ಸಂಧಿ ೨೩

ಮುರಮಥನ ಸಹವೆಲ್ಲ ಶೌರೀ | ಪುರದೊಳಿರುತಿರೆ ಚಕ್ರಿಯಧಟಿಂ |
ದಿರದೆ ಪೋದರು ಪಡೆದರಾ ದ್ವಾರಾವತೀಪುರವ || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಮುರಮಧು ಕೈಟಭರ |
ಮೇಳದಲಿ ನರಕಾಸುರನರಿಷ್ಟಾದ್ಯರೈತಂದು ||
ವ್ಯಾಳ ಕಂಸನ ಸಖರುಮಿಗೆ ಕೂ | ರಾಳುಗಳು ಮಾಧವಗೆ ಮುನಿದು ವಿ |
ಶಾಲ ಬಲಸಹ ಬಂದು ಮುತ್ತಿದರಂದು ಮಧುರೆಯನು || ೧ ||

ಪೊಡೆವ ರಣಭೇರಿಯ ಸ್ವರವು ಕಿವಿ | ದೊಡಚದದರಿಂ ಮುನ್ನೆ ಸಹಜದಿ |
ಕಡುಗಲಿಗಳೀ ಯಾದವರು ನಿಜಪುರವ ಪೊರವಟ್ಟು ||
ತಡೆಯದಿದಿರಿದಿರೊಡ್ಡೆ ಬಲವೆರ | ಡೊಡವೆ ಕಾದಿದುದು ಮಿಗೆ ಸಿಡಿ |
ಸಿಡಿದು ತಲೆಗಳು ನಭದಲಟ್ಟುಂಬರಿಯನಾಳುತಿರೆ || ೨ ||

ಇಱಿದು ತವಿಸುವ ರಾಕ್ಷಸರ ಬಲ | ದುಱುಬೆಗೀಗಳು ಗರುಡಧ್ವಜ ಬಲ |
ಹೊಱ ಸಿಡಿದುದನು ಕಂಡು ಬಲನೇರಿರ್ದ ಸಿಂಧುರದಿ ||
ವಿದಿತ ಶಾಂರ್ಙ್ಗಕೆ ಹೂಡಿ ಕಡೆಯನು | ಅದಯದಿಂದೆಸೆ ಮುರನ ತಲೆಹಾ |
ರಿದುದು ನಭದೊಳು ನೋಡುವಮರರ ಸಾಕ್ಷಿಗೊಳುವಂತೆ || ೩ ||

ಮುರಹರನು ಮಧುಕೈಟಭಾದಿಯ | ನರೆದು ಬಳಿಕಾ ಮುರನ ಗದೆಯನು |
ಪಿರಿಯ ಮಧುವಿನ ರಥವ ಕೈಟಭನುಗ್ರ ಖೇಟಕವ ||
ನರಕ ರಾಕ್ಷಸನಸಿತ ಕಡುಗವ | ನುರಿವರಿದು ಉಜ್ಜಳಿಪ ಪಲ್ಲವ |
……………………………………………… || ೪ ||

ಬಂದು ಬಲನಾರಾಯಣರು ಸಾ | ನಂದದಲಿ ವಸುದೇವಗೆರಗಿದ |
ರಂದು ಬಳಿಕ ಹಿರಣ್ಯನಾಭನು ವೆರಗಿ ಸುಖವಿರುತ |
ಒಂದು ದಿನವಾ ಸ್ವರ್ಣನಾಭನು | ಬಂದು ಶುಭಲಗ್ನದಲಿ ಬಲಗೊಲ |
ವಿಂದ ತನ್ನೆಸೆವನುಜೆ ರೇವತಿಯನು ಮದುವೆಗೆಯಿದ || ೫ ||

ಬಳಿಕ ಕಳುಹಿಸಿಕೊಂಡು ತನ್ನಾ | ಇಳೆಗೆ ಪೋದನು ಇತ್ತಲಿವರ |
ಗ್ಗಳದ ಹರುಷದಲಿರುತಲಿರೆ ಮತ್ತೊಂದು ದಿನ ಬಲನು ||
ತಿಳಿದು ತಂದೆಗೆ ಬಿನ್ನಯಿಸಿದನು | ನಳಿನನಾಭನ ದೆಸೆಯನಾದುದು |
ಅಳಿವು ಕಂಸಗೆ ಮೀರಬಹುದೇ ವಿಧಿಯ ಸೂತ್ರವನು || ೬ ||

ಅಳಿಯನೆಂಬವ ನಳಿದನಾತ್ಮಜೆ | ಗಳನು ಘನ ಮೆಂಬುದನು ಚಕ್ರಿಯ |
ತಿಳಿದೆವಗೆ ಕಡುಮುಳಿಯದಿರ ನಿನ್ನಲ್ಲಿ ನಮಗೇನು ||
ಕೆಲಸವಿಲ್ಲ ಸಮುದ್ರ ವಿಜಯನ | ಬಳಿಗೆ ಹೋಹವಿದೆಲ್ಲವನು ನೆರೆ |
ತಿಳಿಯೆ ಬಿನ್ನೈಸುವವೆನಲು ಅಹುದೆಂದ ವಸುದೇವ || ೭ ||

ಅರಸ ಬಳಿಕಾ ಉಗ್ರಸೇನನ | ಕರಸಿ ಪಯಣವನರಿಪೆ ನಾನಿ |
ಲ್ಲಿರೆನು ನಿಮ್ಮೊಡವಪ್ಪೆನೆನೆ ಬೇರಿಲ್ಲಿ ಯಿರಿಮತ್ತೆ ||
ಕರಸಿ ಕೊಂಬೆವೆನುತ್ತ ತಾವೆ | ಲ್ಲರು ಉರಗ ಶಯ್ಯಾದಿ ವಸ್ತುವ |
ನಿರಸದಾ ದೇವಕಿಯು ರೇವತಿ ಸಹಿತ ತೆರಳಿದರು || ೮ ||

ತುರಗ ದಳಗಳು ಕರಿಘಟೆಯು ಅ | ಚ್ಚರಿಯ ರಥಗಳು ವಿವಿಧ ಸೇನೆಯು |
ನೆರೆದು ಶ್ರಮದಿಂ ನಡೆದು ಸೂರ್ಯಪುರ ಪ್ರವೇಶದಲಿ ||
ಇರಲು ಕೇಳ್ದು ಸಮುದ್ರವಿಜಯನು | ಹರುಷದಿಂ ಗುಡಿ ತೋರಣವ ನಿಜ |
ಪುರದೊಳಾಗಿಸಿ ಯಿದಿರುಗೊಂಡನು ಸಕಲ ವೈಭವದಿ || ೯ ||

ವಿನುತ ತನುಜರುವೆರಸಿ ವಸುದೇ | ವನು ನಿಜಾನುಜನಂಘ್ರಿಗೆರಗಲು |
ಮನವೊಲಿದು ತಮ್ಮನನು ಹರಸಿದನಪ್ಪಿದನು ಸುತರ ||
ಅನುಜ ನಡೆದಾನೆಯಲಿ ಬಲದೇ | ವನುಬಲದ ಹಸ್ತಿಯಲಿ ನಡುಗಡೆ |
ವನಜನಾಭನ ಮುಂದಿರಿಸಿಕೊಂಡೇರಿದನು ಗಜವ || ೧೦ ||

ದೆಸೆದೆಸೆಗಳನು ತೀವೆ ವಾದ್ಯ ರ | ಭಸವು ನರ್ತಿನಿಯರು ನಲಿದು ನ |
ರ್ತಿಸುತಿರಲು ಹರುಷದಿ ಸಮುದ್ರ ವಿಜಯ ಮಹಾರಾಯ ||
ಒಸೆದೆರಡು ಕಡೆಯಾನೆಗಳು ಜವ | ಳಿಸಿ ಬರಲು ಹರವೀತಿಯಲಿ ಈ |
ಕ್ಷಿಸುವ ಜನಗಳ ಕಣ್ಣ ಪುಣ್ಯದ ಪುಂಜವೆನಿಸಿದರು || ೧೧ ||

ಇವನೆ ದೇವಕಿಯಗ್ರತನುಜನು | ಇವನೆ ವಸುದೇವನ ಕುಮಾರನು |
ಇವನೆ ಪೂತನಿ ಮುಖ್ಯರನು ಶಿಶುತನದಿ ಕೊಂದವನು ||
ಇವನೆ ಗೋವರ್ಧನಗಿರಿಯ ನೆಗೆ | ದವನು ಇವನೇ ಕಂಸ ಮಥನನು |
ಇವನೆ ಕೃಷ್ಣನೆನುತ್ತ ನೋಡಿದುದಂದು ಪುರಜನವು || ೧೨ ||

ವರ ಸಮುದ್ರ ವಿಜಯ ನೃಪಾಲನು | ಸುರಪ ವೈಭವದಿಂದ ಚೆಲುವಾ |
ದರಮನೆಯನಿರೆ ಪೊಕ್ಕು ಹರಿ ವಸುದೇವ ಬಲಸಹಿತ ||
ಪರಮ ಜಿನ ಪೂಜೋತ್ಸವಮನ | ಚ್ಚರಿ ವಿಭವದಲಿ ಮಾಡಿ ಕವಿಮು |
ಖ್ಯರನು ಮನ್ನಿಸಿ ಪಾತ್ರದಾನವ ನೋಡಿ ಸುಖಮಿರ್ದ || ೧೩ ||

ಶ್ರೀವಿಶಿಷ್ಟ ಸಮುದ್ರ ವಿಜಯ ಮ | ಹಾ ವಿಭೂತ್ತಮನಲಿಯಲೀ ವಸು |
ದೇವ ಬಲನಾರಾಯಣರು ಸುಖದಿಂದಲಿರಲಿತ್ತ ||
ನೋವುತಿಹ ಜೀವಂಜಸೆಯು ಕಂ | ಸಾವನೀಶನ ಕೊಂದ ವೈರಿಯ |
ಜೀವವನು ತೆಗೆಯಿಸಿದೊಡಲ್ಲದೆ ಕಟ್ಟೆನೀ ಮುಡಿಯ || ೧೪ ||

ಎಂದು ವನಿತೆ ಪ್ರತಿಜ್ಞೆಯನು ತರಿ | ಸಂದು ಮಾವನ ಬೀಳುಕೊಂಡೈ |
ತಂದು ರಾಜಗೃಹವನು ಬಿಡುಮುಡಿ ಬರುಗಿವಿಯವೆರಸಿ ||
ತಂದೆ ಚಕ್ರಿಯ ಚರಣವನು ಭೋ | ರೆಂದು ಕಣ್ಣೀರಿಂದ ತೊಳೆದು |
ಸ್ವೈಂದು ಸುಯಿದತಿ ಹಳಗಿಸುತ್ತ ಬಿದ್ದತ್ತರಳೆರೆಜಾಲಾ || ೧೫ ||

ಇಂದಿದೇನೇನುತಲು ಜರಾ | ಸಂಧ ಚಕ್ರಿಯು ಮಗಳ ನಿಜಕರ |
ದಿಂದ ನೆಗದಶ್ರುಪ್ರವಾಹವನು ಸುಖದಿತೊಡೆದು ||
ನೊಂದಿದೇ ವೃತ್ತಾಂತವನು ಪೇ | ಳೆಂದೊಡೆತ್ತಾನುಂ ಕಿರಿದು ಪೊ |
ತ್ತಿಂದ ಮೇಲಿಂತೆಂದಳಾ ವಧು ಗದ್ಗದ ಸ್ವನದಿ || ೧೬ ||

ದೇವ ನಿನ್ನೊಡವುಟ್ಟಿದಳ ಪ | ದ್ಮಾವತಿಯ ಸುಕುಮಾರನನು ವಸು |
ದೇವನಾತ್ಮಜ ಕೃಷ್ಣ ಕೊಂದನಸಹ್ಯದಲಿ ನನಗೆ ||
ಈ ವಿಧಿಯ ಮಾಡಿದನೆನಲು ಕರು | ಣಾವಲೊಖನ ಚಕ್ರಿಯಲ ರು
ದ್ರಾವತಾರದಿ ಕಾಯ್ಪನಾಂತನು ಮಗಳ ನುಡಿಗೇಳಿ || ೧೭ ||

ಕುಲಗಿರಿಯಲಡಗುವನೊ ಶರಧಿಗ | ಳೊಳಗೆ ಹೋಗುವನೊ ನನ್ನ ಮಗಳಿಗೆ |
ಮೊಳೆವರೆಯದಲಿ ವಿಧವತೆಯನಿತ್ತನು ಭೂಮಿಯಲಿ ||
ಉಳಿಯ ಬಲ್ಲನೆ ಮೇಣ್ ಸುರಾಸುರ | ಗಳವಿಗೊಡಲೆನಗಾರ್ಪರೇ ಎಂ |
ದೊಳರಿ ಕಡೆಕಾಲದ ಚವನವೊಲೈದೆ ಘರ್ಜಿಸಿದ || ೧೮ ||

ಜನಪನಾಗಳು ಕಾಲವಯನೆಂ | ದೆನಿಪ ತನ್ನಾತ್ಮಜನ ಕರೆದಿಂ |
ದಿನದಿನವೆ ಕಂಸನನು ಕೊಂದಮುಕುಂದನನು ಕೊಂದು ||
ಜನವಱಿಯಲಾತನ ತಲೆಯ ನಿ | ನ್ನನುಜೆಯಡಿ ಮೊದಲಲ್ಲಿ ಕೆಡಪೆಂ |
ದೆನುತ ನೇಮಿಸಿ ಪ್ರಬಲ ಸಹವಾಗ ಕಳುಹಿದನು || ೧೯ ||

ಕಳುಹೆ ಕ್ರಮದಿಂ ಸೂರ್ಯಪುರವನು | ಘಳಿಲನೈತಂದೊಡ್ಡನಿಲೆ ಕಡು |
ಮುಳಿದು ಕಂಸಧ್ವಂಸಿ ಪೊರಮಟ್ಟೋಡಿ ನಿಲಲೊಡನೆ ||
ತಳುವದಾ ಮಾಗಧ ಬಲವು ಬಂ | ದಳವಿಗೊಡೆ ಯಾದವ ಬಲವು ಕೈ |
ಗಳಿಯಲಂಬಿನ ಮಳೆಯ ಕಱೆದುದು ಧಱೆಗೆ ಪೊಸತೆನಿಸಿ || ೨೦ ||

ಅರುಣಜಲ ವಾರಿಧಿಯು ಸೇನಾ | ಶರಧಿಯೊಳು ಭೋರ್ಗರೆಯೆ ಮಗಧೇ |
ಶ್ವರನ ಬಲಬೆನ್ನಿಕ್ಕೆ ಅತಿರಥತತಿ ಮಹಾರಥವ ||
ಕರೆದುಕೊಂಡಾ ಕಾಲವಯ ಭೂ | ವರನು ಕೆಡೆಯರಿ ಕಡಿಯೆನುತ ಸಡ |
ಗರಿಸಿ ಹೊಕ್ಕನು ಯಾದವರ ಬಲದುಕ್ಕ ನಿಲಿಸಿದನು || ೨೧ ||

ಮಧುಮಥನನದ ಕಂಡು ಶಾಂರ್ಙ್ಗವ | ನಧಟಿನಿಂಗೊಲೆಯೆತ್ತಿ ಜೇವಡೆ |
ವುದು ಮುರಿದು ಮೊದಲೋಡುವಾ ಸೈನಿಕವ ಪೂಡಿದನು ||
ಹದುಳದಲಿ ತಾ ರಾಜಗೃಹವೈ | ದಿದನು ಚಕ್ರಾಯುಧನರಿದು ಕಳು |
ಹಿದನು ಅಪರಾಜಿತನೆನಿಪ ಅನುಜಾತನನು ಭರದಿ || ೨೨ ||

ವಿತತ ಬಲಗರ್ವದಲಿ ಅಪರಾ | ಜಿತನು ಶೌರೀಪುರ ಸಮೀಪದ |
ಲತುಳ ಬಲಸಹವೊಡ್ಡಿನಿಲೆ ಹಲಧರನು ನಗಧರನು ||
ಅತಿಬಲರು ನಿಜಬಲವೆರಸಿ ಕಾ | ಣುತ ಭರತಲೊಡ್ಡುವುದು ಅಪರಾ |
ಜಿತನು ಕೈವೀಸಿದನು ತತ್ತರಿದಾಡಿದರು ಭಟರು || ೨೩ ||

ಡೊಂಬಿವರಿದಿಱಿದಾಡಿಸೂತ್ರದ | ಬೊಂಬೆಯಂದದಿ ಕೆಡದರಧಟರು |
ಬೆಂಬಿಡದೆ ಬಲನಾನೆ ಬಿಸುಟಂಬರಿಯುತಿರೆ ಕಂಡು ||
ತಾಂಬೆಡಗುಗೊಂಡೋಡಿದನು ತ | ನ್ನಿಂಬಿಗಾತನದತ್ತಲಿತ್ತಲ |
ಲುಂಬ ಭಟ ಕೋಳಾಹಳದಿ ಮರಳಿದರು ನಿಜಪುರಕೇ || ೨೪ ||

ಅಂದಿನಿರುಳು ಸಮುದ್ರವಿಜಯ ನೃ | ಪೇಂದು ಮಂಥಣಸಾಲೆಯಲಿ ಸಲೆ |
ಸಂದ ವಸುದೇವಾದಿ ತಮ್ಮಂದಿರ ಬಲಾದಿಯಹ ||
ಚಂದದಾತ್ಮಜ ರಕ್ಷಿ ಕುಮುದಾ | ನಂದವನು ದರಹಸಿತ ಚಂದ್ರಿಕೆ |
ಯಿಂದ ಮಾಡುವ ಮಂತ್ರಿಗಳ ಮೊಗನೋಡುತಿಂತೆಂದ || ೨೫ ||

ಮುನಿದನೆನ್ನೊಳು ಸಾರ್ವಭೌಮನು | ತನುಜೆಯೋಪನು ತಂಗಿಯಾತ್ಮಜ |
ನೆನಿಪವನು ನಮ್ಮಾತನಿಂದಲೆ ಮಡಿದದೆಸೆಯಿಂದ ||
ತನುಜರನಜರು ಹಲವು ಕಾಳಗ | ವನು ನಿಮಿರ್ಚಿದರಿಂನಿದೇನೆಂ |
ಬನುವನಾಳೋಚಿಸಿಯೆನಗೆ ಹೇಳೆಂದನವನೀಶ || ೨೬ ||

ಧಾರಿಣೀಶ್ವರ ಸಕಲಶಾಸ್ತ್ರ ವಿ | ಚಾರಚತುರರು ನಿಮ್ಮಡಿಗಳಾ |
ಕ್ಷೀರನೀರ ವಿವೇಕತೆಯನರಸಂಚೆ ಬಲ್ಲಂತೆ ||
ಕೀರನೇಂ ಬಲ್ಲುದೆ ನಿಖಿಳಗುಣ | ಮೇರುದೇವರು ನಮ್ಮ ಬುದ್ಧಿಯ |
ನಾರಯಲು ಚಿತ್ತೈಸಿದಿರಿ ಅದಕೇನು ತಪ್ಪಲ್ಲ || ೨೭ ||

ದೇವ ಬಿನ್ನಹವಿದಱ ತೆಱನನು | ನಾವಱಿದುದಿದು ಚಕ್ರಿಯಳಿಯನ |
ಜೀವವನು ನಾವೆಳೆದ ದೆಸೆಯಿಂದಾದ ಬಲು ಜಗಳ ||
ಭಾವೆ ಜೀವಂಜಸೆಯ ಬಿಡುದಲೆ | ಆ ವಿಭುವಿಗಡಿಗಡಿಗೆ ರೌದ್ರವ |
ತೀವುತದೆ ನಮ್ಮೊಡನೆನುತ ಉದ್ವಾಹನಿಂತೆಂದ || ೨೮ ||

ಮಾತುಮಾತಿನ ಜಗಳವೇ ಅದ | ನೋತುತಿಳುಹಲು ಬಹುದು ಸಂಗರ |
ಭೀತನೇ ಹಗೆ ಚಕ್ರವರ್ತಿಯು ಆದೊಡಾವವಗೆ ||
ಸೋತವರೆ ಅಲ್ಲಲ್ಲ ನವಗವ | ನೇತಱದಿ ನೋಡಿದೊಡೆ ಪಿರಿಯನು |
ಈ ತೆಱದೊಳಿರೆ ರಾಜಕಾರ್ಯವು ರಾಯಕೇಳೆಂದ || ೨೯ ||

ಕಾದಿದಲ್ಲದೆ ಹೋಗನಾ ಹಗೆ | ಕಾದುವುದು ನಮಗರಿದುದಾದೊಡೆ |
ಕಾದ ಬಹುದೆವಗೆಂತೆನಲು ಆದೇಶ ಪುರುಷನಲ ||
ಮಾಧವನು ಅಂತಾದೊಡಂ ನಾ | ವಾದರಿಸಲೇ ಬೇಕು ತತ್ಕಾ |
ಲೋದಯವು ಬಪ್ಪನ್ನವೆಲೆ ಭೂಪಾಲ ಕೇಳೆಂದ || ೩೦ ||

ಕಿರಿದು ದೂರಾಂತರವನೈದುವ | ನೆಱೆ ಬಲಿಷ್ಠವೆನಿಪ್ಪ ದುರ್ಗವ |
ನಱಸಿಕೊಂಡಿಹವನ್ನೆವರವಿದೆ ಕಾರ್ಯವೆಂದೆನಲು ||
ಎಱೆಯನದನಹುದೆಂದೆನಲು ತಾ | ನಱಿದುಗೋವರ್ಧನನು ನಿಂದನು |
ಕಿಱಿಮಗನ ಬಿನ್ನಹವ ದೇವರು ಚಿತ್ತವಿಪುದೆಂದ || ೩೧ ||

ಓಡುವಾಳೋಚನೆಯ ಹಾರುವ | ರಾಡಿದೊಡೆ ಹಿರಿಯಯ್ಯ ನಿಮ್ಮಡಿ |
ಹೇಡಿಗೊಂಡವಲೊಪ್ಪುವುದೆ ಆ ಚಕ್ರಿತಾ ಬರಲಿ ||
ಆಡಲೇನಾತನನು ಕಂಸನ | ಕೂಡಿರಿಸುವನು ತೋಳ ಬಲುಹನು |
ನೋಡು ಸೋತರೆ ನಿನ್ನ ಮಗನೇ ರಾಯ ಕೇಳೆಂದ || ೩೨ ||

ಚಂದ್ರ ತಾರಾಬಲವು ತಮಗಾ | ದೊಂದು ದಿನದಲಿ ತನುಜರನುಜರ |
ಸೌಂದರೀ ಜನದಂಗರಕ್ಷರಮಾತ್ಯ ಮಂತ್ರಿಗಳ ||
ಸಂದಮನ್ನೆಯ ಮಕುಟ ಬದ್ಧರ | ವೃಂದದಖಿಲ ಬಲಪ್ರಮುಖ್ಯರ |
ಸಂದಣಿಯಲಾ ಪುರವ ಪೊರವಂದನು ನೃಪಾಲಕನು || ೩೩ ||

ಪುದಿದ ಜಲತೃಣಕಾಷ್ಠ ನಿಚಯಾ | ಸ್ಪದವೆನಿಪ ತಾಣಂಗಳೊಳು ನೃಪ |
ಹದುಳದಿಂ ಪಾಳೆಯವ ಬಿಡುತಲೆ ತೆಂಕಮುಖವಾಗಿ ||
ಒದಗಿ ಪೋಗುತಲತ್ತಲಾ ಮಾ | ಗಧನು ಜೀವಂಜಸೆಯ ಕಂಡಡೆ |
ಗದಡಿ ತನ್ನನುಜಾತನಪರಾಜಿತನ ಬೆಸಸಿದನು || ೩೪ ||

ಮುಱಿದು ಬಂದಾತನುಜರನುಜರ | ಜಱೆದು ಮತ್ತಪಹರಾಜಿತನ ತ |
ನನ್ನುಱುವ ತಮ್ಮನ ಕಳುಹಿ ಸಂಗಡ ಕಾಲವಯ ಬರಲು ||
ನೆಱೆದ ಸೇನಾವನದಿ ಸಹ ಬಂ | ದಱಸಿ ಶೌರಿಯ ಪುರದಲಿಲ್ಲೆನೆ |
ಅಱಸಿ ಕೊಳುತಾ ಬೆಂಬಲಿಯಲೈ ತಂದರವರಂದು || ೩೫ ||

ಮುಂದೆ ಯದುಕುಲದರಸುಗಳು ಅ | ತ್ತೊಂದು ಬೀಡನು ಬಿಡಲು ತಾವುಂ
ಪಿಂದೆ ಬಂದು ತೊಡರ್ಚಿಕಾದುವರಿವರುತತ್ತಿಱಿಯೆ ||
ಒಂದು ಪಯಣಕೆ ಹಿಂದೆ ಹೋದರು | ಎಂದು ಈ ಪರಿ ಬೆನ್ನ ಬಿಡದಿರೆ |
ಬಂದರಿವರಾ ಊರ್ಜಯಂತಾಚಳದ ಹೊರೆಗಾಗಿ || ೩೬ ||

ಶರದಿ ಯೊತ್ತಿನಲಾ ಸಮುದ್ರದ | ಸಿರಿಯೆನಿಪ ನದಿಯಿಂ ಮನೋಹರ |
ತರಬನದಿ ಪದ್ಮಾವತೀ ವಿಷಯವು ವಿರಾಜಿಸಲು ||
ಇರಲಿದೆವಗಿಂ ಬೆಂದು ಯದುಕುಲ | ದರಸನಲ್ಲಿಯೆ ಬೀಡು ಬಿಟ್ಟಿರು |
ತಿರಲದತ್ತಲು ಸಾರ್ವಭೌಮನ ಸೇನೆಯೊದಗಿದುದು || ೩೭ ||

ನೆಲನಡುಗೆ ನಿಸ್ಸಾಳ ಕೋಟಿಗ | ಳುಲಿಗೆ ಸೇನಾಪದರಜವೆ ಬಾಂ |
ಬೊಳೆಯ ಪೂಳಲು ಬಂದ ಅಪರಾಜಿತ ನೃಪಾಲಕನ ||
ನಿಲಿಸಿ ಅರನೆಲೆಯೊಳುವುಳಿದ ಪೇ | ರ್ವಲವೆರಸಿ ಆ ಕಾಲವಯನೃಪ |
ನಳವಿಗೊಡೆ ಕಂಡಾಮುರಾಂತಕನೇಱಿದನು ರಥವ || ೩೮ ||

ಪಿಡಿದು ಶಾರ್ಙ್ಗವನೇರಿಸಿಯೇ ಜೇ | ವಡೆದು ಮಾರ್ಗಣೆ ಮಳೆಗಱೆದುಪಗೆ |
ವಡೆಯ ನೆತ್ತರ ಪೊನಲಿ ತೇಕಾಡಿಸಲು ಕಂಡು ||
ಕಡುಗುದುರೆ ಕೂರಾನೆಗಳ ದಳ | ದೊಡನೆ ಕಾಳವಯನು ಜಗಳವನು |
ಕೊಡಲು ಪಡಲಿಟ್ಟವು ಮುರಾರಿಯ ಕೋಲ ಖುರಪುಟಕೆ || ೩೯ ||

ಅತಿವಹಿಲದಲಿ ಮರಳಿ ಅಪರಾ | ಜಿತನೆಯಿದಿದನು ಕಾಲವಯನೀ |
ಕ್ಷಿತಿಪನಿದು ನೆಲೆಯಲ್ಲೆನುತ ಪಾಳೆಯವನೆತ್ತಿದನು ||
ವಿತತ ನಂದನ ನದಿಗಳಿಂ ರಾ | ಜಿತವೆನಿಸಿದಪರಾಬ್ಧಿ ವೇಲಾ |
ಪ್ರತಿಮವನವನು ಪೊಕ್ಕನಂದು ಸುಖಪ್ರಯಾಣದಲಿ || ೪೦ ||

ಅತ್ತಲಪರಾಜಿತ ಮಹೀಪತಿ | ವೊತ್ತಿ ಜಡಿದಾ ಕಾಲವಯನನು |
ಮತ್ತೆ ಏಳಕ್ಷೋಣಿಯೆ ಬಲವನು ಕರೆದುಕೊಂಡು ||
ಎತ್ತಿ ಬರುತಿರೆ ಯಾದವರ ಪು | ಣ್ಯೋತ್ತದಿಂದುಜ್ಜಂತ ಗಿರಿಯೊಳು |
ಪತ್ತಿದಧೀದೇವತೆಗಳ ಮುಂಬಿಟ್ಟ ಬೀಡಿನಲಿ || ೪೧ ||

ಪಲವು ಕೊಂಡಂಗಳನು ನಿರ್ಮಿಸಿ | ಕೆಲದಲಷ್ಟ ವಿಧಾರ್ಚನೆಗಳನು |
ಸಲಿಸಿ ಕಡುಮುಪ್ಪಿನವಳೋರ್ವಳೆ ಕುಂಡ ಕುಂಡದೊಳು ||
ಅಳುತಲೆಲ್ಲರ ಪೆಸರಿನಲಿ ಸುಳಿ | ಸುಳಿದು ಶೋಕಿಸುತಿರಲು ಮುಂಗುಡಿ |
ಯಲಿ ಬರುತಲಿಹ ಕಾಲವಯನದ ಕಂಡು ಬೆಱಗಾದ || ೪೨ ||

ಎಲೆ ಜರಾಜರ್ಜರೆಯೆ ಶೋಕಿಸ | ಕೆಲಸವೇನೀ ತೆಱವ ಪೇಳೆನೆ |
ಅಳುತಳುತ ಕೇಳಣ್ಣ ಮಗಧೇಶ್ವರನ ಭಯದಿಂದ ||
ಇಳೆಯೊಳಿರತೀರದೆ ಸಮಸ್ತರು | ಅಳದರೀ ಕೊಂಡಂಗಳಲಿ ಯದು |
ಕುಲದರಸುಗಳು ನಾಂ ಸಮುದ್ರ ವಿಜಯನದಾದಿಯನೇ ಕೇಳಿ || ೪೩ ||

ಹೇಳು ಹೇಳಿನ್ನೊಮ್ಮೆ ಯಾದವ | ರೋಳಿಯೆಲ್ಲವು ಇಲ್ಲಿ ಸುತ್ತುದೆ |
ಕಾಲವಯನೆಂಬವನ ಬಾಧೆಗೆ ಸಾಯದುಳಿದಪರೆ ||
ಕೇಳೆಲೇ ಸುಕುಮಾರ ಕಂಸನ | ಗೋಳು ತಾಗಿದುದಿಂದು ಹಾಯೆನೆ |
ಕೇಳಿ ಕೊನೆವೆರಳಿಂದ ಮೀಸೆಯ ತಿದ್ದಿದನು ನಲಿದು || ೪೪ ||

ಉರಿವ ಹೆಣಗಳ ಕಮಱಿನಾತವ | ನುರಿಯನಾಲಗೆ ಮುಗಿಲಮುಟ್ಟುವ |
ಪರಿಯನೆಲ್ಲವ ಹೆಸರುಗೊಂಡವಳಲುವದನು ತಿಳಿದು ||
ಹಿರಿಯಳೇ ಪರಿವಾರವೇನಾ | ಯ್ತರಿಪೆನಲು ಆಕಾಲವಯಗಾ |
ಜರತಿಯೆಂದಳು ಚಕ್ರಿಗಪರಾಧಿಗಳು ತಾವೆಂದು || ೪೫ ||

ನಾಡುಕೋಡನು ಸಾರಿದನು ಪಲ | ಕಾಡ ಕೂಡಿದವಾನೆಗಳು ನಿವ |
ಗಾಡಲೇನುಳಿದಾ ಪರಿಗ್ರಹವಿಲ್ಲಿ ಮಗ್ಗಿದುದು |
ರೂಢಿಗರುವೆನೆ ಕೇಳಿ ಹರುಷವ | ಕೂಡಿಕೊಂಡಪರಾಜಿತಂಗಿದ |
ನಾಡಿತಿರುಗಿತು ದಂಡು ಹಗೆಗಳು ಮಡಿದರೆಂದಱಿದು || ೪೬ ||

ಚಕ್ರವರ್ತಿಯ ಕಂಡು ನಿನ್ನಯ | ವಿಕ್ರಮಾಗ್ನಿಯ ಸಕಲ ದೆಸೆಗಳ |
ನಾಕ್ರಮಿಸಿ ಕೊಂಡಿಪ್ಪುದಾ ಬೇಂಕೆಯಲಿ ಬೆಂದವರು ||
ತಕ್ಕ ಹರಿವಂಶಜರದೆಲ್ಲರು | ನಿಕ್ಕುವಂ ತಾನೆಂದು ಪೇಳ್ದನೃ |
ಪರ್ಕಳಿಂ ತಿಳಿದಿರ್ದ ಸುಖದಲಿ ವರ ಜರಾಸಂಧ || ೪೭ ||

ತಿರುಗಿತಾ ನೃಪವರನ ದಂಡೆಂ | ದರಿದು ಹರುಷದಲಿತ್ತಲಿವರಿಂ |
ಗಿರಲು ದುರ್ಗವ ಸವೆಯಲೆಂದುದ್ವಾಹಮಂತ್ರಿಯನು ||
ಕರೆದು ಮಂಥಣಗೇಳಲೆಂದನು | ಹರಿಯಿರಲಿ ವರದರ್ಭ ಶಯನದೊ |
ಳಿರಲವನ ಪುಣ್ಯಧಿದೇವತೆಗಳ ಹದನ ಕಾಂಬ || ೪೮ ||

ಎನೆ ಸಮುದ್ರವಿಜಯನೊಡಂಬ | ಟ್ಟನುಪಮನನಚ್ಚುತನ ಕರೆದಾ |
ತನನು ಆ ತೆರದಿರಿಸಲೆಂಟುಂ ದಿನವು ಈ ಹರಿಯ ||
ಘನಸುಪುಣ್ಯೋದಯದಿನಾಯ್ತಾ | ಸರ ವಿಕಂಪವು ಸುರಪಗವಧಿಯಿ |
ನನುವಧಿಸೆ ನೇಮೀಶನುದಯಿಪ ಕುಲಜರೆಂದಱಿದ || ೪೯ ||

ಹರಿಕುಲದ ರಾಯರಿಗೆ ತೆಱಹನು | ಶರಧಿಯಲಿ ಮಾಡೆಂದು ನೈಗಮ |
ಸುರನ ಸುರಪತಿ ಬೆಸಸೆ ಬಂದುತ್ತುಂಗ ಹಯವೊಂದು ||
ಹರಿಯೆ ತಿಳುಹಲ್ಲಣಿಸಿ ಬಹುದದ | ನರವರಿಸದೇಱೆಂದು ಕನಸಿನ |
ಪರಿಯಲಱಿಪಲು ದರ್ಭಶಯ್ಯೆಯಿನೆದ್ದನಾ ಕೃಷ್ಣ || ೫೦ ||

ವನಜನಾಭನಮಾತ್ಯರಿಗೆ ಆ | ಕನಸನೊರೆದನಿತರೊಳೆ ಬಂದುದು |
ಇನಕಿರಣವನು ಪಳಿವ ಕಾಂತಿಯಲಿಂದ್ರ ಹಯಸಮನು ||
ಅನುಪಮಾಶ್ವವು ಮುಂದೆ ನಿಲೆ ಹರಿ | ಯನುವಿನಿಂದದ ನೇಱೆ ಮನವೆನೆ |
ವನಧಿಯಲಿ ಹಱಿದತ್ತು ನಾಲ್ವತ್ತೆಂಟು ಯೋಜನವ || ೫೧ ||

ಶರಧಿ ಹಿಂದಕೆ ತೆಗೆದು ನಿರುಂ | ಧರೆಯನಿತ್ತುದು ದ್ವಾರಮೆನೆ ಹರಿ |
ಹರಿಯನಿಳಿಯಲು ಮಾಯವಾಯ್ತಾ ಕುದುರೆ ಆದಿವಿಜ ||
ವರನಿಜಾಕೃತಿದೋಱಿ ಹೋದನು | ಸುರ ನಿವಾಸಕೆ ಇಂದ್ರ ಪೇಳ್ದಂ |
ತಿರದೆ ಧನದನು ರತ್ನಮಯದಿಂ ಪೊಳಲ ನಿರ್ಮಿಸಿದ || ೫೨ ||

ಪೊಳಲ ಸುತ್ತಲು ಕಲ್ಪತರು ನಿಭ | ಫಲ ಭರಿತ ತರು ನಿಭೃತನಂದನ |
ಬಳಸಿಹುದು ತಿಳಿಗೊಳಗಳಿಂ ಕೃತಕಾದ್ರಿ ಶೋಭೆಗಳಿಂ ||
ಅಳಿಗಳರಮನೆಗಳಿಗೆ ಭೋಜನ | ನಿಳಯ ವೊಲಗದ ಸುಗ್ಗಿ ಕೋಗಿಲೆ |
ಗಳಿಗೆ ನಾಟಕ ಸಾತಿ ಸಿಖಿ ಕುಳಕವಿಸಿ ಮೆರೆದಿಹುದು || ೫೩ ||

ಜಲಕುಸುಮನವ ಪಿಂಜರತಿ ಪರಿ | ಮಳಿತ ಜಲಖಾತಿಕೆಯ ಬಳಸಿಂ |
ತೊಳಗೆ ಮಿಸುನಿಯ ಕೋಂಟೆ ಹೊಳಲೊಳ ಹೊರಗೆ ಹೊಂಬಿಸಲ ||
ಬೆಳಗುತಿಪ್ಪುದು ಸೋಮಸೂರ್ಯೋ | ಜ್ವಲ ಸುವೀಥಿಗಳಖಿಳ ಗೋಪುರ |
ಥಳಥಳಿಪ ಸಾಲುಪ್ಪರಿಗೆ ಅಂಗಡಿಗಳೊಪ್ಪಿದವು || ೫೪ ||

ಎಲ್ಲಿ ನೋಡಿದಡಲ್ಲಿ ನಂದನ | ವೆಲ್ಲಿ ನೋಡಿದೊಡಲ್ಲಿ ತಿಳಿಗೊಳ |
ನೆಲ್ಲಿ ನೋಡಿದೊಡಲ್ಲಿ ಕಮ್ಮಂಗಳವೆ ಬೆಳೆದ ಹೊಲ ||
ಎಲ್ಲಿ ನೋಡಿದೊಡಲ್ಲಿ ನೃಪಗೃಹ | ವೆಲ್ಲಿ ನೋಡಿದೊಡಲ್ಲಿ ವಸತಿಗ |
ಳೆಲ್ಲಿ ನೋಡಿದೊಡಲ್ಲಿ ಕಣ್ಣಿಂಬಾದ ಶಿಲೆಯಿಹುದು || ೫೫ ||

ಹಲವು ಮಾತೇನದರ ಸೊಬಗಿನ | ಚೆಲುವಿಕೆಗೆ ಮಿಗೆ ನಾಣ್ಚಿ ಆಗಸ |
ವಲಗೆಯನು ಮಱೆಗೊಂಡುದಮರರ ಪಟ್ಟಣವುರಸೆಗೆ ||
ಸಲೆಯಿಳಿದುದುರಗರ ಭವನವೆನೆ | ಪಲ ಪರಿಯಲಿನ್ನದನೆ ಪೊಗಳ್ವುದು |
ಚಲವೊ ಗೆಲವೋ ಸಾಕದಂತಿರಲಾ ಪುರದ ನಡುವೆ || ೫೬ ||

ಸುತ್ತಲುಮ ಹನ್ನೆರಡು ಗಾವುದ | ವೆತ್ತಲುಂ ತನಗೆಂಬ ತಾಮದೊ |
ಳುತ್ತಮ ಶ್ರೀ ಜಿನರ ಮಣಿಮಯ ವಸತಿಗಳನಾಂತ ||
ತೆತ್ತಿಸಿದ ನವರತ್ನ ಕೋಟಿ ವಿ | ಚಿತ್ರಕೂಟೋತ್ತುಂಗ ಹರ್ಮ್ಯಾ |
ಅತ್ತದರಮನೆ ಮೂಱು ಮೂಜಗ ಬೆಲೆಯೆನಿಪವಲ್ಲಿ || ೫೭ ||

ದೇವ ನಿರ್ಮಿತವೆಂದರದ ನಿ | ನ್ನಾವ ಕವಿ ಬಣ್ಣಿಸಲು ಬಲ್ಲನು |
ಆ ವಯಿಶ್ರವಣನೆ ಅದಂ ದ್ವಾರಾವತಿಯೆಯೆಂದು ||
ಭಾವಿಸಿಯೆ ಪೆಸರಿಟ್ಟು ಮತ್ತಾ | ಭಾವಿ ತೀರ್ಥೇಶ್ವರನ ಪಿತೃವೆಂ |
ದಾ ವಿಶಿಷ್ಟಾಲಯದಲಿರಿಸಿ ಸಮುದ್ರ ವಿಜಯನನು || ೫೮ ||

ಬಲನ ಬಲದರಮನೆಗೆ ತಂದನು | ನಳಿನ ನಾಭನನೆಡದಲಿಹನಿಳೆ |
ಯದಲಿ ನೆಲೆಗೊಳಿಸಿದನು ಪಟ್ಟಂಗಟ್ಟಿದನು ಮುದದಿ ||
ಮೊಳಗೆ ಸುರದುಂದುಭಿಯು ಹೂವಿನ | ಮಳೆಗಱೆಯೆ ನೀನೀ ತ್ರಿಖಂಡಕೆ |
ತಲುವದರಸಾಗೆಂದು ಹರಸುತ ಹೋದನಾ ಧನದ || ೫೯ ||

ನುತ ಸಮುದ್ರ ವಿಜಯನು ದ್ವಾರಾ | ವತಿಯೊಳಗೆ ತನ್ನನುಜರಿಗೆ ಭೂ |
ಪತಿಗೆ ಮಂತ್ರಿ ಪ್ರಧಾನಾದ್ಯರಿಗೆ ಪುರಹರದರಿಗೆ |
ಚತುರ ಬುಧಕವಿಗಮಕಿ ಗಾಯಕ | ತತಿಗೆ ಪರಿವಾರಕೆ ನಟ ವಿಟ |
ರ್ಗತಿ ಮೆಱೆವ ಗಣಿಕಾದಿಗಳಿಗುಚಿತಾಶ್ರಯವನಿತ್ತ || ೬೦ ||

ಮುರಮಥನನಾಶ್ಚರ್ಯ ವೈಭವ | ದಿರುತಿರಾ ರಥನೂಪುರದ ಹೊಳ |
ಲರಸನೆನಿಪ ಸುಕೇತು ಖಗಪತಿಯಿವರ ತೆಱನಱಿತು ||
ವರನಿಜಾತ್ಮಜ ಸತ್ಯಭಾಮೆಯ | ಕರೆದು ತಂದನು ನಭದೊಳೆತ್ತಲು |
ನೆರೆದು ನಿಂದವು ವಿವಿಧ ರತ್ನಿವಿಮಾನ ಕೋಟಿಗಳು || ೬೧ ||

ದೆಸೆದೆಸೆಗೆ ಪಸರಿಸುವ ವಾದ್ಯ | ಪ್ರಸರದಲಿ ದ್ವಾರಾಪತಿಯ ರಾ |
ಜಿಸುವ ಚೆಲುವನು ನೋಡುತಿಳಿದಾ ಪುರವನೈತರಲು ||
ಒಸೆದುಯದುನೃಪರಿದಿರುಗೊಂಡಾ | ಅಸುರರಿಪು ಸದನಕ್ಕೆ ಮಿಗೆ ಸಂ |
ತಸದಿ ಕರೆತಂದರು ಸುಕೇತು ವಿಯಚ್ಚರಾಧಿಪನ || ೬೨ ||

ಶುಭಮುಹೂರ್ತದಲಿಳೆಗೆ ಪೊಸತೆನೆ | ವಿಭವದಿಂದಲಿ ಖಚರಪತಿ ಕೈ
ಟಭವಿಮರ್ದನನಾದ ಪುರುಷೋತ್ತಮಗೆ ನಿಜಸುತೆಯ ||
ತ್ರಿಭುವನದಲಿವಳನ್ನರತಿ ದು | ರ್ಲಭವೆನಿಪ ಚೆಲುವೆಯನು ಮಂಗಳ |
ರಭಸವೆಸೆಯಲು ತಾನೆ ಕೈನೀರೆಱೆದನೊಲವಿಂದ || ೬೩ ||

ವರ ಸಮುದ್ರ ವಿಜಯನು ಮೊದಲಾ | ದರಸುಗಳಿಗಕ್ರೂರ ಮುಖ್ಯರ |
ವರ ತನುಜರಿಗೆ ವಿನುತ ಶಿವದೇವ್ಯಾದಿವಧುಗಳಿಗೆ ||
ಪರಿಪರಿಯ ವಸ್ತ್ರಾಭರಣಗಳ | ತರತರದಿ ಕೊಟ್ಟಳ್ತಿಯಿಂ ಖೇ |
ಚರನು ಕಳುಹಿಸಿಕೊಂಡು ವಿಭವದಿ ನಭವನಡರಿದನು || ೬೪ ||

ಮೀಸಲಳಿಯದ ಕನ್ನೆ ಮೋಹದ | ಲಾ ಸೊಬಗಿಯಹ ಸತ್ಯಭಾಮೆಯು |
ವಾಸುದೇವನುಮೀರ್ವರುಂ ಸಮರಾಗ ಸಂಭ್ರಮದಿ ||
ಓಸರಿಸದಂಗಜ ಕಲಾ ವಿ | ನ್ಯಾಸದಿಂ ಸವಿಶುಶಿಲನುಮಡು ವಿ |
ಲಾಸಿಗಳು ನಾನಾ ವಿನೋದದಿ ಸುಖದಲಿರುತಿಹರು || ೬೫ ||

ಶ್ರೀಯರಸ ಶೃಂಗಾರ ರಸಕಧಿ | ನಾಯಕರು ಹರಿಯೆನಲು ಖೇಚರ |
ರಾಯ ಸುಕುಮಾರಿಯೊಳು ಸಕಲಕಲಾ ಪ್ರವೀಣೆಯೊಳು ||
ಕಾಯಜೋತ್ತಮ ಸೌಖ್ಯಸುಧೆಯನು | ಕಾಯಜನ ಪಿತ ಸವಿವುದರಿದೇ |
ಜೀಯೆನಿಪ ವಾಣೀಮುಖ ಶ್ರೀ ರತ್ನ ದರ್ಪಣನು || ೬೬ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತ ಮದ ಮಧು |
ಕರ ವಿಭಾಸಿ ವಿನೂತಕವಿ ಜಿನಭಕ್ತ ವಿರಚಿಸಿದ ||
ಪರಮ ನೇಮಿಜಿನೇಂದ್ರ ಪಾವನ | ಚರಿತೆಯೊಳಗೈದನೆಯದೆನಿಸಿಯೆ |
ದೊರೆವಡೆದುದಾ ಕಂಸಮರ್ದನ ಪರ್ವವಿಭ್ರಮವು || ೬೭ ||

|| ಅಂತು ಕಂಸಮರ್ದನ ಪರ್ವಕ್ಕಂ ಸಂಧಿ ೨೩ ಕ್ಕಂ ಮಂಗಳ ಮಹಾ ||