ಸಂಧಿ ೧೪

ಹರದ ಪೆಂಡಿರು ಕಂಡು ವೊಲ್ದೊಡೆ | ಪುರಜನದ ನುಡಿಗೇಳುತ ರಾಜ |
ನಿರಿಸೆ ವಿನೆಯದಿ ನಂದನದೊಳೊಸೆದಿರ್ದ ವಸುದೇವಾ || ಪಲ್ಲ ||

ಕೇಳು ಶ್ರೇಣಿಕ ಮಂಡಲೇಶ್ವರ | ಭೂಲಲನೆ ಕರ್ಕಶವು ಕಮಲನ |
ಬೀಳ ಪೃಷ್ಠವು ದಿಗಿಭಗಳು ಮಾತಂಗ ಜನ್ಮಗಳು ||
ವ್ಯಾಲ ವಿಷಧರ ಫಣಿಪನೆಂದು ವಿ | ಶಾಲ ಸುಗುಣ ಸಮುದ್ರವಿಜಯನೃ |
ಪಾಲಕನ ನಿಡುದೋಳನಪ್ಪಿ ಸಮೇಳದಿಂದಿಹಳು || ೧ ||

ಅನತಿಶಯ ವಿಭವದಲಿ ಭೂತಳ | ವನು ಸಮುದ್ರ ವಿಜಯ ಮಹಾರಾ |
ಯನು ನಿರಂತರ ಪಾಲಿಸುತ್ತಿರಲಿತ್ತಲಾನೃಪನ ||
ಅನುಜ ವಸುದೇವನ ಸುರೂಪತೆ | ಮನಸಿಜನನಾಳ್ಮಾಡಿದುದು ಜ |
ವ್ವನ ಒದಗಿದುದು ರಾಜ ವಿದ್ಯಾವಿಭವದೊಡನವಗೆ || ೨ ||

ನನೆಗೆ ನಗೆ ಮೊಳೆವಾಗ ಕಡುಗ | ಮ್ಮನೆಯ ಪರಿಮಲಸಾರುವಂತಾ |
ತನೆ ಚೆಲುವ ಮೂರ್ತಿಯೊಳು ಜವ್ವನ ಜನಿಪಕಾಲದಲಿ ||
ನನಗೆ ತನಗೆಂದಖಿಲ ಕಲೆಯಾ | ತನಲಿ ಮನೆಗಟ್ಟಿದವು ಭಟನದ |
ವಿನುತ ಕವಿಗಮಕಿ ಪ್ರಮುಖ ಬಳಸಿದುದು ಬಳಿಕವನ || ೩ ||

ಸರಿವರೆಯದರಮಕ್ಕಳಿಷ್ಟ ಸ | ಖರುವೆರಸಿ ಮೆರೆವಾ ವಸಂತದೊ |
ಳರಸನರ್ತಿಯಲೈದೆ ವನಜಲಕೇಳಿಗಳನಾಳಿ ||
ಅರಳನನೆಗಳ ತಳಿರ ಮಿಡಿಗಳ | ಪರಿಪರಿಯ ತೊಡಿಗೆಗಳ ತೊಟ್ಟ |
ಚರಿಯನಂದನ ವನವೆ ಬಹವೊಲು ಕುವರನೈತಿಹನು || ೪ ||

ಎಸೆವ ಮಾಣಿಕದುಡಿಗೆಗಳ ಕೆಂ | ಬಿಸಿಲ ಬೀಱುತ ತರುಣ ತರಣಿಯೊ |
ಳೆಸೆದು ತೊಳಲುವನೊರ್ಮೆಯಂಗಡಿ ಬೀದಿ ಬೀದಿಯಲಿ ||
ಮಿಸುಪ ಮುತ್ತಿನ ತೊಡವೆಗಳು ತಂ | ಬಿಸಿಲ ಬೀಱುತ ಪೂರ್ಣ ಸಸಿವೋ |
ಲೆಸೆದು ತೂಳೆಲುವನೊರ್ಮೆ ಚಂದ್ರಮನೆನಿಸಿ ನೃಪತನುಜ || ೫ ||

ತೊಡೆದ ಕತ್ತುರಿಯಂಕೆಯಸುಕೆಯ | ಮುಡಿ ಮಿಸುನಿಗೇದಗೆಯೆಸಳ ಮಿಂ |
ಗುಡಿತಳಿರ ಕೈಪೊಡೆ ಬಿಗಿದ ರಸದಾಳಿಗೋಲ್ವಿಲ್ಲು ||
ಪಿಡಿದ ಹೂಗಣೆ ಕುಸುಮರಥ ಸಂ | ಗಡಿಗರೊಡನಂಗಜ ನೆನಿಸಿ ಫಲ |
ಮಡದಿಯರ ಚಿತ್ತದೊಳು ಪೊಳಲೊಳು ತೊಳಲುತಿಹನೊರ್ಮೆ || ೬ ||

ದಿಟ್ಟಿ ದೆಱದಂತೆಸೆವ ನೈದಿಲ | ನಿಟ್ಟೆಸಳ ತನುಕವಚ ಕುಡುವೆ ಱೆ |
ಯೊಟ್ಟೈಪ ವಜ್ರಾಂಕುಶವು ಮುನ್ನೈದೆ ಸಿಂಗರಿಸಿ ||
ನೆಟ್ಟನೈರಾವತವೆ ತಾನೆನೆ | ಪಟ್ಟದಂತಿಯನೇಱೆ ತನ್ನನೆ |
ನಿಟ್ಟಿಪರು ಸುರರಾಗ ಸುರಪತಿಯೆನಿಸಿ ತೊಳಲುವನು || ೭ ||

ಚಳನಯನ ಮೃದುವಾಲದೆಲೆ ಕಡು | ಬೆಳೆದ ಕಟಿ ಪೇರುರ ಮಯೂರೋ |
ಜ್ವಲಗಳಂ ನಿರ್ಮಾಂಸವದನಾಂಘ್ರಿಗಳು ವಜ್ರಖುರ ||
ತಳೆದಕಿಱಿಗಿವಿ ಸಣ್ಣ ನಡುವತಿ | ಬಳದ ಶದ್ರುವರುಚಿರವರ್ಣ ಸು |
ವಿಳಸಿತಾಶ್ವವದೊಂದು ಕಂಗಿಂಬಾಯ್ತು ನೃಪಸುತನ || ೮ ||

ತುರಗರತ್ನವು ದಾತನಿಚ್ಛೆಗೆ | ತರುಣಿಯಂತೊದಗುವುದು ಚೆಲುವಿನ |
ಹರಿಣನಂದದಿ ದಾಂಟುವುದು ನೆಱೆತಾಳಮದ್ದಳೆಯ ||
ಪರಿಪರಿಯ ಜತಿಗಳಿಗೆ ಕುಣಿವುದು | ತುರುಗಜಕ್ಕಡಿಗಾಡುವುದು ಕಿ |
ನ್ನರಿಯ ದನಿಗಳವಟ್ಟು ಕಿಂಕಿಣಿಯಲಿಯೆ ಮೆಟ್ಟುವುದು || ೯ ||

ಬೀದಿಗೇಳಿಕೆಯಾಡಿಸುವನ | ರ್ತಾದಿರಿಪ ಪಲತೆರದ ಪಾಠಕ |
ರೋದುತಿಹವರ ಗದ್ಯ ಪದ್ಯ ಪ್ರಬಂಧ ಬಿರುದುಗಳ ||
ವಾದಕರ ನಾಲಿಸುವ ಚತುರ ವಿ | ನೋದನುಚಿತ ತ್ಯಾಗವೀವುತ |
ಬೀದಿ ಬೀದಿಯೊಳೈದುತಿಹ ವಸುದೇವ ನೃಪನೊಮ್ಮೆ || ೧೦ ||

ಹರಿಹರಿದು ಬಂದಾ ಪುರುಸ್ತ್ರೀ | ಯರುಗಳೀಕ್ಷಿಪ ತೆಱವೆಯೊಳು ಸಿಂ |
ಗರಿಸಿ ಬೆಲೆವೆಣ್ಣುಗಳು ಸೊದೆಯುಪ್ಪರಿಗೆ ನೆಲೆಗಳೊಳು ||
ದೊರೆಗಳರಸಿಯರೆಸೆವ ಹೊನ್ನು | ಪ್ಪರಿಗೆಗಳ ಮಣಿಮಯಗವಾಕ್ಷಾಂ |
ತರದೊಳನೆ ವಸುದೇವ ಕುವರನೀಕ್ಷಿಪರು ನಲಿದು || ೧೧ ||

ನೋಡುವೊಂದಿಚ್ಛೆಯೊಳೆ ತೊಳ್ತಿರ | ಕೂಡೆ ತಾವುಂ ತೊಳ್ತಿರಾಗಿಯೆ |
ರೂಢಿವಡೆದರಸಿಯರು ಕೆಲಬರು ಮೈಲಿಗೆಯನುಟ್ಟು ||
ನಾಡೆಬೆನ್ನನೆ ಹರಿಹರಿದು ಮೊಗ | ಬಾಡಿ ಬಸವಳಿದುಃಪೆನುತ ಮಿಗೆ |
ನೋಡಿ ದಣಿಯರು ರಾಜಪುತ್ರನ ಚೆಲುವ ಮೂರ್ತಿಯನು || ೧೨ ||

ಮಡದಿಯೋರ್ವಳು ಬಹಭರಕೆ ಸೊ | ರ್ಮುಡಿ ಬಿಡಲು ಬಲದೋಳ ಮೊದಲಿನೊ |
ಲಡಸಿ ಮೇಲುದ ತೇಲುತಿರಲೆದೆಯಲ್ಲಿ ಕೆಂದಳವ ||
ಮಡಗಿ ತೊಂಗಲು ನಿಱಿಯನೆಡಗೈ | ಪಿಡಿದು ಬಡನಡು ಬಳುಕುತಿರೆ ನಾ |
ನಡೆನನೆಯೆ ಮೈಬೆಮರೆ ಬಂದೀಕ್ಷಿಸಿದಳರಸನನು || ೧೩ ||

ಚಂದದೋರ್ವಳು ಸಿಂಗರಿಸಿದಳ | ದೊಂದುದಿನ ನೃಪ ಬಹ ಸಮಯದೊಳ |
ಗೊಂದು ಕಿವಿಗೆಸೆವೋಲೆ ಒಂದೇ ಕಣ್ಗೆ ಕಜ್ಜುಳವು ||
ಒಂದೆ ಹಸ್ತಕೆ ಕಡಗವಂದುಗೆ | ಯೊಂದು ಪಾದದೊಳೆಸೆಯೆ ಅರೆವೆ |
ಣ್ಣೆಂದು ನಗುವರನಱಿಯದೈತಂದೀಕ್ಷಿಸಿದಳವನ || ೧೪ ||

ಎತ್ತ ಹೋಹಿರದೇನ ನೋಡುವಿ | ರಿತ್ತ ಬನ್ನಿಯೆನಿಪ್ಪ ಗಂಡನ |
ಮತ್ತೆ ಮಾವನ ಘರ್ಜುನೆಯ ನುಡಿಕಿವಿಗುರಿಸದಿರಲು ||
ಅತ್ತೆ ಅತ್ತಿಗೆಗಳುವವರ ಜೌ | ವುತ್ತೆ ನೋಡವೊ ಬಾಗಿಲಲಿನ |
ಮ್ಮೊತ್ತಿನೊಳು ನೆಡಿನೋಡೆ ತಪ್ಪೇನೆಂದಳವರವರ || ೧೫ ||

ಅವನ ತನುಲಾವಣ್ಯ ನದಿಯೊಳು | ಯುವತಿಯರ ಕಣ್ಮೀಂಗಳೋಲಾ |
ಡುವವನಾರಥವಾಗಳಂಜಗನಿಕ್ಷುಚಾಪವನು ||
ತವಕದಿಂಗೊಲೆಯೊತ್ತಿ ಜೇವಡೆ | ದವಳಿವಳನೆನ್ನದೆ ಪುರಸ್ತ್ರೀ |
ನಿವಹವನು ಹೊಸಮಸೆಯ ಹೂಗಣೆಗಳಲಿ ಹೊಳಿದನು || ೧೬ ||

ಕಾವದೇವನ ಬಿಲ್ಲ ವಿದ್ಯೆಯ | ದಾವ ಗರುಡಿಯ ಶಿರವೊಯೆಸುವುದು |
ಹೂವಿನೈದಂಬ ತನು ತಾನಳಿವೆದೆಯ ಕಬ್ಬುವಿಲು ||
ದೇವದಾನವ ಮಾನವಾದಿಯ | ನೋವದೆಸುವೆನು ಘಾಯವಿಲ್ಲದ |
ನೋವಿನಲಿ ಕೊಲುತಿಹನಹರ್ನಿಶವೇನು ಭುಜಬಲನೊ || ೧೭ ||

ಕಾ[ವನದೇ]ನು ಚದುರನಲ್ಲವ | ಗಾವಿಲನದೆಂತೆನಲು ಕೆಮ್ಮನೆ |
ಹೂವಿನಂಬಿನಹೊ… … … ದಿಸಿದೆನೊ ||
ಆ ವಿಭುವಿನೊಡನೈದಿಟೀಕೆಯ | ಜೀವವೀ ಬರು ಹಾಹೆಯೆನು ತಾ |
ನಾವ ಕಾರಣವೆಚ್ಚನೆಂದಳದೋರ್ವಳುಬ್ಬೆಗದಿ || ೧೮ ||

ಹೃದಯದೊಳು ಬಿಗಿದಪ್ಪಿ ಸಲೆ ಚಿ | ತ್ತದೊಳೆಯಿಂದುಟಿಯೂಡಿ ತಮ್ಮಯ |
ಮದದೊಳಾತನ ಒಲಿದು ಚುಂಬಿಸಿ ಬೇಟೆಕಾತರದಿ ||
ಎದೆಯೊಳಗೆ ಸುರತಾಮೃತವನುಂ | ದೊದವಿ ಮೂರ್ಛಿಸಿ ನೋವುತಿಹರಾ |
ಸುದತಿಯರು ಕೆಲಕೆಲರು ತತ್ಪುರದೊಳಗಹರ್ನಿಶವು || ೧೯ ||

ಮನದೊಳಗೆ ಕನ್ನಿಕೆಯರೆಮಗೀ | ತನೆ ಮನಪ್ರಿಯನಾಗಲೆಂಬರಿ |
ವನೊಳಗಕ್ಕಟ ಕನ್ನೆವೇಟವ ಪಡೆಯದಾದೆವಲ ||
ಎನಿಪರರೆಬರು ತಮ್ಮ ತನಿಜ | ವ್ವನದ ಕಾಲದೊಳಿವನು ಕಣ್ಬೊಲ |
ನೆನಿಸದಾದನಲಾಯೆನುತ ಪಳವೆಯರು [ಚಿ]ಂತಿಪರು || ೨೦ ||

ಗರತಿಯರು ಮನೆವಾರ್ತೆಯನು ಮಱೆ | ದರು ತೊಱೆದರಾ ಮಕ್ಕಳನು ಗಂ |
ಡರ ಬಯಕೆ ಬ ಱಿಹಾಹೆಯಂದದಿ ತಿರುಗುಹರೊಳಗೆ ||
ಅರಸು ಮಗನನೆ ಕಣ್ಣು ಮನದೊಳ | ಗಿರಿಸಿಕೊಂಡದರಿಂದ ಗಂಡರ |
ಕರಕರಗೆ ಮೈಗೊಡುವರಂಗಜ ಕೇಳಿಗವರಂದು || ೨೧ ||

ಸ್ಮರಮಹಾಗ್ರಹಹಿಡಿದು ಮರುಳಾ | ದರು ನಿಖಿಲ ವನಿತೆಯರು ಮನದೊಳು |
ಹರಹಿಬಿತ್ತಿದ ತೆಱದಿ ಬೆಳೆದುದು ಖೇಟಮಡಲಿ ಱಿದು ||
ವರಗೃಹಸ್ಥರು ಗರತಿಯರ ಮನ | ದಿರವಱಿದು ಕೊಕ್ಕರಿಸಿದರು ಮೆ |
ಚ್ಚರು ಸೊಬಗನೆಂದೊತ್ತೆವೆಂಡಿರನುಳಿದರಾ ವಿಟರು || ೨೨ ||

ಕೊಡುವೆವೋಲಗ ಕಸುವನಲ್ಲದೆ | ಮಡದಿಗೊಡುವೆವೆಯೆನುತೆ ಕೈದುವ |
ಮಡಗಿದುದು ಪರಿವಾರಭಿಮಾನವದು ಪರಿದಾಡೆ ||
ಸುಡಲಿ ಪರಿದಾಡುವುದನೆನುತಂ | ಗಡಿಯ ಪಡಿಗೆತ್ತರುಹರದರೊ |
ಗ್ಗೊಡೆದರೊ ದಿನ ಹಂಬಲವನು ವಿಪ್ರರುಪೊಳಲಿನೊಳಗೆ || ೨೩ ||

ನೆರೆದು ಬಂದಿಂತೆಲ್ಲರುಂ ಭೂ | ವರ ಸಮುದ್ರವಿಜಯಗೆ ಕೈಮುಗಿ |
ದರಸುಗಳ ತಲೆರನ್ನ ಬಿನ್ನಪವಿನ್ನೆವರನಿಮ್ಮ ||
ಪುರದೊಳಗೆ ಗಾಳಿಯುವಿಸಲುವೆಂ | ಬೆರಡು ತಪ್ಪಿಸಿ ಬಾಧೆಯಿಲ್ಲದೆ |
ಹರುಷದಲಿ ಸುಖವಿರ್ದೆವಿನ್ನೈದುವೆವು ಪರನಾಡ || ೨೪ ||

ಎಂದ ಮಾತಿಗೆ ನೃಪತಿ ವಿಸ್ಮಯ | ದಿಂದಿದೇಂ ಕಾರಣವೆನಲು ವೇ |
ನೆಂದು ನುಡಿಯದೆ ಮೂಕರಂತೆಲ್ಲರುವಿರಲು ಮಂತ್ರಿ ||
ಎಂದನಲ್ಲದ ತಾಣದೊಳು ನೆಗೆ | ದೊಂದು ಹುಣ್ಣದು ಜೀಯ ಲೋಕದ |
ತಂದೆ ನಿಮ್ಮಡಿನಿವಗೆ ಬಿನ್ನೈಸಿದೊಡೆ ಪಡಿಯಲ್ಲ || ೨೫ ||

ಹೇಳಬಾರದ ಮಾತನವನಿಪ | ಹೇಳುವೆನು ಪುರವನಿತೆಯರು ಪೂ |
ಗೋಲ ಘಾಯದಿ ಹುಚ್ಚುಗೊಂಡೋಪರಮನೆಯಿಂ ತಮ್ಮ ||
ಬಾಳಕರ ಹಂಬಲ ಮರೆದರೆನೆ | ಹೇಳು ಹೇಳಾರಿಂದಲೆನೆ ಭೂ |
ಪಾಲ ಪರನಾರೀಸಹೋದರನವನ ದೆಸೆಯಿಂದ || ೨೬ ||

ಇದು ಮಹಾವಿಪರೀತ ತಿಳುಹಂ | ತಿದಱ ತೆಱನೆಲ್ಲವನೆನಲು ನವ |
ಮದನನೆನಿಸುವ ನಿಮ್ಮಡಿಗಳನುಜಾತ ವಸುದೇವ ||
ಮುದದಿ ಪೊಳಲೊಳಗಾಗಳುಂ ಚಲು | ವೊದವಿ ವಿಭವದಿ ತೊಳಲುತಿರೆ ನೋ |
ಡಿದವಧುಗಳಿಂತಹರು ಮುನ್ನೇಂ ನೋಂತನೋಯೆಂದ || ೨೭ ||

ಎನೆ ನೃಪಾಲಕ ಕೇಳಿ ತಾನೊಂ | ದಿನಿಸು ಪೊತ್ತಮ್ಮೇಲೆ ಗುಣನಿಧಿ |
ವಿನಯವಚನದಲವರನೆಲ್ಲರ ತಿಳುಪಿ ಬೀಳ್ಕೊಟ್ಟು ||
ಅನುಜನೆಂದಿನ ತೆಱದಿನೋಲಗ | ಕನುವಱಿದು ಬರೆ ಕಾಣುತವೆ ತ |
ಮ್ಮನಸಮೀಪಕೆ ಕರೆದು ಮೈದಡವಿದನು ಕೃಪೆಯಿಂದ || ೨೮ ||

ಕಂದಿತೇಕೈ ನಿನ್ನ ನಗೆಮೊಗ | ಚಂದಿರನು ಪುಟವಿಟ್ಟು ಮಿಸುನಿಯ |
ದೊಂದು ಬಣ್ಣದ ಚೆಲುವ ಮೈನಸುಬಾಡಿದುದು ತಮ್ಮಾ ||
ಎಂದಿನಂತಲ್ಲೆನಲು ದೇವರು | ಯಿಂದು ನಿಮ್ಮಡಿ ನನ್ನಮೇಗೊಲ |
ವಿಂದೆ ನೋಡಿದ ಮೋಹದೃಷ್ಟಿಗೆ ತೋಱಿತಿಂತೆಂದ || ೨೯ ||

ಜನದ ಕಣ್ಣಾಸರೊ ಬಿಸಿಲೊಳೊಂ | ದಿನಿಸುನೀನೆಂತೊಳಲುವೆಯೊ ಮನ್ |
ಮನವ ಸಂತಸ ಕಣ್ಣಪುಣ್ಯವೆನಿಪ್ಪನುಜ ನೀನು ||
ಇನಕಿರಣ ಹೊಲಮ್ಮದೆಮ್ಮುಪ | ವನವ ಸಿಂಗರಿಸಿದ ವಸಂತನು |
ಮನಸಿಜನವೋಲ್ ಮಿಗೆ ಸುಖದಿ ಕಳಿಯಲ್ಲಿ ಬೇಸಗೆಯ || ೩೦ ||

ಕೃತಕ ಕನಕಾದ್ರಿಯೊಳಗಿಂದ್ರ | ಪ್ರತಿಮನೆನೆ ನಲಿದಾಡು ನಂದನ |
ಲತೆವನೆಯೊಳಿರುತಿರುವಸಂತನವೊಲು ಪಲವು ರತ್ನಾ ||
ಕೃತಸರೋವರದೊಳಗೆ ಓಲಾ | ಡುತ ನೃಪಾಲಮರಾಲನಂತಾ |
ಡುತಿರೆನಲು ಜೀಯೆಂದು ತಮ್ಮನನಪ್ಪಿ ಮುಂಡಾಡಿ || ೩೧ ||

ತೊಟ್ಟತೊಡುಗೆಯ ಪೊದೆದ ವಸನವ | ಕೊಟ್ಟು ಬೀಳ್ಕೊಡೆ ನಿಜಗೃಹದಿ ಪರಿ |
ಮೇಷ್ಟಿಸಿದ ಸುಖಮಯ ಪರಿಗ್ರಹವೆರಸಿ ಸಖರೊಡನೆ ||
ನೆಟ್ಟನಾ ವನಪಾಲರನು ಮುಂ | ದಿಟ್ಟುಕೊಂಡೈತಂದು ಸುಖತರ |
ಗೋಷ್ಠಿಯಲಿ ಮೆಱೆದಿರ್ದನಾವಸುದೇವನಳ್ತಿಯಲಿ || ೩೨ ||

ಚಾಪಲಾಕ್ಷಿಯರೊಡನೆ ವನಕುಸು | ಮಾಪಚಯದೊಳಗೊರ್ಮೆ ಕೃತಕನ |
ಗೋಪಕೇಳಿಯೊಳೊರ್ಮೆ ಜಲಕೇಳಿಗಳಿನೋರೊರ್ಮೆ ||
ರೂಪವಿಕೃತಕಿಕುಬ್ಜವಾಮನ | ರಾಪಡೆದ ಮೂಕಾದಿಗಳ ನಾ |
ನಾಪರಿಯ ಬಿನದದಲಿ ಕ್ರೀಡಿಪನೊರ್ಮೆ ಸಖರೊಡನೆ || ೩೩ ||

ಪಚ್ಚೆಲೆಯ ಪಂದರೊಳಗಸುಕೆಯ | ಕೆಚ್ಚನೆಯ ತಳಿರುವೋವರಿಗಳೊಳು |
ನಿಚ್ಚಮಲ್ಲಿಗೆ ಮಂಟಪಂಗಳೊಳೊಕ್ಕು ಮಳಲಂತೆ ||
ಪಚ್ಚೆ ಕರ್ಪುರವಿಹುದು ಮೊಳಕಾ | ಲ್ಮುಚ್ಚುವುದು ನಡೆದೊಡೆ ಪರಿಮಳದಿ |
ಹೆಚ್ಚಿ ಸೂಸಿದ ಕತ್ತುರಿಯು ನೃಪನಾಡಿದಾಟಗಳಿಂ || ೩೪ ||

ಆಡಿಸುವನಾ ನಟ್ಟುವರ ನಲಿ | ದಾಡಿಸುವನಾ ಪಾತ್ರಗಳ ಕೊಂ |
ಡಾಸಿವುನಖಿಳಾರ್ತಿಗಳ ಮುಖದಿಂದ ತನ್ನೊಳ್ಪ ||
ಪಾಡಿಸುವನಾ ಗಾಣಿಗಾರರ | ನೋಡಿಸುವನೆಲ್ಲರಿಗೆ ಸೊಗಸನು |
ರೋಡಿಸುವನಾಜಾಗದಲಿ ಸುರತರುವನಾ ಕುವರ || ೩೫ ||

|| ಅಂತು ಸಂಧಿ ೧೪ ಕ್ಕಂ ಮಂಗಲಮಹಾ ||