ಸಂಧಿ ೨೦

ಕೆಣಕಿ ಜೀವಂಜಸೆಯ ದೆಸೆಯಿಂ | ಪ್ರಣತರತಿ ಮುಕ್ತಕರ ಕೈಯಲಿ |
ಅಣುಗರುರು ಭವ ವಱಿದರಾ ದೇವಕಿಯು ವಸುದೇವ || ಪದ್ಯ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ಮಲಯಾವತಿ ವಿಷಯದೊಳು |
ಮೇಳಿಸಿಹುದು ದಶಾರ್ಣವವು ಪುರದೇವಸೇನಂಗೆ |
ಆ ಲಲಿತ ಧನದೇವಿ ಸತಿಗುಣ | ಲೋಲನತಿ ಮುಕ್ತಕನು ತನುಜನು |
ಬಾಲೆ ದೇವಕಿ ಪುತ್ರಿಯಿರಲತಿ ಮುಕ್ತಕ ಕುಮಾರ || ೧ ||

ಪರಮ ವೈರಾಗ್ಯದಲಿ ದೀಕ್ಷಾ | ವರರಮೆಯನಪ್ಪಿದನು ಇತ್ತಲು
ಹರಿಣಲೋಚನೆ ದೇವಕಿಯು ಸುಖದಿರುತಿರಲು ಕಂಸ ||
ಅರಿದನಾ ದೇವಕಿಯು ತನ್ನಯ | ಕಿರಿಯ ತಂದೆಯ ಕುವರಿಯೆಂಬುವ |
ವರನು ವಸುದೇವಗೆಯೆನುತ ಬಳಿಯಟ್ಟಿ ಕರಸಿದನು || ೨ ||

ಕರಸಿ ಹೆಂಗಳ ಮಾಣಿಕವನಿದು | ಗುರು ಪದಾಂಬುಜ ಪೊಜೆಯೆಂದತಿ |
ಹರುಷದಲಿ ವಸುದೇವ ನೃಪತಿಗೆ ತಾಂ ಸುಲಗ್ನದಲಿ ||
ಪರಿಣಯವವನು ಉತ್ಸವದಿ ಬಿ | ತ್ತರಿಸಿದನು ಮದುವೆಗೆ ಮೊದಲೆ ತಾಂ |
ಕರೆಸಿದನು ಬಲಭದ್ರನನು ಸುಖದಲಿ ಮಧುರೆಯೊಳಗೆ || ೩ ||

ಪರಮಭಕ್ತಿ ಪ್ರೀತಿಯಲಿ ಬೇ | ಱರಮನೆಯ ಮಾಡಿಸಿದ ನೀವೇ |
ಗುರುವು ತಾನೇ ಶಿಷ್ಯನೆಂದಾ ಕಂಸಭೂಪಾಲ ||
ಇರಿಸಿ ಕೊಂಡಿರೆ ದೇವಕಿಯು ಹಲ | ಧರನು ಸಹ ವಸುದೇವ ಭೂಪತಿ |
ಹರುಷದಿಂದಿರುತಿರಲೊಡನೆ ಭೂಪಾಲ ಕೇಳೆಂದ || ೪ ||

ದೇಶದೊಳಗೆ ವಿಹಾರಿಸುತ ಗುಣ | ರಾಶಿ ಅವಧಿಜ್ಞಾನ ನುತವಾ |
ರಾಶಿ ಭವ್ಯರ ಪುಣ್ಯ ಪುಂಜವಿಳಾಸಿ ಅಘಲತೆಗೆ ||
ಓಸರಿಸ ದುಚ್ಚೇದಿಸುವ ಸಖಿ | ಳಾಸಿತಿಂಗಳಿಗೊಂದುಣಿಸಿನುಪ |
ವಾಸಿ ಅತಿಮುಕ್ತಕ ಮುನೀಶ್ವರರಂದು ಭಾವರಿಗೆ || ೫ ||

ಬರಲು ಕಾಣುತ ದೇವಕಿಯು ನಿ | ರ್ಭರ ಸುಭಕ್ತಿಯಲಣ್ಣನಾದಾ |
ಪರಮ ಗುರುಗಳನಿದಿರಿಗೊಂಡುವಿಧಾನಪೂರ್ವಕದಿ ||
ಚರಿಗೆ ಮಾಡಿಸಿ ತುಂಗ ಪೀಠದೊ | ಳಿರಿಸಿ ಚರಣದ್ದಿತಯವನು ನಿಜ |
ಕರ ಕಮಲದಿಂದೊತ್ತುತಿರೆ ಜೀವಂಜಸೆಯು ಬಂದು || ೬ ||

ಭಾವ ಬಿಜಯಂಗೈದಿರೈ | ದೇವಕಿಯು ಮೈನೆರೆದಳನುಜೆಗೆ |
ನೀವುವುಡಗೊರೆದಂದುದೀ ಬತ್ತಲೆಯೆ ಇದುನುಡಲಿ ||
ಈವನಿತೆಯೆಂದು ಱೆ ನಗುತ ಮ | ತ್ತಾ ವನಿತೆಯಾ ರಕ್ತವಸ್ತ್ರದ |
ನಾವಿರಕ್ತರ ಮೊಗಕೆ ತೋಱಿಸಿ ರೋಡಿಸಿದಳಾಕೆ || ೭ ||

ಮುನಿಗಳೆಂದಱಿಯದೆ ಜರಾಸಂ | ಧನ ಕುಮಾರಿತಿ ನವಗೆ ಸೇನಾ |
ದುನಿಯೆನಿಪ ದೆಸೆಯಿಂದರೋಡಾಡುವುದು ಗುಣವಲ್ಲ ||
ಎನುತಲಾಮುನಿ ಅಲ್ಲಿರದೆ ಪೋ | ಪನಿತಱೊಳು ತಾನಡ್ಡನಿಂದವ |
ರನುಜೆ ದೇವಕಿನಾಣ್ಚೆ ಓಡುವ ಪರಿಯಲಾಡಿದಳು || ೮ ||

ಅವರ ವಾಚಾ ಸಮಿತಿಗವಳಾ | ಡುವ ನುಡಿಯೆ ಮಿತ್ತಾದುದೆನೆ ಕಾ |
ಡುವೆಯ ನಿನ್ನುದ್ದಂಡತನುವನು ತೋಱಿದವುನಮಗೆ ||
ಭುವನದೊಳಗುದ್ದಂಡನೆನಿಸುವ | ಕುವರನನು ದೇವಕಿ ಪಡೆವಳಾ |
ಕುವರನುದ್ದಂಡಿಕೆಯ ನೀ ನೋಡೆಂದನಾ ಮುನಿಪ || ೯ ||

ಎನಲು ನಿಮ್ಮಯ ತಂಗಿ ಪಡೆವಾ | ತನಯನುದ್ದಂಡಿಕೆಯದೇನದ |
ನನಗೆ ಹೇಳದೆ ಹೋಹಿರಾದರೆ ಹೋಗಗುಡೆನೆಂದು ||
ಮುನಿಸ ಬೆಳಯಿಸಿ ಕೀಱಿ ಕೇಳುವ | ವನಿತೆಗವರಾಡಿದರು ನಿನ್ನೋ |
ಪನನು ನಿನ್ನಯ್ಯನನು ಕೊಲುವುದ್ದಂಡನವನೆಂದು || ೧೦ ||

ನುಡಿದ ಮುನಿಪನ ನುಡಿಯೆ ಕಿವಿಗದು | ಸಿಡಿಲೆಱಗಿದಂತಾಗೆ ಮನದೊಳು |
ಕಡು ಬೆದಱಿ ಸಿಗ್ಗಾಗಿ ಬಳಿಕಾ ರಕ್ತವಸ್ತ್ರವನು ||
ಕೆಡಪಿ ಪೊಡವಿಯೊಳೊಡನೆ ಕೇ | ಸಡಿಯಲೊರಸಲು ನಾಡುನಿಯೆ ಕೊ |
ಳ್ಳೊಡೆಯನಹನೀ ಪೊಡವಿಗಾ ದೇವಕೆಯ ಸುತನೆಂದ || ೧೧ ||

ಎಂದು ಮುನಿಪತಿ ಪೋದನತ್ತಲು | ಬಂದುದಾಗಲೇ ಶೋಕ ರಸವೆಂ |
ಬಂದದಲಿ ಕಣ್‌ನೀರ ಪೊನಲನು ಸುರಿದುದುಗುಡದಲಿ ||
ಬಂದು ಸಜ್ಜೆಯಲೊಱಗಿದಳು ಕಡು | ನೊಂದಳಳಲಿದಳೊಳಗೊಳಗೆ ಮಿಗೆ |
ಬೆಂದಳುಸ್ಸೆಂದಳು ಹೊರಳಿದಳು ಕಂಸನರ್ಧಾಂಗಿ || ೧೨ ||

ಶಶಿವದನೆ ಮೈನೆರೆವುದೇತಕೆ | ಹಸಿದ ಮುನಿಪತಿ ಬರಲದೇತಕೆ |
ಸಸಿನಿರದೆ ನಾನಾಮಹಾವ್ರತಿಗಳ ಕೆಣಕಲೇಕೆ ||
ಬಸುರಿ ಕೆಚ್ಚನು ಬೆಳೆಯಿಸುವನುಡಿ | ಯಿಸುರಲೇಕವರೆಂದು ಜೀವಂ |
ಜಸೆಯಿದೆನ್ನಯ ಪೂರ್ವದುಷ್ಕೃತವೆಂದು ಹೊರಳಿದಳು || ೧೩ ||

ಬಂದನಾ ಸಮಯದಲಿ ಕಂಸನು | ಸೌಂದರ್ಯ ಮೊಗ ಚಂದಿರನ ಮೇ |
ಲೊಂದು ಮುಗಿಲಾಚ್ಛಾದಿಸಿದ ತೆಱನಾಗಿ ಕಳೆಗುಂದಿ ||
ಕಂದಿರಲು ಕಾಣುತವೆ ಮನದಲಿ | ನೊಂದು ಮಂಚವ ನೊಂದಿ ನೋವೇ |
ನೆಂದು ಕಂಬನಿದೊಡೆದು ಗಲ್ಲವ ಹಿಡಿದು ಕೇಳಿದನು || ೧೪ ||

ಶಿಶಿರ ಕಾಲದ ಕೋಗಿಲೆಯ ಒಲು | ಉಸುರದತಿ ಮೋನದಲಿ ಜೀವಂ |
ಜಸೆಯಿರಲು ಪಲವಂದದಿಂ ಲೀಲಯಿಸಿ ಪೇಳನಲು ||
ಉಸುರಿದಳು ದೇವಕಿಯ ಮನೆಗಾ | ಋಷಿಗಳೆಮ್ಮತಿ ಮುಕ್ತಕರು ಬರ |
ಲೊಸೆದೆಱಗಿ ನಾ ಭಾವನೆಂದತಿ ಸರಸವಾಡಿದೆನು || ೧೫ ||

ಸರಸವಾಡಿದರವರು ನನ್ನೊಳು | ವಿರಸವಾಡಿದರೇನ ಹೇಳುವೆ |
ನರಸ ತಮ್ಮಯ ತಂಗಿ ದೇವಕಿ ಬಿರಿದೊಡವಳಂತೆ ||
ಕರುಳುಗಡಿಕ ಗಡಾ ಮಗನು ನಿ | ಷ್ಠುರನು ಪಾಪಿದುರಾತ್ಮನೆಂದಾ |
ತೆರನನೆಲ್ಲವನರುಹಿದಳು ಮುನಿಯೆಂದುವೊಲುಪತಿಗೆ || ೧೭ ||

(ಇಲ್ಲಿ ಪದ್ಯ ೧೬ರ ಬದಲು ೧೭ ಸಂಖ್ಯೆ ಕೊಟ್ಟು, ಅದನ್ನೇ ಮುಂದುವರಿಸಿದ್ದಾರೆ.)

ನಡುಗಿದನು ಮನದೊಳಗೆ ಸವಣರ | ನುಡಿಯ ಬೆಟ್ಟವನೆಚ್ಚ ಬಾಣವು |
ನಡದೆ ಹುಸಿವುದೆ ಮಡದೀ ನೀ ಕಡುಪೊಲ್ಲ ಕೈದೆಯಲ ||
ಕಡಲನತಿ ಮಥನವನು ಮಾಡಲು | ಸುಡುವ ವಿಷವನು ಪೆರದೆ ಪಿರಿಯರ |
ಕೆಡೆ ನುಡಿದಡವರೆದೆ ಗದಡದಿರದಬಲೆ ಕೇಳೆಂದ || ೧೮ ||

ಎಂದು ಕಂಸನು ಧೈರ್ಯವುಳ್ಳುದ | ರಿಂದ ನೀನೇಂ ಬೆದರದಿರು ಯಿದ |
ನೊಂದುಪಾಯದಿ ಕಳೆವೆನೆಂದಾಕೆಯನು ಸಂತೈಸಿ ||
ಬಂದನಾ ವಸುದೇವನರಮನೆ | ಗೊಂದುದಿನ ವಸುದೇವನಂಘ್ರಿಗೆ |
ತಂದು ನೊಸಲನು ಎಂದಿನಂದದಿ ಭಯಭಕುತಿಗೈದ || ೧೯ ||

ತುಂಗಗುಣಿ ಚಿತ್ತೈಸು ತಮ್ಮಯ | ತಂಗಿ ದೇವಕಿ ಪ್ರಸವ ಕಾಲದ |
ಲಂಗಜೋಪಮ ಪುತ್ರರನು ಪಡೆಯಲು ತವರು ಮನೆಗೆ ||
ಹಿಂಗದೆನ್ನಯ ಮನೆಗೆ ಕಳುಹಿಸು | ಮಂಗಳೋತ್ಸವ ಮಾಡುವೆನು ಬದು |
ಕಿಂಗೆ ಫಲವಿದು ಬಂಧು ವಿನಯವು ಭೂಪ ಕೇಳೆಂದ || ೨೦ ||

ಎಂದೊಡಾ ವಸುದೇವನದು ಬೇ | ಡೆಂದೊಡಂ ಪ್ರಾರ್ಥಿಸಿ ಅದೇ ಬೇ |
ಕೆಂದೊಡಂಬಡಿಸಿದನು ಪಡೆದನು ಕಂಸನೃಪನದನು ||
ಇಂದುವದನೆಗೆ ದೇವಕಿಗೆಯಿದ | ರಂದವನು ವಿಸ್ತರಿಸಿ ಬೇರೆನ |
ಗೊಂದು ಬುದ್ಧಿಯೆ ಅಣ್ಣಪತಿ ಹೇಳ್ದಂತೆ ಬಹೆನೆನಲು || ೨೧ ||

ಕಂಸನೃಪನರಮನೆಗೆ ಹೋದನು | ಸಂಶಯವನೆರೆ ತಳೆದು ದೇವಕಿ |
ಯೇಂ ಸುಖವಿದಲ್ಲೆನುತಲತಿ ಮುಕ್ತಕ ಮುನೀಶ್ವರರು ||
ತಾಂ ಸೈರಿಸದೆ ನುಡಿದುದಕೆ ನಿ | ಸ್ತ್ರಿಂಶ ನೀಪರಿ ಪಡೆದ ನಿಮ್ಮ ಪ್ರ |
ಶಂಸೆ ಮಾಡಿ ವಿಜೇಶ ಕೇಳೆಂದಳು ನೃಪನ ರಾಣಿ || ೨೨ ||

ತಂದೆ ತಾಯ್ಗಸಿ ಪಂಜರದಿ ಮಿಗೆ | ಬಂಧಿಸಿದ ಪಾತಕನು ನನ್ನಯ |
ಕಂದನನು ಕೊಲ್ಲದೆ ಬಿಡುವನೇ ಕೆಟ್ಟೆವಿದರಿಂದ ||
ಎಂದ ಕಾಂತೆಯ ಕೂಡೆ ಆನಕ | ದುಂದುಭಿಯು ಇಂತೆಂದ ಜಿನಮುನಿ |
ಯೆಂದ ನುಡಿತಪ್ಪುವುದೆ ಕೊಲಲವಲರಿದೆಲೇ ರಮಣಿ || ೨೩ ||

ಎನುತಲಾ ದೇವಕಿ ವೆರಸೀ ಆ | ಮುನಿಪತಿಯ ಬಳಿಗೈದಿಪೂಜಿಸಿ |
ವಿನುತಿಗೈದತಿಮುಕ್ತಕ ಮಹಾಮುನಿಪ ಬಿನ್ನಹವು ||
ವನುಜಮುಖಿ ದೇವಕಿಯ ಬಸಿರೊಳು | ಜನಿಸುವಾತನದೆತ್ತಣಿಂ ಬಹ |
ನನುನಯದಿ ಚಿತ್ತೈಪುದಾತನ ಬಾಳ್ಕೆಯೊಂದಿರವ || ೨೪ ||

ಕೇಳೆಲೇ ವಸುದೇವ ಧರಣೀ | ಪಾಲ ಸೂರ್ಯವಿಷಯ ಮಧುರೆಯ |
ನಾಳುಗುತ್ತಮ ಶೂರಸೇನನೃಪಾಲನಾ ನೃಪನ ||
ಪಾಲನೆಯಲಿಹ ಭಾನುದತ್ತನು | ಶೀಲಗುಣಿ ವೈಶ್ಯೋತ್ತಮನು ಗುಣ |
ಜಾಲೆಯಮುನಾದತ್ತೆ ಆ ಪರದನಕುಲಾಂಗನೆಯು || ೨೫ ||

ಧಾರುಣಿಯೊಳುಸುಭಾನು ಭಾನಸು | ಕೀರಿತಿಯು ಕಲಿ ಭಾನುಶೇಣನು |
ಶೂರನಾಮನು ಶೂರದೇವನು ಶೂರದತ್ತಕನು ||
ಶೂರಸೇನನು ವೇಳುಮಂದಿ ಕು | ಮಾರರಿವರಾ ಭಾನುದತ್ತಗೆ |
ಚಾರುಧನ ಹನ್ನೆರಡು ಕೋಟಿಯನಾಳುತಿರಲೊಡನೆ || ೨೬ ||

ಆರ್ಯನುತರಾದಭಯನಂದ್ಯಾ | ಚಾರ್ಯರಾಪುರವನದೊಳಿರೆ ತಾಂ |
ಸೂರ್ಯತೇಜದ ಸೂರಸೇನ ನೃಪಾಲನದು ತನ್ನ ||
ಕಾರ್ಯವೆಂದೆಲ್ಲರು ವೆರಸಿಗುಣ | ವರ್ಯನೆನಿಸುವ ಭಾನುದತ್ತನು |
ಧೈರ್ಯದಿಂ ಬರೆ ಬಂದು ತನ್ಮುನಿ ಪದವನರ್ಚಿಸಿದ || ೨೭ ||

ಬಳಿಕ ಧರ್ಮವ ಕೇಳಿ ಸಂಶ್ರುತಿ | ಗಲುಕಿ ಭೂವರ ಶೂರಸೇನನು |
ಚಲಿಸದೊಪ್ಪುವ ಭಾನುದತ್ತನು ಆ ಮುನಿಯಬಳಿಯು ||
ತಳೆದರಾ ಜಿನರೂಪನಿತ್ತಲು | ತಳೆದವರಂಗನೆಯರೆನಿಸುವ |
ನಳಿನ ಮುಖ ಜಿನದತ್ತೆಯಮುನಾದತ್ತೆ ದೀಕ್ಷೆಯನು || ೨೮ ||

ಭಾನುದತ್ತ ಕುಮಾರದತ್ತ ಸು | ಭಾನುಮೊದಲಾದವರು ದುರವ್ಯಸ |
ನಾನುರಕ್ತರು ಕೆಡಿಸಿದರು ಪಿತೃಧನವನೂರೊಳಗೆ ||
ಏನು ಹರುವಿಲ್ಲದೆ ಕಳವಿ ಗೈ | ದಾನಿಮಿತ್ತದಿ ಪೊಳಲರಸನಾ |
ಭಾನುದತ್ತನು ಪುತ್ರರನು ನಾನೆಂತು ಕೊಲಿಸುವೆನು || ೨೯ ||

ಎಂದು ಪೊಳಲಿಂ ಹೊರವಡಿಸಿ ನಡೆ | ತಂದು ಉಜ್ಜೆನಿ ಪುರವನು ಕಂಡಿ |
ಅಂದಿನಿರುಳೊಳು ಪೊಗುತ ತಮ್ಮನ್ವಯಕಿರಲಿ ಓರ್ವ ||
ಎಂದು ತಮ್ಮನ ಶೂರಸೇನನ | ನಂದು ಸುಡುಗಾಡೊಳಗಿರಿಸಿಕಳ |
ಲೆಂದು ಪೋದಪರರುವರಾ ಪೊಳಲಾಳ್ವ ಭೂಪಾಲ || ೩೦ ||

ವೃಷಭಕೇತನ ನೃಪನ ವನಭಟ | ನಸಮ ವೀರದೃಢಪ್ರಹಾರಿಯು |
ವಸುಧೆಯೊಳಗೆ ಸಹಸ್ರ ಭಟನಾವಪ್ರಸಿರಿ ಮಡದಿ ||
ಎಸೆವ ವರಸುತ ವಜ್ರಮುಷ್ಟಿಯು | ಪೆಸರಿನಿಂದಾತನ ವನಿತೆ ರಾ |
ಜಿಸುವ ಕನಕಲತೆಯು ಸುಖದಿರಲರಸ ಕೇಳೆಂದ || ೩೧ ||

ವಿಮಲ ಚಂದ್ರಮ ವೈಶ್ಯನಾಥಗೆ | ವಿಮಳೆವಧು ಅವರಾತ್ಮಭವೆ ತಾಂ |
ಕಮಲಲೋಚನೆ ಮಂಗಿಯೆಂಬಳ ಕಂಡು ಕಡುಸೋಲ್ತು ||
ರಮಣಿಯನು ಮಿಗೆ ವಜ್ರಮುಷ್ಠಿಯು | ಭ್ರಮಿಸಿ ತಂದವರೊಡನೆ ಮದನಾ |
ಗಮ ರಹಸ್ಯವಿಲೋಲನಾಗಿರೆ ಬಂದುದು ವಸಂತ || ೩೨ ||

ಬರೆ ವಸಂತವು ತನೃಪಾಲಕ | ನಿರದೆ ವನಕೇಳಿಗೆ ತೆರಳೆ ಸಿಂ |
ಗರಿಸಿ ಕೊಂಡೆಲೆ ಮಂಗಿ ಬಾಯೆಂದಾ ಭಟೋತ್ತಮನು ||
ಅರಸನೊಡನತಿ ಬೇಗಹೋಗಲು | ತರುಣಿ ಪಸದನಗೊಂಡು ಹೂವಿನ |
ಸರವ ವಪ್ರಶ್ರೀಯೆನಿಸಿದತ್ತೆಯನು ಬೇಡಿದಳು || ೩೩ ||

ಸೊಸೆ ಕನಕಲತೆ ತನ್ನ ತಮ್ಮನ | ಶಿಶು ಅವಳ ಕಡೆಗಣಿಸಿ ಮಂಗಿಯು |
ಒಸೆದು ಮಗನನು ಮರುಳು ಮಾಡಿದಳೆಂದು ಮುಳಿಸಿನಲಿ ||
ಹಸಿದ ಹಾವನೆ ಮೊದಲೆ ಘಟದೊಳು | ಸಸಿನಿರಿಸಿ ಜತನದಿ ಮಡಕೆಯಲಿ |
ಕುಸುಮ ಮಾಲೆಯನಿರಿಸಿಹೆನು ತೇಕೊಂಡು ಮುಡಿಯೆನಲು || ೩೪ ||

ಮಡದಿ ಬೇಗ ವಸಂತ ಕೇಳಿಗೆ | ನಡೆಯ ಬೇಕೆಂದಪವಶದಿನರು |
ಮುಡಿಗೆ ಮುಡಿವೆನು ಕುಸುಮಮಾಲೆಯನೆಂದು ಕೊಡದೊಳಗೆ |
ತುಡುಕೆ ಕೈಯನು ಕೃಷ್ಣ ಸರ್ಪನು | ಕಡಿಯೆ ವಿಷಮೂರ್ಛೆಯಲಿ ಪೆಣನನಡವಿಯಲಿ || ೩೫ ||

ಏಕೆ ತಡದಳೋ ಮದನ ವಿಜಯ ಪ | ತಾಕೆಯೆನಿಸುವ ಮದುವೆನುತ ಮೋ |
ಹಾಕುಳದಿ ಕಲಿ ವಜ್ರಮುಷ್ಠಿಯು ಬೇಗ ನಡೆತಂದು ||
ಆಕೆಯನೆ ಅರಸುತ್ತ ಬರಲುತಾಯ್ | ಶೋಕಿಸುತ್ತಲಿದಿರೆದ್ದು ಬಂದಳು |
ಭೇಕವೈರಿಯು ತಿಂದುದಳಿದಳು ಮಂಗಿಯೆನಲೊಡನೆ || ೩೬ ||

ಮಂಗಿ ಹಾಹಾ ಮದನ ಕನಕಲ | ತಾಂಗಿ ಹಾಹಾ ಮೋಹರಸ ಸಂ |
ಸಂಗಿ ಹಾಹಾ ಕಾಮಕೇಳೀ ಕುಸುಮವಲ್ಲರಿಯ ||
ಭೃಂಗಿ ಹಾಹಾರಾರತಿ ಸಲಹಿದ ಕು | ರುಂಗಿ ಹಾಹಾಯೆಂದು ಶೋಕಿಸಿ |
ತುಂಗ ವಿಕ್ರಮ ಬಳಿಕಲಾ ಹೆಣನೆಲ್ಲಿ ತೋರೆಂದ || ೩೭ ||

ಅಡವಿಯೊಳಗದೆಯೆಂದಡಕಟಾ | ಹಡದತಾಯೇ ಹಗೆ ತನಗೆ ಯೆಂ |
ದೊಡನೆ ಖಡುಗವ ಜಡಪಿಸುತ ಕಲಿಕಾಳರಾತ್ರಿಯಲಿ ||
ಅಡವಿಗೈದಿದನರಸುತೋರ್ವನೆ | ಎಡೆಯೊಳುತ್ತಮ ಸಪ್ತವೃದ್ಧಿಯ |
ಪಡೆದು ಕಾಡೊಳುಯೋಗದಿಹ ಜಿನ ಮುನಿವರರಕಂಡ || ೩೮ ||

ಕಂಡು ಹರುಷದಿ ಧರ್ಮನಾತರ | ಪುಂಡರೀಕಾಂಘ್ರಿಯಲಿ ತನ್ನಯ |
ಮಂಡೆಯನು ಚಾಚಿದನು ಕಾಡೊಳಗರಸಿ ಮಂಗಿಯನು ||
ಕಂಡೆನಾದರೆ ಸಾಸಿರಂಬುಜ | ಷಂಡದಿಂ ನಿಮ್ಮಂಘ್ರಿಗಳ ಬಗೆ |
ಗೊಂಡು ಪೂಜಿಪೆನೆಂದನಾ ಕಲಿ ವಜ್ರಮುಷ್ಠಿ ಭಟ || ೩೯ ||

ಬಳಿಕಲಾ ಬನದೊಳಗೆ ಮನದು | ಮ್ಮಳದಲರಸುತದೊಂದು ಹಬ್ಬಿದ |
ಹಳುವದಲಿ ಬಿದ್ದಿರ್ದಮಂಗಿಯ ಕಂಡುನೆಗೆಕೊಂಡು ||
ತಳುವದಲ್ಲಿಂ ಮಗುಳ್ದು ಬರುತಾ | ಬಳಿಯಲಾ ಮುನಿವರರ ಚರಣಂ |
ಗಳ ಕೆಲದಲಿಳಿಪಿದನು ಮಂಗಿಯ ಸಭವನಾ ಭಟನು || ೪೦ ||

ಬಳಿಕ ಸರ್ವೌಷಧಿ ಸುವೃದ್ಧಿಯ | ತಳೆದ ಗುರುಗಳ ಸೋಂಕಿದೆಲರಾ |
ಗಳೆ ಅವನ ತನು ಸೋಂಕೆ ನಿರ್ವಿಷವಾಗಿ ಆ ಮಂಗಿ ||
ಘುಳಿಲನೆಚ್ಚಱಕಂಡು ಸಂತಸ | ದಳೆದು ಇವರಿಗೆ ಹರಸಿಕೊಂಡಾ |
ಫಲದಿ ಕಂಡೆನು ನಿನ್ನ ಬಂದುದು ಪ್ರಾಣ ನಿನಗೆಂದ || ೪೧ ||

ಎನುತ ಮಂಗಿಯನಪ್ಪಿ ನೀನೀ | ಮುನಿಪದಾಂತಿಕದಲ್ಲಿಯಿರು ನಾ |
ವನಜಗಳ ತಂದೀ ಮಹಾಪುರುಷರ ಪದಂಗಳನು ||
ಮನದಣಿಯೆ ಪೂಜಿಸುವೆನೆಂದಾ | ತನು ಸರೋವರ ದತ್ತಹೋಗಲು |
ಮುನಿಪನೊತ್ತಿನ ಹಳುವದೊಳಗಡಗಿರ್ದನಾ ಕಳ್ಳ || ೪೨ ||

ಶೂರಸೇನನು ತತ್ಪ್ರಪಂಚವಿ | ಚೌರವೆಲ್ಲವ ಕಂಡು ಬಳಿಕಾ |
ನಾರಿಯರು ಮನವರಿದ ಬಗೆಯಿಂ ಘಟದೊಳಡಗಿಸಿದ ||
ಚಾರುದೀಪವು ವೆರಸು ಮದನಾ | ಕಾರನಾಕೆಯ ಬಳಿಗೆ ಬಂದು ಘ |
ಟೋರು ದೀಪವ ತೋಱೆ ಕಂಡಳು ಮಂಗಿಯಾತನನು || ೪೩ ||

ಅವನ ಚೆಲುವನು ಕಂಡು ಕಂಡಾ | ಯುವತಿ ಮನಸೋತಳು ತಳುವದೆಲೆ |
ನವಮನೋಭವ ತನ್ನನೊಯಿನಿನಗೊಲಿದು ಬಹೆನೆನಲು ||
ಕುವಲಯಾಂಬಕಿ ನಿನ್ನ ಗಂಡನು | ಭುವನದೊಳು ನೆಱೆಗಂಡುಗಲಿ ಬಳಿ |
ಕವನು ಕೊಂದಪನೆಂದು ಬೆದಱುವೆ ನೆಂದನಾ ಚೋರ || ೪೪ ||

ಎನಲು ನಾನದಕೊಂದುಪಾಯವ | ನನುಗೊಳಿಸುವೆನು ಅವನ ಬಾಧೆಗೆ |
ಇನಿಸು ಬೆದರದಿರೆಂದು ನಂಬುಗೆ ಗೈದಸಮಯದಲಿ |
ವನಜಗಳ ಹೊರೆಗಟ್ಟಿ ತರಲವ | ನನಿತರೊಳಗಿವನಲ್ಲಿ ಅಡಿಗಿರೆ |
ವನಿತೆ ಪಿಡಿಯೆಂದಿತ್ತನಾ ಕೂರ್ವಾಳನಾ ಭಟ್ಟನು || ೪೫ ||

ಮಂದರಾಚಲದಂತೆ ಯೋಗದಿ | ನಿಂದ ಗುರುಗಳ ಪದದ ಕೆಲದಲಿ |
ಚಂದ ಚಂದದಿ ಕಮಲಗಳನರ್ಚಿಸಿಯೆರಗಲೊಡನೆ ||
ಕಂದೆದೆಯಳಾ ಖಡುಗವನು ನೆಗೆ | ತಂದು ಗಂಡನ ಕೊರಳಹೊಯ್ಯಲು |
ಬಂದು ಬೇಗದಿ ಶೂರಸೇನನು ಭೂಪ ಕೇಳೆಂದ || ೪೬ ||

ಅವನ ಕೊರಳಿಗೆ ಬೀಳುವಸಿಯನು | ತವಕದಲ್ಲಿ ಕಬ್ಬುನದ – ಗುದಿಯಲಿ |
ಸವರಿ ಬೀಸಲು ಅವಳ ಕೈಯಿಂ ಬಿದ್ದುದಾ ಖಡುಗ ||
ಯುವತಿ ಖಡುಗವು ಬಿದ್ದುದೇಕೆನ | ಲೆವೆ ಬೆದರೆ ಮರುಳಂಜಿಸಿದವೆನೆ |
ಅವಳ ಬೆದರದಿರೆನುತ ಮುನಿಪದಕೆರಗಿದವನೆದ್ದ || ೪೭ ||

ಹೆಗಲನೇರಿಸಿಕೊಂಡನವಳನು | ನೆಗಪಿ ಖಡುಗವ ಪಿಡಿದು ಮುನಿಪದ |
ಯುಗಕೆ ಪೊಡವಟ್ಟತ್ತ ಪೋದನು ವಜ್ರಮುಷ್ಠಿಭಟ ||
ಮೃಗನಯನೆ ಕಡಿವಾಗ ಖಡುಗವ | ನಗಲಿಪಾಗಳು ಶೂರಸೇನನ |
ಸೊಗಯಿಸುವ ಕೈ ಗಾಯವಾದುದು ಭೂಪಾ ಕೇಳೆಂದ || ೪೮ ||

ಪೆಂಡಿರನು ನೆರೆನಂಬಿದಾತನೆ | ಭಂಡನವನಭಿಮಾನಗೇಡಿಯು |
ಪಿಂಡಿರೆಲೆ ಸತ್ಪಥದ ಬಾಗಿಲಪಡಿಗೆ ಬೀಯಗವು ||
ಗಂಡುಗಲಿಯಹ ವಜ್ರಮುಷ್ಠಿಯು | ಹೆಂಡತಿಯೇ ಗೈದನಾ ವಧು |
ಗಂಡಗೊಡ್ಡಿದ ತಂತ್ರವನು ನೋಡೆಂದು ಬೆರಗಾದ || ೪೯ ||

ತುಡುಗುಣಿಯು ನಾಯೊಂದು ಎಲುವನು | ಕಡಿಯುತಿರಲೊಸದೊಡೆದು ನೆತ್ತರು |
ನಿಡುರಸನೆನಿನಿದಾಗಲದು ಸವಿಯೆಂದು ಬಿಡದಂತೆ ||
ಕಡು ಬೆಸನಿಗಾ ತೆರನು ದುರ್ಗುಣ | ಪಿಡಿದ ಕಾಂತೆಯರಿಂದ ಸುಖವನು |
ಪಡೆವೆನೆಂಬುದು ತನ್ನ ಲಾಂಪಟ್ಯದ ಮಹಿಮೆಯೆಂದ || ೫೦ ||

ಖಳನನೀ ಪರಿ ಕಾಲಲಬ್ಧಿಯೆ | ತಿಳುಹಿಸಿದುದನಿತರೊಳೆ ಬಂದರು |
ಕಳವು ಗೈದತಿ ಬಹಳವಸ್ತವ ಹೊಡೆದು ಕೊಂಡವರು ||
ಬಳಿಕಲೆಲ್ಲರು ಪಸುಗೆ ಮಾಡಿಯೆ | ತಳೆವನಿತರೊಳು ಭಾನು ಕಂಡನು |
ಚಳಿಸದೀಕ್ಷಿಸಿ ಶೂರಸೇನನ ಕೈಯ ಘಾಯವನು || ೫೧ ||

ತಮ್ಮಘಾಯವಿದೆನಿದರೀತೆರ | ನಮ್ಮೊಳುಸುರೆನಲೇನ ಹೇಳುವೆ |
ನಿಮ್ಮೊಳೀದನಿವರು ವರಣ್ಣಂದಿರು ಸುಖದಿ ಬದುಕಿ ||
ಅಮ್ಮೆನಯ್ಯೋ ಸ್ತ್ರೀಯರೊಳುಮನ | ನೆಮ್ಮಿಹುದು ಸುಖವಲ್ಲೆನುತ ಮನ |
ನಿಮ್ಮಳದಿ ಹೇಳಿದನು ಮಂಗಿಯ ತೆಱನನೆಲ್ಲವನು || ೫೨ ||

ಕಾಳ ಹಾವಿಗೆ ಕೊಟ್ಟ ದೇಹದ | ಶೂಲಕೊಪ್ಪಿಸಿ ಕಡು ತಳಾರನ |
ಬಾಳಿಗೀ ತಲೆಗೊಟ್ಟು ಚೌರ್ಯದಿಗಳಿಸಿ ಧನಗಳನು ||
ಬಾಲಕಿಯರೊಳು ಬಾಳೈವೆಂಬುದು | ಗಾಳುಕಂಡಿರೆ ಬಾಲೆಯರ ಮಿಗೆ |
ಢಾಳೆಯರ ನಾ ನಂಬಲರಿಯೆನುಕೊಂಬೆ ದೀಕ್ಷೆಯನು || ೫೩ ||

ಎಂದು ತಮ್ಮನು ತೋಱೆಯಲವನಂ | ಣಂದಿರರುವರುಮಂತೆಗೆಯಿದರು |
ತಂದವಿತ್ತವ ಮನೆಗೆ ಕಳುಹಿಸಿ ಧರ್ಮಗುರುಗಳಿಗೆ ||
ವಂದಿಸಿಯೆ ಜಿನದೀಕ್ಷೆಗೊಂಡರು | ಮಂದಿರದಲವರೇಳು ಮಂದಿಯ |
ಸೌಂದರಿಯರಾ ವಿತ್ತವನು ತಂದವನು ಮುಖದಿಂದ || ೫೪ ||

ಅಱಿಯದಱೆಯರು ದೀಕ್ಷೆಗೊಂಡಾ | ತೆಱನನುತ್ತಮ ಚಿತ್ತೆಯರು ಯಿ |
ನ್ನಱಿಯ ಕಂಡುಂ ತೊಱೆಯದಿದ್ದರೆ ಮಂಗಿಯಂತಹೆವು ||
ಪೆಱತದೇನೆಂದೇಳ್ವರುಂ ಮಿಗೆ | ತೊಱೆದು ಜಿನದತ್ತಾಜ್ಜಿಕೆಯರಲಿ |
ನೆಱೆತಪಸ್ಥೆಯರಾದರೆಲೆ ಭೂಪಾಲ ಕೇಳೆಂದ || ೫೫ ||

ಅತ್ತಲಿವರಾ ಸಪ್ತಋಷಿಯರು | ಉತ್ತರೋತ್ತರ ಸಂಯಮದಿ ನೆಗ |
ಳುತ್ತಲುಜ್ವೈನಿಯನೆಯಿದಿ ಬರೆ ವಜ್ರಮುಷ್ಠಿಭಟ ||
ಮತ್ತವರಿಗಭಿವಂದಿಸಿಯೆನೋ | ದುತ್ತಲಸಿಧಾರಾವ್ರತದ ಮಿಗೆ |
ಪೆತ್ತಿರೇಂ ಹೊಸ ಹರೆಯದಲಿ ಚಿತ್ತೈಪುದಿದನೆಂದ || ೫೬ ||

ಎನಲು ಈಪರಿ ಪುರದಡವಿ[ಯಿರು] | ಳಿನಲಿ ಮಂಗಿಯೆನಿಪ್ಪಳಿಂದಾ |
ಯ್ತೆನುತಲಾಮುನಿ ಪೇಳ್ದು ತೋರಿಸಿ ಕೈಯಘಾಯವನು ||
ಅನಯದೀನದನೆಲ್ಲವನು ಮೆ | ಲ್ಲನೆ ನಿರುಪಿಸೆ ಕೇಳ್ದರಿದು ತಳೆ |
ದನು ಸುದೀಕ್ಷೆಯ ಧರ್ಮನಾಥರ ಬಳಿಯಲಾ ಸುಭಟ || ೫೭ ||

ಮೊದಲೆ ಪೇಳ್ದಾ ಅಜ್ಜಿಕೆಯರಾ | ಪದುಳದುಜ್ವೈನಿಗೆ ಬರಲು ಅತಿ |
ಮುದದಿ ಮಂಗಿಯು ಕಂಡುವಂದಿಸಿ ಚಿಕ್ಕಹರಯದಲಿ ||
ವಿದಿತ ದೀಕ್ಷೆಯ ನಾಂತಿರಿದು ವಾ | ವುದರ ದೆಸೆಯಿಂದರಿಪಿಮೆನೆ ಪೇ |
ಳಿದರು ಈ ಪೊಳಲೊಳಗೆ ಇಹಳಾ ಮಂಗಿಯೆಂಬವಳು || ೫೮ ||

ಅವಳ ಪಾಪಾಚರಣವನು ಕಂ | ಡೆವಗೆ ಹೇಸಿದರೆಮ್ಮಗಂಡರು |
ಅವಿಚಳಿತ ಜಿನದೀಕ್ಷೆಗೊಳೆನಾವಾಮತೆ ಈ ರೂಪ ||
ಯುವತಿ ಕೇಳೆಂದೆಲ್ಲವನು ಮಿಗೆ | ವಿವರಿಸಲು ಬೆರಗಾಗಿ ತಾಂ ಗೈ |
ದವಗುಣಕೆ ಪೇಸಿದಳು ತಳೆದಳು ಮಂಗಿ ದೀಕ್ಷೆಯನು || ೫೯ ||

ಅರಸಕೇಳಾ ಸಪ್ತ ಋಷಿಯರು | ವರಸಮಾಧಿಯನುಳಿದು ದೇಹವ |
ನಿರದೆ ಸೌಧರ್ಮದೊಳು ತ್ರಾಯಸ್ತ್ರಿಂಶರಾಗಿರುತ ||
ಶರಧಿಯುಪಮಾಯುಷ್ಯದೊಂದನು | ಪರಿಹರಿಸಿಯೆರಡನೆಯ ದೀಪದೊ |
ಳುರುತರದ ಮೂಡಣ ಸುಮೇರುವ ಭರತ ವಿಷಯದಲಿ || ೬೦ ||

ವರ ರಜತಗಿರಿ ದಕ್ಷಿಣದಲ | ಚ್ಚರಿಯು ನಿತ್ಯಾಲೋಕಪುರವದ |
ರರಸನೊಪ್ಪುವ ಚಿತ್ರಮಾಳಿಕನವನರಸಿದೇವಿ ||
ಇರಲವರಿಗೆ ಸುಭಾನು ಚರಸುರ | ವರನು ಚಿತ್ರಾಮಗಧನೆನಿಪ ಬಂ |
ಧುರತನೂಭವನಾದನೆಲೆ ಭೂಪಾಲ ಕೇಳೆಂದ || ೬೧ ||

ಬಂದು ಜನಿಸಿದರುಳಿದರುವರೊಲ | ವಿಂದರಮಳುಗಳಾಗಿ ಯುವತಿಗೆ |
ಸಂದ ಗರುಡಧ್ವಜಗಡವಾಹನನು ಮಣಿಚೂಳ ||
ಅಂದು ಸುಮನಸ್ಚೂಳಗಗನಾ | ನಂದ ಗಗನಚರನು ಎನಿಪರೊಲ |
ವಿಂದ ಬಳೆದತಿ ಭುಜಬಲರು ವಿಶ್ರಾಂತಿಯಿಂದಿರಲು || ೬೨ ||

ತಿಳಿದೊಡಾ ಶ್ರೇಣಿಯೊಳಗಿಪ್ಪುದು | ಪೊಳಲು ಮೇಘಪುರವು ಧನಂಜಯ |
ಪೊಳಲಪತಿ ಲಕ್ಷ್ಮಿಯು ನೃಪನ ಸತಿಮಗಳು ಧನದೇವಿ ||
ಚೆಲುವೆ ಯೌವನೆಯಾಗಿರಲು ಸುಖ | ದೊಳು ಧನಂಜಯ ಖಚರಪತಿ ಪ |
ಜ್ಜಳಿಪ ಶೃಂಗಾರ ಸ್ವಯಂಬರವನು ನಿಮಿರ್ಚಿದನು || ೬೩ ||

ಅಲ್ಲಿಯಾರ್ಯಾ ಖಂಡದೊಳಗಿಹ | ರೆಲ್ಲ ಖೇಚರ ಭೂಚರರಸುತ |
ಅಲ್ಲಿಯೆಸದಿರಲತ್ತಲೆಸೆವಾನಂದ ಪುರವರನು ||
ಬಲ್ಲಿದನು ಹರಿಷೇಣಸುತ ಪೆಸ | ರಲ್ಲಿ ಹರಿವಾಹನನು ಯಿರಲಾ |
ಸಲ್ಲಲಿತೆಗೆವ ಮಾವನಾತ್ಮಜನಾದ ದೆಸೆಯಿಂದ || ೬೪ ||

ವರ ಧನಶ್ರೀ ಕಾಣುತಾತನ | ಕೊರಳಿಗಿಕ್ಕಿದಳಂದು ಮಾಲೆಯ |
ದುರುಳನಲ್ಲಿಯ ಪುಷ್ಪದಂತಸು ಕ್ರಿಯಾತ್ಮಜನು ||
ವರ ಸುದತ್ತಕನೈದೆ ಕೋಪದ | ಭರದಿ ಹರಿವಾಹನನ ಗಂಟಲ |
ನರಿದು ತತ್ಕರ್ಣಿಕೆಯ ನೊಯಿದನು ಭೂಪಕೇಳೆಂದ || ೬೫ ||

ಕಾಂತೆಯಿಕ್ಕಿದ ಮಾಲೆಯದುವೆ ಕೃ | ತಾಂತ ನಿಕ್ಕಿದ ಪಾಶವಾದುದು |
ಕಾಂತ ಹರಿವಾಹನಗೆನುತ ಚಿತ್ರಾಂಗದಾದಿಗಳು ||
ಭ್ರಾಂತಿಯನು ನೆರೆತೊರೆದು ದೀಕ್ಷೆಯ | ನಾಂತರಲ್ಲಿಯ ತೀರ್ಥನಾಥ ಪ |
ದಾಂತಿಕದೊಳೆಸೆದಿರ್ಪ ಭೂತಾನಂದರೊಳು ಮುದದಿ || ೬೬ ||

ಬಳಿಕ ಸುಸಮಾಧಿಯಲ್ಲಿ ಕಾಯವ | ನುಳಿದು ಮಾಹೇಂದ್ರ ಪ್ರಕಲ್ಪದ |
ಜಲಧಿಯುಪಮಾಯುಷ್ಯವೇಳನು ಸುಖದಿನನುಭವಿಸಿ ||
ತಳೆದನಾ ಮಾನಿಕರು ಕಡೆಯಲಿ | ಗಲಿಸಿ ಕುರಜಾಂಗಳ ವಿಷಯದಿಭ |
ಪೊಳಲನಾಳುವ ಗಂಗದೇವನರಾಯ ಸೆಟ್ಟಿಯವ || ೬೭ ||

ಶ್ವೇತವಾಹನನಿಂದುಮತಿಗಂ | ನೂತ ಚಿತ್ರಾಂಗದ ಚರಾಮರ |
ನಾತ ನಾತ್ಮಜನಾಗಿ ಶಂಖನೆನಿಪ್ಪನಿರುತಿರಲು ||
ಖ್ಯಾತ ಗರುಡಧ್ವಜ ಚರಾದಿಗ | ಳೋತು ಗಂಗನೃಪಾಲ ನರಸಿಲಿ |
ನೂತನಂದಯಶೆಗೆ ಅಮಳುಗಳುಮಾಗಿ ಜನಿಸಿದರು || ೬೮ ||

ಅಂದು ತರದಿಂ ಗಂಗದೇವನು | ಮೆಂದು ಬಳಿಕಾಗಂಗಮಿತ್ರನು |
ನಂದಿವೊಪ್ಪುವನಂದಿಮಿತ್ರು ನಂದಿಷೇಣಾಖ್ಯ ||
ನಂದಿಘೋಷರೆನಿಪ್ಪರಾಗಿರೆ | ಹಿಂದಣಾಭವದೊಂದು ನೇಹದಿ |
ಬಂದುಶಂಖನೊಳೊಂದುಹರು ಭೂಪಾಲಕೇಳೆಂದ || ೬೯ ||

ಮತ್ತೆ ಪಡೆದಳು ನಂದಯಶೆ ತಾ | ಪುತ್ರನೋರ್ವನ ನಾಶಿಶುವ ನೋ |
ಡುತ್ತ ಕೋಪಾನಳನುದಿಸಿ ಆ ಶಿಶುವನಾಮಾತೆ ||
ಅತ್ತ ಬಿಸುಡಿಸುತಿರಲವಳ ಅನು | ಜೋತ್ತಮೆಯು ರೇವತಿವನಿತೆನಡ |
ಪುತ್ತಿರಲು ನಿರ್ನಾಮಿಕಾಹ್ವಯನಾಗಿ ಬೆಳೆಯುತಿರೆ || ೭೦ ||

ಅಱಿತು ಮೇಶ್ಯಕುಮಾರಶಂಖನು | ನೆಱೆವುತಿಹ ನಿರ್ನಾಮಿಕನನ |
ಕ್ಕಱುವಡೆದು ತಾನಡಿಗಿಗೆಸಂಪ್ರೀತಿ ಮಾಡುತಿರೆ ||
ನೆಱೆ ಬಸಂತದ ಬನದುಣಿಸಿನಲಿ | ಮೆಱೆವ ಗಂಗಾದಿಗಳು ನಂದನ |
ಕೆಱೆಯನೊಡನೈತಂದರೂಟಕೆ ಶಂಖನನು ಕರೆಸೆ || ೭೧ ||

ಬನಕೆ ಶಂಖನು ಪೋಗುತಿರೆ ಮು | ತ್ತಿನ ಸರವು ಹರಿದೊಗಲುತಾಂಬೆ |
ನ್ನನೆ ಬರುತ ನಿರ್ನಾಮಿಕನು ಬಿಡದಾಯ್ದುಕೊಳುತಿರಲು ||
ವಿನುತನದನೀಕ್ಷಿಸಿ ಸರಾಗವು | ಜನಿಸಿ ನಿರ್ನಾಮಿಕನನವನೊ |
ಯ್ಯನೆ ಗಜದ ಮೇಲೆತ್ತಿಕೊಂಡೈತಂದನೊಲವಿಂದ || ೭೨ ||

ಗಂಗಮುಖ್ಯರಕೂಡೆ ಶಂಖನು | ಸಂಗದಿಂ ಪಂತಿಯಲಿ ಉಣುತಿರೆ |
ಗಂಗನಬ್ಬೆಯು ನಂದಯಶೆಯಿವನಾರೆನುತಕಾಯ್ದು ||
ಪಿಂಗದೊದೆದೊಡೆ ಆಕೆಯೋಪನು | ಗಂಗಭೂಪತಿ ಕಂಡುವಿಸ್ಮಯ |
ಸಂಗೊಳಿಸಿ ಧ್ರುಮಶೇಣ ಮುನಿಪರ ಬಳಿಗೆ ಬಂದೆರಗಿ || ೭೩ ||

ನಂದಯಶೆ ನಿರ್ನಾಮಕನು ಗುಣ | ಸಿಂಧುಶಂಖನುವೆರಸಿ ಅವರನು |
ವಂದಿಸಲು ನೃಪನಂದನೀಕೆಗೆ ಈ ಕುಮಾರನಲಿ ||
ಕಂದದೈದೇಕಾದುದೆನಲವ | ರೆಂದರವಧಿ ಜ್ಞಾನದಿಂ ತಿಳಿ |
ದಿಂದಿನೀ ಮುನಿಸಲ್ಲವೆನೆ ಭೂಪಾಲ ಕೇಳೆಂದ || ೭೪ ||

ವರಸುರಾಷ್ಟ್ರವೆನಿಪ್ಪ ನಾಡೊಳು | ಸಿರಿನಗರಿ ಪುರ ಮೇಘರಥನೃಪ |
ನರಸಿ ಕಾಂಚನಮಾಲೆ ಅಮೃತರಸಾಯನಾಹ್ವಯನು ||
ದೊರೆವಡೆದ ಬಾಣಸಿಗನವರಿಗೆ | ಪಿರಿದು ಸವಿಯೆನೆ ಪಿಶಿತವನು ಸವೆ |
ದಿರದೆ ಭೋಜನಗೈಸಲು ಮೆಚ್ಚಿದನವಗೆ ನೃಪತಿ || ೭೫ ||

ಮೆಚ್ಚಿಕೊಟ್ಟನು ಹತ್ತು ಗ್ರಾಮವ | ನಿಚ್ಛೆಯಿಂ ಮತ್ತೊಂದು ದಿನ ನಿ |
ರ್ಮಚ್ಚರದಲಿ ಸುಧರ್ಮರೆಂಬ ದಿಗಂಬರರ ಪೊರ್ದಿ ||
ಚೊಚ್ಚ ಧರ್ಮವ ಕೇಳ್ದುಲಬ್ಧಿಯ | ದಚ್ಚರಿಯೆ ಸಂಸಾರಕಾಗಳೆ |
ಬೆಚ್ಚ ವೈರಾಗ್ಯದಲಿ ನೆರೆದನು ಮೇಘರಥ ನೃಪತಿ || ೭೬ ||

ವರ ತನುಜನಹ ಚಿತ್ರರಥಗಾ | ಧರೆಯ ಭಾರವ ಪೊರಿಸಿ ಮೂನೂ |
ರ್ವರು ನೃಪಾಲರುವೆರಸಿ ತನ್ಮುನಿಯಲ್ಲಿ ಜಿನರೂಪ ||
ಧರಿಸಿದನು ತಾನಿತ್ತಲಾ ಚಿ | ತ್ರರಥನುತ್ತಮ ಶ್ರಾವಕವ್ರತ |
ನಿರತನಾದನು ಕಾಲಲಬ್ಧಿಯ ಮಹಿಮೆ ಕಡು ಬಡವೆ || ೭೭ ||

ಕುವರನಮೃತರಸಾಯನಗೆ ಗ್ರಾ | ಮಮನದೊಂದನೆ ಕೊಟ್ಟು ತಾಮಿ |
ಕ್ಕವತೆಗೆದನಘ ಬೀರು ಆ ಬಾಣಸಿಯಿದೆಲ್ಲವನು ||
ವಿವರದಿಂದಾ ಗುರುಗಳೇನ | ಮ್ಮವಗೆ ಕಲಿಸಿದ ಬುದ್ಧಿಯೆಂದೊ |
ಪ್ಪುವ ಸುಧರ್ಮಮುನೀಂದ್ರರಲ್ಲಿಗೆ ಹೋಗಿ ವಂದಿಸಿದ || ೭೮ ||

ಅತಿಕಪಟ ಹೃದಯದಲಿ ಜೈನ | ವ್ರತವತಳೆದಿರ್ದೊಂದು ದಿನ ಆ |
ಯತಿಗಳನು ತದ್ರಾಜ ಮಂದಿರದೊಳು ಚರಿಗೆನಿಲಿಸಿ ||
ಯತಿಗಳಿಗೆ ವಿಷವಿಕ್ಕಿ ಕೊಂದಾ | ಯತಿಪನುರ್ಜಂತಾ ಚಳದೊಳ |
ಪ್ರತಿಮ ಚಿತ್ತದಿ ಬಿಸುಟನೊಡಲನು ಭೂಪ ಕೇಳೆಂದ || ೭೯ ||

ಯತಿಯನುತ್ತರೆಯೊಳಗಣಪರಾ | ಜಿತ ವಿಮಾನದೊಳೊಪ್ಪುವಹಮಿಂ |
ದ್ರತೆಯನಾ ಮೂವತ್ತ ಮೂರು ಸಮುದ್ರದಾಯುವನು ||
ಅತಿಸುಖದಲುಣತಿರ್ದರಿತ್ತಲು | ಯತಿವಧೆಯ ಮಾಡಿದನನಾ ಭೂ |
ಪತಿ ಪರಾಭವಿಸಿದೊಡೆ ದುಃಖದಿ ಮಡಿದು ಮೂರನೆಯ || ೮೦ ||

ನರಕಕಿಳಿದವನೇರುವ ವಾರಿಧಿ | ಪರಿಣಿತಾಯುವ ದುಃಖದಿಂದುಂ |
ಡಿರದೆ ಪಲವು ಕುಯೋನಿಯಲಿ ತಿರಿತಂದು ದುಃಖದಲಿ ||
ಅರಸ ಕೇಳೆತ್ತಾನು ಉಪಶಮ | ದೊರಕೆ ಬಂದೀ ಭರತದಾರ್ಯೆಯೊ |
ಳುರು ಮಲಯ ದೇಶದಲೆ ಗ್ರಾಮಪಲಾಶ ಕೂಟವನು || ೮೧ ||

ಯಕ್ಷದತ್ತ ನೆನಿಪ್ಪ ಗೌಡನ | ಯಕ್ಷದತ್ತೆಯ ಪಿರಿಯ ಮಗನಹ |
ಯಕ್ಷಿಗಳ ತಾಂ ಯಕ್ಷದತ್ತನೆನಿಪ್ಪನುಜನಾಗಿ ||
ಸುಕ್ಷಮೆಯಿನವ ಸಾನುಕಂಪನು | ಅಕ್ಷಮೆಯಿತಾಂನಿರಲು ಕಂಪನು |
ಪ್ರೇಕ್ಷಿಸುವೊದಿಂತೆಂಬ ಪೆಸರೆಂದಿರುತಲೊಂದುದಿನ || ೮೨ ||

ಹೊಲನ ನೋಡಲು ಹೋಗುತೀರ್ವರು | ಒಲಿದು ಭಂಡಿಯನೇರಿ ಪೋಪಾ |
ಬಳಿಯಲಿರೆ ಪೆರ್ಬಾವು ಕಾಣುತಸಾನುಕಂಪಲದ ||
ತೊಲಗಿಸೆನಲಾ ನಿಕೃಪನು ತಾಂ | ತೊಲಗಿಸದೆ ಭಂಡಿಯನು ಪರಿಯಿಸೆ |
ಘಳಿಲನಿಕ್ಕಡಿಯಾದುದದು ಭೂಪಾಲ ಕೇಳೆಂದ || ೮೩ ||

ಮಡಿದು ತಾನದು ಕರ್ಮಹಾನಿಯ | ಪಿಡಿದು ಇಲ್ಲಿಯ ಶ್ವೇತ ನಗರದ |
ಪೊಡವಿಪತಿವಾಸವ ವಸುಂಧರಿ ರಾಣಿ ಅಂತರ್ಗೆ ||
ಉಡುಪಮುಖಿ ನಂದಯಶೆ ವೆಸ | ರಿಡದ ಮಗಳಾಗಿರ್ದು ನಿನ್ನಯ |
ಮಡದಿಯಾದಳು ಸಂಸೃತಿಯ ಚಿತ್ರವನದೇನೆಂಬೆ || ೮೪ ||

ನಿರನುಕಂಪನನತ್ತಳಾಗಳು | ಪಿರಿದು ಬೋಧಿಸೆ ಸಾನುಕಂಪನು |
ಕುರುಡು ಪೆರ್ಬಾವಿನ ಕೊಲೆಗೆ ಕೊಕ್ಕರಿಸಿ ಮತಾತ ||
ಕೊರಗಿ ಮಡಿದೈತಂದು ನಿಮಗೀ | ಪರಿಯ ನಿರ್ನಾಮಿಕರು ಪುಟ್ಟಿದ |
ನರಸಿಗಿದು ಪೂರ್ವದ ವಿರುದ್ಧವು ಭೂಪ ಕೇಳೆಂದ || ೮೫ ||

ಗಂಗ ಭೂಪತಿ ಕೇಳಿ ಮನದೊಳು | ಸಂಗೊಳಿಸೆ ವೈರಾಗ್ಯನಾ ಮುನಿ |
ಪುಂಗವ ಸಮಕ್ಷಮದಲಿ ತಳೆದನು ಜಾತರೂಪತೆಯ ||
ಗಂಗ ಮುಖ್ಯ ಕುಮಾರರುವರು | ಸಂಗಡದೆ ನಿರ್ನಾಮಿಕನು ಗುಣ |
ತುಂಗ ಶಂಖನುವಾಂತರಾ ಜಿನರೂಪನೆಲೆ ಭೂಪ || ೮೬ ||

ಅತ್ತಲೆಸೆವಾ ನಂದಯಶೆ ಸುಚ | ರಿತ್ರೆ ರೇವತಿಯೀರ್ವರುಂ ತಾ |
ವುತ್ತಮ ತಪಸ್ಥೆಯರೆನಿಸಿಯಿರೆ ನಂದಯಶೆಯಂದು ||
ಮತ್ತಿಮಿವರೇ ಮರುಭವಗೆ ಸ | ತ್ಪುತ್ರರಾಗಲಿ ಯೆನಗೆನಲು ನೀ |
ಪೆತ್ತ ಮಕ್ಕಳ ನಡಪುವುದು ತನಗಾಗಲೆಂದನುಜೆ || ೮೭ ||

ಮಿಗೆ ನಿಧಾನಂ ಗೈದರೀರ್ವರು | ಸೊಗಯಿಪಾರಾಧನೆ ಸುಭಾವನೆ |
ನೆಗಳ್ದು ದೇಹವನೊಕ್ಕಿರೆ ಮಹಾಶುಕ್ಲಕಲ್ಪದೊಳು ||
ಬಗೆಯೆ ಷೋಡಷ ಸಾಗರೋಪಮ | ದಗಲದಾಯುವನುಂಡು ಸಗ್ಗದಿ |
ನಗಲಿ ನಂದಯಶೋಚರಾಮರ ದೇವಸೇನಂಗೆ || ೮೮ ||

ಬಂದು ನಂದನೆಯಾದಳೀ ಅರ | ವಿಂದಲೋಚನೆ ಈಕೆ ದೇವಕಿ |
ಬಂದು ರೇವತಿ ಮಳಯ ವಿಷಯದ ಭದ್ರಿಳದವೇಶ್ಯ ||
ಎಂದೆನಿಸುವ ಸುದೃಷ್ಟಿಗವಳೊಲ | ವಿಂದಗಳಕೆಯೆನಿಪ್ಪ ವಧುವೆನೆ |
ನಂದಳಾ ಬಲದೇವನಾದನು ಶಂಖಚರ ಸುರನು || ೮೯ ||

ಮುನ್ನ ತಪಗೈದರುವರುಂ ಸಂ | ಪನ್ನ ಸಮಾಧಿಯಲಿ ಮುಡುಪಿಯೆ |
ಉನ್ನತದ ಸೌಖ್ಯದ ಮಹಾ ಶುಕ್ಲದಲಿ ಹದಿನಾರು ||
ಚೆನ್ನ ಕಡಲಾಯುವನು ತೀರ್ಚಿಯೆ | ಸನ್ನುತೆಯ ನೆರೆ ಮೂರು ಸೂಳೊಳು |
ಬನ್ನರಮಣಿಗಳಾಗಿ ನಿಮಗುದಯಿಸುವರವರೆಂದ || ೯೦ ||

ಚರಮ ದೇಹಿಗಳವರೆನಿಪುದನು | ಸುರಪನರಿದಾ ಜ್ಞಾಪಿಸಲು ತಾ |
ನಿರದೆ ಬಂದಾ ನೈಗಮಾಮರನೈದೆ ಶಿಶುಗಳನು ||
ಹರದನಂಗನೆ ಗಳಿಕೆಯೆಂಬಾ | ತರುಣಿಗಿತ್ತೊಡೆ ನಡಪುತಿಹಳಾ |
ಸುರನು ಮಾಯಾಶಿಶುಗಳನು ದೇವಕಿಯಲಿರಿಸುವನು || ೯೧ ||

ಮಸಗಿ ಕಂಸನುಕೊಲುವ ಮಾಯಾ | ಶಿಶುವ ಪಾತಕನಿತ್ತಲತ್ತಲು |
ಮಿಸುಪ ನಿರ್ನಾಮಿಕನು ಹರಿವಿಕ್ರೀಡಿತವೆನಿಪ್ಪ ||
ಪೆಸರ ತಪದಿರುತಾಂ ಸ್ವಯಂಭುಕ | ವೆಸರ ಚಕ್ರಿಯ ವೈಭವವ ಕಂ |
ಡೊಸೆದು ಮುನಿಪ ನಿಧಾನಿಸಿದ ನಿಂತಕ್ಕೆ ತನಗೆಂದು || ೯೨ ||

ಮುಡುಪಿಯೆ ಮಹಾಶುಕ್ಲ ಕಲ್ಪದ | ಕಡಲಿನುಪಮಾಯುಷ್ಯ ಪದಿನಾ |
ರಡಗೆ ನಿರ್ನಾಮಿಕ ಚರಾಮರ ನಿಮ್ಮಗರ್ಭದೊಳು ||
ತೊಡಚಿ ಏಳೇ ತಿಂಗಳಿಗೆ ಈ | ಪೊಡವಿ ವಿಶ್ರುತನುದಯಿಸುವನು |
ಗ್ಗಡದ ಬಂಟಿನ ತುಂಟನಪ್ರತಿ ವೀರ್ಯನವನೆಂದ || ೯೩ ||

ಬೆಳೆವನತ್ತೊಂದೆಡೆಯಲಾತನು | ಬಳಿಕಲಾದಪನರ್ಧ ಚಕ್ರಿಯು |
ಕೊಲುವ ಪರಿ ಹುಸಿ ಕಂಸನಾತನನಾತನಿಂ ಕಂಸ ||
ಕೊಲಿಸಿ ಕೊಂಬನಿದಕ್ಕೆ ಸಂಶಯ | ದಳೆಯದಿರಿ ನೀವೆಂದು ಮುನಿಪತಿ |
ತಿಳುಹೆ ಮುನಿಪದಕೆರಗಿ ಬೀಳ್ಕೊಂಡವರು ಸುಖದಿರಲು || ೯೪ ||

|| ಅಂತು ಸಂಧಿ ೨೦ಕ್ಕಂ ಮಂಗಲಮಹಾ ||