ಸಾಲುಮರಗಳ ಕೆಳಗೆ ನೆರಳೇ ಇಲ್ಲ ;
ಹೊಸ ನೆರಳು ಚಿಗುರುವ ತನಕ ಕಾಯಬೇಕು.
ಮರ ಮರದ ನರಮಂಡಲದ ತುಂಬೆಲ್ಲ
ಹೊಸ ವಸಂತನ ರಕ್ತ ಹಾಯಬೇಕು.

ಹಕ್ಕಿ ಗೂಡಿನ ಗುಟ್ಟು ಬಯಲಾದ ಕೊಂಬೆಯಲಿ
ಹೊಸ ಹಸಿರು ನಂಬುಗೆಯ ನೆಯ್ಯಬೇಕು.
ಬುಡದಲ್ಲಿ ಬಿದ್ದಿರುವ ಹಳೆಯ ತರಗನ್ನೆಲ್ಲ
ಗುಡಿಸಿ, ನೆನಪನ್ನೆಲ್ಲ ಹುಗಿಯಬೇಕು.

ಇದ್ದಬದ್ದುದನೆಲ್ಲ ಕಿತ್ತುಕೊಂಡದ್ದಾಯ್ತು,
ಇನ್ನು ಕೊಡುಗೈ ಎಲ್ಲೊ, ಕಾಣಬೇಕು.
ಕಿತ್ತುಕೊಂಡಲ್ಲದೆಯೆ ಎಂದೆಂದಿಗೂ ಕೊಡದ
ಆ ಕೃಪಣ ತಂತ್ರದ ದಾರಿ ಕಾಯಬೇಕು.