ಸಂಧಿ ೩೩

ಶ್ರೀಮದರಮರಾಧೀಶನೊಲವಿಂ | ನೇಮಿಜಿನ ಜನ್ಮಾಭಿಷೇಕ ಮ |
ಹಾಮಹಿಮೆಯನು ಮಾಡಿದನು ಸಮ್ಯಕ್ತ್ವ ಶೇಖರನು || ಪಲ್ಲ ||

ತೀವೆ ನವಮಾಸವು ಬಳಿಕ್ಕಾ | ಶ್ರಾವಣದ ಸಿತಪಕ್ಷ ಷಷ್ಠಿಯೊ |
ಳಾವರಿಸಿ ಮೆರೆವುತ್ತರಾಷಾಢದೊಳು ವಿಮಲತೆಯ ||
ಭಾವಿಸಿದ ಶುಭಯೋಗದೊಳಗಾ | ತಾವರೆಯ ಸಖನುದಯದಲಿ ಶಿವ |
ದೇವಿ ಪಡೆದಳು ಬಳಲದತಿ ಸೌಖ್ಯದಲಿ ಪುತ್ರನನು || ೧ ||

ಕಡುಮೆರೆವ ಪೂರ್ವಾಸೆ ಸೂರ್ಯನ | ಪಡೆವವೊಲು ಲೋಕಕ್ಕೆ ದೃಷ್ಟಿಯ |
ಪಡೆವವೊಲು ದೇವೇಂದ್ರ ಭಕ್ತಿ ಸುಲತೆಗಡರ್ಪುಮನು ||
ಪಡೆವವೊಲು ಶಿವದೇವಿ ಪುತ್ರನ | ಪಡೆದಳಾ ಸಮಯದಲಿ ದೆಸೆಗಳು |
ಕಡುಬೆಳಗಿದವು ಸೂರ್ಯನುದಯಿಸೆ ತಮತೆರಳಿದಂತೆ || ೨ ||

ಮಲರಹಿತನಾ ಕುವರನೆಂಬುದ | ತಿಳಿಪುವಂತೆ ಜಲಾಶಯಂಗಳು |
ತಿಳಿದವೆತ್ತಲು ಗಗನತಳ ನಿಮೇಘವಾದಪುದು ||
ಬೆಳೆದ ಕಲುಮುಳು ಧೂಳಡಗೆ ಪೊಗೆ | ಯಳಿದು ಬಲಮುರಿಯಾಗುರಿದುದಾ |
ಜ್ವಲನವೊಯ್ಯನೆ ಕಂಪು ತಂಪಿಂ ಸುಳಿದುದೊಂದೆಲರು || ೩ ||

ಒಂದುಗೂಡಿದವಾರು ಋತುಗಳು | ಎಂದೆನಿಪವೊಲು ತಳಿರಲರುತಾ |
ಯಿಂದ ಮರಗಿಡ ಬಳ್ಳಿಗಳು ನಳನಳಿಸಿ ಸೊಗಯಿಪವು ||
ಒಂದೆ ಕೊರಳಲಿ ಶುಕಪಿಕಾಳಿಗ | ಳಿಂದನಿಯ ನೀವವು ಸರದೊಳರ |
ವಿಂದ ಕುಮುದಗಳರಳಿಹವು ಹಗಲಿರುಳ ಕೆಳೆಗೊಳದೆ || ೪ ||

ಪುರಗೃಹಾಂಗಣವೆತ್ತಲುಂ ಪಿಂ | ಜರಿತ ಪಿಷ್ಟಾತಕಮೆ ಕಾಳ್ಪುರ |
ವರಿವ ಕುಂಕುಮ ರಸವೆ ಮತ್ತಾ ಬೀದಿ ಬೀದಿಯೊಳು ||
ತರತರದ ಪೂವಲಿಯೆ ಮುತ್ತಿನ | ಪರಿಪರಿಯ ರಂಗವಲಿ ರನ್ನದ |
ಪಿರಿಪಿರಿಯ ಗುಡಿ ತೋರಣ ಧ್ವಜರಾಜಿವೊಪ್ಪಿದವು || ೫ ||

ಒಸಗೆ ಮಸಗಿದ ತೆರದಿ ದೆಸೆದೆಸೆ | ಮುಸುಕಿದುದು ಬದ್ಧವಣಋತಿ ಸಂ |
ತಸದೆ ಬಹ ಹೋಹುಜ್ಜುಗದ ಪುರಸತಿಯರಂದುಗೆಯ ||
ಮಿಸುಪದನಿ ಪಾಠಕರ ಗಾಯಕ | ರೆಸೆವ ರವವರಸಂಚೆ ಕೊಂಚೆ ಹ |
ರುಷದ ಶುಕಪಿಕ ಶಿಖಿ ಮದಾಳಿ ಸ್ವನಮೆ ಪುರದೊಳಗೆ || ೬ ||

ವರಸಮುದ್ರ ವಿಜಯ ನರಾಧಿಪ | ನರಮನೆಯಳೊಳಗಂ ಪೊರಗಮನು |
ಜರಸತಿಜಯರಚ್ಚುತನ ಪಿತನರಸಿಯರು ಬಲ ಹರಿಯ ||
ಅರಸಿಯರು ಅಕ್ರೂರ ಮುಖ್ಯರ | ಅರಸಿಯರು ಪ್ರದ್ಯುಮ್ನ ಭೂವರ |
ನರಸಿಯರು ಅಚ್ಚರಸೆಯರು ಮುಸುಕಿದರು ಹರುಷದಲಿ || ೭ ||

ಸೇಸೆಯಿಕ್ಕುವ ಪಾಗುಡಂಗೊಡು | ವೀ ಸಮಯದೊಳಗತ್ತ ನಾಕಾ |
ವಾಸದೊಳು ಸುರರೆರಗದೆರಗಿದವವರ ಮಕುಟಗಳು ||
ಆ ಸುರದ್ರುಮ ಕುಸುಮ ಕೊಯ್ಯದೆ | ಸೂಸಿದವು ಬಾಜಿಸದೆ ಮೊಳಗಿದ |
ವಾ ಸುರಾನಕವಾ ತ್ರಿಲೋಕಾಧೀಶನತಿಶಯದಿ || ೮ ||

ಉರಗ ಲೋಕದಲಮಳ ಶಂಖ | ಸ್ವರವು ವ್ಯಂತರ ಲೋಕದೊಳು ನಿ |
ರ್ಭರಸುಭೇರೀರವವು ಜೋತಿರ್ಲೋಕದಳು ಖಿಳ ||
ಕರಿರಿಪು……………….. | ಪುರದೊಳಗೆ ಘಂಟಾ ವಿರುತಿಜಿನ |
ನರಡನೆಯ ಕಲ್ಯಾಣವೆಂದರುಹಿದವು ಭಾಜಿಸದೆ || ೯ ||

ಉರಗರೊಪ್ಪುವ ಭವನ ಲೋಕದಿ | ನಿರದೆ ನಂದನ ವನಗಳಿಂ ವ್ಯಂ |
ತರರು ಜ್ಯೋತಿರ್ಲೋಕದಿಂ ಜ್ಯೋತಿಷ್ಕರಾ ಸುರರು ||
ತರತರದ ಸಗ್ಗಂಗಳಿಂ ದರು ಮೆರೆವ ತಂತಮ್ಮ ಚಿನ್ನಾ |
ಭರಣ ವಿಭವ ಸಮೇತನಾಗಸ ತುಂಬಿ ನೆಲಸಿದರು || ೧೦ ||

ಅರುಹ ನಿಜ ಜನ್ಮಾವತರಣಕೆ | ನೆರೆಮೆನೆಗೆ ಬಹತೆರದಿ ತ್ರಿಜಗವು |
ನೆರೆದು ಬಂದುದು ನಿಮಿಷಕಾಗಸವಟ್ಟೆಯಲಿ ನಿಂದು ||
ಸುರಪತಿಯ ಬಹ ಬರವ ಪಾರು | ತ್ತಿರಲದತ್ತಲು ತ್ರಿಭುವನಾಧೀ |
ಶ್ವರನುದಯಿಸಿದ ಸಿಂಗವಣೆಯಿಂದಿಳಿಯೆನಿಪ ತೆರದಿ || ೧೧ ||

ಸುರಪಗಾಸನ ಕಂಪವಾದುದು | ಹರಿಯವಧಿಯಿಂ ನೋಡಿ ತೀರ್ಥಂ |
ಕರ ಕುಮಾರೋದಯ ಮಹಾಕಲ್ಯಾಣವೆಂದರಿದು ||
ಇರದೆ ಹರಿಪೀಠವನಿಳಿದು ನಿ | ರ್ಭರಸುಭಕ್ತಿಯಲೆರಗಿ ಮಂಗಳ |
ಪರಿಕರರು ಸಹವೈದೆ ಧರ್ಮೋದ್ಯೋಗಿ ಪೊರಮಟ್ಟ || ೧೨ ||

ಸಕಲ ಮಂಗಲಕರರು ಸಾಮಾ | ನಿಕರು ತ್ರಾಯತ್ರಿಂಶದಮರರು |
ನಿಖಿಳ ಪರಿಸಲ್ಲೋಕ ಪಾಲಕರಾತ್ಮರಕ್ಷಕರು ||
ಪ್ರಕಟ ಕಿಲ್ವಿಷಕಾಭಿಯೋಗ್ಯಾ | ಧಿಕವೆನಿಪ ಪರಿಜನವೆರಸಿ ಸೌ |
ಖ್ಯಕೆ ತವರ್ಮನೆಯೆನಿಪ ಸುರಪತಿ ಬಂದನರ್ತಿಯಲಿ || ೧೩ ||

ಕರಿತುರಗರಥನುತ ಪದಾತ್ಯು | ತ್ಕರ ವೃಷಭ ಗಂಧರ್ವ ನರ್ತಕಿ |
ವೆರಸಿ ಸಪ್ತಾನೀಕದಿಂ ಛತ್ರಾದಿ ವೈಭನದಿಂ ||
ವರಶಚೀವಧು ಸಹಿತ ಸಗ್ಗಿಗ | ರರಸನೈರಾವತವನೇರಿದ |
ನಿರದೆ ಭೇರಿಗಳುಲಿಯೆ ಬಂದನದೊಂದು ಲೀಲೆಯಲಿ || ೧೪ ||

ಸುರಪನಿಂತು ಚತುರ್ನಿಕಾಯಾ | ಮರಸಮೇತನು ನಡೆಯೆ ಭೂಷಣ |
ಸುರುಚಿ ಪಲ್ಲವದಿಂ ಘನಸ್ತನಗುಚ್ಛ ಪಂಙ್ತಿಗಳಿಂ ||
ಕುರುಳಳಿಗಳಿಂ ಕಂಬೆಳಗುವೆಂ | ಬರಳಿದರಳಿಂ ಕಲ್ಪವಲ್ಲೀ |
ಸ್ಫುರಿತ ವನವೆನೆ ಬಂದುದಂದಮರಾಂಗನಾ ಜನವು || ೧೫ ||

ದಿವಿಜರೊಳಹಂಕಾರದಲಿ ಉಳಿ | ದವರು ಅಹಮಿಂದ್ರರೆ ಉಳಿದ ಸ |
ಗ್ಗವನು ಕಾದಿರಿ ಮೇಲುನೋಟಕರವರೆ ಎನಿಸಿದರು ||
ದಿವಿಜ ಲೋಕದಲಾರು ಮೆಲ್ಲನೆ | ತವಕದಲಿ ನೆರದಿರಲೊಡನೆ ಗಗ |
ನವು ವಿಚಿತ್ರದ ಮೇಲುಗಟ್ಟೆನಿಸಿತು ವಸುಂಧರೆಗೆ || ೧೬ ||

ವಸುಧೆ ಧನದನು ಕರೆವ ರತ್ನ | ಪ್ರಸರಮಯವಾಗಸ ವಿಮಾನ |
ಪ್ರಸರಮಯ ಜಯ ಜೀಯನಂದಾ ರವಮಯವು ದೆಸೆಯ ||
ಮಿಸುಪರತ್ನ ವಿಭೂಷಣದ ಕೆಂ | ಬಿಸಿಲಮಯದಿನವೆಲರು ಪರಿಮಳ |
ವಿಸರಮಯವೆನೆ ಸಂದ ದೇವಾಗಮವು ಚೆಲುವಾಯ್ತು || ೧೭ ||

ವಿತತ ದೇವಾಗಮವು ದ್ವಾರಾ | ವತಿಯ ಮೇಗಾಗಸದೊಳಿರೆ ಪುರ |
ದತು ಜನವು ಸುರನಚ್ಚಣಿಯರಾಕಾಶನೃತ್ಯವನು ||
ತತವಿತತ ಘನಸುಶಿರ ಶಾರೀ | ರತೆಯ ಮೇಳದಿವಾಡುವದ ನೋ |
ಡುತೆ ಮಹಾವಿಸ್ಮಯವವಾಂತುದು ಭೂಪ ಕೇಳೆಂದ || ೧೮ ||

ಇವರು ನಾಕಜರಿವರು ವೆಂತರ | ರಿವರು ಭವವಾಮರರು ತುರುಗಿ |
ರ್ದಿವರು ಜ್ಯೋತಿಷ್ಯರು ತದೀಶಾನೇಂದ್ರನೀದೇವ ||
ಧವಳಗಜದಲಿ ಶಚಿವೆರಸಿ ಬ | ಪ್ಪವನೆ ಸೌಧರ್ಮೇಂದ್ರನೆಂದಾ |
ಭುವನಜನಕಮರಿಯರೆ ತೋರಿದರಂದು ತಮ ತಮಗೆ || ೧೯ ||

ಒಳಸರಿಯೆ ಹಿಂಭಾಗಮುಂಗಾ | ಳೊಳದೆರೆಯದಿಂಬಾಗೆ ಬರಿಕೈ |
ಬಲಧುರದಲಿರೆ ಒಲೆಯದಿರಿ ಕಿವಿಬಾಲಮಿಳ್ಳಿಸಿರೆ ||
ಚಳಿಸದಿರೆ ದಿಟ್ಟಿಯೊಳು ಚಿತ್ತವು | ಕುಳಿಸದಂಕುಶ ಕುಂಭದೊಳು ಮಾ |
ರ್ಪೊಳೆಯ ನಭದಿಂದವನಿಗಿಳಿತಂದುದು ದಿವಿಜಗಜವು || ೨೦ ||

ಬಂದುನಿಲೆ ಶಿವದೇವಿಯರಸನ | ಮಂದಿರದ ರಾಜಾಂಗಣದೊಳುದ |
ಯಂದ್ರ ಬೆಸಸಲು ಭಕ್ತಿಯುಕ್ತಿ ಶಚೀಮಹಾದೇವಿ ||
ಅಂದದೃಶ್ಯದಲಾ ಪ್ರಸವಮಣಿ | ಮಂದಿರವನೊಳಪೊಕ್ಕು ಹರುಷದಿ |
ಸೌಂದರಿಯ ಸಾರಿರ್ದ ಜಿನಶಿಶುಗಂಡು ಭಕ್ತಿಯಲಿ || ೨೧ ||

ತ್ರಿಪ್ರದಕ್ಷಿಣ ಬಂದು ಮಿಗೆ ತ್ರಿಜ | ಗಪ್ರಭುವಿನಡಿಗೆರಗಿ ನೀಳದ |
ಸುಪ್ರತುಮೆವೋಲೆಸೆವ ಚೆಲುವಿಕೆಗೀಕ್ಷಣವನಿತ್ತು ||
ಆ ಪ್ರಮದೆಗೊಂದಿಲ್ಲದಾ ಮಾ | ಯಾಪ್ರನಿದ್ರೆಯನಿತ್ತು ಕೆಲದಲ |
ತಿ ಪ್ರವೀಣೆಯು ಮಾಯದಾ ಶಿಶುವಿರಿಸಿ ಹರುಷದಲಿ || ೨೨ ||

ಬಳಿಕಲಾ ಪರಮೇಶ್ವರನ ಕೆಂ | ದಳಿಗಿಳಿಂ ತೆಗೆದೊತ್ತಿಕೊಂಡಳು |
ಮೊಳಗೆ ದುಂದುಭಿ ಪಾಡೆಮಂಗಳ ಗಾಯಕೀತತಿಯ ||
ನಲಿದಮರನಚ್ಚಣಿಯರಾಡಲು | ಬಳಸೆ ಜಯಜಯರವವು ಸುಗತಿಯ |
ಬೆಳೆಯಿದೆಂದಿಂದ್ರಾಣಿಯಿಂದ್ರನ ಕೈಗೆ ನೀಡಿದಳು || ೨೩ ||

ದಿಗಿಭ ಕರಸಮವಿಮಲ ನಿಜಕರ | ಯುಗವನೀಡಿ ಜಿನೇಂದ್ರ ಈ ಪರಿ |
ನೆಗೆವುದೆನ್ನನು ಅಮೃತ ಪದಕೆಂಬಂತು ಮೃದುತಳದಿ ||
ನೆಗೆದುಕೊಂಡನು ಮಕುಟವೆನೆ ನೆ | ತ್ತಿಗೆ ಜಿನಾಂಘ್ರಿಯ ಪಟ್ಟವೆನೆ ನೊಸ |
ಲಿಗೆ ಪದಕವೆನಲುರಕೆ ಸಾರ್ಚಿದನೊಲಿದು ಶಚಿಯರಸ || ೨೪ ||

ಜಿನಪದವಮೌದಾರಿಕಾಂಗವು | ತನುವಸೋಂಕಲು ರಾಗರಸವಧು |
ವನಧಿಯಾಯ್ತಾನಂದ ಬಾಷ್ಪವು ಪುಳಕಸಸಿಗಳನು ||
ಕೊನರಿಸಲು ದಿವ್ಯಾಂಬರದ ಪೆಂ | ಪೆನಿಪ ಗದ್ದುಗೆಯಿಕ್ಕಿ ಪರಮೇ |
ಶನನು ತನ್ನಯ ಬಲದತೊಡೆಯಲಿ ಕುಳ್ಳಿರಿಸಿಕೊಂಡ || ೨೫ ||

ಎಡಬಲದ ಗಜಗಳಲಿ ಮುತ್ತಿನ | ಕೊಡವಿಡಿದನೀಶಾನದಿಂದ್ರನು |
ಎಡೆವಿಡದೆ ಮಾಹೇಂದ್ರನೊಡನೆ ಸನತ್ಕುಮಾರೇಂದ್ರ ||
ಬಿಡದೆ ಚಾಮರವಿಕ್ಕುತಿರೆ ಬೆಂ | ಬಿಡದೆ ಶುಚಿಶಚಿಯಿರಲು ತನ್ನಯ |
ತೊಡೆಯಲಿರೆ ಜಿನನಿಂದ್ರನೇಂ ಧನ್ಯನೊ ತ್ರಿಲೋಕದಲಿ || ೨೬ ||

ಶರದದಭ್ರದ ತೆರದಮೈಸ | ತ್ಕರಮೆ ಶೇಷವಿಶೇಷಮೆನೆ ಪು |
ಷ್ಕರವ ಹೋಲುವ ಪುಷ್ಕರವ ಪಲ್ಲವವೆ ಪಲ್ಲವದ ||
ದೊರೆಗೆ ಬರೆ ಮಧುಪಿಂಗಲಾಕ್ಷನು | ಶರಧಿ ಘೋಷದ ಭೃಂಹಿತದಿ ಸುರ |
ಕರಿ ತ್ರಿಲೋಕದ ಜನದ ಕಂಗಚ್ಚರಿಯ ತೋರಿಸಿತು || ೨೭ ||

ಧರಿಸೆ ಸುರಗಜಕಾಯ್ತು ಮೂವ | ತ್ತೆರಡು ಮೊಗ ಮೊಗಕೆಂಟು ಕೋಡ |
ಚ್ಚರಿಯ ಕೋಡೊಂದಕ್ಕೆ ಕೆರೆವೊಲದೊಂದು ಕೆರೆಗಬುಜ ||
ತರತರದಿ ಮೂವತ್ತೆರಡು ಮೂವ | ತ್ತೆರಡೆಸಳು ಒಂದಕ್ಕೆ ಮೂವ |
ತ್ತೆರಡು ಪಾತ್ರಗಳಾಡುವವು ಒಂದೊಂದೆಸಳ ಮೇಲೆ || ೨೮ ||

ಅದರ ವೈಕುರ್ವಣದ ಶಕ್ತಿಯ | ನದ ಜಿನ ಭಕ್ತಿಯನು ಇಂದ್ರನು |
ಹೃದಯ ಮೆಚ್ಚುವುದೆಂದೊಡಿನ್ನದನಾರೊ ಬಣ್ಣಿಪರು ||
ಪದುಮದೆಸಳವು ಕಂದಡಂದದಿ | ಮೃದುಪದದ ತಳನೋಯದಂದದಿ |
ತ್ರಿದಶ ನರ್ತಕಿಯರು ನಲಿದರಡಿ ಸೋಂಕದತಿ ಚತುರಿಂ || ೨೯ ||

ತೊಳಗುವೈರಾವತವು ಮೊದಲಾ | ದುಳಿದಮರ ವಾಹನವು ಸಬ್ಬರು |
ತಳರ್ವವೊಲು ದ್ವಾರಾವತಿಯಿನಾ | ಮೇರು ಪರಿಯಂತ ||
ತೊಳಪ ನೀಲಸುರತ್ನ ವೀಥಿಯ | ಘಳಿಲನಾಗಸದಲ್ಲಿ ನಿರ್ಮಿಸಿ |
ತಳುವದಿಂ ನಡೆಯೆಂದು ಕೈವೀಸಿದನು ದೇವೇಂದ್ರ || ೩೦ ||

ಮೊಳಗುತಿಹ ಸುರವಾದ್ಯಗಳೆ ತಾ | ಮೊಳಗು ನೀಲಸುವೀಥಿ ಮೇಘವು |
ಪೊಳೆವ ವರರತ್ನಾಂಶುಸುರಧನು ಕುಸುಮ ವೃಷ್ಟಿಗಳೆ ||
ಮಳೆಯೆನಿಸಿ ಜಿನಶಿಶುವೆ ಸುದತಿಯ | ಮೊಳೆಯೆನಿಸೆ ಪೌರರ್ಗೆ ಪುಣ್ಯದ |
ಬೆಳೆಯೆನಿಸಿ ಪೊರಕಾರ ವೊಲೆಸೆದುದು ದಿವಿಜ ಪಯಣ || ೩೧ ||

ಕಡೆಯುಮಿಲ್ಲದ ದೇವ ಸೈನ್ಯವು | ನಡೆಯೆ ಪೊಡವಿಯು ಪುಡಿವಡುವುದೆಂ |
ದೊಡರಿಸಿದನುಮರೇಂದ್ರ ನಾಗನಪಥವನೆಂಬವೊಲು ||
ಎಡದೊಳುರಗರು ಸಗ್ಗಿಗರು ಬಲ | ಗಡೆಯೊಳಾ ಜ್ಯೋತಿಷ್ಕತಲೆ ಹಿಂ |
ಗಡೆಬರಲು ಚೂಣಿಯಲಿ ನಡೆದುದು ವೆಂತರವ ಬಲವು || ೩೨ ||

ಖಗಕುಲದ ಚಾತುರ್ನಿಕಾಯವು | ನೆಗೆದು ಬೇರೊಂದಾದುದೆನೆ ಸಂ |
ದೆಗವ ಮಾಡಿದುದಾಗಸದಲಿ ಚತುರ್ನಿಕಾಯಕ್ಕೆ ||
ದೃಗು ಚಕೋರಗಳಮರ ಗಣಿತಾ | ಳಿಗಳ ಪೆರ್ಮೊಲೆ ಜಕ್ಕವಕ್ಕಿಗ |
ಳೊಗೆದ ಮುದಿ ನವಿಲುಗಳು ಕುಂತಳ ಭೃಂಗಸಂಕುಲವು || ೩೩ ||

ಜಲದಿ ಕಾತಿಕೆನದಿ ಸರೋವರ | ಕುಳಿಸವೇದಿನ ಗಾಳಿವನ ಸಂ |
ಕುಳವಿರಾಜಿತ ನಿಖಿಳದೇಶವೆ ಕೇರಿಮೇರುಗಿರಿ ||
ಪೊಳೆವ ರಾಜಾಲಯವು ವೃತ್ತದಿ | ಬಳಸಿ ತೋರ್ವಾಜಂಬುದ್ವೀಪವೆ |
ಪೊಳಲೆನಿಸಿದುದು ನೋಡುವಮರ ಕಣ್ಗೆಕೌತುಕದಿ || ೩೪ ||

ಜಿನನ ಪರಮೌದಾರಿಕಾಂಗದ | ಘನ ಸುಗಂಧದಿ ಮಿಗೆ ಹೊರಳಿ ಝೋ |
ರನೆ ಸುರಿವ ಮಂದಾರ ಕುಸುಮದ ಮಲಯ ಸೌರಭದಿ ||
ನನೆದು ತುಂಬಿಯ ಬಂಬಲಿನನು | ಣ್ದನಿಗಳಿಂ ಕೊಂಡಾಡಿ ಆಲಿಂ |
ಗನವ ಮಾಡೆ ಚತುರ್ನಿಕಾಯವನೋಲಿಸಿತೊಂದೆಲರು || ೩೫ ||

ತುರುಗಿ ನಡೆವ ಚತುರ್ನಿಕಾಯದ | ನೆರವಿಗಮರ ಸುವಾಹನಂಗಳ |
ನೆರವಿರ್ಕುಣಕಾಗಸವು ತೆರಪಿಲ್ಲೆನಿಸಿ ಬರಲು ||
ತೆರಪ ಬಿಡಿ ಪೊರೆಸಾರೆನುತ ಪಡಿ | ಯರ ಸುರರು ಹೊಂಗಟ್ಟಿ ಪಿಡಿದುರೆ |
[ಕರದಿ ಕೋಲ್ಗಳ] ಬಡಿದು ಸಮ್ಮುಖ ಬಿಡಿಸಿ ನಡೆಸಿದರು || ೩೬ ||

ನರ್ತಕಿಯರಾಟಗಳ ನೋಡಲು | ಮುತ್ತುತಿಹ ವೆಂತರರ ಜಡಿಕೈ |
ದತ್ತತೊಲಗಿಸಿ ಪಲತೆರದ ಸತ್ತಿಗೆಯ ನಭವಂಗೆ ||
ಮೊತ್ತವೆತ್ತಿಸಿ ಚಾಮರೇಂದ್ರರ | ನಿತ್ತರದಲೋರ್ಮೋದಲೆ ಚವಲವ |
ಬಿತ್ತರಿಸುವಂತೋಜೆಗೊಳಿಸಿದರಮರ ಪಡಿಯರರು || ೩೭ ||

ಒತ್ತಿ ಚೀರುವ ಪಾಠಕರ ಜಡಿ | ದೊತ್ತಿ ಸಂಗೀತಕ್ಕೆ ಮನ್ನಣೆ |
ಯಿತ್ತು ಗಾಂಧರ್ವರನು ಕೇಳಿಸುತಾ ಧ್ವಜಂಗಳನು ||
ಇತ್ತರದಿ ಸಾಲ್ಗೊಳಿಸಿ ದಿವಿಜರು | ಪೆತ್ತರತ್ನ ವಿಮಾನ ಕೋಟಿಯ |
ಸೂತ್ರಿಸಿದವೊಲು ನಡೆಸಿದರು ಸುರವೇತ್ರ ಪಾಣಿಗಳು || ೩೮ ||

ಅಡಿಗಡಿಗೆ ನೆಲನುಗ್ಘಡಿಸಿ ಬೆಂ | ಬಿಡದೆ ಜಿನಯಾತ್ರೆಯನು ಚೆಲುವಿಂ |
ನಡೆಸುತಿರೆ ವೈಕುರ್ವರ್ಣದ ಬೆಳ್ಳಾನೆ ಗಟ್ಟುವೊಡೆ ||
ನಿಡಿಯ ಕಂಬವು ಮೇರುವಲ್ಲದೆ | ತಡೆಯಬಲ್ಲವೆ ಪೆರವೆನಿಪವೊಲು |
ಸಡಗರದಿ ಹರಿನಡೆಸಿತಂದನು ಮೇರುವಿನ ಹೊರಗೆ || ೩೯ ||

ಬಂದ ಇಪ್ಪತ್ತೆರಡನೆಯ ಜಿನ | ನೆಂದು ಕುಡಿಗುಡಿಗಟ್ಟಿ ತಳಿರ್ಗಳ |
ಸುಂದರಾಂಗದಿ ಕುಸುಮರಜ ಪಿಷ್ಟಾತಕವ ಬೀರಿ ||
ಮಂದಮಾರುತನೆಲೆವ ಸೆಳೆಗೊಂ | ಬಂದ ನೃತ್ಯವನಾಡಿ ಮಂದರ |
ಕಂದರವು ಸೂಸಿದುದು ಕುಸುಮಾಂಜಲಿಯನಡಿಗಡಿಗೆ || ೪೦ ||

ಬಳಸಿದ ಮಹಾರ್ಣವ ಸರೋವರ | ದೊಳಗೆ ಜಂಬೂದ್ವೀಪ ಕಮಲದ |
ಹೊಳೆವ ಕರ್ಣಿಕೆಯಂತೆ ಮಂದರ ಶೈಲವಿಂಬಾಗಿ ||
ಬಳಸಿದಾ ಮೇಖಲೆ ಚತುಷ್ಕದಿ | ಬಳಸಿದುದು ವನಭದ್ರಸಾಲದಿ |
ಬೆಳೆದ ನಂದನ ಸೌಮನಸ ಪಾಂಡುಕದಿನೊಪ್ಪಿಹುದು || ೪೧ ||

ತರದಕೃತ್ರಿಮ ರತ್ನ ವಸತಿಗ | ಳುರು ಚತುರ್ವನದೊಳು ಚತುರ್ಮುಖ |
ವಿರುತಿಹವು ವೊಂದೊಂದು ಮತ್ತಾವನಗಳೆಡೆಗಳಲಿ ||
ಸುರರು ಸಗ್ಗದಲಾವ ಸುಖವೆಂ | ದಿರದೆ ಬಂದದರಲ್ಲಿ ಮನೆಗ |
ಟ್ಟಿರಲು ಸುರಗಿರಿಯೆನಿಸಿತೆನಲೇವೊಗಳ್ವೆ ನಾ ನಗವ || ೪೨ ||

ಮರಕೆ ಬಳ್ಳಿಗೆ ಗುಹೆಗೆ ಬೇಡರ | ನೆರವಿಗಾಶ್ರಯವಪ್ಪವಾ ಭೂ |
ಧರಗಳಲ್ಲದೆ ಕಲ್ಪತರುವಿಗೆ ಕಲ್ಪವಲ್ಲರಿಗೆ ||
ತರವಕೃತ್ರಿಮ ವಸತಿಗಳಿಗಮ | ರರ ನೆರವಿಗಾಶ್ರಯವೆನಿಸುವುದು ಸುರ |
ಗಿರಿಯಿದೊಂದಲ್ಲದುಂಟೆ ಎಂದನಮರೇಂದ್ರ || ೪೩ ||

ಹರಿಬಳಿಕ ಬಲಗೊಳುತ ಪಡುವಣ | ವರ ವಿದೇಹದ ಚೆಲುವಿಕೆಯಲು |
ತ್ತರದಲೈರಾವತವು ದಕ್ಷಿಣ ಭರತದಂದದಲಿ ||
ಕರಮೆಸೆದುದೆಂದಿಂದೆ ಮೂಡಣ | ವರ ವಿದೇಹದ ಸಿರಿಯನೀಕ್ಷಿಸಿ |
ಸುರಸಮಿತಿಗರುಪುತ್ತ ಬಂದನದೊಂದು ಲೀಲೆಯಲಿ || ೪೪ ||

ಅಂದು ಹೊಂಬೆಟ್ಟವನು ಹರಿಬಲ | ಬಂದು ನೆರೆದ ಚತುರ್ನಿಕಾಯವ |
ಮಂದರದ ಶಿಖರಕ್ಕೆ ನಡೆಯೆನಲಡರುತಿರಲಾಗ ||
ಚಂದವಹ ಚಿತ್ತಾರ ಹಾರವ | ನಂದು ಸುರಗಿರಿ ತಳೆದವೊಲು ತಾ |
ನೊಂದು ಚೆಲುವಾದತ್ತು ನೋಳ್ಪರ ಕಣ್ಗೆಕೌತುಕದಿ || ೪೫ ||

ಸುರಗಜೇಂದ್ರವು ಭದ್ರಶಾಲದೊ | ಳಿರದೆ ನಂದನದಲ್ಲಿ ನಿಲ್ಲದೆ |
ಉರಣಿಸಿ ಸೌಮನಸದೊಳು ತಡೆಯದೆ ಗಿರಿಯ ಮೇಲಡರಿ ||
ಭರದಿ ಪಾಂಡುಕ ವನದೊಳಗೆ ಕಡು | ಹರುಷದಲಿ ನಿಂದುದು ದಿಗಂತದೊ |
ಳಿರೆ ನಿಲಲು ಜಯ ಜಯ ರವದ ಕೊಡಖಿಳ ತೂರ್ಯರವ || ೪೬ ||

ಥಳಥಳಿಪ ಪಾಂಡುಕ ಶಿಲಾ ಸಂ | ಸ್ಥಲದದಟ್ಟಿತು ಎಂಟುಯೋಜನ |
ವಳೆಯೆ ತಾಂ ನೂರದರ ನೀಳವು ಅಗಲ ವೈವತ್ತು ||
ತೊಳತೊಳಗಿ ಬೆಳಪರ್ಧ ಚಂದ್ರನ | ವಿಲಸನವು ಮತ್ತದರೊಳಾ ಖಂ |
ಡಲ ವಿಕುರ್ವಣದಿಂದ ನಿರ್ಮಿಸೆ ಸ್ನಪನ ಮಂಟಪವ || ೪೭ ||

ಜಿನನ ಜನ್ಮಾಸ್ನಾನ ಮಂಟಪ | ವನು ಪೊಗಳುವಡೆ ಶೇಷನೇಂ ಬ |
ಲ್ಲನೆ ಜಿನಗೆ ಮೇರುವಿಗೆ ಸರಿದೊರೆಯುಳ್ಳೊಡದಕೆಣೆಯು ||
ಎನಿಪುದೊಂದೆಡೆಯುಂಟೆನಲು ಜಗ | ಕನುಪಮವಲಾ ವಿವಿಧ ರತ್ನದ |
ತನಿವೆಳಗೆ ದೆಸೆದೆಸೆಗೆ ಪಸರಿಸಿ ಮುಸುಕಿತಸದಳದಿ || ೪೮ ||

ತೊಳಗುವದರೊಳು ಕೋಣಕಲಶಂ | ಗಳು ಸುಮಣ ಭೃಂಗಾರಗಳ ಪ |
ಜ್ಜಳಿಪ ದೀಪಂಗಳ ಸುಧೂಪಘಟಂಗಳೆಸಕದಲಿ ||
ಕಲಶ ಕನ್ನಡಿ ಆಲವಟ್ಟದ | ಚಲಪತಾಕೆ ಸುಪ್ರತಿಷ್ಠವು |
ಹೊಳೆವ ಕೊಡೆ ಭೃಂಗಾರವೊಪ್ಪಿದವಷ್ಟಮಂಗಲವು || ೪೯ ||

ತಳತಳಿಪ ನಗಪತಿಯು ಭಾಳ | ಸ್ಥಳವೆನಿಪ ಪಾಂಡುಕದೊಳಗೆ ಮಿಗೆ |
ತೊಳಪ ಕುಂಕುಮ ತಿಲಕಮೆನೆ ಮಾಣಿಕದ ಹರಿಪೀಠ ||
ಅಳವಡಲು ಅದರಿಕ್ಕೆಲದಲು | ಜ್ಜಳಿಸಿದವು ಜಿನಗಭಿಷವವ ಸಂ |
ಗಳಿಸಲಿಂದ್ರರಿಗೇರಲಿಕ್ಕಿದ ಭದ್ರಪೀಠ ಯುಗ || ೫೦ ||

ವರವಿಧಾನದಿ ತ್ರಿಭುವನಾಧೀ | ಶ್ವರನನಾ ಸಿಂಹಾಸನದೊಳತಿ |
ಹರುಷದಲಿ ಪೂರ್ವಾಭಿಮುಖವಾಗಿರಿಸಿ ಕ್ರಮದಿಂದ ||
ಸುರಪಶಿಖಿಯಮನಿರುತಿ ವರುಣೋ | ನ್ಮುರುತಧನದೇಶಾನ್ಮ ಫಣಿಶಶಿ |
ವರರೆನಿಪ ದಿಕ್ಪಾಲರನು ದಶದೆಸೆಯೊಳಿರಿಸಿದನು || ೫೧ ||

ತರದಿ ನೋಳ್ಪೆಸೆವಾರಣಾಚ್ಚುತ | ವರಪ್ರಭೃತಿನಾಕಿಗರ ಮತ್ತೆ ಚ |
ಮರ ಸುವೈರೋಚನರು ಮೊದಲಹ ಭವನವಾಸಿಗಳ ||
ತರಣಿ ಶಶಿ ಮೊದಲಾದ ಜೋತಿ | ಷ್ಕರನು ಸತ್ಪುರಷನು ಮಹಾ ಪುರು |
ಷರುಗಳಾದಿ ವ್ಯಂತರರನೊಳನಾಲ್ದೆಸೆಯೊಳಿರಿಸಿ || ೫೨ ||

ಬಳಿಕ ಸೌಧರ್ಮೇಂದ್ರನುಂ ನಿ | ರ್ಮಳಿಸುವೀಶಾನೇಂದ್ರನುಂ ಇ |
ಕ್ಕೆಲದ ಭದ್ರಾಸನವನೇರಿದರಭಿಷವೋತ್ಸುಕರು ||
ತಳುವದುತ್ತರ ದಕ್ಷಿಣಾನನ | ರುರುತರದ ಜಯಮಂಗಳಾನಕ |
ವಿರುತಿದೆಸೆಯ ಪಳಂಚಲೆಯೆ ವರಮಂತ್ರಮುಖರಂದು || ೫೩ ||

ಗಿರಿಪತಿಯ ನುತ ಕಂಠಮಾಲೆಯ | ವರರುಚಿರ ನಾಯಕ ಸುರತ್ನದ |
ಪರಿಯಲಿರೆ ಜಿನನುಪಮಣಿಗಳಿಂತ್ರಿಂದ್ರರೀರ್ವರಿರೆ ||
ಪರಮನುರು ಜನ್ಮಾಭಿಷೇಕಕೆ | ನೆರೆದ ನೀಲ ಘಟಾಳಿಕೋಟಿಗ |
ಳಿರವಿನಲಿ ನುತಧೂಪಧೂಮವು ಬಾಳಬಳಸಿದುದು || ೫೪ ||

ಜಲ ಸುಗಂಧಾಕ್ಷತೆ ಕುಸುಮ ಪ | ಜ್ಜಳಿಪ ಮುಖ್ಯಾಮಳಾರ್ಘ್ಯವ |
ನೊಲಿದು ಜಿನಜನ್ಮಾಭಿಷದ ನಾಂದೀವಿಧಿಯಲೆತ್ತಿ ||
ಪೊಳೆಯೆ ತಮ್ಮ ವಿಭೂಷಣದ ತನಿ | ವೆಳಗು ಮುನ್ನವೆ ಸುರತರುವ ಚೆಂ |
ದಳಿರು ಮಾಲೆಸುಚಂದನಾದಿಯಿನರ್ಚಿಸಿಯೆ ಮೆರೆವ || ೫೫ ||

ಪರಮ ಮಂಗಲ ಕಲಶಗಳ ಮು | ದ್ಧರಣ ಮಂತ್ರ ಸಂಪೂರ್ವಕವು ಸೌಂ |
ದರ ಕರಂಗಳಿನೆತ್ತಿಕೊಂಡಾ ತೀರ್ಥನಾಥಂಗೆ ||
ಪರಮ ಪಾವನ ತೀರ್ಥಜಲದಿಂ | ಸುರಪತಿಗಳತಿ ಮುಖ್ಯ ಮಂಗಳ |
ಸುರುಚಿರೋದಭಿಷೇಕ ಸುವಿಧಾನವನೊಡರ್ಚಿದರು || ೫೬ ||

ದಿವಿಜ ವೃಂದಾರಕರು ಹರುಷದಿ | ತವತವಗೆ ಮುಂದೊದಗಿ ತನಿಗಂ |
ಧವನಲರನಕ್ಷತೆಯ ಚರು ಮುಂತಾದವನು ನೀಡೆ ||
ಸುವಿಧಿಯಿಂ ಶಚಿಮುಖ್ಯರಮರೀ | ನಿವಹಮದ ಸಂಶುದ್ಧಿಗೈದೊ |
ಪ್ಪುವಿನಮಭವಾರ್ಚನೆಗೆ ನೀಡುವರಾ ಸಮಯವರಿತು || ೫೭ ||

ಎಸೆವ ಪಂಚಮಗತಿಯ ರಾಜ್ಯಾ | ಭಿಷವನಕ್ಕಾ ಪಂಚಮಾಬ್ಧಿಯ |
ಮಿಸುಪ ಜಲಜಿನಗುಚಿತವೆಂದು ಶಚೀರಮಣ ಬೆಸಸೆ ||
ಮಿಸುನಿವೆಟ್ಟವೆ ನೀರ್ಮೋಗೆಯಲೆಂ | ದೊಸೆದು ನೀಡಿತೊ ಕಡಲಿಗೆರಡ |
ರ್ಮಿಸುವ ತೋಳ್ಗಳನೆನಿಸೆ ಸಾಲಿಟ್ಟುದು ದಿವಿಜವೃಂದ || ೫೮ ||

ಕೆಂಬಲರ ನೀಲದ ಪಳುಕಿ ನೊ | ಪ್ಪಂಬಡೆದ ಮುಖವೊಂದು ಯೋಜನ |
ದಿಂಬುದಳೆದೊಡಲೆಂಟು ಯೋಜನಮಾದುವೆಡೆ ಬಿಡದೆ ||
ತುಂಬಿದವು ಇಂಗಡಲೆ ಬರಿದಾ | ಯ್ತೆಂಬಿನೆಗ ಘಟಜಾತವಂದಿಂ |
ದಂಬುಧಿಯ ಘಟಜಾತನೀಂಟಿದವೆಂಬರರಿಯದರು || ೫೯ ||

ಸುಧೆಯ ಮಡುಗಳೆ ಎರಡು ಕಡೆಯಿಂ | ದೊದವಿ ಬಂದವೊಯೆನಲು ಬಹ ರ |
ನ್ನದ ಘಟಂಗಳ ಕೈಕೈಗೆ ಮಿಗೆ ಕೊಡುವ ಕೊಂಬೊಂದು ||
ಪದಪು ಕಂದುಕಕೇಳಿಯೆನೆ ತೋ | ರಿದುದುಯಿಂದ್ರನ ತೋಳ್ಗಳಂದೊ |
ಪ್ಪಿದವುಯೆಳನೀರ್ವೇತ್ತ ತೆಂಗಿನ ತೋಪುಗಳ ತೆರದಿ || ೬೦ ||

ತಳೆದ ವೈಕುವರ್ಣದ ತೋಳ್ಗಳು | ತಳೆದು ಘಟಪೇಟಕಗಳನು ಕಡು |
ಬೆಳೆದ ಜಯ ಜಯ ಘೋಷದಿಂದಭೀಷೇಕವನು ಮಾಡೆ ||
ತೊಳಪ ಜಿನಪಗೆ ಪೋಲ್ತು ಕಡುಕರ | ಗಿಳಿದುದೋ ನೀರಾಗಿ ಶಶಿಯೆನೆ |
ಪುಳಕುಗಳ ಕೊಡು ಮುಖದಿ ಸುರಿದವು ಸುಧೆಯ ಧಾರೆಗಳು || ೬೧ ||

ಪಲವು ಘಟಗಳನಾಂತ ಕೈಗಳು | ಪಲವು ಮಜ್ಜನಗೊಳಿಪ ಕೈಗಳು |
ಪಲವು ಕೈಗಳು ಸವೆದ ಕಲಶವನತ್ತ ಕೊಡುತಿಹವು ||
ಒಲಿದು ಜಿನಪಗೆ ಮುಗಿದ ಕೈಗಳು | ಪಲವು ಇಂದ್ರನ ಮೂರ್ತಿಯೊಳವೆಂ |
ನೆಲಸಿದವೊ ಜಿನಸ್ತವನ ಸಮಯವಿಧಾನದಲಿ ನಲಿದು || ೬೨ ||

ಸುರರದೆಲ್ಲರು ನಿರತರಹರೆನೆ | ಸುರಗಿರಿಯೆ ಮಜ್ಜನದ ಪೀಠವು |
ಸುರಪಮಜ್ಜನವಳ್ಳನಮೃತಾಂಬುಧಿಯೆ ನೀರ್ದೋಣೆಯು ||
ನೆರೆದ ಪರಿಚಾರಿಕೆಯರೆಲ್ಲರು | ಸುರವಧೂತತಿಯೆಂದೊಡೇನ |
ಚ್ಚರಿಯೊ ಜಿನಜನ್ಮಾಭಿಷೇಕಸ್ತವನ ಕಲ್ಯಾಣ || ೬೩ ||

ಸುರಚಿರೈರಾವತದ ಬರಿಕೈ | ಯಿರವಿನಿಂ ಧಾರಾ ಸಹಸ್ರವೆ |
ಸುರಿವುತದೆ ಬಿಡದಿಂದ್ರನೌತ್ಸುಕ್ಯದೆ ಜಿನಾರ್ಭಕನ ||
ಶಿರದ ಮೇಲಿಗೊಗೆದ ಶಿಶು ಸು | ಸ್ಥಿರತೆ ವಡೆದಿದೆಯೆಂದು ಕೆಲರಮ |
ರರುನೆನೆಯೆ ಪನಿಮೂಗಿನೊಳವರೆ ಸುಯಿದನೊರ್ಮೆ ಜಿನ || ೬೪ ||

ಪೇಳಲೇನಾ ಸುಯ್ಯ ಪೆಂಪಿನ | ಗಾಳಿಗಾಧ್ವಜಪಟವು ಪಟವನು |
ಮೇಳಿಸಿದ ಕೂಕಂಭವೆನೆ ಬಾನೆಂಬ ಕಡಲೊಳಗೆ ||
ತೇಲಿದವು ದಿವಿಜರ ವಿಮಾನಗ | ಳೋಳಿಕಡು ಜವದಿಂದವೆಲ್ಲಾ |
ಬಾಲಕನ ಸತ್ವಾತಿಶಯಮನದೇನ ಹೊಗಳುವೆನು || ೬೫ ||

ಪರಮನೆಳೆನೆತ್ತಿಯಲಿ ಸುಧೆ ಭೋ | ರ್ಗರೆವದನಿ ಆ ನಗದಿ ಮಿಗೆ ಭೋ |
ರ್ಗರೆದು ನಿರ್ಜರಕೋಟೆಯಾಗಿಯೆ ಬೀಳ್ದನೀ ಮತ್ತೆ ||
ಸುರರ ಜಯಜಯರವವುಮಿಗೆ ಭೋ | ರ್ಗರೆದು ಮೊಳಗುವ ಕೋಟಿ ವಾದ್ಯಗ |
ಳುರುತರಧ್ವನಿಯೊಡವೆಳೆದು ಬಳಸಿದುದುದಿಗುತಟವ || ೬೬ ||

ಶರದದಭ್ರವ ಮುಸುಕಿದೆಳೆ ಭಾ | ಸ್ಕರನವೊಲು ಜಿನನಿರ್ದ ಆ ಸೀ |
ಕರನೆಗೆದು ಬೇರೊಂದು ಜ್ಯೋತಿರ್ಲೋಕವೆನಿಸಿದುದು ||
ಸುರರಮಣಿಯರ ಮುಡಿಗೆ ಮಲ್ಲಿಗೆ | ಯರಲುಗಳವೊಲು ವಕ್ಷದೊಳು ಭಾ |
ಸುರ ಸುಮುಕ್ತಾಹಾರಗಳವೊಲು ನಿಂದು ರಂಜಿಸಿತು || ೬೭ ||

ಪುಣ್ಯಮೂರ್ತಿಯ ಪುಣ್ಯಮಜ್ಜನ | ಪುಣ್ಯ ಜಲ ಪರಿದಂದಿನಿಂದೀ |
ಪುಣ್ಯತೀರ್ಥವಿದೆಂದು ಪುಣ್ಯಕ್ಷೇತ್ರವಿದುವೆಂದು ||
ಪುಣ್ಯನದಿಯಿದು ಪುಣ್ಯ ವನವಿದು | ಪುಣ್ಯಗಿರಿಯಿದು ಪುಣ್ಯದರಿಯಿದು |
ಪುಣ್ಯ ಸರಸಿಯಿದೆಂಬುದಾದುದು ಜಂಬುದ್ವೀಪದಲಿ || ೬೮ ||

ಪರಮಜಿನ ದಿವ್ಯಾಂಗಗಂಧದಿ | ಪರಿಕಲಿಸಿ ತನಿಗೋರ್ವಿತುಂಬಿಯ |
ಸೆರೆವಿಡಿದು ಬೋರ್ಭೋರೆನುತಮಂದರದ ಕಂದರಕೆ ||
ಪಿರಿದು ನಿರ್ಜರವಾಗಿ ಪರಿವಾ | ಪರಮ ಪಾವನ ಗಂಧಜಲವನು |
ಶಿರದೊಳಾಂತುದು ತಮತಮಗೆ ಭಕ್ತಿಯಲಿ ಸುರನಿಕರ || ೬೯ ||

ಸವನಗಂಧಾಂಬು ಪ್ರವಾಹದಿ | ದಿವಿಜಗಜ ನೀರಾಟವಾಡಿಯೆ |
ದಿವಿಜರರಿಕೆಯ ಗಂಧಸಿಂಧುರವೆನಿಸಿದುದು ಮತ್ತೆ ||
ವಿವಿಧವಾಹನ ದೇವತೆಗಳಾ | ದಿವಿಜ ಬಲವು ಚತುರ್ನಿಕಾಯವು |
ಪವಣಿಗಳಿದ ಪವಿತ್ರತೆಯನಾಂತುದು ಸುಭಕ್ತಿಯಲಿ || ೭೦ ||

ದುರಿತ ವಹ್ನಿಯ ನಂದಿಸಲು ಭ | ವ್ಯರಸುಪುಣ್ಯದಲತೆಯ ಬೆಳೆಸಲು |
ಪರಮ ಜಿನಗಂಧೋದಕದ ಪನಿಯೊಂದೆ ಸಾಲ್ವುದಲ ||
ಆರರೆಯೆಂದತಿಸ್ತುತಿಸಿ ಸಗ್ಗಿಗ | ರರಸ ಶಿರದಲಿ ತಳಿದುಕೊಂಡನು |
ಸುರಸಮಿತಿ ಮಸ್ತಕಕೆ ತಳಿದನದೊಂದು ಲೀಲೆಯಲಿ || ೭೧ ||

ಬಳಿಕ ಪರಿಮಳ ಜಲದಿ ಗಂಧದಿ | ತೊಳಗುವಕ್ಷತದಿಂದ ಸುರತರು |
ಗಳ ಕುಸುಮದಿಂ ದಿವ್ಯಚರುವಿಂ ದೀಪಧೂಪಗಳಿಂ ||
ಫಲನಿಚಯದಿಂದರ್ಘ್ಯದಿಂ ಮಂ | ಗಲದಿಮಣಿಭೂಷಣದಿ ಬಗೆಯಿ |
ರ್ಕೋಳಿಪ ಸಂಗೀತದಿ ಜಿನೇಂದ್ರನ ಪೂಜಿಸಿದನಿಂದ್ರ || ೭೨ ||

ಬಳಿಕ ಸಮ್ಮುಖವಾಗಿ ಮಕುಟದಿ | ತಳೆದ ಮುಕುಲಿತ ಕರದಿ ದಿವಿಜಾ |
ವಳಿಗೆರಸು ಭಕ್ತಿಯಲಿ ಜಯಜಯ ತ್ರಿಭುವನಾರಾಧ್ಯ ||
ಮಲರಹಿತ ಜಯ ಜಯ ಪರಮ ಮಂ | ಗಳನೆ ಜಯಜಯ ಸುಗುಣಮಣಿಗಣ |
ಜಲಧಿ ಜಯವೆಂದು ಸಾಷ್ಟಾಂಗ ಪ್ರಣುತನಾದ || ೭೩ ||

ವಿನುತೆ ಶಚಿಶುಚಿವಸ್ತ್ರದಿಂ ಜಿನ | ತನುವ ಜಲಬಿಂದುವನೊರಸಿ ಕ |
ಮ್ಮನೆಯ ಚಂದನ ಲೇಪವನು ನಿರ್ಲೇಪಗಳವಡಿಸಿ ||
ಅನುಪಮಿತ ಹರಿವಂಶ ತಿಲಕಂ | ಗನುಗೊಳಿಸಿ ತಿಲಕವನು ಕಡುಚೆಲು |
ವೆನಿಪ ಕಟಿಸೂತ್ರವನು ಕಾಶ್ಯಪಗೋತ್ರಗಿಕ್ಕಿದಳು || ೭೪ ||

ತಳೆದ ಸಹಜಚ್ಛಿದ್ರ ಕರ್ಣಂ | ಗಳಿಗೆ ಮಣಿಮಾಂಗಾಯನಿಟ್ಟಳು |
ಅಲರೆಲೆಯ ಶಿಖಿಯಲಿ ತೊಡರ್ಚಿ ವಿಮುಕ್ತ ದೋಷಂಗೆ ||
ತೊಳಪ ಮುಕ್ತಾಭರಣಗಳ ಸಂ | ಗೊಲಿಸಿ ಬಳಿಕ ನಿರಂಜನನ ಕಂ |
ಗಳಿಗೆ ಅಂಜನರಂಜನೆಯ ನೊಡರಿಸಿದಳಾ ಶಚಿಯು || ೭೫ ||

ಚಿತತನುಶ್ರೀಯೊಂದಿ ಭೂಷಣ | ವೆನಿತು ಭೂಷಣವಾದವವು ಕಿವಿ |
ಗಿನಿಧನೀ ವಂದುಗೆಗಳಡಿಯಲಿವುಡಿಗೆ ಕಿಂಕಿಣಿಯು ||
ಕನದರುಣಮಣಿಕಟ ಕೇಯೂ | ರನುತ ಬಾಹುಯುಗಂಗಳೊಳು ಬೆರ |
ಳಿನಲಿ ಮುದ್ರಿಕೆ ಕೊರಳಿನಲಿ ಕಂಠಿಕೆಗಳೊಪ್ಪಿದವು || ೭೬ ||

ಪರಮ ಗುಣಭೂಷಣನ ಮಿಗೆ ಸಿಂ | ಗರಿಸಿ ನೋಡುವ ಬಯಕೆಯಿಂದಾ |
ಸುರಪ ಸಾಸಿರದಿಟ್ಟೆಗಳೆದೆವೆಯಿಕ್ಕಿದೀಕ್ಷಿಸುತ ||
ಹರುಷದಿಂದೈರಾವತವಲಂ | ಕರಿಸೆ ಶಚಿಸರ್ವಜ್ಞನನು ಸುರ |
ಗಿರಿಶಿಖರದಿಂ ತಂದು ಹಿಮಗಿರಿ ಶಿಖರಕೀವಂತೆ || ೭೭ ||

ಮೃದುತಳದಿ ತಂದೆತ್ತಿನೀಡಲು | ತ್ರಿದಶಪತಿ ಪೂರ್ವಕ್ರಮದಿ ತಳೆ |
ದೊದವಿದಾ ದ್ವಾರಾವತಿಗೆ ತತ್ಪಥದೊಳೊಲವಿಂದ ||
ಪುದಿದು ನೆರೆದ ಚತುರ್ನಿಕಾಯದ | ವಿದಿತ ಸಪ್ತಾನೀಕ ಸೈನ್ಯದ |
ಸದಿವ ನಾನಾವಾದ್ಯಗಳ ಕಳಕಳದಿ ಗಮಿಯಿಸಿದ || ೭೮ ||

ಮುಸುಕಿದಖಿಳ ವಿಮಾನತತಿಯೆ | ಣ್ದೆಸೆಯ ಬೆಳ್ಗೊಡೆ ಪಳಯಿಗೆಗಳಾ |
ಗಸವ ತುಂಬಿತು ದಿವದರಳ ಮಳೆ ನೆಲವ ತೀವಿದುದೊ ||
ಮಿಸುಪಮರ ಗಾನೆಯರ ಕೊರಳಿಂ | ರಸಮೊಸರ್ವ ಸಂಗೀತ ಕಿವಿಗಿಂ |
ಬೆಸೆಯೆ ದೇವರದೇವನನು ತಂದನು ಪುರಂದರನು || ೭೯ ||

ಹರಿ ಕಳುಹಲಾ ದೇವದೂತರು | ಹರಿದರುಪೆ ಪುರದಲ್ಲಿ ಶೋಭೆಯಿ |
ಪರಕಲಿಸೆನಲಿದಾ ಸಮುದ್ರ ವಿಜಯಮಹಾರಾಯ ||
ಹರಿಬಲಾದಿ ತನೂಜರನುಜರು | ಪುರಜನವು ಸಹವಿತತ ವಿಭವೋ |
ತ್ಕರದೆ ಬಂದಿದಿರ್ಗಂಡನೇಂ ಧನ್ಯನೋ ತದವನೀಶ || ೮೦ ||

ಬಂದು ಜಯಜಯ ಎಂಬ ತರತರ | ದಿಂದ ಅರ್ಘ್ಯವನೆತ್ತುತಿಹ ನಲ |
ವಿಂದ ಜಿನಗಭಿವಂದಿಸುವ ಮಂಗಲವ ಪಾಡುತಿಹ ||
ಸಂದ ಭಕ್ತಿಯಲಾ ಸುರಸ್ತ್ರೀ | ವೃಂದ ವಾರತಿಯೆತ್ತು ವೀ ಸೈ |
ಪಿಂದ ಪುರವನು ಪೊಕ್ಕುದವನಾ ಯಾತ್ರೆ ಚೆಲುವಾಗಿ || ೮೧ ||

ಮೊದಲೆ ಸುರಶಿಲ್ಪಿಗಳು ಸಲೆಮಾ | ಡಿದರತುನಮಯ ಮಂಟಪದ ಮ |
ಧ್ಯದ ಮೃಗೇಂದ್ರ ಸುಪೀಠದಲಿ ತ್ರಿಜಗಾಧಿಪನಿಂದ್ರ ||
ಪದುಳದಿಂ ಬಿಜಯಂಗೈಸೆ ಪೆ | ರ್ಚಿದ ಸಮುದ್ರ ವಿಜಯನೃಪತಿ ಜನ |
ವಿಧಿಚರನುಜರು ಕೃಷ್ಣ ಬಲದೇವಾದಿ ಯೊಡವೆರಸಿ || ೮೨ ||

ಪರಮ ಭಕ್ತಿಯಲರ್ಘ್ಯವೆತ್ತಿದ | ರಿರದೆ ಸರ್ವಾಂಗ ಪ್ರಣಾಮವ |
ವಿರಚಿಸಲು ಸಾಧರ್ಮಪತಿ ಜಿನನುಭಯ ಪಾರ್ಶ್ವದಲಿ ||
ಇರಸಿ ಅವರನು ಇಕ್ಕೆಲದಲಿ ಚ | ಮರರು ವೈರೋಚನರು ಅಭವಗೆ |
ಹರುಷದಲಿ ಚಾಮರವನಿಕ್ಕುತಲೋಲಗಿಸುವಾಗ || ೮೩ ||

ಸುರಪರೀರ್ವರು ದೇವದೇವನ | ಯೆರಡು ಕೆಲನನಲಂಕರಿಸೆ ಇ |
ತ್ತೆರದಲಖಿಳೇಂದ್ರಾದಿ ಚತುರನಿಕಾಯ ವೋಲಗಿಸೆ ||
ಸುರಗಣಿಕೆಯರು ಪಾಡೆನಚ್ಚಣಿ | ಯರು ವಿಡಾಯದಲಾದೆ ತಾನ |
ತ್ತಿರದೆ ಶಚಿ ಶಿವದೇವಿಯ ನಿದ್ರೆಯನು ಪರಿಹರಿಸಿ || ೮೪ ||

ಸುತಮುಖ ನಿರೀಕ್ಷಣದ ಮಾಳ್ಪೊಡೆ | ಚತುರೆ ಕರೆತರೆ ಕಂಡು ಪುತ್ರನ |
ನತು ಹರುಷೆಯಾದಿರವನಂತುಟದಿಂತುಟಿನ ಬಹುದೆ ||
ಶತಮುಖನು ಜಗದಂಬಿಕೆಯ ಭೂ | ನುತೆಯನುಚಿತಾಸನದಲಿರಿಸಲು |
ಸತಿ ಸುಧಾಂಶುವ ಕಂಡ ಪಾಲ್ಗಡಲಂತೆ ಪೆರ್ಚಿದಳು || ೮೫ ||

ಒಮ್ಮೆ ತನುಜನ ನೋಡುವಳು ಮ | ತ್ತೊಮ್ಮೆ ಪುತ್ರನ ಭೂಷಣಂಗಳ |
ನೊಮ್ಮೆ ಕೈಗಳ ಮುಗಿದಕೊಂಡಿಹ ನುತ ಶತೇಂದ್ರರನು ||
ಒಮ್ಮೆ ಚತುರುನಿಕಾಯ ಪಂತಿಯ | ನೊರ್ಮೆವಾಹನ ದೇವತೆಗಳನು |
ಒಮ್ಮೆ ಸುರಗಣಿಕೆಯರ ನರ್ತನವನು ನಿರೀಕ್ಷಿಪಳು || ೮೬ ||

ತನುಜನೀ ಮಹಿಮೆಯನದೇನೆಂ | ಬೆನು ತ್ರಿಲೋಕೀ ಜನವೆ ಕಿಂಕರ |
ರನಿಮಿಷಾಂಗನೆಯರು ಮನೆಯ ತೊತ್ತಿರು ಸುವಸ್ತುಗಳೆ ||
ಮನೆಯೊಳಗೆ ತೆರಹಿಲ್ಲ ಜಗದ | ಯ್ಯಯನು ಪಡೆದಾಂ ಧನ್ಯಳಾದೆನು |
ಯೆನುತ ಮನದಲಿ ಕಾಂತೆ ಸಂತಸದಂತವೈದಿದಳು || ೮೭ ||

ಭೂವರೋತ್ತಮ ಕೇಳೆಲೇ ಶಿವ | ದೇವಿ ತ್ರಿಜಗತ್ಪಿತೃಗೆ ಪಿತೃಯುಗ |
ನೀವು ನೋಂತಂತಾರು ನೋಂತರೊ ಮೂರು ಲೋಕದಲಿ ||
ಈ ವಿಮಲಕಲ್ಯಾಣವನು ಜಿನ | ದೇವಗೀಪರಿ ಮಾಳ್ಪೆವೆಂಬುದ |
ದೇವಪತಿಯೆಲ್ಲವರಿಗೆಲ್ಲವ ತಿಳಿಯೆ ಪೇಳಿದನು || ೮೮ ||

ಪರಮ ನೊಡ್ಡೋಲಗದೊಳೆಂತೊ | ಪ್ಪಿರಲು ಮೌಹೂರ್ತಿಕರು ಬಂದಾ |
ದರದಿ ಬಿನ್ನಹ ಜಾತಕರ್ಮಕ್ರಿಯೆಯನೊಡರಿಪೊಡೆ ||
ವರ ಮುಹೂರ್ತ ಸಮೀಪವೆನೆ ಸುರ | ತರುಣಿಯರ ಮೊಗನೋಡೆ ಹರಿ ತಡೆ |
ದಿರದೆ ಶಿವದೇವಿಗೆ ಸುಮಂಗಲ ಮಜ್ಜನವ ಮಾಡೆ || ೮೯ ||

ಬಂದು ವಸ್ತ್ರಾಭರಣ ಕುಸುಮ ಸು | ಗಂಧದಿಂ ವಸದನಗೊಳಿಸಿ ಶಚಿ |
ಯಂದೊಲಿದು ಕೈಗೊಟ್ಟು ಕರೆ ತರೆ ಜಿನನ ಕಾಣುತಲೆ ||
ಮುಂದೊದಗಿ ಮೆರೆವರ್ಘ್ಯವೆತ್ತಿ ಜ | ಯೆಂದು ಭಕ್ತಿಯಲೆರಗಿಯುತ್ಸವ |
ದಿಂ ಧೃತೀಶ್ವರಿ ಮುಖ್ಯ ನಗದೇವೀ ಸಮೂಹಕ್ಕೆ || ೯೦ ||

ತರದಿ ರೋಹಿಣಿ ಸತ್ಯೆ ರುಗ್ಮಿಣಿ | ಯರು ವಿವಿಧ ಮಂಡಳಿಕ ಸಾಮಂ |
ತರ ಮಡದಿಯರು ಮುಖ್ಯ ಕಾಂತಾತತಿಗೆ ಶಿವದೇವಿ ||
ತರತರದೆ ಮಣಿಪಾತ್ರೆಯಲಿ ತುಂ | ಬಿರಿಸೆ ರತ್ನ ಸುವಸ್ತ್ರ ಭೂಷಣ |
ಪರಿಮಳಾದಿಯ ಬಾಯಿನವ ಕೊಟ್ಟಳು ಮನೋಮುದದಿ || ೯೧ ||

ಪ್ರವರೆಯಿಂತತಿ ಜಾತಕರ್ಮೋ | ತ್ಸವವ ಮಾಡಲು ಬಳಿಕ ಅಪಗತ |
ಭವಗೆ ಸುರಪನರಿಷ್ಟೆನೇಮಿಯೆನಿಪ್ಪ ನಾಮವವನು ||
ಸವೆದು ದಿವ್ಯಾಂಬರ ವಿಭೂಷಣ | ನಿವಹದಿಂ ಜಿನಜನಕನನು ಆ |
ದಿವಿಜಪತಿ ಪೂಜಿಸಿದನೆಲೆ ಭೂಪಾಲ ಕೇಳೆಂದ || ೯೨ ||

ಅವನಿಪತಿ ಕೇಳಾ ಸಮಯದಲಿ | ಇವನರಸನಿವನಿಂದ್ರನಿವು ಮನೆ |
ಯವು ವಿಮಾನಗಳೀಕೆ ಶಚಿಯಾವನಿತೆ ಶಿವದೇವಿ ||
ಇವರು ಪುರಜನವಿವರು ಸುರಜನ | ಯಿವರು ಮರ್ತ್ಯ ಸುನರ್ತಕಿಯರಿಂ |
ತವರಮರ ನರ್ತಕಿಯರೆಂಬ ವಿಭೇದ ದೋರಿಸದು || ೯೩ ||

ಸುರವರೋತ್ತಮ ನರ್ತಕಿಯರ | ಚ್ಚರಿಯೆನಲು ನಲಿದಾಡಿ ನೋಡುವ |
ಸುರನರೌಘವು ಹರುಷರಸ ವಾರಿಧಿಯೊಳೋಲಾಡೆ ||
ಪರಮನೊಡ್ಡೋಲಗದೊಳೊಪ್ಪಿದ | ಸುರಪನನು ಆನಂದ ಶಿಕ್ಷಕ |
ಕರೆಯೆ ನರ್ತಕನದನೆಲೆ ಭೂಪಾಲ ಕೇಳೆಂದ || ೯೪ ||

ರಸವು ಭಾವವುಮಭಿಯನವು ರಂ | ಜಿಸುವ ಸಿದ್ಧಿ ಪ್ರವೃತ್ತಿ ಗಾನವು |
ಮಿಸುಪ ಆದ್ಯವು ಸ್ವರವು ರಂಗವು ಧರ್ಮವೃತ್ತಿಯುತ ||
ಎಸೆವ ಸಂಗ್ರಹವೆಂಬ ಹನ್ನೊಂ | ದೆಸೆವ ನಾಟ್ಯಾಂಗದಲಿ ನೆರೆದೊ |
ಳ್ಪೆಸೆವ ದಶರೂಪಕದೊಳದೆ ತಾನೊಂದು ನಾಟಕವ || ೯೫ ||

ಆರಯಲು ತಾಂ ದೇವನಾಯಕ | ವೀರರಸಯುತ ಯೆನಿಸುವಸಮಾ |
ಕಾರರೂಪಕವೆಂಬುದನು ಕಲ್ಯಾಣ ಯೋಗ್ಯವನು ||
ಸಾರನೇತೃವೆ ಜಿನನುದಾರದ | ಯೋರುವೀರಮೆ ರಸವು ತ್ರಿಜಗೋ |
ದಾರಸಭೆ ಸಭೆಯಾಗೆ ಮುಕ್ತಿಫಲಾರ್ಥಿ ದೇವೇಂದ್ರ || ೯೬ ||

ಚತುರುವಿಧ ನೇಪಥ್ಯರಂಜಿತ | ಸುತನುವಾಗಿಯೆ ಸೂತ್ರಧಾರ |
ಸ್ಥಿತಿವಡೆದು ನೆರೆದರುಸನಾವರಣೀಯ ಹೋಹಂತೆ ||
ವಿತತ ಜವನಿಕೆ ತೊಳಗೆ ಮೇಳವೆ | ಚತುರ ಗಂಧರ್ವಾದಿಯಾಗಿರೆ |
ಶತಮಖನು ರಂಗವನು ಪೊಕ್ಕನದೊಂದು ಲೀಲೆಯಲಿ || ೯೭ ||

ಅರೆಮುಗಿದ ಕಣ್ ಶಾಂತಮುಖಸಮ | ಚರಣಮುಕುಳಿತ ಹಸ್ತ ಹೃದಯದೊ |
ಳಿರುತ ಕುಸುಮಾಂಜಲಿಗರೆದು ನೊಸಲಲಿ ಮುಗಿದಕರವ ||
ಇರಲು ಪರಮನ ಚರಣನಖ ಚಂ | ದಿರನ ಸೇವಿಸ ಬಂದು ತಾರೆಗ |
ಳಿರವೆನಿಸಿ ಹರಿಪೀಠವನು ಬಳಸಿದವು ಕುಸುಮಗಳು || ೯೮ ||

ಕಿವಿಗೆ ಸವಿಗೊದಗೆಯದೆಗೇಯದ | ಸವಿಗೆ ಸವಿಗೊಡೆ ವಾದ್ಯವಾದ್ಯದ |
ಪವಣಿಗದವೋಲಂಗವಿನ್ಯಾಸವು ಸುಲಾಸ್ಯದಲಿ ||
ಅವತರಿಸೆ ಆಸ್ಯದ ಸುನೃತ್ಯದ | ಲವಗಹಿಸೆ ರಸಪೂರ ಭಾವದ |
ತವರೆನಿಸಿ ತ್ರಿಜಗದ ಸಭೆಯು ಬೆರಗಾಗೆ ನರ್ತಿಸಿದ || ೯೯ ||

ಸಕಲ ಅಂಗೋಪಾಂಗದಿಂದಾಂ | ಗಿಕ ಮಗಾನ ಸುಧಾ ರಸದಿ ವಾ |
ಚಿಕಮನೇಪಥ್ಯದಿ ಮಿರುಗವಾಹಾರ್ಯಕವನಂತೆ ||
ಪ್ರಕಟ ಸತ್ವಜಭಾವದಿಂ ಸಾ | ತ್ವಿಕಮನಿಂತಭಿನುತ ಚತುಷ್ಕಮ |
ಮುಕುತಿ ಫಲದರ್ತಿಯಲಿ ನರ್ತಿಸಿ ಸಭೆಯ ಮೆಚ್ಚಿಸಿದ || ೧೦೦ ||

ಶಿರಕೆನತಿ ಕಂಗಳಿಗೆ ಉತ್ಸಾಹ | ಕರಗಳಿಗೆ….ಳಿಯೆ ಬರುತಿರೆ |
ಹರಿಯ ಮನದೊಳು ಜಿನಸುಭಕ್ತಿಯ ಪೆರ್ಮೆಯೇಂ ಘನವೊ ||
ಭರತಶಾಸ್ತ್ರದ ತಿರುಳೆ ಮೂರ್ತಿಯ | ಧರಿಸಿತೆನೆ ರಸಭಾವ ವೃತ್ತಿಯ |
ವಿರಚಿಸಿದನಹುದಯ್ಯ ಜೀವಝ ಭಾಪೆನಲು ಸಭೆಯು || ೧೦೧ ||

ಮಿಸುನಿವೆಟ್ಟವ ಮೊದಲಮೃತಜಲ | ವಿಸರದಲಿ ಮುಳುಗಿಸಿದ ವೊಲು ಮುಳು |
ಗಿಸಿದನಭವನ ಸಭೆಯ ನೃತ್ಯಾಮೃತದಲಹರಿಯಲಿ ||
ಮಿಸುಪ ತ್ರಿಜಗದ ಸಭೆಯೆ ಸಭೆಯೀ | ಕ್ಷಿಸೆ ಸಭಾಪತಿ ಮೂಜಗದ ಪತಿ |
ಒಸೆದ ನರ್ತಕನಿಂದ್ರನೇನೆಲೆ ವೊಗಳ್ವೆ ನರ್ತನವ || ೧೦೨ ||

ಸುರಪನೀಪರಿ ಪಲವು ಪೊತ್ತಾ | ಡಿರದೆ ತಾಂಡವಕೊಡರಿಸಿಯೇ ಬಾಂ |
ಬರೆಗ ಬೆಳೆದು ಸಹಸ್ರರೂಪದಿ ನಿಲವೆನಿತ್ತನಿತ ||
ಕರಣವೆನಿತಕ್ಷಿಯೆನಿತನಿ | ತುರುಕರಂಗಳವೆನಿ ತನಿತುಗತಿ |
ಶಿರಗಳೆನಿತನಿತೆಲ್ಲವನು ಒರ್ಮೊದಲೆ ತೋರಿದನು || ೧೦೩ ||

ಕಳಿದ ಪೂಗಳ ತೆರದಿ ರೇಚಕ | ದೆಲರಿನಿಂದುದುರಿದವು ತಾರೆಗ |
ಳಳವಿಗಳಿದಾ ತೋಳಳುಬ್ಬೆಗೆ ದಿಗ್ಗಜವ್ರಜವು |
ಪೆಳರಿದವು ಬಹುಚರಣದಾಟಕೆ | ನೆಲ ನಡುಗುತಿರೆ ವಾರಿನಿಧಿ ಬೆಂ |
ಬಳಿಯಲುರೆ ತುಳ್ಕಾಡಿ ತಾಂಡವವಾಡಿದನು ಸುರಪ || ೧೦೪ ||

ಒಂದು ಮೂರ್ತಿಯು ಓಲಗದಲ | ತ್ತೊಂದು ಮೂರ್ತಿಯು ಕಟ್ಟಗೆಯ ಪಿಡಿ |
ದೊಂದು ಮೂರ್ತಿಯು ನರ್ತನದಲಿರುತಿಹುದು ಗಗನದಲಿ ||
ಒಂದೆ ಪರಿಯಲಿ ದೆಸೆಗಳಲಿ ಮ | ತ್ತೊಂದು ಪರಿಯಲಿ ಭೂಮಿಯಲಿ ತಾ |
ನೊಂದು ಪರಿಯಲಿ ಇಂದ್ರತೋರೆ ಮಹೇಂದ್ರ ಜಾಲವನು || ೧೦೫ ||

ಪಲವು ಭುಜಶಾಖೆಗಳೊಳಗೆ ಮಣಿ | ವಲಯಮೆನೆ ಕೈಯುಗುರ್ಗಳಲಿ ಏಂ |
ನಲಿದರೋ ಸುರಕೋಟಿ ನರ್ತಕಿಯರು ಸರಾಗದಲಿ ||
ಸಲೆಬಿಡೋಜನು ನರ್ತಕಿಯರುಂ | ನಲಿವುತಿರೆ ಜಿನಸಭೆಯೊಳೆನೊಡ |
ವೆಳದುದೋ ತಾಂಡವವು ಲಾಸ್ಯವು ಎನಿಸಿತಾ ನೃತ್ಯ || ೧೦೬ ||

ಪೊಡವಿಯಲಿ ಕೇಳಿಕೆಯ ನೋಡಿಯೆ | ಕೊಡುವರಭಿಮತ ವಸ್ತುವನು ನಟ |
ಬಡವನಾಗಿರೆ ಒಡೆಯನಹವೊಲು ಏನ ಹೇಳುವೆನು ||
ಸಡಗರದಿ ಹರಿ ನಟನು ನರ್ತಿಸೆ | ಕೊಡುವ ಜಿನಪನೆ ಬಲ್ಲ ಚಾಗವ |
ಪಡೆವಯಿಂದ್ರನೆ ಬಲ್ಲನೆಂದನು ಮಾಗಧಗೆ ಮುನಿಪ || ೧೦೭ ||

ಇಂದ್ರನುಂ ನಿಜ ದಕ್ಷಿಣೇಂದ್ರನು | ಸಂದ ಸಚಿಯುಂ ಲೋಕಪಾಲರು |
ಬಂದು ಭೂಪೇಂದ್ರ ತೆಗೆ ಜಿನಪನುಪಾಸನ ಫಲದಿ ||
ಒಂದಿ ನಡೆದು ಸುಮುಕ್ತಿಯೆಯಿದುವ | ರೆಂದಡೇಂ ಧನ್ಯರೊ ಬಳಿಕ ದೇ |
ವೇಂದ್ರ ನೃತ್ಯದಿನೋಲಗಿಸಿ ಸರ್ವಜ್ಞಗೆರಗಿದನು || ೧೦೮ ||

ಸುರ ನಿವಾಸಿಗಳಪ್ಪ ಸುಮಹ | ಸ್ತರರ ದಾದಿಯರಂಗರಕ್ಷರ |
ತರುವ ಕಳ ಜಾವದರ ಸಹಚರ ಸುರಕುಮಾರಕರ ||
ಪರಮನನು ಓಲಗದೊಳೊಪ್ಪಿಸಿ | ಇರಿಸಿ ಜಿನನು ಜಿನಜನನೀ ಜನ |
ಕರನು ಬೀಳ್ಕೊಂಡೈದೆ ಬಲವಂದನು ಶಚೀರಮಣ || ೧೦೯ ||

ಸುರಪವೆತ್ತಾನುಂ ಶಚೀಸಹ | ವರಮನೆಯ ಪೊರಮಡಲು ದಿಟ್ಟಿಗ |
ಳರುಹನತ್ತೆಳೆಯಿತ್ತಮಾರ್ಗಂದೆಗೆಯೆ ಚರಣಗಳು ||
ಸುರಪಗೆಳೆತೆಗೆ ಯಾಯ್ತುಪಯಣವು | ವೆರೆದ ಚತುರನಿಕಾಯ ವಾಗಸ |
ದೆರವೆದುಂಬಲು ಮೆಲ್ಲನೈರಾವತವನೇರಿದನು || ೧೧೦ ||

ಬಳಿಕ ಚತುರ ನಿಕಾಯವನು ನಭ | ದೊಳೆ ಮುದದಿ ಬೀಳ್ಕೊಟ್ಟು ತನ್ನಯ |
ನಿಲಯವನು ಪೊಕ್ಕಡಿಗಡಿಗೆ ಜಿನ ಚರಣ ಸೇವೆಯನು ||
ಗಳಿಸಿದೆನಲಾ ಧನ್ಯ ನಾನೆಂ | ದಳವಿಗಳಿದತಿ ಭಕ್ತಿಯಿಂದೇಂ |
ನಲಿದನೋ ಮೃದುಮಧುರ ಕವಿತಾಮೃತರಸಾರ್ಣವನು || ೧೧೧ ||

ಶ್ರೀವದನದೊಳಗೆಸೆದು ದೆಳನಗೆ | ತಾವರೆಯನಸುನಗೆಯವೊಲು ಸಿರಿ |
ದೇವಿತಮೃತಾಂಶುವಿನೊಳಮರ್ದಿನ ಪನಿವೊಳೆವ ತೆರದಿ ||
ಆ ವಿಮಲದಂತಗಳ ಮೊಳೆವೆಳ | ಗಾವರಿಸಿದವು ನಗೆ ಮೊಗದೊಳಾ |
ದೇವದೇವನ ಶೈಶವದೊಳವನೀಶ ಕೇಳೆಂದ || ೧೧೨ ||

ತೊರೆವ ಸಲೆಯಲಿ ರಾಜಹಂಸೆಯ | ಮರಿ ನಡೆವವೊಲು ನೀಲರನ್ನದ |
ನೆರೆದ ನೆಲದಲಿ ದಟ್ಟಡಿಯ ನಿಡೆ ರನ್ನದಂದುಗೆಯ ||
ಮೆರೆವದನಿ ತಾವರೆಯ ರಜದಲಿ | ನೆರೆಪೊದಳ್ದೆಳೆದುಂಬಿ ಮಾಲೆಯ |
ಕಿರುದನಿಯವೊಲು ಜಿನನ ಚರಣಾಂಬುಜದಲೊಪ್ಪಿದವು || ೧೧೩ ||

ಸುರಕುಮಾರರ ನಭವನೊಲಿದಾ | ಪರಿಯ ಬೆನ್ನಲಿನಡಯಿಪನು ಭ |
ವ್ಯರನು ಈ ಪರಿಸುಪಥದಲಿ ನಡೆಯಿಸುವೆನೆಂಬಂತೆ ||
ಹರುಷದಲಿ ಮುಂಡಾಡಿ ತೆಕ್ಕೆಯ | ಲಿರಿಸಿ ಮುದ್ದಿಪ ವರಜನನಿ ಜನ |
ಕರಿಗೆ ಬಂಧು ವ್ರಜಕೆ ಪರಮಾನಂದಗೊಡುತಿಹನು || ೧೧೪ ||

ನೆರೆದಮರದಾದಿಯರು ಬೆನ್ನನೆ | ಪರಿದು ಪಾದವ ಕಟ್ಟಿಕೊಂಡಾ |
ಪರಮನನು ಮಜ್ಜನಗೊಳಿಸುವರು ಸೆಜ್ಜೆಗೊಳಿಸುವರು ||
ಕರೆದು ತಂದಮೃತಾನ್ನವೂಡುವ | ರಿರುಳು ಪಗಲಗಲದೆಯು ಜಾವದ |
ವರು ಮಹಾಸುವಿಧಾನದಿಂ ಬಿಡರಂಗರಕ್ಷಕರು || ೧೧೫ ||

ಸಿಂಗರಿಸುವರು ರನ್ನದೊಡವಿಂ | ಅಂಗದಲಿ ಮೃದು ತಳದಿ ತೊಡೆವರು |
ಭೃಂಗ ಸಂಗಿ ಸುಗಂಧವನು ದಿವ್ಯಾಂಬರವ ಪೊದಿಸಿ ||
ತುಂಗಗುಣಿಯ ಸಮುದ್ರ ವಿಜಯ ನೃ | ಪಂಗೆ ಕೊಡೆ ಕೈಗೈದು ತಲಿಯಿ |
ತ್ತಂಗೈಸಿ ಶೀವದೇವಿಯನು ಬಿಗಿದಪ್ಪಿ ನಗುತಿಹನು || ೧೧೬ ||

ತೋಳು ತೋಳೆನೆ ನೇಮಿಕುವರನು | ತೋಳನಾಡುವನೊರ್ಮೆ ಕೈಪರೆ |
ಮೇಳಿಸಿದ ಜನನೀ ಜನಕರನು ನೋಡಿ ನಸುನಗುತ ||
ತಾಳಜತ್ತಿಗೆ ಮರಿಯರಗೆಯಕೆ | ಕಾಲಗೆಜ್ಜೆಗಳುಲಿಯೆ ಕುಣಿದನು |
ಬಾಲಲೀಲೆಯಲೆಲ್ಲರನು ಸಂತೋಷ ಬಡಿಸಿದನು || ೧೧೭ ||

ಸರಿವರೆಯದಲಿ ಬೆಳೆಬೆಳೆದು ಜಿನ | ವರನೊಡನೆ ಶಿಶುಕೇಳಿಯನು ಮಿಗೆ |
ಚರಿಚರಿಸಿ ಸುರಕುವರರಳ್ಕರುಗೊಂಡು ಸುಖಿಸುವರು ||
ಅರಿಗಳಿಗಳಾಗಂಚೆ ಮರಿಯಾ | ಗೆರಳೆಯಾಗಿ ವಿನೋದಕೇಳಿಗೆ |
ಪರಿತೆರಲು ತಾನರಿಯದರವೊಲು ನಲಿವನದರೊಡನೆ || ೧೧೮ ||

ಸುರಕುಮಾರರು ಮೆಲ್ಲಮೇಷೋ | ದ್ಧುರ ಮಹೀಪ ಕುಕ್ಕುಟ ವಿಡಾಯದಿ |
ಬರೆ ಕರುಣದಲಿ ನೋಡಿ ಅರ್ತಿಬಡುವನು ಕಾದಿದೊಡೆ ||
ಪರಮನೇಂ ಮೆಚ್ಚನು ಅಹಿಂಸಾ | ಪರನು ಹಿಂಸೆಯ ಮೆಚ್ಚುವನೆ ಈ |
ಪರಿಯಲೊಸರಿಸಿದನು ಶಿಶುತೆಯನರಸ ಕೇಳೆಂದ || ೧೧೯ ||

ಗುರುವದಾವನೊ ನೋಡೆ ತ್ರಿಜಗ | ದ್ಗುರುವೆನಲು ಬಹು ಶಾಸ್ತ್ರ ಶರಧಿಯ |
ಕರೆಯ ಕಂಡನು ಲೌಕಿಕದ ಕಲೆಯೆಲ್ಲವನು ತಿಳಿದ ||
ಬರೆಯದೋದದೆ ಸಾಧಿಸದೆಯೇ | ನರಿದೆ ರನ್ನದಮೊಳಗೆ ಶಾಂತಿಯು |
ಮರುಗ ಶಶಿಗಾ ಪರಿಮಲವು ಭೂಪಾಲ ಕೇಳೆಂದ || ೧೧೯ ||

ಗುರುವದಾವನೊ ನೋಡೆ ತ್ರಿಜಗ | ದ್ಗುರುವೆನಲು ಬಹು ಶಾಸ್ತ್ರ ಶರಧಿಯ |
ಕರೆಯ ಕಂಡನು ಲೌಕಿಕದ ಕಲೆಯೆಲ್ಲವನು ತಿಳಿದ ||
ಬರೆಯದೋದದೆ ಸಾಧಿಸದೆಯೇ | ನರಿದೆ ರನ್ನದಮೊಳಗೆ ಶಾಂತಿಯು |
ಮರುಗ ಶಶಿಗಾ ಪರಿಮಲವು ಭೂಪಾಲ ಕೇಳೆಂದ || ೧೨೦ ||

ಜನಿಯಿಪಂದೊಲಿ ತಂದುತನ್ನೊಳು | ಜನಿಯಿಸಿದವು ಮತಿಶ್ರುತಾವಧಿ |
ಯನೆ ಕುಮಾರನ ಮತಿಶ್ರುತಂಗಳನರಿವ ಹೊಗಳುವೆನು ||
ಎನಿಪುದದು ಪುನರುಕ್ತ ಸಗ್ಗದ | ಅನುಪಮಿತ ಭೋಗೋಪಭೋಗದಿ |
ದಿನದಿನಕೆ ಬೆಳೆಬೆಳೆದು ಯೌವ್ವನವಾಂತನಾ ನೇಮಿ || ೧೨೧ ||

ಸತತ ನಿಸ್ವೇದತೆ ವಿಮಳತಾ | ಸ್ಥಿತಿ ಸುಧಾ ಪಾಂಡುರರುಚಿರರುಧಿ |
ರತೆ ಪ್ರಥಮಸಂಸ್ಥಾನನ
ರತೆ ಪ್ರಥಮಸಂಸ್ಥಾನನ ಸಂಹನನತೆ ಸರೂಪತ್ವ ||
ಅತಿ ಸುರಭಿ ಗಂಧತ್ವಮುಂ ವಿ | ಶ್ರುತ ಸುನಂದ್ಯಾವರ್ತ ಸ್ವಸ್ತಿಕ |
ವಿತತವಹ ನೂರೆಂಟು ಲಕ್ಷಣ ಲಕ್ಷಿತತೆ ವೆರಸಿ || ೧೨೨ ||

ತಿಲ ಮಸೂರಿಕೆ ಮುಖ್ಯನವಶತ | ವಿಲಸಿತ ವ್ಯಂಜನ ಸುರಂಜನೆ |
ದಲೆದ ಸೌಲಕ್ಷಣ್ಯಮುಂ ಪ್ರಿಯಹಿತ ಶುಭಾಷಿತ್ವ ||
ಬಳವದಪ್ರತಿ ಹನರನನಂತೋ | ಜ್ವಳ ಮಹಾವೀರ್ಯತ್ವಮಿಂತೊಡ |
ವೆಳದ ಸಹಜಾತಿಶಯ ವೀರೈದೊಪ್ಪಿದವು ಜಿನಗೆ || ೧೨೩ ||

ನೆರೆನಿರಾಮಯವಾದ ಕಂಠಕ | ಗರಳ ಶಸ್ತ್ರಾದಿಗಳು ಅಳುರದ |
ನಿರತಿಶಯದಿಂದ್ರಿಯದತೀಂದ್ರಿಯ ಸೌಖ್ಯಕಾರಣದ ||
ವರದಶಧನೂತ್ಸೇದಹ ಸಾ | ಸಿರವರುಷ ಮಿತದಾಯವಿಹ ಭಾ |
ಸುರಹರಿನ್ಮಣಿ ರುಚಿರಕಾಂತಿ ಶರೀರವೊಪ್ಪಿದು || ೧೨೪ ||

ಕಾಮ ಸನ್ನಿಭ ರೂಪನೆಂಬೆನೆ | ಕಾಮವಿಜಯನೆನಿಪ್ಪ ಬಿರುದಿನ |
ಸೀಮೆಯಳಿವುದು ನೋಡುಪಾಪದ ಮಾತನಾಡುವೆನೆ ||
ಶ್ರೀಮುಖವು ಪಂಕಜವೆನಿಪ್ಪೆನೆ | ಆ ಮಹಿಮ ನಿಷ್ಪಂಕ ಅದರಿಂ |
ನೇಮಿ ಜಿನಪ ಸ್ವಾಮಿಯನುಪಮನೆಂಬವನೆ ಜಾಣ || ೧೨೫ ||

ಉದಯದರ್ಕ ಸಮಗ್ರ ಕರ ಸಂ | ಪದವನಾಂತವೊಲೆಳೆ ಶಶಿಯೇ ಪೆ |
ಚ್ಚಿದರ ಕಲಾದರನಾದವೊಲು ವರಪಾರಿಜಾತ ಸಸಿ ||
ವಿದಿತವೃಕ್ಷತೆಗೊದಗುವಂದದಿ | ತ್ರಿದಶಪತಿ ನತ ನೇಮಿಬಾಲ್ಯದ |
ನೆಲೆಯನೋಸರಿಸಿದನು ನವ ಯೌವನವನಪ್ಪಿದನು || ೧೨೬ ||

ಬಗೆವೊಡಿಲ್ಲಿಂದಿತ್ತಲಿಂನಭ | ವಗೆ ತನಗೆ ಇಲ್ಲಿಲ್ಲ ತಾಂ ಪ |
ತ್ತುಗೆಯೆನಿಪ ಸವಿಬಾಲತನದಲಿ ಚರಮತನು ಚೆಲುವ ||
ಮಿಗೆತಳೆದು ಸುರಲೋಕವೇ ಪ | ಥ್ಯಗಳ ಚೆಲುವಿಗೆ ಚೆಲುವನಿತ್ತೇಂ |
ಸೊಗಯಿಸಿತೋ ಸರ್ವಜ್ಞ ಪರಮೌದಾರಿಕ ಶರೀರ || ೧೨೭ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತ ನವ ಮಧು |
ಕರ ವಿರಾಜಿತ ಸುಕವಿ ಸಾಳುವ ವಿರಚಿತವುಮಪ್ಪ ||
ಪರಮನೇಮಿ ಜಿನೇಶ ಪಾವನ | ಚರಿತೆಯೊಳಗೆಂಟನೆಯದತಿ ಬಂ |
ಧುರತೆವಡೆದುದು ಸುರಪಕೃತ ಕಲ್ಯಾಣ ಪರ್ವವಿದು || ೧೨೮ ||

|| ಅಂತು ಕಲ್ಯಾಣ ಪರ್ವಕ್ಕಂ ಸಂಧಿ ೩೩ಕ್ಕಂ ಮಂಗಲಮಹಾ ||