ಸಂಧಿ ೩೧

ಶಂಭು ಕುವರನುವೆರಸಿ ಭೂನುತ | ಶಂಭರಾರಿ ಮತಂಗ ವೇಷದಿ |
ನಂಬಿಸಿಯೆ ಕರೆತಂದನಾ ರುಗ್ಮಣನನಂದನೆಯ || ಪಲ್ಲ ||

ಕೇಳು ಮಗಧಾಧೀಶ ನಾರದ | ಪೇಳಿದದರಿಂದಾ ಪ್ರತೀಂದ್ರನೆ |
ಬಾಳಪಾಳಾರಿಯ ಬಸುರಬಹನೊಂದು ಪಕ್ಷಕ್ಕೆ ||
ಜಾಳು ಮಾತಲ್ಲೆಂದರಿತು ವನ | ಮಾಲಿಯಿಂದಾ ಸತ್ಯ ಎಂದಿನ |
ಸೂಳು ತನಗೆಂದಿಯಿಸಿ ಕೊಂಡುದನರಿದನಾ ಮದನ || ೧ ||

ಜನನಿ ಕೇಳ್ ಪಿರಿಯಮ್ಮ ನೆಮ್ಮ | ಯ್ಯನಲಿ ಪಡೆದಂದಿನ ದಿನದ ಸೂ
ಳನು ನಿಮಗೆ ದೊರಕೊಳಿಸುವೆನು ಜನಿಯಿಸುವ ತದ್ದೇವ ||
ನನಗೆ ಪಲ ಜನ್ಮದ ಸಹೋದರ | ನೆನೆ ನಗುತ ರುಗ್ಮಿಣಿಯ ನನ್ನಯ |
ಮನವೆನಿಪ ಜಂಭಾವತಿಗೆ ದೊರೆಕೊಳಿಸು ನಂದನನೆ || ೨ ||

ಎನೆ ಹಸಾದೆಂದಿರುತಿಹಂದಿನ | ದಿನದೊಳಾ ಜಾಂಭಾವತಿಗೆ ಕೊ
ಟ್ಟನು ಮನೋಭವ ಕಾಮಮುದ್ರಿಕೆಯನು ಪಡೆದು ತರುಣಿ ||
ವನಜನಾಭನ ಸೂಳ್ಗೆ ಸತ್ಯೆಯ | ವಿನುತ ರೂಪಿಂ ಪೋಗಿ ನಿಗೆ ತ |
ಣ್ಣನೆ ತಣಿಯೆ ಸುಸಿಲುಂಡು ಮುದ್ರಿಕೆದೆಗೆಯೆ ಹರಿಕಂಡ || ೩ ||

ತರುಣಿ ನೀನೀ ಕೃತಕದಿಂ ಬಂ | ದಿರವಿದೇನೆನೆ ತತ್ಪ್ರಪಂಚಮ |
ನರುಪೆ ಮದನನ ಮಾಯೆಗಚ್ಚುತಮೆಚ್ಚಿನಗುತಿರಲು ||
ಎರೆದ ಸೂಳ್ಗಾ ಸತ್ಯಭಾಮೆಯು | ಬರುತ ಕೆಳದಿಯರಿಂದದರ ತೆರ |
ನರಿದು ಪುತ್ರಾಲಾಭಖೇದವನಾಂತು ತಿರುಗಿದಳು || ೪ ||

ಮರುದಿನದೊಳಾ ಭಾವೆ ಬಂದೇ | ನೆರೆಯ ನಿನ್ನೊಳ ಭಾಸಿಕೆಯು ತಾಂ |
ಕರುವ ಕಾವಂದಿಂದಿನಿಂದುದೆನುತ್ತ ಜರೆದುಸುರೆ ||
ಸೆರಗ ಹಿಡೆದೆಳದಪ್ಪಿ ಮುದ್ದಿಸಿ | ಕುರುಪ ಪಲ್ಲಟಗೈದ ಮದನನ |
ತೆರಪನೆಲ್ಲವ ಪೇಳುತಿಳುಪಿದನತಿ ವಿನಯದಿಂದಾ || ೫ ||

ಬಳಿಕ ಜಾಂಭಾವತಿಯ ಗ ರ್ಭವ | ತಳೆದು ನವಮಾಸಾಂತ್ಯದಲಿ ಪೆ |
ತ್ತಳು ಕುಮಾರನ ಜಾತಕರ್ಮೋತ್ಸವವನಚ್ಚುತನು ||
ಇಳೆಪೊಗಳೆ ಮಾಡಿದನು ಪೆಸರನು | ತಳೆದ ಶಂಭುಕುಮಾರ ಮಿರುಗುತೆ |
ಬಳೆದನಾ ಕ್ರಮದಿಂದ ಕಳೆಗಳು ತನ್ನೊಡನೆ ಬೆಳೆಯೆ || ೬ ||

ಸ್ಮರನು ಪೂರ್ವಭವ ಪ್ರಣಯದಿಂ | ಪಿರಿದು ವಿದ್ಯೆಯನನುಜಗಿತ್ತೀ |
ರ್ವರುಮೊಡನೆ ಸುಖದಿಂದಿರುತ್ತಿರಲೊಂದು ದಿವಸದಲಿ ||
ಹರಿಯ ದೆಸೆಯಿಂದೆನ್ನ ಕತದಿಂ | ಪಿರಿದು ನೋವಾಯ್ತಣ್ಣಗೆಂದಾ |
ದರದಿ ಪಾಗುಡಗೊಟ್ಟು ರುಗುಮಿಣಿ ಕಳುಹೆ ಮಂತ್ರಿಗಳು || ೭ ||

ಬಂದುರುಗುಮಣ ಭೂಪನೋಲಗ | ಮಂದಿರದಲಿರಲೆರಗೆ ಮಂತ್ರಿಗ |
ಳೊಂದಿ ಕಾಣಿಕೆಯಿಕ್ಕಿ ಪಾಗುಡಗೊಟ್ಟು ಬಿನ್ನಹವು ||
ಇಂದು ಮುಖಿ ದರ್ಪಕನ ಜನನಿ ನ | ಗೇಂದ್ರಧರನರ್ಧಾಂಗಿ ರುಗುಮಿಣಿ |
ಸಂದು ಬಂದು ಪ್ರೀತಿಯಿಂದಿಂತಟ್ಟಿದಳು ನಮ್ಮ || ೮ ||

ಮಾರನ ಪ್ರತಿ ವೀರಗತಿ ಭವ | ನಾರಗೀವುದುದೇವ ನಿಮ್ಮ ಕು |
ಮಾರಿಯನು ಸುಖಕಾರಿಯನು ಚೆಲುವಿನ ವಿದರ್ಭೆಯನು ||
ಚಾರುಗುಣಿ ರುಗುಮಿಣಿ ಮಹಾಸತಿ | ಭೋರನಿಂತೆಂದಟ್ಟೆ ಬಂದೆವು |
ಧಾರಿಣೀಶ್ವರ ಚಿತ್ತವಿಸಿ ಕೇಳೆನಲು ನಸುನಕ್ಕ || ೯ ||

ತಂದೆಯನು ಕೊಂದವಗೆ ಮೋಹಿಸಿ | ಹಿಂದೆ ಹತ್ತಿದಳೆಂದು ಹೆಣ್ಣ ಕೊ |
ಡೆಂದು ನಮ್ಮಯ ತಂಗಿಯಿಂದಟ್ಟುವುದುಚಿತವಹುದು ||
ಎಂದು ಮೊಗದೆಗೆಯಲ್ಕವರು ನೃಪ | ಹಿಂದಣಳಲನು ನೆನೆಯದೆನ್ನವ |
ರಂದು ನಡೆಕಾಮಂಗೆ ಕೊಡದಾರ್ಗಿತ್ತಪಿರಿ ಸುತೆಯ || ೧೦ ||

ಕೊಡಲೆ ಬೇಹುದು ಕಾಮಗಾಕೆಯ | ಕೊಡದೊಡಾತನು ಬಿಡನದೆಂತೆನೆ |
ಪೊಡವಿಯಲಿ ಸೋದರದ ಮಾವನ ಮಗಳ ಬಿಡಲದರಿಂ ||
ಕೊಡುವುದೇ ಕರಣೀಯಮೆನೆ ತಾಂ | ಕಡು ಮುಳಿದು ನಿವಗೀವ ದೆಸೆಯಿಂ |
ಕೊಡುವೆ ಮಾದಿಗಗೆಂದು ಕೋಪದಲವರ ಕಳುಹಿದನು || ೧೧ ||

ಮುಗುಳುಗಣೆಯನ ಶಂಭು ಕುವರನು | ರುಗುಮಿಣಿಯ ಸಾರಿರಲು ಕೊಂಡಿಮ |
ನಗರದಿಂ ಮಂತ್ರಿಗಳು ಬಂದೆಂದಂತೆ ಬಿನ್ನೈಸೆ ||
ನಗೆಮೊಗವು ಬಾಡಿದವು ಮನದೊಳು | ದುಗುಡ ಮೇಳಿಸೆ ಭೀಷ್ಮಜಗೆ ಮೆ |
ಲ್ಲಗೆ ತದೀಯಾತ್ಮಜರು ಪೊರವಟ್ಟರು ನೆವವನಿಟ್ಟು || ೧೨ ||

ಭರದಿ ಕಾಮ ವಿಮಾನವೇರಿದ | ರತಿಗಳಿಗೆಯೊಳಪೋಗಿ ಕೊಂಡಿಮ |
ಪುರದ ಬಹಿರುದ್ಯಾನ ದೇಶದೊಳಾ ವಿಮಾನವನು ||
ಇರಿಸಿ ಧರೆಗವತರಿಸಿ ಕೈಯಲಿ | ಧರಿಸಿದಾ ಸಂಬೋಳಿ ಗೋಲ್ಪೆಗ |
ಳುರು ತೊಗಲ ಮಿಳಿವರೆಯೆ ಮಾದಿಗವರಿಜನಪ್ಪಿದನು || ೧೩ ||

ಪುರದ ಪೆರ್ವೀದಿಯಲಿ ಬರಲೀ | ರ್ವರ ಚೆಲುವಕಂಡವರು ಮೋಹಿಸ |
ಲರಮನೆಗೆ ಬಂದವರು ರುಗುಮಿಣಿಗೆರಗಿ ದೂರದಲಿ ||
ಅರಸನೀಕ್ಷಿಸಿ ಚೆಲುವರೆಂದಾ | ದರದಿ ನೀವಾರೆತ್ತಣಿಂ ಬಂ |
ದಿರಿಯೆನಲು ಕೈ ಮುಗಿದು ಬಿನ್ನಹವೆಂದರವರಿರದೆ || ೧೪ ||

ದ್ವಾರವತಿಪುರವದರರಸು ದೈ | ತ್ಯಾರಿಯಾತನ ಮನ್ನಣೆಯಲಾ |
ಊರ ಹೊರಗಿಹ ಮಾದೆಗರು ತಾವೆಲೆಯೆರೆಯ ನಿಜಸುತೆಯ |
ಮಾರಗೀಯೆನು ಮಾದಿಗಗೆ ಮನ | ವಾರೆ ಕೊಟ್ಟಪೆವೆಂದಿರಿ ಗಡಾ |
ಕಾರಣದಿ ಬಂದೆಮ್ಮಗೋರ್ವಗೆ ಕೊಡಿ ಮಹೀಕಾಂತ || ೧೫ ||

ಎನಲು ಮುನಿಯದೆ ನಸುನಗುತ ಎಲೆ | ದೊನೆದು ನೀವೆಂದಂತೆ ಕೂರದ |
ವನಮಗಗೆ ಕೊಡುವಂತರಿಂ ನಿಮಗೀವುದೊಳ್ಳಿತಲೆ ||
ಎನುತ ನಿಮ್ಮಿಂ ತೇಜವೀ ಕುಲ | ಜನಿತರಿಗೆ ದೊರಕುವುದೆ ಮೊದಲ |
ರ್ಜುನ ತರುವುತುದಿ ಚೂತವುಂಟೇ ಎಂದನವನೀಶ || ೧೬ ||

ಅರಸನಾದ್ವಾರಕಿಯ ಸಿರಿ ಗೋ | ಪುರದ ಬಾಗಿಲಕಾಪುಗೊಟ್ಟಿಹ |
ನಿರುತಿಹೆವು ನಾವಲ್ಲಿ ಚರಿಯಿಪ ನರರ ವಾಸನೆಗೆ ||
ನೆರೆದುದೆಮಗೀ ತೇಜ ಚಂದನ | ತರುವ ಪೊರ್ದಿದ ಕಾವರಂಗಳು |
ಪರಿಮಳಿಸವೇ ಕೊಡದೊಡಿರಿ ನಾಂಪೋಪೆವೆಂದರಿದೆ || ೧೭ ||

ಅರಮನೆಯ ಪೊರಮಟ್ಟು ತದ್ಭೂ | ವರನ ತನುಜೆಯು ಕನ್ನೆಮಾಡದೊ |
ಳಿರುತಿಹುದುನರಿದದನೆ ನೋಳ್ಪುದುಮಾಕೆ ನಡೆನೋಡೆ ||
ಸ್ಮರಮತಂಗಗೆ ಸೋಲ್ತುಳಾಗಳೆ | ಕರೆದು ಪ್ರಜ್ಞಪ್ತಿಯನು ಬೆಸಸಲು |
ನೆರೆದಲೆಯ ಮಾದಿಗಿಯಾಗಿಯೆ ಪೋದಳರಮನೆಗೆ || ೧೮ ||

ಮರಕತನ ಪುಡುಕೆಯಲನರ್ಘ್ಯದ | ಸಿರಿರತುನಗಳ ತೀವಿ ದೂರಾಂ |
ತರದೊಳರಸನ ಮುಂದಿರಿಸಿ ಕೈಮುಗಿದು ಮುಂಬಂದ ||
ತರುಣರೀರ್ವರು ನನ್ನ ಮಕ್ಕಳು | ನರಪತಿಯೆ ಈ ರತ್ನವನು ಕೊಳು |
ಕರುಣದಿಂ ಕುವರಿಯನು ಕೊಡುಯವರೊಳಗದೋರ್ವಂಗೆ || ೧೯ ||

ಎನಲು ಬೆಕ್ಕಸಬಟ್ಟು ಹೀನರೊ | ಳಿನಿತನರ್ಘ್ಯದ ರತ್ನವೆತ್ತಾ |
ಮನಸಿಜೋಪಮ ರೂಪರೆಂತೆಂದೆಲ್ಲರರಿವಂತೆ ||
ಜನಪನುಡಿವನಿತರೊಳೆ ರತ್ನವ | ನನುವಿನಿಂ ತೆಗೆದುಕೊಂಡುಮರಳಿದ |
ಳನಿತನಂಗಜಗರಿಪಳೊಳಪೊಕ್ಕನು ಕೊರವಿಯಾಗಿ || ೨೦ ||

ಎತ್ತಿಕೊಂಡಾ ಕೂಸು ತಳೆಯಲಿ | ಪೊತ್ತೊಗೂಡೆ ಮಲಿರ್ನ ವಸನದ |
ಸುತ್ತುಡಿಗೆ ತಲೆಜುಂಜುಸೊಗಯಿಸೆ ಕೊರವಿಯಾಂ ಬಂದೆ ||
ವೃತ್ತ ಕುಚಿಯರು ಕೇಳಿರರಿತನ | ಚಿತ್ತದಲಿ ನೆನೆದಪೆನೆ ಪೇಳ್ವೆನೆ |
ಚಿತ್ತದಲಿ ಬರಲವಳನು ವಿದರ್ಭಾದೇವಿ ಕರೆಸಿದಳು || ೨೧ ||

ಉಂಡಊಟದ ಪೇಳ್ವೆ ಪೆಂಗಳು | ಕಂಡ ಕನಸನು ಪೇಳ್ವೆನೆನಲೊಡ |
ಗೊಂಡು ಬೇರೇಕಾಂತದಲಿ ನಾಂನೆನೆದುದರಪೆನ [ಲು] ||
[ರುಂಡದಿ ಬೇ] ಗವಿಳುಹಿ ಗೂಡೆಯ | ಕಂಡು ದೇವಿಯ ನೆನೆದು ಕೇಳೆಲೆ |
ದುಂಡಿ ನೀಂ ನೆನೆದದುವೆ ಕೈವಶವಪ್ಪುದೆಂತೆನಲು || ೨೨ ||

ಮನಸಿಜೋಪಮ ಮಾದೆಗಗೆ ನೀಂ | ಮನಸ ತಂದಪೆಯೆನಲು ಪುಸಿಯೆನೆ |
ನನಗೆ ಮರೆಯೇ ತಾಯರಿಯದಾ ಮಾಯೆಯಿಲ್ಲರಸಿ ||
ನನಗೆ ಪೇಳ್ದಡೆ ಪ್ರಕಟಿಪೆನೆ ನೀಂ | ನೆನೆದುದಿದದಾವೆನಲು ನಾಚಿಕೆ |
ಜನಿಸಿ ತಲೆವಾಗಿದಳು ಮೆಲ್ಲನೆ ಸುಯಿದು ಲಲಿತಾಂಗಿ || ೨೩ ||

ನನೆಗಣೆಯನರ್ಧಾಂಗಿಯಹ ತ | ಕ್ಕಿನಿಯಳೇ ನೀನೀಗ ನೆನೆದಪೆ |
ನಿನಗವಗೆ ಸಂಘನೆಯೆಂತಹುದೆಂಬ ಯೋಚನೆಯ ||
ನಿನಗದೀಗಳೆಯಹುದು ಚಿಂತೆಯ | ಮನಸಿನಿಂ ತೆಗೆ ನನ್ನ ನುಡಿ ರಾ |
ಮನ ಶರವು ತಪ್ಪುವುದೆಯೆನೆ ಮನ್ನಿಸಿದಳಾಕೆಯನು || ೨೪ ||

ಉಳಿದನಾವೇಷವನು ಮನಸಿಜ | ತಳೆದನಾ ಮಾತಂಗರೂಪನು |
ಲಲನೆಯುಪ್ಪರಿಗೆಯ ಬಳಸಿನೊಳಗವಳ ನೀಕ್ಷಿಸುತ ||
ನಿಲೆಕುವರಿ ಕಟ್ಟೆಳಸೆ ಹೊಸ ಹೊಂ | ಗಲಶ ಮೊಲೆಯೊಳೆ ನಿನ್ನ ನೊಯ್ದಪೆ |
ನೊಲಿದು ಬಾಯೆನಲವಳೊಡಂಬಡಲೆತ್ತಿ ಕೊಂಡೊಯ್ದು || ೨೫ ||

ಸ್ಮರನು ಶಂಭುಕುವರನು ಮಾಕೆಯು | ವರವಿಮಾನವನೇರಿ ನಭದೊಳು |
ಭರದಿ ಬಂದಾ ದ್ವಾರವತಿಯುಪವನದೊಳವತರಿಸಿ ||
ತರಿಸಿ ವಿದ್ಯೆಗಳಿಂದ ವಸ್ತ್ರಾ | ಭರಣ ಕುಸುಮಾಗರುವಿನಿಂ ಸಿಂ |
ಗರಿಸಿದನು ಕೈಯಾರೆ ತಾನಾ ಚೆಲುವ ಕುವರಿಯನು || ೨೬ ||

ನನೆಗಣೆಗೆ ಮಾರಿಪೊಗಳಲೊಲೆಂ | ದನು ನಯದಿ ಮಣಿಮಾಲೆಯನು ಬೀ |
ವೆನೆ ನೆಗಳೆ ಕೈಗೆತ್ತಿ ಕಳುಹಿದೊಡಾಕೆ ಪೋಗುತಿರೆ ||
ಜನಿತ ವಿದ್ಯಾದೇವತೆಯರಾ | ಜನಿತೆ ಗಾಳಿಯರಾಗಿ ಬೆಳ್ಳೆಲೆ |
ಯನುಗಳಿಸಿ ಕೊಡೆವಿಡಿದು ಢಾಳಿಸಿದರು ಚವಲಗಳನು || ೨೭ ||

ಬೀವಕೊಳ್ಳಿರೆಯೆಂದು ವೀಣಾ | ರಾವದಿಂ ಪೊಳಲಂಗಡಿಯೊಳಾ |
ಬೀವುಗಾರ್ತಿ ಬರಲ್ಕೆ ಕಂಡಾಜನವು ಬೆರಗಾಗಿ ||
ಭೂವರರ ತನುಜೆಯರಿಗಿನಿತಿ | ಲ್ಲೀವಿ ಭವವೀ ಚೆಲುವುಮೀ ರ |
ತ್ನಾವೃತಾಭರಣಗಳಿವಳಿಗೇನೆಂದು ನೋಡಿದರು || ೨೮ ||

ಬೀವುಗಿತಿ ನಿನಗೇತರಿಂದಾ | ಯ್ತೀ ವಿಭವಮೆನೆ ಬೀವಮಾರಿದೊ |
ಡೀ ವಿಭವವಾಯ್ತೆಂದವಳ ಸಖಿ ನುಡಿಯೆ ಮೆಚ್ಚಿದರು ||
ಬೇವಿಗೆಂ ಬೆಲೆಗೊಂಬಳೊಂದೆಡೆ | ಹೂವಿನಂಬನು ಕೊಂಬಳೆಂಬುದು |
ಕಾವದೇವಗೆ ಮಾರಿಹೋಗೆಂದರು ಕೆಲರು ನಗುತ || ೨೯ ||

ಕೇರಿಕೇರಿಯೊಳಿಂತು ತಿರುಗುತ | ಮಾರನರಮನೆಗೊಯ್ದರಾ ವಿ |
ದ್ಯೋರುದೇವಿಯರಾಕೆ ಬಹುದನು ದೂರದಲಿ ಕಂಡು ||
ನಾರಿಯೋರ್ವಳು ಹರಿದೈದಿ ಶೃಂ | ಗಾರ ನಿಧಿಯೆನೆ ಬೀವುಗಾರ್ತಿಯು |
ದಾರ ಸಿರಿಯಲಿ ಬಹುದ ನೋಡೆಂದವಳು ದೂತರಿಗೆ || ೩೦ ||

ರತಿಯುದಧಿ ಮೊದಲಾದ ಮದನನ | ಸತಿಯರೈತಂದೀಕ್ಷಿಸಲು ಸ್ಮರ |
ಕೃತಕ ಮಾತಂಗಿಯು ವಧೂತತಿ ಬೀಸುಗೊಳ್ಳಿರೆನೆ ||
ರತಿಯು ಬೀವಿಗೆ ಬೆಲೆಯಿದೇನೆನೆ | ಚತುರ ಪೂಗಣೆಯೀವುದನೆ ಸ |
ನ್ನುತ ನಗುತ ಮತ್ತಾಕೆಗಿಂತೆಂದಳು ಪಿಕಾರವದಿ || ೩೧ ||

ನನೆಗಣೆಯ ಬೇಕಾದರೀ ಬೀ | ವನು ಕೆಡಿಸದಿರು ನಮ್ಮ ಕುಸುಮಾ |
ಸ್ತ್ರನ ಚೆಲುವನೀಕ್ಷಿಸಲು ನಿನಗೆದೆದುಂಬಿ ಬಹವೆನಲು ||
ವನಿತೆ ನನ್ನನ್ನು ತಂದ ಮಾತಂ | ಗನ ಚೆಲುವಿಕೆಯ ಮುಂದೆ ಕುಸುಮಾ |
ಸ್ತ್ರನು ದೊರೆಯನಲ್ಲೆನಲು ಗಹಗಹಿಸದರು ರಮಣಿಯರು || ೩೨ ||

ಅಕ್ಕ ಕೇಳೆಮ್ಮವನ ಕೃತಕ ವಿ | ದಕ್ಕು ಮುನ್ನಾಂಬಲ್ಲೆ ನೀಚರ |
ಮಕ್ಕಳೊಳಗೀ ಚೆಲುವಿ ಸಿರಿಯಂತಹುದೆ ಎಂದುದಧಿ ||
ನಿಕ್ಕುವಂ ತಾನೆನಲು ರುಗುಮಿಣಿ | ದೊಕ್ಕನಾಕೆಯ ಕರಸಿ ನೋಡಿದ |
ಳಕ್ಕರಿಂದವಳುಡುಗೆ ತೊಡುಗೆಯ ಚೆಲುವೆನೆಳೆಯಳನು || ೩೩ ||

ಬೆರಗುವಟ್ಟಳು ನೀನಿದಾರೆಲೆ | ಕಿರುಮಗಳೆಯೆನೆ ಮಾದಗಿತಿ ತಾ |
ನೆರೆಯನಟ್ಟಿದ ಬೀವುಗೊಟ್ಟೆನೆಲಣ್ಣ ರುಗುಮಿಣನು ||
ಜರೆದುದಕೆ ಮಗನಿಂತುಗೈದನೊ | ಅರಿಯ ಬಾರದೆನುತ್ತ ಕಂಡ |
ಕ್ಕರಿನೊಳವಳನು ಕೀರಿಗೇಳ್ದಡೆ ಪೇಳ್ದರಿಂತೆಂದು || ೩೪ ||

ಅರಸಿ ಕೊಂಡಿಮಪುರದ ರುಗುಮಿಣ | ನರಪತಿಯ ಸುತೆ ನಾಂ ವಿದರ್ಭೆಯ |
ಸ್ಮರ ಸಮಾನತಂಗನೋರ್ವನು ತಂದನಿಂತೆಂದು ||
ಇರದ ದೆಲ್ಲವ ಪೇಳಿ ಕಂಬನಿ | ತೊರೆದುಗುತ ಬಿಗಿದಪ್ಪಿ ಸತಿ ಕು |
ಳ್ಳಿರಿಸಿಕೊಂಡಳು ತೊಡೆಯ ಮೇಲಾ ಸೊಸೆಯನಳ್ತಿಯಲಿ || ೩೫ ||

ಮಗಳೆ ನನ್ನಿಂ ನಿನ್ನ ದೆಸೆಯಿಂ | ಮಿಗೆತವರು ಮನೆಗಾಯ್ತು ಕಡುದುಃ |
ಖಗಳನುತ್ತಿರೆ ಬಿಜ್ಜೆಗಳು ತದ್ವಾರ್ಥೆಯನು ಹೇಳೆ ||
ಮುಗುಳು ಗಣೆಯನು ಶಂಭುಕವರನು | ನಗುತ ಬಂದಡಿಗೆರಗಿ ಕುಳ್ಳಿರೆ |
ಮಗನೆ ತಂದೆಯ ಹೋಲು ಕಂದಯೆನಿಪ್ಪುದಾದುದಲೆ || ೩೬ ||

ಎಂದು ತನ್ನಿಂದಾದುದೆಲ್ಲವ | ಕಂದಗತಿ ನೋವಿಂದರುಪೆ ಬ |
ಲ್ಲಂದದಿಂ ಶ್ರೀಮತಿವೆರಸಿಯಣ್ಣನನು ಬರಿಸೆನಲು ||
ಅಂದೆ ನಾರದನನು ಕಳುಹೆ ಪಲ | ವಂದರಿಂದ ಮೊಡಂಬಡಿಸಿ ಕರೆ |
ದಂದನಾ ದಂಪತಿಗಳನು ಸುವಿಮಾನದೊಳು ಮುನಿಪ || ೩೭ ||

ಸಿರಿವರನು ರುಗುಮಿಣಿಯು ಭೂಮೀ | ಶರು ವೆರಸಿ ಶ್ರೀಮತಿಯ ರುಗುಮಿಣ |
ವರನನುತ್ಸವದಿಂದಿದಿರು ಗೊಂಡುಚಿತ ವಿನಯದಲಿ ||
ಪಿರಿದು ಹರಷಂಬಡಿಸಿ ಶುಭವಾ | ಸರದೊಳುತ್ತಮ ಲಗ್ನದೊಳಗೈ |
ಸರವಿದರ್ಭೆಯ ಮದುವೆಯಾದುದು ವಿವಿಧ ಮಂಗಳದಿ || ೩೮ ||

ಅರಸುಗಳು ಮತ್ತಾಗಳಿಚ್ಛಾ | ಸಿರ ಸುತೆಯರನು ಕುಡಲು ತಳೆದನು |
ಪರಿಯಣನ ವಿಧಿಯಿಂದ ಮನ್ಮಥರಾಜನುತ್ಸವದಿ ||
ಹರಿ ಸಮಸ್ತರಿಗುಚಿತ ವಿನಯಾ | ದರಣೆಯಿಂ ಕಳುಹಿಸಲಖಿಳ ಭೂ |
ವರರು ತಂತಿಮ್ಮಿಕ್ಕೆ ಗೈದಿದರರಸ ಕೇಳೆಂದ || ೩೯ ||

ವರಶತೇಂದ್ರ ನಮಸ್ಯ ಜಿನಪತಿ | ಚರಣ ಸರಸೀ ಜಾತ ನವ ಮಧು |
ಕರವಿರಾಜಿತ ಸುಕವಿ ಸಾಳುವ ವಿರಚಿತವುಮಪ್ಪ ||
ಪರಮನೇಮಿಜಿನೇಂದ್ರ ಪಾವನ | ಚರಿತೆಯೊಳಗೇಳನೆಯದಿದು ತಾಂ |
ದೊರೆವಡೆದುದವನೀಸ್ತುತ ಪ್ರದ್ಯುಮ್ನ ಪರ್ವವಿದು || ೪೦ ||

|| ಅಂತು ಪ್ರದ್ನುಮ್ನ ಪರ್ವಕ್ಕಂ, ಸಂಧಿ ೩೧ ಕ್ಕಂ ಮಂಗಳಮಹಾ ||