ಸಂಧಿ ೩೨

ನೇಮಿ ಜಿನಗಭಾರ್ವ ತರಣೋದ್ಧಾಮ ಕಲ್ಯಾಣವನೊಲಿದು ಸು |
ತ್ರಾಮನಾಗಿಸಿ ಧನ್ಯನಾದನು ಭವ್ಯ ಬಾಂಧವನು || ಪಲ್ಲ ||

ಶ್ರೀ ಸಮುದ್ರ ವಿಜಯ ನರಾಧಿಪ | ನೇಸು ಪುಣ್ಯವ ಮಾಡಿದನೊ ಕುಸು |
ಮೇಶುವೇ ಮೊಮ್ಮಗನು ತನಗೆ ಬಲಾಚ್ಚುತರ ಜನಕ ||
ಲೇಸೊಗೆದ ಕಿರುದಮ್ಮ ತ್ರಿಜಗಾ | ಧೀಶ ನೇಮಿಯೆ ತನ್ನ ರಾಣೀ |
ವಾಸ ಗರ್ಭ ನಿವಾಸಿಯಹನೆನೆಲೇನ ಹೇಳುವೆನು || ೧ ||

ಕೇಳು ಶ್ರೇಣಿಕ ಮಂಡಳೇಶ್ವರ | ಹೇಳುವೆನು ಸುರತಿಂಥಿಣಿಗಳ ವಿ |
ಶಾಲತೆಯ ತಳೆದುರುಪು ಧರ್ಮಸಭೆಯಲಿ ನವರತುನ ||
ಮೇಳಿಸಿದ ಸಿಂಹಾಸನಸ್ಥಿತ | ನಾಳಿಸಿದ ವೈಭವದಿ ಸುಭಗುಣ |
ಶೀಲನಮರಾಧೀಶನಿರೆ ನಿಜಪೀಠ ಕಂಪಿಸಿತು || ೨ ||

ಅವಧಿಬೋಧದಿನರಿದು ತದ್ಭೂ | ಧವನ ರಾಣಿಯ ಗರ್ಭದೊಳಗುದು ||
ಭವಿಪ – ನಿನ್ನಿರುದಿಂಗಳಿಗೆ ಜಿನನೆಂದಲೇ ಧನದ ||
ಅವನಿಪನ ಭವನಾಂಗಣಕೆ ಮೂ | ರುವರೆ ಕೋಟಿಸುವಸುವ ತ್ರೈಕಾ |
ಲ್ಯವು ಕರೆಯಿ ಪದಿನೈದು ತಿಂಗಳುಯೆಂದು ನೇಮಿಸಿದ || ೩ ||

ಹಾಲು ಮದ್ದಾದವೊಲು ಭಕ್ತಿಯ | ಲೀಲೆಯುಳ್ಳ ಕುಬೇರನಿಂದ್ರನೆ |
ಪೇಳೆ ಮಿಗೆ ವಸುಧಾರೆಗರೆದದರಿಂದ ವಸುಮತಿಯು ||
ಭೂಲಲನೆಗಾ ರತ್ನಗರ್ಭೆಯು | ಮೇಲೆನಿಸಿದಾ ಪೆಸರೆರಡು ಸ |
ಮ್ಮೇಳವಾಯ್ತಾಶ್ಚರ್ಯ ಪಂಚಕವಾ ಪೊಳಲೊಳಂದು || ೪ ||

ದಿವಿಜಪತಿ ಬೆಸಸಿದಡೆ ಪಾವನ | ದಿವಿಜಗಂಗಾ ಮುಖ್ಯ ತೀರ್ಥಾಂ |
ಬುವನಮಲಮಣಿಕೋಟಿ ಘಟದಲಿ ತಂದುತತ್ಪುರಿಗೆ ||
ಸವೆದು ಮಜ್ಜನ ಮಂದಿರದೊಳೊ | ಪ್ಪುವ ಮಿಸುನಿಗೊಪ್ಪರಿಗೆ ದುಂಬಿವಿ |
ಭವದಿ ದೇವಸ್ತ್ರೀಯರಾ ಮಣಿಮಯದ ಪೀಠದಲಿ || ೫ ||

ಇರಿಸಿ ಶಿವದೇವಿಯರನಾ ಭೂ | ವರನನಮರಾಂಗನೆಯರತಿ ನಿ |
ರ್ಭರ ಸುಭಕ್ತಿಯಲಮರ ಸಮಿತಿಯ ಜಯಜಯಾರವದಿ ||
ಸುರರ ವಿವಿಧಾತೋದ್ಯರವದಿಂ | ಧರೆಯ ಮಂಗಳ ಮಜ್ಜನವಿದು |
ಚ್ಚರಿಯೆನಲು ಮಾಡಿಸಿದರೆಲೆ ಭೂಪಾಲ ಕೇಳೆಂದ || ೬ ||

ಸುರ ನಿವಾಸದ ದಿವ್ಯ | ವಸ್ತ್ರಾ | ಭರಣಕುಸುಮ ವಿಲೇಪನದಿ ಆ |
ಚ್ಚರಸೆಯರೆ ಪೂಜಿಸೆ ಅವರ ಮಂಗಲ ಸುಗೀತಗಳ ||
ಸುರಗಣಿಕೆಯರು ಮಾಡಿ ಇಪ್ಪ | ತ್ತೆರಡನೆಯ ತೀರ್ಥೇಶ್ವರನ ಪಡೆ |
ವುರು ಮಹಿಮೆರಿಗೆ ಮಂಗಳಾರತಿಯೆತ್ತಿದರು ನಲಿದು || ೭ ||

ಹರುಷದಲಿ ಶಿವದೇವಿಯೆನಲಂ | ಕರಿಸಿ ನಿಚ್ಚಲುಮೆಂದು ಹೇಮ |
ದ್ಗಿರಿಯು ಮೊದಲದಮಲ ಕುಲಗಿರಿಮಸ್ತಕದಲೆಸೆವ ||
ಸರಸಿ ಪದ್ಮಾದಿಗಳೊಳಿರುತಿಹ | ಸಿರಿಯ ಹ್ರೀ ಧೃತಿ ಕೀರ್ತಿ ಬುದ್ಧಿ | ಸ
ಸ್ಫುರಿತ ಲಕ್ಷ್ಮಿಗಳೆಂಬರುವರಮರಿಯರ ಬೆಸಸಿದನು || ೮ ||

ಮಿಸುಪ ರುಚಕಾಚಲದ ಕೃತ್ರಿಮ | ವಸತಿ ಪೂರ್ವ ದಿಶಾಷ್ಟಕೂಟದ |
ಲೆಸೆವ ವಿಜಯೆ ಸುವೈಜಯಂತೆ ಮೊದಲಾದ ||
ಪೆಸರ ದಿಗ್ವನಿತೆಯರನೆಣ್ಬರ | ಬೆಸವಿದನು ಜಗದಂಬಿಕೆಗೆ ರಾ |
ಜಿಸುವ ಭೃಂಗಾರವನು ಪಿಡಿದಿರಿಯೆಂದು ದಿವಿಜೇಂದ್ರ || ೯ ||

ಆ ಗಿರಿಯ ತೆಂಕಣದಿಸೆಯಲಿಂ | ಬಾಗಿವೆರೆಮೆರೆವೆಂಟು ಕೂಟದ |
ಲಾಗಲೊಪ್ಪುವ ಸುಪ್ರತಿಷ್ಠೆಯು ಸುಪ್ರಣಿಧಿಮುಖ್ಯ ||
ಸಾಗಿಸಿರ್ದ ದಿಗಂಗನಾಷ್ಟಕ | ವಾಗುಣೋನ್ನತೆಗೊಲಿದುಮಿಗೆ ಚೆಲು |
ವಾಗಿ ಮಂಗಲ ಮಣಿಮುಕುರವಿಡಿವೂಳಿಗವನಿತ್ತ || ೧೦ ||

ಬಳಿಯನಾ ಪರ್ವತದ ಪಡುವಣ | ಹೊಳೆವ ಮಣಿಕೂಟಾಷ್ಟಕದಲು |
ಜ್ವಳಿಪಿಳಾ ದೇವಿಯು ಸುರಾದೇವಿಯನು ಜಯ [ಕಾ ದಿ] ||
ಲಲಿತದಿಕ್ಕುವರಿಯನೆಣ್ಬರ | ನೊಲಿದು ತ್ರಿಜಗನ್ಮಂಗಳಗೆ ಮಂ |
ಗಳವ ಪಾಡುವ ಗಾಯಕಿಯರಾಗೆಂದು ನೇಮಿಸಿದ || ೧೧ ||

ವಿನುತ ತದ್ಗಿರಿಯುತ್ತರದ ದಿ | ಕ್ಕಿನ ರತುನಕೂಟಾಷ್ಟಕದಲನು |
ದಿನವೆ ಮೆರೆವಂಭೂಷೆಮತ್ತಾ ಮಿತ್ರಕೇಶಿಕೆಯು ||
ಎನಿಪ ದಿಗ್ಭಾಮಿನಿಯರನು ತ | ಜ್ಜಿನ ಜನನಿಗುತ್ಸವದಿ ಚಾಮರ |
ವನು ನಿಯೋಗಿಸೆಯೆಂದು ಶಕ್ರನು ನೇಮಿಸಿದನಂದು || ೧೨ ||

ಮತ್ತದರ ಪೂರ್ವೋತ್ತರದಲಿಹ | ಚಿತ್ರೆಕಾಂಚನ ಚೇತ್ರೆ ತ್ರಿಸರೆ ಗು |
ಣೋತ್ತ ಸುತ್ರಾಮಣಿಯೆನಿಸುವವಿದಿಕ್ಕುಮಾರಿಯರ ||
ಪೆತ್ತ ಹರಿಕುಲಶರಧಿ ಶಶಿಕರೆ | ಗೊತ್ತರಿಸಿ ಮಣಿದೀಪದಾರತಿ |
ಯೆತ್ತಿಯೆಂದು ನಿಯೋಜಿಸದನಾ ದೇವವಲ್ಲಭನು || ೧೩ ||

ತದವನಿದ್ರದ ತೆಂಕಪಡುವೊ | ಪ್ಪಿದ ಚತುಷ್ಕೂಟದ ವಿಜಯೆ ಆ |
ಪದದ ವಿಜಯಂತೆಯು ಜಯಂತಪರಾಜಿತೆಯುಮೆಂಬ ||
ವಿದಿಗಧೀಶ್ವರಿಯರನು ಸುಗುಣಾ | ಸ್ಪದೆಗಮಮಳಿನ ಗರ್ಭಶೋಧನೆ |
ಮೊದಲೆನಿಪ ತದ್ಗೂಢಕಾರ್ಯವ ನೆಸಗಲಿರಿಸಿದನು || ೧೪ ||

ಉಳಿದ ಗಿರಿಗಳೊಳಿಪ್ಪ ಮಾಳಿಕೆ | ಪೊಳೆವ ಮಾಳಿನಿ ಕನಕೆ ಮೊದಲಹ |
ಪಲವು ದೇವತೆಯರನು ಪುಣ್ಯದ ಪುಂಜಭೂಮಿಕೆಗೆ ||
ಜಳಕವನು ಲೇಪನ ವಿಭೂಷಣ | ವಿಳಸದಮೃತಾಹಾರ ಮೊದಲಹ |
ಹಲವು ಸೇವೆಗೆ ಯೋಜಿಸಲು ನೆರೆತಂದುದೋರಂತೆ || ೧೫ ||

ಥಳಥಳಿಪ ನಗೆಮೊಗದ ಬೆಳಗಿನ | ಬೆಳಪ ಜೊನ್ನವ ಹಸರಿಸುತ ನಿ |
ರ್ಮಲಿಪ ಭೂಷಣಕಾಂತಿಯಿಂ ಪಸರಿಸುತ ಸುರಧನುವ ||
ತೊಳಪ ಕಂಬೆಳಗಿಂದ ನೈದಿಲ | ಬಳಗವನು ನಾಲಿಡುತ ನೋಳ್ಪರ |
ಬೆಳೆದ ಕಂಗಳ ಹಬ್ಬವೆನೆಲಮರಿಯರು ಸೊಗಯಿಪರು || ೧೬ ||

ಅಡಿಯನೂಡದೆ ಕೆಚ್ಚನಿಹ ಕೇ | ಸಡಿಗಳೊತ್ತದೆ ನಿರಿವಿಡಿದ ಕುರು |
ಳಡಿದೆಸೆವದಸಿದಾಗಿ ಕೊಂಕಿದ ನಿಡಿಯ ಪುರ್ವುಗಳು ||
ಪೊಡರ್ವ ಕಜ್ಜಳ ವೆಚ್ಚದಸಿತ | ವಡೆದದಿಟ್ಟಿಗಳೊಪ್ಪೆ ಅನಿಮಿಷ |
ಮಡದಿಯರು ಕೆಲಸಕ್ಕೆ ಬಂದರದೊಂದು ಬೆಡಗಾಗಿ || ೧೭ ||

ಸುರಿವ ರತ್ನದ ದೃಷ್ಟಿಯೊಡನ | ಚ್ಚರಿಯಲೀ ಸ್ತ್ರೀರತ್ನ ವೃಷ್ಟಿಯೆ |
ಸುರಿದುದೆನೆ ನಭದಿಂದ ದೇವಸ್ತ್ರೀ ಕದಂಬಕವು ||
ಪರಿಪರಿಯ ಸಿಂಗಾರದಲಿ ನೋ | ಳ್ಪರ ಬಗೆಯನಿರ್ಕುಳಿಗೊಳುತ ಕೇ |
ಳ್ಪರ ಕಿವಿಗೆ ವಾಕ್ಸುಧೆಯ ಪಿಂಡುತ ಬಂದರರಮನೆಗೆ || ೧೮ ||

ಪುರವ ವರತನು ಸಹಜಗಂಧದಿ | ಪರಿಮಲದ ಕರಡಗೆವೊಲಾದುದು |
ನೆರೆದ ಪರಮೆಯ ಹಿಂಸು ನೀಲದ ಮುಚ್ಚಳಿನಿಸಿದುದು ||
ನೆರವನಿತೆಯರ ಕಾಣಿವೀನೃಪ | ನರಮನೆಯಲೆನೆ ಮಿಗೆ ಸುರಸ್ತ್ರೀ |
ಯರೆ ಜಗನ್ಮಾತೆಯನು ಭಕುತಿಯಲೆರಗಿ ಬಳಸಿದರು || ೧೯ ||

ಬಳಿಕ ನೀಲ ಸುರತ್ನದಂಗಳ | ದೊಳು ಕಮಲ ಪುಷ್ಪೋಪಹಾರವ |
ಸಲಿಸಿ ತಂತಮ್ಮಯ ನಿಯೋಗದಿನಿಸುವೆ ಸೊಕ್ಕದವೆ ||
ನಳಿನವಧುಲಕ್ಷ್ಮಿಯ ಕರದಲಿಹ | ವಿಳಸನವ – ನಿಳಿಪುತ್ತೆ ಮುತ್ತಿನ |
ಥಳಥಳಿಪ ಸತ್ತಿಗೆಯ ಪಿಡಿದಳು ದೇವಿಗಮರವಧು || ೨೦ ||

ಪರಮ ಭಾಗ್ಯೆಯ ಪುಣ್ಯಶರಧಿಯ | ತೆರೆಗಲೆನೆ ಚಾಮರಗಳಿರದಿ |
ತ್ತರದಲಾಡಿದ ವಮರಿಯರ ಕಂಕಣ ಝಣತ್ಕೃತಿಯಿಂ |
ದರಹಸಿತ ವದನಕ್ಕೆ ತಿಂಗಳ | ತಿರುಳ ತುಂಡನೆ ಪೊಳವುತಿರೆ ಸುರ |
ತರುಣಿಯೊಳು ಬೆಳ್ಳೆಲೆಯನು [ರು ಸಂತಸದಿ] ನೀಡಿದಳು || ೨೧ ||

ಅನುಪಮೆಯ ಮುಖಕಮಲಕೆಣೆಗಡ | ವನಜವೆಂದದ ತೋರ್ವವೊಲು ಕಾಂ |
ಚನದಡವಕೆಯ ಪಿಡಿದಳಾ ನಗೆಮೊಗದ ಕೆಳೆಗೋರ್ವ ||
ಅನಿಮಿಷಾಂಗನೆ ಮತ್ತಮಾಜಿನ | ಜನನಿಯಾನನ ಶಶಿಗೆ ನೆರೆ ಶಶಿ |
ಅನುನಯಕೆ ಬಂದಂತೆ ತೋರಿದಳಮರಿ ದರ್ಪಣವ || ೨೨ ||

ದೇವಕಾಮಿನಿಯೋರ್ವಳಾ ಶಿವ | ದೇವಿ ಯಕ್ಷಗೆ ಕಜ್ಜಳವ ಪರಿ |
ಭಾವಿಸಿದ ನಿಡುಸೋಗೆಧೃಗುಪುತ್ರಿಕೆಯ ಸೋರ್ಮುಡಿಯ ||
ಭಾವವಾಗಿರೆ ಕರ್ಬುವಿಲ್ಗಳ | ನೇವರಿಪವೊಲು ಮತ್ತಲೋರ್ವಳು |
ದೇವಿ ಕುಡುವುರ್ವುಗಳ ತಿದ್ದಿದಳೊಂದು ಸೊಬಗಿನಲಿ || ೨೩ ||

ಮೊಗಸಸಿಗೆ ಮೃಗಲಾಂಛನದ ಚೆಲು | ವೊಗೆಯೆ ರಚಿಸುವ ತೆರದಿ ಬರೆದಳು |
ಮೃಗ ಮದದಿ ಕದಪಿನಲದೋರ್ವಳು ಪತ್ರಭಂಗವನು ||
ಸುಗುಣೆರನ್ನೆಯ ವಕ್ತ್ರ ಚಂದ್ರನ | ನಗಲದೊಲಗೀಸಲ್ಕೆ ವಂದಾ |
ಭಗಣಗಣವೆನೆ ಮುತ್ತಿನೋಲೆಯನಿಟ್ಟಳೋರ್ವಮರಿ || ೨೪ ||

ಹಾರವಿದು ನೀಹಾರ ಕೀರ್ತಿಗೆ | ಹಾರವಾಗಿದೆಯೆಂದು ಪೊಗಳ್ದಾ |
ಹಾರವಧಿ ಹಾರವನು ಅಮೃತಾಹಾರೆಯುರದೆಡೆಗೆ |
ಸೇರಿಸಿದಳ ಸ್ವಪ್ನವದು ಬಳಿ | ಕಾರಮಣಿಯರು ತಮತಮಗೆ ಕೈ |
ಯಾರೆ ನಾಕದ ರನ್ನದೊಡವನು ತೊಡಿಸಿದರು ನಲಿದು || ೨೫ ||

ನಿರಿವಿಡಿದು ದಿವ್ಯಾಂಬರವನಾ | ಯೆರೆಗಳಿಗೆ ತಾವುದಿಸಿ ಈ ಸತಿ |
ನಿರಿಯ ಹೋತುದೆ ಸಫಲವೆಂದರು ಯಕ್ಷಕರ್ದಮವ ||
ಮೆರೆಯೆ ವಿರಚಿಸಿ ಪರಮೆನೆರೆಪರಿ | ದೆರಪ ಸುರತರು ಕುಸುಮದಾಮಮ |
ತರುಬಿದರು ನೋಡಿದರು ಕೊಂಡಾಡಿದರು ಚೆಲುವಿಕೆಯ || ೨೬ ||

ಅಂಗರಕ್ಷೆಯ ದೇವಿಯರು ಪಲ | ವಂಗದಾಯುಧಗಳ ಹಿಡಿದ ವಿಮ |
ಲಾಂಗಿಯನು ಬಳಸಿದರು ಕಟ್ಟಿಗೆವಿಡಿದು ಓಲಗದ ||
ಅಂಗನೆಯರನು ಪಡಿಯರತಿಯರು | ಸಂಗೊಳಿಸಿ ಜಡಿಕೆಯಿದು ನಿಲಿಸಿದ |
ರಿಂಗೊರಳನುಣ್ಚರದಿ ಹೋಹೋ ಗಲಭೆ ಬೇಡೆಂದು || ೨೭ ||

ತೊಳಪ ವೀಣೆಯನಚ್ಚರಿಸಿಯೋ | ರ್ವಳು ಪಿಡಿದು ಬಾಜಿಸಲು ದಂಡಿಗ |
ತಳಿತುದೋಯೆನಿಸಿದುದು ಕೆಂದಳದೊಂದು ಕೆಂಪಿನಲಿ ||
ಬಳಸಿದೋಲಗದೊಳಗೆ ಅಮರ್ದಿನ | ಸಳಿ ಸುರಿದುದೆನೆ ರಾಗರಸ ಪೊಂ |
ಪುಳಿವೊಡೆದುದಾಯೆಂದು ದೇವಿಯು ಮೆಚ್ಚುವಂದದಲಿ || ೨೮ ||

ಕಾಂಚನವೆ ಪರಿಮಳಿಸಿತೆಂಬವೊ | ಲಿಂಚರದಿ ಸಂಗೀತ ರಸದಲಿ |
ಮಿಂಚು ಕವಿಗಳ ಪಲವು ರಸಗಬ್ಬವನು ಗಮಕದಲಿ ||
ಉಂಚದಲಿ ಮೆರೆದೋದಿ ಮಿಗೆ ರೋ | ಮಾಂಚನದ ದೇವಿಗೆ ಪಡೆದಳವ |
ಳೇಂ ಚದುರೆಯೋ ದೇವಪಾಠಕ ಸಭೆಯನೊಲಿಸಿದಳು || ೨೯ ||

ಅಚ್ಚರಿಸಿ ಚಿತ್ತೈಸೆನುತಲಾ | ಅಚ್ಚರಸಿಯರ ಮೇಳದಲಿ ಸುರ |
ನಚ್ಚಣಿಯು ಭೂಮಿಯನು ಮೆಟ್ಟದೆ ಮೆಟ್ಟುತಿರೆಜತಿಗೆ ||
ಇಚ್ಚಿಸುವರಚ್ಚಿಗಳ ಮೋಹದ | ಮಚ್ಚುಮದೊಡ್ಡಲಿಟ್ಟುದೆನೆ ಸತಿ |
ಮೆಚ್ಚಿ ಸಭೆಯಿಚ್ಛೈಸೆ ನಚ್ಚಿಸಿದಳು ಮನೋಹರದಿ || ೨೯ ||

ಅಚ್ಚರಿಸಿ ಚಿತ್ತೈಸೆನುತಲಾ | ಅಚ್ಚರಸಿಯರ ಮೇಳದಲಿ ಸುರ |
ನಚ್ಚಣಿಯು ಭೂಮಿಯನು ಮೆಟ್ಟದೆ ಮೆಟ್ಟುತಿರೆಜತಿಗೆ ||
ಇಚ್ಚಿಸುವರಚ್ಚಿಗಳ ಮೋಹದ | ಮಚ್ಚುಮದೊಡ್ಡಲಿಟ್ಟುದೆನೆ ಸತಿ |
ಮೆಚ್ಚಿ ಸಭೆಯಿಚ್ಛೈಸೆ ನಚ್ಚಿಸಿದಳು ಮನೋಹರದಿ || ೩೦ ||

ಭೂನುತೆಯ ಅವಸರವರಿದು ತಾಂ | ಸ್ನಾನವನು ಮಾಡಿಸುವ ಮರ್ದಿನ |
ಬೋನವನು ಸವೆವರ್ತಿಯಿಂದೆಡೆ ಮಾಡುವುಣಲಿಡುವ ||
ಏನು ಬೆಸನೆಂಬೊಯ್ಯನತಿ ಸುಯಿ | ಧಾನದಲಿ ಕೈಗೊಡುವ ಬಗೆ ಸಂ |
ಧಾನದಿಸುವೆಸಮುಪ್ಪಿದುದು ಸುರರಮಣಿಯೊಳರಂದು || ೩೧ ||

ಪಡಿಗವಿರಿಸುವ ಹಾವುಗೆಯ ಮೆ | ಲ್ಲಡಿಗಿಡುವ ಮಣಿಮಂಚವನು ಹ |
ಚ್ಚಡಿಪ ಪಾದವನೊತ್ತುವುಯ್ಯಲ ತೂಗುವೊರಗಿಸುವ ||
ಮುಡಿಯ ಹಿಕ್ಕುವ ಮಾಲೆಗಟ್ಟುವ | ಮಡಿವಳತಿವೊಲು ಸತಿಗೆ ಸಗ್ಗದ |
ಮಡಿಯ ನಡಯಿಸು ಈಸು ವ್ಯಸನೆಯೆವೆದೆರೆ ಹೆಂಗಳಲಿ || ೩೨ ||

ಕತ್ತುರಿಯ ಕೆಸರಿನಲಿ ಸಾರಿಸಿ | ಮುತ್ತಿನಲಿ ಕಡೆಯಿಕ್ಕಿ ಧೂಪವ |
ನೆತ್ತಿ ಸುರಕುಜ ಕುಸುಮದಲಿ ಪೂವಲಿಗೆದರಿಯಿತ್ತ ||
ಅತ್ತಲರುಹನ ಪೂಜೆಗಾಕೆಯ | ಚಿತ್ತವರಿದೆಡೆಮಾಡಿ ಸಂತಸ |
ವೊತ್ತರಿಸಿ ಕಂಣರಿದು ಸೇವೆಯ ಮಾಳ್ಪರಮರಿಯರು || ೩೩ ||

ಜಿನಜನನಿ ನೋಂತಂತೆ ನೋಂತಾ | ವನಿತೆ ಯಾವಳೊ ಸೇವಕಿಯರಾ |
ಅನಿಮಿಷಾಂಗನೆಯರು ಸುಧಾಶನ ಸಾರಭೂಜವನು ||
ಅನುದಿನವು ವಸ್ತ್ರಾಭರಣ ಲೇ | ಪನಕುಸುಮವುಡತೊಡಲು ಪೊನಲು |
ತನಗೆ ಸೂಡಲು ದಿವದಿ ಬಹವೆನಲೇನ ಹೇಳುವೆನು || ೩೪ ||

ಅಲಸದಿಂತರುದಿಂಗಳನು ಮೀ | ಲಲನೆಯರು ಶಿವದೇವಿಯನು ತಾಂ |
ತೊಲಗದತಿಭಕ್ತಿಯಲಿ ಸೇವೆಯ ಮಾಡುತಿರಲೊಡನೆ ||
ಸಲೆ ಜಿನಾರ್ಭಕನದ ತರಿಸುವೊಡೆ | ನೆಲೆವಡುವುದೆಂಬೊಂದು ಕಾಲದೋ |
ಳೊಲಿದಮರತರ ಗರ್ಭ ಶೋಧನೆಯೌಷಧಿಗಳಿಂದ || ೩೫ ||

ತಿಳಿಯೆ ಗರ್ಭವ ಶೋಧಿಸಿದರಾ | ಲಲನೆಯರು ಬಳಿಕಾ ಜಿನಾಂಬಿಕೆ |
ಪೊಳೆವ ಪುಣ್ಯದ ಪುಂಜವೆನೆ ತೊಳ ತೊಳಗಿ ಬೆಳಗಿದರು ||
ತಿಳಿದ ತನಿವಾಲಿನಲಿ ಮಿಗೆ ನಿ | ರ್ಮಳಿಸಿತೊಳೆದಾ ಮೌಕ್ತಿಕದ ಪು |
ತ್ಥಳಿಯೆನಿಸಿದಳು ಪಾವನೋದರಿ ತನುವೆಳಗಿನಿಂದ || ೩೬ ||

ಶರಧಿ ರತ್ನವನಾಂತು ರತ್ನಾ | ಕರವೆನಿಸಿದಂತಾ ಮಹಾತ್ಮನೆ |
ಪೊರೆವನೆಮಗಮ್ಮಿಂದ ಧನ್ಯನದಾರೆನುತ ನಲಿದು ||
ಶರಧಿ ವಿಜಯ ನೃಪಾನ ಭೂನುತ | ನರಸಿ ಶಿವದೇವಿಯರು ಸುಖದಿಂ |
ದಿರಲೊಡನೆ ಮತ್ತೊಂದು ದಿನ ಭೂಪಾಲ ಕೇಳೆಂದ || ೩೭ ||

ನಳನಳಿಪ ನವ ಚೂತಲತಿಕೆಗೆ | ಫಲಕೆ ಕಾರಣಮಾದ ಋತು ನಿ |
ರ್ಮಲ ವಸಂತವು ಸಾರ್ವವೊಲು ಋತುಸಮಯ ಸಾರಿದುದು ||
ಲಲನೆ ಮಾಣಿಕ ಗಂಡಳೆಂದತಿ | ಬಳೆದರಾಗದಿ ತಮತಮಗೆ ಕನ |
ಸಳಿದ ಮಡದಿಯರಳ್ತ ಬಡುವರು ಭೂಪ ಕೇಳೆಂದ || ೩೮ ||

ತರುಣಿರತ್ನ ಚತುರ್ಥದಿನದೊಳು | ಸುರಸತಿಯರೊಡನೆಂದಿನಂದದಿ |
ಪರಿಮಳಿತ ಪಾವನ ಜಲದ ಹೊಂಗೊಪ್ಪರಿಗೆಗಳಲಿ ||
ಅರೆದ ಕಮ್ಮನೆ [ಸುವಾಸನೆ]ಯಲಿ | ಮೆರೆವ ಮಜ್ಜನಶಾಲೆಯನು ಸೌಂ |
ದರಿ ಸಮೇಳದಿ ಪೊಕ್ಕು ರನ್ನದ ಮಣೆಯಲಿರಲೊಡನೆ || ೩೯ ||

ಪರಿಪರಿಯ ಕಮ್ಮೆಣ್ಣೆಯನು ಅ | ಚ್ಚರಸೆಯರು ತೆಗೆತಂದು ತಮ್ಮೊಳು |
ನಿರಿಯನುರೆ ಸಂವರಿಸಿ ಕಾಂಚಿಯಬಿಗಿದು ಸಿರಿಮುಡಿಯ ||
ಕುರುಳುಗಳು ಕುಣಿದಾಡೆ ಪೆರ್ಮೊಲೆ | ಯುರವಣಿಸೆ ಪಾಲಿಕೆಯಲುಗೆ ತೋ |
ಳೆರಡೊಲೆಯೆ ತಲೆ ಪೂಸಿದರು ಶಿವದೇವಿಗೊಲವಿನಲಿ || ೪೦ ||

ಸಿರಿಗೆ ಕರಿಗಳು ಪೊಂಗೊಡಂಗಳೊ | ಳಿರದೆ ಮಜ್ಜನಕೆರೆವವೊಲು ಸೌಂ |
ದರಿಗೆ ಪೊಂಗಳಸಗಳ ಪರಿಮಲ ಜಲವನನವರಿದು ||
ಹರುಷದಲಿ ಮಜ್ಜನಗೊಳಿಸಿದರು | ಸಿರಿಮುಡಿಯ ಹಿಂ[ಬದಿಗೆ ಬಿ]ಡಿಸಿದ |
ರಿರಿಸಿದರು ಮಣಿ ಪಾದುಕಂಗಳನರಸ ಕೇಳೆಂದ || ೪೧ ||

ಇರೆ ನೆನೆದ ನಿಡುಗೇಶ ಭಾರವ | ಮುರಿದು ನೆಗೆದಡೆಗೈವಿಡಿದು ಮಿಗೆ |
ಗುರುಕುಚಂಗಳು ನೂಂಕುವಂಶುಕವವುಂಕಿಕಕ್ಷದಲಿ ||
ಸುರತರುಣಿ ಕೈಗೊಡಲು ಬಲಗೈ | ಇರಿಸಿ ಮಣಿವಾವುಗೆಯ ಗೆಜ್ಜೆಯೆ |
ವಿರುತಿ ಕಬ್ಬಿನ ಬಿಲ್ಲು…ಗೆಳೆ ಬಂದಳಾ ದೇವಿ || ೪೨ ||

ಮುನ್ನವೇ ದಿವದಿಂದ ತಂದ ಮ | ಹೋನ್ನತಿಯ ವಸ್ತ್ರಾದಿಯಿರುತಿಹ |
ರನ್ನಮಯ ಸಿಂಗಾರ ಮಂಟಪ ರತ್ನ ಪೀಠದಲಿ ||
ಚೆನ್ನೆಯನು ಕಾಲೋಚಿತಕೆ ತ | ಕ್ಕನ್ನವಹ ವಸ್ತ್ರಾದಿಯಿಂ ಸುರ |
ಕನ್ನೆಯರು ಬೆಳುವಸದನಂಗೊಳಿಸಿದರು ಸೊಬಗಾಗಿ || ೪೩ ||

ಥಳಥಳಿಪ ನಖವೆಳಗುದುಗುಲದ | ಬೆಳಗು ಹರಿಚಂದನ ವಿಲೇಪದ |
ಬೆಳಗು ಹೊಸಮುತ್ತುಗಳ ತೊಡಿಗೆಯಬೆಳಗುಮುಡಿದರಲ ||
ಬೆಳಗು ಲೋಚನ ದೀಧಿತಿಯ ಬೆಳು | ವೆಳಗು ಸುಲಿಪಲ್ವೆಳಗುಮೆಳೆ ನಗೆ |
ವೆಳಗು ತನುವೆಳಗೆಸೆಯೆ ಬೆಳಗಿನ ದೇವಿಯೆನಿಸಿದಳು || ೪೪ ||

ಪೊಳೆವ ಮುತ್ತಿನ ಬೊಂಬೆಯೋ ತಿಂ | ಗಳ ತಿರುಳ ಪುತ್ರಿಕೆಯೊ ಕಪ್ಪುರ |
ವಳುಕಿನಲಿ ಬಿದಿಕಡೆದು ತಿದ್ದಿದ ಸಾಲಭಂಜಿಕೆಯೊ ||
ಪಳುಕಿನಲಿ ಮನಸಿಜ ಸಮೆದ ಪು | ತ್ಥಳಿಯೊಯೆನೆ ಬೆಳಗುವ ಸದನದ ತನಿ |
ವೆಳಗಿನಲಿ ಶಿವದೇವಿ ಬಂದಳು ಸೂಳ್ಗೆ ನಿಜಪತಿಯ || ೪೫ ||

ಘಸೃಣರಸ ಕಾರಣೆಯುಕತ್ತುರಿ | [ಕೆಸ]ರಸಾರನೆ ಕಪ್ಪುರದ ಕಡೆ |
ಕುಸುಮದಲಿ ಅಗರುವಿನ ಪೊಗೆ ತುಂಬಿಗಳ ಸೆರೆಪಿಡಿಯೆ ||
ಮಿಸುಪ ಮಾಣಿಕದೀಪಗಳೆ ತೋ | ರಿಸಿದವಳ ತತ್ಫಲವನು ಸುಖದಾ |
ವಸದ ವೆನಿಸುವ ಸಜ್ಜೆವನೆಯನು ಪೊಕ್ಕಳಾ ದೇವಿ || ೪೬ ||

ಸುರತರುವಿನೊಳು ಕಲ್ಪಲತೆ ತೊಡ | ರ್ದಿರವಿನಿಂ ಸ್ಮರಮಂ [ಡಪ ದಂ]ತೆ |
ವರ ಸಮುದ್ರ ವಿಜಯ ಮಹಾರಾಯನೊಳು ಶಿವದೇವಿ ||
ಸರಸ ಮೇಳದಲಿರಲನುತ್ತರೆ | ಯುರು ಜಯಂತ ವಿಮಾನದಲಿ ಮು |
ನ್ನೊರೆದ ಅಹಮಿಂದ್ರನೆ ನಿಜಾಯುವ ಕಡೆಯೊಳೈತಂದು || ೪೭ ||

ವಿದಿತ ಕಾರ್ತಿಕಮಾಸ ಸಿತಪ | ಕ್ಷದಲಿ ವರ ತಿಥಿಷಷ್ಟಿಯಲಿ ಬಂ |
ದೊ [ದವಿದ ನ]ಕ್ಷತ್ರೋತ್ತರಾಷಾಢದ ನಿಷಾಂತದಲಿ ||
ಸುದತಿ ಶಿವದೇವಿಯರ ಮುಖಕುಹ | ರದಲಿ ಪೊಕ್ಕತಿ ವಿಮಲತರ ಗ |
ರ್ಭದಲಿಯಿಪ್ಪತ್ತೆರಡನೆಯ ತೀರ್ಥೇಶ ನೆಲಸಿದನು || ೪೮ ||

ಸರಸಿಯಲಿವಿಧು ಬಿಂಬ ಬಿಂಬಿಸಿ | ದಿರವಿನಲಿ ತ್ರಿಜ್ಞಾನಧರ ಬಂ |
ಧುರ ವಿಮಲ ಗರ್ಭದಲಿ [ವಾಸಿಸು]ವುದು ಮಹಾದೇವಿ ||
ಹರುಷದಲಿ ಪವಡಿಸಿದಳಿರುಳೋ | ಸರಿಪ ಬೆಳಗಹ ಜಾವದಲಿ ಸೌಂ |
ದರಿ ಶುಭಸ್ವಪ್ನಂಗಳನು ಕಂಡಳು ಮನೋ ಮುದದಿ || ೪೯ ||

ತ್ರಿದಶವಧುಗಳು ಪಾಡುವುಪ್ಪವ | ಡದ ಸುಮಂಗಲರವವು ಕಿವಿಯೊಳು |
ಪುದಿಯಲುಪ್ಪವಡಿಸಿ ವಿಮಲ ನಿತ್ಯಕ್ರಿಯೆಯನೆ ನಡಪಿ ||
ಸುದತಿಯರ ತಲೆ ರನ್ನವತಿ ಹರು | ಷದಿ ನಿಜೇಶನ ಕೂಡೆ ಹರಿಪೀ |
ಠದಲಿ ಮಂಡಿಸಿ ಕಂಡ ಕನಸನು ಪೇಳ್ದಳಿಂತೆಂದು || ೫೦ ||

ಸುರಕರಿಯು ವೃಷಭೇಶ ಕೇಸರಿ | ಸಿರಿ ಲಸನ್ಮಾಲಾಧ್ವಯವು ಶಶಿ |
ತರಣಿ ಮೀನದ್ವಿತಯ ಕಳಸಯುಗಲ ಸರಸಿಶರಧಿ ||
ಹರಿವಿನಿಷ್ಟರ ಸುರವಿಮಾನವು | ಉರಗ ಭವನವು ರತ್ನಪುಂಜವು |
ಉರಿವ ಶಿಖಿಯೆಂಬೀ ಕನಸು ಪದಿನಾರು ತೋರಿದವು || ೫೧ ||

ಎರೆಯ ಈ ಕನಸುಗಳ ಕಂಡೆವೆ | ದೆರೆದೆನಿವರ ಫಲಂಗಳನು ನನ |
ಗರುಪಿಮೆನೆ ಸಂತಸದಿ ಪುಳಕದ ಗುಡಿಯ ಕಟ್ಟಿದನು ||
ಅರಿರಮಣಿದಾನೇಬದಿಂ ಜಗ | ಕುರುವದಾನಿಯ ವೃಷಭನಿಂದರ |
ನೆರೆಯ ಅಘರಿಪು ಕರಿರಿಪು [ವಿನಿಂ] ದರಸಿ ಕೇಳೆಂದ || ೫೨ ||

ಸಿರಿಯನುಭಯ ಶ್ರೀಪತಿಯು ಭಾ | ಸುರ ಕುಸುಮಧಾಮದಿ ಜಗತ್ಯೇ |
ಖರನಮೃತ ರೋಚಿಯಿನಮೃತಪತಿಮಿತ್ರನಿಂ ಜಗಕೆ ||
ಪರಮ ಮಿತ್ರನು ಅನಿಮಿಷಂಗಳಿ | ಮರುತರಾನಿಮಿಷೇಂದ್ರ ವಂದ್ಯನು |
ಸುರುಚಿರೋದಕ ಪೂರ್ಣಕುಂಭದಿ ಸುಗುಣ ಪೂರ್ಣಮನು || ೫೩ ||

ಸರಸಿಯಿಂ ಸುಚರಿತ್ರ ಸರಸಿಯ | ಶರಧಿಯಿಂದೆ ದಯಾಶರಧಿ ಕೇ |
ಸರಿ ಸುಪೀಠದಿ ಮೂಜಗದ ಸಿಂಹಾಸನಾಧೀಶ ||
ಸುರವಿಮಾನದಿ ಸಮವಶೃತಿಗಧಿ | ವರನು ಭೋಗಿ ನಿವಾಸದಿಂದ |
ಚ್ಚರಿಯ ಭೋಗಾಸ್ಪದನೆಲೆ ವರವನಿತೆ ಕೇಳೆಂದ || ೫೪ ||

ಪೊಳೆವ ರನ್ನದ ಪುಂಜದಿಂ ನಿ | ರ್ಮಲಸುಗುಣ ಪಂಜನೊಪ್ಪುವು |
ಜ್ವಲದನಳ ಬೋಧಮೂರ್ತಿಯೆನಿಪ್ಪ ಸುಕುಮಾರ ||
ಲಲನೆ ನಮಗಹನೆನಲು ಸೋಗೆಯ | ಜಲದನಿನದದಿ ನಲಿವವೊಲು ನಲಿ |
ದಳುನಿಜೇಶನ ಮೃದುಮಧುರ ವಚನದಿ ಜಿನಾಂಬಿಕೆಯು || ೫೫ ||

ಲಲನೆಯರ ಮಾಣಿಕದ ಮನದಲಿ | ನೆಲಸೆ ಸಂತಸವಂಗದಲಿ ಸಲೆ |
ನೆಲಸೆವಿಮಳಿನ ಕಾಂತಿದಿಟ್ಟಿಯೊಳತಿಶಯ ವಿಳಾಸ ||
ನೆಲಸೆ ದಿವಿಜವ್ರಜಕೆ ಭಕ್ತಿಯು | ನೆಲಸೆ ಜನಕಂಗತಿ ಹರುಷರಸ |
ನೆಲಸೆ ಗರ್ಭದಲಿ ನೆಲಸಿದನಾ ಜಿನಾರ್ಭಕನು || ೫೬ ||

ವಿತತ ಲೋಕಾಲೋಕವನು ತ | ನ್ನತುಳ ಬೋಧದಲಳವಡಿಸಿ ಸಂ |
ಸ್ತುತನದೆಂದುಂ ಬಳಲನೆಂದುಂ ಸೂಚಿಸುವತೆರದಿ ||
ಸತಿ ನಿಧಾನದ ಗರ್ಭದೊಳು ಬೆಳೆ | ಯುತೆ ಜಗದ್ಗುರುವಿರ್ದುಮಾ ಸ |
ನ್ನುತೆಗೆ ಬಳಲಿಕೆದೊರದೆನತಿಶಯವಾಗಿ ನಿರುಪಮನ || ೫೭ ||

ಉದಿತಸ ಭುವನತ್ರಯ ಗುರುವು ಗ | ರ್ಭದೊಳಗಿರ್ದುಂ ಭಾರಪೀಡೆಯು |
ಸುದತಿಗಾಗದು ಮುಕುರದೊಳು ಕುಲಪರ್ವತದ [ಒಡ]ಲು ||
ಪುದಿದೊಡೇನದು ಭಾರಪೀಡೆಯ | ನೊದವಿಪುದೆ ಸರ್ವಜ್ಞವಿದ್ದಾ |
ಸ್ವದದೊಳಲಸಿಕೆ ಜಡತೆಯುಂಟೇ ಭೂಪ ಕೇಳೆಂದ || ೫೮ || ಸ

ತೆಳುವಸುರು ಪೊರೆಯೇರದಾ ಹೊಂ | ಗಳಸ ಮೊಲೆ ತುದಿ ಕಂದದಾ ಬ |
ಳ್ವಳಿಕೆಗುಂದದು ಬಾಸೆ ತ್ರಿವಳಿಯವೇಕೆ ಮಸುಳಿಪವು ||
ಹೊಳೆವ ಮೊಗಬೆಳುಕರಿಸದೆನೆ ಕೋ | ಮಲೆ ತಳೆದ ಗರ್ಭವದು ವಸುಧಾ |
ತಳದೊಳತಿ ಸೋಜಿಗವು ಭಾವಿಸುವೊಡೆ ಜಿನಾಂಬಿಕೆಯ || ೫೯ ||

ಪುಟ್ಟುತವೆ ತ್ರಿಜ್ಞಾನಧರನು ತ್ರಿ | ವಿಷ್ಠಪಾಧಿಪನೆನಿಪುದು ಈ |
ಸೃಷ್ಟಿಗರಿಪುವ ತೆರದಿ ಜ………ರ್ಮೆ ಬಲಗೊಳಲು ||
ನೆಟ್ಟನರಿವರು ಸಂದೆಗವ ನೆರೆ | ಯಟ್ಟಿ ನಿಖಿಳಾರ್ಥವನೆನಲು ಸಂ |
ತುಷ್ಟ ಚಿತ್ತೆಯ ಮಹಿಮೆಯನು ಬಣ್ಣೆಸುವೊಡಾರಳವೆ || ೬೦ ||

ಅರಸಗಾ ನಿಜ ದಿವ್ಯ ಕಾಂತೆಯೊ | ಳುರುತರಾಂಗಜ ಸುಖವ ಸಗ್ಗದ |
ಪರಿಯಲಾ ದೃಷ್ಟಿ ಪ್ರವೀಚಾರದಲಿ ಸೇವಿಪನು ||
ಸುರಪಕೃತ ವಿಭವಾತಿಶಯಮೆನೆ | ಪರಮನೀ ಗರ್ಭಾವತರಣ |
ಸ್ಫುರಿತ ಕಲ್ಯಾಣವನು ಬಣ್ಣಿಸ ಬಲ್ಲ ಕವಿ ಯಾರೊ || ೬೧ ||

|| ಅಂತು ಸಂಧಿ ೩೨ಕ್ಕಂ ಮಂಗಲಮಹಾ ||