‘ನೇಮಿನಾಥ ಚರಿತೆ’ಯನ್ನು ಏಕೈಕ ಓಲೆಗರಿ ಪ್ರತಿಯಿಂದ ಸಿದ್ಧಪಡಿಸಿ, ೧೯೭೬ರಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ, ‘ಸಾಳ್ವಭಾರತ’ ಎಂಬ ಹೆಸರಿನಿಂದ ಪ್ರೊ.ಹಂಪ.ನಾಗರಾಜಯ್ಯನವರು ಮೊದಲಬಾರಿಗೆ ಪ್ರಕಟಿಸಿದರು. ಅಂದಿನಿಂದ ಇಂದಿನವರೆಗೂ ಉತ್ತಮ ಸಂಪ್ರತಿಗಳು ದೊರೆಯದೆ ಇರುವುದರಿಂದ ಶಾಸ್ತ್ರೀಯವಾಗಿ ಗ್ರಂಥ ಸಂಪಾದನೆ ಮಾಡಲು ಸಾಧ್ಯವಾಗಿಲ್ಲ. ಜನಪ್ರಿಯವಾಗಿರುವ ‘ಸಾಳ್ವಭಾರತ’ ಎಂಬ ಹೆಸರು ಕೃತಿಯಲ್ಲಿ ಎಲ್ಲೂ ಉಕ್ತವಾಗಿರುವುದರಿಂದ, ಆ ಹೆಸರನ್ನು ಕೈಬಿಟ್ಟು, ಕವಿಯ ಆಶಯದಂತೆ ‘ನೇಮಿನಾಥ ಚರಿತೆ’ ಎಂಬ ಹೆಸರನ್ನು ಇಲ್ಲಿ ಬಳಸಲಾಗಿದೆ.

೧೯೭೬ರ ಮುದ್ರಣದಲ್ಲಿ ಕೃತಿಯನ್ನು ಪರ್ವವಾಗಿ ವಿಂಗಡಿಸಿರಲಿಲ್ಲ. ಈಗ ವಿಂಗಡಿಸಲಾಗಿದೆ. ಹಿಂದಿನ ಮುದ್ರಣದಲ್ಲಿ ೬೩ ಮತ್ತು ೬೪ ನೇ ಸಂಧಿಗಳಿಗೆ ಕ್ರಮವಾಗಿ ೬೪ ಮತ್ತು ೬೫ನೇ ಸಂಖ್ಯೆಯಲ್ಲಿ ನೀಡಿದ್ದರಿಂದ, ೬೩ನೇ ಸಂಧಿ ನಷ್ಟವಾಗಿದೆ ಎಂದೂ, ಗ್ರಂಥದಲ್ಲಿ ಒಟ್ಟು ೬೫ ಸಂಧಿಗಳಿವೆಯೆಂಬ ಭ್ರಮೆಯನ್ನು ಉಂಟುಮಾಡಿತ್ತು. ಈಗ ಆ ದೋಷವನ್ನು ಸರಿಪಡಿಸಲಾಗಿದೆ. ಷಟ್ಪದಿಯ ೩ ಮತ್ತು ೬ನೇ ಪಾದಗಳ ಕೊನೆಯ ಅಕ್ಷರಕ್ಕೆ ಗುರುವಿನ ಸ್ಥಾನವಿದ್ದರೂ, ಮುದ್ರಣದಲ್ಲಿ ಅನಾವಶ್ಯಕವಾಗಿ ದೀರ್ಘವಾಗಿ ತೋರಿಸಲಾಗಿತ್ತು. ಅವುಗಳನ್ನು ಹ್ರಸ್ವಗೊಳಿಸಿ ಸರಿಪಡಿಸಲಾಗಿದೆ. ಅನೇಕ ಕಡೆಯಿದ್ದ ಕಾಗುಣಿತದ ತಪ್ಪುಗಳನ್ನು ಮತ್ತು ಮುದ್ರಣದ ದೋಷಗಳನ್ನು ಸಾಧ್ಯವಾದಷ್ಟು ಈ ಆವೃತ್ತಿಯಲ್ಲಿ ಸರಿಪಡಿಸಲಾಗಿದೆ.

ಪ್ರೊ. ಹಂಪನಾ ಅವರು ತಮ್ಮ ಗ್ರಂಥದಲ್ಲಿ ನೀಡಿದ್ದ ‘ಜೈನಾಚಾರ್ಯರು’ ಮತ್ತು ‘ಪಾರಿಭಾಷಿಕ ಶಬ್ದಗಳು’ ಎಂಬ ಅನುಬಂಧಗಳನ್ನು ಅಲ್ಪಸ್ವಲ್ಪ ಮಾರ್ಪಾಡಿನೊಂದಿಗೆ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸಾಳ್ವಕವಿಯ ಈ ಕಾವ್ಯದ ಆದ್ಯ ಸಂಪಾದಕರಾದ ಪ್ರೊ.ಹಂಪನಾ ಅವರಿಗೆ ನಾನು ಆಭಾರಿಯಾಗಿದ್ದೇನೆ.

‘ರಸರತ್ನಾಕರಂ’ ಎಂಬ ಕೃತಿಯನ್ನು ೧೯೩೨ರಲ್ಲಿ ಶ್ರೀ ಎ.ವೆಂಕಟರಾವ್ ಮತ್ತು ಶ್ರಿ ಎಚ್. ಶೇಷ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ, ಮದ್ರಾಸು ವಿಶ್ವವಿದ್ಯಾಲಯದ ಕಡೆಯಿಂದ ಪ್ರಕಟವಾಗಿತ್ತು. ಅನಂತರ ಇತರು ಮೂರು ಪ್ರತಿಗಳ ಸಹಾಯದಿಂದ ಪ್ರೊ. ಎಚ್.ಕೆ. ನರಸಿಂಹೇಗೌಡರು ಪಾಠಾಂತರಗಳೊಂದಿಗೆ ಈ ಕೃತಿಯನ್ನು ಸಂಪಾದಿಸಿದರು. ಇದು ೧೯೭೨ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಡೆಯಿಂದ ಪ್ರಕಟವಾಯಿತು. ಇದನ್ನು ಆಧರಿಸಿ ಈ ಜನಪ್ರಿಯ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ. ಈ ಕೃತಿಯ ಆದ್ಯ ಸಂಪಾದಿತ ರತ್ನತ್ರಯರಿಗೆ ನಾನು ಆಭಾರಿಯಾಗಿದ್ದೇನೆ.

ಸಾಳ್ವಕವಿಯ ‘ಶಾರದಾವಿಲಾಸಂ’ ಎಂಬ ಉಪಲಬ್ಧ ಅಪೂರ್ಣ ಕೃತಿಯನ್ನು ಹಿಂದೆಲ್ಲ ‘ರಸರತ್ನಾಕರಂ’ ಕೃತಿಯ ಅನುಬಂಧವಾಗಿಯೇ ಅಚ್ಚು ಮಾಡಲಾಗುತ್ತಿತ್ತು. ಆದರೆ ಓದುಗರ ಗಮನವನ್ನು ವಿಶೇಷವಾಗಿ ಸೆಳೆಯುವುದಕ್ಕಾಗಿ ಕವಿಯ ಮೂರನೆಯ ಕೃತಿಯ ರೂಪದಲ್ಲಿ ಪ್ರತ್ಯೇಕವಾಗಿ ಇಲ್ಲಿ ಮುದ್ರಿಸಲಾಗಿದೆ.

ಸಮಗ್ರ ಕನ್ನಡ ಜೈನ ಸಾಹಿತ್ಯದಲ್ಲಿ ಪ್ರಕಟಿಸುವ ಹೊಣೆಹೊತ್ತಿರುವ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು, ಈ ‘ಸಾಳ್ವ ಸಂಪುಟ’ವನ್ನು ಸಿದ್ಧಪಡಿಸಿ ಕೊಡಲು ಸದಾವಕಾಶ ನೀಡಿದ್ದಕ್ಕಾಗಿ ಅವರಿಗೆ –

ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಾ, ಮುದ್ರಣದ ವ್ಯವಸ್ಥೆಯನ್ನು ತುಂಬ ಶ್ರದ್ಧೆಯಿಂದ ಮಾಡಿರುವ, ಉತ್ಸಾಹದ ಚಿಲುಮೆಯಂತಿರುವ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಅವರಿಗೆ-

ವಿಶೇಷವಾಗಿ ಈ ಯೋಜನೆಯನ್ನು ಪಾಲ್ಗೊಳ್ಳಲು ಪ್ರೇರಣೆ ನೀಡಿ, ಸಹಾಯಕ ಸಾಮಗ್ರಿಗಳನ್ನು ಒದಗಿಸಿ ಪ್ರೋತ್ಸಾಹಿಸಿದ ಆತ್ಮೀಯರೂ ಹಿರಿಯರೂ ಆದ ಡಾ.ಹಂಪ. ನಾಗರಾಜಯ್ಯ ಅವರಿಗೆ –

ಅಕ್ಷರ ಜೋಡಣೆ ಮಾಡಿಕೊಟ್ಟು ಶೀಘ್ರವಾಗಿ ಅಂದ ಚಂದವಾಗಿ ಗ್ರಂಥವನ್ನು ಮುದ್ರಿಸಿರುವ ಬೆಂಗಳೂರಿನ ಲಕ್ಷ್ಮಿ ಮುದ್ರಣಾಲಯದ ಮಾಲೀಕರಿಗೆ-

ನನ್ನ ಅನಂತಾನಂತ ವಂದನೆಗಳು.

ಡಾ. ಎಂ.ಎ. ಜಯಚಂದ್ರ