ಸಂಧಿ ೧೧

ಕೇಳೆಲೇ ಮಾಗಧ ಧರಿತ್ರೀ | ಪಾಲ ನೇಮಿಸ್ವಾಮಿಯುದಯಿಸು |
ವಾ ಲಸದ್ವಂಶವನು ಮಧುರೋಕ್ತಿಯಲಿ ಪೇಳುವೆನು || ಪಲ್ಲ ||

ಇಳೆಯೊಳೊಲಿದು ವಸಂತವರ್ಣನೆ | ಗಳನು ಮಾಳ್ಪೊಡೆ ಬಗೆದು ವನವನು |
ಪಲ ತೆಱದಿ ವರ್ಣಿಸುವವೋಲಾ ನೇಮಿಜಿನಪತಿಯೆ ||
ಸುಲಭನೀ ಕೃತಿಗಧಿಪನಾದೊಡೆ | [ಒ]ಲವಿನಿಂದಾ ದೇವನುದಯಿಸು |
ವಲಘುವಂಶವನೆಯ್ದೆ ವರ್ಣಿಸ ತಕ್ಕುದೆಂದೆನಲು || ೧ ||

ಭರತದಾರ್ಯಯ ವತ್ಸ ವಿಷಯದ | ಲಿರುತಲಿಹ ಕೌಶಂಬಿ ನಗರ |
ಕ್ಕರಸು ಮಗಧ ನೃಪಾಲನಾತಗೆ ವೀತಶೋಕೆ ಸತಿ ||
ವರತನೂಭವನವರ್ಗೆ ರಘುವೆಂ | ಬುರು ಪರಾಕ್ರಮಿಯರಸುಗೈಯುತ |
ಹರುಷದಿಂದಿಹನಮರಪತಿಗೊರೆಯೆನಿಪ ಸಿರಿಯಿಂದ || ೨ ||

ಸಂದ ರಘುಜಂಗೆಣೆಯ ರಘುವಿಂ | ಗಂದು ಮಿತ್ರನು ಸುಮುಖ ವೈಶ್ಯನು |
ಮಂದರದ ಸಿರಿ ಪೊನ್ನರಾಶಿಯನಾಳ್ವನಿರಲಿಲ್ಲ ||
ವೊಂದು ದಿನವಾ ವೀರದತ್ತ ಸ | ವುಂದರದ ವನಮಾಲೆಯೆಂಬವ |
ಳಿಂದ ಹೊಸಮಸೆಯರಳ ಸರಳಿಗೆ ಮನವ ಮಾರಿದನು ||| ೩ ||

ಹರದನೆನಿಸಿದ ವೀರದತ್ತನ | ಬರಸಿ ಸುಮುಖನು ನಿಮ್ಮಯುಜ್ಜುಗ |
ದಿರವಿದೇನೆನಲೆಲ್ಲ ಲೇಸೆನೆ ನಸು ನಗುತಲಾತ ||
ಹರದ ಯಾಚಕೀರ್ವರುಂ ನಿ | ರ್ಭರಜಲಸ್ಥಲಯಾತ್ರೆಯನು ಮಿಗೆ |
ಚರಿಸೆ ಧನದನನಿಳಿಪ ಸಿರಿಯನು ಪಡೆಯದಿರದೆಂದ || ೪ ||

ಧನವು ದೊರಕದೆ ಬಡ್ಡಿದಪ್ಪಿದು | ದೆನಿಪವೊಲ್ ಮಿಗೆ ಭಂಡ ಮೊದಲಿನ |
ಧನವು ದೊರಕದೆ ದೂರ ಯಾತ್ರೆಯಲೇನು ಫಲವಹುದು ||
ಎಲೆ ಮಹಾಪೌರುಷದ ಕಣಿನೀಂ | ಧನವ ಕೋಟಿಯನೀವೆ ಭೈತ್ರವ |
ದನುವಡೆದುದದೆ ಬಡ್ಡಿ ನೂಱಕೆ ಹಣವೆ ಸಾಕೆಂದ || ೫ ||

ವೀರದತ್ತನು ಸುಮುಖನಾಡಿದ | ಸಾರವಚನವ ನಂಬಿ ಪಡಗಿನ |
ಭಾರವ ಱಿದುಪಚಿತಸುವಸ್ತುವ ತುಂಬಿ ಸಮಕಟ್ಟ ||
ಚಾರು ಸಾಯಂತ್ರಿಕರು ಸಹವಾ | ವಾರಿಧಿಯ ದೀಪಗಳನೆಯ್ದೀ |
ರಾಱು ಬರಿಸಂ ಬರೆಗ ಪರೆದಾಡುತ್ತಲವನಿರ್ದ || ೬ ||

ಇತ್ತಲಾ ಸುಮುಖರು ಸುವರ್ಣದ | ಪುತ್ತಳಿಯ ಚೆಲುವಡೆದ ಕರ್ಕಶ |
ವೃತ್ತಕುಚೆ ವನಮಾಳೆಯೊಳು ರತಿರಾಗಲಂಪಟನು ||
ಚಿತ್ತಜಕ್ರೀಡಾ ಸುಖಾಂಬುಧಿ | ಯುತ್ತರಿಸುತೆದೆ ಮೆಚ್ಚಿದಂದವಿ |
ರುತ್ತಮಿರ್ದನು ಪಗಲಿನೆಣೆವಕ್ಕಿಯವೊಲಾ ನೆಲೆಗೇಂ || ೭ ||

ಬಂದನಾ ಕೌಶಂಬಿ ನಗರ | ಕ್ಕಂದು ನಿರ್ಧನವಾಗಿ ಮಡದಿಯ |
ದಂದುಗದ ದುರ್ನಯವನಱಿದಾ ವೀರದತ್ತಾಖ್ಯಾ ||
ಬಂದು ಸುಮುಖನ ಬೇಡೆ ಹೊನ್ನನು | ತಂದೊಡಿತ್ತಪೆನಲ್ಲದೊಡೆ ಸೆಱಿ |
ಯೆಂದು ನೂಂಕಿಸೆ ಪುಯ್ಯಲಿಡೆ ಜನವೇನುವೆನ್ನದಿರೆ || ೮ ||

ಮನದೊಳಗೆ ಮಿಗೆ ನಾಣ್ಚಿ ನಿಃಶ | ಕ್ತನು ವಿಚಾರಿಸಿ ಮುನಿವುದೆಗ್ಗೆಂ |
ದನುವಡೆದು ಜಿನದೀಕ್ಷೆಗೊಂಡಾ ವೀರದತ್ತಯತಿ ||
ತನುವುಳಿದು ಸುಸಮಾಧಿಯಲಿ ಭೂ | ವಿನುತ ಸೌಧರ್ಮದೊಳು ವಿಭವದಿ |
ಜನಿಸಿ ಚಿತ್ರಾಂಗದ ದಿವಿಜನಾಗಿರ್ದನಿರಲಿತ್ತ || ೯ ||

ವಿದಿತ ರಘುನೃಪಸಖ ಸುಮುಖನಾ | ಸುದತಿ ವನಮಾಲೆಯೊಳು ಕಡುರಾ |
ಗದಲಿರಲು ಸಂಯಮಿಗಳೆಳ್ತರೆ ಚರಿಗೆಗೊಂದು ದಿನ ||
ವಿಧಿಸುಪೂರ್ವಕ ನಿಲಿಸಿ ಹರುಷದಿ | ಸದಮಲಾಹಾರವನು ಕೊಟ್ಟತಿ |
ಮುದದಿ ಧರ್ಮವ ಕೇಳಿ ತಮ್ಮನ್ಯಾಯಕಂಜಿದರು || ೧೦ ||

ಚತುರವಿಧ ದಾನಗಳ ವರಜಿನ | ಪತಿ ಮಹಾಪೂಜೆಗಳ ಮಿಗೆ ನೆಗ |
ಳುತ ಸುಸಂಯಮದಿಂದೆ ವರ್ತಿಸುತಿರೆ ಸಿಡಿಲು ಪೊಡೆದು ||
ಮೃತಿಯನಾಂತವರೀರ್ವರುಂ ಬಂ | ದತುಳ ಜಂಬೂ ದ್ವೀಪ ಭರತ |
ಸ್ಥಿತದ ವಿಜಯಾರ್ಧಾಚಳದ ಹರಿವರ್ಷ ವಿಷಯದೊಳು || ೧೧ ||

ಭೋಗಪುರವೆಂಬುದು ಪೊಳಲು ಬಹು | ಭೋಗಕಾಗರವದಱೊಡೆಯನಾ |
ಭೋಗಪೆಸರಿಂದಂ ಪ್ರಭಂಜನ ಖಚರನವನರಸಿ ||
ಹೂಗಣೆಯನಧಿದೇವಿಯೆನೆ ಸೊಬ | ಗಾಗಿಹಳು ಪೆಸರಿಂ ಮೃಕಂಡು ಸ |
ರಾಗದಿಂದವರ್ಗಗ್ರ ನಂದನನಾದನಾ ವೈಶ್ಯ || ೧೨ ||

ಸಿಂಗಕೇತುವೆನಿಪ್ಪ ನಾಮದಿ | ಪಿಂಗದಿರೆ ಸುಮುಖನು ಬಳಿಕ್ಕಾ |
ತುಂಗ ಕುಚಯಾ ವಿಷಯದೊಳು ವಿಶ್ವಾವಳೆಯ ಪುರವ ||
ಹಿಂಗದಾಳುವ ವಜ್ರಚಾಪ ಖ | ಗಂಗರಸಿಯೆನಿಸಿದ ಸುಮಾಲ್ಯೆಗೆ |
ಮಂಗಳಿಪ ಮಗಳಾಗಿ ವಿದ್ಯುನ್ಮಾಳೆಯೆನಿಸಿದಳು || ೧೩ ||

ಎಸೆವ ಕಡುಮಿಂಚನು ಮನೋಭವ | ಮಸದು ಪೊಂಗಿಸಿದಂತೆ ತನುರುಚಿ |
ಮಿಸುಗೆ ವಿದ್ಯುನ್ಮಾಲೆವೆಸರದು ಸಾರ್ಥವಾಗಿರಲು ||
ಮಿಸುಪ ಭೋಗ ಪುರೇಶ ತೇಜದಿ | ಬಿಸುಗದಿರ ಪಳಿವಂ ಪ್ರಭಂಜನ |
ನೊಸೆದು ತನುಜಗೆ ನಂಪಿನಿಂದಿರೆದಟ್ಟೆ ಕನ್ನೆಯನು || ೧೪ ||

ಕುಡೆ ಮಹೋತ್ಸವದಿಂದ ನಿಬ್ಬಣ | ಸಡಗರದಿ ಬರೆ ವಾದ್ಯರವ ಜಗ |
ದಡಕಿಲದಿರಿಸೆಮಿಗೆ ಸುಲಗ್ನದಿ ವಜ್ರಚಾಪಖಗ ||
ಪೊಡರ್ವ ವಿದ್ಯುನ್ಮಾಲೆ ಕನ್ನೆಯ | ನಡಸಿ ವಿಭವದಿ ಸಿಂಹಕೇತುಗೆ |
ಒಡನೆ ಕೈನೆರೆಯೆದನಾ ಮಂಗಳ ನಿನದವೊಗೆಯೆ || ೧೫ ||

ಆಶೆಯೊಳು ಮನಸಿಜನ ವಿಜಯ ಪ | ತಾಳಿಯೊಳು ಸವಿಸುಶಿಲ ಸುಧೆಯನ |
ನೇಕಪರಿಯಿಂದನುಭವಿಸುತಾ ಸಿಂಹಕೇತುಖಗ ||
ನಾಕಿಗರ ರತಿಸುಖದ ಪಳಿವನ | ದೇಕೆ ಮಿಟಿಮಿಟಿ ಸಗ್ಗವೆನುತ ವಿ |
ವೇಕ ವಿದ್ಯಾಧರನು ಪೂರ್ವಭದ ಪ್ರಣಯದಿಂದ || ೧೬ ||

ಒಂದುದಿನ ಒಪ್ಪುವ ಮನೋಹರ | ನಂದನದ ತಂಗೊಳದ ತಡಿಯರ |
ರಿಂದ ಮಂಟಪದರಳ ಪಸೆಯೊಳು ಕಾಮಕೇಳಿಯಲಿ ||
ಚಂದದಿಂ ದಂಪತಿಗಳಿರಲ | ತ್ತಂದು ಬಾನೊಳು ಸ್ವೈರಚಾರದಿ |
ಬಂದು ಕಂಡನು ವೀರದತ್ತ ಚರಾನಿಮಿಷನವರ || ೧೭ ||

ಕಂಗಳಲಿ ಕಿಡಿಯೊಗುತಲಾ ಚಿ | ತ್ರಾಂಗದಾಮರ ಪೂರ್ವಕೃತವೈ |
ರಂಗಳಿಂದರೀರ್ವರನು ಘರ್ಜಿಸುತ ಪಿಡಿದೈದು ||
ಪೊಂಗಳನು ಬೇಹಾರಕಿತ್ತ | ತ್ತಂಗನೆಯನೆಳಕೊಂಡೆ ಚಿನಿಖಂ |
ಡಂಗಳನು ಕೊರೆಯದೆ ಬಿಡುವೆನೇ ನಿನ್ನನೆಲೆ ಸುಮುಖ || ೧೮ ||

ಎಂದು ಕೋಪದಲೊಯ್ಯುತಿರುಲ | ತ್ತಂದಿನಾ ಕೌಶಂಬಿ ಪುರಪತಿ |
ಸಂದ ಸುಮುಖನ ಸಖನು ರಘುಸಾಗರ ಧರ್ಮದಲಿ ||
ಸಂದು ದೇವತ್ತ್ವವನು ಪಡೆದಿರೆ | ತಂದು ತಾತನ ಪುಣ್ಯವೆನೆ ತಾಂ |
ಬಂದನಾ ಸಮಯದೊಳು ಸೂರ್ಯಪ್ರಭನಿಳಿಂಪೇಂದ್ರ || ೧೯ ||

ಅನಿಮಿಷೋತ್ತಮ ಇದಱ ತೆಱನೇ | ನೆನೆಯಲೇ ಸೂರ್ಯಪ್ರಭಾಮರ |
ಯೆನಲದೆಂ ಹಿಂಭವದ ವಧು ವನಮಾಲೆಯಿವಳಿತ್ತ ||
ಅನೃತ ವಿನಯದಿ ಹರದು ಗೈಯಲು | ಧನವ ನೆನಗಿತ್ತತ್ತಲಳಿಪಿದ |
ಜನವಱಿಯೆ ಖಳನಿವರನು ಮುರಿಯದಿರೆನೆಂದ || ೨೦ ||

ಎನಲೆಲೇ ಚಿತ್ರಾಮಗದಾಮರ | ಮನುಜ ಕೀಟಕವಿವರ ಕೊಲುವುದು |
ನಿನಗೆ ಸಾಹಸವಲ್ಲ ನರಹುಳುವೆವಗವಧ್ಯರವೆ ||
ಮುನಿದುವೇ ಮೃಗವೈರಿಕೊಲುವುದೆ | ವನದ ಹಂದಿಯನಂತುಮಲ್ಲದೆ |
ಮುನಿಸನುಪಶಮಿಪುದು ಮಹೋತ್ಕರಗುಣಿವಿದಱಿಯೆಂದ || ೨೧ ||

ಬಗೆದು ನೋಡುವ [ಡಾ]ರುವಾರಿಗೆ | ಹಗೆಗಳಲ್ಲಾರಾರು ಮತ್ತಾ |
ರಿಗೆ ಕೆಳೆಗಳಲ್ಲಖಿಳ ಜನ್ಮಾಂತರದ ಸಿಲುಕುಗಳಿಂ ||
ಒಗೆದ ರಾಗದ್ವೇಷದಿಂದಾ | ವಿಗೆಯ ಬೇಂಕೆಯೊಳೊಳಗೊಳಗಣು |
ಬ್ಬೆಗದಿ ಬೇವುದು ಹಿತವೆ ನೀನನಭಿಜ್ಞನೆಯೆಂದ || ೨೨ ||

ಎಂದ ಸೂರ್ಯಪ್ರಭನ ವಾಕ್ಪ್ರಭೆ | ಯಿಂದ ಹರದುದು ಮುನಿಸುಗತ್ತಲೆ |
ಅಂದು ಚಿತ್ರಾಂಗದ ತಿಳಿದು ನೀವೆಂದುದೇ ಹಿತವು ||
ಎಂದವರನಾತಂಗೆ ಕೊಟ್ಟೊಲ | ವಿಂದೆ ಪೋದಪನತ್ತಲಿತ್ತಲು |
ತಂದು ಕಾರಣವ ಱಿದು ಚಂಪಾಪುರದ ವನದೊಳಗೆ || ೨೩ ||

ಇರಿಸಿ ಸೂರ್ಯಪ್ರಭನು ಪೋದನ | ವರು ಬನದೊಳಿರಲಿತ್ತ ಚಂಪಾ |
ಪುರವರಂ ಶ್ರೀ ಚಂದ್ರಕೀರ್ತಿ ನೃಪತಿಮರಣಮೈದೆ ||
ವರ ಸಚಿವ ಮಂತ್ರಿಪ್ರಮುಖರಾ | ಧರೆಯನಾಳ್ವರಸಿಲ್ಲದಿರೆ ಸ |
ರ್ವರು ನೆರೆದು ಶೋಕವನುಳಿದು ಕಾರ್ಯವನು ನಿರ್ಧರಿಸಿ || ೨೪ ||

ಪಟ್ಟವರ್ಧನ ಗಜವ ನರ್ಚಿಸಿ | ಬಿಟ್ಟೊಡದು ನಿರ್ವ್ಯಾಜದಿಂದಲೆ |
ನೆಟ್ಟನಾ ವನವೆಯಿದಿ ತುಂಬಿದ ಪೊಂಗಲಶಜಲವ ||
ಪಟ್ಟ ನೀರೆಱದಾತ್ಮ ಹಸ್ತದಿ | ತೊಟ್ಟನವರೀರ್ವರಿಗೆ ಕೊರಳನು |
ಕೊಟ್ಟು ಕೊಂಡೈ ತಂದುದಾ ಪಟ್ಟಣಕೆ ಜನ ನಲಿಯೆ || ೨೫ ||

ಲೀಲೆಯಿಂ ಹರಿಕೇತು ವಿದ್ಯು | ನ್ಮಾಲೆಯೀರ್ವರನಿಳಿಪಿ ತಾ ಸಭೆ |
ಯೊಳಿಯುತ್ಸವದಿಂದ ರಾಜಾಂಗಣದೊಳಾಗಜವು ||
ಮೇಳಿಸಿರೆ ಗುಡಿತೋರಣ ಧ್ವಜ | ಪಾಳಿ ಮಂಗಲ ವಾದ್ಯರವದಿ |
ಗ್ಜಾಲವನು ಪಸರಿಸಲು ಬುಧಸಚಿವ ಪ್ರಮುಖರಂದು || ೨೬ ||

ಹರುಷದಿಂ ಪಟ್ಟಾಭಿಷೇಕವ | ನುರುವಿಭವದಿಂ ಮಾಡೆವಿಬುಧರು |
ಹರಸಿ ಸೇಸೆಯನಿಡಲು ಸರ್ಬರು ಕಾಣಿಕೆಯನಿಕ್ಕಿ ||
ಅರಸನಡಿಗೆರಗಿದರು ಸಚಿವರು | ಕರವ ಮುಗಿದೆಲೆರಾಯ ನಿಮ್ಮಡಿ |
ಯಿರವನಱಿಪುವುದೆಂದು ಬಿನ್ನೈಸಲು ತದವನೀಶ || ೨೭ ||

ದರಹಸಿತಮುಖನಾ ಪ್ರಧಾನಾ | ದ್ಯರ ಕಿವಿಗೆ ಸವಿಯಾಗಿ ನುಡಿದನು |
ಭರತದೀ ವಿಜಯಾರ್ಧ ಹರಿವರುಷದ ವಿಷಯದೊಳಗೆ ||
ಸುರಪುರದ ಸಮಭೋಗಪುರ ಖೇ | ಚರ ಮಹಾರಾಜಂ ಪ್ರಭಂಜನ |
ನರಸಿ ಸುರಸೆ ಮೃಕಂಡುವವರಾತ್ಮಜನು ತಾನೆಂದ || ೨೮ ||

ಎಂದ ತನ್ನೆಲ್ಲಾ ತೆಱನಮೊಲ | ವಿಂದೆ ಪೇಳಲು ಕೇಳ್ದು ಸಂತಸ |
ದಿಂದಲಾದೀಶ್ವರನ ಕಾಲದಿನಾದ ಹರಿವಂಶ ||
ನಂದ ಶೀತಲ ತೀರ್ಥಕರರು | ಳ್ಳಂದು ತನಕಿರ್ದಳಿದುದೀನೃಪ |
ನಿಂದು ಹರಿವರುಷಕ್ಕಧೀಶ್ವರನಾದ ಕಾರಣದಿ || ೨೯ ||

ಇವನ ವಂಶವೆ ತಾನು ಹರಿವಂ | ಶವು ಮೃಕಂಡುವ ತನುಜನದಱಿಂ |
ದಿವನ ಮಾರ್ಕಂಡೇಯನಾಗಿರಲೆಂದುದಂದೆಲ್ಲ ||
ಅವನಿಪತಿ ತಾನಾಗಿ ಈ ಜಗ | ಕಿವನ ಸರಿಯರಸಿಲ್ಲೆನಿಸಿ ರಾ |
ಜ್ಯವನು ಪಾಳಿಸುತಿರ್ದ ಮಾರ್ಕಾಂಡೇಯ ಭೂನಾಥ || ೩೦ ||

ವಿನುತ ಮಾಕಾಂಡೇಯ ಭೂಪನ | ತನುಜನಾ ಹಿಮಗಿರಿ ನೃಪನು ಭೂ |
ವನಿತೆಯೊಡತನವಾಳ್ದನಾತನ ಸುತನು ವಸುಗೀಯು ||
ಎನಿಪ ನರನಾಗಿರ್ದನಾ ಭೂ | ಪನುವಳಿಯಲಂತೈದೆ ಹಲಬರು |
ವನತಿಶಯ ವಿಕ್ರಮರು ರಾಜ್ಯಂಗೈದರರಸುಗಳು || ೩೧ ||

ಮತ್ತಮಾವಂಶದೊಳಮಳನಿ | ಪ್ಪತ್ತನೆಯ ತೀರ್ಥೇಶನುದಿಸಿದ |
ನತ್ತ ಮುನಿಸುವ್ರತರು ಮುಕ್ತಿಗೆ ಸಂದ ಬೆಂಬಳಿಯ ||
ಮತ್ತೆ ತತ್ಕುಲದರಸುಗಳು ಪಲ | ರುತ್ತರಿಸಿ ಯಧಿರಾಜ್ಯ ಲಕ್ಷ್ಮಿಯ |
ನತ್ತ ವಸುವೆಂಬರಸನಾ ರಾಜ್ಯವನು ಪಾಲಿಸುತ || ೩೨ ||

ಪುದಿದ ಪರ್ವತ ನಾರದರ ಯ | ಜ್ಞದ ವಿವಾದದಲನೃತವನು ಪೇ |
ಳಿದ ಕತದಿ ದಿವ್ಯಂಪೊಡೆಯಲೇಳನೆಯ ನರಕಕ್ಕೆ ||
ಅದಯನಿಳಿದನು ತದ್ವಸುವಸುತ | ನುದಿತ ಸುವಸು ಬೃಹದ್ವಸುಗಳಾ |
ಳಿದರವರೊಳಾ ಸುವಸುವಿನ ಸಂತಾನ ಸಂಜಾತ || ೩೩ ||

ಕ್ಷತಮತಿ ಕ್ಷಿತಿನಾಥನಾತನ | ಸುತ ಬೃಹದ್ರತ ಭುಪನವನಿ |
ಸ್ತುತನು ರಾಜಗೃಹವನು ಪಾಲಿಸಿ ಪೋದನಂತವನ ||
ಸುತ ಜರಾಸಂಧನು ಪುರಾತನ | ವಿತತ ಪುಣ್ಯದಿ ಪಡೆದನತಿ ವಿ |
ಶ್ರುತ ತ್ರಿಖಂಡಾಧೀಶ ಪದವಿಯ ಚಕ್ರರತ್ನವನು || ೩೪ ||

ದೇವದಾನವ ಮಾನವರು ತನ | ಗಾವಗಂ ಬೆಸಕೆಱಗೆ ತನ್ನಮ |
ಹಾವಿಭೂತಿಯ ಮದದಿ ಧೀರೋದ್ಧತನು ತಾನಾಗಿ ||
ಆವ ಭೂಚರರಾಯನರೆನಗೆಣೆ | ಯಾವ ಖೇಚರರಾಯರಿದಿರಹ |
ರೀವಿಪುಲ ಭುಜಕೆನುತಲೇ ಜರಾಸಂಧನಿರುತಿಹನು || ೩೫ ||

ಇರೆ ಬೃಹದ್ವಸುವನ್ವಯದ ಪಲ | ಬರು ನೃಪಾಲರುಕಳಿದು ಪೋಗಲು |
ಧರೆಗಧೀಶ್ವರನುದಿಸಿದನು ಯದುವಾತನನ್ವಯವು ||
ಸ್ಫುರಿತ ಯಾದವ ವಂಶವೆನಿಸಿತು | ಧರೆಯೊಳಾ ಯದುನೃಪನ ತನುಜನು |
ನರಪತಿ ಕ್ಷಿತಿಪತಿ ತದುರ್ವರೆಯಾಳ್ದು ಸುಖಮಿರ್ದ || ೩೬ ||

ಕ್ಷಿತಿವಿನುತ ನರಪತಿ ನೃಪತಿ ನಿಜ | ಸುತಗೆ ಶೂರನೃಪಂಗೆ ಅಧಿರಾ |
ಜ್ಯತೆಯ ಯುವರಾಜತೆಯ ಕಿರಿಯ ಕುಮಾರ ವೀರಂಗೆ ||
ಚತುರನಿತ್ತು ಸುದೀಕ್ಷೆಗೊಳಲು | ನ್ನತ ಚರಮ ತನು ಶೂರಸೇನದಿ |
ಕ್ಷಿತಿಪನತಿ ವೈಭವದಿ ರಾಜ್ಯವನಾಳುತೊಂದು ದಿನ || ೩೭ ||

ಧರೆಯೊಳಾ ಸೂರ್ಯಪ್ರಭಾಮರ | ವರನಿನೀ ಹರಿವಂಶವಾಯ್ತೆಂ |
ದಱಿದು ತಾನಾತನ ಹೆಸರೊಳುರು ಸೂರ್ಯಪುರವೆಂಬ ||
ಪುರವನಮರಾವತಿಗೆ ತನ್ನಾ | ವೆರಳಧಿಕವೆನೆ ಬರ್ಮಹರ್ಷೋ |
ತ್ಕರದಿ ನಾನಾ ಶೋಭೆಯಿಂ ವಿರಚಿಸಿದನರ್ತಿಯಲಿ || ೩೮ ||

ಶೂರಸೇನ ನೃಪಾಲ ತಮ್ಮಗೆ | ವೀರಸೇನಗೆ ಮಧುರೆಯನು ಕೊ |
ಟ್ಟಾ ರುಚಿರತರ ಸೂರ್ಯಪುರದೊಳು ಶಕ್ರ ಸಮನಿಹನು ||
ವೀರಗಾ ಜಯೆಯೆಂಬರಸಿ ಗಾಂ | ಧಾರಿ ಶೂರನೃಪಂಗೆ ಕುಲವಧು |
ಮಾರಕೇಳಿ ವಿನೋದದಲಿ ಸುಖವಿರ್ದರವರಿರಲು || ೩೯ ||

ಕೃಷ್ಣವೇಣಿಗೆ ಪೆಂಪಿನಂಧಕ | ವೃಷ್ಣಿ ಗಾಂಧಾರಿಣಿಗೆ ನರಪತಿ |
ವೃಷ್ಣಿ ವೀರನ ಜಯೆಗುದಿಸಿದರು ಲಕ್ಷ್ಮಿಕುಲವನಿತೆ ||
ವಿಷ್ಣುಗಾದವೊಲಾದಳಂಧಕ | ವೃಷ್ಣಿಗರಸಿ ಸುಭದ್ರೆನರಪತಿ |
ವೃಷ್ಣಿಗಾ ಪದ್ಮಾವತಿಯು ಹರಗುಮೆ ದೊರಕಿದಂತೆ || ೪೦ ||

ಘನಸಮುದ್ರ ವಿಜಯನು ವಕ್ಷೋ | ಭನು ಬಳಿಕ್ಕಾಸ್ತಿಮಿತ ಸಾಗರ |
ಜನಪನಾ ಹಿಮವಂತನೊಪ್ಪುವ ವಿಜಯನಚಲ ನೃಪ ||
ವಿನುತ ಧಾರಣ ಪೂರಣರು ಪೆಂ | ಪೆನಿಸುವಭಿನಂದನನು ವಸುದೇ |
ವನು ಸುಭದ್ರೆಗೆ ಸುತರು ಕೊಂತಿಯು ಮಾದ್ರಿ ತನುಜೆಯರು || ೪೧ ||

ಗಿರಿಗಳಿರಲಾ ಮಣ್ಣಡಿಯೊಳೆಂ | ದಿರದೆ ಬಂದಾ ಕೂರ್ಮ ಶೇಷಂ |
ಬೆರಸಿ ದಿಗ್ಗಜರಾಜಿಯಂತೀರೈದು ನೃಪರೂಪ ||
ಧರಿಸಿದಂತೊಪ್ಪಿದರು ನಾಭಿಗೆ | ಸರಿಯೆನಿಸಿದ ಸಮುದ್ರವಿಜಯಂ |
ಗರಸಿ ಮರುದೇವಿಗೆ ಸುದೃಷ್ಟಿ ಶಿವದೇವಿಯೊಪ್ಪಿದಳು || ೪೨ ||

ಆ ಸಮುದ್ರವಿಜಯಾ ಧರಾಧಿಪ | ನಾ ಸಿರಿಗೆ ಸುರಪತಿಗೆ ಭೀರತೆ |
ನಾಸಮುದ್ರವು ಚೆಲುವಿಗೆಳೆವೆಂಡಿರು ನಡೆಗೆ ಬುಧರು ||
ನೇಸರುತ್ಕಟ ತೇಜದೇಳ್ಗೆಗ | ಮಾಸುರಾದ್ರಿ ಪೊದಳ್ದ ಜಾಗ |
ಕ್ಕಾ ಸುರದ್ರುಮ ಸೋಲ್ವುದೆಂಬ ಪೊಗಳ್ತೆಗಿಂಬಾದ || ೪೩ ||

ಸುರನೆ ಶಿವದೇವಿಯ ರಮಣನನು | ಜರಿಗೆ ವಸುದೇವಾಂಕ ನಣ್ಣಂ |
ದಿರಿಗೆ ಸೊಗಯಿಪರಾಧೃತೀಶ್ವರಿಯುಂ ಸ್ವಯಂಪ್ರಭೆಯುಂ ||
ವರ ಸುಸೀಮೆಯುಮಾ ಪ್ರಭಾವತಿ | ತರದಿ ಕಾಳಿಂದಿನಿಯು ಸುಪ್ರಭೆ |
ತರುಣಿ ಸೀತೆಯು ಪ್ರಿಯ ವಚನೆಯೆಂಬಗ್ರ ಮಹಿಷಿಯರು || ೪೪ ||

ತರಣಿಯಿಂ ಕಮಳಿಣಿಗೆ ನಗೆಮಿಗೆ | ಹರುಷ ಸೊಬಗು ಶ್ರೀಯು ಪುಟ್ಟಿದ |
ತೆಱದಿ ನರಪತಿವೃಷ್ಣಿಯಿಂ ಪದ್ಮಾವತೀಸತಿಗೆ ||
ತರದಿ ನೋಳ್ಪೆಸೆ ವುಗ್ರಸೇನನು | ದೊರೆಯನಾ ತ್ರೀದೇವಸೇನನು |
ವರಮಹಾಸೇನನು ಸುಗಾಂಧಾರಿಯರು ಜನಿಸಿದರು || ೪೫ ||

ಅತ್ತಲಾ ಮಧುರಾ ಪುರವನಾ | ಳುತ್ತಮಿರ್ದ ವೀರ ನೃಪತಿಯು |
ಇತ್ತಲೊಪ್ಪುವ ಸೂರ್ಯಪುರವರ ಶೂರ ಭೂಪತಿಯು ||
ಪೆತ್ತ ನರಪತಿ ವೃಷ್ಣಿಗಮ್ಮ | ತ್ತಿತ್ತಲಂಧಕವೃಷ್ಣಿಗಂ ಪದೆ |
ದಿತ್ತು ರಾಜ್ಯದ ಸುಪ್ರತಿಷ್ಠ ಯತೀಂದ್ರರಿಂದವರು || ೪೬ ||

ಸಕಲಜೀವಂಗಳಿಗೆ ಹಿತನುತ | ಸುಖವೆನಿಪ ಧರ್ಮವನು ಕೇಳ್ದಾ |
ವಿಕಟಸಂಸಾರಕ್ಕೆ ಪೇಸಿ ಜಿನೇಂದ್ರ ರೂಪಾಂತು |
ಪ್ರಕಟಗುಣಿಗಳು ನೆಗಳ್ದರಭಿಮತ | ಮಕರ ಕೇತನ ಸೂರ ಯತಿಪತಿ |
ಸಕಲ ಕರ್ಮವ ಕೆಡಿಸಿ ಮುಕ್ತಿಪ್ರಾಯೆಯನಪ್ಪಿದನು || ೪೨ ||

|| ಅಂತು ಸಂಧಿ ೧೧ಕ್ಕಂ ಮಂಗಳ ಮಹಾ ||