ಸಂಧಿ ೧೭

ಅರಸಗೊಪ್ಪುವ ಚಾರುದತ್ತನ | ತೆರನ ಸಂಕ್ಷೇಪದಲಿ ವೀಣೆಯ |
ಗುರು ಖಚರಿ ಗಂಧರ್ವದತ್ತೆಯ ಖತದಿ ಪೇಳಿದನು || ಪದ ||

ಕೇಳು ಶ್ರೇಣಿಕ ಮಂಡಲೇಶ್ವರ | ಹೇಳುವೆನು ವಸುದೇವನೆಂದನು |
ಪೇಳಿಮೆಲೆ ಗಂಧರ್ವ ವಿದ್ಯಾಚಾರ್ಯ ನೃಪಸುತರು ||
ಮೇಳೈಸಿ ವೀಣೆಯನು ಕಲಿವ ಚ | ಡಾಳವೇನತ್ತಾರ ಸಖಿಯರೋ |
ಸಾಲುವೀಣೆಯ ನೊಯುದೆನೆನೇ ಪೇಳ್ದರಾ ತೆರನ || ೧ ||

ಅರಸ ಕೇಳೀ ಹರವು ಚಂಪಾ | ಪುರವಿದರಪತಿ ವಿಮಲವಾಹನ |
ಧರಣಿಪತಿಯವನರಸು ವರಧನು ಚಾರುದತ್ತಾಖ್ಯಾ ||
ದೊರೆವಡೆದ ಸಿರಿವಂತನಾತನ | ವರತನುಜೆಗಂಧರ್ವದತ್ತೆಯು |
ತರುಣಿಯರ ಸೀಮಂತಮಣಿ ಚೆಲುವಿನಲಿ ಭಾಗ್ಯದಲಿ || ೨ ||

ಚತುರೆ ವೀಣಾವಾದ್ಯದಲಿ ಭಾ | ರತಿಯ ಖಡ್ಡಿಗೆ ಬಗೆಯಳವನೀ |
ಪತಿಸುತರಣಮೆಣಿಸಲ್ವಿದ್ಯೆಯಲಿ ರೂಪಿನಲಿ ||
ಚತುರ ವೀಣಾವಾದ್ಯದಲಿ ವಿ | ಶ್ರುತನದಾವನು ತನ್ನಗೆಲಿದನೆ |
ಪತಿಯು ತನಗೆಂಬಾ ಪ್ರತಿಜ್ಞೆಯ ನೃಪಾಲ ಕೇಳೆಂದ || ೩ ||

ಒಪ್ಪುವಾಕೆಯ ತಂದೆ ತಿಂಗಳು | ದಪ್ಪದೀ ವೀಣಾಸ್ವಯಂವರ |
ಒಪ್ಪಿಸುವನಖಿಳಾವನೀಶ ತನೂಭವರು ಸೋತು ||
ದರ್ಪಕನ ಪೂಗೋಲ ಘಾಯದಿ | ಕುಪ್ಪಳಿಸಿ ಹಿಂಗುವರೆಲೇ ಕಂ |
ದರ್ಪ ಸಮ ಕೇಳಿದು ನಿಮಿತ್ತವಿದೆಲ್ಲದಱಿಯೆಂದ || ೪ ||

ಹರದನಾತ್ಮಜೆಗೀ ಸೊಬಗು ಸೌಂ | ದರತೆ ವಿದ್ಯಾಗೌರವವು ಮಿಗೆ |
ದೊರಕಲಱಿಯದು ರಾಜಸುತೆಗಲ್ಲದೆಯಿದೇನೆಂದು ||
ಅರಸನದನೇ ತನ್ನ ಮನದೊಳು | ಪರಿಕಿಸುತ್ತಿರೆ ಯಿಂಗಿತದಿ ಕಂ |
ಡರಿದು ಸುಗ್ರೀವಾರ್ಯನೆಂದನು ಕುವರಗಾತೆಱನ || ೫ ||

ಅರಸ ಕೇಳೈ ನೀನೆ ಮನದೊಳು | ಪರಿಕಿಪಂದದಲಾ ಕುಮಾರಿತಿ |
ಹರದನಾತ್ಮಜೆಯಲ್ಲ ವಿದ್ಯಾಧರಕುಮಾರಿಯೆನೆ ||
ಹರದ ಸುತೆಯೆನೆ ಬಂದ ತೆರದನು | ವಿರಿಚಿಸಲೆ ಬೇಳ್ಪುದುಮೆನಲು ಬಂ |
ಧುರಗಭೀರ ಮೃದೂಕ್ತಿಯಲ್ಲಿ ಪೇಳಿದನು ಯಿಂತೆಂದು || ೬ ||

ಜನವಿನುತನಾ ಭಾನುದತ್ತನ | ತನುಜ ನೇಸರ ಚಾರುದತ್ತನು |
ಧನದ ಪೆಂಪನು ಪೊಗಳಲೇಂ ಬಹುವಸ್ತು ವಿಸ್ತರನು ||
ವನಜಮುಖಿ ದೇವಿಲೆಯೆನಿಪಳಾ | ತನ ಜನನಿ ಪಲಕಾಲ ವಿದ್ಯಾ |
ಧನವನತಿಗಳಿಸಿದನು ಪೆರತೊಂದರಿಯನಾ ಪರದ || ೭ ||

ಕೆಳೆಯರಾ ಹರಿಶಂಕ ಗೋಮುಖ | ಕಲಿವರಾಹಕನಾಪರಂತಪ |
ಚೆಲುವನಹ ಮರುಭೂತಿಯೆಂಬವರವನ ತತ್ಪುರದ ||
ಅರಸನೊಪ್ಪುವ ಸಚಿವ ತನುಜರು | ಇರುತಿರಲು ಮತ್ತೊಂದು ದಿನವಾ |
ಪುರದ ಪೊರಗೆಸೆವಂಗಮಂದಿರವೆಂಬ ನಗರದೊಳಗೆ || ೮ ||

ಉರುಪಿಕರ್ಮಾಷ್ಟಕವನಿರೆ ಯಮ | ಧರಮುನೀಂದ್ರರು ಮುಕ್ತಿಗೈದರು |
ಪರಮ ಭಕ್ತಿಯಲಾಪ್ರದೇಶದ ಪೂಜಿಸಲೆ ಬಗೆದು ||
ವರ ವಿಮಲ ವಾಹನ ನೃಪಾಲನು | ನೆರಹಿ ಭವ್ಯರ ಯಾತ್ರೆಯನು ಮಿಗೆ |
ಹರುಷದಿಂದಾ ಭಾನುದತ್ತನು ಕೂಡಿಯೈದಿದರು || ೯ ||

ಪೋಗುತಿರಲಾ ಚಾರುದತ್ತನು | ಆಗಳ ನಿಜಸಖರು ಸಾಸೋಬ |
ಗಾಗಿ ಬೆಂಬಳೆ ಬರುತಿರಲು ಕಿರಿದಂತರದಿ ಕಂಡು ||
ರಾಗದಿಂದಾ ಭಾನುದತ್ತನು | ಹೂಗಣೆಯಗೆಣೆ ಮಗನೆ ಇವರೊಡ |
ನೀಗಳೂರಿಗೆ ಹೋಗುತ ……………… || ೧೦ ||

ಇಂಬುವಡೆದಾ ರಜತವಾಳುಕಿ | ಯೆಂಬ ನದಿಯುಪವನದ ಕುಸುಮ ತೊ |
ಡಂಬೆಗಳನಾಯ್ದರುಹ ಪೂಜೆಗೆ ಕಳುಹಿ ಪೋಗೆನಲು ||
ನೀಂ ಬೆಸಸಿದಂತಾಗಲೆಂದು ಮ | ನಂಬಯಸಿ ಸಖರೊಡನೆ ರಾಗವ |
ಳುಂಬವಾಗಿರೆ ಪೋಗಿ ಕಂಡನು ನದಿಯ ಚೆಲುವಿಕೆಯ || ೧೧ ||

ವಿನುತ ಸಖರೊಡನೈದಿ ತನ್ನಡಿ | ಯನು ನಿರೀಕ್ಷಿಸಿ ಚಾರುದತ್ತನು |
ವನಜತಂಡದ ಬಂಡುವಿಂಡಿನ ಕೂಡೆ ರಾಯಂಚೆ ||
ಬಿನದದಿಂದೆಡೆಯಾಡುತಿಹ ಚೆಲು | ವನು ಗರುಡ ಗಾಂಧರ್ವ ಕಿನ್ನರ |
ನನುನಯದ ಕೇಳಿ ಪ್ರದೇಶವ ಕಂಡು ಮೆಚ್ಚಿದನು || ೧೨ ||

ಅದರತಡಿಯೊಳಗೊಂದಶೋಕೆಯ | ಸದನದೊಳು ಕಮ್ಮನೆಯ ಪೂವನೆ |
ಗುದುರುಗತ್ತುರಿ ಕಪ್ಪುರಕೆ ಕೆಲರುಗುಳ್ದ ತಂಬುಲಕೆ ||
ಮದವಳಿ ಝೇಂಕರಿಸುತಿರೆ ಮೇ | ಳದ ಕೆಳೆಯರಿಗೆ ಸುರತ ಗೃಹವೆಂ |
ದದನೆ ತೋರುತೆ ಮುಂದೆ ಪೋಪನಿತರೊಳದೊಂದೆಡೆಯ || ೧೩ ||

ಮರನ ಕೊಂಬಿನೊಳೋರ್ವ ಬಿಜ್ಜಾ | ಧರನು ಕಟ್ಟಿಸಿ ಕೊಂಡು ಪಿಡಿದೊ |
ತ್ತರವದೊತ್ತಿದವೊಲು ನುಡಿಯ ಸುರತಮಂಟಪವ ||
ಪಿರಿದು ನೋಡುತ್ತಿರಲು ಕಂಡ | ಚ್ಚರಿವಡುತ ಹರಿಶಂಖ ಮುಖ್ಯ ಸ |
ಖರಿಗೆ ಪೇಳ್ದನು ಖಗನ ಕಂಣೆರಗಿರ್ದ ತಾಣದಲಿ || ೧೪ ||

ಇರಲು ಬೇಕೇನಾನುವೆಂದೈ | ತರಲು ಪೂವಸೆಗೆಲದೊಳವವುಂ |
ನಿರಿಸಿದಸಿ ಖೇಡೆಯವಿರಲು ತೆಗೆಕೊಂಡು ನೋಡುತಿರೆ ||
ಹೊರೆಯೊಳಗೆ ಕಟ್ಟಿರ್ದಗಂಡನು | ಹರದಸುತ ಬಿಡೆಗುಳಿಗೆಯಿರೆ ಕಂ |
ಡುರು ಕಲಾವಿದನಪ್ಪುದರಿನಿಂತೆಂದನೆಲೆ ಭೂಪ || ೧೫ ||

ಗುಳಿಗೆಯಿದು ಆ ಖಗನ ಕಟ್ಟನು | ಕಳೆವ ಮದ್ದಾದಪುದೆನುತ ಅದ |
ಕಳೆದುಕೊಂಡಾ ಮರವನೇರಿ ವಿಯೆಚ್ಚರನ ಬಾಯ್ಗೆ ||
ಗುಳಿಗೆಯಿಕ್ಕಲು ಕಟ್ಟು ಬಿಟ್ಟಾ | ಗಳಿಗೆಯಲೆ ನೀನಾರೆನಲು ತಾ |
ನೊಲಿದು ಪುರಪಿತೃ ತನ್ನ ತೆರನೆಲ್ಲವನು ಪೇಳಿದನು || ೧೬ ||

ಹೇಳಲಾ ವಿದ್ಯಾಧರನು ಮಿಗೆ | ಕೇಳಿದನು ಪ್ರಾಣೋಪಕಾರಕೆ |
ಹೇಳದೆಲ್ಲಿಯುಮುಂಟೆ ಪ್ರತ್ಯುಪಕಾರಮೆನಗಿಂದು ||
ಮೇಳಿಸಿದ ದುಷ್ಕೃತಫಲದ ನೋಡೆ | ಜಾಳಿಸುವ ಮತ್ಸುಕೃತ ಪುಂಜವೆ |
ಹೇಳಲೆನ್ನೀ ವಾದಿಯೆಂದಿಂತೆಂದ ತನ್ನಿರವ || ೧೭ ||

ಉಸುರ್ವಡೀ ವಿಜಯಾರ್ಧ ದಕ್ಷಿಣ | ದೆಸೆಯೊಳಗೆ ಶಿವಮಂದಿರವು ಪೊಳ |
ಲೆಸೆವ ದೇಶ ಮಹೇಂದ್ರ ವಿಕ್ರಮಿತಂದೆತಾಯ್ವತ್ಸೆ ||
ಪೆಸರ ಮಗನಾನಮಿತಗತಿ ತ | ನ್ನಸುವೆನಿಪ ವಲ್ಲಭೆಗೆಳಸಿ ಕೂ |
ರಿಸಿದರೆನ್ನೊಳು ಗೌರಿಮಂಡಸಿ ಖಂಡನೆಂಬವರು || ೧೮ ||

ಅವರು ಸಹವಾನಳ್ತಿಯಲಿ ಸಂ | ಭವ ಜಿನೇಶ್ವರ ತೀರ್ಥವಂದನೆ |
ಗವತರಿಸಿ ಮರಳುತ್ತ ಪೋಪಳು ವೆರಸಿನಾನಿಲ್ಲಿ ||
ಎವೆದೆರೆಯದೊರಗಿರಲು ತನ್ನಾ | ಯುವತಿಯನು ಅವರೊಯ್ದರೆನ್ನನು |
ಜವದಿ ಕೀಲಿಸಿಮೋದರೆಂದನು ಚಾರುದತ್ತಂಗೆ || ೧೯ ||

ಅಸುವನಿನ್ನೆಗೆ ಬಿಡುವಳಾವುದು | ಉಸುರಲಿನ್ನೆಡೆಯಿಲ್ಲೆ ನೀ ಕೊ |
ಟ್ಟಸುವಿದಾನಾ ಖಳರ ಬೆಂಬತ್ತುವೆನೆನುತ ತನ್ನ ||
ಮಸೆದ [ಕರವಾಳನು ಪಿಡಿದು] ಆ | ಗಸಕೆ ಪಾರಿದನತ್ತಲಿತ್ತಲು |
ಒಸೆದು ಕೊಂಡಾಡಿದರು ಮಿತ್ರರು ಚಾರುದತ್ತನನು || ೨೦ ||

ಮೆಟ್ಟಿದೆವು ವಿದ್ಯಾಧರಗೆ ಬಂ | ದಚ್ಚುಗುವ ಕಂಡೊಡಲೆ ನಿಂದಸು |
ವಿಚ್ಚದಂದದಲವನ ಪುಣ್ಯವೆ ಮೂರ್ತಿಯಾದಂತೆ ||
ನಿಚ್ಚಟನೆ ನೀನವನ ಬಂಧನ | ಬಿಚ್ಚುವೀಗಳಿಗೆಗಳ ಕಂಡುದೆ |
ಅಚ್ಚರಿಕಣಾಯೆಂದು ಕೊಂಡಾಡಿದರು ನಿಜಸಖರು || ೨೧ ||

ಅಲರ್ದಡವಿವೂಗಳನು ಬನದು | ಳ್ಳಲರನೆಲ್ಲವನಾಯ್ದು ಕಳುಹಿದ |
ನೊಲಿದು ತಂದೆಯ ದೇವಪೂಜೆಗೆ ಬಳಿಕ ನಿಜಪುರವ ||
ಕೆಳೆಗಳೆರೆಯನು ತನ್ನ ಮೇಳದ | ಕೆಳೆಯರೊಡನೈತಂದು ನಿಜಗೃಹ |
ದೊಳಗೆ ಸುಖದಿಂದಿರ್ದನಾ ಚಾತುರ್ಯ ಚತುರಾಸ್ಯ || ೨೨ ||

ಚಂದಮೊಗದೊಳು ಮೊಗೆವ ಮೀಸೆಯು | ಚಂದದೊಪ್ಪುವ ಚಾರುದತ್ತನ |
ನೊಂದು ದಿನವಾ ಭಾನುದತ್ತನು ದೇವಿಲೆಯು ತಮ್ಮ ||
ಕಂದನಾನನ ಚಂದ್ರಮನನಾ | ನಂದದಲಿ ನಡೆನೋಡಿ ದೇವಿಲೆ |
ಗೆಂದನೆಲೆ ನಿನ್ನಣ್ಣ ಸಿದ್ಧಾರ್ಥನ ಕುಮಾರಿಯನು || ೨೩ ||

ಯುವತಿ ಮಿತ್ರಾವಳಿಯ ನೆಮ್ಮಿ | ಕುವರನೊಳು ಪಾಣಿಗ್ರಹಣವನು |
ಸವುಣಿಸಲೆ ಬೇಕೆಂದು ಸುಮುಹೂರ್ತದಲಿ ಪೇಳಿದನು ||
ಅವರಿಗುದ್ವಾಹವನೊಡರ್ಚಿಸೆ | ವಿವಿಧ ವಿದ್ಯಾಭ್ಯಾಸಲಂಪಟ |
ನವಳೊಡನೆ ರತಿರಾಗದಂದಿರಲೊಲ್ಲದಿರಲರಿತು || ೨೪ ||

ಚಾರುದತ್ತಗೆ ಪೆಣ್ಣ ಸೌಖ್ಯದ | ಸಾರವರುವುದ ಮಾಡಬೇಕೆಂ |
ದಾರೈದು ದೇವಿಲೆಯ ಪುತ್ರನಕೆಳೆಯರಿಗೆ ಹೇಳೆ ||
ವಾರನಾರಿ ವಸಂತತಿಲಕೆಗೆ | ಭೂರಿವಸ್ತುವನಿತ್ತು ಕೆಳೆಯರು |
ಚಾರುದತ್ತನನೊಂದು ನೆವದಿಂದೊಯ್ದು ನೆರಪಿದರು || ೨೫ ||

ಮುರುಕಮೆಳೆನಗೆ ಸವಿಮುನಿಸು ಮೈ | ಮರೆಪು ಯೆಚ್ಚರು ಮೇಳವೈಸಿಕ |
ವಿರಹ ಮೋಹನಲಲ್ಲೆ ಚಲ್ಲವು ಹದುರು ಚದುರುಗಳು ||
ಬೆರಗು ಚುಂಬನ ವಪ್ಪು ಸೀತ್ಕೃತ | ವೆರಗ ಜಾಣ್ಣುಡಿ ನೋಟ ಬೇಟವು |
ನೆರೆ ಸೊಬಗಿಯೀ ಸೊಳೆವಿನ್ನಣದೋರೆ ಸಿಲುಕಿದನು || ೨೬ ||

ಮನೆಯ ಹಂಬಲ ಮರೆದ ಕೆಳೆಯರ | ನಿನಿಸು ನೆನಸನು ತಂದೆ ತಾಯ್ಗಳ |
ಕನಸಿನಿಂ ಕಂಡರಿಯನವಳಿಂದುಟಿಯುಣಿಸೆ ಉಳಿಸು ||
ತನಗೆನಿಸಿ ಒಡನುಂಡು ಒಂದೇ | ಮನವೆನಿಸಿ ನೆರೆ ಮಚ್ಚಮಚ್ಚಿದ |
ಳಿನಿಯಳಾತನನಲ್ಲ ದೀಕ್ಷಿಸಲುಳಿದ ನಲ್ಲರನು || ೨೭ ||

ಬೆಚ್ಚಿ ಮೈಸಡಿಲದೆ ಸುರತ ಸುಖ | ದಿಚ್ಛೆಯುಂ ಮೈಯರಿಯದೀರ್ವರು |
ಮರ್ಚಿರಲು ಮೆರೆವಾ ವಸಂತತಿಲಕೆಯ ತಾಯೆಂದು ||
ನಿಚ್ಚ ಸಾಸಿರ ಪೊಂಗಳೊತ್ತಗೆ | ಪೆಚ್ಚಿ ಪರ್ವಕೆ ಪತ್ತು ಸಾವಿರ |
ವಿಚ್ಚೆಯಿವಗುಳ್ಳಂನೆವರ ಸಲೆಕೊಟ್ಟು ಬಹುದೆಂದು || ೨೮ ||

ಕಳುಹೆ ಬಂದಾದೂತೆಯರು ದೇ | ವಿಲೆಗೆ ಪೇಳಲು ಮಗನನವಳಿರ |
ದೊಲಿಸಿದಳಲಾಯೆಂದು ಸಂತಸಮತ್ತು ಬೇಳ್ಪನಿತ ||
ಲಲನೆತನಯನ ವೆಚ್ಚಕೊಳ್ಳದ | ನಲಸದೀವುತಲಿರುತಿರಲು ಧನ |
ವಿಳಿದು ಪೋಪುದ ಕಂಡು ಕಂಡಾ ದೇವಿಲೆಯಗಂಡ || ೨೯ ||

ಕಾಕು ವ್ಯಸನವ ಮಗಗೆ ಕಲಿಸಿದ | ಳೀಕೆ ಧನವನು ಕೆಡಿಸುತಿಹಳಿಂ |
ನೇಕೆಮಗೆ ದಂದುಗವೆನುತ ಧನವರ್ಧ ಪೋಯ್ತೆನಲು ||
ಶೋಕಿಸದೆ ತಾ ಭಾನುದತ್ತ ವಿ | ವೇಕಿ ಜಿನದೀಕ್ಷೆಯನು ಕೊಂಡನು |
ಆಕೆ ನಿಜಸುಖವಳ್ತಿಗರ್ಥವನೀಬುತಿಂತಿರಲು || ೩೦ ||

ವರುಷ ಮೂವತ್ತೆರಡು ಕೋಟಿ | ಪ್ರಮಿತ ಧನವದು ಕರಗಿ ಪೋಗಲು |
………………………………. ||
ಪರರ್ಗೆಮಾರಿದ ಧನವನಿಳು ಅರ | ವರಿಸದಾ ದೇವಿಲೆಯು [ಪೋದುದ] |
ನರಿದು ತನ್ನೊಳಗೆಂದಳಾ ಪಣ್ಯಾಂಗನೆಯ ತಾಯಿ || ೩೧ ||

ಹಣವು ತೀರಿದ ಬಳಿಕಲಾವನು | ಹೆಣನೆಯೀವಗಳವನ ಮೆಚ್ಚಿಹು |
ದೆಣಿಕೆಯಲ್ಲೆಂದೋವದೆಳೆನೀರಿನೊಳು ಪೊಕ್ಕೂಡಿ ||
ಗಣಿಕೆಯಟ್ಟಲು ಚಾರುದತ್ತನು | ಎಣಿಸದೊಲಿದು ವಸಂತತಿಲಕೆಯು |
ತಣಿಯ ಪೀರ್ದೊರಗಿದರು ಮೃದುಶಯ್ಯೆಯಲಿ ಮದಭರದಿ || ೩೨ ||

ನೆಟ್ಟನೊರಗಿದ ಚಾರುದತ್ತನ | ಕಟ್ಟಿಕೊಂಡಾ ಪೊಳಲ ಪೊರಗಣ |
ಬಟ್ಟೆಯೊಳು ಬಿಸುಡಿಸಿದಳಾ ರಾತ್ರಿಯೊಳು ಬಳಿಕವಗೆ ||
ಬಿಟ್ಟಹೋಗಲು ತಾಯಿ ಮೆಲ್ಲನೆ | ದಿಟ್ಟಿದೆರೆದು ವಸಂತ ತಿಲಕೆಯ |
ನಿಟ್ಟಿಸಿಯೆ ಕಾಣದೆ ವಿಕಲನಾದನು ವಣಿಗ್ವರನು || ೩೩ ||

ಏಳು ನೆಲೆಯುಪ್ಪರಿಗೆಯೆತ್ತೀ | ಕೀಳುದಿಪ್ಪೆಯಿದೆತ್ತ ಕರ್ಮವು |
ಮೇಳಿಸಿದ ಬೇಳಂಬವಲ್ಲದೆ ಬೇರೆ ಪೆರತಲ್ಲ ||
ಸೂಳೆ ಮೋಹವ ಮಾಡುವುದೆ ಗುಣ | ಸೂಳೆಯರ ತಾಯ್ದಿರಿಗಿದೇ ಗುಣ |
ಸೂಳೆಗೈದಂ ನಿಂದ ಖೂಳರು ಬೆರಗದಾರೆಂದ || ೩೪ ||

ಎಂದು ವಿಗತವಿಷಾದ ಚಿತ್ತದಿ | ಬಂದನಾ ನಿಜಗೃಹಕೆ ಬರಲೊಡ |
ನೆಂದರೀ ಬಹನಾರೆನಲು ವರಚಾರುದತ್ತನೆನೆ ||
ಮಂದಿರವ ಮಾರಿದಳು ದೇವಿಲೆ | ವಂದಿ ಸೊಸೆಸಹ ನಿಮ್ಮ ಮಾವನ |
ಮಂದಿರದೊಳಹಳೆನಲು ಕೇಳ್ದೈತಂದನಾ ಮನೆಗೆ || ೩೫ ||

ಜನನಿಯಡಿಗೆರಗಿದನು ಚಂದ್ರನ | ವನಧಿ ಕಂಡವೊಲಾಡಲಾಕೆಯು |
ವನಿತೆ ಮಿತ್ರಾವಳಿ ನಿಜಪ್ರಿಯ ನಂಗಧೂಳಿಯನು ||
ಮನ ಮುರುಕದಲಿ ಕಂಡೊಡೆನೆ ಮ | ಜ್ಜನವ ಮಾಡಿಸಿ ನಲ್ಲುಣಿಸಲಿ |
ಟ್ಟನುಪಮ ಸ್ನೇಹದಲಿ ಸಂತುಷ್ಟತೆಯ ಮಾಡಿದಳು || ೩೬ ||

ಎಂದು ಪೂಣ್ಕೆಯನಾಡುವಾಗಳು | ಬಂದನಾ ಸಿದ್ಧಾರ್ಥನೊಸೆದಿಂ |
ತೆಂದನೆಲೆ ಪದಿನೆಂಟುಕೋಟಿ ದ್ರವ್ಯವೆನ್ನಲಿದೆ ||
ಇಂದು ನೀಂ ತೆಗೆಕೊಂಡು ಮುನ್ನಿನ | ಚಂದದಲಿ ಎಲೆ ಅಳಿಯ ನಿಮ್ಮಯ |
ಮಂದಿರದೊಳಿರಿ ಎಂದು ಫಲವಂದದಲಿ ಪೇಳಿದನು || ೩೭ ||

ಬಡತನವು ಬಂದಾಗ ಬಂಧುಗ | ಳೊಡವೆಯನು ಕೈಕೊಂಡು ಬಾಳ್ವುದೆ |
ಸುಡುಸುಡಾ ಬದುಕುಮನೆನಲು ನಿಜಭಂಡ ಮೊದಲಿಂಗೆ ||
ಪಡೆದನವನೆನಲವುಷಧಂಗಳು | ಅಡವಿಯೊಳು ಗುಹೆಗಳೊಳು ರತ್ನವು |
ಕಡಲ ತಡಿ ಬನದಲ್ಲಿ ಚಂದನವಿಲ್ಲವೇಯೆಂದ || ೩೮ ||

ನೆರೆಸಕಲ ಕಲೆಗಳನು ಬಲ್ಲವ | ನೆರಗಿ ಬೀಳ್ಕೊಂಡನು ಜನನಿಯನು |
ಮರುಗುವಾ ಮಡದಿಯನು ಸಂತೈಸಿದನು ಮಾವಂಗೆ ||
ಎರಗಿ ಕಳುಹಿಸಿಕೊಂಡು ಧೈರ್ಯದ | ನೆರೆವಣಿಗೆಯಿಂ ತೆಂಕದಿಕ್ಕಿಂ |
ಗರುವ ಹರದನು ಚಾರುದತ್ತನು ನಡೆದನೊಲವಿನಲಿ || ೩೯ ||

ಅಳಿಯ ಪಯಣಂ ಬೋದನೇ ಬೆಂ | ಬಳಿಯಲಾ ಸಿದ್ಧಾರ್ಥಸೆಟ್ಟಿಯ |
ಘಳಿಲನೈತಂದೊಂದು ಗೂಡಿರಲೀರ್ವರುಂಟಾಗಿ ||
ಬೆಳೆದ ಭೀಮಾಟವಿಯೆಡೆಯೊಳು | ಜ್ವಳ ಸುಗಂಧ ದ್ರವ್ಯ ಮೂಲಿಕೆ |
ಗಳನರಸಿ ಹೊರಗಟ್ಟಿ ಹೊತ್ತು ಪಳಾಸಪುರವೈದೆ || ೪೦ ||

ಮಾರಿದಾ ಪೊಂಗಳಿಗೆ ಹತ್ತಿಯ | ಹೇರುಗಳ ತಂದಡಿವಿಯೊಳಗಿಡ |
ಲೂರಿ ಕಾಳ್ಗಿಚ್ಚದನು ನುಂಗಲು ಗುಹೆಗಳನು ಹೊಕ್ಕು ||
ಕೀರಿ ರನ್ನಂಗಳ ಪಡೆದು ಬರೆ | ತಾರಲೊತ್ತಿನ ಶಬರರಿಂದದು |
ಸೂರೆವೋದುದು ದ್ರವ್ಯವಾರಿಗೆ ಕೆಡದು ಕೇಳೆಂದ || ೪೧ ||

ಪಿರಿದು ಬಳಲಿಕೆಯುಂ ಪ್ರಿಯಂಗುನ | ಗರವ ಪೊಕ್ಕನು ವಾಸುದತ್ತನ |
ಪರದರೆರೆಯನ ಹಡಗುಗಾಹಿ ಸುರೇಂದ್ರದತ್ತಾಖ್ಯ ||
ಹರುಷದಿಂದವರೀರ್ವರನು ಕಂ | ಡಿರದೆ ವಿಸ್ಮಯ ಮುತ್ತು ಬಳಿಕೀ |
ರ್ವರನು ನಿಜ ಗೃಹಕೈದನತಿ ವಿಯನದಲಿ ಕೇಳೆಂದ || ೪೨ ||

ಸ್ನಾನಭೋಜನಗಳನು ಮಾಡಿಸಿ | ಏ ನಿಮಿತ್ತದಿ ಬಂದರಿವರೆಂ |
ಬಾನಿಬುದ್ಧಿಯನರಿದುಯೆನ್ನಯ ಧನವೆನಿತನನಿತ ||
ನೀನು ಕೊಳ್ಳೆನೆ ನನ್ನ ಧನವನು | ತಾನೆ ಒಲ್ಲದೆ ಬಂದೆನೆಂದಾ |
ಮಾನನಿಧಿ ಸಿದ್ಧಾರ್ಥಶೆಟ್ಟಿ ಸುರೇಂದ್ರದತ್ತಂಗೆ || ೪೩ ||

ಎನಲು ಬಳಿಕಾ ಚಾರುದತ್ತನು | ವನಧಿಯಾತ್ರೆಗೆ ನೆರೆಸಹಾಯರ |
ನೆನೆಗೆ ಸಂಬಂಧಿಸಿಕೊಡುವುದೆನೆ ಸುಮುಖವೆಂಬವನ ||
ವಿನುತನೊಪ್ಪಿಸಿ ಕೊಟ್ಟು ತಾಂ ಪೋ | ದನು ಬಳಿಕಲಾ ಚಾರುದತ್ತನ |
ಘನಕುಶಲಧೈರ್ಯಕ್ಕೆ ಮೆಚ್ಚಿದರಾ ಪಡಗಿನವರು || ೪೪ ||

ಮೆಚ್ಚಿದ ಶೆವಂದವನು ಕುಡೆಪಡೆ | ದಿಚ್ಛೆಯಿಂದಾ ಧನಕೆ ಬಂದವ |
ವೆಚ್ಚತಂ ಕೊಂಡಖಿಳ ದೀಪಂಗಳಲಿ |
ನಿಚ್ಚವುದಿದನ್ನೆರಡು ವರುಷಕೆ | ಬಿಚ್ಚತಂ ಬತ್ತೀಸ ಕೋಟಿ ಸ |
ಮುಚ್ಚಯದ ಧನವನು ಗಳಿಸಿದನು ಭೂಪಕೇಳೆಂದ || ೪೫ ||

ಪಡೆದ ಧನವಿಂ ನಿಮ್ಮಡಿಯ ಧನ | ಗೊಡುವ ಸರಕನು ಕೊಂಡು ತುಂಬಿಸಿ |
ಹಡಗ ನೇರಿಯೆ ಬರುತಿರಲು ಕಡಲದ್ದಳವು ತೋರೆ ||
ಪಡಗು ಮುಳುಗುವ ಸಮಯದಲಿ ಕಂ | ಗೆಡದೆ ಸಿದ್ಧಾರ್ಥನ ಕರೆದು ಸಂ |
ಗಡವೆರಡು ಎದೆವಲಗೆಯೇರಿದರರಸ ಕೇಳೆಂದ || ೪೬ ||

ಅನಿತರೊಳಗಾ ಪಡಗುಮುಳುಗಿತು | ವನಧಿಯೊಳು ಮೈವಳಿಯ ತೇಲುತ |
ಜನವದಿಲ್ಲದದೊಂದು ಕುರುವವಸಾರ್ದು ಮೂರುದಿನ ||
ವಿನುತನಿರ್ದನು ಚಾರುದತ್ತನು | ಅನಿಲ ವಸದಿಂದಂಬರಾವತಿ |
ಯೆನಿಪ ಪೊಳಲನು ಸಾರ್ದಿಳಿದನೆಲೆಭೂಪ ಕೇಳೆಂದ || ೪೭ ||

ನಿನ್ನವೊಲು ಸಿದ್ಧಾರ್ಥನೆಂಬವ | ಮೊನ್ನೆ ಬಂದನು ಚಂಪೆಯೊಳಗಿಹ |
ಚೆನ್ನವಿಭವದ ಭಾನುದತ್ತನ ಮೈದುನನು ಇಲ್ಲಿ ||
ತಾಂ ನಿಲ್ಲದೆ ಆ ಸಿಂಧು ದೇಶೋ | ತ್ಪನ್ನ ಶಂಬರಪುರಿಗೆ ಹೋದನು |
ತನ್ನ ಕಾರ್ಯ ನಿಮಿತ್ತವೆಂದುದು ತತ್ಪುರದ ಜನವು || ೪೮ ||

ನಾನು ಅವರಳಿಯನು ಎನಲ್ಕಾ | ಭಾನುದತ್ತನ ಅಲ್ಲಿ ನಿಲಿಸಿದ |
ದಾನಸಾಲಾಧ್ಯಕ್ಷ ನೈತಂದತಿ ವಿನಯದಿಂದ ||
ಭೂನುತನ ನೊಡಗೊಂಡು ಪೋಗಿ | ಸ್ನಾನ ಭೋಜನಗಳನು ಮಾಡಿಸಿ |
ತಾನು ಸಹವಾ ಶಂಬರ ಗ್ರಾಮಕ್ಕೆ ನಡೆತರಲು || ೪೯ ||

ಚಾರುದತ್ತನ ಕಾಣುತೊಪ್ಪುವ | ಚಾರುಗುಣಿ ಧನದತ್ತ ಸೆಟ್ಟಿಯು |
ಸಾರವಿನಯದಿ ನಿಜಗೃಹಕೆ ಕರಕೊಂಡುಣಿಸಿಗೆ ||
ಚಾರುದತ್ತನೆ ನಿಮ್ಮ ಪಿತೃ ಕೈ | ಯಾರೆಯಿರಿಸಿದ ಧನವು ನನ್ನಲಿ |
ಆರಯಲುಯಿದೆ ಎಂಟುಕೋಟಿಯು ತೆಗೆದುಕೊಳ್ಳೆಂದ || ೫೦ ||

ಮೊದಲು ಮೂವತ್ತೆರಡು ಕೋಟಿ | ಪ್ರಮಿತಧನವನು ಕೆಡಿಸಿ ನಿಮ್ಮಯ |
ಸದನದಲಿ ನಮ್ಮಯ್ಯನಿರಿಸಿದ ಧನವ ಕೊಂಬುದಕೆ ||
ಪಡೆದು ಬಂದೆನೆ ನಮ್ಮ ಬೊಪ್ಪನು | ಮೊದಲು ಮಾಡಿಸಿದೆಲ್ಲ ವಸತಿಗೆ |
ಬುಧ ಜನಕೆ ನೀ ನೊಲಿದ ತೆರದಲಿ ಮಾಡು ಧರ್ಮವನು || ೫೧ ||

ಎಂದು ನಿಚ್ಚಯಗೆಯಿದ ಪರಧನ | ಮುಂದೆ ಕೊರಳೊಳು ಜನವು ಪೊಗಳಲು |
ಅಂದು ವೀರ ಪ್ರಭನೆನಿಪ ವೆಂತರಸುರನು ಕೇಳಿ ||
ಇಂದುದಾತ್ತತೆಯನು ತಿಳಿವಿತಾ | ನೆಂದು ಜಿನಗೇಹಾಂಗಣಾಗ್ರದ |
ಮುಂದೆ ಹೊಟ್ಟೆಯ ಶೂಲೆಯೆತ್ತಿಯೆ ಮಿಗೆ ಹೊರಳುತಿರ್ದ || ೫೨ ||

ಮುಂದೆ ವೈಕುರವಣದೊಲೋರ್ವನು | ನಿಂದು ಪರಿಚಾರಕನಳುತ್ತಿರ |
ಲಂದು ಬಸದಿಗೆ ಪೊಡವಡಲು ಬಂದಾ ಪರದರೆರೆಯ ||
ಒಂದು ಪರಿಯಲಿ ಪೊರಳುವಾತನ | ದಂದುಗವ ನೋಡುತ್ತೆ ಜಿನರಿಗೆ |
ವಂದಿಸಿದನಿಂದೇಕೆ ಹೊರಳುವೆ ಹೇಳು ಹೇಳೆಂದ || ೫೩ ||

ಏನನೆಂಬೆ ಮಾಹತ್ಮ ! ತನ್ನೀ | ಬೇನೆಯನು ಸೈರಿಸುವಡರಿದೆನೆ |
ಏನು ಮದ್ದುಗಳೆಂದು ದೆಸೆಯಿಂದುಳ್ಳೊಡುಸುರೆನಲು ||
ದಾನಿಯಾದೊಡೆ ಪೇಳ್ವೆನೊಂದೆನ | ಮಾನವನ ಬರಿಯಡಗು ಶೇಕದಿ |
ಬೇನೆ ಮಾಣವುದಲ್ಲದಿರಿದಾಂ ಸಾವೆ ದಿಟವೆಂದ || ೫೪ ||

ಎನಿತು ಘನವಾದೊಡಮಿದೇನಪ | ಘನಮೆ ನುಕೆಡು ವೊಡವೆ ಯದೆಯೋ |
ರ್ವನ ವಿಪತ್ತನು ತೊಲಗಿಪುದು ಗಡವೀವುದೇನರಿದೆ ||
ಎನುತೆ ಮನದೊಳು ನೆನೆದು ನಿಂದೋ | ರ್ವನ ಸುರಗಿಯನು ಕೊಂಡು ಕಡು ಭೋಂ |
ಕನೆಯಿಱಿದು ತನ್ನಯ ಬರಿಯ ಕಂಡವನು ಕೊರೆದಿತ್ತ || ೫೫ ||

ಇತ್ತು ಪೋಗುತಿರಲ್ಕೆ ಗೋಪುರ | ದೊತ್ತಿನಲಿ ಮೂಚ್ರ್ಛಿಸಿ ಒಱಗಿದನು |
ದಾತ್ತವೈಶ್ಯನುಮಾಗಳಾ ರೋಗವು ತೊಲಗಿದಂತೆ ||
ಮತ್ತಮಾ ವೀರಪ್ರಭುವನು ಬಂ | ದೆತ್ತಿದನು ಸಂಜೀವನೌಷಧ |
ವಿತ್ತು ಕೈಮುಗಿದೆಂದನಾ ನಿಜರೂಪಮಱೆತೋಱೆ || ೫೬ ||

ಇಂದು ನಿನ್ನ ಪರೋಪಕಾರತೆ | ಯಂದವನು ತಾನೋಡಲೀತೆಱ |
ದಿಂದ ಮಾಡಿದೆ ನೀನೆವೀರನು ವಿತರಣೋನ್ನತನು ||
ಎಂದು ನುತಿಯಿಸಿ ರತ್ನವೃಷ್ಟಿಯ | ನಂದು ಕಱೆದವ ಪೋಗೆ ಬಳಿಕಾ |
ಬಂದ ರತ್ನವನಖಿಲ ಪಾತ್ರಕೆ ಕೊಟ್ಟು ಬಱಿಕೆಯಿಂದ || ೫೭ ||

ಸಂದುದೀತಗುದಾರಗುಣಯೆಂ | ದೊಂದೆ ಕೊರಳಲಿ ಜನವೆ ಪೊಗಳಲು |
ಬಂದ ಸಿದ್ಧಾರ್ಥನನು ಧನದತ್ತನ ಬಳಿಯಲಿರಿಸಿ ||
ಅಂದು ತಾನೇಕಾಂತದಲಿ ನಡೆ | ತಂದು ಹೇಮಾಂಗದ ವಿಷಯದೊಳು |
ಸಂದರಾಜಪುರದ ಸಮೀಪದ ತಾಪಸಾಶ್ರಮದ || ೫೮ ||

ಪೊಕ್ಕನಾ ಕಲಿ ಚಾರುದತ್ತನು | ತಕ್ಕತಾಪಸ ಪೂರ್ಣಯಕ್ಷನ |
ಅಕ್ಕರಿಂ ಕಂಡೊಂದಿ ಬರೆ ಶಿವಮಸ್ತುಯೆಂದೊಡನೆ ||
ಎಕ್ಕಟಿಗ ನೀ ನೆತ್ತಣಿಂದೇ | ತಕ್ಕೆ ಎತ್ತಲು ಪೋಪೆಯೆನೆ ಮುನಿ |
ರೊಕ್ಕದಾಸೆಗೆ ಪರದುಗೈಯಲೆ ಪೋಪೆನಾನೆಂದೆ || ೫೯ ||

ಅಸಮ ಪೌರುಷನೀತನೆಂದಾ | ಋಷಿಯನರಿತು ತನ್ನಾಶ್ರಮಕೆ ಸಂ |
ತಸದಿನೊಡಗೊಂಡೈದಿ ಪಥದ ಬಳಲ್ಕೆಯನು ಕಳೆದು ||
ವಸುವಗಳಿಸುವುದರಿದೆ ನೀಂ ಚಿಂ | ತಿಸದಿರೊಂದಗ ನಿಕಟದೊಳಗದೆ |
ರಸದಬಾವಿಯು ನೀನುಮಾನುಂ ಹೋಗಿತಹ ರಸವ || ೬೦ ||

ಎಂದವನನೊಡಗೊಂಡು ಹೋದನು | ವಿಂಧ್ಯದೊಳು ನಡೆದೆಯಿದಿ ಕೂಪದ |
ಮುಂದೆ ನಿಂದೆಲೆ ಪರದ ಕೇಳಿದಗಾದು ನೀನಿಲ್ಲಿ ||
ನಿಂದಿರಾಂ ಬಾವಿಯ ನಿಳಿದು ತಹೆ | ನೆಂದಡಕ್ಕಟ ಭಕ್ತಿ ನಿಮಗಿ |
ಲ್ಲೊಂದನಿತು ಬೇಗದಲಿ ತಹೆನು ವಿಧಾನವೇನೆಂದ || ೬೧ ||

ಬೆದರದಿರು ಈ ನೇಣ ಪಿಡಿದಿಳಿ | ಹದುಳದಿಂ ನಿಲ್ಲೊಂದು ದಡದೊಳು |
ವಿದಿತಸಿದ್ಧರಸವನು ಕೈಮುಟ್ಟದೆ ಸೊರೆಯ ತುಂಬಿ ||
ಅದನು ಸೂಸದ ತೆರದ ಬಳ್ಳಿಗೆ | ಪುದುಗಿನೀಡಲು ಸೇದಿಕೊಂಬೆನು |
ಮುದದಿ ಹಗ್ಗವ ನಿಳಿಹಿ ನಿನ್ನನು ಸೇದಿತಹೆ ಬಳಿಕ || ೬೨ ||

ಎನಲದನು ಪೇಳ್ದಂತೆ ಬಾವಿಯ | ನನುವಿನಿಂದಿಳಿರಾ ರಸವನೊ |
ಯ್ಯನೆ ಮೊಗೆದು ನೀಡಿದೊಡೆ ತೆಗೆಕೊಂಡಿಳುಹೆ ಬಳ್ಳಿಯನು ||
ಅನಿತರೊಳು ಮುನ್ನಲ್ಲಿ ನೆರಳುವ | ಮನುಜನೊಬ್ಬನು ಕಂಡನಿನ್ನೇ |
ನನು ಹಿಡಿದು ನನ್ನಂತೆ ಕೆಡದಿರು ಬುದ್ಧಿಗೇಳೆಂದ || ೬೩ ||

ನೀನಿದಾರೈ ನಿನ್ನ ಬಂದಿರ | ವೇನೆನಲು ನಿನ್ನಂತೆ ಧನವನ |
ನೂನವನು ಪಡೆಯಲ್ಕೆ ಬರೆತಾಪಸನು ಬೇಳ್ಮಾಡಿ |
ಈ ನಿರಿಗೆಯಲಿ ರಸವನಿಡಿದೇ | ನಾನು ಪೋಪರೆ ಮಿಳಿಯ ಹಿಡಿದೆನು |
ನಾನು ಕಿರಿದಂತರದಿ ಮಿಳಿಯನು ಕೊಯಿದು ಕೆಡಹಿದನು || ೬೪ ||

ಮುರುಟಿದವು ರಸಸೋಂಕೆ ತನ್ನಯ | ಕರಚರಣ ತಾ ಸನ್ನವಾಗಿದೆ |
ಮರಣವೆನಗಾನಱಿದ ತೆರನನು ಪೇಳುವೆನು ಬೆಂದು ||
ಹರದಗೆಂದನು ಚಾರುದತ್ತನು | ಭರಗೆಡದೆ ನೀನೊಂದುಗುಂಡನು |
ಪಿರಿಯಬಳ್ಳಿಗೆ ಸೇದಿಕೊಡು ಬಳಿಕೆಲನ ನಂಬೆಂದ || ೬೫ ||

ಕೊಡಲು ಗುಂಡನು ಸೇದಿಕೊಳುತವ | ನೆಡೆಯೊಳಗೆ ಕಡಿಕೆಯಿದು ಹೋದನು |
ಕೆಡೆದುದಾ ಗುಂಡತ್ತ ನೀನಿಂದುಳಿದೆ ನಾನೆಂದು ||
ನುಡಿಯ ಕೇಳುತಲಿನ್ನು ನೀಂ ಬಾ | ಳ್ವೆಡೆಯುಪಾಯಾವುದುಂಟೆಲೆ ಪೇ |
ರುಡುವಿಳಿದು ಬಂದುಂಡುರಸವನು ಪೋಗುತದೆಯೆಂದ || ೬೬ ||

ಅದರ ಬಾಲವ ಪಿಡಿದು ಪೋಗೆನ | ಲದನು ನಂಬಿಯೆ ಮೊದಲು ಕೈಕಾ |
ಲುದಿರಿ ಸಾವಾತಂಗೆ ಪಂಚನಮಸ್ಕೃತಿಯ ಪೇಳೆ ||
ತ್ರಿದಶ ಪದವಿಗೆ ಪೋದನಿತ್ತಲು | ಬುದುಬುದನೆ ಪರಿತಂದು ರಸಗುಡಿ |
ದಧಟಿನಿಂ ಪೋಪುಡುವ ಬಾಲವ ಪಿಡಿದು ಮೇಗೊಗೆದ || ೬೭ ||

ಪೇರಡವಿನೊಳು ಭೀಳಭೂತ | ಕ್ರೂರಸತ್ವ ನಿಕಾಯದೊಳಗಾ |
ಚಾರುದತ್ತನು ಭರದಲತ್ತೊಂದೆಡೆಗೆ ಹೋಗುತಿರೆ ||
ಧೀರನಾ ಶ್ರೀಪುರವೆನಿಪ್ಪುದ | ಸೇರಿದೊಂದಂಗಡಿಯೊಳಗೆ ಮೈ |
ಯಾರೆ ತನ್ನ ಬಳಲ್ಕೆಗಳೆಯಲ್ಕಿರ್ದ ನಿರಲೊಡನೆ || ೬೮ ||

ಕಿರಿಯತಂದೆಯು ರುದ್ರದತ್ತನು | ನೆರೆದ ಕೆಳೆಯರುವೆರಸಿ ತನ್ನನೆ |
ಯರಸುತಲ್ಲಿಗೆ ಬರಲು ಕಾಣುತಲೆದ್ದಿದಿರೆ ನಡೆದು ||
ಯೆರಗಿದನು ತಾ ರುದ್ರದತ್ತಗೆ | ನೆರೆ ಕೆಳೆಯರಾಲಿಂಗಿಸಲುಮಾನ |
ತೆರಪು ನೆರೆಯದು ಹರುಷಕೆನೆ ಸಂತಸದಿನಪ್ಪಿದರು || ೬೯ ||

ಏತಕರಸುತ ಬಂದಿರೆನೆ ನಿಜ | ಮಾತೆಯುಂ ಮಡದಿಯು ಹರುಷ ರಸ |
ಬೀತುಚಿಂತಿಪದುಃಖವನು ನಾವೇನ ಸೈರಿಪೆವು ||
ಈ ತೆರದೆ ಬಂದಪೆವು ಪಲವುಂ | ಮಾತದೇನೊ ವಸಂತ ತಿಲಕೆಯು |
ಚಾತೆ ವಿರಹಾವಸ್ಥೆಯಂತಿಂತೆಂಬಕಸದಳವು || ೭೦ ||

ಹಲವು ಪರಿಯಿಂದವರು ಮೋಹದ | ಬಲೆಯ ಬೀಸಿದೊಡರ್ಥವನು ತಾಂ |
ಗಳಿಸಬೇಕೆಂಬಾಗ್ರಹದಲೆದೆಗಿಡದೆ ಬಿಡೆನುಡಿದು ||
ಕಲಿಯಿರಲು ಪ್ರಿಯದತ್ತನೆಂಬುವ | ನೊಲಿದು ಬಂದಾ ವೇಳೆಯಲಿ ತಾ |
ಬಳಲಿಕೆಯ ಪರಿಹರಿಸಿದನು ನಿಜಗೃಹದೊಳಂದವರ || ೭೧ ||

ಮಂದೆ ಮುಂದೈದಿದನು ಅನುಬರೊ | ಳೊಂದಿ ಗೂಡಿದಿರಿನಲಿ ಕಂಡನು |
ಒಂದು ತಾರಾಚಳವೆನಿಪ ಪರ್ವತವನಾ ಪರದ ||
ಅಂದದರ ತಪ್ಪಲೊಳಗಿರುತಿಹ | ಸಂದ ಪಾರಸಿಕರಮೆನಗೆ ತಾ |
ಬಂದು ಬಳಿಕಾ ರುದ್ರದತ್ತನು ಕಂಡನೋರ್ವನನು || ೭೨ ||

ಮುದದಿ ರತ್ನದ್ವೀಪಕೈದುವ | ಡದರಪಾಯವ ಕೇಳಿದೊಡೆ ಹೇ |
ಳಿದನು ಅಜಪಥದಲ್ಲದಿಲ್ಲೆಂದದರ ಜಾಣುಮೆಯ ||
ಎದೆಗದಡದಜಗಳನು ಮುನ್ನವೆ | ಹದಗೊಳಿಸಿ ಈ ರೀತಿಯಲಿನೀ |
ವೊದಗಿದೊಡೆ ನೀನೆಂದ ಕಾರ್ಯವದಹುದು ಹೋಗೆಂದ || ೭೩ ||

ಹಡಗನಡೆಯಿಪ ಪಾರಸಿಕನಾ | ನುಡಿಗಳಿಂದೆಲ್ಲವನರಿದು ಸಂ |
ಗಡಿಗರೊಡನಾ ಚಾರುದತ್ತಂಗರುಪೆ ಆ ತೆರನ ||
ದಡಿಗ ಕುರಿಗಳನೇಳನೇಳಾ | ಲೊಡನೆ ಕೊಂಡುರು ಕ್ರಮದಿತಿದ್ದಿದ |
ರೊಡನೆ ನಡೆದವಲತ್ತಲಾಶಾಶಕ್ತಿಯಂ ಬಡೆದೆ || ೭೪ ||

ಶರನಿಧಿಯ ಮಧ್ಯದಲ್ಲಿ ಮಿಗೆ ಸೋ | ಲ್ವೆರಲನಿತ್ತಗಲದಲಿ ಕೇರೆನೆ |
ಪರಿದು ಮುಗಿಲನೆ ಮುಟ್ಟುವೀ ಪರ್ವತದ ಪದವೆಮಗೆ ||
ಮರಣವಲ್ಲದೆಯಿಲ್ಲಿ ಬದುಕುವ | ಪರಿಯಿದಿಲ್ಲೆನೆ ರುದ್ರದತ್ತಾ |
ದ್ಯರಿಗೆ ಧೈರ್ಯದ ಮಾತನೊರೆದನು ಚಾರುದತ್ತಕನು || ೭೫ ||

ರಸದಕೂಪದೊಳೆನ್ನನಾ ತಾ | ಪಸನು ಕಪಟದಿ ಪೊಗಿಸೆ ಮುನ್ನಿಳಿ |
ದಸುವ ಬಿಡುವವನಿಂದ ಬದುಕಿದುದಿಲ್ಲವೇನಾನು ||
ಶಶಿಧರಗೆ ವಸವಲ್ಲ ಸಾಯದ | ರಸುವೆಳೆಯಲಿಕೆ ನೀವಿದಕೆ ಚಿಂ |
ತಿಸದಿರಾದರೆ ತಾನೆ ಹೋಹೆನು ನಿಲ್ಲಿ ನೀವೆಂದ || ೭೬ ||

ಎನಲು ನಿನ್ನನು ಕಳುಹಿ ನಾವೀ | ತನುವ ಹಿಡಿವೆವೆಯೆಂದುಧೈರ್ಯವ |
ಮನದೊಳಾಂತವರಿರಲು ಪಥವನು ನೋಡಿಬಹೆನಾನು ||
ಇನಿತು ಪೊತ್ತಿಲ್ಲಿರಿಯೆನುತಲವ | ರನು ನಿಲಿಸಿ ಜಿನಶರಣೆನುತ್ತಜ |
ವನು [ಕಲಿ ಚಾರುದತ್ತನು ಹತ್ತಿ ನಡೆದನು ಮೆಲ್ಲನೆ] || ೭೭ ||

ಸ್ಥಿರದೊಳೈದಿ ಬಳಿಕ್ಕ ಮೆಲ್ಲನೆ | ಮರಳಿ ಬರುತಿರೆ ಚಾರುದತ್ತನು |
ಪಿರಿದು ಪೊತ್ತೆಂದಡೆದನೆಂದರುವರು ಕುರಿಯನ್ನೇರಿ ||
ಬರುತಿರಲು ನಡುಪಥದಿ ಸಂಧಿಸಿ | ತಿರುಹ ಮರುಹಲು ತೆರವ ಕಾಣದ |
ಹರಣ ಹವ್ವನೆ ಹಾರಿಕಳವಳಗೊಂಬ ಪಥದಲ್ಲಿ || ೭೮ ||

ಎದೆಗಲಿಗನಾ ಚಾರುದತ್ತನು | ಬೆದರದಾಕುರಿಯೆರಡು ಹಿಂದಣ |
ಪದಗಳನು ಸ್ಥಿರಗೊಳಿಸಿ ಮುಂಗಾಲೇಳೆ ವಾಘೆಯವ ||
ಹದುಳದಿಂ ಪಿಡಿದೆತ್ತಿ ತಿರುಹಿದೊ – | ಡದುವಹಿಲದಲಿ ಕರ್ತೃವಿನ ಪು – |
ಣ್ಯದ ಸಹಾಯದಿ ತಿರುಗಿ ನಿಂದುದು ಬೆಕ್ಕು ಬಿದ್ದಂತೆ || ೭೯ ||

ಹೋಗುತ್ತಿದ್ದನು ಮುಂದಿವರು ತಲೆ | ದೂಗುತ್ತಿದ್ದರು ಹಿಂದೆ ತಿರುಹಿದ |
ಲಾಗುವೇಗವನವನ ಧೈರ್ಯವ ಮೆಚ್ಚಿ ಬೆಂಬಿಡಿದೆ ||
ಪೋಗಿ ಸಮತಳಗಂಡುಕುರಿಗಳ | ಮೇಗಣಿಂದಿಳಿದೊಂದು ತಣ್ಪಿಂ |
ಬಾಗಿಲಲ್ಲಿಯೆ ಚಾರುದತ್ತನು ಮೆಲ್ಲನೊರಗಿದನು || ೮೦ ||

ಒರಗಲಾ ಪಾರಸಿಕ ಪೇಳ್ದಾ | ತೆರದಿ ಕುರಿಗಳ ಕೊಂದಿವರು ಒಳ |
ಹೊರಗು ಮಾಡಿದಡಾತಗೆಚ್ಚರಸುತ್ತಲವರೊಳಗೆ ||
ಅರಗುಲಿಗಳಿರೆ ಪೊಗಲುತಾನೆ | ಚ್ಚರುತ ಕಂಡೀ ಹಿಂಸೆಗೆದೆಯಲಿ |
ಮರುಗಿದನು ಬಳಿಕವರವೊಲು ತಾನಲ್ಲಿ ಮೈಗರೆದ || ೮೧ ||

ಹಂದದಿವರಿರ ರನ್ನದೀಪದಿ | ಬಂದವಾ ಭೇರುಂಡ ಪಕ್ಷಿಗ |
ಳಂದು ತಾವೆಂಟಾಗಸದಿ ನೆರೆಮಾಂಸಪಿಂಡಗಳು ||
ಎಂದು ಬಗೆದೋರೊಂದನಾವೋ | ರೊಂದು ಕೊಂಡಾಗಸಕೆ ಪಾರಿದ – |
ವೊಂದು ಕಣ್ಣಿನ ಹಕ್ಕಿಹಿಡಿದುದು ಚಾರದತ್ತನನು || ೮೨ ||

ಒಂದು ಹಕ್ಕಿಗೆ ಮಾಂಸ ಸಿಕ್ಕದೆ | ದಂದುಗದ ಮಿಗೆತಳೆದು ಕಣ್ಗೆಂ – |
ಪಿಂದೆ ಪರಿಪರಿದೆರಗಿ ಚೆಲ್ಲಿಸಿ ಹಲವು ಹಕ್ಕಿಗಳ ||
ಬಂದಿದರ ಕಣ್ಣಿಲ್ಲದಾ ಕಡೆ | ಗೊಂದಿ ಉಜ್ಜುಗ ಮಾಡಿದೊಡೆ ಘೀ |
ರ್ರೆ‍ಂದು ಪಕ್ಕದಿ ಹೊಡೆದು ಬಡಿದಿರೆ ಬಿಟ್ಟುದಾ ಕುಟುಕ || ೮೩ ||

ತೊಡಬೆಯಟ್ಟಿದುದದನು ನೀರೊಳು | ಕೆಡೆದುದೆಯೆಂಬಾಗ ಕಟುಕನು |
ಹಿಡಿದುಕೊಂಬುದೆದೊರ್ಮೆ ಮತ್ತಾ ಖಗನು ಬಂದೆರಗೆ ||
ಬಿಡುವುದೀ ಕುಟುಕನುವಿಹಂಗಮ | ನಡಸಿ ಬೆನ್ನಟ್ಟುವುದು ಭೋರೆನೆ |
ಪಿಡಿವುದಿದನೀ ಪರಿಯಲೇ ಪಲಸೂಳನಾಡಿಸುತ || ೮೪ ||

ಬಳಲಿ ರತ್ನದ್ವೀಪದುಪಗಿರಿ | ಯೊಳೆ ಬಿಸುಟ್ಟುದು ಪೋಗೆತಾನಂ |
ತೊಳಗಣಿಂ ಪೊರವಟ್ಟುದೆಸೆಯನು ನೋಡುತಿರಲೊಂದು ||
ಕೊಳನಿರಲು ನೆರೆಮುಳುಗಿ ಮೈಯನು | ತೊಳೆದು ಮುಂದೈತರುತ ಕಂಡನು |
ಬೆಳೆದ ಚಾರಣ ಕೂಟ ಗಿರಿಯನು ಚಾರುದತ್ತಕನು || ೮೫ ||

ಆ ಗಿರಿಯ ತುದಿಯಲ್ಲಿ ಪ್ರತಿಮಾ | ಯೋಗವಿಹ ಚಾರಣರ ಚರಣಕೆ |
ಬಾಗಿದನು ಮಸ್ತಕವನತಿಭಕ್ತಿಯಲಿ ಬಲಗೊಂಡು ||
ಪೂಗಳನು ತಂದವರಡಿಯನಿಂ | ಬಾಗಿ ಪೂಜಿಸಿ ನುತಿಸಿ ಸಮ್ಮುಖ |
ವಾಗಿ ಕೈಮುಗಿದಿರಲು ಪರಸಿದರವರು ಕರುಣದಲಿ || ೮೬ ||

ಎಲೆಲೆ ಭವ್ಯೋತ್ತಮನೆ ನೀಂ ಕಡು | ಬಳಲಿದೈ ಸ್ಥಲ ಜಲ ಗಮನದಲಿ |
……….ತಾವು ನಿರೂಪಿಸ ನಿತರೊಳು ||
ಘುಲಘುಲಿಪ ಘಂಟಾರವದಿ ಬಾ | ನೊಳೆ ವಿಮಾನಂಗಳ ಹಲವು ಮಣಿ |
ವೆಳಗು ಸುರಧನುಗಳನು ಪಸರಿಸೆ ಬಂದನಾ ಖಚರ || ೮೭ ||

ಪಲದಿವಸವಾಯ್ತಯ್ಯ ದೀಕ್ಷೆಯ | ತಳೆದು ತಾವೆಲ್ಲಿದ್ದಿರೆಂಬುದ |
ತಿಳಿದು ವಂದಿಸ ಬಂದು ಸಿಂಹಗ್ರೀವನವರಸುತ ||
ಮೊಳಗೆ ದುಂಧುಭಿಮಣಿ ವಿಮಾನದಿ | ನಿಳಿದು ಬಂದನುಜಯವೆರಸಿ ಮೂ |
ವಳಸ ಚರ ಬಲಗೊಂಡುಭಕ್ತಿಯಲೆರಗಿ ಪೂಜಿಸಿದ || ೮೮ ||

ಗುರು ಪದಾಂತಿಕದಲ್ಲಿ ಕುಳ್ಳಿ | ರ್ದುರುಸುಧರ್ಮವ ಕೇಳ್ದಖೇಚರ |
ರರಸನೊಪ್ಪುವ ಚಾರುದತ್ತನ ಮೊಗಸಸಿಯ ನೋಡಿ ||
ಹರುಷದಿಂದವರಾರೆನಲು ಸ | ದ್ಗುರು ನಿರೂಪಿಸಿದಪರು ಚಂಪಾ |
ಪುರದ ರಾಜಶ್ರೇಷ್ಠಿಯೀತನು ಚಾರುದತ್ತಕನು || ೮೯ ||

ಅಂದು ನಮ್ಮನು ರಜತವಾಳುಕಿ | ಯೆಂದೆನಿಪ ತೊರೆದಡಿಯೊಳೀತನು |
ಬಂದು ಬಂಧುವೆಯಾಗಿ ರಕ್ಷಿಸಿದನು ಕಣಾ ಮಗನೆ ||
ಇಂದು ನೀನೀತನನು ತಾನೆದ | ಲೆಂದು ಬಗೆಯೆನೆಲಾ ಖಚರ ಜೀ |
ಯೆಂದು ಕೈಮುಗಿದಪ್ಪಿದನು ವಿನಯದಲಿ ಹರದನನು || ೯೦ ||

ಚಾರದತ್ತನ ಕೂಡೆ ಖಚರ ಕು | ಮಾರ ಸಂಭಾಷಿಸುವ ಪದದೊಳು |
ಭೋರನಾನಾಕಡಿಕುಸುಮ ಶೇಖರನೆನಿಪ ದೇವ ||
ಭೂರಿ ಪರಿವಾರಾಮರರು ಸಹ | ಚಾರಣರ ಬಳಿಗೈದಿವಂದಿಸಿ |
ಚಾರುಗುಣಿ ಮನವೊಸೆದು ಕಂಡನು ಚಾರುದತ್ತನನು || ೯೧ ||

ಎನಗೆ ನೀನೇ ಗುರುವಲಾ ಭ | ವ್ಯನೆ ಮಹಾಗುಣಿ ಚಾರುದತ್ತನೆ |
ವಿನುತವೈನಾಂ ರಸದ ಬಾವಿಯ ಬಿದ್ದು ಸಾವಾಗ ||
ಕುನೈತಾಪಸನಿಂದ ನೀ ಬಂ | ದನಘ ಪಂಚನಮಸ್ಕೃತಿಯನೋ |
ಳ್ಪಿನಲಿ ಪೇಳಲು ತತ್ಫಲದಿನೀ ಪದವಿ ನನಗಾಯ್ತು || ೯೨ ||

ಎನಲು ಸಿಂಹಗ್ರೀವನುಂ ತಿಳಿ | ದನುಪಮವಲಾ ಪಂಚಪದವೆಂ |
ದನುನಯದಲಾ ಚಾರುದತ್ತನ ಗುಣಕೆ ಮಿಗೆ ಮೆಚ್ಚಿ ||
ಮುನಿಗಳಿಂ ಬೀಳ್ಕೊಂಡು ಆ ದೇ | ವನು ಬೆರಸಿ ಆ ಚಾರುದತ್ತನ |
ವಿನಯದಿಂ ಕರಕೊಂಡು ಹೋದನು ತನ್ನ ಪಟ್ಟಣಕೆ || ೯೩ ||

ಪಲವು ವಿದ್ಯಾಧರರ ಸುತೆಯರ | ನೊಲಿದು ಮದುವೆಮಾಡಿ ತನ್ನಯ |
ಹೊಲಲೊಳಗೆ ಆ ಚಾರುದತ್ತನೆ ತಂದೆ ತನಗೆಂದು ||
ಪಲವು ತೇಜವ ಮಾಡಿ ಪರದಗೆ | ಬಳಿಕ ದಿವಿಜನು ಕುಸುಮಶೇಖರ |
ನಳಿವಿಗಳದರ್ತಿಯಲಿ ದಿವ್ಯಾಭರಣ ಮೊದಲಾಗಿ || ೯೪ ||

ಮಿಸುಪ ಮೂವತ್ತಾರು ಕೋಟಿಸು | ವಸ್ತುವನಿತ್ತು ದೇವಲೋಕಕೆ |
ಕುಸುಮಶೇಖರ ದೇವ ಹೋಗಲು ರುದ್ರದತ್ತಾಗಿ ||
ಎಸೆವ ರತ್ನದ್ವೀಪದೊಳು ಪಲ | ದೆಸೆಯೊಳಿರಲವರರಸಿ ಖೇಚರ |
ಬೆಸಸೆ ತಂದರು ಚರರು ತನ್ನ ವಿಮಾನದಲಿ ಪುರಕೆ || ೯೫ ||

ಅರುವರುಂಬರೆ ಕಂಡು ವಿನಯವ | ಮೆರೆಯೆ ಖಗಪತಿ ಬಳಿಕ ಚಂಪಾ |
ಪುರಕೆ ಹರದನು ಹೋಗಬೇಕೆನೆ ತನ್ನ ತನುಜೆಯನು ||
ನೆರೆ ಚದುರೆ ಗಂಧರ್ವದತ್ತೆಯೆ | ನರಿದುಕೈಯಲಿ ಕೊಟ್ಟನಾ ಭೂ |
ಚರನೆ ಈಕೆಗೆ ಗಂಡನೆಂಬಾದೇಶವುಂಟೆಂದು || ೯೬ ||

ತನ್ನ ಮನೆಯೊಳಗುಳ್ಳ ಹೊನ್ನನು | ರನ್ನವನು ತುಂಬಿಸಿದ ಮತ್ತಾ |
ರನ್ನದೀಪದಲೈದನಿತ್ತನು ಪಲವಿಮಾನದಲಿ ||
ತನ್ನ ಸುತೆಯನು ಕೆಳದಿಯರು ಸಹ | ಸನ್ನುತನು ಆ ಚಾರುದತ್ತನ |
ಚೆನ್ನ ಪೆಂಡಿರುವೆರಸಿ ಪಯಣಂಗೊಳಿಸಿ ಕಳುಹಿದನು || ೯೭ ||

ಎಲೆ ಧರಿತ್ರೀ ಪಾಲ ಕೇಳೀ | ಪೊಳಲ ಮೇಘಾಗಸವೆ ಪೂತವೊ |
ಲೆಳಸಿ ಬಳಸಿದನಾ ವಿಮಾನಗಳಿಳಿಯೆ ಬೆರಗಾಗೆ ||
ಪೊಳಲನತಿ ವೈಭವದಿ ಪೊಕ್ಕನು | ಬಲಯುತನು ತಾಂ ಚಾರುದತ್ತನು |
ಚೆಲುವೆಯಾ ಗಂಧರ್ವದತ್ತೆಯ ತೆರನದರಿಯೆಂದ || ೯೮ ||

ಚಾರುದತ್ತನ ಸಾಹಸಕೆ ಮನ | ವಾರೆ ಮೆಚ್ಚಿದನಿತ್ತ ಸುಗ್ರೀ |
ವಾರಿಯನ ವೀಣಾ ಕಲೆಗೆ ತಲೆತೂಗಿ ಕಟ್ಟಿರ್ದ |
ತೋರಮುತ್ತಿನ ಕಂಠಮಾಲೆಯ | ಭೋರನಿತ್ತನು ಸಕಲ ವಿದ್ಯಾ |
ಧಾರನಾ ವಸುದೇವ ಕವಿತಾರಸಾಮೃತಾರ್ಣವನು || ೯೯ ||

|| ಅಂತು ಸಂಧಿ ೧೭ಕ್ಕಂ ಮಂಗಳ ಮಹಾ ||