ಸಂಧಿ ೩೬

ಲೋಲಲೋಚನೆಯಾ ಸ್ವಯಂವರ | ಸಾಲೆಯಲಿ ಸಂದಣಿಸಿದವನೀ |
ಪಾಲರನು ದ್ರೌಪದಿ ವಿಡಂಬಿಸಿದಳು ಸುರೂಪಿನಲಿ || ಪದ ||

ಕೇಳು ಮಗಧ ನೃಪಾಲ ಪಾಂಡು ನೃ | ಪಾಲ ಪುತ್ರರು ಬಂದರತಿ ಶೋ |
ಭಾಲಲಿತ ಮಾಹೇಂದ್ರ ನಗರಕೆ ಪೊರವಳೆಯದಲ್ಲಿ ||
ಸಾಲು ಗೊಂಡೆಡೆವಿಡದೆ ತಮ್ಮ ವಿ | ಶಾಲ ಬಲಗಳ ಛತ್ರ ಚಾಮರ |
ದೋಳಿಗಳ ಸದದೂಸುಗಳ ಶೋಭೆಗಳ ನೋಡಿದರು || ೧ ||

ಲಾಟ ವಂಗ ಕಳಿಂಗ ವರ ಕ | ರ್ಣಾಟ ಕಾಶ್ಮೀರಾಂಧ್ರ ಸಿಂಧುವ |
ರಾಟ ಮಾಳವ ಚೇರ ತೌಳವ ಚೋಳ ಕಾಂಭೋಜ ||
ಭೋಟ ಕೇರಳ ದ್ರಾವಿಡ ಮಹಾ | ಭೋಟ ಗೌರ್ಜರ ಗೌಳ ಕೊಂಗ ವ |
ರಾಟ ಸೌರಾಷ್ಟ್ರದಿ ದೇಶಾಧೀಶರೊಪ್ಪಿದರು || ೨ ||

ಮುಂದೆ ನಾನಾ ಗುಡಿಪತಾಕೆಯ | ಚಂದಚಂದದ ಮಕರ ತೋರಣ |
ದಿಂದ ಶೋಭಿಪ ಚವುಪಳಿಗೆಗಳ ಸಾಲುಗಟ್ಟುಗಳ ||
ಸಂದಣಿಯ ಮಣಿಪೀಠಗಳ ಚೆಲು | ವಿಂದ ಸೊಗಯಿಸುವಾ ಸ್ವಯಂವರ |
ಸೌಂದರವನೀಕ್ಷಿಸುತ ವಿಪ್ರರ ಸಭೆಯನೈದಿದರು || ೩ ||

ನಾಳೆ ಭೂಪಾಲರಿಗೆ ಮದನನ | ಕಾಳಗವೊ ಮೋಹನ ಸುರಗಿಯು ||
ಕ್ಕಾಳುಗಳ ಸಿಂಗಾರದಲಿ ಕಳನೇರಿ ಬರಲೆಂದು ||
ಪಾಳೆಯಂಗಳೊಳೆಲ್ಲಿಯುಂ ಪಾಂ | ಚಾಲ ನವರಾಲಿಪರ ಕಿವಿಗಿಂ |
ಪೇಳೆ ಸಾರಿದರುಚ್ಚ ಸರದಲಿ ಹೊಯ್ದುಡಂಗುರವ || ೪ ||

ತಾವರೆಯ ಸಂಗಡಿಗನಾವಸು | ದಾರವರ್ಕಳ ತೆರದಿ ಮಿಗೆ ರಾ |
ಗಾವಿಳತೆದಳೆದಿಳಿದನಪರಾಂಬುಧಿಗೆ ನೃಪನಿಕರ ||
ವಿವಿಧದಿ ನಾವವಳನೊಲಿಸುವ | ವಾವವಶ್ಯದ ಬಲೆಯ ಬೀಸುವ |
ವಾವ ಪಸದನವಾಂಪವೆಂಬ ವಿಕಲ್ಪ ವೊಪ್ಪಿದುದು || ೫ ||

ಆ ವನಿತೆಯನು ಒಲಿಸಿದಾತನೆ | ಕಾವದೇವನು ನಾಳೆ ಆಕೆಯ |
ದಾವಗೊಲಿವಳೊ ಬಲ್ಲರಾರೆಂದು ಕೆಲರುಕೆಲರು ||
ಈ ವಿಪುಳಭುಜವೀ ಹರೆಯ ಚೆಲು | ವೀ ವಿಭವನಿರ್ದೆನ್ನನಲ್ಲದ |
ವಾವಗೊಲಿತಹಳೆಂದರರೆಬರು ಮನದ ಗರ್ವದಲಿ || ೬ ||

ನೆರೆದ ಪಾರ್ಥಿವರೆಲ್ಲರನು ಧಿ | ಕ್ಕರಿಸಿ ಪಾರ್ಥನೆ ಪಡೆವನಾ ಸೌಂ |
ದರಿಯನೆಮಗೇನುದ್ಧವೇರಿಯೆ ನೋಳ್ಪವೆಂಬಂತೆ ||
ತರಣಿಯುದಯಾದ್ರೀಂದ್ರಮನಲಂ | ಕರಿಸೆ ತಮ್ಮನಲಂಕರಿಸಿದರು |
ಸ್ಮರನೆ ಬಹುರೂಪಿಣಿಯನಾಂತನೊಯೆನೆ ಮಹೀಶ್ವರರು || ೭ ||

ವರಮಹತ್ತರದಿಂದ ದ್ರುಪದನು | ಕರಸೆ ಹರುಷದಿ ಬಂದುರೋರೊ |
ಬ್ಬರ ಸಿರಿಯನೋರೊಬ್ಬರಣೇವುತ ರೂಪುವಿಕ್ರಮದಿ ||
ಪರಿಪರಿಯ ಬಿರುದುಗಳ ಕಹಳೆಯ | ಪರಿಪರಿಯ ತೂರ್ಯ ಸ್ವನಂಗಳ |
ಪರಿಪರಿಯ ಪಾಠಕರ ಕಳಕಳವೈದೆ ಸೊಗಯಿಸಿತು || ೮ ||

ಲೀಲೆಯಲಿ ಬಂದಾ ಸ್ವಯಂವರ | ಸಾಲೆಯಲಿ ತಂತಮ್ಮ ವಿವಿಧ ವಿ |
ಶಾಲ ಬಲಮಂತ್ರಿಪ್ರಧಾನೈಶ್ವರ್ಯ ಪರಿವೃತರು ||
ಸಾಲು ಮಣಿಪೀಠಗಳನುರ್ವೀ | ಪಾಲ ಮಣಿಗಳಲಂಕರಿಸಿದರು |
ಮೇಳನಿಂದಿಳಿತಂದ ಜ್ಯೋತಿರ್ಲೋಕವೆಂಬಂತೆ || ೯ ||

ಮನುಜಕೃತ್ರಿಮವಲ್ಲದಾದನು | ಅನುಕರಿಸಿ ಮೆರೆವೆಂಟು ತೆರದ |
ರ್ಚನೆಯ ಮಾಡಿಸಿ ಮತ್ಸ್ಯಯಂತ್ರವನಾಗಸದೊಳಿರಿಸಿ ||
ವಿನುತ ರಾಜಮಹಾಸಭೆಯನತಿ | ವಿನಯ ವಚನದಿ ದ್ರುಪದ ಭೂವರ |
ನನುಸರಿಸಿದನು ವಿವಿಧ ವಿಭವೈಶ್ವರ್ಯದೆಸಕದಲಿ || ೧೦ ||

ಅತ್ತಲದರಿಂ ಮುನ್ನವೇ ತ | ತ್ಪುತ್ರ ದ್ರುಷ್ಟದ್ಯುಮ್ನನುತ್ತಮ |
ಚಿತ್ತ ನಿಜ ಮಂತ್ರಿ ಪ್ರಧಾನಾದ್ಯರಿಗೆ ಉತ್ಸವದಿ ||
ಇತ್ತನಾಭರಣಾನುಲೇಪನ | ವಸ್ತ್ರಗಳ ಮತ್ತತ್ತಲೊಲಿದು ಮ |
ಹತ್ತರಿಯರಿರೆ ಮಜ್ಜನಂಗೊಳಿಸಿದರು ದ್ರೌಪದಿಯ || ೧೧ ||

ದೃಢರಥಾದೇವಿಯು ಸುರತ್ನದ | ತೊಡಿಗೆಗಳ ತರಿಸಲು ಸತಿಯ ಸಿರಿ |
ಮುಡಿಯನಾರಿಸಿ ತುರುಬನಿಟ್ಟರು ಮುತ್ತಿನೋಲೆಯನು ||
ದೃಢಗೊಳಿಸಿದರು ದುಗುಲವನು ನಿರೆ | ವಿಡಿಸಿದರು ಕಂಕಣವನಿಟ್ಟರು |
ಬಿಡದೆ ಕಟ್ಟಿದರಚ್ಚ ಮುತ್ತಿನ ಕಂಠಮಾಲೆಯನು || ೧೨ ||

ಸುಗುಣ ಮಣಿಭೂಷಣೆಯ ಸಹಜದ | ಲೊಗೆದ ಚೆಲುವಿಂ ಮಣಿವಿಭೂಷಣ |
ಮಿಗಿಲೆನುತ ಪರಿಮಳದಿನಧಿಕವೆ ಯಕ್ಷಕರ್ದಮವು ||
ಮೃಗಮದದ ತಿಲಕವನವೊಂದನೆ | ಸೊಗಸುಗೊಳಿಸಿದೊಡಿನಿತೆ ಸಾಲದೆ |
ತೆಗೆಯಿವೇಕಿನ್ನುಳಿದವೆಂದಳದೋರ್ವ ಜಾಣ್ಗೆಳದಿ || ೧೩ ||

ಎಂದೊಡಾಕೆಯ ನುಡಿಯನಾಲಿಸಿ | ಸೌಂದರಿಯೆ ಚೆಲುವಿಕೆಯನೀಕ್ಷಿಸಿ |
ಯೆಂದರಾ ಕೆಳದಿಯರು ನೀನೆಂದಂತಿದೇ ಸಾಕು ||
ಎಂದೊಡಂ ಸುವಿವಾಹ ಮಂಗಳ | ದೊಂದುಕಾರ್ಯನಿಮಿತ್ತವಿರಲೆಂ |
ದೊಂದಿಸಿದರತಿ ಚತುರೆಯರು ದ್ರೌಪದಿಗೆ ತೊಡಿಗೆಗಳ || ೧೪ ||

ನರುಮುಡಿದು ಹೊಂಗೇದಗೆಯ ನೇ | ಸರ ಹೆರೆಯ ಹಣೆಕಟ್ಟು ಕೆನ್ನೆಯ |
ಗರಿಯ ಮಕರಿಕೆಯೆಸೆವ ರತ್ನದ ಕರ್ಣಪೂರಗಳ ||
ಮೆರೆವ ಮುತ್ತಿನ ಮೂಕುತಿಯ ಮಿರು | ಮಿರುಪ ತ್ರಿಸರದ ಪಂಚಶರದ |
ಚ್ಚರಿದ ಹಾರದ ಬಣ್ಣ ಸರಗಳ ಸೊಬಗು ಸೊಬಗಾಯ್ತು || ೧೫ ||

ಪಂಚರತ್ನದ ತೋಳ ಬಳೆಗಳ | ಸಂಚಯದ ಕಂಕಣದ ಸೂಡಗ |
ದಿಂಚರದ ಮಣಿಮುದ್ರಿಕೆಯ ತೊಂಗಲುನಿರಿಗೆ ಮೆರೆವ ||
ಕಾಂಚಿಯಮರಿದ ಕಿಂಕಿಣಿಗಳ ಪ | ಳಂಚಲೆವ ನೇವುರದ ಅಡಿಯುಗು |
ರ್ವಿಂಚಿನಿಂ ಮಿಂಚಾದ ಬೆರಳಿನ ಹಜ್ಜೆವೊಪ್ಪಿದವು || ೧೬ ||

ಲಲನೆಯರ ಸೌಭಾಗ್ಯಲಕ್ಷ್ಮಿಯ | ಚೆಲುವಿನಿಂ ಮಣಿದೊಡಿಗೆ ತೊಡಿಗೆಯ |
ಚೆಲುವಿನಿಂ ಲಲಿತಾಂಗ ಮೈಮುಟ್ಟೆನಿಸಿ ಚೆಲುವಾಗೆ ||
ತಿಲಕವನು ರಚಿಸಿದರು ತನಿಪರಿ | ಮಳಕೆ ಪರಿಮಳವಿತ್ತುದಾ ಕೋ |
ಮಲೆಯ ಮೈಗಂಪಿಂಪು ಪೊಂಪುಳಿಯಾದುದೇನೆಂಬೆ || ೧೭ ||

ಒಂದು ಯೋಜನವೆತ್ತಲುಂ ಸವಿ | ದೊಂದು ನರುಗಂಪನು ಜರದುಪರಿ |
ತಂದುವಳಿಗಳ ಬಳಗವಾಕೆಯ ಮೈಯ ಪರಿಮಲಕೆ ||
ಅಂದು ಕಣು ಸವಿ ರೂಪು ಕಿವಿ ಸವಿ | ಯೊಂದು ನುಡಿ ಕೊನೆಮೂಗು ಸವಿ ಕಂ |
ಪೆಂದು ಮನವನು ಜಕ್ಕುಲಿಸಿದುದು ಭೂಪ ಕೇಳೆಂದ || ೧೮ ||

ಕುಸುಮ ಶರಗೊಂದಧಿಕ ದಿಟ್ಟಿಯು | ನೊಸಲಿನೊಳಗುದಯಿಸಿತೊ ಬೇರೊಂ |
ದೆಸೆವ ಸಮ್ಮೋಹನ ಶರವೆ ದೊರಕಿದುದೊಯಿಂದೊಂದು ||
ಹೊಸ ಜಯಧ್ವಜವೆತ್ತಿದುದೊ ರಂ | ಜಿಸುವ ಸಿಂಗರ ಸಿರಿಯೊ ಎದೀ |
ಕ್ಷಿಸಿತು ಕಣ್ದಣಿವಿನೆಗವಂತಃಪುರದ ಕಾಂತೆಯರು || ೧೯ ||

ಇಂತು ಪಸದನವಾಮತು ದ್ರೌಪದಿ | ಕಾಂತ ಲಾಭದ ನಾಂದಿ ಮುಖದಲಿ |
ಕಾಂತಫಲಕರೆ ಮೋಕ್ಷ ಲಕ್ಷ್ಮೀಕಾಂತ ಸದನಕ್ಕೆ ||
ಸಂತಸದಲೈತಂದು ವಿಮಳ | ಸ್ವಾಂತ ವರಜಿನ ಪೂಜೆಗೈದೋ |
ರಂತೆ ವಂದಿಸಿ ಗಂಧ ಜಲ ಶೇಷಾಕ್ಷತೆಯನಾಂತು || ೨೦ ||

ಗುರುಗಳಡಿದಾವರೆಗೆರಗಿ ಮಿಗೆ | ಪರಕೆಗೊಂಡಂತರದಿ ನಿಜ ಮಂ |
ದಿರಕೆ ಬಂದಾ ದ್ರುಪದಧೃಡರಥೆಗೆರಗೆ ಭಕ್ತಿಯಲಿ ||
ನರನೆ ನಿನಗಾತ್ಮೇಶನಕ್ಕೆಂ | ದುರುಮುದದಿ ಪರಸಿದನು ಸೇಸೆಯ |
ವಿರಚಿಸಿದರತಿ ಮಂಗಲದಿ ಸೋವಾಸಿನಿಯರೊಲಿದು || ೨೧ ||

ದರಹಸಿತ ಮುಖ ಕಮಲೆಕಮಲೆಗೆ | ಸರಿಯೆನಿಪ ವಿಭವದಲಿ ಸಾಸಿರ |
ತರುಣಿಯರ ಮೇಳದಲಿ ಕಪ್ಪುರದುಂಬುಲವನಾಂತು ||
ಗುರು ಕುಚಂಗಳ ಬಿಣ್ಪೊರಗೆ ಹೊಂ | ಜರಿಗೆ ನಡು ಕಡು ಬಳುಕುತಿರಲೈ |
ಸರನ ಮದಗಜಮನದಲಿ ಪೊರಮಟ್ಟಳರಮನೆಯು || ೨೨ ||

ನುಡಿಗೆ ಗಿಳಿ ಯಿಂಚರಕೆ ಕಳರುತಿ | ನಡಿಗೆ ರಾಯಂಚೆಗಳು ಚೆಲುವಿನ |
ಮುಡಿಗೆ ಸೋಗೆ ನವಿಲ್ಗಳಳಕಕ್ಕಳಿಕುಳವು ಎಳಸಿ ||
ಬಿಡದೆ ಬರೆ ಬೇರೊಂದು ಖಗಕುಲ | ದೊಡತಿಯೋ ಭೂಚರಿಯರೆರೆಯಳು |
ದೃಢರಥಾದೇವಿಯ ಸುತೆಯೊಯೆನೆ ಬಂದಳಿಂದುಮುಖಿ || ೨೩ ||

ಕುಂಕುಮದ ಮೈದಿಗುರ ನೊಸಲಿನ | ಲಂಕಸಿದ ಕತ್ತುರಿಯ ತಿಲಕದ |
ಬಿಂಕದುಡುಗೆಯ ಕಾಲ ಖಡೆಯದ ನೆಗೆದ ಸತ್ತಿಗೆಯ ||
ಕಂಕಣದ ಸೆಳ್ಳುಗುರ ಸುರಗಿಯ | ಪಂಕಜಾನನೆ ಮನಸಿಜನ ಜಯ |
ದಂಕದುಕ್ಕಾಳೆನಿಸಿ ಮಣಿರಥಕಳನನೇರಿದಳು || ೨೪ ||

ನಗೆ ಮೊಗವೊ ಲಾವಣ್ಯ ಸರಸಿಯ | ಲೊಗೆದ ಕಮಲವೋ ಪೀವರಸ್ತನ |
ಯುಗವೊ ಮುಳುಗಿದ ಮದನಗಜಕುಂಭವೋ ಪುಳಿನವೋ ಕಟಿಯೊ ||
ನಗೆಗಣಗಳೋ ನೈದಿಲುಗಳೋ | ಮುಗುಳುನಗೆಯೋ ಕಿರುದೆರೆಯೊ ದಿ |
ಟ್ಟಿಗೆ ಸುಳಿಯೊ ಪೊಕ್ಕುಳೊ ಯೆಸೆದುದೊ ದ್ರೌಪದಿಯ ಚೆಲುವು || ೨೫ ||

ರತಿಯ ಮೋಹನ ವಸ್ಯಮಂತ್ರದ | ಸತಿಯೊ ಕಾವನ ಮಚ್ಚುಮದ್ದಿನ |
ಪ್ರತುಮೆಯೋ ಕಂದರ್ಪದೇವನ ಖಂಡೆಯದ ಸಿರಿಯೊ ||
ಅತನನುನೃಪ ಸಾಮ್ರಾಜ್ಯಲಕ್ಷ್ಮಿಯೊ | ರತಿಯರಸನಾರಾಧಿಸುವ ದೇ |
ವತೆಯೊ ಮೇಣ್ ದ್ರೌಪದಿಯೊ ಯೆಂದರು ನೋಡಿ ಪಾರ್ಥಿವರು || ೨೬ ||

ಜಗದ ಪೆಣ್ಗಳ ರೂಪ ಪರಮಾ | ಣುಗಳನಾಯ್ದು ಸುಧಾಕರನ ನಾ |
ರಗಳ ಪೂಜಿಸಿ ಹೊಂಬೆಳಗು ಸಹ ಪರಿಮಲವನೇರಪಿ ||
ಮುಗುಳುಗಣೆಗಳ ಮೋಹನದ ತನಿ | ಸೊಗಸ ನೋಡಿ ಮನೋಜ ದ್ರುಪದನ |
ಮಗಳ ನಿರ್ಮಿಸಿದನೊ ಎನುತ ನೋಡಿದ ನೃಪಸ್ತೋಮ || ೨೮ ||

ತಳಿರಡಿಯ ಪೊಂಬಾಳೆದೊಡೆಗಳ | ಪುಳಿನ ಜಘನದ ತೆಳುವಸುರ ಹೊಂ |
ಜಳೆ ನಡುವ ಪೊಂಬೊಗರಿ ಮೊಲೆಗಳ ಕಂಬುಕಂದರದ ||
ಹೊಳೆವ ಹೊಂಗನ್ನಡಿಗದಪುಗಳ | ತೊಳಪ ಮಾಣಿಕದುಟಿಯನನೆ ಗಂ |
ಗಳ ಕುಟಿಲಕುಂತಳದ ಚಿಲುವೆಯರೇರಿದರು ರಥವ || ೨೯ ||

ನಿರಿಗುರುಳನುಂ ಪಡರ್ದ ತುರುಬಿನ | ಹೆರೆನೊಸಲ ಕಡುವುರ್ವುಗಳ ಮಿಗೆ |
ತುರುಗೆವೆಯ ನಿಡಿಗಣ್ಣ ಸಂಪಿಗೆಮುಗುಳ ನಾಸಿಕೆಯ ||
ಮಿರುಪ ಹೊಂದಾವರೆ ಮೊಗದ ಸ | ಕ್ಕರೆ ಸವಿಯ ಚೆಂದುಟಿಯ ಸೊಬಗಿನ |
ಕಿರು ಮಡದಿಯರು ತಂಡತಂಡದಿ ಬಳಸಿದರು ಸತಿಯ || ೩೦ ||

ಸವಡಿ ಮಿಂಗಳಗಳ ಸುಢಾಳದ | ಅವಳ ಹೊಂಗನ್ನಡಿಗದಪುಗಳ |
ಹವಳಲತೆಗಳ ಬೆಸುಗೆದುಟಿಗಳ ಮುದ್ದುನಗೆಮೊಗದ ||
ಜವಳಿದಾವರೆಮೊಗ್ಗೆ ಮೊಲೆಗಳ | ನವಲತಾ ಮಧ್ಯದ ವಿಳಾಸದ |
ಯುವತಿಯರು ಸಂದಣಿಸಿದರು ದ್ರೌಪದಿಯ ಮಣಿರಥವ || ೩೧ ||

ಕುರುಳುಗಳ ಕಣ್ಣಿಗಳ ಮೈಸಿರಿ | ಹರಹು ಬಲೆಗಳ ಕೊಲ್ಲಿ ನೋಟದ |
ಸರಳುಗಳಯೇರಿಸಿದ ಹುಬ್ಬಿನ ಹೊಂಗು ಬಿಲ್ಲುಗಳ ||
ಭರದ ಮೊಲೆಗುಂಡುಗಳ ನಳಿ ತೋ | ಳುರುಳಿ ಬಡಿಗಳ ಸಡಗರದಲೈ |
ಸರನ ಬೇಂಟೆಯ ಬಂಧದಂದದಿ ಬಂದರಬ್ಬರದಿ || ೩೨ ||

ಅಡಿದಳಿರನುಣ್ದೊಡೆಗದಳಿಗಳ | ನಡುಲತೆಯ ಪೊಕ್ಕುಳಗೊಳನ ಮೊಲೆ |
ಜಡಿವ ಕಾಯ್ಗಳ ತೋಳಶಾಖೆಯ ಮುಖಸರೋರುಹದ ||
ನುಡಿಗಿಳಿಯ ದನಿಕೋಗಿಲೆಯ ಸೋ | ರ್ಮುಡಿ ನವಿಲಕಣ್ಣರಲ ಕುರುಳಾ |
ರಡಿಯ ಸೊಬಗಿಯರೋಳಿ ಬಂದುದು ನಂದನದ ತೆರದಿ || ೩೩ ||

ತೋಳುಗಳ ಲೌಡಿಗಳ ಸೆಳ್ಳುಗು | ರೋಳಿಗಳ ಸುರಗಿಗಳ ಹುಬ್ಬಿನ |
ಸಾಲು ವಿಲುಗಳ ಓರೆನೋಟದ ಮಸೆದ ಬಾಣಗಳ ||
ಢಾಳಿಸುವ ತನಿಹೊಗರ ಖಡುಗದ | ಬಾಲೆಯರು ಮನಸಿಜನ ಶಸ್ತ್ರದ |
ಶಾಳೆಗಳವೊಲು ಬಂದರಂದು ವಿಡಾಯಕಾರ್ತಿಯರು || ೩೪ ||

ಅಲರ್ದ ಮೊಗದಾವರೆಯ ಕೋಗಿಲೆ | ಯುಲಿಯ ರಾಜಮರಾಳಗಮನದ |
ಗಿಳಿನುಡಿಯನರುಸಯ್ಯ ಸುರಭಿಸಮೀರಣದ ಸಿರಿಯ ||
ನಳಿನಳಿಪ ತನುಲತೆಯ ಕೇಸರಿ | …ಯನಾಂಚಲದಲಿ ಮಲ್ಲಿಗೆ |
ಯಲರ ಚೆಲುವಿನ ಸುಗ್ಗಿಯೆನೆ ಬಂದುದು ಸಖೀ ನಿವಹ || ೩೫ ||

ತಳಪಗಂಗಳ ಸೋಗೆಗಂಗಳ | ತೊಳಪ ಮೀಂಗಂಗಳ ಬಗಸೆ ಗಂ |
ಗಳ ಯೆಸಳುಗಂಗಳ ಪಳಂಚುವ ಮಿಂಚುಗಣ್ಣುಗಳ ||
ಅಲರುಂಗಳ ಹುಲ್ಲೆಗಂಗಳ | ನಳಿನಗಂಗಳ ಚೆಲ್ಲೆಗಂಗಳ |
ಕೆಳದಿಯರು ಬಯಸಿದರು ದ್ರುಪದಾತ್ಮಜೆಯ ಮಣಿರಥವ || ೩೬ ||

ಮುತ್ತಿನೋಲೆಯ ಮೂಕುತಿಯ ಕಟಿ | ಸೂತ್ರನೇವುರ ಹಾರಗಳ ಚೆಲು |
ವೊತ್ತರಿಪ ಕಂಕಣದ ಸೂಡಗಬಾಹುಪೂರಗಳ ||
ವೃತ್ತ ಕುಚದೆಡೆಯೊಲೆವ ಹಾರದ | ಕತ್ತುರಿಯ ಹೆರೆನೊಸಲ ಕುಂಕುಮ |
ಮೆತ್ತಿದಂಗದ ಸಿಂಗರದ ಸೊಬಗಿಯನು ಪಸರಿಸಿತು || ೩೭ ||

ಓರೆ ಮುಸುಕಿನ ತೊರದುರುಬಿನ | ಬೋರೆನೋಟದ ಮುಗುಳು ಮೊಗಗಳ |
ದೋರೆವಲುಗಳು ತೊನೆವ ನಳಿತೋಳುಗಳ ಪಿಡಿನಡುವ ||
ಸೇರಿ ರಂಜಿಪ ಸಣ್ಣ ಬಣ್ಣದ | ಸೀರೆಗಳ ತೊಂಗಲು ಸಿರಿಯ ಕಡು |
ನೀರೆಯರು ಕಣ್ಸೂರೆಗೊಂಡರು ವಿವಿಧ ಭೂಭುಜರ || ೩೮ ||

ಮಿಸುನಿಡವಕೆಯ ಹಾವುಗೆಯ ಢಾ | ಳಿಸುವ ಕುಂಚದ ಸೀಗುರಿಯ ನಿ |
ಟ್ಟಿಸುವ ಮಣಿಗಣ್ನಡಿಯ ಹಡಪದ ಆಳವಟ್ಟಗಳ ||
ಕುಸುಮಗಳ ಕಪ್ಪುರದ ಗಂಧದ | ರಸದ ಘಸೃಣದ ಕತ್ತುರಿಯ ರಂ |
ಜಿಸುವ ಮಣಿಭಾಜನವ ತಳೆದಲೆಯರು ಬಳಸಿದರು || ೩೯ ||

ಸಲಹಿದರಳೆಯ ಪದ್ಯವೋದುವ | ಗಿಳಿಯ ಪಾರವತದ ಸೋಗೆ ನ |
ವಿಲ ಪುರುಳಿಗಳ ಕೊಂಚೆಯಂಚೆಯ ಸಂಚಯದ ಕೂಡೆ ||
ಚೆಲುವಿನಿಂ ಬರೆ ಮೇಲೆ ಹೀಲಿಯ | ತಳೆವಿಡಿದವೊಲು ತುಂಬಿ ಬರೆ ಕಡು |
ಚೆಲುವನಾದದು ದ್ರೌಪದಿಯ ಗಮನವು ನಿರೀಕ್ಷಿಸಲು || ೪೦ ||

ತೊಲಗೆಲವೊ ಹೂಗೋಲರಾಯವ | ಚೆಲುವಿಕೆಯ ಭಂಡಾರ ಬರುತದೆ |
ತೊಲಗೆಲವೊ ನೀರೆಯರ ಸೃಷ್ಟಿಗೆಕಳಸ ಬರುತಲದೆ ||
ತೊಲತೊಲಗೊ ಪಾಂಚಾಲರಾಯನ | ಕುಲತಿಲಕ ಬರುತದೆ ಯೆನುತ ಮಿಗೆ |
ನೆಲನನುಗ್ಘಡಿಸುತ್ತ ನಡೆದರು ವೇತ್ರಧಾರಿಗಳು || ೪೧ ||

ರಂಭೆಯೀಕೆಯ ಮುಂದೆ ಕಾಷ್ಟದ | ಬೊಂಬೆಯಾದಳು ಚೆಲುವಿಕೆಯನೇ |
ನೆಂಬೆನಾರತಿಯಾರತಿಯೆ ತಾನಾದಳಾಸತಿಗೆ ||
ಶಂಬರಾರಿಯ ಹೊಸಮಸೆಯ ಹೊಗ | ರಂಬುಗಳ ಕೇಕರದಿ ದೆಸೆದೆಸೆ |
ಗಿಂಬಿಡುತ ವೈವಾಹ ರಥದಲಿ ಬಂದಳಿಂದುಮುಖಿ || ೪೨ ||

ಬಿಸಿಲನುಂಗಿತು ಭೂಷಣದ ಕೆಂ | ಬಿಸಿಲು ನಯನಾಂಚಲದ ರುಚಿ ಕೊ |
ರ್ವಿಸಿತು ಮಿಂಚನುಯೆಳೆನಗೆಯ ಬೆಳುದಿಂಗಳೆಣ್ದೆಸೆಯ ||
ಮುಸುಕಿದುದು ದ್ರೌಪದಿಯ ಮೋಹನ | ವಿಸರ ಶೃಂಗಾರಾಂಬುನಿಧಿ ತೇಂ |
ಕಿಸಿತು ಸಕಳೋರ್ವಿಶ ಮುಖಚಂದ್ರೌಘವನು ಬಿಡದೆ || ೪೩ ||

ಏನನೆಂಬೆನು ಪಾರ್ಥಿವರ ಕಣು | ಮೀನುಗಳು ಮುಳುಗಿದವು ಸೊಬಗಿನ |
ಮಾನಿನಿಯ ಲಾವಣ್ಯರಸ ಪೀಯೂಷವಾರ್ಧಿಯಲಿ ||
ಮಾನದುರ್ಗದಲಿರ್ದ ಧೈರ್ಯನಿ | ಧಾನವಾಕೆಯ ಕಣ್ಣಚೂಣಿಯ |
ಲೇನು ಉಳಿಯದೆ ಕೊಳ್ಳುವೋದುದು ಭೂಪ ಕೇಳೆಂದ || ೪೪ ||

ತೊಳ ಪೂಜಿಸಿ ಕೊಂಡನಾ ಪೂ | ಗೋಲವೀರನು ಬೊಂಬೆಗಳನೆಡ |
ಗಾಲಿನಲಿ ತೊಡಚಿದನುಯಿಂದ ಸ್ವಯಂಬರದೊಳಿರಲು ||
ಭಾಳ ಲೋಚನನಗ್ನಿ ನೇತ್ರ | ಜ್ವಾಲೆಯನ ನಂದಿಸುವೆನೆಂದು |
ರ್ಕಾಳುಗಳ ಬಲ್ಲಹನು ಕಬ್ಬಿನಬಿಲ್ಲ ಜೇವಡೆದ || ೪೫ ||

ಐಸರಂಗಾಯ್ತಂದು ಕಾರ್ಮುಕ | ಸಾಸಿರವು ನಿಡುದೋಳುಗಳ ವಿ |
ಚ್ಛಾಸಿರವು ಹೊಗೋಲಸಂಖ್ಯಾ ತಂಗಳೈದೇಳ್ವೆ ||
ಆ ಸತಿಯ ಕಂಡನಿಬರೆದೆಯಲಿ | ಸಾಸಿವೆಯನಿಡಲಂಬುಗೊಡದ |
ಭ್ಯಾಸಿಗಳ ದೇವನು ನನೆಯ ಕೂರ್ಗಣೆಯ ಮಳೆಗರೆದ || ೪೬ ||

ದ್ರೌಪದಿಯ ಸುವಿವಾಹ ಮಣಿರಥ | ಚೌಪಳಿಗೆಗಳ ಸಮತಳದಲಿರೆ |
ದ್ರುಪದ ಸುತನಾಕೆಯ ಪುರೋಭಾಗವನು ತಾನೈದಿ ||
ನೃಪತಿಗಳೊಳಿವನೀ ಪೆಸರ ಭೂ | ಮಿಪ ನೋಡೌ ತಂಗಿಯೆಂದಾ |
ವಿಪುಲರಥವನು ಮಂದಗತಿಯಲಿ ನಡಸಿ ತೋರಿಸಿದ || ೪೭ ||

ಈತ ಕುರುಕುಲ ಜಾತನತಿ ವಿ | ಖ್ಯಾತ ದುರ್ಯೋಧನಧರಾಧಿಪ |
ನೀತ ದುಶ್ಶಾಸನ ನೃಪಾಲಕನೀತದುಸ್ಸಹನು ||
ಈತ ದುರ್ಮರುಶಣ ಮಹೀಪತಿ | ಈತದುರ್ಜೆಯನೀತ ದುರ್ಮದ |
ನೀತ ಚಿತ್ರಕನಿಂತಿವರು ಧೃತರಾಷ್ಟ್ರನಂದನರು || ೪೮ ||

ವರ ವಿರಾಟನೃಪಾಲನಿವನು | ತ್ತರ ಕುಮಾರನು ಚಂದ್ರಸೇನನು |
ಸುರಸ ಭೂರಿಶ್ರವನು ದಕ್ಷಿಣಚೋಳ ಬಾಹ್ಲಿಕನು |
ಹರಿಣ ಲೋಚನೆಯಿವನು ಸೈಂಧವ | ಧರಿಣಿ ಪಾಲ ಸಮುದ್ರ ಸೇನನು |
ವರ ಬೃಹದ್ರತ ಚಿತ್ರಾಯುಧನು ಪಾಂಡನೃಪ || ೪೯ ||

ಇತ್ತನೋಡೆಲೆ ತಂಗಿ ದ್ರೋಣನ | ಪುತ್ರ ನಶ್ವತ್ಥಾಮನೀತನು |
ಮತ್ತಮಾತನ ಮಾವ ಕೃಪನೀತನುವಿಕರ್ಣನಿವ ||
ಇತ್ತಲೀಕ್ಷಿಸು ಸೂರ್ಯತನುಜನು | ದಾತ್ತ ಕರ್ಣನನೆಂದು ತೋರಿಸಿ |
ವೃತ್ತಕುಚೆಯೀಕ್ಷಿಸಿದಳಿಂತಖಿಳಾವನೀಶ್ವರರ || ೫೦ ||

ಎನಿತು ತಾರಗೆಯಿರ್ದೊಡಂ ಕುಮು | ದಿನಿ ಸುಧಾಂಶುವನೆಳಸಿ ಚಂದ್ರಿಕೆ |
ಯನು ಚಕೋರಿ ಮರಂಗಳೊಳು ಕೋಗಿಲೆರಸಾಳವನು ||
ಸುನಯದರಸುವ ತೆರದಿ ವರನನು | ವನಿತೆಯರಸುತ ನೃಪರ ಚೆಲುವನು |
ಮನವೊಗಡಿಸಲು ಕಂಗುಡಿತೆಯಲಿ ಮೊಗೆದು ಚೆಲ್ಲಿದಳು || ೫೧ ||

ಮೀಸೆದಿದ್ದುವ ಕೈಗಳಲ್ಲಿಂ | ದೋಸರಿಸವರಸುಗಳ ಬೆಳ್ಳೆಲೆ |
ಯೀಸಿ ಕೊಂಬಾಕೈಗಳಲ್ಲಿಯೇ ನಿಂದವಾನನವ ||
ಬೀಸಣಿಸಿದುದು ಕಂದು ವಿರಹದ | ಕೇಸುರಿಯ ಒಳಗೊಳಗೆ ಹಬ್ಬಿತು |
ಸೂಸಿದರು ಬೆಳುನಗೆಯ ಬರುಹೆಕ್ಕಳದ ಹೇರಳವ || ೫೨ ||

ಸಿಂಗರದ ಹೊಲದೊಳಗೆ ಅದಯನ | ನಂಗನಾಕೆಯ ದಿಟ್ಟಿ ಬಲೆಯೊಳ |
ಗಂಗರುಚಿ ದೊಡ್ಡಿಯಲಿ ಸಿಲುಕಿದ ನೃಪಮನೋಮೃಗವ ||
ತುಂಗ ಮೋಹನ ತವಗವೀರಿ ಬೆ | ಡಂಗಿಯೀಕ್ಷಣ ಬಾಣದಿಂದೆ |
ಚ್ಚೆಂಗುರಿಯ ಬರಿಕೆಯಿದಿದನೊ ಭ್ರೂಚಾಪದಿಂ ಬಡಿದು || ೫೩ ||

ಬಾಲೆ ನಿನ್ನಯ ಕಣ್ಣಿನಿತು ಭು | ಪಾಲರೇಂ ಸೊಗಯಿಸರಲಾ ಹೂ |
ಗೋಲುಯೀಕಡೆಗೊಂಡು ಬಂದದೆ ಮನಸಿಜನು ನಿನ್ನ ||
ಜೋಳವಾಳಿಯ ಬಂಟನಾದನು | ಸೋಲರೀ ಪಾರ್ಥಿವರೆನುತ ಘಾ |
ತಾಳೆಯರು ನಸುನಗೆಯನಿತ್ತರು ದ್ರೌಪದಿಯ ಮುಖಕೆ || ೫೪ ||

ತಂಗಿ ನಿಮ್ಮಯ ಕಣ್ಗೆ ಸೊಗಯಿಪ | ಸಿಂಗರದ ನೃಪರಿರ್ದು ಫಲವೇಂ |
ತುಂಗಗಾಂಡಿವವಿಕ್ಷುಧನು ಕೂರಂಬು ಪೂಗಣೆಯ ||
ಅಂಗಭವನಾ ಬಿಲ್ಲೆರೆಯನಿಂ | ನಂಗಯಿಪ ಬಗೆಯಂತ್ರವೆಂದಾ |
ಸಿಂಗರದ ಮಣಿರಥದ ಧೃಷ್ಟದ್ಯುಮ್ನ ತಿರುಹಿಸಿದ || ೫೫ ||

|| ಅಂತು ಸಂಧಿ ೩೬ ಕ್ಕಂ ಮಂಗಲಮಹಾ ||