ಒಬ್ಬ ಬಡಯುವಕ. ಚಿಕ್ಕಂದಿನಲ್ಲೇ ತಂದೆ-ತಾಯಿ ಕಳೆದುಕೊಂಡು ಅನಾಥನಾಗಿದ್ದ. ಅಲ್ಲಿ-ಇಲ್ಲಿ ಬೇಡಿ ಹೊಟ್ಟೆ ತುಂಬಿಸಿಕೊಂಡು ವಿದ್ಯೆ ಕಲಿತಿದ್ದ. ಒಮ್ಮೆ ತಂದೆಯ ಶ್ರಾದ್ಧದ ದಿನ ಬಂತು. ಶ್ರಾದ್ಧದ ಖರ್ಚಿಗೆ ಅವನ ಬಳಿ ಹಣ ಇರಲಿಲ್ಲ. ಅವನಿಗೆ ಬಹಳ ದುಃಖವಾಯಿತು. ಅಳು ಉಕ್ಕಿ ಬಂತು. ತಂದೆಯನ್ನು ನೆನೆಯುತ್ತ ಕಣ್ಣೀರು ಸುರಿಸಿದ. ಬಾಯಿಯಿಂದ ಈ ಮಾತುಗಳು ಹೊರಬಂದವು:

ಇಂದು ನಿನ್ನ ಶ್ರಾದ್ಧ ದಿನವು
ತಂದೆ, ಎಂತು ಮಾಡಲಿ?
ಒಂದು ಕಾಸು ಕೈಯೊಳಿಲ್ಲ
ಬಂದಿತಯ್ಯ ಕಷ್ಟವು,
ನನಗೆ ಅಕ್ಕ, ಅಣ್ಣ ಇಲ್ಲ
ಮನೆಯು ಎನಗೆ ಇಲ್ಲವು
ಮನದೊಳಿಂದು ನಿನ್ನ ನೆನೆದು
ನೆನೆದು ಶ್ರಾದ್ಧ ಮಾಡುವೆ

ಹೀಗೆ ಆ ಯುವಕನಲ್ಲಿ ಲಕ್ಷ್ಮೀಯ ಅವಕೃಪೆಯ ಮೂಲಕ ಕಡುಬಡತನ ಮತ್ತು ಸರಸ್ವತಿಯ ಅನುಗ್ರಹದಿಂದ ಕವಿಹೃದಯ ಮನೆಮಾಡಿದ್ದವು. ಆ ಯುವಕನೇ ಆಧುನಿಕ ಕನ್ನಡದ ಕವಿಗಳಲ್ಲಿ ಪ್ರಾರಂಭದ ಪೀಳಿಗೆಯವರಲ್ಲಿ ಒಬ್ಬರಾದ ಸಾಲಿ ರಾಮಚಂದ್ರರಾಯರು.

ಸಾಲಿಯವರು

ರಾಮಚಂದ್ರ ರಾಯರ ಪೂರ್ಣ ಹೆಸರು ರಾಮಚಂದ್ರ ಸುಬ್ರಾಯ ಸಾಲಿ. ರಾಯರ ಹಿರಿಯರು ಕರ್ನಾಟಕದ ಬೆಳಗಾವಿ ಜಿಲ್ಲೆಯೊಳಗಿನ ರಾಮದುರ್ಗ ಸಂಸ್ಥಾನಿಕರಾದ ಶಿರಸಂಗಿ ದೇಸಾಯಿಯವರಲ್ಲಿ ಮಕ್ಕಳಿಗೆ ವಿದ್ಯೆ ಹೇಳಿ ಕೊಡುವ ಗುರುಗಳಾಗಿದ್ದರು. ಉತ್ತರ ಕರ್ನಾಟಕದ ಭಾಷೆಯಲ್ಲಿ ವಿದ್ಯೆ ಕಲಿಸುವ ಗುರುಗಳಿಗೆ ‘ಸಾಲಿ ಕಲಿಸುವವರು’ ಎನ್ನುತ್ತಾರೆ. ಅದರ ಸಂಕ್ಷಿಪ್ತರೂಪ ‘ಸಾಲಿಯವರು’ ಎಂದಾಗಿ ಮುಂದೆ ‘ಸಾಲಿ ಎಂದಿಷ್ಟೇ ಉಳಿಯಿತು.

ರಾಮಚಂದ್ರರಾಯರ ತಂದೆ ಸುಬ್ರಾಯರೂ ಶಿರಸಂಗಿ ದೇಸಾಯಿಯವರಲ್ಲಿ ಉಪಾಧ್ಯಾಯರಾಗಿದ್ದರು. ಆದರೆ ಸುಬ್ರಾಯರು ದೇಸಾಯರಲ್ಲಿ ಪ್ರತಿಫಲವಾಗಿ ಬೇಡಿದ್ದು ಊರಹೊರಗೆ ಇರಲು ಒಂದು ಗುಡಿಸಲು ಮತ್ತು ಆ ದಿನಕ್ಕೆ ಎಷ್ಟು ಅಗತ್ಯವೋ ಅಷ್ಟೇ ಆಹಾರಧಾನ್ಯ. ಅದಕ್ಕಿಂತ ಹೆಚ್ಚು ಧಾನ್ಯವನ್ನು ಸಂಸ್ಥಾನಿಕರು ಕಳಿಸಕೂಡದು. ಹೀಗಾಗಿ ಆ ಗುಡಿಸಲಿನಲ್ಲಿ ಎಂದೆಂದಿಗೂ ಬಡತನ ವಾಸಮಾಡಿತ್ತು. ಸುಬ್ರಾಯರಿಗೆ ಅದರ ಚಿಂತೆಯಿರಲಿಲ್ಲ. ತಮ್ಮ ಬಳಿ ಬಂದ ವಿದ್ಯಾರ್ಥಿಗಳಿಗೆ ಉತ್ತಮವಾದ ವಿದ್ಯೆಯನ್ನು ಕಲಿಸುವುದರ ಕಡೆಗೇ ಅವರ ಸಂಪೂರ್ಣ ಗಮನ ಹರಿದಿತ್ತು.

ಸುಬ್ರಾಯರ ಒಬ್ಬನೇ ಮಗ ರಾಮಚಂದ್ರ, ಹುಟ್ಟಿದ್ದು ೧೯೯೯ನೇ ಇಸವಿ ಅಕ್ಟೋಬರ್ ೧೦ ರಂದು ರಾಮದುರ್ಗದಲ್ಲಿ. ರಾಮಚಂದ್ರರಾಯರು ಹುಟ್ಟಿನಿಂದಲೇ ಸಂಗಾತಿಯಾದ ಬಡತನ ಅವರು ೯೦ ವರ್ಷ ಬದುಕಿದರೂ ಅವರ ಸಹವಾಸ ಬಿಡಲಿಲ್ಲ. ಬಡತನ ಸಾಲದೇನೋ ಎಂಬಂತೆರ ದೇವರು ಅವರ ಜೀವನದಲ್ಲಿ ನಾನಾವಿಧ ಕಷ್ಟಗಳನ್ನು ತಂದೊಡ್ಡಿದ. ರಾಮಚಂದ್ರರಾಯರೊ ಅದೇ ದೇವರನ್ನು ಗಟ್ಟಿಯಾಗಿ ತಬ್ಬಿಕೊಂಡು ಎಲ್ಲ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಉತ್ಸಾಹದ ಬಾಳನ್ನು ಬದುಕಿದರು.

ತಂದೆ, ತಾಯಿ ಇಬ್ಬರೂ ಇಲ್ಲ

ರಾಮಚಂದ್ರರಾಯರು ಒಂದೂವರೆ ವರ್ಷದವರಿದ್ದಾಗಲೇ ತಂದೆ ಸುಬ್ರಾಯರು ಮರಣ ಹೊಂದಿದರು. ತಾಯಿ ಕಮಲಮ್ಮ ಮಗನನ್ನು ಸಾಕಿ ದೊಡ್ಡವನನ್ನಾಗಿ ಮಾಡಲು ತವರುಮನೆ ಸೇರಿದರು. ಮಗನಿಗೆ ಐದು ವರ್ಷ ತುಂಬಿದಾಗ ಅವರಿವರು ಸಹಾಯ ಬೇಡಿಕೊಂಡು ಶಾಲೆಗೆ ಸೇರಿಸಿದರು. ಆದರೆ ಮಗನ ವಿದ್ಯಾಭ್ಯಾಸ ಮುಗಿಯುವ ತನಕ ಕಮಲಮ್ಮ ಬದುಕಲಿಲ್ಲ. ೧೮೯೮ ರಲ್ಲಿ ಅವರು ಮರಣಹೊಂದಿದರು. ಆಗ ರಾಮಚಂದ್ರರಾಯರು ಪೂರ್ಣ ಅನಾಥರಾದರು.

ಓದಿನ ಹಂಬಲ

ಆದರೆ ರಾಯರಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ಆಸೆ ಪ್ರಬಲವಾಗಿತ್ತು. ಅದಕ್ಕಾಗಿ ಅಲ್ಲಲ್ಲಿ ಅಲೆದಾಡಿ ಕೊನೆಗೆ ವಿಜಾಪುರ ತಲುಪಿದರು. ಅಲ್ಲಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ಊಟ ಮಾಡುವ ‘ವಾರಾನ್ನ’ ಮಾಡಿಕೊಂಡು ಶಾಲೆ ಕಲಿಯತೊಡಗಿದರು. ಆದರೆ ಎಷ್ಟೋಸಲ ‘ವಾರಾನ್ನ’ ಕೇಳಲಿಕ್ಕೆ ಹೋಗಿ ಬಯ್ಗಳು ತಿಂದು ಕಣ್ಣೀರು ಸುರಿಸುತ್ತ ವಾಪಸ್ಸು ಬಂದಿದ್ದುಂಟು. ವಾರದಲ್ಲಿ ಒಂದೆರಡು ದಿನ ಉಪವಾಸ ಇದ್ದದ್ದೂ ಉಂಟು. ಆದರೆ ಅವರದು ಒಂದೇ ಹಟ. ಎಷ್ಟೇ ಕಷ್ಟವಾದರೂ ವಿದ್ಯೆ ಸಂಪಾದಿಸಬೇಕೆಂಬುದು . ಅದಕ್ಕಾಗಿ ಯಾರಾದರೂ ದಿನಕ್ಕೆ ಎರಡು ಹೊತ್ತಿನ ಊಟಹಾಕುವ ಶ್ರೀಮಂತರು ದೊರೆತರೆ ಅವರ ಮನೆಯ ಚಾಕರಿ ಮಾಡಿಯಾದರೂ ಶಾಲೆ ಕಲಿಯಬೇಕೆಂದು ರಾಯರು ಯೋಚಿಸಿದರು. ಅಂಥ ಶ್ರೀಮಂತರ ಮನೆಯ ಆಶ್ರಯವೊಂದು ಅವರಿಗೆ ದೊರೆಯಿತು. ಆ ಮನೆಯವರು ಇವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ರಾಯರು ಆ ಮನೆಯ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು.

‘‘ಕಾಳಜಿ ಮಾಡಬ್ಯಾಡ

ಆದರೆ ವಿಧಿಯ ಕಾಟ ಅಲ್ಲಿಯೂ ತಪ್ಪಲಿಲ್ಲ. ಆ ಮನೆಯ ಹಿರಿಯರಿಗೂ ತರುಣರಿಗೂ ಕುಡಿತ ಮೊದಲಾದ ಹವ್ಯಾಸಗಳಿದ್ದವು. ಕುಡಿದು ಮನೆಗೆ ಬಂದವರು ವಾಂತಿ ಮಾಡಿಕೊಂಡಾಗ ಅದನ್ನು ರಾಯರೇ ತೆಗೆದು ಸ್ವಚ್ಛ ಮಾಡಬೇಕಾಗಿತ್ತು. ಇದು ರಾಯರಿಗೆ ಹಿಡಿಸಲಿಲ್ಲ. ಆದ್ದರಿಂದ ಅವರು ಆ ಮನೆಯನ್ನು ಬಿಡುವ ನಿರ್ಧಾರ ಮಾಡಿದರು. ಆದರೆ ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಕಾಡಿಸತೊಡಗಿತು. ರಾಯರ ಗೆಳೆಯರು ಅವರ ಶಿಕ್ಷಕರಾಗಿದ್ದ ಮಧ್ವರಾವ ಡಂಬಳರನ್ನು ಭೆಟ್ಟಿಯಾಗಲು ಹೇಳಿದರು. ಶಾಲೆಯ ಬಿಡುವಿನ ಸಮಯದಲ್ಲಿ ಮರದ ಕೆಳಗೆ ದೇವರ ಧ್ಯಾನಮಾಡುತ್ತ ಕುಳಿತ ಡಂಬಳ ಮಾಸ್ತರರ ಹತ್ತಿರ ರಾಯರು ಹೋಗಿ ತಮ್ಮ ಸ್ಥಿತಿಯನ್ನು ಹೇಳಿಕೊಂಡರು. ಮಾಸ್ತರರು ಒಂದೇ ಮಾತನ್ನು ಹೇಳಿದರು. “ಕಾಳಜಿ ಮಾಡಬ್ಯಾಡ, ನಿನ್ನ ತಂದೆ ತಾಯಿ ಜೀವಂತ ಅದಾರ ಅಂತ ತಿಳಕೋ”. ಅಂದಿನಿಂದ ಡಂಬಳ ಮಾಸ್ತರರು ತಂದೆಯಾಗಿಯೂ ಅವರ ಹೆಂಡತಿ ಸಾವಿತ್ರಿ ಬಾಯಿಯವರು ತಾಯಿಯಾಗಿಯೂ  ರಾಯರನ್ನು ಸಾಕಿ ಸಲಹಿದರು. ಮತ್ತು ರಾಯರು   ೧೭ ವರ್ಷದವರಾದಾಗ ಅವರ ಮದುವೆಯನ್ನೂ ಮಾಡಿದರು. ಮದುವೆಯಾದರೂ ರಾಯರು ಶಿಕ್ಷಣ ಮುಂದುವರಿಸಿದರು. ೧೯೦೭ ರಲ್ಲಿ ಅವರು ಮೆಟ್ರಿಕ್‌ಪರೀಕ್ಷೆ ಪಾಸಾದರು. ಕೂಡಲೇ ರಾಯರಿಗೆ ಅಂಚೆಕಚೇರಿಯಲ್ಲಿ ಕೆಲಸವೂ ಸಿಕ್ಕಿತು.

‘ನಿನ್ನ ತಂದೆ ತಾಯಿ ಜೀವಂತ ಅದಾರ ಅಂತ ತಿಳಕೊ’

ಪ್ರಾರಂಭದ ಉದ್ಯೋಗಗಳು

ರಾಯರಲ್ಲಿ ಚಿಕ್ಕಂದಿನಿಂದಲೂ ದೇಶಭಕ್ತಿ ಮನೆ ಮಾಡಿತ್ತು. ದೇಶದ ಸೇವೆ ಮಾಡಬೇಕೆಂದು ಅವರು ವಿದ್ಯಾರ್ಥಿಯಾಗಿದ್ದಾಗಿನಿಂದ ವಿಚಾರ ಮಾಡುತ್ತಿದ್ದರು. ಆದರೆ ಏನು ಮಾಡಬೇಕೆಂದು ತೋಚದೆ ಸುಮ್ಮನಿದ್ದರು. ಅವರು ಅಂಚೆಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡ ಮರು ವರುಷವೇ ಅಂದರೆ ೧೯೦೮ರಲ್ಲಿ ಬ್ರಿಟಿಷ್‌ಸರಕಾರವು ಲೋಕಮಾನ್ಯ ಬಾಲ ಗಂಗಾಧರ ತಿಲಕರನ್ನು ಸೆರೆಹಿಡಿದು ಕಠಿಣ ಶಿಕ್ಷೆ ವಿಧಿಸಿತು. ಈ ಕಠಿಣ ಶಿಕ್ಷೆಗೆ ಪ್ರತಿಭಟನೆ ಸೂಚಿಸಲು ರಾಯರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟರು.

ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಯರು ಸುಮ್ಮನೆ ಕೂಡಲಿಲ್ಲ. ಆರ್. ಎ. ಜಹಗೀರದಾರ ಮೊದಲಾದ ಗೆಳೆಯರ ಸಹಾಯದಿಂದ ಕಾಲೇಜ್‌ಶಿಕ್ಷಣ ಪಡೆಯಬೇಕೆಂದು ೧೯೦೯ ರಲ್ಲಿ ಪುಣೆಗೆ ಹೋಗಿ ಫರ್ಗ್ಯೂಸನ್‌ಕಾಲೇಜ್‌ಸೇರಿದರು. ಒಂದೇ ವರುಷದಲ್ಲಿ ಪ್ರವೇಶ ಪರೀಕ್ಷೆ ಪಾಸಾದರು. ಆದರೆ ಬಡತನದ ಮೂಲಕ ಸರಿಯಾಗಿ ಆಹಾರ ದೊರೆಯದೇ ಅಶಕ್ತರಾಗಿ ಚಳಿಜ್ವರದ ಕಾಟಕ್ಕೆ ತುತ್ತಾದರು. ಆದ್ದರಿಂದ ಕಾಲೇಜ್‌ಅಭ್ಯಾಸವನ್ನು ನಿಲ್ಲಿಸಬೇಕಾಯಿತು. ಆಗ ಅವರಿಗೆ ಸ್ಥಿರವಾದ ನೆಲೆಯಿಲ್ಲದ್ದರಿಂದ ಅಲ್ಲಲ್ಲಿ ಅಲೆದಾಡಿದ ನಂತರ ೧೯೧೧ರಲ್ಲಿ ಹುಬ್ಬಳ್ಳಿಯ ತೊರವಿ ಹೈಸ್ಕೂಲಿ (ಇಂದಿನ ನ್ಯೂ ಇಂಗ್ಲಿಷ್‌ಸ್ಕೂಲ್‌) ನಲ್ಲಿ ಶಿಕ್ಷಕರಾಗಿ ಸೇರಿಕೊಂಡರು.

ಹೀಗೆ ಒಂದು ಒಳ್ಳೇ ಕೆಲಸ ದೊರಕಿದ್ದರೂ ರಾಯರಿಗೆ ಸಮಾಧಾನವಿರಲಿಲ್ಲ. ಅರ್ಧದಲ್ಲಿಯೇ ಬಿಟ್ಟು ಬಂದ ಕಾಲೇಜ್‌ಶಿಕ್ಷಣವನ್ನು ಪೂರೈಸಬೇಕೆಂಬ ಬಯಕೆ ಅವರಲ್ಲಿ ತೀವ್ರವಾಗಿತ್ತು. ಅದರಿಂದ ಅವರು ಎರಡೇ ವರುಷ ಶಿಕ್ಷಕರಾಗಿ ದುಡಿದು ಪುನಃ ಪುಣೆಗೆ ಹೋಗಿ ೧೯೧೪ರಲ್ಲಿ ಇಂಟರ್ ಮೀಡಿಯಟ್‌ಪರೀಕ್ಷೆ ಪಾಸಾದರು. ಮುಂದೆ ಡೆಕ್ಕನ್‌ಕಾಲೇಜನ್ನು ಸೇರಿ ೧೯೧೭ರಲ್ಲಿ ಬಿ.ಎ. ಪದವೀಧರರಾದರು.

ಪದವೀಧರರಾದ ರಾಯರಿಗೆ ವಿಜಾಪುರದ ಶ್ರೀ ಕೃಷ್ಣ ಪಾಠಶಾಲೆ (ಇಂದಿನ ಪಿ.ಡಿ.ಜೆ. ಹೈಸ್ಕೂಲು)ಯಲ್ಲಿ ಶಿಕ್ಷಕರಾಗಿ ಕೆಲಸ ದೊರಕಿತು. ಮತ್ತು ಮನೆಯಲ್ಲಿ ಸುಖಶಾಂತಿ ಮನೆಮಾಡತೊಡಗಿತು. ೧೯೧೩ರಲ್ಲಿ ಜನಿಸಿದ ಮಗನಿಗೆ ಶ್ರೀಕೃಷ್ಣನೆಂದು ಹೆಸರಿಟ್ಟಿದ್ದರು. ಅನಂತರ ಹುಟ್ಟಿದ ಹೆಣ್ಣು ಮಕ್ಕಳಿಗೆ ಸುಭದ್ರ ಮತ್ತು ಭಾಗಮ್ಮ ಎಂದು ಹೆಸರಿಟ್ಟರು.

ಹೆಂಡತಿ ಸೀತಾಬಾಯಿಯವರೊಡನೆ ರಾಮಚಂದ್ರ ರಾಯರ ಸಂಸಾರ ಸಂತೋಷದಿಂದಲೇ ಸಾಗಿತ್ತು. ಆದರೆ ೧೯೨೦ರಲ್ಲಿ ಮಹಾತ್ಮಾ ಗಾಂಧಿಯವರು ಅಸಹಕಾರ ಆಂದೋಲನದ ಕರೆಕೊಟ್ಟಾಗ ರಾಯರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಆಂದೋಲನದಲ್ಲಿ ಭಾಗವಹಿಸಿದರು. ಹೆಂಡತಿ-ಮಕ್ಕಳು ಪುನಃ ಉಪವಾಸ ಅನುಭವಿಸಬೇಕಾಯಿತು. ಆದರೆ ರಾಯರಿಗೆ ಮಾತ್ರ ಅದರ ಚಿಂತೆಯಿರಲಿಲ್ಲ. ತಮ್ಮ ಜೀವನವನ್ನು ದೇಶದ ಸೇವೆಗಾಗಿ ಮುಡುಪಾಗಿಡುವ ಸಂಕಲ್ಪವನ್ನು ಅವರು ಮಾಡಿದ್ದರು.

ಆವಿನದು ನೊರೆಹಾಲನೊಲ್ಲೆನು

ಸಾಲಿ ರಾಮಚಂದ್ರರಾಯರು ಪುಣೆಯಲ್ಲಿ ಬಿ.ಎ. ಓದುತ್ತಿದ್ದಾಗ ಅವರ ಗೆಲೆಯರ ಬಳಗದಲ್ಲಿ ದೇಶಪಾಂಡೆ ರುಕ್ಮಾಂಗದರಾಯರು, ಮೊಹರೆ ಹಣಮಂತರಾಯರು, ಅಸುಂಡಿ ರಂಗರಾಯರು ಮೊದಲಾಗಿ ಒಟ್ಟಿಗೆ ಒಂಬತ್ತು ಸಹಪಾಠಿಗಳಿದ್ದರು. ಈ ಗೆಳೆಯರ ಬಳಗಕ್ಕೆ ‘ನವಬಿಂದು ವರ್ತುಲ’ ಎಂದು ಹೆಸರು ಬಂದಿತ್ತು. ಇವರೆಲ್ಲ ಒಟ್ಟಿಗೆ ಸೇರಿದಾಗ ರಾಯರ ಪ್ರತಿಯೊಬ್ಬ ಗೆಳೆಯರೂ “ದೇಶ ಸೇವೆಯೇ ನನ್ನ ಜೀವನದ ಗುರಿ” ಎಂದು ಹೇಳಿ ತಾವು ಯಾವ ವಿಧದಿಂದ ದೇಶಸೇವೆ ಮಾಡುವೆವೆಂಬುದನ್ನು ವಿವರಿಸುತ್ತಿದ್ದರು. ಆದರೆ ರಾಮಚಂದ್ರರಾಯರು ಮಾತ್ರ ಏನನ್ನೂ ಹೇಳದೆ ನಕ್ಕು ಸುಮ್ಮನಿರುತ್ತಿದ್ದರು. ಒಂದು ದಿನ ರಾತ್ರಿ ‘ನವಬಿಂದು ವರ್ತುಲ’ ಪುಣೆಯ ಮುಳಾಮುಠಾ ನದಿಯ ದಂಡೆಯ ಮೇಲೆ ಬೆಳದಿಂಗಳ ಸೊಬಗನ್ನು ಸವಿಯುತ್ತ ಕುಳಿತಾಗ ಗೆಳೆಯರ ಒತ್ತಾಯಕ್ಕೆ ಮಣಿದು ರಾಯರು ತಮ್ಮ ಜೀವನದ ಗುರಿಯನ್ನು ಹೇಳಲೇಬೇಕಾಯಿತು. ಮತ್ತು ಅವರ ಭಾವಗಳು ಕವನರೂಪದಲ್ಲಿ ಪ್ರಕಟವಾದವು:

ಆವಿನದು ನೊರೆಹಾಲನೊಲ್ಲೆನು
ದೇವಲೋಕದ ಸುಧೆಯನೊಲ್ಲೆನು
ದೇವಿ, ನಿನ್ನಯ ನಾಮದದ್ಭುತ ರುಚಿಯನರಿತಿಹೆನು!
ಪಾವನಳೆ! ನಿನ್ನಂಘ್ರಿಕಮಲದ
ಸೇವೆಯದು ದೊರೆತಿಹುದು ತಾಯೆ

ಶ್ರೀವರನ ಕೃಪೆಯಿಂದ ಮತ್ತಿನ್ನೇನು ಬೇಡೆನಗೆ!!

ಎಂದು ಮುಂತಾಗಿ ಹಾಡುತ್ತ ತಮಗೆ ಹಣ ಬೇಡ, ಸನ್ಮಾನ ಬೇಡ, ಕೀರ್ತಿ ಬೇಡ, ಆದರೆ ಭಾರತಮಾತೆಯ ಸೇವೆಯಲ್ಲಿ ದೇಹ ಸವೆಯಲಿ ಎಂದು ದೇವರಲ್ಲಿ ಬೇಡಿ ಕೊಂಡರು:

ಧನವ ಬೇಡೆನು ನಾನು, ನಾರಾ
ಯಣನೆ! ಸನ್ಮಾನವನು ವಿದ್ವ
ಜ್ಜನರ ಸಭೆಯಲಿ ಬೇಡೆನೈ, ನಾ ಬೇಡೆ ಕೀರ್ತಿಯನು|
ಕನಸುಮನಸಿನಲಿರಲಿ, ಕರುಣಾ
ಘನನೆ, ಧ್ಯಾನವು ಜನ್ಮಭೂಮಿಯ
ತನುವು ಸವೆಯುತಲಿರಲಿ ಹಗಲಿರುಳವಳ ಸೇವೆಯಲಿ||

ಇದು ಪ್ರಸಿದ್ಧವಾದ ರಾಯರ ಕವಿತೆ ‘ಹಂಬಲು’. ಕೊನೆಯವರೆಗೂ ಈ ಕವಿತೆಯಲ್ಲಿ ಹಾಡಿದಂತೆಯೇ ರಾಯರು ಜೀವನವನ್ನು ದೇಶಸೇವೆಯಲ್ಲಿ ಕಳೆದರು.

ಪ್ರಸಿದ್ಧ ಸ್ವಾತಂತ್ಯ್ರ ಹೋರಾಟಗಾರರೂ ಕರ್ನಾಟಕದ ಕುಲಪುರೋಹಿತರು ಎಂದು ಹೆಸರುವಾಸಿಗಳಾದವರೂ ಆದ ಆಲೂರ ವೆಂಕಟರಾಯರು ಅದೇ ಸಮಯದಲ್ಲಿ ಪುಣೆಗೆ ಭೇಟಿಕೊಟ್ಟರು. ಅವರ ಭಾಷಣದ ಕಾರ್ಯಕ್ರಮವಿತ್ತು. ‘ನವಬಿಂದು ವರ್ತಲ’ದ ಸದಸ್ಯರೆಲ್ಲ ಭಾಷಣ ಕೇಳಲು ಹೋಗಿದ್ದರು. ಅಲ್ಲಿ ರಾಯರ ಗೆಳೆಯರು ರಾಯರನ್ನು ಎಳೆದುಕೊಂಡು ಹೋಗಿ ಆಲೂರರಿಗೆ ಪರಿಚಯಮಾಡಿಕೊಟ್ಟರು. ಅವರ ‘ಹಂಬಲು’ ಕವಿತೆಯ ಬಗ್ಗೆಯೂ ಹೇಳಿದರು. ಆ ಕವಿತೆಯನ್ನು ಓದಿದ ಆಲೂರರಿಗೆ ಪರಿಚಯಮಾಡಿಕೊಟ್ಟರು. ಅವರ ‘ಹಂಬಲು’ ಕವಿತೆಯ ಬಗ್ಗೆಯೂ ಹೇಳಿದರು. ಆ ಕವಿತೆಯನ್ನು ಓದಿದ ಆಲೂರರಿಗೆ ಬಹಳ ಸಂತೋಷವಾಯಿತು. ಮತ್ತು ಅದನ್ನು ಕೂಡಲೇ ಪ್ರಕಟಿಸಿದರು. ಇದರಿಂದ ರಾಮಚಂದ್ರರಾಯರು ‘ಆವಿನದು ನೊರೆಹಾಲನೊಲ್ಲೆನು’ ಎಂದು ಪ್ರಸಿದ್ಧರಾದರು.

೧೯೨೩ ರಲ್ಲಿ ರಾಮಚಂದ್ರರಾಯರು ಬೆಂಗಳೂರಿಗೆ ಹೋಗಿದ್ದರು. ಕನ್ನಡ ಸಾಹಿತ್ಯದಲ್ಲಿ ಆಗಲೇ ಪ್ರಸಿದ್ಧಿ ಪಡೆದ ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಭೇಟಿ ಆಗಲು ರಾಯರು ಅಲ್ಲಿಗೆ ಹೋಗಿದ್ದರು. ಮನೆಯ ಬಾಗಿಲನ್ನು ತೆರೆದ ಮಾಸ್ತಿಯವರು ‘ತಾವು ಯಾರು?’ ಎಂದು ಕೇಳಿದಾಗ ‘ಸಾಲಿ ರಾಮಚಂದ್ರರಾಯ’ ಎಂದು ಉತ್ತರಿಸಿದರು. ಆಗ ಮಾಸ್ತಿಯವರು ಸಂತೋಷದಿಂದ, “ಓಹೋ, ‘ಆವಿನದು ನೊರೆಹಾಲನೊಲ್ಲೆನು’ ರಾಯರು! ಅದನ್ನು ತಾವೇ ಬರೆದದ್ದಲ್ಲವೆ? ಬರಬೇಕು, ಬರಬೇಕು. ತಮ್ಮನ್ನು ನೋಡಿ ಬಹಳ ಸಂತೋಷವಾಯಿತು” ಎಂದು ಆನಂದದಿಂದ ಅವರನ್ನು ಬರಮಾಡಿಕೊಂಡರು. ಅಂದಿನಿಂದ ಇಬ್ಬರೂ ಸೋದರರಂತಿದ್ದರು.

ಅಪ್ಪಟ ದೇಶಸೇವಕ

೧೯೨೦ ರಲ್ಲಿ ಅಸಹಕಾರ ಆಂದೋಲನವನ್ನು ಸೇರಿಕೊಂಡ ರಾಯರು ಕಾಂಗ್ರೆಸ್ಸಿನ ಸ್ವಯಂಸೇವಕರಾಗಿ ಕೆಲಸ ಮಾಡತೊಡಗಿದರು. ನಾಗಪುರದಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದಲ್ಲಿ ಭಾಗವಹಿಸಿದ್ದರು. ದೇಶಕ್ಕಾಗಿ ಬದುಕುವ ಪ್ರತಿಜ್ಞೆ ಕೈಗೊಂಡರು.

ದೇಶದ ನಾನಾ ಭಾಗಗಳನ್ನು ಕಣ್ಣಾರೆ ಕಾಣಬೇಕೆಂದು ದೇಶದ ತುಂಬ ಸುತ್ತಾಡಿದರು. ‘ನವಜೀವನ’ ಎಂಬ ಗುಜರಾತಿ ಪತ್ರಿಕೆಯಲ್ಲಿ ಮಹಾತ್ಮ ಗಾಂಧಿಯವರು ಲೇಖನಗಳನ್ನು ಬರೆಯುತ್ತಿದ್ದರು. ರಾಯರು ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಬಾಗಲಕೋಟೆಯಿಂದ ಹೊರಡುತ್ತಿದ್ದ ‘ಜನಜೀವನ’ ಎಂಬ ಪತ್ರಿಕೆಯಲ್ಲಿ ಪ್ರಕಟಿಸತೊಡಗಿದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ಅಧಿವೇಶನದ ಅಧ್ಯಕ್ಷರಾಗಿದ್ದ ಮಹಾತ್ಮಾ ಗಾಂಧಿಯವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಿದವರು ಸಾಲಿ ರಾಮಚಂದ್ರರಾಯರೇ.

ಅದೇ ವರುಷ ರಾಯರಿಗೆ ಒಂದು ಆಘಾತ ಒದಗಿತು. ಅವರ ಪತ್ನಿ ತೀರಿಕೊಂಡರು. ಇದು ಅವರಿಗೆ ಅಘಾತ ಉಂಟುಮಾಡಿತು. ಅನಂತರ ಮಕ್ಕಳ ಲಾಲನೆ ಪಾಲನೆಗಾಗಿ ರಾಯರು ಧಾರವಾಡದಲ್ಲಿ ಬಂದು ನೆಲೆಸಬೇಕಾಯಿತು. ಅಂದಿನಿಂದ ಧಾರವಾಡವೇ ಅವರ ಊರಾಗಿ ಬಿಟ್ಟಿತು. ಪತ್ನಿಯ ಮರಣದ ದುಃಖವನ್ನು ಸಹಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದ ರಾಯರ ಮೇಲೆ ಇನ್ನೊಂದು ಆಘಾತ ಬಂದೆರಗಿತು. ಅದೆಂದರೆ ಅವರನ್ನು ಸಾಕಿ ಸಲಹಿದ ಡಂಬಳ ಮಾಸ್ತರರ ಮರಣ. ಈ ದುಃಖಪರಂಪರೆಯನ್ನು ರಾಯರು ನುಂಗಿಕೊಂಡು ದೇಶಸೇವೆಯಲ್ಲಿ ತೊಡಗಿದರು. ಅಂದಿನ ಸ್ವಾತಂತ್ಯ್ರ ಹೋರಾಟಗಾರರಾಗಿದ್ದ ಹೊಸಮನಿ ಪರಮಣ್ಣನವರ ಆದೇಶದಂತೆ ಧಾರವಾಡ ಜಿಲ್ಲೆಯ ಕರ್ಜಗಿ ಗ್ರಾಮದಲ್ಲಿ ಕೆಲವು ತಿಂಗಳು ಖಾಸಗಿ ಶಾಲೆಯನ್ನು ನಡೆಸಿದರು. ಆ ಬಳಿಕ ಕನ್ನಡಿಗರಲ್ಲಿ ಅಭಿಮಾನವನ್ನು ಜಾಗೃತಗೊಳಿಸಲು ಆಲೂರ ವೆಂಕಟರಾಯರು ಪ್ರಕಟಿಸುತ್ತಿದ್ದ ‘ಜಯಕರ್ನಾಟಕ’ ಪತ್ರಿಕೆಯಲ್ಲಿ ಎರಡು ವರುಷ ಉಪ ಸಂಪಾದಕರಾಗಿ ಕೆಲಸ ಮಾಡಿದರು. ಹೀಗೆ ರಾಯರು ಬೇರೆಬೇರೆ ಕೆಲಸಗಳಲ್ಲಿ ತೊಡಗಿದ್ದಾಗ ಅವರ ಮನೆಯಲ್ಲಿ ಮಾತ್ರ ಬಡತನ ತುಂಬಿಹೋಗಿತ್ತು. ರಾಯರ ಜತೆ ಮಕ್ಕಳೂ ಉಪವಾಸ ಅನುಭವಿಸುತ್ತಿದ್ದರು.

ಸಾಲಿ ಮಾಸ್ತರು

ಆಗ ಧಾರವಾಡದಲ್ಲಿ ವೈದ್ಯಕೀಯ ವೃತ್ತಿಯನ್ನು ಮಾಡುತ್ತಿದ್ದ ಕಬ್ಬೂರ ನಾರಾಯಣರಾಯರು, ರಾಮಚಂದ್ರ ರಾಯರು ಹುಬ್ಬಳ್ಳಿ ತೊರವಿ ಹೈಸ್ಕೂಲ್‌ನಲ್ಲಿ ಶಿಕ್ಷಕರಾಗಿದ್ದಾಗ ವಿದ್ಯಾರ್ಥಿಗಳಾಗಿದ್ದರು. ಕಬ್ಬೂರರಿಗೆ ರಾಯರ ಮೇಲೆ ಬಹಳ ಭಕ್ತಿ. ೧೯೨೮ ರಲ್ಲಿ ಒಂದು ದಿನ ರಾಯರಿಗೆ ಆರೋಗ್ಯ ಸರಿಯಿಲ್ಲ ಎಂದು ಡಾಕ್ಟರ್ ಕಬ್ಬೂರರಿಗೆ ಕರೆ ಬಂತು. ಕೂಡಲೇ ಕಬ್ಬೂರರು ರಾಯರ ಮನೆಗೆ ಧಾವಿಸಿದರು. ಉಪವಾಸವಿದ್ದುದರಿಂದ ರಾಯರು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕಬ್ಬೂರರು ರಾಯರ ಮನೆ ತಲುಪಿದಾಗ ರಾಯರು ಹೊಟ್ಟೆನೋವನ್ನು ತಡೆಯಲಾರದೆ ನೆಲದ ಮೇಲೆ ಉರುಳಾಡುತ್ತಿದ್ದರು. ಸರಿದಯಾದ ಆಹಾರವಿಲ್ಲದೆ ಸೊರಗಿ ಕಡ್ಡಿಯಾದ ಮೂವರು ಮಕ್ಕಳು ತಂದೆಯನ್ನು ನೋಡುತ್ತ ಅಂಜಿ ಒಂದು ಮೂಲೆಯಲ್ಲಿ ಅಳುತ್ತ ಕುಳಿತಿದ್ದರು. ಆ ನೋಟವನ್ನು ನೋಡಿದ ಕಬ್ಬೂರರಿಗೆ ಬಹಳ ದುಃಖವಾಯಿತು. ಅವರು ರಾಯರಿಗೆ ಔಷಧಕೊಟ್ಟು ಗುಣಪಡಿಸಿದರಷ್ಟೇ ಅಲ್ಲ, ರಾಯರಿಗೆ ನಿಶ್ಚಿತವಾದ ಸಂಬಳ ಬರುವಂತೆ ಯೋಚನೆಯನ್ನೂ ಮಾಡಿದರು.

ಆಗ ಧಾರವಾಡದಲ್ಲಿ ಕೆಲವು ಉತ್ಸಾಹಿ ದೇಶಭಕ್ತ ತರುಣರು ರೊದ್ದ ಶ್ರೀನಿವಾಸರಾಯರ ಮಾರ್ಗದರ್ಶನದಲ್ಲಿ ‘ಕರ್ನಾಟಕ ಎಜ್ಯುಕೇಶನ್‌ಬೋರ್ಡಿ’ನ ಪರವಾಗಿ ಕರ್ನಾಟಕ ಹೈಸ್ಕೂಲನ್ನು ನಡೆಸುತ್ತಿದ್ದರು. ಅವರಲ್ಲಿ ಡಾಕ್ಟರ್ ಕಬ್ಬೂರರೂ ಒಬ್ಬರಾಗಿದ್ದರು. ತಮ್ಮ ಹೈಸ್ಕೂಲಿನಲ್ಲಿ ಶಿಕ್ಷಕರಾಗಲು ಕಬ್ಬೂರರು ರಾಯರಿಗೆ ಬಿನ್ನಹಮಾಡಿದರು. ಆದರೆ  ರಾಯರು ಕೂಡಲೇ ಒಪ್ಪಲಿಲ್ಲ. ತಾವು ಯಾವ ಕೆಲಸ ಮಾಡಿದರೂ ಅದು ದೇಶಸೇವೆಗೆ ಅಡ್ಡ ಬರಬಾರದೆಂದು ರಾಯರ ಇಚ್ಛೆಯಾಗಿತ್ತು. ಅದಕ್ಕಾಗಿ ಶಿಕ್ಷಕರಾಗಿ ಸೇರುವ ಮೊದಲು ರಾಯರು ಕರಾರು ಹಾಕಿದರು. (೧) ರಾಷ್ಟ್ರದ ಕರೆ ಬಂದಾಗ ನೌಕರಿಯನ್ನು ಬಿಡಲು ನಾನು ಸ್ವತಂತ್ರ: (೨) ನನ್ನ ಸೇವೆ ನಿಮ್ಮ ಮನಸ್ಸಿಗೆ ಬಾರದಿದ್ದರೆ ನನ್ನನ್ನು ಕಿತ್ತುಹಾಕಲು ನೀವು ಸ್ವತಂತ್ರರು. ಹೀಗಿತ್ತು ರಾಯರ ಸ್ವಾಭಿಮಾನ! ಬೋರ್ಡಿನವರು ರಾಯರ ಕರಾರನ್ನು ಒಪ್ಪಿಕೊಂಡರು.

ತೇಜಸ್ವೀ ತೇಜಸ್ವೀ

ರಾಯರು ಶಿಕ್ಷಕರಾಗಿ ಸೇರಿದ ಮೇಲೆ ಶಾಲೆಯ ಹಿತಕ್ಕಾಗಿ ಹಗಲಿರುಳು ದುಡಿದರು. ಶಾಲೆಗೆ ಒಂದು ಧ್ಯೇಯ ವಾಕ್ಯ ಬೇಕೆಂದು ವಿಚಾರ ನಡೆದಾಗ ‘ತೇಜಸ್ವಿನಾವಧೀತಮಸ್ತು’ ಎಂಬ ಉಪನಿಷದ್ವಾಕ್ಯವನ್ನು ಸೂಚಿಸಿದವರು ರಾಯರೇ. ಮುಂದೆ, ಶಾಲೆಯಲ್ಲಿ ಒಂದು ಪ್ರಾರ್ಥನಾಗೀತೆ ಬೇಕೆಂದು ಹೇಳಿದಾಗ ಆ ಧ್ಯೇಯ ವಾಕ್ಯಕ್ಕೆ ಅನುಗುಣವಾಗಿ ‘ನಮ್ಮ ಧ್ವಜವು’ ಎಂಬ ಕವಿತೆಯನ್ನು ರಾಯರೇ ರಚಿಸಿಕೊಟ್ಟರು:

ಉನ್ನತಿಯ ಮಾರ್ಗವನು ತೋರುವುದು ಧ್ವಜವು |
ಉನ್ನತವು ಧವಲವೀ ನಮ್ಮ ಧ್ವಜವು ||
ತೇಜಸ್ವಿ ನಾಡು, ನುಡಿ ತೇಜಸ್ವಿ ನಮ್ಮ ಗುರಿ |
ತೇಜಸ್ವಿ, ತೇಜಸ್ವಿ ಇತಿಹಾಸವು ||
ತೇಜಸ್ವಿ ನಮ್ಮ ಸಂಸ್ಕೃತಿ, ನಮ್ಮ ಹೊಸ ದಾರಿ |
ತೇಜಸ್ವಿ, ತೇಜಸ್ವಿ ನಮ್ಮ ಹಾಡು ||೧||

ತೇಜಸ್ವಿ ಶಾಲೆ, ಗುರು ತೇಜಸ್ವಿ, ವಿದ್ಯಾರ್ಥಿ |
ತೇಜಸ್ವಿ, ತೇಜಸ್ವಿ ಅಧ್ಯಯನವು ||
ತೇಜಸ್ವಿ ನಮ್ಮ ಮಂತ್ರವು ನಮ್ಮ ಶಾಸನವು |
ತೇಜಸ್ವಿ ತೇಜಸ್ವಿ ನಮ್ಮ ಧ್ವಜವು ||೨||

ಓಜಸ್ಸು ತೇಜಸ್ಸು ಸತ್ವ ಪೋಷಕವೆಂದು ||
ತೇಜಸ್ವಿ ತೇಜಸ್ವಿಯಾಗಿರೆಂದು ||
ಓಜಸ್ವಿ ನಮ್ಮ ಧವಲ ಧ್ವಜವು ಹರಸುವದು |
ಸೌಜನ್ಯವನು ನಮಗೆ ಕಲಿಸುತೊಲಿದು ||೩||

ಧಾರವಾಡದ ಕರ್ನಾಟಕ ಎಜ್ಯುಕೇಶನ್‌ಬೋರ್ಡಿನವರು ನಡೆಸುತ್ತಿರುವ ಎಲ್ಲ ಶಾಲೆಗಳು ಇಂದಿಗೂ ಈ ಪ್ರಾರ್ಥನಾಗೀತೆಯಿಂದಲೇ ತಮ್ಮ ನಿತ್ಯದ ಚಟುವಟಿಕೆಗಳನ್ನು ಆರಂಭಿಸುತ್ತವೆ.

ಶಾಲೆಯ ಬಗ್ಗೆ ರಾಯರಿಗೆ ಬಹಳ ಅಭಿಮಾನ. ತಮ್ಮ ಬಳಿ ಪರ ಊರಿನ ಗೆಳೆಯರು ಬಂದಾಗ ಅವರನ್ನು ಶಾಲೆಗೆ ಕರೆದುಕೊಂಡುಹೋಗಿ ತೋರಿಸುತ್ತಿದ್ದರು. ಅದೇ ರೀತಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವಾಗ ದೇಶಭಕ್ತಿಯನ್ನೂ ಕಲಿಸುತ್ತಿದ್ದರು. ದೇಶಭಕ್ತಿಯಿಂದ ತುಂಬಿದ ಕವಿತೆಗಳನ್ನು ರಚಿಸಿ ವಿದ್ಯಾರ್ಥಿಗಳಿಂದ ಹಾಡಿಸಿ ಉತ್ಸಾಹ ತುಂಬುತ್ತಿದ್ದರು. ಹೀಗಾಗಿ ವಿದ್ಯಾರ್ಥಿಗಳಲ್ಲಿ ‘ಸಾಲಿಮಾಸ್ತರರು’ ಅಚ್ಚುಮೆಚ್ಚಿನ ಗುರುಗಳಾಗಿದ್ದರು, ಮತ್ತು ಕರ್ನಾಟಕ ಹೈಸ್ಕೂಲು ಸ್ವಾತಂತ್ಯ್ರ ಹೋರಾಟಗಾರರಿಗೆ ಸ್ಫೂರ್ತಿಯ ಕೇಂದ್ರವಾಯಿತು.

‘ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ’

ರಣಕೆ ನಡೆದನು ವೀರ

೧೯೨೯ ರಲ್ಲಿ ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹಕ್ಕೆ ಕರೆ ನೀಡಿದರು ಮತ್ತು ತಮ್ಮ ದಂಡೀ ಯಾತ್ರೆಯ ಸಂಕಲ್ಪವನ್ನು ಘೋಷಿಸಿದರು. ಆ ಯಾತ್ರೆಗೆ ಕರ್ನಾಟಕದಿಂದ ಸ್ವಯಂಸೇವಕರನ್ನು ಕಳಿಸುವ ಹೊಣೆ ಡಾಕ್ಟರ್ ಕಬ್ಬೂರ ಅವರದಾಗಿತ್ತು. ತಮ್ಮ ಗುರು ಸಾಲಿ ಮಾಸ್ತರರ ಮಗನಾದ ಶ್ರೀಕೃಷ್ಣನನ್ನು ದಂಡೀಯಾತ್ರೆಗೆ ಕಳಿಸಬೇಕೆಂದು ವಿಚಾರಮಾಡಿ ಕಬ್ಬೂರರು ಒಂದು ದಿನ ಮಧ್ಯಾಹ್ನ ರಾಯರ ಮನೆಗೆ ಬಂದರು. ಆ ದಿನ ಮನೆಯಲ್ಲಿ ಶ್ರಾದ್ಧದ ಕೆಲಸವಿತ್ತು ಮತ್ತು ರಾಯರು ಅದೇ ಆಗ ಸ್ನಾನ ಮುಗಿಸಿ ಧಾರ್ಮಿಕ ವಿಧಿಗಳನ್ನು ಪ್ರಾರಂಭಿಸುವವರಿದ್ದರು. ಕಬ್ಬೂರರನ್ನು ಕಂಡ ಕೂಡಲೆ ರಾಯರು “ಏನು ಬೇಕು?” ಎಂದು ಕೇಳಿದರು. “ನಿಮ್ಮ ಮಗ ಬೇಕು” ಎಂದು ಕಬ್ಬೂರರು ಉತ್ತರಿಸಿದರು. ರಾಯರು “ಯಾವಾಗ ಬೇಕು? ಏನು ಕೆಲಸ?” ಎಂದು ಕೇಳಿದಾಗ ಕಬ್ಬೂರರು ರಾಯರಿಗೆ ಸತ್ಯಾಗ್ರಹದ ವಿಚಾರವನ್ನು ತಿಳಿಸಿದರು. ಆಗ ಶ್ರೀಕೃಷ್ಣನಿಗೆ ಕೇವಲ ಹದಿನಾರು ವರ್ಷ. ಕೂಡಲೇ ರಾಯರು ಮಗನನ್ನು ಕರೆದು ಕಬ್ಬೂರರ ಇಚ್ಛೆಯನ್ನು ತಿಳಿಸಿದರು. ಅವನು ರಾಯರ ಮಗನಲ್ಲವೆ? ದೇಶಸೇವೆಗಾಗಿ ಸದಾ ಸಿದ್ಧ. ತಂದೆಯ ಮಾತನ್ನು ಕೇಳಿ ಕಬ್ಬೂರರ ಜೊತೆಗೆ ಹೋಗಲು ಸಿದ್ಧನಾದ. ಊಟಮದಾಡಿ ಹೋಗಲೆಂದು ರಾಯರು ಸೂಚಿಸಿದರು. ಆದರೆ ಅಡಿಗೆಯಾಗಿರಲಿಲ್ಲ. ಅಡಿಗೆಯಾಗುವ ತನಕ ಕಾಯಲು ಸಮಯವಿರಲಿಲ್ಲ. ಅದಕ್ಕಾಗಿ ಶ್ರೀಕೃಷ್ಣನು ತಂದೆಗೆ ನಮಸ್ಕರಿಸಿ ಆ ಕೂಡಲೇ ಹೊರಟು ಬಿಟ್ಟ. ಆ ಪ್ರಸಂಗವನ್ನು ರಾಯರು ಹೀಗೆ ಹಾಡಿದ್ದಾರೆ :

ರಣ ಗೊಂಬು ಕರೆದೊಡನೆ
ಕುಣಿದುದಾತನ ಹೃದಯ !
ಮಣಿದೆನ್ನ ಕಾಲ್ಗಳಿಗೆ
ರಣಕೆ ನಡೆದನು ವೀರ !

ಕಬ್ಬೂರರು ಶ್ರೀಕೃಷ್ಣನನ್ನು ಗುಜರಾತಿಗೆ ಕಳುಹಿಸಿ ಕೊಟ್ಟರು. ಅಲ್ಲಿ ಧರ್ಸಾನಾ ಎಂಬಲ್ಲಿ ಅವನು ಸತ್ಯಾಗ್ರಹದಲ್ಲಿ ಪಾಲುಗೊಂಡ. ಪೋಲೀಸರು ಅವನನ್ನು ಚೆನ್ನಾಗಿ ಹೊಡೆದರು. ದೇಹದ ತುಂಬ ಗಾಯಗಳಾದವು. ಅವನು ಮರಳಿಬಂದಾಗ ರಾಯರು ಅವನ ಗಾಯಗಳಿಗೆ ಔಷಧೋಪಚಾರ ಮಾಡಿದರು. ಆದರೂ ಆತನಿಗೆ ಪೂರ್ಣ ಗುಣವಾಗಲಿಲ್ಲ.

ಸಂತತವು ಆಪತ್ತು ! ಸಂತತವು ಆಪತ್ತು !

ಮರುವರುಷ ಶ್ರೀಕೃಷ್ಣ ಕಾಲೇಜ್‌ಶಿಕ್ಷಣಕ್ಕಾಗಿ ಕರ್ನಾಟಕ ಕಾಲೇಜನ್ನು ಸೇರಿದ. ಸೈನಿಕ ಶಿಕ್ಷಣ ನೀಡುವ ಯು.ಟಿ.ಸಿ. ಸೇರಿದ. ಆಗ ರಾಯರು ಕಾಶೀಯಾತ್ರೆಗೆ ಹೋಗಿದ್ದರು. ದಾರಿಯಲ್ಲಿ ಅಲಿಗಢ ತಲುಪಿದಾಗ ರಾಯರಿಗೆ ಮನೆಗೆ ಹಿಂತಿರುಗಬೇಕೆಂದು ಅನಿಸಿತು. ಯಾಕೆ ಹಾಗೆ ಅನಿಸಿತೆಂದು ಅವರಿಗೇ ತಿಳಿದಿರಲಿಲ್ಲ. ಯಾತ್ರೆಯನ್ನು ಅರ್ಧಕ್ಕೇ ಬಿಟ್ಟು ಮರಳಿದರು. ಮಧ್ಯಾಹ್ನ ರೈಲು ಧಾರವಾಡ ತಲುಪಿದಾಗ ರೈಲುನಿಲ್ದಾಣದಲ್ಲಿ ಶ್ರೀಕೃಷ್ಣನು ರಾಯರನ್ನು ಬರಮಾಡಿಕೊಂಡು ಮನೆಗೆ ಕರೆದುಕೊಂಡು ಬಂದ. ಆ ದಿನ ಅವನ ಯು.ಟಿ.ಸಿ.ಯ ವಾರ್ಷಿಕೋತ್ಸವ. ಸಾಯಂ ಕಾಲವಿಡೀ ಉತ್ಸವದಲ್ಲಿ ಭಾಗವಹಿಸಿ ದಣಿದು ರಾತ್ರಿ ತಡವಾಗಿ ಮನೆಗೆ ಬಂದ. ಮೈ ಸರಿಯಿಲ್ಲವೆಂದು ಊಟ ಮಾಡದೇ ಮಲಗಿಬಿಟ್ಟ. ರಾತ್ರೆ ನಿದ್ರೆಯಲ್ಲಿ ಸಂಕಟದಿಂದ ನರಳತೊಡಗಿದ. ಸಮೀಪವೇ ರಾಯರು ಮಲಗಿದ್ದರು. ಆ ನರಳಾಟದಿಂದ ಅವರಿಗೆ ಎಚ್ಚರವಾಯಿತು. ಮಗನ ಮೈ ಮುಟ್ಟಿದರೆ ಅದು ಜ್ವರದಿಂದ ಕಾದು ಬೆಂಕಿಯಾಗಿತ್ತು. ಆಗ ಊರಲ್ಲಿ ಪ್ಲೇಗಿನ ಹಾವಳಿಯಿತ್ತು. ರಾಯರು ಹೆದರಿಬಿಟ್ಟರು. ಡಾಕ್ಟರ್ ಕಬ್ಬೂರರಿಗೆ ಹೇಳಿ ಕಳುಹಿಸಿದರು. ಕಬ್ಬೂರರು ಓಡೋಡಿ ಬಂದರು. ಶ್ರೀಕೃಷ್ಣನನ್ನು ಪರೀಕ್ಷಿಸಿದರು. ಅವರಿಗೆ ಬಹಳ ವ್ಯಥೆಯಾಯಿತು. ರಾಯರಿಗೆ ಹೇಳಿದರು: “ಮಾಸ್ತರ್ ! ಮನಸ್ಸು ಗಟ್ಟಿ ಮಾಡಿರಿ. ಇನ್ನು ಮುಂದೆ ನಾವೇ ನಿಮ್ಮ ಮಕ್ಕಳು. ಶ್ರೀಕೃಷ್ಣನ ಆಸೆ ಬಿಡಿರಿ !” ಅದನ್ನು ಕೇಳಿದಾಗ ರಾಯರಿಗೆ ಸಿಡಿಲು ಬಡಿದಂತಾಯಿತು ! “ಅಯ್ಯೋ ದೇವರೇ !”ಎಂದು ಚೀರಿದರು. ಶ್ರೀಕೃಷ್ಣನನ್ನು ಬದುಕಿಸಬೇಕೆಂದು ಕಬ್ಬೂರರೂ ಎಷ್ಟೆಷ್ಟೋ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಮರು ದಿನವೇ ಶ್ರೀಕೃಷ್ಣ ಪ್ರಾಣಬಿಟ್ಟ. ರಾಯರ ಬಾಳಲ್ಲಿ ಇದು ಅತ್ಯಂತ ದೊಡ್ಡ ಆಘಾತ. ಇದು ಒದಗಿದ್ದು ೧೯೩೧ ರ ಡಿಸೆಂಬರ್ ಮೂರರಂದು.

ರಾಯರಿಗಾದ ದುಃಖವನ್ನು ವರ್ಣಿಸಲು ಸಾಧ್ಯವಿಲ್ಲ. ಅವರು ಚಿಕ್ಕಂದಿನಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ಅನಾಥರಾಗಿದ್ದರು. ತಾರುಣ್ಯದಲ್ಲಿ ಹೆಂಡತಿಯನ್ನು ಕಳೆದುಕೊಂಡರು. ಸಾಕಿ ಸಲಹಿದ ಡಂಬಳ ಮಾಸ್ತರರೂ ಮರಣ ಹೊಂದಿದರು. ಇಷ್ಟಕ್ಕೆ ತಮ್ಮ ಕ್ಷ್ಟ ಮುಗಿಯಿತೆಂದು ಅವರು ಭಾವಿಸಿ ಮಕ್ಕಳನ್ನು ಬೆಳೆಸುತ್ತ ಸಮಧಾನದಿಂದ ಜೀವನ ಸಾಗಿಸಿದ್ದರು. ಆದರೆ ಕ್ರೂರ ವಿಧಿಗೆ ಮಾತ್ರ ರಾಯರ ಮೇಲೆ ಕರುಣೆ ಬರಲಿಲ್ಲ. ಅವರ ಒಬ್ಬನೇ ಮಗನನ್ನೂ ಯಮರಾಯ ಒಯ್ದುಬಿಟ್ಟ. ರಾಯರಿಗೆ ಸಮಾಧಾನ ಹೇಗಾಗಬೇಕು? ಅವರು ತಮ್ಮ ದುಃಖವನ್ನು ಹೀಗೆ ತೋಡಿಕೊಂಡಿದ್ದಾರೆ:

ಮಡಿದರೆನ್ನೆಳವರಯೊಳು
ಹಡೆದವರು; ಹರೆಯದಲಿ
ಮಡಿದಳಿನಿಯಳು; ಮತ್ತೆ
ಮಡಿದನೈ ಮಗನಿಂದು !
ಎಂತೋ ನಾನೀವರೆಗೆ ನಿಂತಿಹುದು ಜಗದೊಳಗೆ ?
ಸಂತತವು ಆಪತ್ತು ! ಸಂತತವು ಆಪತ್ತು !

ಅವರ ದುಃಖ ಕಾವ್ಯವಾಗಿ ಹೊರಬಂದು ‘ತಿಲಾಂಜಲಿ’ ಎಂಬ ಕವಿತೆಯಾಯಿತು. ಕನ್ನಡ ಸಾಹಿತ್ಯದಲ್ಲಿ ‘ತಿಲಾಂಜಲಿ’ ಒಂದು ಶ್ರೇಷ್ಠ ಚರಮಗೀತೆ.

ನೀನಲ್ಲದಿನ್ನಾರ ನೆರವೆನಗೆ?

ಮಗನನ್ನು ಕಳೆದುಕೊಂಡ ದುಃಖವನ್ನು ಸಹಿಸಿಕೊಂಡು ಬದುಕಲು ರಾಯರು ದೇವರ ಮೊರೆಹೊಕ್ಕರು. ಈ ತರಹದ ಅಸಹನೀಯ ದುಃಖಗಳು ಬಂದೊದಗಿದಾಗ ಮನುಷ್ಯ ದೇವರನ್ನು ನಿಂದಿಸುವುದು ಸಾಮಾನ್ಯರ ಅನುಭವ. ಆದರೆ ರಾಯರು ಮಾತ್ರ ದೇವರನ್ನು ನಿಂದಿಸಲಿಲ್ಲ. ತನ್ನದೇ ಆದ ಯಾವುದೋ ಯೋಜನೆಯಂತೆ ದೇವರು ತಮ್ಮ ಮಗ ಶ್ರೀಕೃಷ್ಣನನ್ನು ಒಯ್ದಿರಬೇಕೆಂದು ರಾಯರು ಸಮಾಧಾನ ತಳೆದರು. ಕಲ್ಲಿನಿಂದ ಗುಡಿಯನ್ನು ಕಟ್ಟುವ ಶಿಲ್ಪಿಯು ಆ ಕಲ್ಲಿಗೆ ಏಟನ್ನು ಕೊಟ್ಟು ಒಡೆದರೆ ಅವನನ್ನು ಯಾರಾದರೂ ‘ಕೆಟ್ಟವ’ನೆಂದು ನಿಂದಿಸುತ್ತಾರೆಯೇ?

ಗುಡಿಯ ಕಟ್ಟುವ ಶಿಲ್ಪಿ
ಕೊಡತಿಯೊಳು ಬೆಟ್ಟಕ –
ಲ್ಲೊಡೆವುದನು ಕಂಡವನು
ಕಿಡುಕನೆಂದೆನಲಹುದೇ?

ಎಂದು ರಾಯರು ಕೇಳಿದ್ದಾರೆ. ಮತ್ತು ತಮ್ಮನ್ನು ಕೈಹಿಡಿದು ನಡೆಸೆಂದು ದೇವರಲ್ಲಿ ಬೇಡಿಕೊಂಡರು:

ಕರುಣಾಳು ! ಕೈ ನೀಡು ! ನೀನಲ್ಲದಿನ್ನಾರ
ನೆರವೆನೆಗೆ? ವಿಶ್ವಪತಿ, ನೀಂ ತಂದೆ, ನೀಂ ಮಗಂ ನೀನೆನ್ನ ಸಕಲಬಂಧು ||

ಸಪ್ತಾಪುರದ ಶ್ರೀನಿಕೇತನ

ಕರ್ನಾಟಕ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ರಾಯರು ೧೯೪೬ರಲ್ಲಿ ನಿವೃತ್ತರಾದರು. ನಿವೃತ್ತರಾದರೂ ಸುಮ್ಮನೆ ಕೂಡಲಿಲ್ಲ. ತಮ್ಮ ಮನೆಯಾದ ‘ಶ್ರೀನಿಕೇತನ’ದಿಂದ ಪ್ರತಿನಿತ್ಯ ಹೈಸ್ಕೂಲಿಗೆ ಬಂದು ತರುಣರಿಗೆ ಸಲಹೆ ನೀಡುತ್ತಿದ್ದರು. ಅವರ ವಿದ್ಯಾರ್ಥಿಗಳೇ ಅಲ್ಲಿ ಶಿಕ್ಷಕರಾಗಿ ರಾಯರ ಪರಂಪರೆಯನ್ನೇ ಮುಂದುವರೆಸುತ್ತಿದ್ದರು. ‘ಶ್ರೀನಿಕೇತನ’ ರಾಯರೇ ಕಟ್ಟಿಸಿಕೊಂಡಿದ್ದಲ್ಲ. ಮನೆ ಕಟ್ಟಿಸುವಷ್ಟು ಹಣ ರಾಯರ ಬಳಿ ಎಲ್ಲಿಂದ ಬರಬೇಕು? ಜೀವನ ನಿರ್ವಹಣೆಗೆ ಎಷ್ಟು ಬೇಕೋ ಅಷ್ಟೇ ಸಂಬಳ ಸ್ವೀಕರಿಸುತ್ತಿದ್ದ ಅವರ ಬಳಿ ಹಣ ಎಲ್ಲಿಂದ ಉಳಿಯಬೇಕು? ಆದರೆ ರಾಯರ ಬಳಿ ಸ್ವಾಭಿಮಾನ ಮತ್ತು ಗೆಳೆತನದ ಸಂಪತ್ತು ಸಾಕಷ್ಟಿತ್ತು.

ಒಂದು ದಿನ ರಾಯರು ಬಾಡಿಗೆಗೆ ಇದ್ದ ಮನೆಯ ಒಡೆಯ ಅವರ ಬಳಿ ಬಂದು ಬಾಡಿಗೆ ಹೆಚ್ಚಿಸಲು ಹೇಳಿದ. ಹೇಗೋ ಇದ್ದುದರಲ್ಲೇ ಸಂಸಾರ ತೂಗಿಸಿಕೊಂಡು ಜೀವನ ಸಾಗಿಸುತ್ತಿದ್ದ ರಾಯರಿಗೆ ಹೆಚ್ಚಿಗೆ ಬಾಡಿಗೆ ಕೊಡುವುದು ಸಾಧ್ಯವಿರಲಿಲ್ಲ. ರಾಯರು ತಮ್ಮ ಬಡತನ ಹೇಳಿಕೊಂಡಾಗ ಆ ಒಡೆಯನಿಗೆ ಸಿಟ್ಟುಬಂತು. “ಹೆಚ್ಚಿಗೆ ಬಾಡಿಗೆ ಕೊಡಲು ಸಾಧ್ಯವಿಲ್ಲದಿದ್ದರೆ ಬೇರೆ ಮನೆ ನೋಡಿಕೊಳ್ಳಿರಿ” ಎಂದು ಬಿಟ್ಟ. ರಾಯರಿಗೆ ದುಃಖವಾಯಿತು. “ನನ್ನ ಸ್ವಂತ ಮನೆಯಿದ್ದಿದ್ದರೆ ಈ ಮಾತು ಕೇಳುವ ಪ್ರಸಂಗ ಬರುತ್ತಿತ್ತೇ?” ಎಂದು ರಾಯರು ವ್ಯಥೆಪಟ್ಟರು. ಆದರೆ ಮಾಡುವುದೇನು? “ದೇವರೇ, ನೀನೇ ಕಾಪಾಡಬೇಕು” ಎಂದು ದುಃಖವನ್ನು ನುಂಗಿಕೊಂಡರು. ಆದರೆ ರಾಯರ ದುಃಖ ಅವರ ಗೆಳೆಯರಿಗೆ ತಿಳಿಯಿತು. ಸ್ವಾಭಿಮಾನಿಗಳಾದ ರಾಯರಿಗೆ ಸ್ವಂತ ಮನೆಯಿರಿಬೇಕೆಂದು ಅವರು ನಿಶ್ಚಯಿಸಿದರು. ಮತ್ತು ಧಾರವಾಡದ ಸಪ್ತಾಪುರ ಭಾಗದಲ್ಲಿ ಒಂದು ಜಾಗವನ್ನು ಕೊಂಡು ಮನೆ ಕಟ್ಟಿಸಿಕೊಳ್ಳಲು ಅವರೆಲ್ಲ ರಾಯರಿಗೆ ಸಹಾಯಮಾಡಿದರು. ಈ ಮನೆಗೆ ರಾಯರು ‘ಶ್ರೀನಿಕೇತನ’ ಎಂದು ಹೆಸರಿಟ್ಟರು.

‘ಶ್ರೀನಿಕೇತನ’ಕ್ಕೆ ಬಂದವರಿಗೆಲ್ಲ ಆದರದ ಸ್ವಾಗತ ದೊರೆಯುತ್ತಿತ್ತು. ರಾಯರು ಒಳಗಡೆ ಕೂತಿರುವುದಕ್ಕಿಂತ ಹೊರಗೆ ತಾವು ಬೆಳೆಸಿದ ತೋಟದಲ್ಲಿ ಓಡಾಡುತ್ತಿದ್ದುದೇ ಹೆಚ್ಚು. ಜೀವನದಲ್ಲಿ ನಾನಾ ತರಹದ ದುಃಖ-ಕಷ್ಟಗಳನ್ನು ಅನುಭವಿಸಿದ್ದರೂ ರಾಯರು ಎಂದೂ ಅಳುಮುಖದವರಾಗಿರಲಿಲ್ಲ. ಶಾಂತಸ್ವಭಾವದ ರಾಯರು ಯಾವಾಗಲೂ ನಗು ನಗುತ್ತಲೇ ಮಾತನಾಡುತ್ತಿದ್ದರು. ದುಃಖದ ಪ್ರಸಂಗಗಳನ್ನು ಹೇಳುವಾಗ ಕಣ್ಣೀರು ತುಂಬಿ ಬಂದರೂ ಮುಖದ ಮೇಲೆ ಸದಾ ನಗು ನಲಿಯುತ್ತಿತ್ತು. ಮನೆಗೆ ಬಂದವರನ್ನು ಪ್ರೀತಿಯಿಂದ ಬರಮಾಡಿಕೊಂಡು ತಮ್ಮ ಸಮೀಪವೇ ಕೂಡಿಸಿಕೊಂಡು ಆತ್ಮೀಯವಾಗಿ ಮಾತನಾಡಿಸುವುದು ರಾಯರ ವೈಶಿಷ್ಟವಾಗಿತ್ತು. ಮನೆಗೆ ಬಂದವರನ್ನು ಬೀಳ್ಕೊಡುವಾಗ ಪುನಃ ಬರಬೇಕೆಂದು ಆಗ್ರಹಪಡಿಸಿ, “ನಿಮ್ಮ ಗೆಳೆತನದ ಸುಖ ನನಗೆ ಯಾವಾಗಲೂ ಸಿಗುತ್ತಿರಲಿ” ಎಂದು ಬಿನ್ನವಿಸುತ್ತಿದ್ದರು.

ರಾಯರು ಬೇರೆಯವರಿಗೆ ತಮ್ಮ ದುಃಖದ ಜೀವನವನ್ನು ಹೇಳಿಕೊಳ್ಳಲು ಇಚ್ಛಿಸುತ್ತಿರಿಲಿಲ್ಲ. ತಮ್ಮ ಬಗ್ಗೆ ಅವರು ಹೇಳುವುದು ಅತಿಕಡಿಮೆಯಾಗಿತ್ತು. ಎಲ್ಲ ದುಃಖವನ್ನು ಸಹಿಸಿಕೊಳ್ಳುವುದು ಅವರಿಗೆ ರೂಢಿಯಾಗಿತ್ತು. ಅವರು ಸಂಸ್ಕೃತದಲ್ಲಿ ಬರೆದ ‘ಸರಲ ಗದ್ಯ ರಾಮಾಯಣ’ದ ಹಸ್ತಪ್ರತಿಯ ಒಂದು ಭಾಗ ಗೆದ್ದಲಿಗೆ ಆಹಾರವಾಗಿ ಹಾಳಾಯಿತು. ಇದರಿಂದ ಅವರಿಗೆ ಮಗ ತೀರಿಕೊಂಡಾಗ ಆದಷ್ಟೇ ದುಃಖವಾಯಿತು. ಆದರೆ ಅದನ್ನು ಸ್ಥೈರ್ಯದಿಂದ ತಡೆದುಕೊಂಡರು.

ರಾಯರ ಸ್ವಭಾವದ ಮೂಲಕ ‘ಶ್ರೀನಿಕೇತನ’ದಲ್ಲಿ ಯಾವಾಗಲೂ ಪ್ರಶಾಂತ ವಾತಾವರಣವಿರುತ್ತಿತ್ತು. ಆದ್ದರಿಂದ ವಿದ್ಯಾಭ್ಯಾಸದ ಕಳಕಳಿಯಿದ್ದ ವಿದ್ಯಾರ್ಥಿಗಳು ಅಲ್ಲಿಯ ಕೊಠಡಿಗಳಲ್ಲಿ ವಾಸಿಸುತ್ತಿದ್ದರು. ರಾಯರು ಆ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸುತ್ತ ಪಾಲಕರಾಗಿದ್ದರು. ಅವರಿಗೆಲ್ಲ ಕೆಟ್ಟ ಚಟಗಳಿಗೆ ಬಲಿ ಬೀಳದೆ ನಿಯಮಿತವಾಗಿ ಅಭ್ಯಾಸಮಾಡಲು ಹೇಳುತ್ತಿದ್ದರು. ಆ ವಿದ್ಯಾರ್ಥಿಗಳಿಗೆ ಎಲ್ಲ ವಿಧದ ಸಹಾಯ ಮಾಡುವುದು ರಾಯರ ಸ್ವಭಾವವೇ ಆಗಿಬಿಟ್ಟಿತ್ತು. ಹೀಗಾಗಿ ‘ಶ್ರೀನಿಕೇತನ’ದಲ್ಲಿದ್ದು ವಿದ್ಯೆ ಕಲಿತವರೆಲ್ಲ ಇಂದಿಗೂ ರಾಯರನ್ನು ಪೂಜ್ಯಭಾವದಿಂದ ‘ಅಜ್ಜ’ ಎಂದು ಸ್ಮರಿಸುತ್ತಾರೆ.

ಪ್ರಶಸ್ತಿ ಬೇಡ

ರಾಯರು ದೇಶಸೇವೆಯೇ ತಮ್ಮ ಕರ್ತವ್ಯ ಎಂದು ಬದುಕಿದರು. ಅವರು ಎಂದೂ ಯಾವುದೇ ಸತ್ಕಾರ ಸಮಾರಂಭಗಳಿಗೆ ಆಸೆಪಡಲಿಲ್ಲ. ೧೯೪೦ ರಲ್ಲಿ ಹೈದರಾಬಾದಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷಸ್ಥಾನವೊಂದನ್ನು ಬಿಟ್ಟರೆ ಇತರ ಇಂತಹ ಯಾವುದೇ ಸ್ಥಾನವನ್ನು ಅವರು ಸ್ವೀಕರಿಸಲಿಲ್ಲ. ೧೯೭೮ ರಲ್ಲಿ ರಾಯರಿಗೆ ೯೦ ವರುಷಗಳು ತುಂಬಲು ಬಂದಾಗ ಅವರನ್ನು ಗೌರವಿಸಿ ನಿಧಿಯನ್ನು ಸಮರ್ಪಿಸಬೇಕೆಂದು ಅವರ ಶಿಷ್ಯರೂ ಅಭಿಮಾನಿಗಳೂ ವಿಚಾರ ಮಾಡಿದರು. ಆದರೆ ರಾಯರು ಮಾತ್ರ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ನಿಧಿಸಂಗ್ರಹ ಮಾಡಬಾರದೆಂದು ಖಂಡತುಂಡವಾಗಿ ಹೇಳಿದರು. “ಧನದಿಂದೆ ಬಂದುದಿಲ್ಲ ಸಂತಸಮ್‌” ಎಂದು ತಾವು ಎಂದೋ ಹೇಳಿದ್ದನ್ನು ಬಂದವರಿಗೆಲ್ಲ ನೆನಪುಮಾಡಿಕೊಟ್ಟರು. ಹೀಗಾಗಿ ರಾಯರಿಗೆ ೯೦ ವರುಷಗಳು ತುಂಬಿದಾಗ ಅವರ ಅಭಿಮಾನಿಗಳೆಲ್ಲ ‘ಶ್ರೀನಿಕೇತನ’ಕ್ಕೆ ಹೋಗಿ ಅವರಿಂದ ಆಶೀರ್ವಾದ ಪಡೆದು ತಮ್ಮ ಗೌರವ ಸಲ್ಲಿಸಿದರು.

ಆದರೂ ಕೆಲವು ಪ್ರಶಸ್ತಿಗಳು ‘ಶ್ರೀನಿಕೇತನ’ದ ಬಾಗಿಲಿಗೆ ಬಂದಾಗ ರಾಯರು ಅವುಗಳನ್ನು ಸ್ವೀಕರಿಸಲೇಬೇಕಾಯಿತು. ೧೯೫೪ರಲ್ಲಿ ಕೇಂದ್ರ ಸರಕಾರವು ಬರಹಗಾರರಿಗೆ ನೀಡುವ ಅಲ್ಪಸಹಾಯದ ಯೋಜನೆಯಂತೆ ಸರಕಾರವು ಸಹಾಯ ಸಲ್ಲಿಸಿದ ಇಬ್ಬರು ಕನ್ನಡ ಕವಿಗಳಲ್ಲಿ ರಾಮಚಂದ್ರರಾಯರು ಒಬ್ಬರು. ಮರುವರುಷ ಮುಂಬಯಿ ಸರಕಾರವೂ ರಾಯರ ಸಾಹಿತ್ಯ ಸೇವೆಯನ್ನು ಮನ್ನಿಸಿ ಹಣಸಹಾಯ ಮಾಡಿತು. ೧೯೬೮ರಲ್ಲಿ ರಾಯರಿಗೆ ೮೦ ವರುಷ ತುಂಬಿದಾಗ ಅವರ ಶಿಷ್ಯರು ಸರಳ ಸಮಾರಂಭವನ್ನು ಏರ್ಪಡಿಸಿ ಗೌರವಿಸಿದರು. ೧೯೬೯ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯೂ ರಾಯರಿಗೆ ಪ್ರಶಸ್ತಿನೀಡಿ ಸತ್ಕರಿಸಿತು.

ಆಘಾತ – ಮರಣ

ಹೀಗೆ ತುಂಬುಜೀವನ ನಡೆಸುತ್ತಿದ್ದ ರಾಯರಿಗೆ ಕ್ರೂರ ವಿಧಿಯು ಕೊನೆಯ ಆಘಾತವನ್ನೆಸಗಿತು. ಅದೆಂದರೆ ಅವರ ಹಿರಿಯ ಅಳಿಯಂದಿರಾದ ದೇಸಾಯಿ ಪಾಂಡುರಂಗ ರಾಐರ ಆಕಸ್ಮಿಕ ನಿಧನ. ರಾಯರು ‘ಶ್ರೀನಿಕೇತನ’ದಲ್ಲಿ ಮಗಳು-ಅಳಿಯರೊಡನೆ ಇರುತ್ತಿದ್ದರು. ದೇಸಾಯಿಯವರು ಕನ್ನಡ ನಾಡಿನ ಪ್ರಸಿದ್ಧ ಇತಿಹಾಸ ಸಂಶೋಧಕರಾಗಿದ್ರು. ಅವರು ಗಳಿಸುತ್ತಿದ್ದ ಕೀರ್ತಿಯಿಂದ ರಾಯರಿಗೆ ಬಹಳ ಹರುಷವಾಗುತ್ತಿತ್ತು. ಆದರೆ ಅವರು ೧೯೭೪ರಲ್ಲಿ ಹೃದಯಾಘಾತದಿಂದ ನಿಧನರಾದಾಗ ರಾಯರಿಗೆ ಸಹಿಸಲಾರದ ದುಃಖವಾಯಿತು. ತಾವು ಅಳುತ್ತ ಕೂತರೆ ಮಗಳಿಗೆ ಸಮಾಧಾನ ಹೇಳುವವರು ಯಾರೆಂದು ವಿಚಾರ ಮಾಡಿ ಆ ದುಃಖವನ್ನೂ ನುಂಗಿಕೊಂಡರು. ಆದರೆ ಆ ಬಳಿಕ ಬಹಳ ಕಾಲ ಬದುಕಲು ಸಾಧ್ಯವಾಗಲಿಲ್ಲ. ಕನ್ನಡ ಸಾಹಿತ್ಯ ಲೋಕದ ಹಿರಿಯ ‘ಅಜ್ಜ’ರಾದ ರಾಯುರು ೧೯೭೮ರ ಅಕ್ಟೋಬರ್ ೩೧ನೇ ದಿನ ತಮ್ಮ ಇಹಜೀವನವನ್ನು ಮುಗಿಸಿದರು.

ಕನ್ನಡದ ಪುಲ್ಲೆನಗೆ ಪರಮಪಾವನ ತುಲಸಿ

ಸಾಲಿ ರಾಮಚಂದ್ರರಾಯರು ಬಾಲ್ಯದಲ್ಲಿ ಶಿಕ್ಷಣ ಪಡೆದದ್ದು ಬೆಳಗಾವಿ-ವಿಜಾಪುರಗಳಲ್ಲಿ. ಆಗ ಕನ್ನಡ ಕಲಿಯುವ ಅನುಕೂಲತೆಯಿರಲಿಲ್ಲ. ಆದರೆ ಮುಂದೆ ಪುಣೆಯಲ್ಲಿ ಕಾಲೇಜು ಕಲಿಯಬೇಕಾದರೆ ರಾಯರಲ್ಲಿ ಮಾತೃಭಾಷೆಯಾದ ಕನ್ನಡದ ಬಗ್ಗೆ ಅಭಿಮಾನ ಮೂಡಿತು. ಮತ್ತು ಆಲೂರು ವೆಂಕಟರಾಯರ ಪ್ರೋತ್ಸಾಹದಿಂದ ರಾಯರು ಕನ್ನಡದಲ್ಲಿ ಕವಿತೆ ರಚಿಸತೊಡಗಿದರು. ರಾಯರು ಕನ್ನಡದ ಪ್ರಸಿದ್ಧ ಕವಿಗಳಾದ ಪಂಪ, ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ ಮೊದಲಾದವರ ಕಾವ್ಯಗಳನ್ನು ಓದಿ ಸ್ಫೂರ್ತಿ ಪಡೆದರು. ಕನ್ನಡದ ಬಗ್ಗೆ ಭಕ್ತಿ ಬೆಳೆಯುತ್ತ ಹೋಯಿತು. ೧೯೩೯ ರ ಅಕ್ಟೋಬರ್ ತಿಂಗಳಲ್ಲಿ ಒಂದು ದಿನ ಮುಂಜಾನೆ ಎಂದಿನಂತೆ ರಾಯರು ಧಾರವಾಡದ ನಗರದ ಹೊರವಲಯದಲ್ಲಿ ಅಡ್ಡಾಡಲು ಹೋಗಿದ್ದರು. ಒಂದು ಕಡೆಗೆ ಹಸಿರು ಹುಲ್ಲು ಸೊಂಪಾಗಿ ಬೆಳೆದಿತ್ತು. ಆ ಹುಲ್ಲಿನ ಮೇಲೆ ಮಂಜುಹನಿಗಳು ಮಿನುಗುತ್ತಿದ್ದವು. ರಾಯರಿಗೆ ಆ ಹುಲ್ಲನ್ನು ದಾಟಿ ಆಚೆಕಡೆ ಹೋಗಬೇಕಾಗಿತ್ತು. ಆದರೆ ಆ ಹುಲ್ಲಿನ ಮೇಲೆ ಕಾಲಿಡುವ ಮನಸ್ಸಾಗಲಿಲ್ಲ. ಯಾಕೆ ಗೊತ್ತೆ? ಅದು ಕನ್ನಡ ನಾಡಿನ ಹುಲ್ಲಾಗಿತ್ತು. ಆದ್ದರಿಂದ ಅದು ತುಳಸಿದಳಗಳಂತೆ ಪವಿತ್ರವಾಗಿತ್ತು. ಕನ್ನಡನಾಡಿನ ಬಗೆಗಿನ ಈ ಭಕ್ತಿ ಒಂದು ಕವಿತೆಯಾಗಿ ಮೂಡಿಬಂದಿತು:

ಕನ್ನಡದ ನೆಲದ ಪುಲ್ಲೆನಗೆ ಪಾವನತುಲಸಿ !
ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ !
ಕನ್ನಡದ ನೆಲದ ಕಲ್ಲೆನಗೆ ಸಾಲಿಗ್ರಾಮ ಶಿಲೆ !
ಕನ್ನಡಂ ದೈವಮೈ !

ಇನ್ನೊಂದು ಕವಿತೆಯಲ್ಲಿ ರಾಯರು ಕನ್ನಡದ ಹಿರಿಮೆಯನ್ನು ಹಾಡಿ ಹೊಗಳಿದ್ದಾರೆ:

ನಿನ್ನಿನದು ನುಡಿಯಲ್ಲ ಮೊನ್ನಿನದು ನುಡಿಯಲ್ಲ ಕನ್ನಡವು !
ಇದು ಶಕ್ತಿಯಿದು ವೀರವಾಣಿಯೀ ಕನ್ನಡವು !
ಇದು ಗೆಯ್ದಗೆಯ್ಮೆ ವಿಶ್ವಕ್ಕೆ ವಿಸ್ಮಯಕರವು !
ಇದಕ್ಕೊಂದು ರೂಪುಂಟು, ಬಗೆಯುಂಟು, ಚೆಲ್ವುಂಟು
ಇದಕೆ ಮಾರ್ದವವುಂಟು, ಕಾಠಿಣ್ಯವಿದಕುಂಟು
ಇದು ನೃಪೋತ್ತುಂಗ ನೃಪತುಂಗನಿಗೆ ಮೆಚ್ಚಿನದು
ಇದು ಜಗದ್ವಂದ್ಯ ಕವಿಪಂಪನಿಗೆ ಮೆಚ್ಚಿನದು
ಇದು ಭಕ್ತಬಸವೇಶನೊಲಿದೊಲಿದು ನುಡಿದ ನುಡಿ
ಇದು ಕುಮಾರವ್ಯಾಸರಳ್ಕರಿನ ನುಡಿಯಲ್ತೆ?
ಇದುವೆ ತಾಯ್ನುಡಿ ವೀರ ಹಕ್ಕ – ಬುಕ್ಕರಿಗಲ್ತೆ?

ಈ ರೀತಿ ಕನ್ನಡದ ಪ್ರಾಚೀನ ಪರಂಪರೆಯನ್ನು ಹಾಡಿದ ಬಳಿಕ, ಇದರ ಮುಂದೆ ಬಂದು ತಲೆಬಾಗಬೇಕೆಂದು ರಾಯರು ಎಲ್ಲ ಬಾಂಧವರಿಗೆ ಕೇಳಿಕೊಂಡಿದ್ದಾರೆ:

ಆದರದೆ ಬಂದು ತಲವಾಗಿರಿದರಿದಿರಲ್ಲಿ |
ಸೋದರರೆ, ಬಂದು ತಲವಾಗಿರಿದರಿರಲ್ಲಿ ||

ಕನ್ನಡನಾಡಿನಲ್ಲಿ ಹುಟ್ಟಿದ ಬಗ್ಗೆ ರಾಯರಿಗೆ ಬಹಳ ಹೆಮ್ಮೆ. “ತಿರೆಯೊಳಗಾವುದು ಕನ್ನಡನಾಡಿಗೆ ದೊರೆಪೆರತಿರ್ಪುದು?” ಎಂದು ಪ್ರಶ್ನೆ ಹಾಕಿಕೊಂಡು, ಇದರ ಮಹಿಮೆಯನ್ನು ತಾವೇ ಕೊಂಡಾಡಿದ್ದಾರೆ. “ತತ್ವಜ್ಞರ, ಭಕ್ತರ, ಸಚ್ಚರಿತರ ವಸತಿಸ್ಥಳಮಿದು ಸಿರಿಗನ್ನಡನಾಡು.”

ಇತರ ಕೃತಿಗಳು

ಸಾಲಿ ರಾಮಚಂದ್ರರಾಯರು ಕನ್ನಡದಲ್ಲಿ ಬರೆದ ಬಿಡಿ ಕವಿತೆಗಳು ‘ಚಿಗುರೆಲೆ’, ‘ಕುಸುಮಾಂಜಲಿ’ ಮತ್ತು ‘ಚಿತ್ರಸೃಷ್ಟಿ’ ಎಂಬ ಗ್ರಂಥಗಳಲ್ಲಿ ಪ್ರಕಟವಾಗಿವೆ. ‘ಅಭಿಸಾರಿಕೆ’ ಮತ್ತು ‘ತಿಲಾಂಜಲಿ’ ಇವೆರಡು ರಾಯರು ಬರೆದ ದೀರ್ಘ ಕವನಗಳು. ರಾಮಾಯಣದ ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳ ಕಥೆಗಳನ್ನು ಸುಲಭವಾದ ಕನ್ನಡದಲ್ಲಿ ಪದ್ಯರೂಪವಾಗಿ ಬರೆದಿದ್ದಾರೆ. ಷಟ್ಪದಿ ಛಂದಸ್ಸಿನಲ್ಲಿ ರಾಯರದು ಎತ್ತಿದ ಕೈ ! ‘ಯದುಪತಿ’ ಮತ್ತು ‘ಜಯ, ಗುರುದೇವ’ ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ಬುದ್ಧಜಾತಕಗಳೊಳಗಿನ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ‘ಸಿಪಾಯಪ್ಪ’ ಎಂದು ಮಕ್ಕಳಿಗಾಗಿ ಕಥೆ ಹೇಳಿದ್ದಾರೆ. ಅವರು ಬರೆದ ‘ಸುಕನ್ಯೆ’ ಎಂಬ ರೇಡಿಯೋ ನಾಟಕದಲ್ಲಿ ಭಾರತೀಯ ಮಹಿಳೆಯ ಉತ್ತಮ ಚಿತ್ರಣ ಮೂಡಿಬಂದಿದೆ.

ರಾಯರು ಕೇವಲ ಕನ್ನಡದ ಕವಿಗಳಾಗಿರಲಿಲ್ಲ. ಅವರು ಸಂಸ್ಕೃತ ಭಾಷೆಯಲ್ಲಿಯೂ ಕಾವ್ಯ ರಚಿಸಿದ್ದಾರೆ. ‘ಸುದಾಮಚರಿತಮ್‌’, ‘ಶರಣಾಗತಿ’, ‘ಅಭಿಸಾರಮ್‌’ ಇವು ಅವರ ಸಂಸ್ಕೃತ ಖಂಡಕಾವ್ಯಗಳು. ಭಾಗವತ, ರಾಮಾಯಣ ಮತ್ತು ಮಹಾಭಾರತದ ಕೆಲಭಾಗಗಳನ್ನು ಸುಲಭವಾದ ಸಂಸ್ಕೃತ ಗದ್ಯದಲ್ಲಿ ಬರೆದಿದ್ದಾರೆ.

ರಾಯರಿಗೆ ಬೇರೆಬೇರೆ ಭಾಷೆಗಳನ್ನು ಕಲಿಯಬೇಕೆಂಬ ಉತ್ಸಾಹ ಬಹಳ. ಬುದ್ಧ ಜಾತಕಗಳೊಳಗಿನ ಕತೆಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಪಾಲೀಭಾಷೆಯನ್ನು ಕಲಿತರು. ಮಹಾತ್ಮಾ ಗಾಂಧಿಯವರ ಬರಹಗಳನ್ನು ಮೂಲದಲ್ಲಿಯೇ ಓದಬೇಕೆಂದು ಗುಜರಾತಿಯನ್ನು ಕಲಿತರು. ರಾಯರ ‘ಸಿಪಾಯಪ್ಪ’ ಮೂಲ ಗುಜರಾತಿಯ ‘ಸಿಪಾಯಿದಾದಾ’ ಎಂಬುದರ ಕನ್ನಡ ಅನುವಾದ. ರವೀಂದ್ರನಾಥ ಠಾಕೂರರ ಸಾಹಿತ್ಯದ ಅಭ್ಯಾಸ ಮಾಡಲು ಬಂಗಾಲಿ ಕಲಿತರು. ಇಂಗ್ಲಿಷ್‌, ಮರಾಠಿ, ಹಿಂದೀ ಭಾಷೆಗಳನ್ನು ಮೊದಲೇ ಕಲಿತಿದ್ದರು. ವಯಸ್ಸಾದರೂ ಹೊಸ ಭಾಷೆಗಳನ್ನು ಕಲಿಯುವ ಉತ್ಸಾಹ ಕಡಮೆಯಾಗಲಿಲ್ಲ. ೮೦ ವರ್ಷ ದಾಟಿದಾಗ ರಷ್ಯನ್‌ಭಾಷೆ ಕಲಿಯತೊಡಗಿದರು.

ಭರತಭೂಮಿಯೆ ಇರಲಿ ತಾಯ್ನಾಡು

ರಾಯರಲ್ಲಿ ಕನ್ನಡನಾಡಿನ ಬಗ್ಗೆ ಬಹಳ ಭಕ್ತಿಯಿದ್ದರೂ ಕರ್ನಾಟಕವು ಭಾರತದೇಶದ ಒಂದು ಭಾಗವೆಂಬುದನ್ನು ಅವರು ಮರೆತಿರಲಿಲ್ಲ. ಪುಣೆಯಲ್ಲಿ ಕಲಿಯುತ್ತಿದ್ದಾಗ “ಆವಿನದು ನೊರೆಹಾಲನೊಲ್ಲೆನು” ಎಂದು ಹಾಡಿ ಭಾರತದ ಬಗ್ಗೆ ತಮಗಿದ್ದ ಭಕ್ತಿಯನ್ನು ತೋರಿಸಿದ್ದರು. ಭಾರತದ ಸೇವೆಗಾಗಿ ಜೀವನವನ್ನೂ ಮುಡುಪಾಗಿಟ್ಟಿದ್ದರು. ಭಾರತದಲ್ಲಿ ವಾಸವು ಹೇಗಿದ್ದರೂ ಸುಖಮಯವೆಂದು ದೇವರಲ್ಲಿ ಬೇಡಿಕೊಂಡರು:

ಇರಲೆನಗೆ ಕರಿಕನ್ನವುಣ್ಣಲು,
ಬರಿಯ ನೆಲವಿರಲೆನಗೆ ಮಲಗಲು,
ಹರುಕು ಬಟ್ಟೆಗಳೆನ್ನ ಮೆಯ್ಯನು ಮುಚ್ಚಲಿರಲೆನಗೆ |
ಮುರುಕು ಗುಡಿಸಲು ವಾಸಕಿರಲೈ |
ಸಿರಿಯರಸ, ಮತ್ತೇನನೊಲ್ಲೆನು |
ಭರತ ಭೂಮಿಯೊಳಿರುವುದೇ ಎನಗೊಂದು ಸುಖವಿಹುದು ||

* * *

ಭರತಭೂಮಿಯೆ ಇರಲಿ ತಾಯ್ನಾಡು | ನನ್ನ ತನು
ಭರತಭೂಮಿಯ ಸೇವೆಯಲಿ ಸವೆಯುತಲಿರಲಿ !
ಭರತಭೂಮಿಯ ದಿವ್ಯನಾಮಸುಧೆ ನಾಲಗೆಯ
ಲಿರಲಿ, ದೇವರ ದೇವ, ಜನ್ಮ ಜನ್ಮದಲಿ !

‘ಹರಿ, ನೀನೆ ಮಗನಾಗಿ ಕರುಣಿಪುದು’

ಆಗುವೆನು ನಿನ್ನವನು ನಾನೆಂದು ಹರಿಯೇ

ರಾಯರು ಹುಟ್ಟಿದಾಗಿನಿಂದ ಸಂಕಟಗಳನ್ನು ಎದುರಿಸಿ ಧೈರ್ಯದಿಂದ ಬದುಕಿದರು. ಇದಕ್ಕೆ ಕಾರಣ ಅವರಿಗೆ ದೇವರಲ್ಲಿದ್ದ ಅಚಲಭಕ್ತಿ. ಮಗ ಶ್ರೀಕೃಷ್ಣ ತೀರಿಕೊಂಡಾಗ ಅವರು ತಮ್ಮ ಮಗನಾಗಿ ತಮ್ಮನ್ನು ಕಾಪಾಡೆಂದು ದೇವರಲ್ಲಿ ಬೇಡಿಕೊಂಡರು:

ಮರೆಯಾದ ಮಗನೆಂದು
ಕರುಳು ಕೊರಗುವುದಯ್ಯ !
ಹರಿ, ನೀನೆ ಮಗನಾಗಿ
ಕರುಣಿಪುದು ! ಕರುಣಿಪುದು !
ಕಾರೊಳಗೆ ಕೈವಿಡಿದು
ದಾರಿಯನು ನಡೆಯಿಸೈ !
ಬೇರಾವುದನು, ದೇವ,
ಕೋರಲೊಲ್ಲೆನು ನಾನು !
ಆದುದಾಗಲಿ, ನಿನ್ನ
ಪಾದದಾಸರವಿರಲಿ
ಈ ದಿನದಿ ಮುಂದೆನಗೆ,
ಹೇ ದಯಾಂಬುಧಿ ದೇವ !

“ಆಗುವೆನು ನಿನ್ನವನು ನಾನೆಂದು ಹರಿಯೇ“ ಎಂಬಲ್ಲಿ ರಾಯರು ಪರಮಾತ್ಮನು ತಮ್ಮನ್ನು ಅವನವನಾಗಿ ಮಾಡಿಕೊಳ್ಳಬೇಕೆಂದು ಪ್ರಾರ್ಥಿಸಿದ್ದಾರೆ.

ರಾಯರ ಬಾಳು ಚಿನ್ನದಂತೆ ಚೊಕ್ಕವಾಗಿತ್ತು. ಅವರು ದೇಹ-ಮನಸ್ಸು-ಬುದ್ಧಿಗಳೆಲ್ಲವನ್ನು ಪರಿಶುದ್ಧವಾಗಿಟ್ಟುಕೊಂಡಿದ್ದರು. ಯಾಕೆಂದರೆ ಈ ಶರೀರ ಪರಮಾತ್ಮನ ಗುಡಿಯು.

ಪರಿಶುದ್ಧವಾಗಿಡುವೆನೀತನುವನು
ಪರಮಾತ್ಮ ಇದು ನಿನ್ನ ನಿಲಯವೆಂದರಿತು !

ಎಂತಹ ಕಷ್ಟಗಳು ಬಂದರೂ ಹೆದರದೆ ಧೈರ್ಯದಿಂದ ಬದುಕಬೇಕೆಂದು ರಾಯರು ಜನರಿಗೆ ಕರೆಕೊಟ್ಟಿದ್ದಾರೆ :

ಬದುಕು ಬದುಕೆಲೆ ಜೀವ ಬಂಟನಾಗಿ
ಹುದುಗಿದ್ದ ಶಕ್ತಿಯನ್ನು ಹೊರಹೊಮ್ಮಿಸಿ ||

ಸ್ವಾದಿಯಲ್ಲಿ ನಂದಾದೀಪ

ಶ್ರೀಕೃಷ್ಣನು ತೀರಿಕೊಂಡ ಬಳಿಕ ತಮ್ಮ ‘ಸಾಲಿ’ ಮನೆತನ ತಮ್ಮ ಸಂಗಡವೇ ಕೊನೆಗೊಳ್ಳುತ್ತದೆಂಬ ದೊಡ್ಡ ಕೊರಗು ರಾಯರಿಗೆ ಯಾವಾಗಲೂ ಕಾಡುತ್ತಿತ್ತು. ಯೋಗ್ಯ ಬಾಲಕನನ್ನು ದತ್ತು ತೆಗೆದುಕೊಳ್ಳಬೇಕೆಂಬ ಅವರ ಪ್ರಯತ್ನ ಫಲಿಸಲಿಲ್ಲ. ವಯಸ್ಸಾದಂತೆ ಈ ಕೊರಗು ಹೆಚ್ಚುತ್ತ ಹೋಯಿತು. ಮನೆತನದ ಹೆಸರು ಉಳಿಯಲು ಏನು ಮಾಡಬೇಕೆಂದು ಅವರಿಗೆ ಹೊಳೆಯಲಿಲ್ಲ. ಈ ಚಿಂತೆ ಕಾಡುತ್ತಿದ್ದಾಗ ಅವರು ಆಗಾಗ ಉತ್ತರಕನ್ನಡ ಜಿಲ್ಲೆಯೊಳಗಿನ ಸ್ವಾದಿಗೆ (ಸೋಂದಾ) ಹೋಗಿ ಅಲ್ಲಿರುವ ಶ್ರೀವಾದಿರಾಜಸ್ವಾಮಿಗಳವರ ವೃಂಧಾವನದ ದರ್ಶನ ಪಡೆಯುತ್ತಿದ್ದರು. ಅಲ್ಲಿ ಅವರಿಗೆ ‘ಸಾಲಿ’ ಮನೆತನದ ಹೆಸರನ್ನು ಉಳಿಸುವ ಉಪಾಯ ಹೊಳೆಯಿತು. ಅದೆಂದರೆ ಶ್ರೀ ವಾದಿರಾಜರ ವೃಂದಾವನದ ಎದುರು ನಂದಾದೀಪವನ್ನು ಇಡುವುದು. ಅದರಂತೆ ಅವರು ಒಂದು ತಾಮ್ರಪಟದ ಮೇಲೆ ಕೆಳಗಿನ ಶ್ಲೋಕವನ್ನು ಬರೆಯಿಸಿ ನಂದಾದೀಪವನ್ನು ಇಡಿಸಿದರು:

ಪ್ರಜ್ಞಾನಿಧೇರುಜ್ವಲಕೀರ್ತಿಧಾಮ್ನಃ
ಶ್ರೀ ವಾದಿರಾಜಸ್ಯ ಯತೀಶ್ವರಸ್ಯ |
ಪುಣ್ಯಾಲಯೇ ನಿತ್ಯಮಯಂ ಶುಭಾಭಃ
ಪ್ರಜ್ಯೋತತಾಮ್‌ಸಾಲಿಕುಲಸ್ಯ ದೀಪಃ ||

(ವಿದ್ವಾಂಸರೂ ಕೀರ್ತಿಶಾಲಿಗಳೂ ಯತೀಶ್ವರನೂ ಆದ ಶ್ರೀವಾದಿರಾಜರ ಪವಿತ್ರ ಗುಡಿಯಲ್ಲಿ ಸಾಲಿಕುಲದ ಈ ಮಂಗಳಕರವಾದ ದೀಪವು ಸದಾಕಾಲವೂ ಬೆಳಗಲಿ.)