ಸಂಧಿ ೨೨

ಉರಗಶಯ್ಯೆಯನೇರಿ ಕನಕಾಂ | ಬುರುಹ ಕಾಳಿಂಗನ ಮುರಿದು ಮದ |
ಕರಿಯ ಚಾಣೂರನನು ಕಂಸನ ಕೊಂದನಾ ಕೃಷ್ಣ || ಪಲ್ಲ ||

ಕೇಳು ಶ್ರೇಣಿಕ ಮಂಡಲೇಶ್ವರ | ಹೇಳುವೆನು ನಾರಾಯಣನ ನಿಡು |
ದೋಳಸತ್ವ ಕೇಳಿ ಲೋಕವೆ ನೆಱೆದು ಕೀರ್ತಿಪುದು ||
ಬಾಲೆಯರು ಕಿವಿವೇಟವನು ಮಿಗೆ | ತಾಳಿದರು ದೇವಕಿಯ ಮನದೊಳು |
ಮೇಳಿಸಿತು ನಿಜಪುತ್ರನನು ಕಾಣ್ಬೊಂದು ಕಾತರವು || ೧ ||

ಬನದಲಿರ್ದಾ ನವಿಲು ಮೇಘದ | ದನಿಗೆ ಸಂತಸ ಬಡುವವೊಲು ನಿಜ |
ತನುಜನಧಟನು ಧರೆಯೆ ಪೊಗಳಲು ಕೇಳಿ ಸಂತಸವು ||
ಜನಿಸಿ ದೇವಕಿ ಪೂತ್ರನನು ತಾ | ನನುನಯದಿ ನೋಳ್ಪುಜ್ಜುಗವನೋ |
ಪನೊಳೊಡಂಬಡೆ ಪೇಳ್ದಳಹುದೆನಿಸಿದಳು ಹಲಧರನ || ೨ ||

ದೇವಕಿಯ ಬಲದೇವ ಸಹ ವಸು | ದೇವನೃಪ ನಿಜ ಬಲವೆರಸಿ ಆ |
ದೇವಕಿಗೆ ಗೋಮುಖಿಯ ನೋಂಪಿಯೆನಿಪ್ಪನೆವವಿಟ್ಟು ||
ತಾವೈದಿಯಾ ಕೃಷ್ಣಯಕ್ಷಿಯ | ದೇವಭವನದೊಳಿರ್ದು ನಂದನ |
ನಾವಹಿಲದಲಿ ಕರಸೆ ಬಂದೆರಗಿದನು ಹರುಷದಲಿ || ೩ ||

ತುಱುವನೆಲ್ಲವತರಿಸು ಇಲ್ಲಿಯೆ | ಅಱಬಕಱೆಯಲು ಬೇಹುದೆನಿತಾ |
ನೆಱಗಿಜೀಯೆನಲುಡುಗೊರೆಯನಿತ್ತಾತನನು ಕಳುಹಿ ||
ಎಱೆಯದಂದಿನ ರಾತ್ರಿಯನು ಸುಖ | ದೆಱಕದಲಿ ಜಾಗರವಿರಲು ಅ |
ತ್ತಱಸಿ ಶಾಲ್ಮಲಿದತ್ತೆಯಯ್ಯ ವಿಯಚ್ಚರಾಧಿಪನು || ೪ ||

ಮೊದಲೆ ಪೇಳ್ದಂಗಾರವೆಗಳನು | ವಿದಿತ ವಸುದೇವನ ಸುತ ನೀನ |
ಪ್ಪುದು ತನಗೆ ಕಡುಪೀಡೆಯೆಂಬಾದೇಶವುಳ್ಳದರಿಂ ||
ಚದುರನೈಮಿತ್ತಿಕನ ಮುಖದಲಿ | ಪದುಮನಾಭನುಯಿಹನೆಲೆಯದರಿ |
ದದಯದಿಂ ಕೊಲಲೆಂದರಿಷ್ಟನ ಕರೆದು ಬೆಸಸಿದನು || ೫ ||

ಬೆಸಸಿ ಕಳುಹಲು ಖಚರ ಮಂತ್ರಿಯು | ಬಸವನಾಕಾರದಲಿ ಬಂದ |
ರ್ವಿಸಿ ಮುಕುಂದನ ತಾಗೆ ಗೋಣ್ಮುರಿಯೊತ್ತಿಸದೆ ಬಡಿಯೆ ||
ಅಸುಗೆಡುತ ಮಾಯಾವಿಯೋಡಿದ | ನೊಸೆದುಗೋಪನು ಸತಿಸುತರು ಸಹ |
ವೆಸೆವ ತುರುವನು ನಡಸಿ ವಸುದೇವನ ಬಳಿಗೆ ತಂದ || ೬ ||

ಮೆರೆವ ಯಕ್ಷಿಯ ಮುಂದೆ ಅಱುಬನು | ಕರೆದರಾನಂದಾಶ್ರು ಕಣ್ಣಿಂ |
ಕರೆಯೆ ದೇವಕಿಗಾಗ ಗೋಪಕುಮಾರಕರು ವೆರಸಿ ||
ತರುವ ಹೊಡತಂದಂಬುಜಾಕ್ಷನ | ನರಿತು ಬಲವಸುದೇವ ದೇವಕಿ |
ತುರುಗಿ ಕುಳ್ಳಿರ್ದವರ ಕರಕೊಂಡರು ಸಮೀಪಕ್ಕೆ || ೭ ||

ದೇವಕಿಯ ಕೆಂಬೆಳಗು ಜೊನ್ನವ | ದಾವರಿಸೆ ಹಲಿಯೆಸೆದನಾಗಳು |
ದೇವಗಂಗಾಶ್ರೋತ ಮುಸುಕಿದ ನೀಲಶಿಖರಿವೊಲು ||
ಆ ವಿಭುಗಳಕ್ಷಿಗಳು ಹಸರಿಸಿ | ತೀವೆ ಕಾಳಿಂದಿಯೊಳು ತೋರುವ |
ತಾವರೆಗಳೆನಿಸಿದವು ಕೃಷ್ಣನ ದಿವ್ಯ ದೇಹದೊಳು || ೮ ||

ನಂದಗೋಪಗೆ ಗೋಪಿಗವರಾ | ನಂದದುಡಗೋಱೆಗೊಟ್ಟು ಇವನಾ |
ರೆಂದು ದೇವಕಿಯರಿಯದಂತೆ ಯಶೋಧೆಯನು ಕೇಳೆ ||
ಕಂದನೆನಗೆನೆ ನಿನ್ನ ಕಂದನೆ | ಕಂದನೆನಗಿವನೆಂದು ಹರುಷಾ |
ನಂದದಲಿ ಕೈವಿಡಿದು ತೆಗೆದಪ್ಪಿದಳು ಮಾಧವನ || ೯ ||

ತೊರೆದ ಮೊಲೆವಾಲಿಂದ ದೇವಕಿ | ಹರಿಗೆ ಮಜ್ಜನಗೊಳಿಸಿದೊಡೆ ಕಂ |
ಣರಿಯದೆಡೆ ಕರುಳರಿಯದೇ ಯೆಂಬಂತೆ ಪುಳಕವನು ||
ಹರಿತಳೆಯಲದ ಮರಸಲಾ ಹಲ | ಧರನು ಓಕುಳಿಯೆಂದು ಕೊಡವಾ |
ಲ್ಸುರಿದು ಗೋಪಯಶೋಧೆಯರ ಕಂಗಟ್ಟಿದನು ಚದುರಿಂ || ೧೦ ||

ಬಳಿಕ ನವರತ್ನಾಭರಣದಿಂ | ಹಳದಿ ವಸನವಿಲೇಪನದಿ ಪರಿ |
ಮಳಿಪ ಕುಸುಮದ ಬಲನು ಸಿಂಗರಮಾಡಿ ತೆಗೆದಪ್ಪಿ ||
ನಳಿನನಾಭನದೊಂದು ಜಾವವು | ಬಲನ ಪಿತನಾಲಿಂಗಿಸಿದನಾ |
ಲಲನೆ ಕಂದನ ಮತ್ತೆ ತಕ್ಕೆಯಲಿಟ್ಟು ಸುಖಿಸಿದಳು || ೧೧ ||

ಎಲೆ ಯಶೋಧೆಯೆ ನಿನ್ನ ಕಂದನ | ಸಲಹಿಕೊಳು ಲೇಸಾಗಿಯೆಂದರ |
ಗಿಳಿಯವೊಲು ದೇವಕಿಯ ಮಡಿಯಲೇನೆಂಬೆನೆಲೆದೇವಿ ||
ಸಲಹುವಳು ಈ ಕೃಷ್ಣಯಕ್ಷಿಯೆ | ಒಲಿದು ಕೊಟ್ಟಾ ಕಂದನೆಂದದ |
ನೆಲಸದಾಡಿದಗೀತಗಾದ ವಿಪತ್ತ ಕೇಳೆಂದು || ೧೨ ||

ಮೊಲೆಯನೂಡುವ ನೆವದಿ ರಕ್ಕಸಿ | ಕೊಲಲು ಬಂದರೆ ಕೊಂದನೀ ಶಿಶು |
ಮೊಲೆಯನುಂಡಾಕೆಯನು ಜಗಲಿಯಲೊರಲುವೊಂದು ||
ಬಲುಹೆನಿಸಿದಾ ಕಾಗೆಯೆರಗಲು | ಚಲಿಸದೆಡಗೈಯಲಿ ಹಿಡಿದು ಕೊಲೆ |
ಕೆಲದು ಮಗ್ಗಿತು ಮಗನು ಹರೆದಾಡುವ ಹರೆಯದಲಿ || ೧೩ ||

ಮೇಲುವಾದುದದೊಂದು ಭಂಡಿಯು | ಬಾಲನೊಡೆದೊಡೆ ಚೂರ್ಣವಾದುದು |
ಗೂಳಿಕೆಲವುತ ಹೊರಲು ಬರೆ ಮುಳಿದೊತ್ತಿದನೂ ಗೋಣ ||
ಭೀಳ ಹಯ ಗರ್ಜಿಸಿ ತುಳಿಯ ಬರೆ | ಕಾಳನೂರಿಗೆ ಕಳುಹಿದನು ಸತಿ |
ಕೇಳು ಮತ್ತಿಯ ಮರಗಳವುಕಲು ಕಿತ್ತು ಕೆಡಹಿದನು || ೧೪ ||

ತಾಯೆ ಕೇಳೌ ತಾಳಮರನದು | ಕಾಯಮಳೆಗರದಳುಕಿ ಹೋದುದು |
ಮಾಯದೀ ಮಗ ಹೊಲದೊಳಗೆ ತುರುಗಾವುತಿರಲೊಂದು ||
ಬಾಯ ಬಿಡುತಿದಿರಾದ ಕತ್ತೆಯ | ಸಾಯ ಬಡಿದನು ಕಲುಮಳೆಯಲೀ |
ಸಾಯದಂತಾ ಬೆಟ್ಟವನು ಕಿತ್ತೇಳು ದಿನ ಹಿಡಿದ || ೧೫ ||

ತುಱುವನೀಪರಿ ಕಾಯ್ವನೆಂದಾ | [ತೆ]ಱನನೆಲ್ಲವ ನಂದಗೋಪಿಯು |
ಮೆಱೆವದೇವಕಿಗಾಡೆ ಬಲವಸುದೇವಮಿಗೆ ಕೇಳಿ ||
ನೆಱೆವ ಮಧುಸೂದನನು ಸತ್ವದ | ನೆಱವಿಯನು ನೆಱೆಮೆಚ್ಚಿ ಕಂಸನ |
ಬಿಱುಬಿಗಂಜುವನಲ್ಲೆನುತ ದೇವಕಿಯು ನಂಬಿದಳು || ೧೬ ||

ಕಂದನಾನನ ಚಂದ್ರಮನದೊಲ | ವಿಂದ ದೇವಕಿ ನೋಡುತಿರೆ ಬಲು |
ಹಿಂದಲೀಕೆಯನಿತ್ತಲೆಳ ತಂದರು ಅವರ ಕಳುಹಿ ||
ಸಂದ ಮಧುರೆಯನೈದಿ ತಮ್ಮಯ | ಮಂದಿರದೊಳಿರುತಿದ್ದರತಿನಲ |
ವಿಂದಲನ್ನೆಗ ಮತ್ತೆಲೇ ಭೂಪಾಲ ಕೇಳೆಂದ || ೧೭ ||

ಪ್ರಣುತ ವಿಜಯಾರ್ಧಾಚಲದ ದ | ಕ್ಷಿಣದ ರಥನೂಪುರವನಾಳುವ |
ಗುಣನಿಧಾನ ಸುಕೇತು ಖಚರಾಧಿಪನವನ ರಾಣಿ ||
ಗಣಿಯಿ ಪಾಡೆ ಪೆಸರಿಂ ಸ್ವಯಂಪ್ರಭೆ | ಯಣಿಯರಂ ಸ್ತ್ರೀರೂಪ ಚಿಂತಾ |
ಮಣಿಯೆನಿಪಳಾ ಸತ್ಯಭಾಮೆ ಅವರ್ಗೆ ಸುಕುಮಾರಿ || ೧೮ ||

ಕಿಱುವರೆಯದಲಿ ಸತ್ಯಭಾಮೆಯ | ನೆಱೆಚೆಲುವ ಕಂಡಾಕೆಯಯ್ಯನು |
ಉಱುವ ಮಗಳಿಗೆ ಗಂಡನಾರಹನೆಂದು ಕೇಳದೊಡೆ ||
ಅಱಿದು ಸಂಭಿನ್ನಾಖ್ಯನೆನಿಸುವ | ಮೆಱೆವ ದೈವಜ್ಞನು ನುಡಿದನಿಂ |
ತರಿವುದೀ ಭರತ ತ್ರಿಖಂಡಾಧೀಶನಿವಳೋಪ || ೧೯ ||

ಎಂದೊಡಾತನ ನಾವಱೆವುದೆಂ | ತೆಂದೊಡೆಲೆ ಖಚರೇಶ ನಿನ್ನಯ |
ಮಂದಿರದೊಳುದ್ಭವಿಸಿ ದೇವಾದಿಷ್ಟಿತಿಗಳಾದ ||
ಸಂದ ಸರ್ಪನ ತಳ್ಪ ಶಾಂರ್ಙ್ಗವಿ | ದೊಂದು ಚಾಪವು ಪಾಂಚಜನ್ಯವಿ |
ದೊಂದು ಶಂಖವಗುರುವುವಡೆದಿದೆ ರಾಯ ಕೇಳೆಂದ || ೨೦ ||

ಅವನೇಱಿವನುರಗ ಶಯ್ಯೆಯ | ನಾವನೇಱಿಪಶಾಂರ್ಙ್ಗ ಚಾಪವ |
ನಾವನೋರ್ವನು ಪಾಂಚಜನ್ಯವನೆಯಿದೆ ಪೂರಿಸುವ ||
ಆ ವಿಭುವೆ ಈ ಸತ್ಯೆಗಾಣ್ಮನು | ದೇವ ಚಿತ್ತೈಸೆನಲು ಬಲ್ಲರ |
ದೇವನಾತನ ಕಳುಹಿ ಮಂತ್ರಿಯ ಕರೆಸಿಯಿಂತೆಂದ || ೨೧ ||

ಉರಗ ಶಯ್ಯಾದಿ ತ್ರಯವನಾ | ದರದಿ ಮಧುರೆಗೆ ಕಳುಹಿಸುವ ಈ |
ಪುರದೊಳಪ್ರತಿ ವಿಕ್ರಮಮನು ವಸುದೇವನಿಹನು ಗಡ ||
ಅರಸು ಕಂಸಗಡಲ್ಲಿ ಇವನಾ | ಳ್ವರಸ ನಿಲ್ಲದೊಡುಳಿದ ದೇಶಕೆ |
ಭರದ ಬಳಿಕಟ್ಟುವವೆನಲು ಬಹುದೆಂದನಾ ಮಂತ್ರಿ || ೨೨ ||

ಕಳುಹೆ ಬಂದಾ ಮಂತ್ರಿ ಮಧುರೆಗೆ | ತಳುವದೈದಿ ಜಿನೇಂದ್ರ ವಸತಿಯ |
ಕೆಲದ ಪಟ್ಟಾಶ್ರಯದೊಳೀ ಮೂರನು ಸಮಂತಿರಿಸಿ ||
ಘಳಿಲನಾ ಕಂಸಂಗರಿಪಲಾ | ಗಲೆ ನಿಕಿಳ ಪುರಜನವೆರಸಿ ಕಂ |
ಗೊಳುತಿಹನು ಸಾಧಿಸಿದೊಡೇಂ ಫಲವರುಣ ಹೇಳೆಂದ || ೨೩ ||

ಕೇಳಲಾ ದೈವಜ್ಞನೆಂದನು | ಕೇಳರಸ ಸಾಮಾನ್ಯದಲ್ಲೀ |
ವ್ಯಾಳ ಫಣಿತಲ್ಪವನು ಶಾಂರ್ಙ್ಗವ ಪಾಂಚಜನ್ಯವನು |
ಆಳಿದವನೇ ಅರ್ಧಚಕ್ರಿಯು | ಬಾಳುವನು ಸಿದ್ಧೋಕ್ತಿಯಿದುವೆನೆ |
ಕೇಳಿ ಶಂಖಾಕುಳಿತ ಚಿತ್ತನು ಮನದೊಳಿಂತೆಂದ || ೨೪ ||

ಹಗೆಯನರಸುವೊಡಿದು ಉಪಾಯವು | ಬಗೆವರೆಂದೂರೂರ್ಗೆ ಸಲೆ ಪೆಂ |
ಪೊಗೆದ ಡಂಗುರ ಸಾರಿಸಲು ತುರುಪಟ್ಟಿಯಲಿ ಕೇಳಿ ||
ಮಿಗೆ ಪರಾಕ್ರಮಿ ಕೃಷ್ಣನಾ ಹೆ | ಚ್ಚುಗೆಯ ಡಂಗುರವನು ಪಿಡಿಯೆ ಭೋ |
ರಗೆ ಚರರು ಬಂದುರಪಿದರು ಕಂಸಂಗದೆಲ್ಲವನು || ೨೫ ||

ಎಂದೊಡಾಸ್ಥಾಯಕೆಯೊಳರಿದವ | ರೆಂದರಾತನ ಸತ್ವ ಸಾಹಸ |
ದಂದವನು ಆ ಪೂತನಿ ಪ್ರಮುಖೆಯರ ಶಿಶುತನದಿ ||
ಕೊಂದುದನು ಗೋವರ್ಧನಾದ್ರಿಯ | ನಂದು ಕಿತ್ತೆತ್ತಿದ ತೆಱನ ಖಚ |
ರೇಂದ್ರ ವಿಂಧ್ಯಾ ವೃಷಭವನು ತೂಳಿದ ಪರಾಕ್ರಮದ || ೨೬ ||

ಆತನೇರುಗುಮೇರಿಸುಗುಮೇ | ಮಾತೊ ಪೂರಿಸುಗವನೆನಲು ಸಂ |
ಜಾತ ಕೋಪದಿ ಕೆರಳಿ ಕಂಸನು ಕಾಣ್ಪೆವಲೆನಾಳೆ ||
ಆತನಧಟನೆನುತ್ತ ಬಳಿಕ ನಿ | ನೂತವಸ್ತುವ ತಂದ ಖಚರ |
ವ್ರಾತವನು ಕರೆದಿಂದಿರುಳು ನೀನಿಂತು ಗೈಯೆಂದ || ೨೭ ||

ಉರುಗಶಯ್ಯಾದಿಗಳನತ್ಯಾ | ದರದಲಾರಾಧಿಸಿಯೆನಲು ಆ |
ಪರಿಯಲವರಾರಾಧಿಸಿರೆ ಮರುವಗಲು ನೆರೆತಂದ ||
ಅರಸು ಮಕ್ಕಳು ವೆರಸಿಕಂಸನು | ಭರದಿ ಬಂದೀಕ್ಷಿಸಲು ಕಂಗಳ |
ನೆರಡು ಕೈಯಲ್ಲಿ ಮುಚ್ಚಿದರುನೇನೆಂಬೆನದ್ಭುತವ || ೨೮ ||

ಕಿಡಿಗಳನು ಕಂಗಳಲಿ ಕೆದರುತ | ಪೆಡೆಗಳನು ಸಾಸಿರವ ಹರಹುತ |
ಪೊಡವಿಯನು ಕೋಪದಲಿ ಹೊಡವುತಜಪಶಲಾಖೆಗಲ ||
ಪಡಿಯ ನಾಲಗೆಗಳನು ನೀಡುತ | ಬಿಡದೆ ಭುಸ್ಸೆನೆ ಪೂತ್ಕರಿಸುತಡಿ |
ಗಡಿಗೆ ಕೋಪಾಟೋಪದಲಿ ಭೀಕರಿಸುತಾ ಶಯ್ಯೆ || ೨೯ ||

ನೋಡಿದರಸುಗಳಂಜಿ ಹೊರಗ | ಣೋಡಿದರು ಕಂಸಂಗೆ ಬಂದುದು |
ಹೇಡಿತನವಾ ಮಂತ್ರವಾದಿಗಳೊತ್ತಿನಲಿ ನಿಂದು ||
ನೋಡಲಮ್ಮದ ಶಯ್ಯೆಯನು ಮೊಗ | ಬಾಡಿದೇರುವ ಕಲಿಯ ಕರೆಯೆಂ |
ದಾಡೆ ಗರುಡಧ್ವಜನು ಬಂದನದೊಂದು ಲೀಲೆಯಲಿ || ೩೦ ||

ಉರಿವುರಿವ ವಿಷವಗ್ನಿಗುದಕವ | ಸುರಿದವೊಲು ತಣಿದುದು ಫಣೀಂದ್ರನು |
ಗರುಡನನು ಕಂಡುರುಗನಂತಾದನು ಜಗಜ್ಜನವು ||
ಬೆರಳಿನಿದ್ದುದು ಮೂಗಿನಲಿ ತಾ | ನಿರದೆ ಲೆಪ್ಪದ ಹಾವನೇರುವ |
ಪರಿಯಲೇರಿದನೇರಿ ಜಯವಧು ತನ್ನ ನಿಡುದೋಳ || ೩೧ ||

ಉರಗಶಯ್ಯೆಯನೇರುತವೆ ಭೀ | ಕರಿಪ ಶಾರ್ಙ್ಗವನೆಡದ ಕೈಯಲಿ |
ಕರ ಮಿರುಗುವೈವಾಯ ಶಂಖವ ಬಲದಕೈಯಿಂದ ||
ಹರಿನೆಗಪಿಯೇರಿಸಿದನದನತಿ | ಭರದಲಿದ………….ಭೀ |
ಕರರವದ ಕೋಲಾಹಲವನೇನೆಂದು ಪೇಳುವೆನು || ೩೨ ||

ನರರು ನಡನಡನಡುಗಿದರು ಖೇ | ಚರರು ಬಾನೊಳು ತೇಲಿದರು ಆ |
ಸುರರು ಬೆದರಿ ಪಾತಾಳಕಿಳಿದರು ಆಲಿವರಳುಗಳ ||
ಪರಿಯಲಾತಾರಗೆ ಉದುರಿದವು | ಶರದಿ ಹಲವೊಂದಾದ ಪರ್ಯೋ |
ಧರಿಸಿದ ಪಾಂಚಜನ್ಯದ ಭೀಕರಸ್ವರದಿ || ೩೩ ||

ಹರಿಯನಾ ಸಮಯದೊಳಗಾ ಖೇ | ಚರನ ಮಂತ್ರಿಯು ಮೂರುವಿದ್ಯವ |
ಪಿರಿದು ರಕ್ಷಿಪ ಯಕ್ಷರುಂ ಕ್ರಮದಿಂದ ಪೂಜಿಸಿಯೆ ||
ಅರಸ ಕೇಳಾ ಸತ್ಯಭಾಮೆಗೆ | ಪುರುಷ ನೀನಾದೇಶ ಪುರುಷನು |
ಉರಗಶಯ್ಯಾದಿಗಳು ನಿನ್ನವಿವೆಂದನಾ ಮಂತ್ರಿ || ೩೪ ||

ಎಂದು ತನ್ನ ಪೊಳಲ್ಗೆ ಪೋದಪ | ನಂದು ಬಲವಸುದೇವನಾ ಗೋ |
ವಿಂದನಾ ಪುಣ್ಯ ಪ್ರಭಾವಕೆ ಸಂತಸಂಬಡಲು ||
ನಂದನಂದನನಲ್ಲದಾನಕ | ದುಂದುಭಿಯ ಮಗನೀತನೆಂದು ಮು |
ಕುಂದನಾಕಾರವನು ಭಾವಿಸಿ ನೋಡಿದನು ಕಂಸ || ೩೫ ||

ಇವನಧಟು ಪಿರಿದಾದಪುದು ಇ | ನ್ನಿವನನೀಗಳು ಭಂಜಿಸುವ ಕಾ |
ರ್ಯವನು ಕಾಣಲೆ ಬೇಹುದೆಂಬ ಕುಬುದ್ಧಿಯೆಣಿಸುತಿರೆ ||
ಪ್ರವರನಾ ಮಧುರೆಯನು ಪೊರಮ | ಟ್ಟವಯವದಿ ಪೋಗುತಿರೆ ಕೃಷ್ಣನ |
ನೆವೆಯಿಡದೆ ನೋಡುತ್ತ ಬೆನ್ನನೆ ಪೋದ ಬಲಭದ್ರ || ೩೬ ||

ಬಳಿಗಳುಹು ತೊಂದರ್ದಠಾರಿಯ | ಲೊಲಿದು ಕಂಸನ ಕಪಟ ತಂತ್ರವ |
ಬಲವ ನೆಚ್ಚಱವೇಳ್ದು ನಿನ್ನ ಕುಮಾರನೊಳು ತನಗೆ ||
ನೆಲೆವಡೆದುದತಿ ಮೋಹ ಹಿಂಭವ | ದಲಿ ಸುಮಿತ್ರನೊಯೇನೊಯೆನೆನೀ |
ನಲಘಭುಜವೆಂದಂದೆ ಕೇಳಿದನೆಂದನಾ ನಂದ || ೩೭ ||

ಇಳೆಯಲಾರುಂ ಪಿಡಿಯಲಂದವ | ಶಿಲೆಯ ಬಲುಗಂಬವನು ಬಲಗೈ |
ಯಲಿ ಪಿಡಿದು ತಿರ್ರ‍ನೆ ತಿರುಹಿ ಬಿಡೆಬೀಳೆ ನೆಲನಡುಗೆ ||
ಪೊಳಲ ಜನದಿಂ ಪೂಜೆಗೊಂಡತಿ | ಬಲವೆ ನಿನ್ನ ಸಹಾಯವಿರುತಿರೆ |
ನಳಿನನಾಭಗೆ ಮರೆದರುಂಟೇ ಮೂಜಗದೊಳೆಂದ || ೩೮ ||

ಎನಲು ಮತ್ತೆ ಚತುರ್ಭುಜನೊ | ಯ್ಯನೆ ಕರೆದು ಕಿವಿಯಲ್ಲಿ ಪೇಳಿದ |
ನನುಜನೀ ದೇವಕಿ ಪಡೆದ ಮಗನೆಂದದೆಲ್ಲವನು ||
ಅನುನಯದಿ ಸೂಚಿಸಿದ……..ನಂ | ನನು ಸಸಿನೆ ಕೇಳ್ವಂತೆ ಈ ಕಂ |
ಸನು ಮಡಿದ ನಿನ್ನಿಂದ ಕೇಳಾದೇಶವುಂಟೆಂದ || ೩೯ ||

ಎಂದು ಶಿರಧರನನು ಕಳುಹೆ ಗೋ | ವಿಂದ ಸಹತುರಪಟ್ಟಿಪೊಕ್ಕಾ |
ನಂದನೊಲಿದು ಯಶೋಧೆಗಾತ್ಮಜನಧಿಕ ಸಾಹಸವ ||
ಚಂದದಿಂದೆಲ್ಲವನು ಪೇಳ್ದಡೆ | ಕಂದನಾ ಮೊಗನೋಡಿ ಮಿಗೆ ಬಾ |
ಳೆಂದು ಹರಸಿದರವರು ಸುಖದಿಂದಿರ್ದರಿರಲೊಡನೆ || ೪೦ ||

ಬಂದುದಾ ಕಂಸನ ಬೆಸನು ಆಗದ | ರಿಂದ ಗೋಪನನಗೆ ಮೊಗವು ಮಿಗೆ |
ಕಂದಿರಲು ನಿಮಗಿಂದು ಚಿಂತೆಯಿದೇತರಿಂದಾಯ್ತು ||
ಎಂದು ಶಾಂರ್ಙ್ಗಯ ಕೇಳೆ ನಾನೇ | ನೆಂದು ಹೇಳುವೆನಣ್ಣ ಕೊಲಬಗೆ |
ದೊಂದು ಬೆಸನಟ್ಟಿದನು ಕಂಸನೃಪಾಲನಿಂತೆಂದ || ೪೧ ||

ನೆಗೆದ ಜಗುನೆಯ ಕಮ್ಮಡುವಿನೊಳು | ಗೊಗೆದ ಹೊಂದಾವರೆಯದಕ್ಕೆಸ |
ಳುಗಳು ಸಾಸಿರವುಂಟು ಅದರತವೇಳ್ದು ಕಳುಹಿದನು ||
ಮಗನೆ ಕೇಳೈ ಕಾಳಭುಜಗನು | ಅಗಲದದ ಕಾದಿಪ್ಪುದದನಾ |
ರ್ಪೊಗುವರೆಂದೆದೆಗೆಟ್ಟು ಚಿಂತೆಯನಾಂತೆ ತಾನೆಂದ || ೪೨ ||

ಎಂದೊಡದಕಿನ್ನೊಂದು ಕೈಯನು | ತಂದಪೆನೆ ನೀವೇಕೆ ಚಿಂತಿಪಿ |
ರೊಂದು ನೀರೊಳ್ಳೆಯನು ಬೆದರಿಸಿ ತಾವರೆಯ ತಹರೆ ||
ದಂದುಗವು ನಿನಗಿಲ್ಲೆನುತ ಅರ | ವಿಂದನಾಭನು ಗೋಪಕುವರರ |
ಸಂದಣಿಯಲೈತಂದು ಜಗುನೆಯ ಮಡುವನೊಳ ಪೊಕ್ಕ || ೪೩ ||

ಪೊಕ್ಕಡೊಡನೀಸಾಡುವಾಗೋ | ವರ್ಕಳಾ ಕೃಷ್ಣನನು ಯಮುನೆಯ |
ಉಕ್ಕುವಾ ಕಣ್ಣೀರೊಳೀಕ್ಷಿಸಿ ಕಾಣ್ಬುದರಿಂದಾಗಿ ||
ಇಕ್ಕೆಲನ ನೋಡುವರು ಬಳಿಕಾ | ಮಕ್ಕಳನು ದಿಡಕಿರಸಿ ತಾನೊಳ |
ಪೊಕ್ಕನಾ ಕಾಳಿಂಗನಾಗನ ಮಡುವ ವಹಿಲದಲಿ || ೪೪ ||

ಹೋಗುವ ಭರಕದು ವಿಷದ ಕಿಡಿಗಳ | ನುಗುಳುತಲೆ ಬಿಲದಿಂದ ಮೇಲಕೆ |
ನೆಗೆದು ಮಡುವಿನೊಳಿರಿಸಿ ಬಹ ಕೃಷ್ಣನೊಳು ಪೂತ್ಕರಿಸಿ ||
ಅಗಧರನು ಸಿಡಿಲಪ್ಪಳಿಸಿದಂ | ತೊಗೆದುಕೊಂಡಾ ಸರ್ಪನನು ಪೆಂ |
ಪೊಗೆದಡಂಬುಜವನೂ ಕಿತ್ತೆಡ ಕೈಯಲೆಳೆತಂದ || ೪೫ ||

ಗೋವಳರು ಗುಡಿಗಟ್ಟಿ ಸಂತಸ | ದೀವಿ ಬಂದಾ ಫಣಿಯ ಹೆಣವನು |
ತಾವರೆಯ ಪಿಡಿಕೊಂಡು ಬರೆಹರಿತಂದೆಗೊಪ್ಪಿಸಲು ||
ಆ ವಿಭುವಗವನೈದು ತಾವರೆ | ಹೂವಕೊಟ್ಟನು ಕೆಳಕೆ ಬಿಸುಟನು |
ಹಾವಿನಾ ದೇಹವನು ಕಂಸನು ಕಂಡು ಬೆರಗಾದ || ೪೬ ||

ನಂದುಗುಡುಗೊಱೆಗೊಟ್ಟು ಕಳುಹಿಸಿ | ಕಂದೆದೆಯ ವಿಭುವಹಿತನನು ಕೊಲು |
ವಂದಗಾಣದೆ ಕಡಿದು ದಂಡೆತ್ತಿರಿವೆನೇನೆರೆವ ||
ಬಂದಪರು ವಸುದೇವ ಬಲನಾ | ನಂದ ಸುತಗದರಿಂದ ಆತನ |
ಕೊಂದು ಕೂಗಲಿ ಮಲ್ಲರೆಂದಾಳೋಚಿಸಿದನಾತ || ೪೭ ||

ಪಜ್ಜಳಿಪ ಚಾಣೂರನುದ್ಧತ | ವಜ್ರಮುಷ್ಠಿಯು ಮಲ್ಲಕೇಸರಿ |
ವಜ್ರಜಂಘನೆನಿಪ್ಪ ಜಗಜಟ್ಟಿಗಳ ನೃಪ ಕರೆಸಿ ||
ಕಜ್ಜುವೊಂದಿದೆ ಹರಿಯ ಮುಸುಡನು | ಜಜ್ಜುಗುಟ್ಟಿಯೆ ನೆರತಿವಿದು ದೊಂ |
ದುಜ್ಜುಗದಿ ಕೊಲಬೇಹುದಹಿತರನೆಂದ ನೇಮಿಸಿದ || ೪೮ ||

ಬೆಸಸಬಹುದೇ ರಾಯ ನನಗೀ | ಬೆಸನನಕಟಾ ಚಂದ್ರಸೂರ್ಯರ |
ಹೊಸದು ಮುಕ್ಕದ್ರಿಗಳ ಕಿತ್ತಾಡಣ್ಣೆ ಕಲ್ಲುಗಳ ||
ವಿಸಧಿಯನು ಕುಡಿಯೆನಲು ಮಾಡೆಲೆ | ಹಸುಳೆಯನು ಗೋವಳನಮಗನನು |
ಶಿಶುವ ವಧೆಯ ಮಾಡಿದಡೆ ಚಾಣೂರಗೆ ಪರಾಕ್ರಮವೆ || ೪೯ ||

ಈಹದನ ನೆನಗರಿಯ ಬಂದುದು | ದ್ರೋಹಿಯನು ಕೂರಾನೆಗಿಕ್ಕಲೆ ||
ಬೇಹುದಾದೊಡೆ ರಾಯ ಚಿತ್ತೈಸೆನ್ನ ಭಾಷೆಯನು ||
ಮೋಹರಿಸಿ ಕಳದೊಳಗೆ ನಿಲೆಕರು | ಗಾಹಿಯೆಳೆ ಗೊರಳನು ಮುರಿಯಬಿಸು |
ಟಾಹಡೆದ ತಾಯ್ಗೀವೆ ಶೋಕವನೆಂದ ಚಾಣೂರ || ೫೦ ||

ಎನಲು ಹಗೆಯನು ಕೊಂದೆನೆಂದೇ | ಮನದ ರಾಜ್ಯವನಾಳಿ ಕಂಸಾ |
ವನಿಪನಾ ಜಟ್ಟಿಗಳಿಗಭಿಮತ ವಸ್ತುವನು ಕೊಟ್ಟು ||
ಮನೆಗೈದಿ ನಾಳಿನಲಿ ಕಾಳಗ | ವೆನುತಲವರನು ಕಳುಹಿ ಮಾರಿಯ |
ಮನೆಗೆ ಬಳಿಯಟ್ಟುವವೊಲಟ್ಟಿದನುರಗ ಶಯನಂಗೆ || ೫೧ ||

ಮತ್ತಮಾಸಮಯದಲಿ ದೇವರು | ಮತ್ತು ಗಜಮದವೇಱೆ ಕಂಬವ |
ಕಿತ್ತುದುಪ್ಪರಿಗೆಯ ಮುಱಿದುದಾಲಾಯಗುದುರೆಗಳ ||
ತುತ್ತಿದುದು ಹಲವಾನೆಗಳ ತವೆ | ಕುತ್ತಿದುದು ಬಿಸಟಂಬರಿವುತದೆ |
ಚಿತ್ತವಿಸು ಬಿನ್ನಹವಿದೆಂದನದೋರ್ವನರಸಂಗೆ || ೫೨ ||

ಅರಿಯರೆವೊಡಿದೊಂದು ನೀಗಳೆ | ನೆರೆವ ಬಂದುದು ತನಗೆನುತಮಿಗೆ |
ಹರುಷದಲಿ ಮಾವುತರನಿರದೇಕಾಂತದಲಿ ಕರೆದು ||
ಕರಿಪತಿಯ ಗೋಪುರದೊಳಗೆ ಕ | ಟ್ಟಿರಿಸೆ ನಾಳಿನ ಮಲ್ಲ ಗಾಳಗ |
ಹರಿವಹಾಗಳು ಬಿಟ್ಟವನ ಕೊಲಿಸೆಂದು ನೇಮಿಸಿದ || ೫೩ ||

ಕಳನು ಸಿಂಗರವಾಯ್ತು ಮರುಹಗ | ಲೊಳಗೆ ಸುತ್ತಣ ನೋಟಕರು ಸಂ |
ಗಳಿಸಿ ನೆರೆದುದು ಅತಿಬಲರ ಬಲುಮಲ್ಲಗಾಳಗವ ||
ಬಳಸಿ ನೋಡಲು ಸುರರು ಬಾನೊಳು | ಬಳಸಿದರು ಜವ ಪುರವನೇರುವ |
ವಿಳಸನದಿ ಕಾಂಚನದ ತಳ್ಪವನೇರಿದನು ಕಂಸ || ೫೪ ||

ಬಳಸಿದಾ ತಾರಗೆಯ ನಡುವು | ಜ್ಜಳಿಪ ಚಂದ್ರಮನಂತೆ ಕಂಸನು |
ಲಲನೆ ಜೀವಂಜಸೆ ವಧೂತತಿವೆರಸಿ ರಂಜಿಸಲು ||
ಬಳಸಿದರು ಚೌಪಳಿಗೆಯನು ದೊರೆ | ಗಳು ಕಪಟತಂತ್ರದಲಿ ಕಳನನು |
ಬಳಸಿತಾ ನೃಪನಂಗ ರಕ್ಷಕರಸಿಯ ಮಸ್ತಕದಲಿ | ೫೫ ||

ಹೊಱವಳಸಿನಿಂ ಕುದುರೆ ಅದಱಿಂ | ಹೊಱವಳಸಿನಲಿ ಆನೆ ನಿಂದವು |
ಅಱಿದು ಈ ತಂತ್ರವನು ವಸುದೇವನು ಬಲನು ಕೂಡಿ ||
ತುಱುಗಿ ನಿಜಬಲವೆರಸಿ ನೋಡುವ | ತೆಱದಳೊಂದೆಡೆಯಿರ್ದಳಾಗೆಲೆ |
ಮಱವುತಾ ಚಾಣೂರ ಮುಖ್ಯರು ಬಂದರಬ್ಬರದಿ || ೫೬ ||

ಕಡು ನಿಡಿಯವಹ ಜಾಜುವೆಟ್ಟದ | ಲಡಿವಡೆದು ನಡೆತಂದವೋಯೆನೆ |
ಪೊಡಯಿಸುತಡವುಡೆಗಳ ಝಲ್ಲಿಯ ಗದೆಗಳನು ಹಿಡಿದು ||
ಪೊಡವಿಯೊಳರಡಿಗೊಮ್ಮೆ ಕುಸಿವವೊ | ಲಡಿಯಿಡುವ ಚಾಣೂರ ಮುಖ್ಯರು |
ನಡೆದು ಬಹ ಹವಣಿಯೆ ತದಾಸ್ಥಾನವನು ಮೆಚ್ಚಿಸಿತು || ೫೭ ||

ಅತ್ತಲಾ ಗೋವಳರು ಬಾಜಿಪ | ತಿತ್ತಿರಿಯ ಕೊಂಬುಗಳ ಕೊಳಲುಗ |
ಳಿತ್ತರದ ಕಂಕಲಿಯ ರುಂಚೆಯ ಎಕ್ಕಮದ್ದಳೆಯು ||
ಒತ್ತರಿಪ ದನಿಗೇಳುತಾ ಪುರು | ಷೋತ್ತಮನು ನಂದನು ಬೆರಸಿ ಬರು |
ತೊತ್ತಿನಲಿ ಮಡಿವಳನು ಪೊರಿಸಿದ ಮಡಿಗಳನು ಕಂಡ || ೫೮ ||

ಎಲವೋ ಮಡಿವಳ ನಿನ್ನ ತೊಳಹವು | ಚೆಲುವನಾದವು ನಮ್ಮ ಯಮುನೆಯ |
ಲಲುಬಿ ತೊಳೆದೊಡೆ ಕಪ್ಪಡವು ಬೇಳ್ಪಡಗಳಾಗದಿವೆ ||
ತೊಳೆದುಕೊಡು ನಾವುಟ್ಟುದನು ನೀ | ತೊಳೆದ ಘಲಿಗೆಯನೆಮ್ಮವರಿಗೀ |
ಗಳೆ ಕೊಡೆನೆ ಸೊಕ್ಕಿದಿರಿ ಗೋವರು ಕಾಲವಿಷಮವಲ || ೫೯ ||

ಭರದಲಾ ವಾದ್ಯದ ರವದಿನಗ | ಧರನು ಬರುತಿರೆ ಕಾಣುತವೆ ಅಂ |
ಬರವ ಚುಂಬಿಸ ಬೆಳೆದ ಕೈಟಭನೆಂಬ ಕಟ್ಟಾಣೆ ||
ಪರಿಕಿಪೊಡೆ ಮುನ್ನದುದೆ ರಕ್ಕಸ | ನೆರಡು ಕಟದಿಂ ಸುರಿವ ಮದನಿ |
ರ್ಜರದಿ ಗಿರಿಯೆನಿಪಧಟ ನಿಗಳವ ಕಳೆದರವರಲ್ಲಿ || ೬೦ ||

ನೊಸಲೊಳೆಂ ನಿಮಗುಂಟೆ ಕಂಗಳು | ನೊಸಲ ಕಣ್ಣವ ಕಂಸ ರಾಯನ |
ವಸನಗಳನೆಳದುಡುವಡಾರದೆ ತೊಗಲನುಟ್ಟನೆನೆ ||
ಸಸಿನೆ ಬಟ್ಟೆಯ ಹೋಗಿ ವಸ್ತ್ರದ | ಗಸಣಿ ನಿಮಗೇಕೆನಲು ಕೃಷ್ಣನು |
ನಸು ನಗುತಲಾ ವಸನಗಳ ನೆಳೆದಿತ್ತ ಗೋವರಿಗೆ || ೬೧ ||

ಹರಿಗೆ ಮುಳಿದಿದಿರೆತ್ತಿ ಬಹವನ | ಕರಿಯವೊಲು ಬರೆ ಕೈಗೆ ಕೈಯಿ |
ಕ್ಕಿರದೆ ತೆಗೆದನು ಕುಸುಕಿದನು ಎಳೆಗಳಿಲೆಗೀಳ್ವಂತೆ ||
ಕರಿಪತಿಯ ಕೊಂಬುಗಳ ಕಿತ್ತನು | ಭರದಿ ಅಪ್ಪಳಿಸಿದನು ಮಡಿದಾ |
ಕರಿಯ ಹಿಡಿದೆಳೆತಂದು ಬಿಸಟನು ತಳದಕೆಲದಲ್ಲಿ || ೬೨ ||

ಜನಪ ಕಮ್ಮರನಂಬು ಕಮ್ಮರ | ಗೆನಿಪವೊಲು ರದನವಿದೆ ರದನಿಯ |
ಹನನ ಕಾದುದು ಸೊಕ್ಕಿದದರಿಂದರಿಗಡಾಯೆನಲು ||
ಜನವು ಸೈವೆರಗಾಯ್ತು ಕಂಸನ | ಮನ ಬೆದರಿದುದು ಹೊಕ್ಕನಾಕಳ |
ನನು ಭುಜಸ್ಫಾಳನವ ಮಾಡಿದನವನಿಧರಧರನು || ೬೩ ||

ಕಡೆಯ ಕಾಲದ ಸಿಡಿಲರವದಂ | ತಡಸಿತಾ ದನಿ ಸಭೆಯ ಕಿವಿಗಳೊ |
ಲೊಡನೆ ಚಾಣೂರನು ಭೂಜಸ್ಫಾಳನವ ಮಾಡಿದೊಡೆ ||
ಬಿಡದೆ ಜಟ್ಟಿಗಳೆಲ್ಲರುಂ ಸಂ | ಗಡದೆ ತೋಳಲನೊದರೆ ಸಲುಕಿ |
ಚ್ಚಡಸಿತೋ ಪೆರ್ಬಿದಿರ ಮೆಳೆಗೆನೆ ಪರ್ವಿತಾ ರವವು || ೬೪ ||

ಹೂಡಿದನು ದಂಡೆಯನು ವಹಣಿಯ | ಮಾಡುತವೆ ಚಾಣೂರ ಮಲ್ಲನು |
ರೂಢಿಸಿದ ನೀಳಾದ್ರಿಯೊಳು ತೊಡರುವವೊಲಿದಿರೊದಗೆ ||
ಕೂಡೆ ದಂಡೆಯ ಹೂಡಿ ಹರಿತಡ | ಮಾಡದೊದಗುವ ವಹಿಲವನು ಸಭೆ |
ನೋಡಿ ಬೆರಗಾಗುತಿರೆ ಬಿನ್ನಣಗಳನು ತೋರಿದನು || ೬೫ ||

ಆಕ್ಕಟಾಯೆಳೆ ಶಿಶುವಮಸಗಿದ | ರಕ್ಕಸನ ಬಾಯ್ಗಿಕ್ಕಿದಿರಲಾ |
ಚಿಕ್ಕಮಗ ನಿತ್ತರಿಪನೇ ಚಾಣೂರಮಲ್ಲನೊಳು ||
ಮಕ್ಕಳಾಟಿಕೆಯೆಂದರನಿಬರು | ಸೊಕ್ಕಿದಾನೆಯ ಬಡಿದ ಗಿರಿಧರ |
ನುಕ್ಕು ದೊಡ್ಡಿತು ಜೈಸದಿರನಿವನೆಂದುದಲ್ಲಲ್ಲಿ || ೬೬ ||

ಒಡೆಯ ಚಿತ್ತೈಸೊಂದೆ ಪೆಟ್ಟಿಗೆ | ಕುಡಿದ ಬಜೆಯನು ಕಾರಿಸುವೆ ನೀ |
ನಡೆಯೆನಲು ಚಾಣೂರನದು ಲೇಸೆನುತ ಹರಿಸೇರೆ ||
ಪೊಡವಿಯೋರಡಿಗೊರ್ಮೆಯಿತ್ತ | ತ್ತೊಡನೊಡನೆ ತಲ್ಲಳಿಸುತಿರೆ ಕೈ |
ದುಡುಕುತಿರ್ದರು ಧಣುದರುರಿ ಜಗಜಟ್ಟಿ ಭಾಪ್ಪೆನುತ || ೬೭ ||

ತುಡುಕಿ ಯೆಡಗೈಯಿಂದ ಕೈಯನು | ಹಿಡಿದು ಕೃಷ್ಣನು ಜಡಿದು ನೋಡಲು |
ಕಡುಪಿನಿಂದಂತಕನೆ ಹಿಡಿದಂತಾಗಿ ಚಾಣೂರ ||
ಮಡಿದನೆಂದೇ ನಿರ್ಧರಿಸಿದನು | ತೊಡಹದಧಟನೆ ತಳೆದು ಯುದ್ಧಕೆ |
ತಡಹರಿಸಿ ಸಮ ಸತ್ತ್ವದಲ್ಲಿ ಫಣಿಶಯನು ಕಾದಿದನು || ೬೮ ||

ಪ್ರಳಯ ಕಾಲದ ಸಿಡಿಲುಗಳ ಕೈ | ಗಳಲಿ ಕಟ್ಟೊದಗಿನಲಿ ಜಂಝೂ |
ನಿಲನನಕ್ಷಿಗಳಲಿ ಕಲ್ಪಾನಳನ ಕೇಸರಿಯ ||
ಪೊಳೆವ ವಿಂಚಿನಳವಿಯನು ಮೈ | ಗಳಲಿ ದಿಗ್ಗಜಡಾಂಕೆಯನು ತೋ |
ಳೊಲು ನೆರೆದ ಕೆಸರಂಕಕಾರರು ತೋರಿದರು ಭರದಿ || ೬೯ ||

ಬೆದರುಗಾಗೆಯ ನೋಟಸಾಳುವ | ನೊದೆವು ಮೀಂಗಳ ಝಳಕೆ ಕೇಸರಿ |
ಯಧಟು ಶಾಖಾಮರಗದಲಂಘನ ತಗರತೆಗೆಮೆಟ್ಟು ||
ಚದುರ ನಲ್ಲರ ಬಂಧ ಫಣಿಗಳ | ಪುದಿವು ಮೇರುವಿ ಮಿಕ್ಕೆ ಸೊಕ್ಕಿದ |
ರದನಿಗಳ ಧೂಳಾಟವೊಪ್ಪಿದವವರ ಯುದ್ಧದಲಿ || ೭೦ ||

ತರದೆಸೆವ ಸಮಗಂಟೆ ಸಮ ಬಿ | ತ್ತರವು ಬೌಂಗಳ ಕಂದನಾದವು |
ಭರದ ವೊಡಲೇನಿಪ್ಪವು ಪತಾಯದಲಿ ಅರ್ಧಾಂಗ ||
ಪಿರಿದೆನಿಪ ಹೆಟ್ಟಾಂಗ ಸೀಸವು | ಬೆರಸಿದ ಗದೆ ರಯಕ ರವಾ |
ಳುರುವದೊಂದಿಗಳೆಂಬ ತಾನಕದಿಂದ ಕಾದಿದರು || ೭೧ ||

ಎಂದು ಘಂಟೆಯು ಹಾತು ಕುಂಟಿಯು | ನಿಂದೆ ಘಂಟೆಯು ಹಾತು ಭಾಣುಗ |
ಳೊಂದಿದಿಕ್ಕತ ಭಾವು ಮಂತರ ಮೋಹದಗಳೊಡನೆ ||
ಸಂದ ಕೊಕ್ಕಸಗುಂಡು ಗೋಣಿಯು | ವಿಂದೆ ಪಟ್ಟಸು ಚೇಣ ಪಟ್ಟಸು |
ವೆಂದೆನಿಪ ವಿಂದಾಣದಲಿ ಕಾದಿದರು ಜಟ್ಟಿಗಳು || ೭೨ ||

ಕೊಂತಮಾರಿಯು ಲಾಟಕಾ ಕೋ | ದಂತೆ ಉತ್ತರ ಡೊಕ್ಕರವು ನೆರೆ |
ಕೊಂತಮಾರವುಲಾಟಡೊಕ್ಕರ ಪೋಗು ಬಾಣುಗಳು ||
ಅಂತರಿಪ ನರಸಿಂಗ ಪಟ್ಟಸು | ಮುಂತಡರೆ ತಳಹತ್ತಗಳ ಹ |
ತ್ತಂತುಳಿಲ ವಿಂದಾಣದಲಿ ಹರಿ ಕಾದಿ ಬಳಲಿಸಿದ || ೭೩ ||

ಪಿಡಿದನಾ ಕಾಳಿಂಗ ನಾಗನ | ಹಿಡಿದವೊಲು ಚಾಣೂರ ಮಲ್ಲನ |
ನಿಡಿಯ ತೋಳನು ಕುಸುಕಿರಿದು ವಹಿಲದಲಿ ಹಿಂಗಾಲ ||
ಹಿಡಿದು ತಿರ್ರ‍ನೆ ತಿರು ತಿರುಹಿಯಿವ | ಕಡುಹಗುರವೊಲು ಗೋವರ್ಧನಾದ್ರಿಯ |
ಹಿಡಿದ ನೆಗಹಿದ ತೋಳಿಗೆಂದಪ್ಪಳಿಸಿದನು ಕೃಷ್ಣ || ೭೪ ||

ಬಳಿಕ ಕಂಸನು ಮುಳಿದು ಬೆಸಸಿದೊ | ಳಡವಿಗೊಟ್ಟಾ ವಜ್ರಜಂಘನ |
ಹಿಡಿದು ಹಿಂಡಿದ ಕೇಸರಿಯ ನರಿಯಂತೆ ಬಳಿದಿಕ್ಕಿ ||
ಉಳಿದ ಮಲ್ಲರನೆಲ್ಲರನು ಮಿಗೆ | ತುಳಿದೆ ನೆಕ್ಕಿಯ ಹೂವ ತುಳಿದಂ |
ತಳಲಿ ಕಂಸನು ನಿಜ ಬಲಕೆ ಕೈಬೀಸೆ ಹರಿಕಂಡ || ೭೫ ||

ಗಿಡುಗಲಂಘನದಿಂದ ತವಗವ | ನಡರೆ ಲಂಘಿಸಿ ಪೆಂಡವಾಸವು |
ಮಡದಿ ಜೀವಂಸೆಯು ಕೆಳಗಡೆ | ಕೆಡಪೆ ನೆತ್ತರ ಕಾರಿ ಕಂಸನು |
ಮಡಿದನೆದೆಗೆಟ್ಟಿಳುಹಿದುದು ಪರಿವಾರ ಕೈದುವನು || ೭೬ ||

ಉಪ್ಪರಿಗೆಯಿಂದಿಳಿದು ಬರೆ ತೆಗೆ | ದಪ್ಪಿದನು ವಸುದೇವನಹುದೋ |
ಬೊಪ್ಪಯೆಂದಾಲಿಂಗಿಸಿದ ಬಲದೇವ ಶಾಂರ್ಙ್ಗಯನು ||
ತಪ್ಪುವುದೊ ತಾಗುವುದೊ ಯೆಂದೆದೆ | ಕುಪ್ಪಳಿಪ ದೇವಕಿಯ ಚರಣಕೆ |
ದೊಪ್ಪನೆರಗೆಂದೊಯ್ದು ಸಂತಸವೆರಗಿಸಿದನೊಲಿದು || ೭೭ ||

ತಾಯ ಚರಣಕ್ಕರಗಿ ನನ್ನಯ | ತಾಯೆ ನಿಮ್ಮಯ ಮೊಲೆಯನುಂಡೋ |
ನೋಯದಡಿ ಬೆಳೆಯಲಿಕೆ ಕಂಟಕನಾದ ಪಾತಕನ ||
ಸಾಯವಡಿದೆನು ನೋವು ನಿಮಗೇ | ನಾಯಿತೋಯೆನೆ ಹರುಷಶೋಕವ |
ದಾ ಯುವತಿಯೊಡದೆಳೆಯೆ ಕಂಸಧ್ವಂಸಿಯಪ್ಪಿದಳು || ೭೮ ||

ಮಸಗಸಿಯ ಪಂಜರದೊಳಿನ್ನೆಗ | ಮಸುಗೆಡುತ ವಿರ್ದುಗ್ರಸೇನನ |
ನೆಸೆವ ಪದ್ಮಾವತಿಯ ಬಂಧನವನು ಕಳೆದು ತರಿಸಿ ||
ಅಸುರರಿಪುನಾ ಕಂಸನನು ತೋ | ರಿಸಲು ಕಂಡತಿ ದುಃಖವನೆ ಪು |
ಟ್ಟಿಸಿದೆ ಮಗನೇಯೆಂದು ಹಲುಬಿದರಾ ಮಗನಕಂಡು || ೭೯ ||

ಸಂತಯಿಸೆ ವಸುದೇವನಾಗಳು | ಕಾಂತೆ ದೇವಕಿ ತಂದೆ ತಾಯ್ಗೋ |
ರಂತೆ ಬಂದೆರಗಿದಳು ಮಗಳೇ ನಿನ್ನ ಮಗನಿರುಳು ||
ಸೀಂತಡುರೆ ಹರಸಿದೆವು ಬಂಧನ | ವಿಂತೊಲಗುಗೆಂದರಿದುಯೆನೆ ನಿ |
ಶ್ಚಿಂತದಲಿ ಕಂಸನ ಸಭನ ಸಂಸ್ಕರಿಸಿದರು ಬಳಿಕ || ೮೦ ||

ವರ ಮಧುರೆಯನು ಉಗ್ರಸೇನಂ | ಗಿರದೆ ಕೊಟ್ಟನು ನಂದಗೋಪಿಗೆ |
ಪಿರಿದು ವಸ್ತುವ ಪಲವು ಗ್ರಾಮವನಿತ್ತು ವಸುದೇವ ||
ಗಿರಿಧರನು ಬಲದೇವ ದೇವಕಿ | ವೆರಸಿ ಹರುಷೋತ್ಕರ್ಷದಿರ್ದನು |
ಪರಮ ಜಿನಪದ ಭಕ್ತ ಸತ್ಕವಿತಾ ಗುಣೋದಯನು || ೮೧ ||

|| ಅಂತು ಸಂಧಿ ೨೨ಕ್ಕಂ ಮಂಗಲ ಮಹಾ ||