ಸಂಧಿ ೮

ಪ್ರೀತಿಮತಿ ಕನ್ಯಾಸ್ವಯಂವರ | ವಾತನಪರಾಜಿತನ ದೀಕ್ಷಾ |
ಖ್ಯಾತಿಯವರಾ ಸ್ವರ್ಗದುರ್ಗವನಾಳ್ದರೆಂತೆನಲು || ಪ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ತನ್ನಧಿರಾಜ್ಯಸಿರಿಯ ವಿ |
ಶಾಲವನು ಭೋಗಿಪಡೆ ತನುವೊಂದೆಯ್ದದೇಂದರಸ ||
ತಾಳಿದನೊ ಬೇ ಱೆರಡೊಡನೆ ನೆ | ಮೇಳದಿಂದನುಜರುವೆರಸಿ ಮಹಿ |
ಯಾಳುತಿರಲಾ ಶ್ರೇಣಿಯೊಳರಿಂದಮರಪುರವನಾಳ್ವ || ೧ ||

ಎಸೆವರಿಂಜಯ ಗಗನ ಚರಪತಿ | ಗೆಸೆವರಸಿಯಾದಜಿತ ಸೇನೆಗೆ |
ಮೆಸೆವ ಕುವರೀ ಪ್ರೀತಿಮತಿಯೆಂಬಳು ಚೆಲವಿನಿಂದ ||
ಮಸುಳಿಪಳು ರತಿಯನು ಸುವಿದ್ಯಾ | ವಿಸರದಲಿ ಸರಸತಿಯನತಿ ನಾ |
ಚಿಸುವಳುರುಸಿರಿಯಿಂದೆ ಕಡ್ಡೆಗೆ ಬಗೆವಳಾ ಸಿರಿಯ || ೨ ||

ಮೂಡಣಿಂ ಪಡುವಣಿಗೆ ಪಾಱುವ | ಪ್ರೌಢೆಯಲ್ಲದೆ ಪಡುವಣಿಂದಾ |
ಮೂಡುಗಡೆಗಾ ತೆಂಕ ಬಡಗಲು ಬಡಗ ತೆಂಕಲಿವ |
ನಾಡೆ ಪಾಱುವೊಡಱಿಯೆನೆಂದು ವಿ | ಭಾಡಿಪಳು ಮಾರ್ತಂಡನುಮನೆನ |
ನಾಡಲೆಂಬಾಂಬಟ್ಟೆಗರ ಕವಡಿಕೆಗೆ ಕೈಕೊಳಲು || ೩ ||

ಖಗನ ಮಗಳ ಸುರೂಪ ಮಡಲೊಡ | ನೊಗೆದು ಕುಲಮದ ಜವ್ವನದ ಮದ |
ಮಿಗೆ ಸಿರಿಯಮದ ವಿಭವಮದ ಚಲಕುಲಕಲಾಮದವು ||
ಗಗನಗತಿ ವಿದ್ಯಾಮದದ ಪೆ | ರ್ಚ್ಚುಗೆಗೆ ಪೆರ್ಚ್ಚುಗೆಗೊಡಲು ಕೇಳಾ |
ಖಗಕುಮಾರರು ಹೂಗಣೆಗೆ ಮಾಱುವರು ತಮ್ಮೆದೆಯ || ೪ ||

ನೀಡು ಬಾಂಬರಿಯಾಟದೊಳಗೊಡ | ನಾಡಿ ಬಿಜ್ಜಾಧರರ ಮಕ್ಕಳ |
ನಾಡಿರೋಡಾಡಿಸುವಳೆಂಬುದ ಕೇಳಿ ತನುಜರಿಗೆ ||
ಬೇಡಿಯಿಟ್ಟು ವರವಳನುಭಯ | ಶ್ರೇಢಿಗಳ ಬಾಂಬಟ್ಟೆಗರು ಕಡು |
ಗಾಡಿಕಾತಿ ವಿಳಾಸವತಿಯನು ಭೂಪ ಕೇಳೆಂದ || ೫ ||

ಕೊಡದ ಕೂಸು ಸುವರ್ಣಕೀಲಣಿ | ಗಡಶಿರದ ಮಾಣಿಕವು ನಾಲಗೆ |
ಗುಡಿಯ ಸೋಂಕದಹಣ್ಣು ನಲ್ಲನ ಸೋಂಕದೆಳೆವೆಣ್ಣು |
ಕಡು ಬಸಂತನೊಳೊಲಿದು ನೆರೆಯದ | ಪೊಡರ್ವ ಲತೆ ಕಾಂತನೊಳು ನೆರೆಯದ |
ಮಡದಿಯಂಗ ಲತಾ ವಿಳಾಸವಿವೊಪ್ಪುವುದೆಯೆಂದ || ೬ ||

ತನುಜೆಯಾಗಸಗತಿಯ ವಿದ್ಯಾ | ಘನವ ತಿಳಿದುವರಿಂಜಯಾಧಿಪ |
ನನುವಡೆದು ವಿಜಯಾರ್ದ್ಧಪರ್ವತದಗ್ರವನದೊಳಗೆ ||
ಕನಕ ಮಣಿಖಚಿತ ಸ್ವಯಂವರ | ವಿನುತ ಸಾಲೆಯವಿಳೆಗಿದಚ್ಚರಿ |
ಯೆನಲು ಸವೆಯಿಸಿ ನೂಱಹತ್ತುಂ ಪಟ್ಟಣದೊಳುಳ್ಳ || ೭ ||

ವಿವಿಧ ಖೇಚರರಾಯರನು ಸ | ಬ್ಬವದಿ ಕರೆಯಿಸೆ ಬಂದುದಂದು |
ತ್ಸವದಿನಾಗಸವೀಥಿಯೊಳು ತುಱುಗಿರೆ ವಿಮಾನಗಳು ||
ನವರತುನಮಯಮಾದ ಮುಗಿಲೋ | ಭುವನಕಚ್ಚರಿಯೆನಿಸಿದವು ನೋ |
ಡುವರ ಕಣ್ಗೆ ಬಳಿಕ್ಕ ಸಾಲೆಯ ಬಳಸಿದರು ಬಂದು || ೮ ||

ವಿಪುಳಚಿಂತಾಗತಿ ಮನೋಗತಿ | ಚಪಳಗತಿ ಖಚರಾಧಿಪತಿಗಳು |
ಲಪನಕಾಂತಿಯ ಪಸರಿಸುತ ತಂತಮ್ಮ ವಿಭವದೊಳು ||
ಅಪರಿಮಿತ ಪುಣ್ಯೋನ್ನತರು ತ | ದ್ವಿಪಿನದೊಳು ಬಹುರಚನೆಯಿಂ ರಾ |
ಜಿಪ ಸ್ವಯಂವರ ಸಾಲೆವೊಕ್ಕುಚಿತಾಸನದೊಳಿರಲು || ೯ ||

ಗಗನಗತಿಯುದ್ಧದಲಿ ನನ್ನಯ | ಮಗಳ ಗೆಲಿದವನಳಿಯನಾ ಭಾ |
ಷೆಗಳದೆಂತೆನೆ ಪಾ ಱಿ ಮಂದರಗಿರಿಯ ತುದಿಯಿಂದ ||
ಮುಗುಳು ಮಾಲೆಯ ಕೆಡಪಿ ಬಳಿಕಾ | ನಗವ ಮೂವಳಸೊದಗಿ ಪಿಡಿವುದು |
ಖಗಪತಿಗಳಱಿಗೆಂದು ಘೋಷಣೆ ಸಾರಿದಂತರದಿ || ೧೦ ||

ನೋಟದಿಂ ಕುಚಭರದಿ ಮುಡಿಯ ಸ | ಘಾಟಿಕೆಯ ನಗೆಮೊ[ಗದ] ಭೂಷಣ |
ಕೋಟಿ ಮಿಂಚಿನ ಕೋಟಿ ಕಳಸದ | ಕೋಟಿ ನವಿಲಿನ ಕೋಟಿ ಚಂದ್ರರ |
ಕೋಟಿ ಸುರಧನುಗಳ ಬೆಡಂಗಾಯಿತಾಗಸದೊಳಾಗ || ೧೧ ||

ಸತ್ತಿಗೆಯ ಸಾಲುಗಳೆ ಹರಿಗೆಯ | ಮೊತ್ತ ಕಣ್ಬಳಗಸಿ ಬೆಳಗು ಚೆಲು |
ವೆತ್ತ ಭಾಳದ ತಿಲಕ ಕುಂಕುಮ ಮೈದಿವಿರು ಮೆ ಱಿಯೆ ||
ಬಿತ್ತರಿಪ ಬಿರಿದಿನ ಕಹಳೆ ಬೆರ | ಸೆತ್ತಿ ಬಂದಂಗಜನ ಫೌಜೆನೆ |
ವೃತ್ತ ಕುಚೆ ಬಂದಳು ಖಚರರೆದೆಗೆಡೆ ಸರಾಗದಲಿ || ೧೨ ||

ಬಂದು ಮುನ್ನರ್ಚಿಸಿದ ಗತಿಯು | ದ್ದೇಂದು ಕಾಂತದ ಶಿಲೆಯೊಳಿಕ್ಕೈ |
ಯಿಂದೆರಡು ಮಾಲೆಯ ಪಿಡಿದು ನಿಲೆ ಕಂಡರಿಂಜಯನು ||
ಮಂದರಕ್ಕೊಗೆದರುಹನರ್ಚಿಸಿ | ಯೆಂದವೊಲು ಮಾಲೆಯನು ತಂದವ |
ಗಿಂದು ವದನೆಯನಿಲ್ಲಿ ಕೈನೀರೆ ಱಿವೆ ನಾನೆಂದ || ೧೩ ||

ನನಗೆ ತನಗೆಂದಖಿಲಖೇಚರ | ತನುಜರಾ ಗತಿಯುದ್ಧಕಿಕ್ಕೆಲ |
ಕನುವಡೆದು ನಿಲೆ ಮುನ್ನಮನಮೊಸೆದನುಜರೊಡವೆರಸಿ ||
ವಿನುತ ಚಿಂತಾಗತಿಯುಮವಳೊ | ತ್ತಿನೊಳು ನಿಲೆ ನಿಂದುದು ಕುವರಿಯುಮ |
ವನ ಚೆಲುವಿನೊಳುಮನಸೋತಳರಸ ಕೇಳೆಂದ || ೧೪ ||

ನಸು ಮಗುಳ ಮೈ ಮುಂಚಿದೆಡಗಾ | ಲೆಸಪೊಱವಾಱೊಡು ಪಿಡಿದ ಮಡ |
ಕುಸುಮ ಮಾಲೆಯ ನೆತ್ತಿದಿಕ್ಕೈ ಮುಗಿಲನಿ ಱಿದಮೊಲೆ ||
ಯೆಸೆಯೆ ಪೂಣ್ದ ಮೊಗಂ ಖಚರಿಯಾ | ಗಸದ ಮಿಂಚಿನ ಬೊಂಬೆಯಂದದಿ |
ಮಿಸುಗಿ ಪಾ ಱಿ ಸುರಾದ್ರಿ ಚೈತ್ಯಾಲಯವ ಬಲಗೊಳಲು || ೧೫ ||

ಪಿಂದೆ ಬಿರ್ದುದು ನಿಖಿಲಖಚರರ | ಬಿಂದವಾ ಚಿಂತಾಗತಿಯುಮವ |
ಳಿಂದ ಮುಂದೇಳೆಂಟು ಹಜ್ಜೆಯನೊದಗಲೀ ವನವ ||
ನಿಂದು ನೋಡುವವಿನಿತು ಪೊತ್ತೊಲ | ವಿಂದೆನುತೆ ಮೇರುವ ಸಮೀಪದೊ |
ಳೊಂದಿದುದು ಮಿಂಬಟ್ಟೆಯೊಳು ಬಾಂಬಟ್ಟೆಗರ ನೆರವಿ || ೧೭ ||

ಸಂದ ಪಾಂಡುಕಶಿಲೆಯ ಮಿಗೆ ಬಲ | ವಂದಕೃತ್ರಿಮ ಜಿನಪ ಬಿಂಬವ |
ನಂದದಿಂದರ್ಚಿಸಿ ಖಗನು ಮಂದಾರ ಮಾಲೆಗಳಿಂ ||
ಚಂದ ಚಂದದಿ ನುತಿಸಿ ಪರಮಾ | ನಂದದಲಿ ಪುಳುಕಿಸಿ ಸುಭಕ್ತಿಯೊ |
ಳಂದು ಚಾಚಿದ ನೊಸಲನು ಜಿನರ ಮೆಲ್ಲಡಿಗೆ || ೧೭ ||

ಬಳಿಯನಾ ಜಿನ ದಿವ್ಯಗಂಧದ | ಜಲಸುಗಂಧಾಕ್ಷತೆ ಕುಸುಮಗಳ |
ನೊಲಿದು ದೇವರ್ಕಳು ಕೊಡಲು ಗೆಲಗೊಂಬವೊಲು ಕೊಂಡು ||
ತಳುವದಲ್ಲಿಂ ಬುಧವಳ ಕೈ | ಗಳಿದ ಮಾಲೆಯನಂದು ಪೇಳ್ವಂ |
ತಳವಿಯಲಿ ಚಿಟಿಕಿಸಿದನಿತು ಪೊತ್ತಿನೊಳುಪಿಡಿ ತಂದು || ೧೮ ||

ತನ್ನ ತಮ್ಮಂದಿರುವೆರಸಿ ತಾ | ಮುನ್ನಣಾಗತಿಯುದ್ಧ ಶಿಲೆಯೊಳು |
ಸನ್ನುತಂ ನೆಲೆ ಕಱಿದರಮರರು ಕುಸುಮಗಳ ಮಳೆಯ ||
ಅನ್ನ ನಿನ್ನನೆ ನಾಳೆ ನೀಂ ಸಂ | ಪನ್ನ ನೇಮಿಜಿನೇಂದ್ರನೆಂದವ |
ರುನ್ನತದಿ ಸುರರೊಂದೆ ಕೊರಲೊಳು ಘೋಷಿಸಿದರೊಲಿದು || ೧೯ ||

ಬೆಂಬಳಿಯಲಾ ಖಚರಸುತೆಯೆದೆ | ದುಂಬಿ ನಟ್ಟಲರಂಬಿನೊಳು ಕೆಲ |
ರಂಬ ಸರಗಟ್ಟಿಕ್ಕುವಂತಾ ಮಾಲೆಯಿಕ್ಕುತಿರೆ ||
ತುಂಬಿದನು ಪಾವಿಗೆ ಕೊರಳಕೊಡೆ | ನೆಂಬವೊಲು ಹಿಮ್ಮೆಟ್ಟಿ ನಿಲೆ |
ನೆಂಬುದಿದು…ಗತಿಯ ಬಗೆಯೆಂದು… || ೨೦ ||

… … ಜನತಿ ದೊ | ರ್ವ್ವಲಚಪಲಗತಿಗಿಕ್ಕು ಮಾಲೆಯ |
ನೊಲಿದುರೂಢಿಯ ಗಾಡಿಕಾಱಂಗೆನಲು ಸಿಗ್ಗಾಗಿ ||
ಎಲೆ ಖಚರ ಸುತ ಜೊನ್ನವನು ಕ | ಣ್ಗೊಲಿದು ಮನಮೊಸೆದೀಂಟುವಂದದಿ |
ನೆಳೆಸುವುದೆ ಪೆಱತೊಂದನೊಪ್ಪುವ ಜೊನ್ನವಕ್ಕಿಯದು || ೨೧ ||
ಎಂದು ಮನದಲಿ ನೊಂದು ನೀನಿಂ | ತಂದು ನುಡಿವುದರೊಳೇಂ ಕುಂದೇ |
ಅಂದು ನಾ ಪೂಜಿಸಿದೆ ಜಿನಪತಿಯೊಂದು ಮೆಲ್ಲಡಿಯ ||
ಒಂದಡಿಯನರ್ಚ್ಚಿಸಲು ಮ ಱಿದದ | ಱಿಂದ ನಾನರೆನೋಂಪಿಯನು ನೋಂ |
ತೊಂದು ಪುಣ್ಯದ ಕೊಱತೆ ಕಾಣಾ ಎಂದಳಾ ಖಚರಿ || ೨೨ ||

ನಿನ್ನ ಪೆಸರದು ಸಾರ್ಥಕವು ತಾಂ | ನೆನ್ನೊಳಾದುದು ಆದೊಡೇನೆನೆ |
ಗಿನ್ನು ಜಿನವರಚರಣ ಚಿಂತಾಗತಿಯ ಗತಿಯೆಂದು ||
ಮುನ್ನೆ ಸವೆದಿರ್ದಾವಿವಾಹದ | ರನ್ನ ಮಂಟಪದಲ್ಲಿ ಖೇಚರಿ |
ತನ್ನ ತಾಂ ತಱಿಸಂದು ಕೈಯಿಕ್ಕಿರ್ದಳೆಲೆ ಭೂಪ || ೨೩ ||

ಆದೊಡಾತನೆ ಪುರುಷನಲ್ಲದೆ | ಪೋದಡೀತಪ ಹರುಷವೆಂದೊಲ |
ವಾದುದಾಕೆಗದೇಂ ಕೃತಾರ್ಥೆಯೋ ಅವಳೆದಯ ಮದನ ||
ಸೀದುಲಿದು ಕೈಗೊಡಲು ರತಿಯೊಡ | ವೋದನಾ ಸತಿ ತಂದೆ ತಾಯ್ಗಳ |
ನದದದೊಡಂಬಡಿಸಿ ಪಲಬರು ಕನ್ನೆಯರು ಬೆರಸಿ || ೨೪ ||

ಇರದೆ ಪೊಱಮಟ್ಟಳು ಬಗೆದಳೆ | ಸರಿಯ ತನ್ನಯ ಜವ್ವನದ ಸೌಂ |
ದರವ ಜಾಣ್ಮೆಯ ಕುಲದ ವಿದ್ಯಾವಿಭವದೇಳ್ತರವ ||
ವಿರತೆಯಿಂ ರಾಮಾರ್ಯಕೆಯರೊಳು | ಭರದ ದೀಕ್ಷೆಯನಾಂತಳಂಬರ |
ಚರಕುಮಾರಿಯೆನಿಪ್ಪುದನು ಚಿಂತಾಗತಿಯಮ ಱಿದು || ೨೫ ||

ಗಾಡಿಕಾತಿಯೆ ಒಸೆದು ಮಾಲೆಯ | ಸೂಡಬಂದರೆ ನಾನವಜ್ಞೆಯ |
ಮಾಡಿದೊಡೆ ತನ್ನೊಡಲಸುಖವನವಜ್ಞೆ ಮಾಡಿದಳು ||
ನೋಡ ಪೆಣ್ಣಭಿಮಾನವನು ರೋ | ಡಾಡಿದಳಲಾ ನನ್ನನೆಂದಿರ |
ದಾಡಿ ಚಿಂತಾಗತಿ ವಿರಕ್ತಿ ಶ್ರೀಯನಪ್ಪಿದನು || ೨೬ ||

ಪೆಂಡಿರಾಳ್ವಭಿಮಾನಿಯೊರ್ವನೆ | ಗಂಡರೊಳು ನಮ್ಮಣ್ಣ ಮುನ್ನಣ |
ಪೆಂಡಿಕಿಮ್ಮನುಗಂಡು ಮಾಡಿದನೆಂಬನಿತೆ ಪಥವ |
ಕಂಡೆವವನಿಂತನ್ನನೊಲಿವರೆ | ಪೆಂಡಿರೆ ಱೆಯಳ ಧೂವೆದೊತ್ತೆನೆ |
ಕಂಡೆನೆನ್ನನು ರಾಗದಿಂದುಱೆ ಚಪಳಗತಿ ತೊಱೆದ || ೨೭ ||

ಕಾಂತ ಖೇಚರಲಕ್ಷ್ಮಿಯಂ ತೃಣ | ದಂತೆ ಬಗೆದು ವಿವೇಕ ವಿದ್ಯಾ |
ಕಾಂತಚಿಂತಾಗತಿ ಮನೋಗತಿ ಚಪಳಗತಿ ಖಗರು ||
ಇಂತು ಮೂವರುಮಾ ತಪಶ್ರೀ | ಕಾಂತೆಯೋರ್ವಳನಪ್ಪಿದರು ಗುಣ |
ವಾಂತ ದಮವರ ಗುರುಗಳಡಿದಳಿರೊಂಬೆ ಪಸೆಯೊಳಗೆ || ೨೮ ||

ದಿಗುವಸನರವರಿಂತು ತಪದಿಂ | ನೆಗಳ್ದು ಸುಸಮಾಧಿಯಲಿ ಕ್ರಮದಿಂ ||
ದಗಲ್ಡೊಡಲನಾಮೂಮರುಂ ಸುಮಹೇಂದ್ರಕಲ್ಪದೊಳು ||
ಬಗೆದು ಸಾಮಾನಿಕಸುರಾಹ್ವಯ | ವಗಲದಾಂತರು ಪೆಂಪಿನಣಿಮಾ |
ದಿಗಳನಾಳ್ದರು ತಾಳ್ದರಲ್ಲಿಯ ದಿವಿಜ ಸೌಖ್ಯವನು || ೨೯ ||

ಏಳುಪಕ್ಷಕ್ಕೊಮ್ಮೆ ಸುಯಿಲಿನ | ಮೇಳವಾಯುವೆ ಸಾಗರೋಪಮ |
ವೇಳು ಸಂಕಲ್ಪಾಮೃತಾಹಾರವು ತಮಗೆ ನೋಡೆ ||
ಏಳುಸಾವಿರ ವರುಷಕೊರ್ಮೆನೆ | ಪೇಳಲೆಂದುತ್ತಮರು ಮನ್ಮಥ |
ಕೇಳಿಯಲಿ ಮುಟ್ಟಿದೊಡೆ ತಣಿವರು ಸುರತ ಸುಖಶರಧಿ || ೩೦ ||

ಅಗ್ಗಳಿಪ ಸೌಖ್ಯವನು ಕಂಡಡೆ | ಸ್ವರ್ಗ ಸೌಖ್ಯವದೆಂಬರೆನಲಾ |
ಸ್ವರ್ಗಸೌಖ್ಯಮನಂತುಟೆಂತುಟದಂತುಟೆನಬಹುದೆ ||
ಸಗ್ಗದಂಬುಧಿ ಈಂಟಿ ಪುಣ್ಯದ | ಸುಗ್ಗಿ ಚಿಂತಾಗತಿ ಚರಾಹ್ವಯ |
ಸಗ್ಗಿಗನು ನೀನಾದೆ ಕೇಳಪರಾಜಿತಾಧೀಶ || ೩೧ ||

ಅತ್ತ ಜಂಬೂದ್ವೀಪಮೇರುಗೆ | ಪೆತ್ತ ಪೂರ್ವ ವಿದೇಹ ಶೀತಾ |
ಯತ್ತ ನದಿಯುತ್ತರದ ತಡಿಯಾ ಪುಷ್ಕಳಾವತಿಯ ||
ಮತ್ತೆಸೆವ ವಿಜಯಾರ್ಧ ಪರ್ವತ | ದುತ್ತರ ಶ್ರೇಣಿಯೊಳು ಜೈನರ |
ಮೊತ್ತದಿಂ ಜಿನಮಂದಿರದ ಸಂದಣಿಯಲೊಪ್ಪುವುದು || ೩೨ ||

ಜಿನಮತಾಂಬುಧಿವೆಚ್ಚಿಸುತ ದು | ರ್ಜನಖಗೇಂದ್ರರ ತೋಳುರಿಯ ತಂ |
ಣನೆ ತಣಿಸಿ ಸಜ್ಜನಹೃದಯ ಶಶಿಕಾಂತಯೊಸರಿಸುತ ||
ವಿನುತ ಕೀರಿತಿ ಜೊನ್ನವನು ಬೆ | ಳ್ಳೆನೆ ಕಱಿದು ನಿಜಕುಲ ಗಗನಚಂದ್ರನೆ |
ದಲೆನಿಸಿದ ಗಗನ ಚಂದ್ರ ಖಗೇಂದ್ರನದನಾಳ್ವ || ೩೩ ||

ಆ ವಿಯೆಚ್ಚರನಗ್ರ ಮಹಿಷಿ ಗು | ಣಾವಲಂಬನೆ ಗಗನ ಸೌಂದರ |
ದೇವಿಗಾ ನಾಲ್ಕನೆಯ ಕಲ್ಪದೊಳಾಯುತವೆ ಬಂದು ||
ಭಾವಗತಿಚರ ಚಪಲಗತಿಚರ | ದೇವರಾತ್ಮಜರಾದರೊಪ್ಪುವ |
ತಾವಮಿತ ಗಾಮಿಯುಮಮಿತತೇಜನುಮೆನಿಪರಾಗಿ || ೩೫ ||

ವಿನುತ ಖೇಚರ ರಾಜ್ಯಲಕ್ಷ್ಮಿಯ | ನನುದಿನಂ ಪ್ರಿಯದಿಂದಮೀರ್ವರು |
ಮನುಭವಿಸುತೊಲವಿಂದೆ ಮೇರುಗೆ ಪಾಱಿ ಪದಿನಾಱು ||
ಜಿನರಕೃತ್ರಿಮ ವಸದಿಗಳ ನೊ | ಳ್ಪಿನಲಿ ಬಲವಂದರುಹನರ್ಚಿಸಿ |
ಮನಮೊಸೆದು ಗಗನಗತಿ ಖಗರ ನಿರೀಕ್ಷಿಸುತ್ತಿರಲು || ೩೬ ||

ದೊರಕಿದಾ ಗತಿಯುದ್ಧದ ಭವ | ಸ್ಮರಣೆಯಿಂ ಚಿಂತಾಗತಿಯ ಭವ |
ದಿರವನಱೆವೊಡೆ ಪುಂಡರೀಕಿಣಿಗೆಯಿದಿ ಬಲವಂದು ||
ಪಿರಿದುಬಂದಿಸಿಯಾಸ್ವಯಂಪ್ರಭ | ರರುಹರಂ ಬೆಸಗೊಂಡು ಭವ ವಿ |
ಸ್ತರವಱಿದು ವೈರಾಗ್ಯದಲಿ ಜಿನರೂಪನೊಸೆದಾಂತು || ೩೭ ||

ಶ್ರೀ ಜಿನೇಶ್ವರ ತಪವ ಜಿನ ಪೇ | ಳ್ದೋಜೆಯಿಂ ನಡಪುತ್ತಿರಲು ಗುಣ |
ರಾಜಿಚಾರಣವೃದ್ಧಿಯಂ ಪಡೆದವರು ನಾವೀಗ ||
ಆಜವಂಜವವಱಿಪುವೊಡೆ ನಾ | ವೀ ಜವದಿನೈತಂದೆವೆಲೆಯಪ |
ರಾಜಿತನೆ ಕೇಳೆಂದಮಿತಗತಿ ಚಾರಣರು ನುಡಿದು || ೩೮ ||

ಇದು ನಿಮಿತ್ತದಿನಮ್ಮ ಮೇಲಾ | ದುದು ನರಾಧಿಪ ನಿನ್ನ ಮೋಹವು |
ಚದುರಿನಿಂ ಪಿಂದೈದು ಭವವನು ತಿಳಿದೆಯೈ ಮತ್ತೆ ||
ವಿದಿತ ಭರತಕ್ಷೇತ್ರ ಹರಿವಂ | ಶದೊಳು ನೀವಿನ್ನೈದನೆಯ ಜ |
ನ್ಮದನೆಲೆಗೆ ವರನೇಮಿತೀರ್ಥಂಕರಹೆ ಎಲೆ ನೃಪತಿ || ೩೯ ||

ಎಂದುಮಿನ್ನು ಹಿತೋಪದೇಶಮ | ದೊಂದ ಕೇಳೈಪೇಳ್ದೊಡೀಂ ನಿನ |
ಗೊಂದೆತಿಂಗಳ ಬಾಳ್ಕೆ ಸಿಲ್ಕದಿರೀ ತೊಡರ್ಪಿನೊಳು ||
ತಂದ ಬುತ್ತಿಯನುಂಡು ಬಳಿಕ ಮ | ತ್ತೊಂದು ಪಯಣಕೆ ಸಂಬಳವ ಕೊಂ |
ಡಿಂದುವೆಯಿದುವ ಪಥಿಕನಂತಿರುವೆಂದನಾ ಮುನಿಪ || ೪೦ ||

ಜಾತರೂಪರು ಪೂರ್ವಭವಸಂ | ಜಾತಸಂಪ್ರೀತಿಯಲಿ ಬಂದೆನ |
ಗೀತೆರದಿ ತಿಳಿಪಿದಿರಿ ಭವವನು ದಿನ ಸಮೀಪವನು ||
ಬೀತುದಿಂದ್ರಿಯದಿಚ್ಛೆಯೇತಱ | ಮಾತೊಯಿಂತಡೆದೊಡೆ ಬಳಿಕೆನ |
ನ್ನಾತುಮಗೆ ನಾ ಹಗೆಯಲಾ ಮುನಿಹಂಸ ಕೇಳೆಂದ || ೪೧ ||

ಎನೆ ಮಹೀಪತಿ ಕೇಳು ಬಗೆ ತ | ಣ್ಣನೆ ತಣಿದು ಭೂಮಿಗೆ ಶಶಾಂಕಂ |
ಗಿನಗೆ ಗಾಳಿಗೆ ಮಳೆಗೆ ಪೂಲತೆಗಮಲ ಫಲತರುಗೆ ||
ಮುನಿಪನಿಮ್ಮನ್ನರ್ಗೆ ಪರಹಿತ | ಮನೆ ನಿಮಿರ್ಚುವುದೇ ಸ್ವಭಾವವು |
ನನಗೆ ದಯೆಯಿಂದಿಂತು ಗೆಯಿದಿರಿ ಧನ್ಯನಾನೆಂದ || ೪೨ ||

ಎನೆಮುನಿಪರತಿ ಮೆಚ್ಚಿ ಸಾಮಾ | ನ್ಯನೆ ಅನಂತ ಸುಖೈಕ ಭಾಗಿಗೆ |
ನನಗೆ ವೈರಾಗ್ಯವು ನಿಸರ್ಗವೆನುತ್ತ ಮಿಗೆ ಹರಸಿ ||
ಘನಪತಕ್ಕವರೀರ್ವರುಂ ಮಿಂ | ಚಿನ ಪಳಂಚಿನ ಪುತ್ಥಳಿಗಳೆಂ |
ದೆನಿಸಿ ಬಿಜಯಂಗೈಯೆ ನೃಪನಿಜಪುರವನೈ ತಂದ || ೪೩ ||

ಅರಮನೆಯ ನೆರೆಮನೆಯವೊಲುಬಗೆ | ದಿರದೆ ತಾಂ ಪ್ರೀತಿಂಕರಾತ್ಮಜ |
ನುರು ಭುಜಾಗ್ರದೊಳಿರಿಸಿ ತನ್ನಧಿರಾಜ್ಯಭಾರವನು ||
ಸುರಚಿರತ್ರಿಭುವನ ವಿಭೂಷಣ | ವರ ಚೈತ್ಯಾಲಯದ ಮುಂದ |
ಚ್ಚರಿಯೆನಲು ಮಂದರವ ವಿರಚಿಸಿದನು ಸುವರ್ಣದಲಿ || ೪೪ ||

ಚಂದದಲಿ ನವರತ್ನ ಕೀಲಣೆ | ಯಿಂದ ಕಲ್ಪಿಸಿ ಕುಜಗಳ |
ನಂದು ಹಾರದಿ ತಾರೆಗಳ ಮಣಿಗನ್ನಡಿಗಳಿಂದ ||
ಚಂದ್ರಸೂರ್ಯರ ಬಲಗೊಳಿಸಿ ದೇ | ವೇಂದ್ರನೆನೆ ಭೂಷಣದ ರತ್ನಗ |
ಳಿಂದೆ ನೇತ್ರಸಹಸ್ರ ತನು ತಾನಾಗಿ ಪೂಜಿಸಿದ || ೪೫ ||

ಇಂತಹರ್ನಿಶ ವೆಂಟುದಿನ ಪರಿ | ಯಂತ ಜಿನಗಭಿಷೇಕ ಪೂಜೆಗ |
ಳಂತರದಿ ನೆ ಱಿ ಮಾಡಿಯಜ್ಞಾಂತದೊಳು ತದ್ಗಿರಿಯ ||
ಸಂತಸದಿ ನೊಸೆದಿತ್ತು ಯಾಚಕ | ಸಂತತಿಗೆ ಕೈಮೆಱೆದು ಕೀರ್ತಿಗೆ |
ಕಾಂತನಪರಾಜಿತ ಮಹಾರಾಯನು ತೊಡರ್ದಿರದೆ || ೪೬ ||

ಘನವಿಭೂತಿಯನಾ ವಿಭೂತಿಯ | ದೆನೆ ಪರಿಗ್ರಹವನು ಪರಿಗ್ರಹ |
ವೆನೆ ಪುರವ ಯಮಪುರವದೆನೆ ನಾರಿಯನು ಮಾರಿಯೆನೆ ||
ತನುವನತಿ ತನುವೆನೆ ಯನುಜರನು | ತನುಜನರು ದನುಜರೆದೆಲೆನೆ ತೊ ಱಿ |
ದನು ಮೆಱೆದನು ವಿರಕ್ತಿಯನು ಭೂಪಾಲ ಕೇಳೆಂದ || ೪೭ ||

ಎಲ್ಲರನು ಸಂತೈಸಿ ಪುರದಿಂ | ಮೆಲ್ಲಗೈದಿ ತಪೋವನಮನಾ |
ಫುಲ್ಲ ಶರಜಿತರಮಲಗುಣ ಭಟ್ಟಾರಕರ ಬಳಿಯ ||
ಸಲ್ಲಲಿತ ಜಿನರೂಪನಾಂತುಗು | ಣೋಲ್ಲಸಿತನಾ ಸನ್ಯಸನ ವಿಧಿ |
ಯಲ್ಲಿ ತಾಂ ಪ್ರಾಯೋಪಗಮನದಿನಿರ್ದನಾ ಯತಿಪ || ೪೮ ||

ಪಂಚ ಬಾಣನ ವಿಕ್ಕಿ ಮುನ್ನಮೆ | ಪಂಚಗುರುಪದ ಭಜನೆಯೊಳಗೆ ಪ |
ಳಂಚಲೆಯಲಿಪ್ಪತ್ತೆರಡು ಕಡಲಾಯುವೊಡೆತನವ ||
ಸಂಚಯಿಪವೊಲಿಪ್ಪತ್ತೆರಡು ದಿ | ನಂ ಚಲಿಸದಿರ್ದಳಿದು ತನುವನು |
ಕಾಂಚನಾದ್ರಿಯ ಮೂಲದಿಂ ನೆಗೆದಾಱುರಜ್ಜುವಿನ || ೪೯ ||

ಪವಣಿನಚ್ಚುತ ಕಲ್ಪದೊಳು ಮಣಿ | ನಿವಹ ಕೂಟದುದಗ್ರ ರತ್ನ |
ಪರವರಕಲಶದ ಪಳಯಿಗೆಯ ಫಲಶೋಭೆಗೆಡೆಯದ ||
ದಿವಿಜವೃತ ಶಾಂತಕರ ವೆಂಬೊ | ಪ್ಪುವ ವಿಮಾನದೊಳಚ್ಚುತೇಂದ್ರನೆ |
ಸುವಿದಿತಂ ತಾನಾದ ನೆಲೆ ಭೂಪಾಲ ಕೇಳೆಂದ || ೫೦ ||

ಶರಧಿ ಪರಿಮಿತದಾಯುವಿಪ್ಪ | ತ್ತೆರಡು ನನೆದಂಬುಣಿಸುವಿಪ್ಪ |
ತ್ತೆರಡು ವರಷಕ್ಕೊಮ್ಮೆ ಸುಯಿಪನ್ನೊಂದು ತಿಂಗಳಿಗೆ ||
ದೊರೆವಡೆದ ಹಸ್ತತ್ರಿತಯ ಬಂ | ಧುರ ತನೂನ್ನತಿ ನೂಱಪದಿನೈ |
ದುರು ವಿಮಾನಗಳೊಡತನವು ತನಗಾಗೆ ಸುಖವುಂಬ || ೫೧ ||

ಮತ್ತೆ ತ್ರಾಯತ್ತ್ರಿಂಶಕರು ಮೂ | ವತ್ತ ಮೂವರು ಜೀಯೆನಿಪ್ಪರು |
ಹತ್ತು ಸಾವಿರ ಒಪ್ಪುವಾ ಸಾಮಾನಿಕಾಮರರು ||
ಮೂರ್ತಿರಕ್ಷಕ ದೇವರಾಯುಧ | ವರ್ತಿಗಳು ತಾಂ ನಾಲ್ಕು ಸಾಸಿರ |
ಸುತ್ತಿಹುದು ಸೇವಿಪರು ನಾಲ್ವರು ಲೋಕಪಾಲಕರು || ೫೨ ||

ಕರಿತುರಗ ರಥ ಸುರಪದಾತಿಯ | ನೆರವಿ ವಿನುತಗವೇಂದ್ರ ಗಂಧ |
ರ್ವರು ನಲಿವ ನರ್ತಕಿಯರೆಂ ಬೆಳಂಗ ಬಳಿನಿಕರ ||
ವರ ಮಹಾದೇವಿಯರು ತಾವೆ | ಣ್ಬರು ಚತುಃಷಷ್ಟಿಯು ವಿಶಿಷ್ಟಾ |
ಮರಿಯ ಪತ್ತೀರ್ವರುಚಿತ ವಿಳಾಸಿನೀಯವರ್ಗೆ || ೫೩ ||

ಮನಸಿಜಕ್ರೀಡಾ ಸುಖವನುರೆ | ನೆನೆದೊಡಾಗಳೆ ತೃಪ್ತನಾಗಿ |
ರ್ದನಿಮಿಷೋತ್ತಮ ಸೌಖ್ಯವುಂಡಾಯುವ ಕಡಲೆನಿಸೆ ||
ಎನಲದೇನಚ್ಚುತನೆ ತಾಂಭೋಂ | ಕನೆ ಪರಿಚ್ಯುತನಾದನೆನೆ ನು |
ಣ್ಣನೆ ನೊಣೆಯನೆ ಮಿಕ್ಕ ನರರನು ಕಾಲರಕ್ಕಸನು || ೫೪ ||

ಶರದದಂಬುದದಂತೆ ಮೆಲ್ಲನೆ | ಕೊರಗೆ ದೇವನ ದಿವ್ಯ ತನು ತಾ |
ನಿರದೆ ಬಂದೀ ಜಂಬು ದ್ವೀಪದ ದಕ್ಷಿಣದ ದೆಸೆಯ ||
ಭರತದಾರ್ಯೆಯೊಳೈದೆ ಶೋಭಾ | ಕರವೆನಿಪ ಕುರುಜಾಂಗಳವೆನಿ |
ಪ್ಪುರು ವಿಷಯದೊಳು ನೋಡೆಗಜಪುರವೆಂಬುದೆಸೆದಿಹುದು || ೫೫ ||

|| ಅಂತು ಸಂಧಿ ೮ಕ್ಕಂ ಮಂಗಳ ಮಹಾ ||