ಬಯಲುಸೀಮೆಯಿಂದ ಶಿವಮೊಗ್ಗಕ್ಕೆ ಮದುವೆಯ ದಿಬ್ಬಣ ಬರುತ್ತಿತ್ತು.  ದಾರಿಯುದ್ದಕ್ಕೂ ಮೊಹ್ವಾ ಮರಗಳು ತೋರಣ ಕಟ್ಟಿದಂತೆ ಕೊಂಬೆಗಳು ಹಸಿರನ್ನು ಹರಡಿದ್ದವು.  ಬಿಸಿಲಲ್ಲಿ ಬೆಂದು ಬರುತ್ತಿದ್ದ ಬೀಗರಿಗೆ ಬೀದಿಬದಿಯ ಈ ಮರಗಳು ತಂಪಿನ ಸ್ವಾಗತ ನೀಡುತ್ತಿದ್ದವು.

ಈ ಸಾಲುಮರಗಳು ಮೈಸೂರು ಸಂಸ್ಥಾನದ ಮಾದರಿ ಕೆಲಸಗಳಲ್ಲೊಂದು.  ಕ್ರಿಸ್ತಪೂರ್ವದಲ್ಲೇ ಅಶೋಕನು ಬಿಸಿಲಿನ ತಾಪ ಸಹಿಸಲು ರಾಜ್ಯಾದ್ಯಂತ ಸಾಲುಮರಗಳನ್ನು ನೆಡಿಸಿದ್ದನು.   ದಾಹ ಇಂಗಿಸಿಕೊಳ್ಳಲು ನೀರಬಾನಿಗಳನ್ನು ಇಡಿಸಿದ್ದನು.  ತಂಗಲು ಅರವಟ್ಟಿಗೆಗಳನ್ನು ಕಟ್ಟಿಸಿದ್ದನು.  ಪಯಣಿಗರಿಗೆ, ಕುದುರೆ, ಒಂಟೆ ಮೊದಲಾದ ವಾಹನಗಳಿಗೆ, ಬೇಸಿಗೆಯಲ್ಲಿ ನೆರಳಿನೊಂದಿಗೆ ಹಣ್ಣುಹಂಪಲುಗಳೂ ಸಿಗುತ್ತಿದ್ದವು.  ಸೊಪ್ಪು, ಮೇವು ಸಿಗುತ್ತಿತ್ತು ಎಂದು ಇತಿಹಾಸದಲ್ಲಿ ದಾಖಲಾಗಿದೆ.

ಅನಂತರದ ಭೀಕರ ಬರಗಾಲದಲ್ಲೂ ಈ ಸಾಲುಮರಗಳು ವಲಸಿಗರಿಗೆ, ಪಶುಪಕ್ಷಿಗಳಿಗೆ ಆಶ್ರಯ ನೀಡಿದ್ದು ಮೊಗಲರ ಇತಿಹಾಸದಲ್ಲಿದೆ.

ಸಾಮಾನ್ಯವಾಗಿ ನಗರಗಳಲ್ಲಿ ಹೂ ಬಿಡುವ ಸಾಲುಮರಗಳಿಗೆ ಪ್ರಾಶಸ್ತ್ಯ. ಬೆಂಗಳೂರು, ನ್ಯೂಡೆಲ್ಲಿ, ಚಂಡೀಗಡ ಮೊದಲಾದ ನಿರ್ಮಿತ ನಗರಗಳಲ್ಲಿ ಹಾಗೂ ವೈವಿಧ್ಯಮಯ ಬಣ್ಣದ ಹೂಗಳಿಂದ ಇಡೀ ನಗರದ ಸೌಂದರ್ಯವನ್ನು ಹೆಚ್ಚಿಸಿವೆ.  ವಾಯುಮಾಲಿನ್ಯ, ಶಬ್ದ ಮಾಲಿನ್ಯ, ಧೂಳು, ತಾಪಮಾನಗಳನ್ನು ಸಾಧ್ಯವಾದಷ್ಟು ನಿಯಂತ್ರಿಸುತ್ತಿವೆ.  ಕಾಂಕ್ರೀಟ್ ಪಟ್ಟಣದಲ್ಲಿ ನೀರಿಂಗಿಸುವ ಕೆಲಸಗಳನ್ನು ಮಾಡುತ್ತಿವೆ.  ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಆವರಣದಲ್ಲಿ ಸಾಲುಮರಗಳ ವೈವಿಧ್ಯ… ಒಟ್ಟಾರೆ ಅಲ್ಲಿರುವ ಅಸಂಖ್ಯಾತ ಜೀವವೈವಿಧ್ಯದ ಅಚ್ಚರಿ, ಸಾಲುಮರಗಳ ಶ್ರೀಮಂತಿಕೆಯನ್ನು ವರ್ಣಿಸುತ್ತದೆ.  ಆದರೆ ಪಟ್ಟಣದಿಂದ ಹೆದ್ದಾರಿಗಳಲ್ಲಿ ಹೊರಟಾಗ ಸಿಗುವ ಸಾಲುಮರಗಳ ಅರಣ್ಯರೋದನ ಬೇರೆಯದೇ ಕತೆ ಹೇಳುತ್ತದೆ.

ಸಾಲುಮರಗಳು ತಾವಾಗಿಯೇ ಹುಟ್ಟಿದ್ದೇನಲ್ಲ.  ಬೀದಿ ಬದಿಯ ಅನುಪಯುಕ್ತ ಬಂಜರು ನೆಲದಲ್ಲಿ ಇವುಗಳನ್ನು ಬೆಳೆಸಿದರು.  ನೆಡುವಾಗಲೇ ಹೆಚ್ಚು ನೀರು, ಗೊಬ್ಬರ ಕೇಳದ, ಪ್ರತಿಕೂಲ ತಾಪಮಾನ ಸಹಿಸುವ, ಏನೆಲ್ಲಾ ದೌರ್ಜನ್ಯ ಮೀರಿ ನಿಲ್ಲಬಲ್ಲ ಜಾತಿಯ ಮರಗಳನ್ನೇ ಆರಿಸಲಾಯಿತು.  ಹೆದ್ದಾರಿ ಪಕ್ಕದಲ್ಲಿ ಕೇವಲ ಹೂವಿನ ಮರಗಳೊಂದೇ ಅಲ್ಲ, ಹಣ್ಣಿನ ಮರಗಳು, ಮೇವಿನ ಮರಗಳು, ಉರುವಲು ಮರಗಳು, ಸದಾ ಹಸಿರಿನ ಮರಗಳು, ಆಯಾ ಪ್ರದೇಶಕ್ಕೆ ಹೊಂದುವ ಮರಗಳು, ಆಯಾ ಪ್ರದೇಶದ ವಿಶಿಷ್ಟ ಮರಗಳು ಹೀಗೆ ಅನೇಕ ರೀತಿಯ ಮರಗಳನ್ನು ನರ್ಸರಿಗಳಲ್ಲಿ ಬೆಳೆಸಿ, ಪಾಲಿಸಿ, ಪೋಷಿಸಿ ಬೆಳೆಸಲಾಯಿತು.  ಇದೆಲ್ಲಾ ರಾಜ್ಯದ ಅರಣ್ಯ ಇಲಾಖೆ ಹಾಗೂ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಹೊಣೆಯಾಗಿತ್ತು.  ಅವರು ತಮ್ಮ ಕೈಲಾದಷ್ಟು ತಮಗೆ ತೋಚಿದಂತೆ ನಿರ್ವಹಿಸುತ್ತಲೂ ಇದ್ದಾರೆ!

ಟಿಪ್ಪುವಿನ ಆಳ್ವಿಕೆಯ ಕಾಲದಲ್ಲೇ ಅರಣ್ಯಗಳನ್ನು ಸರ್ಕಾರದ ಆಡಳಿತಕ್ಕೆ ವಹಿಸಲಾಯಿತು.  ಆ ಸಮಯದಲ್ಲೇ ಈಗಿನ ಹೆದ್ದಾರಿ ೨೦೬ರಲ್ಲಿ, ಅಂದಿನ ಮೈಸೂರು ಸಂಸ್ಥಾನದ ಆಳ್ವಿಕೆಯ, ಸುಮಾರು ೪೦೦ಕಿಲೋಮೀಟರ್ ಉದ್ದ ರಸ್ತೆಯಲ್ಲಿದ್ದ ಸಾಲುಮರಗಳ ಸಂಖ್ಯೆ ಸುಮಾರು ೩೦,೦೦೦ ಮರಗಳಂತೆ.  ರಸ್ತೆ ಬದಿಯಲ್ಲಿ ಮರಗಳನ್ನು ಬೆಳೆಸುವುದರಿಂದ ಹೆಚ್ಚಿದ ಅರಣ್ಯ ಪ್ರದೇಶ, ಫಲವತ್ತಾದ ಬಂಜರು ನೆಲ, ಇಂಗುವ ನೀರು ಎಲ್ಲವೂ… ರಸ್ತೆ ನಿರ್ಮಾಣಕ್ಕಾಗಿ ಹಾಳು ಮಾಡಿದ ಪ್ರಕೃತಿಗೆ ಸಮಾನವಲ್ಲದಿದ್ದರೂ ಉತ್ತಮ ಹಾಗೂ ಗಮನಿಸುವಂತಹ ಕೆಲಸವಾಗಿದೆ ಎಂದು ಮೈಸೂರು ಗೆಜೆಟಿಯರ್‌ನಲ್ಲಿ ಹೇಳಿದೆ.

ಹೀಗಿರುವಾಗಲೇ ಕೈಗಾರಿಕಾ ಕ್ರಾಂತಿ ಹಾಗೂ ದೇಶದ ಅಭಿವೃದ್ಧಿಗೋಸ್ಕರ ಆಧುನಿಕ ಯೋಜನೆ ರಸ್ತೆಗೆ ಬಂದವು.  ರಸ್ತೆಯ ಪಕ್ಕ ಸಾಲುಗಂಬಗಳನ್ನು ನೆಟ್ಟು ವಿದ್ಯುತ್ ತಂತಿಗಳನ್ನು ಎಳೆಯಲಾಯಿತು.  ಇದಕ್ಕಾಗಿ ಅಡ್ಡಬಂದ ಹಸಿರು ಕೊಂಬೆಗಳನ್ನು ಕಡಿಯಲಾಯಿತು.  ಟೆಲಿಫೋನ್ ಕಂಬಗಳು ಬಂದವು.  ಅದಕ್ಕೆ ಅಡ್ಡಲಾದ ಕೊಂಬೆಗಳಿಗೆ, ಮರಗಳಿಗೆ ಮೋಕ್ಷ ದೊರೆಯಿತು.  ಕೇಬಲ್ ಬಂತು.  ಮರಗಳ ಬೇರುಗಳಿಗೆ ಪೆಟ್ಟಾಗತೊಡಗಿತು.  ಹೆದ್ದಾರಿಗಳನ್ನು ರಾಷ್ಟ್ರೀಯ ಮಟ್ಟಕ್ಕೇರಿಸಲು, ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಮರಗಳ ಮಾರಣಹೋಮ ಮಾಡಲಾಯಿತು.  ಹೆದ್ದಾರಿಯ ಪಕ್ಕದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅಡ್ಡಬಂದ ಮರಗಳು, ಕೊಂಬೆಗಳನ್ನೇ ಕಡಿಯಲಾಯಿತು ಅಥವಾ ಜಲ್ಲಿ, ಕಲ್ಲು, ಮರಗಳನ್ನು ಮರಗಳ ಸುತ್ತಲೂ ಕೆಡವಿ ಉಸಿರುಕಟ್ಟಿ ಸತ್ತಹೋದ ಮರಗಳಿವೆ.  ಭಾರತದ ಆಧುನಿಕ ದೇವಾಲಯಗಳಿಗೋಸ್ಕರ (ಡ್ಯಾಂ ನಿರ್ಮಾಣಕ್ಕೆ) ಗಟ್ಟಿಮುಟ್ಟಾಗಿದ್ದ ಸಾಲುಮರಗಳೇ ಬಲಿಯಾದವು.  ಮರಗಳಿಂದ ಫಲ ಸಂಗ್ರಹಿಸುವವರು ಮೇಲಿರುವ ಹಾಗೂ ದೂರದ ಕೊಂಬೆಗಳನ್ನು ಕಡಿದು ಹಾಕತೊಡಗಿದರು.  ಹಾನಿಗೊಂಡ ಮರಗಳಿಗೆ ಸಹಜವಾಗಿಯೇ ರೋಗಗಳು ಆವರಿಸಿದವು.  ಕ್ರಿಮಿಕೀಟಗಳು ಸುಲಭವಾಗಿ ತಿರುಳನ್ನೇ ತಿನ್ನತೊಡಗಿದವು.  ವಿಕಾರವಾದ ಬೆಳವಣಿಗೆಯಾಯಿತು.  ಅತಿಯಾದ ದೌರ್ಜನ್ಯವನ್ನು ಸಹಿಸಲಾರದೆ ಕಾಲಕ್ರಮೇಣ ಸಾಲುಮರಗಳು ಸ್ವಲ್ಪ ಸ್ವಲ್ಪವಾಗಿಯೇ ಸಾಯತೊಡಗಿದವು.

ಪ್ರಾಕೃತಿಕವಾಗಿಯೂ ಅತಿಯಾದ ಮಳೆ, ಪ್ರವಾಹ, ಚಂಡಮಾರುತ, ಭೂಕಂಪ, ಭೂಕುಸಿತ, ಸತತ ಬಂದ ಬರ, ಹೆಚ್ಚಾದ ಬಿಸಿಲು… ಇತ್ಯಾದಿ… ವಿಕೋಪಗಳು ಸಹ ಸಾಲುಮರಗಳ ಪಾಲಿಗೆ ಯಮದೂತರಂತಾದವು.

ಹಾಗೆಂದು ಸಾಲುಮರಗಳಿಗಾಗಿಯೇ ಜೀವನವನ್ನು ಮುಡುಪಿಟ್ಟ ವ್ಯಕ್ತಿಗಳು, ಸಾಲುಮರಗಳನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಗಳು, ಸಾಲುಮರಗಳ ಅಬಿವೃದ್ಧಿಗಾಗಿ ಶ್ರಮಿಸುವ ಸಮೂಹಗಳು ಸಹ ಇವೆ.  ಆದರೆ ಇವರಾರೂ ಸಕಲ ಸಾಲುಮರಗಳ ಹೊಣೆಯನ್ನು ಹೊತ್ತುಕೊಳ್ಳಲು ಸಾಧ್ಯವಿಲ್ಲವಲ್ಲ?  ಅದಕ್ಕಾಗಿ ಪ್ರತ್ಯೇಕ ವಿಭಾಗವನ್ನೇ ಹುಟ್ಟುಹಾಕಬೇಕು.

ಕೇಳುವವರೇ ಇಲ್ಲದ ಸಾಲುಮರಗಳ ರೋದನವನ್ನು ಯುವಕನೊಬ್ಬ ಆಲಿಸಿದ.  ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಪರಿಸರ ವಿಭಾಗದ ವಿದ್ಯಾರ್ಥಿ ಮಹೇಶ್ ಬಿ.ವಿ., ಡಾ. ಎಂ.ಬಿ. ಶಿವಣ್ಣ, ಡಾ. ವೈ.ಎಲ್. ಕೃಷ್ಣಮೂರ್ತಿ ಅವರುಗಳ ಮಾರ್ಗದರ್ಶನದಲ್ಲಿ ಸಾಲುಮರಗಳ ಅಧ್ಯಯನ ಪ್ರಾರಂಭ.  ಅಧ್ಯಯನದ ಸ್ಥಳ ಹೆದ್ದಾರಿ ೨೦೬.  ತರೀಕೆರೆಯಿಂದ ಕಡೂರಿನ ಚೆಕ್‌ಪೋಸ್ಟ್‌ವರೆಗಿನ ಪ್ರದೇಶ ಸುಮಾರು ೨೭ಕಿಲೋಮೀಟರ್. ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್‌ನಿಂದ ೩೮ ಡಿಗ್ರಿ ಸೆಲ್ಸಿಯಸ್ ಹಾಗೂ ವಾರ್ಷಿ ಸರಾಸರಿ ೭೫೦ಮಿಲಿಮೀಟರ್ ಮಳೆ.

ಇಲ್ಲಿ ೨೮ ಜಾತಿ ಮರಗಳಿದ್ದವು.  ಒಟ್ಟು ಮರಗಳ ಸಂಖ್ಯೆ ೧,೩೧೮.  ಒಂದು ಕಿಲೋಮೀಟರ್‌ಗೆ ಸರಾಸರಿ ೪೯ ಮರಗಳು.  ೪೯೬ ಮರಗಳು ಆಲದ ಜಾತಿ, ೨೦೪ ಗುಲ್‌ಮೊಹರ್, ೧೨೭ ಹುಣಸೆಮರಗಳಿದ್ದವು.  ಹಿಪ್ಪೆ, ಯುಕಲಿಪ್ಟಸ್, ಮಳೆಮರಗಳು ೫೦ಕ್ಕೂ ಹೆಚ್ಚಿದ್ದರೆ, ಮಾವು, ನೇರಳೆ, ಅತ್ತಿ, ಬೇಲ, ಬೇವು, ಬಿಲ್ವಪತ್ರೆ, ಬಿಲ್ಕಂಬಿ, ಜಾಲಿ, ಜಕರಂದ, ಅರ್ಜುನ ಮುಂತಾದವು ೫೦ಕ್ಕೂ ಕಡಿಮೆ ಇದ್ದವು.  ನೆರಳಿಗಾಗಿ ಮಾತ್ರಲ್ಲ, ಅಂಟು, ನಾಟ, ಎಣ್ಣೆ, ಉರುವಲು, ಹೂಗಳು, ಹಣ್ಣುಗಳು, ಹಸಿರುಸೊಪ್ಪು, ಒಣಮೇವು, ಔಷಧೀಯ ಉಪಯೋಗಗಳಿಗೆ ಉಪಯುಕ್ತವಾಗುವ ಮರಗಳಿದ್ದವು.  ಒಂದಷ್ಟು ಮರಗಳು ಬೀದಿ ಬದಿಯಲ್ಲಿ ನೆಡಲು ಸೂಕ್ತವಾದವುಗಳಲ್ಲ.

ಈ ದಾಖಲಾತಿಯ ಮುಖ್ಯ ಉದ್ದೇಶ ಹಾನಿಗೊಳಗಾದ ಹಾಗೂ ರೋಗಪೀಡಿತ ಮರಗಳನ್ನು ಗಮನಿಸಿ ಕಾರಣ ಕಂಡುಕೊಳ್ಳುವುದು.

ಇವುಗಳಲ್ಲಿ ಆಲ, ಅತ್ತಿ, ನೇರಳೆ, ಬಸರಿ, ಹಿಪ್ಪೆ, ಬೇವು, ಹುಣಸೆ ಇತ್ಯಾದಿ ಮರಗಳು ಅಧಿಕ ಹಾನಿಗೊಳಗಾಗಿದ್ದವು.  ಹೀಗೆ ದಾರುಣ ಸ್ಥಿತಿಯಲ್ಲಿರುವ ಮರಗಳು ಎಂಬತ್ತೈದು.  ಹೆಚ್ಚಿನ ಮರಗಳ ತಿರುಳುಭಾಗವೇ ಹಾನಿಗೊಂಡು ಸೋಂಕಿಗೆ ಅಥವಾ ಕ್ರಿಮಿಕೀಟಗಳ ದಾಳಿಗೆ ತುತ್ತಾಗಿದ್ದವು.   ಕೊಂಬೆಗಳನ್ನು ಅಕಾಲದಲ್ಲಿ ಕಡಿದಿದ್ದರಿಂದ ವಿಕಾರವಾಗಿ ಬೆಳೆದ ಮರಗಳು, ತೊಗಟೆಗಳನ್ನು ಕೆತ್ತಿದ್ದರಿಂದ ಸಾಯುತ್ತಿರುವ ಮರಗಳು, ಬೆಂಕಿ ಹಚ್ಚುವುದರಿಂದ ಮತ್ತು ಇತರ ಕಾರಣಗಳಿಂದ ಅರೆಸತ್ತ ಮರಗಳು ಇದ್ದವು.

ಕಾಂಡಕೊರಕ, ಫಂಗಸ್‌ಪೀಡಿತ ಹಾಗೂ ಕೀಟ ದಾಳಿಯಿಂದ ತತ್ತರಿಸುತ್ತಿರುವ ಮರಗಳು ಇದ್ದರೂ ಮಾನವ ಹಸ್ತಕ್ಷೇಪದಿಂದ ಹಾನಿಗೀಡಾದ ಮರಗಳೇ ಅಧಿಕ ಎನ್ನುತ್ತಾರೆ ಮಹೇಶ್ ಬಿ.ವಿ.  ೨೫ ಮರಗಳು ಸತ್ತಿವೆ.  ಅದರಲ್ಲಿ ಒಂಬತ್ತು ಮರಗಳು ಆಲದ ಜಾತಿಯವು.  ಇವೆಲ್ಲಾ ಮಾನವನ ದುರಾಸೆಗೆ ಪ್ರತ್ಯಕ್ಷ ಸಾಕ್ಷಿ.  ಅಂದರೆ ಅಕ್ರಮವಾಗಿ ಸಾಗುವಳಿ ಮಾಡಲು ಅಥವಾ ಕಟ್ಟಡಗಳನ್ನು ಕಟ್ಟಲು ಕಡಿದು ಹಾಕಿದ್ದು ಪ್ರತ್ಯಕ್ಷವಾಗಿ ಕಾಣುತ್ತದೆ ಎನ್ನುತ್ತಾರೆ.

ಮೇಲಿನ ಸಮೀಕ್ಷೆ ಒಂದು ಪ್ರಾಥಮಿಕ ಅಧ್ಯಯನ.  ಸಾಲುಮರಗಳ ಆಯ್ಕೆ, ಪಾಲನೆ, ಪೋಷಣೆ, ರಕ್ಷಣೆ, ನಿರ್ವಹಣೆ, ಆರೋಗ್ಯ ಪರಿಶೀಲನೆ ಇವನ್ನೆಲ್ಲಾ ಆಳವಾಗಿ ಅಧ್ಯಯನ ಮಾಡಿದರೆ ಇನ್ನಷ್ಟು ವಿವರಗಳು ತಿಳಿಯಬಹುದು.  ಅದರಲ್ಲೂ ಭಾರತದ ಪರಿಸ್ಥಿತಿಗೆ ಸೂಕ್ತವಾಗುವ ಸಾಲುಮರಗಳ ಬಗ್ಗೆ ಪರಿಸರ ತಜ್ಞರು, ಆಸಕ್ತರು ಇನ್ನೂ ಗಂಭೀರವಾಗಿ ಚಿಂತಿಸಲೇ ಇಲ್ಲವೆನಿಸುತ್ತದೆ.

ಈಗ ಕಾಲುವೆಗಳ ಪಕ್ಕ ಹುಲ್ಲು ಗಿಡ ಮತ್ತು ಸಾಲುಮರಗಳನ್ನು ಬೆಳೆಸುವ ಯೋಜನೆ ಚಾಲನೆಯಲ್ಲಿದೆ.  ಅದಕ್ಕಾಗಿ ಅನೇಕ ಪರಿಸರಾಸಕ್ತರು ಶ್ರಮಪಡುತ್ತಿದ್ದಾರೆ.  ಅದರಂತೆ ಬೀದಿ ಬದಿಯ ಸಾಲುಮರಗಳ ಬಗ್ಗೆಯೂ ಯೋಜನೆ ಯೋಚನೆಗಳು ಪುನರ್ನವಗೊಳ್ಳಬೇಕಾಗಿದೆ.  ಒಂದೊಮ್ಮೆ ಭಾರತದ ಹೆದ್ದಾರಿಗಳ ಸಾಲುಮರಗಳ ಸಮರ್ಪಕ ನಿರ್ವಹಣೆ ನಡೆದರೆ ಶೇ.೫ರಷ್ಟು ಕಾಡಿನ ಹೆಚ್ಚಳವಾಗುತ್ತದೆ.

ಶಾಲಾ ರಸ್ತೆಯಲ್ಲಿ, ಶಾಲೆಯ ಪಕ್ಕದಲ್ಲಿ ಮೇ ಫ್ಲವರ್ ಗಿಡ ನೆಡುತ್ತಾರೆ.  (ಮೇ ತಿಂಗಳಲ್ಲಿ ಶಾಲೆಗೆ ರಜೆ) ಮೇ ತಿಂಗಳಲ್ಲಿ ಮರ ಹೂವಿನ ತೇರಾಗುತ್ತದೆ.  ನೋಡಲು ಮಕ್ಕಳೇ ಇರುವುದಿಲ್ಲ.  ಹೀಗಾಗಬಾರದು.  ಸಾಲುಮರಗಳನ್ನು ಮಳೆಗಾಲದ ನಂತರ ಸೊಪ್ಪಿಗಾಗಿ, ಚಳಿಗಾಲದಲ್ಲಿ ಎಲೆ ಉದುರಿ, ಬೇಸಿಗೆಯಲ್ಲಿ ಕಟ್ಟಿಗೆ ಹಾಗೂ ಫಲಕ್ಕಾಗಿ ಬೋಳಿಸಿರುತ್ತಾರೆ.  ಹೀಗೆ ವರ್ಷಾವಧಿ ಬೋಳು ಸಾಲುಮರಗಳೇ ದಾರಿ ದಿಕ್ಕಿಲ್ಲದೆ ನಿಂತಿರುತ್ತವೆ.  ಒಂದೊಮ್ಮೆ ಬೇಸಿಗೆಯಲ್ಲಿ ಮರದ ತುಂಬಾ ಹೂಗಳಿದ್ದರೆ ಅದಕ್ಕೆ ಬರುವ ಲಕ್ಷೆಪಲಕ್ಷ ಕೀಟಗಳ ರೆಕ್ಕೆ ಬೀಸುವಿಕೆಯಿಂದ ಹೆಚ್ಚಿದ ತಾಪಮಾನ ಕಡಿಮೆಯಾಗಬಹುದು.  ಈ ರೀತಿಯ ಸೂಕ್ಷ್ಮ ಅವಲೋಕನದಿಂದ ಸಾಲುಮರಗಳನ್ನು ಬೆಳೆಸಬೇಕು ಎಂದು ಹೇಳಿದ ಕೋ.ಲ. ಕಾರಂತರ ಮಾತು ಉಲ್ಲೇಖನೀಯ.