ಸಂಧಿ ೨

ಸಿಂಹಪುರವರ್ಣನೆ ನೃಪಾಲಕ | ಸಿಂಹನರುಹದ್ದಾಸ ಭೂಪತಿ |
ಸಿಂಹಮಧ್ಯೆ ಲತಾಂಗಿ ಜಿನದತ್ತೆಯು ಸುಖದಲಿಹರೂ || ಪಲ್ಲ ||

ಇಂತು ಮೆಱಿದಾ ದೇಶಲಕ್ಷ್ಮೀ | ಕಾಂತಮುಖಮಂಡಲವೆನಿಪ್ಪುದು |
ಚಿಂತೆಯೆಂಬ ಗಜಕ್ಕೆ ಸಿಂಹವೆನಿಪ್ಪ ಸಿಂಹಪುರ |
ಕಂತುವಿನ ನೆಲೆವೀಡು ಸೊಬಗಿನ | ಸಂತತಿಯ ತಾಯ್ವೀಡು ಲಕ್ಷ್ಮಿಯ |
ಸಂತಸದ ಬಾಳ್ವೀಡೆನಿಸಿ ಶೋಭಿಪುದು ಸೊಬಗಾಗಿ || ೧ ||

ಅಳಿಗುರುಳ ತಾವರೆಮೊಗದ ಪೊಳೆವ | ರಳುಗಂಗಳ ಸೋಗೆದುರುಬಿನ |
ಗಿಳಿನುಡಿಯ ಪೊಣರ್ವಕ್ಕಿ ಮೊಲೆಗಳ ಕೆಂಪುದಳಿರಡಿಯ ||
ಸೆಲೆ ನಡುವ ಪೊಂಬಾಳೆದೊಡೆಗಳ | ಕಳರುತಿಸ್ವನದೆಲರ ಸುಯ್ಯಾ |
ಪೊಳಲ ಪೊರವಲಯದಲಿ ನಂದನಲಕ್ಷ್ಮಿ ಶೋಭಿಪಳು || ೨ ||

ಮೆಱೆಯಲತಿಲಾವಣ್ಯವಾರಿಯ | ನೆಱೆದು ಸಲಹಿದ ಮಲ್ಲಿಕಾಲತೆ |
ಕಱಿದು ಚಂದ್ರನೆ ಜೊನ್ನರಸದಿಂ ಬೆಳಸಿದಿಮ್ಮಾವು ||
ನೆಱೆ ಬಸಂತನೆ ಮದನರಸಕೆಂ | ದೆಱಕವೋವಿದ ಚೆಂದಳಿರ ನನೆ |
ದುಱುಗಲೊದವಿಶೋಕೆಗಳು ಬನದೊಳು ವಿರಾಜಿಪವು || ೩ ||

ನಳನಳಿಸುವ ತಮಾಲಲತೆವನೆ | ಯೊಳಗಶೋಕಲತಾಲತಾಲಯ |
ದೊಳಗೆ ದ್ರಾಕ್ಷಾಮಂಡಪಂಗಳೊಳಿಟ್ಟ ಕಮ್ಮರಲ ||
ತಳಿರ ಪಸೆಗಳ ಮೇಲೆ ಕರ್ಪುರ | ಗಳಹದಿಗಳೊಳು ಪೊರಳ ನೆರೆವ |
ಗ್ಗಲ ವಿರಹಿಗಳು ದಂಪತಿಗಳಲ್ಲಲ್ಲಿ ನೆರದಿಹುದು || ೪ ||

ಅಲರ್ದ ತಾವರೆವಂಡನುದುರಿಸಿ | ಕೊಳನ ಹೊಂದೆರೆಯೆತ್ತಿಮಿಂದೇ |
ಳೆಲೆಯ ವಾಳೆಯ ಕರ್ಪುರದ ಧೂಳಾಟಗಳನಾಡಿ |
ಬಳಲಿ ಬಂದಾ ಲತೆವನೆಯೊಳು | ಜ್ಜಳಿಪ ನಲ್ಲರನಪ್ಪಿ ನಂದನ |
ದೊಳಗೆ ಸುಳಿದಾಡುವುದು ಬಾಲಕನಂದದೊಂದೆಲರು || ೫ ||

ವಾರಿನಿಧಿ ಮುನಿ ಕುಡಿದ ಕಪಿ ಕ | ಯ್ಯಾರೆ ಕಟ್ಟಿದ ಕುಂದುಗಳೆವೊಡೆ |
ಸೇರಿತೀ ಪುರಸಿರಿಯನೆನೆ ಜಳಖಾತಿಕೆಯು ಬಳಸಿ ||
ಮೇರುನವನೇ ಪಟ್ಟೆವೊಯ್ದಾ | ವಾರಿರುಹಭವನಾ ಪುರಶ್ರೀ |
ಚಾರು ತೆರೆ ಸುತ್ತಿಟ್ಟವೆನೆ ಹೊಂಗೋಂಟೆರಂಜಿಪುದು || ೬ ||

ಪರನೃಪರು ಕಪ್ಪಗಳು ತಹದುದ | ಕರಿಘಟೆಯ ವಾಜಿಗಳ ರತ್ನಾ |
ಭರಣ ಪೀಟಿಕೆಗಳ ದುಕೂಳಾಂಬರದ ದಿಂಡುಗಳ ||
ಭರದಿ ಮೊಳಗುವ ವಾದ್ಯಗಳ ಸುಭ | ಟರ ನೆರವಿಯಂಡಳದ ಸಂದಳಿ |
ತರತರದೆ ತತ್ಪುರದ ಬೀದಿಯೊಳಿಂಬುದುಂಬಿಹುದು || ೭ ||

ಪಡಿಯಱರ ತಂಬುಲಿಗ ಕಬ್ಬಿಗ | ಪಡೆವಳರೆ ಸೆಜ್ಜವಳ ಗಂಧಿಗ |
ಮಡಿವಳರ ಕಾಲುರಿಚ ಪೊಳಲಿಚ ದಡಿಗ ಬಗೆಕಾಱ ||
ನಡೆವಣಿಗ ಗೋಳೈಲ ಸೂಳೈ | ತಡಪವಳ ಬಳೆಗಾಱ ಕಮ್ಮಱ |
ನುಡಿಗ ಕುಂಬಱ ಕಂಚುಗಾರರ ಕೇರಿ ಮೆ ಱೆದಿಹವು || ೮ ||

ರೂಢಿವಡೆದ ನೃಪಾಲಕರ ನೆಲೆ | ಮಾಡ ಚಿನ್ನದ ಚೆನ್ನ ಕನ್ಯಾ |
ಮಾಡವೊಪ್ಪುವಮಾತ್ಯ ಮುಖ್ಯರ ಪಾಲ್ಸೊತೆಯ ಮಾಡ ||
ಗಾಡಿಕಾತಿಯರೆನಿಪ ಗಣಿಕಾ | ಮಾಡವಿವು ಚೆಲುವಿಕೆಯನೀವುವು |
ನೋಡುವರ ಕಂಗಳಿಗೆ ಪೊಳಲಾ ಕೇರಕೇರಿಯೊಳು || ೯ ||

ರತಿಯ ಜ ಱಿದವರು ಚೆಲುವಿನಿಂ ಸರ | ಸತಿಯ ನಗುವರು ಜಾಣೆಯಿಂ ಪಾ |
ರ್ವತಿಯ ಪಳಿವರು ಮೈಮೆಯಿಂ ಸಿರಿಯೇಳಿಪರು ಸೊಬಗಿಂ ||
ಅತಿನಿಡಿಯ ಕಂಗುಡಿಯ ಹೊಯಿಲಿಂ | ಮತಿಗೆಡಿಪ ಬೆಲೆವೆಣ್ಗಳೊಪ್ಪಿದ |
ರತುನಗಳ ನೆಲೆಯುಪ್ಪರಿಗೆ ತರತರದಿ ಮೆಱಿದಿಹುದು || ೧೦ ||

ರಂಭೆಯುಯ್ಯಲ ತೂಗುವೂರ್ವಶಿ | ಪೊಂಬಡಿಗವಿಡಿವರುಣನಟ್ಟಿದ |
ಕೆಂಬರಲ ತೊಡುದೇವಿ ಮನಸಿಜನಿತ್ತರಳ ಮುಡಿಗೆ ||
ತುಂಬು ಬೆಳ್ಳಾನೆಯ ಸುರಾಧಿಪ | ನೆಂಬನೊತ್ತೆಗೆ ತಂದು ಹೊಱಗಹ |
ನೆಂಬ ಮಾತುಗಳಿಲ್ಲದಿಲ್ಲ ಸೂಳೆಗೇರಿಯೊಳು || ೧೧ ||

ಮಾಲೆಗಟ್ಟುತೆ ನೋಟಕರ ಕಣ್ | ಮಾಲೆಗಟ್ಟುವರೊರ್ಮೆ ತುಂಬಿಯ |
ಮಾಲೆಮಾಲೆಯ ಕಾಣಗುಡದಿರೆ ತಮ್ಮ ನಱುಸುಯ್ಯ ||
ಮಾಲೆಮಾಲೆಯ ತೋ ಱಿಕಟ್ಟಿದ | ಮಾಲೆಯನೆ ವಿಟಮಾಲೆಗತಿ ಸ |
ಲ್ಲೀಲೆಯಿಂ ಮಾಱುವರದಲ್ಲಿಯ ಮಾಲೆಗಾರ್ತಿಯರು || ೧೨ ||

ಬಟ್ಟಚಂದಿರಕಾಂತದಾ ಕಾ | ಲಿಟ್ಟು ಮೃಗಮದ ಕರ್ಪುರದಪುದಿ |
ವಿಟ್ಟು ಚಂದನ ತುಂಡುವಿಡಿದರೆವವರ ನಗೆಮೊಗವ ||
ನೆಟ್ಟನಿಂದುವೆಯೆಂದು ಕಲುನೀ | ರಿಟ್ಟುಬರೆ ಪದಗಾಣಗುಡದಿರೆ |
ಚಿಟ್ಟು ಮೊಲೆ ಬಳಲುವರನಿಬರ | ಘಟ್ಟಿವಳ್ತಿಯರು || ೧೩ ||

ಕುಂಚಗಾಱರ ಹಸರದಿಂ ಕುಡಿ | ಮಿಂಚುಗಳು ಬಳೆಗಾಱವಸರದೆ |
ಗೊಂಚಲಿಪ ಕರಿಮುಗಿಲುಗಳು ಪಲರನ್ನ ಪಸರಗಳಿಂ ||
ಪಂಚಳಿಪ ಸುರಧನುಗಳೆನಿಸಿ ಪ | ಳಂಚುವಂತಿರೆ ಬೀದಿಯೊಳು ಪೊಸಕಾ |
ರೆಂಚದರ ನಾದಪುದೆನುತ ತೇಗುವವು ಕೇಕಿಗಳು || ೧೪ ||

ಬಳ್ಳಿವೆಸೆದೆಳೆವೇಳು ನೆಲೆಗಳ | ಬಳ್ಳಿವಾಡದ ರನ್ನ ದೀಧಿತಿ |
ಮಿಳ್ಳಿಸುವ ಗೋಪುರದ ಮಾನಸ್ತಂಭ ತೋರಣದ ||
ತಳ್ಳಳಿಪ ಮಣಿಲಂಬಣದ ಮುಗಿ | ಲಳ್ಳಿಱಿವ ಮಣಿಗಳ ಸಗಳ ಚೆಲು |
ವಳ್ಳಿತೆನೆ ಪೊಂಬಸದಿಗಳೆ ಆ ಪೊಳಲೊಳೆಸೆದಿಹುವು || ೧೫ ||

ಸಂತಸದಿ ಪೊಣ್ಮಿದುದು ದನಿದನಿ | ಚಿಂತನೆಯೆ ಚಿಂತನೆಯೆ ತಾಂ ಸಿ |
ದ್ಧಾಂತವಾ ಸಿದ್ಧಾಂತ ವೇದಿಗಳಖಿಲ ಮುನಿವರರು ||
ಅಂತೆಸೆವೆ ಮುನಿಪಾದದೊಳ್ | ಭೂಕಾಂತ ಕೋಟಿ ಪ್ರಣತಿ ನತಿಸುವ |
ಕಾಂತ ಭವ್ಯರ ಜಿನರ ಚೈತ್ಯಾಲಯದೊಳೆಸೆದಿಹರು || ೧೬ ||

ಪುರ ಸರೋವರದೊಳಗೆ ಪಳುಕಿನ | ಪಿರಿಯ ಕೋಟೆಯ ತೆನೆಗಳೆಸಳೆನೆ |
ವರ ಸುವರ್ಣೋತ್ತುಂಗ ಸೌಧಮೆ ಕರ್ಣಿಕೆಯದಾಗೆ ||
ಅರುಣ ಮಣಿಮಾಲೆಯ ಬಳಸು ಕೇ | ಸರವೆಣಿಸೆ ರಾಜಾಲಯ ಶ್ರೀ |
ಶಿರಸರೋರುಹವೆನಿಸಿತರಮನೆ ಕಾಂತಿಜಲದೊಳಗೆ || ೧೭ ||

ಸಾಲೆಸೆವ ಪಲತೆಱದ ವಾಜಿಯ | ಸಾಲೆ ಆನೆಯ ಸಾಲೆ ಪಿಡಿಗಳ |
ಸಾಲೆ ಕಲಭದ ಸಾಲೆ ಒಂಟೆಯ ಸಾಲೆ ಓಗಲದ |
ಸಾಲೆ ನಾಟಕ ಸಾಲೆ ಭೋಜನ | ಸಾಲೆ ಮಂಥಣ ಸಾಲೆಯಾಯುಧ |
ಶಾಲೆ ಮೊದಲಾದಖಿಳ ಭವನದಿನೆಸೆವುದರಮನೆಯ || ೧೮ ||

ಚಂದಿರನ ರಥವಖಿಲ ಜಗದಾ | ನಂದಹರ್ಮ್ಯದ ವಜ್ರಶಿಖರವ |
ನೊಂದು ದಿನ ಪಾಯ್ದೊಡೆದ ಕಲೆಕಱಿಯಾಗಿ ಬಿದುವಿನೊಳು ||
ಇಂದುವದೆ ರವಿ ತೆಂಕ ಬಡಗಲು | ಒಂದಿ ನಡೆಯೆಂದಾ ಗೃಹೇಂದಿರೆ |
ಅಂದು ಕೈಬೀಸುವವೊಲಾದದು ಗೆಜ್ಜೆವಳಯಿಗೆಯು || ೧೯ ||

ಆ ಪೊಳಲನೊಸೆದಾಳ್ವನಾತನ | ರೂಪಿಗಂಗಜ ದಾಸನಾವಗ |
ಕೂಪದಾಸನು ಪೂರ್ವಕೃತ ಪುಣ್ಯವೆ ಸುತೇಜಕ್ಕೆ ||
ಆ ಪದುಮಸಖ ದಾಸ ಶಾಂತತೆ | ಗೀ ಪದುಮರಿಪು ದಾಸನೆನಿಸಿಯೆ |
ಭೂಪನರಹದ್ದಾಸನೆನಿಸಿದನೆಂದನಾ ಮುನಿಪ || ೨೦ ||

ಅವನ ಕೀರ್ತಿಸುಧಾಂಬು ನಿಧಿಯೊಳು | ಹಿಮಕರನೆ ನೊರೆ ಬಾಂದೊಱಿಯೆ ತೆರೆ |
ಹಿಮ ಶಿಖರಿ ಹರಗಿರಿ ಕುಱಿವೆ ಬೆಳ್ಳಾನೆ ನೀರಾನೆ ||
ಕವಿದತಾರೆಯೆ ಮೀನುಗಳು ದಿಗು | ನಿವಹದಂತೆಮೆ ಮೇರೆ ಮೂಱಿಂ |
ಭುವನಮದೆ ಗುಂಪೆನಿಸಿ ರಂಜಿಸುತಿರ್ಪುದನವರತ || ೨೧ ||

ಪೊಡವಿಯೊಳು ಸಿರಿನೃಪರ ಹಿಂಡನು | ಬಿಡದೆ ಸುಡುವಾ ನೃಪನ ತೇಜದ |
ಕಿಡಿಗಳೈದುರಿ ಸಿಡಿದು ತಾವೈದೆಡೆಗಳೊಳು ಸಿಲುಕಿ |
ಮೃಡನ ಕಂಣುರಿ ಚಂಡಕಿರಣನು | ಸಿಡಿಲುಗಿಚ್ಚುದವಾಗ್ನಿ ಪೀರುವ |
ವಡಬ ಸಿಖಿಯೆಂದಾದವಂದಿಂದೀ ಧರೀತ್ರಿಯೊಳು || ೨೨ ||

ಧುರದೊಳರುಹದ್ದಾಸರಾಯನ | ವರ ಕೃಪಾಣನ ಪೊಗರು ಪೊಗರಿ |
ಲ್ಲರಿ ನೃಪಾಲರ ಶಿರವನೊಡೆವೊಯಿದೆತ್ತೆ ಮತ್ತವರ ||
ಬರೆದ ಪಣೆಯಕ್ಕರಗಳವೆ ಮಿಗೆ | ನೆರೆದು ಪತ್ತಿದುವಕ್ಕು ಮಲ್ಲದೊ |
ಡಿರದವರ ನೊಸಲಕ್ಕರಂಗಳು ಮಾಯವಾದಪುದೆ || ೨೩ ||

ಜಿನಪದಾಂಬುಜಪೂಜೆಗವನೋ | ರ್ವನೆ ವಲಂ ಜಿನದಾಸನಾಗಿರೆ |
ಜಿನನೆಕೊಟ್ಟಾ ಪುಣ್ಯಲಕ್ಷ್ಮಿಯೆನಿಪ್ಪಳಾ ನೃಪನ ||
ವನಿತೆವರ ಜಿನದತ್ತೆಯೆಂಬಳು | ವಿನುತ ಸೌಭಾಗ್ಯದ ಸುಶೀಲದಿ |
ವನಜಗಂಧಿನಿ ಮನದಮಾಣಿಕವೆನಿಸಿ ರಂಜಿಪಳು || ೨೪ ||

ನನೆಗಣೆಯನೊಲಿದರ್ಚಿಸುವ ಮೋ | ಹನದ ಸಿರಿಯೋ ಕಬ್ಬುವಿಲುಗಾ |
ಱನೆ ನಲುವಿನಾರಾಧಿಸುವ ಮಂತ್ರಾದಿದೇವತೆಯೊ ||
ಮನಸಿಜನೆ ಪೂಜಿಸುವ ಕಡುಪೆಂ | ಪಿನ ವಿಜಯಲಕ್ಷ್ಮಿಯೊಯೆನಿಸಿಕಾಂ |
ತನ ಮನಮೆ ತಾನಾಗಿ ಸುಖದಿರುತಿಪ್ಪಳನವರತ || ೨೫ ||

|| ಅಂತು ಸಂಧಿ ೨ಕ್ಕಂ ಮಂಗಳ ಮಹಾಶ್ರೀ ||

 

ಸಂಧಿ ೩

ಇತ್ತಲರುಹದ್ದಾಸನಾ ಜಿನ | ದತ್ತೆ ವಿಶ್ರುತೆ ಪುತ್ರದೋಹಳೆ |
ಪೆತ್ತಳಪರಾಜಿತ ಕುಮಾರನನಘ ವಿದೂರನನೂ || ಪಲ್ಲ ||

ಒಂದುದಿನ ಜಿನದತ್ತೆ ವರಜಿನ | ಮಂದಿರಕೆ ಪೋತಂದು ಪೂಜೆಯ |
ನಂದದಿಂ ನೆಱಿ ಮಾಡಿ ಚಂದ್ರಪ್ಪಭ ಜಿನೇಂದ್ರಂಗೆ ||
ವಂದಿಸಿದ ತದನಂತರಂ ನಿಜ | ಮಂದಿರಕೆ ಬಪ್ಪಾಗಳಾದಪು |
ದಂದು ಮಧ್ಯಾಹ್ನಿಕದ ಸನ್ನೆಯ ಸಂಕದಿಂಚರವು || ೧ ||

ಇದು ಮಹಾಮುನಿಚರ್ಯಕಾಲವು | ಇದುವೆ ಪಾತ್ರಕ್ಷೇತ್ರ ಶುದ್ಧಿಯೊ |
ಳೊದವಿ ಪುಣ್ಯದ ಬಿತ್ತ ಬಿತ್ತುವ ಯೋಗ್ಯ ಕಾಲವಲಾ ||
ಇದು ಸುಗತಿ ಬೆಳಸಾಂಪ ಪೊಳ್ತೆಂ | ದದನೆ ಬಗೆವುತೆ ಭಕ್ತಿಯಿಂ ವಿಭ |
ವದೊಳು ರಾಯನ ರಾಣಿ ಪೊಗುತರುತಿರ್ದಳರಮನೆಯ || ೨ ||

ಅರಸಿ ಬಾಗಿಲುವಾಡದಲಿ ಮಿಗೆ | ಹರುಷದಲಿ ನಿಂದಿರ್ಪುದುಂ ಕೇ |
ಸರಿಯುಮಾನೆಯ ಮರಿಯುವೇಣನ ಕರುವು ಪೆರ್ಬುಲಿಯು ||
ಉರಗಶಿಶುವುಂ ನವಿಲುಮಂಜರೆ | ಬರೆ ಸಮೇಳದೆ ಕೂಡೆ ಮುನಿಪತಿ |
ಚರಿಗೆ ಗೊಟ್ಟನರಣ್ಯದಿಂದಾ ರಾಜವೀಥಿಯೊಳು || ೩ ||

ಪೆಗಲಮೇಗಿರೆ ಬಲದ ಕೈ ಗುಂ | ಡಿಗೆಯ ಪಿಡಿದಿರೆ ವಾಮಕರವಾ |
ನೊಗನ ಪವಣಿನ ನೆಲದೊಳಾಡೆ ದಯಾವಿಳೋಕನವು ||
ದಿಗುವಸನರಡಿಗಳು ನೆಲನಮೊ | ಯ್ಯಗೆ ಪುದಿವುತಿರೆ ಚಂದ್ರಗತಿಯಿಂ |
ಸುಗುಣಭೂಷಣ ಕುಕ್ಕುಟಾಸನ ದೇವನೇಳ್ತಂದ || ೪ ||

ಕಚ್ಚೆಗಟ್ಟದೆ ಕೈದುವಿಡಿಯದೆ | ಕೆಚ್ಚೆದೆಯ ಮನಸಿಜನ ತಪಸಿನ |
ಕಿಚ್ಚಿನಿಂದುರುಪಿದೆ ಮಹಾಮೋಹಾಸುರನ ಮುಸುಡ ||
ನುಚ್ಚುಗಟ್ಟಿದೆ ದುರಿತ ವಿಪಿನಕೆ | ಮಚ್ಚಕೊಂಡೇ ವಿನೇಯ ಸುರತರು |
ಮೆಚ್ಚದಿಪ್ಪಳೆ ನನ್ನ ವ್ರತ ಶ್ರೀ ಮಹಾಮುನಿಪ || ೫ ||

ಎಂದು ಕೀರ್ತಿಪ ವಂದಿಗಳಿಗರ | ವಿಂದಮುಖಿ ಮಣಿದೊಡವನೀವುತೆ |
ಸಂದಮುನಿಪದನಿಧಿಗೆ ತಾನುರುದೀಪವರ್ತಿಯೆನೆ ||
ಬಂದೆರಗಿ ಗುರುಭಕ್ತಿಯಿಂ ಫಲ | ಚಂದದರ್ಚನೆಯಿಂದೆ ಪೂಜಿಸಿ |
ಬಂದಿಸಲು ಪರಸಿದರು ಬಿನ್ನೈಸಲು ನಿರೂಪಿಪರು || ೬ ||

ನಿಲಿಸಬೇಕೆನೆ ನಿನ್ನರಸನಾ | ಗಲಿ ತನೂಭವನುಳ್ಳೊಡಾಗಲಿ |
ನಿಲಿಸಿದಡೆ ನಿಂದಪೆವೆನುತ ಮಲಧಾರಿ ಮುನಿಹಂಸ ||
ಸಲೆ ಪರಸಿ ಬಿಜಯಂಗೆಯಲು ತಳ | ಮಳಗೊಳುತೆ ದಾನಾಂತರಾಯವು |
ಪಳಿಯಿಸಿತ್ತೆನೆ ಪುತ್ರಲಾಭವು ನಿನಗೆ ಸಮನಿಪುದೆ || ೭ ||

ಎನುತ ದುಗುಡುವ ತಳೆದು ತಳರ್ದರ | ಮನೆಗೆ ಪೊಗುತಂದಾತ್ಮ ಶಯ್ಯಾ |
ಕನಕ ಮಂಚಸ್ಥಿತ ಮರಳೀ ತೂಲ ತಪ್ಪದೊಳು ||
ದ್ಯುನದಿ ಫೇನಸಮಾನ ಪಟಬಂ | ಧನಿಯೊಳೊಲ್ಲದೆ ಕೆಲವಣೆಯೊಳಿ |
ರ್ದನುವದಿಸಿ ಕೇಳೆಂದಳಾ ಕಳಭಾಷಿಣಿಗೆ ರಮಣಿ || ೮ ||

ಪಾಡುತವೆ ತಾಯ್ಮೆಚ್ಚುತಿರೆ ಶ್ರುತಿ | ಗೂಡಿ ಮಱಿದುಂಬಿಗಳು ನನ್ನೊಡ |
ನಾಡಿದೀ ಕಿಱುಹುಲ್ಲೆ ಮೋಹದ ಶಿಶುಗೆ ತನಿಮೊಲೆಯ ||
ವೂಡುತಿದೆ ಅರಸಂಚೆ ಮಱಿ ಕಡೆ | ದಾಡುತವೆ ತಾಯೊಡನೆ ತಾಯಿ ಹೊಂ |
ಗೂಡಿನೊಳು ಮರಿಗಿಳಿಯನೋದಿಸುತಿರೆ ಸರಾಗದಲಿ || ೯ ||

ನನ್ನ ಸರಿಹರೆಯದ ರಮಣಿಯರು | ಹೊನ್ನ ಸಸಿಹೊಂಬೊಂಬೆ ರನ್ನದ |
ಚೆನ್ನ ಕನ್ನಡಿಯೆನಿಪ ಮಕ್ಕಳ ನೋಡಿ ಬಾಡುವರು ||
ಮನ್ನಿಪರು ತೆಗೆದಪ್ಪಿ ಮುದ್ದಿಸಿ | ಯುನ್ನತದ ಮೊಲೆಯೂಡಿ ತಣಿವರು |
ಮುನ್ನ ನೆಱಿ ನೋಂತವರ ಪುಣ್ಯವ ನೋಡೆಲೇ ರಮಣಿ || ೧೦ ||

ಮಕ್ಕಳಿಲ್ಲದ ಮಡದಿ ಮೋಹದ | ಸೊಕ್ಕಮಾಡದ ಸೋಂಕು ಚಿತ್ತವ |
ಜಕ್ಕುಲಿಸದ ಕವಿತ್ವ ಚಂದಿರನಿಲ್ಲದೊಂದಿರಳು ||
ತಕ್ಕರಿಲ್ಲದ ಸಭೆ ಮದಾಂಬುವ | ನುಕ್ಕದಿಭವರಸಿಲ್ಲದುರುವರೆ |
ಮಿಕ್ಕ ಮಾತೇನೊಪ್ಪದೆಂದಳು ರಾಯನರ್ಧಾಂಗಿ || ೧೧ ||

ಕಿಱುಶಿಶುವ ಮೈದೊಳೆದು ಮಿಗೆ ತೂ | ಪಿಱಿದು ದುಗುಲವ ಪೊದಸಿ ರನ್ನದ |
ಮಿಱುಪ ತೊಟ್ಟಿಲೊಳಿಟ್ಟು ಸೊಡರ್ವಕ್ಕಿನ…….. ||
ಯೆ ಱಿಯ ಜೋ ಜೋ ಕಂದ ಜೋ ಜೋ | ಕಱುವೆ ಜೋ ಜೋ ಯೆಂದು ಪಾಡುವ |
ಮೆ ಱೆವ ದಾದಿಗೆ ಮೆಚ್ಚುಗೊಡುವ ಸೈಪದೆಂದಹುದೊ || ೧೨ ||

ಅಳುವ ಕಂದನ ದನಿಯ ಕೇಳುತೆ | ಮೊಲೆ ತೊರೆಯೆ ತೆಗೆದಪ್ಪಿ ಮುದ್ದಿಸಿ |
ಮೊಲೆಯ ನೋಡಿದೊಡುಣುತೆ ತನ್ನೆಡಗೈಯ ಕೊನೆವೆರಳಿಂ ||
ಬಲದ ಮೊಲೆದುದಿಯವುಂಕಿ ಕಡೆಗಂ | ಣಲಿ ಮೊಗವನಿರೆ ನೋಡಿ ಮೊಳೆನಗೆ |
ವೆಳಗನುಗುಳುತೆ ನಲಿವ ಕಂದನನೆಂದು ಪಡೆದಪೆನೂ || ೧೩ ||

ಗೆಜ್ಜೆಗಳು ಘಲಘಲಿಪೆ ಮೆಲ್ಲನೆ | ಪಜ್ಜೆಯಿಡೆ ಕೈ ಪಱಿಯಿನಾಡಿಸಿ |
ಗುಜ್ಜ ಮೆಟ್ಟುತೆ ನಾಣ್ಚಿ ಹೊಂಗುತೆ ಬಂದು ನಿ ಱಿವಿಡಿದು ||
ಅಜ್ಜ ಅಜ್ಜಪ್ಪಪ್ಪ ಅಮ್ಮೆಮ್ಮುಂ | ಬುಜ್ಜುಗದ ಸುಕುಮಾರಕನ ಮಿಗೆ |
ಪಜ್ಜಳಿಪ ಮೊಗನೋಡಿ ಮುದ್ದಿಪ ಸಯಿಪದೆಂದಹುದೊ || ೧೪ ||

ಎಂದು ಪುತ್ರವಿದೋಹದ ಪೂ | ರ್ಣೇಂದು ಮುಖಿ ಜಿನದತ್ತೆ ಚಿಂತಿಸಿ |
ಸಂದ ಕಳಭಾಷಿಣಿ ಕಳಾದರಿಯೆಂಬ ಕೆಳದಿಯರು ||
ಯಿಂದುವನು ಮುಂಪಡೆದುದೊಂದಿರು | ಳೊಂದಿರುಳು ಮೆಲ್ಲನೆ ಪಡೆದುದೆಂ |
ಬಂದವಲ್ಲದೆ ಪುಣ್ಯವತಿ ಸುತಲಾಭ ನಿನಗರಿದೆ || ೧೫ ||

ಎಂಬ ಸಮಯದೊಳರಸನರಸಿಯ | ಪಂಬಲಿಪ ಮನದಳನಾಱಿಪೆ |
ನೆಂಬ ಬಗೆಯಿಂ ಸತಿಯ ದುಗುಡವನೆಪ್ಪ ಕತ್ತಲೆಯ ||
ತುಂಬಿಸುವ ಮಣಿ ಜೋತಿ ಬಂದಪು | ದೆಂಬವೊಲು ಮಣಿಭೂಷಣದ್ಯುತಿ |
ಮುಂಬರಿವುತಿರೆ ಬಂದನಾಕೆಯ ಹರಣ ಬಂದಂತೆ || ೧೬ ||

ಬರೆ ರಮಣಿ ಇರದೇಳೆ ಕೈವಿಡಿ | ದರಸನಾ ಸಿರಿಮಂಚನವನಲಂ |
ಕರಿಸಿಯರಸಿಯ ಹೊಳೆವ ಹೊಂಜೆಳೆ ಮೈದಡವಿ ತಳದಿಂ ||
ಸಿರಿಮೊಗವು ಬಾಡಿದೆ ಕಟಾಕ್ಷದೊ | ಳರಳ ಸರಳೆಡೆಯಾಡದಿವೆ ಸುಯಿ |
ಸರಳವಾಗಿದೆಯೆನೆ ಕಳಾಧರಿಯೆಂದಳರಸಂಗೆ || ೧೭ ||

ಅರಸಿತಾ ಮಲಧಾರಿದೇವರ | ಚರಿಗೆ ನಿಲಿಸಲೆ ಬಂದಿಸಿರೆ ನಿ |
ನ್ನರಸನಾಗಲಿಯುಳ್ಳೊಡಾತ್ಮಜನಾಗಲೆಲೆ ಮಗಳೆ ||
ಚರಿಗೆ ನಿಲಿಸಲೆ ನಿಲ್ವೆವೆನುತವೆ | ಪರಸಿ ಬಿಜಯಂಗೈಯೆ ಚಿತ್ತೈ |
ಸರಸ ಚಿಂತಿಸಿ ಪುತ್ರದೋಹಳೆಯದಳೇ ಕುವರಿ || ೧೮ ||

ಎನೆಮನೋಹರಿ ಕೇಳ ನಿನ್ನೀ | ನೆನೆದ ಕಾರ್ಯವದೆನ್ನದದು ವೆಂ |
ತೆನೆ ಮಹೀ ಭಾರತದಲಿ ಬಳಲಿದ ತೊಳಪೊಱಿಯಾಪ ||
ತನಯನುದಯಿಪುದೆನ್ನ ಪುಣ್ಯವು | ನಿನಗೆ ಸಂತಸದೇಳ್ಗೆ ಇದ ನೆ |
ಟ್ಟನೆ ತಿಳಿದು ನಾಂ ಬಂದೆ ಚಿಂತಿಸಬೇಡ ಕೇಳೆಂದ || ೧೯ ||

ವಿಮಲಮತಿಗಳು ನಮ್ಮ ವಂಶೋ | ತ್ತಮರು ನೆರೆಯಷ್ಟಾಂಗ ಸುನಿಮಿ |
ತ್ತಮನೆ ಬಲ್ಲವರವರನಾ ಪೊಡವಟ್ಟು ಬೆಸಗೊಳಲು ||
ರಮಣಿಯಿನ್ನೈದನೆಯ ಭವದೊಳು | ಸಮವಶ್ರುತಿ ಪತಿ ನೇಮಿಜಿನನ |
ಪ್ಪಮಲನುದಯಿಪ ನಿನ್ನ ಗ ರ್ಭದೊಳೆಂದರೆಲೆ ಕಾಂತೆ || ೨೦ ||

ದೊಪ್ಪನವನಿಯ ಹೊಯ್ದ ಕೈಯದು | ತಪ್ಪಿದೊಡೆ ಬೆಟ್ಟೆಚ್ಚ ಕೋಲದು |
ತಪ್ಪಿದೊಡಮೇಂ ಜಿನಮುನಿಯ ನುಡಿ ತಪ್ಪುವುದೆಯಿಂದ ||
ಬಪ್ಪರಾ ಮಲಧಾರಿಗಳು ನಿಲ | ದಿಪ್ಪರೀ ತೆಱನಾಗಿ ನೀನಿಂ |
ದಿರ್ಪೆಯೆಂಬುದನಱಿಪಿ ತಿಳಿದಾಂ ಬಂದನೆಲೆ ರಮಣಿ || ೨೧ ||

ರಾಯನೊಳು ನುಡಿ ಮೊದಲೆ ಕಿವಿಗೆ ರ | ಸಾಯನವು ಬಳಿಕಾಕೆಗೀಸ್ತವ |
ನೀಯನುದಯಿಪನೆಂಬನುಡಿ ಕಿವಿಸೋಂಕದಾ ಮೊದಲೆ ||
ಮಾಯವಾದುದು ಮನದ ದುಗುಡವು | ಸೀಯನುಣ್ಬುವ ಕಬ್ಬು ಪಣ್ಗಳ
ತಾಯಿಗಂಪಿನ ಮರುಗ ಹೂಗಳ ತಳೆದ ತೆಱನಾಯ್ತು || ೨೨ ||

ಆಗಳಾ ವಧು ತನ್ನ ಸಂತಸ | ಸಾಗರದ ಪಾಲ್ದೆರೆಯನರಸನ |
ಮೇಗೆತುಳುಕಿದಳೆನೆ ವದನದರಹಾಸ ಚಂದ್ರಿಕೆಯ ||
ಹೂಗಣಿಯ ಹರವರಿಯನುಗುಳುವ | ಸೋಗೆಗಂಗಳ ಬೆಳಗ ಹಸರಿಸಿ |
ರಾಗರಸದೊಳು ಮೂಡಿಮುಳುಗಾಡಿದಳು ಜಿನದತ್ತೆ || ೨೩ ||

ಇತ್ತಲರುಹದ್ದಾಸ ಭೂವರ | ನೆತ್ತಿಕೊಂಡಷ್ಟಾಹ್ನಿಕವನಿಂ |
ತತ್ತಿಲಿಂದನ ಮಾಡಲಾಱನೆನಿಪ್ಪಮಹಿಮೆಗಳಿಂ ||
ತತ್ತದುಚಿತ ವಿಧಾನದಿಂ ಭ | ವ್ಯೋತ್ತಮರ ತಿಂಥಿಣಿಯೊಳಾ ಸುಚ |
ರಿತ್ತನಾ ಜಿನಪುಂಗವನ ಪಾದಗಳ ಪೂಜಿಸಿದ || ೨೪ ||

ಅರಸ ಕೇಳಾ ನೃಪನರಸಿ ಗುಣ | ಸರಸಿಯಯಿದುಂ ಶುದ್ಧಿಯಿಂ ಜಿನ |
ವರರ ಪೂಜಕದಿಂ ಕರೆದು ಕುಂಭಕದೆ ಪೀಠದೊಳು ||
ಇರಿಸಿ ಸಮ್ಮುಖಗೊಳಿಸಿ ನೀರಸ | ದುರುವಿಮಲ ತರುರಸದಿ ಗೋರಸ |
ಭರಿತದಿಂದಭಿಷೇಕಗಳ ಮುಂ ಮಾಡಿಸಿದ ಬಳಿಕ || ೨೫ ||

ದೆಸೆ ಕಿವುಡುಗೊಳೆ ಮೊಳಗೆ ವಾದ್ಯ | ಪ್ರಸರವಾ ಜಯಜಯ ನಿನಾದನೊ |
ಳೊಸೆದು ಕುಸುಮಾಂಜಳಿಗಱಿದು ಮಂತ್ರೋಚ್ಛಾರಣೆವೆರಸಿ ||
ಬಿಸರುಹುದ ಕಿಂಜಲ್ಕ ಪುಂಜದಿ | ಸಸಿಯ ಪುಡಿಯುಂ ಮಲಯಜದನೀ |
ರಸದೆಸೆವ ತೀರ್ಥಾಂಬುವಿಂದರ್ಚಿಸಿದಳರುಹನನು || ೨೬ ||

ಮಗಮಗಿಪ ಕರ್ಪೂರಕುಂಕುಮ | ದಗರು ಚಂದನ ಕರ್ದಮದಿ ಮೊ |
ಲ್ಲೆಗಳ ಮುಗುಳುಗಳೆನಿಪ ಕಳಮಾಕ್ಷತೆಯ ಪುಂಜಗಳಿಂ ||
ಸೊಗಯಿಪಂಬುಜ ಜಾಜಿ ಸೇವಂ | ತಿಗೆ ಸುರಯಿ ಕಲುಹಾರ ಹೊಂಗೇ |
ದಗೆಯ ಹೂವಿಂದರ್ಚಿಸಿದಳಾ ಭೂವರನಾ ರಾಣಿ || ೨೭ ||

ರಸಭರಿತ ಪಕ್ವಾನ್ನದಿಂ ಪಾ | ಯಸದಿ ಶಾಲ್ಯೋದನದಿ ಶಾಕ |
ಪ್ರಸರದಿಂ ತಿಳಿದುಪ್ಪ ಶರ್ಕರೆಯಿಂ ಮೆಱಿವ ಚರುವಿಂ ||
ದೆಸೆದೆಸೆಗೆ ಪಸರಿಸುವ ಪೊಸವೆಳೆ | ಗೆಸೆವ ಕರ್ಪುರ ದೀಪದಿಂ ಪೂ |
ಜಿಸಿದಳಾ ತೃಪ್ತನ ವಿಬೋಧ ಜ್ಯೋತಿಯಡಿಗಳನು || ೨೮ ||

ನೀಳರತ್ನದ ಘಟದಿರದೆ ಮುರಿ | ದೇಳೆದುಂಬಿಯ ಬಂಬಲನುಮಿಗೆ |
ಕೋಳುಗೊಂಡುಜ್ಜಳಿಪ ಕಂಪಿನಧೂಪಧೂಮಗಳಿಂ ||
ಬಾಳೆನೇ ಱಿಳು ಕೌಂಗು ಚೆಂದೆಂ | ಗೀಳೆ ಮಾದಲ ನಿಂಬಿಬಕ್ಕೆರ |
ಸಾಳ ಫಲದಿಂದಮೃತಫಲದಿಂ ಪದವನರ್ಚಿಪಳು || ೨೯ ||

ವಿಕಚನಂದ್ಯಾವರ್ತದಿಂ ಸ್ವ | ಸ್ತಿಕದಿ ದಧಿಯುಂ ವಾರಿಗಂಧಾ |
ಧಿಕದಿ ಶಾಢಲ ಶೋಭೆಯಿಂದುಜ್ಜಲಿಸುವರ್ಘ್ಯಗಳಿಂ ||
ಮುಕುರ ಮುಕ್ಕೊಡೆ ಕಳಸ ಚಾಮರ | ನಿಕರ ಮಣಿಮಯ ಮಂಗಳದಿ ತೀ |
ರ್ಥಕರ ಚಂದ್ರಪ್ರಭನ ಚರಣವನರ್ಚಿಸಿದಳೊಲಿದು || ೩೦ ||

ಶಾಂತಿಧಾರೆಯನಿತ್ತು ಕುಸುಮದ | ಸಂತತಿಯ ಸುರಿದೆಱಗಿ ನುತಿಯಿಸಿ |
ಸಂತಸದೆ ಜಪಗೈದು ಬಳಿಯಂ ಕೈಗಳನು ಮುಗಿದು ||
ಅಂತಕಾಂತಕ ಜಿನಪತಿಗೆ ಗುಣ | ವಂತೆ ರೇಚಕದಿಂದ ನೀಡುಂ |
ಚಿಂತಿಸಿದಳಂತ್ಯೋಪಚಾರವನರಸ ಕೇಳೆಂದ | ೩೧ ||

ನಾರಿ ಗುರುಪಂಚಕವನಿರೆ ಕ | ರ್ಯಾರೆ ಪೂಜಿಸಿ ಕಣ್ತಣಿಯೆ ಪೂ |
ಜಾರಚನೆಗಳ ನೋಡಿ ಸಂತಸದುಬ್ಬುತಿರೆ ಮನವು ||
ಅಂತಕಾಂತಕ ಜಿನಪತಿಗೆ ಗುಣ | ವಂತೆ ರೇಚಕದಿಂದ ನೀಡುಂ |
ಚಿಂತಿಸಿದಳಂತ್ಯೋಪಚಾರವನರಸ ಕೇಳೆಂದ || ೩೧ ||

ನಾರಿ ಗುರುಪಂಚಕವನಿರೆ ಕ | ರ್ಯಾರೆ ಪೂಜಿಸಿ ಕಣ್ತಣಿಯೆ ಪೂ |
ಜಾರಚನೆಗಳ ನೋಡಿ ಸಂತಸದುಬ್ಬುತಿರೆ ಮನವು ||
ಚಾರುಗುಣಿ ಜಿನದತ್ತೆ ಸುಖವಿ | ಸ್ತಾರಿಯಿಂತಿರುತಿರ್ದಳೀಪರಿ |
ಯಾರುಮಾರಾಧಿಸದೆ ಸೌಖ್ಯವು ಬಯಸಿದಡೆ ಬಹುದೆ || ೩೨ ||

ಮೃಗನಯನೆಗೊಂದುದಿನ ಮೊಗದೊಳು | ನೆಗೆದುದೊಪ್ಪುವ ಮೊಡವಿ ನಿಡುದೋ |
ಳುಗಳ ಮೊದಲೊಳು ಮಗಮಗಿಸಿದುದದೊಂದು ಪೊಸಗಂಪು ||
ಜಗದ ಹೆಂಗಳ ಮಾಣಿಕವು ಸಿರಿ | ಮಿಗುವ ಮಾಣಿಕಗಂಡಳೆಂಬುದ |
ಬಗೆದು ಸಖಿ ಸೆಳೆಗೊಟ್ಟಳಾಕೆಗದೇ ಕಳಾವಿದೆಯೊ || ೩೩ ||

ಮುಂಬಯಸಿ ಕೈಗೈದ ಸೊಬಗಿನ | ಕೆಂಬಲರ ಮೈವಚ್ಛೆ ಕೆಂಬಲು |
ತುಂಬುಗುಂಕುಮ ತಿವಿರು ಚೆಂದುಟಿಯುಟ್ಟರುಣವಸನ ||
ಕೆಂಬೆಳಗು ಗುಡೆ ರಾಗ ಸಿರಿನನೆ | ಯಂಬು ವಿಡಿದಂಜಿಸುವ ಬೆಡಗಿನ |
ತುಂಬು ಜವ್ವನೆ ನಾಲ್ಕು ನೀರನು ಮಿಂದಳೊಲವಿಂದ || ೩೪ ||

ತೊಳಪ ಮುತ್ತಿನ ಬೊಂಬೆನ ಱಿದಿಂ | ಗಳ ತಿರುಳ ಪುತ್ಥಳಿಯು ಮಿಂಚಿನ |
ಬೆಳಗು ನೆಲೆಮೈಯಾಂದುದೆಂಬ ಪೊಗಳೆದಿಂಬಾಗಿ ||
ಮಳಯಜದ ಮಲ್ಲಿಗೆಯ ಮುತ್ತಿನ | ತೆಳುದುಗುಲ ಸುಲಿಪಲ್ಲ ನಿಡುಗಂ |
ಗಳ ಬೆಳಗು ದೆಸೆಮುಸುಕುತಿರೆ ಕೈಗೆಯಿದಳಾರಾಣಿ || ೩೫ ||

ಕಾಂಚನದ ಸೆಳೆಮಂಚದೊಳುರಾ | ಯಂಚೆದುಪ್ಪುಳ ತಲ್ಪದೊಳು ಕುಡು |
ಮಿಂಚನುಗುಳುವ ಬಿಳಿಯ ವಸನದ ಬಿಗಿದು ಹಚ್ಚಿಡಿಸಿ |
ಸಂಚಳಿಪ ಪರಿಮಳದ ತುಂಬಿಗ | ಳಿಂಚರದ ಪಾರಿವದ ಪುರುಳಿಯ |
ನುಣ್ಚರದ ತಾಯ್ವನೆಯೆನಿಸಿದುದು ಸೆಜ್ಜೆವನೆಯೆಂದ || ೩೬ ||

ಅಂತು ಬೆಳುವಸದನವನಳ್ತಿಯೊ | ಳಾಂತು ಕಾಂತನ ಸೂಳೆವಂದಾ |
ಕಂತು ಕೇಳಿ ಸುಖಸುಧಾರಸ ಕಡಲೊಳೋಲಾಡೆ ||
ಕಾಂತೆಯೊಳು ವಸುಱಿಂಗೆ ಬಂದುದು | ಸಂತಸದ ಸುಸಮಾಧಿವಡೆದು ಸು
ಕಾಂತ ಚಿಂತಾಗತಿಚರೋತ್ತಮ ಹಂಸವತಿ ಜವದಿ || ೩೭ ||

ಸುಸಿಲನುಂಡು ಬಳಲ್ದು ಕಾಂತನೊ | ಳಸಿಯಳಿರೆ ಸುಖಸುಕ್ತಿಯಿಂ ಚೆಂ |
ಬಿಸಿಲಿನಂ ಪಾಲ್ಗಡಲನುರುಮದಗಜವನಿಬರಿಹವ ||
ಮಿಸುಪ ಸುರತರು ಪುಷ್ಪಮಾಲೆಯ | ನೆನೆವ ಸಿರಿಯನು ಕನಸಿನೊಳು ನಿ |
ಟ್ಟಿಸಿದಳಾ ಬೆಳಗಪ್ಪ ಜಾವದೊಳರಸನರ್ಧಾಂಗಿ || ೩೮ ||

ತಿಳಿದುದಾಕೆಯ ನಿದ್ರೆ ವರದೇ | ಗುಲದ ಸಂಖಥ ಶರಧಿಗಾಣಿಯ |
ರುಲಿವ ಮಂಗಳಗೀತನಾದದಿನೇಳ್ದು ತತ್ಕ್ರಿಯೆಯ ||
ತಳೆದು ಜಿನರಂ ಬಂದಿಸಿರೆ ನಿ | ರ್ಮಳನ ಸೇಸೆಯ ಗಂಧ ಜಲವನು |
ಘಳಿಲನಾಗ ಪುರೋಹಿತೋತ್ತಮ ತಂದನೊಲವಿಂದ || ೩೯ ||

ಆಗಳಾ ಜಿನದತ್ತೆ ಕಾಣುತೆ | ಬೇಗದಿದಿರೇಳ್ದಳ್ತಿಯಿಂ ತಲೆ |
ವಾಗಿ ಪಾವನ ಜಿನನ ಗಂಧೋದಕವ ಮಸ್ತಕದ ||
ಮೇಗೆ ತಳಿದಾ ಸೇಸೆಯನು ಚೆಲು | ವಾಗಿ ಮುಡಿದೊಲಿದಿತ್ತು ಗಂಧಮ |
ನಾ ಗುಣದ ಕಣಿ ಕಂಡ ಕನಸನು ಪೇಳ್ದಳಾತಂಗೆ || ೪೦ ||

ಕ್ರಮದಿ ಪೇಳ್ದುದ ಕೇಳ್ದು ತಿಳಿದಾ | ದ್ಯುಮಣಿ ತನ್ನಿಭ ತೇಜನಂಬುಧಿ |
ಸಮ ಗಭೀರ ಮದೇಭಸಮನುತದಾನಪತಿಹರಿಯ ||
ಸಮಪರಾಕ್ರಮಿ ಸುರತರೂದ್ಗಮ | ಸಮಲಲಿತ ತನ್ನ ಸನ್ನುತೆಯೆ ಸಿರಿ |
ಸಮ ಸುಭಾಗ್ಯನೆನಿಪ್ಪ ಕಂದನ ಪಡೆವೆ ನೀನೆಂದ || ೪೧ ||

ಈ ಹದದಿ ತತ್ಫಲವ ಪೇಳ್ದ ಪು | ರೋಹಿತಗೆ ಮಣಿಕುಂಡಳೋತ್ತಮ |
ಬಾಹುಪುರಿ ಮೊದಲಾದ ಭೂಷಣವಿತ್ತು ಬೀಳ್ಕೊಟ್ಟು ||
ಆ ಹರುಷದಿಂ ಜಿನರ ಪೂಜೋ | ತ್ಸಾಹದಿಂದ ನೆಱದಿರೆ ಇರಲು ಬಳಿ |
ಕಾಹಿಮಾಂಶುನಿಭಾಸ್ಯೆಗಾದದು ಗರ್ಭದುರ್ಬರವ || ೪೨ ||

ಬೆಳೆಬೆಳೆಯೆ ಮೊಲೆಗಂಡು ಪುರುಡಿಸಿ | ಬೆಳೆದುದೆನೆ ನಡು ಬೆಳೆಯೆ ತಾವು |
ಮ್ಮಳಿಸಿ ಮೊಗದೊಳು ಕಂದನಾಂತವೊ ನೆರೆಗಱುವತನದಿ ||
ಲಲನೆ ತನುಜಾಲಾಭದಿಂ ಮುಂ | ತಳೆದೆದೆಯ ಕಂದೊಡುವೆಡೆಯೆನಲು |
ಕಳೆದುದಾಕೆಯ ಕುಂಚ…….ನೀಳಮಣಿರುಚಿಯ || ೪೩ ||

ಕಾಂತನಾಯಕಮಣಿಯಲೀಲೆಯ | ನಾಂತ ಹಾರದ ಭಾವದೇಳ್ಗೆಯ |
ನಾಂತಕಾವ್ಯದ ತತ್ತ್ವ ನಿಶ್ಚಯವಾಂತ ನುತಮತಿಯ ||
ಅಂತಗರ್ಭವನಾಂತು ವರಜಿನ | ಕಾಂತ ಪೂಜಾದಾನ ಶಾಸ್ತ್ರದ |
ಚಿಂತನೆಯ ಬಯಕೆಯನೆ ಸಲಿಸುತಲಿರ್ದು ಶುಭದಿನದಿ || ೪೪ ||

ತುಂಬೆ ನವಮಾಸವು ಸುರತ್ನದ | ಬೊಂಬೆ ಚಿಂತಾಮಣಿಯ ಕನ್ನಡಿ |
ತುಂಬುದಿಂಗಳಲತೆನಮೇರುವ ದೀಪಭಾನುವನು ||
ತಾಂಬಯಸಿ ಪಡೆದಂತೆ ಪಡೆದಳ | ಳಂಬವೆಸೆವ ಸುಲಕ್ಷಣಾಂಗನ |
ನಂಬುಜಾನನೆ ಪುತ್ರನನು ಸತ್ಕುಲ ಪವಿತ್ರನನು || ೪೫ ||

ಜಾತಕರ್ಮೋತ್ಸವವ ವಿಭವಸ | ಮೇತವರುಹದ್ದಾಸನಾಗಿಸಿ |
ಭೂತಳವನಿಷ್ಟಾರ್ಥದಾನದಿ ತೃಪ್ತಿ ವಡೆಸಿರ್ದು ||
ವೀತರಾಗ ಸಮಾರ್ಚನೆಗಳನು | ಪ್ರೀತಿಯಿಂ ಮಾಡಿಸಿ ಕರಂ ವಿ ||
ಖ್ಯಾತಿಪರಾಜಿತನೆನಿಪ ಪೆಸರಿಟ್ಟನಾತ್ಮಜಗೆ || ೪೬ ||

|| ಅಂತು ಸಂಧಿ ೩ ಕ್ಕಂ ಮಂಗಲಮಹಾ ||