ಸಂಧಿ ೧೬
ಕೇಳು ಮಗಧಾಧೀಶ ತದ್ಭೂ | ಪಾಲನನು ಖಗನೊಯ್ಯೆ ಬಿಡಿಸಿದ |
ಳಾ ಲತಾಂಗಿ ಪಳಂಚಿ ಶಾಲ್ಮಲಿದತ್ತೆಯದಟಿನಲಿ || ಪಲ್ಲ ||
ಒಱೆಯುಗಿದ ಕೂರಸಿಯ ಮೊನೆಯಿಂ | ದಱಸಿಯುಂಬುದೆ ಕ್ಷತ್ರಿಯರ ಗುಣ |
ನಿಱಿಮರೆಯ ಉಂಬುಣಿಸು ನಮಗಿದು ಧರ್ಮವಲ್ಲೆಂದು ||
ನೆಱಿಮನದೊಳೇವೈಸಿ ತೋಳಿನೊ | ಳೊರಗಿದಿನಿಯಳ ಕರ್ಣ ಪೂರದೊ |
ಳೆಱಯ ಕತ್ತುರಿರಸವನನೆ ಮೊನೆಯಿಂದ ಲೇಖಿಸಿದ || ೧ ||
ಒಂದು ಕಾರ್ಯ ನಿಮಿತ್ತ ಪೊಪೆನ | ದೊಂದೆಡೆಗೆ ಕೆಲವಾನು ದಿವಸಕೆ |
ಬಂದಪೆನು ಕಾಂತೆಯರು ಚಿಂತಿಸಬೇಡ ತನ್ನಾಣೆ ||
ಎಂದು ನಂಬುಗೆಯಕ್ಕರವ ಬರೆ | ದಂದಿನಿರುಳತಿ ತುಂಗಬಲನೊಡ |
ಲಿಂದಲಸು ಪೊಱವಡುವವೊಲು ಪೊಱವಟ್ಟನಲ್ಲಿಂದ || ೨ ||
ಆರುವಱಿಯದ ತೆಱದಿ ಹರಿಕುಲ | ಚಾರುಮಣಿ ಹೊಱವಂಟು ಹೊಳಲನು |
ಧೀರನಧಟಿಂ ಹೋಹುವಾಗಲದೊಂದು ತಾಣದಲಿ ||
ಘೋರತರ ವನವಿದ್ದುದೊಂದತಿ | ಕ್ರೂರ ಮೃಗಗಳ ತಾಯಿವನೆ ಕಾಂ |
ತಾರ ಚರರಾಡುಂಬೊಲನು ತಾನಾಗಿ ಭೀಕರದಿ || ೩ ||
ಅದುವೆ ಮಿಥ್ಯಾದೃಷ್ಟಿ ಜೀವದ | ಹೃದಯದಂದಲಂಧಕಾರವೆ |
ಪುದಿದಿಹುದು ತಕ್ಕವರವೊಲು ವಂಶಾವಳಿಗಳಿಂದ ||
ಸದನದಿಂದದಿ ನಿಮಿರ್ದ ಭದ್ರದಿ | ವಿದಿತ ಪತ್ರ ಲತಾವಳಿಗಳಿಂ |
ದಿದು ವಿದೇಹಕ್ಷೇತ್ರದಂತತಿ ಖಗಕುಲದಿನಿಹುದು || ೪ ||
ರದನಿಗಳ ಭೃಂಹಿತದಿ ಕಲಿ ಸಿಂ | ಗದ ಮಹಾಗರ್ಜನೆಗಳಿಂ ಕೊ |
ಬ್ಬಿದ ಹುಲಿಯನಿಷ್ಠುರರವದಿ ಕಾಳ್ಕೋಣಗಳು ಮಸಗಿ ||
ಸದೆವ ಕೋಡಿನ ಕೀಳನಾದದಿ | ಬಿದಿರಣೆಯ ಚಿತ್ಕಾರದಿಂ ಪ್ರಳೆ |
ಯದ ಸಿಡಿಲ್ಗಳ ಬಳಗದಾಗರ ವೆನಿಸಿತಾ ವಿಪಿನ || ೫ ||
ಪುಲಿದೊಗಲ ಪೊಱೆಜೇನುತುಪ್ಪದ | ನಳಿಗೆ ಮೇಣದಮುದ್ದೆ ಆನೆಯ |
ತಲೆಯ ಮುತ್ತಿನ ಪುಡಿಕೆ ಚಮರೀವಾಲುಗಳದಿಂಡು ||
ಪುಲಿಯ ಮಱೆ ಸಿಂಗದ ಕಱುಗಳೆ | ಕ್ಕಲನ ಕುರುಣೆಗಳಿಂತಿವನು ಕೊಂ |
ಡೊಲಿದು ಪೊಳಲಿಗೆ ಪೋಪ ಬೇಡರ ನೆರವಿಯೊಪ್ಪಿದುದು || ೬ ||
ತಳಪಗಂಗಳ ನಗೆಮೊಗದ ತೊಂ | ಗಲು ಗುರುಳ ಸುಲಿಪಲ್ಲ ನೀಲದ |
ಕಲಶವೆನಿಸುವ ಪೆರ್ಮೊಲೆಯ ನಳಿತೋಳ ಸೆಳ್ಳುಗುರ ||
ತಳುವಸುಱ ಸೆಲೆನಡುವನುಣ್ದೊಡೆ | ಗಳ ಬೆಳೆದ ತನಿಜವ್ವನದ ಕಡು |
ಚೆಲು ಶಬರಿಯರು ಕಾಳರಾತ್ರಿಯ ಸಿರಿಗಳೆನಿಸಿದರು || ೭ ||
ಅರಸನೀಕ್ಷಿಸುತಲ್ಲಿ ಪೋಪವ | ಸರದೊಳಿರ್ದುದು ಮುಂದೆ ಜೊನ್ನದ |
ಹರಿವರಿಯೊ ಪಾಲ್ಗಡಲ ಮೂಲಸ್ಥಾನವು ಬನದ ||
ಸಿರಿಯನಗೆಗಣ್ಬೆಳಗು ನಿಂದುದೊ | ಪಿರಿಯ ಮುತ್ತಿನ ಬಿತ್ತು ನೀರೋ |
ಪರಿಕಿಸುವೊಡನೆ ತಿಳಿದ ಪೂಗೊಳನೊಂದು ಚೆಲುವಾಯ್ತು || ೮ ||
ಪಾಡುವುದು ಅಳಿರವದಿ ಕೈಗಳ | ನೀಡುವುದು ನಿಡುದೆರೆಗಳಿಂ ದೆಸೆ |
ನೋಡುವುದು ನೆಯ್ದಿಲುಗಳರಳಿಂ ಮಂದಹಾಸವನು ||
ಮಾಡುವುದು ತಾವರೆಯ ನಗೆಯಿಂ | ನೋಡಿ ಸೋಲ್ತಿರೆ ನೆರವರೊಳು ಮೆಯಿ |
ಗೂಡುವುದು ಕಾಸಾರವದು ಜೋಡೆಯರ ಬೆಡಗಿನಲಿ || ೯ ||
ತೀವಿದರಗೆಱೆವೊಕ್ಕುಕಲಿಸುವ | ದೇವಮಿಂದೀಸಾಡಿ ದಡದಲಿ |
ದೇವರನು ವಂದಿಸಿ ಅಶೋಕೆಯ ಹೊದರಲಿನಿಸಿರಲು ||
ಏವೊಗಳ್ವೆ ನಮಗಾಹಲಿರ್ದು ಸ | ರೋವರದಿನೊಂದಾನೆಯೆದ್ದುದು |
ಅವನದಿಯಿಂದಾನೆಮೀನೊಂದೆದ್ದವೊಲು ಭರದಿ || ೧೦ ||
ಮುಗಿಲು ಕೈಗಾಲ್ವೊಡೆದಂಜನ | ನಗವು ನಡೆಗಲ್ತುದುಯೆನಲು ಮಿಗೆ |
ನೆಗೆದು ನಿರ್ವೂವಟ್ಟೆಕೊಳುತೆ ಮೃಣಾಲ ಲತೆಗಳನು ||
ನಿಗಳವೆನಲೆಳಕೊಳುತಹೊಳೆಯೆನ | ಳೊಗುತ ಕೀಳ್ಮದ ಮೇಲು ಮದಗಳ |
ನೊಗೆದ ಪಿಂಗಲನ ನೇತ್ರಯನಡು ಬಂದುದೊಂದೆಡೆಗೆ || ೧೧ ||
ಹಿಂದೆ ಅಟ್ಟುವ ಸಿಂಹವಾದಿಯ | ಹಂದಿಯುಟ್ಟುವ ಗ್ರಾಮಸಿಂಹಗ |
ಳಂದವಾದವು ಗಂಧ ಗಾಳಿಗೆ ಆನೆಗಳ ಹಿಂಡು ||
ಒಂದು ಗಾಳಿಗೆ ತೇಲ್ವ ಮುಗಿಲುಗ | ಳಂದದಿಂದೋಡಿದವು ಬರಿ ಕೈ |
ಯಿಂದೆ ಪಿಡಿಯನು ಪಿಡಿದು ನಿಂದುದದೊಂದು ತಾಣದಲಿ || ೧೨ ||
ಆನೆ ಬಿನ್ನಣಿಯಪ್ಪುದೀ ಕ | ಟ್ಟಾನೆಯೆಂದು ಕುಮಾರನಾ ಮದ |
ದಾನೆಯನು ಬೆಂಬರಿದು ಮಿಗೆ ಸರದೋ ಱಿ ಕೇಳುತದು ||
ಏನನೆಂಬೆನು ಹರಿವ ಗಾಳಿಗ | ದೇನು ಗರಿಮೂಡಿದವೊಲಾ ಕ |
ಟ್ಟಾನೆ ಭೋರನೆ ಬಿಟ್ಟ ಕಣು ಬಿಗುಮೊಗದಿನಿದಿರಾಯ್ತು || ೧೩ ||
ಪಿಡಿದುದಧಿಯೆಂಬಾಸೆದೋರಿಸಿ | ಕೊಡುತೆ ಪುಷ್ಕರಣಕ್ಕೆ ತಳುವನು |
ತೊಡರ್ದು ನಿಗ್ಗವದೆಡೆಲಂಘ್ರಿಗಳೆಡೆಯಲೆಲರಂತೆ ||
ಒಡಲೆಡೆಯೊಲೊಲೆದಾಡೆ ಶೀಘ್ರದ | ಲೆಡಬಲಕೆ ದಿರ್ರನೆ ತಿರುಗಿ ಮದ |
ವುಡುಗ ಬಳಲಿಸಿ ಸಿಂಗದಂದದಿ ಬೆಂಗೆ ಲಂಘಸಿದ || ೧೪ ||
ತುಂಗ ಗಜವಶವಾಗಿ ಮುನ್ನಱು | ದಿಂಗಳೆಂಬವೊಲಿಚ್ಛೆಗೊದವಿ ಬೆ |
ಡಂಗಿನಿಂ ಪರಿದಾಡಿಲೊದೆವಧಟನ ಬಳಿಗೆ ಭರದಿ ||
ಬಾಂಗಡೆಯನಿಳಿತಂದೆಱಗಿ ನೃಪ | ಸಿಂಗ ಗಜವ ನಿರಂಕುಶದಿನಾ |
ಳ್ದಂಗವಿದು ಲೇಸೆನುತಲೀರ್ವರು ನೃಪನ ಪೊಗಳಿದರು || ೧೫ ||
ನೀವಿದಾರೆಂದವರನಾ ವಸು | ದೇವ ಬೆಸಗೊಳೆ ಮುಗಿದ ಕೈಯಿಂ |
ದೇವ ನಮ್ಮಾಣ್ಮನ ಬೆಸದಿನೀ ವನವ ಕಾದಿಹೆವು ||
ಈ ವನವನೀಸು ದಿನವಗಲದೆ | ನಾವು ಕಾದುದು ಸಫಲವಾದುದು |
ಜೀವಿಸಿದೆವೆನೆ ಕುವರನೇನೀ ತೆಱನಱುಹಿಯೆಂದ || ೧೬ ||
ಚದುರಕೇಳೀ ಭರತವಿಜಯಾ | ರ್ಧದಲಿ ತೆಂಕಶ್ರೇಣಿಯೊಳಗಿ |
ಪ್ಪುದು ನಗರವದು ಕುಂಜರಾವರ್ತವು ತದವನೀಶ ||
ವಿದಿತ ಖಗಪತಿಯಶನಿವೇಗನ | ಸುದತಿ ವಿದ್ಯದ್ವೇಗೆಯವರೊ |
ಪ್ಪಿದ ಕುವರಿ ಪೆಸರಿಂದೆ ಶಾಲ್ಮಲಿದತ್ತೆ ಕೇಳೆಂದ || ೧೭ ||
ಚಿತ್ತಯಿಸು ಭೂಪಾಲ ಆ ಸತಿ | ಚಿತ್ತಜನ ಮಂತ್ರಾಧಿದೇವತೆ |
ಪೆತ್ತ ಖಚರ ನೃಪಾತ್ಮರಮೆಚ್ಚಳು ಸುರೂಪಿನಲಿ ||
ವೃತ್ತಕುಚೆಯಂದಶನಿವೇಗನು | ಪತ್ತಿದವಧಿಜ್ಞಾನಿಗಳ ಮುನಿ |
ಪೋತ್ತಮರನಭಿನುತಿಸಿ ಕೇಳ್ದೊಡೆ ಪೇಳ್ದರಿಂತೆಂದು || ೧೮ ||
ಈವನದೊಳೀ ಕೊಳನ ಮಿಂದಿಂ | ದೀವನೀಭವವ ಸವ ಮಾಡಿದ |
ನಾವನಾತನೆ ಅಳಿಯನಹನಿನಗೆಂದೊಡಂದಿಂದ ||
ಕಾವಲಿಕ್ಕಿಹನೆಱಿಯನೆಮ್ಮನು | ಈವನದೊಳಿಂದೀ ಕುಮಾರಿಯ |
ಜೀವವೆಮ್ಮಯ ಪುಣ್ಯಬಹವೊಲು ಬಂದೆ ನೀನರಸ || ೧೯ ||
ಎಂದು ರನ್ನ ವಿಮಾನಮಿದೆ ನಲ | ವಿಂದೆ ವಿಜಯಂಗೈಯಿಮೆನೆ ನೃಪ |
ನಂದುರದ ನಿಷ್ಕಂಧದಿಂದ ವಿಮಾನಕವತರಿಸೆ ||
ಚಂದದಲಿ ಪಲದೇಶಪುರಗಳ | ಸೌಂದರತೆಯೀಕ್ಷಿಸುತ ಬರೆ ಭೋ |
ರೆಂದು ಬಾಂಬಟ್ಟೆಯಲಿ ಬಂದುದು ತತ್ಪುರದ ಬನಕೆ || ೨೦ ||
ಇರಿಸಿ ಬಹಿರುದ್ಯಾನದೊಳು ಭೂ | ವರನನವರೀರ್ವರು ಖಚರರಾ |
ಪುರವನೈದಿ ನಿಜೇಶಗೀತೆಱನಱಿಪೆ ಹರುಷದಲಿ ||
ಪುರವ ಗುಡಿ ತೋರಣದಿ ಮಿಗೆ ಸಿರಿ | ಗರಿಸಿ ಸಬ್ಬರಕಳುಹಿದ ಕುವರನ |
ಕರಸಿಕಾಣುತ ಓಲಗದನೇಳ್ದಪ್ಪಿದನು ಖಚರ || ೨೧ ||
ಅಶನಿವೇಗ ಖಗೇಂದ್ರ ನೊಲಿದೀ | ಕ್ಷಿಸುತಲಳಿಯನ ರೂಪ ಯೌವನ |
ವಸಮ ವಿಕ್ರಮವೆಂಬಿವನು ನೆಱೆಮೆಚ್ಚಿ ಹರುಷದಲಿ ||
ಒಸೆದು ಶುಭಲಗ್ನದಲಿ ಉತ್ಸವ | ವೆಸೆಯೆ ಶಾಲ್ಮಲಿದತ್ತೆಯನು ರಾ |
ಜಿಸುವ ವಸುದೇವಂಗೆ ಮದುವೆಯ ಮಾಡಿ ಸುಖಮಿರ್ದ || ೨೨ ||
ಅವನ ಚೆಲುವಿಕೆ ಸೆರೆವಿಡಿದುದು | ಅವಳ ಕಂಗಳನವನ ದಿಟ್ಟಿಗ |
ಳೆವೆಯನಿಡಮಱದೆಳಸಿದವು ಖೇಚರಿಯಗಾಡಿಯೊಳು ||
ತವಕಿಸುವ ತನುವೊಂದಱೊಳಗೊಂ | ದವಗಹಿಸಿತೆನೆ ಕೂಡೆ ಸುರತದ |
ಸವಿತವದೆ ಸಮಸುಖವನುಂಡರು ದಂಪತಿಗಳವರು || ೨೩ ||
ಒಂದೆ ಜೀವವದೆರಡು ತನುವೊಲು | ನಿಂದುದೆನಲವರಿರುತಿರಲು ಸತಿ |
ಒಂದುದಿನವೆಲೆಕಾಂತ ನನ್ನನು ತೊಲಗಿ ಚರಿಸದಿರು ||
ಎಂದೊಡಾ ವಸುದೇವನೇಕೆನ | ಲೊಂದಿ ಶಾಲ್ಮಲಿದತ್ತೆ ಪತಿ ಕೇ |
ಳೆಂದಳೆಮ್ಮಯ್ಯನ ಪಿತಾಮಹ ಶರಧಿ ಚಂದ್ರಂಗೆ || ೨೪ ||
ಜ್ವಲನವೇಗನುಮಶನಿವೇಗನು | ಚೆಲುವ ಮಕ್ಕಳು ಪುಟ್ಟೆ ಪಿರಿಯಂ |
ಗಿಳೆಯನಾ ಪ್ರಜ್ಞಪ್ತಿ ವಿದ್ಯೆ ಸಮೇತ ಪಿತನಿತ್ತು ||
ಒಲಿದನಾ ಜಿನದೀಕ್ಷೆಗಿತ್ತಲು | ಜ್ವಲನವೇಗಂಗಶನಿವೇಗನು |
ಸುಲಭನೆನವಂಗಾರ ವೇಗನು ಒಗೆದರಾತ್ಮಜರು || ೨೫ ||
ಇರುತಲೆಮ್ಮಜ್ಜನು ವಿಯಚ್ಚರ | ರರಸುತನದಿಂ ಸುಖಿಸಿ ಕಡೆಯೊಳು |
ವಿರತತೆಯ ನಾಂತಿರ್ವರಾತ್ಮಜರನು ಕರೆದು ತನ್ನ ||
ಧರಣಿಯಿದೆ ಪ್ರಜ್ಞಪ್ತಿಯಿದೆ ಯಿವ | ರೆರಡರೊಳಗಾರ್ಗಾವುದಿಷ್ಟವು |
ಧರಸಿಮೆನಲಂಗಾರವೇಗನು ವಿದ್ಯೆಯೆನು ಕೊಂಡ || ೨೬ ||
ಇಳೆಯನೆಮ್ಮಯ್ಯಶನಿವೇಗನು | ತಳೆದನಜ್ಜಮ ಜ್ವಲನವೇಗನು |
ತಳೆದನಾ ಜಿನರೂಪನಿತ್ತಲು ನಮ್ಮ ಪಿರಿಯಯ್ಯ ||
ತಲೆದನಮ್ಮಯ್ಯನ ವಸುಧೆಯನು | ಸೆಳೆದು ಕೊಂಡನು ತನ್ನವಿದ್ಯಾ |
ಬಲದಿನಾತಂಗಳುಕಿ ಮತ್ಪಿತನೀ ಪುರದೊಳಿಹನು || ೨೭ ||
ಪೆತ್ತನೆನ್ನನು ಸುಖದಲಿರುತಿರ | ಲತ್ತಣಿಂದೆ ಜಿತೇಂದ್ರಿಯರು ಸದು |
ವೃತ್ತರಮಲರು ಚಾರಣರು ಬರೆ ಭಕ್ತಿಯಿಂದೆಱಗಿ ||
ಚಿತ್ತಶುದ್ಧದಿ ಧರ್ಮವನು ಕೇ | ಳ್ದುತ್ತಮನೆ ಪೇಳಿನ್ನೆನಗೆ ಪಿತೃ |
ದತ್ತ ರಾಜ್ಯವದಹುದೊ ಆಗದೋ ಎಂದು ಬೆಸಗೊಂಡ || ೨೮ ||
ಅರಸ ನಿನ್ನೀಮಗಳಿಗಾವನು | ಪುರುಷನಹ ಭೂಚರ ನರನ ಸುತ |
ನುರುಪರಾಕ್ರಮಿ ಆತನಿಂದಾ ರಾಜ್ಯವಹುದೆನಲು ||
ಹರುಷದಿಂದಾವಿಹೆವು ತತ್ಖೇ | ಚರನರಿತನಿದ ಗೂಢಚರರಿಂ |
ದರಸಕೇಳವನೆನಗೆ ಬೆದಱುವನೆಣಿಸನುಳಿದವರ || ೨೯ ||
ಇದು ನಿಮಿತ್ತದಿ ನನ್ನ ಬಿಡದಿರು | ಅದಯನವ ಕೊಲೆಗಂಜನೆಂದೊಡೆ |
ಸುದತಿ ಶಾಲ್ಮಲಿದತ್ತೆಯನು ನಸುನಗುತ ಬಿಗಿದಪ್ಪಿ ||
ಬೆದಱದಿರು ಮುನಿನುಡಿದ ನುಡಿ ತ | ಪ್ಪದು ಕಣಾ ಯೆಂದಿರುತಿರಲ್ಕಾ |
ಸುದತಿ ಪಡೆದಳನಾಧೃತನ ಭೂಪಾಲ ಕೇಳೆಂದ || ೩೦ ||
ಪೊಸಬಸಂತದಲೊಂದು ದಿನ ಮೋ | ಹಿಸುವ ಜಲವನ ಕೇಳಿಗಳನಿಂ |
ಪೆಸೆಯಲಾಡಿ ಬಳಲ್ದುಬಂಧುರ ಸಶ್ರಮಿಗಳಾಗಿ ||
ಮಿಸುನಿ ಮಾಡದ ತುದಿ ನೆಲೆಯೊಳಿಂ | ಬೆಸೆವ ನಿದ್ರೆಯೊಳೊರಗಿರಲ್ಕಾ |
ಗಸದೊಳಾಡುತ ಬಂದು ಕುವರನ ಕಂಡನಾ ಖಚರ || ೩೧ ||
ಎಸೆವ ಶಾಲ್ಮಲಿದತ್ತೆ ಯೊಳುದೋ | ಳ್ಬೆಸುಗೆಯನು ಮೆಲ್ಲಗೆ ಬಿಡಿಸಿ ಆ |
ಗಸಕೆ ವಸುದೇವನ ನೆಗೆದು ಕೊಂಡೈದು ಮಾಯೆಯಲಿ ||
ಮುಸುಕಿದನು ನಿದ್ರೆಯೊಳು ನಿದ್ರೆಯ | ನೆಸೆವ ತನ್ನ ವಿಮಾನದಲಿ |
… … … … … || ೩೨ ||
ಮಡದಿ ಗಂಡನ ಕಾಣದೇಳುತ | ಳುಡುಗೆಯನು ಬಿಗಿದುಟ್ಟು ಮುಡಿಯನು |
ಸಡಿಲದಂದದಿಕಟ್ಟೆ ನಿಡುವಾಳ್ಮತ್ತ ಪರವಾಂತು ||
ಕಡು ಜವದಿ ಬೆನ್ನಟ್ಟಿದಳು ಕಂ | ಪಿಡಿದ ಚಂದನ ಒಯ್ವವನ ಬೆಂ |
ಬಿಡದೆ ಬೆನ್ನಟ್ಟುವ ಭುಜಂಗವೊಲವನ ವಹಿಲದಲಿ || ೩೩ ||
ಸ್ಮರನೆಸಲು ಭೋರೆಂದು ಹೂಗಣೆ | ಮೊರೆದು ಪರಿವಂತಾಗಸಕೆ ಖೇ |
ಚರಿಪರಿಯ ಭೋರ್ಗರೆವ ದನಿ ಬೆದರಿಸಿತು ಚಂದಿರನ ||
ತೆರಳಿಸಿತು ಬಿರುಗಾಳಿ ತಾರೆಯ | ನೆರವಿಯನು ಖೇಡೆಯದ ಕೆಂಬಿಸಿ |
ಲುರವಣಿಗೆ ನಿಡುವಾಳ ಮಿಂಚಿಗೆ ಖಚರನೆದೆಗೆಟ್ಟಾಗ || ೩೪ ||
ಬಱಸಿಡಿಲ ಖಲ್ಲುಲಿಯವೊಲು ಬೊ | ಬ್ಬಿಱಿದು ಬಿಡುಬಿಡು ತನ್ನ ಗಂಡನ |
ನಱಿಯೇ ಗಡ ನೀವೆನ್ನ ಪರಿಯನು ನಿನ್ನ ತೋಳುಗಳ ||
ಹಱಿಗಡಿದು ಬಿಸುಡುವೆನು ಕೊರಳನು | ಮುಱಿವೆ ನಾಯುಧವಿಲ್ಲದೆನ್ನೊಡ |
ನೊಱಗಿದನ ಕದ್ದೊಯ್ವುದಧಟೇಂ ಯೆಂದು ತಾಗಿದಳು || ೩೫ ||
ಹೊಡೆದಳಸಿಯಿಂದಾ ವಿಮಾನವ | ನೊಡೆದು ರನ್ನದಕೆಂಡ ಕಡಱಲು |
ನಡುಗಿ ವಸುದೇವನನು ಬಿಸುಟನು ಬೆದರಿ ಖಗನಿಳೆಗೆ ||
ಕಡುಭರದಲಾಯುಧವೆರಸಿ ಹರಿ | ದೆಡೆಯೊಳೋಪನನಾ ಖಚರಿ ಹೊಂ |
ಗೊಡಮೊಲೆಯಲಾಂತಪ್ಪಿ ಪುಳಕದ ಕೀಲನಿಕ್ಕಿದಳು || ೩೬ ||
ಆ ಸಮಯದೊಳಗಾದುದೊಂದಾ | ಕಾಶ ವಚನವು ನಿನ್ನ ಚಿತ್ತಾ |
ಧೀಶನನು ಮೋಹಿಸದೆ ನೀನಿಲ್ಲಿರಿಸಿ ಹೋಗದಱಿಂ |
ಲೇಸು ಕಿಱಿದುಂಟೆನಲು ಕೇಳುತ | ಲಾ ಸುದತಿಯಿದು ದೇವತಾ ಸಂ |
ಭಾಷೆಯೆಂದಱಿದಿನಯನನನು ಬಿಡಲಾರದೊನಲಿದಳು || ೩೭ ||
ದೇವವಚನವಲಂಘನೀಯವು | ಭಾವಿಸುವೊಡೆಂದಾ ಖಚರಿ ತ |
ನ್ನಾವಿರಾಜಿಪ ಪರ್ಣಲಘುವಿದ್ಯೆಗೆ ನಿರೂಪಿಸಲು ||
ಆ ವಿಯಚ್ಚರೆ ಪೇಳ್ದವೊಲು ವಸು | ದೇವನನು ಚಂಪಾಪುರದ ಸಿರಿ |
ದೇವಿದುದ್ಯಾನದೊಳಗಿಳುಹಿತು ಭೂಪ ಕೇಳೆಂದ || ೩೮ ||
ಅನುನಯದಿ ನಿದ್ರಪ್ರಬೋಧಿನಿ | ಎನಿಪ ವಿದ್ಯೆಯ ಎಚ್ಚಱಿಸಿ ಪೊ |
ಯ್ತನಿತರೊಳು ಕೊಳವಕ್ಕಿ ಬನದಕ್ಕಿಗಳು ಸರಗೈಯೆ ||
ಜನಪನೆಚ್ಚತ್ತೆದ್ದು ಕೆಲದಲಿ | ವನಿತಯಲ್ಲೊರಗಿದ್ದ ಸೌಧಾ |
ವನಿಯಿದಲ್ಲೆಂಟು ದೆಸೆ ಈಕ್ಷಿಸುವ ಸಮಯದಲಿ || ೩೯ ||
ಮಿಸುನಿ ಗೋಂಟೆಯ ಬಳಸಿನಿಂ ದೆಸೆ | ದೆಸೆಗೆ ತೊಳಗುವ ಮಣಿಗಳಸ ರಂ |
ಜಿಸುವ ಗೋಪುರ ಸೌಧಗಳ ಸಂತತಿಗಳಿಂ ಮೆಱೆವ ||
ವಸುಧೆಗಚ್ಚರಿಯೆನಿಪ ಪುರ ಕ | ಣ್ಗೆಸೆಯೆ ವಸುದೇವನು ಮನದೆಗೊಂ |
ಡೊಸೆದು ನಡದೈತಂದು ಕಂಡನದೊಂದು ಬಸದಿಯನು || ೪೦ ||
ವರ ಸಮಶ್ರುತಿ ತನ್ನ ಧರೆಗವ | ತರಿಸಿದುದೊಯೆನೆ ಮೆಱೆವ ವಸತಿಯ |
ನರಸನೈತಪ್ಪೆಡೆಯೊಳರಗೆಱೆಗಂಡು ಪುರುಷದಲಿ ||
ಕರ ಚರಣ ಮೊಗದೊಳೆದು ಪಲ ತಾ | ವರೆಯ ಪೂಗಳ ನಾಯ್ದು ಕೊಂಡಾ |
ಪರಮ ಜಿನಭವನವನು ಪೊಕ್ಕಲು ಸ್ತೋತ್ರ ಮುಖನಾಗಿ || ೪೧ ||
ಬಸದಿಯನು ಬಲವಂದೊಳಗೆ ಪೊ | ಕ್ಕಸಮ ಬಾಣಾರಿಯ ಸಮಕ್ಷದೊ |
ಳೊಸೆದು ಭಾಳಸ್ಥಳನಿಹಿತ ಮುಕುಳಿತಕರನುಮಾಗಿ ||
ವಿಸಮ ಮೋಹ ಮತಂಗ ಕೇಸರಿ | ಕುಸುಮ ಬಾಣನ ರೂಪಡಗೆ ಮ |
ರ್ದಿಸಿದ ಮೈಗಲಿ ಬೋಧ ಸಿಂಧುವೆ ಜಯಜಯಾಯೆಂದ || ೪೨ ||
ಅತಿಭಕುತಿಯಲಿ ಜಿನರ ದರುಶನ | ನುತಿಯನೊಡರಿಸಿ ಮುಕುತಿ ಶಾಂತಾ |
ಪತಿಯನುಚಿತ ವಿಧಾನ ಪೂರ್ವಕ ಪೂಜೆಯನು ಮಾಡಿ ||
ಸ್ತುತಿ ಶತ ಸಹಸ್ರಂಗಳಿಂ ಜಿನ | ಪತಿಗೆರಗಿ ನಿರ್ವಾಣ ಲಕ್ಷ್ಮೀ |
ಪತಿಯು ಮಾನಪ್ಪನ್ನಮುದ್ಧರಿಸೆನ್ನ ನೊಸೆದೆಂದ || ೪೩ ||
ಸಕಲ ಬೋಧನಗಂಧ ಗಂಧೋ | ದಕ ಪವಿತ್ರ ಸಮಸ್ತಕನು ಕಡು |
ಭಕುತಿಯಲಿ ವರಬೋಧ ಸಿಂಧುಮುನೀಂದ್ರರಡಿಗೆರಗಿ ||
ಪ್ರಕಟಧರ್ಮವ ಕುಂಜರಾವ | ರ್ತಕ ಪುರದಿ ತಾಂ ಬಂದ ವೃತ್ತಾಂ |
ತಕಮನವರಿಂದರಿದೆರಗಿ ಪೊರಮಟ್ಟನಲ್ಲಿಂದ || ೪೪ ||
ಮುಂದೆ ಪೋಪುದವಲ್ಲಿ ನಾನಾ | ಚಂದವಹ ಸಿಂಗರದಿ ಸಾಲೆಯ |
ದೊಂದು ಶೋಭಿಪುದದಱ ಮುಂದಣಪಟ್ಟಸಾಲೆಯಲಿ ||
ಸೌಂದರದ ಗಂಧರ್ವ ವಿದ್ಯಾ | ಮಂದಿರನು ಸುಗ್ರೀವನೆಂಬವ |
ನೊಂದಿ ಪಲಬರು ರಾಜಸುತರಿಗೆ ವೀಣೆಗಲಿಸುತಿರೆ || ೪೫ ||
ಅರಸನಲ್ಲಿಗೆ ಪೋಗೆ ವೀಣೆಯ | ಗುರು ಕುಮಾರನ ನೋಡಿ ವಿನಯದಿ |
ಕರದುಕೊಂಡುಚಿತಾಸನದೊಳೊಲವಿಂದೆ ಕುಳ್ಳಿರಿಸಿ ||
ಅರಸುಮಗನ ಸುರೂಪ ಯೌವನ | ಪುರುಷಲಕ್ಷಣಗಂಡು ಪ್ರಾಕೃತ |
ಪುರುಷನಲ್ಲಿವನೆಂದು ಮನದಲಿ ಪಿರಿದು ಮೆಚ್ಚಿದನು || ೪೬ ||
|| ಅಂತು ಸಂಧಿ ೧೬ಕ್ಕಂ ಮಂಗಳ ಮಹಾ ||
Leave A Comment