ಸಂಧಿ ೧೯
ವಿನುತನಾ ವಸುದೇವ ಕಂಸಗೆ | ಧನು ಸುವಿದ್ಯೆಯ ಕಲಿಸಿಚಕ್ರಿಯ |
ತನುಜೆಯನು ಕೊಡಿಸಿದನು ಮಧುರೆಯ ಪೊಕ್ಕನವನೊಡನೆ || ಪಲ್ಲ ||
ಕೇಳಲೇ ಮಾಗಧ ಧರಿತ್ರೀ | ಪಾಲಕನೆ ವಸುದೇವ ಸುಖ ಸಂ |
ಮೇಳದಿರುತಿರೆ ರೋಹಿಣೀ ದೇವಿಯ ಸ್ವಯಂವರದಿ ||
ಕೋಲುಖುರಪುಟಕಗಿದಖಿಲ ಭೂ | ಪಾಲ ತನುಜರು ಬಂದು ತದ್ಭೂ |
ಪಾಲನಲಿ ಬಿಲುವಿದ್ಯೆಯನು ಮಿಗೆ ಕಲಿವುತಿರಲೊಡನೆ || ೧ ||
ಬಂದನೋರ್ವನೆ ವಂಟಿ ಬಿಲ್ಲವ | ನಂದು ವಸುದೇವಂಗೆಱಗಲೇ |
ಬಂದೆಯೆಲ್ಲಿಗೆ ಪೋಪೆಯೆನೆ ಬಿಲುವಿದ್ಯೆಯನು ಕಲಿಯ ||
ಬಂದೆನೀ ವಿದ್ಯೆಯಲಿ ನಿಮ್ಮನೆ | ಒಂದೆ ಕೊರಳಲಿ ಧರೆ ಪೊಗಳಲದ |
ಱಿಂದಲಂಬಿಗ ಕಂಸನೆಂಬೆನು ಭೂಪ ಕೇಳೆಂದ || ೨ ||
ಕಿಸುನೆರೆಯ ಕಣ್ತೋರ ಭುಜಸೂ | ತ್ರಿಸಿದವೊಲು ಚಲುವಾದ ಅವಯವ |
ಮಿಸುನಿವಣ್ಣದ ಮೆಯಿಗವಾದಿಪಕಂಧರವು ಮೆಱಿವ ||
ಪೊಸಬನಿವ ನಂಬಿಗನೆನಿಸನೀ | ಕ್ಷಿಸಲು ರಾಜಕುಮಾರನಹುದೆಂ |
ದೊಸೆದು ಮನದಲಿ ನೆನೆದು ಮನ್ನಿಸಿ ವಿದ್ಯೆಗಳಿಸಿದನು || ೩ ||
ಧನು ವಿವಿಧ ಕಲೆಗಳನು ಕರುಣದಿ | ಜನಪ ಕಲಿಸಲು ಮಿಕ್ಕ ಭೂವರ |
ತನುಜರೇ ಗುರುವೆನಿಸಿ ವಸುದೇವಂಗೆ ಭಟನೆನಿಸಿ ||
ಧನು ಕಲಾವಿದನಾದನಾ ಕಂ | ಸನುಮಿರುತ್ತಿರಲತ್ತವೇದಾ |
ವನಿದರದ ತಟದಲ್ಲಿ ಪಾವನ ಪುರವನಾಳ್ವರಸ || ೪ ||
ಸಿಂಗವೆರಡನು ಸಾಕಿ ತೇರೊಳು | ಸಂಗೊಳಿಸಿದದಱಿಂದೆ ಪೆಸರಲಿ |
ಸಿಂಗರಥನೆನಿಸಿಪ್ಪನಖಿಲ ನೃಪಾಲ ರಥಹಯವು ||
ಸಿಂಗರಥ ಕಿದಿರಾಗಲಮ್ಮವು | ತುಂಗವಿಕ್ರಮದೆಲ್ಲರನು ಸಲೆ |
ಭಂಗಿಸಿರುತಿರೆ ಚಕ್ರವರ್ತಿಯು ಕೇಳ್ದು ಕಡು ಮುಳಿದು || ೫ ||
ಸೊಕ್ಕಿದಾತನವರ್ಗವನು ಮುರಿ | ದಿಕ್ಕುವಡೆ ವಸುದೇವನೋರ್ವನೆ |
ತಕ್ಕನೆಂಬುದ ಮುನ್ನರಿದ ದೆಸೆಯಿಂ ಜರಾಸಂಧ ||
ಚಕ್ರಿ ಶೌರೀಪುರಕೆ ಡಂಗುರ | ವಿಕ್ಕಿಸಿದನಾತನನು ಪಿಡಿತರೆ |
ದೊಕ್ಕನೀವೆನು ಬೇಡಿದಿಳೆಯನು ಪುತ್ರಿಯರನೆಂದು || ೬ ||
ಪಿಡಿಯಿಸಿದನಾ ಕಂಸನಿಂದಾ | ಪೊಡೆವ ಡಂಗುರವನು ಮೊನೆಗೆ ತಾಂ |
ನಡೆವ ಪದದೊಳು ಸಿಂಹಮಾತ್ರದಿ ಭಾವಿಸಿದ ಹಯವ ||
ನಡಗರಿಸಿ ಹೂಡಿದನು ತೇರಿಗೆ | ಕಡುಗಲಿಯು ವಸುದೇವ ದಂಡನು |
ನಡೆವ ಪದದೊಳು ತಮ್ಮನವಿಕ್ರಾಂತನೆಂದಱಿದು || ೭ ||
ಕೂಡಿಕೊಟ್ಟನು ತನ್ನ ಬಲವನು | ಝಾಡಿಸಿದ್ದ ಸಮುದ್ರ ವಿಜಯನು |
ಘಾಡದಲಿ ಪೌದನಪುರದ ಪೊಱವಳಯದಲಿವಿಟ್ಟು ||
ಕೂಡೆ ವಸುದೇವನು ಚರನನಾ | ನಾಡೆಱಿಯನೊತ್ತಿಗೆ ಕಳುಪೆ ತಳು |
ಮಾಡದಾತನು ತಾಳಹಸ್ತನ ಕಂಡು ಕೈಮುಗಿದ || ೮ ||
ಗಂಡಗರ್ವದಲಖಿಳ ಭೂಪರ | ಹಿಂಡನೊಡೆ ಸೋಲಿಸಿದ ವಿಕ್ರಮ |
ಸಾಂಡನೀಬನೆಂಬುದನು ಕೇಳ್ದೆಮ್ಮೊಡೆಯ ವಸುದೇವ ||
ಗಂಡುಗಲಿ ರಿಪುನೃಪ ತಿಮಿರ ಮಾ | ರ್ತಾಂಡಜಯ ಕೋದಂಡಯಾದವ |
ಚಂಡ ಬಲಯುತ ದಂಡ ಬಂದನು ನಿನ್ನ ಮೇಲೆಂದ || ೯ ||
ತೋಳತಿಮಿರವದುಳ್ಳಡೆಮ್ಮೊಳು | ಕಾಳಗವ ಮಾಡಲ್ಲದಿದ್ದರೆ |
ಹೇಳಿದಾ ಕಪ್ಪವನು ತೆತ್ತೀ ತಲೆಯನುಳುಹಿಕೊಳು ||
ಬೇಳುವಡೆಯದಿರೆಂದು ದೂತನು | ಹೇಳೆ ಸಿಂಹರಥನು ಮಸಗಿ ಕಡೆ |
ಗಾಲರುದ್ರನ ತೆಱದಿ ಘರ್ಜಿಸಿ ಚರನೊಳಿಂತೆಂದ || ೧೦ ||
ಎತ್ತಿನಡೆದಾನಹಿತಪುರವನು | ಮುತ್ತಿಕಪ್ಪವ ಕೊಂಬಿನೀಗಳು |
ಎತ್ತಿ ಬಂದರಸುಗಳ ತಲೆಗಳ ಕಪ್ಪವನು ಕೊಂಬೆ ||
ಇತ್ತು ಬದುಕುವನಲ್ಲ ನನ್ನಯ | ಕತ್ತಿಯೆಂಬಾ ಮಾತಿಗಕ್ಕಟ |
ತುತ್ತುಗಳು ನಿಮ್ಮವರು ಹೇಳೆಂದವನನಟ್ಟಿದನು || ೧೧ ||
ಕಳುಹೆ ಬಂದವನಾ ತೆಱನ ಬಿ | ಚ್ಚಳಿಸಿದನು ವಸುದೇವನಿತ್ತಲು |
ಇಳೆಯೆ ರುದ್ರನ ತೆಱದೆ ಕೋಪದಿ ಪುರವ ಹೊರವಂದು ||
ಬಲವೆರಸಿ ತಾನೊಡ್ಡಿ ನಿಲಲೀ | ಇಳೆಯ ನಡುಗಿಸಿ ಸಮರಭೇರಿಯು |
ಮೊಳಗೆಯಾದವ ಬಲವು ಮೊನೆದೋಱಿದುದು ಚೂಣಿಯಲಿ || ೧೨ ||
ನಿಲ್ಲದಾಗಳು ಸಿಂಹರಥನಾ | ಬಿಲ್ಲಪಡೆತಾಗಿದುದು ಬೇಗದಿ |
ಚೆಲ್ಲಿದೊಡೆ ತನ್ನಡ್ಡಣಾಯ್ತರು ಕಾಳಗವ ಕೊಡಲು ||
ಅಲ್ಲಿ ಸಿಡಿಲುಗಳೆಱಗಿದಂದದಿ | ಬಲ್ಲಿದರ ಹರಿಗೆಗೆಳು ಮೊಳಗಲು |
ಚೆಲ್ಲೆವರಿದಿಱಿದಾಡಿದುದು ಯಾದವರ ಪರಿವಾರ || ೧೩ ||
ಬಿಸಿಯ ರಕುತದ ಕಡಲು ಹರಿದುದು | ಹಸಿಯ ತಲೆಯಟ್ಟುಗಳು ತೇಲಿದ |
ವಸಮ ವಿಕ್ರಮರಂದು ಬಱಿದಾಗಲ್ಕೆ ಸಿಂಹರಥ ||
ಮಸಗಿ ಹಯವನು ನೂಕೆ ಅದನಿ | ಟ್ಟಿಸುತ ಯಾದವ ವಾಜಿ ಬಲ ಕಂ |
ಟಿಸದೆ ತಾಗಿತು ಮಿಕ್ಕು ಹೊಕ್ಕುದು ಫೌಜನೊಡೆಗಲಸಿ || ೧೪ ||
ಭರದಗಾಳಿಗೆ ತೆರೆಗಳತ್ತಲು | ತೆರಳಿದಂದದಿ ತಾಳಹಸ್ತನ |
ತುರಗಗಳು ಓಡಿದವು ಬಳಿಕಾ ಗಜಘಟೆಗಳೆಡಗೆ ||
ಹರಿಕುಲಾಗ್ರಣಿಯಾನೆಗಳು ಬಹ | ಭರವ ಕಾಣುತ ಜಾಱಿದೊಡೆ ಸಂ |
ಗರಕೆ ತಾನಿದಿರಾದನಾ ರಥವೇಱಿ ಸಿಂಹರಥ || ೧೫ ||
ಸರಳ ಸೈವಳೆಗರೆದು ಕರಿಗಳ | ನುರುಳೆಯೆಸುತಿರೆ ಹರಿಕುಲಾಂಬರ |
ತರಣಿ ಕಾಣುತ ತನ್ನ ಗರುಡಧ್ವಜ ರಥವ ನೂಂಕೆ ||
ಭರದಿ ಮನದಿಂ ಬೇಗವಿದಿರತಿ | ಪರಿದು ಸಿಂಹಂಗಳಿಗಗಿಯದೀ |
ತುರಗವಾಂತೊಡೆ ತಾಳಹಸ್ತನು ಕಂಡು ಬೆಱಗಾದ || ೧೬ ||
ಸರಳಮಳೆಯನು ಬಳಿಕಲಾ ಸಿಂ | ಹರಥ ಕರೆದನು ಒಂದೇ ಕಣೆಯನು |
ತಿರುವಿನಿಂ ವಸುದೇವಬಿಡೆಬಹ ಸರಳುಗಳಕಡಿದು ||
ಹರಿದ ಕೂರಂಬುಗಳು ಸಿಂಹಗ | ಳೆರಡು ಜೊತ್ತಗೆಗಡಿಯೆ ಹರಿಗಳು |
ಹರಿದವತ್ತಿತ್ತಲು ಬಳಿಕ ಹೊಸರಥವ ಮೇಳಿಸಿದ || ೧೭ ||
ಅನಿತಱೊಳಗಾ ಕಂಸ ವಸುದೇ | ವನ ಪೊಱೆಗೆವಂದರಸ ಬಿನ್ನಹ |
ನಿನಗೆ ಸರಿಸನೆ ಈತನೀ ಬೆಸನೆನಗೆ ಪಾಲಿಸೆನೆ ||
ನಿನಗೆ ಕೊಟ್ಟೆನು ಜಯಿಸೆನಲು ಬಾ | ಳೆನುತ ತನ್ನಯರಥವನೂಕಿದ |
ನನುವರದೊಳಾಂತಳವಿಗೊಟ್ಟನು ತಾಳಹಸ್ತನೊಳು || ೧೮ ||
ಸಿಂಗರವನಿದಿರಾಗಿ ಸಾಯದೆ | ಹಿಂಗೆಲವೊ ಎಲೆಮುನಿದು ಕಂಸನು |
ಕೆಂಗಱಿಯ ಹೊಸಮಸೆಯ ಹೊಗರಂಬಿನಲವನಬಿಲ್ಲ ||
ತುಂಗಹಯಗಳ ಸಾರಥಿಯ ನೆ | ಚ್ಚಂಗದಿಂದಸುವೆಳದು ವಹಿಲದಿ |
ಸಿಂಗರಥವನು ಹಿಡಿದು ತಂದೊಪ್ಪಿಸಿದನೆಱೆಯಂಗೆ || ೧೯ ||
ಮೊಳಗಿದುದು ವಿಜಯಾನಕವು ಬೆಂ | ಬಳಿಯಭಯಘೋಷಣೆಯ ಮಾಡಿಸಿ |
ತಳುವದಾ ಪೌದನಪುರವ ಹೊಕ್ಕಮಳ ಮಣಿರುಚಿಯಿಂ ||
ತೊಳಪ ಜಿನಚೈತ್ಯಾಲಯಂಗಳ | ನಳವಿಗಳಿದತಿ ಭಕ್ತಿಯಲಿ ತಾ |
ನೊಲಿದು ಪೂಜಿಸಿ ಬೀಡನೆತ್ತಿದನತ್ತ ವಸುದೇವ || ೨೦ ||
ಇರದೆ ಕತಿಪಯ ಪಯಣದಿಂ ನಿಜ | ಪುರವನೈದಿ ಸಮುದ್ರ ವಿಜಯನ |
ಚರಣ ಕಮಲಕ್ಕೆಱಗಿಯೊಪ್ಪಿಸೆ ಸಿಂಹರಥನೃಪನ ||
ಅರಸನನುಜನನಂತೆ ಕಂಸನ | ಪಿರಿದು ಮೆಚ್ಚಿ ಬಳಿಕ್ಕಲೀತನ |
ಕರೆದುಕೊಂಡಾ ಚಕ್ರಿಗೊಪ್ಪಿಸೆನುತ್ತ ನೇಮಿಸಿದ || ೨೧ ||
ಜೀಯೆನುತಲಾ ರಾಜಗೃಹಕೆ ವಿ | ಡಾಯದಲಿ ಕತಿಪಯಬಲವು ಸಹ |
ರಾಯದಲ್ಲಣನೆಯಿದಿ ಚಕ್ರಿಯಕಂಡು ವಸುದೇವ ||
ಆಯೆಡೆಯೊಳಾ ಸಿಂಹರಥವನು | ಪಾಯದಲಿ ಒಪ್ಪಿಸಲು ವರ ಚ |
ಕ್ರಾಯುಧನು ಮಿಗೆ ಮೆಚ್ಚಿದನು ಭೂಪಾಲ ಕೇಳೆಂದ || ೨೨ ||
ಅತಿಸೊಬಗೆ ಜೀವಂಜಸೆಯೆನಿಪ | ಸುತೆಯನಿತ್ತಪೆ ಮದುವೆಯಾಗೆನ |
ಲತುಲ ಭುಜಬಲ ಕಂಸನೀತನು ಕಟ್ಟಿತಂದವನು ||
ಸುತೆಯನೀವೊಡೆ ಕೇಳಲೇ ಜನ | ಗತಿಯೆನಮ್ಮಯ ಕೋಲಮಗನತಿ |
ಮೆರನೀತಗೆ ಕೊಡುವುದೆಂದನು ಕೂರ್ತು ವಸುದೇವ || ೨೩ ||
ಎನೆ ಜರಾಸಂಧನನು ವಸುದೇ | ವನ ಗುಣಕೆ ಮೆಚ್ಚಿದನು ಪೆಱನಾ |
ವರ ಪರಾಕ್ರಮ ವೀರವಿತರಣಗಂಡು ಮೆಚ್ಚದವ ||
ಮನುಜನಲ್ಲೆಂದಾಡಿ ಬಳಿಕೀ | ತನ ಕುಲವದೇನಾರ ಮಗನೆನೆ |
ಜನಪ ಚಿತ್ತೈಸೆಂದು ಬಿನ್ನೈಸಿದನು ಕಲಿ ಕಂಸ || ೨೪ ||
ಇಳೆಯೊಳಾ ಕೌಸಂಬಿಯೊಳು ಮಿಂ | ಬುಲಿಗ ಕಪಿಲರಜಾದರೆಯು ಮಿಂ |
ಗುಲಿತಿ ಮಗ ತಾನವರಿಗಂಬಿಗ ಕಂಸನೆಂಬನೆನೆ ||
ಇಳೆಯೆಱೆಯನಿಂತೆಂದನೀ ಕಡು | ಗಲಿತನವು ಮಿಗೆ ಭದ್ರಮೂರ್ತಿಯು |
ಕುಲಜಗಲ್ಲದೆ ನೀಚಗಾಗದು ಕೇಳು ವಸುದೇವ || ೨೫ ||
ಎಂದು ದೂತರ ಕಳುಹಲಾ ಪೊಳ | ಲೊಂದಿಯಂಬಿಗಗೇರಿಯಲಿ ತಿಳಿ |
ದಂದು ಕಪಿಳರ ಜೋದರೆಯರನು ಕಂಡು ಕಂಸಂಗೆ ||
ತಂದೆ ತಾಯ್ಗಳು ನೀವೆ ಗಡ ನೀ | ವಿಂದೆ ಬಪ್ಪುದು ಚಕ್ರವರ್ತಿಯು |
ತಂದು ಕೊಡವೇಳ್ದೆಮ್ಮನಟ್ಟಿದನೆಂದರಾ ಚರರು || ೨೬ ||
ಎನವಲರು ಕಡುಬೆದರಿಯಿದು ಕಂ | ಸನ ದೆಸೆಯಿನಾದೂಳಿಗವು ಜೀ |
ವನಕೆ ಬಂದುದು ತವಗೆನುತ ಕಂಗೆಟ್ಟು ನವಗವನು ||
ತನುಜನಲ್ಲ ಯಮುನೆಯೊಳು ಕಂ | ಚಿನ ಸುಮಂದಸಿನೊಳಗೆ ಬರೆ ಭೋಂ |
ಕನೆ ಪಡೆದು ಕಾಂಸ್ಯೋದರದಲಿರೆ ಕಂಸವೆಸರಿಟ್ಟು || ೨೭ ||
ನಡಪೆ ಬೆಳದುದ್ದಂಡ ತನದಲಿ | ನಡೆಯೆ ಖಳನನು ನಾವಳುಕಿ ಪೊರ |
ವಡಿಸಿದೆವುಯೆಂದಾ ರಜೋದರಿ ಮಂದಸನು ತೋರಿ ||
ನಡೆಯೆ ನೀವಂಜದಿರಿ ಕಡುಕಡು | ಬಡವರೆಂದೊಡಗೊಂಡು ವರನವ |
ರೊಡೆಯಚಕ್ರಿವೆಲ್ಲವನು ಪೇಳ್ದಿರಿಸಿ ಮಂದರಸನು || ೨೮ ||
ತರಿಸಿ ಅದನೋದಲ್ಕೆ ಕೆಲದಲಿ | ಬರಹವಿರಲೋದಿಸಿಯರಿದನೀ |
ತರುಣ ತನ್ನಯ ತಂಗಿ ಪದ್ಮಾವತಿಯ ಸುತನೆಂದು |
ಸ್ಪುರಿತ ರತ್ನವು ಕೆಸರಿಲಿರೆ ಬ | ಲ್ಲರು ಬಿಸುಡುವರೆಕಾಗೆ ಗೂಡೊಳು |
ಪೊರೆಯೆ ಕೋಗಿಲೆಗುಂಟೆ ನಿಂದೆಗಳೆಂದನಾ ಚಕ್ರಿ || ೨೯ ||
ತಿಳಿದನಾಗಳು ಕಂಸ ತನ್ನಯ | ಕುಲವ ಬಳಿಕಾ ಚಕ್ರಿ ನೀನೆನ |
ಗಳಿಯನೆಂತುಂ ಕುವರಿ ಜೀವಂಜಸೆಗೊಡೆಯ ನೀನೆ |
ನಲವಿನಿಂದಿಂತೆಂದು ಅಳಿಯನ | ಸಲಹಿದವರಿಗೆ ಬೇಳ್ಪುದನು ಕೊ |
ಟ್ಟಳಿಯಗಾತ್ಮಜೆಯನು ಸುಲಗ್ನದಿ ಮದುವೆ ಮಾಡಿದನು || ೩೦ ||
ಅಳಿಯಗಗ್ಗಳ ವಸ್ತುವಾಹನ | ಗಳನು ಕೊಟ್ಟನು ನಿನ್ನ ಮೆಚ್ಚಿದ |
ಇಳೆಯ ಕೊಡುವೆನು ಬೇಡೆನಲು ಮಂದಾಕಿನಿಯೊಳೆನ್ನ ||
ಇಳಿಯ ಬಿಟ್ಟಾ ತಂದೆಯಾಳುವ | ಇಳೆಯ ಬೆಸಸೆನೆ ಕಂಸನೆದೆಯೊಳು |
ಬೆಳೆವ ರೌದ್ರವ ಕಂಡು ತಾನಿಂತೆಂದ ಮನದೊಳಗೆ || ೩೧ ||
ಕೊಡದಿಹನೆ ಆ ನೆಲನನೆನ್ನಯ | ನುಡಿಗೆ ಭಂಗವು ಕೊಟ್ಟೆನಾದೊಡೆ |
ಕೆಡಿಸದಿರನಿವ ತಂದೆಯಾಗಿರ್ದುಗ್ರಸೇನನನು ||
ಕಡಲಲುದಯಿಸಿದಗ್ನಿ ಕಡಲನು | ಕುಡಿವುದಲ್ಲದೆ ಕೆಡಿಸುವುದೆ ಮಗ |
ಹಡದ ತಂದೆಯನೆಂತು ಮುಳಿದೇಗೈವೆ ತಾನೆಂದ || ೩೨ ||
ಕೊಟ್ಟನಾದೇಶವನು ಕಂಸನು | ತುಷ್ಟನಾದನು ತಂದೆಗೀತಗೆ |
ಕಷ್ಟವೇತಱಿನಾದುದೆಂದೊಸೆದವಧಿ ಬೋಧಕರ ||
ನೆಟ್ಟನಾ ಮುನಿಹಂಸರಡಿಗಳ | ಲಿಟ್ಟು ನೊಸಲನು ಚಕ್ರವರ್ತಿಯು |
ಕೊಟ್ಟ… ದೇವನುಂ ಬೆಸಗೊಂಡಾರಾತೆಱನ || ೩೩ ||
ವರಹಿತಾಶ್ರಿಮ ಮುನಿಗಳವಧಿಯ | ನಿರದೆ ತಿಳಿದೆಂದರು ಮಹೀಪತಿ |
ಧರೆಯಲೊಪ್ಪುವ ಕಾಶಿಯಲಿ ತಾಪಸ ವಶಿಷ್ಟಾಖ್ಯ ||
ಭರದಿ ಪಂಚಾಗ್ನಿಯ ನಡುವೆ ತಪ | ವಿರುತಿರಲು ವರವೀರಭದ್ರರು |
ಪರಮಗುಣಭದ್ರರುಯೆನಿಪ ಜಿನಮುನಿಗಳೊಂದು ದಿನ || ೩೪ ||
ಬರುತ ಕಂಡಜ್ಞಾನ ತಪವಿದ | ರುದಿದುರಿತವನು ಸುಡಲರಿಯದೆನೆ |
ಪರಸುವನು ಪಿಡಿದೆತ್ತಿ ಪರಿತಂದಾ ವಶಿಷ್ಟಕನು ||
ಉರಿಯನುಗುಳುತಲೆನ್ನತಪದ | ಚ್ಚರಿಯ ತಪವಜ್ಞಾನ ತಪವೆಂ |
ದಿರಿ ಅದನು ನನಗೀಗ ತೋರಿಪುದಂದು ಕಡುಕೈದ || ೩೫ ||
ಎನಲವರು ಆ ತೆರನ ತೋರುವೆ | ವೆನುತ ಹಳ್ಳಿಯ ಹಾಳಲೊಳು ಬೇ |
ವನಿತು ಜೀವವ ತೋರೆಕಂಡು ವಶಿಷ್ಟನಘಕಂಜಿ ||
ಮನವೊಲಿದು ಕೊಡಲಿಯನು ಬಿಸುಟಾ | ಮುನಿವರರ ಕೈಯಲಿ ಸುದೀಕ್ಷೆಯ |
ನನುನಯದೆ ತಳೆದೆಸಗಿದನು ಭೂನಾಥ ಕೇಳೆಂದ || ೩೬ ||
ಪರಮತಪದಿಂದುದಯ ಗಿರಿಯೊಳ | ಗಿರೆ ತಪಸ್ಸಾಮರ್ಥ್ಯದಿಂದಾ |
ಗಿರಿಯ ವನದೇವತೆಗಳಿಂ ಬೆಸನೆಂದು ಬಂದೊಲಿಯೆ ||
ಧರಿಸಿ ಆ ದೇವತೆಗಳನು ಬಳಿ | ಕಿರದೆ ಮಧುರೆಯ ವಿಪಿನದೊಳಗೆ |
ಚ್ಚರಿಯೆನಿಪ ಮಾಸೋಪವಾಸದಿರ್ನಿರಿರಲೊಡನೆ || ೩೭ ||
ಅಱಿದು ಬಂದಾ ಮುನಿಯನರ್ಚಿಸಿ | ಯೆಱಗಿ ಬಳಿಕಾ ಉಗ್ರಸೇನನು |
ತುಱುಗಿದಾ ಭವ್ಯರ್ಗೆ ಪೇಳ್ದನು ಪಾರಣೆಯ ದಿವಸ ||
ಪೆಱರದಾರುಂ ನಿಲಿಸದಿರಿ ಸಿರಿ | ನೆಱಿಯಲಾನೇ ನಿಲಿಪೆನೆಂದಡಿ |
ಗೆಱಗಿ ಹೋದನು ತನ್ನಹೊಳಲಿಗೆ ಭೂಪಕೇಳೆಂದ || ೩೮ ||
ಬಳಿಕವರು ಪಾರಣೆಯದಿನವಾ | ಪೊಳಲಿಗಿರೆ ಭಾವರಿಯನಿಕ್ಕಲು
ಬಳದ ಮದಕರಿ ಸೊಕ್ಕಿ ಕಂಭವ ಮುಱಿದು ಹರಿದಾಡೆ ||
ಬಳಸಿದಾ ಕೋಳಾಹಲದಳಾ | ಇಳೆಯೆಱಿಯನಾ ಮುನಿಪರನು ತಾ |
ನಿಲಿಸ ಮರೆದೆನಲಾಭದಿಂದಾ ಮುನಿಬನಕೆ ಹೋದ || ೩೯ ||
ತಿಂಗಳುಪವಾಸವಾಚರಿಸಿ ಪುರ | ಕಂಗಯಿಸಿ ಬರೆ ಮತ್ತೆ ಚರಿಗೆಗೆ |
ಸಂಗೊಳಿಸತಾನೃಪನ ಸದನವು ಬೆಂದುದದರಿಂದ ||
ಹಿಂಗಿತಿವರಿಗೆ ಚರಿಗೆ ಮತ್ತೆ ಜಿ | ತಾಂಗಜರು ಬನವೈದಿ ಮತ್ತಂ |
ತಿಂಗಳನಶನವಿರ್ದು ಚರಿಗೆಗೆ ಬಂದನಾ ಮುನಿಪ || ೪೦ ||
ಅಂದು ಪೆಱನವನೀಶನೋರ್ವನು | ಬಂದೊಡಾವಿಭುವಿದಿರುಗೊಂಬಾ |
ದಂದುಗದಿ ಈ ಮುನಿಪರನು ನಿಲಿಸಲು ಮರೆಯೆ ಯತಿಪ ||
ಪಿಂದೆ ಮಗುಳುತ ಪಸಿವುನಿಚ್ಚಿಂ | ಬೆಂದು ಬಿಸಿನೊಳು ಕಡುಬಳಲಿಕಣು |
ನಂದಿನಾಲ್ವಟ್ಟೆಯಲಿ ಕೆವರನು ನೆಮ್ಮಿಯಿರಲೊಡನೆ || ೪೧ ||
ನೆರೆದು ನೋಳ್ಪವರೆಲ್ಲರುಂ ಈ | ಪರಮಗುರುಗಳನಾರು ನಿಲಿಸದ |
ಪರಿಯಲೀಪುರಜನಕೆ ಸಾರಿದ ತಾಂ ನಿಲಿಸಲೊಲ್ಲ ||
ಅರಸನಿವರೊಳಗೇನು ವೈರವೋ | ಕರ ಬಳಲಿದಪರಕಟಕಟ ಯೆಂ |
ಬರನುಡಿಯು ಕಿವಿಸೋಂಕಲಾ ಮುನಿಗಾದುದಕ್ಷಮೆಯು || ೪೨ ||
ಮುನಿಗೆ ಕೋಪವು ಪುಟ್ಟಿ ಮುನ್ನಿನ | ಬನದ ದೇವತೆಗಳು ಮುನಿಪ ಬೆಸ |
ನನು ಕೊಡುವುದೆಂದೆರೆಯಲುತ್ತರ ಜನ್ಮಕೆಮಗೊದಗಿ ||
ತನುವಿನಿಂದಸು ಬಿಡುವ ವೇಳೈ | ದೆನೆ ಅದೃಶ್ಯದಿ ಪೋದವವು ಭೋಂ |
ಕನೆ ಮುಡುಪಿ ತನೃಪನ ಮಡದಿಯ ಗರ್ಭದೊಳು ಪೊರೆದ || ೪೩ ||
ಬಸುರಲಿಂತಾ ಜೀವನಿರಲಾ | ಶಶಿಮುಖಿಗೆ ಕಡುಕೆಟ್ಟ ಬಯಕೆಯ |
ಲಸುವ ಬಿಡುವಂತೈದೆ ಬಡವಾಗಿರಲವಳ ಪತಿಯು ||
ಉಸುರು ನಿಮಗೇಂಬಯಕೆಯೆನಲದ | ನುಸುರದಿರೆ ನೀಂ ನಂಜದಳುಕದೆ |
ಕುಸಿದ ತಲೆಯನು ನೆಗೆದು ನಲ್ಲಳೆ ಹೇಳು ಹೇಳೆಂದ || ೪೪ ||
ಎಂದೊಡೆಲ್ಲರ ತೆಱಪು ಮಾಡಿಸಿ | ಎಂದಳೇನೆಂದುಸರ ಬಹುದೀ |
ಬೆಂದ ಬಯಕೆಯ ನಿನ್ನೆದೆಯನಲಗಿಂದಿಱಿಯೆ ಹರಿದು ||
ಬಂದನೆತ್ತರನೀಂಟ ಬೇಕೆಂ | ಬೊಂದು ಬಯಕೆಯು ಪುಟ್ಟಿತೆನಗಿದ |
ರಿಂದೆ ಸಾವೆನೆ ತಳವೆನೆಂದಳು ಭೂವರನ ರಾಣಿ || ೪೫ ||
ನನಗೆನೀನೆಮ್ಮುಳಿದವಳೆ ಜೀ | ವನಕೆ ಜೀವನವಾದವಳೆ ಮು |
ನ್ನಿನ ಭವದ ಹಗೆ ನಿನ್ನ ಗರ್ಭದೊಳೊಗೆದು ತಾನೆನಗೆ ||
ಮುನಿದ ದೆಸೆಯಿಂದೀ ಬಯಕೆಯಿದು | ನಿನಗೆ ಪುಟ್ಟಿತು ನಿನ್ನ ಬಯಕೆಯ |
ನನುನಯದಿ ತೀರ್ಚುವೆನು ನಲ್ಲಳೆ ನೋಯಬೇಡೆಂದ || ೪೬ ||
ಎಂದು ಮಂತ್ರಿಶಿರೋಮಣಿಯನೊಲ | ವಿಂದೆ ಕರೆದೀ ತೆಱನ ಪೇಳಲು |
ಮಂದರೋಪಮ ವೀರನೀವೆಂದಂತೆ ಪಗೆಪೊರೆದ ||
ಎಂದು ತನೃಪನಂತೆ ಲೆಪ್ಪದ | ಲೊಂದು ರೂಹನು ಮಾಡಿಸಿಯೆ ಮ |
ತ್ತೊಂದು ದಿನವಾನೃಪನ ಸಜ್ಜೆಯ ಮನೆಯಲಿರಿಸಿದನು || ೪೭ ||
ಬಂದು ತನ್ನೊಡತಿಯ ಬಳಿಗೆ ತಾ | ಯೆಂದೆ ಕೈಗಳ ಮುಗಿದು ನಿಮಗಾ |
ನಿಂದು ಬಯಕೆಯ ಸಲಿಸುವೆನು ಚಿತ್ತೈಸೆನುತ ಕರೆದು ||
ತಂದು ಯೆಱೆಯನ ರೂಪಗಾಣ್ಬಾ | ಗೆಂದನೋಪನ ನೋಡುತಿರೆವೊಡೆ |
ಬಂದಪುದೆಕೈಯೆನುತ ವಸನವ ಮುಸುಕಿದನು ಮುಸುಡ || ೪೮ ||
ಸುರಗಿಯಿಂದಾ ಲೆಪ್ಪದರಸನ | ಉರವನಿಱಿದೀಂಟಿದಳು ಮಿಗೆ ನೆ |
ತ್ತರನು ಬಳಿಕಾ ಮೂರ್ತಿಮೂರ್ಛಿಸಿದಂತೆ ಬೆಂಬೀಳೆ ||
ಅರಸಿ ಮೋರೆಯೊಯೆಂದು ಮೂರ್ಛೆಯ | ಲೊರಗೆ ಲೆಪ್ಪದ ರೂಪನತ್ತೋ |
ಸರಸಿ ಅರಸನ ಕರೆಸಿ ಈಕೆಯ ಮೂರ್ಛೆತಿಳುಹಿದರು || ೪೯ ||
ಬದುಕಿದನು ನಮ್ಮೊಡೆಯ ನೀವೇಂ | ಬೆದರದಿರಿಯೆಂದಾ ನೃಪಾಲಕ |
ನೆದೆಗೆ ಲೇಪನವನೊಟ್ಟಿ ಪದ್ಮಾವತಿಯಸಂತೈಸಿ ||
ಪದಳುದಿಂದಿರಲೊಡನೆ ನವಮಾ | ಸದ ನೆಲೆಗೆ ಶಿಶುವುದಿಸಿ ತಂದೆಯು |
ವಿದಿತ ಮಂತ್ರಿಯು ಬಂದು ನೋಡುವ ಪದದೊಳಾ ಕುವರ || ೫೦ ||
ಅರಸಕೇಳೈ ತಂದೆಯನು ಚೆ | ಚ್ಚರಮೆ ಕಾಣುತ ಕೋಪದಿಂ ಕ |
ಣ್ಣುರಿಯನುಗುಳುವ ತೆರ ಕಿಸು ಸಂಜಯನು ನಿಂದಿಸಲು ||
ಅರಸನಱಿದನು ಶತ್ರುವಿಂತೀ | ಪರಿಯುದಯಿಸಿದನೆಂಬುದು ಬಳಿ |
ಕಿರದೆ ಮಂತ್ರಿಯು ಕಾಂಸ್ಯ ಮಂಜೂಶೆಯನು ತರಿಸಿದನು || ೫೧ ||
ಜತನದಲಿ ಮಂದಸಿನೊಳರಿಸಿದ | ಪತಿಸುತನ ಕೆಲವಲಗೆಯಲಿ ಭೂ |
ನುತನ ತಾಯ್ತಂದಿರ ಪೆಸರನು ಬರೆಸಿ ಯಮುನೆಯಲಿ ||
ಮತಿಯುತನು ಬಿಡೆ ಬಂದ ಮಂದಸ | ನತಿ ಚಮತ್ಕಾರದಲಿ ಪಿಡಿದನು |
ಕ್ಷಿತಿಪ ಕೇಳಾ ವಾಗುಲಿಕನೆಂದೆಲ್ಲವನು ತಿಳುಪೆ || ೫೨ ||
ತಿಳಿದರಾ ವಸುದೇವ ಚಕ್ರಿಯು | ಬೆಳೆದ ಕಂಸನ ತೆಱನ ಮುನಿಪಗೆ |
ತುಳಿಲುಗೈದೈತಂದು ನಿಜಮಂದಿರದೊಳಿರೆಕಂಸ ||
ಘಳಿಲನಾ ಮಧುರೆಗೆ ಪಯಣವನು | ತಿಳಿದು ವಸುದೇವನ ಬಳಿಗೆ ಬಂ |
ದಿಳೆಯೆರೆಯಗೆಱಗಿದ ಬಳಿಕಲಿಂತೆಂದನಾ ಭೂಪ || ೫೩ ||
ದೇವ ಬಿನ್ನಪ ನಿಮ್ಮಡಿಗಳ ಕೃ | ಪಾವಲೋಕನದಿಂದಮೆನಗೆಸ |
ವೀವಿಭುತ್ವ ಮದಾದುದೆಮ್ಮ ದೇಶ ಕೊಡಗೊಂಡು ||
ದೇವ ಬಿಜಯಂಗೈಯ ಬೇಕೆನ | ಲಾವು ಬಂದಪೆವೆನಲು ಸಂಭ್ರಮ |
ದೀವಿ ಪಯಣೋದ್ಯೋಗದಲಿ ಚಕ್ರಿಯ ಬಳಿಗೆ ಪೋದ || ೫೪ ||
ಹೋಗಿ ಬಿನ್ನಹ ಮಾಡಿ ಚಕ್ರಿಯು | ಮಾಗ ವಸುದೇವನು ಬೆರಸಿ ನೀಂ |
ಪೊಗಿ ಸುಖದಿರವೇಳ್ದು ನೇಮಿಸಿ ಕಳುಹಿಸಿಕೊಂಡು ||
ಪೋಗಿ ಮಧುರಾಪುರದಹೊರಗಿಂ | ಬಾಗಿ ಸೇನಾಪರಿವೃತನು ನಿಂ |
ದಾಗಳಟ್ಟಿದ ದೂತರನು ಕಲಿಕಂಸ ಭೂಪಾಲ || ೫೫ ||
ಉಗ್ರಸೇನನ ಕಂಡು ದೂತರು | ಭಾರ್ಗವನ ಸಮ ಕಂಸಭೂಪನ |
ನಾಗ್ರಹದಿ ತಾಂ ಬಾಳನಾಗಿರೆ ನದಿಯೊಳಗೆ ಬಿಸುಟ ||
ಅಗ್ಗಳದ ಪಾಪದ ಫಲದ ಸಾ | ಮಗ್ರಿ ನಿನಗಿಂದುದಯವಾದುದು |
ಭೋರ್ಗನೋಡೊಂದೆಡೆಗೆ ಬಲ್ಲದೊಡೆಮ್ಮೆಡೆಯನುಳುಹ || ೫೬ ||
ಎಂದು ಪೇಳುವ ಮುನ್ನ ಮುಳಿಸನು | ತಂದು ಗಜಹಯರಥ ಪದಾವತಿಯ |
ನೊಂದುಗೂಡಿಯೆ ಪುರವ ಪೊರವಟ್ಟೋಡಿ ನಿಲಲೊಡನೆ ||
ತಂದೆಯನು ಕಾಣುತಲೆ ಮಿಗೆ ಭುಗಿ | ಲೆಂದು ದೋಷಾವೇಶ ಕಂಸನ |
ನೊಂದೆ ನಾಗರ ಕಂಡ ಗರುಡನ ತೆಱದಲೆಱಗಿದನು || ೫೭ ||
ಸವರಿ ಹೊಕ್ಕನು ಕಡುಗದಲಿ ಮು | ತ್ತುವ ಬಲವನಿದಿರಾದ ತಂದೆಯ |
ತವಕದಲಿ ಕಟ್ಟಿದನು ಹರಿಕುಲ ಮಣಿಯು ಮುಂದಿಟ್ಟು ||
ಅವತರಿಸಿದನು ತತ್ಪುರಕೆ ಬಳಿ | ಕವನು ಪದ್ಮಾವತಿಯನಾಕೆಯ |
ಧವನೆನಿಸಿದಾ ಉಗ್ರಸೇನನಗೀರ್ವರನು ತಂದು || ೫೮ ||
ಪುರದ ಗೋಪುರದೊಳಗೆ ಅಸಿ ಪಂ | ಜರದೊಳಿಟ್ಟನು ಮೂಲಬಲವನು |
ಪಿರಿಯರನು ಮನ್ನಿಸಿ ಸುಖದಿ ರಾಜ್ಯವನು ಪಾಲಿಸುತ ||
ಎರೆದವರಿಗೆ ನೃಪಾಲ ರೂಪಿನ | ಸುರಕುಜವು ಮುಳಿದಹಿತನೃಪರಿಗೆ |
ಉರಿಯನುಗುಳುತ ಬಂದ ಜವನೆನಿಸಿರ್ದನಾ ಕಂಸ || ೫೯ ||
ಬಸುಱ ಬಂದಾ ಕಂದನಿವನೆ | ನ್ನಸುವ ಸೆಳೆವಾವೈರಿಯಿವನೆಂ |
ದೊಸೆದು ಮುಳಿದಾಡುವರ ನುಡಿಯಂತಿರಲಿ ಮೆಚ್ಚೆನದ ||
ಬಸುರ ಬಂದನೆ ತಾಯ್ಗೆ ತಂದೆಗೆ | ಮಸಗಿಯಸಿ ಪಂಜರದಲಿಕ್ಕನೆ |
ಶಿಶುವ ಹರಿದೀಡಾಡರೇ ಅವರರಸ ಕೇಳೆಂದ || ೬೦ ||
ಅರಸುತನ ತನಗಾದುದಕೆ ದು | ಷ್ಟರನು ಈಕ್ಷಿಸಿ ಸಜ್ಜನರುಗಳ |
ಪರಿದು ರಕ್ಷಿಸಿ ಬಂದು ಜನಕಾನಂದವನು ಮಾಡಿ ||
ಗುರುಹಿರಯರನು ಭಯ ಭಕುತಿಯಿಂ | ದೆರಗಿ ಪೂಜಿಸಿ ಮೂರು ವರ್ಗವ |
ನರಪಿ ಬಾಳದೆ ಮರುಳು ಮಾಣಿಕಗಂಡ ವೋಲಿಹುದೆ || ೬೧ ||
ವರಶತೇಂದ್ರನ ಮಸ್ಯ ಜಿನಪತಿ | ಚರಣ ಸರಸೀ ಜಾತಮದಮಧು |
ಕರಲಸಿತ ಕವಿಸಾಳ್ವ ವಿರಚಿತ ಮೃದುಲಲಿತವಾದ ||
ಪರಮ ನೇಮೀಶ್ವರನ ಪಾವನ | ಚರಿತೆಯೊಳು ಮೂರನೆಯದೆನಿಸಿಯೆ |
ದೊರೆವಡೆದುದವನೀ ವಿಧಿತ ವಸುದೇವ ಪರ್ವವಿದು || ೬೨ ||
|| ವಸುದೇವ ಪರ್ವಕ್ಕಂ ಅಂತು ಸಂಧಿ ೧೯ ಕ್ಕಂ ಮಂಗಳಮಹಾ ||
Leave A Comment