ಸಂಧಿ ೩೦

ಮಕರ ಕೇತನನಂದು ಪಾಂಡವ | ನಿಕರ ಯಾದವ ತತಿಯ ವಿಂಧ್ಯಾ |
ವಿಕೃತದಿಂ ಭಂಗಿಸುತ ಪೊಕ್ಕನು ದ್ವಾರವತಿ ಪುರವ || ಪಲ್ಲ ||

ಕೇಳಲೇ ಶ್ರೇಣಿಕ ಧರಿತ್ರೀ | ಪಾಲಂ ಮನದಿಂ ಬೇಗದಲಿ ಮಣಿ |
ಜಾಲಕಾಮ ವಿಮಾನ ಭೋರನೆ ಗಗನದಲಿ ಬರಲು ||
ಭೀಳ ಸತ್ಕರ ಶಿಲೆಯಿದೆಲೆ ಪೂ | ಗೋಲ ನಿನ್ನನು ಪಂಚವಾಸರ |
ಬಾಳನನು ಪಗೆಬಿಸುಟ ತಾಣವಿದೆಂದನಾ ಮುನಿಪ || ೧ ||

ವಾರಿಜೋದ್ಭವ ಸೂನು ಕರ್ಮವ | ನಾರು ಬಾರಿಸಬಹುದೆನುತ ಬರೆ |
ಮಾರನತ್ತಲು ತೋರಣ ಧ್ವಜ ಮಾಟಕೂಟಗಳ ||
ಚಾರುಹರ್ಮ್ಯದ ಶೋಭೆ ಈ ಪೊಳ | ಲಾರದೆಂದೆದೆ ನಿನ್ನ ಮಾವನ |
ಕೌರವೇಂದ್ರನ ಹಸ್ತಿನಾಪುರವೆಂದನಾ ಮುನಿಪ || ೨ ||

ನೆರೆದುದಿದು ದಿಬ್ಬಣವು ಮುನ್ನಾ | ನೊರೆದ ವೋಲುದಧಿಯನು ಭಾನುಗೆ |
ಪರಿಣಯನ ವಿಧಿಯಿಂದ ಕೊಡಪೋಪುಜ್ಜುಗವಿದೆನಲು ||
ಅರೆಗಳಿಗೆಯೊಳ ಬಪ್ಪೆನುದಧಿಯ | ಸಿರಿಯವೀಕ್ಷಿಸಿ ಮುನಿಪ ನೀವಿ |
ಲ್ಲಿರಿಯೆನುತ್ತಿಳಿತಂದು ನಾಪಿತನಾದನಾ ಮದನ || ೩ ||

ಕುವರಿಯನು ಪಲುಸುಲಿಯಲಿಕೆ ಮಾ | ಧವನು ಮುದುಪನನೆನ್ನ ಕಳುಹಿದ |
ನವಸರಿಗ ಹೇಳೆಂದವನ ಮುಖದಿಂ ಕರೆಸಿಕೊಂಡು ||
ಯುವತಿಯಿರ್ದೆಡೆಗೈದೆ ನೆರೆಮು | ನ್ನವೆ ಕುಮಾರಿಯ ಪುರ್ಬುಗಳ ತಿ |
ದ್ದುವನ ಪಕ್ಕದೊಳಿರ್ದು ಕುವರಿಯ ಮೊಗವನೀಕ್ಷಿಸಿದ || ೪ ||

ಚಂದಗೆಟ್ಟುದದಿವನ ಕೃತಕದ | ಲೊಂದು ಹುಬ್ಬಿನ ನಿಲುವು ನೋಡಿದ |
ಸೌಂದರೀ ಜನವವನ ಬೈ ದಿಬ್ಬಟ್ಟೆತಾಂ ನಗುತ ||
ಸಂದ ಕಾವಂಗರಸಿಯಹ ತ | ಕ್ಕೆಂದು ವದನೆಯ ಚೆಲುವ ಕೆಡಿಸಿದ |
ನಂದವಾಗಿರೆಗೈವೆ ನಾನೆನಗುಂಟೆ ಮೆಚ್ಚೆಂದ || ೫ ||

ಸ್ಮರ ದಿವಾಕೀರ್ತಿಯು ಸಸಿನೆ ಸಿ | ಗರಿಸೆ ಹುಬ್ಬನು ಕಂಡು ವಧುಗಳು |
ಹರುಷದಿಂ ಕೊಂಡಾಡಿದರು ಮುದುಪನು ಚದುರನೆಂದು ||
ಸ್ಮರ ವಿಶಾರದ ಹರೆಯವಲ್ಲಂ | ಕುರಿಸಿತೇತಕೆ ಪುಳಕ ನೋಟದ |
ಪರಿ ಹೊಸತು ನಿನಗೆಂದು ನಕ್ಕೊಡೆ ನಗುತ ಕೈಯಾಂತ || ೬ ||

ಪೊಡವಿ ಪತಿಗಳಿಗೀವವೋಲುಡ | ತೊಡಲು ಕೊಟ್ಟರು ಬಿಸುಡಿಮಿದನಾಂ |
ಪಡೆಯದವನೇಯೆನಲು ಶತವೃದ್ಧನೆ ಕುಮಾರಿತಿಯ ||
ಕೊಡುವೆವಾಂಪೇಯೆಂದು ನಗುತಿರೆ | ಮಿಡಿಮೊಲೆಯ ಕುವರಿಯನು ಕೊಟ್ಟೊಡೆ |
ಬಿಡಬಹುದೆಂದುದಧಿಯನು ಕೊಂಡೆದ್ದನಾಗಸಕೆ || ೭ ||

ತರುಣಿಯರ ಘೋಳೆಂದಳುತ ಭೂ | ವರರು ಗಗನವ ನೋಡುತಿರ್ದರು |
ವರ ವಿಮಾನದಲಿಳುಹಲಳುತಾ ನಾರದನು ಕಂಡು ||
ಚರಣಕೆರಗಿದಳುದಧಿ ಕಾಮಂ | ಗರಸಿಯಾಗಂಜದಿರೆನುತ ಮುನಿ |
ಪರಸೆ ಬಿನ್ನಹವೆಂದಳಶ್ರುಜಲಂಗಳನೂ ಸುರಿದು || ೮ ||

ಪೆತ್ತರೆಂದು ಕಾಮಗೆಂದವ | ನೆತ್ತ ಹೋದನೊಯೆನ್ನ ಪಾಪದಿ |
ಸತ್ಯೆಯಾತ್ಮಜಗೀಯಲೊಡರಿಪವೆನ್ನ ಮತವಲ್ಲ ||
ಇತ್ತಲೀತನು ವೃದ್ಧನಾಪಿತ | ನೆತ್ತಿ ತಂದಪನೆಂದು ಬಾಯ್ವಿ |
ಟ್ಟತ್ತು ಘಳಿಲನೆ ಬಿಳ್ದಳಲ್ಲಿಂ ಧರೆಗೆ ಸುಕುಮಾರಿ || ೯ ||

ಮಾನಿನಿಯನಡೆವೊಕ್ಕುತಂದು ವಿ | ಮಾನದೊಳಗಿರಿಸಿದನನನ್ಯಜ |
ನೇನು ಬೆದರದಿರೆಂದು ಮುನಿಮನಸಿಜನ ಮೊಗನೋಡೆ ||
ಮೀನಕೇತನನಾತ್ಮರೂಪನು | ತಾನು ತೋರಲು ನೋಡಿದಾ ಚಂ |
ದ್ರಾನನೆಯ ಕಂಬೆಳಗಿನಿಂ ಶಶಿಯಂತ ತನುವಿರ್ದ || ೧೦ ||

ಅಳಿದುದಾಕೆಯ ನೋವು ರಾಗವು | ಬಳೆದುದೆದೆಯಲಿ ಕಾಮಪುಟ್ಟಿದ |
ಬಳೆದ ವೃತ್ತಾಂತವನು ತಿಳುಹಿಸಿ ಮದನವಿಹನೆಂದು ||
ಗಳಪದಂದದಿ ಕಲಿಸಿ ಕುರುಕಲ | ತಿಲಕನೆಡೆಗೆಲೆ ಮಗನೆ ನಿನ್ನನು |
ಕಳುಹಿ ಬಹೆನೇಳೆಂದನಾಮುನಿ ತತ್ಕುಮಾರಿಯನು || ೧೧ ||

ಅಸಮಬಾಣನ ಚೆಲುವಿನಲಿ ಕೀ | ಲಿಸಿದ ದಿಟ್ಟಿಯ ತೆಗೆಯಲಾರದೆ |
ಹಸುಳೆ ತನುವಿಂದಸುವೆ ತೊಲಗುವ ಭಂಗಿಯಿಂ ತೊಲಗಿ ||
ವಸುಧೆಗಿಳಿದಾ ಮುನಿಯೊಡನೆ ಬರ | ಲೊಸೆದ ಕುರುಭೂಪಾದಿಗಳು ಸುರ |
ಋಷಿಗೆರಗಿಯುದಧಿಯನು ಕಂಡಾನಂದವೈದಿದರು || ೧೨ ||

ಮುನಿಪ ತದ್ವೃತ್ತಾಂತವನು ಪೇ | ಳೆನೆ ವಿಯಚ್ಚರನೋರ್ವನತ್ತೊ |
ಯ್ವನಿತರೊಳು ನಾವತ್ತಣಿಂ ಬರುತೀಕೆಯೆಂದರಿದು ||
ಸುನಯವನೆ ಪೇಳ್ದಾದನಿಂದೀ | ವನಿತೆಯನೆ ಕರೆತಂದೆವೆಂದಾ |
ಮುನಿ ಪರಸೆ ನಭವೇರಿ ಕಾಮವಿಮಾನವನು ಪೊಕ್ಕ || ೧೩ ||

ಮೊಳಗೆ ಮಂಗಳ ತೂರ್ಯನಿಸ್ವನ | ಕಳಸನೀರನು ತರಿಸಿ ಮಜ್ಜನ |
ಗೊಳಿಸಿ ಮಂಗಳ ವಸದನದಳಲವಡಿಸಿ ಕುವರಿಯನು ||
ತಳುವದೆಲ್ಲರು ನೆರೆದು ವೈಭವ | ದಲಿ ಲಸದ್ವಾರಾವತಿಗೆ ಭೂ |
ತಳವದಿಂಬಿಲ್ಲೆನಿಸಿ ನಿಬ್ಬಣ ನಡೆವ ಸಮಯದಲಿ || ೧೪ ||

ಈ ತೆರನ ಪೇಳೆಂದೊಡಂಗಜ | ಗೋತು ಮುನಿ ದುರ್ಯೋಧನನು ನಿಜ |
ಮಾತುಳನು ತಾನೀತನೀತು ಚಂಡಕರಸುತನು ||
ಈತನಹಿತ ಕೃತಾಂಶ ಕುಂಭಜ | ನೀತನರಿಬಿಲ್ಲೋಜನೆಂಬವ |
ನೀತ ದುಶ್ಯಾಸನನಿವರು ತಮ್ಮಂದಿರಾ ನೃಪನ || ೧೫ ||

ಈತ ಧರ್ಮಜನೀತನತಿ ಸ | ತ್ವಾತಿಶಯನನನಿಲಜನು ರಿಪು ಜೀ |
ಮೂತಕಲ್ಪಾನಿಲನೆನಿಪ ಕಲಿಪಾರ್ಥನೀತನಲೆ ||
ಆ ತೆರದಿ ನಿಖಿಳಾವನೀಶರ | ನಾತರದಿ ತೋರಿಸಲು ಮುನಿ ವಿ |
ಖ್ಯಾತರಧಟನು ನೋಡಿ ಬಹೆನೆಂದಂಗಭವನಿಳಿದ || ೧೬ ||

ಕೆದರುದಲೆ ಕೆಮ್ಮೀಸೆ ಕೆಂಗಣು | ಬೆದರುನೋಟವು ಹೆಗಲಬಲವಡೆ |
ಬದಿರ ಬಿಲುಗರಿಪರಿವ ಮೂರಂಬುಟ್ಟ ಪುಲಿದೊವಲು ||
ಕದಿರು ನೋಟದಮಿಂಡಿ ಬೇಡಿತಿ | ಪುದಿಯೆ ತನ್ನೊತ್ತಿನಲಿ ನಿಂದನು |
ಮದನನಾ ಬಟ್ಟೆಯಲಿ ಸಂದ ಪುಳಿಂದ ವೇಷದಲಿ || ೧೭ ||

ನೆಲ ಮೊಳಗುವಂತುಲಿಯೆ ವಾದ್ಯಗ | ಳಿಲೆ ಬೆಸಲೆಯಾದಂತೆ ಪೆರ್ಚಿದ |
ಬಲವೆರಸಿ ನಿಬ್ಬಣವು ಬರುತಿರೆ ಕೃತಕ ಲುಬ್ಧಕನು ||
ಘಳಿಲನೆಡೆಗಟ್ಟಿದನಿದೇನಿರೊ | ಬಲುಹೆ ಹೋಗದಿರನುಪ ಕೊಡಿಯೆಂ |
ದುಲಿದು ಘರ್ಜಿಸಿ ಮಿಕ್ಕು ಹೋದಡೆ ಘಾಸಿಯಹಿರೆಂದ || ೧೮ ||

ಕಡಲು ಮೇರೆಯ ಮೀರಿಬರೆ ಬರ | ಗುಡದುಗಡ ತೃಣವೆಂಬವೊಲು ನೀ |
ನಡಿಯನಿಡಗೊಡೆನೆಮ್ಮ ನಂಬಿಕಿರಾತ ನಿಮಗೇನು ||
ಹಿಡಿದುದೋ ಮರುಳಕಟ ನೋಡಿರೆ | ತಡೆವ ಮೋರೆಯನೆಂದು ಬಹಮುಂ |
ಗುಡಿಯವರು ಕೈವೊಯಿದು ನಕ್ಕರು ನಿಂದು ತಮ್ಮೊಳಗೇ || ೧೯ ||

ಅಲ್ಲಿ ಕೆಲರವನೀಶರೇನೈ | ಬಿಲ್ಲ ನೀನಿಲ್ಲಿಹೆನು ನಾ |
ನಿಲ್ಲಿಹೆನು ಪೊಂಗೊಡುವೆನೊಡೆಯಗೆ ಕೊಂಬೆನನುಪನೆನೆ ||
ಬಲ್ಲಿದರು ನಾವನುಪುಗೊಡುವೆಲೆ | ಪುಲ್ಲನಾಭನು ಬಡವನೇ ಕೊಂ |
ಡಲ್ಲದಡಿಯಿಡಗೊಡೆನು ಚಕ್ರಿಯ ಪಾದದಾಣೆಂದ || ೨೦ ||

ಎನಲವರು ಮಿಗೆ ನಗುತ ನಿನಗೇ | ನನುಪ ಹೇಳೆನಲುದಧಿಯನು ಕೊಡಿ |
ಯೆನೆ ಮುಕುಂದನ ಸೊಸೆಯ ಬೇಡಲು ಬಹುದೇನಾಂಹರಿಯ ||
ತನುಜನಲ್ಲವೆ ಅಹುದು ಪೆತ್ತಂ | ಮನಲೆ ರುಗುಮಿಣಿತಪ್ಪದೆನೆ ತುಂ |
ಟನ ಕೊರಳ ಮುರಿದಿಡಿಯೆನುತಲೊಡಹಾಯಿಸಿನೆಡೆಗೊಳಲು || ೨೧ ||

ಸ್ಮರಸಬರ ಕೂಗಿಡಲು ಬನದಿಂ | ದಿರುಳ ತಿರುಳಗಂಗಚ್ಛವಿಯ ಬೇ |
ಡರು ಪಿಡಿದನರುನಾಯಿ ಸಿಂಗದ ಪುಲಿಯ ಮರಿವೆರಸಿ ||
ಕರಿಯದಂತಹ ಬಡಿಗಳನ್ನು ಪರಿ | ಪರಿಯ ಬಿಲು ಸರಳುಗಳನಾಂತೀ |
ಧರೆಯೆ ತೆರಪಿಲ್ಲೆನಿಸಿ ಬರೆ ಕೈವೀಸಿದನು ಭರದಿ || ೨೨ ||

ಧರೆಗೆ ಪೊಸತೆನೆ ಕೂಕಿರಿದು ಭೋ | ರ್ಗರೆದರಂಬಿನ ಬಲುಮಳೆಯ ಬೇಡರು |
ನರೆ ನನೆದುದಾ ನಿಬ್ಬಣದ ನೆರವಿಗಳದೇನೆಂಬೆ ||
ಕರಿಗಳೊರಗಿದವಶ್ವ ತತಿ ಮೈ | ಮರೆದವರುಣ ಜಲಾಂಬು ನದಿಯಲಿ |
ಹರಿದವಾ ತೇರುಗಳು ನೀನೆನೆ ಮುಳುಕಿ ತಾಳುಗಳು || ೨೩ ||

ತರಣಿಸುತನದ ಕಂಡು ತಿರುವಿಗೆ | ಸರಳ ಸಂಧಿಸಿ ತೆಗೆಯಲೆಂಬೀ |
ಸ್ಮರನ ವಿದ್ಯಾಶಕ್ತಿಯೋ ತತ್‌ಕ್ಷಣದಿ ಕೀಲಿಸಲು ||
ಸ್ಫುರಣೆ ಗೆಟ್ಟವನಲ್ಲಿ ನಿಂದನು | ನರನನೀಕ್ಷಿಸಿ ಬಿಲುವಿಡಿಯೆ ಪುಲು |
ಸರಳ ತೊಡದಿರು ನೀನಧಟಗಡ ತೊಡುಮಹಾಸ್ತ್ರವನು || ೨೪ ||

ಎಂದೊಡುರಗಾಸ್ತ್ರವನು ಹೂಡಿದ | ನಿಂದ್ರಸುತ ಬರೆತೆಗೆಯೆ ಕೃತಕ ಪು |
ಳಿಂದ ಕೀಲಿಸಲೇನೆ ಹೇಳುವೆನಾಣೆ ಯಿಟ್ಟಂತೆ ||
ಸಂದು ಹಂದದೆ ನಿಂದನನಿಲಜ | ನಂದು ಬಡಿಗೊಂಡಟ್ಟಿ ಬರುತಿರ |
ಲಂದು ಕಲ್ಲಬಳಾರ ನಂದದಿ ನಿಂದನಿರ್ದಂತೆ || ೨೫ ||

ಗರಡಿಯಾಚಾರ್ಯನು ಪುರುಡಿಯ | ಮರೆದವೋಲಿರಿಸಿದನು ಗರುಡಿಗೆ |
ಗುರುವು ನೀನಹುದಲ್ಲದೊಡೆ ಕೈಮರೆದು ನಿನ್ನಂತೆ ||
ನರನು ಮೊದಲಹ ಕೋಲಮಕ್ಕಳು | ಧುರದೊಳಗೆ ಚದುರಂಗಗೊಡ್ಡಿದ |
ಕರುವಿನಂತಿರ ಬಲ್ಲರೇ ಹೇಳೆಂದನಾ ಮದನ || ೨೬ ||

ದರ್ಪಕನ ವಿದ್ಯಾ ಪ್ರಭಾವದಿ | ಲೆಪ್ಪದರಸುಗಳಾಗಿ ನೃಪತತಿ |
ಇಪ್ಪುದನು ಗಂಗಾತ್ಮಜನು ಕಂಡೆಲೆ ಸುಯೋಧನನೆ ||
ಚಪ್ಪರಿಸಲರಿದೀ ನಿಶಾಟನ | ನಿಪ್ಪಸರದಿಂ ಪಾಂಡವರಿಗಣಿ |
ದಪ್ಪಿತೆಂದರೆ ಸಾಮವೇ ಹಿತವೆಂದು ನಡೆತಂದ || ೨೭ ||

ಎಲೆ ಶಬರ ನಾಯಕನೆ ನೀಂ ಕಡು | ಗಲಿಯಬಹುದು ನಿನ್ನೊಡೆಯನೊತ್ತಿನೊ |
ಳೊಲಿದು ನೀನೆಂದನುಪೆ ಕೊಡುವೆವು ನಮ್ಮ ಕಳುಹೆನಲು ||
ಪಲವನುದಧಿಯನೇ ಕೊಡೀ ಸಂ | ಚಳಿಸಿದೊಡೆ ಬಿಡೆನೆನುತ ತನ್ನಯ |
ಬಲವನಾ ವಿಪಿನೋದರಕೆ ತೆರೆದಂತು ತೋರಿಸಿದ || ೨೮ ||

ಕಳೆದನೆಲ್ಲರ ಕೀಳನೆಯನಾ | ಗಳೆರುಧಿರವಾರಾಸಿ ಪೋದುದು |
ಮುಳುಗಿದುದಾ ಚತುರಂಗವೆದ್ದುದು ನಡೆದುದಾ ಪಡೆಯು ||
ಸಲೆ ವಿಮಾನವನತನು ವೈದಿದ | ನೆಲೆ ಮದನನಿರವದ್ಯ ಯುದ್ಧದ |
ಬಲುಮೆ ಲೇಸೆಂದೊಲಿದು ಕೊಂಡಾಡಿದನು ನಾರದನ || ೨೯ ||

ಅನಿತರೊಳು ಪೋಯ್ತಾ ವಿಮಾನವು | ಮುನಿಪ ತತ್ಪುರವಾರದೆನೆ ನಿಜ |
ಜನಕನೂರಿದು ಸುರಪ ನಿರ್ಮಿತವಿದುವೆದ್ವಾರವತಿ ||
ಅನತಿಶಯ ವೈಭವದ ಕಡುಚೆಲು | ವಿನ ತವರ್ಮನೆಯಿದು ಮನೋಭವ |
ವನಜನಾಭಗೆ ನಿನ್ನ ಬರವನು ಪೇಳ್ದು ಬಹೆನೆಂದ || ೩೦ ||

ಮುನಿಪನೀವಿರಿ ನಾನೆ ಪೋದಪೆ | ನೆನುತ ಧರೆಗವತರಿಸಿ ನಿಬ್ಬಣ |
ವನು ನಡೆಸಿತಹ ಮಂತ್ರಿಯಾಗಿಯೆ ಪಡೆವಡೆದು ಬರಲು ||
ವನಿತೆ ಸತ್ಯಯ ಮೋಹದಾನಂ | ದನವು ಪೊಗದಿರಿಮೆಂದು ಬನಗಾ |
ಹಿನವರಾಡಲು ಬಾರೆಲೈ ವನಪಾಲ ಕೇಳೆಂದ || ೩೧ ||

ಬಂದುದುದಧಿಯ ನಿಬ್ಬಣವು ಕರ | ತಂದೆ ನಾಂ ಭರವಸದಿ ಬರುತದೆ |
ಮುಂದೆ ನೀನ್ನಿಮ್ಮೊಡತಿಗೀ ಒಸಗೆಯನು ಹೇಳೆನಲು ||
ಮಂದಯಿಸದವ ಪೋಗೆ ನಂದನ | ಬೆಂದವನವೆನೆ ಮಾಡಿ ಕುದುರೆಯ |
ನೊಂದನೇರಿದ ಮುದುಪನಾಗಿಯೆ ಪೊಕ್ಕನಾ ಪೊಳಲ || ೩೨ ||

ಮದವಣಿಗನಾ ಭಾನು ಕಂಡೀ | ಕುದುರೆಗೇಂ ಬೆಲೆ ಹೇಳೆನಲು ಕೊ |
ಟ್ಟುದೆ ಬೆಲೆಯು ನೀವಿಸುವ ವತ್ತುವ ನೋಡಿಮೆಂದಿಳೆಯೆ ||
ಅದನೊಲಿದು ತಾನೇರಿಕೊಂಡ | ತ್ತೊದಗಿ ಗಂಜಳ ಕುಳಿಯೊಳಗೆ ಕೆಡ |
ಹಿದುದು ತಾಂ ಗಹಗಹಿಸಿ ನಕ್ಕನು ಕೃತಕ ಶತವೃದ್ಧ || ೩೩ ||

ಮದವಣಿಗನೀ ಚಕ್ರಿಯಾತ್ಮಜ | ಕುದುರೆಯಿಂ ಕೆಳಬಿರ್ದೊಡೇನೆಲೆ |
ಮುದುಪನಗುವೈ ಯೇನಲೆಲೆ ಕೆಳೆಯರಸುಮಕ್ಕಳಿರ ||
ಮುದುಪ ನಾನೇರಿದ ಕುದುರೆ ಕೆಡ | ಹಿದುದೆನಲು ಚಕ್ರಿಯ ಕುಮಾರಕ |
ನಧಟನಹುದಹುದೆಂದು ಕುದುರೆಯನೇರಿ ಪೊರಮಟ್ಟ || ೩೪ ||

ಬಳಿಕ ವಿಕಟಾಂಗದ ಮುನಿತ್ವದ | ತಳೆದು ಸತ್ಯಯ ಕೊಳನ ಪುಗಲಿ |
ತ್ತಿಳಿಯದಿರಿ ನಮ್ಮಮ್ಮಯಾ ಕುಡಿನೀರ ಬಾವಿಯೆನೆ ||
ಇಳಿದಡೇಂ ನಾನವರ ಮಗನೆನೆ | ಲಲನೆಯರು ಕೈವೊಯಿದು ನಕ್ಕರು |
ಚೆಲುವ ಮಗನೆಂದನಿತರೊಳು ಗುಂಡಿಗೆಯ ತುಂಬಿದನು || ೩೫ ||

ಕೆರೆಯು ಬರುಗೆರಯಾಗಲೀಕ್ಷಿಸಿ | ಮೊರೆಯಿಡುತ ಬೆಂಬತ್ತೆ ತೊತ್ತಿರು |
ಬರನೆ ನೀರಿದೆ ಕೊಳ್ಳಿಯೆಂದು ಕಮಂಡಲವ ಮರುಗೆ ||
ತೊರೆವರಿದುದದು ಬಾಳವೃದ್ಧರು | ಮೊರೆಯಿಡುತ ತೆಕ್ಕಾಡುತಿರ್ದರು |
ಹರಿಸಿದನು ಬೆನು ಮುರಿದು ವಾಮನ ರೂಪ ಕೈಕೊಂಡ || ೩೬ ||

ಪುರದ ರಮಣಿಯರೀಕ್ಷಿಸಿಯೆ ನೋ | ಡಿರೆ ವಿಕಾರದ ಹೇಸಿ ರೂಹಿನ |
ನರನನೆನೆ ಶಾಂತೆಯರ ಮೊಗದಲಿ ಮೀಸೆ ಸುಂಡಿಲನು ||
ಮೊರಗಿವಿಯ ಪೆರ್ಮೊಲೆಯ ಬೆನ್ನಲಿ | ವಿರಚಿಸಲು ಗಂಡರು ಬೆರಗು ಗೂಳೆ |
ಮೊರೆಯಿಡುತ ಬಾಲಕರು ಬೆದರಲು ಕೇರಿಕೇರಿಯಲಿ || ೩೭ ||

ಹಸಿದ ಹಾರುವನಾಗಿ ಭಾಮೆಯೊ | ಳಸನಮಂ ಪಡೆದುಣಿತ ಮದುವೆಗೆ |
ಶಶಿಮುಖಿಯ ರಟ್ಟನಿತನೆಲ್ಲವ ತಿನಲು ಭೂತವೆನೆ ||
ಕಿಸರುಗೊಂಡಿರಿ ನೀವೆನುತವಾ | ದಿಸಲು ಲೋಳೆಯ ಜಲಧಿಯಲಿ ತೇ |
ಲಿಸಿದನೆಲ್ಲರನುಪ್ಪರಿಗಿಯೇರಿದಳು ಹರಿಯರಸಿ || ೩೮ ||

ಒಂದು ತಗರನು ಕಟ್ಟಿಕೊಂಡು ಮು | ಕುಂದನಯ್ಯನ ಕಂಡೆರಗಿ ಜೀ |
ಯೊಂದು ತಗರನು ಬಿಡಿಸಿ ನೀವಿದ ಕರ್ತಿಕಾರರೆಲೆ ||
ಎಂದೊಡಿನಿಸಂ ನಕ್ಕು ಬಲುದಗ | ರೆಂದು ತಂದೈ ನಮ್ಮ ಮೊಳಕಾ |
ಲೊಂದನೊಡ್ಡುವೆ ನಿನ್ನ ತಗರನು ಬಿಟ್ಟು ನೋಡೆಂದ || ೩೯ ||

ಧರೆಯೆ ವಂದಿಪ ಚಕ್ರಿಯಯ್ಯನ | ಚರಣವನು ಮುರಿಗುಟ್ಟಿದನು ಕೊ |
ಯ್ಕೊರಲನೆನಲಮ್ಮೆನೆನೆ ಬೆದರದಿರೀತನರಿದೇನು ||
ಹರಣಗೆಟ್ಟವು ಹಲವು ಮುನ್ನೆಂ | ದರಸನಾನಿಸೆ ಬಿಟ್ಟೊಡದು ಸಿಡಿ |
ಲೆರಗಿತೆನೆ ತಾಗಿದೊಡೆ ಮೂರ್ಛಿಸೆ ನಗುತ ಪೊರವಟ್ಟ || ೪೦ ||

ಹೇಸಿಕೆಯ ತನು ಬ್ರಹ್ಮಚಾರಿಯ | ವೇಷದಿಂ ಬರೆ ಪಸಿದುರುಗುಮಿಣಿ |
ಆ ಸಮಯದಲಿ ಬಂದೆರಗಿಯುಚಿತಾಸನೆದಲಿರಿಸಿ ||
ಸೂಸುವಾ ರಸಿಗೆಯನು ವಸನದ | ಲೋಸರಿಸಿ ಮೈದೊಳೆದು ಚರಿಗೆಯ |
ನಾಸುದತಿ ಮಾಡಿಸಲು ಕೊಂಡದನೈದೆ ವರ್ಧಿಸಿದ || ೪೧ ||

ಕರವನೊಡ್ಡಿಯೆ ತೆಗೆತೆಗೆದು ಕೆಲ | ಕಿರಿಸಿದಳು ಛರ್ದಿಯನದೇಂ ಕೊ |
ಕ್ಕರಿಸಿದಳೆ ನಾಂ ಪಾಪಿಯಿತ್ತುದಪಥ್ಯವಾಯ್ತೆಂದು ||
ಕೊರಗುವಮ್ಮನ ಗುಣಕೆ ಮೆಚ್ಚಿದ | ನಿರದೆ ಬಿಜ್ಜೆಯ ಕಳುಹಿ ಕರೆಯಿಸೆ |
ಭರದಿ ನಾರದ ಬರಲೆರಗಿದಳು ಕೃಷ್ಣನರ್ಧಾಂಗಿ || ೪೨ ||

ಮುನಿಪ ಬಂದಿರಿ ಕಾಣೆನೆನ್ನಯ | ತನುಜ ರತ್ನವನೆಂದು ಚಿಂತಿಸೆ |
ವನಜನಾಭನ ರಾಣಿ ನಿನ್ನಯ ಕಂದನೀತನೆನೆ ||
ಮನಸಿಜನು ನಿಜರೂಪಿನಿಂ ಭೋ | ರೆನೆ ನಮಸ್ಕರಿಸಿದೊಡೆ ಸಂತಸ |
ವನಧಿಯೊಳಗೋಲಾಡಿ ಪುಳಕದ ಗುಡಿಯಕಟ್ಟಿದಳು || ೪೩ ||

ಚೆಂದಳವನೊಸಲೆಡೆಗೆ ತಂದೊಲ | ವಿಂದ ನೆಗೆದಪ್ಪಿದಳು ಪರಸುತ |
ಕಂದನನು ಮೂಜಗದ ಸಿರಿ ಕೈಸಾರ್ದ ತೆರವಾಗಿ ||
ಕುಂದದಾನಂದದಲಿ ತಾಂ ಬೇ | ರೊಂದು ಮೈವೆಚ್ಚಿದಳು ಸುತಸಹ |
ವೊಂದೆ ಪೀಠದೊಳಿರ್ದಳೀಕ್ಷಿಸಿ ದಣಿಯಳಾ ಜನನಿ || ೪೪ ||

ಬಳಿಕಲಾ ನಾರದನು ಜಿನರಿಂ | ತಿಳಿದವರ ಭವಗಳನು ಕಾಮನ |
ಬಲುಹನಾತರ ತಂದ ಬಂದಂದವನು ಬಿಚ್ಚಳಿಸಿ ||
ನಲಿದಳಾರುಗುಮಿಣಿಯು ಝಮ್ಮನೆ | ಮೊಲೆ ತೊರೆಯಲೀ ಮಗನ ಚೆಲುವಿನ |
ಪಲವು ಬಾಲಕ್ರೀಡೆಗಾಂ ಪೊರಗಾದೆನೆನಲೊಡನೆ || ೪೫ ||

ಹಸುಳೆಯಾಗಿಯೆ ಮೊಲೆಯನುಂಡನು | ನಸುನಗೆಯ ತೋರಿದನು ಮಿಗೆತೊದ |
ಳಿಸಿದ ನಿಂತುಟನೇಕ ಬಾಲ್ಯ ವಿನೋದವನು ತೋರೆ ||
ಕುಸುಮ ಬಾಣನೆ ತನುಜ ಚಕ್ರಿಯೆ | ಒಸೆದ ಗಂಡನು ತನ್ನ ಭಾಗ್ಯಕೆ |
ವಸುಧೆಯೊಳಗೆಣೆಯಿಲ್ಲೆನುತ ಸಂತಸವನಪ್ಪಿದಳು || ೪೬ ||

ಬಳಿಕ ಹರಿಚಂದನದ ರತ್ನ | ಗಳ ಜಿನಪ್ರತುಮೆಗಳ ಭೂಷಣ |
ಗಳನು ಘಳಿಲನೆ ತರಿಸಿ ಕಾಣಿಕೆಕೊಟ್ಟ ಕಾಲ್ಗೆರಗೆ ||
ತಳೆದಳತಿ ವಿನಯದಲ್ಲಿ ಸಂತಸ | ವಳವಿಗಳಿದುದು ರುವುಮಿಣಿಗೆ ತಾಂ |
ಕಳುಹೆ ನಾರದನಡರಿದನು ನಭದಲಿ ವಿಮಾನವನು || ೪೭ ||

ಜನನಿಯೊತ್ತಿನೊಳಂಗ ಭವನಿರೆ | ಬಿನದದಿಂ ದೂತಿಯರು ಬರುತಿರೆ |
ಜನನಿ ಇವರಾರೆನಲು ಕರುಳನು ಬೀಡೆ ಬರುತಹರೆ ||
ತನುಜ ನೀನಗಲಿದ ಕತದಿನೆಂ | ದನಿತನರುಪಲು ಬಿಜ್ಜೆಯಿಂ ತಾ |
ವನಜ ಲೋಚನನಾದರವರೈತಂದು ಬೇಡಿದರು || ೪೮ ||

ಸತ್ಯಭಾಮೆಗೆ ಗರ್ವವಾದೊಡೆ | ತೊತ್ತಿರಿಗೆ ಸೊಕ್ಕುಗಳೆ ನೀವೇ |
ನೊತ್ತಿನೊಳೆ ಬೇಡುವರೆ ಕುರುಳನು ಬಾಯಕೊಳ್ಳೆಂದು ||
ನೆತ್ತಿಗೂದಲನರಿದವರ ಕೈ | ಗಿತ್ತುಕಳುಹಲು ಮೊರೆಯಿಡುತ ಬಂ |
ದಿತ್ತರರಸಿಯೆ ಗಂಡನಿಂ ಮಾಡಿಸಿದಳಿದನೆಂದು || ೪೯ ||

ಎಂದೊಡತಿ ಕೋಪದಲಿ ತಾನೇ | ಬಂದು ಮುಂದಲೆಯರಿದು ತಹೆ ತಡೆ |
ವಂದವನು ನೋಡುವೆನೆನುತ ಪೊರಮಟ್ಟು ಬರಬರಲು ||
ಮುಂದಣಾ ಚಾವಡಿಯೊಳಗೆ ಗೋ | ವಿಂದನೋಲಗಗೊಟ್ಟಿರಲು ಕಡು |
ಚಂದವೇ ನಿನಗೀ ಕೃತಕ ಹೇಳೆಂದಳಿಂದುಮುಖಿ || ೫೦ ||

ನಿನ್ನವಳ ಪಕ್ಕದಲಿ ಕುಳ್ಳಿ | ರ್ದೆನ್ನವರು ತಾ ಕುರುಳನೆಂದಡಿ |
ನನ್ನ ಮುಂದಿಂತಾಡುವಿರೆ ಎಂದವರ ಸದೆ ಬಡಿಸಿ ||
ಮನ್ನಿಸದೆ ದೂತಿಯರ ಕರುಳರಿ | ದೆನ್ನಬಳಿಗಟ್ಟುವರೆ ನನ್ನದು |
ನನ್ನಿಯೋ ಅನ್ನಿಯದೊ ನೀ ಹೇಳೆಂದಳಿಂದುಮುಖಿ || ೫೧ ||

ಎನಲು ಬೆರಗಾದನು ಮುರಾಂತಕ | ವನಿತೆಯಾ ದೂತಿಯರ ತೋರಿಸ |
ಲೆನಗಿದದುಭುತವಂಗನೇ ನೀಂಪೋಗು ನಾಂ ತರಿಸಿ ||
ನಿನಗೆ ಕಳುಹುವೆನೆಂದು ಭಾವೆಯ | ಮನೆಗೆ ಕಳುಹಿಸಿಯಾಪ್ತರನು ಪೋ |
ಗೆನಲು ರುಗುಮಿಣೀ ದೇವಿಯರ ಮಂದಿರಕೆ || ೫೨ ||

ಬರಲವರನಂಗಜನು ತಲೆಕೆಳ | ಗಿರಲು ಕಟ್ಟಿಸಿ ಕೇಳ್ದು ಹರಿಯ |
ಚ್ಚರಿವಡೆದು ಬಲಭದ್ರ ಹೋಗೆನೆ ಬರಲು ಕಾಣುತವೆ ||
ಪಿರಿಯ ಬೆಳ್ಳಿಯ ಬೆಟ್ಟವೆನೆ ಬಹ | ನರನಿದಾರೆನೆ ಮಗನೆ ನಿನ್ನಯ |
ಪಿರಿಯ ತಂದೆಯು ಸಿಂಹಶತಸಾಸಿರಬಳನು ಬಲನು || ೫೩ ||

ಎನಲೊಡನೆ ಬಲು ಸಿಂಹವಾಗಿಯೆ | ದನಿಗೊಡುತ ಹಲಧರನ ನುಂಗಿಯೇ |
ಕನಕ ಹರ್ಮ್ಯಾಗ್ರಕ್ಕೆ ಲಂಘಿಸಿ ಕುಳ್ಳಿರಲು ಕಂಡು ||
ಜನವು ಬೆಕ್ಕಸಬಟ್ಟು ಬೆದರಿದು | ದನಿತರೊಳು ವಿಷ್ಟಿಯೆ ಬಲಭ |
ದ್ರನನು ತದ್ರೂಪನು ಕಳೆದು ಮಾತೆಯ ಬಳಿಗೆ ಬಂದ || ೫೪ ||

ಜನನಿ ಕಾಮ ವಿಮಾನಗಗನದ | ಲನುವಿನಿಂದದೆ ಬೆದರದಂದದಿ |
ಬಿನದವನು ತೋರಿಸುವೆನೆಂದಾಕೆಯನು ನೆಗೆಕೊಂಡು ||
ಮನಸಿಜನು ಬಾನೊಳಗೆ ನಿಂದಾ | ಘನನಿನಾದದೆ ಘರ್ಜಿಸುತ ಪುರ |
ಜನವರಿವವೋಲೆಂದನಾ ರುಗುಮಿಣಿಯ ತೋರಿಸುತ || ೫೫ ||

ಅಂದು ಶಿಶುಪಾಲನಕೊರಳ ಕೊ | ಯ್ತಂದರೀ ರುಗುಮಿಣಿಯನೆಲೆ ಗೋ |
ವಿಂದ ಕೇಳೈ ಶಂಬರಾಂತಕನೆಂಬ ಖೇಚರನು ||
ಇಂದು ನಿನ್ನಸುವೆನಿಸಿದವಳನೆ | ಸಂದೆಗವದೇನಿಲ್ಲದೊಯ್ದಪೆ |
ಬಂದು ಸೆಳೆಕೊಂಬಧಟರಿದರೊಳಗುಂಟೆ ಹೇಳೆಂದ || ೫೬ ||

ಪ್ರಳಯಕಾಲದ ರುದ್ರನೆನೆ ಹರಿ | ಮುಳಿದು ಬಲುವಿಡಿವಾಗಳೆಂದರು |
ತಿಳಿದ ಮಂತ್ರಿಗಳರಸ ಬಿನ್ನಹ ಹಗೆ ಬಡವನಲ್ಲ ||
ಬಲನ ನುಂಗಿದ ರುಗುಮಿಣಿಯನರ | ಗಳಿಗೆಯೊಳೆ ಬಾನ್ಗೊಯ್ದನರನೊಳು |
ಕಲಹರನವಗಾಗಸದೊಳರಿದೆನೆ ಕೃಷ್ಣನಿಂತೆಂದ || ೫೭ ||

ದುರಧರೆಗೆ ಬಂದೊಡ್ಡಿ ನಿಂದಡೆ | ಕೊರಳ ಕೊಯ್ಯದೆ ಮಾಣೆನೆಂದ |
ಬ್ಬರಿಸೆ ಜನನಿಯನಾ ವಿಮಾನಕೆ ಕಳುಹಿ ಲಜ್ಜೆಗಳಿಂ ||
ಸ್ಮರನು ಕೃತಕದ ಚಾತುರಂಗದ | ನೆರವಿಯಲಿ ನಿಸ್ಸಾಳ ಕೋಡಿಯ |
ಸರಭಸದಿ ಬಂದೊಡ್ಡಿ ನಿಂದನು ಸಮರಧರೆಯೊಳಗೆ || ೫೮ ||

ಬಂದುದನಿತರೊಳುದಧಿಯನು ಕರೆ | ತಂದ ನಿಬ್ಬಣ ಪಾಂಡವಾದಿಗ |
ಳಿಂದ ಛತ್ರದ ಚಾಮರದ ವಾದ್ಯಗಳ ಗಣಡದಲಿ ||
ಅಂದು ಪುರವಧುಗಳು ಕುರೂಪನು | ಬಂದು ಕಂಡವರೆಲ್ಲರಂ ಘೊ |
ಳ್ಳೆಂದು ನಗುತರಮೆನಯನೈತರಲೇನೆ ಹೇಳುವೆನು || ೫೯ ||

ಹರಿಧುರಕೆ ನಡೆಗೊಳಲ್ಮೊಡನೆಯೆ | ಕುರುಪತಿಯು ಪಾಂಡವರು ಮೊದಲಾ |
ದರಸುಗಳು ಸಬ್ಬರು ಭರದಿ ಬಂದೊಡ್ಡಿ ನಿಲಲೊಡನೆ ||
ಸ್ಮರನು ಕೈವೀಸಿದೊಡೆ ಕೃತಕದ | ಪಿರಿಯ ಬಲವೊಡವೆರಸಿ ಸುರಿದುದು |
ಸರಳ ಮಳೆಯನು ಯಾದವರ ಕೌರವರ ಬಲಮುಳುಗೆ || ೬೦ ||

ಕಡುಮಸಗಿ ಯಾದವರ ಪಡೆಯೆಸೆ | ಕಡಿದ ತಲೆಯಿದಿರಟ್ಟಿ ಕಚ್ಚುವ |
ಉಡಿದ ಕೈಕಾಲಾನೆ ಕುದುರೆಯ ಬಡಿದು ಕೆಡಹುವವು ||
ಒಡನೆ ತಲೆ ಚಿಗುರುವವು ನೆತ್ತರು | ಬಿಡಲು ಪನಿಯೊಂದಕ್ಕೆ ಭೂಮಿಯ |
ನೊಡೆದು ನೆಗೆವರು ಕೋಟಿ ಸುಭಟರು ಗೆಲವುದರಿದಾಯ್ತು || ೬೧ ||

ನರನು ಬಿಲುಗೊಂಡೊಂದು ದೆಸೆಯಲಿ | ಮರುತಿ ಬಡಿಗೊಂಡೊಂದು ಕಡೆಯಲಿ |
ತರಣಿಸುತ ಚಾಪವನು ತಿರುಹುತದೊಂದು ಮುಖದಲ್ಲಿ ||
ಎರಡು ಮೂರಡಿಯಿಡುತ ನಿಂದರು | ಕರಚರಣವನು ಮಿಸುಕಲಮ್ಮದೆ |
ಗರುಡಿಯೋಜನು ಪುರುಡಿಯನು ಮರದಂತೆ ನಿಂದಿರ್ದ || ೬೨ ||

ಬಲನು ಬಿಲ್ಪಿಡಿದಾಂತೆಸದೆ ನಿ | ರ್ಬಲನೆನಿಸೆ ಸೈಂಧವನು ಸೈಂಧವ |
ಶಿಲೆಯವೋಲಿರೆ ಶಲ್ಯಶಲ್ಯವ ತೆರದಿ ನೆಟ್ಟನಿರೆ ||
ಅಲರುವಿಲ್ಲನ ಬಿಜ್ಜೆಯಂಬಾ | ಗಲದ ಬಿನ್ನಣಿ ಸವೆದ ನರ ಪು |
ತ್ಥಳಿಗಳೆನಿಸಿದರಾಂತು ನಿಂದಖಳಾವನೀಶ್ವರರು || ೬೩ ||

ನಾರದರು ರುಗುಮಿಣಿಗೆ ಮದನನ | ವೀರವನು ವಿದ್ಯೆಯನು ತೋರೆ ಕು |
ಮಾರನನು ಕೊಂಡಾಡಿ ಕಡುಬೆರಗಾಗಿ ನೋಡುತಿರೆ ||
ವಾರಿಜಾಕ್ಷನ ತನ್ನವರ ಜಯ | ದೋರೆಯನು ನೆರೆಕಂಡು ವಹಿಲದಿ |
ಮಾರನಿದಿರಿಗೆ ಖಗಪತಿ ಧ್ವಜರಥವ ನೂಕಿದನು || ೬೪ ||

ನಳಿನಲೋಚನನಾರ್ದು ಶಾರ್ಙ್ಗವ | ಬಲಿದು ಜೇವೊಡೆಗೆಯ್ಯೆ ಲೋಕವ |
ನಳರಿಸುವ ದನಿಮಾಯವಾದುದು ಮದನ ನೆಚ್ಚಂಬು ||
ಬಲಗೊಳುಲಚ್ಚುತನ ಚರಣದ | ಕೆಲಕೆ ನಟ್ಟುದು ಹರಿಯ ಕಣೆಗಳ |
ಕಳಿಯಗೊಡದೆಡೆಗಡಿದು ಜಯಕೋದಂಡ ನಿಂತೆಂದ || ೬೫ ||

ಬಲನನುಂಗಿದ ಸಿಂಹಲೊಕ್ಕಿಯ | ಸೆಳೆಗೆ ತಾನಂಜುವುದೆ ನಮ್ಮನು |
ಹುಲು ಸರಳಲಂಜಿಸಲು ಶಿಶುಪಾಲನೊ ಮುರನೊ ಮಧುವೊ ||
ನಳಿನ ನಾಭನೆ ದಿವ್ಯ ಬಾಣಂ | ಗಳನು ತೊಡುತೊಡೆನಲ್ಕೆ ತೊಟ್ಟಿಸೆ |
ಫಳಿಲನವನೆಲ್ಲವನು ಪ್ರತಿ ವಿದ್ಯೆಯಲಿ ಖಂಡಿಸಿದ || ೬೬ ||

ನಡುಗಿದಳು ನಭದೊಳಗೆ ರುಗುಮಿಣಿ | ಕಡುಮುಳಿದ ಜವನಂತೆ ನಗಧರ |
ಪೊಡವಿಗಿಳಿದನು ಮಲ್ಲಗಾಳೆಗಕಂಗಜನುಮಿಳಿದು ||
ನಡೆದು ಬಂದೊದರಿಸಿ ಭುಜಂಗಳ | ತೊಡರುವನಿತರೊಳಧಿಕರೀರ್ವರ |
ನಡುವೆ ನಿಂದನು ನಾರದನು ಭೂಪಾಲ ಕೇಳೆಂದ || ೬೭ ||

ತಂದೆ ಮಕ್ಕಳಿಗೇಕೆ ಜಗಳ ಮು | ಕುಂದ ಹೇಳೆನೆ ನನ್ನ ಕಂದನ |
ತಂದಿರೇ ಮುನಿಪತಿಯೆಯೆನೆ ರುಗುಮಿಣಿಯೆ ನಚ್ಚು ತನ ||
ಮುಂದೆ ನಿಲಿಸಿ ಮನೋಜನಾಗಳೆ | ಬಂದು ವರಮಣಿ ಮಕುಟಕಾಂತಿಗ |
ಳಿಂದ ತಂದೆಯ ಚರಣಕಮಲವನರ್ಚಿಸಿದನೊಲಿದು || ೬೮ ||

ಪರಸಿ ದಿಕ್ಕರಿಕದ ಸಮಾನದ | ಕರದಿ ತನುಜನವೆತ್ತಿ ಹರುಷೋ |
ತ್ಕರುಷದಲಿ ಬಿಗಿದಪ್ಪಿ ಪಚ್ಚೆಯ ಬಣ್ಣದಿನಿರೂಹ ||
ಧರೆಯ ಗಂಡರೊಳೆಲ್ಲರೊಳು ನೀ | ರರ ಶಿರೋಮಣಿಯನು ನಿರೀಕ್ಷಿಸಿ |
ಶರಧಿ ರಾಕಾಚಂದ್ರನನು ಕಂಡಂತೆ ಪೆರ್ಚಿದನು || ೬೯ ||

ಕುಸುಮ ಕೋದಂಡವನು ಚಂದನ | ನಸಮ ಭುಜಬಲ ಸೌಂಧನನು ಸುರ |
ಋಷಿಯೆ ನಿಮ್ಮಡಿಯೆಂತು ತಂದಿರಿಯೆನಲು ನಾರದನು ||
ಸಸಿನೆ ವಿವರಿಸಿ ಪೇಳೆ ಮಿಗೆ ಸಂ | ತಸದಳೆದನಾ ವಿಷ್ಣು ಕಾಮನು |
ವಸುಧೆ ನೆರೆಯದೆ ನೆರೆದ ಮಾಯಾಬಲವನುಡುಗಿಸಿದ || ೭೦ ||

ಕಳೆದನೆಲ್ಲರ ಕೀಳನೆಯನಾ | ಗಳೆ ಬಲನ ಚರಣಕ್ಕೆರಗಿ ಮುನಿಗಳು |
ತಿಳುಪಿದಂದದಿ ಪಾಂಡವಾದಿ ಸುಬಂಧುಗಳನರ್ತಿಸಿ ||
ಉಳಿದವರ ಲಾಲಿಸುತ ಪುರವಧು | ಗಳ ವಿಕೃತಿಯನು ಬಿಡಿಸಿಯಾಚಕ |
ಕಳಕಳದ ಸಂಸ್ಥವದ ಮನ್ನಿಸುತಿರ್ದನೊಲವಿನಲಿ || ೭೧ ||

ಪೊಳಲು ಮುನ್ನವೆ ಸಿಂಗರಿಸಿದುದು | ನಳಿನನಾಭುನು ನಾರದನನಾ |
ನಳಿನ ನೇತ್ರೆಯನಂಗಜನ ಮುಂದಿಟ್ಟುಕೊಂಡಂದು ||
ಒಲಿದು ಪಾಂಡವರಾಗಿ ನೃಪ ಸಂ | ಕುಲವೆರಸಿ ಪುರವೈದಿಯರಮನೆ |
ಯೊಳು ಮನೋಜಗೆ ಕಟ್ಟಿದನು ಯುವರಾಜ ಪಟ್ಟವನು || ೭೨ ||

ಫುಲ್ಲ ನೀನಿಲ್ಲಿಲ್ಲದಿರೆ ರವಿ | ಯಿಲ್ಲದಂಬರದಂತೆ ಚಂದ್ರಮ |
ನಿಲ್ಲದಿರುಳಂತಿರ್ದೆ ನಿನ್ನೆಗಮಿನ್ನು ನನ್ನಿಂದ ||
ಬಲ್ಲಿದರು ಸಂಪನ್ನ ಲಕ್ಷ್ಮೀ | ವಲ್ಲಭರು ಪೆರರಾರೆನುತ ಸಭೆ |
ಯಲ್ಲಿ ಸಂತೋಷದಲಿ ನುಡಿದನು ಪುಂಡರೀಕಾಕ್ಷ || ೭೩ ||

ನಿನಗೆ ಮುನ್ನೊಪ್ಪಿರ್ದ ಕೌರವ | ತನುಜೆಯುದಧಿಯ ಮದುವೆನಿಲ್ಲಿಂ |
ದಿನ ಮುಹೂರ್ತದೊಳೆನಲು ರತಿಯನು ತಾಂಗಳಿಸಿದಿರವ ||
ಜನಕಗೆಲ್ಲವನರುಹಿ ವಿದ್ಯೆಯಿ | ನಿನಿತು ಬೇಗದಿ ಕರಸಿ ಪೊರನಂ |
ದನದೊಳಹರೆಂದತನು ಬಿನ್ನೈಸಿದನು ನಿಜಪಿತಗೆ || ೭೪ ||

ಹರಿ ಸಮಸ್ತರು ವೆರಸಿ ಧರೆಗ | ಚ್ಚರಿಯಿದೆನಲಿದಿರ್ಗೊಳಲು ಬಂದರು |
ಹರುಷದಿಂದಾ ಕಾಳಶಂಬರ ವಜ್ರದಾಡಾದಿ ||
ವರವಸಂತ ಜಯಂತ ರತಿಸಹ | ಬರೆ ಯಥೋಚಿತ ವಿನಯದಿಂ ಸ |
ತ್ಕರಿಸಿ ನಿಜನಗರವನು ಪೊಕ್ಕರು ಸರ್ವಸಂಭ್ರಮದಿ || ೭೫ ||

ಜಲಚರಧ್ವಜ ರಥವ ದೇವತೆ | ಗಳು ಮನೋಜಗೆ ತಂದು ಮುಂದಿಡೆ |
ನಳಿನನಾಭನ ಮತದಿ ಮನ್ಮಥನಾ ರಥವನೇರಿ ||
ಕೆಲದೊಳಿರೆ ರತಿ ಕರುವುವಿಲ್ಲೈ | ದಲರ ಬಾಣವನಾಂತು ಮೌಕ್ತಿಕ |
ದಲರ ಶುಭ್ರದ ಸತ್ತಿಗೆಯನೆತ್ತಿದರು ಯಕ್ಷಿಗಳು || ೭೬ ||

ಅಂದು ಪಡೆದಾ ಚಾಮರಂಗಳ | ತಂದು ಢಾಳಿಪರವರೆ ತುರಗವು |
ಗಂಧಗಜವಿರದೊತ್ತಿನಲಿ ಬರೆ ಮಣಿವಿಮಾನವದು ||
ಚಂದದಿಂ ಬರೆ ಸಿಂಗವಣೆ ಪಲ | ವಂದದಾ ಶಯ್ಯಾದಿ ದಿವ್ಯಾ |
ವೃಂದವನು ಪೊತ್ತಿತ್ತರದಿ ಬರೆ ಪುರವನೈದಿದರು || ೭೭ ||

ನೆರೆದು ನರನಾರೀಜನವು ಸೌಂ | ದರಿದ ರತಿಯನು ಕಾಮದೇವನ |
ದೊರವಡೆದ ಚೆಲುವಿಕೆಯನಾ ವಿದ್ಯಾಸಮೂಹವನು ||
ಹರುಷದಿಂದೀಕ್ಷಿಸುತಿರಲು ಬಂ | ದರಮನೆಯ ಪೊಗುತಿರಲು ಪಾಡುತ |
ತರುಣಿ ರುಗುಮಿಣಿದಿರುಗೊಳೆ ರತಿಯೆರಗೆ ಪರಸಿದಳು || ೭೮ ||

ಅದೆ ಮುಹೂರ್ತದೊಳಾರತಿಗೆ ಮಾ | ಡಿದರು ಮಂಗಲ ಮಜ್ಜನವ ಕೋ |
ವಿದೆಯರಂಗಜಲಕ್ಷ್ಮಿಯನು ಪೂಜಿಸುವವೊಲುನಲಿದು ||
ಚದುರಿನಿಂ ಕೈಗೈಸಿದರು ಸ | ಮ್ಮುದದಿ ರುಗುಮಿಣೆ ಕುರುಳ ತರಲ
ಟ್ಟಿದಳುಲ ಚೇಟಿ ಸುಕೇತು ನಂದನೆ ಪೇಳ್ದಳಿಂತೆಂದು || ೭೯ ||

ತನಗದೆಲ್ಲಿಯ ಮಗನು ಮಾಯಾ | ಜನಕನವ ನೆಂದೀಯದಿರೆ ತಂತ |
ನ್ಮುನಿಯೆ ಕೃಷ್ಣನನುಜ್ಞೆಯನು ನಡೆತಂದವರ ಭವನ ||
ಜಿನರಿನರಿದಂದದಲಿ ಪೇಳ್ದೊಡೆ | ವನಿತೆ ಕುರುಳನು ತಿಳಿದು ಕೊಡಲಂ |
ಗನೆಯರದ ತಂದಿತ್ತರುತ್ಸವದಿಂದೆ ರುಗುಮಿಣಿಗೆ || ೮೦ ||

ಬಂದುದೆನ್ನಯ ವಾಸಕಿಸುರನು | ಕೆಂದಳದಿ ಮೈದಿವೆನೆ ತೆಗೆಯಂ |
ದಂದು ಸಕಲೋತ್ಸವದಿ ಕಂದರ್ಪನಕರೆದು ತಂದು ||
ಮಿಂದಳಾ ಮೊಲೆ ನೀರನತ್ಯಾ | ನಂದದಲಿ ಕೈಗೆಯಿಸಿ ಕಾಮನ |
ತಂದರೈದೆ ವಿವಾಹ ಸದನಕೆ ಪಾಡುತಬಲೆಯರು || ೮೧ ||

ರತಿಯನೊಲಿದು ಜಯಂತ ತರೆ ಕುರು | ಪತಿಯುದಧಿಯನು ತಂದಿರಿಸೆ ಸಂ |
ನ್ನುತ ಮುರ್ಹೂತದಿ ತೆರೆತೆಗೆಯೆ ಸೂಡಿದರು ಮಾಲೆಯನು ||
ರತಿರಮಣಗಾ ಸಮಯದಲಿ ಭೂ | ಪತಿಗಳಾತ್ಮಜೆಯರ ಕುಡಲು ತ |
ತ್ಸುತೆಯರನು ತಾನಾರು ಸಾಸಿರವನು ಮದವೆನಿಂದ || ೮೨ ||

ಪಾಡಿದರು ಶೋಭನವ ನಲಿನಲಿ | ದಾಡಿದರು ನರ್ತಕಿಯರುತ್ಸವ |
ಗೂಡಿ ಕೈವಾರಿಸಿತು ವಂದಿಗಳ ಬಳ ದಿಗುತಟವ ||
ಝೂಡಿಸಿತು ತೂರ್ಯಾರವವು ನೆರೆ | ಬೇಡಿದಂತೆ ಮುಕುಂದ ಚಾಗವ |
ಮಾಡಿದನು ಮನಸಿಜನ ಮದುವೆ ಪೊಗಳ್ತೆಗಿಂಬಾಯ್ತು || ೮೩ |||

ರತಿ ಮನೋಜನ ಮದವೆ ಲಕ್ಷ್ಮೀ | ಪತಿಕೃತಂಗಡ ಮೆಂದೊಡಿಂತದ |
ರತಿಶಯವನೇವಣ್ಣಿಪುದೊ ಕರಿ ತುರಗ ಭೂಷಣವ ||
ವಿತತ ದೇಶಾಧೀಶರಿಗೆ ಖಗ | ಪತಿಸುತರಿಗಾ ಕಾಲ ಶಂಬರ |
ಗತಿಮುದದಿ ಕೊಟ್ಟೆಲ್ಲರನು ಕಳುಹಿದನು ನಳಿನಾಕ್ಷ || ೮೪ ||

ಅವಳ ಕರಣೇಂದ್ರಿಯವು ಕಾವನೊ | ಳವಗಹಿಸಿದವು ಸವಿತವದೆ ಮ |
ತ್ತವನ ಸಕಲೇಂದ್ರಿಯವು ರತಿಯಲಿರತಿಯನಪ್ಪಿದನು ||
ಸವಿಗೆ ಸವಿಗೊಡೆ ಸೊಗಸು ಝಮ್ಮೆಂ | ದವಯವವ ಜಕ್ಕುಲಿಸೆ ಕಳೆ ಚಿ |
ತ್ತವರ ಸಾಳಿಸೆ ಸುಶಿಲನುಂಡರು ಭೋಗಸಾಗರರು || ೮೫ ||

ರತಿ ರಹಸ್ಯವು ಕಾಮಶಾಸ್ತ್ರ | ಪ್ರತತಿಯೆಂಬಿವು ಲೋಕದೊಳಗಾ |
ರತಿಮನೋಜನ ಸುರತಕೇಳಿಯ ಟಿಪ್ಪಣಗಳೆನಲು ||
ರತಿ ಮನೋಜನ…. ದಂ | ಪತಿಗಳಂಗೂಟವನು ಬಣ್ಣಿಪ |
ಚತುರನಾರಂಗಜನಖಿಲ ವನಿತೆಯರೊಳಿಂತಿಹನು || ೮೬ ||

|| ಅಂತು ಸಂಧಿ ೩೦ ಕ್ಕಂ ಮಂಗಳಮಹಾ ||