.೮. ದಸರಾ, ಹಬ್ಬಗಳು, ಜಾತ್ರಗಳು, ಸಂತೆಗಳು ಹಾಗೂ ರಥೋತ್ಸವ

ವಿಜಯನಗರದ ಅರಸರ ಕಾಲದಲ್ಲಿ ದಸರಾ ಮಹೋತ್ಸವದ ಬಗ್ಗೆ, ಹಬ್ಬ ಹರಿದಿನಗಳು, ಜಾತ್ರೆ, ಸಂತೆ, ತೀರ್ಥಯಾತ್ರೆಗಳಿಗೆ ಸಂಬಂಧಿಸಿದಂತೆ ಅನೇಕ ಆಧಾರಗಳು ಸಿಗುತ್ತವೆ. ಈ ವೈಭವವನ್ನು ಅರಿಯಲು ನಮಗೆ ವಿದೇಶಿಯರ ಬರವಣಿಗೆಗಳು ಅತ್ಯಂತ ಹೆಚ್ಚಿನ ರೀತಿಯ ಪ್ರಯೋಜನವಾಗುತ್ತದೆ. ಅಂದಿನ ರಾಜಸಭೆಗಳ ವೈಭವ, ಘನತೆ, ಗಾಂಭೀರ್ಯ, ಶಿಷ್ಟಾಚಾರ, ಸಭ್ಯತೆ ಮುಂತಾದವುಗಳನ್ನು ಕುರಿತ ವಿಸ್ತಾರವಾದ ವರ್ಣನೆಗಳು ಇವುಗಳಿಂದ ತಿಳಿದು ಬರುತ್ತದೆ. ಕರ್ನಾಟಕದ ಇತಿಹಾಸದಲ್ಲಿಯೇ ವಿಜಯನಗರದ ಅರಸರ ವೈಭವವಂತೂ ಮನೆಮಾತಾಗಿದೆ.

ನವರಾತ್ರಿ ಹಬ್ಬ (ದಸರಾ ಮಹೋತ್ಸವ): ದಸರಾ ಅಥವಾ ನವರಾತ್ರಿ ಹಬ್ಬವು ಹಿಂದೂ ಧರ್ಮದ ರೀತಿನೀತಿಗಳಲ್ಲಿ ಆಚರಿಸಲ್ಪಡುತ್ತಿತ್ತೆಂದು ಕಂಡುಬರುತ್ತದೆ. ಸಾಮಾನ್ಯವಾಗಿ ಇದು ಅಕ್ಟೋಬರ್ ತಿಂಗಳಿನಲ್ಲಿ ನಡೆಯುತ್ತಿತ್ತು. ಕೆಲವು ಸಮಯದಲ್ಲಿ ಸೆಪ್ಟಂಬರ್ ತಿಂಗಳಿನ ಕೊನೆಗೆ ಬಂದು ಬಿಡುತ್ತಿದ್ದೂ ಉಂಟು. ನವರಾತ್ರಿಯ ಹಬ್ಬದಂದು ವಿಜಯನಗರದಲ್ಲಿ ನಡೆಯುತ್ತಿದ್ದ ಉತ್ಸವ ಕಾರ್ಯಕ್ರಮಗಳನ್ನು ಈ ರೀತಿ ವಿವರಿಸಬಹುದು. ವಿದೇಶಿಯರಾದ ಅಬ್ದುಲ್ ರಜಾಕ್, ಪಾಯೇಸ್, ನ್ಯೂನಿಜ್ ರವರುಗಳು ಕಣ್ಣಾರೆ ನೋಡಿ ಕೊಡುವ ವಿಸ್ತಾರವಾದ ಮಹಾನವಮಿಯ ವರ್ಣನೆ ಸುಳ್ಳು ಎಂದು ಹೇಳಲಾಗುವುದಿಲ್ಲ. ಏಕೆಂದರೆ ಆದರೆ ವೈಭವವನ್ನು ದೇಶೀಯ ಸಾಹಿತಿಗಳೂ ಸಹ ಮುಕ್ತಕಂಠದಿಂದ ಹೊಗಳಿರುವುದು ಕಂಡುಬರುತ್ತದೆ. ಈ ದೃಷ್ಟಿಯಿಂದಲೇ ಅಂದಿನ ಕಾಲವನ್ನು ‘ವಿಜಯನಗರ ಯುಗವು ಉತ್ಸವ ಸಮಾರಂಭಗಳ ಯುಗ” ಎಂದು ಕರೆದಿರುವುದು ಔಚಿತ್ಯಪೂರ್ಣವೆನ್ನಿಸಿದೆ.

ವಿಜಯನಗರದಲ್ಲಿ ನವರಾತ್ರಿ ಹಬ್ಬದ ಸಮಯದಲ್ಲಿ ಮೊದಲಿಗ ರಾಜರು ವೈಭವದಿಂದ ರಾಜಸಭೆಗಳನ್ನು ನಡೆಸುತ್ತಿದ್ದರು. ಇದನ್ನು ನೋಡಿರುವ ವಿದೇಶಿಯರುಗಳು ಮುಕ್ತ ಕಂಠದಿಂದ ಹೊಗಳಿರುವುದು ಕಂಡುಬರುತ್ತದೆ. ಅ ವೈಭವವನ್ನು ನೋಡಿ ಒಬ್ಬೊಬ್ಬರು “ನನ್ನ ಕಿವಿಗಳು ಕೇಳಿಲ್ಲ ಕಣ್ಣುಗಳು ನೋಡಿಲ್ಲ: ಎಂದು ಬಣ್ಣಿಸಿದರೆ ಮತ್ತೊಬ್ಬ “ಜಗತ್ತಿನಲ್ಲಿ ಇದಕ್ಕೆ ಸರಿಸಮಾನಾದ ಸುಂದರ ಪಟ್ಟಣ ಬೇರೊಂದಿಲ್ಲ ಎಂದು ಹೇಳಿ” ನಮ್ಮ ಆನಂದ ವ್ಯಕ್ತಪಡಿಸಿರುವುದು ಕಂಡುಬರುತ್ತದೆ.

ರಾಜಧಾನಿಯಲ್ಲಿ ವೈಭವದಿಂದ ನಡೆಯುತ್ತಿದ್ದ ನವರಾತ್ರಿ ಹಬ್ಬದ ಉತ್ಸವದ ಕೇಂದ್ರಬಿಂದು ದಿಬ್ಬ, ವಿಜಯನಗರದ ಅರಸರು ಈ ಹಬ್ಬವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸುತ್ತಿದ್ದರು. ಈ ಹಬ್ಬದ ಆಚರಣೆಯು ಒಟ್ಟು ಹತ್ತು ದಿನಗಳ ಕಾಲ ನಡೆಯುತ್ತಿತ್ತು. ಹಬ್ಬದ ಪ್ರಯುಕ್ತ ಅನೇಕ ಸಮಾರಂಭಗಳನ್ನು ಏರ್ಪಡಿಸಲಾಗುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಕ್ರೀಡೆಗಳು ಮತ್ತು ಮನೋರಂಜನೆ. ಕುಸ್ತಿ ಅಂದಿನ ಜನಪ್ರಿಯ ಕ್ರೀಡೆಯಾಗಿದ್ದಿತ್ತು. ಮಹಿಳೆಯರ ಕುಸ್ತಿಯ ಅತ್ಯಂತ ಜನಪ್ರಿಯವಾಗಿದ್ದಿತ್ತು. ಕತ್ತಿವರೆಸೆ, ದೊಣ್ಣೆವರೆಸೆ, ಲಗಾರಿ ಕುಣಿತ, ಡೋಲು ಕುಣಿತ, ಭರತನಾಟ್ಯ, ಸಂಗೀತ, ಮುಂತಾದ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿದ್ದವು. ವರ್ಷವೆಲ್ಲ ತಯಾರಾಗಿದ್ದ ಅಭಿಲಾಷಿಗಳು ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ನವರಾತ್ರಿ ಹಬ್ಬವನ್ನು ಎದುರುನೋಡುತ್ತಿದ್ದರು. ಮಹಾನವಮಿ ದಿಬ್ಬವನ್ನು ಕೃಷ್ಣದೇವರಾಯನು ಒರಿಸ್ಸಾದ ಮೇಲೆ ವಿಜಯ ಸಂಪಾದಿಸಿದ ನೆನಪಿಗಾಗಿ ಕಟ್ಟಿಸಿದನೆಂದು ತಿಳಿದುಬರುತ್ತದೆ. ಈ ದಿಬ್ಬದ ಮೇಲೆ ಒಂದು ಭವ್ಯವಾದ ಮೇಲಂತಸ್ತಿನ ಕಟ್ಟಡ ಇದ್ದಿರಬಹುದೆಂದು ಕಂಡುಬರುತ್ತದೆ. ಆದರೆ ಈಗ ಅದು ಸಂಪೂರ್ಣವಾಗಿ ನಾಶವಾಗಿದೆ. ಈ ದಿಬ್ಬದ ತಳಪಾಯದ ಗೋಡೆಗಳ ಮೇಲೆ ಬೇಟೆ, ನೃತ್ಯ ಕೋಲಾಟ ಮತ್ತು ನಿತ್ಯ ಜೀವನದ ಅಮೂಲ್ಯ ದೃಶ್ಯಗಳು ಮನಮೋಹಕವಾಗಿ ಕಂಗೊಳಿಸುತ್ತಿವೆ. ಈ ದಿಬ್ಬದ ಮೇಲೆಯೇ ನಡೆಯುತ್ತಿದ್ದ ಮಹಾನವಮಿ ಹಬ್ಬವು ಕೇವಲ ಹಿಂದೂ ಧರ್ಮದವರ ಹಬ್ಬ ಮಾತ್ರವಾಗಿದ್ದರೂ ಸಹ ಅದಕ್ಕೆ ರಾಜಕೀಯದ ಕಳೆ ಬಂದಿತ್ತು. ನಮ್ಮ ಭುಮಿ, ನಮ್ಮ ಭಾಷೆ ನಮ್ಮ ನದಿ, ನಮ್ಮ ಸಂಪತ್ತು ಎನ್ನುವ ಮನೋಭಾವನೆಯು ಈ ಹಬ್ಬಗಳಲ್ಲಿ ಕಂಡುಬರುತ್ತಿತ್ತೆನ್ನಬಹುದು. ಈ ಹಬ್ಬದ ವೈಭವದ ಬಗ್ಗೆ ಕವಿಯು ಕೊಡುವ ಒಂದು ಚಿತ್ರವನ್ನು ನೀಡುವುದಾದರೆ ಈ ನರಲೋಕಕಚ್ಚರಿಯೆನ್ನುವಂತೆ ಮಂತ್ರಿಯು ಮಹಾನವಮಿ ಉತ್ಸವವನ್ನು ನಡೆಸಿದನು. ರಾತ್ರಿಯಲ್ಲಿ ನಡೆದ ಆ ರಾಜಸಭೆಯ ವೈಭವವನ್ನು ಹೇಗೆ ವರ್ಣಿಸಲಿ ಎಂದು ತಾನೇ ಅಚ್ಚರಿಪಡುತ್ತಾನೆ. ದೊರೆ ಧರಿಸಿದ್ದ ರತ್ನದ ಕಿರೀಟ ಕಾರಿರುಳನ್ನು ಹಗಲು ಮಾಡುವಂತಿತ್ತು. ರಾಜಾಧಿರಾಜರು, ಸಚಿವರು, ಕವಿಗಮಕಿಗಳೂ ವರನಾರಿಯರು ರಾಜೇಂದ್ರನ ಸುತ್ತ ನೆರೆದಿದ್ದರು. ಮುಂದೆ ದೃಷ್ಟಿ ಹರಿಯುವವರೆವಿಗೂ ರಾಜಪರಿವಾದವರು ನಿಂತಿರುತ್ತಿದ್ದರು. ವೇಶ್ಯೆಯರಿಗೆ ವಿಶೇಷವಾದ ಆಹ್ವಾನವಿದ್ದಿತ್ತು. ಈ ಸುಂದರ ನಗರದ ಹನ್ನೆರಡುಗಾವುದ ವಿಸ್ತಾರವೂ ಪಂಜಿನ ಬೆಳಕು ಢಾಳಿಸಿತ್ತು. ಮುಂದೆ ಅನೇಕ ವಿಧವಾದ ದೈಹಿಕ ಕಲಾಪ್ರದರ್ಶನಗಳಾದವು ಸಿಂಗರಿಸಿಕೊಂಡಿದ್ದ ಸುಂದರಿಯರು ಬಂದು ರಾಜನಿಗೆ ರತ್ನದಾರತಿಯೆನ್ನತ್ತಿದ್ದರು. ಆನೆ ಕುದುರೆಗಳಿಂದ ಪ್ರದರ್ಶನಗಳಾದವು. ಕರಿಗಳೆಲ್ಲವೂ (ಆನೆಗಳೆಲ್ಲವೂ) ತಮ್ಮ ಸೊಂಡಿಲನೆತ್ತಿ ಶ್ರೀಕಂಠದಿಂದ ಸೇಸೆಯ ಸೋಸಿ ಸ್ವರದೋರಿ ಬಲಗಾಲದಂತಹ ಮೇಲಿಟ್ಟು ಶಿರಬಾಗಿದವು. ಚಕ್ರವರ್ತಿಗೆ ಮುಂದೆ ಉರಿಚೇಗಳು ಬಾಣ ಪರಿಪರಿಯ ಪುಷ್ಪ ಬಾಣಗಳ ಪ್ರದರ್ಶನಗಾಳಗುತ್ತಿದ್ದವು. ಆ ಒಂಬತ್ತು ದಿನಗಳಲ್ಲಿ ದಿನವೂ ಒಂದೊಂದು ವೈವಿಧ್ಯವಿರುತ್ತಿತ್ತು. ಹೀಗೆ ಶಾಂತಿಯಿಂದ ದಾನಗಳಿಂದ, ತ್ಯಾಗ ಭೋಗಾಂತರಾಳದ ಲೀಲೆಯಿಂದ ಮಂತ್ರಿಯು ಹೇಳಿದಂತೆ ರಾಜನು ಉತ್ಸವವನ್ನು ನಡೆಸಿದನೆಂದೂ ವಿವರವಾಗಿ ವಿವರಿಸಿರುವುದು ಕಂಡು ಬರುತ್ತದೆ. ಇದರಿಂದ ವಿಜಯನಗರದ ಕಾಲದ ದಸರಾ ಹಬ್ಬದ ಸಂಪೂರ್ಣ ಚಿತ್ರಙಣ ದೊರಕಿ ಅಂದಿನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ.

ಜಾತ್ರೆ ಮತ್ತು ರಥೋತ್ಸವ : ವಿಜಯನಗರದ ಅಸರ ಕಾಲದಲ್ಲಿ ಜಾತ್ರೆಗಳು ಶ್ರೀಮಂತರ, ಮಧ್ಯಮ ವರ್ಗದವರ ಅದಕ್ಕಿಂತಲೂ ಸಮಾಜದಿಂದ ಕಡೆಗಣಿಸಲ್ಪಟ್ಟ ಹಿಂದುಳಿದ ವರ್ಗದವರಿಗೆ ಅವರವರ ಅಂತಸ್ತಿಗೆ ತಕ್ಕಂತೆ ಅವರದೆ ಆದ ರೂಪದಲ್ಲಿ ಪ್ರಯೋಜನವಾಗುತ್ತಿತ್ತು. ಜಾತ್ರೆ ಎಂದರೆ ಯಾವುದಾದರೂ ದೇವತೆಯ ರಥೋತ್ಸವ ಮತ್ತಿತರ ಸಾಮಾಜಿಕ, ಸಾಂಸ್ಕೃತಿಕ ವ್ಯಾಪಾರ ನಡೆಯುವ ಸ್ಥಳ ಎಂದು ಹೇಳಬಹುದು. ಅಥವಾ ದೇವತೆಯ ಉತ್ಸವದಲ್ಲಿ ಸೇರುವ ಜನರ ಗುಂಪು (The multitude of people gathering for the above purpose; the crowds at such a festival) ಎಂದು ಒಂದೇ ವಾಕ್ಯದಲ್ಲಿ ಹೇಳಬಹುದು. ಪ್ರಾಚೀನ ಕಾಲದಿಂದಲೂ ಜನರು ನಂಬಿಕೊಂಡು ಬಂದಿದ್ದ ದೇವ ದೇವತೆಗಳನ್ನು ಭಯ ಭಕ್ತಿಯಿಂದ ಸಾಮೂಹಿಕವಾಗಿ ಪೂಜಿಸಿ ಪ್ರಾರ್ಥಿಸುವ, ಸಂಭ್ರಮದ ಒಂದು ಜನಸಮೂಹವೇ ಜಾತ್ರೆ ಎಂದು ಕರೆಸಿಕೊಳ್ಳುತ್ತದೆ. ಒಂದು ಸಮಾಜದೊಂದಿಗೆ ಶತಮಾನಗಳಿಂದಲೂ ಒಂದಾಗಿ ಬದುಕು ಸಾಗಿಸುತ್ತಾ ಬಂದಿರುವ ಮಾನವನು ತನ್ನ ವೈಯಕ್ತಿಕ ಮತ್ತು ಲೌಕಿಕ ಜೀವನದ ಹಿತರಕ್ಷಣೆಗಾಗಿಯೂ ಹಾಗೂ ತನ್ನ ಜೀವನಕ್ಕೆ ಆಧಾರವಾಗಿ ಅವಲಂಭಿಸಿರುವ (ಕೃಷಿಗೆ ಸಂಬಂಧಿಸಿದ ಹಾಗೂ ತನ್ನ ಬದುಕಿಗೆ) ಮೂಕಪ್ರಾಣಿಗಳ ಸುಖಕ್ಕಾಗಿಯೂ ಯಾವುದೇ ರೀತಿಯ ರೋಗರುಜಿನಗಳು ಬಾರದಂತೆ, ಮಳೆ ಬೆಳೆ ಸರಿಯಾಗಿ ಕಾಲಕಾಲಕ್ಕೆ ಬಂದು ಬರಗಾಲದ ಬವಣೆಯನ್ನು ನೀಗಿಸಿಕೊಳ್ಳಲೆಂದು ಪ್ರಾರ್ಥಿಸುವ ಉದ್ದೇಶವು ಈ ಜಾತ್ರೆಗಳದಾಗಿತ್ತೆನ್ನಬಹುದು. ಮೇಲಿನವುಗಳನ್ನು ದಯಪಾಲಿಸಿದರೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಒಂದೆಡೆ ಸೇರುವ ಹಾಗೂ ತಾವು ಇವುಗಳು ಕಾರ್ಯಗತವಾದರೆ ದೇವರಿಗೆ ಹರಕೆ ಹೊತ್ತುದನ್ನು ಕಾರ‍್ಯರೂಪದಲ್ಲಿ ತರುವ ಆಚರಣೆಯೇ ಅಥವಾ ಸನ್ನಿವೇಶವೇ ಜಾತ್ರೆಯಾಗಿ ವಿಜೃಂಭಿಸುತ್ತದೆ.

ವಿಜಯನಗರದ ಅರಸರ ಆಳ್ವಿಕೆಯ ಕಾಲದಲ್ಲಿ ಸಾಮ್ರಾಜ್ಯದಾದ್ಯಂತ ದೊಡ್ಡ ಹಾಗೂ ಚಿಕ್ಕ ಗಾತ್ರದ ನೂರಾರು ಜಾತ್ರೆಗಳು ನಡೆಯುತ್ತಿದ್ದವೆಂದು ಕಂಡುಬರುತ್ತದೆ. ಇದಕ್ಕೆ ವಿಪುಲವಾಗಿ ಶಾಸನಗಳು, ಸಮಾರಕಗಳು, ಸಾಹಿತ್ಯಾಧಾರಗಳು ಹಾಗೂ ಜಾನಪದ ಸಾಹಿತ್ಯ ಆಕಾರಗಳು ಪ್ರಮುಖವಾದ ಮಾಹಿತಿ ತಿಳಿಸುತ್ತವೆ. ಕವಿಗಳು, ಸಂತರು, ದಾಸರು, ವಿದೇಶಿ ಪ್ರವಾಸಿಗರು ಕಣ್ಣಾರೆ ಕಂಡಿದ್ದನ್ನು ತಮ್ಮ ತಮ್ಮ ಬರವಣಿಗೆಯಲ್ಲಿ ಬರೆದಿಟ್ಟಿದ್ದಾರೆ. ವಿಜಯನಗರದ ಕಾಲದ ಜಾತ್ರೆಗಳು ತಮ್ಮದೇ ಆದ ಪ್ರಾದೇಶಿಕ ವೈಶಿಷ್ಟ್ಯಗಳಿಂದ ಕೂಡಿದ್ದವೆನ್ನಬಹುದು.

ಯಾವುದೇ ಜಾತ್ರೆಯು ಅಂದು ನಡೆಯಬೇಕಾದರೆ (ಈ ಸಂಪ್ರದಾಯವು ಇಂದಿಗೂ ಸಹ ಚಾಚೂತಪ್ಪದೆ ಪ್ರದೇಶದಿಂದ ಬೇರೆ ಬೇರೆ ರೂಪಗಳಲ್ಲಿ ನಡೆದುಕೊಂಡು ಬರಿತ್ತಿದೆ) ಮೊದಲು ಆ ಊರಿನ ದ್ಯಾಮವ್ವನಿಗೆ ಅಥವಾ ಮಾರಮ್ಮನಿಗೆ ಉಡಿ ತುಂಬುವರು. (ಕರ‍್ಕಲ್ ಹಾಕುವುದು ಅಂದರೆ. ಕೆಮ್ಮು ಬರುವಷ್ಟರ ಮಟ್ಟಿಗೆ ಮೆಣಸಿನ ಕಾಯಿಯನ್ನು ಸುಡುವುದು) ನಂತರ ಗ್ರಾಮದ ಯಜಮಾನರೆಲ್ಲರೂ ಸೇರಿ ಸುತ್ತಲಿನ ಗ್ರಾಮದವರೊಡನೆ ಚರ್ಚಿಸಿ ಜಾತ್ರೆಯ ದಿನವನ್ನು ನಿರ್ಧರಿಸಿ ಡಂಗೂರ ಹೊಡೆಸುತ್ತಿದ್ದರು. ಹಬ್ಬ ಶುರುವಾಯಿತೆಂದು ಹೇಳಿಕೊಳ್ಳುವುದಕ್ಕೆ ವಾರಬಿಡುವುದು ಎಂದು ಕರೆಯುತ್ತಿದ್ದರು. ನದಿ ಅಥವಾ ಕೆರೆಗಳಿಂದ ಗ್ರಾಮದೇವತೆಯು ಸ್ನಾನ ಮಾಡಿ ವಿಧಿವಿಧಾನಗಳೊಂದಿಗೆ ಗ್ರಾಮದೊಳಗೆ ಬಂದರೆ ಅದು ಮತ್ತೆ ರಥದಲ್ಲಿ ಕುಳಿತು ತನ್ನ ಗ್ರಾಮವನ್ನು ಸುತ್ತುವವರೆವಿಗೂ ಜನರು ಒಂದಲ್ಲಾ. ಒಂದು ರೀತಿಯಲ್ಲಿ ಉಪವಾಸ, ಅರೆನಿದ್ರೆ, ಲೈಂಗಿಕ ಕ್ರಿಯೆಯನ್ನು ತ್ಯಜಿಸುವುದು, ಮಾಂಸಹಾರಿಗಳಾಗಿದ್ದರೆ ಅದನ್ನು ತ್ಯಜಿಸುವುದು ಕಂಡು ಬರುತ್ತಿತ್ತು. ಇದನ್ನೆ ಅವರು ವಾರಬಿಡುವುದು ಎಂದು ಕರೆದುಕೊಂಡಿದ್ದಾರೆ. ಈ ವಾರದಲ್ಲಿ ಜನರು ಜಾತ್ರೆಯ ಸಿದ್ಧತೆಯಲ್ಲಿ ತೊಡಗುತ್ತಿದ್ದರು. ದೇವ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಹಾಗೂ ತೇರಿನಲ್ಲಿ ಕೂರಿಸಿ ಜಾತ್ರೆ ಮಾಡುವ ಪರಿಪಾಠ ಇದ್ದಿತ್ತು. ಪ್ರಭಾವಿ ದೇವರುಗಳ ಜಾತ್ರೆಗಳು ಪ್ರಭಾವಿ ಜನರ ಪ್ರೀತೆಗೆ ಪಾತ್ರವಾಗಿ ಹೆಚ್ಚಿನ ಹಣ ಸಂಗ್ರಹವಾದ್ದರಿಂದ ತೇರಿನ ಜಾತ್ರೆಗಳಾಗಿಯೂ ಪರಿವರ್ತನೆಯಾಗಿ ಜರುಗುತ್ತ ಬಂದಿರುತ್ತವೆ. ಹಂಪಿಯ ವಿರೂಪಾಕ್ಷ ರಥೋತ್ಸವವು, ನಂಜನಗೂಡಿನ ನಂಜುಂಡೇಶ್ವರಸ್ವಾಮಿ ರಥೋತ್ಸವ, ಕುಮಾರರಾಮ ರಥೋತ್ಸವ, ಎಲ್ಲಮ್ಮನ ರಥೋತ್ಸವ, ಗಳಮ್ಮನ ರಥೋತ್ಸವ, ಮೈಲಾರ ಲಿಂಗನ ರಥೋತ್ಸವ ಹೀಗೆ ನೂರಾರು ಪ್ರಮುಖವಾದವುಗಳನ್ನು ಗುರುತಿಸುತ್ತಾ ಸಾಗಬಹುದು. ವಿಜಯನಗರಸ ಅರಸರ ಆಳ್ವಿಕೆಯ ಕಾಲದಲ್ಲಿ ಹೆಣ್ಣು ದೇವರ ಜಾತ್ರೆಗಳು ಹೆಚ್ಚಾಗಿ ನಡೆಯುತ್ತಿತ್ತೆಂದು ಕಂಡು ಬರುತ್ತದೆ. ಇಂಥವರಲ್ಲಿ ಪ್ರಮುಖವಾಗಿ ಹೆಸರಿಸಬಹುದಾದುವೆಂದರೆ ಗೋಳ್ಯಾದ ಲಕ್ಕಮ್ಮ, ಪುತ್ತರಗಿ ಭಾಗಮ್ಮ, ಖನಗಾವಿ ಕನ್ನವ್ವ, ಗುಂಜಿ ಮಹುಲಿದೇವಿ, ಕಕೇರಿ ಭೀಷ್ಟವ್ವ, ಚಿಂಚಲಿ ಮಾಯವ್ವ, ಗೋಲಗೇರಿ ದುರ್ಗಮ್ಮ, ಪಡಗಾನೂರು ಮಾರಿಲಕ್ಕಮ್ಮ, ಅರೋಲಿ ಹೂಲಿಗೆಮ್ಮ, ಸೊಂತ ಚೆದಮ್ಮ, ಚಿಂಚೋಳಿ ಬಾಗಮ್ಮ, ಸನ್ನತಿ ಚೆನ್ನಮ್ಮ, ಮಾಸಾಳಿ ಚೌಡಮ್ಮ, ಮುನಿರಾಬಾದ್ ಹುಲಿಗೆಮ್ಮ, ಬಗದೂರಿ ಎಲ್ಲಮ್ಮ, ಗಾಳಮ್ಮನ ಗುಡಿ ಗಾಳಮ್ಮ, ಅಲ್ಲದೆ ಪ್ರತಿಯೊಂದು ಗ್ರಮದಲ್ಲಿಯೂ ಗ್ರಾಮದೇವತೆಯಾಗಿ ಕಂಗೊಳಿಸುವ ದೇವತೆಗಳಾದ ಸೋಸಲೆ ಹೊನ್ನದೇವಿ, ಬನ್ನೂರು ಹೇಮಾದ್ರ, ಮೂಗೂರು ತಿಬ್ಬದೇವಿ, ಸವದತ್ತಿ ಎಲ್ಲಮ್ಮ, ಕಲಮಾಲಿಯ ಎಲ್ಲಮ್ಮ, ಚಂದ್ರಗುತ್ತಿಯ ರೇಣುಕಾದೇವಿಯ ಜಾತ್ರೆ ಮುಂತಾದವು ಹೆಣ್ಣು ದೇವತೆಗಳ ಒಂದಿಲ್ಲೊಂದು ಹೆಸರಿನಿಂದ ಇಂದೂ ಸಹ ನಡೆದುಕೊಂಡು ಬರುತ್ತಲಿವೆ. ಇದಕ್ಕೆ ಅಂದು ನಮ್ಮಲ್ಲಿ ಇವುಗಳ ಮೇಲೆ ಆಳವಾಗಿ ಬೇರುಬಿಟ್ಟಿರುವ ಸಂಸ್ಕೃತಿಯೇ ಕಾರಣ.

ಅಂದು ಜಾತ್ರೆಗಳು ಪ್ರಾರಂಭವಾಗುವ ಸಂದರ್ಭದಲ್ಲಿ ತಮ್ಮ ಗ್ರಾಮದ ದೇವರ ಗುಡಿಗಳಲ್ಲಿ ಸ್ವಚ್ಛಗೊಳಿಸಿ, ದೇವಾಲಯವನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಿ, ದೇವರಿಗೆ ಹೊಸಬಟ್ಟೆ, ಆಭರಣ ತೊಡಿಸಿ, ತರತರದ ನೈವೇದ್ಯ ಅರ್ಪಿಸಿ ಸಂತೋಷದಿಂದ ಅದನ್ನು ವೈಯಕ್ತಿಕ ಹರಕೆಗಳ ಜೊತೆಗೆ ಸಾಮೂಹಿಕವಾಗಿ (ಜನರೆಲ್ಲರ ಪರವಾಗಿ) ಕೇಳುವ ಹರಕೆಗಳನ್ನು ದೇವರಿಗೆ ತೀರಿಸಲು ಶುರುಮಾಡುತ್ತಾರೆ. ಇಂತಹ ಸಮಯದಲ್ಲಿ ಅನ್ನ ದಸೋಹದ (ಹಳೆ ಮೈಸೂರು ಪ್ರದೇಶದಲ್ಲಿ ಪರ ಮಾಡುವುದು ಎಂದು ಕರೆಯುತ್ತಾರೆ) ಪವಿತ್ರ ಕಾರ್ಯಗಳು ಜಾತ್ರೆ ನಡೆಯುವ ಅಷ್ಟೂ ದಿನವೂ ನಡೆಸಲು ಏರ್ಪಾಡಾಗಿರುತ್ತಿದ್ದವು, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕುಸ್ತಿ, ಕೋಲಾಟ, ಜನಪದ ನೃತ್ಯ, ಜನಪದ ಗೀತೆಗಳ ಹಾಡುಗಾರಿಕೆಯ ಮೇಳ, ಭಕ್ತಿ ಪುರಾಣ ಕಥೆಗಳ ಮೇಳ, ನಾಟಕ ಮುಂತಾದ ಸಾಂಸ್ಕೃತಿಕ ಪ್ರದರ್ಶನಕ್ಕೆ ಸಿಕ್ಕ ವೇದಿಕೆಗೆ ತಯಾರು ಮಾಡಿಕೊಳ್ಳುತ್ತಿದ್ದರು.

ಅಂತೆಯೇ ಏನೆಲ್ಲಾ ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳಿಗೆ ಆಧ್ಯತೆ ನೀಡಿದರೂ ಸಹ ಅದರ ಜೊತೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವರ ಹೆಸರೇಳಿ ಮೂಕಪ್ರಾಣಿಗಳನ್ನು ಬಲಿಕೊಡುವ ದುಷ್ಟ ಸಂಪ್ರದಾಯವು ಕಠೋರ ರೀತಿಯದಾಗಿತ್ತೆನ್ನಬಹುದು. ಕೋಳಿ, ಕುರಿ, ಹೋತ, ಎಮ್ಮೆ, ಕೋಣ, ಹೋರಿ ಮುಂತಾದ ಪ್ರಾಣಿಗಳು ಇಂತಹ ಹಿಂಸೆಗೆ ಬಲಿ ಬೀಳುತ್ತಿದ್ದವು. ಸಾಮಾನ್ಯವಾಗಿ ಕಾಲರ, ಫ್ಲೇಗು ರೋಗಗಳನ್ನು ತಡೆಯುವುದೆಂದು ಜನರು ನಂಬಿದ್ದ ಮಾರಮ್ಮ, ಭೀಷ್ಟವ್ವ, ಮಾಯವ್ವ, ಲಕ್ಕವ್ವ ದ್ಯಾಮವ್ವ, ಗಾಳೆಮ್ಮ (ಇವುಗಳೆಲ್ಲವೂ ದುಷ್ಟಶಕ್ತಿಯ ವಿರುದ್ಧ ಹೋರಾಡಿದ ದುರ್ಗಿಯ ರೂಪಗಳೆಂದು ಪ್ರತೀತಿ) ದೇವಿ ಜಾತ್ರೆಗಳಲ್ಲಿ ಇಂತಹ ಪದ್ಧತಿಗಳು ಹೆಚ್ಚಾಗಿ ಕಂಡು ಬರುತ್ತಿದ್ದವೆಂದು ಹೇಳಬಹುದು. ಬೀದಿಯಲ್ಲಿ ಇವುಗಳ ಬಲಿಗೆ ಸತ್ತು ಬಿದ್ದಿದ್ದನ್ನು ವಿದೇಶಿ ಪ್ರವಾಸಿಗರು ವಿವರಿಸಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಈ ಮೇಲೆ ಉಲ್ಲೇಖಿಸಿದ ದೇವತೆಗಳೆಲ್ಲವೂ ಸಮಾಜದಲ್ಲಿ ಹಿಂದುಳಿದ ವರ್ಗದವರ (ದಲಿತರ) ಆರಾಧ್ಯ ದೇವತೆಗಳೆ, ಅಷ್ಟೆ ಅಲ್ಲದೆ ಇಂದು ಸಮಾಜದ ಕೆಟ್ಟ ಸಂಪ್ರದಾಯವಾಗಿರುವ ದೇವದಾಸಿ ಪದ್ಧತಿಯನ್ನು ಈ ದೇವತೆಗಳ ಜಾತ್ರೆಯಲ್ಲಿ ಬಿಡುವುದು ಹಾಗೂ ಬೆತ್ತಲೆ ಸೇವೆಯ ಕೆಟ್ಟ ಅನಿಷ್ಟ ಸಂಪ್ರದಾಯಗಳು ಅಂದು ಹೇಳಲು ಸಾಧ್ಯವಾದ ರೀತಿಯಲ್ಲಿ ಇದ್ದಿತ್ತೆನ್ನಬಹುದು. ಇಂದು ಏನೆಲ್ಲ ಕಾನೂನು ಕಟ್ಟಳೆಗಳನ್ನು ನಿರ್ಮಿಸಿದ್ದರೂ ಸಹ ಮೇಲಿನವು ಈಗಲೂ ಇರುವುದು ಕಂಡುಬರುತ್ತದೆ. ಹೆಣ್ಣು ದೇವರ ಜಾತ್ರೆಗಳಂತೆ ಗಂಡು ದೇವರ ಜಾತ್ರೆಗಳೂ ಅಷ್ಟೇ ಪ್ರಸಿದ್ದಿ ಪಡೆದಿರುತ್ತಿದ್ದವು. ಇಂದು ಪೌರಾಣಿಕ ವ್ಯಕ್ತಿಗಳಾಗಿ ಕಂಗೊಳಿಸುವ ವೀರಭದ್ರ ದೇವ ಜಾತ್ರೆಗಳಿಗಂತೂ ಲೆಕ್ಕವೇ ಇಲ್ಲವೆನ್ನಬಹುದು. ಹುಮನಾಬಾದ್, ಕಾರಡಚಿ, ಶಹಪೂರ, ಗೊಡಚಿ, ಯಡೂರ, ಹಲಕಟ್ಟಿ, ನಗನೂರು, ಚಿಣಮಗೇರಿ, ಹೆಬ್ಬಾಳ ಮೊದಲಾದ ಗ್ರಾಮಗಳ ವೀರಭದ್ರ ದೇವರು ಅತ್ಯಂತ ಪ್ರಮುಖ ಸ್ಥಾನಗಳೆಂದು ಹೆಸರು ಪಡೆದಿದ್ದು. ವಿಜೃಂಭಣೆಯಿಂದ ಜಾತ್ರೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದರು.

ಜಾತ್ರೆಯ ವಿವಿಧ ಕಾರ್ಯಕ್ರಮಗಳು ಮುಗಿದ ಮೇಲೆ ಕೊನೆಯ ಹಂತವೆಂದರೆ ದೇವರ ಮೆರವಣಿಗೆ ಅದ್ಯತೆ ನೀಡುವುದು. ಅಂದರೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಲ್ಲದೆ ತೇರಿನಲ್ಲಿ ಇಟ್ಟು ದೇವಾಲಯದ ರಥಬೀದಿಯಲ್ಲಿ ಎಳೆಯುವುದು ತೀರಿಗೆ ರಥ ಎಂದೂ ಕರೆಯುತ್ತಿದ್ದರು. ಪಲ್ಲಕ್ಕಿಯಲ್ಲಿಯೂ ದೇವರ ಮೂರ್ತಿಯನ್ನು ಇಟ್ಟು, ಹೆಗಲ ಮೇಲೆ ಹೊತ್ತುಕೊಂಡು ದೇವರ ಬೀದಿಯ ಸುತ್ತಾ ಸುತ್ತುವುದು ವಾಡಿಕೆಯಾಗಿತ್ತು. ರಥವನ್ನು ಹಗ್ಗಗಳಿಂದ, ಕಬ್ಬಿಣದ ಸರಪಳಿಗಳಿಂದ ನೂರಾರು ಜನಸೇರಿ ಎಳೆಯುವ ವಾಡಿಕೆ ಇದ್ದಿತ್ತು. (ಸಾಮಾನ್ಯವಾಗಿ ರಥ ಎಳೆಯುವುದು ಭಾರವಾದ ಅಥವಾ ಶಕ್ತಿಯನ್ನು ವ್ಯಕ್ತಪಡಿಸುವ ಕೆಲಸವಾದುದರಿಂದ ಇದನ್ನು ಎಳೆಯುವ ಕೆಲಸ ಮಾತ್ರ ಅನಾದಿ ಕಾಲದಿಂದಲೂ ದಲಿತರ ಪಾಲಿಗೆ ಪ್ರಾಪ್ತವಾಗಿದ್ದಿತು. ಆದರೆ ದಲಿತರು ತಮಗೆ ಪ್ರಾಪ್ತವಾಗಿರುವ ಈ ಕೆಲಸದ ಬಗ್ಗೆ ಹೆಮ್ಮೆ ಪಟ್ಟುಕೊಂಡು ತಮ್ಮದೇ ಜಾನಪದವನ್ನು ಸೃಷ್ಟಿಸಿಕೊಂಡು ಆನಂದ ಪಡುವುದು ಉಂಟು, ಆದರೆ ಇದರ ಮೂಲ ಉದ್ದೇಶವೇ ಬೇರೆಯದಾಗಿತ್ತೆನ್ನಬಹುದು). ಅಂದು ತೇರನ್ನು ಅಧ್ಯಾತ್ಮಿಕವಾದ ಸಂಕೇತಕ್ಕೆ ಹೋಲಿಸುತ್ತಿದ್ದರು. ತೇರು ದೇಹಕ್ಕೆ ಪ್ರತೀಕವಾಗಿತ್ತು.

ಜಾತ್ರೆಯಲ್ಲಿ ಒಂದು ಕಡೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯುತ್ತಿದ್ದರೆ. ಇನ್ನೊಂದು ಕಡೆ ದೇವರಿಗೆ ಹರಕೆ ತೀರಿಸುವ, ಉರುಳುಸೇವೆ, ಬೆತ್ತಲೆಸೇವೆ, ದೇವದಾಸಿಯನ್ನು ಬಿಡುವುದು, ಸಿಡಿ ಆಡುವುದು, ಅಗ್ನಿ ತುಳಿಯುವುದು, ಶಸ್ತ್ರ ಹಾಕಿಕೊಳ್ಳುವ ವಾದ್ಯ ಓಲಗ ನುಡಿಸುವ, ಕಾಯಿ – ಕರ್ಪೂರಗಳ ನೈವೇದ್ಯ ಅರ್ಪಿಸುವ, ಮುಡುಪು ಇಡುವ, ಹುಂಡಿ ಹಾಕುವ ಮೊದಲಾದ ಕಾರ್ಯಕ್ರಮಗಳು ತಿಳಿದೋ ತಿಳಿಯದೆಯೋ ಸಂಪ್ರದಾಯಕ್ಕೆ ಜೋತುಬಿದ್ದು ಸಾಗುತ್ತಲೇ ಇರುತ್ತಿದ್ದವು.

ಜಾತ್ರೆಗೆ ಕೇವಲ ಧಾರ್ಮಿಕ ಭಾವವೇ ಮೂಲಕಾರಣವಾದರೂ ಸಹ ಇದಕ್ಕೆ ಸಾಂಸ್ಕೃತಿಕ ಬದುಕಿನ ಹಿನ್ನೆಲೆಯೂ ಅಪಾರವಾಗಿರುವುದು ಕಂಡುಬರುತ್ತದೆ. ಏಕೆಂದರೆ ಜಾತ್ರೆಯ ನೆಪದಿಂದ ಜನರೆಲ್ಲರೂ ಒಂದೆಡೆ ಸೇರುತ್ತಾರೆ. ಜನರಿಗೆ ಪ್ರಾಪಂಚಿಕರಿಗೆ ಬೇಕು ಬೇಕಾದ ವಸ್ತುಗಳ ಮಾರಾಟ ಮಳಿಗೆಗಳು ಸಿದ್ಧವಾಗಿ ಖರೀದಿ ಭರಾಟೆಗಳು ನಡೆಯುತ್ತವೆ. ಕಲಾಕಾರರು ತಮ್ಮ ಕಲಾ ಪ್ರದರ್ಶನಕ್ಕಾಗಿಯೂ, ಕೃಷಿಗೆ ಹಾಗೂ ಮನೆಯ ಬಳಕೆಯ ವಸ್ತುಗಳನ್ನು ಖರೀದಿಗಾಗಿ ಬಹು ದೂರದೂರದ ಜನರೂ ಬಂದು ಸೇರುವರು. ಇದರಲ್ಲಿ ಪ್ರಮುಖವಾದವುಗಳೆಂದರೆ ದನಗಳ ಜಾತ್ರೆಗಳು, ಜಾತ್ರೆಗೆ ಸೇರಿದ ಜನಜಂಗುಳಿಯನ್ನು ಕಂಡು “ಸಿದ್ದೇಶ್ವರ ಪುರಾಣ”ದಲ್ಲಿ ಈ ರೀತಿ ವರ್ಣಿಸಲಾಗಿದೆ. “ಗುಡಿಗಳೊಳು ಗೋಪುರಗಳೊಳ ಪುರದ ಬಿದಿಯಂಗಡಿಗಳೊಳು ಮಠಗಳೊಗಾರವೆ ಗಳೊಳೆ ಕೆರೆಯ ತಡಿಗಳೊಳಗಡೆಯಲ್ಲ ಎಂಬಂತೆ ಬೀಡುಗಳ ಬಿಟ್ಟು ಪರಿಸೆಯ ಮನುಜರು, ಸಡಗರಗೊಂಡು ರಿಂಗಣ ಗುಣಿವು ಕಾಡುತ್ತ, ಬಿಡದೆ ಪಾಡುತ್ತಾ ಮೊಪ್ಪಿದುದು ಹರಿಸವೆನಿಪ್ಪ ಕಡಲೊಳಾಳುತ್ತೆ ಸಿದ್ದೇಂದ್ರ; ಸಿದ್ದೇಂದ್ರ ಎಂದೆನುತೊಸೆದು ಕೀರ್ತಿಸುತ್ತ” ಎಂದು ಜಾತ್ರೆಯ ವರ್ಣನೆಯನ್ನು ಮಾಡಿರುವುದು ಕಂಡುಬರುತ್ತದೆ.

ರೈತರು ತಮ್ಮ ವ್ಯವಸಾಯದ ಬೆನ್ನಲುಬಾದ ದನಗಳನ್ನು ಅತ್ಯಂತ ಪೂಜ್ಯ ಕಾಣುತ್ತಿದ್ದರು. ಇದಕ್ಕಾಗಿಯೇ ವೃಷಭಕ್ಕೆ ದೇವಾನುದೇವತೆಗಳನ್ನು ರಕ್ಷಿಸುವ ಸಂಕೇತವಾಗಿ ಪುರಾಣದಲ್ಲಿ, ಸೃಷ್ಟಿಸಿ ವಿಶಿಷ್ಟ ಸ್ಥಾನ ನೀಡಿರುವುದು ಕಂಡು ಬರುತ್ತದೆ. ಸಾಮಾನ್ಯವಾಗಿ ಇಂದಿಗೂ ಸಹ ಗ್ರಾಮೀಣ ಪ್ರದೇಶದಲ್ಲಿ ಸೋಮವಾರದಂದು ‘ಬಸವನ ದಿನ’ ಎಂದು ಪರಿಗಣಿಸಿ ಅಂದು ಹೆಗಲಿಗೆ ನೇಗಿಲನ್ನು ಏರಿಸುವುದು ಕಂಡು ಬರುವುದಿಲ್ಲ. ಇದಕ್ಕಾಗಿಯೇ ಬಸವನ ಹಬ್ಬವೆಂದು ಅಂದು ‘ಕಾರಹುಣ್ಣಿಮೆ’ ಎಂಬ ಹಬ್ಬವನ್ನು ಆಚರಿಸುತ್ತಿದ್ದು ಕಂಡು ಬರುತ್ತದೆ. ಇದರ ಸುಂದರ ವರ್ಣನೆಯನ್ನು ಕೆ. ಶ್ರೀಕಂಠಯ್ಯನವರು ವಿಸ್ತಾರವಾಗಿ ವಿವರಿಸಿದ್ದಾರೆ.

ಜಾತ್ರೆಯ ಕೊನೆಯ ಹಂತವೇ ತೇರು ಎಳೆಯುವುದು, ಜಾತ್ರೆಯು ತನ್ನ ವೈಭವದ ತುತ್ತತುದಿಯನ್ನು ಮುಟ್ಟಿದ್ದು ತೇರನ್ನು ಎಳೆಯುವ ಸಂದರ್ಭದಲ್ಲಿಯೇ, ವಿಜಯನಗರದ ಕಾಲದಲ್ಲಿ ನಡೆಯುತ್ತಿದ್ದ ಧಾರ್ಮಿಕ ಹಬ್ಬಗಳು ಮತ್ತು ವಿನೋದಗಳು ಒಂದು ವಿವರಣಾತ್ಮಕ ಚಿತ್ರವನ್ನು ವಿದೇಶಿ ಪ್ರವಾಸಿಗರು ಒದಗಿಸಿರುವರು, ಅವರು ಹೇಳುವ ವೈಭವದ ಉತ್ಸವಗಳಲ್ಲಿ ರಥೋತ್ಸವಗಳು ಒಂದು, ಸಾಮಾನ್ಯವಾಗಿ ಇಂದಿಗೂ ಸಹ ನಾಣ್ಣುಡಿಯಾಗಿರುವ “ತೇರ್ ಅರಿದಮ್ಯಾಲೆ ಜಾತ್ರೆ ಅಳಿಯಿತು” ಎನ್ನುವ ಪದವೆ ತೇರಿಗೆ ಮುಂಚೆ ಈ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿದ್ದವೆಂಬುದನ್ನು ಸೂಚಿಸುತ್ತದೆ.

.೯. ಸಂಗೀತ ಮತ್ತು ನಾಟ್ಯ

“ಶಿಲ್ಪವು ಹೇಗೆ ರೂಪಬ್ರಹ್ಮನ ಸ್ವರೂಪವೇ ಹಾಗೆಯೇ ಸಂಗೀತವು ನಾದಬ್ರಹ್ಮನ ಸ್ವರೂಪವಾಗಿರುತ್ತದೆ” ಎಂಬ ಕವಿವಾಣಿಯು ವಿಜಯನಗರದರಸರ ಕಾಲದಲ್ಲಿ ಸತ್ಯವಾಗಿತ್ತು. ಹಿಂದಿನ ಸಂಗೀತ, ನಾಟ್ಯಗಳು ವಿಜಯನಗರದ ಸಾಮ್ರಾಜ್ಯಕ್ಕೆ ಅಲ್ಲದೆ ದೇಶವಿದೇಶಗಳಲ್ಲಿಯೂ ತನ್ನ ಕಂಪನ್ನು ಚೆಲ್ಲಿ ಅದರ ವೈಭವವನ್ನು ಸಾರಿದೆ. ತಾಯಿಯ ಹಾಲು ಮಕ್ಕಳಿಗೆ ಹೇಗೆ ಅವಶ್ಯಕವೋ ಹಾಗೆಯೇ ಶಿಲ್ಪ, ನಾಟ್ಯ, ಸಂಗೀತ, ಸಾಹಿತ್ಯಗಳು ಸುಸಂಸ್ಕೃತ ಮಾನವನಿಗೆ ಅವಶ್ಯಕವೆಂದು ಹೇಳಿದರೆ ತಪ್ಪಾಗದು. ಇದರಿಂದ ಮನಸ್ಸಿಗೆ ಶಾಂತಿ, ಆನಂದ ದೊರಕುವುದರಲ್ಲಿ ಸಂದೇಹವಿಲ್ಲ. ಇತ್ತೀಚೆಗೆ ವೈದ್ಯಕೀಯ ಸಂಶೋಧನೆಯು ಉತ್ತಮ ಸಂಗೀತವು ರಕ್ತದ ಒತ್ತಡ, ಹೃದಯಾಘಾತ, ಮಧುವೇಹ, ಮುಂತಾದ ರೋಗಗಳಿಗೆ ಪ್ರಮುಖ ಮದ್ದೆಂದು ಹೇಳಿರುವುದು ಕಂಡು ಬರುತ್ತದೆ.

ಸಂಗೀತ : ವಿಜಯನಗರದ ಅರಸರು ಸಂಗೀತಕ್ಕೆ ಹಾಗೂ ನಾಟ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದರು. ಪ್ರಾರಂಭದಲ್ಲಿ ಇಮ್ಮಡಿ ದೇವರಾಯನ ಕಾಲದಲ್ಲಿ ಚತುರ ಕಲ್ಲಿನಾಥನಿಗೆ (ಇವನಿಗೆ ಕಲಿಮಾತ್ಯ, ಕೊಲ್ಲಿರಸನೆಂಬ ಹೆಸರುಗಳೂ ಇದ್ದವು) ಕೊಡಲಾಗಿದ್ದ ಹೆಚ್ಚಿನ ಪ್ರೋತ್ಸಾಹದಿಂದಾಗಿ ಸಂಗೀತಕ್ಕೆ (ಕ್ರಿ.ಶ. ೧೪೯೦ರಲ್ಲಿ) ಒಂದು ವಿಶಿಷ್ಟ ರೀತಿಯ ಟೀಕೆಯು ಬಂದಿತ್ತೆಂದು ಹೇಳಬಹುದು. ಅನಂತರ ಈ ಟೀಕೆಯೇ ಹೊಸ ವಿಧಾನವನ್ನು ಪಡೆದು ಹೊಸ ಹೊಸ ರಾಗಗಳಾಗಿ ಹೊರಹೊಮ್ಮಿ ತಮ್ಮದೇ ಆದ ವಿಧಾನದಲ್ಲಿ ವಿವಿಧ ವರ್ಗಗಳಿಗೆ ಸೇರಿಸಲಾಗಿ ಮೇಳ ಪದ್ಧತಿಯು ಹುಟ್ಟಿಕೊಂಡಿತ್ತೆಂದು ತಿಳಿದುಬರುತ್ತದೆ. ಇದೆ ಅಂದಿನಿಂದ ಇಂದಿನವರೆಗೂ ನಾವು ಕಾಣುತ್ತಿರುವ ಮಂಟೇಸ್ವಾಮಿ, ಮಹದೇಶ್ವರ, ಕುಮಾರರಾಮ, ಎಲ್ಲಮ್ಮ, ಹುಲಿಗೆಮ್ಮನವರುಗಳ ಬಗ್ಗೆ ಹುಟ್ಟಿಕೊಂಡ ಮೇಳಗೀತ ಪದ್ಧತಿ, ಚತುರ ಕಲ್ಲಿನಾಥನಿಗಿಂತ ಹಿಂದೆ ಈ ಪದ್ಧತಿಯು ಇರಲಿಲ್ಲವೆಂದೇನೋ ಹೇಳಲಾಗದು. ಆದರೆ ಅದು ಒಂದು ಸಮರೂಪವಾಗಿ ಹೊರಹೊಮ್ಮಿದ್ದು ಇವನ ನಂತರ ಎನ್ನಬಹುದು. ಅದೋ ವಿಜಯನಗರದ ಅರಸರ ಕಾಲದಲ್ಲಿ ಎಂಬುವುದು ಔಚಿತ್ಯ. ಒಂದು ರೀತಿಯಲ್ಲಿ ಮೇಳ ಪದ್ಧತಿಯಿಂದಲೇ ರಾಗಗಳ ಆಕೃತಿಯನ್ನು ಸೃಷ್ಟಿಸಲಾಗಿದೆ ಎಂದೂ ಸಹ ಹೇಳಬಹುದು.

ಅಂದಿನ ಕಾಲದ ಸಂಗೀತ ಹಾಗೂ ನಾಟ್ಯಗಳನ್ನು ಪುಂಡರೀಕ ವಿಠಲರು ರಚಿಸಿರುವ ‘ಸದ್ರಾಗೆ ಚಂದ್ರೋದಯ’, ‘ರಾಗಮಂಜರಿ’ ರಾಗಮಾಲೆ’ ನಟನ ನಿರ್ಣಯ’ ಎಂಬ ಗ್ರಂಥಗಳಿಂದ ತಿಳಿಯಬಹುದಾಗಿದೆ, ಪುಂಡರೀಕರು ಕಲ್ಲಿನಾಥನ ಸೂತ್ರಗಳನ್ನು ಅನುಸರಿಸಿಕೊಂಡೇ ಮೇಳಗೀತೆಗಳನ್ನು ಪ್ರಸ್ಥಾಪಿಸಿರುವುದು ಕಂಡುಬರುತ್ತದೆ. ಇವರುಗಳಿಗೆ ವಿಜಯನಗರದಲ್ಲಿ ಯಾವುದೇ ರೀತಿಯ ಗೌರವವೂ, ಸ್ಥಾನಮಾನವೂ ಇರಲಿಲ್ಲ. ಏಕೆಂದರೆ ಇವರು ಮೇಳಶಾಸ್ತ್ರಕ್ಕೆ ಒಲವು ತೋರಿಸಿದ್ದುದು ತಪ್ಪಾಗಿದ್ದಿತು. ಅಂದು ಮೇಳ ಶಾಸ್ತ್ರವು ಬ್ರಾಹ್ಮಣೇತರರ ಸಾಂಸ್ಕೃತಿಕ ಮೇಳವಾಗಿದ್ದು ಕಂಡು ಬರುತ್ತದೆ.

ವಿಜಯನಗರದಲ್ಲಿ ನೃತ್ಯ ಸಹಿತವಾದ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದಿತು. ಕಾರಣವೆಂದರೆ ಈ ಎರಡು ಸಂಗಮವಾಗಿರುವ ಸಂಗೀತವು ಭಕ್ತಿಮಾರ್ಗದಿಂದ ಮುಕ್ತಿಗೆ ಕರೆದೊಯ್ಯುತ್ತದೆ ಎಂಬ ಭಾವನೆಯು ಅವರಲ್ಲಿ ಮನೆಮಾಡಿತ್ತೆನ್ನಬಹುದು. ಸಂಗೀತದ ಅಡಿಪಾಯಗಳಾಗಿರುವ ಸಪ್ತಸ್ವರಗಳಾದ ಸ – ರಿ – ಗ – ಮ – ಪ – ದ – ನಿಗಳು ಆಧ್ಯಾತ್ಮಿಕ ರೀತಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿರುವುದು ಕಂಡುಬರುತ್ತದೆ. ಸಂಗೀತಶಾಸ್ತ್ರದಲ್ಲಿ ಇವುಗಳ ಅರ್ಥವನ್ನು ಈ ಕೆಳಕಂಡಂತೆ ವಿಶ್ಲೇಷಿಸಿರುವುದು ಕಾಣಬಹುದು.

:ತ್ರಿಗುಣಾತ್ಮಿಕೆ : ತ್ರಿಕುಂತಲಿಸಹಿತೆ, ಹತ್ತು ಕೋಟಿ ಮಿಂಚುಗಳ ಪ್ರಕಾಶವುಳ್ಳವಳು, ಪಂಚಭೂತಸ್ವರೂಪಿಣಿ, ಶ್ವೇರವರ್ಣೆ, ಶ್ವೇತಾಂಬರಧಾರಿಣಿ, ರಕ್ತ ನಯನೆ, ಶ್ವವೇತಚಂದ ನಾನುಲಿಪ್ತೆ, ಮುತ್ತಿನಹಾರವನ್ನು ಧರಿಸಿರುವವಳು, ಪ್ರಶಾಂತವದನೆ, ಸತ್ಯದ್ವರೂಪಿಣಿ ಎಂಬರ್ಥವನೂ……,

ರಿ : ದ್ವಿಕುಂಡಲೀಸಹಿತೆ : ಕೆಂಪುಮಿಂಚಿನ ವರ್ಣದವಳು, ಪಂಚಭೂತ ಸ್ವರೂಪಿಣಿ, ಲೋಲಜಹ್ಯೆ, ಭಯಂಕರರೂಪಿಣಿ, ರಕ್ತಾಂಬರಧಾರಿಣಿ, ರಕ್ತ ಪುಷ್ಟ ಭೂಷಣಾಂಬರಧಾರಿಣಿ ಅಶ್ವ ಸಿದ್ದಿನಾಯಕೆ, ಬ್ರಹ್ಮ ಸ್ವರೂಪಿಣಿ ಎಂಬರ್ಥವನೂ……….

: ನಿರ್ಗುಣಾತ್ಮಿಕೆ : ನಿರ್ಮಲವಾದ ಉದಯಸೂರ್ಯನು ಪ್ರಕಾಶವುಳ್ಳವಳು, ಚೈತನ್ಯ ಸ್ವರೂಪಿಣಿ, ದಾಳಿಂಬೆಯ ಹೂವಿನ ಬಣ್ಣದವಳು, ರಕ್ತವಸ್ತ್ರಾಭರಣಧಾರಿಣೀ, ಬ್ರಹ್ಮಸ್ವರೂಪಿಣಿ ಎಂಬರ್ಥವನೂ………

: ಪ್ರಾತಃಕಾಲದ ಸೂರ್ಯನ ಪ್ರಕಾಶವುಳ್ಳವಳು : ನೀಲವರ್ಣಿ, ದಶಭುಜಾದ್ವಿನಿತೆ, ಭಯಂಕರವಾದ ಬಲವಾದ ಆಕಾರವುಳ್ಳವಳು, ಧರ್ಮಾರ್ಥಕಾಮಮೋಕ್ಷಪ್ರದೆ ಎಂಬರ್ಥವನೂ…….

: ವಿವಿಧ ವರ್ಣಧಾರಿಣಿ : ದ್ವಿಭುಜೆ, ಪದ್ಮಾಕ್ಷಿ, ರಕ್ತಚಂದನ ಚರ್ಚಿತೆ, ಪದ್ಮಮಾಲಿನಿ, ನವರತ್ನ ಶೋಭಿತೆ, ಪ್ರಶಾಂತೆ

: ಸತ್ಯರೂಪಿಣಿ : ಶಕ್ತಿತ್ರಯನ್ವಿತೆ, ಹಳದಿಯ ಮಿಂಚಿನ ಕಾಂತಿಯುಳ್ಳವಳು, ಮನೋಹರೆ, ನಿತ್ಯಮಂಗಳೆ……

ನಿ : ಹತ್ತು ಕೋಟಿ ಮಿಂಚಿನ ಪ್ರಕಾಶವುಳ್ಳವಳು : ಚಾರುಲೋಚನೆ, ಲೋಲಜಿಹ್ಯೆ, ಚತುರ್ಬಾಹು ಸಮನ್ಯಿತೆ, ಸುಗಂಧಾನುಲಿಪ್ತೆ, ನಿತ್ಯಾಮಂಗಲದಾಯಿನಿ

ಎಂದು ಆಧ್ಯಾತ್ಮಿಕ ಮಾದರಿಯಲ್ಲಿ ಸಂಗೀತ ಶಾಸ್ತ್ರವು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆಗೆ ವಿಜಯನಗರದ ಅರಸರು ಹೆಚ್ಚಿನ ಭಕ್ತಿಭಾವಗಳಿಂದ ನಡೆದುಕೊಂಡು ಬಂದಿರುವುದು ಕಂಡುಬರುತ್ತದೆ. ಕರ್ನಾಟಕ ಸಂಗೀತ ಪಿತಾಮಹನೆಂದು ಕರೆಸಿಕೊಂಡಿರುವ ಪುರಂದರದಾಸರು ವಿಜಯನಗರವು ಉತ್ತುಂಗವು ಶಿಖರದಲ್ಲಿದ್ದಾಗ ಇದ್ದು. ಹೊಸ ಹೊಸ ಸಂಗೀತಗಳನ್ನು ಸೃಷ್ಟಿಸಿ, ಕೀರ್ತನೆಗಳ ಮೂಲಕ ಹಾಗೂ ಕೃತಿಗಳ ಮೂಲಕ ಅವುಗಳನ್ನು ಇಂದಿಗೂ ನಮಗೆ ಬಳುವಳಿಗಳಾಗಿ ಬಿಟ್ಟು ಹೋಗಿದ್ದಾರೆ. ನೂರಾರು ವರ್ಷಗಳು ಕಳೆದಿದ್ದರೂ ಸಹ ಅಂದು ಅವರು ಸೃಷ್ಟಿಸಿರುವ ಸಂಗೀತಗಳು ಇಂದಿಗೂ ಜೀವಂತವಾಗಿವೆ.

ನಾಟ್ಯ : ವಿಜಯನಗರದ ಅರಸರು ಸಂಗೀತ ಮತ್ತು ನಾಟ್ಯಗಳೆರಡರಲ್ಲಿಯೂ ಪಾಂಡಿತ್ಯವನ್ನು ಪಡೆದಿದ್ದರು. ಅಸ್ಥಾನದಲ್ಲಿ ಸಂಗೀತಗಾರ್ತಿಯರು ಹಾಗೂ ನೃತ್ಯಗಾರ್ತಿಯರು ತುಂಬಿತುಳುಕುತ್ತಿದ್ದರೆಂದು ವಿದೇಶಿ ಪ್ರವಾಸಿಗರು ಹೇಳಿರುವುದು ಗಮಣಾರ್ಹವಾಗಿದೆ. ಕೃಷ್ಣದೇವರಾಯನು ನಾಟ್ಯ ಸಂಗೀತಗಳೆರಡನ್ನೂ ರಾಘವೇಂದ್ರತೀರ್ಥರ ಪೂರ್ವಿಕನಾದ ಕೃಷ್ಣನಿಂದ ಅಭ್ಯಸಿಸಿದನೆಂದು ಸಾಹಿತ್ಯವು ತಿಳಿಸುತ್ತದೆ. ಅವನೇ ರಚಿಸಿರುವ ಸಂಸ್ಕೃತ ಗ್ರಂಥವಾಗಿರುವ ಜಾಂಬುವತೀಕಲ್ಯಾಣ ಸಂಗೀತ ಹಾಗೂ ನಾಟ್ಯದ ಬಗ್ಗೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ. ಸಂಗೀತ ಸೂರ್ಯೋದಯದ ಕರ್ತೃವಾದ ಬಂಧಂ ಲಕ್ಷ್ಮೀನಾರಾಯಣರಿಂದ ಸಂಗೀತ ಕಲೆಯನ್ನು ಅಭ್ಯಾಸಮಾಡಿದನೆಂದು ತಿಳಿದುಬರುತ್ತದೆ.

ಸಂಗೀತ ಮತ್ತು ನೃತ್ಯದಲ್ಲಿ ಅಂದು ಮೊದಲ ಸ್ಥಾನವೆಂದರೆ ದೇವದಾಸಿಯರದಾಗಿತ್ತು. ಅಂದಿನ ಕಾಲದಲ್ಲಿ ದೇವದಾಸಿಯರೆಂದರೆ ಸೂಳೆಯರಲ್ಲ ಎಂಬುವುದು ಗಮನಿಸಬೇಕಾದ ಅಂಶ. ಒಳ್ಳೆಯ ವಂಶಕ್ಕೆ ಸೇರಿದ ಗುಣವಂತರೂ ಶೀಲವಂತರೂ ತಮ್ಮ ತಮ್ಮ ಹೆಣ್ಣು ಮಕ್ಕಳನ್ನು ದೇವರ ಸೇವೆಗೆಂದು ನೇಮಿಸುತ್ತಿದ್ದರು. ಅವರ ಮುಖ್ಯ ಕೆಲಸವೆಂದರೆ ದೇವಮಂದಿರ ಹಾಗೂ ದೇವರ ಉತ್ಸವಗಳಲ್ಲಿ ವರ್ತಿಸುವುದು ಹಾಗೂ ಹಾಡುವುದಾಗಿತ್ತೆಂದು ಹೇಳಬಹುದು. (ರಾಜರ ಆಸ್ಥಾನದಲ್ಲಿ ಇದ್ದ ದೇವದಾಸಿಯರಿಗೆ ಮಾತ್ರ ಈ ಗೌರವವಿದ್ದಿತ್ತು). ಬಾರ್ಬೋಸಾ ಇವರ ಬಗ್ಗೆ ಉಲ್ಲೇಖಿಸುತ್ತಾ ಗೃಹಸ್ಥರು ತಮ್ಮ ಹತ್ತು ವರ್ಷದ ಹೆಣ್ಣುಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರಿಗೆ ಸಮರ್ಪಿಸಿದ ಮೇಲೆ ಆ ಕನ್ಯೆಯರಿಗೆ ಸಮಾಜದಲ್ಲಿ ಮದುವೆಯಾದವರಿಗೆ (ಮುತ್ತೈದೆಯರಿಗೆ) ಸಲ್ಲುತ್ತಿದ್ದ ಗೌರವಗಳು ಸಲ್ಲುತ್ತಿದ್ದವು. ಅವರು ದೇವದಾಸಿಯರಾಗಿ ಜನರ ಗೌರವಕ್ಕೆ ಪಾತ್ರರಾಗುತ್ತಿದ್ದರು. ಅವರಿಗೆ ಒಳ್ಳೆಯ ವಾಸಸ್ಥಳಗಳು ದೊರಕುತ್ತಿದ್ದವು. ರಾಣಿಯರ ಅಂತಃಪುರಗಳಿಗೆ ಹೋಗುವುದಕ್ಕೂ ಅಲ್ಲಿರುವುದಕ್ಕೂ ಅವರೊಡನೆ ಸ್ನೇಹವನ್ನು ಬೆಳೆಸಿ ತಾಂಬೂಲವನ್ನು ಸೇವಿಸುವುದಕ್ಕೂ ಅರ್ಹತೆಯನ್ನು ಪಡೆಯುತ್ತಿದ್ದರು. ಮಹಾನವಮಿ ಉತ್ಸವದಲ್ಲಿ ಅವರು ಇಷ್ಟಪಡುವ ಅರ್ಹತೆಯನ್ನು ಪಡೆಯುತ್ತಿದ್ದರು. ಮಹಾನವಮಿ ಉತ್ಸವದಲ್ಲಿ ಅವರು ಇಷ್ಟಪಡುವ ಮೆಟ್ಟಿಲುಗಳನ್ನು ಹತ್ತಿಕೊಂಡು ವೈಭವವನ್ನು ನೋಡುವ ಅವಕಾಶವನ್ನು ಕೃಷ್ಟದೇವರಾಯನು ಅವರಿಗೆ ಕೊಟ್ಟಿದ್ದನು ಎಂದು ವಿದೇಶಿಯರ ಸಾಹಿತ್ಯ ಆಧಾರಗಳಿಂದ ತಿಳಿದುಬರುತ್ತದೆ.

ಸಂಗೀತ ಹಾಗೂ ನಾಟ್ಯಗಾರರು ವಿಧವಿಧವಾದ ಉಡುಪುಗಳನ್ನು ಧರಿಸುತ್ತಿದ್ದರೆಂಬುವುದು ಹಜಾರ ರಾಮಸ್ವಾಮಿ ದೇವಸ್ಥಾನ ಹಾಗೂ ಮಹಾನವಮಿ ದಿಬ್ಬದ ಮೇಲು ಗೋಡೆಗಳ ಮೇಲೆ ಕೆತ್ತಿರುವ ಕೆತ್ತನೆಯಿಂದ ತಿಳಿಯಬಹುದಾಗಿದೆ. ಕೆಲವರು ಕಚ್ಚೆ – ಪೈಜಾಮಗಳೂ, ಜುಬ್ಬ – ತಲೆಗೆ ದಪ್ಪನೆಯ ಪೇಟಿ ಇದ್ದವೆಂದೂ ಕಂಡುಬರುತ್ತದೆ. ಮಹಿಳೆಯರಿಗೆ ಲಂಗ ಹಾಗೂ ಉತ್ತರೀಯಗಳೂ ಇರುವುದ ಕಂಡುಬರುತ್ತದೆ. (ಉತ್ತರೀಯಾ ಎಂದರೆ ಅನೇಕ ಸುಳಿಗಳನ್ನು ಒಂದಾಗಿ ಹೊಂದಿರುವ ಸೀರೆಯ ನೆರೆ ಇರುವ ವಸ್ತ್ರ) ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಒಡವೆಗಳನ್ನು ಧರಿಸುತ್ತಿದ್ದರು ಎನ್ನುವುದು ದೇವಾಲಯದಲ್ಲಿನ ಉಬ್ಬುಶಿಲ್ಪಗಳಿಂದ ತಿಳಿದುಬರುತ್ತದೆ. ಕೆಲವು ನರ್ತಕಿಯರು ಲಂಗಗಳನ್ನು ಮಾತ್ರ ಧರಿಸುತ್ತಿದ್ದದ್ದು ಕಂಡುಬಂದರೆ, ಇನ್ನೂ ಕೆಲವರು ಪೂರ್ಣನಗ್ನರಾಗಿಯೇ ನೃತ್ಯ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ವಿಧವಾದ ನರ್ತಕಿಯರಿಂದ ಭರತನಾಟ್ಯವನ್ನು ಶ್ರೀಮಂತಗೊಳಿಸಲಾಯಿತು. ಮಹಾನವಮಿ ಉತ್ಸವಗಳು, ರಥೋತ್ಸವಗಳು, ದೇವಸ್ಥಾನದಲ್ಲಿ ಪ್ರತಿ ಶನಿವಾರ ನಡೆಯುತ್ತಿದ್ದ ಉತ್ಸವಗಳಲ್ಲಿಯೂ ಇವರು ತಪ್ಪದೆ ನರ್ತಿಸಬೇಕಾಗಿತ್ತು. ಇದಕ್ಕೆ ರಾಜಾಜ್ಞೆಯಾಗಿದ್ದಿತ್ತೆಂದು ಕಂಡುಬರುತ್ತದೆ. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗವು ಪ್ರಕಟಿಸಿರುವ “ಹಂಪಿ ಶಾಸನ” ಸಂಪುಟದಲ್ಲಿರುವ ೮೮ನೇ ಶಾಸನವನ್ನು ಇದಕ್ಕೆ ಉದಾಹರಣೆಯಾಗಿ ನೀಡಬಹುದು. ಆದರೆ ಶೂದ್ರರು ಹಾಗೂ ಪಂಚಮರು ನಾಟ್ಯ ಹಾಗೂ ಸಂಗೀತ ಕಲಿಯಬಾರದೆಂದು ಸಹ ರಾಜಾಜ್ಞೆಯಾಗಿದ್ದಿತ್ತು. ಪೇಯಸರು ಅಂದಿನ ನಾಟ್ಯದ ಬಗ್ಗೆ ರಾಣಿಯರು ಎಷ್ಟು ತಲ್ಲೀನರಾಗಿದ್ದರಂಬುದನ್ನು ವಿವರಿಸುತ್ತಾ ರಾಣಿವಾಸದವರೂ ಸಹ ಬಹಿರಂಗವಾಗಿಯೇ ಮನರಂಜನೆಗಾಗಿ ನಾಟ್ಯವಾಡುತ್ತಿದ್ದರೆಂದು ಅವರಿಗೆ ತಕ್ಕ ಶಿಕ್ಷಣವೂ ದೊರಕುತ್ತಿತ್ತೆಂಬುದರಲ್ಲಿ ಸಂದೇಹವಿಲ್ಲ. ಅವರಿಗೆ ಶಿಕ್ಷಣ ಶಾಲೆಯೂ ಇದ್ದು ಅಲ್ಲಿ ಅವರ ತಪ್ಪುಗಳನ್ನು ತಿದ್ದಿಕೊಳ್ಳಲು ಚಿತ್ರಗಳ ಸಹಾಯವೂ ಇದ್ದಿತ್ತೆಂದು ಹೇಳಿದ್ದಾನೆ. ಇದು ಅಂದು ರಾಣಿಯರು ಸಂಗೀತ ಮತ್ತು ನೃತ್ಯಕ್ಕೆ ನೀಡಿದ ಆಸಕ್ತಿಯನ್ನು ಸೂಚಿಸುತ್ತದೆ.

.೧೦. ಶಿಕ್ಷಣ ಮತ್ತು ತಂತ್ರಜ್ಞಾನ

ದಿವಂಗತ ಹಯವದನರಾಯರು ಮೈಸೂರು ಗೆಜೆಟಿಯರ್ ಸಂಪುಟ ನಾಲ್ಕರಲ್ಲಿ ಹಿಂದಿನ ಕಾಲದ ಶಿಕ್ಷಣ ಪದ್ಧತಿಯನ್ನು ಅವಲೋಕಿಸುತ್ತಾ ಸಾರ್ವಜನಿಕ ಶಿಕ್ಷಣವನ್ನು ಹಿಂದೆಂದೂ ಸರ್ಕಾರದ ಕರ್ತವ್ಯವೆಂದು ಪರಿಗಣಿಸಿದ ಹಾಗೆ ಎಲ್ಲೂ ಕಾಣುವುದಿಲ್ಲ ಎಂದು ಹೇಳಿದ್ದಾರೆ. ಈ ಮಾತಿಗೆ ವಿಜಯನಗರದ ಸಾಮ್ರಾಜ್ಯವು ಹೊರತಾಗಿರಲಿಲ್ಲ ಎಂದು ಹೇಳಬಹುದು. ವಿಜಯನಗರದರಸರು ವಿದ್ವತ್ತನ್ನು ಮತ್ತು ಶಿಕ್ಷಣದ ಪ್ರಸಾರವನ್ನು ಪ್ರೋತ್ಸಾಹಿಸಿದಕ್ಕೆ ಕಾರಣವೆಂದರೆ ಸ್ವತಃ ಅವರೇ ವಿದ್ಯಾವಂತರಾಗಿದ್ದರು ಎನ್ನುವುದು ಒಂದು ರೀತಿಯದಾದರೆ. ಮತ್ತೊಂದು ಕಡೆ ಅವರೆ ಮೂಲ ಸಂಪ್ರದಾಯಗಳಿಗೆ ಮನಸೋತು ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣವಾಗಿ ಬದಿಗೊತ್ತಿದ್ದರು ಎಂದು ಹೇಳಬಹುದು. ರಾಜಕುಮಾರರ ವಿದ್ಯಾಭ್ಯಾಸದಿಂದ ಮುಂದುವರಿದ ಈ ಪರಂಪರೆಯು ನಂತರದ ವಿಜಯನಗರದ ಅರಸರೂ ಸಹ ಅನುಸರಿಸಿಕೊಂಡು ಬಂದರು. ಎಷ್ಟೋ ವೇಳೆ ರಾಜರೇ ಈ ಬಗ್ಗೆ ತನ್ನ ಉತ್ತರಾಧಿಕಾರಿಯಾಗುವವರಿಗೆ ತಿಳುವಳಿಕೆ ಕೊಟ್ಟಿದ್ದೂ ಕಂಡುಬರುತ್ತದೆ.

ವಿಜಯನಗರದ ಕಾಲದ ಶಿಕ್ಷಣವು ವಿಚಾರವನ್ನು ನಾವು ಬಹಳ ಮಟ್ಟಿಗೆ ಶಾಸನಗಳಿಂದ ಸಂಗ್ರಹಿಸಬಹುದಾಗಿದೆ. ಇವುಗಳಲ್ಲಿ ಕೆಲವಂತೂ ಸ್ವಾರಸ್ಯಪೂರ್ಣವಾದ ವಿವರಗಳನ್ನು ಒದಗಿಸುತ್ತವೆ. ಅಷ್ಟೆ ಅಲ್ಲದೆ ಅಂದಿನ ಕಾಲದ ಸಮಕಾಲೀನ ಸಾಹಿತ್ಯವು ಈ ವಿಚಾರವಾಗಿ ಹೆಚ್ಚಿನ ಬೆಳಕನ್ನು ಚೆಲ್ಲುತ್ತದಲ್ಲದೆ ಈ ಶಿಕ್ಷಣದ ಚಟುವಟಿಕೆಗಳು ಅಂದು ಕೆಲವೇ ವರ್ಗಗಳ ಬೌದ್ದಿಕ. ನೈತಿಕ ಹಾಗೂ ಸಾಂಸ್ಕೃತಿಕ ವಿಷಯಗಳ ಮೇಲೆ ಗಮನಹರಿಸಲು ನಿಜವಾದ ಆಧಾರವಾಗಿರುತ್ತಿದ್ದವು. ಇವುಗಳ ಆಧಾರದ ಮೇಲೆಯೇ ಅಂದಿನ ಸಾಮ್ರಾಜ್ಯದ ಅಡಿಗಲ್ಲು ಇದ್ದಿತೆಂದು ಹೇಳಬಹುದಾಗಿದೆ.

ಪ್ರಾಥಮಿಕ ಶಿಕ್ಷಣ

ಅಂದಿನ ಕಾಲದಲ್ಲಿ ಶಿಕ್ಷಣಕ್ಕೆ ‘ಬಾಲಬೋದೆ’ ಎಂದು ಹೆಸರಿದ್ದಿತ್ತೆನ್ನಬಹುದು. ಕನಕದಾಸರು ತಮ್ಮ ಮೋಹನತರಂಗಿಣಿ’ಯಲ್ಲಿ ಕಸೆ ಅಂಗಿ ತೊಟ್ಟು ಕೈಯಲ್ಲಿ ಬೆತ್ತ ಹಿಡಿದು ಔಷಧಿಗಳನ್ನು ರಚಿಸುವುದರಲ್ಲಿ ನಿಪುಣರಾದ, ಪ್ರಾಥಮಿಕ ಶಾಲೆಯ ಉಪಾಧ್ಯಾಯರ ಚಿತ್ರವೂ, ಅಂದಿನ ಮಕ್ಕಳ ಪುಸ್ತಕಗಳ ವರ್ಣ ಚಿತ್ರಗಳಿಂದ ಕೂಡಿದ್ದವೆಂಬ ಸಂಗತಿಯೂ ದೊರೆಯುತ್ತದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳು ಮಣ್ಣಿನ ಅಥವಾ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುವುದನ್ನು ಕಲಿತರು ಎಂಬುವುದು ತಿಳಿದಿರುವ ವಿಷಯವೇ, ಇವುಗಳಿಗೆ ‘ಧೂಳಾಕ್ಷರ’ ಎಂದು ಕರೆಯುತ್ತಿದ್ದರು. ವಿದೇಶಿ ಪ್ರವಾಸಿಗರೊಬ್ಬರ ಪ್ರಕಾರ ಪಾಠಶಾಲೆಯೊಂದರಲ್ಲಿ ಉಪಾಧ್ಯಾಯರಿಂದ ಕಲಿತ ಪಾಠವನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಲು, ವಿದ್ಯಾರ್ಥಿಗಳು ಬಾಯಿಪಾಠಗಳಲ್ಲಿ ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಪುನರಾವರ್ತನೆ ಮಾಡುತ್ತಿದ್ದರು. ನಿದರ್ಶನಕ್ಕೆ ‘ಒಂದೊಂದ್ದೆ ಒಂದು’ ಎಂಬಂತೆ ಪುನರಾವರ್ತನೆಯನ್ನು ಕೇಳುತ್ತಲೆ ಉಳಿದ ಹುಡುಗರು, ಅದನ್ನೆ ಬಾಯಿಯಲ್ಲಿ ಹೇಳುತ್ತಾ ಎದುರಿಗೆ ಮರಳಿನ ಮೇಲೆ ಅದೇ ಪ್ರಕಾರ ಬರೆಯುತ್ತಿದ್ದರು. ಹೀಗೆ ಪ್ರಾಥಮಿಕ ಪಾಠ ಸಾಗುತ್ತಿದ್ದಿತು ಎಂದು ಹೇಳಿ ಅಂದಿನ ಪ್ರಾಥಮಿಕ ಶಿಕ್ಷಣ ಪದ್ಧತಿಯನ್ನು ಮೆಚ್ಚಿಕೊಂಡಿದ್ದಾನೆ. ವಿದ್ಯಾರ್ಥಿಗಳಿಗೆ ಕಾಗದವನ್ನಾಗಲಿ ಅಥವಾ ಮಸಿಯನ್ನಾಗಲಿ ವ್ಯರ್ಥಮಾಡಿಸದೆ ಓದುಬರಹವನ್ನು ಕಲಿಯುವ ಈ ವಿಧಾನ ನಿಜವಾಗಿಯೂ ಅತ್ಯಂತ ಸುಲಭವಾದದ್ದೆ ಆಗಿತ್ತು.

ಇನ್ನೊಂದು ಭಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾದ ಕೃತಿಗಳೆಂದರೆ ಜೈಮಿನಿ ಭಾರತ, ವಿದುರನೀತಿ, ಅಮರಕೋಶ, ಪಂಚತಂತ್ರ, ಸೋಮೇಶ್ವರಶತಕ ಹಾಗೂ ಕೆಲವು ವಿದ್ಯಾರ್ಥಿಗಳು ಸಂವತ್ಸರಗಳ, ನಕ್ಷತ್ರಗಳ, ದಿಕ್ಸೂಚಿಯ ವಿವರಗಳನ್ನು ದೇವರ ಮಹಿಮಾ ವಿಶೇಷಗಳನ್ನು ಸುತ್ತಿಸುವ ಹಲವು ಬಗೆಯ ಹಾಡುಗಳನ್ನು ಕಲಿಯುತ್ತಿದ್ದರು.

ವಿಜಯನಗರದ ಅರಸರು ಶಿಕ್ಷಣಕ್ಕೆ ಎಷ್ಟರ ಮಟ್ಟಿನ ಪ್ರಾಮುಖ್ಯತೆ ನೀಡಿದ್ದರೆಂಬುವುದಕ್ಕೆ ಇಂದಿಗೂ ಕಂಡುಬರುವ ಅಗ್ರಹಾರಗಳು, ದೇವಾಲಯಗಳು ಹಾಗೂ ಮಠಗಳೇ ನಿದರ್ಶನವಾಗಿವೆ. ಪ್ರಾಥಮಿಕ ಹಂತದಲ್ಲಿ ಓದು ಬರಹ ಕೇವಲ ಗಣಿತವನ್ನು ಮಾತ್ರ ಕಲಿಯುವುದಾಗಿದ್ದರೂ ನಮ್ಮಲ್ಲಿ ಇರುವ ನಾಣ್ಣುಡಿ ತಾಯಿಯೇ ಮಗುವಿಗೆ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿಗೆ ನಿದರ್ಶನವೆಂಬಂತೆ ಮೊದಲನೆ ದೇವರಾಯನ ಮಂತ್ರಯಾದ ಲಕ್ಷ್ಮೀಧರನಿಗೆ ಅವನ ತಾಯಿ ದಿನವೂ ಹಾಲೆರೆಯುವಾಗ ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯವನ್ನು ಕಟ್ಟಿಸು, ಸೆರೆಯಲ್ಲಿ ಸಿಕ್ಕಿದ ಅನಾಥರನ್ನು ಬಿಡಿಸು, ಮಿತ್ರರಿಗೆ ಆಶ್ರಯನಾಗು, ನಂಬಿದವರಿಗೆ ನೆಲೆಯಾಗು ನಂತರ ಸುಖಶಾಂತಿಯಿಂದ ರಾಜನಾಗಿ ರಾಜ್ಯಭಾರ ಮಾಡು ಎಂದು ಹೇಳುತ್ತಾ ಬೆಳೆಯಿಸಿದಳಂತೆ (ಆಧಾರ S.I.I. IV.No.267, P.62).

ಮೇಲಿನ ತಾಯಿಯ ಮಾತು ಅಂದಿನ ರಾಜನಾಗುವವನ ಕರ್ತವ್ಯ ಹಾಗೂ ಸಾಮಾನ್ಯ ಜನರ ಮೇಲೆ ಇದ್ದ ಮಮಕಾರವನ್ನು ಸೂಚಿಸುತ್ತದೆ. ಇದನ್ನೇ ತಾಯಿ ಸಂಸ್ಕೃತಿ ಎಂದು ಕರೆಯುವುದಲ್ಲವೆ.

ಮಧ್ಯಕಾಲೀನ ಕರ್ನಾಟಕದಲ್ಲಿ ಪ್ರಮುಖ ವಿದ್ಯಾಕೇಂದ್ರಗಳು ಅಗ್ರಹಾರಗಳು, ಮಠಗಳು, ದೇವಸ್ಥಾನಗಳು, ಬ್ರಹ್ಮಪುರುಗಳೂ ಮತ್ತು ಘಟಿಕಾ ಸ್ಥಾನಗಳು, ಇವುಗಳಲ್ಲಿ ವಿಜಯನಗರದ ಅರಸರ ಕಾಲದಲ್ಲಿ ಅಗ್ರಹಾರಗಳು, ಮಠಗಳೂ, ಶೈಕ್ಷಣಿಕ ಕ್ಷೇತ್ರದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದವೆಂದು ಕಂಡುಬರುತ್ತದೆ. ವಿಜಯನಗರದ ನಂತರ ಈ ವಿದ್ಯಾ ಕೇಂದ್ರಗಳ ಘನತೆಯು ಕುಗ್ಗುವಂತೆ ಮಾಡಿದ ಅನೇಕ ಘಟನೆಗಳು ನಡೆದಿರುವುದು ಕಂಡು ಬರುತ್ತದೆ ಅಂದಿನ ಕಾಲದ ಮಠದ ಶಿಕ್ಷಣವು ಕೇವಲ ಒಂದು ಮತ ಧಮ್ದ ಅಚಾರ್ಯಧೋರಣೆಯ ಪೀಠಗಳಾಗಿದ್ದವು. ಇಂಥಹ ಶಿಕ್ಷಣದ ಸುತ್ತ ಮಠಗಳು ತಮ್ಮ ಬಹು ಬಗೆಯ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದವು.

ಅಂದಿನ ಕಾಲದ ಶಿಕ್ಷಣ ಪದ್ಧತಿಯ ಪ್ರಗತಿಯ ಬಗ್ಗೆ ಕುರಿತು ಸೋಮೇಶ್ವರ ಶತಕವು ಹೇಳುವುದರ ರೀತಿಯಲ್ಲಿಯೇ ರಾಜರ ಸಭೆಯು ಕವಿಗಳು, ಗಾಯಕ್ರು ಪೌರಾಣಿಕರು, ಹಾಸ್ಯಗಾರರು, ಚಿರಿತ್ರಾಕಾರರು, ಸೋತಿಷಿಗಳು, ಚತುರ ವಾಗ್ಮಿಗಳು ಮತ್ತು ಯುದ್ಧಕಲಾ ನಿಪುಣರುಗಳಿಂದ ತುಂಬಿ ಶೋಭಿಸುತ್ತದೆ ಎಂದು ಹೇಳಿರುವುದರಲ್ಲಿಯೇ ಊಹಿಸಬಹುದಾಗಿದೆ. ಸೋಮೇಶ್ವರ ಶತಕದ ಪ್ರಕಾರ ಶಿಕ್ಷಣವನ್ನು ಯಾವುದರಿಂದ ಕಲಿಯಬೇಕು ಎಂದು ಹೇಳಿರುವುದು ಅತ್ಯಂತ ಮಹತ್ವವಾದದ್ದಾಗಿದೆ. ಇದರ ಪ್ರಕಾರ ಅ. ಕೆಲವನ್ನು ಬಲ್ಲವರಿಂದ ಕಲಿಯಬೇಕು, ಆ. ಕೆಲವನ್ನು ಶಾಸ್ತ್ರಗಳಿಂದ ಕಲಿಯಬೇಕು, ಇ. ಕೆಲವನ್ನು ಇತರರ ಕೃತಿಗಳಿಂದ ಅರಿಯಬೇಕು ಈ. ಕೆಲವನ್ನು ತನ್ನ ಬುದ್ದಿಶಕ್ತಿಯಿಂದ ತಿಳಿಯಬೇಕು ಉ. ಕಡೆಯದಾಗಿ ಕೆಲವನ್ನು ಸಜ್ಜನಸಂಗದಿಂದ ಅರಿಯಬೇಕು. ಈ ರೀತಿನೀತಿಯಲ್ಲಿ ಶಿಕ್ಷಣ ಪಡೆದರೆ ಮಾತ್ರ ಮನುಷ್ಯನು ಹಲವು ಹಳ್ಳ, ತೊರೆ, ನದಿಗಳು ಸೇರಿ ಸಮುದ್ರವಾಗುವ ಹಾಗೆ ಸರ್ವಜ್ಞನಾಗುತ್ತಾನೆ ಎಂದು ಹೇಳಬಹುದಾಗಿದೆ.

ಜನಸಾಮಾನ್ಯರ ಶಿಕ್ಷಣ : ಮೇಲೆ ವಿವರಿಸಲಾದ ಶಿಕ್ಷಣಕ್ಷೇತ್ರ, ಶಿಕ್ಷಣ ನೀಡುತ್ತಿದ್ದ ಸ್ಥಳಗಳು ಪ್ರಮುಖವಾಗಿ ಶಿಕ್ಷಣ ಎಂಬ ಪದದ ಅರ್ಥವೇ ಕೆಲವರಿಗೆ ಮಾತ್ರ ಮೀಸಲಾಗಿದ್ದಿತ್ತು. ಶಿಕ್ಷಣ ಜನಸಾಮಾನ್ಯರಿಗೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಂದು ಭೀಕರ ಚಂಡಮಾರುತದ ಹಾಗೆ ಹಾಸುಹೊಕ್ಕಾಗಿದ್ದ ಜಾತಿ ವ್ಯವಸ್ಥೆಯು ತನ್ನದೆ ಅದಂತಹ ಮೌಢ್ಯದ ವ್ಯವಸ್ಥೆಯಲ್ಲಿ ಮುಳುಗಿಸುವಂತೆ ಮಾಡಿತು. ಬ್ರಾಹ್ಮಣರು ವಿದ್ಯೆ ಎಂಬುವುದು ತಮಗೆ ಮಾತ್ರವೆಂದು ಹೇಳಿ ವೇದ ಉಪನಿಷತ್‌ಗಳನ್ನು ಹೇಳಿಕೊಂಡು ರಾಜಾಶ್ರಯದಲ್ಲಿ ಉತ್ತಮ ಜೀವನ ನಡೆಸಿದರೆ, ತಾವೇ ಸೃಷ್ಟಿಸಿದ ಶೂದ್ರರು ಹಾಗೂ ಪಂಚಮರು ಹುಟ್ಟಿರುವುದರ ಬಗ್ಗೆ ಹಲವಾರು ಅಧರ್ಮ ನೀತಿಯನ್ನು ತಿಳಿಸಿ ಅವರನ್ನು ಪ್ರಾಣಿಗಳಿಗಿಂತಲೂ ಹೀನವಾದ ಜೀವನ ನಡೆಸುವಂತೆ ಮಾಡಿದ್ದರೆನ್ನಬಹುದು. ಈ ಗುಂಪಿನಲ್ಲಿ ಯಾರಾದರೂ ಶಿಕ್ಷಣ ಪಡೆಯಲು, ಅದರಲ್ಲಿಯೂ ಸಂಸ್ಕೃತ ಕಲಿಯಲು ಬಯಸಿದರೆ ಆ ವ್ಯಕ್ತಿಗೆ ಕಾಯಿಸಿದ ಕಬ್ಬಿಣದ ಸಲಾಕೆಯಿಂದ ಕಿವಿಗಳಿಗೆ ಎರಕ ಹೊಯ್ಯುವುದು. ನಾಲಗೆ ಕತ್ತರಿಸುವುದು, ಗಡಿಪಾರು ಮಾಡುವುದು ಅಥವಾ ಮರಣದಂಡನೆಗೆ ಒಳಪಡಿಸುವ ಅನಿಷ್ಟ ಪದ್ಧತಿಗಳು ಇದ್ದವು. ಅಂದಿನ ಶಿಕ್ಷಣವು ಕೇವಲ ರಾಜ ಹಾಗೂ ರಾಜಾಶ್ರಯದ ಶ್ರೀಮಂತರು, ಬ್ರಾಹ್ಮಣರುಗಳಿಗೆ ಮಾತ್ರ ಮೀಸಲಾಗಿದ್ದಿತು. ಬೇರೆ ಯಾರೂ ಶಿಕ್ಷಣ ಪಡೆಯುವಂತೆ ನಿಷೇಧ ವಿಧಿಸಲಾಗಿತ್ತು. ಸಾಮಾನ್ಯ ಜನತೆಯ ಜೀವನದ ಸೌಕರ್ಯಗಳನ್ನು ಯಾವ ದೃಷ್ಟಿಯಿಂದಲೂ ಉತ್ತಮವಾಗಿ ನಿರೂಪಿಸಲು ಸ್ವಲ್ಪವೂ ಗಮನಕೊಡದ, ಕೇವಲ ಅನಿಷ್ಟ ಪದ್ಧತಿಗಳ ತಳಹದಿಯ ಮೇಲೆ ಆಳ್ವಿಕೆ ನಡೆಸಿದ ರಾಜ್ಯಾಡಳಿತವನ್ನು ಸುಭಿಕ್ಷವಾದ ಆಳ್ವಿಕೆಯ ಸಾಮ್ರಾಜ್ಯ, ಸುಭೀಕ್ಷೆಯ ಕಾಲ ಎಂದೆಲ್ಲಾ ಹೇಳುವುದರಲ್ಲಿ ಅರ್ಥವೆಲ್ಲಿದೆ?

***