ಒಂದು ಮೊಲವನ್ನು ಒಂದು ಬೇಟೆ ನಾಯಿ ಅಟ್ಟಿಸಿಕೊಂಡು ಬಂದಿತು. ಮೊಲ ಕೈಯಲ್ಲಾಗದ ಪ್ರಾಣಿ. ವೇಗವಾಗಿ ಓಡಿ ಪ್ರಾಣ ಉಳಿಸಿಕೊಳ್ಳಬೇಕು. ಅದರ ಕಣ್ಣುಗಳಲ್ಲಿ ಭಯ ತುಂಬಿದೆ. ಪಾಪ, ಓಡಿತು ಓಡಿತು ಓಡಿತು. ಬೇಟೆ ನಾಯಿ ಅಟ್ಟಿಸಿಕೊಂಡು ಬಂದಿತು. ಹತ್ತಿರ ಹತ್ತಿರ ಹತ್ತಿರ ಬಂದಿತು.

ಇಬ್ಬರು ತರುಣರು ನಿಂತು ನೋಡುತ್ತಿದ್ದರು.

ಇದ್ದಕ್ಕಿದ್ದ ಹಾಗೆಯೇ-

ಮೊಲ ಹಿಂದಕ್ಕೆ ತಿರುಗಿತು. ಬೇಟೆ ನಾಯಿಯ ಮೇಲೆ ಎರಗಿತು.

ಬೇಟೆ ನಾಯಿಗೆ ದಿಗ್ಭ್ರಮೆಯಾಯಿತು. ಮೊಲ ಅದರ ಮೇಲೆ ಬಿದ್ದು ಕಚ್ಚಿತು. ನಾಯಿ ಬೆದರಿ ಓಡಿತು. ಮೊಲ ಅಟ್ಟಿಸಿಕೊಂಡು ಹೋಯಿತು.

ನೋಡುತ್ತಿದ್ದ ತರುಣರಿಗೆ ಬೆರಗಾಯಿತು.

ಅವರು ಹರಿಹರ (ಇವನನ್ನು ಹಕ್ಕ ಎಂದೂ ಕರೆಯುವುದುಂಟು) ಬುಕ್ಕರಾಯ ಎಂಬ ಅಣ್ಣ ತಮ್ಮಂದಿರು.

ಆಗಿನ ಕಾಲದಲ್ಲಿ ಮಹಾಜ್ಞಾನಿಗಳಾಗಿದ್ದವರು ವಿದ್ಯಾರಣ್ಯ ಎಂಬುವರು. ಅವರ ತಮ್ಮ ಸಾಯಣಾಚಾರ್ಯರು ಈ ತರುಣರನ್ನು ವಿದ್ಯಾರಣ್ಯರ ಬಳಿಗೆ ಕರೆದೊಯ್ದರು. ಅವರಿಗೆ ತರುಣರು ಈ ಅಚ್ಚರಿಯ ಸಂಗತಿಯನ್ನು ಬಿನ್ನಹ ಮಾಡಿದಾಗ ಅವರು, “ಇದು ಶೌರ್ಯದ ಭೂಮಿ. ಇಲ್ಲಿಯೇ ರಾಜ್ಯಸ್ಥಾಪನೆ ಮಾಡಿ” ಎಂದರು.

ಅಲ್ಲಿ ಸ್ಥಾಪನೆಯಾದ ವಿಜಯನಗರ ವೀರರ ತವರಾಗಿ ಮೆರೆಯಿತು.

ಮಹಾಪುರುಷರಾದ ಅಣ್ಣತಮ್ಮಂದಿರು

ನಮ್ಮ ಭಾರತ ದಿವ್ಯ ದೇಶ. ನಮಗೆ ಭವ್ಯ ಪರಂಪರೆ ಮತ್ತು ಇತಿಹಾಸಗಳಿವೆ.

ನಮ್ಮದು ಋಷಿಗಳ ನಾಡು, ಸಿದ್ಧಪುರುಷರ ಬೀಡು. ಸಾವಿರಾರು ವರ್ಷಗಳಿಂದ ನಮ್ಮ ಧರ್ಮ, ಸಂಸ್ಕೃತಿಗಳು ಬೆಳೆದುಬಂದಿವೆ. ಜನ ಕಷ್ಟ ಎಂದು ಕೆಂಗಟ್ಟು ಧರ್ಮ ದುರ್ಬಲವಾದಾಗ ಮಹಾಪುರುಷರು ಅವತರಿಸಿದ್ದಾರೆ. ಜನರಿಗೆ ದಾರಿ ತೋರಿದ್ದಾರೆ. ಹಾಗೆ ಧರ್ಮಸಂಸ್ಥಾಪನೆಗೆಂದೇ ಅವತರಿಸಿದವರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದ ವಿದ್ಯಾರಣ್ಯರೂ ಒಬ್ಬರು. ಅವರ ಈ ಸತ್ಕಾರ್ಯಕ್ಕೆ ಬೆಂಬಲವಾಗಿ ನಿಂತು ದುಡಿದವರು ಅವರ ತಮ್ಮ ಸಾಯಣರು.

ದಾಳಿಕಾರರ ಹಿಂದೆ ದಾಳಿಕಾರರು

ಭಾರತ ಸಿರಿಸಂಪತ್ತುಗಳ ರಾಷ್ಟ್ರ. ಫಲವತ್ತಾದ ಭೂಮಿ, ತುಂಬಿದ ಬೆಳೆಯಿಂದ ನಗುನಗುವ ಹೊಲಗದ್ದೆಗಳು. ಸಂಗೀತ, ಶಿಲ್ಪಕಲೆಗಳು ಅದ್ಭುತವಾಗಿ ಬೆಳೆದವು. ಗಣಿತ, ಜ್ಯೋತಿಷ್ಯ ಮತ್ತು ರಸಾಯನ ಶಾಸ್ತ್ರಗಳಲ್ಲಿ ಹಲವು ವಿಷಯಗಳನ್ನು ಹೊರದೇಶದವರು ಇಲ್ಲಿಂದ ಕಲಿತುಕೊಂಡರು. ಆದರೆ ಹೊರರಾಷ್ಟ್ರಗಳ ಜನರಿಗೆ ನಮ್ಮ ಸಂಪತ್ತು, ಸಂಸ್ಕೃತಿಗಳನ್ನು ಕಂಡು ಅಸೂಯೆ ಹುಟ್ಟಿತು. ಈ ದೇಶದ ಮೇಲೆ ಮತ್ತೆ ಮತ್ತೆ ದಾಳಿ ನಡೆಯಿತು. ನಮ್ಮ ಜನರು ಪರಾಕ್ರಮದಲ್ಲೇನೂ ಕಡಿಮೆಯಿಲ್ಲ. ಆದರೆ ಭಾರತದಲ್ಲಿ ಎಷ್ಟೋ ರಾಜ್ಯಗಳು. ಈ ರಾಜ್ಯಗಳಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗದು. ದ್ವೇಷ, ಅಸೂಯೆಗಳಿಂದ ಕಾಣುತ್ತಾ ಒಬ್ಬರನ್ನೊಬ್ಬರು ನಿರ್ನಾಮಗೊಳಿಸಲು ಹೊಂಚು ಹಾಕುತ್ತಿದ್ದರು. ಹೀಗಾಗಿ ಹೊರಗಿನವರು ಮೇಲಿಂದ ಮೇಲೆ ದಾಳಿ ಮಾಡುವುದು ಸಾಧ್ಯವಾಯಿತು. ಅವರು ತಮ್ಮ ಅನೇಕ ರಾಜರನ್ನು ಸೋಲಿಸಿ ರಾಜ್ಯಕೋಶಗಳನ್ನು ಕಬಳಿಸಿದರು. ಇಲ್ಲಿ ತಳವೂರಿದರು. ಆದರೂ ಭಾರತದ ಸಂಸ್ಕೃತಿ ಉಳಿದು ಬಂದಿದೆ. ಹೊರಗಿನಿಂದ ಬಂದ ಹಲವರು ಹಿಂದೂ ಧರ್ಮವನ್ನು ಸ್ವೀಕರಿಸಿ ಇಲ್ಲಿಯ ಜನಜೀವನದೊಂದಿಗೆ ಬೆರೆತು ಹೋದರು.

ಇಷ್ಟಾದರೂ ದುರ್ವಿಧಿ ಭಾರತವನ್ನು ಕಾಡದೆ ಬಿಡಲಿಲ್ಲ. ಸುಮಾರು ಎಂಟನೆಯ ಶತಮಾನದ ಆದಿ ಭಾಗದಲ್ಲಿ ಮತ್ತೆ ನಮ್ಮ ದೇಶದ ಮೇಲೆ ದಾಳಿ ನಡೆಯಿತು. ಈ ಬಾರಿ ನಮ್ಮ ಭೂಮಿಯ ಮೇಲೆ ಆಕ್ರಮಣ ನಡೆಸಿದವರು ಅರಬರು. ಅರೇಬಿಯಾದಲ್ಲಿ ಇಸ್ಲಾಮ್‌ಮತ ಬೇರು ಬಿಟ್ಟಿತ್ತು. ಮೊದಲು ಸಿಂಧೂದೇಶ ಮುಸ್ಲಿಮರ ದಾಳಿಗೆ ಸಿಕ್ಕಿತು.

ಹೀಗೆ ಆರಂಭವಾದ ಮುಸ್ಲಿಮರ ಆಕ್ರಮಣ ಮುಂದೆ ಅವ್ಯಾಹತವಾಗಿ ನಡೆಯಲಾರಂಭಿಸಿತು. ಘಜನಿಯ ಮಹಮದ್‌ಎಂಬಾತನು ಭಾರತದ ಮೇಲೆ ಹದಿನೇಳು ಬಾರಿ ದಾಳಿ ಮಾಡಿ ಅಪಾರ ಸಂಪತ್ತನ್ನು ಸೂರೆ ಮಾಡಿ ಕೊಂಡೊಯ್ದನು.

ಸುಮಾರು ಹದಿಮೂರನೆಯ ಶತಮಾನದಲ್ಲಿ ಉತ್ತರ ಭಾರತದ ಹೆಚ್ಚಿನ ಭಾಗಗಳು ಮುಸ್ಲಿಮರ ವಶವಾಗಿದ್ದವು. ಇನ್ನು ಅವರ ದೃಷ್ಟಿ ದಕ್ಷಿಣದ ಕಡೆ ಹರಿಯಿತು. ಮಲ್ಲಿಕ್ ಕಾಫರನೆಂಬ ಮುಸ್ಲಿಮ್‌ಸರದಾರ ದಕ್ಷಿಣ ಭಾರತದ ಮೇಲೆ ದಂಡೆತ್ತಿ ಬಿರುಗಾಳಿಯಂತೆ ಬಂದವನು ಬಿರುಗಾಳಿಯಂತೆ ಹಿಂತಿರುಗಿ ಹೋದನು. ಕೆಲ ಸಮಯದ ಬಳಿಕ ದೆಹಲಿಯ ಸುಲ್ತಾನರೂ ತಮ್ಮ ಸಾಮ್ರಾಜ್ಯವನ್ನು ಬೆಳೆಸಲು ಪ್ರಯತ್ನಿಸಿದರು.

ಈಗ ದಕ್ಷಿಣದ ರಾಜ್ಯಗಳವರು ಒಂದಾಗದೆ ಉಳಿಗಾಲವಿರಲಿಲ್ಲ. ಅವಿರತವಾಗಿ ನಡೆಯುತ್ತಿದ್ದ ಯುದ್ಧಗಳಿಂದಾಗಿ ಜನರ ಹೊಲ ಮನೆಗಳು ನಾಶವಾಗಿದ್ದವು. ಅವರ ಸಿರಿ ಸಂಪತ್ತು ಮಾಯವಾಗಿತ್ತು. ಬಂಧುಮಿತ್ರರು ದೂರವಾಗಿದ್ದರು. ಮೇಲಿಂದ ಮೇಲೆ ಆಕ್ರಮಣ ನಡೆಯುತ್ತಿದ್ದ ಈ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡುವವರ ಅಗತ್ಯವಿತ್ತು. ಇಂತಹ ಸಂಧಿಕಾಲದಲ್ಲಿ ಅವರನ್ನೆಲ್ಲಾ ಒಟ್ಟುಗೂಡಿಸಿ ಮಾರ್ಗದರ್ಶನ ನೀಡಿದವರು ಶ್ರೀ ವಿದ್ಯಾರಣ್ಯರು ಮತ್ತು ಸಾಯಣರು.

ಬಾಲ್ಯ, ವಿದ್ಯಾಭ್ಯಾಸ

ಕನ್ನಡ ನಾಡಿನ ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ ಇದೆ. ಹೊಸಪೇಟೆಯ ಬಳಿ ಪಂಪಾಕ್ಷೇತ್ರವಿದೆ. ಇಲ್ಲಿ ಪವಿತ್ರವಾದ ತುಂಗಭದ್ರಾ ನದಿ ಹರಿಯುತ್ತದೆ. ನದಿಯ ದಡದಲ್ಲಿ ಶ್ರೀ ವಿರೂಪಾಕ್ಷನ ದೇವಾಲಯವಿದೆ. ದೇವಾಲಯದ ಬಳಿ ಅಗ್ರಹಾರವಿದೆ. ಇಲ್ಲಿ ಭಾರದ್ವಾಜ ಗೋತ್ರದ ಮಾಯಣರೆಂಬ ಬ್ರಾಹ್ಮಣರು ಅವರ ಹೆಂಡತಿ ಶ್ರೀಮತಿಯೊಂದಿಗೆ ವಾಸಿಸುತ್ತಿದ್ದರು. ಅವರು ಬಹುದೊಡ್ಡ ವಿದ್ವಾಂಸರು. ವೇದ ಉಪನಿಷತ್ತುಗಳಲ್ಲಿ ಪಾರಂಗತರಾಗಿದ್ದರು. ದಂಪತಿಗಳಿಬ್ಬರೂ ಧರ್ಮನಿಷ್ಠರಾಗಿ ಬಾಳುತ್ತಿದ್ದರು. ಅವರಿಗೆ ಮಾಧವ, ಸಾಯಣ ಮತ್ತು ಭೋಗನಾಥರೆಂಬ ಮೂವರು ಗಂಡು ಮಕ್ಕಳು. ಮೂವರೂ ಪ್ರತಿಭಾವಂತರು. ಮಾಯಣರು ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸಲು ನಿರ್ಧರಿಸಿದರು. ಆಗ ಶಂಕರಾನಂದರೆಂಬ ತಪಸ್ವಿಗಳು ತುಂಗಭದ್ರಾ ನದಿಯ ಬಳಿ ಆಶ್ರಮವನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಅವರು ವೇದವ್ಯಾಖ್ಯಾನಗಳಲ್ಲಿ ಪಾರಂಗತರು. ಎಲ್ಲಾ ವಿಧದ ಲೋಕವಿದ್ಯೆಗಳನ್ನು ಬಲ್ಲವರು. ಬಹುದೊಡ್ಡ ಪಂಡಿತರು. ತಪಸ್ವಿ ಶಂಕರಾನಂದರೇ ತಮ್ಮ ಕುಮಾರರಿಗೆ ತಕ್ಕ ಗುರುಗಳೆಂದು ತಿಳಿದು ಮಾಯಣರು ಅವರನ್ನು ಶಂಕರಾನಂದರ ಬಳಿ ಕರೆದೊಯ್ದರು. ಶಂಕರಾನಂದರು ಒಬ್ಬ ಹುಡುಗನನ್ನು ಶಿಷ್ಯ ಎಂದು ಸ್ವೀಕರಿಸುವುದೇ ಸಾಮಾನ್ಯವಾದ ವಿಷಯವಾಗಿರಲಿಲ್ಲ. ವಿದ್ಯೆ ಕಲಿಯಬೇಕು ಎಂದು ನಿಜವಾಗಿ ಶ್ರದ್ಧೆ ಇರುವ ಬಾಲಕರನ್ನೇ ಅವರು ಶಿಷ್ಯರಾಗಿ ಸ್ವೀಕರಿಸುತ್ತಿದ್ದುದು. ಮಾಯಣರು ಕರೆದುಕೊಂಡು ಬಂದ ಮಕ್ಕಳನ್ನು ನೋಡಿದರು. ಹುಡುಗರ ಮುಖದಲ್ಲಿನ ತೇಜಸ್ಸನ್ನು ಕಂಡು ಅವರಿಗೆ ತುಂಬ ಸಂತೋಷವಾಯಿತು. ಮಾಧವ, ಸಾಯಣ ಮತ್ತು ಭೋಗನಾಥರು ಗುರುಗಳ ಕಾಲಿಗೆ ಎರಗಿದರು. ಶಂಕರಾನಂದರು ಮಕ್ಕಳನ್ನು ಆದರದಿಂದ ಮೇಲೆತ್ತಿ ಆಶೀರ್ವದಿಸಿ ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದರು.

ಶಂಕರಾನಂದರು ಮಾಧವ, ಸಾಯಣ ಮತ್ತು ಭೋಗನಾಥರಿಗೆ ವಿದ್ಯಾಭ್ಯಾಸ ಮಾಡಿಸಿದರು. ಭಾರತದ ಹಿರಿಯ ಗ್ರಂಥಗಳನ್ನು ವಿವರಿಸಿದರು. ಹೀಗೆ ಹದಿನಾಲ್ಕು ವರ್ಷ ಕಾಲ ಮಾಯಣಕುಮಾರರನ್ನು ತಮ್ಮ ಬಳಿ ಇರಿಸಿಕೊಂಡು ತಮಗೆ ತಿಳಿದಿದ್ದುದನ್ನೆಲ್ಲಾ ಉಪದೇಶಿಸಿದರು. ಶಿಷ್ಯರು ತುಂಬ ಬುದ್ಧವಂತರು. ಉತ್ಸಾಹಿಗಳು. ಇವರ ವಿದ್ಯಾಭ್ಯಾಸ ಇನ್ನೂ ಸಾಗಬೇಕು ಎಂದು ಅವರಿಗೆ ತೋರಿತು. ಶಿಷ್ಯರನ್ನು ಕರೆದು,

“ಮಕ್ಕಳೇ ಹದಿನಾಲ್ಕು ವರ್ಷಗಳ ಕಾಲ ಶ್ರದ್ಧೆಯಿಂದ ವಿದ್ಯೆ ಕಲಿತಿದ್ದೀರಿ. ನಾನು ಹೇಳಿಕೊಡುವುದೆಲ್ಲಾ ಆಯಿತು. ನನ್ನ ಗುರುಗಳು ಶ್ರೀ ವಿದ್ಯಾತೀರ್ಥ ಮಹಾಸ್ವಾಮಿಗಳು ಕಂಚಿಯಲ್ಲಿದ್ದಾರೆ. ಅವರು ಬಹುಶ್ರೇಷ್ಠ ವಿಜ್ಞಾನಿಗಳು. ಅವರಲ್ಲಿಗೆ ಹೋಗಿ ನಿಮ್ಮ ವಿದ್ಯಾಭ್ಯಾಸ ಮುಂದುವರಿಸಿ. ನಾನು ಪತ್ರ ಕೊಡುತ್ತೇನೆ” ಎಂದರು. ಶಿಷ್ಯರು “ಮಹಾಪ್ರಸಾದ” ಎಂದು ನಮಸ್ಕರಿಸಿದರು.

ಕಂಚಿಯಲ್ಲಿ

ಮಾಧವ, ಸಾಯಣ ಮತ್ತು ಬೋಗನಾಥರು ಕಂಚಿಗೆ ಹೊರಟರು. ಅಲ್ಲಿ ಶ್ರೀ ವಿದ್ಯಾತೀರ್ಥ ಮಹಾಸ್ವಾಮಿಗಳ ಪಾದಗಳಿಗೆ ನಮಸ್ಕರಿಸಿ, ತಮಗೆ ವಿದ್ಯಾದಾನ ಮಾಡಬೇಕೆಂದು ಬೇಡಿದರು. ಮಹಾಸ್ವಾಮಿಗಳು ಈ ಬ್ರಾಹ್ಮಣ ವಟುಗಳ ವಿದ್ಯಾದಾಹಕ್ಕೆ ಮೆಚ್ಚಿದರು. ಅವರಲ್ಲಿ ಕಂಡು ಬಂದ ತೇಜಸ್ಸನ್ನೂ, ವಿದ್ಯಾಸಂಪನ್ನತೆಯನ್ನೂ ಮೆಚ್ಚಿಕೊಂಡರು. ಭೂತ ಭವಿಷ್ಯಗಳನ್ನು ಬಲ್ಲ ಅವರು ಈ ಮಕ್ಕಳೇ ಮುಂದೆ ರಾಷ್ಟ್ರದ ಅಭ್ಯುದಯಕ್ಕೆ ಕಾರಣರಾಗುವವರೆಂದು ಗ್ರಹಿಸಿದರು. ಸಂತೋಷದಿಂದ ಶಂಕರಾನಂದರು ಕೊಟ್ಟ ಪತ್ರವನ್ನು ಸ್ವೀಕರಿಸಿ, ಮೂವರನ್ನೂ ತಮ್ಮ ಶಿಷ್ಯರಾಗಿ ಪರಿಗ್ರಹಿಸಿದರು.

ಮಾಧವರೂ ಅವರ ತಮ್ಮಂದಿರೂ ಕಂಚಿಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಇತ್ತ ವಿಂಧ್ಯ ಪರ್ವತದ ದಕ್ಷಿಣದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದವು. ಶತ್ರುಗಳ ಆಕ್ರಮಣಗಳಿಂದಾಗಿ ಅನೇಕ ರಾಜ್ಯಗಳು ನೆಲಸಮವಾದವು. ದೇವಗಿರಿಯ ಸೇವುಣ ದೊರೆ ರಾಮದೇವ ಕದನದಲ್ಲಿ ಮಡಿದುಹೋದನು. ಕಾಕತೀಯರ ಪ್ರತಾಪರುದ್ರ ದೊರೆ ಸುಲ್ತಾನರಿಗೆ ಪೊಗದಿ ಒಪ್ಪಿಸಲು ಸಮ್ಮತಿಸದೆ ನಿರ್ನಾಮಗೊಂಡ. ಹೊಯ್ಸಳರ ದೋರ ಸಮುದ್ರವನ್ನು ಸುಲ್ತಾನನ ಕಡೆಯವರು ಕೊಳ್ಳೆ ಹೊಡೆದರು. ಕಂಪಲರಾಯ ಕ್ಷತ್ರಿಯೋಚಿತವಾಗಿ ಯುದ್ಧಮಾಡಿ ವೀರ ಮರಣವನ್ನಪ್ಪಿದ್ದ. ಮಧುರೆಯಲ್ಲಿ ಮುಸ್ಲಿಮ್‌ಸುಬೇದಾರ ಪ್ರಜೆಗಳಿಗೆ ತುಂಬ ತೊಂದರೆ ಕೊಡುತ್ತಿದ್ದ. ಇಂತಹ ಕಷ್ಟದ ದಿನಗಳಲ್ಲಿ ರಾಜ್ಯರಾಜ್ಯಗಳಲ್ಲಿ ಅಶಾಂತಿಯನ್ನೂ, ಕ್ಷೇಮವನ್ನೂ ಹರಡುವುದು ಮುಖ್ಯವಾಗಿತ್ತು. ಅದೇ ಕಾಲದಲ್ಲಿ ತಮಿಳುನಾಡಿನಲ್ಲಿ ಶ್ರೀ ರಾಮಾನುಜಾಚಾರ್ಯರ ಶಿಷ್ಯರಾದ ವೇದಾಂತದೇಶಿಕರು ಧರ್ಮರಕ್ಷಣೆಗಾಗಿ ದುಡಿಯುತ್ತಿದ್ದರು. ಊರೂರು ಸುತ್ತಿ ಜನರಲ್ಲಿ ಮೈತ್ರಿಯನ್ನುಂಟುಮಾಡಲು ಹೆಣಗುತ್ತಿದ್ದರು. ಜನಗಳಿಗೆ ಅನ್ಯೋನ್ಯತೆ ಮತ್ತು ದೇಶಭಕ್ತಿಗಳೆಂಬ ರಸಸಂಜೀವಿನಿಯನ್ನು ಹಂಚುತ್ತಿದ್ದರು. ಮಾಧವ, ಸಾಯಣರು ತಮ್ಮ ಗುರು ವಿದ್ಯಾತೀರ್ಥರ ನೆರವಿನಿಂದ ದೇಶಿಕರ ಸ್ನೇಹವನ್ನು ಸಂಪಾದಿಸಿದರು. ಕನ್ನಡನಾಡಿಗೆ ಹಿಂತಿರುಗಿದ ಬಳಿಕ ಆಳರಸವನ್ನು ಒಂದುಗೂಡಿಸಿ ಶತ್ರುಗಳ ದಾಳಿಯನ್ನು ಎದುರಿಸಿ ತಡೆಯಬೇಕೆಂದು ನಿರ್ಧರಿಸಿಕೊಂಡರು.

ನಿಮ್ಮಿಂದ ಬಹುದೊಡ್ಡ ಕೆಲಸಗಳು ನಡೆಯುತ್ತವೆ”

ಶ್ರೀ ವಿದ್ಯಾತೀರ್ಥ ಸ್ವಾಮಿಗಳು ಮಹಾಜ್ಞಾನಿಗಳು, ತಪಸ್ವಿಗಳು. ಅವರು ಪರಮೇಶ್ವರನ ಅವತಾರ ಎಂದೇ ಕೆಲವರು ಗೌರವಿಸುತ್ತಿದ್ದರು. ಅವರು ತಮ್ಮಲ್ಲಿದ್ದ ಜ್ಞಾನ ಸಂಪತ್ತನ್ನು ಮಾಧವ, ಸಾಯಣರಿಗೆ ಹಂಚಿದರು. ವಿದ್ಯಾತೀರ್ಥ ಸ್ವಾಮಿಗಳ ಬಳಿ ಶಿಷ್ಯವೃತ್ತಿ ಮಾಡಿದ್ದರಿಂದ ಮಾಯಣಸುತರಿಗೆ ವಿದ್ಯಾಸರಸ್ವತಿಯೇ ಒಲಿದಿದ್ದಳು. ಒಮ್ಮೆ ಅವರು ಮಾಧವ, ಸಾಯಣರನ್ನು ತಮ್ಮ ಬಳಿಗೆ ಕರೆದು ಮೈದಡವಿ ಬಳಿಯೇ ಕುಳ್ಳಿರಿಸಿ, “ಮಕ್ಕಳೇ, ಇಂದಿಗೆ ನಿಮ್ಮ ವಿದ್ಯಾಭ್ಯಾಸ ಮುಗಿಯಿತು. ಈಶ್ವರನ ಅನುಗ್ರಹದಿಂದ ನೀವು ಸರ್ವಸ್ವವನ್ನೂ ತಿಳಿದಿರುವಿರಿ. ನೀವು ಗಳಿಸಿದ ಈ ಜ್ಞಾನಸಂಪತ್ತು ಲೋಕಕಲ್ಯಾಣಕ್ಕಾಗಿ ವಿನಿಯೋಗವಾಗಲಿ. ಜನರಿಗೆ ಧರ್ಮ ಅರ್ಥವಾಗುವಂತೆ ದುಡಿಯಿರಿ, ಧರ್ಮವನ್ನು ಉಳಿಸಲು ದುಡಿಯಿರಿ. ನೀವಿನ್ನು ದಕ್ಷಿಣ ಕ್ಷೇತ್ರಗಳನ್ನೆಲ್ಲಾ ಸಂದರ್ಶಿಸಿ, ಪಂಪಾಕ್ಷೇತ್ರಕ್ಕೆ ನಡೆಯಿರಿ. ಅಲ್ಲಿ ನಿಮ್ಮಿಂದ ಬಹುದೊಡ್ಡ ಕೆಲಸಗಳು ನಡೆಯುತ್ತವೆ” ಎಂದು ಹೇಳಿ ಆಶೀರ್ವದಿಸಿ ಕಳುಹಿಸಿಕೊಟ್ಟರು.

ಮುಂದಿನ ಮಾರ್ಗ

ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಮಾಧವಾ ಚಾರ್ಯರೂ ಸಾಯಣಾಚಾರ್ಯರೂ ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದರು. ಅಲ್ಲಿಯ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡು ಹಲುಬಿದರು. ಶತ್ರುಗಳ ದಾಳಿಯಿಂದಾಗಿ ನೊಂದು ಬೆಂದಿರುವವರನ್ನೆಲ್ಲಾ ಸಂತೈಸಿದರು. ಕೊನೆಗೆ ಅವರಿಬ್ಬರೂ ಶೃಂಗೇರಿಗೆ ಬಂದು ಅಲ್ಲಿಯ ಪೀಠಾಧಿಪತಿಗಳಾದ ಶ್ರೀ ಭಾರತೀಕೃಷ್ಣ ತೀರ್ಥರನ್ನು ಕಂಡರು. ಭಾರತೀಕೃಷ್ಣತೀರ್ಥರು ಮಹಾ ತಪಸ್ವಿಗಳು. ಶೃಂಗೇರಿಯಲ್ಲಿ ಶ್ರೀ ಶಂಕರಾಚಾರ್ಯರ ಪರಂಪರೆಯನ್ನು ಕಾಯ್ದುಕೊಂಡು ಬರುತ್ತಿದ್ದರು. ತಮ್ಮ ಅನಂತರ ಶೃಂಗೇರಿಯ ಪೀಠವನ್ನು ಏರಬಲ್ಲ ಸಮರ್ಥರನ್ನು ಅವರು ಹುಡುಕುತ್ತಿದ್ದರು. ಶೃಂಗೇರಿಯ ಪೀಠ ಬಹು ವಿದ್ವಾಂಸರೂ, ಪುಣ್ಯ ಜೀವಿಗಳೂ ಆದವರೇ ಆ ಪೀಠದಲ್ಲಿ ಕುಳಿತುಕೊಳ್ಳುತ್ತಿದ್ದರು.

"ನೀವಿನ್ನು ಪಂಪಾಕ್ಷೇತ್ರಕ್ಕೆ ನಡೆಯಿರಿ. ಅಲ್ಲಿ ನಿಮ್ಮಿಂದ ಬಹುದೊಡ್ಡ ಕೆಲಸಗಳು ನಡೆಯುತ್ತವೆ".

ಸಕಲ ವಿದ್ಯಾ ಪಾರಂಗತರಾಗಿದ್ದ ಮಾಧವಾಚಾರ್ಯರನ್ನು ಕಂಡಬಳಿಕ ಭಾರತೀಕೃಷ್ಣತೀರ್ಥರ ಚಿಂತೆ ದೂರವಾಯಿತು. ಮಾಧವರನ್ನು ತಮ್ಮ ಶಿಷ್ಯರನ್ನಾಗಿ ಅಂಗೀಕರಿಸಿ ಸನ್ಯಾಸದೀಕ್ಷೆ ಕೊಟ್ಟು, “ಶ್ರೀ ವಿದ್ಯಾರಣ್ಯ” ಎಂಬ ಹೆಸರು ಕೊಟ್ಟು ಗೌರವಿಸಿದರು. ವಿದ್ಯಾರಣ್ಯರು ಕೆಲ ಕಾಲ ಗುರುಗಳೊಂದಿಗೆ ಶೃಂಗೇರಿಯಲ್ಲೇ ವಾಸವಾಗಿದ್ದು, ಬಳಿಕ ಪಂಪಾಕ್ಷೇತ್ರಕ್ಕೆ ನಡೆದರು. ತುಂಗಭದ್ರಾ ನದಿಯ ಹತ್ತಿರದ ಹೇಮಕೂಟ ಪರ್ವತದ ಬಳಿಯಲ್ಲೇ ಒಂದು ಆಶ್ರಮವನ್ನು ಕಟ್ಟಿಕೊಂಡು ತಪಸನ್ನಾಚರಿಸುತ್ತಾ ದಿನಗಳನ್ನು ಕಳೆಯತೊಡಗಿದರು.

ಸಾಯಣರು ತಮ್ಮ ಭೋಗನಾಥರೊಡನೆ ಮನೆಗೆ ಹಿಂತುರುಗಿದರು. ಹೆತ್ತವರಾದ ಮಾಯಣ, ಶ್ರೀಮತಿಯರು ಅಗಾಧ ಜ್ಞಾನವನ್ನು ಗಳಿಸಿ ಹಿಂತಿರುಗಿದ ಮಕ್ಕಳನ್ನು ಕಂಡು ಆನಂಧಭರಿತರಾದರು.

ವಿದ್ಯಾರಣ್ಯರಂತೂ ಸಂನ್ಯಾಸಿಗಳಾದರು. ಇನ್ನು ಸಾಯಣರಿಗೆ ಬೇಗನೆ ಮದುವೆ ಮಾಡುವುದು ಒಳ್ಳೆಯದೆಂಬ ತೀರ್ಮಾನಕ್ಕೆ ಬಂದು ಮಾಯಣರು ಅನುರೂಪಳಾದ ಹಿಮಾವತಿ ಎಂಬ ವಧುವನ್ನು ಆಯ್ದು ಮಗನಿಗೆ ಮದುವೆ ಮಾಡಿಸಿದರು. ಸಾಯಣ ದಂಪತಿಗಳಿಗೆ ಮೂವರು ಮಕ್ಕಳು ಹುಟ್ಟಿದರು. ಹಿರಿಯ ಪುತ್ರನಿಗೆ ಕಂಪಣ, ದ್ವಿತೀಯ ಪುತ್ರನಿಗೆ ಮಾಯಣ ಮತ್ತು ತೃತೀಯ ಪುತ್ರನಿಗೆ ಸಿಂಗಣ್ಣ ಎಂಬ ಹೆಸರಿಟ್ಟರು. ಕಂಪಣ ಉತ್ತಮ ಕಂಠವುಳ್ಳವನು. ಈತನಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಅಭಿಲಾಷೆ, ಅಭಿರುಚಿ. ಸಾಯಣರು ತಮ್ಮ ಕುಮಾರನ ಅಭಿಲಾಷೆಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಸಂಗೀತ ಪಾಠವನ್ನು ಹೇಳಿಸಿದರು. ಕಂಪಣ ಮುಂದೆ ವಿಜಯನಗರ ಸಂಸ್ಥಾನಗಳಲ್ಲೆಲ್ಲಾ ಏಕೈಕ ಖ್ಯಾತ ಸಂಗೀತಗಾರನೆಂದು ಪ್ರಸಿದ್ದನಾದನು. ಎರಡನೆಯ ಕುಮಾರ ಮಾಯಣ ಮುಂದೆ ಕವಿಯಾಗಿ ಮೆರೆದ. ಮೂರನೆಯ ಮಗ ಸಿಂಗಣ್ಣ ತಂದೆಯಂತಯೇ ವೇದ ವ್ಯಾಸಂಗ ಮಾಡಿ ಉದ್ಧಾಮ ಪಂಡಿತನೆನಿಸಿಕೊಂಡ.

ವೀರ ಕಂಪಲರಾಯ

ಹಿಂದೆ ತುಂಗಭದ್ರಾ ನದಿಯ ಒತ್ತಿನಲ್ಲೇ ಹೊಸಮಲೆ ದುರ್ಗವಿತ್ತು. ಅದನ್ನು ಆನೆಗೊಂದಿಯ ಕಂಪಲರಾಯ ಆಳುತ್ತಿದ್ದ. ಸುಲ್ತಾನ ತುಘಲಕನ ಅಳಿಯ ಬಾದುರಖಾನ್ ಸಾಗರ ಪ್ರಾಂತದ ಸುಬೇದಾರ. ಅವನು ನ್ಯಾಯಪಕ್ಷಪಾತಿ. ಜನರನ್ನು ಅನ್ಯಾಯವಾಗಿ ಹಿಂಸಿಸುವುದನ್ನು ಒಪ್ಪುತ್ತಿರಲಿಲ್ಲ. ಎಲ್ಲಾ ಪ್ರಜೆಗಳನ್ನು ಸರ್ವಸಮವಾಗಿ ಕಾಣುತ್ತಿದ್ದನು. ಇದನ್ನು ಒಪ್ಪದಿದ್ದ ಕೆಲವರು ಸುಲ್ತಾನನಿಗೆ ದೂರು ಕೊಟ್ಟರು. ಸುಲ್ತಾನನ ಭಯದಿಂದ ಬಾದುರಖಾನ್ ಸಾಗರ ಪ್ರಾಂತವನ್ನು ಬಿಟ್ಟೋಡಿ ಕಂಪಲರಾಯನ ಮೊರೆಹೊಕ್ಕ. ಶರಣಾರ್ಥಿಗಳು ಯಾರೇ ಆಗಿರಲಿ, ರಕ್ಷಿಸುವುದು ತನ್ನ ಧರ್ಮವೆಂದು ತಿಳಿಸಿದ್ದ ನಿಜ ಕ್ಷತ್ರಿಯ ಕಂಪಲರಾಯ ಅವನಿಗೆ ಆಸರೆ ನೀಡಿದನು.

ಸುಲ್ತಾನನಿಗೆ ಮೊದಲೇ ಕಂಪಲರಾಯನ ಮೇಲೆ ಕೋಪ. ತನ್ನ ಸಾಮಂತತನವನ್ನು ಒಪ್ಪಿಕೊಂಡು ಕಪ್ಪಕಾಣಿಕೆಗಳನ್ನು ಕಳುಹಿಸಬೇಕೆಂದು ತಿಳಿಸಿದ್ದ. ಅದನ್ನು ಸ್ವಾಭಿಮಾನಿಯಾದ ಕಂಪಲರಾಯ ತಿರಸ್ಕರಿಸಿದ್ದ. ಈಗ ಅವನ ಮೇಲೆ ಆಕ್ರಮಣ ಹೂಡಲು ಸುಲ್ತಾನನಿಗೆ ಒಂದು ಒಳ್ಳೆಯ ನೆಪ ಸಿಕ್ಕಂತೆ ಆಯ್ತು. ಸುಲ್ತಾನ ಹೊಸಮಲೆಯನ್ನು ಹಿಡಿದು ರಾಯನನ್ನು ಮಣಿಸಲು ಸೈನ್ಯವನ್ನು ಕಳುಹಿಸಿದ. ಅನೇಕ ದಿನಗಳವರೆಗೆ ಯುದ್ಧ ನಡೆಯಿತು. ಕಂಪಲರಾಯ ಹೋರಾಡುತ್ತಾ ಕೊನೆಯುಸಿರೆಳೆದ. ಅವನ ಅರಮನೆಯ ಹೆಂಗಸರೆಲ್ಲ ಬೆಂಕಿಯಲ್ಲಿ ಬಿದ್ದು ದಹಿಸಿಹೋದರು. ಅಳಿದುಳಿದವರ ಕಗ್ಗೊಲೆ ನಡೆಯಿತು.

ಆ ಸೋಲಿನಲ್ಲಿ ಸಿಕ್ಕಿ ಕಷ್ಟಪಟ್ಟವರಲ್ಲಿ ಇಬ್ಬರು ಯುವಕರು ಹಕ್ಕ ಮತ್ತು ಬುಕ್ಕ. ಇವರು ಬಹು ವೀರರು. ಮುಂದೆ ವಿಜಯನಗರವನ್ನು ಸ್ಥಾಪಿಸಿ ಭಾರತದ ಚರಿತ್ರೆಗೆ ಸಂತೋಷದ ಅಧ್ಯಾಯ ಒಂದನ್ನು ಸೇರಿಸಿದರು.

ಸುಲ್ತಾನ ಮಾಲಿಕನಭಿ ಎಂಬುವನನ್ನು ಆನೆಗೊಂದಿಯ ಸುಬೇದಾರರನ್ನಾಗಿ ನೇಮಿಸಿ ಕಳುಹಿಸಿದ.

ನೀವೇ ಮಾರ್ಗ ತೋರಿಸಬೇಕು”

ಕಂಪಲರಾಯನ ಪತನದೊಂದಿಗೆ ನಡೆದ ಮಾರಣ ಹೋಮ, ಹಿಂಸಾಚಾರಗಳಿಂದ ಜನರು ರೊಚ್ಚಿಗೆದ್ದಿದ್ದರು. ಏನೇ ಆಗಲಿ ನಾವು ಸ್ವಾತಂತ್ರ್ಯವನ್ನು ಪಡೆಯಬೇಕು ಎಂದು ಅವರೆಲ್ಲರೂ ತೀರ್ಮಾನಿಸಿದರು. ಪ್ರಳಯವೇಮ, ಅರವೀಡು ಚಾಲುಕ್ಯ ಸೋಮದೇವರು ಸುತ್ತಮುತ್ತಲಿನ ಎಪ್ಪತ್ತೈದು ಪಾಳೆಗಾರರ ಮುಖಂಡತ್ವ ವಹಿಸಿಕೊಂಡರು. ಸುಲ್ತಾನನ ಸೈನ್ಯದ ಮುಂದೆಯೇ ಆ ವೀರಗ್ರಣಿಗಳು ವೇಷಮರೆಸಿಕೊಂಡು ಹೋಗಿ ಬೇಕು ಬೇಕಾದವರನ್ನು ಕಂಡು ಸಲಹೆ ಪಡೆಯುತ್ತಿದ್ದರು.

ಒಮ್ಮ ಸೋಮದೇವನು ಸಾಯಣರಿದ್ದಲ್ಲಿಗೆ ಬಂದ. ಅವರನ್ನು ಕಂಡು ನಮಸ್ಕರಿಸಿದ. ಸಾಯಣರು ಅವನನ್ನು ಪ್ರೀತಿಯಿಂದ ಬರಮಾಡಿಕೊಂಡರು.

“ಬಾ ಸೋಮದೇವ, ಕುಳಿತುಕೋ, ಬಹುದೂರ ಬಂದೆ”.

“ನಮಗೀಗ ನೀವೇ ಮಾರ್ಗ ತೋರಿಸಬೇಕಾಗಿದೆ. ಅದಕ್ಕಾಗಿ ಬಂದೆ, ಗುರುಗಳೆ”.

“ಏನು ವಿಷಯ, ಸೋಮದೇವ?”

"ಪೂಜ್ಯರಾದ ವಿದ್ಯಾರಣ್ಯರ ಆಶ್ರಮಕ್ಕೆ ಬನ್ನಿ. ಅವರನ್ನು ಕಂಡು ಮಾತನಾಡಿ."

“ನಿಮಗೆ ತಿಳಿಯದ ಸಂಗತಿ ಏನಿದೆ ಗುರುಗಳೆ? ನಮ್ಮ ರಾಜರು ಸೋತು ತೀರಿಕೊಂಡ ಮೇಲೆ ನಾವು ಅನುಭವಿಸುತ್ತಿರುವ ಕಷ್ಟಗಳು ಒಂದೊಂದಲ್ಲ. ನಮ್ಮ ಜನ ಸಾವಿರಾರು ಮಂದಿಸತ್ತರು. ಸುಬೇದಾರ ಆಡಿದ್ದೆ ಆಟವಾಗಿದೆ. ಬಾದುರಖಾನ್ ಹಿಂಸೆ ಮಾಡದೆ ನಡೆದುಕೊಳ್ಳುತ್ತಿದ್ದ. ಅವನಿಗೆ ಉಳಿಗಾಲವಿಲ್ಲದೆ ಹೋಯಿತು. ಸುಲ್ತಾನನ ಸೈನ್ಯ ನಮ್ಮಲ್ಲಿ ಬಂದು ಕುಳಿತಿದೆ. ಸ್ವಾತಂತ್ರ್ಯ ಪಡೆಯದೆ ನಾವು ಬದುಕಿಯೂ ಪ್ರಯೋಜನವಿಲ್ಲ. ನಮ್ಮವರ ಧೈರ್ಯ, ಪೌರುಷ ಪೂರ್ತಿ ಸತ್ತಿಲ್ಲ. ಆದರೆ ನಾವು ಹೇಗೆ ನಡೆದುಕೊಳ್ಳಬೇಕು, ಎಲ್ಲರನ್ನೂ ಹೇಗೆ ಸೇರಿಸಬೇಕು-ಇದಕ್ಕೆ ದಾರಿ ತೋರಿಸುವವರು ಬೇಕಲ್ಲ! ಅದಕ್ಕಾಗಿ ನಿಮ್ಮ ಹತ್ತಿರ ಬಂದೆ. ವಿದ್ಯಾತೀರ್ಥರ ಶಿಷ್ಯರು, ವಿದ್ಯಾರಣ್ಯರ ತಮ್ಮಂದಿರು, ಜ್ಞಾನಿಗಳು-ನೀವೀಗ ನಮಗೆ ದಾರಿ ತೋರಿಸಬೇಕು.”

ಜನರ ರಕ್ಷೆ ವಿದ್ಯಾರಣ್ಯರು

ಸಾಯಣರು ಸ್ವಲ್ಪಕಾಲ ಮೌನವಾಗಿದ್ದರು. ಜನರು ಪಡುತ್ತಿದ್ದ ಕಷ್ಟಗಳನ್ನು ಅವರೂ ತಿಳಿಸಿದ್ದರು. ಅವರ ಮನಸ್ಸೂ ಕಲಕಿತ್ತು.

ಸ್ವಲ್ಪ ಕಾಲದ ನಂತರ ಅವರು ಹೇಳಿದರು: “ಸೋಮದೇವ, ಇದು ಬಹಳ ಕಷ್ಟದ ಕೆಲಸ. ನಮ್ಮ ಸುತ್ತ ಶತ್ರುಗಳಿದ್ದಾರೆ. ಅವರು ಬಹಳ ಪ್ರಬಲರು. ಎಚ್ಚರಿಕೆಯಿಂದ ನಾವು ಕೆಲಸ ಮಾಡಬೇಕು. ನೀನೇ ಈಗ ವಿದ್ಯಾರಣ್ಯರ ಹೆಸರು ಹೇಳಿದೆಯಲ್ಲ? ಅವರ ಹತ್ತಿರ ಹೋಗೋಣ ಬಾ.”

ವಿದ್ಯಾರಣ್ಯರೂ ಸಾಯಣರೂ ಸೋಮದೇವನ ಜೊತೆಯಲ್ಲಿ ಮಂತ್ರಾಲೋಚನೆ ಮಾಡಿದರು. ಸಂತಪ್ತ ಜನರು ಸಾವಿರ ಸಾವಿರವಾಗಿ ಅವರ ಬಳಿ ಬರುತ್ತಿದ್ದರು. ಅವರೆಲ್ಲ ತಮ್ಮ ಕರುಣ ಕತೆಯನ್ನು ಹೇಳಿ ದುಃಖ ತೋಡಿಕೊಳ್ಳುತ್ತಿದ್ದರು. ಅವರೆಲ್ಲರನ್ನೂ ಸಂತೈಸಬೇಕಿತ್ತು. ಸಂಘಟಿತರನ್ನಾಗಿ ಮಾಡಿ ಸ್ವಾತಂತ್ರ್ಯವನ್ನು ಪಡೆಯುವ ಬಗೆಯನ್ನು ತಿಳಿಸಬೇಕು. ಅಳಿದುಳಿದವರ ಸಹಕಾರದಿಂದ ಶಕ್ತಿಯನ್ನು ಸಂಚಯಿಸಿಕೊಳ್ಳಬೇಕಿತ್ತು.

ಸೋಮದೇವನ ಕಡೆಯವರು ಶತ್ರುಗಳ ಯೋಚನೆಗಳು, ಅವರ ಸೈನ್ಯಗಳ ಓಡಾಟಗಳು ಇವೆಲ್ಲವನ್ನು ಕುರಿತು ಸಮಾಚಾರ ತಿಳಿದುಕೊಳ್ಳಬೇಕಾಗಿತ್ತು. ಅವರ ಗುಟ್ಟುಗಳನ್ನು ಕಂಡುಹಿಡಿದು ಬಂದು ತಿಳಿಸುವ ಗುಪ್ತಚಾರರು ಬೇಕಾಗಿತ್ತು. ಶತ್ರುಗಳಿಗೆ ತಿಳಿಯದಂತೆ ಅವರ ಮಧ್ಯೆ ಓಡಾಡಿ ಸಮಾಚಾರವನ್ನು ಸಂಗ್ರಹಿಸುವ ಜನ ಬೇಕಾಗಿತ್ತು. ಈ ಕೆಲಸವನ್ನು ಪಂಡಿತರು ಮಾಡಬಹುದು, ಅವರಿಗೆ ಇದನ್ನು ಮಾಡುವ ರೀತಿಯನ್ನು ಹೇಳಿಕೊಡಬೇಕು ಎಂದು ವಿದ್ಯಾರಣ್ಯರು ಸೂಚಿಸಿದರು. ಈ ಕೆಲಸವನ್ನು ಸಾಯಣರು ವಹಿಸಿಕೊಂಡರು. ಪಂಡಿತರಿಗೆ ಈ ಕೆಲಸಕ್ಕೆ ಬೇಕಾದ ಶಿಕ್ಷಣವನ್ನು ಕೊಟ್ಟರು. ಸೋಮದೇವನು ಬಿಲ್ಲುಗಾರರನ್ನೂ, ಭಲ್ಲೆಗುರಾಣಿಗಳಿಂದ ಕಾದುವವರನ್ನೂ, ಎಲ್ಲ ವಿದ್ಯೆಗಳನ್ನು ಬಲ್ಲ ಮಲ್ಲರನ್ನೂ, ಜಟ್ಟಿಗಳನ್ನೂ ಕಲೆಹಾಕತೊಡಗಿದನು. ಅವನ ನೇತೃತ್ವದಲ್ಲಿ ರಾವುತರು ಮಾವುತರು ಎನ್ನದೆ ಎಲ್ಲರೂ ಯುದ್ದಕ್ಕೆ ಅಣಿಯಾದರು. ಅಲ್ಲಲ್ಲಿ ಗರಡಿ ಮನೆಯನ್ನೂ, ತಾಲೀಮು ಶಾಲೆಗಳನ್ನೂ ಸ್ಥಾಪಿಸಿ ತನ್ನ ಜನರಿಗೆ ಅರಣ್ಯ ಯುದ್ಧದಲ್ಲಿ ತರಬೇತಿ ನೀಡತೊಡಗಿದನು. ಸೋಮದೇವನು ನಿಪುಣ ಬಿಲ್ಲುಗಾರರನ್ನು ಆರಿಸಿ ಗಿರಿಕಂದರಗಳಲ್ಲಿ ಅಡಗಿಕೊಂಡು, ಆಯಕಟ್ಟಿನ ಸ್ಥಳಗಳಲ್ಲಿ ನಿಂತು ಮಾಲಿಕನಭಿಯ ಸೈನ್ಯದ ಮೇಲೆ ಆಕಸ್ಮಿಕ ದಾಳಿ ನಡೆಸುವಂತೆ ಶಿಕ್ಷಣ ಕೊಟ್ಟ.

ಜನರು ಮಾಲಿಕನಭಿಯ ಸೈನಿಕರ ಮೇಲೆ ಎರಗಿ ಅವರಲ್ಲಿ ಅನೇಕರನ್ನು ಕೊಂದು ಹಾಕಿದರು. ಅವನ ಆಹಾರ ಸಾಮಗ್ರಿಗಳನ್ನು ಹೊಂಚು ಹಾಕಿ ಹೊಡೆದು ಹಾರಿಸಿದರು. ಮಾಲಿಕನಭಿ ಆನೆಗೊಂದಿಯಲ್ಲಿ ಬದುಕಿ ಉಳಿಯುವುದೇ ದುಸ್ತರವಾಯಿತು. ಆತ ಅನೇಕ ದಿನ ಅನ್ನ ನೀರಿಲ್ಲದೆ ಬಳಲಿದ. ಕೊನೆಗೆ ವಿಧಿಯಿಲ್ಲದೆ ದೆಹಲಿಯ ಸುಲ್ತಾನನಿಗೆ ಇಲ್ಲಿ ನಡೆಯುತ್ತಿದ್ದ ವಿದ್ಯಾಮಾನಗಳ ವರದಿ ಮುಟ್ಟಿಸಿದ. “ಖಾವಂದ, ಇನ್ನು ಈ ಊರಿನಲ್ಲಿ ಉಳಿಯುವುದು ಕಷ್ಟ. ಈ ಬಡ ಗುಲಾಮನ ಮೊರೆ ಕೇಳಿ ದಯವಿಟ್ಟು ನನ್ನನ್ನು ದೆಹಲಿಗೆ ಹಿಂದಕ್ಕೆ ಕರೆಸಿ. ಬೇರೆ ಯಾರನ್ನಾದರೂ ಇಲ್ಲಿಗೆ ಕಳುಹಿಸಿ” ಎಂದು ಬೇಡಿದ.

ಹರಿಹರ-ಬುಕ್ಕರು

ಹರಿಹರ, ಬುಕ್ಕರು ಚಂದ್ರವಂಶದವರು, ಯಾದವ ಕುಲದವರು. ಸಂಗಮ ಎಂಬ ರಾಜನ ಮಕ್ಕಳು. ಅವರು ಒಟ್ಟು ಐದು ಮಂದಿ ಅಣ್ಣತಮ್ಮಂದಿರು. ಹಿರಿಯವನು ಹರಿಹರ, ಎರಡನೆಯವನು ಕಂಪಣ, ಮೂರನೆಯಾತ ಬುಕ್ಕರಾಯ. ಮತ್ತಿಬ್ಬರು ಮಾರಪ್ಪ ಮತ್ತು ಮುದ್ದಪ್ಪ ಎಂಬುವರು. ಎಲ್ಲರೂ ಕಟ್ಟಾಳುಗಳು. ರಾಜ್ಯನೀತಿಯಲ್ಲಿ ಪಳಗಿದವರು. ಬುದ್ಧಿವಂತರು, ನೀತಿವಂತರು. ಕಂಪಲರಾಯ ತೀರಿಕೊಂಡ ನಂತರ ಜನರು ಪಡುತ್ತಿದ್ದ ಕಷ್ಟವನ್ನು ಕಂಡು ತುಂಬ ಮರುಗಿದರು. ಅವರಿಗೆ ತಮ್ಮ ಹುಟ್ಟುನಾಡಿನ ಬಗ್ಗೆ ಭಕ್ತಿಪ್ರೇಮಿಗಳಿದ್ದವು. ದೋರಸಮುದ್ರದ ಹೊಯ್ಸಳ ಭೂಪತಿ, ಕೃಷ್ಣನಾಯಕ ಮತ್ತು ಅರವೀಡು ಸೋಮದೇವ ಮೊದಲಾದವರು ಒಂದಾಗಿ ದಕ್ಷಿಣ ಭಾರತದಿಂದ ತುಘಲಕ ಶಾಹಿಯನ್ನು ಹೊರಗಟ್ಟಲು ನಡೆಸುತ್ತಿದ್ದ ಪ್ರಯತ್ನಗಳ ಬಗ್ಗೆ ಅವರಿಗೂ ತಿಳಿದಿತ್ತು. ಅವರ ಆ ಪ್ರಯತ್ನದ ಬಗ್ಗೆ ಹರಿಹರ ಬುಕ್ಕರಿಗೆ ಸಹಾನುಭೂತಿಯಿತ್ತು. ಆದರೆ ಒಮ್ಮೆಲೇ ಅವರ ಜೊತೆ ಸೇರುವುದು ಹುಲ್ಲೆಯ ಜೊತೆ ಹುಲಿಯ ಬೋನಿನೊಳಗೆ ಹೋದಷ್ಟು ಅಪಾಯ ಎಂಬುದನ್ನು ಅವರಿಬ್ಬರೂ ಬಲ್ಲರು. ತಾವೇನು ಮಾಡಬೇಕು ಎಂಬುದೇ ಅವರಿಗೆ ಚಿಂತೆಯಾಯಿತು.

ಎಂತಹ ಆಶ್ಚರ್ಯ!

ಈ ಕಾಲದಲ್ಲಿಯೇ ನಡೆದದ್ದು ಈ ಪುಸ್ತಕದ ಪ್ರಾರಂಭದಲ್ಲಿ ಹೇಳಿದ ಘಟನೆ-ಮೊಲ ಬೇಟೆ ನಾಯಿಯನ್ನು ಅಟ್ಟಿಸಿಕೊಂಡು ಹೋದದ್ದು. ಅದು ಆದದ್ದು ಹೀಗೆ:

ಹರಿಹರ, ಬುಕ್ಕರು ಒಮ್ಮೆ ಕುದುರೆಗಳನ್ನೇರಿ ಸುತ್ತಾಡುತ್ತಿದ್ದರು. ಇದ್ದಕ್ಕಿದ್ದಂತೆ ಪೊದೆಗಳ ಮಧ್ಯದಿಂದ ಮೊಲವೊಂದು ಕುಣಿಯುತ್ತಾ ಕುಪ್ಪಳಿಸುತ್ತಾ ಹೊರಬಂತು. ಅದನ್ನು ಒಂದು ಬೇಟೆನಾಯಿ ಗುರ್ ಎಂದು ಬೆನ್ನಟ್ಟತೊಡಗಿತು.

ಮೊಲವು ಕೊಂಚ ದೂರ ಓಡಿತು. ಓಡುತ್ತಿದ್ದ ಮೊಲ ಒಮ್ಮೆಲೇ ನಿಂತು ಬೇಟೆ ನಾಯಿಯನ್ನು ಎದುರಿಸಿತು. ಅದರ ಮೇಲೆ ಎರಗಿ ಕಚ್ಚಿ ಗಾಯಗೊಳಿಸಿತು. ಬೇಟೆನಾಯಿ ಭಯದಿಂದ ಹಿಂಜರಿಯಿತು. ಈಗ ಮೊಲವೇ ಅದನ್ನು ಅಟ್ಟಿಸಿಕೊಂಡು ಹೋಯಿತು.

ಈ ಆಶ್ಚರ್ಯವನ್ನು ಕಂಡು ಹಕ್ಕ-ಬುಕ್ಕರು ಬೆಕ್ಕಬೆರಗಾದರು. ಹೇಮಕೂಟ, ಮಾತಂಗ ಮತ್ತು ಮಾಲ್ಯವಂತ ಪರ್ವತಗಳು ಉಜ್ವಲವಾಗಿ ಹೊಳೆಯುತ್ತಿರುವಂತೆ ಭಾಸವಾಯಿತು. ಪವಿತ್ರವಾಹಿನಿ ತುಂಗೆ ಬಂಗಾರದ ಹೊಳೆಯೇ ಆಗಿರುವಂತೆ ಕಂಗೊಳಿಸಿತು. ಅವರೆಲ್ಲರೂ ಕಂಡರಿಯದ, ಕಾಣಲಾಗದ ಪ್ರಕಾಶಮಾನವಾದ ಬೆಳಕು ವಿರೂಪಾಕ್ಷನ ಗುಡಿಯಿಂದ ಹೊರಹೊಮ್ಮುವುದನ್ನು ಎವೆಯಿಕ್ಕದೆ ನೋಡಿದರು. ಒಮ್ಮೆಲೇ ಅವರ ಎದೆಯಾಳದಲ್ಲಿ ಭಯ ಭಕ್ತಿಗಳು ಅಂಕುರಿಸಿದವು. ಹಿಂದೆ ಇಲ್ಲಿ ಕಿಷ್ಕಿಂಧಾ ನಗರವಿತ್ತು. ಶ್ರೀರಾಮನ ಪಾದಸ್ಪರ್ಶದಿಂದ ಪುನೀತವಾದ ಭೂಮಿ. ಈ ಪುಣ್ಯಭೂಮಿಯಲ್ಲಿ ಇನ್ನೆಂತಹ ಪವಾಡಗಳು ನಡೆಯುವುವೋ ಎಂದುಕೊಳ್ಳುತ್ತಾ ತಂತಮ್ಮ ಕುದುರೆಗಳನ್ನೇರಿ ಹೊರಟರು.

ವಿದ್ಯಾರಣ್ಯರಿಗೆ

ಅವರು ಮುಂದೆ ಸಾಗುತ್ತಿದ್ದಾಗ ಒಂದೆಡೆ ತೇಜಸ್ವಿಯಾದ ಬ್ರಾಹ್ಮಣನೊಬ್ಬ ನಿಂತು ಹಸುಗಳಿಗೆ ಹುಲ್ಲು ತಿನ್ನಿಸುತ್ತಿರುವುದನ್ನು ಕಂಡರು. ಈ ಪವಾಡದ ಅರ್ಥವನ್ನು ತಿಳಿಯಹೇಳಬಲ್ಲ ಮಹಾನುಭಾವನ ದರ್ಶನವಾಯಿತೆಂದು ಹಕ್ಕ-ಬುಕ್ಕರು ಸಂತೋಷದಿಂದ ಕುದುರೆಗಳಿಂದ ಇಳಿದರು. ಭಕ್ತಿಯಿಂದ ತಲೆಬಾಗಿ ವಂದಿಸಿದರು.

“ಪೂಜ್ಯರೇ, ನಾವು ಹರಿಹರ ಮತ್ತು ಬುಕ್ಕ ಎಂಬ ಅಣ್ಣತಮ್ಮಂದಿರು. ಆನೆಗೊಂದಿಯ ಆಳರಸರ ಸೇವೆ ಮಾಡುತ್ತಿದ್ದೆವು. ಇಲ್ಲಿ ಒಂದು ಅದ್ಭುತವನ್ನು ಕಂಡೆವು. ದಯಮಾಡಿ ಅದರ ಅರ್ಥವನ್ನು ನೀವು ಹೇಳಬೇಕು” ಎಂದು ಬೇಡಿದರು.

ಆ ಬ್ರಾಹ್ಮಣ ಬೇರೆ ಯಾರೂ ಅಲ್ಲ, ಸಾಯಣಾಚಾರ್ಯರೇ. ತೇಜಸ್ವಿಗಳಾದ ಈ ತರುಣರನ್ನು ಕಂಡು ಅವರಿಗೂ ಸಂತೋಷವಾಯಿತು. ಅವರು “ನೀವಿಬ್ಬರೂ ನನ್ನ ಜೊತೆಯಲ್ಲಿ ಬನ್ನಿ. ಇಲ್ಲಿ ಪೂಜ್ಯರಾದ ವಿದ್ಯಾರಣ್ಯರ ಆಶ್ರಮವಿದೆ. ಅವರನ್ನು ಕಂಡು ಮಾತನಾಡಿ” ಎಂದು ಹೇಳಿದರು. ತಾವೂ ಅವರೊಂದಿಗೆ ಹೊರಡಲು ಅಣಿಯಾದರು.

ಹರಿಹರ-ಬುಕ್ಕರು ಸಾಯಣರಿಗೆ “ತಾವು ಜ್ಞಾನಿಗಳಾಗಿ ಕಾಣುತ್ತೀರಿ. ನಮ್ಮ ಜನರಿಗೆ ಬಂದ ಕಷ್ಟಗಳನ್ನೂ ಸಂಕಟಗಳನ್ನೂ ಪರಿಹರಿಸುವುದು ಹೇಗೆ? ನಮ್ಮಿಬ್ಬರಿಗೆ ಇದೇ ಯೋಚನೆಯಾಗಿದೆ” ಎಂದರು. ಸಾಯಣರು ಅವರನ್ನು ಸಮಾಧಾನ ಪಡಿಸುತ್ತಾ “ನಮ್ಮ ಅಣ್ಣಂದಿರಾದ ವಿದ್ಯಾರಣ್ಯರು ಮಹಾಜ್ಞಾನಿಗಳು. ಅವರಿಂದ ನಿಮಗೆ ಸೂಕ್ತ ಸೂಚನೆ ದೊರೆಯಬಹುದು. ಬನ್ನಿ, ಹೋಗೋಣ” ಎಂದು ವಿದ್ಯಾರಣ್ಯರಿದ್ದಲ್ಲಿಗೆ ಅವರಿಬ್ಬರನ್ನೂ ಕರೆದೊಯ್ದರು.

ಶೌರ್ಯದ ಭೂಮಿಯಲ್ಲಿ ವಿಜಯನಗರ

ಮಹರ್ಷಿ ವಿದ್ಯಾರಣ್ಯರನ್ನು ಕಂಡ ಕೂಡಲೇ ಹರಿಹರ-ಬುಕ್ಕರು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಆಪ್ತಬಂಧುಗಳಿಂದ ದೂರವಾಗಿ ಬದುಕುತ್ತಿರುವ ತಮ್ಮನ್ನು ಉದ್ಧರಿಸಬೇಕೆಂದು ಅವರು ವಿದ್ಯಾರಣ್ಯರನ್ನು ಬೇಡಿಕೊಂಡರು. ಆನಂತರ,

“ಮಹಾತ್ಮರೇ, ಇಲ್ಲಿ ಬರುವ ಮುನ್ನ ಒಂದು ಅದ್ಭುತ ಘಟನೆಯನ್ನು ಕಂಡೆವು. ಮೊಲವೊಂದು ಬೇಟೆನಾಯಿಯಿಂದ ತಪ್ಪಿಸಿಕೊಂಡು ಓಡುತ್ತಿತ್ತು. ಬೆದರಿ ಅದು ದಿಕ್ಕೆಟ್ಟಿತು. ಆದರೆ ಇದ್ದಕ್ಕಿದ್ದಂತೆ ಅದು ನಿಂತಿತು, ತಿರುಗಿತು; ಅದನ್ನು ಅಟ್ಟಿಸಿಕೊಂಡು ಬರುತ್ತಿದ್ದ ಬೇಟೆನಾಯಿಯನ್ನೇ ಎದುರಿಸಿತು. ಅದರ ಮೇಲೆ ಬಿದ್ದು ಕಚ್ಚಿತು. ನಾಯಿಯೇ ದಿಕ್ಕೆಟ್ಟು ಓಡಿತು. ಇದೆಂತಹ ವಿಚಿತ್ರ! ಹೀಗಾಗುವುದು ಸಾಧ್ಯವೇ ಎನ್ನಿಸುತ್ತಿದೆ ನಮಗೆ. ತಾವು ಈ ವಿಚಿತ್ರವನ್ನು ವಿವರಿಸಬೇಕು” ಎಂದು ಬೇಡಿದರು.

ಈ ಪುಣ್ಯ ಪುರುಷರಿಂದಲೇ ಧರ್ಮೋದ್ಧಾರ, ದೇಶೋದ್ಧಾರಗಳು ನಡೆಯಬಲ್ಲವೆಂಬುದನ್ನು ದಿವ್ಯಜ್ಞಾನಿಗಳಾದ ವಿದ್ಯಾರಣ್ಯರು ಕಂಡರು. ಅವರಿಗೆ ಅದರದಿಂದ ಹೇಳಿದರು:

“ರಾಜಕುಮಾರರೇ, ನಿಮ್ಮ ಮೇಲೆ ಶ್ರೀ ಭುವನೇಶ್ವರಿಯ ಕೃಪಾಕಟಾಕ್ಷವಿದೆ. ನೀವು ವರ್ಣಿಸಿದ ಅದ್ಭುತ ಸಂಗತಿ ನಡೆದದ್ದು ಶೌರ್ಯದ ಭೂಮಿಯಲ್ಲಿ. ಪಂಪಾಪತಿಯ ದಯೆಯಿಂದ ಈ ಸೋಜಿಗದ ಸ್ಥಳದಲ್ಲಿ ಭವ್ಯ ನಗರವನ್ನು ಕಟ್ಟುವಿರಿ. ಅದರ ಕೀರ್ತಿ ಪ್ರಪಂಚದಲ್ಲೇ ಹರಡುವುದು. ಸಂಪತ್ತು ಸಮೃದ್ಧಿಗಳಿಂದ ಅದು ವಿಜೃಂಭಿಸುವುದು. ಹೇಮಕೂಟ, ಮಾತಂಗ ಮತ್ತು ಮಾಲ್ಯವಂತ ಪರ್ವತ ಸಮುದಾಯ ಅದಕ್ಕೆ ರಕ್ಷಣೆ ನೀಡುತ್ತದೆ. ಹೋಗಿ ನಿಮಗೆ ಮಂಗಳವಾಗಲಿ” ಎಂದು ಕಳುಹಿಸಿಕೊಟ್ಟರು. ಹರಿಹರ ಮತ್ತು ಬುಕ್ಕರಿಗೆ ತುಂಬ ಸಮಾಧಾನವಾಯಿತು.

ಹರಿಹರ, ಬುಕ್ಕರು ಶ್ರೀ ವಿದ್ಯಾರಣ್ಯರು ಹೇಳಿದ ಪುಣ್ಯ ಕ್ಷೇತ್ರದಲ್ಲಿ ಒಂದು ನಗರವನ್ನು ಕಟ್ಟಿಸತೊಡಗಿದರು. ಮುಂದೆ ಇದೇ ನಗರವು “ವಿಜಯನಗರ”ವೆಂದು ಪ್ರಸಿದ್ಧವಾಯಿತು. ಹರಿಹರನು ಶ್ರೀ ವಿದ್ಯಾರಣ್ಯರ ಆದೇಶದಂತೆ ವಿಜಯನಗರ ಸಿಂಹಾಸನವನ್ನೇರಿದನು.

ಹರಿಹರ ಭೂಪತಿಯು ಧರ್ಮನಿಷ್ಠೆಯಿಂದ ಪ್ರಜಾಪಾಲಕನಾಗಿ ವೈಭವದಿಂದ ವಿಜಯನಗರ ಸಾಮ್ರಾಜ್ಯವನ್ನು ಆಳುತ್ತಿದ್ದನು. ಅವನು ತನ್ನ ನಾಲ್ವರು ಸಹೋದರರಿಗೆ ರಾಜ್ಯದ ಕಾರ್ಯಭಾರವನ್ನು ಸರಿಯಾಗಿ ಹಂಚಿ ವಿಜಯ ನಗರ ಸಾಮ್ರಾಜ್ಯವನ್ನು ನಾಲ್ಕೂ ನಿಟ್ಟಿನಲ್ಲಿ ವಿಸ್ತರಿಸಿದನು. ತನ್ನ ತಮ್ಮ ಕಂಪಣನನ್ನು ಉದಯಗಿರಿ ರಾಜ್ಯಕ್ಕೆ ಅಧಿಪತಿಯನ್ನಾಗಿಯೂ, ಬುಕ್ಕರಾಯನನ್ನು ತನ್ನ ಉತ್ತರಾಧಿಕಾರಿಯನ್ನಾಗಿಯೂ ನೇಮಿಸಿದನು. ಮಾರಪ್ಪ ಮತ್ತು ಮುದ್ದಪ್ಪರಿಗೆ ಬೇರೆ ಬೇರೆ ಪ್ರಾಂತಗಳ ಒಡೆತನವನ್ನು ಕೊಟ್ಟನು.

ಮುಖ್ಯಮಂತ್ರಿ ಸಾಯಣ

ಸಾಯಣರನ್ನು ರಾಜ್ಯಾಡಳಿತದಲ್ಲಿ ಪಾಲುಗೊಳ್ಳಲು ಆಮಂತ್ರಿಸಿ, ಉದಯಗಿರಿ ರಾಜ್ಯದ ಕಂಪಣ ಭೂಪತಿಗೆ ಮಹಾಮಾತ್ಯರಾಗಿ ನೆರವಾಗುವಂತೆ ಹರಿಹರನು ಪ್ರಾರ್ಥಿಸಿದನು. ವಿದ್ಯಾರಣ್ಯರು ವಿಜಯನಗರ ಸಂಸ್ಥಾಪನೆಯ ಬಳಿಕ ಶೃಂಗೇರಿಯ ಮಠಾಧಿಪತಿಯಾಗಿ ಹೊರಟು ಹೋದರು.

ಸಾಯಣರು ಉದಯಗಿರಿ ರಾಜ್ಯದಲ್ಲಿದ್ದು ಕಂಪಣ ಭೂಪತಿಗೆ ರಾಜ್ಯಭಾರ ಕಾರ್ಯದಲ್ಲಿ ಸಲಹೆಗಳನ್ನು ಕೊಡುತ್ತಾ ಅಲ್ಲೇ ಉಳಿದರು. ರಾಜ್ಯದ ಆಡಳಿತದ ಮಹಾಹೊಣೆ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದರು.

ಉದಯಗಿರಿ ಪ್ರಾಂತಕ್ಕೆ ಮಹಾಮಂತ್ರಿಯಾದರೂ ಸಾಯಣರು ವಿಜಯನಗರ ಸಾಮ್ರಾಜ್ಯದ ಏಳಿಗೆಗಾಗಿ ಅನುದಿನ ಶ್ರಮ ಪಡುತ್ತಿದ್ದರು. ಆಗಾಗ ವಿಜಯನಗರಕ್ಕೆ ತೆರಳಿ ರಾಜ್ಯಾಡಳಿತದಲ್ಲಿ ಹರಿಹರ ಭೂಪತಿಗೆ ತಕ್ಕ ಸಲಹೆ-ಸಹಕಾರ ನೀಡುತ್ತಿದ್ದರು. ಆಗಾಗ ಅಣ್ಣಂದಿರಾದ ಶ್ರೀ ವಿದ್ಯಾರಣ್ಯರ ಬಳಿಗೆ ಹೋಗುವರು, ರಾಜ್ಯಗಳ ಕಷ್ಟ ಸುಖಗಳನ್ನು ಅವರ ಮುಂದಿಡುವರು, ಏನು ಮಾಡಬೇಕೆಂಬುದನ್ನು ಚರ್ಚಿಸುವರು. ಹೀಗೆ ವಿಜಯನಗರ ಮತ್ತು ಉದಯಗಿರಿ ರಾಜ್ಯಗಳಿಗೆ ಮಹಾತಪಸ್ವಿ ವಿದ್ಯಾರಣ್ಯರ ಮಾರ್ಗದರ್ಶನ ಲಭ್ಯವಾಯಿತು.

ಐಕಮತ್ಯದ ಶಿಲ್ಪಿ

ದಕ್ಷಿಣ ಭಾರತವನ್ನು ಶತ್ರುಗಳ ಸಂಕೋಲೆಯಿಂದ ಬಿಡುಗಡೆಗೊಳಿಸುವ ಬಗ್ಗೆ ಸಾಯಣರು ಸದಾ ಚಿಂತಿಸುತ್ತಿದ್ದರು. ಸದಾ ಪರಸ್ಪರ ಹೊರಾಡುತ್ತಿದ್ದ ದಕ್ಷಿಣದ ರಾಜರನ್ನು ಒಟ್ಟುಗೂಡಿಸಿ ಬಲವಾದ ಶಕ್ತಿಯನ್ನು ನಿರ್ಮಿಸುವುದು ಅತ್ಯಗತ್ಯವಾಗಿತ್ತು. ಹೊಯ್ಸಳರನ್ನೂ, ಕಾಕತೀಯನ್ನೂ, ಪಾಂಡ್ಯ, ಚೋಳರನ್ನೂ ಒಂದುಗೂಡಿಸಿ ಅವರೊಳಗೆ ಒಗ್ಗಟ್ಟು ನಿರ್ಮಿಸುವ ಹೊಣೆ ಹೊತ್ತುಕೊಂಡರು. ಉತ್ತರ ಭಾರತದಲ್ಲಿ ನಡೆದುದು ದಕ್ಷಿಣದಲ್ಲೂ ಪುನರಾವರ್ತನೆಯಾಗದಂತೆ ನೆರೆದು ಒಗ್ಗಟ್ಟಿನಿಂದ ದುಡಿಯುವಂತೆ ಪ್ರೇರೇಪಿಸಿದರು. ಎಲ್ಲರನ್ನೂ ಒಂದುಗೂಡಿಸಿದ ಬಳಿಕ ಓರಂಗದಲ್ಲಿನಲ್ಲಿ ನೆಲೆ ನಿಂತ ಮಾಲಿಕ್‌ಮಕಬುಲ್‌ಎಂಬ ಸುಲ್ತಾನನ ಸೇನಾನಿಯನ್ನು ಅಲ್ಲಿಂದ ಹೊಡೆದೋಡಿಸಿದರು. ಮಾಲಿಕ್‌ಮಕಬೂಲ್‌ಇನ್ನು ಇಲ್ಲಿದ್ದರೆ ಉಳಿಗಾಲವಿಲ್ಲವೆಂದುಕೊಂಡು ದೇವಗಿರಿಗೆ ಓಡಿ ಪ್ರಾಣ ಉಳಿಸಿಕೊಂಡ.

ಚಂಪರಾಯ

ವಿಜಯನಗರ ಸಾಮ್ರಾಜ್ಯಕ್ಕೆ ಹೊರಗಿನ ಆಪತ್ತುಗಳಿಂದ ಸರಿಯಾದ ರಕ್ಷಣೆ ಒದಗಿಸಿ ಸಾಯಣರು ಉದಯಗಿರಿಗೆ ಹಿಂತಿರುಗಿದರು. ಅಲ್ಲಿ ರಾಜ್ಯ ವ್ಯವಸ್ಥೆಯ ಬಗ್ಗೆ ವಿಶೇಷ ಆಸಕ್ತಿ ವಹಿಸಿಕೊಂಡರು. ಆಗ ತುಂಡಿರ ಮಂಡಲವನ್ನು ಚಂಪರಾಯನೆಂಬ ಅರಸು ಆಳುತ್ತಿದ್ದ. ದಿನದಿನಕ್ಕೆ ಪ್ರಬಲವಾಗುತ್ತಿದ್ದ ವಿಜಯನಗರ ಸಾಮ್ರಾಜ್ಯದ ಏಳಿಗೆಯನ್ನು ಸಹಿಸದೆ ಕಂಪಭೂಪತಿಯ ಆಡಳಿತದಲ್ಲಿರುವ ನೆಲ್ಲೂರು ಮತ್ತು ಕಡಪ ಸೀಮೆಗಳ ಮೇಲೆ ಆಗಾಗ ಆಕ್ರಮಣ ನಡೆಸಿ ಉದಯಗಿರಿ ರಾಜ್ಯಕ್ಕೆ ಕಿರುಕುಳ ಗಡಿಪ್ರದೇಶದ ಜನರನ್ನು ಹಿಂಸಿಸುತ್ತಿದ್ದ. ಸಾಯಣರು ಚಂಪ ನರೇಂದ್ರನಿಗೆ ಸರಿಯಾದ ಬುದ್ಧಿ ಕಲಿಸಿ ಅವನನ್ನು ಅಂಕಿತದಲ್ಲಿ ಇರಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಕಂಪಭೂಪತಿಗೆ ಚಂಪರಾಯನ ಮೇಲೆ ಮುತ್ತಿಗೆ ಹಾಕಲು ಸಲಹೆ ನೀಡಿದರು. ಆದರೆ ಕಂಪಭೂಪತಿ ಯುದ್ಧದ ಸಿದ್ಧತೆಯಲ್ಲಿರುವಾಗಲೇ ಅಕಾಲ ಮರಣಕ್ಕೆ ತುತ್ತಾಗಬೇಕಾಯಿತು. ಆತನ ಪಟ್ಟ ಮಹಿಷಿಯಾಗಿದ್ದ ಮಂಗದೇವಿಯಮ್ಮ ಆಗ ತುಂಬು ಗರ್ಭಿಣಿಯಾಗಿದ್ದಳು. ಸಾಯಣರು ಅಧೀರರಾಗಲಿಲ್ಲ. ರಾಜ್ಯದಲ್ಲಿ ಅರಾಜಕತೆ ತಲೆದೋರಬಾರದೆಂದು ರಾಜ್ಯ ಸೂತ್ರಗಳನ್ನೆಲ್ಲಾ ತಾವೇ ವಹಿಸಿಕೊಂಡರು. ಕೆಲ ಸಮಯದಲ್ಲೇ ಮಂಗದೇವಿಯಮ್ಮ ಒಂದು ಗಂಡು ಮಗುವಿಗೆ ಜನ್ಮಕೊಟ್ಟಳು. (ಅವನೇ ಮುಂದೆ ಇಮ್ಮಡಿ ಸಂಗಮನೆಂದು ಮೆರೆದ). ರಾಜ್ಯದ ಆಡಳಿತದ ಹೊಣೆಯ ಮಧ್ಯೆ ರಾಜಕುಮಾರನ ಪಾಲನೆ ಪೋಷಣೆಗಳ ಭಾರವೂ ಸಾಯಣರ ಹೆಗಲೇರಿತ್ತು.

ಇವೆಲ್ಲವುಗಳ ಮಧ್ಯೆ ಬಿಡುವು ಮಾಡಿಕೊಂಡು ಸಾಯಣರು ಒಮ್ಮೆ ವಿಜಯನಗರಕ್ಕೆ ಭೇಟಿಕೊಟ್ಟು ಹರಿಹರ ಭೂಪತಿಯನ್ನು ಕಂಡರು.

ಪ್ರಚಂಡ ವಿದ್ವಾಂಸ ಸೇನಾಪತಿಯಾಗಿ

ಹರಿಹರರಾಯ ಸಿಂಹಾಸನದಿಂದ ಇಳಿದು ಬಂದು ಸಾಯಣರನ್ನು ಎದುರುಗೊಂಡನು. ಬಳಿಕ, ಅವರಿಗೆ ಉಚಿತವಾದ ಆಸನವನ್ನು ಕೂಡಿಸಿ ಕುಶಲವನ್ನು ವಿಚಾರಿಸಿದನು.

“ಪೂಜ್ಯರೇ, ಮಕ್ಕಳು ಕ್ಷೇಮದಿಂದ ಇರುವರೇ? ಉದಯಗಿರಿ ರಾಜ್ಯ ತಮ್ಮ ಕೈಯಲ್ಲಿ ನಿರ್ಭೀತವಾಗಿ ಇರುವುದೆಂದು ಭಾವಿಸಿದ್ದೇವೆ” ಎಂದು ರಾಯನು ನುಡಿದನು. ಅದಕ್ಕೆ ಸಾಯಣರು,

“ರಾಜಕುಮಾರರು ಸುಕ್ಷೇಮದಲ್ಲಿದ್ದಾರೆ. ರಾಜ್ಯ ಸುಭೀಕ್ಷವಾಗಿದೆ. ಆದರೆ ನಮಗೊಂದು ಚಿಂತೆ. ತುಂಡಿರ ಮಂಡಲದ ಚಂಪರಾಯನು ಆಗಾಗ ಕಿರುಕುಳ ಕೊಡುತ್ತಾ ಇರುವುದು ನಿಮಗೆ ವೇದ್ಯವಿದೆ. ನೀವು ಒಪ್ಪಿದರೆ ಚಂಪರಾಯನ ಮೇಲೆ ನಾವೇ ದಂಡೆತ್ತಿ ಹೋಗಿ ಅವನನ್ನು ದಂಡಿಸಿ ಬರಬೇಕೆಂದು ಇದ್ದೇವೆ. ರಾಯರ ಅನುಮತಿಗಾಗಿ ಉದಯಗಿರಿಯಿಂದ ಇಲ್ಲಿಗೆ ಬಂದಿದ್ದೇವೆ” ಎಂದರು.

ಹರಿಹರನಿಗೆ ವಿಷಾದವಾಯಿತು, ಆಶ್ಚರ್ಯವಾಯಿತು, ಮೆಚ್ಚಿಕೆಯಾಯಿತು. ಚಂಪರಾಯ ಉದಯಗಿರಿಗೆ ತೊಂದರೆ ಕೊಡುತ್ತಿದ್ದಾನೆ. ರಾಜನು ಸತ್ತು ರಾಜಕುಮಾರ ಇನ್ನೂ ಚಿಕ್ಕವನಿರುವಾಗ ಈ ಕಷ್ಟವನ್ನು ರಾಜ್ಯ ಎದುರಿಸಬೇಕಾಯಿತಲ್ಲ ಎಂದು ವಿಷಾದ. ವಿದ್ವಾಂಸರಾಗಿ, ರಾಜನಿಗೆ ಮಂತ್ರಾಲೋಚನೆಯಿಂದ ಸಹಾಯ ಮಾಡಬೇಕಾದ ಈ ಮಹಾತ್ಮರು, ತಾವೇ ಚಂಪರಾಯನಿಗೆ ಬುದ್ಧಿ ಕಲಿಸುತ್ತೇವೆ, ಸೈನ್ಯವನ್ನು ತೆಗೆದುಕೊಂಡು ಹೊರಡುತ್ತೇವೆ ಎನ್ನುತ್ತಾರಲ್ಲಾ ಎಂದು ಆಶ್ಚರ್ಯ, ಅವರ ಧೈರ್ಯಕ್ಕೆ ಮತ್ತು ನಿಷ್ಠೆಗೆ ಮೆಚ್ಚಿಕೆ. ಅವನು ಸಾಯಣರಿಗೆ ಕೈಮುಗಿದು,

“ಹಾಗಿದ್ದರೆ ಚಂಪರಾಯ ನಮ್ಮ ಸಾಮಂತನಾಗಿರಲು ಒಪ್ಪಿಲ್ಲವೆನ್ನುತ್ತೀದ್ದೀರಿ, ಅಲ್ಲವೆ? ಮಹಾಜ್ಞಾನಿಗಳಾದ ತಮಗೆ ನಾವೇನೂ ಹೇಳಬಯಸುತ್ತಿಲ್ಲ. ಚಂಪಭೂಪತಿಯನ್ನು ಸರಿಯಾಗಿ ದಂಡಿಸಿ” ಎಂದು ಹೇಳಿದ.

ವೀರ ಸಾಯಣರು

ಸಾಯಣರು ಉದಯಗಿರಿಗೆ ಹಿಂತಿರುಗಿ ಯುದ್ಧಕ್ಕೆ ಅಣಿ ಮಾಡತೊಡಗಿದರು. ಮತ್ತೆ ಸುಸಜ್ಜಿತವಾದ ಸೈನ್ಯದೊಡನೆ ಚಂಪರಾಯನ ಗರುಡನಗರವನ್ನು ಮುತ್ತಿದರು. ಚಂಪರಾಯ ತನ್ನ ಸರ್ವಸಾಮರ್ಥ್ಯವನ್ನೂ ಉಪಯೋಗಿಸಿ ಹೋರಾಡಿದ. ಆದರೆ ಕೆಲ ದಿನಗಳ ಕದನದಲ್ಲೇ ಗರುಡನಗರ ಸಾಯಣರ ವಶವಾಯಿತು. ಚಂಪರಾಯ ಸಾಯಣರಿಗೆ ಸೆರೆಸಿಕ್ಕಿ, ಪ್ರಾಣದಾನ ಬೇಡಿದ. ಅವನ ಸೊಕ್ಕಡಗಿಸುವುದೇ ಸಾಯಣರಿಗೆ ಬೇಕಾಗಿತ್ತು. ಆತ ವಿಜಯನಗರಕ್ಕೆ ಅಧೀನನಾಗಿ ಸರಿಯಾಗಿ ಕಪ್ಪಕಾಣಿಕೆಗಳನ್ನು ಕಟ್ಟುನಿಟ್ಟಾಗಿ ಒಪ್ಪಿಸುತ್ತಿರಬೇಕೆಂದು ಆಜ್ಞಾಪಿಸಿ ಚಂಪರಾಯನನ್ನು ತುಂಡಿರಮಂಡಲದ ಸಾಮಂತನನ್ನಾಗಿ ನೇಮಿಸಿದರು. ಅನಂತರ ಸಾಯಣರು ಉದಯಗಿರಿ ರಾಜ್ಯಕ್ಕೆ ಹಿಂತಿರುಗಿದರು.

ರಾಜ್ಯವು ನಿಷ್ಕಂಟಕವಾದ ಬಳಿಕ ಸಾಯಣರು ರಾಜಕುಮಾರ ಇಮ್ಮಡಿ ಸಂಗಮನ ಪಾಲನೆ ಪೋಷಣೆ ಮತ್ತು ವಿದ್ಯಾಭ್ಯಾಸಗಳತ್ತ ಗಮನ ಹರಿಸಿದರು. ರಾಜ್ಯದಲ್ಲಿ ಅಲ್ಲಲ್ಲಿ ಅನೇಕ ಅನ್ನಸತ್ರಗಳನ್ನೂ ಅಗ್ರಹಾರಗಳನ್ನೂ ಸ್ಥಾಪಿಸಿದರು. ಕೆರೆ ಬಾವಿಗಳನ್ನು ತೋಡಿಸಿ ಬೇಸಾಯಕ್ಕೆ ಅನುಕೂಲತೆಗಳನ್ನು ಒದಗಿಸಿದರು.

ಚಂಪರಾಯ ಸೆರೆ ಸಿಕ್ಕಿ ಪ್ರಾಣದಾನ ಬೇಡಿದ.

ಬೆಳೆದ ಭಾಗ್ಯ

ವಿಜಯನಗರ ಸಾಮ್ರಾಜ್ಯ ಇಂತಹ ಮಹಾಜ್ಞಾನಿಗಳ ನೆರವಿನಿಂದ ಬೆಳೆಯುತ್ತಾ ಹೋಯಿತು. ವಿಜಯನಗರದ ಅರಸರು ಪೂರ್ವ, ಪಶ್ಚಿಮ, ದಕ್ಷಿಣ ಸಮುದ್ರಾಧಿಪತಿಗಳಾಗಿ ಮೆರೆದರು. ಹರಿಹರರಾಯನು “ಮಹಾರಾಜಾಧಿರಾಜ ರಾಜಪರಮೇಶ್ವರ, ವೀರಪ್ರತಾಪ ಹರಿಹರ ಮಹಾರಾಯ” ಎಂಬ ಬಿರುದಿನೊಂದಿಗೆ ಸುಮಾರು ಇಪ್ಪತ್ತು ವರ್ಷಗಳ ಕಾಲ ರಾಜ್ಯವಾಳಿದನು. ಅವನ ಬಳಿಕ ಬುಕ್ಕರಾಯನು ಸಿಂಹಾಸನವನ್ನೇರಿದನು. ಬುಕ್ಕರಾಯನು ಧರ್ಮದಂತೆ ನಡೆಯುವವನು. ಪ್ರಜಾರಕ್ಷಕ, ರಾಜನೀತಿಯಲ್ಲಿ ಪರಿಪೂರ್ಣನೆನಿಸಿದ್ದನು. ಉತ್ತರದಿಂದ ಹಿಂಡುಗಟ್ಟಿ, ದಕ್ಷಿಣದ ಮೇಲೆ ದಾಳಿಯಿಡಲು ಪ್ರಯತ್ನಿಸುತ್ತಿದ್ದ ಬಹಮನಿ ಸುಲ್ತಾನರನ್ನು ಸೋಲಿಸಿ ವಿಜಯನಗರವನ್ನು ನಿರಾತಂಕವಾಗಿ ಆಳಿದನು. ಮಧುರೆಯಲ್ಲಿ ಭದ್ರವಾಗಿ ತಳವೂರಿದ್ದ ಶತ್ರುಗಳ ಆಳ್ವಿಕೆಯನ್ನು ಕೊನೆಗೊಳಿಸಿದನು. ವಿದ್ಯಾಕೇಂದ್ರಗಳಿಗೆ ಸಂಪತ್ತು ಒದಗಿಸಿದನು. ಅವನ ಆಳ್ವಿಕೆಯ ಕಾಲದಲ್ಲೇ ವಿದ್ಯಾರಣ್ಯರು “ವೇದರ್ಥಪ್ರಕಾಶಿಕೆ” ಎಂಬ ಮಹಾಗ್ರಂಥವನ್ನು ಬರೆದರು. ಸಾಯಣರು ಅದಕ್ಕೆ ಮುನ್ನುಡಿಯನ್ನು ಬರೆದರು.

ನೀವೇ ಈ ಕಷ್ಟದ ಕೆಲಸವನ್ನು ಮಾಡಬೇಕು”

ಮಹಾರಾಜ ಬುಕ್ಕರಾಯನ ಮನಸ್ಸಿನಲ್ಲಿ ಒಂದು ಆಸೆಯಿತ್ತು. ವೇದಗಳು ಹಿಂದೂಗಳಿಗೆ ಬಹುಪವಿತ್ರವಾದ ಗ್ರಂಥಗಳು. ಆದರೆ ಅವನ್ನು ಅರ್ಥ ಮಾಡಿಕೊಳ್ಳುವುದು ಸಂಸ್ಕೃತ ಚೆನ್ನಾಗಿ ಬಲ್ಲವರಿಗೂ ಸುಲಭವಲ್ಲ. ಆದುದರಿಂದ ?????????? ವಿದ್ಯಾರಣ್ಯರ ತಪಃಪ್ರಭಾವದಿಂದ ಮತ್ತು ತಮ್ಮ ನಿರಂತರ ದುಡಿಮೆಯಿಂದ ಹುಟ್ಟಿ ಬೆಳೆದ ವಿಜಯನಗರವು ದಶದಿಕ್ಕುಗಳಲ್ಲಿ ವಿಜಯದುಂದುಭಿ ಮೊಳಗಿಸುತ್ತಿರುವುದನ್ನು ಕಾಣುತ್ತಾ ಅವರು ಹಲಕಾಲ ಬಾಳಿ ಆನಂದದಿಂದಲೇ ಕೊನೆಯುಸಿರೆಳೆದರು.

ವಿದ್ವಾಂಸರು ಜನರಿಂದ ದೂರ ಆಗಬಾರದು

ವಿಜಯನಗರದೊಡನೆ ವಿದ್ಯಾರಣ್ಯ, ವಿದ್ಯಾರಣ್ಯರ ಜೊತೆ ಅವರ ಬಲಭುಜದಂತೆ ನಿಂತು ದುಡಿದ ಸಾಯಣಾಚಾರ್ಯರ ದಿವ್ಯ, ಭವ್ಯ ಜೀವನದ, ಆದರ್ಶಗಳ, ಅವರ ಸುಭಾಷಿತಗಳ ಮತ್ತು ವೇದಭಾಷ್ಯದ ಸಂಸ್ಮರಣೆ ನಿರಂತರ ನಮ್ಮ ಮುಂದೆ ನಿಲ್ಲುತ್ತದೆ. ಜ್ಞಾನವನ್ನು ಬೆಳೆಸಿಕೊಳ್ಳಬೇಕೆಂದು ಅಧ್ಯಯನಕ್ಕೇ ಮುಡಿಪಾದವರೂ ಅಗತ್ಯವಾದಾಗ ನಾಡಿನ ಸೇವೆಗೆ ಟೊಂಕಕಟ್ಟಿ ನಿಂತ ದೇಶ ನಮ್ಮದು. ಜ್ಞಾನಕ್ಕಾಗಿ ಜೀವನವನ್ನು ಅರ್ಪಿಸಿದವರೂ ದೇಶದ ಮತ್ತು ಜನರ ಕಷ್ಟ ಸುಖಗಳಿಂದ ದೂರ ಆಗಬಾರದು, ಅವರ ಹಿತಚಿಂತನೆ ಮಾಡಬೇಕು, ಅಗತ್ಯವಾದಾಗ ಕೆಲಸ ಮಾಡಲೂ ಸಿದ್ಧರಾಗಬೇಕು-ಇಂತಹ ತತ್ತ್ವದಂತೆ ಬೆಳಗಿದ ದಿವ್ಯ ಜ್ಯೋತಿಗಳು ವಿದ್ಯಾರಣ್ಯರು ಮತ್ತು ಸಾಯಣರು.