ಸಂಧಿ ೧೨

ವಿನುತ ಸೋಮಪ್ರಭನು ಶ್ರೇಯಾಂ | ಸನು ಮೊದಲು ಪಾಂಡವರು ಕೌರವ |
ರನಿಬರುಂ ಕಡೆಯಾದ ಕುರುವಂಶವನು ವರ್ಣಿಸುವೆ || ಪಲ್ಲ ||

ಶ್ರೀಮದಂಧಕವೃಷ್ಣಿ ಸುಗುಣೊ | ದ್ದಾಮನುರು ಖಚರೇಂದ್ರ ವಿಭವದಿ |
ಭೂಮಿವಿಶ್ರುತ ಸೂರ್ಯಪುರದೊಳಗರಸುಗೈಯುತಲಿ ||
ಕಾಮ ಸನ್ನಿಭನೊಂದು ದಿನ ಸು | ಪ್ರೇಮದಿಂದೊಡ್ಡೋಲಗದಲಿರ |
ಲಾ ಮಹಾ ಮಂತ್ರಿಗಳು ಬಂದರು ಹಸ್ತಿನಾಪುರಕೆ || ೧ ||

ಬಂದು ಕಾಣಿಕೆಯಿಕ್ಕಿ ಹರುಷದಿ | ವಂದಿಸಿಯೆ ತಕ್ಕೆಡೆಯೊಳಿರ್ದೊಲ |
ವಿಂದನಿತು ಪೊತ್ತಿಂದ ಮೇಲೆಲೆದೇವ ಬಿನ್ನಹವು ||
ಸಂದ ಕುರುವಂಶಾಮೃತಾರ್ಣವ | ಚಂದ್ರಗಾಂಗೇಯಾವನಿಪ ಪೋ |
ಗೆಂದು ಕಳುಹಲು ಬಂದೆವೆಂದರಮಾತ್ಯರಿನಿದಾಗಿ || ೨ ||

ಎನಲು ಭೂಪತಿ ಕೇಳು ಹರುಷಾ | ನನದಿ ನೀವೇಂ ಬಂದ ಕಾರ್ಯವ |
ನನುವದಿಸಿಯೆನೆ ಜೀಯಚಿತ್ತೈಸೆಮ್ಮರಸ ತಮ್ಮ ||
ತನುಜರಿಗೆ ರಿಪುದಂತಿ ಪಂಬಾ | ನನರಿಗೆರೆ ದಟ್ಟಿದನು ದೇವರ |
ತನುಜೆಯರನಭಿಜಿತಸುರಸ್ತ್ರೀಯರನೆಲೆ ಭೂಪ || ೩ ||

ಅವರ ಬಿನ್ನಹಗೇಳಿ ನಸುನಗು | ತವನಿಪತಿ ನಿಜಮಂತ್ರಿಗಳಲಪ |
ನವನು ನೋಡಲು ತಿಳಿದವರು ನಿಮ್ಮರಸನನ್ವಯವು ||
ಅವನಿಯಾವುದು ಹೇಳಿಮೆನೆ ಪೇ | ಳುವೆನೆನುತ ಗಂಭೀರವಚನದಿ |
ಕಿವಿಗೆ ಸವಿಗುಡೆ ಬಿಚ್ಚಳಿಸಿದನು ಮುಖ್ಯವನರೊಳಗೆ || ೪ ||

ಪುರುಜಿನೇಶ್ವರಕಾದಶಾಲದೊ | ಳೊರೆಯಲಾದಿಕ್ಷ್ವಾಕು ವಂಶವು |
ಪಿರಿದೆನಿಪಕುರುವಂಶ ಹರಿವಂಶೋಗ್ರ ವಂಶಾದಿ ||
ಇರುತಲಿಹವದರೊಳಗೆ ಕುರುಕಲ | ದರಸ ತಾಂ ಸೋಮ ಪ್ರಯಕ್ಷ್ಮಾ |
ವರ ನಿಜಾನುಜ ದಾನತೀರ್ಥಕರಾದ ಶ್ರೇಯಾಂಸಾ || ೫ ||

ಕೂಡಿಸುಖದಿಂದಿರ್ದರಿಳೆಯೊಳು | ರೂಢಿಸಿದ ಸೋಮ ಪ್ರಭಾಂಗಾ |
ಗಾಡಿ ತಡೆದಿಹ ಜಯಕುಮಾರಕನಾಗೆ ರಾಜ್ಯವನು ||
ಕೋಡದಿತ್ತಿಸುದೀಕ್ಷೆ ಗೊಂಡವ | ಲಾಡಲೇಂ ತಂದೆಗಳುಮೀರ್ವರು |
ಕೂಡೆ ನಿರ್ವಾಣಕ್ಕೆ ಸಂದರು ರಾಯ ಕೇಳೆಂದ || ೬ ||

ಭರತಚಕ್ರಿಗೆ ಜಯಕುಮಾರಕ | ವರನು ಸೇನಾಪತಿ ಪದವನಾಂ |
ತಿರದೆ ದೀಕ್ಷೆಯಕೊಂಡು ಮೋಕ್ಷಕೆ ಪೋದನನ್ವಯಕೆ ||
ಧರೆಯೊಳಾದುದು ಸೋಮವಂಶದ | ವೆಸರು ಬಳಿಕಾ ಕುಲದೊಳುದಯಿಸಿ |
ದರಸುಗಳು ಪಲಬರು ಕಳಿದ ತದನಂತರದೊಳಲ್ಲಿ || ೭ ||

ಜನಿಸಿದನು ತಾಂ ಹಸ್ತಿ ನೃಪನೆಂ | ಬನುಪಮನು ತಾಂ ಹಸ್ತಿನಾಪುರ |
ವನು ವಿನಿರ್ಮಿಸಿ ಕಳಿಯೆ ಬಳಿಕ ಪಲಂಬರರಸುಗಳು ||
ವಿನುತರದ ನಾಳ್ದಳಿಯೆ ತತ್ಕುಲ | ಜನಿತನಘರಿಪು ಶಾಂತಿತೀರ್ಥೇ |
ಶನು ಜನಿಸಿ ಕಲ್ಯಾಣ ಪಂಚಕನಾದ ಬೆಂಬಳಿಯ || ೮ ||

ಪೇಳುವೊಡೆ ಪಲ್ಲೋಪಮಾರ್ಧದ | ಕಾಲ ಸಲುತಿರೆ ಕುಂಥು ಜಿನಪತಿ |
ಕಾಲಹರ ಕರ್ಮಾರಿ ತತ್ಕುಲ ಜಾತಮುಕ್ತಿಯೊಳು ||
ಮೇಳಿಸಿದರಲ್ಲಿಂದ ಮೇಲದ | ನಾಳಿವಲ ಬರು ಪೋದರಲ್ಲಿಂ |
ಮೇಲೆ ಶಕ್ತಿತ್ರಯ ನಿಲಯ ಜನಿಸಿದನು ಶಕ್ತಿ ನೃಪ || ೯ ||

ಶಕ್ತಿನೃಪತಿಯ ಮಡದಿ ಜಿನಪದ | ಭಕ್ತಿ ಧಾರುಣಿಗಾತ್ಮಜಾತರು |
ಶಕ್ತರಾಗೆ ಪರಾಶರನು ಶಾಂತಾವನಿಪನೊಗೆಯೆ ||
ಪ್ರೋಕ್ತ ಶಾಂತ ನೃಪಂಗೆ ರಾಜ್ಯವ | ನುಕ್ತಿ ಯುಕ್ತಗೆ ಕೊಟ್ಟು ಬಳಿಕಾ |
ಶಕ್ತಿ ನೃಪತಿ ಪರಾಶರರು ಜಿನದೀಕ್ಷೆ ಧರಿಸಿದರು || ೧೦ ||

ಕ್ಷಿತಿಗಧೀಶ್ವರನಾಗಿ ಶಾಂತ ನೃ | ಪತಿ ಸುಖದಿನಿರಲೊಂದು ದಿನ ವಿ |
ಶ್ರುತಪುರ ಪೊಱಬನದೊಳೋರ್ವಳು ಖಚರಿ ಬಿಜ್ಜೆಗಳಿಂ ||
ಕೃತಕ ಪಳೆವಾಪಿಯ ಸವೆದು ನವ | ರತುನಮಯ ಭೂಷಣವನದರೊಳು |
ಚತುರೆ ಸಲೆ ಮಡಗಿಟ್ಟು ಕೆಲದಲಿ ನಿಂದಳುತಲಿರಲು || ೧೧ ||

ಏಕೆ ನೀನೀ ಬನದೊಳಂಗನೆ | ಶೋಕಿಸುವೆಯೆಂದಲ್ಲಿ ಬಂದು ವಿ |
ವೇಕಿ ಶಾಂತ ನೃಪಾಲನೆನೆಯೆನ್ನಾಭರಣವಲ್ಲಿ ||
ತೋಕಿ ಬಿದ್ದವು ತೆಗೆದು ಕೊಡುವರ | ನೀಕಡೆಯೊಳಾಂ ಕಾಣದತ್ತಪೆ |
ನೇ ಕುಮಾರಕ ನಿನ್ನ ಹದನೇನೆಂದಳಾ ಖಚರಿ || ೧೨ ||

ಸುದತಿಯನು ನೋಡುತಲೆ ನನೆಗಣೆ | ಗೆದೆಯನೊಪ್ಪಿಸಿದನು ನೃಪತಿ ಬಳಿ |
ಕದನು ತಾಂ ತೆಗೆತಂದು ಕೊಟ್ಟಪೆನೆಂದೊಡಾ ನಿನಗೆ ||
ಮದವಳಿಗೆಯಹೆನೆನೆ ಖಚರಿ ವಿಭು | ವಿದಱ ತೆಱನೆಲ್ಲವನು ಹೇಳುವೆ |
ಚದುರೆ ಪೇಳ್ದಪಳೊಪ್ಪುವೀ ವಿಜಯಾರ್ಧ ಪರ್ವತದ || ೧೩ ||

ದಕ್ಷಿಣ ಶ್ರೇಣಿಯೊಳಗೆಸೆವುದು | ವೀಕ್ಷಿಪೊಡೆ ಪೃಥ್ವೀತಿಲಕವದ |
ರಕ್ಷಿಪ ಮಹೀಧರ ವಿಯಚ್ಚರನಾತನರ್ಧಾಂಗಿ ||
ಲಕ್ಷಿಸೆ ಮನೋಹರಿಯವರುಗಳು | ಕುಕ್ಷಿ ಸಂಭವೆ ನಾನು ಕೇಳು ವಿ |
ಚಕ್ಷಣನೆ ಲಕ್ಷ್ಮೀಮತಿಯು ತಿಳಿಯೆಂದಳಾಖಚರಿ || ೧೪ ||

ಒಂದು ದಿನ ಶ್ರೀಪಂಚಮಿಯನೋಂ | ತಂದಿನುಪವಾಸದೊಳು ತುರಿತದಿ |
ಮಂದಿರಕೆ ಪರಿದೆಯಿದಿಯಲ್ಲಿಯ ಜಿನಪ್ರತಿಮೆಗಳನು ||
ಚಂದದಿಂದರ್ಚಿಸುತಿರಲುವಲ್ಲಿಗೆ | ಬಂದ ಚಾರಣರಡಿಗೆಱಗಿಯಾ |
ನಂದದಲಿ ಧರ್ಮವನು ಕೇಳೀ ಸಂಸೃತಿಗೆ ಪೇಸಿ || ೧೫ ||

ಬಂದು ನೀರ್ವೆಗದ ಭರದಿ ನಿಜ | ಮಂದಿರಕೆ ತೆಱಪಱಿದು ನನ್ನಯ |
ತಂದೆತಾಯ್ಗಳ ಕಾಲ್ಪಿಡಿದು ನಾನೆಂದುದೆನಿಸುವೆನು ||
ಎಂದು ನಾನಾ ನಯದಿನಾಂತೊ ಱಿ | ವಂದವನು ಮಿಗೆ ಕೇಳ್ದು ಪರಮಾ |
ನಂದವೆಯಿದಿಮದೀಯ ಪಿತೃವೆಂತೆಂದ ನೆಲೆನೃಪತಿ || ೧೬ ||

ಮಗಳೆ ನೀಂ ತಾಯಾದೆನೆನಗೀ | ಸುಗುಣದಿಂ ಕೇಳಕ್ಕನಿಂ ದೀ |
ಕ್ಷೆಗೆ ಮೊಗಸಿದುದ ಲೇಸುನಾಂ ಜಿನದೀಕ್ಷೆಗೊಂಬುದಕೆ ||
ಬಗೆದಿಹೆನು ಸಂತಾನವೆನಗಿಂ | ತೊಗೆದುದಿಲ್ಲದಱಿಂದೆ ನೀನೆಲೆ |
ಸುಗಣಿಮಕ್ಕಳ ಪಡೆದು ಕೊಳು ಬಳಿಕ ದೀಕ್ಷೆಯನು || ೧೭ ||

ಎಂದು ಮಾತನು ನನ್ನಿಗೊಳಿಸಿದೆ | ತಂದೆಯೆಂದುದ ಮೀರಬಾರದು |
ಎಂದು ಸುಚರಿತ್ರಕ್ಕೆ ಪ್ರತಿಕೂಲರು ವಿಯಚ್ಚರರು ||
ಎಂದು ಭೂಚರ ರಾಯರೊಳ್ಳಿದ | ರೆಂದು ಭಾಷೆಯ ಕೊಂಡುಹುದುವಹೆ |
ನೆಂದು ನಾನರಸುತ್ತ ಬಂದೆನು ಶಾಂತ ಭೂಪಾಲ || ೧೮ ||

ನಿನ್ನ ಕುಲವನು ನಿನ್ನ ರೂಪನು | ನಿನ್ನ ಸುಚರಿತ್ರವನು ಕೇಳ್ದಾಂ |
ನಿನ್ನನೇ ಮನ ಬಯಸಿ ಬಂದೀಕೃತಕವೊಡ್ಡಿದೆನು |
ನನ್ನಿಯೆನಎ ಕೇಳ್ದೊಸೆದು ಕೂಪದ | ರನ್ನದೊಡವದು ತಕ್ಕ ಬಾಣದಿ |
ಸನ್ನುತನು ಪುಂಖಾನುಪುಂಖದುಳೆಚ್ಚುತೆಗೆದಿತ್ತ || ೧೯ ||

ಕುಡೆ ಖಗನ ಮಗಳೆಂದಳಿಂತಾಂ | ಪಡೆದ ಮಕ್ಕಳನಮರನದಿಯೊಳು |
ಬಿಡುವುದಕೆ ಕಡೆಯಲ್ಲಿ ನಾಂ ದೀಕ್ಷೆಯನು ಕೊಂಬುದಕೆ ||
ಕೊಡುವೊಡಂಬಡಿಕೆಯನೆನುತಲದ | ಪಡೆದು ಮತ್ತಿಂತೆಂದಳೆಲೆ ಕೊಡೆ |
ಗೊಡೆಯನೀನೀ ದಿನದೊಳೀ ಪೊತ್ತಿನಲಿ ವಿಭವದಲಿ || ೨೦ ||

ಗಂಗೆಯೇಳೌ ವನದೊಳಿರು ನಿನ | ಗಂಗೈಸಿ ವೋಲೀತಹೆನೆನುತಲಾ |
ಭೃಂಗಕುಂತಳೆ ಹೋಗಿ ತಂದೆಗಿದೆಲ್ಲವೆನು ತಿಳುಪಿ |
ಪಿಂಗದಾ ಲಕ್ಷ್ಮೀಪತಿಯು ಪೇ | ಳ್ದಂಗದಿಂದಾ ಕಾಲದೊಳು ಸುರ |
ಗಂಗೆಯೊಳು ಚೆಲುವಾಗಿ ಬಂದಳು ಜನವು ಬೆರಗಾಗೆ || ೨೧ ||

ಕಳಸ ಕನ್ನಡಿ ಕೊಡೆ ಗುಡಿಗಳ | ಗ್ಗಳಿಪ ಮಂಗಳ ವಾದ್ಯ ರಭಸದಿ |
ನಿಳೆನೆಱೆಯನೆಲ್ಲರು ಬೆರಸಿಯಿದಿರ್ಗೊಂಡು ಕರೆದಿರಲು ||
ಇಳೆಯೊಳಿನ್ನುಂ ಗಂಗೆ ಬಹಳೆಂ | ದಳಿ ಜನವು ಇದಿರ್ಗೊಳ್ವುದಂದಾ |
ಯೆಳೆಯಳಿಗೆ ಗಂಗಾಭಿಧಾನವು ಬಂದುದದಱಿಂದ || ೨೨ ||

ಅಂತು ಬಂದಾ ಗಂಗೆಯೊಡನಾ | ಶಾಂತ ನೃಪವರ ಮದುವೆ ನಿಂದು ಱೆ |
ಕಂತು ಕೇಳಿಯೊಳಿರುತಿರುತ ಕ್ರಮದೆಂಟು ಮಕ್ಕಳನು ||
ಶಾಂತೆ ಪಡೆದಾ ಗಂಗೆಯೊಳು ಬಿ | ಟ್ಟಂತೆ ತೋ ಱಿಸಿ ವಿಜ್ಜೆಗಳ ಕೈ |
ಗಾಂತು ಕೊಟ್ಟಾ ಪಿತೃಮಹೀಧರ ಖಗಗೆ ಕಳುಹಿದಳು || ೨೩ ||

ಮತ್ತಮೊಂಬತ್ತನೆಯ ಕಂದನ | ಪೆತ್ತು ಸತಿಯಾ ತೆಱದಿ ಬಿಡೆ ಭಯ |
ಮುತ್ತು ಶಿಶುವಿರೆ ಕಂಡು ಮರಳಲ್ಲಿಂದ ತಂದೋವೆ ||
ಪೆತ್ತನಾ ವಿಭು ಭೀಷ್ಮನಾಮವ | ನತ್ತ ಗಾಂಗೇಯಾಭಿಧಾನವು |
ಪತ್ತಿದುದು ಗಂಗಾತನೂಭವನಾದ ಕಾರಣದಿ || ೨೪ ||

ಬೆಳೆಬೆಳೆದು ಗಾಂಗೇಯ ನೃಪದೋ | ರ್ವ್ವಳಪರಾಕ್ರಮಿಯಾಗಿರಲು ರತಿ |
ಯಳಿದು ಗಂಗಾದೇವಿ ಭೀಷ್ಮಗೆ ತನ್ನ ಬಿಜ್ಜೆಗಳ ||
ಕಲಿಸಿ ಕೊಟ್ಟಾ ಶಾಂತನನುಮತ | ದೊಳು ಜಿನೋಕ್ತತಪಂ ಬಡೆದು ತನು
ವುಳಿದುವಚ್ಯುತಕಲ್ಪದೊಳು ಸಾಮಾನಿಕಾಮರನು || ೨೫ ||

ಎನಿಸಿ ಜನಿಸಿ ಪೊದಳ್ದ ಸುಖಗಳ | ನನುಭವಿಸುತಿರಲತ್ತಲಿತ್ತಲು |
ವಿನುತ ಶಾಂತನದೊಂದು ದಿನ ಮಂದಾಕಿನಿಗೆ ಬಂದು ||
ಜನಪ ಋಷಿಯಾಶ್ರಮವನೀಕ್ಷಿಸು | ವನಿತಱೊಳಗಲ್ಲಿರ್ದ ಚಂದ್ರಾ |
ನನೆಯ ಕನ್ನೆಯ ಚೆನ್ನೆಯೋರ್ವಳ ಕಂಡು ಮನಸೋತ || ೨೬ ||

ಬಟ್ಟಮೊಲೆಗಳ ಕೊರ್ವ್ವುಗಳ ನೇ | ರ್ಪಟ್ಟ ನಳಿತೋಳೊಲಹ ಸೊಬಗಳ |
ವಟ್ಟ ಜವ್ವನ ಮದದ ಹೊಗರನು ಮಂದಗತಿಗಳನು |
ನೆಟ್ಟನಾಂತ ತಳೋದರಿಯನುಱೆ | ದಿಟ್ಟಿಗೊಂಡವನಂದು ಕಾವನ |
ಪಟ್ಟದಾನೆಯ ಸಿಂಗರಿಸಿ ನಿಂದುದೊ ದಿಟದಿನೆಂದ || ೨೭ ||

ಅಱೆದು ವಸುವೆಂಬ ತಾಪಸ | ನುಱುವ ಮಗಳೆಂಬುದನು ವಿಧುಕುಲ |
ದೆಱೆಯ ಶಾಂತನು ಬೇಡಿಯಟ್ಟಿದೊಡಂದು ತಾಪಸನು ||
ಮಿಱುಪ ಹೊಸ ಜವ್ವನ ಮಗಳ ನಾ | ನಱುದು ಮುದುಪಗೆ ಕೊಡೆನೆನಿಪ ಬೇ |
ಸಱ ನುಡಿಯ ಕೇಳ್ದಾ ವಿರಹತಾಪದಲಿ ಮಱುಗುತಿರೆ || ೨೮ ||

ಸುರನದಿಯ ಸುತನಂದು ತಂದೆಯ | ವಿರಹ ವೇದನೆಯಱಿದು ಬಳಿಕಾ |
ಗೊರವನಲ್ಲಿಗೆ ಪೋಗಿ ಮಜ್ಜನಕಂಗೆ ಋಷಿ ನಿಮ್ಮ ||
ವರಸುತೆಯ ಕೊಡಿಮೆನಲು ನೀನೀ | ದೊರೆಯ ಮಗನಿರೆ ಕೊಟ್ಟ ಮಗಳಿಗೆ |
ಪೊರೆದ ಪುತ್ರರು ನಿನಗೆ ಕಿಂಕರರಾಗದಿರರೆಂದ || ೨೯ ||

ಎಂದ ಮಾತಿಗೆ ಭೀಷ್ಮನಕಟೀ | ಯೊಂದು ಜನ್ಮಕೆ ಮದುವೆಯಾದಡೆ |
ತಂದೆಯಾಣೆ ಮುನೀಶ ಕೊಡು ನಿಜಸುತೆಯ ಮತ್ಪಿತೃಗೆ ||
ಎಂದ ಪೂಣ್ಕೆಗೆ ಬೆದಱಿ ನೃಪತಪ | ದೊಂದದಿರು ಕೈವಿಡಿದು ಈಕೆಯ |
ಕಂದನಿಂ ರಾಜ್ಯವನು ನಡೆಯಿಸಿಕೊಂಡಿಹುದು ಎಂದ || ೩೦ ||

ನಿಲೆ ನುಡಿಯೆ ಗಾಂಗೇಯಗಾ ಋಷಿ | ಬಳಿಕ ತನುಜೆಯ ಸತ್ಯವತಿಯನು |
ಚಲಿಸದಾ ಶಾಂತಂಗೆ ಕುಡೆ ಸುಖದಿಂದಿರುತ ಸುಖದಿಂ ||
ಲಲನೆ ಪೆತ್ತಳು ಚಿತ್ರವೀರ್ಯನ | ನಲಘು ಭುಜದ ವಿಚಿತ್ರವೀರ್ಯನ |
ನಿಳೆಯೊಳತಿ ವಿಖ್ಯಾತರೀರ್ವರು ಬೆಳೆಯೆ ಶಾಂತ ನೃಪ || ೩೧ ||

ನನ್ನ ದೆಸೆಯಿಂ ತನುಜನಂಗಜ | ಸನ್ನಿಭಯ ವನಿತೆಯರ ತೊಱೆದನು |
ಇನ್ನೆನಗೆ ಸಾಕೆಂದು ರಾಜ್ಯ ಶ್ರೀವಿಮುಖನಾಗಿ ||
ಸನ್ನುತನು ಸಪ್ತಮಗುಣ ಸ್ಥಾ | ನೋನ್ನತಿಯನಾಂತಿರೆ ನದೀಸುತ |
ಸನ್ನಿಹಿತ ಸಾಮ್ರಾಜ್ಯ ಪದವನು ಚಿತ್ರವೀರ್ಯಂಗೆ || ೩೨ ||

ಕೊಟ್ಟು ಕೊಡೆ ವಿಚಿತ್ರವೀರ್ಯಂಗೆ | ಕೊಟ್ಟು ಯುವರಾಜ್ಯವನು ಕಾಂಕ್ಷೆಯ |
ಬಿಟ್ಟು ಅನುಜನ ಬಿಡದರಸುಗೈಸುತ್ತಲಾ ಭೀಷ್ಮ ||
ನೆಟ್ಟನಿರೆಯಂಬಾಲೆಯಂಬೆ ಸು | ದಿಟ್ಟೆಯಂಬಿಕೆಯೆಂಬ ಪೆಸರಳ |
ವಟ್ಟ ರಾಜಕುಮಾರಿತಿಯವರನು ವಿಚಿತ್ರವೀರ್ಯಂಗೆ || ೩೩ ||

ಪರಿಣಯವನುಂ ಮಾಡಿಸಿದನಾ | ಸುರನದಿಯ ಸುತನಾತನಾ ಮೂ |
ವರೊಳು ಪಿರಿದು ವಿಚಿತ್ರರತದಿಂ ಚಿತ್ರವೀರ್ಯನೃಪ ||
ಇರೆಲುವಂಬಾಲೆಗುಱೆಪುಟ್ಟುಂ | ಗುರುಡನಾ ಧೃತರಾಷ್ಟ್ರನಂಬೆಗೆ |
ವರತನೂಭವ ಪಾಂಡುವಂಬಿಕೆಗಾ ವಿದುರನಾದ || ೩೪ ||

ಪುತ್ರರಿಂತುದಯಿಸೆ ಬಳಿಕ್ಕಾ | ಚಿತ್ರವೀರ್ಯ ಕ್ಷಯದಿ ಮಡಿಯೆ ವಿ |
ಚಿತ್ರವೀರ್ಯನು ಪರನೃಪನ ಸಂಗ್ರಾಮದಿಂದಳಿಯೆ ||
ಧಾತ್ರಿಯೊಳಗಪ್ರಮತಿಮರೆಱಿಯನ | ಪುತ್ರರಾ ಕುರುವಂಶ ಗಗನ ಸು |
ಮಿತ್ರರಮಲಚರಿತ್ರರೆಂದಱುಹಿದನು ವಿಸ್ತರದಿ || ೩೫ ||

ಅರಸನಂಧಕವೃಷ್ಟಿ ಹರ್ಷೋ | ತ್ಕರುಷನಾದನು ಮಂತ್ರಿ ವಚನದಿ |
ಕುರುಕುಲಾಗ್ರಣಿಗಳಿಗೆ ಹೆಣ್ಣೀವುದಕೆ ಮಂತಣವೆ |
ಹಿರಿಯನಾರವರೊಳಗೆನಲು ಧರೆ | ಗರುಹನಾ ಧೃತರಾಷ್ಟ್ರನೆನೆ ಕೇ |
ಳ್ದರಸನಂಧಕನಾದೊಡಾಗಲಿ ಸಿರಿಯೆಕಣ್ಣಿಂದ || ೩೬ ||

ಅನುಜ ನರಪತಿ ವೃಷ್ಣಿಯನು ತ | ಜ್ಜನಪನಂಧಕ ವೃಷ್ಣಿ ಕರೆಯಿಸಿ |
ಅನುಮತದಿ ಗಾಂಧಾರಿಯನು ಧೃತರಾಷ್ಟ್ರಗಿತ್ತಪೆವು ||
ಎನುತಲುಡುಗೊ ಱೆಗೊಟ್ಟು ಮಂತ್ರಿಗ | ಳನು ಕಳುಪೆ ಬೀಳ್ಕೊಂಡವರು ಹ |
ಸ್ತಿನಪುರವನೈತಂದು ಭೀಷ್ಮರ ಕಂಡು ಶೌರ್ಯವನು || ೩೭ ||

ಬಿಚ್ಚಳಿಸಿದೊಡೆ ಹರುಷದಿಂ ನೃಪ | ಮೆಚ್ಚಿ ವಿಭವೋತ್ಸವದಿ ದೆಸೆಯನ |
ಮರ್ಚಿ ಮಂಗಳತೂರ್ಯರವ ಮಧುರಾಪುರಕೆ ಪೋಗಿ |
ಬೊಚ್ಚದೀ ಲಗ್ನದೊಳು ಸದುಬುಧ | ರುಚ್ಚರಿಪ ಮಂಗಲವಚದಿ ಮೈ |
ವೆಚ್ಚಿ ಧೃತರಾಷ್ಟ್ರಂಗೆ ಗಾಂಧಾರಿಗೆ ಸುಖಮಿರ್ದರವರತ್ತ || ೩೯ ||

ಹಸ್ತಿಕೋಟಿಘಟಾ ಪ್ರಭಾವದ | ಹಸ್ತಿನಾಪುರದೊಳಗೆ ಗುಣ ವಿ |
ನೃಸ್ಯಚಿತ್ತನು ಬಾಂದೊಱೆಯಮಗನಿರುತಲೊಂದು ದಿನ ||
ಸಪ್ತಪಾಂಡುಗೆ ಕುಂತಿದೇವಿಯ | ನಸ್ತರಿಪು ಬೇಡಟ್ಟಿ ತತ್ಪಿತೃ |
ವಿಸ್ತರದ ಪಾಂಡುಪ್ರರೋಗಿಗೆ ಕುಡುವುದೆಂತೆನಲು || ೪೦ ||

ಬಂದರವರಾ ಸೂರ್ಯಪುರದಿಂ | ದಂದುವಂಧಕವೃಷ್ಣಿ ತಮಗೇ |
ನೆಂದ ತೆಱನನು ಮಂತ್ರಿಗಳು ಭೀಷ್ಮಂಗೆ ಬಿನ್ನೈಸೆ ||
ಇಂದುವದನೆಯ ಕುಂತಿದೇವಿಯ | ಸೌಂದರತೆಯನು ತುಂಬು ಜವ್ವನ |
ದಂದವನು ತಾಂ ಕೇಳುತಿರ್ದನು ಪಾಂಡುಸುಕುಮಾರ || ೪೧ ||

ಕುಂತಿದೇವಿಯ ರೂಪು ಮನಸಿಜ | ಕೊಂತದಂದದಿ ಪಾಂಡುರಾಯನ |
ಸ್ವಾಂತವನು ನಡೆನೋಯನೊಂದು ಮನೋಜತಾಪದಲಿ ||
ಕಾಂತತನುರುಚಿ ಬೆಂದು ಬೂದಿಯ | ಕಾಂತಿಯೆನೆ ಕಣ್ಗೆಸೆಯೆ ಬಳಿಕಾ |
ಕಾಂತು ಪಾಂಡುವ್ಯಾಧಿಯಿಂ ಸಾರ್ಥಕವೆಸರನಾಂತ || ೪೨ ||

ಮಾಯ್ದೊ ಪಾಂಡುನೃಪಂಗೆ ಹೂವಿನ | ಕೈದುಕಾಱನ ಬೇಟೆಯಿಂ ಚೆ |
ನ್ನೈದಿಲರಗೆ ಱಿನೀರತಂಬೆಲರಿಂಗದಿರು ಬೇಂಕೆ ||
ಎಯ್ದೆ ಮುಸುಕಿದ ಭೂಮಿಯಾಗಸ | ಕಾಯ್ದೆ ತೇಜೋಭೂತವಲ್ಲದೆ |
ಆಯ್ದು ಭುತವದಿಲ್ಲೆನಿಸೆ ಪೊರಳಿದನು ವಿರಹದಲಿ || ೪೩ ||

ಪಾಂಡುಭೂವರನಿಂತು ವನವನೆ | ಪುಂಡರೀಕಕ್ಕಿಕ್ಕೆ ಎಂಬ ವೊ |
ಲಂಡಲೆವ ಕಾಮಾಗ್ನಿಯಿಂ ಬನದೊಳಗೆ ತೊಳಲುತಿರೆ ||
ಚಂಡಕಿರಣವು ಸಲಲಱಿಯದು ಱೆ | ಮಂಡಳಿಸದಾ ಬನದ ಸಿರಿಯನು |
ಕಂಡನತ್ತೊಸೆದೊಂದು ದಿನವಾ ವಜ್ರಮಾಳಿ ಖಗ || ೪೪ ||

ವರಮನೋಹರಿಯೆಂಬ ನಲ್ಲಳು | ವೆರಸಿ ಬಂದು ವಸಂತವಾಸಲೆ |
ಸರ ಬನದೊಳೆಳೆದಳಿರ ಮಂಟಪದರಳ ಪಸೆಯೊಳಗೆ ||
ಸುರತ ಸುಖರಸವುಂಡು ತನ್ನಯ | ಬೆರಳಮಣಿಮುದ್ರಿಕೆಯನಾ ಖೇ |
ಚರನು ಮಱೆದೀಡಾಡಿ ಪೋಪುದುವಿತ್ತ ಪಾಂಡುನೃಪ || ೪೫ ||

ತೊಳಲುತಾಗಳು ಬಂದು ನಱುದಂ | ಬುಲದ ಗಂಧದ ಕತ್ತುರಿಯ ಪರಿ |
ಮಳವ ನೆರಳುಱಿ ತೋ ಱಿ ಕಂಡನು ಕಮ್ಮಲರ ಹಸೆಯ ||
ಕೆಲದೊಳಗೆ ಪೂಗೋಲ ಘಾಯದಿ | ಬಳೆದೆದೆಯ ವಿರಹಾಗ್ನಿಸಿಡಿಯು |
ಚ್ಚಳಿಸಿ ಬಿರ್ದಂತಿರ್ದ ಮಣಿಮುದ್ರಿಕೆಯನವನೀಶ || ೪೬ ||

ತೆಗೆದುಕೊಂಡುಂಗುರದ ರನ್ನದ | ಸುಗುಣವನು ನೆಱೆ ನೋಡುತಿರಲಾ |
ಖಗನು ಬೆರಳಿಂ ಕಾಣದದನಱಸುತ್ತಲಳುತಿರಲು |
ಮೊಗವನೋಡುತಲಿಂಗಿತದಿ ನೆ | ಟ್ಟಗೆ ತಿಳಿದು ಖಚರೇಂದ್ರ ನೀನೇಂ |
ಬೆಗಡುಗೊಳದಿರು ಇದೆ ಎನುತ ನೃಪನಿತ್ತನುಂಗುರವ || ೪೭ ||

ಕೊಡಲು ಹರುಷದಿ ವಜ್ರಮಾಳಿಯು | ಪೊಡವಿಪತಿಗತಿ ಮೆಚ್ಚಿ ನೀನಿಂ |
ತಡವಿಯೊಳು ಬಗೆಗೊಟ್ಟು ಬೆಳುಮೊಗವಾಗಿ ಬಡಪಟ್ಟು ||
ಕಡು ಬಿರೈಸಿದೆಯೋತು ಸುರತವ | ಪಡೆಯದೀಪರಿ ನೋವೆಯಕ್ಕೆಂ |
ದೊಡಲಿನೊಳಗಣ ಮಾತನಾ ಭಾವಜ್ಞನಱಿದೆಂದ || ೪೮ ||

ಆದೊಡೆಲೆ ನೃಪ ಕಾಮರೂಪಕ | ಸಾಧನವೆನಿಪ್ಪುಂಗುರವು ನಿ |
ರ್ವಾದದಲಿ ಪಡೆಯಿಷ್ಟಕಾಮವ ನಾಲ್ಕೆರಡು ದಿವಸ ||
ಆದರದಿ ನಿನಗಿರಲೆನುತ ಕೊ | ಟ್ಟಾದಿವಿಜಮಾರ್ಗಕ್ಕೆ ಬೇಗದಿ |
ಪೋದನಿತ್ತರಸಾಯನಿಂ ಬಡೆದಂತೆ ನೃಪನಿರ್ದ || ೪೯ ||

ಮದನನಾಣತಿಗೊಂಡು ಕೊಂತಿಯ | ಮದನಕೇಳಿಗೆ ಪೋಪವೊಲು ರಾ |
ಗದಲಿ ಕುವರನು ಹಸ್ತಿನಾಪುರವೈದಿಯಲ್ಲಿಂದ ||
ಮದನಮುದ್ರಿಕೆಯಾಂತು ಖಗಪೇ | ಳಿದ ಸುಮಂತ್ರವ ಜಪಿಸಿ ಕಡು ಬೇ |
ಗದಿನದೃಶ್ಯದಿ ಬಾಂಬರಿಯೊಳಾ ಸೂರ್ಯಪುರವೈದೆ || ೫೦ ||

ಆಕೆಯಿಹ ಚೆಂಬೊನ್ನಮಾಡಕ | ನೇಕ ಸೊಕ್ಕಾನೆಗಳು ಬಳಸಿಹ |
ವೇಕೆನಲು ಗಂಡೆಂಬನೊಳವತ್ತೈದದಂದದಲಿ ||
ಆಕೆ ನಾಲುಕುನೀರಮಿಂದು ಸ | ಖೀ ಕದಂಬಕದೊಡನೆ ಮೀನಪ |
ತಾಕನರಸಿಯೊಲೆಯಿದೆ ಸಿಂಗರಗೆಯ್ದು ರಾತ್ರಿಯಲಿ || ೫೧ ||

ರಾಗರಸದಿಂ ಹರುಷಗೋಷ್ಠಿಯೊ | ಳಾಗಳಾ ವಧುವಿರಲು ಬಾನಿಂ |
ಬೇಗದಲಿ ಬಂದಾಕೆಯಿಹ ಮೇಗಣ ನೆಲೆಯ ಪೊಕ್ಕು ||
ನೀಗಿದನದೃಶ್ಯತೆಯ ಮಂತ್ರಿಸಿ | ಹೂಗಣೆಯಗೆಣೆರೂಪ ಕಣ್ಗಿನಿ |
ದಾಗೆ ನಿಂದನು ನೃಪತಿ ಸಖಿಯರು ಸೈವೆಱಗುಗೊಳಲು || ೫೨ ||

ಅವಳ ಕಣ್ಣುಗಳವನ ಗಾಡಿಯೊ | ಳವನ ದಿಟ್ಟಿಗಳವಳ ಚೆಲುವಿನೊ |
ಳೆವೆ ಮಿಸುಕಮಱೆದೆಯ್ದೆ ಸಿಲುಕಿದುದವಳವನ ಮನವು ||
ತವಕದಲಿ ತಳ್ಳಳಿಸಿದವು ಬಳಿ | ಕವಳ ಸಸಿಕಾಂತವು ಸಸಿಯ ಕಂ |
ಡವಯವದಿ ಬೆವರ್ವಂತೆ ರೊಮ್ಮನೆ ಬೆಮರಿ ತಲೆವಾಗೆ || ೫೩ ||

ಸುದತಿಗಾದಾ ಸಾತ್ವಿಕೋದಯ | ದೊದವನ ಱಿದಹ ಕಾರ್ಯವದ ತಾಂ |
ಮೊದಲೊದವೆ ತಪ್ಪೇನು ಕೊಂತಿಯ ಪುಣ್ಯಫಲವೈಸೆ ||
ಮದುರೆಯೊಳು ಗಾಂಧಾರಿದೇವಿಯ | ಮದುವೆಯಲಿ ಈ ಪಾಂಡುಕುವರನ |
ಹದನ ಬಲ್ಲೆವು ಸತಿಯ ಭಾಗ್ಯದಿ ಕಾಮಸಮನಾದ || ೫೪ ||

ಎಂದು ಕೊಂತಿಯ ಪ್ರಾಣ ಸಖಿಯರು | ಬಂದ ಪಾಂಡುಗೆ ಕೊಂತಿ ದೇವಿಗೆ |
ಸಂದಮಲ ಗಂಧರ್ವ ಕಲ್ಯಾಣವನು ಸಲೆ ಮಾಡಿ ||
ಅಂದವರನಾ ರನ್ನ ಮಂಚದೊ | ಳೊಂದಿದೊಳು ಮೃದು ತಲ್ಪದೊಳಗೊಲ |
ವಿಂದಲೊಡಗೂಡಿದರು ಸರಿದರು ಮೆಲ್ಲನಿರದತ್ತ || ೫೫ ||

ಎಸೆವ ಹೊಂಜೆಳೆ ಮೈಗಳೆರಡಱ | ಬೆಸುಗೆ ಸಡಿಲಿದು ಸಕ್ಕರೆಯ ಸವಿ |
ಯೊಸರ್ವ ಚೆಂದುಟಿಯುಣಿಸು ದಣಿಯದು ರೊಮ್ಮನೊಱೆತಪ್ಪ ||
ಬಿಸಿಯ ಬೆಮರಾಱದು ಕಡಂಗುವ | ಹಸಿಯ ಮೋಹವು ಹವಣಿಸದು ಮೇ |
ಳಿಸುವ ಪುಳಕವು ನಾಣ್ಬದಿರೆ ಸುಸಿಲುಂಡವರವರೊಲಿದು || ೫೬ ||

ಇಂತು ಸುರತಸುಖಾಂತದೊಳು ಮೊದ | ಲಂತೆ ಬೀಯದ ಬೇಟದಿಂ ವಿ |
ಭ್ರಾಂತರಿರುತಿರೆ ಸಖಿಯರಗಲಿಸೆ ತೊಲಗಿ ಕೊಂತಿಯನು ||
ಕಂತುವಂತಿರ ದೃಶ್ಯತೆಯ ನಿರ | ದಾಂತು ತಾರೆಗೆವಟ್ಟೆಯಲಿ ಬಂ |
ದೆಂ ತಡೆಯದಾ ನೃಪತಿ ನಿಜಪುರದೊಳಿರುತಿರಲು || ೫೭ ||

ಕೊಂತಿಗಾದುದು ಗರ್ಭಕ್ರಮದಿಂ | ಮಂತಣದ ಕೆಳದಿಯರು ಗೂಡದ |
ಲಂತು ನಡೆಯಿಸುತಿರಲು ಮಾಸವು ನೆ ಱಿಯೆ ನೆಱಿಯೆ ||
ಕೊಂತಿಕುವರನ ಪಡೆಯ ಮುನ್ನವೆ | ಚಿಂತಿಸಿಯೆ ಸವೆಯಿಸಿದ ಚಿನ್ನದ |
ಶಾಂತಮಂಜೂಷೆಯೊಳು ಬಾಲನನಿರಿಸಿ ಕೆಲದಲ್ಲಿ || ೫೮ ||

ಸುರಿದು ರನ್ನದ ಪುಂಜವನುಯೀ | ಯರಸು ಮಗಸಿದ ಸೋಮಕುಲಜನು |
ಸುರಿದ ರನ್ನವ ಕೊಂಡುಜತನದಲೋವಲೀ ಮಗನ ||
ಹರುಷದಲಿಯೆಂದದಱ ಕೆಲದಲಿ | ಬರೆದು ಮಂದಸ ಕುಶಲದಲಿ ಸಖಿ |
ಯರು ಜಗುನೆಯೊಳಗಿರಿಸಿ ಬರೆಪೊಯ್ತತ್ತಲದು ಬೇಗ || ೫೯ ||

ಪರಿದು ಬಹುಮಂದಸನು ಚಂಪಾ | ಪುರದ ದೊರೆಯಂಬಿಗನು ತೆಗೆ ತಂ |
ದಿರದದಱ ಬಾಯ್ದೆಗೆದು ಕಂಡನು ಚೆಲುವ ಕಂದನನು ||
ತರುಣಿ ನಿನಗಿವ ಕಂದನಾಗಲಿ | ಪೊರೆವವೆನುತವೆ ರತ್ನಪುಂಜವ |
ನುರಿಯ ಕಂಡವೊಲೀಕ್ಷಿಸುತ ಬಗೆಬೆದಱಿಯಿಂತೆಂದ || ೬೦ ||

ಉರಿಯನುಗುಳುವ ರನ್ನಪುಂಜವ | ತರುಣತರಣಿಯ ಹೋಲ್ವಶಿಶುವನು |
ಧರಿಸಲಾಪರೆ ಮಡದಿ ಕೇಳಮ್ಮೊಡೆಯ ಸೂರ್ಯಂಗೆ ||
ವರತನೂಭವರಿಲ್ಲ ಕೊಟ್ಟೊಡೆ | ಹರುಷದಿಂದೋವುವರೆನುತ ಚೆ |
ಚ್ಚರದಿ ಕೊಂಡರಸಂಗೆ ಕೊಟ್ಟನು ಸೂತನೋತದನು || ೬೧ ||

ಅರಸ ಸೂರ್ಯನು ತನ್ನ ಹರುಷದಿ | ತೆಱೆಯೆ ಪೊಮ್ಮಂದಸಿನ ಮುಚ್ಚಳ |
ದುರುಶರಧಿಗುಱೆ ಕರ್ಣಧಾರಕನೆಂದಱಿಪುವಂತೆ ||
ಎರಡು ಕಿವಿಗಳ ಪಿಡಿದುಕೊಂಡೊಱ | ಗಿರೆ ಸುಲಕ್ಷಣ ಮೂರ್ತಿಗಂಡಿವ |
ನರಸುಮಗದಿಟ ನರಿಪೆಱಿವದೆಕೆ ಪರಿಯನೇನಂದ || ೬೨ ||

ಚಿನ್ನ ವಲಗೆಯ ನೋಡಿನೋಡಲು | ರನ್ನ ಪುಂಜವ ಕೊಂಡುವಿದು ಕುಲ |
ರನ್ನನನು ಮುದದೋವಲೆಂದಿರೆ ಮುನ್ನ ತನಗುಳ್ಳ ||
ರನ್ನವನು ಆ ರನ್ನವನುಗುಣ | ರನ್ನ ಪಾತ್ರ ತ್ಯಾಗಗೈದುಱಿ |
ತನ್ನ ಗರ್ಭಜನೆಂದೆ ರಾಧಾದೇವಿಗೊಲಿದಿತ್ತ || ೬೩ ||

ಕರ್ಣಧಾರಕನಾದ ಕತದಿಂ | ಕರ್ಣನೆಂದಾ ಸೂರ್ಯಪೆಸರಿಡೆ |
ಕರ್ಣನಾದನು ರಾಧೆಯಿಂ ರಾಧೇಯನೆನಿಸಿದನು ||
ಕರ್ಣದಲಿ ಪೆತ್ತಳು ಗಡೆಂಬೀ | ದುರ್ಣಯದ ನುಡಿಕೇಳುವವರಿಗೆ |
ಕರ್ಣಶೂಲೆಯನೀಯದಿಹುದೇ ಹುಸಿಯ ಹೊಸಶೂಲ || ೬೪ ||

ಮುನ್ನಣೇಂ ಪೊಲ್ಲಮೆಯೊ ಚಿಂತಾ | ರನ್ನವನು ಹಡೆದಿಡಿಕಿದಂದದಿ |
ಚಿನ್ನಕಂದನ ಪಡೆದು ಬಿಟ್ಟಾನೋವನೆಡೆಗೊತ್ತಿ ||
ಕನ್ನೆವೇಟದಲಾದ ವಿರಹವು | ಹನ್ನೆರಡು ತಿಂಗಳು ತನಕ ಪ್ರ |
ಚ್ಛನ್ನ ತಾಪವಮಿತು ಹೊಱಹೊಮ್ಮಿದುದು ಕೋಮಲೆಯ || ೬೫ ||

ತರುಣಿಯೊಡಲಿನ ಕಾವವೇಂಕೆಯ | ನುರುಹಿಮದು ತಂಗಾಳಿ ಭುಗಿಲೆಂ |
ದುರಿದ ಕಿ‌ಚ್ಚಿಗೆ ಕೊಳ್ಳಿಗಳನಿಟ್ಟಂತೆ ಮುಸುಕಿದವು ||
ಅರಳ ಕಣೆಗಳು ಕೂಡೆ ತುಪ್ಪವ | ನೆರೆದವೊಲು ತಿಳಿಜೊನ್ನ ಕಱೆಯಲು |
ಹರಿಣ ಲೋಚನೆ ಕಾಮವೇಂಕೆಯ ಬೊಂಬೆಯೆನಿಸಿದಳು || ೬೬ ||

ಬಳಿಕಲತ್ತಲು ರಾಧೆ ತಾಂ ಪೆ | ತ್ತಳು ವಿಕರ್ಣನ ಕರ್ಣನೊಡನ |
ಗ್ಗಳಿಸಿ ಬೆಳೆಯುತ್ತಿರ್ದನಿತ್ತಲು ಕೊಂತಿಯಾ ತೆಱನ ||
ತಿಳಿದನಂಧಕವೃಷ್ಟಿ ಪಾಂಡುಗೆ | ಘಳಿಲನಾ ಕುಂತಿಯ ಕೊಡುವೆವೆಂ |
ದೊಲಿದು ಹಸ್ತಿನಪುರಕೆ ಬಳಿಯಟ್ಟಿದನು ಮಂತ್ರಿಗಳ || ೬೭ ||

ತಿಳುಹಿಸಿದರಾ ಮಂತ್ರಿಗಳು ಮಂ | ಗಳದ ಕಾರ್ಯವನ ಱಿತು ಕೊಂತಿಯ |
ನೊಲಿದು ಬೇಡಿದೊಡೀಯದಾದದನು ಮಾವನಂದೆನಗೆ ||
ಘಳಿಲನಾ ಕುಂತಿಯನು ಮಾದ್ರಿಯ | ನೊಲಿದು ಕೊಟ್ಟೊಡೆ ತಹೆನೆನಲವ |
ರಿಳೆಯೆಱಿಯನೆಂದಂತೆ ಪಾಣಿಗ್ರಹಣಗೆಯಿಸಿದರು || ೬೮ ||

ಒಂದು ದಿನ ತನುಜರುವೆರಸಿ ಸುಖ | ದಿಂದಿರುತ ಮಂತ್ರಿಗಳ ಯೋಚನೆ |
ಯಿಂದಲಧಿರಾಜ್ಯವನು ಧರಿಸುವೊಡಿತ್ತ ಧೃತರಾಷ್ಟ್ರಾ ||
ಅಂಧಕನು ಪಾಂಡುವೆ ಕನಿಷ್ಟನು | ಚಂದವಲ್ಲೆಂದವನಿಯನು ತಾ |
ನಂದು ಭಾಗೆಯನಿಕ್ಕಿ ಕೊಟ್ಟನು ಸಿಂಧುನಂದನನು || ೬೯ ||

ಕುಡೆಸುಖದಿ ಪಾಂಡುನೃಪಣ್ಣನೊ | ಳಡಸಿದಿಚ್ಛೆಯೊಳಿರುತಲಿತ್ತಲು |
ಮಡದಿಯರೊಳನುರಾಗದಿಂದಿರುತೊಂದು ದಿನ ಕಿಱಿಯ ||
ಮಡದಿಸಹ ವನ ಕೇಳಿಗೆಯಿದಾ | ಕಡೆಯ ನೋಡಲು ಕಾಮಸುಖವನು |
ಪಡೆವುತಿಹ ಹರಿಣವನು ಹರಿಣಿಯನೆಚ್ಚು ಕೆಡಹಿದನು || ೭೦ ||

ಪೊಲ್ಲಕೆಯಿದೆಯಳರಸ ತಪ್ಪೇ | ನಿಲ್ಲದೀ ಜೀವಂಗಳನು ದಯೆ |
ಯಿಲ್ಲದಕಟಾ ಕೊಲುವರೇಯೆನೆ ಮದ್ರಿನೃಪನಂಜಿ ||
ಬಿಲ್ಲ ಬಿಸುಟುಱೆ ನೋವುತುರೆ ವನ | ದಲ್ಲಿಗೇಳ್ತಂದಪರು ವರಜಿನ |
ವಲ್ಲಭರು ಬರೆ ಕಾಣುತೀರ್ವರು ಮುದದಿನೆಱಗಿದರು || ೭೧ ||

ಎಲೆಮುನೀಶ್ವರ ಬೆಸಸು ನನಗ | ಗ್ಗಳದ ಮುನಿಸೇಕಾದುದಾಮೃಗ |
ಗಳೊಳು ನಿರ್ದಯೆಯಿಂದ ಕೊಂದೆನು ನೊಂದೆನೆನೆ ನೃಪತಿ ||
ತಿಳಿವೊಡೆರಳೆಯೆ ನಿನ್ನ ಪಿತೃವಧ | ರೊಳವ ಕೇಳೈ ಕುರುಣೆಯೆಂಬುದು |
ಬೆಳೆದ ಗ್ರಾಮವು ವಟುವೆನಿಪ ಹಾರುವನದರೊಳಿಹನು || ೭೨ ||

ಅವನ ಹೆಂಡತಿಯಗ್ಗಿಲೆಯು ನೀ | ನವರ್ಗೆ ಮಧುಕನೆನಿಪ್ಪ ಸುತಮ |
ತ್ತವರ ಮತವನು ಬಿಟ್ಟು ನೀಂ ಜಿನಮತದೊಳೆಸಗುತಲಿ ||
ತವಕಿ ಸೂಳೆ ವಸಂತಮಾಲೆಯೊ | ಳವಿಚಲದಿನಿರೆ ಪಾರ್ವರಿಗಿದಂ |
ಗವೆ ಬಿಡೆನೆನೀಂ ಬಿಡದಿರಲು ನಿಮ್ಮಯ್ಯ ಕೋಪದಲಿ || ೭೩ ||

ಒಂದುದಿನ ನೀನವನೊಡನೆ ರಥ | ದೊಂದಿ ಬನದೊಳು ನಾಣರಿಯದಿರೆ |
ಬಂದು ಕಣ್ಬೊಲನಾಗೆ ನಿಮ್ಮೀರ್ವರನು ಬಾಳಿಂದ ||
ಕೊಂದಡಾ ಸುವ್ರತದ ಫಲದಿಂ | ದಿಂದು ನೀನರಸಾದೆ ವಟುವನು |
ನಂದವಿಪ್ರರು ಕಳೆಯಲಾರ್ತದಿ ಮಡಿದೆರಳೆಯಾದ || ೭೪ ||

ಜನಪ ಕೇಳೈ ನಿನಗೆ ಭವಸಂ | ಜನಿತವೈರವು ಅದರ ಮೇಲಾ |
ಯ್ತೆನಲು ಸಂಸಾರಸ್ವರೂಪನರಿದವಧಿ ಬೋಧ ||
ಮುನಿಪರಿಂ ಧರ್ಮವ ತಿಳಿದುನಿರ್ಮ | ಳಿನದ ಮನದಿಂ ನಿಜಪುರಿಗೆ ಬಂ |
ದನುಪಮಿತ ಧರ್ಮವನಖಂಡಿತನಾಗಿ ಮಾಡುತಿರೆ || ೭೫ ||

ತಡೆಯದಚ್ಚುತ ಕಲ್ಪದಿಂ ಚುತಿ | ವಡೆದು ದೇವನು ಬಂದು ಪಾಂಡವ |
ಮಡದಿ ಕೊಂತಿಯ ಗರ್ಭದೊಳು ನಿಲೆ ತುಂಬಿ ನವಮಾಸ ||
ಪಡೆದಳಾ ಶುಭದಿನ ಮುಹೂರ್ತದೊ | ಳುಡುಪತಿಯನೀಂಗಡಲು ಹರುಷದಿ |
ಪಡೆದವೊಲು ವಿಶ್ರುತನನವನೀ ಸ್ತುತನನಾತ್ಮಜನ || ೭೬ ||

ಜಾತಕರ್ಮೋತ್ಸವವನತಿ ವಿ | ಖ್ಯಾತದಲಿ ನೆಱೆಮಾಡಿ ಪಾಂಡು ಮ |
ಹೀತಳಾಧಿಪನಾ ಯುಧಿಷ್ಠರನೆಂದು ಪೆಸರಿಟ್ಟ ||
ಆ ತೆಱರದ ಧರ್ಮವು ನಡೆಯುತಿರ | ಲೋತು ಪುಟ್ಟಿದ ಕತದಿನೆಲ್ಲರು |
ವಾತರುಣನೇ ಧರ್ಮನಂದನನೆಂದುದೊಲವಿಂದ || ೭೭ ||

ಮದವನರೆಬರು ದಾನವೆಂಬವೊ | ಲದಯಯೆಮಗಾಧರ್ಮ ಶಬ್ದವು |
ಪುದಿಯಲಾಧರ್ಮಕ್ಕೆಯಮಪರ್ಯಾಯವನೆಕೊಟ್ಟು ||
ಚದುರರಲ್ಲದ ಲೋಕವಿಂತೆಂ | ಬುದು ಬಳಿಕ್ಕಾ ಧರ್ಮನಂದನ |
ಬಿದಿಗೆಯಿಂದುವಿನಂತೆ ಕ್ರಮದಿಂ ಕಳೆವೆರಸಿ ಬೆಳೆದ || ೭೮ ||

ಮತ್ತಮತ್ತಿತ ಕಲ್ಪದಿಂ ದೇ | ವೋತ್ತಮನು ಬಂದೆಸೆವ ಕೊಂತಿಗೆ |
ಪುತ್ರನಾಗುತ ಮೂಲ ನಕ್ಷತ್ರದೊಳು ಜನಿಸಿದೊಡೆ ||
ಪೆತ್ತ ಚರಮಾಂಗನನು ತಾವೊಯಿ | ದತ್ತ ಭೀಮಪ್ರೇತವನದೊಳ |
ಗಿತ್ತು ಬಂದರು ಕರ್ಮವೇಗೈಯದು ಜಗಜ್ಜನವ || ೭೯ ||

ಬಾಲಕನ ಪುಣ್ಯಾಧಿ ದೇವತೆ | ಭೀಳಸುಟ್ಟುಱು ಗಾಳಿ ರೂಪದಿ |
ಬೇಲಿಯಂತಾತನನು ರಕ್ಷಿಸಿಕೊಂಡಿರಲುವಿತ್ತ ||
ಕೇಳಿ ಪಾಂಡುನೃಪಾಲನಾಗಳು | ಕೋಳುಗೊಂಡೆರಳೆವೊಲು ನೊಂದು ಕ |
ರಾಳ ಪಿತೃವನವೆಯಿದಿ ನೋಡಲೆಲರೊಡನೆ || ೮೦ ||

ತಂದು ತನಯನ ಜಾತಕರ್ಮವ | ನಂದು ಮಾಡಿ ಬಳಿಕ್ಕ ನೃಪನೊಲ |
ವಿಂದ ಭೀಮಪ್ರೇತವನವೊಂದಿದ ಕತದಿ ಭೀಮ ||
ಎಂದು ನಿಶಿಯೊಳು ವಾಯುಕಾದುದ | ಱಿಂದ ವಾಯುಕುಮಾರನಾಗಿರ |
ಲೆಂದು ಪೆಸರಿಟ್ಟನು ವಿಧಿತಗುಣನಾಮವಿರಲೆಂದು || ೮೧ ||

ಗಾಳಿಯಾತ್ಮಜ ಭೀಮನೆಂಬರು | ಕೇಳಲಾದುದಿದೊಂದು ಸಟೆಯನು |
ಗಾಳಿಪೆತ್ತೊಡೆ ಪೆಱಲಿ ಅದು ತಾಯಂತೆ ಕಱುವೆಂಬ ||
ಪೇಳಿಕೆಯನೇನ ಱಿಯರೇ ಆ | ಗಾಳಿಮನುಜರ ಹೆತ್ತುದಾದೊಡೆ |
ಕೇಳು ಮುನ್ನೊಂದೆಡೆಯೊಳಲ್ಲದೆ ಕಾಣೆವಿಂದೆತ್ತ || ೮೨ ||

ಅರಸನಿಂದ್ರೋತ್ಸವ ವಿಧಾನವ | ನುರುತರದಿ ಮಾಡಿಸುತಿರಲು ತ |
ತ್ತರುಣಿ ಕೊಂತಿಯ ಗರ್ಭದೊಳಗಾದಿವದ ವರ ದಿವಿಜ ||
ಪೊರೆಯೆ ನವಮಾಸಾಂತ್ಯದೊಳು ಸಂ | ಗರವಿಜಯ ಚರಮಾಂಗನಾದ ಕು |
ವರನ ಪಡೆದಳು ಶುಭ ದಿವಸಲಗ್ನದೊಳು ಕೃತಪುಣ್ಯೆ || ೮೩ ||

ಅಸಮವಿಭವದಿ ಜಾತಕರ್ಮವ | ನೆಸಗಿ ಅರ್ಜುನನೆಂಬ ಪೆಂಪಿನ |
ಪೆಸರನಿಟ್ಟನು ಕೂಡೆಯಿಂದ್ರೋತ್ಸವದೊಳುದಯಿಸಿದ ||
ದೆಸೆಯಿನಿಂದ್ರಾತ್ಮಜ ನೆನಿಪಗುಣ | ವೆಸರನಿಟ್ಟನು ಪಾಂಡುನೃಪನಾ |
ಶಿಶುನಿಜಾಗ್ರಜರೊಡನೆ ಬೀರದ ತಿರುಳೆನಿಸಿ ಬೆಳೆದ || ೮೪ ||

ಇತ್ತ ಮದ್ರಿಯ ಬಸುರೊಳಾ ದಿವಿ | ಜೋತ್ತಮರು ದಿವದಾಯುರಂಬುಧಿ |
ಯುತ್ತರಿಸೆ ಬಂದೀರ್ವರುಂ ನೆಲೆಗೊಳೆ ಸರಾಗದಲಿ ||
ಪೆತ್ತಳಾ ನವಮಾಸ ತುಂಬಲು | ಮತ್ತರಿಪುಗಜ ಪಂಚತುಂಡರ |
ನುತ್ತಮರನಮಳುಗಳನಾ ಭೂವರನ ಕಿರಿಯರಸಿ || ೮೫ ||

ಅವನಿಪತಿಯಾ ಜಾತಕರ್ಮವ | ನವನಿಗುತ್ಸವವಾಗೆಸಗಿ ದಶ |
ದಿವದೊಳೊಪ್ಪುವ ನಕುಲ ಸಹದೇವಾಭಿಧಾನವನು ||
ಸವೆದು ಪರಮ ಜಿನೇಂದ್ರಪೂಜೋ | ತ್ಸವವನಾಶಿಸಿ ತನುಜ ರೈವರೊ |
ಳವಿಚಳದ ಸೌಭಾಗ್ಯಪರನಾಗಿದ್ದನಿರಲಿತ್ತ || ೮೬ ||

ಪಡೆದಳಾ ಧೃತರಾಷ್ಟ್ರರಾಯನ | ಮಡದಿಯಾ ಗಾಂಧಾರಿಭೂತಳ |
ದೊಡೆಯ ದುರ್ಯೋಧನ ನೃಪನ ದುಃಶಾಸನನ ಬಳಿಕ ||
ಪಡೆದಳಾ ದುರ್ಮರ್ಷಣನನು ಱಿ | ಹಡೆದಳಾ ದುರ್ದರುಷನಾದಿಯ |
ಪಡೆದಳಾ ನೂರ್ವರನು ದುಸ್ಸಳೆಯೆಂಬಳನು ಕ್ರಮದಿಂ || ೮೭ ||

ಸೊಗಯಿಸುವ ಕಮಳಿನಿಯ ನೂಱೆಸ | ಳುಗಳ ಪಡದಂತಾತ್ಮಜರನಾ |
ಮೃಗನಯನೆ ಗಾಂಧಾರಿ ಪಡೆದಾ ನೂರ್ವರೇಳ್ಗೆಯಲಿ ||
ನೆಗಳ ವಿದ್ಯಾಹೃದ್ಯರಿರುತಿರೆ | ಮಗಳನಾ ದುಶ್ಶಲ್ಯೆಯನು ಪೆಂ |
ಪೊಗೆದ ಸಿಂಧುಮಹೀಶ ಸೈಂಧವಗಿತ್ತನಂಧನೃಪ || ೮೮ ||

ಬಾಲಕೇಳಿಯೊಳಂಧ ನೃಪನಾ | ಬಾಲಕರು ಪಾಂಡವತನೂಜರು |
ಲೀಲೆಯಿಂ[ದಲಿ] ನೂಱುಐದಾಟಗಳನಾಡುತಿರೆ ||
ಮೇಳಿಸಿದ ಮಾತ್ಸರ್ಯವದು ತಾಂ | ಬೂಲಕಾಲದಿನೊಡನೆ ಬಳೆಯಲು |
ಬಾಲರನು ಭೀಷ್ಮಾಂಧನೃಪ ರಂಜಿಸಿ ನಡೆಸುತಿಹರು || ೮೯ ||

|| ಅಂತು ಸಂಧಿ ೧೨ಕ್ಕಂ ಮಂಗಳಮಹಾ ||