ಸಂಧಿ ೨೬

ರುಗುಮಿಣಿಗೆ ಕಾಲ್ಗೆರಗಿ ಭಾವೆನಾಣ್ಚಿಯ ಮತ್ತೆ |
ರುಗುಮಿಣಿಯ ವಸ್ತ್ರಭೂಷಣ ತತಿಯನುಗಿದಳ |
ತ್ತಗಧರನು ಪಲರರಸಿಯರನುದ್ವಾಹ ವಿಧಿಯಿಂ ತಂದು ಸುಖಮಿರ್ದನು || ಪ ||

ಕೇಳುಮಗಧಾಧೀಶ ರುಗುಮಣಿಯು ರುಗುಮಿಣಿಯ |
ಮೇಳದಬಲೆಯರು ಸಹ ಪುರವ ಪೊರಮಟ್ಟು ಶಿಶು |
ಪಾಲವೈರಿಯು ಪಯಣಗತಿಯಿಂದ ವೈದಿದಂ ದ್ವಾರಾವತೀ ಪುರವನು ||
ಮೇಳಿಸಿದ ರೈವತೋದ್ಯಾನದಲಿ ಮಣಿಮಯ ವಿ |
ಶಾಲ ಸೌಧದಲಿ ರುಕ್ಮಿಣಿದೇವಿಯೊಡನೆ ಸಂ |
ಮೇಳದಿಂ……ರಧ್ಯಾದಲ್ಲಿರ್ದರೆಂದರವರು || ೧ ||

ಕನ್ನೆ ರುಗುಮಿಣಿ ದೇವಿಯಿದ್ದೆಡೆಗೆ…. |
ಚುನ್ನವಾಡುವರರೆಬರೆಮ್ಮೆರೆಯಳಿರ್ದೆಡೆಗೆ |
ಮುನ್ನ ಕಳುಹುವುದಕ್ಕ ನಡಿಗೆರಗಿ ಬರೆವೇಳು ಕಲಿಸಿಯೆಂದವರಾಡಲು ||
ಚೆನ್ನೆಯನು ಕಳುಹಿಸುವೆನೆಂದವರನಟ್ಟೆ ಕಡು |
ಗನ್ನ ಗತಕದ ಠೌಳಿಕಾರನೆಳೆಯಳೆ ಕೇಳ |
ನಿನ್ನಡಿಗೆ ನಿನ್ನಕ್ಕನಂ ಮಣಿಯಿಸುವೆನೆನ್ನನೆಂದೊಡಬಡಯಿಸದನು ನಗುತಲೈ || ೨ ||

ಹರಿಯ ಹೊಸಮಡದಿಯನು ಕಾಣ್ಬಿಚ್ಚೆಯಿಂದ ಸೌಂ |
ದರಿ ಸತ್ಯಭಾವೆ ತನ್ನರಮನೆಯ ಪೊಡವಟ್ಟು |
ಭರದಿ ಬಂದಾ ಸವತಿಯಿರ್ದ ನಂದನದ ಪೊರವಳಯದಲಿ ನಿಂದು ತನ್ನ ||
ತರುಣಿಯರನಟ್ಟಿ ಕೃಷ್ಣನ ಬಳಿಗೆ ಬಂದವರು |
ತರುಣಿಯರನಟ್ಟಿ ಕೃಷ್ಣನ ಬಳಿಗೆ ಬಂದವರು |
ಧರಣೀಶ ಕೇಳೆಮ್ಮ ದೇವಿ ನಿಮ್ಮರಸನಿಯನು |
ತರಿಸಿ ನೋಳ್ಪುಜ್ಜುಗದಿ ಬಂದು ಉದ್ಯಾನವನದಲ್ಲಿದ್ದರೆಂದರವರು || ೩ ||

ಶೃಂಗಾರವನೆ ನೆರೆಯ ಸಿಂಗರಿಸಿದಂತೆ ಪೊಳೆ |
ವಂಗಜನ ಬಾಣವನೆ ಮಸೆದೊಪ್ಪವಿಟ್ಟಂತೆ |
ಕಂಗೆಡ್ಡ ಮಾದ ಕಾಂತೆಯನೈದೆ ಪಸದನಂಗೊಳಿಸಿ ಲತೆವನೆಯೊಳಿರಿಸಿ ||
ಹೆಂಗಳಷ್ಟವಿಧಾರ್ಚನೆಯಮಾಡಿ ನಮಿಯಿಪ ಬೆ |
ಡಂಗ ಬೆಳೆಯಿಸಿ ಕೃಷ್ಣ ನಸುನಗುತ ಮರೆಯೊಳ |
ಡಂಗಿರಲು ಬಳಿಕ ಕಳುಹಿದ ದೂತಿಯರು ಕಂಡು ಮಗುಳ್ದಾಕೆಗಿಂತೆಂದರು || ೪ ||

ಅಕ್ಕ ಕೇಳೆಲೆ ನಿನ್ನ ಪುಣ್ಯ ದೇವತೆಯಂತೆ |
ತಕ್ಕನಂದನದೊಳೋರ್ವಳು ದೇವತೆಯಕಂಡೆ |
ವಿಕ್ಕೆಲದೊಳಾ ದೇವತೆಯನರ್ಚಿಸುವ ಬರಂಬಡೆವವರ್ಗೆ ಲೆಕ್ಕವಿಲ್ಲ ||
ಮಿಕ್ಕಮಾತೇಂ ತೋರ್ಪೆವೀಗಳಿಳೆನೇ ಹರುಷ |
ದುಕ್ಕುತ್ತೆ ಶೋಭಿಸುವ ಫಲವಸ್ತುನಿಚಯದಿಂ |
ನಿಕ್ಕುವಂ ಬಂದು ಕಂಡಳು ಪೂಜಿಪಬಲೆ ಸಂದಣಿಯ ದೇವತೆಯನು || ೫ ||

ಸರತಿಯೋ ವನದೇವಿಯೋ ಮಹಾಲಕ್ಷ್ಮಿಯೋ |
ಗಿರಿಸುತೆಯೊ ಸಗ್ಗದಿಂದಿಳಿತಂದ ದೇವಿಯೋ |
ಪರಿಕಿಪೊಡೆ ನೀನೆನ್ನ ಪುಣ್ಯದಧಿದೇವಿಯೋ ಯೆಂದುಕೊಂಡಾಡಿಭಾವೆ ||
ಸರಸಿಯೊಳು ಮಿಂದು ಧೋತ್ರವನುಟ್ಟು ಬರೆಮೊದಲ |
ತರುಣಯರ ಪೊರಸರಿಯೆ ಕರಕಂಜವನು ಮುಗಿದು |
ಚರಣವನು ಫಲಕುಸುಮದಿಂ ಪೂಜೆಗೈದು ಸಾಷ್ಟಾಂಗಪ್ರಣತಿಗೈದಳು || ೬ ||

ಎಲೆದೇವಿ ಸವತಿಯರನೊತ್ತಿಯಾಳುವಿ ಪಲಂ |
ಲಲನೆಯರಿಗದರಿಂದೆ ನಮ್ಮವನ ಪೊಸಮಡದಿ |
ಗೊಲಿಯದಿರು ಹರಿಯೊಲುಮೆ ಯಾಗದಿರು ನನಗೆ ತೊತ್ತಾಗಿ ಬೆಸಕೈವುದು ||
ಒಲವಿನಿಂ ಕರುಣಿಸೆಂದಡಿಗೆರಗೆ ನಸುನಗುತ |
ನಳಿನಾಕ್ಷ ನೇಳ್ತಂದು ಸಂತಯಿಸಿ ರುಗುಮಿಣಿ |
ಸಲೆ ವಂದಿಸಿಯೆನಲು ಸಿಗ್ಗಾಗಿ ರುಗುಮಿಣಿಯ ವಸನ ಭೂಷಣವೆಳೆದಳೈ || ೭ ||

ಸೆಳೆದು ಕೊಂಡನಿತುಮಂಬರ ಭೂಷಣಂಗಳಾ |
ಲಲನೆಯಂಗದೊಳು ಮತ್ತಿರುತಿರ್ದವದನಾಕೆ |
ಘಳಿಲನಿಕ್ಷಿಸಿ ಮತ್ತೆ ದೇವತೆಯೆಗೆತ್ತು ಶಂಕಿಸಿದಳಿದು ಚೋದ್ಯಮೆಂದು ||
ಥಳಥಳಿಪ ಹೊಸಹೊನ್ನ ಬೊಂಬೆಯಂತಿಹ ಪೆಣ್ಣ |
ನೆಳಸಿ ನಿಟ್ಟಿಸಿ ನಾಡೆ ಬೆರಗಾದನಾಗಳಾ |
ನಳಿನಾಕ್ಷನಾ ಭಾವೆ ನಾಣ್ಚಿಹರಿಯೊಳು ಮುಳಿದು ನಿಜನಿವಾಸಕೆ ಪೊದಳು || ೮ ||

ವಿನುತ ಸುಸಮಾಧಿಗುಪ್ತ ಮುನೀಶ್ವರರ್ಗೆ ಮು |
ನ್ನಿನ ಜನ್ಮದೊಳದೊಂದು ರಾತ್ರೆಯೊಳು ಮಾಗಿಯೊಳು |
ಘನಹಿಮದ ನದಿಯೊತ್ತಿನೊಳು ಕರಂ ಚಳಿಯ ಮಸಕದ ಬಾಧೆಗುಳಿಯನಕಟ ||
ಇನಿತರುವೆನಾಣ್ಗಿಲ್ಲ ಕಡು ಬಡವನೆಂದೈದೆ |
ಮನಮರುಗಿ ಪರುಗಲಂ ಮರೆಗಯಿದು ಕೊಚ್ಚೊಟ್ಟಿ |
ವನಿತೆ ತಾನೆಂತು ಮಾಡಿದ ಫಲಂ ಕೈಸಾರ್ದು ನಾಣ್ಗೆಡದೆ ಮರೆದಳೆಂದೈ || ೯ ||

ಭಂಡು ಮಾಡಿದೆ ನನ್ನ ನಿಂತ ನಿಮ್ಮಯ ಹರಿಯ |
ಹೆಂಡತಿಯ ದೆಸೆಯಿಂದಮೆಂದ ರುಗುಮಿಣಿ ಮುನಿಯೆ |
ಪುಂಡರೀಕಾಕ್ಷೆನಾಕೆಯ ಚರಣದಲ್ಲಿ ನೊಸಲಿಂಚಾಚಿ ಲಲ್ಲೆಗರೆಯೆ ||
ಗಂಡರಡಿಗೆರಗುವುದು ಪಿರಿದಲ್ಲ ಸವತಿ ಮುಂ |
ಕೊಡೆರಗಿದುದೆ ದೊಡ್ಡಿತೆಂದು ನೆರೆ ಸಂತಸಂ |
ಗೊಂಡಿರ್ದನಾರತಲೆವಾಗಿಸರು ಕಾಂತೆಯರು ಮತ್ತೊಂದು ವಾಸರದೊಳೂ || ೧೦ ||

ಹೊಳೆವ ಮಿಂಚಿನ ಬೊಂಬೆಯೊಂದು ಬಾಂಬಟ್ಟೆಯಿಂ |
ದಿಳಿದು ಬಂದುದೊಯೆನಿಸಿ ಬಂದ ನಾರದಮುನಿಗೆ |
ನಳಿನಾಕ್ಷನುಚಿತ ವಿನಯಂಗೈದು ನೀವು ಬಿಜೆಯಂಗೈದ ತೆರನನೆನಗೆ ||
ತಿಳಿಪಿಮೆನಲಿತ್ತ ವಿಜಯಾರ್ಧದುತ್ತರ ಶ್ರೇಢಿ |
ಯೊಳು ಮೆರೆವ ಜಂಬೂಪುರವನಾಳ್ವ ಜಾಂಬಮಂ |
ಸಲೆ ಗಗನ ಚರರಾಯನಾತನಂಗನೆ ಪೆಸರಿನಿಂ ಜಾಂಬುಷೇಣೆಯು || ೧೧ ||

ಅವರಸುತ ಜಂಬುಕುವರಾಖ್ಯನಾತನ ತಂಗಿ |
ಕುವಲಯದಳಾಕ್ಷಿ ಜಾಂಬಾವತಿಯೆನಿಪ್ಪಳಿರ |
ಲವಳನಂಬರಚರರು ಬೇಡೆಜಾಂಬವನು ಕೊಡದಿರೆಯುಮಾಶ್ರೇಢಿಯೊಳಗೆ ||
ಪವನವೇಗನ ವಧು ಶ್ಯಾಮಲೆಗೆ ತನುಜನೊ |
ಪ್ಪುವನೇಮಿಯಾಕುವರಿಗಾತ ಮಾವನ ತನುಜ |
ನವಳನಾತಂ ಬೇಡಿ ಪಡೆಯದದರಿಂದೆತ್ತಿ ಬಂದು ಕದನಂಗೈದನು || ೧೨ ||

ಅವನ ಮಾಕ್ಷಿಕ ವಿದ್ಯೆಯಿಂದ ಜಾಂಬವ ಪರಾ |
ಭವಿಸೆ ನೇಮಿಯ ಮಿತ್ರಯಕ್ಷಮಾಗಿಯುದರದೋ |
ಳವಿಚಳಂ ಪ್ರತಿವಿದ್ಯೆಯಿಂ ಗೆಲಿಯೆ ಜಂಬುಕುವರನುಕಂಡು ಮಾಮಕಸವು ||
ಬವರಕ್ಕೆ ಬಂದು ಕಲಿಯಕ್ಷ ಮಾಲಿಯ ತಾಗಿ |
ಅವನ ವಿದ್ಯಾಪ್ರಭಾವನ ಹಿತವಿದ್ಯೆಯಿಂ |
ತಪಿಸಿದೊಡೆ ಕಡುಸೋಲ್ತು ಯಕ್ಷಮಾಳಿನಿ ಖಗೇಶನಿರದಗಿದ ಪೋದನಂದೈ || ೧೩ ||

ಎಲೆ ಜನಾರ್ದನ ನಿನ್ನ ಪುಣ್ಯವತಿ ಸುಲಭ ನೀ |
ನಲಘು ಭುಜಬಲನೊಪ್ಪುವಾ ಕನ್ನೆಗಾಣ್ಮನೀ |
ನಲೆ ತಡೆಯದುಜ್ಜುಗವ ಮಾಡೆಂದು ನಾರದಂ ನೀರದಪಥಕ್ಕೆ ಪೋಗಿ ||
ಬಲನೊಳಾಳೋಚಿಸಿಯೆ ದಂಡೆತ್ತಿ ನಡೆದು ನಿ |
ರ್ಮಲತಾರ ಭೂಧರದ ತಪ್ಪಲೊಳು ಬಿಟ್ಟತನ |
ಗಳವಲ್ಲದೆಂದರಿದು ಗರ್ಭಶಯನದೊಳಿರ್ದನಾ ವಿಷ್ಣು ಮೂರು ದಿನವೈ || ೧೪ ||

ಇರೆಹರಿಯ ನಾಲ್ಕನೆಯ ಭವದಲೊಡವುಟ್ಟಿದಾ |
ನಿರುಪಮನು ಯಕ್ಷಿಗಳನೆನಿಪ್ಪನು ಸಹಸ್ರಾರ |
ಸುರ ನಿಳಯದಲಿ ದೇವನಾಗಿರ್ದುವಿದನರಿದು ಸುರಸಮಿತಿ ವೆರಸಿಬಂದು ||
ವರಸಿಂಹವಾಹಿನಿಯು ಗರುಡವಾಹಿನಿಯುಮೆಂ |
ಬೆರಡು ವಿದ್ಯೆಯನೊಸೆದು ಬಲವಾಸುದೇವರ್ಗೆ |
ಹರುಷದಿಂ ಮಂತ್ರಪೂರ್ವಕವಿತ್ತು ಸಾಧನೋಪಾಯವನು ತಾ ನೆಗಳ್ದನೈ || ೧೫ ||

ಕ್ಷೀರಾಬ್ಧಿಯಂ ವಿಗುರ್ವಿಸಿಯದರ ಮಧ್ಯದೊಳು |
ಘೋರಾಹಿಶಯ್ಯೆಯಂ ಮಾಡಿಯದರೊಳು ಕೃಷ್ಣ |
ಶ್ರೀರಾಯುಧನನಿರಿಸಿ ಶಯ್ಯೆಮೆಂದಾ ಹಿರಿದು ಭವದಾ ಪ್ರಪಂಚವರಿಪಿ ||
ಭೋರನಾ ಸುರಲೋಕಮಂ ಪೊಕ್ಕನಿತ್ತಲಾ |
ನಾರಾಯಣಂ ಬಲನು ಮಾದೇವ ಪೇಳ್ದಂದ |
ದೋರಂತೆ ಕಾರ್ತಿಕದಲಷ್ಟಾಹ್ನಿಕಂಬರಂ ಜಪಗೈಯುತಿರಿರಲಯ್ಯಾ || ೧೬ ||

ಕಡಲಮಧ್ಯದ ಸರ್ಪಶಯ್ಯೆಯೊಳು ತಾವಿರಲು |
ಪಡೆದಡಹ ಬನದೊಳಗೆ ಪಾಳೆಯಂ ಬಿಟ್ಟಿರಲು |
ಪಡುವ ಮಡದಿಯರ ಸಶ್ರಮದಿಂದೆ ಸುಯಿದಸುಳಿಗಾಳಿಯೆನೆ ಬಿಂಕಮಾಗಿ ||
ಕಡಲೆರೆಯ ನಾಲವಟ್ಟದ ಚಲತ್ಪವನನೆಗೆ |
ಪಡುವಣೆಲರಲೆದುದಾ ನೀಲದಾಗಮಲಕ್ಷ್ಮಿ |
ಕಡುಚೆಲುವಿನುಟ್ಟ ನೀಲಾಂಬರದ ಕಾಂತಿಯೆನೆ ಕಾರ್ಮುಗಿಲು ಪಸರಿಸಿದುದೈ || ೧೭ ||

ಮೀರಿ ಮುಗಿಲಿದಿರೇರಿ ಶೀಖಿ ಪರುಷವೇರೆನನೆ |
ಏರೆ ಕುಂದವ್ರಜಕೆ ಕಡದಲರಸಿರಿಯ ಸೊಂ |
ಪೇರೆ ರವಿರುಚಿತಣ್ಣ ಸೆರೆಕೇತಕೀವನಂ ಸುಳಿಯೇರಿ ಭಯವಂಚೆಗೆ ||
ಏರಿ ಗೆಲವೆಣ್ಣಂಗ ಭವನನಿಡುದೋಳ್ದಲೆಯ |
ನೇರಿ ವಿರಹಿವ್ರಾತ ಕಳಲೇರಿ ಪೊಲನೆ ಪಸು |
ರೇರಿಸುರ ಹೊನ್ನೆಮಲ್ಲಿಗೆ ಸುರ ಬೀತಸಿರಿಯೇರಿ ಕಾರ್ಮುಕವೇರಿತೈ || ೧೮ ||

ನವಿಲುಗಳ ನರ್ತನವ ಜಾತಕದ ಮನದೊಳು |
ಕ್ಕುವ ಹರುಷ ರಸವನಾ ಕಾದಂಬಿನೇ ವನಿತೆ |
ಯುವಲೋಕಿಸುತ್ತು ಮಾನಂದಾಶ್ರುವಾರಿ ಕಂದೆರದಳೆನೆ ಮುಂಬನಿಗಳು ||
ಪವಣಿಸಿದೆ ಸುರಿಯೆ ಚಾತಕನಿಕರ ಕೊರಳೆತ್ತಿ |
ಯವಚರದೆ ಚಂಚುಪುಟವಂ ತೆರೆದು ನಲಿದೀಂಟಿ |
ದವು ಹಂಸೆ ಕಮಲಾಕರವ ಬಿಟ್ಟು ಪೊರ್ದಿದವು ಮಾನಸ ಸರೋವರವನೈ || ೧೯ ||

ಸರಸಿರುಹವಳಿಯಳಿ ಕದಂಬ ತರುವಂಸಿರ್ದು |
ದರಗಿಳಿಗಳುಳಿದು ಚೂತವನು ಪೆಂಪಿನರ |
ನೇರಿಲಳಿವಣ್ಣಗಳಿ ವಣ್ ನೊಂದಿದವು ಮೂಗುವಟ್ಟುದು ಕೋಗಿಲ ||
[ಪರಪುಟ್ಟ] ಮರಿಗಳುಂ ಗರಿವೈದು ಕಾಗೆಭೂ |
ಡಿರವನೊಲ್ಲದೆ ಪೋದವಾಪೋದಗೆಗಳದ್ರಿ |
ತರುಕೋಟರಂಗಳೊಳು ತತ್ತಿಯಿಕ್ಕಿದವು ಮನವಿಕ್ಕಿದುದು ಬಕವಕ್ಕಿಯು || ೨೦ ||

ಘನಘನ ಶರೀರದಿಂ ಗೀರ್ವಾಣ ಮಾರ್ಗಣಾ |
ಸನವೆಂಬ ಪೊರಜೆಯಿಂ ಮಿಂಚೆಂಬ ದಂತಕಾಂ |
ತಿನಿ ಕಾಯದಿಂದೆ ಝಂಝೂವಾತದಿಂ ಮೊಳಗು….ಘಂಟಯೊಲಿಂ ||
ಘನವಾದ ಭೃಂಹಿತದೆ ಮುದಿಸಿ ಕಾರಾನೆಭೋ |
ರನೆ ಸೀಕರಂಗರೆದು ಕೀಳದವನೊಕ್ಕುದೆಂ |
ದೆನೆ ಬಡಹ ಸುರಿಯೆ ಕಡಲಹಿಶಯ್ಯೆಯಲಿ ಪಡೆಯೆಕೊಡೆಯಾಗಲವರಿರ್ದರೆ || ೨೧ ||

ಜಾತಿಗಾದುದು ಲಕ್ಷ್ಮೀ ಗಗನದಿಂ ನೆರೆಯೆತಾ |
ಓತು ಓಡುವದಿಟ್ಟಿ ಬೆಳಗೊಯೆನೆ ಬೆಳ್ಮುಗಿಲು |
ಹೂತುದದನೀಕ್ಷಿಪಂದದಿ ತಾವರೆಗಳು ಮೊಗವೆತ್ತಿದವು ಹಂಸಕುಳದ ||
ಪ್ರೀತಿಯಾನಂದಾಂಶುವೆಂಬಂತೆ ಬೆಳುಸರಿಯು |
ಭೂತಳಕೆ ಭೋರ್ಗರೆಯೆ ಕುಂದಿದುದು ಕುಂದದರ |
ಳೇತರದು ಹರುಷವೆಂಬಂತೆ ನರ್ತನವನುಳಿದವು ಸರದದೊಳು ಸಿಕಿಗಳು || ೨೨ ||

ನಳಿನ [ನಾಭನ]ದೇವತೆಗಳಂದು ತಿಳಿವಂತೆ |
ಸಲಿಲಾಶ್ರಯೌ ನಭವು ತೀತಿಳಿದುವಾಕಳವೆ |
ಗಳಪಾಲ್ದೆನೆಗೆಗಿಳಿಗಳಾ ನಳಿನಿಗಾ ಭ್ರಮರವೊಂದೊಂದುವಂತೆ ||
ಚಳಿಸದಾ ನಾಲ್ಕು ತಿಂಗಳು ಜಪವುಗೈಯುತಿರ |
ಲೊಲಿದರ್ಗೆ ಬೆಸಸು ಬೆಸಸೆನುತ ಜಗವಂ ಬೆದರಿ |
ಪಲವಾಂತ ವೈಕುರ್ಣವು ತೋರಿತಾವಿದ್ಯೆಗಳು ಬಂದು ನಿಂದುವಿದಿರೈ || ೨೩ ||

ಗರುಡವಾಹಿನಿ ಸಿಂಹವಾಹಿನಿ ಸುವಿದ್ಯೆಗಳು |
ಪರಿವಾರ ದೇವತಾವೃತರಾಗಿ ಬರಲವನು |
ಹರುಷದಿಂ ಪೂಜೆಗೈದಾಂತು ತದ್ಭೂವರರು ಬಳಿಕ ಸಂಗರ ಭೇರಿಯ ||
ಭರದಿಂದೆ ಮೊಳಗಿಸಲಿ ವಿದ್ಯಾಧರ ಶ್ರೇಢಿ |
ಗಿರದೆ ಭೂಕಂಪಮಂ ಪಡೆದುದಾ ವಿದ್ಯೆ ಬಂ |
ಧುರ ವಿಮಾನಂಗಳಿಂ ಕೊಡಲೇರಿ ಜಂಬೂಪುರೋಪಾಂತಿಕರ ಪೊಕ್ಕರೈ || ೨೪ |

ಅನಿತರೊಳು ಬಂದು ಕಿನ್ನರ ಗೀತಪುರದಿಂದ |
ವಿನುತೆ ಶಾಲ್ಮಲಿದತ್ತೆಯಾತ್ಮ ಜನನಾಧೃತಂ |
ಅನುನಯದಿ ನಿಖಿಲ ಪರಿವಾರ ಪರಿವೃತನಾಗಿ ಹರಿಹರಗಳೊಡನೆ ಕೂಡಿ ||
ಇನಿತು ಕಜ್ಜಕ್ಕೆ ನೀವೇಳ್ತಪ್ಪುದೇ ನಿಮ್ಮ |
ಮನದಿಷ್ಟವನು ಹೇಳಿ ಕಳುಹಿದರೆ ಮಾಡೆನೇ |
ಯೆನಲನಾ ಧೃತಕುಮಾರಂಗವಂ ಮೆಚ್ಚಿ ಆಳೋಚನಾ ಪೂರ್ವಕದಲಿ || ೨೫ ||

ಕಳುಹಿದರು ದೂತರನು ಜಾಂಬವ ಖಗಾಧಿಪನ |
ಬಳಿಗೆ ಬಂದವರು ಕಾರ್ಯವನರುಪೆ ಮತ್ಸುತೆಗೆ |
ವಿಲಸಿತವಿಯಚ್ಚರ ಕುಮಾರಕರು ವರನಲ್ಲದೆನೆಗೆ ಸರಿಯಾದರೆಂದು ||
ಕಳೆದನವರನು ಮೃಗೇಂದ್ರನ ಮಗಳ ನರ ಬೇಡಿ |
ಕಳುಹಿತೆಂಬಂತೆನ್ನ ನಂದನೆಯನಿಂತು ಗೋ |
ವಳ ಬೇಡಿ ಕಳುಹುವನೆ ಎಂದು ಜಡಿಕೆಯಿದು ಬಂದಾಚರರ ನೂಕಿಸಿದನು || ೨೬ ||

ಚರರು ಬಂದೆಲೆ ದೇವ ರುಗುಮಿಣಿಯನಂದು ಭೀ |
ಷ್ಮರು ಕರೆದು ಕೊಟ್ಟರೀ ಪೆಣ್ಗೊಡುವ ಮಾವಂದಿ |
ರರಸಿಯರಿಗತಿ ಶೋಕರಸವಿತ್ತು ಬಳಿಕ ಶೃಂಗಾರರಸವನು ದೇವರು ||
ಧರಿಸ ಬೇಕಲ್ಲದುಂತೆಮ್ಮ ನಟ್ಟಿದೊಡೆ ಕೊಡು |
ವರೆ ಬರುದೆ ಕನ್ನಿಕೆಯನೆನಲು ನಗಧರನು ಹಲ |
ಧರನ ಮೊಗನೋಡಿ ನಸುನಗುತ ತಡೆದಿರದೆತ್ತಿ ಮುತ್ತಿದನು ತತ್ಪುರವನೈ || ೨೭ ||

ಪುರವ ಪೊರಮಟ್ಟು ಜಾಂಬವನೊಡ್ಡಿ ನಿಲಲೊಡನೆ |
ಮುರವೈರಿ ನಿಜ ಬಲಕೆ ಕೈವೀಸೆ ಜಾಂಬವನು |
ಮರದೆ ಕೈವೀಸೆ ತನ್ನಯ ಪಡೆಗೆ ತಕ್ಷಣವೆ ಬಿಲ್ಲಪಡೆ ಕಡುಮಸಕದಿಂ ||
ಸರಳ ಸೈವಳೆ ಗರೆದೊಡೆತ್ತಲುಂ ಕೊರಳು ಕ |
ತ್ತರಿಸಿ ಕಿಬ್ಬರಿಪರಿದು ಕರುಳರ್ಚಿ ಕರಚರಣ |
ವರಿದ ಖೇಚರಬಲಂ ಬರುಡಾಗಿ ಖಗಪತಿಯ ತುರಗದಳವಂದಾಂತವೈ || ೨೮ ||

ಗಿರಿಧರನ ತುರಗಗಳ ಒಡಹಾಯ್ಸಿ ಪೊಕ್ಕು ಸಂ |
ಗರರಂಗದೊಳು ಮುಳಿದು ಹೋಳಾಯ್ತರಾರ್ಪಿನಿಂ |
ದೆರಡು ಕೈಯಲಿ ಕತ್ತಿಗಿತ್ತೆ ಸೆವರಿದರು ಕಾಲನ ಕುಮ್ಮರಿಯ ತೆರದಲಿ ||
ತುರಗದಳ ಪಡಲಿಡಲು ಖಳನ ಗಜಘಟೆಯ ನೀ |
ಕರಿ ಘಟೆಗಳಡೆಗೊತ್ತೆ ಜಾಂಬವಂ ಜವನಂತೆ |
ಕೆರಳಿ ತಾನಿದಿರಾಗಳೊಡನನಾ ಧೃತನಾಂತನಿದಿರಾಗಿಯಿಂತೆಂದನೈ || ೨೯ ||

ಎಲೆ ಮರುಳೆ ಖಗರಾಜ ನಿನ್ನ ಹವಣರಿಯದೀ |
ಹಲಧರಗೆ ನಗಧರಗೆ ಮಲತು ನಿಲುವುದೇ ನಿನ್ನ |
ತಲೆ ನಿನಗೆ ಬೇಡವೆ ಕೊಡು ನಿನ್ನ ಮಗಳಂ ತ್ರಿಖಂಡ ಚಕ್ರೇಶ್ವರಂಗೆ ||
ಕಲಹ ನಿನಗರಿದೆಂದೊಡುರಿಗೆ ತುಪ್ಪವನೆರದ |
ವೊಲು ಭುಗಿಲನುರಿದೇಳೆ ನನ್ನಯ ಸಹೋದರರಿ |
ಗಲಗಣಸು ನೀನೆ ವಸುದೇವನ ಕುಮಾರ ನಾನೆಂದರಿಯ ಎಂದಾಂತನೈ || ೩೦ ||

ಅವನ ವಿದ್ಯೆಗಳನಿತುಮನಿತು ಮನನಾ ಧೃತಂ |
ತವಿಸಿದನು ಪ್ರತಿವಿದ್ಯೆಯುಂ ಬಳಿಕ ಹೊಸಮಸೆಯ |
ಕವಲಂಬಿನಿಂ ಜಾಂಬವನ ಶಿರವನಿರುಹಿದನು ಜಂಬುಕುವರನು ಕಾಣುತ ||
ಬವರಕ್ಕೆ ಬಂದೊಡವನಂ ನಾಗಪಾಶದಿಂ |
ದವೆಕಟ್ಟಿ ತಂದು ವೈಕುಂಠಗಿರದೊಪ್ಪಿಸಿದ |
ನವನೀಶನಭಯ ಘೋಷಣೆಯ ಮಾಡಿಸಿ ಪೊಕ್ಕನಾ ಪೊಳಲಿನರಮನೆಯನು || ೩೧ ||

ಅರಮನೆಯಲರಸಿ ಜಾಂಬಾವತಿಯ ಕಾಣದಾ |
ಹರಿಯನಾ ಧೃತಗದಂ ಪೇಳೆ ತದ್ದಾನಶಾ |
ಸುರವಿದ್ಯೆಯಿಂದಾಕೆ ಇರ್ದಿರವನರಿತು ಪ್ರಜ್ಞಪ್ತಿಯಿಂ ಸಲೆಸಾಧಿಸಿ ||
ಪುರುಷೋತ್ತಮಂಗೆ ಜಾಂಬಾವತಿಯನೊಪ್ಪಿಸಲು |
ಹರುಷ ವಚನದಲಾಕೆಯಳಲನಾರಿಸಿವಿಯ |
ಚ್ಚರನಂತ್ಯ ಕ್ರಿಯೆಯನಾಗಿಸಿ ಜಂಬುಕುವರಂಗೆ ಪಟ್ಟಗಟ್ಟಿದನಲ್ಲಿಯೈ || ೩೨ ||

ಹರಿ ಬಾಹುಮಥನ ದಂಡದಿ ಖಚರ ಸೈನ್ಯ ಸಾ |
ಗರವ ಮಥಿಸಲು ಶರಧಿಮಥನನೆಂಬುದು ಜನವು |
ಸಿರಿಯೆಂಬುದೈಶ್ವರ್ಯವುಳ್ಳ ಖಗಕನ್ನಿಕೆಯನಾ ಕೃತಕಸುಧೆಗಡಲಲಿ ||
ವರರತ್ನ ರತ್ನವಾಹನವೆರಸಿ ಖಚರಿಯಂ |
ತಿರೆ ಸುಧಾಬ್ದಿಯೊಳವೆಲ್ಲವುಜನಿಸಿತೆಂಬರ |
ಚ್ಚರಿಯ ಹೋಲುವೆಯಲ್ಲದಾಡುವ ಜಗಜ್ಜನವನಾರು ತಿಳುಹಲು ಬಲ್ಲರೈ || ೩೩ ||

ಕ್ಷೀರವನು ಮಥಿಸೆ ಬೆಣ್ಣೆಯೆ ಬಹುದು ಪೆರನಿಲ್ಲ |
ನೀರ ಕಡೆದೊಡೆ ಬೆಣ್ಣೆ ಬಾರದಿಹವೆಂತಂತೆ |
ಮೇರುವನು ಕಿತ್ತಸಟೆಯಂತಿರಲಿ ಸುಧೆದೇವ ತರುರತ್ನ ಧೆನು ಗಜವು ||
ನೀರೇಜಬಂಧು ಶಶಿಲಕ್ಷ್ಮಿಯೆಂಬಿವು ಮಥಿಸೆ |
ವಾರಿಧಿಯೊಳಾಗುವೆನೆ ಮುನ್ನಿಲ್ಲವೇ ಸುರರು |
ನೀರ ಕುಡಿದಿಹರೆ ಅಂಧಕರರು ವರಾನೆಗಂಡರಿಕೆವೊಲು ನುಡಿವರದನೈ || ೩೪ ||

ಇಳೆಯೆ ಬೆರಗಾಗೆ ಕೃತಕಾಬ್ಧಿಯೊಳು ನಾಲ್ಕುತಿಂ |
ಗಳನಿರ್ದು ಬರುತ ತದ್ವಿಧವಸ್ತುಗಳನಾಂತು |
ನಳಿನಾಕ್ಷನರ್ತಿಯಿಂ ದ್ವಾರಾವತಿಯನೈದಿ ಶುಭದಿನಮುಹೂರ್ತದೊಳಗೆ ||
ಲಲನೆ ಜಾಂಬಾವತಿಯ ಮದುವೆನಿಂದತಿರಾಗ |
ದೊಳೆ ಸುಖದಲಿರುತಿರಲು ಮತ್ತಮಾ ನಾರದನೆ |
ತಳುವದೈ ತರೆ ಹರಿವಿಧಾನ ಪೂರ್ವಕವಿರಿಸೆ ಬಂದ ಹದನೇನೆಂದನು || ೩೫ ||

ಗಿರಿನಗರಿ ಪಟ್ಟಣದ ರಾಷ್ಟ್ರವರ್ಧನರಾಜ |
ನರಸಿ ಜ್ಯೇಷ್ಠಾದೇವಿಗಾತ್ಮಜೆ ಸುಶೀಮೆಯೇ |
ಧರೆಯೊಳಗೆ ಕನ್ನೆಯರು ತಲೆರನ್ನವೆಂದರುಪಿ ನಾರದಂ ಪೋಗಲೊಡನೆ ||
ಪುರುಷೋತ್ತಮನು ಬರದಲೆತ್ತಿಪುರವನು ಮುತ್ತಿ |
ಧುರಕೇಳಿಯನು ನಾರದನೆ ನಭದಲಿರ್ದು ಭಾ |
ಪುರೆಯನಲು ಕಾದಿಆಕನ್ನೆಯಂ ತಂದು ಸುವಿವಾಹ ವಿಧಿಯಂತಳೆದನೈ || ೩೬ ||

ಇಂತು ಸಕಲಾವನೀಶ್ವರ ಕುಮಾರಕರು [ಮುಂ] |
[ಅಂ]ತಧಟಿನಿಂತರಿಸಿ ಪೆಂಪಿಂದೆ ರುಗುಮಿಣೀ |
ಕಾಂತನುದ್ವಾಹವಿಧಿಯಿಂದವರನಾಂತು ಸುಖದಿಂದ ಮನವೆಳಸಿದಂತೆ ||
ಕಂತು ಕೇಳಿ ಸುಖವನುಣುತ್ತಿದ್ದನಲ್ಲಿಗೊ |
ಳ್ಪಾಂತುದಾ ಸುಕವಿಜಿನಭಕ್ತವಿರಚಿತಮಪ್ಪ |
ಕಂತುಹರ ನೇಮಿಚರಿತೆಯೊಳಾರನೆಯದಾದುದಭ್ಯದಯ ಪರ್ವಾಖೈಯು || ೩೭ ||

|| ಅಂತು ಅಭ್ಯುದಯ ಪರ್ವಕ್ಕಂ ಸಂಧಿ ೨೬ಕ್ಕಂ ಮಂಗಲ ಮಹಾ ||