ಸಂಧಿ ೧೩

ಸುಪ್ರತಿಷ್ಠ ಮುನೀಂದ್ರರಲ್ಲಿ ಜ | ಗ ಪ್ರಸಿದ್ಧನು ತನ್ನ ಭವವಸು |
ತಪ್ರವೇಕರಭವ ಪ್ರವೇಕರ ಭವವನಂದಕವೃಷ್ಣಿ ಕೇಳಿದನು || ಪಲ್ಲ ||

ಕೇಳಲೇ ಮಾಗಧ ಧರಿತ್ರೀ | ಪಾಲ ಅಂಧಕವೃಷ್ಟಿ ನೃಪತಿ ವಿ |
ಶಾಲ ಸುಖನಿರೆ ಗಂಧಮಾದನ ಗಿರಿಯ ಶಿಖರದಲಿ ||
ಕಾಲಹರನಾಯೋಗಿ ಯೋಗದಿ | ಮೇಳಿಸಿರಲಾ ಸುಪ್ರತಿಷ್ಠರು |
ಪೇಳಲೇನಾ ಜ್ಯೋತಿರಮರ ಸುದರುಶನನು ತನ್ನ || ೧ ||

ಲೀಲೆಯಿಂತೊಳಲುತಿರಲಲ್ಲಿಯೆ | ಕೀಲಿಸಿತು ಸುವಿಮಾನವಾಗಳು |
ನೂಲದಿಳೆಗಿಳಿತಂದು ಕಂಡತಿ ಕೋಪದಿಂದಾತ ||
ವ್ಯಾಲತರ ಗೋರೋಪಸರ್ಗವು | ಪೇಳಲೇನೆಸಗಿದೊಡಚಳಗೆ ವಿ |
ಶಾಲ ಕೇವಲ ಬೋಧವುದಯಿಸಿ ತಾಮುನೀಂದ್ರರಿಗೆ || ೨ ||

ಉದಯಿಸಲು ಕೇವಲ ಸುಪೂಜೆಗೆ | ತ್ರಿದಶಪತಿ ಸಪ್ತಾಂಗ ಸೈನಿಕ |
ಪದವಿಯಲಿ ಬರಲಿತ್ತಲಂಧಕವೃಷ್ಟಿಯುಂ ತನ್ನ ||
ಪದಪಿನಿಂ ಸತಿಸುತರ ಸಹ ಸ | ಮ್ಮುದದಿ ಬಂದಾ ಜಿನರ ಬಲಗೊಂ |
ಡೊದವಿದತಿ ಭಕ್ತಿಯಲಿ ಪೂಜಿಸಿ ನುತಿಸಿ ವಂದಿಸಿದ || ೩ ||

ಬಳಿಕ ತಂತಂ……. | … … ಲು ಆತನೆ ಸುದರುಶನ |
ನಳವಿಗಳಿದತಿಭಕ್ತಿಯಿಂ ಬಂದಳ್ತಿಯಿಂದೆಱಗಿ ||
ಮಲರಹಿತ ಜಯ ಜಯ ಮಹಾಗುಣ | ನಿಳಯ ಜಯ ಜಯ ದೇವ ಪತಿನತ |
ಚಲನ ಜಯ ಜಯ ಸುಪ್ರತಿಷ್ಠನೆ ಜಯಜಯೆನುತಿರ್ದ || ೪ ||

ಎಂದೊಡಂಧಕವೃಷ್ಣಿ ಕಂಡು ಜಿ | ನೇಂದ್ರ ಬೆಸಸಿ ಜ್ಯೋತಿರಮರನು |
ಬಂದು ಘೋರತರೋಪಸರ್ಗವನೇಕೆ ಮಾಡಿದನು ||
ಇಂದು ತಾನೀಗಳೆ ನಿಮಗೆ ಕೂ | ರ್ತಂದವೇನೆನೆ ತನ್ಮುನೀಶ್ವರ |
ರೆಂದರೆಲೆ ನೃಪ ನವಗವನೆ ಪರಮೋಪಕಾರಿಯಲ || ೫ ||

ಕನಕ ಪಾಷಾಣವನು ಪೀಡಿಸಿ | ಕನಕವನೆ ಮಾಡಿದೊಡವನೆ ನಿ |
ಷ್ಠನೆ ಅದನು ಕೇಳರಸಯಿತ್ತ ಕಳಿಂಗ ವಿಷಯದೊಳು ||
ವಿನುತ ಕಾಂಚೀಪುರದೊಳಿಹ ಪರ | ದನು ಸುದತ್ತನು ಸೂರದತ್ತನು
ಧನವಗಳಿಸುವ ಬುದ್ಧಿಯಿಂದವರೀರ್ವರೊಂದಾಗಿ || ೬ ||

ದೆಸೆದೆಸೆಗೆ ಪರದಾಡೆ ಗಳಿಸಿದ | ವಸುವೆರಸಿ ನಿಜಪುರವನೈತರು |
ತಸುಗೆ ವನದೊಳು ನಿಂದು ಸುಂಕವ ತೆಱುವೊಡು ಱೆ ಬೆದಱೆ ||
ಉಸುರ ಬಿಡಲಾರದೆ ಬಳಿಕ್ಕವ | ರಸುವ ಬಿಡುವಂತಾದನವನಿ |
ರ್ವಿಸುವ ಮೆಳೆಗಳ ಹೊದಱಳಡಗಿಸಿ ಹೊಕ್ಕರಾಲಯವ || ೭ ||

ಪುರವನವರತ್ತೈದಲಿತ್ತಾ | ಪುರದ ಶೌಂಡಿಕನೋರ್ವ ಮದ್ಯವ |
ಪಿರಿದು ಪೆಚ್ಚಿಪ ಸೊಕ್ಕು ಮದ್ದುಗಳರಸುತಾವನಕೆ ||
ಇರದೆ ಬಂದಾ ನಾರು ಬೇರನು | ಬರದಿನಗಳುತಲವರು ಮಡಗಿದ |
ವರರತುನ ಧನಗಳನು ಕಂಡವನೆತ್ತಿಕೊಂಡೊಯ್ಯೆ || ೮ ||

ಸೂರದತ್ತ ಸುದತ್ತರಾ ಕಾಂ | ತಾರದೊಳು ಪೂಳ್ದೊಡವೆಗಾಣದೆ |
ಭೋರೆನಲು ಬಿಸುಸುಯ್ದಡವಿ ಘೀಳಿಡಲು ಗೋಳಿಟ್ಟು ||
ಘೋರ ರೌದ್ರವನೆತ್ತಿಕೊಂಡವಿ | ಚಾರಿಗಳು ತಾಂ ತಮ್ಮನಂಬದೆ |
ಮಾರಿಮಸಗಿದ ತೆಱದಿನೀರ್ವರು ನೀನು ತಾನೆಂದು || ೯ ||

ಬಡಿಗಳಿಂ ಬಡಿದಾಡಿ ಮಂಡೆಗ | ಳೊಡೆದು ಕೈಕಾಲ್ಮುರಿದು ಭೋಂಕನೆ |
ಮಡಿದು ಮೊದಲಿನ ನರಕಕೀರ್ವರುಮಿಳಿದು ಹಣೆದಾಡಿ ||
ಅಡಸಿದಾಯುವ ಕಡಲನೊಂದನು | ಕಡಿದು ಬಂದೀ ಭೂಮಿಯೊಳು ಬೆಂ |
ಗೊಡದ ತಗರೆರಡಾಗಿ ತಮ್ಮೊಳು ವೈರದಿಂ ಕಾದಿ || ೧೦ ||

ಅಳಿದು ಗಂಗಾತೀರದಲಿ ಕಡು | ಬೆಳೆದ ಗೂಳಿಗಳಾಗಿ ಪೊರ್ದೊಡ |
ನಳಿದು ಸಮ್ಮೇದಾದ್ರಿಯೊಳು ಕೋಡಗಗಳೆರಡಾಗಿ ||
ಸಿಲೆಯೊಳಿರ್ದಿನಿತುದಕಕಾಗಿಯೆ | ಮುಳಿದು ತಮ್ಮೊಳು ಕಾದಿ ಗಾಯದ |
ಲಳಿದುದೊಂದು ಬಳಿಕ್ಕವಾನರನೊಂದು ಗಾಯದಲಿ || ೧೧ ||

ಮಿಗೆ ಹೊರಳುತಿರೆ ಸುರಗುರುವು [ತಾಂ] | …………………… |
ಗಗನದಿಂದಿಳಿತಂದು ಕಪಿಯಾಸನ್ನ ಭವ್ಯತೆಯ ||
ಒಗೆದವಧಿಯಿಂದರಿತು ತಜ್ಜೀ | ವಗೆ ಅಣುವ್ರತವಿತ್ತು ಉಣಿಸೊಡ |
ಲುಗಳ ತೊಱೆಯಿಸಿ ಪಂಚಮಂತ್ರ ದಯೆಗೆಯಿದು ಹೋಗೆ || ೧೨ ||

ಅದನೆ ಪಿಡಿದಾ ಕಪಿಯಳಿದು ತಾಂ | ಮೊದಲ ಸ್ವರ್ಗದೊಳುದಿಸಿ ಚಿತ್ರಾಂ |
ಗದ ನೆನಿಪ ಸುರನಾದನೆನೆ ಜಿನಮತದೊಳೆಸಗಿದಗೆ ||
ಸದುಗತಿಯದೇನರಿದೆ ಚಿತ್ರಾಂ | ಗದನೆ ಕಡೆಯೊಳು ಬಂದುವೀ ಭರ |
ತದ ವಿನೀತಾಖಂಡದೊಳಗೆ ಕಳಿಂಗ ವಿಷಯದೊಳು || ೧೩ ||

ನೆಗಳ ಕಾಂಚೀಪುರದ ಜಿತಸೇ | ನಗೆ ಸುಭದ್ರೆಗೆ ಪಟ್ಟಮಹಿಷಿಗೆ |
ಮಗ ಸುದಾತ್ತ ಸಮುದ್ರವಿಜಯ ಸುಮಂಡಲೇಶ್ವರನು ||
ಸುಗುಣಿ ತಾನಾಗಿರ್ದುಕಾರ್ಬರೆ | ನೆಗೆದ ಮೊಳಗಿನ ಧನಿಗೆ ನೆರೆದ |
ಚ್ಚುಗದಿ ಬನದೊಳು ಪೊರುವ ಶಾಖಾಮೃಗಗಳನು ಕಂಡ || ೧೪ ||

ನೋಡಲೊಡನೆ ಭವಸ್ಮರಣೆ ಮಿಗೆ | ಜೋಡಿಸಲು ಭವವ ಱಿದು ತೊಱೆದೀ |
ಡಾಡಿ ರಾಜ್ಯವನೆಯಿದೆ ಜಿನದೀಕ್ಷೆಯ ಧರಿಸಿ ನಡೆದು ||
ಕೂಡೆ ಸುಸಮಾಧಿಯಲಿ ಮುಡುಪಿದ | ರಾಡಲೇನಹಮಿಂದ್ರನಾದರು |
ರೂಢಿಯಿಪ್ಪತ್ತೆಂಟುಕಡಲಾಯುವ ಸುಖದಿನುಂಡು || ೧೫ ||

ಬಂದು ಪೌದನಪುರದ ಸುಸ್ಥಿರ | ನೆಂದೆನಿಪ ಭೂಪನ ಮಡದಿ ಪೆಸ |
ರಿಂದ ಲಕ್ಷ್ಮಣಿಯವರಿಗಾತ್ಮ ಜ ಸುಪ್ರತಿಷ್ಠನೃಪ ||
ಎಂದೊಗೆದು ವೈರಾಗ್ಯದಲಿ ತಪ | ದೊಂದಿ ಘಾತಿಯನಿಕ್ಕಿದೆವು ನಾ |
ವಂದಿನಾ ಕಲಿ ಸೂರದತ್ತನು ಭೂಪ ಕೇಳೆಂದ || ೧೬ ||

ಹರಣವಳಿದು ಸುದತ್ತಚರ ವಾ | ನರನು ಸಂಸೃತಿಗಡಲ ಸುಳಿಯೊಳು |
ತಿರಿತರುತಲಾ ಸಿಂಧುತೀರದ ಋಷಿ ಮೃಗಾಯಣಗೆ ||
ಗೊರವಿಸತಿ ಸುವಿಶಾಲೆಯೆಂಬಳ | ವರಿಗೆ ಗೌತಮನೆಂಬ ಸುತನಾ |
ಗಿರುತ ತಪವಿರ್ದನಾ ಪಂಚಾಗ್ನಿ ಮಧ್ಯದೊಳು || ೧೭ ||

ಪೊರೆದ ಸುತಪಸ್ಸಿರೆಯೆ ಕರ್ಮವ | ನುರುಪುವುದು ಕಡಿದೋಡಿಹುಳ್ಳಿಯ |
ನುರುಪಿದೊಡೆ ಹುಳು ಸಾವುದಲ್ಲದೆ ಸದೆಯನೆದೆಮೆಚ್ಚಿ ||
ಕರುಣಹೀನನು ಮಡಿದು ಜ್ಯೋತಿ | ಷ್ಕರೊಳು ಸುದರುಶನಾಖ್ಯನಾಗಿ |
ರ್ದಿರುತ ಪೂರ್ವದ ವೈರದಿಂದವನೀತನಿದು ಗೆಯಿದ || ೧೮ ||

ಎನೆ ಸುದರ್ಶನದೇವ ನಿಜಭವ | ವನು ತಿಳಿದು ಸುದರ್ಶನನಾದನು |
ವಿನುತ……………ಕೇಳ್ದು ಕೈಮುಗಿದು ||
ಜಿನಪ ಬೆಸಸೆನ್ನಯ ಭವವನೆಮ | ದೆನಲು ಕೇಳ್ಕೌಶಂಬಿ ವಿಷಯದ |
ವಿನುತ ಸಾಕೇತನವನಾಳ್ವನನಂತವೀರ್ಯ ನೃಪ || ೧೯ ||

ವರದನಿಹನು ಜಿನೇಂದ್ರದತ್ತನು | ಪುರದೊಳಲ್ಲಿ ಸುದಾನ ತತ್ಪರ |
ನುರು ಜಿನೇಶ್ವರ ನಿತ್ಯಪೂಜೆಗೆ ಹತ್ತು ಹೊಂಗಳನು ||
ನಿರುತ ಅಷ್ಟಮಿಗಿಪ್ಪತನುವದ | ಱೆರಡು ಮಡಿಯನಮಾಸೆಯಳಿಯದ |
ಱೆರಡು ಮಡಿಯನು ಹುಣ್ಣಿಮೆಯಲಿರುತಿಹನು ಸುಖದಿ || ೨೦ ||

ಒಂದು ದಿವಸ ಜಿನಾರ್ಚನೆಗೆ ಪೋ | ಪಂದು ಕತದಿ ಜಿನೇಂದ್ರದತ್ತನು |
ಯೆಂದಿನೀಪರಿ ದಾನದರ್ಥವ ಲೆಕ್ಕಗಳ ಮಾಡಿ ||
ಅಂದು ಹನ್ನೆರಡಬ್ದತನಕೊಲ | ವಿಂದೆ ಸಖನಹ ರುದ್ರದತ್ತನ |
ಮಂದಿರಕೆ ಕರೆಸಿದನು ಕೊಟ್ಟನು ಕೊಡುತಿರಿಂತೆಂದು || ೨೧ ||

ನಂಬಿವನಯಾತ್ರೆಗೆ ತೆರಳಿದನು | ಬೆಂಬಳಿಯಲಾ ಧನವನಾ ವಿ |
ಪ್ರಂ ಬಯಸಿ ದೇವಸ್ವವೆನ್ನದೆ ದುರ್ವ್ಯಸನಿ ತಿಂದು ||
ತಾಂ ಬಳಿಕ ಹಱಿಗೆಟ್ಟು ಕಳುತಿರ | ಲೆಂಬೆನೆಂತೋ ತಳಾರರವನ |
ಲುಂಬ ಬಿಡ[ದವನ]ಟ್ಟಿದರು ಪಾರ್ವನನು ಕೊಲಲಂಜಿ || ೨೨ ||

ವನವನೈದಿಯುಳೂಕ ಮುಖವೆಂ | ದೆನಿಪ ಶಬರರ ಶಿಬಿರವನು ವೊ |
ಕ್ಕನು ಕಳನು ಕಂಕಾಳನೆನಿಸುವ ಬೇಡನಾಳಾಗಿ ||
ವಿನುತ ಸಾಕೇತನ ಪುರದ ಗೋ | ವನು ಕವರ್ತೆಗೊಳಲ್ಕವರು ತ |
ನನ್ನೆವಧಿಸಿದರು ಇಳಿದನವನೇಳನೆಯ ನರಕಕ್ಕೆ || ೨೩ ||

ಕುಡಿದನಾ ಮೂವತ್ತ ಮೂರಂ | ಕಡಲಿನಾಯುವ ದುಃಖದಿಂ ಪೆ |
ರ್ಗಡಲಿನಲ್ಲಿ ಮಹಾತಿಮಿಯು ತಾನಾಗಿ ಪಾಪವನು ||
ಪಡೆದಳಿದುದಾಱನೆಯ ನರಕದ | ಕಡಲನಿಪ್ಪತ್ತೆರಡ ದುಃಖದಿ |
ಕುಡಿದು ಬಂದಾ ಪಾರ್ವತಿ ಮಹಾಮತ್ಸ್ಯನಾಗೊಗೆದ || ೨೪ ||

ದುರಿತಭರದಳಿದೈದನೆಯ ಪೆ | ರ್ನರಕದೊಳು ಹದಿನೇಳು ಸಾಗರ |
ಪರಿಮಿತೋಪಮದಾಯುಮಂ ದುಃಖದಿ ಸವಿದು ಬಂದು ||
ಕರಿರಿಪುವು ತಾನಾಗಿ ಗಳಿಸಿದ | ದುರತದಿಂ ಪಂತ ಪ್ರಭೆಯೊಳ |
ಚ್ಚರಿಯ ದುಃಖದೊಳಾಯುಗಡಲೀರೈದನೀಸಿದನು || ೨೫ ||

ದಿಷ್ಟಿ ವಿಷಧರನಾಗಿ ಪಾಪದ | ಬೆಟ್ಟವನು ಹೊತ್ತಿಳಿದು ದುಃಖದಿ |
ನೆಟ್ಟ ನೇಳಬ್ದಿಯನು ಸುವಿದಾವಾಳುಕ ಪ್ರಭೆಯಿಂ ||
ದುಷ್ಟಮತಿ ಶಾರ್ದೂಲನಾಗಿಯೆ | ಹುಟ್ಟಿ ಧರೆಯೊಳು ದುರಿತದೊದವಿಂ |
ಬಿಟ್ಟೊಡಲಲೆರಡನೆಯ ನರಕಕ್ಕಿಳಿದು ದುಃಖದಲಿ || ೨೬ ||

ಕುಡಿದು ಮೂರು ಸಮುದ್ರದಾಯುವ | ನೊಡನೆ ಬಂದಿರದಿತ್ತ ಪರ್ದಾ |
ಗೊಡರಿಸಿದ ದುರಿತದಿ ಮಡಿದು ರತ್ನ ಪ್ರಭೆಯ ಪೊಕ್ಕು ||
ಕಡಲನೊಂದನೆ ದಾಂಟಿ ಬಂದೀ | ಪೊಡವಿಯೊಳೆ ಭೇರುಂಡನಾಗಿ |
ರ್ದೊಡಲ ಕುಯೋನಿಯೊಳು ತಿರ್ರ‍ನೆ ತಿಱಿದು ಬಳಿಕ || ೨೭ ||

ಅಡಸಿದುಪಶಮ ಶೇಷದಿಂದೀ | ಪೊಡವಿಯೊಳು ಹಸ್ತಿನಪುರಕೆ ಜಯ |
ನೊಡೆಯನಾ ನಾಗರಿಯೊಳಗಿಹನಾ ಗೌತಮನ್ವಯನು ||
ಕಡು ಧನಿಕನು ಕಪಿಷ್ಟನಾತನ | ಮಡದಿ ಪೆಸರೊಳಸುಂದರಿಯು ದೊರೆ |
ವೊಡೆದವರಿಗಾ ರುದ್ರದತ್ತ ಚರನು ತನುಜನಾಗಿ || ೨೮ ||

ಜನದಿನಿ ಶ್ರೀಗೌತಮನು ತಾ | ನೆನಿಸಿ ಬೆಳೆವುತ್ತಿರಲು ಜನನೀ |
ಜನಕರೆಲ್ಲರುವಳಿದರಾತನಕರ್ಮವಿನ್ನೆಂತೋ ||
ತನಗೆ ಬಳಿಕಿರಲಿಂಬುಗಾಣದೆ | ಮನಮಱುಗಿ ಮಲ್ಲೆಯವ ಸಾರ್ದುಣೆ |
ಸಮಪಡೆಯದಾ ತಿಪ್ಪೆಯೆಂಜಲನಾಯ್ದು ತಿನುತಿರಲು || ೨೯ ||

ಪುರುಷರೂಪಿನ ಹಂದಿಯಿವನೆಂ | ದಿರದೆ ಜನವೆಬ್ಬಟ್ಟಿ ಕಂಗೆ |
ಟ್ಟುರು ವಿಪಿನವನು ಹೊಕ್ಕು ಮೃಗವೆನೆ ಜೀವಿಸುತ್ತಿರಲು ||
ಗುರುಗಳೆಯಿದೆ ಸಮುದ್ರಸೇನರು | ಚರಿಗೆಯೇಳ್ತರೆ ವಿಪಿನದಿಂ ಭಾ |
ಸುರಪುರಕೆನೀ ಶ್ರೀಗೌತಮನು ಕಂಡನಂದವರ || ೩೦ ||

ಕರಬಡವನೆನ್ನಿಂದ ಮೆಂದತಿ | ಕರುಣದಿಂದಾ ಮುನಿಯ ಬೆನ್ನನೆ |
ಬರೆವಯೀ ಶ್ರವಣಾಖ್ಯವೈಶ್ಯನು ನಿಲಿಸಿ ಗುರುಗಳನು ||
ಗುರುಗಳವಧಿ ಜ್ಞಾನದಿಂ ನಿ | ರ್ಧರಿಸಿ ನೀ ಶ್ರೀಗೌತಮನು ಬಂ |
ಧುರದ ಧರ್ಮಕೆ ಬಹೆನೆನುತ ದಯೆಗೆಯ್ದಿರಿಸಿ ಹೋಗೆ || ೩೧ ||

ತವಗೆ ಬಡಿಸಿದ ನಲ್ಲುಣಿಸ ನೀ | ರವಗೆ ಕಳುಹಿದೊಡಿಂದು ಕಾಣದ |
ಸವಿಯುಣಿಸನೊಸೆದುಂಡು ಹರುಷದಿ ಮುನಿಯ ಬೆಂಬಿಡದೆ ||
ತವಕದಿಂ ನಿಮ್ಮತೆ ಮಾಡೆ | ನ್ನುವನೆನಲು ನಿಲ್ಲನ್ನೆವರವೆಂ |
ದವರವನ ಪಲದಿವಸವೀಪರಿ ಪೊರೆದರನುಪಮರು || ೩೨ ||

ಪಲದಿವಸವಿಂತಿರುತಲಾ ಗುರು | ಗಳ ನಿರೂಪದ ನಂಬಿ ನಡೆವುತ |
ತಳೆದ ಮರು ಜಿನದೀಕ್ಷೆಯನು ನಿರ್ಮಲರ ಸಂಸರ್ಗ ||
ಇಳೆಯೊಳಾರಿಗೆ ಹಿತವನೀಯದು | ಬಳಿಕ ಸಂಯಮದಿಂ ನಡೆದುಪ |
ಜ್ಜಳಿಪ ಪಲವೃದ್ಧಿಯನು ಗೌತಮ ಮುನಿವೆಸರನಾಂತ || ೩೩ ||

ಸಂದ ಬಳಿಕ ಸಮುದ್ರಸೇನ ಮು | ನೀಂದ್ರ ತಾನಹಮಿಂದ್ರನಾದನು |
ಮಂದರೋಪಮ ಧೈರ್ಯನೀ ಗೌತಮ ಮುನೀಶ್ವರನು ||
ಸಂದು ನವಗ್ರೆವೇಯಕದೊಳಹ | ಮಿಂದ್ರನಾದನು ಜಿನತಪದೊಳೊಲ |
ವಿಂದಗುರು ಪೇಳ್ದಂತೆ ನಡೆದವರಿಗರಿವೆ ಸದ್ಗತಿಯು || ೩೪ ||

ವಿನುತನಿಪ್ಪತ್ತೆಂಟು ಸಾಗರ | ವೆನಿಸಿದಾಯುವ ನತಿಸುಖದಿ ತಾ |
ನನುಭವಿಸಿ ಬಂದಿಲ್ಲಿ ನೀನಾದೆಯೆಲೆಭೂಪ ||
ಎನಲು ಅಂಧಕವೃಷ್ಣಿ ಹರುಷಾ | ನನನು ಜಿನಪತಿಗೆಱಗಿ ನನ್ನಯ |
ತನುಜರುದಿತ ಭವಂಗಳನು ತಿಳಿಯಿಪುದು ತನಗೆಂದು || ೩೫ ||

ಅರಸ ಕೇಳೀ ಭರತದಾರ್ಯೆಯೊ | ಳಿರುತಿಹುದು ತಾಂ ಮಲಯದೇಶದೊ |
ಳುರುನಗರಿ ಭದ್ರಿಳವದಕ್ಕಧಿನಾಥ ಮೇಘರಥ ||
ವರಸುಭದ್ರೆಯ ಮಡದಿ ನೃಪತಿಗೆ | ಸುರಸದೃಢರಥ ಪುತ್ರನು ವಣಿಗ್ |
ವರನು ಧನದೇವಾಂಕನಾಥನ ಮಡದಿ ನಂದಯಶೆ || ೩೬ ||

ತನುಜರಾ ಧನ ದೇವ ಧನಪಾ | ಲನುಬಳಿಕೆ ಜಿನದೇವ ಜಿನಪಾ |
ಲನುದಲರುಹದ್ದಾಸ ನರುಹದ್ದತ್ತ ಜಿನದಾಸ ||
ಎನಿಸುವಾ ಪ್ರಿಯಮಿತ್ರನೆಸೆವವ | ನನುಜ ಧರ್ಮರುಚೀಯು ಬಳಿಕವ |
ರನುಜೆಯರು ಪೆಂಪಿನ ಸುದರ್ಶನ ಜೇಷ್ಠೆಯೆಂಬವರು || ೩೭ ||

ಸುಖದಲಿರುತಿಹಲಾಪುರದ ವಿಪಿ | ನಕೆ ದಿಗಂಬರರೈತರಲು ಕಡು |
ಭಕುತಿಯಿಂದಾ ಮೇಘರಥ ಧನದೇವಸಹ ಹೋಗಿ ||
ಸಕಲಧರ್ಮವ ಕೇಳ್ದುವಿರತಿ | ಪ್ರಕಟನತಿ ನೃಪದೀಕ್ಷೆ [ಯನಾಂತು] |
………………………………. || ೩೮ ||

ನಂದಯಶೆ ತನ್ನೀರ್ವರೊಪ್ಪುವ | ನಂದನೆಯರೊಡನಾರ್ಯಕೆಯರಿಂ |
ದಂದು ದೀಕ್ಷೆಯನಾಂತಳತ್ತಲು ಮೇಘರಥಯತಿಪ ||
ಸಂದ ಧನದೇವಾಖ್ಯಮುನಿಪನು | ಬಂದು………………. |
ಸಂದರಾತನ ದೇವಯತಿ ಸುತರಾದಮುನಿವರರು || ೩೯ ||

ಆಗಿರಿಯೊಳಮಳಿನರವರುತಾಂ | ಯೋಗದಿಂದಿರೆ ನಂದಯಶೆ ಬಂ |
ದಾಗುರುಗಳೊತ್ತಿನಲಿ ಕುಳ್ಳಿರ್ದೊಂದು ಮೋಹದಲಿ ||
ಆ ಗುರುಗಳಿಂ… ಜನವುಂ | ಮೇಘಣಾಭವದೊಳಗೆನಗೆ ಸುತ |
ರಾಗಲೆನೆ ತತ್ಸುತೆಯರವರೊಡವುಟ್ಟಿಧರೆಯಹೆವು || ೪೦ ||

ಎಂದು ತಾವು ನಿದಾನಿಸಿದರವ | ರಂದು ಸುಸಮಾಧಿಯಲಿ ಗುರುಗಳು |
ಸಂದು ಆನತಕಲ್ಪದೊಳು ಶಾಂತಕ ವಿಮಾನದಲಿ ||
ಬಂದವರು ದೇವರ್ಕಳಾದರು | ನಂದಯಶೆ ಮೊದಲಾದ ಮೂವರು |
ಕುಂದದತಿ ತಪಗೈದು ತತ್ಕಲ್ಪದಲಿ ಹುಟ್ಟಿಹರು || ೪೧ ||

ವಿನುತ ಸೌಖ್ಯವ ನುಂಡುವಂದೆಲೆ | ಜನಪ ನಂದಯಶೋ ವಧೂಚರ |
ನಿನಗರಸಿಯು ಸುಭದ್ರೆಯಾಗಲು ನಿನಗೆ ಆ ವಧುಗೆ ||
ವಿನುತರವರೊಂಬತ್ತು ಜೀವರು | ಘನಸಮುದ್ರವಿಜಯನು ಮೊದಲಾ |
ದನುಪಮರು ಸುತರಾದರೆಲೆ ಭೂಪಾಲ ಕೇಳೆಂದ || ೪೨ ||

ನಂದಯಶೆಯಾ ಪುತ್ರಿಯರು ದಿನ | ದಿಂದ ಬಂದೀ ಕೊಂತಿಮದ್ರಿಯ |
ರೆಂದೆನಿಸಿ ಪರಿಕೆಗಳ ಪಿರಿಯಾತನಾರೆನಲು ||
ಸಂದಕುರುಜಾಂಗಣ ವಿಷಯದೊಳ | ಗೊಂದಿ ನಿಂದ ಪಳಾಲ ಕೂಟವ |
ದೊಂದುಗ್ರಾಮದ ಸೋಮಶರ್ಮರೆನಿಪ್ಪ ವಿಪ್ರಂಗೆ || ೪೩ ||

ವನಿತೆಯಗ್ಗಿಲೆಯೆಂಬಳವರಿಗೆ | ತನುಜನಂದಿಯು ಪುಟ್ಟೆ ನಂದಿಯ |
ಜನನಿಜನಕರುಕಳಿಯೆ ಮಾವನು ದೇವಶರ್ಮಾಖ್ಯಾ ||
ಮನೆಯೊಳೋವಿದ ಮದುವೆ ಮಾಡುವೆ | ನೆನಲಱುವರಾತ್ಮಜೆಯರಯ್ಯಗೆ |
ಮುನಿಯ ಕಿರಿಯಳ ಕೊಡುವೆನೆನಲಗ್ಗಿಲೆಯ ಪರಿತಂದು || ೪೪ ||

ತೆಱೆದ ಬಾಯ್ಪೆರ್ಜಿಗಳೆದುಟಿ ಕುಸಿ | ಕಿಱಿದು ಚಪ್ಪಟೆಮೂಗುಕುಣಿ ಕ |
ಣ್ಣೊಱಲೆ ಮೊಗ ಹೊಱಪಲ್ಲು ಕುಸಿಗೊರಳುಬ್ಬಿನೆಗೆದುದವು ||
ಮುರಿದ ಬೆನ್ನ ಮದ್ದಳೆಯನಡು ಹೆ | ದುರುಚೆ ಗೈ ಸೆಳೆಕಾಲು ಕುಮ್ಮರಿ |
ಗೊರಲೆನಿಪ ನೀ ಮಗಳ ಕೊಡುವವಳೆದೆ ಗೊರಡುಕಲ್ಲೊ || ೪೫ ||

ಎಂದು ಈ ಮರುಳಂಗೆ ಕೊಡುವದ | ರಿಂದ ಕೊರಳಿಗೆ ಕಲ್ಲಕಟ್ಟಿ ಅ |
ದೊಂದು ಬಾವಿಯೊಳದ್ದುವೆನು ಈ ಮಗಳನೆನೆ ಬೆದಱಿ ||
ಎಂದನಾಂ ಸೋದರಿಗನಾದದ | ರಿಂದನೀ ಬೇಡೆನಲು ಕೊಡುವೆನೆ |
ಒಂದು ಸಟೆಯಾಡಿದೆನು ಬೆದರದಿರೆಂದನಾ ವಿಪ್ರಾ || ೪೬ ||

ಎಂದ ಮಾತನು ಕೇಳಿಮನದಲಿ | ನೊಂದು ತನ್ನ ಕುರೂಪು ತನ್ನನೆ |
ನಿಂದಿಸಲು ಸಿಗ್ಗಾಗಿದೇಶಾಂತರವೆ ತನಗೆಂದು ||
ನಂದಿ ಪೋಪಾಗಳು ಬಳಿಕ ಕರ | ತಂದು ಮಾಸಿದ ಮಂಡೆ ಹೊಳೆಯಲಿ |
ಮಿಂದುಬಾಯೆಂದೊಂದು ಬೆಂಣೆಯ ನೆತ್ತಿಗಿಕ್ಕಿಸಿದ || ೪೭ ||

ಅತ್ತೆ ಅತ್ತಿಗೆಗಳು ನನಗೆ ಬೇ | ಸತ್ತು ಎಂಜಲುಗೂಳನಲ್ಪವ |
ನಿತ್ತೊಡುಣಿಸುಂಟಲ್ಲುದಿರ್ದೊಡುಪಾಸ ಬೀಳುವೆನು ||
ನೆತ್ತಿ ಬೆಂಣೆಯನೊಮ್ಮೆಯಾದೊಡೆ | ಒತ್ತಿದೆನೆ ಯೆಲೆ ಮಾವ ನಿಮ್ಮಯ |
ಪುತ್ರಿಯೋರ್ವಳ ಮದುವೆಯಹೆನೆಂಬಾಸೆಯಿಂದಿಹೆನು || ೪೮ ||

ಮಾವ ನಿಮ್ಮ ಕುಮಾರಿತಿಯರೊಳ | ಗಾವಳುಂ ನನ್ನೊಲ್ಲೆನೆಂದರು |
ಜೀವಿಸುವೆಯೆನೆ ಇನ್ನೆನುತ ಹೊಳೆಮೀಯ ಹೋಗುತಿರೆ ||
ತೀವಿಸಭೆ ಪೆಕ್ಕಣವ ನೋಡುವ | ಗಾವರವ ಕೇಳ್ದಲ್ಲಿ ಗೈದಿದ |
ನಾವಿಲೋಕನ ಚಿತ್ತನುರು ಮರ ನೇರಿ ನೋಡುತಿರೆ || ೪೯ ||

ಕರಗಿ ಮಂಡೆಯ ಬೆಣ್ಣೆತ್ರಸೆಕೊಳೆ | ವೆರಸಿಳಿದು ಕೆಳಗಿರ್ದತಕ್ಕವ |
ನುರದ ಮೇಲೊಂದೆರಡು ಹನಿಬೀಳಲ್ಕೆ ಮೇಗಂಡು ||
ಮರುಳ ನೋಡೆಂದಲ್ಲರುಂ ಚ | ಪ್ಪರಿಸಲಿಳಿದೋಡುತರಿಎ ಮಕ್ಕಳ |
ನೆರೆದು ಬೆಂಬತ್ತಿದರು ಕಲುಗುಂಡಿಡುತ ಮರುಳೆಂದು || ೫೦ ||

ಕಡುಬಳಲಿ ಕಾಲ್ಗೆಟ್ಟು ಬೆಟ್ಟವ | ನಡರ್ದು ಇನ್ನೀ ಬದುಕದೇತಕೆ |
ಸುಡಲೆನುತ ಶಿಖರಾಗ್ರದಿಂ ಕೆಳಬಿದ್ದಳಿವೆನೆಂದು ||
ನಡದು ಬಂದೆರಗೀಕ್ಷಿಸುವ ಪಿಂ | ದಡಿಯಿಡುವ ಮತ್ತೇಗಿ ನೋಡುವ |
ಪೊಡರ್ವನೆಳಲನು ತದ್ಗಿರಿಯ ಮೂಲದಲಿ ತವವಿರ್ದ || ೫೧ ||

ವರ ಮುನಿಗಳಾಶಂಕ ನಿರ್ನಾ | ಮರುವೆನಿಪವದ ಕಂಡು ತಮ್ಮಯ |
ಗುರುಗಳನು ದ್ರುಮಸೇನರವಧಿಜ್ಞಾನಿಗಳಿಗೆರಗಿ ||
ನರನ ನೆಳಲೊಂದೈ ತರುತಲದೆ | ಮರಳುತದೆಯದ ಬೆಸಸಿಯೆನಲಾ |
ಪುರುಷ ಮೂರನೆ ಭವಕೆ ನಿಮ್ಮಯ ತಾತನಹವೆನಲು || ೫೨ ||

ಕೇಳುತವೆ ತದ್ಗಿಱಿಯನೇ ಱಿ ದ | ಯಾಳುಗಳು ನಂದಿಯನು ಕಡು ಸ |
ಮ್ಮೇಳದಲಿ ಕರಕೊಂಡು ದ್ರುಮಸೇನರ ಬಳಿಗೆ ತರಲು ||
ಹೇಳು ನಿನ್ನುಜ್ಜುಗವನೆನಲಿಂ | ಪೇಳಲೇಂ ಗುರುಗಳೆ ಮರಣ ಬಹ |
ಕಾಲವನೆ ಬಯಸುವೆನೆನಲದೇಕೆಂದರವರವನ || ೫೩ ||

ಕಂಡವರು ಮರುಳೆಂದು ನನ್ನನು | ಗುಂಡುಗೊಂಡಿಡಿತಹರೆ ಕೂಳನು |
ಕಂಡೆನಿಲ್ಲುಡಲಿಲ್ಲ ನೋಡೀ ನೆತ್ತಿ ಬಸುರುಗಳ ||
ಹೆಂಡಿರನು ಗಳಿಸುವೆನೆನಿಪನುಡಿ | ಭಂಡು ತಾನದರಿಂದೊಡಲ ಪಿಡಿ |
ಕೊಂಡಿಹುದು ಲೇಸಲ್ಲೆಂದನು ನಂದಿ ಮುನಿಪತಿಗೆ || ೫೪ ||

ಎನೆ ಮುನೀಶ್ವರರೆಂದರೆಲೆ ಪಾ | ರ್ವನೆ ನಿನಗೆ ಯೀಲೋಕವಶ್ಯದ |
ಘನವಿಭವ ದೊರಕೊಳುವ ಹೆಂಗಳು ಮೋಹಿಸುವ ಮಂತ್ರ ||
ನನಗೆ ಬಹುದದನೀಸಿಕೊಳು ಭೋಂ | ಕನೆ ಬಳಿಕ ನಮ್ಮಂತೆ ನಡೆಯೆಂ |
ದನುಪಮರು ಗುರು ಪಂಚಮಂತ್ರವನಿತ್ತು ದೀಕ್ಷೆಯನು || ೫೫ ||

ಕೊಟ್ಟೊಡಾತನುವವರ ಬಳಿಯಲಿ | ನೆಟ್ಟನಾ ಜಿನರೂಪನಾಂತಳ |
ವಟ್ಟು ತಪದಿಂ ನಡೆದು ತಾಂ ಪ್ರಾಯೋಪಗಮನದಲಿ ||
ಬಿಟ್ಟೊಡಲನಾ ನಂದಿ ಮುನಿಪತಿ | ತೊಟ್ಟನೆಮಹಾಶುಕ್ರ ಕಲ್ಪದಿ |
ಪುಟ್ಟಿಬಂದವನೊಂಬದಿಂಬರ ಕಂಡೆ ವಸುದೇವ || ೫೬ ||

ಎನೆ ಜಿನೇಶ್ವರ ವಚನದಿಂ ತಿಳಿ | ದನು ನಿರೂಪಿಸಲೀ ಭವಸ್ಥಿತಿ |
ಯನುಪರಮ ವೈರಾಗ್ಯದಿಂದ ಸಮುದ್ರ ವಿಜಯಂಗೆ ||
ವಿನುತ ರಾಜ್ಯವನಿತ್ತು ಬಳಿಕಾ | ಜಿನ ಸಮಕ್ಷದಿ ದೀಕ್ಷೆಯಂ ತಳೆ |
ದನಘನಾ ಮೋಕ್ಷಕ್ಕೆ ಅಂಧಕವೃಷ್ಟಿ ಮುನಿಪೋದ || ೫೭ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತಮದುಮಧು |
ಕರಲಸತ ಜಿನಭಕ್ತಿ ಕವಿಸಾಳುವ ರಚಿತವಾದ ||
ಪರಮ ನೇಮಿ ಜಿನೇಂದ್ರ ಪಾವನ | ಚರಿತೆಯೊಳಗೆರಡನೆಯದಿದು ತಾಂ |
[ಹರಿಯ ವಂಶದ] ಸ್ವಾಮಿಯನ್ವಯ ಪರ್ವವೇಳ್ಗೆಯಲಿ || ೫೮ ||

|| ಅನ್ವಯ ಪರ್ವದೊಳು ಸಂಧಿ ೧೩ಕ್ಕೆ ಮಂಗಲ ಮಹಾ ||