ಸಂಧಿ ೨೭

ಎಸೆವ ರುಗುಮಿಣಿ ಪಡೆದ ಕಂದನು | ಶಿಶುತನದಿ ಖಗಪತಿಯ ಪುರದಲಿ |
ಕುಸುಮ ಶರನಾಗಿರ್ದು ಯುವರಾಜತೆಯನಪ್ಪಿದನು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ರುಗುಮಿಣಿಗಗ್ರ ಮಹಿಮೆ ವಿ |
ಶಾಲ ಪದವಿಯನಿತ್ತು [ಸಲಹಿದ ನೆಲ್ಲ] ವನಿತೆಯರ ||
ಮೇಳದಿರುಳೋಲಗದೊಳಗೆ ವನ | ಮಾಲಯತಿರಾಗದಲಿರಲು ಮಿಗೆ |
ಲೋಲಲೋಚನೆ ಬಂದಳಾ ರುಗುಮಿಣಿ ಮಹಾದೇವಿ || ೧ ||

ನಸುನಗೆಯ ಬೆಳದಿಂಗಳನು ಹೊಳೆ | ವೆಸಳುಗಂಗಳ ಬಳ್ಳಿಮಿಂಚನು |
ಮಿಸುಪ ತೊಡಿಗೆಯ ಬೆರಕೆವೆಳಗನು ಪಸರಿಸುತ ಬಂದು ||
ಬಿಸಜನೇಂತ್ರನ ಬಲದ ಭಾಗದೊ | ಳೆಸೆದು ನಿಲೆ ಸಖಿಯರಸ ಮೇಳದಿ |
ಶಶಿವದನೆಯಾ ಸತ್ಯಭಾವೆಯು ಬಂದಳೊಲವಿಂದ || ೨ ||

ಅರಸನಿದಿರಲಿ ನಿಂದು ಮಿಗೆ ಮ | ಚ್ಚರಿಸುತಿರೆ ರುಗುಮಿಣಿ ನಿರೀಕ್ಷಿಸಿ |
ಪುರುಷರೆಡಗಡೆ ಸತಿಗುಚಿತವೆಂದಾ ಕಡೆಗೆ ಬರಲು ||
ಹರಿಯದಂ ತಿಳಿದೇಕಿರೆಲೆ ಮ | ಚ್ಚರನಿವಗೆ ಮುನ್ನಾತ್ಮಜನ ಪೆ |
ತ್ತರಸಿ ಪಿರಿಯಳು ತತ್ಸುತನೆ ಯುವರಾಜನರಿಯೆಂದ || ೩ ||

ಲೇಸನಾಡಿದೆಯರಸ ಪೆತ್ತೊಡೆ | ವಾಸಿಯುಂಟೇ ನಿನ್ನವಳ ಕೇ |
ಳೋಸರಿಸದೆನೆ ನಸುನಗುತ ಹರಿಸತಿಯರರಿವಂತೆ ||
ಆ ಶಿಶುವ ಮುಂಪಡೆದಾಕೆಯ | ಕೇಶವನು ನೆರೆಮೆಟ್ಟಿ ಮುಂಪಡೆ |
ದಾ ಸುದತಿ ಮೊಲೆನೀರ ಮೀವಳು ಮಗನ ಮದುವೆಯಲಿ || ೪ ||

ಎನಲೊಡಂಬಟ್ಟರು ಮುರಾರಿಯ | ವನಿತೆಯರು ತಾವಿರ್ದರಿರುತರ |
ಲನುನಯದಿ ಕುರುರಾಯನಲ್ಲಿಗೆ ಬಂದು ಮುನ್ನಿರ್ದು ||
ಬಿನದದಿಂದೀ ವಾರ್ತೆಗೇಳ್ದೆಲೆ | ವನಜನಾಭನೆ ಪುರುಡನಿಕ್ಕಿದೆ |
ವನಿತೆಯರಿಗದು ಲೇಸೆನುತ ಸಮ್ಮೇಳದಿಂತೆಂದ || ೫ ||

ಎಲೆ ಮುರಾಂತಕ ಸತ್ಯರುಗ್ಮಿಣಿ | ಲಲನೆಯರೊಳಾವಾಕೆ ಮುನ್ನವೆ |
ಚೆಲುವ ಮಗನನು ಪಡೆವಳಾ ಕುವರಂಗೆ ನಾನೆನ್ನ ||
ಲಲನೆ ಪಡೆವಾ ಮಗಳ ಕೊಡುವೆನು | ಅಳಿಯನವನೆಂದಾಡಿ ತಂ ತ |
ಮ್ಮೊಳು ಬಯಲ ಬೀಯಗತನವನಿರವಿಸಿದರೊಂದು ದಿನ || ೬ ||

ನಾರಿರುಗುಮಿಣಿ ಮಿಂದುನಾಲುಕು | ನೀರನುಟ್ಟು ದುಕೂಲವನು ಘನ |
ಸಾರ ಚಂದನದಣ್ಕೆಯುಂ ಪೊಸಮುತ್ತು ದೊಡಿಗೆಗಳಿಂ ||
ತೋರ ಮಲ್ಲಿಗೆ ಮಾಲೆಯಿಂ ಸುಕು | ಮಾರಿ ಬೆಳ್ವಸವನಮನಾಂತಾ |
ವಾರಿಜಾಸನ ಸೂಳ್ಗೆ ವಂದಳದೊಂದು ಲೀಲೆಯಲಿ || ೭ ||

ಕಾಂಚನದ ಸೆಳೆ ಮಂಚದೊಳು ರಾ | ಯಂಚಿ ದುಪ್ಪುಳ ತಲ್ಪದೊಳು ಕುಡಿ |
ಮಿಂಚನುಗುಳು ದುಗುಲವನು ಪಚ್ಚಡಿಸಿ ಮಣಿದೀಪ ||
ಗೊಂಚಲಿಸೆ ಪರಿಮಳಕೆ ತುಂಬಿಪ | ಳಂಚುತಿರೆ ಜತಿಗೊಟ್ಟು ಪಾಲಿಪ |
ಮಿಂಚರಿಸೆ ನವರತ್ನ [ಮಯದಾ] ಗೃಹದೊಳೊಪ್ಪಿದರು || ೮ ||

ಬೇಟದಾತುರ ಬೆಚ್ಚ ಮೈಮನ | ನಾಟಿದಿಚ್ಚೆ ಜಗುಳ್ತರದ ಬಾ |
ಯ್ಗೂಟಮುಣ್ಮವ ಬೆಮರು ಮೂಡುವ ಪುಳಕ ಸವಿಗಳೆಯ ||
ಚಾಟುತನ ಸೂಲಡರ್ವ ಜತಿಕೊಂ | ಡಾಟಕೂಜಿತ ಮೂರ್ಛೆಯಿಂಪಿನ |
ಕೂಟದೊಳು ಸಮರತಿಯು ನಿತ್ಯವು ತತ್ಪ್ರಣಯಿಗಳಿಗೆ || ೯ ||

ಸ್ಮರನ ಜನ್ಮಕ್ಷೇತ್ರವೆನಲೀ | ವರಸುಶೀಲನೆ ಮಣಿಪುದೋ ಮೃದು |
ತರದ ತಲ್ಪದೊಳಿರಿಸಿ ಪೊರಗಿ ಬೆಳಗಪ್ಪ ಜಾವದಲಿ ||
ತರಣಿ ಶಶಿವಾರಾಸಿ ಕರಿ ಝಷ | ಉರಿ ವಿಮಾನ ಸರೋವರಂಗಳ |
ಸರಸಿ ರುಗುಮಿಣಿ ಕನಸುಗಂಡಳು ಭೂಪ ಕೇಳೆಂದ || ೧೦ ||

ತಿಳಿದುದಾಕೆಯ ನಿದ್ರೆಗಾಣಿಯ | ರುಲಿದ ಮಂಗಲ ಸುಪ್ರಭಾತದ |
ಕಳ ನಿನದದಿಂದೆದ್ದು ನಿತ್ಯಕ್ರಿಯೆಯನನುಸರಸಿ ||
ಕಳ ಮರಾಳೀ ಯಾನದಿಂದಾ | ಲಲನೆ ಬಂದು ಮುಕುಂದನೊಡನೆ |
ಗ್ಗಳದಿ ರಾಗದಿ ಪೇಳೆ ಕನಸಿನ ಫಲವನಿಂತೆಂದ || ೧೧ ||

ತರಣಿಯಿಂ ತೇಜೋನಿಧಿಯು ಸಿತ | ಕರನಿನನುಪಮನ ಬುದ್ಧಿಯಿಂ ಚೀ |
ತ್ಸರದಿ ಕಲೆಯಿಂ ಭದ್ರವಪು ಮಕರ ಧ್ವಜನು ಮೀನಿಂ ||
ಉರಿಯಿನಪದುರತನು ವಿಮಾನದಿ | ವರವಿಯಚ್ಚರ ಸರಸಿಯಿಂ ಗುಣ |
ಸರಸಿ ಯೆನಿಸವ ಪುತ್ರ ನಿನಗಹನಬಲೆ ಕೇಳೆಂದ || ೧೨ ||

ಎಂದ ಗೋವಿಂದನ ನುಡಿಯ ನಾ | ನಂದದಿಂದಿರೆ ರುಗುಮಿಣಿಯು ಗ |
ರ್ಭಂದಳೆದಳಾ ಸತ್ಯಭಾಮೆಯು ಒಡನೊಡನೆ ತಳೆಯೆ ||
ಸಂದ ಪುರುದಿನ ಕೂಡೆ ಬೆಳೆದಪು | ದೆಂದು ಗರ್ಭವು ದೀರ್ವರಿಗೆ ತರಿ |
ಸಂದ ಭಾಗ್ಯಕೆ ಪುರುಡಿಸಿದೊಡೇನಹುದು ಧಾತ್ರಿಯಲಿ || ೧೩ ||

ಗಗನದಲಿ ಚರಿಯಿಸುವ ಬಯಕೆಯ | ರುಗುಮಿಣಿಗೆ ದೊರಕೊಳಲದಂ ತಿಳಿ |
ದಗಧರನು ನೆರೆ ಗರ್ಭಶಯೈಯಲಿರಲು ದಿವಿಜೇಂದ್ರ ||
ಬಗೆದು ಚರಮಾಂಗನನು ನಡೆವಾ | ಸುಗುಣಿಯಳ್ತಿಯ ಸಲಿಸುವೊಡೆ ನೆ |
ಟ್ಟನೆ ಕಳುಹಿದನಾ ಚೆನ್ನ ರನ್ನ ವಿಮಾನ ಭರದಿಂ[ದ] || ೧೪ ||

ವೀರ ಮಾನದೊಳಚ್ಚುತನು ತ | ತ್ತರುಣಿಯು ಕೆಳದಿಯರು ಸಹವ |
ಚ್ಚರಿಯ ವಿಭವ ವಿನೋದದಿಂದೆಣ್ದೆಸೆಗೆ ಸಂಚರಿಸಿ ||
ಹರುಷದಿಂ ನಿಜ ನಿಳಯವನು ಪೋ | ಕ್ಕಿರುತ ನವಮಾಸವು ಬೆಳೆಯೆ ಬಂ |
ಧುರ ದಿವಸ ಶುಭಲಗ್ನದಲಿ ಪೆತ್ತಳು ಕುಮಾರನನು || ೧೫ ||

ಸುರಪಟಹ ಭಾಜಿಸಿತು ಪೂಮಳೆ | ಸುರಿದುದದರಿಂ ಮುನ್ನೆ ರುಗುಮಿಣಿ |
ಪುರುಷನೆಡೆಗಟ್ಟಿದಳು ಜಾತೋತ್ಸವವನದ ಕೇಳಿ ||
ಹರುಷದಿಂದ ಮೈ ವೆರ್ಚಿ ಪೇಳ್ದಾ | ತರುಣಿಯರಿಗುಚಿತವನು ಕುಡಲೊಡ |
ನಿರದೊಸಗೆ ಜೀಯೆನುತ ಬಂದರು ಭಾವೆಯಾಳಿಯರು || ೧೬ ||

ಕಂದನನು ಮೊಗನೋಡಿ ಪರಮಾ | ನಂದವಿಹಳಾ ರುಗುಮಿಣಿಯ ಸುಡು |
ಬೆಂದ ಸಂಸಾರದಲಿ ದುಃಖವ ತೆಗೆದ ಸುಖವುಂಟೆ ||
ಅಂದಿಗೈದೇ ದಿನವು ಮಿಗೆ ಭೋ | ರೆಂದು ಪರಿವ ವಿಮಾನ ನಭದಲಿ |
ನಿಂದೊಡರಿದಾ ಶಿಶುವನೊಯ್ದನು ಮಾಯೆಯಿಂದಸುರ || ೧೮ ||

ಮಸಗಿ ಬಂದ ಧೂಮ ಶಿಖಿಯಾ | ಗಸದೊಳಾ ಬಾಲಕನ ಹಗೆ ಕರು |
ಣಿಸದೆ ಕೊಂಡೊತ್ತೊಯ್ಯುತಿರೆ ಮತ್ತಿತ್ತ ರುಗುಮಿಣಿಯ ||
ಅಸುವಳಿದ ಸಬದಂತೆ ಮಿಗೆ ಮೂ | ರ್ಛಿಸಲು ಮಧುರಿಪುವದನರಿತು ಪರ |
ವಶತೆಪಡೆದನು ಸುತವಿಯೋಗವದಾರ ನೋಯಿಸದು || ೧೯ ||

ಇದನರಿದು ಬಲಭದ್ರನೈತಂ | ದೆದೆವೊಡೆದು ಮಾಧವಗೆ ರುಗುಮಿಣಿ |
ಗೊದವಿದತಿ ಶೈತ್ಯೋಪಚಾರದಿ ಚೇತರಣೆಗೊಳಿಸಿ ||
ಸುದತಿಕಂದನ ಮಗ್ಗುಲೊಳಗಿರಿ | ಸಿದಳು ಕಾಣದಿನೊಂದು ನಲ್ಲನ |
ಪದನ………………………ತೆ || ೨೦ ||

ಬಲನು ನಾರಾಯಣನು ಶೋಕಿಪ | ಲಲನೆಯರ ಕಳಕಳವನೊಯ್ಯನೆ |
ನಿಲಿಸಿ ರುಗುಮಿಣಿದೇವಿಯರ ಕಣ್ಬನಿದೊಡೆದು ವಿಷ್ಣು ||
ಬೆಳೆದ ಶೋಕಾನಳನ ಸಂಗಡ | ಘಳಿಲನುಬ್ಬಿತು ರೋಷಶಿಖಿ ಕಂ |
ಗಳಲಿ ಕಿಡಿಗುಟ್ಟುತ್ತ ಘರ್ಜಿಸಿ ಮತ್ತಮಿಂತೆಂದ || ೨೧ ||

ಮುಳಿದು ಕೊಂಡೊಯ್ದಿಡೆ ಜವನಗಂ | ಟಲಬಳೆಯ ಬಿಡಿಸುವೆನು ನನ್ನಯ |
ಚೆಲುವ ಮಗನನು ಕದ್ದು ಕೊಂಡಯ್ಯಾತನಿಹುದೆಲ್ಲಿ ||
ಕುಲಗಿರಿಯೊಳಾಗಸದೊಳೀ ಭೂ | ತಳದೊಳಡಗಿರುತಿರಲಿ ನಾಂ ತ |
ತ್ಖಳನನಿಕ್ಕುವೆನರಸಿ ತನುಜನ ತಹೆನು ಕೇಳೆಂದ || ೨೨ ||

ಶೋಕಿಸದಿರೀರೆಂಟು ವತ್ಸರ | ಕಾ ಕುಮಾರನೆ ಕಾಮನಾಗಿ ವಿ |
ವೇಕಿ ಚರಮಾಂಗನು ವಿಯಚ್ಚರ ಭೂಮಿಯಲಿ ಬೆಳೆದು |
ಲೋಕದಲಿ ಪೊಸತೆಂಬ ವಿದ್ಯಾ | ನೀಕವನು ನೆರೆಕಲ್ತು ಬಹನ |
ವ್ಯಾಕುಲದಿ ನಂಬೆಂದುದೊಂದಶರೀರ ವಾಕ್ಕೊಲಿದು || ೨೩ ||

ಸುರವಚನದಿಂದವರ ದುಃಖವು | ಪರಿಹರಿಸಿತಿತ್ತತ್ತ ಕುವರನ |
ನರವರಿಸದಾ ಭಾವದೊಳು ತಾಂ ವೀರಸೇನ ಮುನಿ ||
ದುರುಳ ನಿಮ್ಮದುವಾಗಿ ತನ್ನಯ | ತರುಣಿಯನು ಸೆಳೆಕೊಂಡೆ ನಿನ್ನಯ |
ಕೊರಳ ಮುರಿಯನೆ ಎಂದು ಧೂಮಪತಾಕ ಕಡುಗಾಯ್ದು || ೨೪ ||

ಒಡಲನುಗುರಿಂ ಸೀಳುವೆನೊ ಮೆಣಿ | ವಡಬ ಶಿಖಿಯೊಳಗಿಕ್ಕುವೆನೊ ಮೆಣು |
ಕಡಲಸುಳಿಯೊಲಗದುವೆನೊ ಮೇಣುಕಾಲ್ಪಿಡಿದುಬೀಸಿ |
ಇಡುವೆನೋ ಎಂದೈದುತಿರೆ ಪೇ | ರಡವಿಯೊಳು ಖದಿರದ ಮರಂಗಳ |
ಗಡಣದೊಳು ಸತ್ಕರ ಶಿಲೆಯನೀಕ್ಷಿಸಿದನದ್ಭುತವ || ೨೫ ||

ಎರಡು ಪೆರ್ಗುಂಡುಗಳು ತಮ್ಮೊಳ | ಗಿರದೆ ತಾಗುವವೆಡೆವಿಡದೆ ವೆಂ |
ತರರ ದೆಸೆಯಿಂದೇನಹೇಳುವೆನಾ ಕುಮಾರರನು ||
ಕರುಣವಿಲ್ಲದೆ ರಕ್ಕಸನು ಸತ್ | ಕರಶಿಲೆಯ ನಡುವಿಕ್ಕಿ ಪೋದನು |
ಪರಿಹರಿಸುವವರಾರೊ ಕರ್ಮ ಪ್ರೇರಣೆಯದೆಂದ || ೨೬ ||

ಶಿಶುವಿನಾ ಪುಣ್ಯವನದೇನೆಂ | ದುಸುರುವೆನು ಹಣಿದಾಡುವಾ ಶಿಲೆ |
ಮಿಸುಕಲಮ್ಮದೆ ಬೀಗಿ ನಿಂದವು ಬಿದ್ದು ಭೂತಳವೆ ||
ಕುಸುಮ ಶಯ್ಯೆಯದಾದುದಾ ರ | ಕ್ಕಸನು ಬಿಸುಟೊಡೆ ಪುಣ್ಯ ದೇವತೆ |
ಬಿಸುಡುವಳೆ ಮತ್ತಾ ಸಮಯದೊಳಗರಸ ಕೇಳೆಂದ || ೨೭ ||

ಎಸೆವ ವಿಜಯಾರ್ಧದಲಿ ತೆಂಕಣ | ದೆಸೆಯಲಿಹುದಾ ಮೇಘಕೂಟವು |
ಪೆಸರಿನಿಂ ಪೊಳಲಾಳ್ವ ಖಗಪತಿ ಕಾಳಶಂಬರನು ||
ಮಿಸುಪು ಕಾಂಚನ ಮಾಲೆವಧುಸಹ | ವಸೆದು ಬಾನೊಳು ಪೋಗುತಿರೆ ಕೀ |
ಲಿಸಿತು ರತ್ನವಿಮಾನನಿಂದುದು ಘಂಟಿಕಾ ನಿನದ || ೨೮ ||

ಶಿಶುವೊ ಚರಮಾಂಗನೊ ಮುನಿಯೊ ಜಿನ | ವಸತಿಯೋ ಗರ್ಭಿಣಿಯೊ ರಿಪು ವೋ |
ಮಿಸುಪದಿಲ್ಲಿ ವಿಮಾನವಂಗನೆ ನೋಡಿಬಹೆನೆಂದು ||
ಮಸೆದ ಬಾಳ್ಬೇಡೆಯ ವೆರಸಿ ಲಾ | ಗಿಸಿ ಧರಾ ತಳಕಿಳಿದು ಕಂಡನು |
ಮಿಸುಕಲಮ್ಮದ ಗುಂಡುಗಳ ನಡುವಿರ್ದ ಬಾಲಕನ || ೨೯ ||

ಕಡೆದು ಜೀವಂಬೊಯ್ದ ನೀಲದ | ಕಡು ಚೆಲುವ ಪುತ್ಥಳಿಯೊಯೆನೆ ಚೆಲು |
ವಿಡಿದ ಶಿಶುವಿನ ಭದ್ರಲಕ್ಷಣ ಮೂರ್ತಿಯನು ಕಂಡು ||
ಬಡವನಲ್ಲಿವನರಸು ಮಗನೀ | ಎಡೆಗೆ ಪಗೆವನೆ ತಂದು ಬಿಸುಟನು |
ಮಡಿಯದದರಿಂ ಚರಮತನುವೆಂದರಿದನಾ ಖಚರ || ೩೦ ||

ಅರಿದು ಹರುಷೋತ್ಕರ್ಷದಿಂ ಮನ | ವೆರಗಿ ಬಾಲನನೆತ್ತಕೊಂಡೆವೆ |
ದೆರೆಯದದರಿಂ ಮುನ್ನ ತೆಗೆದು ವಿಮಾನವನು ಪೊಕ್ಕು ||
ಕಿರುವರೆಯ ದಳೆತಂದೆ ನೆಲೆನಿನ | ಗರುವ ಕಂದನನಕ್ಷಿಗಳನುರೆ |
ಸೆರೆವಿಡಿದ ಚೆನ್ನಿಗನ ಕೊಳ್ಳೆಂದಿತ್ತನಾ ಖಚರ || ೩೧ ||

ಬಡವ ನಿಧಿಗಂಡಂತೆ ಸುಖ ನೆನೆ | ದೊಡನೆ ಕೈಸಾರ್ದಂತೆ ಬಂಜೆಯೆ |
ಪಡೆದು ನೆರೆದಂತಕ್ಷಿ ಕಂಗುರುಡರ್ಗೆ ಬಂದಂತೆ ||
ನಾಡೆ ನಲಿನಲಿದಾಡಿ ನೆರೆ ಮು | ದ್ದಾಡಿ ಮಿಗೆ ಕೊಂಡಾಡಿ ಬಾಯ್ಬಾ |
ಯ್ಗೂಡಿ ಜೋಗಳವಾಡಿ ಕಂದನ ನೋಡಿ ಬಾಡಿದಳು || ೩೨ ||

ಅರಿದನಿವರಿಗೆ ಪೂರ್ವಭವದೊಂ | ದೆರಕೆಮೆಂಬುದ ನಾತನೆಲೆ ಮನ |
ದೆರೆಯಳೇ ನಿನಗೀತನಾತ್ಮಜನಾಗಿರಲಿ ಸಲಹು ||
ಮರುಕದಿಂದೆನಲೆಲೆರಮಣ ನಿನ | ನೂರ್ವರು ಸುತರ್ಗಿವ |
ನೆರಗ ಬೇಕದರಿಂದೆನಗೆ ಬೇಕೆಂದಳಾ ಖಚರಿ || ೩೩ ||

ನನಗಿವನೆ ಯುವರಾಜ ನೀತನೆ | ನಿನಗೆ ಮಗನೆಂದೈದೆ ನಿಲೆನುಡಿ |
ದನುಪಮನು ನಿಜಮೇಘಕೂಟದ ನಂದನದಲಿರ್ದು ||
ವನಿತೆ ಕಾಂಚನಮಾಲೆ ಪೆತ್ತಳು | ತನಯನನು ನೆರೆಗೂಢಗರ್ಭದ |
ಲೆನಿಸೆ ಗುಡಿತೋರಣದಿ ಪಟ್ಟಣಮೈದೆ ಸೊಬಗಾಯ್ತು || ೩೪ ||

ಇದಿರುಗೊಂಡರು ಪಂಚಶತಸುತ | ರೊದರುತಿರೆ ಬಹುವಾದ್ಯಗಳು ಸ |
ನ್ಮುದದಿನರಮನೆಯೈದಿತೊಂ ಪ್ರದ್ಯುಮ್ನವೆಸರಿಟ್ಟು ||
ಪದಪಿನಿಂ ಜಿನಪೂಜೆಯನು ಪೆಂ | [ಪೊದವೆ]ಮಾಡಿಸಿ ತನ್ನ ಮನೆಯ |
ಗ್ಗದ ಧನವ ಬರುಕೈದಿದಿನಾ ವಿತರಣ ವಿನೋದದಲಿ || ೩೫ ||

ಬಿನದದಿಂ ಮೊಲೆಯುಣುವ ತಾಯಾ | ನನವ ಕಿಗ್ಗಣ್ಣಿಂದ ನೋಡುತ |
ಕೊನೆವೆರಲಿನಿಂದೊಂದು ಕುಚಚೂಚಕವ ಪೊಸದೊರ್ಮೆ ||
ತನಿಮೊಲೆಯನುಂಬುದನುಳಿದು ಮೆ | ಲ್ಲನೆ ನಗುತ ನಲಿನಲಿವ ಕಂದ |
ರ್ಪನನು ಮುದ್ದಿಸಿ ತಣಿವ ಜನನಿಯ ಸೈಪನೇನೆಂಬೆ || ೩೬ ||

ನಗುವನೊಯ್ಯನೆ ಜಗದ ನೀರರ | ನಗುವವೊಲು ಪೊಡೆ ಮಗುಳ್ವನೊಡಲಿದು |
ಮುಗುಳದಿಂ ನೆಗೆಪೊತ್ತಯೆಂದಿಳೆಯನಪ್ಪಿಕೊಳುವಂತೆ ||
ನೆಗೆದು ನಿಲುವನು ಮುಕುತಿಯಲಿ ತಾಂ | ನೆಗೆದು ನಿಲುವವೊಲಡಿಯಿಡುವನೊ |
ಯ್ಯಗೆ ಸುಪಥಕಡಿಯಿಡುವವೊಲು ದರ್ಪಕ ಕುಮಾರಕನು || ೩೭ ||

ಬೆಳೆವನಾ ಸಿತಪಕ್ಷದಲಿ ತೊಳ | ತೊಳಪಶಶಿವೊಲು ಸಕಳ ಕಳೆಯೊಡ |
ವೆಳೆಯೆ ಬಾಲಶಶಾಂಕ ಕರಸಂಗಮದಿ ಶಶಿಕಾಂತ ||
ತಳುವದೊಸರ್ವವಂಗನೆಯರೆಸೆ | ವೆಳೆವದನ ಸೋಂಕಿಮೊಳೆರೆವಾಂಮನೆ |
ಕಳೆಯೊಸರ್ವರೆನಲಪ್ರತಿಮರೂಪನು ಧರಿತ್ರಿಯಲಿ || ೩೮ ||

ನಗೆಮೊಗದ ಬಿಂಬಾಧರದ ಮಿಂ | ಚೊಗುವ ಕಂಗಳ ಕೊನರ್ವ ಮೀಸೆಯ |
ನಗಶಿಖಿರ ಭುಜದಗಲುರದ ನಿಡುದೊಳ ಬಡನಡುವ ||
ಪೊಗರೊಗುವ ನುಣ್ದೊಡೆಯ ಮಿಗೆಮಗ | ಮಗಿಪತನುಪರಿಮಲದ ತನಿಸೊಬ |
ಗೊಗೆದ ಷಾಡ್ವಳವರ್ಣದೊಳ್ಪೆಸೆದುದು ಮನೋಜನೊಳು || ೩೯ ||

ಭೂಮಿಯೊಳು ಚೆಲುವನನು ಪೊಗಲ್ವೊಡೆ | ಕಾಮ ಸನ್ನಿಭ ರೂಪನೆಂಬರು |
ಕಾಮನಾ ಚೆಲ್ವಿಕೆಯನಂತಿಂತೆಂಬ ಕವಿಯಾರೊ ||
ಕಾಮನನು ಸುತ್ರಾಮನನು ರಘು | ನಾಮನನು ಪೊಗಳುವೊಡೆ ಪಡಿಯಿಡ |
ಲೀಮಹಿಯೆ ನಗದಿಹುದೆ ನೃಪಕೇಳೆಂದನಾ ಮುನಿಪ || ೪೦ ||

ಹಿಮಿಗಿರಿಯಲಿಹ ಸಿದ್ಧಕೂಡ | ಪ್ರವರ ಚೈತ್ಯಾಲಯಕೆ ನಡೆತಂ |
ದವಿಕೃತಕ ಜಿನಬಿಂಬಗಳನರ್ಚಿಸಿ ನರ್ತಿಸಿ ನುತಿಸಿ ||
ಅವನಿನುತನರುದಿಂಗಳಿರಲೊ | ಪ್ಪುವ ಗಗನಗಾಮಿನಿಯು ಮೊದಲಹ |
ವಿವಿಧ ವಿದ್ಯೆಯನಾಂತನಾ ಜಿನಯಕ್ಷಿಗಳು ಕೊಡಲು || ೪೧ ||

[ಪರಿಪರಿಯಿಂದೊಲಿ]ದು ಸುಖದಿಂ | ದಿರುತಿರಲು ಮಕರಧ್ವಜನು ವಂ |
ಬರಪುರದಪತಿಯಗ್ನಿರಾಜವಿಯಚ್ಚರಾಧಿಪನು ||
ಪಿರಿದು ಗರ್ವಿತನಾದನೆಂದೆ | ಲ್ಲರು ಕುಮಾರರು ನಿಜಬಲವು ಸಹ |
ವಿರದೆ ಖಗಪತಿ ಕೌಳಶಂಬರ ಮುತ್ತು ವನಿತರೊಳು || ೪೨ ||

ಆ ಸಮಯದೊಳು ದೇವ ಬಿನ್ನಹ | ವೀಸುಭರದಲಿ ನೀವು ನಡೆ ವೊಡ |
ದೇಸರವನವದೇವನೋ ದಾನವನೊ ನನ್ನಬಿಡು ||
ಸಾಸಿಯಾದಗ್ನಿಯನು ನಿಜ ಭೀ | ಳಾಸಿಜಲದಿಂ ನಂದಿಸದೊಡಿದು |
ಮೀಸೆಯೇ ಕೊಡು ಬೆಸನನೆಂದನು ಮೀನಕೇತನನು || ೪೩ ||

ತಂದೆ ನಮ್ಮಗ್ರಜರು ಸಹಸುಖ | ದಿಂದೆ ರಾಜ್ಯಾಲಯದೊಳಿಹುದೆನೆ |
ಕಂದನನು ಮೊಗನೋಡಿ ವಿಕ್ರಮಶಾಲಿಯಹುದೆಂದು ||
ಅಂದು ಬೆಸಸಲು ಪಡೆ ಬೆಸಸಿನಡೆ | ತಂದು ಭರದಲಿ ಗಗನ ಪುರವನು |
ಪೇಂದ್ರ ನಂದನ ಮುತ್ತಿಬಿಟ್ಟನು ಪೊಯಿಸಿ ಭೇರಿಯನು || ೪೪ ||

ಕಡುಮುಳಿಸಿನಿಂದಗ್ನಿರಾಜನು | ಪಡೆವೆರಸಿ ಸನ್ನಾಹ ಭೇರಿಯ |
ಪೊಡಸಿ ವಜ್ರಪ್ರಾಯರಥದೊಳು ಬಾಳಝಳಪಿಸುತ ||
ಕಡಲಿನಿಂ ವಡಬಾಗ್ನಿ ಮುಗಿಲಿಂ | ಸಿಡಿಲು ಮೃಡನಲಲಾಟ ನೇತ್ರದಿ |
ಕಿಡಿಗಡಣ ಪೊರಮಡುವೊಲು ಪೊರಮಟ್ಟನಾ ಪೊಳಲಿಂ || ೪೫ ||

ಧರೆಗೆ ಧುರ ಬಂದೊಡ್ಡಿ ನಿಲಲ | ಬ್ಬರಿಸಿ ಕೈ ವೀಸಿದಡೆ ನಿಜಬಲ |
ವೆರಸಿ ಕಾಲಾಳೊಳು ತುರಂಗಮ ತುರಗದೊಳು ಕರಿಯು ||
ಕರಿಯೊಳಾ ರಥ ರಥದೊಡನೆ ಸಂ | ಗರವ ಮಾಡಿ ಮನೋಜ ಸೈನ್ಯದ |
ಭರದಿ ಮಗ್ಗಿದುದೇನಂಬೆಯ ನಿಮಿಷ ಮಾತ್ರದಲಿ || ೪೬ ||

ಪಡೆ ಪಡಲು ಮುಳಿದಗ್ನಿ ವಿದ್ಯೆಯ | ಪಡೆಯ ಪಡೆದೊಡ್ಡಿ ದೊಡ ಮದರೇ |
ನ್ಮಡಿಯ ವಿದ್ಯಾಬಲವ ಬೆಸಸರತರಿದದನು ತವಿಸೆ ||
ಕಡೆಯ ಕಾಲದ ಸಿಡಿಲೆನಿಸಿ ಘುಡು | ಘುಡಿಸಿ ದರ್ಪಕ ನಿದಿರೆ ರಥವನು |
ನಡಸಿ ಸುರಿದನು ಹೊಸಮಸೆಯ ಬಿರುಸರಳ ಸೈವಳೆಯ || ೪೭ ||

ಪೂತು ಮಝ ಬಿಲ್ಲಾಳೆಮಿಗೆ ಖ | ದ್ಯೋತ ಮುಸುಕಿದೊಡದ್ರಿಗೆಂದವ |
ಭೀತಿಯುಂಟೇ ಎಂದು ಮುಸುಕುವ ಕಣೆಯಕಣೆಯಿಂದ ||
ಘಾತಿಸಿದ ನಂಗಜನು ವಿದ್ಯಾ | ವ್ರಾತ ಬಾಣಮನೆಸಲು ತತ್ಪ್ರತಿ |
ಘಾತ ವಿದ್ಯಾಸ್ತ್ರದಲಿ ಗೆಲಿದನು ರಿಪು ಖಗಾಧಿಪನ || ೪೮ ||

ಕಡುಪನಗ್ನಿಯನಟ್ಟಿ ಬಾಳ್ದಲೆ | ಪಿಡಿದಭಯಘೋಷಣೆಯ ಮಾಡಿಸಿ |
ದೊಡನೆ ತತ್ಪತ್ತನದ ಪೊಕ್ಕು ಸುವಸ್ತು ವಾಹನವ ||
ಸಡಗರದಿ ತೆಗೆದುಕೊಂಡು ವಹಿಲದಿ | ಮಡದಿರಿಗಿವರ ಮೇಘಕೂಟದ |
ಕಡೆವೊಳಲು ಹೊಕ್ಕಿರ್ದು ದೂದಟ್ಟಿದನು ಪುರವರ್ಗೆ || ೪೯ ||

ಪುರವನುರೆ ಸಿಂಗರಿಸಿ ಯೈನೂ | ರ್ವರು ಕುಮಾರರು ಪುರಜನವು ಸಹ |
ನೆರೆದಿದರು ಗೊಂಡತಿ ವಿಭವದಲಿ ಕಾಳಶಂಬರನು ||
ಇರದೆ ಪಿಡಿ ತಂದಗ್ನಿರಾಜ | ಸ್ಮರನು ತಂದೊಪ್ಪಿಸಿಯೆರಗಿಮಿಗೆ |
ಹರುಷದಿಂದಾಲಿಂಗಿಸಿದನಾತ್ಮಜನನಾ ಖಚರ || ೫೧ ||

ಪುರವನೊಳಪೊಗೆ ನೆಲೆನೆಲೆಗಳು | ಪ್ಪರಿಗೆಯಲಿ ಮನೆಮನೆಯ ಬಾಗಿಲ |
ಉರು ಮುದದಿನಾರೀ ಕದಂಬಕವೆವೆಯ ನಿಡುಮರೆಯ ||
ಸ್ಮರನ ಚೆಲುವಿನೊಳಿಟ್ಟದಿಟ್ಟಿಯ | ಮರಳಿಸದೆ ಹೂಗಣೆಗಳೇರಿಂ |
ಜರಿದೆದೆಯ ತಳ್ಳಂಕದಿಂ ಕಳೆ ಸೂಸೆ ಮೂರ್ಚಿಪರು || ೫೨ ||

ಅವನ ನೋಡಿದ ಪೆಣ್ಣೆ ಧನ್ಯಳು | ಅವನ ನುಡಿಗೇಳ್ದವಳೆ ಮಾನ್ಯಳು |
ಅವನ ಸೋಂಕಿದ ಗಾಳಿಸೋಂಕಿದ ನೀರೆಪುಣ್ಯವತಿ ||
ಅವನ ಕೂಡಿದ ಕಾಂತೆ ಸುಕೃತದ | ತವರುಮನೆಯೆಂದೆದೆಯೊರೆದು ಕ |
ಣ್ಣೆವ ಮಿಸುಕದೀಕ್ಷಿಪುದು ಪೌರಸ್ತ್ರೀ ಕದಂಬಕವು || ೫೩ ||

ಆಡುತಿಹನಚ್ಚಣಿಯರೊಪ್ಪುವ | ಗಾಡಿಕಾರನ ಕಾಮದೇವನ |
ನೋಡಿದಾಕ್ಷಣವೆದೆಯ ತಾಗಿದ ಪೂಗಣೆಯು ಚೆನ್ನೆ ||
ಮೂಡಿ ಮನ್ಮಥವಾರಿ ಮಿಗೆತು | ಳ್ಕಾಡಿ ಝೆಮ್ಮಾನೆ ಬೆಮಿರಿನಾಣ್ಗೆ |
ಟ್ಟೋಡಿ ಮರೆದೊಂದೆಸೆಗೆ ಸರಿವರು ಕೇರಿಬೀದಿಯಲಿ || ೫೪ ||

ಅರಮನೆಗೆ ಕರೆದೊಯ್ದು ಸಲೆ ಕು | ಳ್ಳಿರಿಸಿ ಕಾಂಚನ ಪೀಠದಲಿ ಪರಿ |
ಪರಿಯ ವಾದ್ಯಗಳುಲಿಯೆ ತನ್ನಯ ಕೊರಳಕಂಠಿಕೆಯ ||
ಸ್ಮರನ ಕೊರಳಲಿ ಕಟ್ಟಿಮಂಗಲ | ವಿರುತಿಯಿಂ ಯುವರಾಜ ಪಟ್ಟವ |
ಹರುಷದಿಂ ಕಟ್ಟಿದನು ಸತ್ಕವಿ ಕಲ್ಪ ಭೂಜಂಗೆ || ೫೫ ||

|| ಅಂತು ಸಂಧಿ ೨೭ಕ್ಕಂ ಮಂಗಳ ಮಹಾ ||