ಸಂಧಿ ೩೫

ಉರಿಯೆ ಲಾಕ್ಷಾಗೇಹ ದೇಶಾಂ | ತರದೊಳಸುರರನಿಕ್ಕಿ ವಧುಗಳ |
ಧರಿಸಿ ದ್ರುಪದನ ಪೊಳಲು ಪೊಕ್ಕರು ಪಾಂಡುನಂದನರು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ವಿದುರನು ತಿಳಿದನರಗಿನ |
ಶಾಲೆಯೆಂಬುದ ಕಳುಹೆ ಗೂಡದಿ ಕನಕ ಪಾಂಡವರ್ಗೆ ||
ಹೇಳಲಾಳೋಚಿಸಿಯೆ ದೇಶವಿ | ಶಾಲವನು ಗೂಢದಿ ಚರಿಯಿಸುವ |
ಬಾಳುವೆಯನವರೊಲಿಯೆ ಕನ್ನವ ಸವೆದನಾ ಕನಕ || ೧ ||

ನಿಲ್ಲಿ ನೀವನ್ನೆವರ ನಾ ಪೇ | ಳ್ವಲ್ಲದೈದಲೆ ವೇಡವೆಂದವ |
ನಲ್ಲಿರದೆ ಪೊರಮಟ್ಟು ತನ್ನುಜ್ಜುಗವ ಚಿಂತಿಸುತ ||
ನಿಲ್ಲದತ್ತೆಡೆಯಾಡುತಿಪ್ಪುದು | ಭಿಲ್ಲಿಯೈವರು ಸುತರು ಸಹ ಪಥ |
ದಲ್ಲಿ ಬರೆ ನೆರೆ ಕಂಡು ಮನದಲಿ ನಲಿದನಾ ಕನಕ || ೨ ||

ಎಲೆ ಬಡವೆ ನೀರಾರು ಈ ಮ | ಕ್ಕಳು ಸಹಿತ ಇತ್ತೆತ್ತ ಪೋದಪೆ |
ಬಳಲಿದೇಯೆನೆ ದೇಸಿಗಿತಿ ತಾನು ನಿಷಧಿಯೆನಿಪೆನಣ್ಣ ||
ಪೊಳಲೊಳೀ ಇರುಳೆಲ್ಲಿಯಿಹವೆನೆ | ತಳುವದೆನ್ನೊಡವನ್ನಿ ನಿಮ್ಮಯ |
ಬಳಲಿಕೆಯ ಕಳೆದೊಂದೆಡೆಯಲಿರಿಸುವೆನು ತಾನೆಂದ || ೩ ||

ಎನಲು ಕನಕನ ಹಿಂದೆ ಬರಲರ | ಮನೆಯಲೊಂದಂತರದಿ ಪಾಂಡವ |
ತನಯರರಿಯದ ವೊಲಿರಿಸಿಯಿರುಳರಮನೆಯ ಪೊಕ್ಕು ||
ವಿನುತೆ ಕೊಂತಿಯು ಸಹಿತೆ ಪಾಂಡವ | ರನಿಬರನು ಸವೆದಾ ಸುರಂಗದೊ |
ಳನುವಿನಿಂ ಪೊರಮಡಿಸಿ ಮುಚ್ಚಿದನಾ ಸುರಂಗವನು || ೪ ||

ಬಳಿಕಲೀಯರುವರನು ಅರಮನೆ | ಯೊಳಗೆ ಕರೆದುಣಲಿಟ್ಟು ಮನ್ನಿಸಿ
ಬಳಲಿದಿರಿಯಿಲ್ಲಿಯೆ ವೊರಗಿಯೆಂದತಿ ವಿನಯದಿಂದ ||
ತಳುವದೊರಗಿಸಿ ದೀವಿಗೆಯು ಕಡು | ಬೆಳೆದು ಸುಟ್ಟುದೆನಿಪ್ಪ ಶಂಕೆಯ |
ಬೆಳಸಿ ಕಡುನಡುವಿರುಳದಕೆ ಕಿಚ್ಚಿಕ್ಕಿ ಹೊರವಂಟ || ೫ ||

ಹೊಗೆದು ಹೊತ್ತಿತು ಭುಗಿ ಭುಗಿಲ್ಧಗ | ಧಗಯೆನುತ ಕೇಸುರಿಯ ನಾಲಗೆ |
ನೆಗೆದುದೀಶ್ವರನಿಂ ತ್ರಿಪುರವುರಿದಂತೆ ನೆರೆನೆರೆದು ||
ಗಗನವನು ಚುಂಬಿಸಿತು ಇರುಳದು | ಹಲಗಲೆನಿಸಿದುದು ಸುತ್ತ ಯೋಜನ |
ದಗಲದಲಿ ಕಡು ಬೆಳಗೆ ಕಲವಳಿಸಿದುದು ಪುರಜನವು || ೬ ||

ಕರಿಕುಲದ ನಿಗಳಗಳ ಕಳೆದರು | ತುಗಗಳನತ್ತಿತ್ತಲೊಯ್ದರು |
ಸರಸರನೆ ಗೋವೃಂದವರನು ತೆವರಿದರು ತವತವಗೆ ||
ಉರಿದರಯ್ಯೋ ಪಾಂಡವರು ನಿಂ | ದುರಿವ ಕಿಚ್ಚಿನಲೆಂದು ಸಬ್ಬರು |
ಮರುಗಿದರು ಗೋಳಿಟ್ಟುದಾ ಪಾಂಡವ ಪರಿಗೃಹವು || ೭ ||

ಕುರುಪತಿಯ ಸೇವಕ ಪುರೋಚನ | ಹರುಷಬಟ್ಟನು ತಾನು ತನ್ನವ |
ರಿರದೆ ಅರಮನೆ ಮೂರು ಸುತ್ತಲು ಬೆಳತನಕ ತಿರುಗಿ ||
ಉರಿಯು ತನ್ನೊಳು ತಾನೆ ನಂದಲು | ಮೊರೆಯಿಡುತ ಪಾಂಡವರ ಪಳೆಯರು |
ಮುರುಟಿದಾರುಂ ಪೆಣನನೊಬ್ಬುಳಿ ಮಾಡಿ ದಹಿಸಿದರು || ೮ ||

ದೀವಳಿಗೆಯಾ ಹಬ್ಬದಲಿ ಮಿಗೆ | ದೀವಿಗೆಯ ಬೆಳಗುವ ವಿಧಾನದಿ
ನಾವೆ ಸುಟ್ಟವರಸುವ ಕೊಳಬೇಕೆಂದಿಹನ್ನವರ ||
ತಾವೆ ವಿಧವಶದೊಂದವಿನಿಂದಾ | ದೀವಿಗೆಯೆ ಮನೆಯಳುರೆ ಬೆಂದರು |
ಭೂವರನ ಪುಣ್ಯವಲೆಯೆಂದು ಪುರೋಚನನು ಮನದಿ || ೯ ||

ಬಳಿಕಿದೆಲ್ಲವ ಕಂಡು ಪಾಂಡವ | ರಳಿದರೆಂದು ಪುರೋಚನನು ಥಳ |
ಥಳನೆ ನೇಸರು ಮೂಡುತಿರಲು ಬಿನ್ನವತ್ತಳೆಯ ||
ತಳುವದಾಗಳೆ ಕೊಟ್ಟು ದೂತನ | ಕಳುಹಿ ಹಸ್ತಿನಪುರವ ಪೊಕ್ಕನು |
ಘಳಿನಾ ಧೃತರಾಷ್ಟ್ರನೊಡ್ಡೋಲಗವನೆಯ್ದಿದನು || ೧೦ ||

ಚರನು ರಾಯಸಿಗಂಗೆ ಓಲೆಯ | ನಿರದೆ ಕೊಡೆ ಮನದೊಳಗೆ ಓದಿದ |
ನರಸ ಬಿನ್ನಹವೆಂದು ಪಾಂಡವರಳಿದ ಒಕ್ಕಣೆಯ ||
ವಿರಚಿಸಿದನಾ ಚರನು ಮುಖದಿಂ | ಮರಳಿ ತದ್ವೃತ್ತಾಂತವನು ಬಿ |
ತ್ತರಿಸಿ ಬಿನ್ನಹ ಮಾಡಿಸಿದನೆದೆಗದಡೆ ಕೇಳ್ದವರು || ೧೧ ||

ಸುರನದೀಸುತನಂಧನೃಪ ವಿದು | ರರು ಗರುಡಿಯಾಚಾರ್ಯಮುಖ್ಯರು |
ಪಿರಿದು ದುಃಖಿತರಾದರಾ ಕೌರವನು ಹೂಸಕದ ||
ಕರುಣರಸವನು ಮೆರೆದರಾಗೆ | ಯ್ದುರುತರೋಪಾಯವು ಫಲಿಸಿತೆಂ |
ದಿರೆ ಮನದಲುಬ್ಬಿದನು ನೀರಿಳಿದರು ಬಳಿಕ್ಕವರು || ೧೨ ||

ಅರಗಿನಾ ಮಾಡದಲಿ ಕೌಂತೇ | ಯರನು ಕೌರವ ಕೊಂದನೆಂದಾ |
ತೆರನನೆಲ್ಲವ ಪೇಳಿ ಕೃಷ್ಣನು ಖೇದವನು ತಳೆದು ||
ಭರದಿ ಹಸ್ತಿನಪುರೆ ದಂಡೆ | ತ್ತಿರದೆ ನಡೆ ಎನೆ ಸಿರಿಧರನವ |
ಸರವಿದಲ್ಲನುಜಾತ ನೀನೀ ತೆರನ ಕೇಳೆಂದ || ೧೩ ||

ಮರೆವೆವೇ ಪಾಂಡವರು ಮಡಿದುದ | ಮರೆಯೆವೆಂತಂತತ್ತ ಚಕ್ರಿಯ |
ಮರೆಯನಾಜೀವಂಜಸೆಯ ಗಂಡನು ಮಡಿದ ನೋವ ||
ಅರಸಿಕೊಂಡವ ಬಾರದಿರನೀ | ತೆರನ ನೋಡುವ ಬೇರೆ ಬೇರಸಿ |
ಯೊರೆಯನುಚ್ಚಲದೇಕೆನುತ ನಿಲಿಸಿದನು ಮುರರಿಪುವ || ೧೪ ||

ಅತ್ತಲಾ ಪಾಂಡವರು ನದಿ ನಗ | ಉತ್ತರಿಸಿ ಪೋಪಲ್ಲಿ ವಿದ್ಯೋ |
ನ್ಮತ್ತ ಕಿಮ್ಮೀರಾಸುರನು ಕಾಮ್ಯಕ ವಿಪಿನದೊಳಗೆ ||
ಇತ್ತ ಬರದಿರೆ ನನ್ನ ಬನವೆಂ | ದೆತ್ತಿ ಬರೆ ಅಂತಕವದನದಲಿ |
ತುತ್ತಿದರು ಕಲಿ ಭೀಮನೆಲ್ಲರು ಪೊಕ್ಕರಾ ಬನವ || ೧೫ ||

ಇರದೆ ಮತ್ತಲ್ಲಿಂದ ದೇಶಾಂ | ತರವ ಚರಿಸುತವೊಂದೆಡೆಯ ಕಾ |
ಸರಪುರವ ಪೊಕ್ಕಿರ್ದರಾ ಪುರದರಸು ಧಾನ್ಯನೃಪ ||
ಅರಸಿ ಧಾತ್ರೀ ಸೌಂದರಿಯ ಬಂ | ಧುರ ತನೂಭವೆ ಕುಸುಮಮಾಲೆಯು |
ಧರೆಯಲಪ್ರತಿ ಸೌಂದರತೆವಡೆದಿಹಳು ಸುಕುಮಾರಿ || ೧೬ ||

ವಂದಿಮುಖದಿಂ ಕೇಳಿ ತಾಂ ಯಮ | ನಂದನನ ರೂಪಾತಿಶಯವನು |
ಅಂದು ಕಿವಿವೇಟದಲಿ ಬರಯಿಸಿ ವರ ಕುಸುಮಮಾಲೆ ||
ನೊಂದಿರಲು ತಜ್ಜನಕನಾಕೆಯ | ಬಂದ ವಿರಹದ ದೆಸೆಯ ಕಾಣದೆ |
ಬಂದು ಅವಧಿಜ್ಞಾನಿ ಶಾಂತಕ ಮುನಿಗೆ ವಂದಿಸಿದ || ೧೭ ||

ಕುಸುಮಮಾಲೆಗೆ ಗಂಡನಾವನು | ಬೆಸಸಿಮೆನೆ ಯಮನಂದನಗೆ ಅವ |
ಳಸುಗೆ ವಲ್ಲಭೆಂದದರಗಿನ ಮನೆಯಲವರೆಲ್ಲ ||
ಅಸುವ ಬಿಟ್ಟರು ಎನಲು ಆ ನುಡಿ | ಪುಸಿ ಕಣಾ ಚರಮಾಂಗರವರ |
ರ್ವಿಸುವ ಕಿಚ್ಚಿಂದಳಿಯರೆಂದನು ಭೂಪತಿಗೆ ಮುನಿಪ || ೧೮ ||

ಎನಲವರದೆಲ್ಲಿಹರು ಚಿತ್ತೈ | ಸೆನಗೆನಲ್ಕೀ ಪುರದಲಿಹರವ |
ರೆನೆ ಮುನಿಯ ಬೀಳ್ಕೊಂಡು ಸಾಧಿಸಿ ಅವರ ಕರೆತಂದು ||
ವಿನುತ ಧಾನ್ಯನೃಪಾಲ ಯಮನಂ | ದನಗೆ ನಿಜಸುತೆ ಕುಸುಮಮಾಲೆಯ |
ನನು ಮುದದಿ ಪಾಣಿಗ್ರಹಣ ವಿಧಿಯಿಂದೊಲಿದು ಕೊಟ್ಟು || ೧೯ ||

ಕೊಡೆ ಕುಸುಮಾಲೆಯಲಿ ಸವಿಸುಸಿ | ಲೊಡರಿಸಿಯೆ ಅಂದಿರ್ದುಯಿಂತಿ |
ರ್ದೊಡೆ ವಿದಿತರಾವಪ್ಪೆವೆಂದಾ ಧರ್ಮನಂದನನು ||
ಮಡದಿಗಾ ಮಾವಂಗೆ ತಮ್ಮಯ | ಅಡಕಧನುವನು ತಿಳಿಪಿ ಬೀಳ್ಕೊಂ |
ಡೊಡನೆ ನಡುವಿರುಳರುವರುಂ ಪೊರಮಟ್ಟರಲ್ಲಿಂದ || ೨೦ ||

ಭರವಸದಿ ಪೋಗುತಿರೆ ಮುಂದೊಂ | ದುರು ವಿಪಿನದಲಿ ತಾಪಸಾಶ್ರಮ |
ವಿರಲು ಬಳಲಿಕೆಗಳೆಯಲಲ್ಲಿರೆಯೋರ್ವ ಸುಕುಮಾರಿ ||
ಸ್ಮರನ ಮೋಹನ ಬಾಣವದೆ ಪೆ | ಣ್ಬರಿಜನಾಂತದೊ ಎನಲು ಸೊಗಯಿಪ |
ತರುಣಿ ತಪಗೆಯ್ಯಲಿಕೆ ಸಾರ್ದಳು ಕೊಂತಿಯಾಕೆಯನು || ೨೧ ||

ಹೊಸಹರೆಯದಲಿ ತಪವಿದೇಕಾ | ಯ್ತುಸುರೆನುತ ಮಿಗೆ ಕೀರಿ ಕೇಳಲು |
ಸಸಿವದನೆ ಕೇಳೆಮ್ಮ ಪಿತ ವಿಂಧ್ಯಕ ನೃಪಾಲಕನು ||
ವೊಸೆದ ತಾಯ್ ಶ್ರೀದೇವಿ ನಾನವ | ರೊಸೆದ ಮಗಳು ವಸಂತ ಸೌಂದರಿ |
ಕುಸುಮಶರಸಮ ರೂಪನೆನಿಪ ಯುಧಿಷ್ಠಿರಂಗೆಂದ || ೨೨ ||

ಎನಲು ನಸುನಗೆ ಮೊಗದಿ ಕೇಳುತೆ | ವನಿತೆ ನೀಂ ಕೇಳೆಂದು ಯಮನಂ |
ದನನು ಕೊಂತಿಯು ತಮ್ಮ ವೃತ್ತಾಂತವನು ನೆರೆಯರುಪಿ ||
ಇನಿತು ಚಿಂತಿಸದಿರ್ಪುದೆಂದಾ | ವನದೊಳಗೆ ಯಿರುಳಿರ್ದು ಬೆಳಗ |
ಪ್ಪನಿತರೊಳೆ ಪೊರಮಟ್ಟು ಪೋದರು ಭೂಪಾ ಕೇಳೆಂದ || ೨೪ |

ಮುಂದುಮುಂದುರೆ ತೆಂಕುದಿಕ್ಕಿಂ | ಗೊಂದು ಬರೆ ತ್ರಿಶೃಂಗವೆಂಬಾ |
ಸಂದ ಪೊಳಲ ಬಹಿರ್ವನದಲುತ್ತುಂಗ ಕೂಟಗಳ ||
ವಂದನಾ ಮಾಲೆಗಳ ನಾನಾ | ಚಂದದಿಂ ರಮಣೀಯಮಾದಾ |
ಚಂದ್ರನಾಥ ಜಿನೇಂದ್ರ ಚೈತ್ಯಾಲಯವನೀಕ್ಷಿಸುತ || ೨೫ ||

ಬಂದು ತಾವರೆಗೊಳನೊಳಗೆ ನಲ | ವಿಂದೆ ಕರಣಚರಣಾನನವ ತೊಳೆ |
ದೊಂದು ಭಕ್ತಿಯಲಿ ಜಿನಾಲಯವನು ಪ್ರದಕ್ಷಿಣವ ||
ಬಂದು ಸರ್ವಾಂಗ ಪ್ರಣಾಮದಿ | ಸಂದು ಕೈಮುಗಿದನಿಬರುಂ ನೆರೆ |
ನಿಂದು ಜಯ ಜಯ ದೇವಚೂಡಾಮಣಿಯೆ ಎಂದವರು || ೨೬ ||

ಎಲೆ ಜಿನೇಶ್ವರ ಸಂಸರಣವೆಂ | ಬಳವಿಗಳಿದಾರಣ್ಯದಲಿ ಅತಿ |
ಬಲ ಚತುರ್ವಿಧ ದುಃಖದಾವಾಗ್ನಿಯಲಿ ನೆರೆ ಬೆಂದು ||
ಬಳಲಿ ತಳಮಳಗೊಳುತ ನಿಮ್ಮಡಿ | ಗಳ ನಖದ ತನಿವೆಳಗುಗೊಳದಲಿ |
ಮುಳುಗಿ ತಣ್ಣನೆ ತಣಿದೆವೆಂದರು ಪುಳಕಿತಾಂಗಿಗಳು || ೨೭ ||

ಅರಳುತಿದೆ ಮೊಗಕಮಲ ಕಣ್ಣೈ | ದಿಲುವೆರಸಿ ಹೃಚ್ಚಂದ್ರಕಾಂತೋ |
ಪಳವೊಸರುತಿರೆ ದುರಿತಗೆಸರೊಣಗುತಿದೆ ವರಭವ್ಯ ||
ಜಳಧಿಮಿಗೆ ಪೆಚ್ಚುತಿದೆ ಕುಮತಾ | ವಳಿಭಗಣಗಳು ಮಸುಳುತಿವೆ ನೀಂ |
ತಿಳುಪು ಚಂದ್ರಪ್ರಭನೊ ಸೂರ್ಯಪ್ರಭನೊ ಜಿನಪತಿಯೆ || ೨೮ ||

ಎಂದು ಚಂದ್ರಜಿನೇಂದ್ರನನು ಪಲ | ವಂದದಿಂ ನುತಿಗೆಯ್ದು ಪಾವನ |
ಗಂಧ ಗಂಧೋದಕ ಪವಿತ್ರಿತ ಗಾತ್ರರೊಲವಿಂದ ||
ಬಂದು ಜಿನಮುನಿಪೇಂದ್ರ ಪಾದಕೆ | ತಂದು ತಮ್ಮಯ ನೊಸಲ ಧರ್ಮವ |
ನಂದು ಕೇಳುವ ಸಮಯದಲಿ ಭೂಪಾಲ ಕೇಳೆಂದ || ೨೯ ||

ದೆಸೆಯ ಮುಸುಕುವ ವಾದ್ಯಗಳ ಸುರ | ಭಸದಿ ಮುತ್ತಿನ ಸತ್ತಿಗೆಯ ತಂ |
ಬಿಸಿಲಿನಲಿ ತತ್ಪುರದರಸುವರ ಚಂಡವಾಹನು ||
ಎಸೆವ ರತಿ – ಸಿರಿ-ಗಿರಿಜೆ-ಸರಸತಿ | ದೆಸೆವಡದಿಯರು ತಾವರೆ ಇವರೆನೆ |
ಮಿಸುಪ ಪನ್ನೀರ್ವರು ನಿಜಾತ್ಮಜೆಯರು ವೆರಸು ಬಂದ || ೩೦ ||

ಬಂದು ಭವ್ಯರ ಬಂಧುವೆನಿಸುವ | ಚಂದ್ರನಾಥಗೆ ಕಲ್ಪವೃಕ್ಷವೆ |
ಬಂದು ಪೂಜಿಸಿದಂತಿರಷ್ಟವಿಧಾರ್ಚನೆಯ ಮಾಡಿ ||
ಚಂದಚಂದದಿ ನುತಿಸಿ ವಂದಿಸಿ | ಬಂದು ಭಕ್ತಿಯಲೆರಗಿ ಬೋಧಾ |
ನಂದ ವರ್ಯಾಚಾರ್ಯರನು ಬೆಸಗೊಂಡನಾ ಭೂಪ || ೩೧ ||

ಎಲೆ ಮುನೀಶ್ವರ ಈ ಕುಸುಮಕೋ | ಮಲೆಯರಹ ತನುಜೆಯರ ಧರ್ಮಜ |
ಗೊಲಿದು ಕಡುವುಜ್ಜುಗದಿನಿರ್ದೆನುಯಿರೆ ಯುಧಿಷ್ಠಿರನು ||
ಅಳಿದ ಗಡ ಲಾಕ್ಷಾಗೃಹದಲೀ | ಲಲನೆಯರು ಅದ ಕೇಳ್ದು ದೀಕ್ಷೆಯ |
ಕೊಳಲು ಬಗೆದೆಯ್ತಂದಪರು ಮುನಿಹಂಸ ಕೇಳೆಂದ || ೩೨ ||

ಅರಸ ಕೇಳೈ ಪಾಂಡುತನುಜರು | ಚರಮದೇಹಿಗಳನ್ಯ ಘೌತದಿ |
ವರುಣವೈದುವರಲ್ಲ ನಂಬೆನೆ ಸಂತಸದಿ ಮುನಿಯ ||
ಚರಣಕಮಲಕ್ಕೆರಗಿ ಸುತೆಯರು | ವೆರಸಿ ತನ್ನರಮನೆಗೆ ಪೋದನು |
ವರಯುಧಿಷ್ಠಿರನಾ ಮುನಿಗೆ ಪೊಡವಟ್ಟು ಪೊರವಂಟ || ೩೩ ||

ಚರಮದೇಹಿಗಳವರು ಪೆರರಿಂ | ಮರಣವೆಯ್ದರೆನಲ್ಕೆ ತನ್ನೃಪ |
ಗುರುವಚನವನೆ ಪಿಡಿದು ಬೀಳ್ಕೊಂಡದುವೆ ಲೇಸಾಯ್ತು ||
ಮರಳಿ ಬೆಸಗೊಳೆವಿದಿತರಪ್ಪೆವು | ಕುರುಪತಿಯ ದುರ್ಯಶವು ಬಿಸುಟಂ |
ಬರಿದುದನು ನೋಡೆಂದು ತನ್ನವರ್ಗೆಂದನಾ ಭೂಪ || ೩೪ ||

ಏನನೆಂಬೆನು ಮುಂದೆ ಭೀಕರ | ಕಾನನದಲೊಂದಾಲವಿರ್ದುದು |
ಭಾನುವನು ತುದಿಗೊಂಬಿನಿಂ ಮೀಂಟಲು ಕಡಲ ಬಿರ್ದು ||
ತಾನು ಮರುದಿನಕಲ್ಲದಿತ್ತಣ | ಹಾನಿವೃದ್ಧಿಯನೋಡನವನಿಯ |
ಮಾನವನು ಮಾರಿದವವೊಲು ಪಸರಿಸಿತು ಶಾಖೆಗಳ || ೩೫ ||

ಘೋರವನದಾ ಭೀಳ ವಟುವನು | ಸಾರಿದರು ಪಾಂಡವರು ಪಡುವಣ |
ವಾರಿಧಿಯ ವಾರಿರುಹಸಖ ಸಾರಿದರು ಕತ್ತಲೆಯ ||
ಧಾರಿಣಿಯ ನುಂಗಿದುದು ಧರ್ಮಕು | ಮಾರಮುಖ್ಯರು ಪಥಪರಿಶ್ರಮ |
ಭಾರದಲಿ ಪೊರಗಿದರು ಕಾದಿರ್ದನು ವೃಕೋದರನು || ೩೬ ||

ಅನಿತರೊಳು ಚಂದನದ ಧೂಪದ | ನನೆಯ ನರುಗಂಪೆತ್ತಿ ಕೊಂಡೊ |
ಯ್ಯನೆ ನಿಜಾತ್ಮಜಗೊಂದು ಗದೆ ಬಹುದೆಂದರಿಪುವಂತೆ ||
ಅನಿಲನಾಗಳು ಬರಲಿದೇನೆಂ | ದನುಮನಿಸಿ ಅದು ಬಂದ ಬಟ್ಟೆಯ |
ನನಿಲಜನು ಕಿರಿದಂತರವ ಗಮಿಯಿಸಿ ನಿರೀಕ್ಷಿಸಿದ || ೩೭ ||

ಬಳೆದ ರೌದ್ರದ ಯಮನ ಕೈಯಿಂ | ದುಳುಚಿ ಬರೆ ಬೀಳ್ದಾಗ ಭೂತಳ |
ವಳಿವುದೆಂದಾ ವನದ ದೇವತೆ ನಿಡಿಯ ತೋಳೆತ್ತಿ ||
ತಳೆದವೊಲು ಪೆರ್ವಿದಿರ ಮೆಳೆಯಲಿ | ಪೊಳೆವ ರುದಿರೋದ್ಗಾರಿಯೆಂಬ |
ಗ್ಗಳಗದಾ ರತ್ನವನೆ ಅಷ್ಟವಿಧಾರ್ಚನೆಯ ಮಾಡಿ || ೩೮ ||

ಚಲಿಸದದ್ರಿಯೊಳಿರ್ದ ಪೂಜಕ | ನಳವನೀಕ್ಷಿಸಿ ಭೀಮ ಮೆಲ್ಲನೆ |
ಯೆಳಸಿ ಕೈ ನೀಡಲು ಗದೆಯು ಭೋರೆನೆ ಬರಲು ||
ತಳೆದುಡವರಿಸಿ ಬೀಸಿ ಮೊನೆಯಿ | ಕ್ಕಳವಡಲು ಪಡೆದಾಲವೃಕ್ಷದ |
ಬಳಿಗೆ ಭೀಮನು ಬಂದಿರಲು ಭೂಪಾಲ ಕೇಳೆಂದ || ೩೯ ||

ತೊಳತೊಳಪ ಸಸಿಕಲೆಯೆ ಬಾನಿಂ | ದಿಳಿದು ಬಂದುದೊ ಎನಿಪ ಚೆಲುವಿಕೆ |
ದಳೆದು ಮಣಿದೊಡವೆಳಗಿನಿಂ ಕೆಂಬಿಸಿಲ ನಿಂಬಿಡುತ ||
ಇಳಿದು ನಭದಿಂ ಬಂದು ಮಾಡಿಸಿ | ದಳು ವಿಯಚ್ಚರಿ ಭೀಮಸೇನನ |
ಕೆಲದಲಿರೆ ಕಣ್ಣಾರೆ ನೋಡಿದನಂದು ಸೊಬಗಿಯನು || ೪೦ ||

ತರುಣಿ ನೀನಾರೇಕೆ ಬಂದೀ | ಯಿರವ ಪೇಳೆನೆ ರಮ್ಯಪುರ ಖೇ |
ಚರ ಮಹೀಪತಿ ಸಿಂಹಘೋಷಗೆ ಸತಿ ಸುದರ್ಶನೆಗೆ ||
ವರ ತನೂಜೆ ಸುಕೇಶಿ ಯೆಂಬೆನು | ಗುರುಗಳೆಮ್ಮಯ್ಯಂಗೆ ಪೇಳ್ದರು |
ಎರಗಿ ನಿಲೆ ಬೆಸಗೊಂಡ ಕತದಿಂದೆಂದಳಾ ಕಾಂತೆ || ೪೧ ||

ಅರಸ ಕೇಳು ಹಿಡಿಂಬ ವನದಲಿ | ಪಿರಿಯ ಮೆಳೆಯಲಿ ನಿಂದ ಗದೆಯ |
ಚ್ಚರಿಯ ರುದಿರೋದ್ಗಾರಿಯದ ಪಡೆದವನೆ ನಿಜ ಸುತೆಗೆ ||
ಪುರುಷನೆನಲಾದೇಶಪುರಷನ | ನರಸೆ ಪಗಲಿರುಳಿಲ್ಲಿಗಾನೆ |
ಯ್ತರುತಿರಲ್ಕೆ ಹಿಡಿಂಬೆಯೆಂಬಭಿಧಾನವೆನಗಾಯ್ತು || ೪೨ ||

ತಿಳಿದನಂತಿದಲೇಂಕೆಯಾಳ್ವಾ | ಗಳ ಹಿಡಿಂಬ ವಿಯಚ್ಚರನು ದೋ |
ರ್ವಳನು ಸಾಧಿಸುತಿರ್ಪನದು ಪುಣ್ಯದಲಿ ನಿನಗಾಯ್ತು ||
ಮುಳಿದು ನಿನ್ನೊಳು ತಾಗದಿರನೀ | ನಲಘು ಭುಜಬಲವನು ನಿಮಿರ್ಚೆಂ |
ದೊಲಿದು ಪೇಳಲು ಬಂದೆನೆಂದಳು ಖಚರಿ ಭೀಮಂಗೆ || ೪೩ ||

ಎಂಬ ನುಡಿಗಳ ಕೂಡೆ ಮಸದಲ | ರಂಬಗಳು ಕಲಿಭೀಮನೆದೆಯಲಿ |
ತುಂಬಿ ಠಾಣೆಯವಿಕ್ಕಿದವು ಅತ್ತವಳ ಮನದೊಳಗೆ ||
ಶಂಬರಾರಿಯ ಮಲ್ಲಿಗೆಯ ಕೂ | ರಂಬುಗಳು ಪಾಳೆಯವ ಬಿಡಲು ಹಿ |
ಡಿಂಬ ಜಪ ಮುಗಿದೆವೆದೆರೆದು ಗದೆಯಿಲ್ಲದಿರೆ ಮುಳಿದ || ೪೪ ||

ಭರದಿ ತನ್ನಯ ಗದೆಯ ತಿರ್ರ‍ನೆ | ತಿರುಹುತೆಯ್ತರೆ ಜವನ ಕೆಲದಲಿ |
ಇರುತಲಿಹ ಛಾಯಾವಧುವಿನಂತಿರ್ದ ಕನ್ಯೆಯನು ||
ನೆರೆ ನಿರೀಕ್ಷಿಸಿ ಕೋಪ ಸಿಖಿಯು | ಬ್ಬರಿಸಿ ಸಿಡಿಲೆನೆ ಗಜರಿ ಗರ್ಜಿಸಿ |
ಬರಲು ಕಾಣುತ ಭೀಮನೆದ್ದನು ಆ ಗದೆಯ ಕೊಂಡು || ೪೫ ||

ಕಡು ಮುಳಿದು ಗದೆಯೆತ್ತಿ ನೆತ್ತಿಗೆ | ಹೊಡೆದನಡಸಿ ಹಿಡಿಂಬ ಹೊಯ್ಲಿಗೆ |
ಕೊಡಿವೆನೇ ಈ ಗದೆಯನಾಗದೆ ಸಲಿಸವಲ್ಲೆಂದು ||
ಎಡದ ಕರತಳಗೊಡುತ ಭೀಮನು | ಪೊಡೆಯೆ ನೆತ್ತಿಯ ನುಚ್ಚುನೂರಾ |
ಗೊಡೆಯೆ ಬೆಟ್ಟವು ಕೆಡೆದವೊಲು ಕೆಡೆದನು ಹಿಂಡಿಬಕನು || ೪೬ ||

ಸಲೆ ಒರಗಿದಾ ಪಾಂಡವರು ಈ | ಗಲಭೆಯಿಂದೆಚ್ಚತ್ತು ನೋಡಲು |
ಕೆಲದಲಿಹ ಕನ್ನೆಯನು ನೆತ್ತರಕಾರಿ ಮಡಿದಿರ್ದ ||
ಕಲಿಯ ಹೆಣನನು ಭೀಮಸೇನನ | ಬಲದ ಕೈಯ ಗದಾ ಸುರತ್ನದ |
ಬೆಳಗೆ ಬೆಳಗಾಗಿರಲು ಕಂಡರು ಕೊಂತಿ ಬೆರಗಾಗೆ || ೪೭ ||

ಇದರ ತೆರನೇನೆನೆಲು ಕೊಂತಿಗೆ | ವಿದಿತವಪ್ಪವೊಲಾ ಸುಕೇಶಿಯೆ |
ಮೃದು ಮಧುರ ವಚನದಿ ಪೇಳಲು ಕೇಳಿ ಸಂತಸದಿ ||
ಅಧಟನೆಂದ ನಿಲಜನ ನೈವರು | ಮುದದಿ ಕೊಂಡಾಡಿದರು ಅನ್ನೆಗ |
ಪದುಮಸಖನುದಯಿಸಿದನೆಲೆ ಭೂಪಾಲ ಕೇಳೆಂದ || ೪೮ ||

ವನದ ಭೀಕರತೆಯನು ಆಲದ | ಘನ ವಿಶಾಲತೆಯನು ನಿರೀಕ್ಷಿಸು |
ವನಿತರೊಳು ಪಾಲೂರದಿಚ್ಚಾಪುರವುಮೀ ಬನಕೆ ||
ಅನತಿದೂರದೊಳಲ್ಲಿ ಇಹವೆಂ | ದನಿಬರನು ಒಡಗೊಂಡು ಭೀಮನ |
ವನಿತೆ ಪೋಗಲಿಕವಳ ಜನಕನು ಮಗಳನರಸುತಲಿ || ೪೯ ||

ಬಂದು ಕಂಡನಿದೆಲ್ಲರನು ಸಾ | ನಂದದಲಿ ಮಿಗೆ ಸಿಂಹಘೋಷನು |
ತಂದು ತನ್ನ ವಿಮಾನವೇರಿಸಿ ರಮ್ಯಪುರಕೊಯ್ದು ||
ಒಂದು ಸುಮುಹೂರ್ತದಲಿ ಭೀಮಗೆ | ಚಂದವಾದ ಸುಕೇಶಿಯನು ನಲ |
ವಿಂದ ಕೈನೀರೆರೆದನವನವನೀಶ ಕೇಳೆಂದ || ೫೦ ||

ಪಡೆದಳಾಕೆ ಘಟೋದ್ಗಜನನು | ಗ್ಗಡದ ಭುಜಬಲಶಾಲಿಯನು ಒ |
ಗ್ಗೊಡೆಯದಿರ್ದಾ ಸಿಂಹಘೋಷ ಹಿಡಿಂಬೆಯರ ತಿಳಿಪಿ |
ತಡೆಯದಲ್ಲಿಂ ಬಡಗ ದಿಕ್ಕಿಗೆ | ನಡೆಯಲಿತ್ತಾ ಖಚರಿವಿದ್ಯದಿ |
ಕಡಲ ದಾಂಟಿದರೇಕಚಕ್ರವೆನಿಪ್ಪ ನಗರವನು || ೫೧ ||

ಪೊಕ್ಕರಲ್ಲಿಯ ಪಾರ್ವನೋರ್ವನ | ತಕ್ಕ ಗೃಹದಲ್ಲಿರಲು ನೆರಮನೆ |
ಯಕ್ಕೆಗೇಳುತ ಕೊಂತಿಯಲ್ಲಿಗೆ ಪೋಗಿ ಬ್ರಾಹ್ಮಿಣಿತಿ ||
ಅಕ್ಕೆ ನಿನಗೇಕಾದುದೆನೆ ಕೇ | ಳಕ್ಕ ಮಕ್ಕಳ ಹಡೆದ ತಾಯೇ |
ರಕ್ಕಸನುಮೀ ಪುರದ ಮಕ್ಕಳ ತಿಂದು ತೇಗಿದನು || ೫೨ ||

ಖಳನು ಮುನ್ನವೆ ಖಚರ ಗಡ ಮಿಗೆ | ಕಲಿತ ರಕ್ಕಸ ವಿದ್ಯೆಯಲಿ ಈ |
ಪೊಳಲಜನವೆಲ್ಲವನು ಒರ್ಮೆಯೆ ಕೊಲಲು ಬರೆ ಬೆದರಿ ||
ಅಳವಳಿದು ನೀವೆಂದ ಕಪ್ಪವ | ನೊಲಿದು ಕೊಟ್ಟಪೆವೆನೆ ಬಕನು ತಾಂ |
ತಿಳಿವೆನೆಂದನು ಬಾರಿಗೊಟ್ಟೊಡದೆಂತುಟೆನೆ ಪೇಳೆ || ೫೩ ||

ಪಿರಿಯ ಮಗನನು ಮನೆಮನೆಗೆ ಹ | ನ್ನೆರಡು ಖಂಡುಗದಶನ ಪಾಯಸ |
ಪರಿಪರಿಯ ಕಜ್ಜಾಯ ಬಂಡಿಯಲಿ ಕಳುಹಿದೊಡೆ ||
ಹರುಷದಿಂ ತಾಂ ತಿಂದುವುಳಿದರ | ಹರಣಗಾದಪೆನೆನಲು ತಾವೆ |
ಲ್ಲರು ಮಡಿದು ಫಲವೇನೆನುತ ಮನೆಮನೆಗೆ ಕೊಡುತಿಹರು || ೫೪ |

ಕೊಡಲು ಭಕ್ಷಿಸಿ ಈ ಪುರದ ಪೊರ | ಗಡವಿಯಲ್ಲಿರುತಿಹನು ತೂಣನು |
ಒಡತಿ ಕೇಳೌ ಬಂಡಿ ಬಂದಿದೆ ನನಗೆ ಮಗನೋರ್ವ ||
ಕೊಡುವೆನೆಂತಿಂದಿರುಳು ನನ್ನಯ | ಪಡೆದ ಕಂದನ ಮದುವೆಯೆನಿತುರೆ |
ಬಿಡದೆ ಪುತ್ರನನಪ್ಪಿ ಗೋಳಿಡೆ ಕಂಡು ಕರುಣದಲಿ || ೫೫ ||

ಮಗಳೆ ನೀ ಬೆದರದಿರುವೋರ್ಮನೆ | ಮಗನು ನಿನಗವನುಳುಹಿಕೊಳ್ಳು ನ |
ನಗಲವಯ್ವರು ಮಕ್ಕಳಿರ್ದಪರೋರ್ವರನು ಕೊಡುವೆ ||
ಮಿಗೆ ಸವೆದ ಬಲಿಗೂಳ ನೀ ಬಂ | ಡಿಗೆ ನೆರೆಯೆ ತುಂಬೆಂದು ತುಂಬಿಸಿ |
ನಗುತ ಕೊಂತಿಯು ಕರೆದು ಭೀಮನ ಕುಳ್ಳಿರಿಸಿ ಕಳುಹೆ || ೫೬ ||

ಹಿಂದೆ ಬಂಡಿಯನಿರಿಸಿ ಬರುಗೈ | ಯಂದದೋರ್ವನೆ ಬನಕೆ ಪೋದನು |
ಯಿಂದು ಹಸಿದೆವು ಹೊತ್ತು ಹೋಯ್ತೇಕೆಂದು ರಕ್ಕಸನು ||
ಮುಂದೆ ಬಂದೀಕ್ಷಿಸುತಿರಲು ಕಲಿ | ಯೊಂದಿ ಬರೆ ಕಾಣುತಲೆ ಕಡು ಭುಗಿ |
ಲೆಂದು ಗರ್ಜಿಸಿ ಬರಿದೆ ಬಂದೆಯಿದೇಕೆ ಹೇಳೆಂದ || ೫೭ ||

ಹಸಿದ ದಾನವನೆಂದು ತಾಯೆನ | ಗಸನವಿಕ್ಕದೆ ಶಕಟವನು ಹ |
ತ್ತಿಸಿ ಕಳುಹೆ ಹಸಿದುಂಟೆನೆಡೆಯಲಿ ನಿಮ್ಮ ಬೋನವನು ||
ಮಸುಳಿ ಹೋಗದೆ ಈ ಹದನ ನಿಮ | ಗುಸುರೆ ಬಂದೆನು ಮುನಿಯದಿರು ರ |
ಕ್ಕಸನೆ ಯೆನೆ ಪ್ರಳಯದ ಜವನವೊಲು ಮಸಗಿ ಮೇಲ್ವಾಯ್ದ || ೫೮ ||

ಸಿಡಿಲೆರಗಿದಂತೆರಗೆ ತೂಣನ | ನಿಡಿಯಗಂಟಲನೆಡದ ಕೈಯಿಂ |
ಪಿಡಿದು ಎಲೊ ಬಕ ನರರಡಗು ಸವಿಯೆನುತ ಮುಸುಡ ||
ಬಿಡೆ ತಿವಿದು ಹಲ್ಲುಗಳನುದುರಿಸಿ | ಬಿಡದೆ ನಾಲಗೆಗಿಳ್ತು ಹಿಂಗಾ |
ಲ್ಪಿಡಿದಸಗವೊಯಿಲಪ್ಪಳಿಸಿ ಮರ್ದಿಸಿದನಾ ಭೀಮ || ೫೯ ||

ಬಂಡಿ ತುಂಬಿದ ಕೂಳನಾ ಗೋ | ಮಂಡಲಕೆ ತಿನಲಿಟ್ಟು ದೈತ್ಯನ |
ಚಂಡಿಕೆಯ ಮೂಕಿಂಗೆ ಬಂಧಿಸಿ ಹೊಡೆದು ತರೆ ಜನವು ||
ಕಂಡು ವಿಸ್ಮಯಗೊಂಡುದರಿದೇ | ಚಂಡ ಕೇಸರಿ ಸಾಧು ಸರಸಿಜ |
ಷಂಡ ನವಮಾರ್ತಂಡನೆಂದುದು ಭೀಮಸೇನನನು || ೬೦ ||

ಪುರವಧೂತತಿ ಕೊಂತಿದೇವಿಯ | ಚರಣಕಮಲಕ್ಕೆರಗಿದುದು ಸ |
ಬ್ಬರು ಒಲಿದು ಭೀಮಂಗೆ ವಂದಿಸಿ ನಿಮ್ಮದೆಸೆಯಿಂದ ||
ಹರಣವುಳಿದುದು ಜನದ ಕಂಟಕ | ಪರಿಹರಿಸಿದತೆನೆ ಧರ್ಮರಾಯನು |
ಹರುಷವಾದನು ಭಾರತೀ ನವರತ್ನ ಕುಂಡಲನು || ೬೧ ||

ಇಂತು ಪಲಕಾಲವು ವಿವಿಧ ದೇ | ಶಾಂತರವ ಚರಿಸುತ್ತ ಸುಜನರ |
ಸಂತತಿಗೆ ರಕ್ಷೆಯನು ಖಲರಿಗೆ ಶಿಕ್ಷೆಯನು ಮಾಡಿ ||
ಸಂತಸದಿ ಪಾಂಡವರು ಭೂನುತೆ | ಕೊಂತಿ ಸಹ ನಡೆದೊಂದು ನದಿಯ |
ಪ್ರಾಂತದಾಲದ ಮರನ ತಳದಲಿ ಕರ್ನನಾಯಿರಲು || ೬೨ ||

ಹಲವು ರತುನದ ಮೊಗವಡೆದ ಥಳ | ಥಳಿಪ ಪೊಂಬೊರಜೆಯ ಸವಕಗಳ |
ತಳೆದ ಗಜಕಂದರದಲೊಪ್ಪಿನ ಪೀನಮೌಕ್ತಿಕದ ||
ತೊಳಪ ಸತ್ತಿಗೆ ನೆಳಲೊಳಗೆ ಪ | ಜ್ಜಳಿಪ ಷೋಡಶಭೂಷಣಂಗಳ |
ತಳೆದು ವಸುವಸ್ತ್ರಗಳ ಹೇರಿದ ಹಲವು ಗಜಸಹಿತ || ೬೩ ||

ಇಕ್ಕೆಲದಲಾನೆಯಲಿ ಪಾಠಕ | ರೊಕ್ಕರಳಿನಲಿ ಕರ್ನನಾತ್ಯಾಗ |
ವಿಕ್ರಮದ ವೀರಾದಿ ಗುಣಗಳ ನೆಯ್ದೆ ಕೀರ್ತಿಸುತ ||
ಮಿಕ್ಕಸಂತಸವವರ ಮನದೊಳ | ಗುಕ್ಕುತಿರೆ ಬರುತಿರ್ದನಾ ಕವಿ |
ಚಕ್ರವರ್ತಿಯದೊಂದು ಸೊಬಗಿನಲಾ ಸಮಯದೊಳಗೆ || ೬೪ ||

ಸುಕವಿದೋರ್ವನದತ್ತಲುಂ ಪಾ | ಠಕಯುಗಳ ಸಹ ಬರುತ ಕಂಡನು |
ಪ್ರಕಟಕವಿಚಕ್ರಿಯನು ಭೂಭುಜನೆಂದೆ ಕೊಂಡಾಡೆ ||
ಸುಕವಿಗೊಂದಾನೆಯನು ಕೊಟ್ಟಲೆ | ಸುಕವಿಯಾಂ ಕವಿಕರ್ನನೆನ್ನವೊ |
ಲಖಿಲಕವಿಗಳನಿಂತು ಮಾಡಿದನಲ್ಲಗೆಯ್ದೆಂದ || ೬೫ ||

ಎನಲವನು ನಲಿದತ್ತ ಪೋದಪ | ನಿನಸುತನ ವಿತರಣಕೆ ಪಾಂಡವ |
ರನಿಬರುಂ ಮೆಚ್ಚಿದರು ದಾಂಟಿದರಂಗದೇಶವನು ||
ವಿನುತ ಪಾಂಚಾಳೋರ್ವರೆಗೆ ಮೆ | ಲ್ಲನೆ ಬರುತ ಧರಣೀಸುರನನೋ |
ರ್ವನನು ಕಂಡಲೆ ವಿಪ್ರ ನೀವೆತ್ತಣ ನಗರದವರು || ೬೬ ||

ಎಂದೊಡೀ ಪಾಂಚಾಲ ವಿಷಯದ | ಲೊಂದಿಹುದು ಮಾಹೇಂದ್ರ ನಗರವು |
ಚಂದದಳಕಾಪುರಿಗೆ ಸರಿಯಾದನಾಳ್ವ ದ್ರುಪದ ನೃಪ ||
ಸಂದ ದೃಢರಥೆ ರಾಣಿಯರೆ ಪೂ | ರ್ಣೇಂದುಮುಖಿ ದ್ರೌಪದಿಯೆನಿಪ ಕಡು |
ಸೌಂದರದ ಸರ್ವಸ್ವವಹ ಸುಕುಮಾರಿಯನು ಪಡೆದ || ೬೭ ||

ಅವಳಿಗಾದುದು ತುಂಬು ಜವ್ವನ | ಭವನ ಕಣ್ಣುರಿಯಿಂದುರಿದ ಹೃ |
ದ್ಭವಗೆ ಬಂದುದು ಮತ್ತೆ ಹೊಸ ಮೈಬಂಟಿನಗ್ಗಳಿಕೆ |
ಯುವತಿಯರ ಸೃಷ್ಟಿಯಲಿ ಸರಸಿಜ | ಭವಗೆ ಬಂದುದು ಉಜ್ಜವಣೆ ಭೂ |
ಭುವನ ನಯನಾಭರಣೆಯಾ ಸುಕುಮಾರಿ ಕೇಳೆಂದ || ೬೮ ||

ಅರಸನಾ ಮಗಳಂದ ವೀಕ್ಷಿಸಿ | ಹರುಷಮನಸಿರೆ ಶಸ್ತ್ರ ಶಾಲೆಯ |
ಲುರು ಭಯಂಕರ ಕಾಲದಂಡಸಮಾನ ಕೋದಂಡ ||
ಭರದುದಯಿಸಿತು ಗಾಂಡೀವಾಹ್ವಯ | ವಿರದೆ ಕಾರ್ಮುಕರತ್ನವನು ಬಿ |
ತ್ತರದಿ ಪೂಜಿಸಿಯಿಂತು ಸುಖದಿಂದಿರ್ದನಾ ದ್ರುಪದ || ೬೯ ||

ಒಂದು ದಿನದಲಿ ಅವಧಿ ಬೋಧಮು | ನೀಂದುಗಳ ಪದಪದುವವರ್ಚಿಸಿ |
ವಂದಿಸಿಯೆ ತನ್ನಾತ್ಮಜೆಗೆ ಪತಿಯಾರು ಬೆಸಸಿಮೆನೆ ||
ಎಂದೆರೆಲೆ ದ್ರುಪ ನಿನ್ನಯಾಯುಧ | ಮಂದಿರದಲುದಯಿಸಿದ ಗಾಂಡಿವ |
ವೆಂದೆನಿಪ ಕೋದಂಡ ರತ್ನವನಶ್ರಮದಿ ನೆಗಪಿ || ೭೦ ||

ತಿರುವನೇರಿಸಿ ತಿರ್ರ‍ನಾಗಳು | ತಿರುಗುತಿಹ ಆಕಾಶಯಂತ್ರ |
ಸ್ಫುರಿತ ಝಷದೆಡಗಣ್ಣನಾ ಮತ್ಸ್ಯನ ನೆಳಲಕೆಳಗೆ ||
ವಿರಚಿಸಿದ ಜಲದೊಳಗೆ ಕಂಡೆ | ಚ್ಚರು ಪರಾಕ್ರಮಿ ಭೂಚರನೆ ವರ |
ಪುರುಷನಾಕೆಗೆ ತಿಳಿವುದೆಂದನು ಭೂಪತಿಗೆ ಮುನಿಪ || ೭೧ ||

ಇದು ವಿಚಾರಿಪೊಡರ್ಜುನಂಗ | ಲ್ಲದೆ ಪೆರಂಗಸದಳವು ಮುನ್ನವೆ |
ಮುದದಿ ಕನ್ನೆಯನೀಯಲ್ಲಿದ್ದೆನು ಮಡಿದರವರೆಂಬ ||
ಅದು ನಿಬದ್ಧಿಯೆ ಬೆಸಸಿಮೆನೆ ಬೆಸ | ಸಿದ ದಿಗಂಬರ ವಚನದಿಂ ತಿಳಿ |
ದದರ ತೆರನನು ತಾಂ ಸ್ವಯಂವರವೋಡುತಹನೆಂದ || ೭೨ ||

ಪೇಳಿದಾ ಬ್ರಾಹ್ಮಣಗೆ ಕರ್ಪುರ | ವೀಳೆಯವನೊಸೆದಿತ್ತು ಕಳುಹಿ ದ |
ಯಾಳು ಮಧ್ಯಮ ಪಾಂಡವನ ಮೊಗನೋಡಿ ನಸುನಗುತ ||
ಲೋಲಲೋಚನೆಯಾ ಸ್ವಯಂವರ | ಕೇಳಿಯನು ನೋಡುವೆವೆನುತ ಸಂ |
ಮ್ಮೇಳಸಿದರಾ ವಿಪ್ರವೇಷವನರಸವ ಕೇಳೆಂದ || ೭೩ ||

|| ಅಂತು ಸಂಧಿ ೩೫ಕ್ಕಂ ಮಂಗಲಮಹಾ ||