ಸಂಧಿ ೧೫

ಮಸಣಗಿಚ್ಚಿನಲುರಿದನೆಂಬಾ | ಪುಸಿಯ ಬೆಳೆಯಿಸಿ ಪೋಗಿಕುವರನು |
ಯೆಸೆವ ಜಯಜಯ ಸೇನೆಯರನಾಂತನು ಸ್ವಯಂವರದಿ || ಪಲ್ಲ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಶಿವದೇವಿಯರ್ಗೆ ಚಂಪಕ |
ಮಾಲೆಯೆಂಬಾ ಸಖಿಯ ಕೈಯಲಿ ರನ್ನವಟ್ಟದಲಿ ||
ಮೇಳಿಸಿದ ಕತ್ತುರಿಗೆಸಱಗಿಂ | ಪೇಳೆ ತತ್ಪತಿ ಕಳುಹೆ ಕೊಂಡೊ |
ಯ್ದಾಳಿಯನು ವಸುದೇವ ನೀಕ್ಷಿಸಿ ಕರೆದು ನಸುನಗುತ || ೧ ||

ಸೆಳೆದು ಕೊಂಡಾ ಪರಿಮಳವನೀ | ಕೆಳೆಯರೆಲ್ಲರ ಮೇಲೆ ಚೆಲ್ಲಿ ವಿ |
ಕಳಗೊಳಿಸಿ ಮಿಗೆ ಮುಳಿದವಳು ನೀನಿನ್ನುಮಾಣೆಯಲ ||
ಖಳವಿಚಾರವಗಾಳುತನವನು | ಕಲಿತವರು ಮ ಱೆವರೆ ಸೆರೆಯಮನೆ |
ನೆಲೆಯಹೊನ್ನುಪ್ಪರಿಗೆಯಾದುದೆಯೆಂದಳುಬ್ಬೆಗದಿ || ೨ ||

ಎಲು ಬೆಕ್ಕಸಬಟ್ಟವಳನೊ | ಯ್ಯನೆ ಕುವರನೇಕಾಂತದಲಿ ನೀ |
ನೆನಗೆ ಪೇಳೀ ತೆಱನನೆಲ್ಲವನೆಂದವಳ ಕೈಗೆ ||
ಕನಕಮಣಿಯ ಕಡಿಗವಿಟ್ಟಿಂ | ಪಿನಲಿ ಕೇಳ್ದೊಡೆ ಪೇಳ್ದಲೆಲೆನವ |
ಮನಸಿಜನೆ ನೀನಳ್ತಿಯಿಂ ಪುರದೊಳಗೆ ತೊಳಲುತಿರೆ || ೩ ||

ಗರತಿಯರು ಗಣಿಕೆಯರುವೆನ್ನದೆ | ಬಿರಯಿಸಲು ನಿನಗಾ ತೆಱನನೀ |
ಪುರ ಜನವು ನಿಮ್ಮಣ್ಣಗರುಪಲು ನಣ್ಪಿನಿಂ ನಿನ್ನ ||
ಇರಿಸಿದನು ನಂದನದೊಳಗೆ ಕಾ | ದಿರಲು ದಾರುಕವಲ್ಲಭರನೊಡ |
ನಿರಿಸಿದನು ಬಹುಜನದ ಮಾತನು ಕೇಳಿದವರಾರೊ || ೪ ||

ಎಂದವಳು ಪೋಪುದು ಮನದೊಳಿಂ | ತೆಂದನಾವನ ಸಿರಿಸೊಬಗು ನೆಱಿ ಸ |
ವುಂದರತೆ ಲೋಕಕ್ಕೆ ಹರುಷ ವಿಷಾದಕಾರಿಯಲ ||
ಎಂದು ಬಗೆಯದ ಜನದ ಮಾತಿಗೆ | ದೊಂದಿನಿತು ತಪ್ಪಿಲ್ಲದೆನ್ನನು |
ನಂದನದಲುರೆ ಸೆರೆಯನೆಟ್ಟನೆ ಲೇಸುಲೇಸೆಂದ || ೫ ||

ಮಾತಿನಲಿ ಮೋಹಾಮೃತವ ಕಿವಿ | ಗೇತಱದಿ ತುಂಬಿದನು ಹಿತವೆಂ |
ಬಾತೆಱನನೆನಗರುಹಿ ಮನದೊಳಗೇನನೆಣಿಸಿದನು |
ತಾತನೆಂದೇ ತನ್ನನೊಲಿದನು | ಜಾತನಾನಕಟಕಟ ಭೂವರ |
ಮಾತು ಸಕ್ಕರೆ ಮನವು ಕತ್ತರಿಯೆಂಬುದಱಿಯೆನಲ || ೬ ||

ಇನ್ನು ಈತೆಱನಾಗಿಯಿರ್ದರೆ | ಬನ್ನವೆನಗಹುದೆಂದು ಹೋಹೆನೆ |
ನನ್ನ ಬಿಡರಾಕಾಪಿನವರೆಂದೊಂದುಪಾಯವನು ||
ತನ್ನೊಳಗೆ ನಿಶ್ಚಯಸಿ ಬೆರ್ನಾ | ಡೆನ್ನ ನಾಡೆಂದುಂಟೆ ನನಗು |
ತ್ಪನ್ನ ಕಾವ ವಸಂತ ಮಂದಾನಿಳರಿಗೆಂದಿರಲು || ೭ ||

ಇದು ವಸುಂಧರೆ ಇದು ನಭಂಗಣ | ವಿದು ದೆಸೆಗಳೆಂದಱಿಯಲರಿದೆನೆ |
ಪುದಿದು ಕೊರ್ವಿದ ಮರ್ವುಪರ್ವಿಯುಗುರ್ವಿವಿರುಳಿನಲು ||
ಒದವಿದಷ್ಟ ವಿಧಾರ್ಚನಾ ದ್ರ | ವ್ಯದ ಪುಡಿಕೆವೆರಸಾತ್ಮ ಸಖರೊಡ |
ನಧಟನಾ ವಸುದೇವನೊಂದು ತಮಾಲ ವನದೊಳಗೆ || ೮ ||

ಒಂದು ಜಾವವಸಿರಲೊಡನೆ ಪರಿ | ತಂದು ದಾರುಕವಲ್ಲಭರು ತಾ |
ವಂದು ಗಿಡುಮೆಳೆಯಱಸುತೈತಂದರಸನನು ಕಂಡು ||
ಇಂದುನೀಯಿರುಳಿಲ್ಲಿಗೇತಕೆ | ಬಂದಿರಡಿಗಳುನೋವವೆನೆತಾ |
ನಂದರಿದನವರೆನ್ನ ಮೇಗಾಪಿನವರೆಂಬುದನು || ೯ ||

ಬಂದನೆಲೆ ಹಿತವರಿದ ಹೆಣಬೇ | ವೊಂದು ಮಸಣದಲೊಂದು ವಿದ್ಯವ |
ನಿಂದು ಸಾಧಿಸ ಪೋಗಬೇಕೆನೆ ಜೀಯ ನಿಮ್ಮೊಡನೇ ||
ಬಂದಪೆವು ನಾವೀಗ ನಿಮ್ಮಡಿ | ಯೊಂದು ಸೇವೆಗೆ ವಿಮುಖರೇಯೆನ |
ಲೊಂದಿ ನಡೆದಾ ಪ್ರೇತ ಭೂಮಿಯ ಕಂಡನಾ ಭೂಪಾ || ೧೦ ||

ಹಸಿಯ ತಲೆಗಳ ಸಾಲುದೋರಣ | ಬಸೆಬಸಿವ ಹೆಣಬಣಬೆ ಬಾಳ್ವೆಣ |
ಮಿಸುಕೆ ಬಳಿಕುವ ಬಸಿದ ಬೊಮ್ಮನಸೂಲಗಳ ಪಂತಿ ||
ದೆಸೆದೆಸೆಗೆ ಪಸರಿಸುವ ಹೊಗೆ ಆ | ಗಸವ ಚುಂಬಿಪ ದೂವೆಗಿಚ್ಚ |
ರ್ಪಿಸುವ ಮಸಣದೊಳಾ ಕುಮಾರನಾ ಕಣ್ಗೆ ತೋರಿದವು || ೧೧ ||

ನಿಡುಚಿತಾಗ್ನಿಯ ಕೇಸುರಿಯೆ ಕೆಂ | ಜೆಡೆ ಹೊಗೆಯೆ ಕಲಿಚರ್ಮವಾಗಿರೆ |
ಕಡುಭಸಿತದಿಂ ಕರಕಪಾಲದಿ ತಲೆಯಮಾಲೆಗಳಿಂ ||
ಪೊಡರ್ವ ಶೂಲದಿ ಎಲುಬಿನೆಸಕದಿ | ಬಿಡದೆ ಸೇವಿಪ ಭೂತಗಣದಿಂ |
ಮೃಡನವೊಲು ಸುಡುಗಾಡು ಭೀಕರವಾಗಿ ತೋಱಿದುದು || ೧೨ ||

ಬಾಳು ಬಟ್ಟಲನೆತ್ತಿ ಬಹ ಕಂ | ಕಾಳಿ ಕತ್ತಿಯನೆಗಹಿ ತಹಮಾ |
ಕಾಳಿಯೀಡಿನ ಬಿಸಿಯ ಹೆಣನನು ತಿಂಬಶಾಕಿನಿಯು ||
ಶೂಲವನು ಹೊತ್ತೆತ್ತಿ ಬಲುವೇ | ತಾಳಗಳ ನಳಱಿಸುವ ಭೈರವಿ |
ಭಾಳಲೋಚನೆ ದುರ್ಗಿ ಮೊದಲಾಗರ್ವಿಸುವರಲಿ || ೧೩ ||

ಮರುಳ ಕೈವಱೆಗುಟ್ಟಿ ನಕ್ತಂ | ಚರ್ಯರುಂಚದಿಪಾಂಡೆ ಬೆಳು ಪಾ |
ದೆರಡು ತಲೆಯೋಡುಗಳ ತಾಳವನೊತ್ತ ಚಾಮುಂಡಿ ||
ನೆರದ ಭೂತದ ಮುಂದೆ ಬೇತಾ | ಳರು ಕುಣಿಯೆ ಜೆಟ್ಟಗನುಶೂಲದ |
ಪಿರಿಯ ಬೀರರು ಮೆಚ್ಚಿ ಹೆಣಗಳ ಚಾಗವಿಕ್ಕಿದರು || ೧೪ ||

ಹೊಕ್ಕು ಬೇವಿಡಿ ಹೆಣನನೊರ್ಮೆಯೆ | ಗುಳ್ಕೆನಲು ಬೇತಾಳ ನುಂಗಿ ಬ |
ಳಿಕ್ಕ ಹೊಟ್ಟೆಯ ಹೊಸದುಕೊಂಡು ಪೊರಳ್ದು ಶೂಲದಲಿ ||
ಸಿಕ್ಕಿದಾ ಬಾಳ್ವೆಣದ ತೊಡೆಗಳ | ಕುಕ್ಕಿ ನೆತ್ತರಕುಡಿದು ತಱಿದುಱೆ |
ಸೊಕ್ಕಿ ಪೆಕ್ಕಣವಾಡುತಿರ್ದುದದೊಂದು ತಾಣದಲಿ || ೧೫ ||

ಮಸಣವಿಂತು ಭಯಂಕರಿಸಲು | ಕ್ಷಿಸುತ ವಸುದೇವನು ನಡೆದು ಶಂ |
ಕಿಸದೆ ಬಂದೊಂದುರಿವ ಸಿದಿಗೆಯ ಸಾರ್ಕೆನಿಂದಿರ್ದು ||
ನಸು ಬೆದಱದಿರಿಯೆಂದು ಮಿಗೆ ಮಂ | ತ್ರಿಸಿ ವಿಭೂತಿಯ ನಿಟ್ಟವರ ನಂ |
ಬಿಸಿಯೆ ಸಾಧಿಪೆ ನಿಲ್ಲಿಯೇಕಾಂತದಲಿ ವಿದ್ಯೆಯನು || ೧೬ ||

ಎಂದವರನತ್ತೊಂದು ದೂರದಿ | ನಿಂದಿರೆಂದಿರಿಸಿದನು ಪೂಜಿಸು |
ವಂದವನೆ ತೋರಿಸಿ ನಿಜಾಭರಣಗಳ ಕಳೆದಿರಿಸಿ ||
ನಿಂದು ನಿಷ್ಕಾರಣದಲಣ್ಣನು | ನಂದನದೊಳಿಟ್ಟನು ಸೆರೆಯ ತಾ |
ನಿಂದು ಸೊಡಲೆಯ ಕಿಚ್ಚಿನಲಿ ಬಿದ್ದಳಿದೆನೆಂದೊದಱಿ || ೧೭ ||

ಉರಿವ ಸಿದಿಗೆಯೊಳೊಂದು ಸಬವನು | ಭರದಲಿಟ್ಟಡಿ ಪಜ್ಜೆಯಲ್ಲಿಗೆ |
ಹರಿದು ಹೋದಂದವನು ಕಾಣಿಸಿ ಕರಿ ನೆಳಲ ಮಱಿಯಿಂ ||
ಇರದೆ ವಿದ್ಯಾಲಂಘನೆಯೊಳಾ | ಚರಣಲಚ್ಚಣ ಗಾಣದಂದದಿ |
ತೆರಳಿ ಪೋದನು ಕುವರನತ್ತಲುವಿತ್ತರಿವರಾಗ || ೧೮ ||

ಅತಿಭಯಂಕರದನಿಯ ಕೇಳುತ | ದೃತಿಯಡಗಿ ಹರಿತಂದವರು ಬಲು |
ಚಿತೆಯೊಳಾ ರೂಹಳಿದುರಿವ ಶವಗಂಡು ಘೋಳಿಟ್ಟು ||
ಚಿತೆಯ ಕೆಲದೊಳು ರತ್ನ ಭೂಷಣ | ವಿತತಿಯನು ಕಂಡಲ್ಲಿ ಗೈದಿದ |
ಗತಿಯ ಹಜ್ಜೆಯ ಕಂಡು ಬಾಯ್ವಿಟ್ಟಿತ್ತ ಹೊರಳಿದರು || ೧೯ ||

ಅನಿತರೊಳು ರವಿ ಮೂಡಲಾ ಕುವ | ರನ ವಿಭೂಷಣಗಳನು ಮರಗೊಂ |
ಬಿನಲಿ ಕಟ್ಟಿದ ಬರೆದ ಪಟವನು ಮುಂದೆ ತಂದಿಳುಪಿ ||
ಜನಪತಿಗೆ ಕುವರನ ಸಖರು ಕಾ | ಪಿನ ಭಟರು ಬಿನ್ನವಿಸಲಮ್ಮದ |
ವನಿಗೆ ಬೀಳಲು ನೋಡಿ ಬೆಂಬೀಳ್ದನು ಮಹೀಕಾಂತ || ೨೦ ||

ತಳಮಳಗುಗೊಂಡರಸ ತಮ್ಮನ | ಹೊಳೆವ ಭೂಷಣಗಳನು ಕಂಡಾ |
ಗಳೆ ಪಟವನೋದಿಸಲು ನಾಂಪಾದರಿಗನೆಂದೆಲ್ಲ ||
ಪೊಳಲ ಜನವುಯ್ಯಲ್ಬಿಡದು ಗಡ | ಪಳಿನುಡಿಯ ನಮ್ಮಗ್ರಜದ ಕಿವಿ |
ಗಳನು ತಾಗಿತು ನನ್ನದೆಸೆಯಿಂ ನಾ ದುರಾತ್ಮನಲ || ೨೧ ||

ಪರವನಿತೆಯೆರಿಗೆಱಗಿದೊಡೆ ನಾಂ | ವರ ಸಮುದ್ರವಿಜಯನ ತಮ್ಮನೆ |
ಪರಮಜಿನಪದ ಭಕ್ತನೇ ಅಕಟಕಟ ಬಸದಿಯಲಿ ||
ಗುರುಗಳಲಿ ಬಳಿಕೋದಿದೆ ನೆನೆ | ರ್ನೆರಮೆ ಪಳಿಗೊಳಗಾದೆ ಬನದೊಳು |
ಧರೆಯಱಿಯೆ ಸೆಱೆಯಾದೆನೆಂನೀ ಬಾಳ್ಕೆಯೇಕೆಂದು || ೨೨ ||

ದೂವೆಯುರಿಯೊಳು ಬೀಳ್ದು ತನ್ನಯ | ಜೀವ ಗೆಡಿಸಿದೆನೆಂಬ ವಕ್ಖಣೆ |
ಯಾವಿಭವ ಕಿವಿಸೋಂಕಲೊಡನೊಱಗಿದನು ಮೂರ್ಛೆಯಲಿ ||
ತೀವಿದುದು ಸಭೆ ಬಳಿಕಲೊಱಗಿತು | ಭಾವಿಪೊಡೆ ಸಮ್ಮೋಹನಾಸ್ತ್ರವೆ |
ಆವರಿಸಿದುದೊ ವಿಷಯಗಾವಳಿ ಬೀಸಿದುದೊಯೆನಲು || ೨೩ ||

ಕೇಳಿದವರೆಲ್ಲರ ಬಸುರಿನೊಳು | ಬಾಳಸಿದ ತೆಱದಿನಾದು [ದೊಡನೆ] |
ಘೋಳೆನುತ ಶಿವದೇವಿ ಮೊದಲಾದವರು ಹೊರಳಿದರು ||
ಮೇಳಿಸಿಯೆ ಗುರುಹಿರಿಯರಾ ಭೂ | ಪಾಲವನು ಶಿಶಿರೋಪಚಾರದಿ |
ಬಾಳಿಸಿದರೆಚ್ಚಱಿಸಿದರು ಸಭೆಯನು ಬಳಿಕ್ಕಿವರು || ೨೪ ||

ಬೆಸಸೆ ದಾರುಕವಲರ್ಭರ್ಕಳು | ಬಸಿವ ಕಣ್ಬನಿ ಗದ್ಗದ ಸ್ವನ |
ಉಸುರ ಪರಿವೆರಡಳ್ಳೆ ಒಯ್ಲೊಳು ಮುಸುಡ ಶೋಕವನು ||
ಪಸರಿಸಲು ತಮ್ಮಮನು ನೃಪವಂ | ಬೆಸಿದ ತೆಱನನು ಮರಣದಿರವನು |
ಉಸುರಲಂತಪ್ಪರವು ಘೋಳೆನೆ ನೃಪತಿ ಮರವಟ್ಟ || ೨೫ ||

ಗಾಳಿಯೆತ್ತಿದ ತುಪ್ಪುಳಾವೆಡೆ | ಬೀಳುವುದೆನಿಪ್ಪುದನು ಮೊದಲಾ |
ಪೇಳಬಲ್ಲರೆ ಕೆಡೆದ ಬಳಿಕೆಲೆ ಕಾಣ್ಬುದಾತೆಱದಿ ||
ಮೇಳಿಸಿದ ಕರ್ಮಾನುಕೂಲದಿ | ಬೀಳೆ ಸಾವನು ಕಾಣ್ಬರೆಲೆ ಭೂ |
ಪಾಲ ಸಂಸಾರ ಸ್ವರೂಪವನಱಿಯದೇ ನೀನು || ೨೬ ||

ಎಂದು ಸಂಯಮಿಗಳು ಹಿತೋಕ್ತಿಗ | ಳಿಂದ ನಾನಾ ನಯದ ತೋರ್ಕೆ ಗ |
ಳಿಂದ ಭೂಪಾಲನ ಮನದ ಶೋಕವನು ಬಿಡಿಸಿದರು ||
ಬಂಧುಗಳ ನೋವಾಱಿಸಿದರವ | ರಂದು ಬಳಿಕ ಸಮುದ್ರವಿಜಯ ನ |
ರೇಂದ್ರನಾ ಕ್ರಮದಿಂದಲಂತ್ಯ ಕ್ರಿಯೆಯನಾಗಿಸಿದ || ೨೭ ||

ಹರಣ ಕಣ್ಗಿಚ್ಚಿಂದ ಮನಸಿಜ | ನುರಿದೆನೆಂಬುದೆ ಸಠೆ ಮನೋಭವ |
ನುರಿದನಾ ವಸುದೇವ ಕುವರನ ಕೂಡದೇದಿಟವು ||
ಪುರವನಿತೆಯರು ಕಣ್ಣು ನೀರನು | ಸುರಿದು ಬೇಟದ ಬಿತ್ತನಕಟಾ |
ಪುರಿದನೇ ಬಿದಿಯೆಂದು ಬೆಚ್ಚನೆ ಸುಯಿದರಡಿಗಡಿಗೆ || ೨೮ ||

ಅತ್ತಲಾ ವಸುದೇವ ಧೀರೋ | ದಾತ್ತನತಿ ಭೀಕರ ವಿಪಿನಗಿರಿ |
ಯೊತ್ತು ನದಿ ಕಾಸಾರಪುರವೆನ್ನದೆಯಧೃಚ್ಛೆಯಲಿ ||
ಉತ್ತರಿಸಿ ತಾನೋರ್ವನೇ ಪೂ | ರ್ವಾತ್ತ ಪುಣ್ಯಸಹಾಯದಲಿ ರಿಪು |
ಮತ್ತ ಕರಿಹರಿ ಪಾಂಥಿಕ ಬ್ರಾಹ್ಮಣನ ವೇಷದಲಿ || ೨೯ ||

ಜವದಿನೈತರೆ ಕುಕ್ಕಟ ಗ್ರಾ | ಮವನು ಕುಂಬರನೋರ್ವನಲ್ಲಿ |
ಪ್ರವರನಂಗಸವುಂದರತೆಯನು ನೋಡಿ ಬೆಱಗಾಗಿ ||
ಎವೆಮಿಸುಕದೆಲೆ ವಿಪ್ರ ನೀವೆ | ತ್ತವತಱಿಪಿರೆನೆ ತೀರ್ಥಯಾತ್ರೆಯ |
ಬವಣಿಗರು ನಾವೆಂದಡವನಿಂತೆಂದ ದಯೆಯಿಂದ || ೩೦ ||

ಅರೆಗಳಿಗೆ ನೀವೆಮ್ಮ ಸಾಲೆಯ | ಲಿರಿಯೆನುತ ಕರಕೊಂಡು ಸಾಲೆಯ |
ಲಿರಿಸಿದನು ಪಾರ್ವರ ಮನೆಯಿಲಾ ಸ್ನಾನ ಭೋಜನಕೆ ||
ಪರಿಕರವನಿತ್ತನುವಡಿಸಿ ಬಂ | ಧುರವಚನದಿಂದ ಕೃತಕ ಪಾರ್ವನ |
ಕರುಣದಿಂದೊಯ್ದಾಗಿಸಿದನಾ ಸ್ನಾನ ಭೋಜನವ || ೩೧ ||

ಅವನಿಪತಿ ಮಿಂದುಂಡು ಬಿಸಿಲನು | ತವಿಸಿ ಅಲ್ಲಿಂ ತೆರಳಿ ಹೋಹಂ |
ದವಸರದಲಲ್ಲಲ್ಲಿ ಹುಟ್ಟಿತು ಸುದ್ದಿ ವಸುದೇವ ||
ತವಕಿ ಅಣ್ಣನ ಕೂಡೆ ಮುನಿದು | ರುವುತ ಸೊಡಲೆಗಿಚ್ಚೆನಲುರಿದನೆಂ |
ದವರವರು ಮಱುಗುವ ದನಿಯನಾಳಿಸಿದನಾ ನೃಪತಿ || ೩೨ ||

ಪಿಂದೆ ಬಂದೆನ್ನಱಸರೆನ್ನ ನಿ | ದೊಂದು ಸಂದೆಗ ಪೊಯಿತೆನುತ ಸಾ |
ನಂದದಲಿ ದೇಶಾಂತರವ ಮಿಗೆ ಚರಿಸಿ ಹೋಗುತಿರೆ ||
ಒಂದು ನಂದನದೊತ್ತಿನಲಿ ಪೋ | ಪೊಂದುದಯ ಕಾಲದಲಿ ದೂರದಿ |
ಸಂದಣಿಯ ಗುಡಿ ತೋರಣಂಗಳ ನೋಡುತೈ ತಂದ || ೩೩ ||

ಅರಸನೈತಂದೊಂದು ಕೆರೆಯೊಳು | ಕರಚರಣ ಮೊಗದೊಳೆದು ಸಂಜೆಯ |
ನಿರದೆ ಬಂಧಿಸ ಬಂದ ಗಂಧರ್ವಾರ್ಯನನು ಕಂಡು ||
ಪುರವಿದಾವುದಿದೇನು ಗುಡಿಯು | ಪ್ಪರಿಸಿ ಮೆಱೆವಿದು ಪೇಳಿಮನೆ ಭೂ |
ಸುರನುದಾತ್ತನ ಚೆಲ್ವ ನೀಕ್ಷಿಸುತೆಂದನಿಂತೆಂದು || ೩೪ ||

ಪುರದಪೆಸರಿದು ವಿಜಯಖೇಟವು | ಪುರವರನು ಜಿತಶತ್ರುವಾ ನೃಪ |
ನರಸಿ ಸುಮ್ಮನೆ ಅವರ್ಗೆ ಜಯೆ ಜಯಸೇನೆಯೆಂಬವರೂ ||
ವರತನೂಭವೆಯವರೊಳಗ್ರಜೆ | ಸುರಸ ಗಾನದಿ ಚದುರೆ ನರ್ತಕಿ |
ಯರ ಶಿರೋಮಣಿ ಯಾಕೆಯಿಂದುವವರಾ ಸ್ವಯಂವರವು || ೩೫ ||

ನಾವವರ ಗಂಧರ್ವ ಗುರುಗಳು | ನೀವಿದಾರನೆ ತೀರ್ಥವಾಸಿಗ |
ಳಾವೆನಲು ನೀವೆಮ್ಮ ಪಂಕ್ತಿಯಲುಂಡುಯೆಲೆಪಾರ್ವ ||
ಈ ವಿನೋದವ ನೋಡಿ ಪೋಗೆನೆ | ನೀವು ಹೇಳಂತಾಗಲೆಂದುದ |
ರಾ ವಿಭುದನೊಡನೈದಿ ಮಜ್ಜನ ಭೋಜನಂ ಗೈದು || ೩೬ ||

ಸಿಂಗರಿಸಿ ನೆರೆತಂದುದಿತ್ತಲು | ಅಂಗ ವಂಗ ವರಾಟ ಲಾಟ ಕ |
ಳಿಂಗ ಮಾಳವ ಮಗಧ ಕರ್ನಾಟಕಾಂಧ್ರ ದೇಶಾದಿ ||
ತುಂಗ ವಿಕ್ರಮರವನಿ ಪತಿಗಳು | ಸಂಗಡಿಸಿ ತಂತಮ್ಮ ವಿಭವದಿ |
ಹಿಂಗದೈ ತಂದಾ ಸ್ವಯಂವರ ಸಾಲೆ ಬಳಸಿದವು || ೩೭ ||

ಜನಕನನುಮತದಿಂದಲಾ ನಿಜ | ತನುಜೆಯರು ಪುಷ್ಪಕ ವಿನುತ ರಥ |
ವನು ಬೆಡಂಗಿನಲಂಕರಿಸಿ ಲೋಚನೆ ಮರೀಚಿಗಳಿಂ ||
ನನೆ ಗಣೆಗಳಖಿಳಾವನೀಶರ | ಮನವ ಸೂಱಿಯಕೊಂಡು ವಸುದೇ |
ವನನದೊಂದೆಡೆ ಕಾಣುತಾಳ್ಪೆಸಕೆರಗಿದವು ನಲಿದು || ೩೮ ||

ಪುತ್ರಿಯರ ಕಣ್ಗೆಱಗಿ ಪಿತೃ ಜಿತ | ಶತ್ರುರಾಯನು ಕಂಡೊಸೆಯೆ ನೃಪ |
ಪುತ್ರಿಯರು ಗಂಧರ್ವವಿದ್ಯಾಚಾರ್ಯನನುಮತದಿ ||
ಧಾತ್ರಿಗವತರಿಸಿದರು ರತ್ನವಿ | ಚಿತ್ರಶಾಲೆಯೊಳಿಕ್ಕಿದಾಸನ |
ನೇತ್ರ ವಿಭ್ರಮ ವೀಯಲೊಪ್ಪಿದರದನಲಂಕರಿಸಿ || ೩೯ ||

ಅರಸನಗ್ರತನೂಜೆ ಜಯೆ ಭೂ | ಸುರನವೊಲುಸುತೆಗೂಡಿ ತನ್ನಯ |
ಕೊರಳಕಟ್ಟಳೆಗೊದಗೆ ದಂಡಿಗೆ ವಿಡಿದು ಮಿಡಿದೊಡನೆ ||
ವರ ಬಜಾವಣೆಗೈದು ಸಭೆ ಸೈ | ವೆರಗುಗೊಳಳಾಳಾಪಿಸುತ ಮಿಗೆ |
ಕರೆದು ತಂದಿರಿಸದಳು ರಾಗಾಧಿದೇವತೆಯಾ[ಕೆ] || ೪೦ ||

ಪವಣ ತ್ರಿಸ್ಥಾನದೊಳು ವಿನಿಬ | ದ್ಧವನಿ ಬದ್ಧ ದ್ವಿತೀಯ ಮಾರ್ಗದೊ |
ಳವದರಿಕೆ ಅನುಕಂಪ ನಾಸಿಕ ಗದ್ಗವಾದಿಯಹ ||
ವಿವಿಧ ದೋಷವಿದೂರದಿಂದೈ | ತೆಱ (?)ದ ಸೂಡನು ಪಾಡಿ ಕೇಳ್ವರ |
ಕಿವಿಗಳೊಳು ಗಾನಾಮೃತವ ಪಿಂಡಿದಳು ಸಭೆಮೆಚ್ಚೆ || ೪೧ ||

ಪದೆದ ರಾಜಕುಮಾರಕರು ತೇ | ಲಿದರು ಸಂಗೀತಾಮೃತಾಬ್ಧಿಯೊ |
ಳೊದವಿ ವಸುದೇವನು ಜಯೆಯ ಕೈದಂಡಿಗೆಯ ಕೊಂಡು ||
ಮುದದಿ ಪಾಡಲು ಕೇಳ್ದು ತತಿಗು | ತ್ತಿದರರಸುಗಳು ಮೆಚ್ಚಿಜಯೆ ಸುವು |
ಡಿದಳು ಕುವರನ ಕೊರಳಿಗೊಪ್ಪುವ ರನ್ನಮಾಲೆಯನು || ೪೨ ||

ಕೊರ್ವಿದತಿರಾಗದಲಿ ಮಿಗೆ ಗಂ | ಧರ್ವಗುರು ಕೊಂಡಾಡೆ ಭೂಪನ |
ಉರ್ವರಿಸಿ ಜಯಸೇನೆ ರಂಗಂಬೊಕ್ಕು ನರ್ತಿಸಲಾ ||
ಉರ್ವಿಯರಸನು ಕೂಡೆನರ್ತಿಸೆ | ಸರ್ವರುಂ ಮೆಚ್ಚುತಿರೆ ಸೋಲ್ತಳು |
ಗರ್ವಿಸದೆ ಭೂವರಗೆ ರನ್ನದ ಮಾಲೆ ಸುವುಡಿದಳು || ೪೩ ||

ಮೊಳಗಿತುತ್ಸಾಹಾನಕವು ಮಿಗೆ | ತೊಲಗಿದರು ನೆರೆದರಸುಗಳು ಚೆಲು |
ವಳಿಯನನು ಸುತೆಯರನು ಸಲೆಮುಂದಿಟ್ಟುಕೊಂಡರಸ ||
ಪೊಳಲನರಮನೆಯೈದೆ ಕನ್ನಡಿ | ಕಳಸ ಕೊಡೆ ಗುಡಿ ಮಂಗಳಸ್ವನ |
ಬಳಸಲುಚಿತಾಸನದೊಳಿರ್ದನು ಬಂಧು ಜನ ವೆರಸಿ || ೪೪ ||

ಅಳಿಯ ನಿಮ್ಮಯ ಕುಲವಿದಾವುದು | ತಿಳುಪಿಮೆನೆ ಪಾರ್ವನು ಕುಲದೊಳೆನೆ |
ಚೆಲುವ ಕನ್ನೆಯರೀರ್ವರನು ಸುಮುಹೂರ್ತದಲ್ಲಿ ನೃಪತಿ ||
ಕುಲದನುಕ್ರಮದಲಿ ವಿವಾಹವ | ನೊಲಿದು ವಸುದೇವಗೆ ನಿಮಿರ್ಚಿದ |
ನಿಳೆ ಪೊಗಳಲುತ್ಸವದಿನವರೊಡನರಸ ಸುಖಮಿರ್ದ || ೪೫ ||

ಅವನ ಬಾಯ್ದಂಬುಲವೆ ತಂಬುಲ | ವವನಮುಡಿವೂಗಳೆ ಮುಡಿವ ಪೂ |
ವವನ ತನು ಗಂಧ ಕತ್ತುರಿಯಂ ತನುಲೇಪ ||
ಅವನ ಬೇಳುಡೆಯುಡಿಗೆ ಜೀವನ | ವವನೆ ತವಗಾಗಿರ್ದು ಸುಸಿಲನು |
ಸವಿದರಾ ಸುಕುಮಾರಿಯರು ವಸುದೇವನೊಳು ಸುಖದಿ || ೪೬ ||

ಪಿರಿಯರಸಿಯೊಂದು ದಿನ ಮೇಳದ | ಲರಸನಿಂ ನೀ ವೀರವಿತರಣ |
ಸುರಸತನ ಕಡುಜಾಣ್ಮೆ ಚಾಟು ಕಲಾಪ್ರವೀಣಿಯಲ ||
ಪಿರಿದು ಧೈರ್ಯವಧೂ ಸುವಶ್ಯತೆ | ಅರಸು ಮಗಗಹುದಲ್ಲದಿದು ಪಾ |
ರ್ವರೊಳಿರದು ನಿನ್ನನ್ವಯ ಹೇಳೆಂದಳಾ ಕಾಂತೆ || ೪೭ ||

ಅತಿಚತುರೆ ಸುಸ್ಥಿರೆ ಸುಬುದ್ಧಿ ವಿ | ನುತ ಮಹಾಸತಿಯದಂದಱಿತು ಭೂ |
ಪತಿ ನಿಜಾನ್ವಯವನು ತಿಳಿಯೆ ಮುನ್ನೀರ್ದ ಬಂದಿರವ ||
ಸತಿಗಱಿಪಿ ಮುದದಿರುತಿರಲ್ಕಾ | ಸತಿ ಪಡೆದಳಕ್ರೂರನೆಂಬಾ |
ಸುತನನೀರ್ವರು ತಾಯಿಗಳೊವುತ ಸುಖದಲಿರುತಿಹರು || ೪೮ ||

|| ಅಂತು ಸಂಧಿ ೧೫ಕ್ಕಂ ಮಂಗಲಮಹಾ ||