ಸಂಧಿ ೨೧

ಅಂದು ದೇವಕಿಪಡೆಯೆ ಕೃಷ್ಣನು | ನಂದಗೋಪಿಯ ಮನೆಯ ಬೆಳೆವುತ |
ಬಂದ ಪೂತನಿ ಮುಖ್ಯರನು ಬಾಲ್ಯದಲಿ ಮರ್ದಿಸಿದ || ಪಲ್ಲ ||

ಕೇಳೆಲೇ ಮಾಗಧ ಧರಿತ್ರೀ | ಪಾಲದೇವಕಿ ಗರ್ಭದಳೆಯಲು |
ವ್ಯಾಳ ಕಂಸನು ಲೋಕರಂಜನೆಗುತ್ಸವವನೆಸಗಿ ||
ಬಾಲಕಿಗೆ………. | ಮೇಳದಿಂ ನವರತ್ನ ಖಚಿತವಿ |
ಶಾಲಸೂತಿಗೃಹವ ಸವೆಯಿಸಿ ಕರೆಸಿ ಯಿರಿಸಿದನು || ೧ ||

ತರುಣಿಯರು ಹಲಬರನು ಕಾದಿರ | ಲಿರಿಸಿಯಿರುತಿರೆ ಪೆತ್ತಳಾ ಸೌಂ |
ದರಿಯು ಜೀವಂಜಸೆ ಪೆಱಿಸೆ ಆ ಶಿಶುಗಲಮಳುಗಳ ||
ಭರದಿ ನೈಗಮದೇವ ಬಂದಾ | ದರದಿ ಮಾಯಾಶಿಶುಗಳನು ಸೈ |
ತಿರಿಸಿ ಚರಮಾಂಗರನು ಮುಂಪೇಳ್ದಲ್ಲಿಗವನೊಯಿದ || ೨ ||

ಇಲಿ ಉಲುಹುಗಳನರಿದು ಬೆಕ್ಕ | ವ್ವಳಿಸಿ ಬಹವೊಲು ಕಾಳುಕಾಳನೆ |
ಅಳುವ ಶಿಶುಗಳ ದನಿಯ ಕೇಳುತ ಬಂದು ಶಿಶುಗಳನು ||
ಖಳ ದುರಾತ್ಮಕ ಕಂಸ ತಾನಾ | ಗಳು (ಭರದಿಬಂ)ದತ್ತಲೊಯಿದತಿ |
ಮುಳಿದು ಶಿಲೆಯೊಳಸಗಸಗ ಒಯಿಲನು ಹೊಯಿದುಮಿಗೆ ಕೊಂದ || ೩ ||

ಮತ್ತಮೀಪರಿಯೆರಡು ಸೂಳನು | ಪೆತ್ತ ದೇವಕಿಯಾತ್ಮಭವರನು |
ಅತ್ತ ನೈಗಮ ದೇವನೊಯ್ಯಲು ಕೃತಕ ಶಿಶುಗಳನು ||
ಎತ್ತಿಕೊಂಡಾ ಕಂಸಕೊಂದನು | ಪುತ್ರನಳಿದಪರೆಂದು ದೇವಕಿ |
ಹೆತ್ತಮೊಟ್ಟೆಯ ಹೊಸದುಶೋಕಿಸಿ ಬಿದ್ದುಹೊರಳಿದಳು || ೪ ||

ಮುನಿನಿರೂಪದ ಬಲದಿ ತನ್ನಯ | ಮನವನೆತ್ತಾನುಂ ಬಲಿದು ತ |
ದ್ವನಿತೆಯರಲತಿಮುಕ್ತಕರ ವಚನವನು ಹುಸಿನೈದಿ ||
ಎನುತ ಕಂಸನು ಹರುಷದಿರಲಾ | ವನಜವದನೆಗೆ ಗರ್ಭ ಮೂಡಿತು ||
ಮುನಿವ ಕಂಸಗೆ ಮಿತ್ತು ಮೂಡಿದುದೆಂಬವೊಲು ಭರದಿ || ೫ ||

ಕಡುಮುಳಿದು ನಿಸ್ತ್ರಿಂಶ ಕಂಸನು | ಕುಡಿಯ ಮುಕ್ಕುವನೆಂಬ ತೆಱದಿಂ |
ಮಡದಿದೇವಕಿ ಬಯಸಿಮಂದಿಂಬಳವನನುತೇಜ ||
ಕೆಡುವುದೆಂಬುದನರುಪುವಂದದಿ | ಕಡುಗಿರಿಯ ಮುಗಿಲೇರಿ ಸುರಿದುದು |
ಬಡಹದಾ ಜೀವಂಜಸೆಯ ಕಣುನೀರೊಗುವ ತೆರದಿ || ೬ ||

ಭದ್ರಪದನಹನೆಂಬವೊಲು ತಾಂ | ಭದ್ರಪದವೊಂದಿರಲು ಕುವರನು |
ಕ್ಷುದ್ರರಿಗೆ ಲಯಕಾಲನೆಂಬವೊಲೈದೆ ಕಾಲದೊಳು ||
ತದ್ರಿಪುವಿಗಷ್ಟಮದ ಶನಿಯೆನೆ | ರೌದ್ರಮಳೆಯೊಯ್ವಷ್ವಮಿಯೊಳೆಸೆ |
ವರ್ಧಚಕ್ರಿಯು ತಾನೆನಿಪವೊಲರ್ಧ ರಾತ್ರಿಯಲಿ || ೭ ||

ವಿದಿತ ಶುಭರೋಹಿಣಿಯ ನಕ್ಷ | ತ್ರದೊಳು ಮುನ್ನವೆ ದೇವಕಿಯ ಗ |
ರ್ಭದಲಿ ನಿರ್ನಾಮಿಕಚರಾಮರನುದಯಿಸಿರಲಾಕೆ ||
ಪದುಳದೇಳೇ ತಿಂಗಳಿಗೆ ಸಸಿ | ವದನೆ ಪಡೆದಳು ಪುತ್ರನನು ಮೊಳ |
ಗಿದವು ಗಗನದೊಳಮರದುಂದುಭಿ ಮೊಳಗುಗಳು ಕೂಡೆ || ೮ ||

ಇಳೆ ತಮಾಲವ ರೋಹನಸ್ಥಳಿ | ಪೊಳೆವ ನೀಳಸುರತ್ನವನು ಕ |
ಜ್ಜಳವದೀಪಿಕೆ ಕಾಳರಾತ್ರಿ ಮಹಾತಮಮನಿರದೆ ||
ನಳಿನ ತುಂಬಿಯ ಮೃಗ ಮದಮ ಮೃಗಿ | ಜಲದಿ ವೇಗೆಯೆ ವಿಷವ ಪಡೆವಂ |
ತೆಳಸಿ ದೇವಕಿ ಕೃಷ್ಣನನು ಪಡೆದಳು ಜಗನ್ನುತನ || ೯ ||

ಪಡೆದು ಪತಿಗೆಂದಳು ಮೊದಲೆ ತಾಂ | ಪಡೆದ ಮಕ್ಕಳ ಕಾವು ತನ[ಕ್ಕೀ] |
ಗೊಡೆಯರಿಲ್ಲೆಂಬಂದವಾದುದು ಈ ಕುಮಾರಕನು ||
ಮಡಿಯದಂತೊಯ್ದಾರಿಗಾದೊಡೆ | ಕೊಡಿಮೆನಲು ವಸುದೇವನೃಪನಾ |
ನುಡಿವಿಡಿದು ಕುವರನೆ ನೆಗೆದುಕೊಂಡೋರ್ವನೊಯ್ಯುತಿರೆ || ೧೦ ||

ಏಕಕುಂಡಲನದನರಿತು ಸುವಿ | ವೇಕಿ ಬೆನ್ನನೆ ಬಂದೂ ತಮ್ಮಂ |
ಗೇಕಛತ್ರದರಾಜ್ಯವೆಂಬವೊಲೈದೆ ಕೊಡೆವಿಡಿದು ||
ಆಕಡೆಗೆ ಹೋಗುತಿರೆ ಗೋಪುರ | ದಾಕದವು ಕಡುಬಲಿದಿರಲು ನಿ |
ರ್ವ್ಯಾಕುಲರಿಗಾಕುಲತೆ ತೋರಿದುದರಸ ಕೇಳೆಂದ || ೧೧ ||

ಚಿಂತೆ ನಿಮಗೇಕಾನಿರಲ್ಕೆಂ | ಬಂತೆ ಪುರುಷೋತ್ತಮನುದಾತ್ತನು |
ಸೀಂತನಾಗೋಪುರದೊಳಸಿ ಪಂಜರದ ನಡವಿರ್ದು ||
ಸ್ವಾಂತ ಕದಡಿರ್ದುಗ್ರಸೇನನು | ತಾಂ ತಿಳಿಯನೀ ಇರುಳೊಳೀ ಎಡೆ |
ಸೀಂತವನ ದೆಸೆಯಿಂದ ಬಿಡುವುದು ತನ್ನ ಬಂಧನವು || ೧೨ ||

ಎಂದು ಮಂಗಳ ವಚನದಲಿ ಆ | ಕಂದನನು ಹರಿಸಿದೊಡೆ ತನೃಪ |
ರಂದವನು ಬಗೆಗೊಂಬ ಪದದೊಳಗಾಕುಮಾರಕನ ||
ಒಂದೆ ಉಂಗುಟ ತಾಗೆ ಪಡಿಭೋ | ರೆಂದು ಬೀಯಗವುಳಿದು ತೆರೆದುದು |
ಸಂದ ಸುಜನಗೆ ಸಗ್ಗವಡಿದೆರೆವಂತೆ ಪುಣ್ಯದಲಿ || ೧೩ ||

ಬಾಗಿಲನು ಪೊರವಟ್ಟುಗಮನೋ | ದ್ಯೋಗಿಗಳು ಕಿರಿದಂತರವನಿರೆ |
ಪೋಗೆ ಕುವರನ ಪುಣ್ಯದಿಂ ಮಳೆ ಬೆಳಗೆ ಮಿಂಚುಗಳೆ ||
ಮೇಗೆ ಕೈದೀವಿಗೆಯ ಪಿಡಿದವೊ | ಲಾಗೆ ಕಡುಗತ್ತಲೆಯೊಳಗೆ ಆ |
ಭಾಗಧೇಯರು ನಡೆವ ಸಮಯದಲರಸ ಕೇಳೆಂದ || ೧೪ ||

ಎರಡು ಕೊಂಬಿನ ತುದಿಗಳಲಿತಾ | ನೆರಡು ರವಿಬಿಂಬಗಳನಿರಿಸಿದ |
ಪರಿಯ ಪಂಜನು ಹೊತ್ತು ಬೆಳಗುತಲವನ ಪುಣ್ಯವದೆ ||
ಪಿರಿಯ ವೃಷಭಾಕಾರದಲಿ ಬಂ | ದಿರದೆ ಪಥವನು ತೋರಿ ನಡೆವು |
ತ್ತಿರಲು ಬೆಂಬಳಿಯೆಯಿಂದುತಿದ್ದರು ಭೂಪ ಕೇಳೆಂದ || ೧೫ ||

ಕರಿಮುಗಿಲ ಪೇರ್ವಳೆಯೊ ಅಂಜನ | ಗಿರಿ ಕರಗಿ ಪರಿವಿರವೊ ಆ ದಿ |
ಕ್ಕರಿ ಮದಾಂಬುವೆವುಕ್ಕಿ ಪರಿದುದು ಗಗನವೆಂಬ ಮೃಗ ||
ಸುರಿದ ಕತ್ತುರಿದೊರೆಯೊ ಬಗೆಗ | ಚ್ಚರಿಯೆನಿಸಿ ನೆರೆಬಂದು ಮಿಗೆ ಭೋ |
ರ್ಗರೆಯುತಿರ್ದುದು ಮುಂದೆ ಯಮುನಾನದಿಯು ಗುರುವಾಗಿ || ೧೬ ||

ಬಂದುದೇ ವಿಘ್ನದ ಪರಂಪರೆ | ಯೆಂದು ನೆನೆವನಿತರೊಳು ಬಸವನು |
ಮುಂದೆ ಪುಗೆ ಪುರುಷೋತ್ತಮನ ಪುಣ್ಯದಲಿ ಕಾಳಿಂದಿ ||
ನಿಂದುದಿಬ್ಬಗೆಯಾಗಿ ಜಲಚರ | ವೃಂದವತಿ ಭಯವಶದಲಡಗಿದ |
ವಂದು ಹರಿ ವಸುದೇವರಾಚೆಯ ತಡಿಯನೈದಿದರು || ೧೭ ||

ಮಗನ ಪುಣ್ಯದ ದೆಸೆಯಿನಂದಾ | [ಜಗದೊಡೆಯನಾ] ನಿರೂಪವನು ಈ |
ಮಗಗೆ ಹೇಳುತ ಮೆಚ್ಚುತಾ ವಸುದೇವ ವಿಭುವಲ್ಲಿ ||
ನೆಗೆದ ಬನದಲಿ ಕೃಷ್ಣಯಕ್ಷಿಯ | ಸೊಗಯಿಸುವ ಗುಡಿಯೈದು ವನಿತರೊ |
ಳಗಲಿ ಹೋದುದದೃಶ್ಯದಿಂದಾ ಬಂದ ಬಲಬಸವ || ೧೮ ||

ಅದರ ಮುಂದೊಂದಂತರದಲಿ | ಪ್ಪುದು ನೆರೆದು ತುರುಪಟ್ಟ ಅದರೊಳು |
ವಿದಿತನಾ ಗೋಪರೊಳು ಪೆಂಪಿನ ನಂದಗೋಪಾಖ್ಯ ||
ಸುದತಿಯೆಸೆವ ಯಶೋಧೆಯಾತನ | ಮದವಳಿಗೆ ಸುಖದಿಂದಿರುತ ಬೇ |
ಡಿದರು ಪುತ್ರನನಾ ವನದೊಳಿಹ ಕೃಷ್ಣಯಕ್ಷಿಯನು || ೧೯ ||

ಹೆತ್ತಳಾ ವಧು ಹೆಣ್ಣು ಮಗಳನು | ಪುತ್ರನನು ಬೇಡಿದೊಡೆ ದೇವತೆ |
ಇತ್ತಳೇ ಹೆಟ್ಟುಗೆಯನಾಕೆಗೆ ಕೊಟ್ಟುಬಾಯೆನಲು ||
ಹೆತ್ತ ಶಿಶುವನು ಮೊಱದೊಳೊಱಗಿಸಿ | ಎತ್ತಿಕೊಂಡಾನಂದ ದೇವತೆ |
ಯತ್ತ ಬಂದನು ಮತ್ತದೋರ್ವನು ವೆರಸಿ ಆಯಿರಳು || ೨೦ ||

ಬಂದು ನಂದನು ಶಿಶುವ ದೇವಿಯ | ಮಂದಿರದ ಮುಂದಿಳುಹಿ ದೇವತೆ |
ಕಂದನನು ಬೇಡಿದಡೆ ಕೊಡುವರೆ ನಮಗೆ ಈ ಮಗಳ ||
ಅಂದಿದಕೆನಾ ಹರಸಿಕೊಂಡೆನೆ | ಕಂದನನು ಕೊಡುವಡೆಕೊಡಲ್ಲದ |
ಡಿಂದು ನೀನದನೊಪ್ಪುಗೊಳ್ಳೆಂದಿರಿಸಿ ಮಗಳಿದನು || ೨೧ ||

ಅನಿತಱೊಳು ವಸುದೇವ ಹಲಧರ | ವಿನುತ ಶಿಶುವನು ಸಲಹಲೀತನು |
ಎನುತಲಾಳೋಚಿಸಿಯೆ ಬಲನಾನಂದನಾತ್ಮಜೆಯ ||
ಅನುನಯದಿ ನೆಗೆಕೊಳಲು ವಸುದೇ | ವನು ಮೊಱದಲೊಱಗಿಸಿದನೀ ಕಂ |
ದನನು ಯಕ್ಷಿಯೆ ಕರೆದವೊಲು ಗೋಪನನು ಬರಹೇಳೆ || ೨೨ ||

ಹೆಟ್ಟುಗೆಯನೀನೊಲ್ಲೆನೆಂದರೆ | ಕೊಟ್ಟೆನೈ ನಿನಗೆಲೆಮಗನೆ ಕಡು |
ದಿಟ್ಟನೆನಿಸುವ ಮಗನ ನೀನೊಯ್ ಹಾಲು ಬೆಣ್ಣೆಯನು ||
ಕೊಟ್ಟು ಸಲಹೆನೆ ಕೇಳಿ ಹರುಷಂ | ಬಟ್ಟು ನೀಲದ ಪುತ್ಥಳಿಯ ದೊರೆ |
ವಟ್ಟ ಶಿಶುವನು ಕಂಡು ನಲಿವುತ ದೇವಿಗೆಱಗಿದನು || ೨೩ ||

ತನುಜನನು ನೆಗೆಕೊಂಡು ತನ್ನಯ | ಮನೆಗೆ ಬಂದು ಯಶೋಧೆ ಕೇಳೌ |
ನನಗೆ ದೇವತೆ ಪುಣ್ಯದಿಂ ಪ್ರತ್ಯಕ್ಷದಲಿ ಕರೆದು |
ತನಯನನು ಕೊಟ್ಟಳು ನಿರೀಕ್ಷಿಸು | ಎನುತ ಕೊಡೆ ನೆಗೆಕೊಂಡು ಮೊಲೆ ಜು |
ಮ್ಮನೆ ತೊರೆಯೆ ಹರುಷಾಂಬುಧಿಯಲೋಲಾಡಿದಪರವರು || ೨೪ ||

ಮೊಲೆಯಳೂಡುವಳೊಮ್ಮೆನಳಿತೋ | ಳಲಿ ಒರಗಿಸುವಳೊರ್ಮೆ ಮುದ್ದಿಸಿ |
ಚೆಲುವ ಮಗನನು ತೊಟ್ಟಿಲಲಿ ತೂಗುವಳದೋರೊರ್ಮೆ ||
ನಳಿನಲೋಚನ ಕಂದ ಜೋಜೋ | ಚೆಲುವ ಚೆನ್ನಿಗ ಕಱುವೆ ಜೋಜೋ |
ಅಳಿವಿರುಚಿತನು ಬೊಪ್ಪ ಜೋಜೋ ಎಂದು ಪಾಡಿದಳು || ೨೫ ||

ನೆರೆದು ಬಂದಾ ಗೋಪಿಯರು ತಾಮ | ದ ಸ್ಮರನ ತಂದೆಯೆನೆತ್ತಿ ಕೊಳುವತಿ |
ಹರುಷದಲಿ ಮೈದೊಡೆವ ಮೈದೊಳೆದೈದೆತೂಪಿರಿವ ||
ಉರಿವ ಸೊಡರ್ವಕ್ಕಿನ ತಿಲಕವನು | ವಿರಚಿಸುವ ಮೃದುವಸನದಲಿ ಸಿಂ |
ಗರಿಪ ಮುದ್ದಿಪ ಪಾಡಿತೂಗಿಪ ನಲಿವಿನಿಂದಿಹರು || ೨೬ ||

ನೋಡಿ ದಣಿಯರು ಗೋಪಿಯರು ತಾಂ | ನೂಡಿ ದಣಿಯರು ಗೋಪಿಯರು ಕೊಂ |
ಡಾಡಿ ದಣಿಯರು ಬಾಲಕೃಷ್ಣನ ಮುದ್ದುಗಯತವನು ||
ಬೇಡಿ ದಣಿಯರು ಮೆಲ್ಲನರೆ ಮುಂ | ದಾಡಿ ದಣಿಯರು ಬಾಯೆನುತ ಕೈ |
ನೀಡಿ ದಣಿಯರು ಪಡೆದವರ ಪುಣ್ಯವನದೇನೆಂಬೆ || ೨೭ ||

ಅಂದಿನಾ ಗಂಡರೊಳಗಾನಕ | ದುಂದುಭಿಯೆ ಕಡುಚೆಲುವನಾತನ |
ಕಂದನನೆ ಕಂದರ್ಪದೇವನ ಹಡೆವ ತಂದೆಯೆನೆ ||
ನಂದ ನಂದನನಂದವನು ಏ | ನೆಂದು ಪೇಳ್ವುದೊ ಗೋಪಕನ್ಯಾ |
ವೃಂದವಂಗಜ ಸುಖವನುಂಬುದು ಮುದ್ದಿಸುವನೆನವದಿ || ೨೮ ||

ಕೃಷ್ಣಯಕ್ಷಿಯು ಕೊಟ್ಟ ಕತದಿಂ | ಕೃಷ್ಣವರ್ಣವನಾಂತ ದೆಸೆಯಿಂ |
ಕೃಷ್ಣನೆಂದಾ ನಂದನಾನಂದದಲಿ ಪೆಸರಿಡಲು |
ಕೃಷ್ಣನಿರುತಿರಲಿತ್ತಲಿತ್ತಲು | ಕೃಷ್ಣ ಪಿತೃಬಲನಿರದೆ ನಂದನು |
ಕೃಷ್ಣಯಕ್ಷಿಗೆ ಕೊಟ್ಟ ಮಗಳನು ಕೊಂಡು ಮರಳಿದರು || ೨೯ ||

ಬಂದು ದೇವಕಿಗಱುಪಿ ಶಿಶುವನು | ತಂದು ಕೊಡೆಪಡೆದಾಕೆಯಿರೆ ತಾ |
ನಂದು ದೇವಕಿ ಪೆತ್ತಳೆಂಬುದ ಕೇಳಿ ಖಳಕಂಸ ||
ಬಂದು ಕೂಸನು ನೋಡಿ ಯೀಕೆಯ | ತಂದವನ ದೆಸೆಯಿಂದ ಬಾಧೆಯು |
ಬಂದಪುದು ತನಗೆಂದಳಿಕಿ ನೆಗ್ಗೊತ್ತಿದನು ಮೂಗ || ೩೦ ||

ದುರುಳನವಳ ಕುರೂಪು ಮಾಡಿಯೆ | ಮರಳಿದನು ಮನೆಗತ್ತಲಿತ್ತಾ |
ತರಳೆ ಬೆಳೆದು ಮಹಾಮುನೀಶರನೊಂದಿ ಹಿಂಭವವ |
ಗುರುಗಳಿಂ ಬೆಸಗೊಂಡು ತಿಳಿದತಿ | ವಿರತೆಯಾಗಿಯೆ ನಿಖಿಲ ತೀರ್ಥವ |
ನಿರದೆ ವಂದಿಸಿ ಬಂದು ವಿಂದ್ಯಾಚಲದೊಳಚಲಮತಿ || ೩೧ ||

ನಿಂದು ಭಾವದಲಖಿಲ ನೋಂಪಿಯ | ನಂದು ನೋಂತಿರೆ ಲುಬ್ಧಕರು ಪರಿ |
ತಂದು ಭಕ್ತಿಯಲೆರಗಿ ವನದೇವತೆಯೆನುತ ಭಜಿಸಿ ||
ಚಂದದಿಂ ಪೂಜಿಸಿದರಾಕೆಯ | ತಿಂದುದಲ್ಲಿಯೆ ಪುಲಿ ಶುಭಾವನೆ |
ಯಿಂದ ಮಡಿದಳು ದೇವನಾದಳು ಮೊದಲ ಸಗ್ಗದಲಿ || ೩೨ ||

ಅವಳ ಮೂಱುಂಗುಲಿಗಳುಳಿದಿರ | ಲವರದವನು ಪೂಜಿಸುತಿರಲು ಬಳಿ |
ಕವು ಕೊರಗೆ ಮುಕ್ಕವಲದಕ್ಕನುನಿರಿಸಿ ಲುಬ್ಧಕರು ||
ತವತವಗೆ ಪೂಜಿಸುವರಂದಿಂ | ವ್ಯವಹರಿಪುದಾ ಭ್ರಾಂತಿಯೆಳೆಯಲೆ |
ತವಕಿ ಕಂಸನು ಸುಖದಲಿರುತಿರಲರಸ ಕೇಳೆಂದ || ೩೩ ||

ಥಳಥಳನೆ ಹಗಲುಳುಕಿ ಬೀಳ್ದವು | ಘಲಘಲನೆ ಮುಗಿಲಂದಲೆತ್ತರ |
ಮಳೆಸುರಿದ ವೆಣ್ದೆಸೆಗೆ ಹೊಗೆದ ಉಡುಗಳ ಬಳಗವಲ್ಲಿ ||
ಸುಳಿದವೆದ್ದವು ಧೂಮಕೇತು ಗ | ಳಿಳೆ ನಡುಗಿದುದು ಮಧುರೆಯರಮನೆ |
ಯೊಳಗೆ ನೆಲಬಾಯ್ದೆಗೆದುದಡಿಗೆಡೆದುದು ಪಿರಿಯಮಾಡ || ೩೪ ||

ಸುರಧನುಗಳಾಗಸದಲಲ್ಲಿಯು | ತರತರದಿ ಮೂಡಿದವು ಕಂಸನ |
ಕರದ ಖಂಡೆಯ ಮುಱಿದು ಬಿದ್ದುದು ದೇವತಾ ಪ್ರತುಮೆ ||
ಸುರಿದವಶ್ರು ಜಲಂಗಳನು ಭೀ | ಕರತರ ಸ್ವರ ದೇವತಾ ಮಂ |
ದಿರದೊಳಾದುದು ಪುರಜನದ ಮನ ಬೆದರು ವಂದದಲಿ || ೩೫ ||

ವನಿತೆ ಜೀವಂಜಸೆಯು ಕಡುಗೆಡು | ನಗಸುಗಂಡಳವಳಿದು ಬೆಂಬಿ |
ದ್ದನಿತರೊಳಗಾ ಕಂಸನತಿ ಕಷ್ಟದ ಕನಸುಗಂಡು ||
ಮನವಳುಕಿ ಮುರಿದೇಳಲೊಡನಾ | ಕನಸನಾ ವಧು ಹೇಳಲುಮ್ಮಳ |
ಜನಿಸಿ ನೇಮಿತ್ತಿಕ ವರುಣನು ಕರೆದು ಕೇಳಿದನು || ೩೬ ||

ಕಂಡ ಕನಸು ತನ್ನ ಪುರದಲಿ | ತೊಂಡುವಲಿ ಉತ್ಪಾತವನುಮಂ |
ಕಂಡಿದೇನದ್ಭುತವೆನುತ ದೈವಜ್ಞನಾ ವರುಣ ||
ಕಂಡನಾಗಳೆ ಕಣ್ಣ ನೀರಿನ | ಹೊಂಡವನು ಹಸರಿಸುತ ನಿನಗು |
ದ್ದಂಡವೈರಿಯು ಪುಟ್ಟಿ ಬೆಳೆದಪನತ್ತಲೊಂದೆಡೆಯ || ೩೭ ||

ಎಂದೊಡಾತನ ಕಳುಹಿ ಆವೆಡೆ | ಯೊಂದಿಹನೊ ಹಗೆಯೆಂಬುದಱಿದೊಡೆ ||
ಮಿಂದು ಮಡಿಯುಟ್ಟೊಱಗಿದನು ಮಿಗೆ ದರ್ಭಶಯ್ಯೆಯಲಿ ||
ಬಂದವಾಹಿಂದನಭವದಲೊಲಿ | ತಂದ ದೇವತೆಯೆಂಟು ಬೆಸನೇ |
ನೆಂದು ಕಂಸನ ಕೇಳಿದವು ಭೂಪಾಲ ಕೇಳೆಂದ || ೩೮ ||

ದೇವಕಿಯ ಮಗನೆವಗೆ ಹಗೆಯವ | ನಾ ವೆಡೆಯಲಿಹನೆಂಬ ತೆಱನನು |
ನೀವಱಿಸಿ ಆತನನು ಕೊಲಿಯೆಂದೆಯೆ ನೇಮಿಸಲು ||
ಆವಗಹನವು ನರಹುಳುವ ಕೊಲ | ಲಾವುಮೆಲ್ಲರು ಬೇಕೆಯೆಂದಾ |
ದೇವತೆಗಳೆನೆ ಪೋಪೆನೋರ್ವಳೆಯೆಂದು ಪೂತನಿಯು || ೩೯ ||

ವಿಷವ ಮೊಲೆಗಳಿಗೂಡಿ ತನ್ನ | ರ್ವಿಸುವರೂಹನು ಮರಸಿ ಬಂದಾ |
ಬಿಸಜವದನೆ ಯಶೋಧೆ ನೀರಿಗೆ ಹೋದ ವೇಳೆಯಲಿ ||
ಹಸುಳೆ ಕೃಷ್ಣನು ತೊಟ್ಟಿಲೊಳಗಿರೆ | ನುಸುಳಿ ನಿಂದಾ ತಾಯ ರೂಪನು |
ಸಸಿನೆ ತಲೆದೊಳ ಪೊಕ್ಕು ಕಂದನೆ ಹಸಿದೆ ಬಾಯೆಂದು || ೪೦ ||

ಎತ್ತಿಕೊಂಡಾ ಮೊಲೆಯನೂಡಲು | ಒತ್ತಿಮೊಲೆಯುಂ ಬಂದದಲಿ ಕೆ |
ನ್ತೆತರನು ಹರಿ ಹೀರೆ ಅಸುವಳಿವಂತೆ ಮೊರೆಯಿಟ್ಟು ||
ಸತ್ತೆನಯ್ಯೋ ಎಂದು ಕೈಯಿಂ | ದೊತ್ತಿ ಬಾಯನು ಬಿಡಿಸಿ ಜಿಗುಳೆಯು |
ಪತ್ತಿದಂತಿರೆ ಬೆದರಿ ಪೂತನಿ ಪೋಯ್ತದೃಶ್ಯದಲಿ || ೪೧ ||

ನೆಱೆ ವಿಭಂಗಜ್ಞಾನದಿ ಮು | ನ್ನಱಿದ ಪೂತನಿಯಂತೆ ಕೃಷ್ಣನು |
ಮೆಱೆವ ನಂದನ ಮನೆಯಲಿಹನೆಂದರಿದು ಮಾಕಾಳಿ ||
ನೆಱೆದ ಕಾಕಾಕಾರದಿಂ ಬಂ | ದೆಱಗೆ ಹೊಱ ಜಗಲಿಯಲಿ ಮಲಗಿದ |
ಕಿಱುಳೆ ಹೊಡದೊತ್ತಿದನು ನಖಮುಖ ಪಕ್ಕವೆದೆಮುರಿಯೆ || ೪೨ ||

ಮೊಱೆಯಿಡುವ ಬಿಱಿತೋಡಿತದು ಆ | ಕಿಱುಳೆ ಮೆಲ್ಲನೆ ತೆವಳಿ ಆಡುವ |
ಕಿಱುವರೆಯದಂದಂಗಳದೊಳಾಡುತಲು ಹರಿಯಿರಲು ||
ನೆಱೆ ಪೃಥುಳೆ ಎಂಬ ಸುರ ದೇವತೆ | ಅಱಿದು ಶಕಟಾಕಾರದಲಿ ಮೈ |

ಯಱಿಯದುಱೆ ಪರಿತಂದು ದೀಕ್ಷಿಸಿ | ಒದೆದನಾ ಕೃಷ್ಣ || ೪೩ ||

ಒದೆದಡದು ಹರಿ ಹಂಜೆನಲು ನು | ಗ್ಗಿದುದು ರಥವುಂ ಕಂಸನೃಪನು |
ರ್ವಿದ ಮನೋರಥವುಂ ಬಳಿಕದು ಹೋಗೆ ಭಯವಶ ದಿ ||
ಅದಟನೀ ಮಗನೆಂದು ವಿಸ್ಮಯ | ವೊದವಿ ಬಂದಾನಂದ ಗೋಪನು |
ಪದುಳದಲಿ ನೆಗೆದೊತ್ತಿ ಕೊಂಡೊಳಗೈದನಾ ಹರಿಯ || ೪೪ ||

ಗೋಪಿಕಂದನ ನೆತ್ತಿಕೊಂಡುಱೆ | ತೂಪಿಱಿದು ಸುಖದಲಿ ಕೆಲವು ದಿನ |
ವಾಪರಿಯಲಿರೆ ಬಂದಳಾ ಕೌಸಂಬಿಯೆಂಬಸುರೆ ||
ರೂಪಿನಿಂ ಬಲುಗೂಳಿಯಾಗಿಹ | ನೋಪರವದಿಂ ತಾಗೆ ಕೃಷ್ಣನು |
ಕೋಪದಿಂ ಕೊಂಬುಗಳ ಕಿತ್ತೊಡೆ ಬಡಿದು ತೆರಳಿಸಿದ || ೪೫ ||

ಬಿಡದೆ ಕೇಸರಿಯೆಂಬ ದೇವತೆ | ಕಡುವಿಗಡ ದುಷ್ಟಾಶ್ವರೂಪದಿ |
ಕಡೆಯಕಾಲದ ಸಿಡಿಲದನಿಯೆನೆ ನೆರೆಕೆರಳಿಬಂದು ||
ಪೊಡೆಯರಲನೊಡವಾಯೆ ಹಣೆಗ | ಣ್ಣೊಡೆಯೆ ತಿವಿದಡೆ ಕಾಱೆನೆತ್ತರ |
ಕೆಡೆದು ಬಿದ್ದೆದ್ದೋಡಿದುದು ಹರಿಯಧಟನೇನೆಂಬೆ || ೪೬ ||

ನೆರೆದು ತುಱು ಪಟ್ಟಿಯಪುಡಿದಗೋ | ವರು ಬಿಡದೆ ತುಱುಗಾತಿರ್ಯರು ಪೊಡೆ |
ಯರಲನಧಟನು ಕಂಡು ವಿಸ್ಮಯಗೊಳಲು ತಾಯ್ತಂದೆ ||
ಹರುಷರಸದಲಿ ಮುಳುಗೆ ತನ್ನೊಡ | ವೆರಸಿ ಧೂಳಾಟಗಳನಾಡುವ |
ಸರಿವರೆಯದಾ ಗೋಪಕುವರರ ಕೂಡಿಕೊಂಡಲ್ಲಿ || ೪೭ ||

ಮನೆಮನೆಯನೂಳಪೊಕ್ಕು ಕೆನೆವಾ | ಲನು ಕಡೆದ ಬೆಣ್ಣೆಯನು ಸೆಳೆತಂ |
ದನುನಯದಿ ಕೊಡುವನು ಕೆಳೆಯರಿಗೆ ತಾನುಭುಂಜಿಸುವ ||
ಕನಲಿ ಗೋಪಿಯರಂಜಿಸಿದೊಡೊ | ಯ್ಯನೆಗನುತಲೋಡುವನು ಈಚೆಯ |
ಮನೆಯ ಹೋಗುವನು ಬಾಲಕೃಷ್ಣನದೊಂದು ಲೀಲೆಯಲಿ || ೪೮ ||

ಹಸುಳೆ ನೋಡಿವನಂಡೆಯೊಳಗಣ | ಹಸಿಯ ಹಾಲನು ಕುಡಿದವಳಗಣ |
ಬಿಸಿಯ ಹಾಲನು ಬೆಣ್ಣೆಸಹವೀಂಟಿದನು ನೆಲಹುಗಳ ||
ಮೊಸರನುಂಡನು ನಿನ್ನ ಕಂದನ | ಗಸಣಿ ಬಲುಹು ಯಶೋಧೆ ನೀನೂ |
ಡಿಸುವ ಮೊಲೆಯನೆಂದೈದೆ ಗೋಪಿಯರೊದಱಿದರು ಬಂದು || ೪೯ ||

ಆರಿಗಕ್ಕಟ ಹುಟ್ಟಿ ತಾ ಬಳಿ | ಕಾರಿಗಿವ ಮುದ್ದಾಗಿ ಬಲುಹೊರಿ |
ಯೀರಿಯೀತನು ಬಂದು ಬಿಟ್ಟಾಬಸವನಾದನಲೆ ||
ಆರು ಬಾರಿಸಬಹುದು ನಿನ್ನ ಕು | ಮಾರಕನ ಲೂಟಿಯನು ನೀನೇ ವಿ |
ಚಾರಿಸೆಂದರು ನಂದಗೋಪಿಗೆ ಗೋಪವನಿತೆಯರು || ೫೦ ||

ಎಂದ ಮಾತಿಗೆ ಗೋಪಿಕೃಷ್ಣನ | ನಂದು ಕೋಪದಿ ಬೈದು ತೊಟ್ಟೆಳೆ |
ತಂದು ಕಡೆಗೋಲ್ವಳ್ಳಿಯಲಿ ಕೈಗಟ್ಟಿ ಕಂಬದಲಿ ||
ಬಂಧಿಸಿದಳಾ ತಾವರೆಯ ಭೂ | ಲೊಂದಱಿಂ ಕಲಭವನು ಬಂಧಿಸಿ |
ದಂದದಲಲಿ ತಾಯಾಜ್ಞೆಗೊಂದಱೆ ನಿಮಿಷವಲ್ಲಿರ್ದ || ೫೧ ||

ಮುಱಿದ ಕಂಬವ ಕೈಯ ಬಳ್ಳಿಯ | ಹಱಿದು ನಸುನಗುತೊಯ್ಯನೊಯ್ಯನೆ |
ಹೊಱಗೆ ಹೊಱವಟ್ಟಾಡುತಿಱಲರ್ಜುನೆಯೆನಿಪದೇವಿ ||
ನೆಱೆದಮಲು ಮತ್ತಿಯ ಮರದವೊಲು | ಕಿಱುಳೆ ಕೃಷ್ಣನನೌಕಿದೊಡೆ ಬೇ |
ರ್ಪಱಿಯೆ ಮರಮುಱಿಯೊದೆಯೆ ಓಡಿದಳಾಕೆ ಕಳವಳಿಸಿ || ೫೨ ||

ಬಾಲಕೃಷ್ಣನದೊಂದು ದಿನವಾ | ತಾಳ ಜಂಘಿನಿಯೆಂಬ ದೇವತೆ |
ತಾಳಮರಗಳ ತೆಱದಿ ಬಂದು ಫಲಂಗಳಿಂದಿಟ್ಟು ||
ಬಾಳಲಾಱದೆ ಹೋದಳೆನೆ ಕ | ಟ್ಟಾಳುಗಳ ದೇವನನು ಪುಣ್ಯವು |
ಮೇಳಿಸಿರಲಾರಳವೆ ಕೊಲುವೊಡೆ ಭೂಪ ಕೇಳೆಂದ || ೫೩ ||

ಬಡಿವನಲ್ಲಿಯ ಮಕ್ಕಳನು ತಲೆ | ಯೊಡೆವನರೆ ಬರಲವರ ತಾಯ್ದಿರು |
ಜಡಿದು ಜಂಕಿಸಿ ಪೊಡೆಯ ಬಂದೊಡೆ ಕಾಲುವಿಡಿವಂತೆ ||
ಅಡಿವಿಡಿದು ಪೊಡವಿಗೆ ಕೆಡಹಿತಾ | ಹಿಡಿದೆಳೆವನವರಳಲು ನಗುವನು |
ಕೆಡುಕನಾದನು ನಂದಗೋಪಿಯ ಕಂದನೆನಿಸಿದನು || ೫೪ ||

ನಂದಗೋಪಿಗೆ ಗೋಪಿಯರು ನೆಱ | ತಂದು ದೂಱನು ಹೇಳೆ ತುಂಟನು |
ಮಂದಿರದಲಿರೆ ದೂಱ ತಾರದೆ ಮಾಣೆನೆಂದಾಕೆ ||
ಕಂದನನು ಗೋವಳರ ಸಿಂಗರ | ತಂದದಲಿ ಸಿಂಗರಿಸಿ ತುಱಿಗಾ |
ಯೆಂದು ಕಲುಹಲು ಕೃಷ್ಣಪೋದನದೊಂದುಲೀಲೆಯಲಿ || ೫೫ ||

ದನವ ಕಾವುತಲಡವಿಯಲಿ ಹಾ | ವನು ಹಿಡಿದು ತಹನೇಣೆನುತ ಹುಲಿ |
ಯನು ಹಿಡಿವ ಬೆಕ್ಕೆಂದು ಸಿಂಗವ ತಹನು ನಾಯೆಂದು ||
ವನಕರಿಗಳನು ಹಂದಿಗಳು ತಾ | ವೆನುತ ಹಿಡಿತಹನೆಲ್ಲ ಗೋವರ |
ತನುಜರೆದೆಗಿಡೆ ಕೃಷ್ಣನಾವನು ಕಾವನೀ ತೆಱದಿ || ೫೬ ||

ಒಂದು ದಿನವಾಗರ್ದಭಾಸುರೆ | ಯೆಂದೆನಿಪ ದೇವತೆ ಖರಸ್ವರ |
ದಿಂದ ಗರ್ಜಿಸಿ ಬಿಟ್ಟ ರಕ್ಕಸಗಣ್ಣಲಂಜಿಸುತ ||
ಬಂದು ಕತ್ತೆಯ ರೂಪಿನಿಂ ಪರಿ | ತಂದೊಡೋಡಿತು ಗೋವಳರು ಗೋ |
ವೃಂದ ಬೆಚ್ಚಿತು ಗಿರಿಗಳದಿರಿದವದಱ ಬಿಱುದನಿಗೆ || ೫೭ ||

ಪರಿದು ಬಹ ಬರಕಿತ್ತರದೆ ಪೆ | ರ್ಮರಗಳೌ ಬುಡಗೆಡೆಯೆ ಬಾಯನು |
ತೆರೆದು ನಿಡುಹಲ್ಲುಗಳ ತೋರುತಲಿದಿರೆ ನಡೆತರಲು ||
ಹರಿಯದಱ ಬಿಱುವಾಯ್ಗೆ ತನ್ನಯ | ಕರವ ಸಂಧಿಸಿ ನಾರ ಸೀಳಿದ |
ಪರಿಯಲೊಳೆ ಸೀಳಿದನು ಕೃಷ್ಣನು ತೋಳ ಬಲುಹಿನಲಿ || ೫೮ ||

ಸಿಂಗ ವಿಕ್ರೀಡಿತ ತಪಸ್ಸನು | ಕಂಗೆಡದೆ ಮುಮ್ಮಾಡಿದದರಿಂ |
ತುಂಗ ವಿಕ್ರಮನಾದನೀ ದೇವಕಿಯ ಸುಕುಮಾರ ||
ಭಂಗ ಬಡುವನೆ ತವಗೆ ಪೆರನಾ | ವಂಗೆ ಮತ್ತಾ ಕುವರನಿಂದವೆ |
ಭಂಗವಾಂತಾ ದೇವತಾಷ್ಟಕವೊಂದುಗೂಡಿದವು || ೫೯ ||

ದುರುಳ ಕಂಸಗೆ ಹಿಂಭವದೊಳಾ | ವಿರದೆ ಬೆಸನೇನೆಂದು ಪೇಳ್ದೊಡೆ |
ಮರುಭವಕೆ ಬಂದುಪಕರಿಸಿಯೆನೆ ಮಾತಕೊಟ್ಟೆವಲ ||
ಮರುಳುಗಳ ನುಡಿ ಸತ್ಯವಲ್ಲೆಂ | ಬರನುಡಿಗೆ ಎಡೆಬುಡದೆ ನಾ |
ವೆಲ್ಲರು ನೆಱೆದು ದೂರದಲಿ ಇನ್ನೊಂದುಜ್ಜಗವಗೈವ || ೬೦ ||

ಎಂದು ತಾವೆಲ್ಲರು [ಮೊಡನೆ] ಬಂ | ದೊಂದುದಿನ ಗೋವಿಂದನಾಗೋ |
ವೃಂದವನು ಗೋವರ್ಧನಾಚಲದೊತ್ತಿನಲಿ ತಱುಬಿ ||
ನಿಂದು ಮೇಯಿಸುತಿರಲು ಮಿಗೆ ಭೋ | ರೆಂದು ಪ್ರಳಯದ ಪೆರ್ಮಳೆಯನಿರ |
ದಂದು ಕೆಱೆದವು ಗೋವಳರು ಕಡುಬೆದಱಿತೇಂಕಾಡೆ || ೬೧ ||

ಹೊಡೆದಡಗದಿದೆ ಸಿಡಿಲು ಹೊಳೆಹೊಳೆ | ದಡಗದಿದೆ ಕಡುಮಿಂಚು ಭೋರೆನೆ |
ಹಿಡಿದ ಮಳೆಯೆಡೆಗಡಿಯದಿದೆ ಹೊನಲೆಲ್ಲಿ ನೋಡಿದಡೆ ||
ಕಡಲು ಕವಿತಹ ತೆಱದಿ ಬರುತಿದೆ | ಮಡಿದೆವೀ ತುಱುವಾವುಯೆಂದೆದೆ |
ಗೆಡುತ ಕೃಷ್ಣಗೆ ಬಿನ್ನವಿಸಿದರು ಕಡುಗೋವಳರು ಬಂದು || ೬೨ ||

ಕಳವಳಿಸದಿರಿಯೆನುತಲಾ ಗೋ | ವಳರನಾದೊಮ್ಮಳಿಸಿ ಬಹುಗೋ |
ಕುಲವನೊಗ್ಗುಳಿ ಮಾಡಿ ಗೋವರ್ಧನಗಿರಿಯನಂದು ||
ಘುಳಿಲನುಂಗುಟದಿಂದಮೀಂಟಿದ | ಹೊಳೆವ ಹರುಳನು ಮೀಂಟುವಂದದಿ |
ತಳುವದೆತ್ತಿದನಾಂತನೊಂದೇ ಬೆರಲಲಬುಜಾಕ್ಷ || ೬೩ ||

ಕರಿಕಲುಭವದು ಬೆಟ್ಟದಾವರೆ | ಯರಲನಶ್ರಮದೆತ್ತಿದಂದದಿ |
ಬೆರಳು ತುದಿಯಲಿ ಕೊಡೆವಿಡಿದ ಗೋವರ್ಧನಾದ್ರಿಯನು ||
ಮುರಮಥನ ತುರುಗಾದನಾಗಳು | ಸುರಿದರಾ ದೇವತೆಗಳತಿ ಭೀ |
ಕರದ ಕೆಂಡದ ಮಳೆಗಳನು ಭೂಪಾಲ ಕೇಳೆಂದ || ೬೪ ||

ಏಳುದಿನ ಪರಿಯಂತ ಕುಂದದೆ | ಖೂಳ ದೇವತೆಗಳು ಮುಕುಂದನ |
ತೋಳಬಲ ಹಱಿಯದೆಸುರಿದಪಾಷಾಣವೃಷ್ಟಿಯನು ||
ಭಾಳ ಲೋಚನಗಿವನನಳುಕಿಪೊ | ಡಾಳುತನ ವಿಲ್ಲೆಂದು ಹೋದವು |
ಹೇಳಿದವು ಕಂಸಂಗೆ ನಿನ್ನಯ ಹಗೆಯ ಗೆಲಲರಿದು || ೬೫ ||

ಎಂದು ಪೋದವವತ್ತಲಿತ್ತಲು | ಬಂದು ಬಾನೊಳು ನಿಂದು ಸುರರೊಲ |
ವಿಂದ ದುಂದುಭಿವೊಯ್ದು ಹೂಮಳೆಗಱೆದು ಹೊಗಳಿದರು ||
ಅಂದುನಂದನ ನಂದನನನೈ | ತಂದು ನೋಡುವರೆಲ್ಲರುಂ ತಾ |
ವೊಂದೆ ಕೊರಳಲಿ ಕೀರ್ತಿಸಿದರಧಟರ ಶಿರೋಮಣಿಯ || ೬೬ |

ನಂದಗೋಪಯಶೋಧೆಗಳು ಪರಿ | ತಂದು ಕುವರನ ಭುಜವನೀಕ್ಷಿಸಿ |
ಬಂದು ಕೀರ್ತಿಪ ದೇವಮಾನವರುಲಿವ ನೆಱೆಕೇಳಿ ||
ಸಂದ ಸಂತಸದಂತ ವಾಂತರು | ಅಂದು ಗೋವರ್ಧನ ಗಿರಿಯನಿಳೆ |
ಗೊಂದು ಬೆರಟಿಯ ನಿಳುಹುವಂತಿಳುಹಿದನು ಮುರವೈರಿ || ೬೭ ||

ಭೂರಿಗೋವೃಂದವನು ಗೋಪಕು | ಮಾರರನು ಯಾದವರ ಬಂಟಿನ |
ಮೇರೆಯನು ಮಿಗೆ ಕಾದನಲ್ಲದೆ ತಱುವ ಕಾದವನೆ ||
ಹಾರ ಹೀರ ಪಟೇರ ತಾರಾ | ಕ್ಷೀರ ನೀರಾಕರ ಸದೃಶ ವಿ |
ಸ್ತಾರಕೀರ್ತಿಯನಾಂತನಾ ಸುಕವೀಂದ್ರ ಭೂಷಣನು || ೬೮ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀ ಜಾತ ನವ ಮಧು |
ಕರ ವಿರಾಜಿತ ಸುಕವಿನಾಳ್ವ ವಿರಚಿತವುಮಪ್ಪ ||
ಪರಮನೇಮಿ ಜಿನೇಂದ್ರ ಪಾವನ | ಚರಿತೆಯೊಳು ನಾಲ್ಕನೆಯದಿದು ಬಂ |
ಧುರವೆನಿಪ ಕೃಷ್ಣೋದಯಾಹ್ವಯ ಪರ್ವ ವಿಭ್ರಮವು || ೬೯ ||

|| ಕೃಷ್ಣೋದಯ ಪರ್ವಕ್ಕಂ ಅಂತು ಸಂಧಿ ೨೧ಕ್ಕಂ ಮಂಗಲ ಮಹಾ ||