಾದ ಉಡುಗೆಯನ್ನು ಎಷ್ಟು ಕಲಾತ್ಮಕವಾಗಿ ಧರಿಸಬಹುದೆಂಬುದನ್ನು ಇವರಿಂದ ನೋಡಿ ಕಲಿಯಬೇಕು ಎಂದು ಹೇಳಿರುವುದಲ್ಲದೆ, ಅಂದಿನ ಕಾಲದಲ್ಲಿಯೇ ರವಿಕೆ, ಕಂಚುಳಿಕೆ, ಕುಪ್ಪಸಗಳಾಗಲಿ, ಅಂಗದಟ್ಟಿ ಅಥವಾ ಅಂಗವಟ್ಟವೆಂದು ಕರೆಯಲ್ಪಡುತ್ತಿದ್ದ ಪೆಟಿಕೋಟ್ ಅಥವಾ ಲಂಗವಾಗಲಿ ಅಂದು ಸಾಕಷ್ಟು ಪರಿಚಯವಿದ್ದವೆನ್ನಬಹುದು. ಸೀರೆಯ ನೀರಿಗೆಗಳನ್ನು ಪಾದಗಳವರೆಗೆ ಇಳಿಬಿಟ್ಟು. ಅವು ಹೊತ್ತ ನಕ್ಷೆ, ಕುಸುರಿಯ ಕೆಲಸಗಳು ಸುಂದರವಾಗಿ ಗೋಚರಿಸುವಂತೆ ಉಡುತ್ತಿದ್ದರು ಎಂದು ಪೇಸ್ ವರ್ಣಿಸಿದ್ದಾನೆ.

ಗೃಹಿಣಿಯರು ತಾವು ಧರಿಸುತ್ತಿದ್ದ ಉಡುಪು ಹಾಗೂ ಆಭರಣಗಳಿಗಾಗಿ ಈ ಹಾಡು ಸೃಷ್ಟಿಗೊಂಡಿರುವುದೇನೋ ಎನ್ನಬಹುದು.

ಹಳ್ಳದಲ್ಲಿ ಮೈ ತೊಳೆದು ಒಳ್ಳೆಯಾ ಮಡಿಯುಟ್ಟಾ |
ಮೆಲ್ಲನೆ ಶಿವ ಪೂಜೆಗಣಿ ಮಾಡುತ ||
ಕಳ್ಳತನದಲ್ಲಿ ಹೋಗಿ ಶಿವಗೆ ಹೆಂಡಿತಿಯಾದ |
ಗುಳ್ಳದಾ ಗೌರಿಗಾರತಿ ಯೆತ್ತಿರೇ ||
ಜಯಮಂಗಳಂ ನಿತ್ಯ ಶುಭಮಂಗಳಂ

ನಂದಿಬಟ್ಟಲ ಹೂವು ದುಂಡು ಮಲ್ಲಿಗೆ ದಂಡೆ |
ಚಂದ್ರಮನ ಬೈತಲೆಗೆ ಮುತ್ತು ತುಂಬೆ ||

ಈ ಮೇಲಿನ ಜನಪದ ಗೀತೆಯು ಅಂದಿನ ಗೃಹಿಣಿಯ ಜೀವನಕ್ಕೆ ನಿದರ್ಶನವಾಗಿದೆ ಎನ್ನಬಹುದಾಗಿದೆ.

ಯುದ್ಧದಲ್ಲಿ ಹೋರಾಟಗಾರ್ತಿಯಾಗಿ ಮಹಿಳೆ : ಹಿಂದೆ ವೇಶ್ಯಾವಾಟಿಕೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗಿದೆ. ಯುದ್ಧದಲ್ಲಿ ರಾಜರ ಜೊತೆ ಹಾಗೂ ಸೈನಿಕರು ಯುದ್ಧದಲ್ಲಿ ಲವಲವಿಕೆಯಾಗಿರಲೆಂದು ಸುಂದರವಾದ ಹುಡುಗಿಯರನ್ನು ಕರೆದುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿದ್ದಿತ್ತು. ಯುದ್ಧದ ಸಮಯದಲ್ಲಿ ಸಾಮಂತ ರಾಜರುಗಳು, ಪಾಳೆಗಾರರುಗಳು ಯುದ್ಧಕ್ಕಿಂತಲೂ ಪ್ರಮುಖವಾಗಿ ಆ ಸಮಯದಲ್ಲಿ ಯುದ್ಧರಂಗಕ್ಕೆ ಬರುವ ಸುಂದರಿಯರನ್ನು ಅನುಭವಿಸುವುದಕ್ಕಾಗಿಯೇ ಬರುತ್ತಿದ್ದರೆಂದು ಅನೇಕ ದೇಶೀ ಹಾಗೂ ವಿದೇಶೀ ಸಾಹಿತ್ಯದಿಂದ ತಿಳಿದುಬರುತ್ತದೆ. ಇಷ್ಟೇ ಅಲ್ಲದೆ ಮಹಿಳೆಯರೂ ಸಹ ಕತ್ತಿ ಹಿಡಿದು ಯುದ್ಧ ಮಾಡುತ್ತಿದ್ದರೆಂದು ಇಂದಿಗೂ ದೇವಾಲಯಗಳ ಮೇಲೆ ಚಿತ್ರಿತವಾಗಿರುವ ಚಿತ್ರಗಳಿಂದ ತಿಳಿಯಬಹುದು.

ವ್ಯಾಪಾರಿಯಾಗಿ : ವಿಜಯನಗರದ ಆಳ್ವಿಕೆಯಲ್ಲಿ ಮಹಿಳೆಯರು ಪ್ರಮುಖ ವ್ಯಾಪಾರಗಾರ್ತಿಯರಾಗಿದ್ದರು. ರಾಜಧಾನಿಯಲ್ಲಿ ಸೂಳೆ ಬಜಾರ್ ಎಂದು ಕರೆಸಿಕೊಳ್ಳುವ ವ್ಯಾಪಾರಿ ಕೇಂದ್ರದಲ್ಲಿ ಮಹಿಳೆಯರೇ ವ್ಯಾಪಾರದ ಕೇಂದ್ರಗಳಾಗಿದ್ದರು. ಸಂತೆ, ಜಾತ್ರೆಗಳಲ್ಲಿಯೂ ಇವರೆ ಹೆಚ್ಚಾಗಿ ವ್ಯಾಪಾರದಲ್ಲಿ ತೊಡಗುತ್ತಿದ್ದರು. ತರಕಾರಿ, ಸಾಂಬರು ಪದಾರ್ಥಗಳು, ಹಣ್ಣು – ಹಂಪಲುಗಳು, ಚಿನ್ನ, ಬೆಳ್ಳಿ, ಬಟ್ಟೆ, ಹೆಣ್ಣಿನ ಶೃಂಗಾರದ ವಸ್ತುಗಳು ಮಹಿಳೆಯರಿಂದ ವ್ಯಾಪಾರವಾಗುತ್ತಿದ್ದ ವಸ್ತುಗಳಾಗಿದ್ದವು.

ಕುಸ್ತಿ ಮಾಡುವವಳಾಗಿ : ಮಹಾನವಮಿ ಹಬ್ಬವು ವಿಜಯನಗರದ ಅರಸರ ಕಾಲದಲ್ಲಿ ನಾಡಹಬ್ಬವಾಗಿ ಕಂಗೊಳಿಸಿತ್ತು. ಇದನ್ನು ದಸರಾ ಹಬ್ಬ ಎಂತಲೂ ಕರೆಯುತ್ತಾರೆ. ಇಂತಹ ಹಬ್ಬದ ದಿನ ರಾಜಧಾನಿಯಲ್ಲಿನ ಮಹಾನವಮಿ ದಿಬ್ಬದ ಮುಂದೆ ಮಹಿಳೆಯರಿಂದ ಕುಸ್ತಿಯ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿತ್ತೆಂದು ಶಾಸನಗಳಲ್ಲಿ ಕಂಡುಬರುತ್ತದೆ. ಸ್ವತಃ ಮಹಾರಾಜರೇ ಈ ಸ್ಪರ್ಧೆಯನ್ನು ವೀಕ್ಷಿಸಿ ಗೆದ್ದವರಿಗೆ ಬಿರುದು ಬಾವಲಿಗಳನ್ನು ಕೊಡುವುದು ಸಾಮಾನ್ಯವಾಗಿದ್ದಿತ್ತು.

ಕವಯತ್ರಿಯಾಗಿ : ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಮಹಿಳೆಯರೂ ಸಹ ವಿದ್ಯಾವಂತರಾಗಿ ಅಂದು ಸಂಸ್ಕೃತಿ ಹಾಗೂ ಕನ್ನಡ, ತೆಲುಗು ಭಾಷೆಯಲ್ಲಿ ಪಾಂಡಿತ್ಯ ಇವಳು ಅಂದು ರಚಿಸಿದ “ಮಧುರ ವಿಜಯಂ” ಅಥವಾ “ವೀರ ಕಂಪಣ್ಣರಾಯ ಚರಿತ” ಎಂಬ ಸಂಸ್ಕೃತ ಗ್ರಂಥವು ವಿಜಯನಗರದ ಅಂದಿನ ಇತಿಹಾಸ ತಿಳಿಯಲು ಹೆಚ್ಚಿನ ಸಹಕಾರವಾಗಿದೆ ಎನ್ನಬಹುದು. ಅಸ್ಥಾನದ ಅನೇಕ ರಾಣಿಯರು ವಿದ್ಯಾವಂತರಾಗಿದ್ದರೆಂದು ವಿದೇಶೀ ಪ್ರವಾಸಿಗರು ತಿಳಿಸುತ್ತಾರೆ.

ಸಾಮಾನ್ಯ ಮಹಿಳೆಯರ ಸ್ಥಿತಿ : ಮೇಲೆ ಹೇಳಿದವುಗಳೆಲ್ಲ ರಾಜ ಪರಿವಾರದ ಸ್ತ್ರೀಯರ ಜೀವನವನ್ನು ಸೂಚಿಸುವುದಾದರೆ ಸಾಮಾನ್ಯ ಜನತೆಯ ಬದುಕು ಚಿಂತಾಜನಕವಾಗಿತ್ತು. ತಿನ್ನಲು ಅನ್ನವಿಲ್ಲದೆ, ಉಡಲು ಬಟ್ಟೆ ಇಲ್ಲದೆ ಭೂಮಿಯ ಮೇಲೆ ಹುಟ್ಟುವುದೇ ಪಾಪದ ಅಥವಾ ಕರ್ಮದ ಕಾಲವಾಗಿತ್ತೆನ್ನಬಹುದು (ಇದು ಸ್ವಲ್ಪ ಬದಲಾವಣೆಗಳೊಂದಿಗೆ ಇಂದಿಗೂ ಸಹನ ಇದೇ ಸ್ಥಿತಿ ಇದೆ) ಜೀವನಕ್ಕೆ ಆಧಾರವಾಗಿ ವ್ಯವಸಾಯವನ್ನೆ ನಂಬಿದ್ದರು. ಮಳೆ ಬಿದ್ದರೆ ಮಾತ್ರ ಬೆಳೆ, ಇಲ್ಲದಿದ್ದರೆ ಸಾವೇ ಗತಿಯಾಗಿತ್ತು. ಹೆಚ್ಚಿನ ಮಹಿಳೆಯರು (ಸುಮಾರು ೮೦) ಆರೋಗ್ಯಹೀನರಾಗಿದ್ದರು. ಅವರು ತಲೆಯ ಕೂದಲನ್ನು ಬಾಚಿಕೊಳ್ಳದೆ ತರಗೆಲೆಗಳಂತೆ ಬಿಟ್ಟುಕೊಳ್ಳುತ್ತಿದ್ದರು. ಮೈಗೆ ಪ್ರಾಣಿಗಳ ಚರ್ಮವನ್ನು ಸುತ್ತಿಕೊಳ್ಳುತ್ತಿದ್ದರು. ಗಂಡಸರು ಸೊಂಟಕ್ಕೆ ಮಾತ್ರ ಒಂದು ಚಿಕ್ಕ ಬಟ್ಟೆ ಅಥವಾ ಮರದ ತೊಗಟೆಗಳಿಂದ ಮುಚ್ಚಿಕೊಳ್ಳುತ್ತಿದ್ದರೆಂದು ಬಾರ್ಬೋಸ ಹೇಳಿದ್ದಾನೆ. ಜನ ಸಾಮಾನ್ಯರ ಸ್ಥಿತಿಗತಿ ಅಂದು ಶೋಚನೀಯ ಸ್ಥಿತಿಯಲ್ಲಿತ್ತು ಎಂದು ಪ್ರತ್ಯೇಕವಾಗಿ ಹೇಳುವುದು ಔಚಿತ್ಯವೆನಿಸುತ್ತದೆ. ಮಕ್ಕಳು ಪ್ರಾಥಮಿಕ ಹಂತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಮರಣ ಹೊಂದುತ್ತಿದ್ದರೆಂದು ಕಂಡುಬರುತ್ತದೆ.

ಬಹುಪತ್ನಿತ್ವ ಪದ್ಧತಿಯು ಹೆಚ್ಚಾಗಿತ್ತು. ಈ ಪದ್ಧತಿಯು ಕೇವಲ ರಾಜರಲ್ಲಿ ಅಥವಾ ಶ್ರೀಮಂತರುಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ಜನತೆಯಲ್ಲಿಯೂ ವಿರಳವಾಗಿ ಇದ್ದಿತೆಂದು ಕಂಡುಬರುತ್ತದೆ. ಪುರಂದರದಾಸರು ಇದನ್ನು ಕಂಡೇ ಏನೋ “ಇಬ್ಬರ‍್ಹೆಂಡಿರ ಸುಖವ ಇಂದು ಕಂಡೆನಯ್ಯ” ಎಂದು ಹಾಡಿರುವುದು. ಈ ಒಂದು ಸಾಲಿನಿಂದಲೇ ಇಬ್ಬರೆಂಡತಿಯರನ್ನು ಕಟ್ಟಿಕೊಂಡವರು ಸಂಸಾರದಲ್ಲಿ ಅನುಭವಿಸುತ್ತಿದ್ದ ನೋವಿನ ಸುಖವನ್ನು ಸುಂದರವಾಗಿ ಚಿತ್ರಿಸಿದೆ ಎನ್ನಬಹುದು. ಆದರೆ ಅದು ವಿರಸವಾಗಿ ಪರಿವರ್ತನೆಯಾಗುವ ಸನ್ನಿವೇಶಕ್ಕೆ ದಾಸರು “ಇವಳಿಂದ ಫಲವಿಲ್ಲ ಅವಳಿಂದ ಸುಖವಿಲ್ಲ. ಇವರಿಬ್ಬರ ಸಂಗವಭಿಮಾನ ಭಂಗ” ಎಂದು ವ್ಯಂಗ್ಯವಾಗಿ ಹಾಡಿರುವುದನ್ನಬಹುದು.

ವಿಜಯನಗರದಲ್ಲಿ ವಿಧವೆಯರನ್ನು ಹಾಗೂ ಬಂಜೆ (ಮಕ್ಕಳಾಗದವರನ್ನು) ಯಾರನ್ನು ತುಂಬ ಕೀಳಾಗಿ ನೋಡಿಕೊಳ್ಳಲಾಗುತ್ತಿತ್ತು. ಅಂದು ಅಸ್ಪೃಶ್ಯತೆಯು ಯಾವ ಪ್ರಮಾಣದಲ್ಲಿ ಬೇರು ಬಿಟ್ಟಿತೋ ಅಷ್ಟೇ ಪ್ರಮಾಣದಲ್ಲಿ ಈ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿತ್ತು. ಗಂಡ ಸತ್ತಮೇಲೆ ವಿಧವೆಯು ಅಗ್ನಿಗೆ ಆಹುತಿಯಾಗದೆ ಅಥವಾ ಸಹಗಮನ ಮಾಡಿಕೊಳ್ಳದೆ ಬದುಕುವುದಿದ್ದರೆ ಅವಳು ಪ್ರಾಣಿಗಳಿಗಿಂತಲೂ (ನಾಯಿಗಿಂತಲೂ) ಹೀನಾಯವಾದ ಬದುಕನ್ನು ನಡೆಸಬೇಕಿತ್ತು. ಸಮಾಜದ ಯಾವುದೇ ಶುಭಕಾರ್ಯಗಳಲ್ಲಿ ಅಶುಭಕಾರ್ಯಗಳಲ್ಲಿ ಭಾಗವಹಿಸುವಂತಿರಲಿಲ್ಲ. ಒಂದು ರೀತಿಯಲ್ಲಿ ಗೃಹ ಬಂಧನದಲ್ಲಿರಬೇಕಾಗಿತ್ತು. ಆದರೆ ಗೃಹದಲ್ಲಿಯೂ ಅನೇಕ ಕಟ್ಟುನಿಟ್ಟುಗಳು ಇದ್ದವು. ಬೆಳಿಗ್ಗೆ ಎದ್ದ ತಕ್ಷಣ ಇವಳ ಮುಖ ನೋಡಿದರೆ, ಕೆಲಸಕ್ಕೆ ಹೊರಗಡೆ ಹೋಗುವಾಗ ಇವಳು ಎದುರಿಗೆ ಬಂದರೆ ಅಪಶಕುನವೆಂದು ನಂಬಿ ಇವಳನ್ನು ಜೀವಂತ ಶವವಾಗಿ ಪರಿವರ್ತನೆ ಮಾಡಲಾಗಿತ್ತು. ಇನ್ನೂ ಬಂಜೆಯ ಬಾಳಂತೂ ಬರಗಾಲದ ಭೀಕರತೆಯನ್ನು ತೋರಿಸುತ್ತಿತ್ತೆನ್ನಬಹುದು. ಇಂತಹ ಸಮಯದಲ್ಲಿ ವಿಧವೆ ಹಾಗೂ ಬಂಜೆಯರು ಕುರಿತು ಜಾನಪದರು ಹೇಳಿರುವ ಮಾತೆಂದರೆ

“ಬಂಜೆ ಬೇನೆಯರಿಯಳು ಮಲತಾಯಿ ಮದ್ದ ಬಲ್ಲಳೆ?” ಹೊಟ್ಟೇಲಿ
ಸುತರಿಲ್ಲೆಂದೊರಲ್ಲು ಹುಟ್ಟು ಬಂಜೆಗೆ ಫಲವಾದೀತೆ, “ಸಲೆ ಬಂಜೆ
ಯೊಒ ಸತಿ ನಿಜಪುರುಷ ಸಂಗದೊಳು ಫಲಕಾಲಮಿರ್ದೊಡೇನಿಲ್ಲದಿ
ರ್ದೊದಮೇನು ಫಲವಾದುದುಂಟೆ?” “ಪತ್ತೆ ಬಲೆಯ ಅವಂದದಿಂ
ಬಂಜೆ ಬೇನೆಯ ಅರಿವಳೆ” ‘ದತ್ತು ಪುತ್ರನಿಗೇತಕ್ಕೆ ಪಿತೃಭಕ್ತಿ’

ಎಂದು ಅಂದಿನ ಸಮಾಜದಲ್ಲಿ ಸೃಷ್ಟಿಸಿದ್ದ ನಾಡನುಡಿಗಳನ್ನು ಗಮನಿಸಬಹುದು. ಆದರೆ ಸೋಮೇಶ್ವರ ಕವಿಯು ಸ್ವಲ್ಪ ಮುಂದುವರಿಸು ಬರೆಯುತ್ತಾ ಒಳ್ಳೆಯ ಕುಲದಲ್ಲಿ ಹುಟ್ಟಿ ವಿವೇಕವುಳ್ಳವಳೂ, ಗುಣವತಿಯೂ ಆದ ಸ್ತ್ರೀಯು ಬಂಜೆಯಾಗಿದ್ದರೂ, ಆಕೆಯನು ಯಾರೂ ಬಂಜೆಯೆಂದು ನಿಂದಿಸುವುದಿಲ್ಲ. ವ್ರತಾಚರಣೆಗಳಿಗೆ ಹಾಗೂ ಎಲ್ಲಾ ಶುಭ ಕಾರ್ಯಗಳಿಗೂ ಸಹ ಅವಳು ಹಾಜರಿರುತ್ತಾಳೆ ಎಂದು ಹೇಳಿ ಬಂಜೆಯ ಬಗ್ಗೆ ಬೆಳೆದಿದ್ದು ಕೆಟ್ಟ ಅಭಿಪ್ರಾಯಕ್ಕೆ ಅನುಕಂಪ ಸೂಚಿಸುವ ಮಾತನಾಡಿದ್ದಾನೆ.

ಒಟ್ಟಾರೆ ಹೇಳುವುದಾದರೆ ವಿಜಯನಗರದರಸರ ಕಾಲದಲ್ಲಿ ಮಹಿಳೆಯರು ಎಷ್ಟೇ ಉನ್ನತ ಸ್ಥಾನಮಾನವನ್ನು ಪಡೆದಿದ್ದರೂ ಸಹ ಅವರು ಕೊನೆಯಲ್ಲಿ ಕೇವಲ ಒಂದು ಭೋಗದ ವಸ್ತುವಾಗಿಯೇ ಕಂಗೊಳಿಸುತ್ತಾರೆ. ರಾಜಧಾನಿಯಲ್ಲಿಯೇ ಆಗಲಿ, ಅಸ್ಥಾನದ ಉಪರಾಣಿಯರ ಜೀವನವೇ ಇರಲಿ, ಯುದ್ಧದಲ್ಲಿ ಹೋರಾಡುವ ಮಹಿಳೆಯ ಪಾತ್ರವಿರಲಿ ಅಥವಾ ವ್ಯಾಪಾರ ಕೈಗೊಂಡ ಮಹಿಳೆಯೇ ಅದರೂ ಸಹ ಪುರುಷನ ವಕ್ರ ದೃಷ್ಟಿಗೆ ಬಲಿಯಾಗುವುದು ಸಹಜವಾಗಿದ್ದಿತ್ತು.

ತಾಯಿತನದ ಜೀವನ : ಮಹಿಳೆಯರು ಬಸುರಿಯರಾಗಿದ್ದಾಗ ಬಯಕೆ, ಬೇನೆ, ಶಿಶು ಜನನ ಮುಂತಾದ ವಿಷಯಗಳ ಕುರಿತು ನಮ್ಮ ಸಾಹಿತಿಗಳು ಹಾಗೂ ಜನಪದರು ಸಂಕ್ಷಿಪ್ತವಾಗಿ ವಿವರಿಸಿರುವುದು ಕಂಡುಬರುತ್ತದೆ. ಮಗು ಜನಿಸಿದಾಗ ತಾಯಿಗೆ ಆಗುವ ಆನಂದ ವರ್ಣಿಸಲು ಸಾಧ್ಯವೆನ್ನಬಹುದು. ಇದಕ್ಕಾಗಿಯೇ ಏನೋ ಸೋಮನಾಥ ಹೇಳಿರುವುದು ಉತ್ಸವಗಳಲೆಲ್ಲ ಪುತ್ರೋತ್ಸವವೇ ಶ್ರೇಷ್ಠ ಎಂದು ಈ ಮಾತು ಎಷ್ಟು ನಿಜವಾದದ್ದು ಎಂದರೆ ಇಂದಿಗೂ ಮಕ್ಕಳು ಜನಿಸಿದಾಗ ಮನೆಯಲ್ಲಿ ಆ ಉತ್ಸವದ ಆನಂದವನ್ನು ನೋಡುತ್ತೇವೆ. ಏನೋ ಆನಂದ, ಮುಖದಲ್ಲಿ ನಗೆಯ ಕಳೆ, ಏನೋ ಪಡೆದೆ ಎಂಬ ಭಾವನೆಯಲ್ಲಿ ತೇಲುವ ಹಾಗೆ ಮಾಡುತ್ತದೆ. ಮಗು ಜನಿಸಿದ ಮೇಲೆ ಅದು ಹೇಗೇ ಇರಲಿ ತಾಯಿಗೆ ಮುದ್ದಾದುದ್ದೆ. ಇದಕ್ಕಾಗಿಯೇ “ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು” ಎಂಬ ಗಾದೆ ಹುಟ್ಟಿರುವುದು.

ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿ ಹಾಗೂ ಸಾಮ್ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಇಂದು ಹೆರಿಗೆ ಅಸ್ಪತ್ರೆಗಳಿರುವ ಹಾಗೆ ಸೂತಿಕಾಗೃಹಗಳಿದ್ದವು (ಹೆರಿಗೆಯ ಮನೆಯನ್ನು ಸೂತಿಕಾಗೃಹವೆಂದೂ ಕರೆಯಲಾಗುತ್ತಿತ್ತು) ಹೆರಿಗೆ ಮಾಡಿಸುವವಳನ್ನು ಸೂಲಗಿತ್ತಿಯೆಂದೂ ಕರೆಯುವ ವಾಡಿಕೆಯಾಗಿತ್ತು. ಇಂದಿಗೂ ಸಹ ಈ ಪದಗಳ ಬಳಕೆ ಇರುವುದು ಕಂಡುಬರುತ್ತದೆ. ಆದರೆ ಇವಳ ಸೌಲಭ್ಯ ಪ್ರತಿಯೊಬ್ಬರಿಗೂ ಸಾಧ್ಯವಿರಲಿಲ್ಲ. ಸಾಮಾನ್ಯ ಜನರಿಗಂತೂ ಇವಳು ಕೇವಲ ಕನಸಿನ ಕನ್ಯೆಯಾಗಿದ್ದಳು ಎಂದು ಹೇಳಿದರೆ ತಪ್ಪಾಗದು. ಕೇವಲ ಶ್ರೀಮಂತರು, ರಾಜಪರಿವಾರದವರಿಗೆ ಮಾತ್ರ ಈ ಸೂಲಗಿತ್ತಿಯರ ಸೌಲಭ್ಯ ದೊರಕುತ್ತಿತ್ತು. ಇದಕ್ಕಾಗಿಯೇ “ಸಡಗರದ ನಾರಿಯರು ಹಡೆಯುವಾಗ ಸೂಲಗಿತ್ತಿ” ಎಂಬ ದಾಸರ ಪದ ಅವರ ಬೇಡಿಕೆ ಹಾಗು ಜೀವನ ಮಟ್ಟವನ್ನು ಸೂಚಿಸುತ್ತದೆ. ಹಣವಂತರು ಹಾಗೂ ಉತ್ತಮ ಜಾತಿ ಎಂದು ತಾವೇ ಕರೆದುಕೊಂಡಿದ್ದ ಜನಾಂಗಕ್ಕೆ ಮಾತ್ರ ದೊರಕುತ್ತಿದ್ದ ಸೂಲಗಿತ್ತಿಯರು ರಾಜಧಾನಿಯಲ್ಲಿ ವಿಶೇಷ ಮಹತ್ವ ಪಡೆದಿದ್ದ ಮಹಿಳೆಯರಾಗಿದ್ದರು.

ಹಳ್ಳಿಯ ಬಡ ಕುಟುಂಬವೊಂದರ ಶಿಶು ಜನನದ ಚಿತ್ರವನ್ನು ವಿದೇಶೀ ಪ್ರವಾಸಿಗನು ನೀಡಿರುವ ಮಾಹಿತಿಯ ಆಧಾರದ ಮೇಲೆ ಗಮನಿಸುವುದಾದರೆ ಅದು ಇಂದಿಗೂ ನಗ್ನ ಚಿತ್ರವೆನ್ನಿಸುತ್ತದೆ. ಅವನ ಪ್ರಕಾರ ಆಗತಾನೆ ಜನ್ಮವಿತ್ತ ಆ ಮಗುವನ್ನು ನಗ್ನವಾಗಿಯೇ ಒಂದು ಎಲೆಯ ಮೇಲೆ ಮಲಗಿಸಿದ್ದರು ಎಂಬುದಾಗಿ ಹೇಳಿರುವುದು ಕಂಡುಬರುತ್ತದೆ. ಇದಕ್ಕೆ ನಿದರ್ಶನವೆಂಬಂತೆ ಹಳ್ಳಿಗಳಲ್ಲಿ ಜನರ ಮುಖ್ಯ ಕಸುಬು ಕೃಷಿ. ವ್ಯವಸಾಯವೇ ಅವರ ಉಸಿರು, ಬದುಕು, ವ್ಯವಸಾಯಕ್ಕೆ ಉಪಯೋಗಿಸುವ ಉಪಕರಣಗಳು ಅವರಿಗೆ ದೇವಸಂಭೂತವಾದವು. ವರ್ಷವರ್ಷ ಬರುವ ಯುಗಾದಿ, ದೀಪಾವಳಿ, ಸಂಕ್ರಾತಿ, ಗೌರಿಹಬ್ಬಗಳೆಂದು ಇವುಗಳಿಗೆ ವಿಶೇಷ ಪೂಜೆ ಇದ್ದೆ ಇರುತ್ತದೆ. ಅದ್ದರಿಂದ ಮನೆಯಲ್ಲಿ ಹೆಂಗಸರು ಬಳಸುವುದು ಹೆಚ್ಚಾಗಿ ಮೊರ, ಭತ್ತ, ಜೋಳ, ಗೋಧಿಯನ್ನು ಬೆಳೆದಾದ ಮೇಲೆ ಅದನ್ನು ಹಸನುಮಾಡಲು ಕೊಂಗ ಎಂಬ ಒಂದು ಸಾಧನವನ್ನು ಬಳಸುತ್ತಾರೆ. (ಧಾನ್ಯವನ್ನು ತುಂಬಿಕೊಂಡು ಗಾಳಿಗೆ ಮೇಲಿನಿಂದ ಬಿಡಲು ಬಳಸುವ ಸಾಧನ) ಹಳ್ಳಿಯಲ್ಲಿ ಇಂದುಗೂ ಈ ಮೇಲಿನ ಮೊರ ಹಾಗೂ ಕೊಂಗಗಳಿಗೆ ಯಾವ ಯಾವ ಸ್ಥಾನ ನೀಡಿದ್ದಾರೆ ಎಂದರೆ ಹೆಣ್ಣು ಮಗು ಜನಿಸಿದರೆ ಮೊದಲು ಮೊರದಲ್ಲಿ ಹಾಕುವುದು (ಮೊರ ಕೇವಲ ಮನೆಯಲ್ಲಿಯೇ ಇರುವ ಸಾಧನ.) ಅದೇ ಗದ್ದೆಯಲ್ಲಿ ವ್ಯವಸಾಯ ಮಾಡಲು ಬಳಸುವ ಕೊಂಗ ಗಂಡಿನ ಸಂಕೇತ, ಅದ್ದರಿಂದ ಗಂಡು ಮಗು ಜನಿಸಿದರೆ ಕೊಂಗದೊಳಗೆ ಮೊದಲು ಮಲಗಿಸಿ ನಂತರ ಬೇರೆ ಕಡೆಗೆ ವರ್ಗಾಯಿಸಿಕೊಳ್ಳುವುದು ಇಂದಿಗೂ ಬೆಳೆದು ಬರುತ್ತಿರುವ ರೂಢಿ. ಇದು ಇಂದಿನದಲ್ಲ ಇದಕ್ಕೆ ಶತಶತಮಾನದಷ್ಟು ಹಿರಿದಾದ ಇತಿಹಾಸವಿರುತ್ತದೆ ಎನ್ನಬಹುದು. ಕನಕದಾಸರು ಅರಮನೆಯಲ್ಲಿಯೂ ಪುತ್ರೋತ್ವವವಾದ ವಿಚಾರವನ್ನು ವರ್ಣಿಸುವ ಸಂದರ್ಬದಲ್ಲಿ ಮಗುವನ್ನು ಮೊರದಲ್ಲಿ ಮಲಗಿಸಿ ಪೂಜೆ ವಿಧಿ ವಿಧಾನವನ್ನು ಆಚರಿಸಿದ ವಿಚಾರವನ್ನು ಹೇಳಿರುವುದು ಕಂಡುಬರುತ್ತದೆ.

ಮಗು ಜನಿಸಿದ ಮೇಲೆ ಒಂದು ರೀತಿಯ ಸಂಭ್ರಮವಾದರೆ ಮಗುವಿಗೆ ನಾಮಕರಣ, ಇದರ ಸಂಬಂಧವಾಗಿ ಧಾನ, ಹವನ, ಹೋಮಗಳನ್ನು ಕೈಗೊಳ್ಳುವುದು ಹಾಗೆಯೇ ಹನ್ನೊಂದನೆಯ ದಿನ ಮಗುವನ್ನು ತೊಟ್ಟಿಲಲ್ಲಿ ಹಾಕುವುದು (ತೊಟ್ಟಿಲು ಶಾಸ್ತ್ರ) ಮುಂತಾದ ಸಂಪ್ರದಾಯಗಳು ತುಂಬ ವಿಜ್ರಂಭಣೆಯಿಂದ ನಡೆದುಕೊಂಡು ಅಂದಿನಿಂದ ಇಂದಿನವರೆಗೂ ಬರುತ್ತಿವೆ ಎನ್ನಬಹುದು. ಕನಕಾಸರ ‘ಮೋಹನತರಂಗಿಣಿ’ಯು ಈ ವಯಭವದ ವರ್ಣನೆಯನ್ನು ವರ್ಣಿಸುವ ಕೈಗನ್ನಡಿ ಎಂದು ಇತಿಹಾಸಹಾರರು ಹೇಳಿರುವುದು ಇಲ್ಲಿ ಸತ್ಯವೆನ್ನಿಸುತ್ತದೆ. ಏಕೆಂದರೆ ಇಲ್ಲಿ ಅಂದಿನ ಕಾಲದಲ್ಲಿನ ಜನನ ಸಂದರ್ಭದಲ್ಲಿ ತೊಟ್ಟಿಲಿಕ್ಕುವ ಒಂದು ಸುಂದರ ಚಿತ್ರವನ್ನು ಈ ರೀತಿ ನೀಡುತ್ತಾರೆ “ಸಿರಿ ಮುಡಿಯ ಮುತ್ತೈದೆವೆಂಗಳು ಹಿಡಿಯಕ್ಕು ತಳೆದು ಮುತ್ತಿನಾರತಿ ಎತ್ತಿ, ತೊಟ್ಟಿಲನು ಪೂಜಿಸಿ ತರಳನತುಂಬಿ, ಸದ್ವಿಧಿಯಿಂದ ಮಂದಿರದ ಮೇಲೆ ಹಲಗೆಯ ಕೊಂಡಿಗೆ ಸರಪಳಿಯನ್ನು ತೊಡಚಿ ಹೆಸರನಿಕ್ಕಿ ಜೋಗುಳ ಹಾಡಿ ಕಂದನನ್ನು ತೂಗಿದರು” ಎಂದು ವರ್ಣಿಸಿ ಮಗುವಿನ ಹಣೆಗೆ ಕಪ್ಪಿನ ಬೊಟ್ಟನ್ನು ಬಾಣಂತಿಯ ಕಣ್ಣಿಗೆ ಕಾಡಿಗೆಯನ್ನು ಹಚ್ಚಿದರು ಎಂದು ವರ್ಣಿಸಿದ್ದಾರೆ. ಇದೇ ಪದ್ಧತಿಯು ಚಾಚೂ ತಪ್ಪದೇ ಇಂದಿಗೂ ನಡೆದುಕೊಂಡು ಬರುತ್ತಿದೆ. ಇನ್ನೂ ದಾಸರಲ್ಲೆಲ್ಲ ಶ್ರೇಷ್ಟ ದಾಸರೆನ್ನಿಸಿಕೊಂಡಿರುವ ಕರ್ನಾಟಕದ ಸಂಗೀತ ಪಿತಾಮಹ ಪುರಂದರದಾಸರು ಅಂದು ಬಾಣಂತಿಯರ ವೇಷಭೂಷಣಗಳು, ನೋವು ನಲಿವುಗಳನ್ನು ಕುರಿತು ಕೊಡುವ ಸುಂದರ ಚಿತ್ರ ಇಂದಿಗೂ ಎಲ್ಲ ಮನೆಗಳಲ್ಲಿಯೂ ಸಾಮಾನ್ಯವಾಗಿ ಕಾಣುವ ಬಾಣಂತಿಯರ ವಾಸ್ತವ ಚಿತ್ರಣವೆನ್ನಬಹುದ. “ಹಿಂಗದ ಮೊಲೆ ಹಾಲಿನ ಬವಣೆ, ಖಾರಕಷಾಯಗಳೆ ಒಪ್ಪೊತ್ತಿನ ಆಹಾರ, ಚಂದದ ಒಡವೆ ವಸ್ತುಗಳಿಲ್ಲ, ಮೈಯೆಲ್ಲ ಬಡವಾಗಿದೆ. ಕಟ್ಟದ ಮುಂಡೆ, ಬಾಚದ ಕೂದಲು, ಪಣೆಯೊಳಿಟ್ಟು ಸಾಧು, ತೊಟ್ಟ ಕುಪ್ಪಸವೆಲ್ಲ ಗುಷ್ಟ ಎಣ್ಣೆ ಮಂಕು ಮುಟ್ಟಬೇಡ ಎನ್ನ ಸಿರಿ ಪುರಂದರ” ಎಂದು ವಾಸ್ತವತೆಯನ್ನು ಎಳೆಎಳೆಯಾಗಿ ತೆಗೆದಿಟ್ಟಿದ್ದಾರೆ.

ಮಗು ಗಂಡಾಗಲಿ, ಹೆಣ್ಣಾಗಲಿ ಅದಕ್ಕೆ ವಿವಿಧ ರೀತಿಯ ಹೂವು ಹಾಗೂ ಅಲಂಕಾರಿಕ ದ್ರವ್ಯಗಳಿಂದ ಅಲಂಕರಿಸುವುದೇ ಒಂದು ಸಂಭ್ರಮ ತಲೆಬಾಚಿ ಹೂಮುಡಿಸುವುದು. ಹಣೆಗೆ ಹಾಗೂ ಕೆನ್ನೆಗೆ ತಿಲಕವನ್ನಿಡುವುದು ವಾಡಿಕೆ. ಮಕ್ಕಳಿಗೆ ಅಭರಣಗಳನ್ನು ಹಾಕದಿದ್ದರೆ ತಾಯಿಗೆಲ್ಲಿ ಸಮಾಧಾನವಾಗುತ್ತದೆ. ಇದು ಇಂದಿಗೂ ವಾಸ್ತವ ಇದು ಅಂದು, ಇಂದು ಮುಂದೆಯೂ ಇರುವುದೇ ಆದರೆ ಅಂದು ಈ ಮೇಲೆ ವಿವರಿಸಿದ ಆಚಾರ ವಿಚಾರಗಳು ಎಲ್ಲಾ ವರ್ಗದವರ, ಎಲ್ಲಾ ಜನರ ಆಚರಣೆಯಾಗಿತ್ತೆಂಬುದನ್ನು ಒಪ್ಪುವುದು ಕಷ್ಟಕರವಾಗುತ್ತದೆ. ಏಕೆಂದರೆ ಇಂದು ಸ್ವಾತಂತ್ರ್ಯ ಭಾರತವೆಂದು ಎಲ್ಲರೂ ಒಂದೇ ಒಂದು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ನಿರ್ವಹಿಸುತ್ತಿದ್ದರೂ ಸಹ ಅನ್ಯಾಯ ಅಸಮಾನತೆಯಿಂದ ಕೂಡಿದ ಇಂದಿನ ಭಾರತದಲ್ಲಿ ಕೆಲವೇ ಕೆಲವು ಜನ ಸಂಪತ್ತು ಸಮೃದ್ದಿಯಲ್ಲಿ ಹೊರಳಾಡುತ್ತಿರುವಾಗ ಬಹುಸಂಖ್ಯಾತ ಜನಕೋಟಿ ತಿನ್ನಲು ಒಪ್ಪೋತ್ತಿನ ಕೂಳಿಗೂ ದಿಲ್ಲಿಲ್ಲದೆ ನgಳುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಇಂದಿನ ಭಾರತವೇ ಇರಬೇಕಾದರೆ ಇನ್ನೂ ನಮ್ಮ ಚರಿತ್ರೆಯ ಪುಟಗಳಲ್ಲಿ ಇವರ ಛಾಯೆ ಹೇಗಿರಬೇಕು. ಮಧ್ಯಕಾಲೀನ ಚರಿತ್ರೆಯ ಸಂಸ್ಕೃತಿಯನ್ನು ಅಧ್ಯಯನ ಮಾಡತೊಡಗಿದಾಗ ಇವರ ಸ್ಥಿತಿಗತಿಯನ್ನು ಅರಿತಾಗ ನಮ್ಮ ನಾಳಿನ ಸಂಸ್ಥಾನಗಳನ್ನು ಒಂದು ಸಾಮ್ರಾಜ್ಯವೆಂದು ಕರೆಯಲಾಗುತ್ತದೆಯೇ?

ಸ್ವಾತಂತ್ರ್ಯದ ಐವತ್ತು ವರ್ಷಗಳ ನಂತರವೂ ಕೋಟ್ಯಾಂತರ ಜನರು ಬಡತನ, ಅನಕ್ಷರತೆ, ಆನಾರೋಗ್ಯದಿಂದ ಬಳಲುತ್ತಿದ್ದಾರೆ. ಕೋಟಿಕೋಟಿ ಜನರು ಕನಿಷ್ಟ ಸಾಮಾಜಿಕ ಸೇವಾಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ೧೯೯೩ – ೯೪ರಲ್ಲಿನ ಸ್ವತಃ ಸರ್ಕಾರದ ಲೆಕ್ಕಾಚಾರದ ಪ್ರಕಾರವೇ ಮೂವತ್ತೆರಡು ಕೋಟಿಗಿಂತಲೂ ಹೆಚ್ಚಿನ ಭಾರತೀಯರು ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಆದರೆ ಸರ್ಕಾರದಿಂದ ನಿರ್ಧರಿಸಲ್ಪಟ್ಟಿರುವ ಈ ಬಡತನದ ರೇಖೆಯು ಗಮನಾರ್ಹವಾದದ್ದೇ. ಯಾಕೆಂದರೆ ಈ ಬಡತನದ ರೇಖೆಯ ತುಸು ಮೇಲೆ ಬದುಕುತ್ತಿರುವವರೂ ಅಂಥ ಹೇಳಿಕೊಳ್ಳುವ ಘನತೆ ಗೌರವದ ಬಾಳ್ವೆಯೇನೂ ನಡೆಸುತ್ತಿಲ್ಲವೆಂದು ಹೇಳಬಹುದು.