ಸಂಧಿ ೧೮

ವನಿತೆಯನು ವಶಮಾಡಿ ನೀಲಾಂ | ಜನ ವಡೆದು ರೋಹಿಣಿಯ ಕತದಿಂ |
ವಿನುತ ವಸುದೇವನು ಸುಖದಿಶೈಲೀಪುರವ ಪೊಕ್ಕ || ಪದ ||

ಕೇಳು ಮಗಧಾಧೀಶ ತದ್ಭೂ | ಪಾಲನಾ ವೀಣಾಕಳಾರ್ಯನ |
ಆಲಯದೊಳಾ ಸ್ನಾನ ಭೋಜನಗೈದು ಬಳಿಕವರ ||
ಕೇಳಿಯರಿದನು ತಾಂ ಸ್ವಯಂವರ | ನಾಳೆಯಹುದೆಂಬುದನು ಮಿಗೆ ಸಂ |
ಮೇಳದಲಿ ಗಾಂಧರ್ವ ವಿದ್ಯಾಚಾರ್ಯನಿಂತೆಂದ || ೧ ||

ನೆರೆದ ರಾಜ ಕುಮಾರಕರೆ | ಲ್ಲರನು ಚೆಲುವಿಂ ವೀಣೆಯಿಂದಾ |
ತರುಣಿ ಹಲವು ಸೂಳು ಸೋಲಿಸಿದಳು ಕುಮಾರಿತಿಗೆ ||
ಅರಸ ನೀನೇ ಪುರುಷನಾದಪೆ | ಅರಿಯ ಬಹುದಾದೇಶವಾಕೆಗೆ |
ಕರದು ತಂದುದು ನಿನ್ನನೆಲೆ ಭೂಪಾಲ ಕೇಳೆಂದ || ೨ ||

ಅಂದಿನಿರುಳನು ಕಳಿಯೆ ಮರುದಿನ | ಬಂದುದಖಿಳ ಧರಾಧಿನಾಥರ |
ವೃಂದವಾ ವೀಣಾ ಸ್ವಯಂವರ ಶಾಲೆಯನು ಪೊಕ್ಕು ||
ಎಂದಿನಂತುಚಿತಾಸನದೊಳಿರೆ | ಬಂದನಾ ವಸುದೇವನಾನನ |
ಚಂದಿರನನಾ ಚಾರುದತ್ತನು ಕಾಣುತಿದಿರೆದ್ದು || ೩ ||

ಕುವರಿ ಕುಳ್ಳಿಹ ತಾಣದೊತ್ತಿನ | ಲವನಿಪನನಿರಿಸಿದನು ನೋಡಿದ |
ನೆವೆಮಿಸುಕದಾತನ ಸುರೂಪನು ತನ್ನ ಮನದೊಳಗೆ ||
ಯುವತಿಯಾದೇಶದ ಪುರುಷನೀ | ಕುವರನಾಗಲೆ ಬೇಹುದೆನುತಿರೆ |
ಕುವರಿ ಹೊಂದೇರಿನಲಿ ಬಂದಳು ಕೆಳದಿಯರುವೆರಸಿ || ೪ ||

ಪರಿಮಳಕೆ ಬಂದೆರಪ ಪರಮೆಯ | ಪರಿವೊ ರಾಜಕುಮಾರಕರ ಕಂ |
ಣ್ಪರಿದು ಮುಸುರಿದ ಪರಿಯೊಯೆನೆ ಕಂಪಿಂಪನೊಳಕೊಂಡು ||
ಸ್ಮರನ ಮೋಹದಸ್ತ್ರವೀಪೆಣ್ | ಬರಿಜನಾಂತುರ ರತಿಯ ಭಾಗ್ಯದ |
ಸಿರಿಯೊ ಮೇಣ್ಗಂಧರ್ವದತ್ತೆ [ಯೊ ಎನುತ ಬೆರಗಾಗೆ] || ೫ ||

ತೇರಿನಿಂದವತರಿಸಿ ಬಂದಾ | ಚಾರುದತ್ತನ ಪಕ್ಕದಲಿ ಶೃಂ |
ಗಾರಲಕ್ಷ್ಮಿಯಲಂಕರಿಸಿ ವಸುದೇವನಿರೆ ಕಂಡು ||
ಆರೋ ಭೂಚರ ಖೇಚರರೊಳಿವ | ನೋರಗೆಯ ಚೆಲುವರನು… |
…………………………………. || ೬ ||

ಗುರುಕೊಡಲು ಮೇಳಿಸಿದ ವೀಣೆಯ | ನರಸಿ ತೆಗೆಕೊಂಡಾ ಶ್ರುತಿಯ ಕಿರು |
ವೆರಳಿನಲಿ ಮಿಡಿದೊಡನೆ ಟೇಪಿಯನೆತ್ತಿ ಸರಗಂಡು ||
ಹೊರೆಯ ಮಧುರದ ಷಟ್ಜ ಪಂಚಮ | ದೆರಡು ತಂತಿಯ ನಾರಯಿದು ನು |
ಣ್ಗೊರಲು ಬೆರಲೊಂದಾದುದೆನೆ ಬಾಜಿಸಿದಳಾಚದುರೆ || ೭ ||

ಮೆಚ್ಚಿದನು [ವಸುದೇವ ಮನದಲಿ ] | ಹುಚ್ಚುಗೊಂಡುದು ನೃಪರ ತಿಂಥಿಣಿ
ಅಚ್ಚರಿಯ ಗಂಧರ್ವದತ್ತೆಯ ವೀಣೆಯನು ಕೇಳಿ |
ಪೆಚ್ಚಿದವರುಂಟಾದಡೀಕೆಯ | ಮೆಚ್ಚಿಪುದು ವೀಣೆಯನೆನಲು ತಾ |
ನುಚ್ಚ ಸರದಲಿ ಸಾರಿಸಿದನಾ ಚಾರುದತ್ತಕನು || ೮ ||

ಕೆಲರು ತಲೆಗುತ್ತಿದರು ಅದರೊಳು | ಕೆಲರು ವೀಣೆಯ ನುಡಿಸಿ ಕುವರಿಯ |
ನೊಲಿಸಲರಿಯದೆ ಬಿನ್ನಗಿರೆ ಸುಗ್ರೀವಕಣ್ಗೆಟ್ಟೆ ||
ಕಲೆಯೆರೆಂದು ವಸುದೇವನಾಕೆಯ | ಪೊಳೆವ ವೀಣೆಯ ಕಂಡು ತಂತಿಯ |
ನೊಲಿಸಿ ಕೆಳಗಿರಿಸಿದನು ತರಿಸಿದನುಳಿದ ವೀಣೆಗಳ || ೯ ||

ಸೊರೆಗೆಸೆರೆಯಲಿ ತುಂಬಿನಲಿ ಕ | ತ್ತರಿಸಿದೆಡೆಯಲಿ ಬೆಳಹಿನಲಿ ಈ |
ಪರಿಯ ದೋಷವು ದಂಡಿನಲಿ ತರು ದೋಷನಾರಾಚ ||
ಹರಿದ ದೋಷವಿದೆಂದು ತಂತಿಗೆ | ಪಿರಿದುದೋಷವನೊರೆದು ವೀಣೆಯ |
ನರಸನೊಂದನು ತೆಗೆಯೆ ಸುಗ್ರೀವಾರ್ಯನಿಂತೆಂದ || ೧೦ ||

ಎಸೆವ ಕುರುಜಾಂಗಳ ವಿಷಯದೊಳ | ಗೆಸೆವ ಹಸ್ತಿನ ಪುರದರಸನೋ |
ಳ್ಪೆಸೆವ ಮೆಘರಥಾಖ್ಯ ಪದ್ಮಾವತಿಗೆ ವರಸುತರು ||
ಮಿಸುಪ ವಿಷ್ಣುಕುಮಾನೊಪ್ಪುವ | ಕುಸುಮಶರ ಸಮ ಪದ್ಮರಥನೊ |
ಪ್ಪೆಸೆವರಾಗಿರೆ ಮೇಘರಥ ಮೇಘದ ತವಿಲಕಂಡೊ || ೧೧ ||

ಪರಮ ವೈರಾಗ್ಯದಲಿ ತಪದೊಳು | ನೆರೆಯೆ ವಿಷ್ಣುಕುಮಾರನುಂ ಮಿಗೆ |
ಧರಿಸಿದನು ದೀಕ್ಷೆಯನು ಪದ್ಮರಥನುಗ್ರಪತಿಯಾಗಿ ||
ಇರಲು ಮತ್ತನವಂತಿ ವಿಷಯದ | ಲಿರುತಲಿಹುದುಜ್ಜಯಿನಿಯೆಂಬುದು |
ಪುರವದರ ಪೊರಬನದೊಳೈನೂರ್ವರು ಮುನಿಗಳೊಡನೆ || ೧೨ ||

ಇರಲು ಯೋಗದಕಂಪನಾಚಾ | ರ್ಯರು ತದವನೀಪಾಲನಾಮುನಿ |
ಪರನು ಪೂಜಿಸಿ ಬರಲು ಬಂದರು ಕೂಡಮಾನ್ಯಕರು ||
ಪಿರಿಯ ಬಲಿಪುತ್ರನು ಬೃಹಸ್ಪತಿ | ಪಿರಿದು ವಿದ್ಯಾಜ್ಞಾನಿಗಳು ತಾ |
ವಿರದೆ ಗರ್ವದಿ ತರ್ಕಿಸಿದರಾ ಮುನಿವರರ ಕೂಡೆ || ೧೩ ||

ಯತಿಪತಿಯ ವಾಗಾಯುಧದಿ ಖಂ | ಡಿತ ಮತಿಗಳಾಗಿಯೆ ತಿರುಗಿ ಬಂ |
ದತಿ ನಿಶಿಯೊಳಾ ಗುರುಗಳನು ಕೊಲಬಂದನಾ ಬಲಿಯು ||
ಅತಿ ನಿಶಿಯೊಳಾ ಗುರುಗಳನು ಕೊಲಬಂದನಾ ಬಲಿಯು ||
ಅತಿ ನಿಶಿತ ಕಳ್ಗವ ನೆಗಪೆ ದೇ | ವತೆಗಳಿರೆ ಕೀಲಿಸಲು ಮಿಗೆ ನೋ |
ವುತಲು ಘೋಳಿಡೆ ಕೇಳಿಬಂದುದು ಪುರಜನವ್ರಾತ || ೧೪ ||

ವರವೃಷಭ ಕೇತು ಕ್ಷಿತೀಶನು | ಗುರುಪದವನೊಲಿದರ್ಚಿಸಿ ನಮ |
ಸ್ಕರಿಸಿ ಬಲಿಶುಂಕ್ರಾದಿಗಳನಾದೇಶವನು ಬಿಡಿಸಿ ||
ಇರದೆ ಕುರುಜಾಂಗಳ ವಿಷಯಕವ | ತರಿಸಿ ಪದ್ಮರಥಾವನೀಶನ |
ಚರಣವನು ಕಂಡಿರ್ದರೆಲೆ ಭೂಪಾಲ ಕೇಳೆಂದ || ೧೫ ||

ಬಲಿ ಬೃಹಸ್ಪತಿ ಶುಕ್ರನೆಂಬ | ಗ್ಗಲರು ಮಂತ್ರಿಗಳೋಲಗಿಸುತಿರೆ |
ಮಲೆವ ರಿಪು ದಂಡೆತ್ತಿಬರೆ ಬೆಸನಾಂತಿವರು ನಡೆದು ||
ಅಲಘು ಭುಜಬಲದಿಂದ ಮಂತ್ರದ | ಬಲದಿ ಅವರುಪಸಂಹರಿಸಿ ಬರೆ |
ಬಲಿಯ ಬಲುಮೆಗೆ ಪದ್ಮರಥನೃಪ ಮೆಚ್ಚಿ ಬೇಡೆಂದ || ೧೬ ||

ಏಳುದಿನವೇನರಸುತನವನು | ಪಾಲಿಸೆನೆ ನೃಪನಿತ್ತನೆನೆ ಭೂ |
ಪಾಲಕೇಳಿ ಮೆಚ್ಚಿ ನಿನ್ನಿಲ್ಲಿರಲಿ ನಾನೆಂದ ||
ವೇಳೆಗಾಂತಪೆಯೆಂದು ಬಲಿಸಂ | ಮೇಳದಿರೆ ಮತ್ತತ್ತಣಿಂ ಶುಭ |
ಶೀಲಗುಣಗಳಕಂಪನಾಚಾರ್ಯರು ಬಿಜಯಮಾಡಿ || ೧೭ ||

ವರಮುನಿಗಳಾ ಸೌಮ್ಯಗಿರಿಯೊಳು | ಪಿರಿಯ ಗುಹೆಯಲಿ ಪಂಚಶತುಮುನಿ |
ವರರು ಬೆರಸಿರೆಯೋಗದಲಿ ಅದನರಿಂದನೀ ಬಲಿಯು ||
ಪರಮ ಮುನಿಗಳ ಕೊಲಲೆ ಬಗೆದಾ | ಧರೆಯನರಸಿಂ ಪಡೆದು ಮಿಗೆ ಡಂ |
ಗುರವ ಹೂಯಿಸಿದ ಕೋಟಿ ಹೋಮವ ಮಾಡಿಸುವೆನೆಂದು || ೧೮ ||

ಪುರದೊಳಗೆ ತೆರಪಿಲ್ಲವೆಂದಾ | ಗಿರಿ ಗುಹೆಯುಪರಿಸರಕೆ ಚ |
ಪ್ಪರವನಿಕ್ಕಿಸಿ ಆ ಗುಹದ್ವಾರದಲಿ ಕಟ್ಟಿಗೆಯ ||
ಪಿರಿಯ ಬೆಟ್ಟವನೊಟ್ಟಿಸಿದನೆ | ಲ್ಲರ ನೆರಹಿ ಬೇಳ್ವವರ್ಗೆ ಬೇಡಿದ |
ಪರಿಯಲೀವುತ ಪಾಪಿಕೋಪದಿ ಹೋಮಿಸಿದನಂದು || ೧೯ ||

ನವಗೆ ಬಂದುಪಸರ್ಗಪೋಪ | ನ್ನೆವರ ಸನ್ಯಾಸದ ಸ್ಥಿತಿಯುಮೆಂ |
ದವನಿಧರ ಧೈರ್ಯರು ಮುನೀಶ್ವರರನಿಬರಿರಲಿತ್ತ ||
ಅವಧರಿಸಿ ದಕ್ಷಿಣ ಮಧುರೆಯೊಳು | ಶ್ರವಣ ನಕ್ಷತ್ರದ ಚಲನೆ ಗಂ |
ಡವಧಿ ಬೋಧದಿ ಪಿರಿಯ ಗುರುಗಳು | ಕಂಡರಾತೆರನ || ೨೦ ||

ಅರಿದವರ ಘೋರೋಪಸರ್ಗವ | ಪರಿಹರಿಸಿಮೆನೆ ವಿಷ್ಣುಮುನಿಗಳು |
ಪಿರಿದು ವಿಕ್ರಿಯೆಯೆಂಬ ಋದ್ಧಿ ಪ್ರಾಪ್ತರಪ್ಪುದರಿಂ ||
ಪುರಕೆ ಬಂದಾ ತಮ್ಮನಹ ಭೂ | ವರಗೆ ಪದ್ಮರಥಂಗೆ ನೀನೀ |
ಪರಿಯ ರಾಜ್ಯವ ಬಲಿಗೆಕೊಟ್ಟತಿಪಾಪಿಯಾದೆಯಲ || ೨೧ ||

ಮುನಿದು ಬಲಿಸೌಮ್ಯಾಚಲದೊಳಮ | ಳ್ಳಿನರಿ ಗೈನೋರ್ವರು ಮುನಿಗಳಿಗೆ |
ಘನತರದ ಘೋರೋಪಸರ್ಗವ ಮಾಡುತಿರ್ದಪನು ||
ಜನಪನಾದದಕಿದುಗುಣವೆ ಮೆ | ಚ್ಚಿನೊಳು ಮುನಿಸಿನೊಳಂ ವಿವೇಕವ |
ನಿನಿಸು ನೋಡದೆ ಗೈದ ಕಾರ್ಯದಿ ಕೇಡು ಬಹುದರಿದೆ || ೨೨ ||

ಎನಲು ನಡನಡನಡುಗಿ ಭೂಪತಿ | ಮುನಿಪನಡಿಯಲೆ ಬಿದ್ದು ಹೊರಳಿದ |
ನಿನಿತು ಮೇಲೆಣಿಕೆಯನು ನಾಬಲ್ಲೆನೆ ಜಡಾತ್ಮಕನು ||
ಎನಗೆ ಲೋಕಕೆ ಸಾಧು ಸಂಘಕೆ | ಎನಿತು ಬಂದೆರಡನು ಬಿಡಿಸುವೊಡೆ |
ಮುನಿಪ ನಾಳಿನ ಜಿನಪನೀದೆ ಸಮರ್ಥರಹುದೆಂದ || ೨೩ ||

ಆದೊಡವರುಪಸರ್ಗವನು ವಿ | ಚ್ಛೇದಿಪೆವು ನಾವೆನಲ್ಕೆ ಹ |
ಸಾದವೆಂದಾ ಪದ್ಮರಥನಾ ವಿಷ್ಣುಮುನಿವರರ ||
ಪಾದ ಪದ್ಮಕ್ಕೆರಗಿದ ನಾನಪ | ರಾಧಿಯಾದೆನಲಾಯೆನುತ್ತಿರೆ |
ವೋದನಾಮುನಿಯತ್ತ ವಾಮನರೂಪ ಕೈಕೊಂಡು || ೨೪ ||

ಹೊಸೆದು ಕಟ್ಟಿದಮುನ್ನ ಕಚ್ಚೆಯ | ಬೆಸುಗೆ ಶಿಖಿಗಳ ಗಂಟುಮಿಗೆ ಶೋ |
ಭಿಸುವ ಜನಿವಾರವು ಕರಂಡಕ ದಂಡು ಕುಂಡಲವು ||
ಬೀಸಿಗೊಡೆ ಬೆಟ್ಟಿನೊಳು ದರ್ಬೆಯು | ಯೆಸೆವ ಹೊಂಬಣ್ಣದ ಶರೀರದಿ |
ಮಿಸುಪ ವಾಮನ ರೂಪನಾಂತಾ ವಿಷ್ಣುಮುನಿಬಂದ || ೨೫ ||

ಬಂದು ಮಂತ್ರಾಕ್ಷತೆಯ ಕುಡೆ ಬಲಿ | ನಿಂದು ವಟುವಿನ ಚೆಲುವನೀಕ್ಷಿಸಿ |
ಬಂದು ಬಲಗೊಂಡೆರಗಿ ನಿಮಗೇಂ ಬೇಕು ಬೇಡಿಮನೆ ||
ಇಂದು ನೀ ಮಾದಾನಿಯಾದಪೆ | ಯೆಂದು ಕೇಳ್ದೈತಂದೆವೆಮ್ಮಡಿ |
ಯಂದ ಮೂರಡಿ ನೆಲನ ಕೊಡು ಜಪಗೈವುತಿಹೆವಲ್ಲಿ || ೨೬ ||

ಎನಲು ಧಾರಾಪೂರ್ವಕದಿ ಕೊಡು | ವನಿತರೊಳಗೆಲೆ ಬಲಿಯೆ ಈ ವಾ |
ಮನ ಕಪಟಿ ಮೂರಡಿ ನೆಲನನೆರೆದಾಗಳರಿದೆನಿದ ||
ಎನುತಿದಿರೆ ಬರೆ ತೊಲಗಿಸಲು ಕಡು | ಮೊನೆಬೆರಳ ದರ್ಭೆಯು ನಡಲು ಶುಕ್ರ |
ನನಯನ ವಡೆದತ್ತನಿಲೆ ನೆಲನಳದುಕೊಳ್ಳೆಂದ || ೨೭ ||

ಬೆಳೆದನಾ ವೈಕುವರ್ಣದಲರೆ | ಗಳಿಗೆಯೊಳು ಮುಗಿಲುಚ್ಚಳಿಸಿ ಮಿಂ |
ಗಳೆ ತನಗೆ ಕಣ್ಕಾಲ ಗೆಜ್ಜೆಗಳೆನಿಸಿ ಮೇಗೊಗೆದು ||
ಅಲೆದೊಡೊಂದಡಿ ಮೇರುತನಕ | ತ್ತಲೆದೊದೊಂದಡಿ ಮಾನುಷೋತ್ತರ |
ಕಳತೆಯಾದುದು ವಿಕ್ರಿಯೆಯನಾಂತಾತಿ ವಿಕ್ರಮನ || ೨೮ ||

ಬಳಿಕಲಿನ್ನೊಂದಡಿಗೆ ಭೂಮಿಯ | ತಳುವಡೀಯೆಂದೊಯ್ಯನಾಗಳು |
ಬಲಿಯೆದೆಯ ಮೇಲೊಂದಡಿಯನಿಟ್ಟಾಗುಹೆಯ ನಡುವೆ ||
ಚಲಿಸದಿರ್ದ ಮುನೀಶ್ವರರ್ಗೀ | ಖಳನು ಗೈದುಪಸರ್ಗವನು ಕ್ಷಣ |
ದೊಳಗೆ ಪರಿಹರಿಸಿದನು ಭೂನುತ ವಿಷ್ಣು ಮುನಿವರನು || ೨೯ ||

ಅಗ್ಗಳದ ಮುನಿಪರ್ಗೆ ಬಂದುಪ | ಸರ್ಗವನು ಹಿಂಗಿಸುವ ಬಗೆಯಿಂ |
ಭೊಗ್ಗನೀ ಬ್ರಹ್ಮಾಂಡವನು ವಡೆದುಚ್ಚಳಿಸೆ ಬೆಳೆದ ||
ಸಗ್ಗವುದುರುಗುವೆಂಬ ಭಯದಿಂ | ಸಗ್ಗಿಗರ ಬಲ್ಲಹ ಬೆದರಿ ನೀ |
ವೊಗ್ಗಿನಿಂ ಪೋಗೆಂದು ಗಂಧರ್ವಾಮರರ ಕಳುಹೆ || ೩೦ ||

ಬಂದು ವಿಷ್ಣು ಮುನೀಶನನು ಬಲ | ವಂದು ಪೂಜಿಸಿ ದೇವನಿಕರವು |
ಸಂದಣಿಸೆ ಸಾರಿಯೆಂಬ ಸುಘೋಷಯೆಂದೆಂಬ ||
ಸಂದ ವೀಣೆಯ ಕೊಂಡು ಬಾಜಿಸು | ವಂದು ಗಾಂಧಾರವದೆ ಸುಗ್ರಾ |
ಮಂದರಕೆ ತಮ್ಮನಿಯ ಪಾಡುತ ಬಾಜಿಸುವರೊಲಿದು || ೩೧ ||

ಅವರ ವೀಣಾವಾದನ ಸ್ತೋ | ತ್ರವನು ಮೆಚ್ಚಿದನಾ ಮುನಿಪನಾ |
ದಿವಿಜರೆಲ್ಲರು ಬೇಡಿಕೊಳೆವೈ ಕುರ್ವಣನುಳಿದು ||
ಅವರು ಬಿಜಯಂಗೈದರತ್ತಾ | ದಿವಿಜರಿತ್ತಲು ಪದ್ಮರಥಗೊ |
ಪ್ಪುವ ಸುಘೋಷೆಯೆನಿಪ್ಪ ವೀಣೆಯನರಸ ಕೇಳೆಂದ || ೩೨ ||

ಗುರುವಧೆಯನೆಣಿಸಿದ ಖಳರುಗಳು | ಶಿರವನರಿಯೆನೆ ಪದುಮರಥನಾ |
ಗುರುಗಳಾ ಉಪಸರ್ಗ ತೊಲಗಲು ಕೊಲೆಯ ಬಿಡಿಸಿದರು ||
ಪರಮದಯೆಯುಳ್ಳದುವೆ ಮಾರ್ಗವು | ಗುರುವೆ ಯೀ ಜಿನಧರ್ಮವೆನೆ ನೀವ್ |
ಕರುಣಿಸೆಂದರೆ ದಾಂತರಾ ಬಲಿ ಮುಖ್ಯರಿರದಂದು || ೩೩ ||

ಅದುಕಣಾ ನೀ ಪಿಡಿದ ವೀಣೆಯು | ಚದುರನೈ ನೀನೆನಲು ಭೂವರ |
ನದನು ಉಗುರ್ಗೊನೆಯಿಂದ ಕಳೆಯನು ಕೂಡೆ ನೇವರಿಸಿ |
ಚದುರ ನುಡಿಸಲು ಎಲೆಯ ಮೇಲಮ | ರದು ಸಭೆಯು ಬಿಡೆ ಕೆಳದಿಯರು ಮೇ |
ಲುದನಿಡಲು ಮೆರೆದರು ಸುದತಿ ತಲೆದೂಗಿದಳು ಮೆಚ್ಚಿದಳು || ೩೪ ||

ಇದು ಮನೋಜನ ಕಬ್ಬುವಿಲ್ಲುಲಿ | ಇದು ರತಿಯನೂಪುರದ ನುಣ್ಚರ |
ಇದುವೆ ನುಡಿವೆಣ್ಣಂಚೆಯಿಂಚರವಂಗಜನಮುಂದೆ ||
ಮುದದಿಪಾಡುವ ಮದವದಳಿಗೀ | ತರ ಮಧು ಸ್ವನವೆನಿಸಿ ಕಿವಿಯೊ |
ಕ್ಕದು ಕುಮಾರನ ಕೈಯವೀಣಾನಾದವಾ ಸಭೆಯ || ೩೫ ||

ಮೆಚ್ಚಿ ವಸುದೇವನ ಕೊರಳ್ಗೆ ತೊ | ಡರ್ಚಿದಳು ನವರತ್ನ ಮಾಲೆಯ |
ನಿಚ್ಚಯಿಸೆ ಗಂಧರ್ವದತ್ತೆ ವಿವಾಹವಿಧಿಯಿಂದ |
ನಿಚ್ಚ ರತಿರಾಗದಲಿ ಮಿಗೆ ಮೈ | ಬೆಚ್ಚಿ ಮನಸಿಜ ಕೇಳಿಯೊಳು ಮನ |
ಮೆಚ್ಚು ನೆಚ್ಚಿನ ನಲ್ಕೆಯಲಿ ಮನದನ್ನಳೀಸಿದಳು || ೩೬ ||

ತವದ ಕಾಮೋದ್ರೇಕದಲಿ ಕೂ | ಡುವ ಸಮಪ್ರಣಯಿಗಳ ನೀಡುಗ |
ಣ್ಣೆವೆಗಳರೆ ಮುಗಿವುತಿರೆ ಪುಳಕವುರೆ ವಾಮ್ಮನುಚ್ಚಳಿಸೆ ||
ಸವಿವ ಬಾಯುಗಿಯಡಗೆ ಮೈಮಿಗೆ | ಬೆವರೆ ಸೂಳೋಸರಿಸೆ ಕೆಡಪಿದ |
ಜವಳಿ ಜಂತ್ರದ ಬೊಂಬೆಯೆನಲೀರ್ವರು ಮರೆದರೊಡಲ || ೩೭ ||

(ಈ ೩೭ನೆಯ ಪದ್ಯವನ್ನು ಇನ್ನೊಮ್ಮೆ ಬರೆದು || ೩೮ || ಸಂಖ್ಯೆ ಕೊಟ್ಟಿದ್ದಾರೆ)

ಇಂತು ಕಾದಲ್ಕೆಯಲಿ ಪಲದಿನ | ಕಂತುಕೇಳಿಯಲಗಲದಿರುತ ವ |
ಸಂತ ಕಾಲದೊಳವರು ವನಜಲ ಕೇಳಿಗಳನಾಡಿ |
ಸಂತಸದಿ ಕೆಳದಿಯರು ವೆರಸಿ ವ | ಸಂತ ಮೋಹನವನದೊಳೆಸೆವ ಲ |
ತಾಂತ ಮಂಟಪದಲ್ಲಿ ಬಿನದದಿನಿರ್ದರಿರಲೊಡನೆ || ೩೯ ||

ತಾಳ ದಂಡಿಗೆ ವಾಸ ಮದ್ದಳೆ | ಕಾಳೆ ಹಾಡುವ ಸೆಳೆವ ಜೋಕೆಯ |
ಮೇಳವವರಿಂಚರವು ನಲ್ಲರ ಕಿವಿಗೆ ಸವಿಗೊಡಲು ||
ಕೇಳುತಾ ದಂಪತಿಗಳೊಂದೆಸೆ | ಮೇಳದಲಿದೆತ್ತಣದೆನುತ ಕ |
ಣ್ಣಾರೆ ನೋಡುತ್ತಿರಲುದಂತ್ವಂದಸುಕೆಯನೆಳಲೊಳಗೆ || ೪೦ ||

ಸವಿವಡೆದ ಶೃಂಗಾರ ರಸವ | ರ್ಣವು ಮನೋಜನ ದೇಹಕಾಂತಿಯೊ |
ಳವಗಹಿಸಿ ಮಿಗೆ ಕಾಮಹೋಮದ ಧೂಮಲೇಖೆಯೊಳು ||
ಅವತರಿಸಿ ಮರದುಂಬಿಗಳ ಬ | ಣ್ಣವ ಸೆಳೆದು ಕೊಂಡೊಂದು ಬೋಹನ |
ಯುವತಿಯಾಗಿಯೆ ನರ್ತಿಪುದೊಯೆನೆ ಕಣ್ಗೆ ತೋ [ರಿದುದು] || ೪೧ ||

ಹೊಲೆಯರೀ ಮೇಳದ ನಡುವೆಮಿಗೆ | ನಲಿವ ಚೆಲು ನಚ್ಚಣಿಯನಕಟೀ |
ಕುಲದೊಳಗೆ ಪುಟ್ಟಿಸಿದನಜನದನೆ ತಪ್ಪದಲ ||
ಲಲನೆಯರೊಳೀ ಚೆಲುವು ವಿದ್ಯಾ | ಕಲೆಯಿದಧಿಕವೆನುತ್ತ ರಸ ಕಂ |
ಗೊಳುತಿರಲು ಭೂವರನ ನೋಡುತ ಮೂರ್ಛಿಸಿದಳಾಕೆ || ೪೨ ||

ಅವಳನವರುಚಿತೋಪಚಾರದ | ಲೆವೆದೆರಸುತಿರಲರಸವೇಕಾ |
ಯ್ತವಳಿಗಿಂತೆನಲವರೊಳೋರ್ವನು ಮುದುಪನಿಂತೆಂದ ||
ಅವನಿಪತಿ ಚಿತ್ತೈಸು ಯಿತ್ತೊ | ಪ್ಪುವ ಭರತ ವಿಜಯಾರ್ಧ ದಕ್ಷಿಣ |
ದವನಿಯೊಳಗಿಹ ವಿಜಯ ಪುರಮದನಾಳ್ವ ಖಚರೇಂದ್ರ || ೪೩ ||

ಪೆಸರಲೊಪ್ಪುವ ಸಿಂಹನಾದನು | ವಿಷಮ ವಿಕ್ರಮನಾತ್ಮನಾತ್ಮಜೆ |
ಕುಸುಮಶರನಧಿದೇವಿ ನೀಲಾಂಜನೆಯೆನಿಪಳೀಕೆ ||
ರಸಿಕೆಯಾಗಿರೆ ಬೇಡಿಯಟ್ಟುವ | ರೊಸೆದಖಿಳ ವಿದ್ಯಾಧರರ ಚೆ |
ಲ್ವೆಸೆವ ಕುವರರು ಬಳಿಕಿವಳ ತಾಯಂತೆಯೊಂದುದಿನ || ೪೪ ||

ಈ ಕುಮಾರಿಗೆ ಗಂಡನಾರು ವಿ | ವೇಕಿ ಪೇಳೆಂದೋರ್ವ ಬೋಧಾ |
ಲೋಕನನು ಬೆಸಗೊಂಡಡೀ ಬನದೊಳು ಪೊಲತಿಯಾಗಿ ||
ಆಕೆ ನರ್ತಿಸುತಾವನನು ತಾಂ | ಕೇಕರದಿ ನೋಡುತ ವಿಮೂರ್ಛಾ |
ವ್ಯಾಕುಲತೆಯಹಳವನೆ ಗಂಡನುಯೆಂದನಾ ಮುನಿಪ || ೪೫ ||

ಎಂದೊಡಾದೇಶವೆ ನೃಪಾಲಕ | ತಂದು ತೋರಿತು ನಿನ್ನನಾವದು |
ಗೆಂದವಳನೆಚ್ಚರಿಸಿ ದುಷ್ಕುಲರೂಪನೋಸರಿಸಿ ||
ಸಂದ ನಿಜರೂಪನು ಕುಮಾರಕ | ಗಂದು ತೋರುತ ಪಾರಿದಳು ನಭ |
ಕೊಂದು ಮಿಂಚಿನ ಬೊಂಬೆಯೆನಲವಳತ್ತಲಿತ್ತವರು || ೪೬ ||

ಹೊಳಲ ಪೊಕ್ಕರು ಚಾರುದತ್ತಗೆ | ತಿಳುಪಿದರು ಈ ತೆರನನೆಲ್ಲವ |
ನಳಿಯನನು ಕಳುಹೆಂದರಾ ಖಚರಪ್ರಧಾನಿಗಳು ||
ಒಲಿದರಸಿ ಗಂಧರ್ವದತ್ತೆಯು | ಕಳುಹೆ ಕಳುಹಿಸಿಕೊಂಡು ನೃಪನಾ |
ಗಲೆ ವಿಮಾನವನೇರಿ ವಿಜಯಪುರಕ್ಕೆ ಪೋತಂದ || ೪೭ ||

ವರ ವಿಭವದಿಂ ಸಿಹನಾದನು | ಕರೆದುಕೊಳೆ ಪುರವೈದಿ ನಿಜಮಂ |
ದಿರದೊಳಾ ಸುಮುಹೂರ್ತದಲಿ ವಸುದೇವ ಭೂಪತಿಗೆ ||
ತರುಣಿ ನೀಲಾಂಜನೆಯ ವಿಭವದಿ | ಪರಿಣಯನವನು ಮಾಡೆ ಸುಖಸಾ |
ಗರದೊಳಾ ದಂಪತಿಗಳೋಲಾಡಿದರು ರಾಗದಲಿ || ೪೮ ||

ಪಲದಿವಸ ನೀಲಾಂಜನೆಯೊಳಿಂ | ತೊಲಿದಿರುತೆ ಬಳಿಕವರ ಕೈಯಲಿ |
ಕಳುಹಿಸಿಯೆ ಕೊಂಡತ್ತ ಭುಚರ ರಾಜ್ಯಕೇಳ್ತರುತ ||
ಬಳೆದ ವಿದ್ಯಾ ಬಲದಿ ನಭದಿಂ | ದಿಳಿದಿಳಿದು ನಾನಾನಗರಿಗಳೊ |
ಳಿಳೆಯೆರೆಯರುತ್ತಮ ಕುಮಾರಿಯೊಳು ಮದುವೆನಿಲುತ || ೪೯ ||

ಅರಸನಿಂತಂಬರ ಚರರ ಭೂ | ಚರರ ಸುತೆಯೆರ ಮದುವೆನಿಂದನು |
ಪರಿಗಣಿಸಿ ಅರುನೂರ ತೊಂಬತ್ತೆಣ್ಬರನುಕುಕ್ರಮದಿ ||
ಅರಸಿಯರನವರವರ ತಂದೆಯ | ರರಮನೆಗಳೊಳಗಿರಿಸಿ ತಾನೈ |
ತರುತ ಕಂಡನು ಚಿತ್ರಶೋಭೆಯರಿಷ್ಟ ನಗರಿಯನು || ೫೦ ||

ಜನಪನಲ್ಲಿಗೆ ಪರ್ಣಲಘುವೆಂ | ದೆನಿಪ ವಿದ್ಯೆಯೆಲವತರಿಸಿ ವೋ |
ರ್ವನು ಕಂಡೀ ಪುರದೊಳೇನಿದು ಗುಡಿಪತಾಕೆಗಳಿಂ ||
ಕನಕ ಮಣಿಗಣ ರುಚಿಗಳಿಂ ನಭ | ವನು ಪಳಂಚುವ ಸಾಲೆವೆಸರೇ |
ನೆನೆ ಬಳಿಕ್ಕವನೆಂದನೀ ಪುರಪತಿ ಹಿರಣ್ಯಾಕ್ಷಾ || ೫೧ ||

ಸತಿ ಸುದತ್ತೆ ಅವರ್ಗೆ ಸುಕುಮಾ | ರಿತಿಯು ರೋಹಿಣಿಯೆಂಬಳಾ ಭೂ |
ನುತೆಯ ನೂತನ ರತಿಯ ಶೃಂಗಾರಸ್ವಯಂವರವು ||
ವಿತತ ದೇಶಾಧೀಶ ವಿಶ್ರುತ | ನುತ ಸಮುದ್ರ ವಿಜಯ ನೃಪನು ರಾ |
ಜಿತ ಜರಾಸಂಧನ ಕುಮಾರಕರಿಹರು ಕೇಳೆಂದ || ೫೨ ||

ಕೇಳುತವೆ ವಸುದೇವ ವಸುಧಾ | ಪಾಲನೈತರಲಾ ಸ್ವಯಂವರ |
ಶಾಲೆಯಲಿ ಕುಳ್ಳಿರ್ದ ವಿದಿತ ಸಮುದ್ರ ವಿಜಯಾದಿ ||
ಭೂಲಲನೆಯೋಪರನು ನೋಡುತ | ಲೀಲೆಯಿಂ ಪೊಂದೇರ ಮೇಲಾ |
ಲೋಲಲೋಚನೆ ಬಂದಳಂಗಜಲಕ್ಷ್ಮಿಯಂದದಲಿ || ೫೩ ||

ಪೊಳೆವಲಾವಣ್ಯಾಂಬು ನಿಧಿಯಲಿ | ಮುಳುಗೆ ಕಣ್ಮೀನ್ಗಳು ಕಟಾಕ್ಷದ |
ಬಳಬಳಿಯಲಂಗಜನ ಹೂಗಣೆಗಳನು ಹರಹುತಲಿ ||
ತಳೆದ ನಾನಾರತ್ನ ಭೂಷಣ | ಗಳಬೆಳಗ ಹಸರಿಸುತ ಸತಿ ಪರಿ |
ಮಳದ ಪುತ್ಥಳಿಯೆನಿಸಿ ಬಂದಳದೊಂದು ಲೀಲೆಯಲಿ || ೫೪ ||

ಅವಳ ಗಾಡಿಯನೀಕ್ಷಿಸುತಲ | ತ್ತವನಿಪತಿಗಳ ಸಭೆಯ ನೋಡುತ |
ವಿವಿಧ ವಾದಕರೋಳದೋರ್ವನ ಹೆಗಲ ಹರೆವೊಂದ ||
ತವಕಿಸದೆ ತೆಗಕೊಂಡು ತನ್ನೊ | ಪ್ಪುವ ಹೆಗಲಿನೊಳುಕೋದುತಾಂ ಪಾ |
ಣವ…………………………. || ೫೫ ||

ಪಲತೆರದ ತಾಳಗಳ ಜತಿಗಳ | ನಳವಡಿಸಿ ತುಡುಕಗಳ ಕತ್ತರ |
ಗಳನು ಮೂದೆರನಾದ ಲಯದಲಿ ಕುಡುಪಡರೆನುಡಿಸೆ ||
ಲಲನೆಯೊಳು ನಿಂದರಸುಗಳ ಕಂ | ಗಳನೆಳೆದು ಕಿವಿತಾವೆದ… |
ತ್ತೆಳಸಿ ನೋಡಿಸಿದವು ಚೆಲುವ ಪರೆಕಾರನನು ನಲಿದು || ೫೬ ||

ಲಲನೆಯಾತನ ವಾದ್ಯಕಲೆಯನು | ಚೆಲುವಿಕೆಯನತಿ ಭದ್ರಲಕ್ಷಣ |
ಗಳನು ಅಂಗನ್ಯಾಸವನು ಎವೆಯಿಕ್ಕಿದೀಕ್ಷಿಸುತ ||
ಮೊಳೆಯ ಹೊಂಜೆಳೆ ಮೈಯೊಳಾಗಲೆ | ಪುಳಕ ಸಸಿ ತನಿಮೋಹರಸ ಮನ |
ದೊಳಗೆ ಕಾಳ್ಪುರವಾಗೆ ಸಾರ್ದಳು ರೋಹಿಣೀ ದೇವಿ || ೫೭ ||

ಗಾಡಿಕಾತಿ ಸುರತ್ನಮಾಲೆಯ | ಸೂಡಿದಳು ವಸುದೇವಗುಱೆ ತಡ |
ಮಾಡದವರೀರ್ವರನು ರಥವೇರಿಸಿ ಸುಭಟಕೋಟಿ ||
ಕೂಡಿಕೊಂಡರಮನೆಗೆ ಹೋದರು | ನಾಡೆ ಮಂಗಲತೂರ್ಯಮೊಳಗಲು |
ಕೂಡೆ ನಿಜಮಂದಿರವನೈದೆ ಹಿರಣ್ಯ ಲೋಚನನು || ೫೮ ||

ಅಳಿಯನಾಕಾರವನು ನೃಪ ಕಂ | ಗೊಳುತಲುಚಿತಾಸನದೊಳಿರ್ದು ಸು |
ಕುಲಜನಲ್ಲದೆ ಚುಚ್ಚನಲ್ಲೆಂದಿಷ್ಟ ಮಂತ್ರಿಗಳ ||
ಕೆಳೆಯರಾಳೋಚನೆ ವಡೆದು ತ | ನ್ನೊಳೆ ಸರಾಗದಲಿರ್ದನತ್ತ ನೃ |
ಪಾಲರು ಚಕ್ರಿಸುತ [ರುಮಿಂ]ತೆಂದ [ರವ] ರೊಂದಾಗಿ || ೫೯ ||

ನರಿಯ[ಗೀ]ತಕೆ ಬಳ್ಳು ಮೆಚ್ಚಿದ | ತೆರದಿ ಬಾಲಕಿ ಮೇಲನರಿಯದೆ |
ಹರೆಯ ಗರಬರಗುಟ್ಟಿಸಿದ ಹಗೆರಾರನನು ಕಂಡು ||
ಕೊರಳಿಗಾಗಲೆ ಮಾಲೆಸೂಡಲು | ದುರುಳನವರೈಯನು ಕುಲಕ್ರಮ |
ವರಿಯದಾಕೆಯ ಕೊಡುವನೇಯೆಂದುದು ನೃಪಸ್ತೋಮ || ೬೦ ||

ಕಳುಹಿದರು ದೂತನನು ಪೊಕ್ಕನು | ಪೊಳಲನಮ್ಮ………. |
…ನರಸಂಗರುಪೆ ಕರೆಯೆನೆ ಪೋಗಿ ಕೈಮುಗಿದು ||
ಇಳೆಯೆರೆಯನಪರಾಜಿತಾದ್ಯರು | ಬಲವದವನೀಶ್ವರರು ನನ್ನನು |
ಕಳುಹೆ ಬಂದೆನು ಚಿತ್ತೈಸೆ ಕೇಳೆನ್ನ ಬಿನ್ನಹವ || ೬೧ ||

ಧಾರವಟ್ಟಲ ತೆಱದಿ ನಿನ್ನ ಕು | ಮಾರಿ ಕಸವನೆ ಪಿಡಿಯೆ ನೀನವಿ |
ಚಾರಿಯಾದೈ ರಾಜಪುತ್ರ ಸಮಾಜವನು ಬಿಸುಟು ||
ಆರುವರಿಯದ ಹಱೆಯ ಹೊಲೆಯಕೆ | ಧಾರುಣೀಶ್ವರ ತನುಜೆಯನು ಕೈ |
ನೀರೆಱವೆನೆಂಬೀ ದುರಾಗ್ರಹ ಬೇಡ ಕೇಳೆಂದ || ೬೨ ||

ಕೊಡದಿರೀಯಜ್ಞಾತ ಕುಲಜಗೆ | ಕೊಡುವುದೆಮ್ಮರಸುಗಳೊಳೋರ್ವಗೆ |
ಕೊಡಲರಿಯದೊಡೆ ಸಂಗರಕ್ಕನುವಾಗು ಬೇಗದಲಿ ||
ಬಿಡುವರಲ್ಲ ಕುಮಾರಿಯನು ನಾ | ರೊಡೆಯರೆಂಬಾ ದೂತನಾ ಬಿಱು |
ನುಡಿಗೆ ಕದಡದೆ ನಸುನಗುತ ಭೂಪಾಲ ಕೇಳೆಂದ || ೬೩ ||

ಚರನೆ ಕೇಳ್ದೆ ನೀಂ ಸ್ವಯಂವರ | ಪರಿಣಯನವಿದು ಪೂರ್ವದಿಂ ಭೂ |
ವರೆ ಪರಂಪರೆಯಿಂದ ಬಂದುದದಿಂದು ಪೊಸತಲ್ಲ ||
ಅರಿಯರೇ ನಿಮ್ಮವರು ಕನ್ನಿಕೆ | ಯರು ಪುರಾತನ ಪುಣ್ಯ ಫಲವದು |
ವರನ ತೋರಿಸೆ ಮದುವೆಮಾಡುವುದರಸುಗುಣವೆಂದ || ೬೪ ||

ಮಾವನೊಳು ನುಡಿಗೇಳುತವೆ ವಸು | ದೇವನಾ ದೂತಂಗೆ ಪೇಳ್ದನು |
ನಾವು ಕೇಳೈ ಹಱೆಯ ಹೊಲೆಯರೊಳೋರ್ವ ಬಡಬದಿಕ ||
ಭೂವರರ ಮಕ್ಕಳು ಸಮಸ್ತರು | ತಾವು ಬಲ್ಲಿದರದಕೆ ನೀನೇಂ ||
ದಾವಿಧದಿ ಕಾದುವೊಡೆ ಬರಹೇಳೆಂದು ಕಳುಹಿದನು || ೬೫ ||

ಕಳುಹೆ ದೂತನು ಹೋಗಿ ಹೇಳಲು | ಮುಳಿದು ಬಂದಾ ಸಂಗರದೊಳತಿ |
ಬಲರಖಿಲ ಧಾತ್ರೀಶರನಿಬರು ಬೇಗ ತಂತಮ್ಮ ||
ಬಲವೆರಸಿ ಪೌಜಾಗಿ ಸಮರಾಂ | ಗಳದೊಳಗೆ ಪೊಂಡೋಡಿ ನಿಲೆ ಕೈ |
ಗಳಿಯೆ ಮೊಳಗಿತು ಸೂಳಡರಿ ಸನ್ನಾಹ ಪುದುಭೇರಿ || ೬೬ ||

ಅಸನಿ ಮಸಗಿದ ತೆಱದಿನಾಯ್ತಾ | ಗಸದೊಳಗೆ ದೆಸೆಯಾನೆಗಳು ಭೃಂ |
ಹಿಸಿದ ತೆರನಾಯ್ತೆಂಟು ದೆಸೆಯೊಳು ಗಿರಿಗುಹೆಗಳಲ್ಲಿ ||
ಬಸಿವ ನಿರ್ಝರ ರವವೆನಿಸಿದುದು | ವಿಸಧಿಯಲಿ ಪೆರ್ದೆರೆಯೆನಿಸಿ ಘೂ |
ರ್ಣಿಸಿತು ಬನದಲಿ ಸಿಂಹನಾದವದೆನಿಸಿತಾ ಧ್ವನಿಯು || ೬೭ ||

ಅನಿತರೊಳು ಭೇರೀ ಗಂಭೀರ | ಸ್ವನವಕೇಳುತ ಬಲಸಹಿತಮಾ |
ವನುವೆರಸಿ ನಿಜಪುರವ ಪೊರವಟ್ಟೋಡಿ ವಸುದೇವ ||
ಇನಿತು ಸಮರಕೆ ನೀವು ಬಿಲುಗೊಂ | ಬನಿತು ಬೇಹುದೆ ಮಾವ ನೀವೆ |
ನ್ನನು ವರವ ನೋಡೆನುತ ರಥವೇರುತವೆ ಬಿಲುಗೊಂಡ || ೬೮ ||

ಪಿಡಿದು ಚಾಪವನೇರಿಸಿಯೆ ಜೇ | ವಡೆಯೆ ಜಗದಡಕಿಲು ಜರಿದುಗಿರಿ |
ಕೆಡೆದುರುಳಿದವು ಗಲಗಲನೆ ತಾರಕಿಗಳುದುರಿದವು ||
ಕಡಲು ತಾಯ್ಮಳಲುಬ್ಬರಿಸಿ ಧರೆ | ನಡುಗಿದುದು ಅನಿಮಿಷರ ಕಣ್ಣೆವೆ |
ಮಡಿದುದೆನೆ ತದ್ಬಳರವ ತೀವಿದುದು ಲೋಕವನು || ೬೯ ||

ತಿರುವಿಗಂಬನು ಹೂಡಿವಹಿಲದಿ | ಬರೆತೆಗೆದು ಬಿಡೆ ಕವಿವ ಸೇನಾ |
ಶರಧಿಯುನ್ನತ ಜೀವನವ ವಡವಾಗ್ನಿ ಕೋಟೆಯನೆ ||
ಸರಳು ಪೀರ್ದುವು ಚೆಲ್ಲಿದವು ಕರಿ | ತುರುಗ ನರ ರಪ್ಪೆಗಳು ಬಿಸುನೆ |
ತ್ತರ ಕಡಲೊಳೊಡ ಹಾಯಿಸಿ ವಸುದೇವನ ರಥವು ಪರಿಯೆ || ೭೦ ||

ಶರಸಹಸ್ರವ ಕಿವಿಯುಗುಳುವವೊ | ಬೆರಳೆ ಕಾಱಿತೊ ಕೋಟಿ ಕಣೆಗಳ |
ತಿರುವೆ ಬಾಣದ ಬಣಬೆಗಱದುದೊ ಚಕ್ರವೋ ಬಿಲ್ಲೊ ||
ಅರರೆ ಭಲ ಬಿಲ್ಲಾಳೆ ಮಝ ಭಾ | ಪುರೆಯೆನುತ ಈರ್ವಲದ ರಾಜಕು |
ವರರು ಬಣ್ಣಿಸಿ ಬಿಲ್ಲಬಿನ್ನಣದೋರಿದನು ನೃಪತಿ || ೭೧ ||

ಈತನಂದಿನ ಕಾಲರುದ್ರನೊ | ಈತನೇಂ ಕಲಿ ವೀರಭದ್ರನೊ |
ಈತನೇಂ ವಿಳಯದ ಜವನೊ ಪ್ರಳಯುಗ್ರ ಭೈರವನೊ ||
ಈತನೀ ಪರೆಕಾರನಲ್ಲಿವ | ಗಾಂತು ಬದುಕುವುದರಿದೆನುತ ರಣ |
ಭೀತಿಯಲಿ ಕೆಟ್ಟೋಡಿದುದು ನೆರೆದರಸುಗಳ ಸುತರು || ೭೨ ||

ಅತಿರಥರು ಮಹಾರಥರು ಸಮ | ರಥರತುಗಳಗಜಹಯ ಸೈನಿಕವು ತಾ |
ಗುತಲೆ ಹರಿಕುಲಗಗನ ಸೂರ್ಯನ ಕೋಲ ಖುರಪುಟಕೆ ||
ಹತವಡೆಯೆ ವರಚಕ್ರವರ್ತಿಯ | ಸುತನುವಪರಾಜಿತನು ಗಜಹಯ |
ತತಿ ಮಹಾಸೈನಿಕ ಸಮೇತನು ಕಂಡು ಮಸಗಿದನು || ೭೩ ||

ಅನಿತರೊಳಗೆ ಸಮುದ್ರವಿಜಯಾ | ವನಿಪನಾ ಪ್ರಳಯಾಂತಕನೆ ಕೋ |
ಣನನದಟಿನಿಂದೇರಿದಂತಾರೋಹಿಸಿದ ಗಜವ ||
ಜನಿತ ವೀರಾವೇಷದಲಿ ನೃಪ | ತನುಜರನು ತೇಲಿಸಿದ ವಸುದೇ |
ವನ ರಥಕ್ಕಿದಿರಾಗಿ ಬಂದುದು ಗಂಧ ಸಿಂಧುರವು || ೭೪ ||

ಥಳಥಳಿಪ ಬಹುರತ್ನಮಯವಹ | ಗುಳವದೇಂ ಕಾಂಚನದ ದಂಡದ |
ತತಿಯೊಳೈದುಂ ರತ್ನಮಯ ಗರುಡಧ್ವಜದಿನೆಸೆವ ||
ತೊಳಪ ಪಲ್ಲವ ಸತ್ತಿಗೆಯ ತಣು | ನೆಳಲೊಳೀ ಗಜಕಂದರದೊಳಿ |
ದ್ದಳವಿಗೊಡುವವನಾರು ಬಲ್ಲಡೆ ಸೂತ ಹೇಳೆಂದ || ೭೫ ||

ಪರಬಲಾಂಬುಧಿ ವಡನಾಂಬು | ವರಿ ನೃಪತಿಗಿರಿವಜ್ರ ಸಾರೀ |
ಪುರವರೇಶನುನುತ ಸಮುದ್ರ ವಿಜಯ ಮಹಾರಾಯ ||
ಅರಸಕೇಳೆನೆ ಹರಿಕುಲದೊಳೊಗೆ | ದರಸುಗಳಿಗಲ್ಲದೆ ವಿಷಮ ಸಂ |
ಗರ ಪಟುತೆ ಈ ವಿಜಯಶೌರ್ಯವದಾರಿಗಹುದೆಂದ || ೭೬ ||

ಎನುತ ಚಾಪವನಿರಿಸೆ ವಸುದೇ | ವನು ಕೆಲಕೆ ಸಾರಥಿಯ ಕಂಡೀ |
ಅನುವರದೊಳಿದಿರಾಂತು ಬಿಲ್ಲನು ಬಿಸುಟುವಧಟಿದನು ||
ಎನೆ ಕುಮಾರಕನೆಂದ ಪಿರಿಯ | ಣ್ಣನು ಕಣಾ ನಾನೆಂತು ಪಿಡಿವೆನು |
ಧನುವನೆಂದನು ಒಳಗೊಳಗೆ ಕರಗಿದನು ಮೋಹದಲಿ || ೭೭ ||

ಎಂದೊಡಾ ಸಾರಥಿಯದಲ್ಲದೊ | ಡಿಂದು ಕೊರುವಿದ ವಿವಿಧ ವಿಷಯದ |
ಸಂದ ರಾಜಕುಮಾರಕರನೆದೆಗೆಡಿಪ ವಿಕ್ರಮವು ||
ಸೌಂದರೀ ಜನವಶ್ಯ ಮೂರ್ತಿಯ | ಬಂಧುರತೆ ನಿನಗಲ್ತದುಳಿದರೊ |
ಳೊಂದಿಹುದೆ ಹರಿವಂಶ ಮಂಡನೆ ನೀನೆಯಹುದೆಂದ || ೭೮ ||

ಅನಿತರೊಳು ಲೇಖಿಸಿದ ಪತ್ರಿಕೆ | ಯನು ಕಣೆಯೊಳೊಂದಿಸೆಯೆ ಬಾಣಾ |
ಸನದಿ ಬರೆತೆಗದೆಚ್ಚನಾ ವಸುದೇವಾ ಭೂಪಾಲ ||
ಮನಸಿಜಾರಿಯ ಶೂಲವೇಂ ಭೋ | ರೆನುತ ಬಂದುದೊ………….. |
…ನಸಿ ಬಂದನು ಕಣಾ ತಾ ನೃಪನೋಲೆ ಧರಿಸಿದನು || ೭೯ ||

ಓದಿಸಿದನೋಲೆಯನು ತನ್ನೆದೆ | ನಾದುದಾದವಿ ಮೋಹರಸದಲಿ |
ಕೋದ ಹೊರಜಯ ಕಾಲನುಗಿದಾಗಜದ ಕಂದರದಿ ||
ಮೇದಿನಿಗೆ ಅವತರಿಸಿ ಅಣ್ಣನ | ಪಾದನೊಂದಪುದೆಂದು ರಥವಿಳಿ |
ದಾದರದಿ ವಸುದೇವ ಪರಿತಂದೆರಗಿದನು ಪದಕೆ || ೮೦ ||

ಬಿಗಿಬಿಗಿದು ತಕ್ಕೈಸಿದನುರೇವಾಂ | ಮಿಗೆ ಪುಳಕವಾಂಕುರಿಸೆ ನನ್ನಯ |
ಬಗೆಯಲಿನ್ನೆಗೆಮಿರ್ದ ನೋವಿನ ಕೆಸಱುತೊಳೆದುದಲ ||
ಒಗೆದ ಹರುಷಾಮೃತ ರಸದಿ ನೀ | ನಗಲಿಯೀಪರಿಯಿರಬಹುದೆ ಯೆಂ |
ದಗಣಿತ ಪ್ರೇಮದಲಿ ಸಂತಸದಂತವೈದಿದರು || ೮೧ ||

ಅಱಿದು ಬಂದಣ್ಣಂದಿರಿಗೆ ಬಳಿ | ಕೆಱಗಿದನು ವಸುದೇವನೀಹದ |
ನಱಿದು ಹಿರಣ್ಯಲೋಚನನವರೊಡನೆ ಕೂಡಿ ||
ನೆಱೆ ಹರುಷರಸವೇ ಱಿದನುಯಿದ | ನಱಿದು ಚಕ್ರಿ ಕುಮಾರಕರು ಮಿ |
ಕ್ಕರಸುಗಳುಮವರೊಡನೆ ಕೂಡಿದರರಸಕೇಳೆಂದ || ೮೨ ||

ಪುರದೊಳಗೆ ಗುಡಿತೋರಣಗಳು | ಪ್ಪರಿಸಿದವು ಮದುಮಂಗಳಾನಕ |
ವಿರುತಿದೆಸೆಯನು ಚುಂಬಿಸಿತು ಬಳಿಕಾಹಿರಣ್ಯಾಕ್ಷಾ ||
ವರಸಮುದ್ರ ವಿಜಯ ನೃಪಾಲನು | ವೆರಸಿ ವಸುದೇವನು ಸಹಿತ [ಲಾ] |
ಪುರವ ಪೊಕ್ಕರಮನೆಯನೆಯಿದಿದರಂದು ಹರುಷದಲಿ || ೮೩ ||

ರೋಹಿಣಿಗೆ ವಸುದೇವ ವಿಭುಗು | ತ್ಸಾಹದಲಿ ಮದುವೆಯನು ಮಾಡಿಸಿ |
ಬಾಹುಬಲವಲ್ಲಿರಿಸಿಯವರ ಸಮುದ್ರ ವಿಜಯ ನೃಪ ||
ಸ್ನೇಹದಲ್ಲಿ ಹಿರಣ್ಯ ನಯನನು | ಊಹಿಸುವಡರಿದೆನಲು ವಸ್ತು ಸ |
ಮೂಹವನು ನೆರೆದರಸು ಮಕ್ಕಳಿಗಿತ್ತರುಡುಗೊಱೆಯ || ೮೪ ||

ಬಳಿಕಲೆಮ್ಮಯ ಪುರಕೆ ಬಪ್ಪುದು | ತಳುವದೆಂದಾ ತಮ್ಮನನು ಆ |
ಪೊಳಲೊಳಿರಿಸಿ ಸಮಸ್ತ ರಾಜಕುಮಾರರನು ಕಳುಹಿ ||
ಬಳವದುತ್ಸಾಹದಲಿ ತನ್ನಯ | ಪೊಳಲನೈದಿ ಸಮುದ್ರ ವಿಜಯನು |
ಇಳೆಯೆಱೆಯನಿರುತಿರ್ದನೆಲೆ ಭೂಪಾಲ ಕೇಳೆಂದ || ೮೫ ||

ಇತ್ತಲಾ ವಸುದೇವ ನೃಪನಾ | ವೃತ್ತ ಕುಚೆಯೊಳು ಮದನ ಕೇಳಿಯೊ |
ಳೊತ್ತರಿಪ ಸುಖವುಣುತಲಿರುತಿರಲೊಂದು ರಾತ್ರಿಯಲಿ ||
ಚಿತ್ತ ವಿಭ್ರಮವೀವ ಸೌಧದ | ತುತ್ತತುದಿ ನೆಲೆಯಲ್ಲಿ ತನ್ನಯ |
ಚಿತ್ತ ವಲ್ಲಭೆವೆರಸು ಸುಖನಿದ್ರೆಯಲಿ ಒರಗಿರಲು || ೮೬ ||

ಜನಪನಿವನಾದೇಶ ಪುರುಷನು | ಮನಸಿಜೋಪಮನೆಂದಱಿದು ಭೋಂ |
ಕನೆ ವಿಯಚ್ಚರಿಯೆತ್ತಿಕೊಂಡಾಗಸ ಪಥವನಡರಿ ||
ಅನುಪಮತನಂಧಕಪುರದ ನಂ | ದನದೊಳಿರಿಸಿ ಖಗಂಗಱಿಪಿ ಲೇ |
ಸೆನುತ ಬಂದಾ ಪವನವೇಗ ವಿಯಚ್ಚರನು ವನಕೆ || ೮೭ ||

ಮಂಗಲೋತ್ಸವದಿಂದ ಪೊಳಲನು | ಸಿಂಗರಿಸಿ ವಸುದೇವನನುಗುಣ |
ತುಂಗನೊಡಗೊಂಡರಮನೆಯ ಪೊಕ್ಕತಿವಿಭವದಿಂದ ||
ಅಂಗಜನ ಸಮಗೊಲಿದು ತನ್ನಯ | ಸಿಂಗರದ ಸುತೆ ಬಾಲಚಂದ್ರೆಯ |
ಸಂಗಳಿಸಿ ಸುಮುಹೂರ್ತದಲಿ ಮಾಡಿದನು ಮದುವೆಯನು || ೮೮ ||

ಇತ್ತಲಾ ರೋಹಿಣಿ ಬಳಿಕ ಯ | ಚ್ಚತ್ತು ನಿಜಪತಿ ಕಾಣದಾ ಕುಲ |
ಮುತ್ತು ಮೂರ್ಛಿಸೆ ಅಱಿದುಬಂದಾ ಜನಕಗೆಚ್ಚಱಿಸೆ ||
ಎತ್ತ ಹೋದನಿದೇನೆನಲು ನೈ | ಮಿತ್ತಕರು ಕಂಡಱಿದು ತಿಳುಹಲು |
ಮತ್ತೆ ಬಹನೆಂಬಾಸೆಯಿಂ ಸುಖದಿದ್ದರವರತ್ತ || ೮೯ ||

ಪಲದಿವಸವವಳೊಡನೆ ರಾಗವು | ತೊಲಗದತಿರತಿ ಲೀಲೆಯಿಂದಿರು |
ತೊಲಿದು ಪೆಂಪಿನರಿಷ್ಟ ಪುರವನು ಪೊಗಲೆ ಬೇಕೆಂದು ||
ಕಳುಹಿಸಿಯೆ ಕೊಳೆ ಪವನವೇಗನು | ತಳುವದುತ್ತಮ ವಸ್ತುವಿತ್ತನು |
ಕಳುಹಿ ಪೋದನು ತತ್ಪುರಕೆ ಭೂಪಾಲ ಕೇಳೆಂದ || ೯೦ ||

ವರಹಿರಣ್ಯಾಕ್ಷಂಗೆ ಹರಿಕುಲ | ದರಸನೆಂದನು ನಾವು [ಶೌರೀ] |
ಪುರಕೆ ಪೋಗಲು ಬೇಹುದೆನೆ ರೋಹಿಣಿಗೆ ಬಳುವಳಿಯ ||
ಪರಿಪರಿಯ ವಸ್ತುಗಳನಳಿಯಂ | ಗಿರದೆ ಕೊಟ್ಟಾಪುರಕೆ ಕಳುಪುತ |
ಲಿರಲು ಬಂದುದು ಕರೆಸೆ ವಸುದೇವನ ಸತಿಯರೆಲ್ಲ || ೯೧ ||

ಕುಲವನಿತೆಯರು ಏಳುನೂರ್ವರು | ಲಲನೆಯರಿಗವರವರ ಸಖಿಯರು |
ಪಲಬರವರವರೂಳಿಗದ ಕಾಂತೆಯರು ಪಲಪಲರು ||
ಅಲರುವಿಲ್ಲನ ಫೌಜಬಹವೊಲು | ಬಳಸೆ ಪತಿಯನು ರಾಗರಸಪೊಂ |
ಪುಳಿವಡೆಯೆ ಅವರವರ ಜನಕರನೈದೆ ಬೀಳ್ಕೊಟ್ಟು || ೯೨ ||

ಸುರಸತಿಯರನು ತಮ್ಮತನು ಸೌಂ | ದರ್ಯದಲಿ ಗೆಲೆ ಬಳ್ಳಿ ಮಿಂಚಿನ |
ಹರವರಿಯ ಹಸರಿಸುತ ತೊಳಪ ಕಟಾಕ್ಷಮಾಲೆಗಳಿಂ ||
ನೆರೆದು ಬರೆ ಸುವಿಮಾನದಲಿ ವರ | ಪುರುಷನೊಡನೊಲವಿಂದ ಶೌರೀ |
ಪುರಕೆ ಬಿಜಯಂಗೈದನಾ ವಸುದೇವ ಭೂಪಾಲ || ೯೩ ||

ಅಷ್ಟಮಂಗಳದಿಂದೆ ಶೋಭಿಸಿ | ಪಟ್ಟಣವು ಬ್ರಹ್ಮಾಂಡ ಭಾಂಡವ |
ನೊಟ್ಟಯಿಸೆ ತೂರ್ಯಸ್ವನಂ ಸಾಮುದ್ರ ವಿಜಯನೃಪ ||
ನೆಟ್ಟನಿದಿರ್ಗೊಂಡೈದಿ ಬರೆ ಕಂ | ಡಿಟ್ಟಳದಿ ವಸುದೇವನೆಱಗಲು |
ಹೆಟ್ಟುಗೆಯ ದೂರದಿ ಪರಸಿದನು ಭೂಪಾಲ ಕೇಳೆಂದ || ೯೪ ||

ವರ ಗಜೇಂದ್ರಾರೂಢನಾದನು | ಧರಣಿಪತಿಯು ನಿಜಾನುಜರ್ಕಳು |
ನೆರೆದ ರಾಜನ್ಯಕವು ಕರಿಕಂಧರಗಳಡರಿದರು ||
ಅರಸಿಯರು ಸಹವಾಗಸದಲ | ಚ್ಚರಿಯ ರತ್ನ ವಿಮಾನದಲಿ ಅವ |
ತರಿಸಿ ವಸುದೇವನು ಬರಲು ಪುರವೈದಿದನು ನೃಪತಿ || ೯೫ ||

ಹೆಣ್ಣುಗಳ ನೆಱೆಮರುಳು ಮಾಡಿದ | ಅಣ್ಣ ತನ್ನನು ಚಾಳಯಿಸಿದರೆ |
ಅಣ್ಣನಾದೇಶವನು ತಾಂಚಾಳೈಸಿ ಮಿಗೆ ಪೋದ ||
ಅಣ್ಣವಳಿಯದೆ ಬಣ್ಣಗುಂದದೆ | ಹುಣ್ಣಮೆಯ ಶಶಿಯಂತೆ ಚೆಲುಚೆಲು |
ವೆಣ್ಣುಗಳು ಸಹ ಬಂದನೆಂದೀಕ್ಷಿಸಿತು ಪುರಜನವು || ೯೬ ||

ಅತಿವಿಭದಿಂದರಮನೆಯ ಪೊ | ಕ್ಕತುಳ ರಾಗದಿ ಪುಣ್ಯ ವನಿತಾ |
ತತಿಗಳೆದೆ ಶೇಷಾಕ್ಷತೆಯತಳೆದೈದೆ ಸುಖವಿರುತ ||
ಚತುರೆ ರೋಹಿಣಿಗಗ್ರ ಮಹಿಷಿ | ಸ್ಥಿತಿಯನಿತ್ತಿರಲಾಕೆ ಗುಡಿಗಟ್ಟಿಸಿದ |
ನತಿಬಲನು ಬಲಭದ್ರನುದ್ಧತ ವೈರಿಪುರ ರುದ್ರಾ || ೯೭ ||

ವಿವಿಧ ವಿಭವದಿ ಜಾತಕರ್ಮೋ | ತ್ಸವವ ಮಾಡಿಸಿ ಯಾದವ ಪ್ರಭು |
ನಿವಹನಿಷ್ಟಾರ್ಥದಲಿ ಜಗವನು ತೃಪ್ತಿಬಡಿಸಿದರು ||
ಭುವನ ವಿದಿತನತಿ ಪ್ರತಾಪ | ಪ್ರವರನಿರೆ ಹಲಧರನು ಸುಯಶೋ |
ಧವಳನಾದನು ಭಾರತೀ ನವರತ್ನ ಕುಂಡಲನು || ೯೫ ||

|| ಅಂತು ಸಂಧಿ ೧೮ಕ್ಕಂ ಮಂಗಲಂ ಮಹಾ ||