ಸಂಧಿ ೩೪

ಪರಮನಿರುತಿರಲತ್ತ ಹಸ್ತಿನ | ಪುರದಲಸ್ತ್ರಾಭ್ಯಸನವನು ಕಲಿ |
ತಿರದೆ ಪಾಂಡವರಂದು ಪೊಕ್ಕರುವಾರಣಾಸಿಯನು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ನೇಮಿಸ್ವಾಮಿಯಿಂತು ದ |
ಯಾಳುವಿರುತಿರಲತ್ತ ಹಸ್ತಿನ ಪುರದೊಳಾ ಪಾಂಡು ||
ಬಾಲಕರು ರಾಣಿಯರು ಸಹಸಂ | ಮೇಳವಿರುತಿರಲದ ವಿಬೋಧರು |
ಶೀಲಗುಣವಂತ ಸುವ್ರತಾಖ್ಯರು ಬಂದರಾ ವನಕೆ || ೧ ||

ಪಲಋತುಗಳೊಂದಾದುವೆನೆ ಬನ | ದೊಳು ಬೆಳೆದ ತಳಿರಲರು ಮಿಡಿಕಾ |
ಯ್ಗಳ ತೊಡೆಂಬೆಯ ಪೊತ್ತು ತಂದಿತ್ತರಸ ಬಿನ್ನಹವು ||
ಮಲರಹಿತರೆಮ್ಮು ಪವನವನೀ | ಚೆಲುವಿನಿಂ ಸಿಂಗರಿಸಿದಪರೆನ |
ಲೊಲಿದು ಕೊಟ್ಟನು ಋಷಿನಿವೇದಕಗಂಗ ಚಿತ್ತವನು || ೨ ||

ಪುರಜನವು ಸಹ ಹೋಗಿ ಮುದದಿಂ | ಗುರುಗಳನು ಪೂಜಿಸಿಯೆರಗಿ ಬಂ |
ದರಸು ಧರ್ಮವ ಕೇಳ್ದು ಸಂಸಾರದ ತೊಡಕಿಗಗಿದು ||
ಗುರುವೆ ದಯೆಗೈದೀಕ್ಷೆಯನು ಎಂ | ದರೆಯು ಪರಿಮೂರೇ ದಿನವು ಕೇ |
ಳರಸ ನಿನ್ನಯ ಬಾಳ್ಕೆ ಲೇಸಾಯ್ತೆಂದನಾ ಮುನಿಪ || ೩ ||

ಎನೆ ಹಸಾದವೆನುತ್ತ ವಂದಿಸಿ | ಮುನಿಪನನು ನಗರಕ್ಕೆ ನಡೆತಂ |
ದನು ಸಮಸ್ತರ ನೆರಪಿ ತನ್ನಚ್ಚುಗವ ಬಿಚ್ಚಳಿಸಿ ||
ತನುಜನಮಲ ಯುಧಿಷ್ಟಿರನನಾ | ಜನವರಿಯೆ ರಾಜ್ಯದಲಿ ನಿಲಿಸಿದ |
ವನುಪಮ ತಪೋವನಕೆ ಪೊರಮಟ್ಟನು ಗುಣೋನ್ನತನು || ೪ ||

ತೊರೆದು ಬೆನ್ನನೆ ಬರಲು ಪಲವುಂ | ತೆರದಿ ಕೊಂತಿಯ ನಿಲಿಸಿದನು ಏ |
ತರದೊಳಂ ನಿಲ್ಲದೆ ಸುಮದ್ರಿಯು ಬರೆ ತಪೋವನಕೆ ||
ತುರುಗಿ ಬರೆ ಪರಿವಾರ ಆ ನೃಪ | ಗೆರಗಿ ಸುವ್ರತ ಮುನಿಗಳಿಂದಾಂ |
ನೆರೆ ಮಹಾವ್ರತಿಯಾದನೆಲೆ ಭೂಪಾಲ ಕೇಳೆಂದ || ೫ ||

ಬಳಿಕ ಮದ್ರಿ ತಪಸ್ವಿಯಾದಳು | ತಳೆದು ಸನ್ಯಸನ ಸ್ಥಿತಿಯೊಲೊಡ |
ಲುಳಿದು ಸಗ್ಗಕೆ ಸಂದರತ್ತಲು ಇತ್ತಲಾ ಶಾಂತ ||
ತಳೆದು ಮುನ್ನವೆ ಸಪ್ತಮದಗುಣ | ನಿಳಯ ಶ್ರಾವಕವ್ರತದೊಳಗೆ ನಿ |
ಶ್ಚಲನಿರಲು ಸುತರಾದ ಚಿತ್ರವಿಚಿತ್ರ ವೀರ್ಯಕರು || ೬ ||

ಕಳಿದ ದೆಸೆಯಿಂ ಪುಟ್ಟಿ ಪಾಂಡುವ | ತೊಲಗಿಕೆಯ ಅತಿಬೆಳೆಯೆ ವಿರತಿಯು |
ಲಲನೆ ಸತ್ಯಾವತಿಯು ಸಹವಾ ಅಂಬೆ ಮೊದಲಾದ ||
ಚೆಲುವ ಸೊಸೆದಿರುವೆರಸಿ ದೀಕ್ಷೆಯ | ತಳೆದರವರತ್ತಿತ್ತ ಸುಖದಿಂ |
ದಿರಲು ಪಾಂಡವ ಕೌರವರು ಭೂಪಾಲ ಕೇಳೆಂದ || ೭ ||

ಬಂದನಾ ಭಾರಧ್ವಜಾನ್ವಯ | ಸಂದ ವಿಪ್ರನು ದ್ರೋಣನೆಂಬವ |
ನಂದು ಕುರುವಂಶಜನು ಕೃಪನೆಂಬವನಿಪನು ಕಂಡು ||
ಚಂದದಲಿ ವಿನಯವನೆಸಗಿ ನಿಜ | ಮಂದಿರಕ್ಕೊಡಗೊಂಡು ಪೋದನು |
ಒಂದು ವಿಲು ವಿದ್ಯಾ ಪ್ರವೀಣನೆನಿಪ್ಪ ಕತದಿಂದ || ೮ ||

ಇರಿಸಿಕೊಂಡಿದ್ದೊಂದು ಶುಭವಾ | ಸರದೊಳಾ ಗಾಂಗೇಯನೋಲಗ |
ವಿರಲು ಕೃಪ ಕರೆತಂದು ಕಾಣಿಸಲೀತನಾರೆನಲು ||
ವರಧರ್ನುವಿದ್ಯಾ ತೀನೇತ್ರನು | ಸುರಸ ದ್ರೋಣಾಚಾರ್ಯನೆಂಬವ |
ನುರುಕಲಾವಿದ ವಿಪ್ರನೆಲೆ ಭೂಪಾಲ ಕೇಳೆಂದ || ೯ ||

ಎನೆ ನದೀಸುತ ಕೇಳಿ ನಮ್ಮೀ | ತನುಜರನು ಬಿಲುವಿದ್ಯೆಯಲಿ ಜಗ |
ಕನುಪಮರುಮೆಂಬಂತೆ ಶಿಕ್ಷಿಸಿಯೆನಲೊಡಂಬಡಲು ||
ತನುಜರನು ನೂರೈವರನು ದ್ರೋ | ಣನ ವಶಕೆ ಕೊಟ್ಟನು ಮೊದಲೆ ಬೇ |
ಳ್ಪನಿತು ವಸ್ತುವನಿತ್ತು ಬಳಿಕ ಸುದಿನ ಮುಹೂರ್ತದಲಿ || ೧೦ ||

ತೊಡಗಿಸಿದನಾ ವಿದ್ಯೆಯನು ಎಡೆ | ಬಿಡದೆ ಕೌರವ ಪಾಂಡವರು ಸಂ |
ಗಡವೆ ಸಾಧನೆ ಮಾಡುತಿರೆ ದ್ರೋಣಂಗೆ ಕೃಪಮೆಚ್ಚಿ ||
ಕೊಡೆ ಅನುಂದತಿ ಎಂಬ ತನುಜೆಯನು | ಪಡೆದಳಶ್ವತ್ಥಾಮನನು ಈ |
ಪೊಡವಿಯೊಳಜೇಯನನು ನಿಖಿಳ ಕಲಾ ಪ್ರವೀಣನು || ೧೧ ||

ಅರಸುಗೈಯುತ ಕರ್ಣನಂತಿರು | ತಿರಲು ಪರಿವಾರ ಪ್ರಧಾನರು |
ವರತನೂಜ ವಿಕರ್ಣನಿರೆ ಸಾಕಿದ ಮಗಗೆ ನೃಪತಿ ||
ಅರಸುತನವನು ಕೊಟ್ಟೆನೆಂದೆಂ | ಬರ ನುಡಿಯು ಕಿವಿದಾಗೆ ಕುಲದೊಂ |
ದಿರವ ಜನನೀ ಜನಕರನು ತಾನರಿಯಬೇಕೆಂದು || ೧೨ ||

ತರಣಿಸುತ ಪೆರರರಿಯದಂದಂದಿ | ಪುರವ ಪೊರಮಟ್ಟೈದಿದನು ಅ |
ಚ್ಚರಿಯ ವಿಜಯಾರ್ಧಾಚಳದ ಗುಹೆಯಲ್ಲಿ ನಿಷ್ಠೆಯಲಿ ||
ಸ್ಥಿರದಿ ಜ್ವಾಲಾಮಾಲಿನಿಯ ಬಂ | ಧುರ ಷಡಕ್ಷರ ಮಂತ್ರವನು ತಡೆ |
ದಿರದೆ ಜಪಿಸಲು ಮಂತ್ರ ಸಾಮರ್ಥ್ಯದಲಿ ಜ್ವಾಲಿನಿಯ || ೧೩ ||

ಬಳಿಕ ತಾನೆ ಪ್ರಸನ್ನೆಯಾದಳು | ಕುಲಿಶ ಕವಚ ವಹ್ನಿ ಬಾಣವ |
ನೊಲವಿನಿಂದುರಿ ಮಾಲೆಯೆಂಬಾ ಪೀತವಸನವನು ||
ಘಳಿಲನಿತ್ತಳು ಮಗನೆಯೇಂಬೇ | ಕೊಲಿದು ಬೇಡೆನೆ ನನ್ನ ಜನನಿಯ |
ತಿಳಿವ ಪರಿಯನು ಕರುಣಿಸೆನೆ ಕರ್ಣಂಗೆ ತದ್ದೇವಿ || ೧೪ ||

ಎಂದಳೀ ಉರಿಮಾಲೆ ವಸನದ | ಚಂದನದ ಚರ್ಚೆಯವೊಲಾಂತಾ |
ಸೌಂದರಿಯೆ ನಿಜಮಾತೆಯೆಂದರಿಯೆನಲು ಬೀಳ್ಕೊಂಡು ||
ಬಂದು ಚಂಪಾಪುರದೊಳಗೆ ಸುಖ | ದಿಂದಿರುವ ಪಾಂಡವರ ಕೌರವ |
ರೊಂದು ಬಿಲು ವಿದ್ಯಾ ಪ್ರಭಾವವ ಕಲಿಕರ್ಣ || ೧೫ ||

ಅವರವರ ಬಾಣಾಸನಾಭ್ಯಾ | ಸವನರಿವೆನೆಂದೋರ್ವನೇ ಕಡು |
ತವಕದಲಿ ಹಸ್ತಿನಪುರವನೈತರಲು ಗುರಿಯೆನುತ ||
ಅವರಿರಲು ತಾನಲ್ಲಿಗೈತರೆ | ಅವನಿಯೊಳು ನಡೆತಪ್ಪ-ಪೊಂಬೆ |
ಟ್ಟವೊಯೆನುತ ಬಿಲುವಿಡಿದು ಬಹ ಕರ್ಣನನು ನೋಡಿದರು || ೧೬ ||

ಅವರ ಪಕ್ಕದಲಿರ್ದು ಬಿಲುವಿ | ದ್ಯವನು ನೋಡಿದನಾಗರುಡಿಯಲಿ |
ರವಿತನೂಭವನೋರ್ವ ನೊಳುಯಿಂತೆಂದ ಕಟಕಿಯಲಿ ||
ಇವರೆ ದ್ರೋಣಾಚಾರ್ಯರೆಂಬವ | ರಿವರ ಕೈಯಲಿ ಕಲಿವ ಪಾಂಡವ |
ರಿವರೆ ಕಲಿತೀ ಬಿಲ್ಲ ಬಿನ್ನಣವಿಂತಿವೇಯೆಂದ || ೧೭ ||

ಎಂದು ಮಾತನು ಕೇಳಿ ಯಮಸುತ | ಗೆಂದನವ ನೃಪಕೇಳಿ ಬಾಯ್ಗೇಂ |
ಬಂದವೊಲು ನೂರಾಡಬಹುದಲ್ಲದೆ ನುಡಿದ ತೆರದಿ ||
ಒಂದು ಕಾರ್ಯವ ಮಾಡಿದೊಡೆ ದೇ | ವೇಂದ್ರನವನಾಜಿಯೊಳೆನುತ ಮುಳಿ |
ಸಿಂದ ನುಡಿದಾ ನುಡಿಯೆ ಕದನದ ಬೀಜವೆನಿಸಿದುದು || ೧೮ ||

ಎಲೆಯುಧಿಷ್ಠಿರ ನಿನ್ನ ನಗೆಮೊಗ | ದಲಿ ಮುಳಿಸು ಬರಬಹುದೆ ವಿದ್ಯೆಯ |
ಹಲಬರೀಕ್ಷಿಸಿ ಮೆಚ್ಚುವರು ಮೆಚ್ಚರು ಕೆಲರು ನರರ ||
ಬಲುಹನಾರೈ ಬಲ್ಲರೆಂದದ | ನಿಲಿಸಿದನು ಬಿಲ್ಲೋಜನಿರಲಾ |
ಗಳು ಸುಯೋಧನ ಕರ್ಣನನು ಕೈವಿಡಿದು ಕರಕೊಂಡ || ೧೯ ||

ತೋಳಬಲಹುಳ್ಳವನು ವಿದ್ಯವಿ | ಶಾಲನೀತನು ಭದ್ರಮೂರ್ತಿಯು |
ಮೇಳಗೊಳಬೇಕೀತನೊಳಗೆನುತಾತ್ಮ ಬುದ್ಧಿಯಲಿ ||
ಆಲಯಕೆ ಒಡಗೊಂಡು ಹೋಗಿ ನೃ | ಪಾಲನೊಲವಿಂ ಮಜ್ಜನವನಿಂ |
ಪೇಳೆ ಮೂಡಿಸಿ ವಿನಯದಿಂ ವಸ್ತ್ರಾಭರಣವಿತ್ತ || ೨೦ ||

ಇತ್ತ ಬಾರೈ ಕರ್ಣ ಕುಳ್ಳಿರು | ಮುತ್ತಿ ನೀ ಗದ್ದುಗೆಯೊಳಗೆ ನ |
ಮ್ಮೊತ್ತಿನೊಲಿಯೆಂದುರೆ ಕರೆಯೆ ಅಜ್ಞಾತ ಕುಲದವನು ||
ಎತ್ತಣವನಾನೆನ್ನದೀಪರಿ | ಚಿತ್ತಯಿಸುವರೆ ಅಮ್ಮೆನೆನೆ ಕೈ |
ಯೆತ್ತಿ ನನ್ನಾಣೆಂದು ಹಿಡಿದೆಳ ತಂದಿರಿಸಿಕೊಂಡ || ೨೧ ||

ಅರಸು ಮಗನಹುದೆಂಬುದನು ನಿಜ | ಪುರುಷ ಲಕ್ಷಣ ತಾನೆ ಪೇಳದೆ |
ಹರುಷ ನಮಗಂತಲ್ಲದಾಗದು ನೀವೆ ಬಂದುದೆನೆ ||
ಕರೆದರಾರೋಗಣೆಗೆ ಬೋನದ | ವರು ಬಳಿಕ ಕೈವಿಡಿದು ಕರ್ಣನ |
ಕರೆದು ಕೊಂಡೊಡನುಂಡು ಒಂದೇ ಹರಣವೆನೆ ನೆಗಳ್ದ || ೨೨ ||

ಅರಸನನಿತಂ ಗೆಯ್ದು ಪೂಣ್ದನೆ | ಕರೆದು ಕೊಂಡೊಳಗೈದಿ ತನ್ನೆಸೆ |
ವರಸಿಯರೊಳರ್ಕಜಗೆ ಬಂಧುಪ್ರೀತಿ ಮೂಡಿಸಿದ ||
ಇರದೆ ಕೊಟ್ಟನು ಅಂಗದೇಶದ | ಹರಣದೊಳಗಣ ಮಾತನೆಲ್ಲವ |
ವಿರಚಿಸಿದನತಿ ವಿನಯ ವಿತರಣಕವನೆ ಬೆರೆಗಾದ || ೨೩ ||

ಎಲೆ ಧರಿತ್ರೀಪಾಲ ನನ್ನಯ | ಕುಲವನರಿಯದೆ ಛಲವ ನೋಡದೆ |
ಒಲಿದು ಮೂಡಿದ ವಿನಯವೊಂದಕ್ಕೇ ಈ ಹರಣ ||
ಬೆಲೆಕಣಾ ಸೋಲಕ್ಕೆ ಸುರಗಿಯ | ತಳವೆ ಗೆಲ್ಲಕೆ ಗುಡಿಯ ಕಟ್ಟುವೆ |
ಚಲಿಸೆ ನಿನ್ನೆಂದೊಡನೆ ಸಾಧನೆ ಮಾಡುತಿಹ ಕರ್ಣ || ೨೪ ||

ಎಂದಿನಂದದಿ ದ್ರೋಣನಲಿ ತಾ | ವೊಂದಿ ಬಿಲುವಿದ್ಯೆಗಳ ಕಲಿತರು |
ಮುಂದೆ ದುರ್ಯೋಧನನು ಭೀಮನು ಗದೆಯೊಳರ್ಜನನು ||
ವೊಂದೆ ಬಿಲ್ಲೊಳು ಲಕುಳಕೊಂತದೊ | ಳಂದು ಸಹದೇವನು ಖಡುಗದಲಿ |
ಸಂದು ಸಾಧಿಸಿ ಸಕಲ ವಿದ್ಯಾ ಪ್ರೌಢರೆನಿಸಿದರು || ೨೫ ||

ವಿಪುಳ ಪಾಂಚಾಳಾವನೀಪತಿ | ದ್ರುಪದ ನಯಸಖನು ನಾಂ ಕಂ |
ಡಪೆನೆನುತ ಬಿಲ್ಲೋಜ ಪ್ರೇಮದಿ ಪೋಗೆ ತತ್ಪುರಕೆ ||
ದ್ರುಪದ ಮುನ್ನಣ ನಣ್ಪಳಿದು ಗ | ರ್ವಿಪುದೆ ಭೇದವನಾಂತು ದ್ರೋಣನು |
ಕುಪಿತಮನ ಮರಳಿದನು ಹಸ್ತಿನಪುರಕೆ ಶೀಘ್ರದಲಿ || ೨೬ ||

ಬಂದು ಪೇಳ್ದನಿದೆಲ್ಲವನು ಯಮ | ನಂದನಗೆ ಕೇಳ್ದಾ ಯುಧಿಷ್ಠಿರ |
ನೆಂದನಾ ತೆರನೆಲ್ಲವನು ಪಾರ್ಥಂಗೆ ಕಪಿಕೇತು ||
ಅಂದು ದ್ರುಪದನನೆಯ್ದಿ ವಿಕ್ರಮ | ದಿಂದ ಕೋಡಗಗಟ್ಟುಗಟ್ಟಿಯೆ |
ತಂದು ಅಗ್ರಜಗೊಪ್ಪಿಸಿದನಿಳೆಯೆಲ್ಲ | ದಿಂದ ಕೋಡಗಗಟ್ಟುಗಟ್ಟಿಯೆ |
ತಂದು ಅಗ್ರಜಗೊಪ್ಪಿಸಿದನಿಳೆಯೆಲ್ಲ ಬೆರಗಾಗೆ || ೨೭ ||

ಅರರೆ ಪ್ರಾರ್ಥನೆ ಲೋಕದಲಿ ದಂ | ಗರ ವಿಜಯನೆಂದೆಲ್ಲ ರಾಜಕು |
ವರರು ಸೋಜಿಗಗೊಳುತಿರಲು ದ್ರೋಣಂಗೆ ಧರ್ಮಜನು ||
ಇರದೆ ದ್ರುಪದನನೊಪ್ಪಿಸಲು ಬಂ | ದಿರೆಯಕಟ ನಿಮಗಿಂದು ಶಾಖಾ |
ಚರವಿಬಂಧನ ಬಂದುದೇ ಸುಡು ಎಂದನಾ ದ್ರೋಣ || ೨೮ ||

ಅರಸರಿಗೆ ಬಡ ಹಾರುವರಿಗೇ | ತರದು ಮಿತ್ರತೆಯೆಂಬುದನು ನಿ |
ಮ್ಮರಮನೆಯ ಬಾಗಿಲಿಲಿ ಕೇಳ್ದೆವು ಕಂಡವೆಲೆ ನಿಮ್ಮ ||
ನೆರೆದ ಈ ನೆರವಿಯಲಿ ನರನಿವ | ದುರುಳನೀಪರಿ ನಮ್ಮ ಮಿತ್ರನ |
ತರಬಹುದೆ ಎಂದಾ ದ್ರುಪದನನು ಬೀಳ್ಕೊಟ್ಟು ಕಳುಹಿದನು || ೨೯ ||

ನರನ ವೀರವನೆಲ್ಲರೂ ಬಿ | ತ್ತರಿಪ ನುಡಿ ಕಿವಿಶೂಲವಾಗಲು |
ಕುರುಪತಿಯು ಕಾಶಿಯಲಿ ಲಾಕ್ಷಾಮಾಡವನು ಚೆಲುವಿಂ ||
ವಿರಚಿಸಿದನತಿ ಗೂಢದಲಿ ತಾ | ನಿರದೆ ತಂದೆಗೆ ಬಂದು ಪೇಳಿದ |
ನರಸ ಕೌಂತೇಯರು ಗರ್ವಿಗಳಾದರೇವೇಳ್ವೆ || ೩೦ ||

ಲೆಕ್ಕಿಸರು ನಮ್ಮುವನು ಪಲವೇಂ | ಚಿಕ್ಕ ಹರೆಯದಿ ಮೊದಲು ನಮ್ಮೊಳು |
ಕರ್ಕಸವ ಬೆಳಸುವರು ಒಂದೆಡೆಯಿರ್ದುನಾವವರು ||
ತಕ್ಕುಲಿತೆಯನು ಮಾಡಿಕೊಂಬುದು | ಮಕ್ಕಳಾಟಿಕೆ ಬೇರೆ ಭೂಮಿಯ |
ದೊಕ್ಕನೀವುದು ತಕ್ಕುದವರಿಗೆ ಭೂಪ ಕೇಳೆಂದ || ೩೧ ||

ಎನಲು ಗಾಂಗೇಯರನು ಕರೆಯಿಸಿ | ತನುಜನೀ ನುಡಿಗೇಳಿಮೆನೆ ತೇ |
ದನು ಸುರ್ಯೋಧನ ತಾವು ಆಲೋಚಿಸಿ ಕುಮಾರರಿಗೆ ||
ಕನಪು ಬಾರದೆ ಬಿಡದು ಮುಂದೀ | ತನೆ ನುಡಿದವೊಲು ಬೇರೆ ಭೂಮಿಯ |
ನನುವಡಿಸಿ ಕೊಡುವುದೆ ಉಪಾಯವು ಎಂದರಾ ನೃಪನು || ೩೨ ||

ಕರೆಸಿದರು ಧರ್ಮಜನನತ್ಯಾ ಮುನಿಸಿನಿಸಾಗದಿರದದರಿಂ ||
ಹರುಷದಲಿ ನಿಜದೇಶದಲಿ ಬಂ | ಧುರದ ಕಾಶೀ ರಾಜಧಾನಿಯ |
ಳರಸುಗೈಯುತ ನಮ್ಮೊಳೈವರು ಸುಖದಲಿರಿಯೆನಲು || ೩೩ ||

ದೇವರೆಂದುದೆ ಹಿತವು ಬೇರೆನ | ಗಾವ ಬುದ್ಧಿ ಯದುಂಟೆಯೆಂದಾ |
ಭೂವರರು ಬೀಳ್ಕೊಂಡು ನಿಜಮಂದಿರಕೆ ನಡೆತಂದು |
ತೀವಿದನುಜರು ಕೊಂತಿ ಸಹ ತ | ಮ್ಮಾ ವಿದಿತ ಚತುರಂಗಬಲದ ಮ |
ಹಾ ವಿಭವದಲಿ ಪುರವ ಪೊರಮಟ್ಟನು ಯುಧಿಷ್ಠಿರನು || ೩೪ ||

ವಿನುತನಾ ಗಾಂಗೇಯ ಧೃತರಾ | ಷ್ಟ್ರನು ವಿದುರನು ದ್ರೋಣ ದುರ್ಯೋ |
ಧನನು ಮೊದಲಾದವರು ಕಳುಹುತ ಕಿರಿದು ದೂರಬರೆ ||
ಅನಿಬರನು ಪಾಂಡವರು ಸುವಚನ | ವಿನಯದಿಂ ಸತ್ಕರಿಸಿ ಮೆಲ್ಲನೆ |
ಕಳುಹೆ ಕತಿಪಯ ಪಯಣದಿಂ ವರವಾರಣಾಸಿಯನು || ೩೫ ||

ಪೊಗುವ ಸಮಯಕೆ ಕೌರವನನೆಡ | ಪಿಗ ಪುರೋಚನನಾ ಪೊಳಲ ಪೆಂ |
ಪೊಗೆದ ಗುಡಿತೋರಣಗಳಿಂ ಸಿಂಗರಿಸಿ ವೈಭವದಿ ||
ಸುಗುಣಿಗಳನಿದಿರ್ಗೋಂಡೆರಗಿ ಕೇ | ತುಗಳ ವಂದನೆಮಾಲೆಗಳ ಚೆಲು |
ವಲಗದರಗಿನ ಮಾಡದಲ್ಲಿರಿಸಿದನು ಹರುಷದಲಿ || ೩೬ ||

ವಿಮಲಮತಿ ಧರ್ಮಜನು ನೆರೆ ಧ | ರ್ಮಮನೆ ಪಿಡಿದರು ಅನುಜರುಂ ಸಹ |
ಸಮನಿಸಿದ ರಾಗದಲಿ ತನ್ನಗರಾಧಿಪತಿಯಾಗಿ ||
ಅಮರಪತಿನತ ಜಿನಪದಾಂಬುಜ | ಭ್ರಮರನೆನ್ನೆರೆ ಕೀರ್ತಿವೆತ್ತನು |
ವಿಮಲವಾಣೀ ನರ್ತಕೀ ರಂಗೋಪಮಾನನನು || ೩೭ ||

|| ಅಂತು ಸಂಧಿ ೩೪ಕ್ಕಂ ಮಂಗಲಮಹಾ ||