ಸಂಧಿ ೨೯

ಜೋಡೆಕಾಂಚನಮಾಲೆ ಕೃತಕವ | ಮಾಡೆ ಖಗಪತಿ ಕಾಮ ದೇವನ |
ಕೂಡೆ ಕಾದಲು ಬಂದು ನಾರದ ಮುನಿಯು ತಿಲುಹಿದನು || ಪಲ್ಲ ||

ಕೇಳೆಲೇ ಶ್ರೇಣಿಕ ಧರಿತ್ರೀ | ಪಾಲ ಚೆಲುವಿಂದೆಸೆವ ಕಾಂಚನ |
ಮಾಲೆಕಣುಸವಿಯಾಗಿ ಪಸದನವಾಂತು ಕೆಳದಿಯರ ||
ಮೇಳದಲಿ ಹೊನ್ನುಯ್ಯಲಾಡುತ | ಲೀಲೆಯಿಂದಿರೆ ಬಂದನಾ ಪೂ |
ಗೋಲರಾಯನು ಯಕ್ಷಿ ಕೊಟ್ಟಾ ಪಾವುಗೆಯ ಮೆಟ್ಟಿ || ೧ ||

ಮಿಸುಪ ಮಕುಟದಿ ಸುರಧನುಗಳೆ | ಣ್ಣೆಸೆಯ ಚಿತ್ರಿಸೆ ಕುಂಡಲದ ಕೆಂ |
ಬಿಸಿಲು ಪಸರಿಸೆರಾರೆಗಳನವಮೌಕ್ತಿಕಾಭರಣ ||
ದೆಸೆದೆಸೆಗೆ ಪೊಸಸಂಜೆಯನು ಪಸ | ರಿಸೆ ಪೋದಸೆ ಪೀತಾಂಬರವು ನಿ |
ಟ್ಟಿಸುವರಕ್ಷಿಯ ಪುಣ್ಯವವೆನೆ ನಡೆತಂದನಂಗಭವ || ೨ ||

ಅವನ ಚೆಲ್ವಿಕೆಗವನ ಜವ್ವನ | ಕವನ ಸಿಂಗರಕವನ ನಡೆನುಡಿ |
ಯವನ ಸೊಬಗಿಗೆ ಪಾಪಿ ಕಾಂಚನಮಾಲೆ ಸಲೆಸೋಲ್ತು ||
ಅವನನೀಕ್ಷಿಸಿ ಪೂಗಣೆಗೆ ಚಿ | ತ್ತವನೆ ಸವಿಗೊಟ್ಟಿರಲು ನನೆಗೋ |
ಲವನೆ ತಾಯೋಲಗದೊಂದಿನಿತಿರ್ದು ಮರಳಿದನು || ೩ ||

ಸಿತಗೆಗಾದುದು ಕಾಮದಾಹ | ಸ್ಥಿತಿಯೊಳಾರಣರಣಕವಾಗಳು |
ಚತುರೆ ನಿಜಸಖಿಸಜ್ಜೆಗೊಳಿಸಿ ಸಮಸ್ತರವನು ತೇದು ||
ಅತಿಶಯ ಜ್ವರವೇತರಿಂ ತೋ | ರಿತು ನನಗೆ ಪೇಳೆಂದು ಮುದ್ದಿಸಿ |
ನುತಿಸಿ ಮರ್ಮವ ಜಕ್ಕುಲಿಸಿ ಕೇಳಿದೋಡೆ ಪೇಳಿದಳು || ೪ ||

ಹರಣವಲ್ಲವೆ ನೀನೆನಗೆ ಸಖಿ | ಯೊರವೆ ನಾತೆರನೆಲ್ಲವನು ನಿನ |
ಗರಳ ಸರಳನು ನನ್ನ ಮಗನಲ್ಲಡಿವಿಯೊಳಗಿರಲು ||
ಅರಸ ಕಂಡೆನಗಿತ್ತೊಡಿನ್ನೆಗ | ಪೊರೆದೆ ನಿಡುದಿಟ ವೀಗಲವನೈ |
ಸರಗಳೆನ್ನೆದೆ ಉಚ್ಚಿದವು ಕೇಳೆಂದಳಾ ಕುಲಟೆ || ೫ ||

ಇಲ್ಲದುದ ನೀನುಸುರೆ ಹೆಂಗಳಿ | ಗುಳ್ಳುದೈ ಸತಿ ಕಾಮ ಮೋಹದಿ |
ತಳ್ಳಿವರಿವಾ ಬೇಟದಾತುವಾದಡದಕೇನು ||
ಚೆಲ್ಲೆಗಂಗಳ ಚದುರೆ ಕಾಮನ | ನಿಲ್ಲಿಗಾಂ ತಂದಪೆನು ಬಾಗಿಲೊ |
ಳಲ್ಲಿ ನಾನಿಹೆ ಪಿಡಿದು ನೀನೆರೆಯೆಂದಳಾ ಕೆಳದಿ || ೬ ||

ಎಂದವಳ ಸಂತೈಸಿ ವಹಿಲದಿ | ಬಂದಳಂಗರಾಜ ಜರದಲಿ |
ಬೆಂದಳಲೆ ನಮ್ಮಕ್ಕ ಕಾಂಚನಮಾಲೆ ನೀನೋಡೆ ||
ಬಂದುದಿಲ್ಲೇಕೆನಲು ಚತುರಿಕೆ | ಬಂದೆನಿದೆಯೆಂದೈದೆ ಬರೆ ಕರೆ |
ತಂದು ಬಾಗಿಲೊಳಿರ್ದು ನೋಡೆಂದೊಳಗೆ ಪೊಗಿಸಿದಳು || ೭ ||

ಕರುಣದಿಂದೇ ನಮ್ಮ ನಮಗೀ | ಜ್ವರ ವಿದೇತರಿನಾದುದೆನಲೈ |
ಸರದೆ ಬಾಯೆಂದವನ ಕರವನು ಪಿಡದುರದ ಮೇಲೆ ||
ಇರಿಸಿಕೊಂಡೆಲೆ ಮದನ ತನ್ನಯ | ಹರಣವೀಗಳೆ ಪೋಗುತಿದೆ ಪರಿ |
ಹರಿಸು ನಿನ್ನಿಂ ಬಂದ ಜರವೆನೆ ಬೆದಱಿ ಕೈದೆಗೆದ || ೮ ||

ಅನಿತರೊಳು ಹಾಯ್ದಪ್ಪಿಕೊಂಡಳು | ಮನಸಿಜನೆ ಬಿಟ್ಟೋಡಿದೊಡೆ ಜೀ |
ವನಮುನೀಗಳೆ ಬಿಡುವೆನನಲು ಣಮೋsರಹಂತಾಣಂ ||
ಜನನಿ ನಿಮಗೇಂ ಗ್ರಹವು ಪಿಡಿದುದೊ | ಎನೆ ಮನೋಜಗ್ರಹವು ಪಿಡಿದುದು |
ನನಗೆ ನೀ ಸುತನಲ್ಲ ಕೇಳದ ಪ್ರಪಂಚವನು || ೯ ||

ಪಡೆದ ನಿನ್ನನದಾರೋ ಭೀಕರ | ದಡವಿಯಲ್ಲಿ ಬಿಸುಟಿರ್ದೊಡೆಮ್ಮುವ |
ನೊಡನೆ ತಂದೆನಗೀಯೆ ಸಾಕಿದೆನೈಸೆ ಮಗನಲ್ಲ ||
ಒಡಲ ಮಾತಿದು ನಂಬೆನಲು ಮನ | ನಡುಗಿ ಸಾಕಿದೊಡಮ್ಮನಲ್ಲವೆ |
ನುಡಿಯ ಬಹುದೇ ಜನನಿ ಕಷ್ಟವನೆಂದನಾ ಮದನ || ೧೦ ||

ಜನನಿಯೆಂಬಾ ನುಡಿಯ ಮಾಣೆಲೆ | ಮನಸಿಜನೆ ನಿನ್ನಾಣೆಯೀಕೆಯ |
ತನುಜನಲ್ಲದಕೇಕೆ ಸಂಶಯ ಬೇಡವಂದವಳ ||
ಮನದ ದೋಲಿಹ ಕೆಳದಿ ಪೇಳಲು | ಮನಗೊಡದೆ ಮನಸಿಜನಿರಲ್ಕಾ |
ಕನಕಮಾಲೆಯು ಕಂಡು ಮನದೊಳು ನೆನೆದಳಿಂತೆಂದು || ೧೧ ||

ಸ್ಮರನು ವಿದ್ಯಾಲಂಪಟನು ಚ | ಚ್ಚರದಿ ತನ್ನಯ ವಿದ್ಯೆಯನು ಕಡು |
ಹರುಷೆಯಹ ಮೇಲವನೊಲೆಗುಮೆಂಬಾಸೆಯಿಂ ಸಿತಗೆ ||
ನರಕಕೊಳಗಹನಲ್ಲನವ ಸತ್ | ಪುರುಷನೆಂದರಿಯಳಲೆ ವಿಷಯಾ |
ತುರರದೇಂ ಗಡ ಮುಂದುಗಾಣ್ಬರೆ ಭೂಪ ಕೇಳೆಂದ || ೧೨ ||

ಸ್ಮರನೆ ಕೇಳೆ ನಮ್ಮ ವಂಶದ | ಪುರುಷರಿಗೆ ಕೈ ಸಾರದದು ವ |
ಚ್ಚರಿಯ ಬೆಜ್ಜೆಯ ಕೊಡುವೆ ಸಾಧಿಸು ಸಾಧ್ಯಾವಾದಾಗ ||
ಅರಿದುಕೊಳು ನೀನೆನ್ನ ಪುತ್ರನೊ | ಪೆರನೊ ಎಂಬುದ ಸತ್ಯವಿದು ನಿ |
ನಿಷ್ಕರುಣಿಯಾಗದೆ ಬಳಿಕ ತನ್ನಸುವುಳುಹು ನೀನೆನಲು || ೧೩ ||

ಸತ್ಯವಿದ ನಂಬೆಂದು ನೀವೆನ | ಉತ್ತರವ ನಿನ್ನಾಡುವೆನೆಯದ |
ನಿತ್ತು ಕಳೆ ನೀವೆಂದವೊಲು ನೆಗಳುವೆನು ನಿಮಗಿಳಿವ ||
ಇತ್ತಪೆನೆ ಪುಸಿಯೆನಲು ಬಂಧಕಿ | ಚಿತ್ತಜನ ಮೊಗನೋಡಿ ತನಗಿದೆ |
ಇತ್ತನೆಂದೀ ಮಂತ್ರ ಪೂರ್ವಕವಿತ್ತಳದನಿರದೆ || ೧೪ ||

ಪೆಸರಿನಿಂ ಪ್ರಜ್ಞಪ್ತಿಯಿದನಾ | ನುಸುರಿದಂದದಿ ಸಿದ್ಧ ಕೂಟದ |
ಬಸದಿಯಲಿ ನೀಂ ಪಡೆದ ಬಹುದೆನೆ ಜೀಯೆನುತ ಪೋಗಿ ||
ಅಸನ ಧೈರ್ಯನು ಮಂತ್ರ ಪೂರ್ವಕ | ವಸಮ ಬಾಣನು ಜಪಿಸಲದು ಕೈ |
ವಸಕೆ ಬಂದುದು ಬರಲುಬಂದರು ಚಾರಣ ದ್ವಯರು || ೧೫ ||

ಗುರು ಪದಾಂಬುಜಕೆರಗಿ ವಿದ್ಯಾ | ಧರರಿಗೀ ಪ್ರಜ್ಞಪ್ತಿ ವಿದ್ಯೆಯು |
ದೊರಕದೆಂಬುದ ಕೇಳ್ದರಿದು ನಿಜನಿಲಯವನು ಪೊಕ್ಕು ||
ಇರೆ ಮನೋಭವನೀಗ ಬಹನಾ | ತುರದಿ ಮನದಣಿವಂದದಾತನ |
ನೆರೆವೆನೆಂಬಾ ಪಂಬಲನೆ ತಳೆದಿರ್ದಳಾ ಪಾಣ್ಬೆ || ೧೬ ||

ಬಂದೆನೆಂದರಿದಂಗಜನ ಕರ | ತಂದಳಾ ಚತುರಿಕೆಯು ಕೈ ಮುಗಿ |
ದೊಂದು ಕಡೆಯಲಿ ನಿಲ್ಲಿದೇನೈ ನಿನ್ನ ನೆರೆ ಸಲಹಿ ||
ಸಂದ ವಿದ್ಯೆಯ ಕೊಟ್ಟೆ ನೀನೇ | ನೆಂದುದನು ಗೈಯದೆ ತೊಲಗಿನಿಂ |
ದಂದವೇನೆಂದಳಸಿ ನುಡಿದಳು ವಿರಹವಿಹ್ವಲೆಯು || ೧೭ ||

ಸಲಹಿದದರಿಂ ಜನನಿ ವಿದ್ಯೆಯ | ಕಲಿಸಿದದರಿಂ ನೀವೇ ಗುರುವಿ |
ನ್ನೆಲೆಜನನಿ ಬಿಡು ಕೆಟ್ಟ ಪಂಬಲನೆಂಬ ನುಡಿಗೇಳಿ ||
ಪ್ರಳಯ ಭೈರವನಂತೆ ಕೋಪವ | ತಳೆದು ಘರ್ಜಿಸಿ ಹಾರಿ ಹೋಗೆಂ |
ದುಲಿಯೆ ಜೀಯೆಂದಂಗಜನು ಪೊರವಟ್ಟನಲ್ಲಿಂದ || ೧೮ ||

ಬಳಿಕವಳ ಕಾಮಾಗ್ನಿ ಕೋಪಾ | ನಳನಕೊರ್ವಿಸಿ ಪೊಗೆಮನದೊಳು |
ತಳೆದ ಜಾರತ್ವವನು ವಿವರಿಸಿ ಬರೆವವೊಲು ತನ್ನ ||
ಬಳೆಯ ಮುರಿಯಿಂ ತೋಳೊಳಗೆ ನೆಲೆ | ಮೊಲೆಗಳಲಿ ಕೊರಳಲಿ ಬರೆದು ಬಾ |
ಸುಳುವಡೆದು ಮುಸುಕಿಟ್ಟು ಮಲಗಿದಳರಸ ಕೇಳೆಂದ || ೧೯ ||

ಬಂದನಾ ಸಮಯದಲಿ ನಿಜಪತಿ | ಯಿಂದಿದೇನೆಲೆ ದುಗುಡವೇತರ |
ದಿಂದಲಾದುದು ಪೇಳೆನುತ ಮಂಚದಲಿ ಕುಳ್ಳಿರ್ದು ||
ಕಂಡಿತಾನನ ಚಂದ್ರನೆಂದೊಲ | ವಿಂದೆ ಕಣ್ಬನಿದೊಡೆದು ಮುದ್ದಿಸಿ |
ಯೆಂದೊಡೆಂದಳು ಪಾತಕಿಯು ಕೈತವವ ಗಂಟಿಕ್ಕಿ || ೨೦ ||

ಸುರಿವ ಕಣ್ಬನಿ ಗದ ಗದ್ಗದ ಸ್ವನ | ವೆರಸಿ ಭಸ್ಸೆನೆ ಸುಯಿದು ಚಿತ್ತೈ |
ಸರಸ ಕಾಡೊಳಗಾರ ಮಗನೆಂದರಿಯದೆಳೆ ಶಿಶುವ ||
ಪೊರೆಯವೇಳ್ದೆನಗಿತ್ತೆ ನೀನಾ | ತರುವರಿಯು ಕಡುಕೊಬ್ಬಿ ಜವ್ವನ |
ಭರದಿ ತನ್ನನೆ ಹಿಡಿದನೆಂದಳು ತೋರಿದಳು ಮೈಯ || ೨೧ ||

ಕರೆದಳಾ ಕೆಳದಿಯನು ಪೇಳೆನ | ಲರಸಗವಳಂಗಜನ ದೋಷವ |
ನೊರೆದಳಾಗಳೆ ರೋಷ ಶಿಖಿ ಪರ್ವಿದುದು ಖಚರನೊಳು ||
ಸ್ಮರನ ನಿನ್ನೋವುವೆನೆ ತುಂಟನ | ಕೊರಳ ಕೊಯಿಸುವೆನೆಂದು ಮುನಿದು |
ಬ್ಬರಿಸಿದನು ಪೆಂಡತಿಯ ಮಾತನು ಕೇಳದವರಾರು || ೨೨ ||

ಕರೆದನಾ ಸುತ ವಜ್ರದಾಡನ | ನಿರದೆ ಕಾಮನನಿಕ್ಕವೇಳ್ದನು |
ಮರಳಿ ಬಂದವನನುಜರೊಡನಾಳೊಚನೆಯ ಕೊಂಡು ||
ಸ್ಮರನ ನಿಕ್ಕುವ ಸಾಹಸಿಗರೀ | ಧರೆಯೊಳಿಲ್ಲೊಡಗೊಂಡು ಮುನ್ನಿನ |
ತೆರದಿ ಪೋಪೆವೆನುತ್ತ ಮದನನನೆಳೆದರೊಂದೆಸೆಗೆ || ೨೩ ||

ಪಳೆಯ ಬಾವಿಯ ಸವೆದು ಕೃತಕದಿ | ನಿಳಿದೊಡಂಗಜ ಸಿದ್ಧಿಯುಂಟೆನ |
ನಿಳಿಯದಿರು ನೀನೆಂದ ಕರ್ಣಪಿಶಾಚಿಯಿಂ ಮದನ ||
ಇಳಿಯಲೊಲ್ಲದೆ ವಿದ್ಯೆಯಂ ತಾ | ನಿಳಿದವೊಲು ರೂಪೊಂದ ನಿಳಿಯಿಸಿ |
ಘಳಿಲನಿರ್ದನದೃಶ್ಯದಿಂದಾಕಾಶ ಮಾರ್ಗದಲಿ || ೨೪ ||

ಇಳಿದನೆಂದೈನೂರ್ವರುಂ ಮಿಗೆ | ನಲಿದು ಪರ್ವತದೊರೆಯೆನಿಪ ಕಲು |
ಗಳಲಿ ಹೂಳಿದರದನು ಕಾಣುತ ಕಾಮನನುಮುನಿದು ||
ಕೊಲಲುಬಾರದ ಹಗೆಗಳಲೆ ಯೀ | ಖಳರೆನುತ ಫಣಿಪಾಶದಿಂ ಸಲೆ |
ಬಲಿದು ಕಟ್ಟಿದರೆಲ್ಲರನು ಸಿಡಿದೊಬ್ಬನೋಡಿದನು || ೨೫ ||

ಮೊರೆಯಿಡುತ ಬರಲಾತನಿಂದದ | ನರಿತು ಖೇಚರನೆತ್ತಿ ಬರೆಕೊರೆ |
ತರಿಕೆಡಹು ಕುತ್ತೆನುತ ಮದನನ ಕೃತಕ ಪರಿವಾರ ||
ತರುಬಿನಿಂದೊಡಹಾಯ್ಸಿ ಮಿಗೆ ಹೊ | ಕ್ಕಿರಿದು ಪಡಲಿಡಿಸುತ್ತ ಪಲವುಂ |
ತೆರದಿ ಕಾದುತ್ತಿರ್ದರಿತ್ತಲು ಭೂಪ ಕೇಳೆಂದ || ೨೬ ||

ಕುರುಪತಿಯ ಸುತೆಯುದಧಿಯನು ನಗ | ಧರನು ಭಾವೆಯ ಸೂನು ಭಾನುವಿ |
ನಿರೆ ಮದುವೆಯನು ಮಾಳ್ಪುದತ್ಯಾಸನ್ನವಾಗಿರಲು ||
ಸಿರಿಯದೇಕಿನ್ನೆನಗೇ ಸವತಿಗೆ | ಕುರುಳ ಕೊಡುವಂತಾದುದೆಂದೆದೆ |
ಗರಗಿ ರುಗುಮಿಣಿದೇವಿ ಚಿಂತಿಸುವಾ ಸಮಯದೊಳಗೆ || ೨೭ ||

ನಾರದನು ಬರಲೆರಗಿ ಕಂದನು | ಬಾರನೇಕೆಲೆ ಮುನಿಪನುಡಿದಶ |
ರೀರ ವಾಕ್ಯದ ಗುತ್ತು ಬಂದಿದೆಯೆಂದು ನೊಂದುಸುರೆ ||
ವಾರಿಜಾನನೆ ಚಿಂತೆಯುಳಿ ನರ | ಧಾರಿಣಿಯಲೆಲ್ಲಿ ರ್ದೊಡಂ ಸುಕು |
ಮಾರನನು ಮಾರನನು ತಹೆನೆಂದೆದ್ದನಾಗಸಕೆ || ೨೮ ||

ಭರದಿ ಪೂರ್ವವಿದೇಹದೊಳು ನೆರೆ | ಸಿರಿಯ ಪುರವದು ಪುಂಡರೀಕೆಯು |
ಯುರುಹ ಸೀಮಂದರ ತೀರ್ಥೇಶರ ಸಮವಶೃತಿಯ ||
ಇತಿ ಮನೋವೇಗದಲಿ ಪೊಕ್ಕನು | ಪುರನು ವಂದಿಸಲಲ್ಲಿ ಚಕ್ರೇ |
ಶ್ವರನು ದಶದನಮಾನ ಮುನಿಯಾರೆಂದ ಗಣಧರರ || ೨೯ ||

ಬೆಸಗೊಳಲು ಕೇಳರಸ ಭಾರತ | ವಿಷಯದಾ ನಾರದನು ದ್ವಾರಕಿ |
ಯಸುರರಿಪುವಿನ ಶಿಶುವಿಹುದನರಯಲ್ಕೆ ಬಂದನೆನೆ ||
ಶಿಸುವದೆಲ್ಲಿಹದೇನದೆಲ್ಲವ | ನುಸುರಿಮೆನೆ ಮಗದೋರ್ವಿಯಲಿ ಶೋ |
ಭಿಸುವ ಸಾಲಿಗ್ರಾಮದಲ್ಲಿಹನಗ್ಗಿಲೆಯ ಗಂಡ || ೩೦ ||

ಭೂಸುರನು ತಾಂ ಸೋಮಶರ್ಮಂ | ಗಾ ಸುತರು ಪೆಸರಗ್ನಿಭೂತಿಯು |
ಮಾಸರಿಕೆಯಾ ವಾಯುಭೂತಿಯ ಸತ್ಯವಾದವನು ||
ಬೀಸೆ ಜಿನಮುನಿ ನಂದಿವರ್ಧನ | ರೋಸರಿಸದದ ಪರಿಗಟಿಯೆ ಧೃತ |
ರೋಷಿಗಳು ತನ್ಮುನಿಯ ಕೊಲಲಿರುಳೈದಿದರು ಬನಕೆ || ೩೧ ||

ಖಡುಗವನು ಪಿಡೆದೆತ್ತಿ ಮುನಿಪನ | ಹೊಡೆವನಿತರೊಳು ಹೇಮಯಕ್ಷನು |
ಬಡದೆ ಕೀಲಿಸಿ ಸೋಮಶರ್ಮಗ್ಗಿಲೆಯರೈತಂದು ||
ಅಡಿಗೆರಗಿ ಎಲೆಮುನಿಪ ದಯೆಯಿಂ | ಬಿಡಿಸು ಮಕ್ಕಳ ಕೀಲಣೆಯ ನೆನ |
ಲಡವಿಯೊಳಗಿಹ ಹೇಮಯಕ್ಷನು ನುಡಿದನಿಂಕೆಂದು || ೩೨ ||

ಬಿಡುವೆನಿವರನು ಜೈನಧರ್ಮವ | ಪಿಡಿದೊಡನೆ ಮೇಣಲ್ಲದಿರ್ದೊಡೆ |
ಬಿಡೆನೆನಲು ಸುವ್ರತವನವರಾ ಮುನಿಗಳಿಂ ತಳೆದು |
ದೃಢದಿ ನಡಪುತ್ತಿರಲವರನಾ | ಹಡೆದ ತಾಯ್ತಂದೆಗಳು ಬಂದೆಲೆ |
ಜಡ ಮತಿಗಳಿರ ಯಕ್ಷನಾಜ್ಞೆಗೆ ನಾನುಪಾಯದಲಿ || ೩೩ ||

ಕೊಡಿಸಿದೆನು ಈ ಮತವ ಕೀಲಣೆ | ಬಿಡಿಸಿದೆನು ನೀವಿನ್ನಿದನು ಬಿಡಿ |
ನಡೆಯಿನಮ್ಮವೊನೆನಲು ಶಿಖಿಪವಮಾನಭೂತಿಗಳು ||
ಬಿಡುವೆವಿದರಿಂದಧಿಕಮತವು | ಳ್ಳೊಡೆ ಪಿಡಿವೆವದ ಬಡವ ಪುಣ್ಯದಿ |
ಕಡವರಂ ಬಡೆದಂತೆ ಪಡೆದೆವು ಶ್ರೀಜಿನಾಗಮವು || ೩೪ ||

ಎಂದವರು ಸದ್ಧರ್ಮವನೆ ಪಿಡಿ | ದೊಂದಿ ನಡೆವುತ್ತಿರಲಮಳಿನ |
ರ್ವಂದದಿಂ ಸದ್ಧರ್ಮವೈರದಿ ಮಡಿದು ನರಕದಲಿ ||
ಪೊಂದಿದರು ತದ್ವಿಪ್ರ ತನುಜರು | ಸಂದ ಸೌಧರ್ಮದಲಿ ಸುರಲೋಲ |
ವಿಂದಲುಂಡರು ಪಂಚಪಲ್ಯೋಪಮ ತದಾಯುವನು || ೩೫ ||

ಆ ಸುರರೇ ಸಾಕೇತ ಪುರುಜಿನ | ದಾಸಗಾಶ್ರೀ ಪ್ರಿಯೆಗೆ ಪು‌ಟ್ಟಿದ |
ರೇಸುಪುಣ್ಯವೂ ಪೂರ್ಣಭದ್ರನ ಮಾಣಿಭದ್ರನೆನೆ ||
ಲೇಸುವಡಿದಮಳುಗಳಿರಲು ಜಿನ | ದಾಸಮಾಹೇಂದ್ರಾರ್ಯರಿಂ ಬಗೆ |
ಯೋಸರಿಸದಾಶಾಂಬರತ್ವವನಾಂತು ಸುಖಿಯಾದ || ೩೬ ||

ಕರವ ಮುಗಿದಾ ಪೂರ್ಣಭದ್ರನು | ಗುರುವೆ ತನ್ನಾಭವದ ತಂದೆಯ |
ಇರವ ಬೆಸಸೆನೆ ಅಗ್ನಿಭೂತಿಯು ವಾಯುಭೂತಿಯೆನೆ ||
ಪೊರೆದ ಕಾಲದ ಜೈನ ಧರ್ಮಾ | ಚರಣೆಯನು ಬಿಡಿಯೆನಲುವಿಂ ದಿ |
ಕ್ಕರಿಸಲವರಾ ಧರ್ಮವೈರದಿ ನಿಲಯದೊಳ ಪೊಕ್ಕು || ೩೭ ||

ಪಿರಿದು ದುಃಖಮನೈದು ಪಲ್ಯಂ | ಬರಸವಿದು ಬಂದೀ ಪೊಳಲೊಳ |
ಚ್ಚರಿಯ ನೋಡೈ ಕಾಕಜಂಘಮತಂಗನಾಗಿಹನು ||
ಪರಿಕಿಸುವೊಡಾ ಮನೆಯೊಳಗ್ಗಿಲೆ | ಕರಿಯ ಶುನಿಯಾಗಿಹಳೆನಲು ಮುನಿ |
ಗೆರಗಿ ಮಗುಳ್ದಾ ಪೂರ್ಣಭದ್ರನು ಬೋಧಿಸಿದನವರ || ೩೮ ||

ತಳೆದರವರುಪಶಮವನೊಡಲಿಂ | ಕಳೆದು ಬಂದಾ ಕಾಕ ಜಂಘನ |
ಸುಲಭ ನಂದೀಶ್ವರದ ದೀಪನಹ ಯಕ್ಷನಾದನಲೆ ||
ಅಳಿದು ಶುನಿ ಸಾಕೇತ ನಗರದ | ಚೆಲುವರಿಂ ಮಸುಪ್ರಭಾವತಿ |
ಗೊಲವನಾಂತ ಪ್ರಬುದ್ಧಿಯೆಂಬ ಕುಮಾರಿ ತಾನಾಗಿ || ೩೯ ||

ರತಿಗೆ ಹಾಹೆಯ ಕಟ್ಟುವಳು ತ | ನ್ನತಿಶಯದ ಚೆಲುವಿನಲಿಯೆನಿಸಿದ |
ಸುತೆಯನಾ ವಿಭುತಾಂ ಸ್ವಯಂವರ ವಿಧಿಯಲೀಯಲಿಕೆ ||
ಚತುರನೊಡ್ಡಿರಲಾ ಸ್ವಯಂವರ | ಕತಿದಯೆಯಿನಾ ಕಾಕಜಂಘ ಚ |
ರತೆವಡೆಯದಕ್ಷೇಶ ಬಂದಾಕೆಯನು ಬೋಧಿಸಿದ || ೪೦ ||

ಬೋಧಿಸಲು ಬಳಿಕಾ ಪ್ರಬುದ್ಧಿಗೆ | ಪೋದುದರಿಯಮೆ ವಿರತಿಯಂ ತಳೆ |
ದಾದರದಿ ಪ್ರಿಯದರುಶನೆಯರೆಂಬಾರ್ಯಿಕೆಯರಿಂದ |
ಮೇದಿನೀ ಸ್ತುತತಪದಿ ನಡೆದು ಸ | ಮಾಧಿ ಮರಣದಿ ತಾಂ ಪ್ರಥಮನಾ |
ಕಾಧಿಪನ ಮಣಿ ಚೂಳೆಯೆಂಬಾ ದೇವಿ ತಾನಾಗಿ || ೪೧ ||

ಪಿರಿದು ಸುಖವುಣುತಿರ್ದಳಿತ್ತಲು | ತರದಿ ಪೂರ್ಣನುಮಾಣಿ ಭದ್ರರು |
ಚರಿಸಿದರು ಸಪ್ತಮ ಗುಣಸ್ಥಾನದಲಿಳಿದು ತನುವ ||
ಇರದೆ ಸಾಮಾನಿಕ ಸುರತ್ವದ | ಧರಿಸಿದರು ಸೌಧರ್ಮ ಕಲ್ಪದೊ |
ಳುರು ಸುಖವನೊಂದಾಯುರವಸಾನದಲಿ ಬಂದಿಲ್ಲಿ || ೪೨ ||

ಇತ್ತ ಹಸ್ತಿನಪುರದ ವಿಶ್ವ ನೃ | ಪೋತ್ತಮಂಗಂ ರೂಪವತಿಗಂ |
ಪುತ್ರರಾದರು ಮಧುವು ಕೈಭಟರೆಂಬರಮಳುಗಳು ||
ಪುತ್ರರಿಗೆಯಧಿರಾಜ್ಯ ಯುವರಾ | ಜ್ಯತ್ವವನು ವಿಶ್ವೇಶನಿತ್ತನು |
ಪೆತ್ತನಾ ಶಾಂಬರತೆಯನು ಭೂಪಾಲ ಕೇಳೆಂದ || ೪೩ ||

ಮಧು ನೃಪತಿಯರಸಾಗಿರಲ್ಕಾ | ಮಧುರೆಯರಸಾ ವೀರಸೇನನು |
ಮಧುವೆನಿಪ ಚಂದ್ರಾಭೆಯೆಂಬಳ ಕೈಯುಪಾಯನವ ||
ಮಧುವಿಗಟ್ಟಲು ಬಂದ ವಧುವನೆ | ಮಧು ತನಗೆ ವಧು ಮಾಡಿಕೊಂಡನು |
ವಧುವ ನೆನೆದಾ ವೀರಸೇನನು ತಾಂ ಭ್ರಮಿತನಾದ || ೪೪ ||

ಬಂದನಾ ಹಸ್ತಿನಪುರಕೆ ಮರು | ಳೆಂದವಳ ಕೊಡದಟ್ಟಿದರೆ ಜನ |
ವೊಂದೆ ಕೊರಳಲಿ ಪಳಿಯೆ ಮದನೃಪ ಕೇಳ್ದು ಛೀ ಯೆಂದು ||
ಕಂದಗವನಿಯನಿತ್ತು ಪಾತಕ | ವೆಂದಳುಕಿ ವರವಿಮಲವಾಹನ |
ರೆಂದೆನಿಪ ಕೇವಲಿಗಳಿಂ ಜಿನರೂಪ ಧರಿಸಿದನು || ೪೫ ||

ತಳೆದ ನೊಡನೆಯೆ ಕೈಟಭನು ನಿ | ರ್ಮಲತಪವನುರೆ ನಡೆದು ಕಡೆಯೊಳು |
ಕಳೆದು ತಾವೀರ್ವರು ಮಹ ಶುಕ್ಲದೊಳಗಿಂದ್ರತೆಯ ||
ತಳೆದನಾ ಮಧುಯತಿ ಪ್ರತೀಂ‌ದ್ರತೆ | ತಳೆದನಾ ಕೈಟಭನು ಪದಿನಾ |
ರಳತೆ ಗಡಲಾಯುವನು ಸುಖದಿಂ ಪೀರ್ದು ಬಂದಿ‌ಲ್ಲಿ || ೪೬ ||

ಮಧುಚರನು ತತ್ಯಿಶುವು ಕೈಟಭ | ನುದಯಿಪನು ಹರಿಗೊಂದು ಪಕ್ಷಕೆ |
ಮಧುವನೆನೆದಾ ವೀರಸೇನನು ಮಡಿದು ನರಕದಲಿ ||
ಪುದಿದ ದುಃಖವನುಂಡು ತಿರಿಯಂ | ಚದಲಿ ತಿರಿದೆತ್ತಾನು ಮನುಜತೆ |
ಯೊದಗೆ ತಾಪಸನಾಗಿ ಮಡಿದಾ ಧೂಮಶಿಖಿಯೆಂಬ || ೪೭ ||

ಅಸುರನಾಗಿ ವಿಹಾರಿಸುತ್ತಾ | ಶಿಶುವ ಕಂಡಾಭವದ ವೈರದಿ |
ಮಸಗಿ ಬಂದೈದೇ ದಿನದ ಬಾಲಕನ ಪಿಡಿದೊಯಿದ ||
ಬಿಸುಟನಾ ತಸ್ಕರ ಶಿಲೆಯೊಳಾ | ಶಿಶುವನತ್ತಲು ಮೇಘ ಕೂಟದ |
ಲೆಸೆವ ಖಚರನು ಕಾಳಶಂಬರನೊಯಿದು ಸಲಹಿದನು || ೪೮ ||

ಚರಮ ತನುವಾ ಕುವರ ವಿದ್ಯಾ | ಧರರೊರಗ್ಗಳ ವಿದ್ಯೆಗಲಿತನು
ಸ್ಮರನಗಿತ್ತಾ ವೀರಸೇನನ ಮಡದಿ ಚಂದ್ರಾಭೆ ||
ತಿರಿದು ಬಂದಾ ಕಾಳಶಂಬರ | ಗರಸಿ ಕಾಂಚನ ಮಾಲೆಯಾಗಿಯೆ |
ಸ್ಮರನ ಸಾಕಿದಳೀಗಳಾತಗೆ ಸೋಲ್ತು ಮತ್ತಾಕೆ || ೪೯ ||

ಮದನನಿಂದಾ ಸುರತ ಸುಖತನ | ಗೊದವದಿರೆ ತನ್ನಂಗವನು ತಂ |
ದೆದೆಯವಳು ನೆರೆಸೀಳಿ ಕೊಂಡಂಗಜನ ದೋಷವನು ||
ಅದಯೆ ಪಿಸುಣಂ ಬೇಳ್ದೊಡಳಗರಿ | ಯದೆ ಮದನನೊಳು ಕಾಳಶಂಬರ |
ನಧಟಿನಿಂ ಕಾದುತ್ತಹನೆ ಭೂಪಾಲ ಕೇಳೆಂದ || ೫೦ ||

ಮುಗುಳುಗಣಿಯನು ಕಾಳಶಂಬರ | ಖಗನುಮಿರಿದಾಡುವ ತೆರನ ನೆ |
ಟ್ಟನಗೆ ತಿಳಿದುತತ್ಸ್ವಾಮಿಗಳ ಬೀಳ್ಕೊಂಡು ಶೀಘ್ರದಲಿ ||
ಗಗನಮಾರ್ಗದಿ ನಾರದನು ಬರ | ಲೊಗೆದವರ ಯುದ್ಧವದು ನಿಜದೃ |
ಷ್ಟಿಗೆ ಸೊಗಸುಗೊಡೆ ನೋಡುತಿರ್ದನು ಮುಗಿಲುವಟ್ಟೆಯಲಿ || ೫೧೧ ||

ಮೀನಕೇತನ ಕೃತಕ ಬಲವದ | ನೇನ ಹೇಳುವೆ ಕಾಳಶಂಬರ |
ನಾನೆ ಕುದುರೆ ರಥಾಶ್ವವನು ಪಡಿಲಿಡಿಸೆ ತತ್ಖಚರ ||
ಈ ನೆಲನು ತಾಂ ನೆರೆಯನೆಂಬತಿ | ಸೇನೆಯನು ವಿದ್ಯೆಯಲಿ ಪಡೆದಖಿ |
ಳಾನಕಧ್ವನಿ ಬೆಳೆಯೆ ಮುಸುಕಿದಂಗಜನ ಪಡೆಯ || ೫೨ ||

ಒಂದೆ ಹೂಗಣೆಯಿಂದ ತ್ರಿಜಗದ | ಸಂದ ವೀರರ ತನುಸಲೆಗೆ ವಂ |
ದಂದದಲಿ ಕಂದರ್ಪನೊ ಪಡೆ ತರಿದು ಕೆಡೆಪೆ ||
ನಿಂದದು ಕೋಪದಿ ನೋಡಿ ಬೌಪಕೆ | ತಂ ಕಣೆಯನು ಕಾಳಶಂಬರ |
ನಂದು ಕಲ್ಪದ ಮಳೆಯನಲು ಕೂರಂಬುಗಳ ಸುರಿದ || ೫೩ ||

ಕುಸುಮರನೊಂದಂಬಿನಿಂ ಖಂ | ಡಿಸಿನನಿತನು ಖಚರಪತಿ ತೊ |
ಟ್ಟಿಸಲು ಫಣಿಬಾಣವನು ಗರುಡಾಶ್ತ್ರದಲಿ ನಿಸಿಗೋಲ ||
ಬಿಸಿಲ ಶರಧಿಗಜೇಶುವನು ಪರಿ | ವಿಸಿದಿಂದೆಂಟಡಿಗಣೆಯ ತುಂ |
ಡಿಸಿದನಾ ಭೇರುಂಡ ಕಾಂಡದಿಸ ಸುರರು ಬೆರಗಾಗೆ || ೫೪ || ಸ

ಕಾಳಗವನೀಕ್ಷಿಸುವ ಕಾಂಚನ | ಮಾಲೆಯನು ಕಂಡಾಗಳೇಳ್ಗೆಯ |
ಕಾಳಶಂಬರನೆಲೆಗನೀಂ ಪ್ರಜ್ಞಪ್ತಿ ವಿದ್ಯೆಯನು ||
ಮೇಳಯಿಸು ಬಹುವಿದ್ಯೆಯಿಂ ಪೂ | ಗೋಲನನು ಗೆಲತೀರದಿದೆಯೆನೆ |
ಡಾಳೆಮಗ ನೆಂದಿತ್ತೆನಲೆ ಮುನ್ನೆಂದಳವಳೊಡನೆ || ೫೫ ||

ಮುಳಿದು ಕೊಲುವೆನು ಮುನ್ನೆ ಕಾಮನ | ಬಳಿಕ ನಿನ್ನನು ಹರಗಡಿವೆನೆಂ |
ದಳಲಿ ಖಂಡೆಯ ಖೇಡೆಯವನಾಂತಿಳೆಗೆ ಧುಮ್ಮಿಕ್ಕಿ ||
ತಳೆದು ಖಂಡೆಯ ಖೇಡೆಯವನಾ | ಗಳೆ ವಸಂತ ಪ್ರಿಯ ತುಡುಕಿ ಕೈ |
ಚಳಕದಲಿ ಕಡಿದಾಡುವನಿತರೊಳರಸ ಕೇಳೆಂದ || ೫೬ ||

ನಿಂದನೀರ್ವರ ಮಧ್ಯದಲಿ ನಭ | ದಿಂದೆ ನಾರದ ಬಂದು ತೊಲಗಿಸಿ |
ತಂದೆ ಮಕ್ಕಳಿಗೇಕೆ ಜಗಳವು ಹುಚ್ಚುರಲೆ ನೀವು ||
ಎಂದೊಡಂಗಜ ಮುನಿಗೆರಗಿ ನಾಂ | ತಂದೆಗೆರಡನು ಬಗೆದುದಿಲ್ಲದ |
ರಿಂದ ಬಂದುದು ನರರ ದಂಡಣೆಗಂಜಿದನು ಮುನಿಪ || ೫೭ ||

ಎನಲು ಕೇಳೆಲೆ ಕಾಳಶಂಬರ | ವನಿತೆಯರ ನುಡಿ ಸತ್ಯವೇ ಸ್ಮರ |
ನನಘ [ನಕಳಂಕನೀತ ತಪ್ಪೆಸಗಿದುದುಂಟೇನು] ||
ಕನಕ ಮಾಲೆಯ ನಮ್ಮೊಡನೆ ಹುಸಿ | ನಿನಗೆ ಬೇಡಿನ್ನುಳ್ಳದನೆ ಪೇ |
ಳೆನೆ ಕುಲಟೆ ತಲೆಗುತ್ತಿ ನೆಲನನು ಬರೆದಳುಂಗುಟದಿ || ೫೮ ||

ಪುಸಿಯಲೇಂ ಪ್ರದ್ಯುಮ್ನ ಪಾಪದ | ದೆಸೆಗೆ ಬಂದವನಲ್ಲ ಕರ್ಮದ |
ಗಸಣಿಯಿಂ ಪಾತಕವನೆಣಿಸಿದೆನರಸ ನೀನೆನಗೆ ||
ಬೆಸಸು ಕತ್ತಿಯನಲ್ಲದೊಡೆ ನಾಂ | ಬಸದಿಯನು ಪೊಗದಿರೆನೆನಲು ನ |
ನ್ನಸಿಗೆ ನೀನಡಹಲ್ಲ ಬಲ್ಲುದ ಮಾಡು ಹೋಗೆಂದ || ೫೯ ||

ವಿರತೆಯಾದಳದತ್ತ ಖಗಪತಿ | ಹರಿಗೆ ಬಾಳನು ಬಿಸುಟನಕಟೌ |
ಸ್ಮರನೊಳಾನನ್ಯಾಯದಿಂ ಪ್ರಾಣಕ್ಕೆ ಮುನಿದೆನೆನೆ ||
ದುರಳ ನಾನರಿದೊಂದು ವಿದ್ಯೆಯ | ನರುಪುವುದರಿಂ ನಿಮ್ಮೊಡನೆ ಸಂ |
ಗರವ ಮಾಡಿದೆ ಕರುಣಿಸೆಂದಡಿಗೆರಗಿದನು ಪದಕೆ || ೬೦ ||

ತೆಗೆದು ತಕ್ಕೈಸಿದನು ಮದನನ | ಖಗಪತಿಯು ಸ್ಮರನಗ್ರ ಜಾತರ |
ಬಿಗಿದ ಫಣಿಪಾಶವ ಬಿಡಿಸಿ ಸಂತೈಸಿ ತಾವೆಲ್ಲ ||
ಅಗಲದರಮೆನೆ ವೊಕ್ಕು ಕೃಷ್ಣನ | ನಗರ ಸಿರಿಯಧಟರಸಿಯರ ಪೆ |
ರ್ಮೆಗಳನಿಂದಿನ ದಿನ ಮದುವೆಯಿಂತೆಂದನಾ ಮುನಿಪ || ೬೧ ||

ತಿಳಿಯೆ ಬಿತ್ತರಿಸಿದನು ಕಾಮನ | ಕಳುಹು ಬೇಗದಿನೆನಲು ಖಗನು |
ಮ್ಮಳಿಸುತಿರೆ ನಿಜ ತನುಜನಭಿಮಾನವು ತೊಲಗದಂತೆ ||
ಕಳುಹೆನಲು ಕಳುಹಿದನು ಜನನಿಗೆ | ತೊಳಪ ಹರಿಚಂದನದ ರತ್ನದ |
ಚೆಲುವ ಜಿನಬಿಂಬಂಗಳನು ಕೊಂಡತನು ಪೊರಮಟ್ಟ || ೬೨ ||

|| ಅಂತು ಸಂಧಿ ೨೯ಕ್ಕಂ ಮಂಗಲ ಮಹಾ ||