ಸಂಧಿ ೩೭

ದ್ರೌಪದಿಯನರ್ಜುನವರಿಸಿ ಭೂ | ಮಿಪರ ಭಂಗಿಸೆ ಬಳಿಕ ಪಾಂಡವ |
ನೃಪತಿಯಿಂದ್ರಪ್ರಸ್ಥದಲಿ ರಾಜ್ಯಾಧಿಪತಿಯಾದ || ಪದ ||

ಕೇಳೆಲೇ ಮಾಗಧ ಧರಿತ್ರೀ | ಪಾಲ ಗಾಂಢೀವದ ಹೊರೆಯಲಾ |
ಬಾಲಕಿಯ ರಥನಿಂದುದೀ ನೆರೆದರಸುಗಳೊಳಿನ್ನು ||
ಸ್ಥೂಲ ಭುಜನಿದನಂದಿಗಂಬನು | ಮೇಳಯಿಸಿ ನಿರ್ನೆಳಲನೀಕ್ಷಿಸೆ |
ಮೇಲೆ ತಿರುಗುವ ಗಗನ ಯಂತ್ರದ ಮೀನಿನೆಡೆಗಣ್ಣ || ೧ ||

ಒಂದೆ ಕೋಲೊಳಗೆಚ್ಚು ಕೆಡಪುವು | ದಿಂದು ನೆರೆದೀ ಸಭೆಯೊಳಗೆ ನೆರೆ |
ಸೌಂದರಿಗೆ ವರನಪ್ಪುದೆಂದಾ ದ್ರುಪದನವರಿರದೆ ||
ಬಂದು ಡಂಗುರ ಸಾರಿದರು ಭೋ | ರೆಂದೆನಗೆ ತನಗೆನುತ ಮಿಗೆನಡೆ |
ತಂದುದೊಬ್ಬರನೊಬ್ಬರಣೆವುತ ವರನೃಪಸ್ತೋಮ || ೨ ||

ಕೆಲವರು ಧನುವನು ನೋಡುತಿದು ತಾಂ | ಪ್ರಳಯ ಕಾಲದ ಸರ್ಪನೆಂದೆದೆ |
ಚಲಿಸಿ ಕೈಗಳಗವಸಣಿಗೆ ದೊಡಿಸಿದರು ಕಣುಗಳಿಗೆ ||
ಚೆಲುವ ಮಗಳನು ತೋರಿ ಈ ಭೂ | ತಳ ಪತಿಗಳನು ಬಿಲ್ಲ ನೆವದಿಂ |
ಕೊಲಲು ಕರೆಸಿದನೆಂದು ಹೊಯ್ದರು ಕಾಲವಹಿಲದಲಿ || ೩ ||

ಅರೆಬರಾ ಭೀತರೆನೆ ಕಂಡೆದೆ | ಗರಗಿದನುವಿನಗಸಣಿಯುಳಿದರು |
ಅರೆಬರದ ಬಲ ಬಂದು ಪೊಡವಟ್ಟೀಕ್ಷಿಸುತ ಕೆಲಕೆ ||
ಸರಿದರರೆ ಬರು ಅಭಯ ಮಂತ್ರ | ಸ್ಮರಣೆಯುಂ ಕೈನೀಡಿಯಿದು ಕೇ |
ಸುರಿಯೆನುತ ಮೊಗದೆಗದರಬಲೆಯರಟ್ಟ ಹಾಸದಲಿ || ೪ ||

ಬಂದು ಬಿಲ್ಲನು ಮೂವಳಸ ಬಲ | ಬಂದು ಕುಸುಮ ವಸುರಿದು ನೊಸಲಿಗೆ |
ತಂದು ಕರವನು ಬಳಿಕ ಮಂಡಿಯ ಹೂಡಿ ಸತ್ವದಲಿ ||
ಹಂದದೀ ಧನುವೆಂದು ಪಿಡಿದಾ | ರ್ಪಿಂದ ಗದಿದೊಡೆ ಸೆಳದುದು ಕ |
ಣ್ಸಂದಿ ನೆತ್ತರಕಾರಿ ಬಿದ್ದನು ಪಾಂಡ್ಯಧರಣೀಶ || ೫ ||

ನಗೆಗಡಲು ಘೂರ್ಣಿಸಿತು ದ್ರುಪದನ | ಮಗಳ ಕೆಳದಿಯರತ್ತಣಿಂ ಕೈ |
ಮಿಗೆ ಮುಸುಡ ದುಗುಡದಲಿ ಮುಸುಕನು ಬಲಿದು ಹಿಂಗಿದನು ||
ಬೆಗಡುಗೊಳ್ಳದೆ ಚೋಳರಾಯನು | ಬಿಗಿದ ಹುಬ್ಬಿನ ಕುಣಿವ ಮೀಸೆಯ |
ಬಗೆಯ ಬಿಗುಹಿನ ಬಿಂಕಕಾರನು ಬಿಲ್ಲಿಗೈತಂದ || ೬ ||

ತೊಡಚೆ ನೆಗಪಿದೊಡತ್ತಲಿತ್ತಲು | ಮಿಡುಕದಿರೆ ಧನು ಭರದಿ ದಂಡೆಯ |
ದೃಢಗೊಳಿಸಿ ಮೊಳಕಾಲನಿಳೆಯೊಳು ಬಲಿದೌಡುಗಚ್ಚಿ ||
ಜಡಿದು ನೆಗಪಲು ಹೊಂಕರಿಸಿ ಕಾ | ಲುಡಿದು ಮುಂಗೈ ವಡಿದು ಮೆಲ್ಲನೆ |
ಕೆಡೆದು ಘೋಳೆನೆ ನಗಿಸಿದನು ನೋಟಕರ ನೆರವಿಯನು || ೭ ||

ನೆರವಿ ನಕ್ಕರೆ ನಗಲಿ ಬಿಲ್ಲಿಗೆ | ಕರವ ನೀಡುವರಲ್ಲರವದಿರು |
ಧರಣಿಪರು ಕಡು ಭಂಡರೈನಿಮಗೇತಕೀ ನಗೆಯು ||
ತರುಣಿಯನು ಮನದೊಳಗೆ ವರಿಸಿದ | ತೆರದಿ ಬಿಲ್ಲನು ನಿಮ್ಮ ಕೈಯಲಿ |
ಧರಿಸಿ ನಗಿ ಬಳಿಕೆಂದು ಜರಿದರು ಕೆಲರು ಕೆಲಬರನು || ೮ ||

ಮಾಳವನ ಮದವುಡುಗಿದುದು ನಿಡು | ದೋಳು ಪುರಿದುದು ಕೇರಳನ ಮಣಿ |
ಮೌಳಿ ಹುಡಿಹುಡಿಯಾಯ್ತು ಚೇರನ ತೆಲುಗ ಮಲಗಿದನು ||
ಗೌಳರಾಯನ ಕೌಳುಹರಿದುದು | ತೌಳವನ ತಕ್ಕಳಿದುದವನೀ |
ಪಾಲರೆಲ್ಲರನೈದೆ ಗೆಲಿದುದು ದಿವ್ಯಕೋದಂಡ || ೯ ||

ಸೂಳೆಯರ ಬಿರುನಗೆಯ ದ್ರೌಪದಿ | ಯಾಳಿಯರ ಬಲು ಹಾಸ್ಯವಾನಿ |
ಸ್ಸಾಳಗಳ ಮರಯಿಸಿತು ಸುಡುಸುಡು ಹೆಣ್ಣ ಕೋಟಲೆಯ ||
ಖೂಳರೋ ಬಂಡರೊನೃಪರು ಪಾಂ | ಚಾಳೆಯಟ್ಟಿಕ್ಕದರೆ ಪಡೆಯರೆ |
ಕೂಳನಿದಕಾವಾರೆವೆಂದರು ಕೆಲಬರವನಿಪರು || ೧೦ ||

ಕಂಡು ಖಾತಿಯಲೆರ್ದನಾ ದೋ | ರ್ದಂಡ ವಿಕ್ರಮ ಕೌರವನು ಕೋ |
ದಂಡವನು ಬಲವಂದುಕೈ ನೀಡಿದನು ಕದುಕಿದನು ||
ಮಂಡಿಗೊಂಡೆತ್ತಿದೊಡೆ ಧನುಮಾ | ರ್ಕೊಂಡೊಡೆಯೆ ಮುಕ್ಕುರಿಸಿ ಬೀಳುತ |
ಡೆಂಡೆಣಿಸಿ ಕೈಹೊಯ್ದು ನಕ್ಕುದು ಕಾಮಿನೀ ಜನವು || ೧೧ ||

ಅತ್ತ ನೋಡಿದನವರ ನಿರೆತಲೆ | ಗುತ್ತಿದನುಯಿನ್ನೀ ಧನುವ ಪಿಡಿ |
ದೆತ್ತುವಗ್ಗಳವಾವನವನನು ಕಾಬೆವಲಯೆನುತ ||
ಅತ್ತ ಸರಿದನು ಮುಸುಡ ದುಗುಡದ | ಚಿತ್ತದಳಲನು ಕಂಡು ಪರಬಲ |
ಮತ್ತಗಜ ಕಂಠೀರವನು ಕಲಿಕರ್ಣನೈತಂದ || ೧೨ ||

ಈತನೇನರ್ಜುನನೋ ನೋಡಿದೊ | ಡಾತನಚ್ಚಾಗಿಹನೆ ಈರ್ವರ |
ಮಾತೆಯೋರ್ವಳೊ ಕಡುಚೆಲುವನೆಂದುದು ನೆರವಿ ಮತ್ತೆ ||
ಈತಗಾ ಧನು ಓತಡಿಂ ಫಲ | ಮಾತದೇನೀ ದ್ರೌಪದಿಯ ಪು |
ಣ್ಯಾತಿಶಯವನು ಪೊಗಳಲರಿದೆಂದುದು ಸಖೀನಿವಹ || ೧೩ ||

ಗೆಲಿದನಾದಡೆ ಈ ಧನುವನಾ | ಲಲನೆ ಕುರುಪತಿಗೆಂದು ಮಿಗೆ ತೋ |
ಳ್ವಲದಿನೆತ್ತಿದನೊತ್ತಿಗೊಲೆಯೊತ್ತಿದೊಡದೊಂದಿನಿತು ||
ಉಳಿದೊಡನೆ ಭೋರೈಸೆ ಕೈಯಿಂ | ದಿಳುಹಿ ಹೋದನು ಹೆಕ್ಕಳವ ಮು |
ಕ್ಕುಳಿಸಿದಲಬಲೆಯರುಗುಳಿದರು ಬಳಿಕಟ್ಟಹಾಸವನು || ೧೪ ||

ಬಿಡುಬಿಡಿನ್ನೀ ಧನುವನೆತ್ತುವ | ಪೊಡವಿಪತಿಗಳ ಕಾಣೆ ಮಗಳಿಗೆ |
ಕೊಡಿಸಿ ಕಳೆಯಲಿ ದೀಕ್ಷೆಯನು ಪಾಂಚಾಲ ಭೂಪ ||
ಕಡಿಯ ದೊರಸದ ಮರನ ಬಿಲುಹುಳು | ಹಿಡಿದು ಕಡುವುದೆ ತಪ್ಪದೆಂದೊ |
ಗ್ಗೊಡೆಯದಾಡಿದರಂದು ಪೆಚ್ಚಿದ ನೋಟಕರ ನೆರವಿ || ೧೫ ||

ಭೂಮಿಪಾಲರ ಚೆಲುವಿನೀ ವಧು | ಧೂಮಕೇತುವೊ ವಿಕ್ರಮ ಪ್ರೋ |
ದ್ದಾಮ ಸೃಷ್ಟಿಗೆ ಕಾಲದಂಡವೊ ಚಂಡಕೋದಂಡ ||
ಆ ಮಹಾ ಮಹಿವರರ ಮಾನದ | ಸೀಮೆಯಳಿದುದು ಹಾಸ್ಯ ಭಾಜನ |
ಕಾಮುಕರು ತಾವಾದರೆಂದರು ನಗುತ ಭೂಸುರರು || ೧೬ ||

ಸ್ಮರನು ಹರಿಮೊದಲಾದ ಹರಿಕುಲ | ದರಸುಗಳು ಮಾಗಧನು ಬಾರದೆ |
ನರನು ಮೊದಲಾದವರಿರದೆಯಿವರಿದ್ದು ಫಲವೇನು ||
ನೆರೆದು ಭಂಡಾದರು ಮಹಾ ಭೂ | ವರರುಯೀಕೆಯನೊಲಿಸಿವೊಡೆ ಸೌಂ |
ದರತೆ ತೋಳ್ವಲಮಿಲ್ಲವೆಂದನು ದ್ರುಪದನಂದನನು || ೧೭ ||

ಬಳಿಕ ಪಾಂಚಾಲನು ಧರಾಮರ | ರೊಳಗೆ ದೋರ್ವಳ ಸಾಳಿಯಾದವ |
ಘಳಿಲನೆತ್ತಲಿ ಬಿಲ್ಲನೀ ಕನ್ಯಾಸುರತ್ನವನು ||
ತಳೆಯಲೆಂದಾ ವಿಪ್ರರರು ಸಭೆ | ಯೊಳಗೆ ಸಾರಿಸಿ ಕೇಳ್ದು ಭೂಪತಿ |
ಗಳಿಯನಾಗಿಯುಪಾಧ್ಯರೆಂದರು ನಗುತ ತಮ್ಮೊಳಗೆ || ೧೮ ||

ಕರೆದು ಕನ್ಯಾದಾನಗೊಟ್ಟೊಡೆ | ಕರವನಾನುವೆವಲ್ಲದೀ ಭೂ |
ವರರವೊಲು ಬಿಲ್ಲೆತ್ತಿ ನಗೆಗೆಡೆಯಹರುನಾವಲ್ಲ ||
ಮರುಳುಗಳೆ ಈ ಧನುವನೆತ್ತದೊ | ಡರರೆನಗೇಂ ಪಳಿವೆ ಶಾಸ್ತ್ರದ |
ಸುರಗಿಕಾರರು ನಾವು ನೋಡಲಿ ನೃಪತಿಸಾಧನೆಯ || ೧೯ ||

ವಾರಣಂಗಳು ತಾಗೆ ಚಲಿಸದ | ದಾರುವಧುಯೆಳೆ ಹುಲ್ಲೆ ನೂಕಲು |
ತೇರಯಿಪುದೇ ದಿವ್ಯ ಕೋದಂಡವನು ನೆಗಪುವೊಡೆ ||
ವೀರಪಾರ್ಥಿವರಿಳಿದರೆಂದರೆ | ಹಾರುವರಿಗದು ತಕ್ಕುವುದೇ ನಾ |
ವಾರು ಬಿಲ್ಲಾರಾಕೆ ನಮಗೇಕೆಂದುದಾ ಸಭೆಯ || ೨೦ ||

ನೆರೆದ ವಿಪ್ರರ ಸಭೆಯಲಿರ್ದಾ | ನರನು ನಸುನಗುತಣ್ಣನಾನನ |
ಸರಸಿಜವನೀಕ್ಷಿಸಲು ಹುಬ್ಬಿನ ಬೆಸನ ಕೊಡೆಪಡೆದು ||
ಸ್ಮರಿಸಿ ಗುರುಪಂಚಕವನೆದ್ದೊಂ | ದಿರವನೀಕ್ಷಿಸಿ ಆರು ನಿಮ್ಮನು |
ಕರೆದರೋ ದಕ್ಷಿಣೆಗೆನುತ ನಕ್ಕರು ಧರಾಮರರು || ೨೧ ||

ಭಟ್ಟರೆದ್ದಿಂದಾವ ಕಾರ್ಯಕೆ | ಗುಟ್ಟು ಘನವಾಗಿದೆ ನೃಪಾಲರ |
ನೊಟ್ಟಯೆಸಿದಾ ಧನುವನೆತ್ತಲು ಗಮಿಯಿಸುವ ಪರಿಯೊ ||
ಹೆಟ್ಟುಗೆಯ ಬಯಸಿದಿರೆಯೆದೆಯಲಿ | ನಟ್ಟವಲೆ ಹೂಗಣೆಗಳೆಂದವಲೆ |
ಅಟ್ಟಹಾಸವನೆಸಗೆ ನಸುನಗುತಿರ್ದನಾ ಪಾರ್ಥ || ೨೨ ||

ತಟ್ಟು ನಾಮದ ಬೆರಳ ದರ್ಭೆಯ | ಹೆಟ್ಟುವಸ್ತ್ರದ ಬಳಲುಗಚ್ಚೆಯ |
ಬಟ್ಟದರ್ಭೆಯ ಕರಡಗೆಯನವುಂಕಿದ ಕೌಂಕುಳಿನ ||
ಮುಟ್ಟಿ ತುಂಬುವ ಯಜ್ಞ ಸೂತ್ರದ | ಗಟ್ಟಿ ಛಾಂದಪ ನಿಮ್ಮನೊಲಿಯದೆ |
ಕೆಟ್ಟಳಾ ಪಾಂಚಾಲೆಯೆಂದರು ನಗುತ ಭೂಸುರರು || ೨೩ ||

ಹೂರಿಗೆಯೊ ಲಡ್ಡುಗೆಯೊ ದೋಸೆಯೊ | ಗಾರಿಗೆಯೊ ಪಾಯಸವೊ ಕಮ್ಮನ |
ನೀರುದುಪ್ಪವೊ ತೊಗೆಯೊ ಕಳವೆಯ ಕೂಳೊ ಕೆನೆಮೊಸರೊ ||
ಕ್ಷೀರವೋ ಈ ಧನುವೊ ದ್ರೌಪದಿ | ಹಾರುವಿತಿಯೋ ನಮಗೆ ಕೊರತೆಯ |
ತಾರದಿರಿ ಆರಾಧ್ಯರೇ ಯೆಂದುದು ಬುಧಸ್ತೋಮ || ೨೪ ||

ನಾವು ಕೊರತೆಯ ತಾರೆವಭವಕೃ | ಪಾಲಲೋಕನವುಂಟು ಭೂಭುಜ |
ರಾವ ವಿಜಿಗೀಶುಗಳು ನೀವರೆಘಳಿಗೆ ನೋಡುತಿರಿ ||
ದೇವನಿರ್ಮಿತ ಚಾಪವನು ಭೂ | ದೇವಸಭೆಯೊಳಗೋರ್ವನೇ ನರ |
ನೋವೊಗೆಲಿದಪನೆಂಬ ಕೀರ್ತಿಯ ನಿಮಗೆ ತಹೆನೆಂದ || ೨೫ ||

ಎಂದು ವಿಪ್ರರ ಬೋಳೈಸಿ ನಡೆ | ತಂದನಾ ಸಭೆಯೊಳಗೆ ಶಕ್ರನ |
ನಂದನನು ಪೋಪಂದವನು ನೆರೆಕಂಡು ಬೆರಗಾಗಿ ||
ಬೆಂದುಹೋದಾ ಪಾರ್ಥನಿಂದೇಂ | ಬಂದನೋ ಈ ವೇಷದಲಿ ಇವ |
ನೊಂದು ಮನದಂಘಲಣೆ ಲೇಸೆಂದುದು ಬುಧಸ್ತೋಮ || ೨೬ ||

ಹಾರುವನೊ ಮೇಣ್ ಗೂಢವೇಷದ | ಧಾರುಣೀಶನೊ ವೀರರಳವನ |
ದಾರು ಬಲ್ಲರು ಭದ್ರಲಕ್ಷಣ ಮೂರ್ತಿತಾನಹುದು ||
ಬೋರನೇತುಗು ಚಾಪವನು ಗಗ | ನೋರು ಮತ್ಸ್ಯವನೆಸುಗುವರಿಸುಗು |
ನಾರಿಯನು ಸುಖಕಾರಿಯನುಯೆಂದರು ವಿವೇಕಿಗಳು || ೨೭ ||

ಸ್ಮರ ವಿಕಾರದ ಮೂರ್ತಿಯೋ ಅರಿ | ಮರುಳೊ ಪರಿಹಾಸಕನೊ ವಿಪ್ರರ |
ನೆರವಿಯನು ಮಿಗೆನಗಿಸಿಯೆತ್ತುವೆನೀಧನುವವನೆಂದು ||
ಭರದಿ ಬಹಪರಿಯೋಯೆನುತ ಭೂ | ವರರ ಸಭೆ ಗಹಗಹಿಸೆ ಅವರನು |
ಸರಕುಮಾಡದೆ ಬಂದನರ್ಜುನ ಗಾಂಢಿವದ ಹೊರೆಗೆ || ೨೮ ||

ಇತ್ತ ನೋಡೌ ತಂಗಿ ಹಾರುವ | ನೆತ್ತ ಬಿಲ್ಲೆತ್ತಕಟಬೇಟದ |
ಬಿತ್ತು ಮೋಹದ ಮುತ್ತು ಬಯಕೆಯ ತುತ್ತು ಬಂದಿತಲ ||
ನೆತ್ತಿದನು ತಾ ಬಿಲ್ಲನಾಗಳೆ | ಯಿತ್ತ ನೆರೆಯನು ನಿಮ್ಮ ಗೀತಗೆ |
ಪತ್ತುಗೆಯಲಾ ನಿಮ್ಮಮನವೆಂದುದು ಸತೀನಿವಹ || ೨೯ ||

ಹಾರುವಿತಿ ನೋಡಕ್ಕ ನಿಮ್ಮಯ | ಹಾರುವನು ಸಿಂಗಾರವನು ಸುಕು |
ಮರರಾರನು ಚೆಲುವಿನಿಂ ಮೆಚ್ಚದಮನಕೆ ಸೊಗಸು ||
ಸೇರಿತಲೆ ಮನಸಿಜನ ಹೂಗಣೆ | ಯಾರ ಕುಣಿಯಿಸದೆನಲು ದ್ರುಪದಕು |
ಮಾರಿ ನೋಡಿದಳಾತನನು ತಲೆವಾಗಿದಳು ಬಳಿಕ || ೩೦ ||

ತೆಳುಮುಗಿಲ ಮರೆಯುದಯಿಪರ್ಕನ | ನಳಿನಿ ಎಲೆ ಮರೆಯಿರ್ದ ಕುಸುಮವ |
ನಳಿನಿಯರಿವಲೊಲರಿದಳವಳಾದೇಶವಲ್ಲಭನ ||
ಬಳಿಕ ನಿಧಿಗಾ ದೀಪವರ್ತಿಯ | ಘಳಿಲನೆರಗುವ ತೆರದಿ ಬಗೆ ಸಂ |
ಚಳಿಸದೆರಗಿತು ಪುಳಕ ಗುಡಿಗಟ್ಟಿದಳು ಕಣುಸೋಂಕೆ || ೩೧ ||

ಅಂದು ಶಾರ್ಙ್ಗವ ಶಾರ್ಙ್ಗಯೇರಿಸಿ | ದಂದದಲಿ ಗಾಂಡಿವದ ಗಾಂಡೀವಿ |
ಯೊಂದು ವಹಿಲದಲೆತ್ತಿಯೇರಿಸಿ ಜೀವಿ ಜೇವೊಡೆದು ||
ಒಂದೆ ಶರದಿಂ ನೆಳಲನೀಕ್ಷಿಸಿ | ನಿಂದು ಯಂತ್ರದ ಜಶದೆಡದ ಕ |
ಣ್ಣೊಂದೆ ನಿಮಿಷದಲೆಚ್ಚು ಕೆಡಹಿದನಾಯೆನಲು ಜನವ || ೩೨ ||

ಅರರೆ ಮಝ ಕೋದಂಡ ಲಕ್ಷ್ಮೀ | ಸರಸಿಜಾಂಬಕ ಚೌಪವಿದ್ಯಾ |
ವರಶರಾಸನೆ ಸಾರ್ವಭೌಮನೆಯೆಂದರರ್ತಿಗಳು ||
ಯಿರದೆ ಜಯಿಸಿದೆವೆಂದು ವಿಪ್ರರ | ನೆರವಿ ನಲಿದುದು ನೃಪರ ಮೂಗಿಗೆ |
ಬೆರಳು ಬಂದುದು ದ್ರುಪದನವರಾನಂದವೈದಿದರು || ೩೩ ||

ನೆನೆದನಾ ಪಾಂಚಾಲನಂದಾ | ಮುನಿ ನಿರೂಪಿಸಿದಂದವನು ಪಾ |
ರ್ಥನ ಸುರೂಪನು ತೋಳ್ವಲವತಾ ಮುನ್ನ ಬಲ್ಲುದರಿಂ ||
ಮನದಲರ್ಜುನನೆಂದೆ ನಿಶ್ಚಯ | ವನು ತಳೆದು ಮುನ್ನೆನೆದ ಕಾರ್ಯವು |
ತನಗೆ ಸಿದ್ಧಿಸಿತೆಂದು ಸಂತಸದಂತವೈದಿದನು || ೩೪ ||

ಬಳಿಕ ಗಾಂಡಿವಗೊಂಡು ಗಾಂಡಿವಿ | ಕಲಿಗಳಾ ನಾಲ್ವರನಡುವೆ ಸಂ |
ಚಳಿಸದಿರ್ದನು ವಿಪ್ರಸಭೆ ಹೆಕ್ಕಳದಿ ಕುಣಿದಾಡೆ ||
ನಳಿನಮುಖಿ ರಥದಿಂದ ಭೂಮಿಗೆ | ಕೆಳದಿಯರು ಸಹವವತರಿಸಿದಳು |
ತಳೆದಳು ರಮಣಿ……………… || ೩೫ ||

ಒಂದಿ ಬರಲಳಿಮಾಲೆ ಕಡೆಗ | ಣ್ಣಿಂದೆ ಹೂಗಣೆಮಾಲೆ ಪೊಡೆವುತ |
ಮುಂದೆ ಬರಲೋಲೈಸಿ ಬರುತಿರೆ ಕೆಳದಿಯರಮಾಲೆ ||
ಹಿಂದೆ ಬರೆ ಸರ್ವರವಿಳೋಕನ | ದೊಂದು ಮಾಲೆ ಬೆಡಂಗಿ ದ್ರೌಪದಿ |
ಬಂದು ಮಾಲೆಯ ಸೂಡಿದಳು ಫಲುಗುಣನ ಕಂಠದಲಿ || ೩೬ ||

ಆಕೆಯಂದೈವರ ನಡುವೆ ಸುವಿ | ವೇಕಿ ನಿಲೆ ಜನವಾಗಳೀಕ್ಷಿಸಿ |
ಈ ಕುವರರಿರಲತ್ತಲೈವರ ಸಾರಿದಳು ನೋಡ ||
ಈಕೆಯೈವರ ದ್ರೌಪದಿಯು ಯೆನೆ | ಲೋಕದವರೈವರಿಗೆ ಪೆಂಡತಿ |
ಈಕೆಯೊರ್ವಳೆಯೆಂಬರತಿ ಪಾತಕದ ಹೊಲೆನುಡಿಯ || ೩೭ ||

ಕಷ್ಟಕಾಲದೊಳಿಂದು ಜನದೊಳ | ಗಿಷ್ಟರೀಕ್ಷಿಸಿದಬಲೆಯರ ನೊಡ |
ವುಟ್ಟಿದವರೆನೆ ಬಗೆವರೆನಲಾ ಪುಣ್ಯಕಾಲದಲಿ ||
ಶಿಷ್ಟರೊಡವುಟ್ಟಿದವರೈವರು | ಹೆಟ್ಟುಗೆಯನೋರ್ವಳನು ರಮಿಯಿಸೆ |
ಸೃಷ್ಟಿಗವರಭಿವಂದ್ಯರಹರೇ ಭೂಪ ಕೇಳೆಂದ || ೩೮ ||

ಹೋಗಲಾ ಮಾತೇಕೆ ದ್ರುಪದ ಸ | ರಾಗಿಯವರನು ಸೇರೆ ಖಡುಗವ |
ತೂಗುತಾ ಕ್ಷಣವಂಗರಕ್ಷಕ ಕೋಟಿ ಬಳಸಿದುದು ||
ಹೂಗಣೆಯಗಣೆಯಳಿಯನನು ಚೆಲು | ವಾಗಿ ಮಗಳನು ರಥವನೇರಿಸಿ |
ಆಗಳಾ ಪಾಂಡುಜರು ಕುಂತಿಸಮೇತಪುರವೈದೆ || ೩೯ ||

ಕುರುಪತಿಯು ಮಸಗಿದನು ದೊರೆಗಳ | ಕರಸಿ ಮೂಗನು ಕೊಯಿದ ದ್ರುಪದನು |
ನೆರೆದು ಭಂಡಾದಿರೆಲೆ ನಿಮ್ಮಯ ಮುಂದೆ ದ್ರೌಪದಿಯ ||
ತಿರುವ ಹಾರುವ ಕೊಂಡು ಹೋಹುದ | ನರಸುಗಳ ನೋಡುವಿರೆ ತಿರಿಕನ |
ತಿರಿಕನನೆ ಮಾಡದೊಡೆ ನಿಮ್ಮದು ಮೀಸೆಯೆಲ್ಲೆಂದ || ೪೦ ||

ಏನ ನೋಡುವಿರಿನ್ನು ನಿಮ್ಮಭಿ | ಮಾನಭಂಗನ ಕಂಡು ಬಳಿಕನು |
ಮಾನವೇತಕೆ ಇಡಿಕಿದೆಡೆಯೊಳಗರಸಿ ಕೊಳಬೇಕು ||
ಮೋನವನು ಬಿಡಿ ನಾವು ದ್ರುಪದನ | ಮಾನಿನಿಯ ಕಣ್ಣಿರತೆಯಲಿ ದು |
ಮ್ಮಾನಗೆಸರನು ತೊಳವವೆಂದನು ಕೌರವರರಾಯ || ೪೧ ||

ಎಂದು ನೃಪರನು ಮೂದಲಿಸಿ ತಂ | ನೆಂದವರು ಸಹವೆದ್ದುಯೆಡೆಯಲಿ |
ನೊಂದ ನೃಪರನಿಬರು ಬಳಸಿ ಮುತ್ತಿದರು ಕೋಟೆಯನು ||
ಒಂದು ಕಡೆಗೋಸರಿಸಿತಿಳೆ ಕವಿ | ತಂದ ಸೇನೆಯ ಪದಹತಿಗೆ ರಣ |
ದುಂದುಭಿಗಳಳರಿಸಿದವಾಶಾಗಜವನಡಿಗಡಿಗೆ || ೪೨ ||

ಮುತ್ತಿಗೆಯ ಬಿಡಿಸಿದರು ದ್ರುಪದನ | ತೆತ್ತಿಗರು ಪರಿವಾರವತಿ ನಿಶಿ |
ತಾಸ್ತ್ರಗಳ ವೇಹಾಳಿಯಲಿ ಭೀಮಾರ್ಜುನರು ರಥವ ||
ಒತ್ತಿ ನೂಂಕಿದರಹಿತ ಪುರಶಿಖಿ | ನೇತ್ರನಾ ಗಾಂಡೀವಿ ಹೊಸಮಸೆ |
ವೆತ್ತ ಕೂರ್ಗಣೆಯಿಂದ ಹೂಳಿದನಹಿತ ಸೈನಿಕವ || ೪೩ ||

ಅನಿಲಸುತನತ್ತಂಬು ವರುಷದ | ಪೊನಲೊಳಗೆ ಮುಳುಗಿಸಿದ ರಿಪು ವಾ |
ಹಿನಿಯನಿದು ಪಾಂಚಾಲ ಪುತ್ರಿಯ ಮದುವೆಯವತಳದೊ ||
ಎನುತ ದೇಶಾಧೀಶ್ವರರು ಒಂ | ದಿನಿತು ತಡೆಯದೆ ಹಾದಿಗೊಂಡರು |
ಇನಸುತನು ಬೊಬ್ಬಿರಿದು ನಿಂದನು ಸರಳಸರಿಗರಿದು || ೪೪ ||

ಆರು ನಿಲಬಹುದಮಮ ಶಕ್ರಕು | ಮಾರಕನ ಗಾಂಡೀವದಿದಿರಲಿ |
ಭೋರನೆರಗುವ ಕೆಂಗರಿಯ ಕೂರ್ಗಣೆಗೆ ಮೊಗದೆಗೆದು ||
ಹಾರುವರೊಳತಿ ಹಾರುವುದು ಕಡು | ವೀರವೇ ನಮಗೆಮ್ಮ ಮುಳಿಸಿಗೆ |
ಬಾರಿಯಳಾಗಿರಲಿ ದ್ರುಪದನು ರಾಯನೆಡೆಯೆಂದ || ೪೫ ||

ತಿರುಗಿದನು…….ಪಮುಕ | ಮುರಿದನಶ್ವತ್ಥಾಮ ಹಿಂಗಿದ |
ನಿರದೆ ಶಲ್ಯನು ಸರಿದ ದುಶ್ಶಾಸನನು ತೊಲಗಿದನು ||
ಪುರದ ಹಾದಿಯ ಹತ್ತಿದನು ದು | ರ್ಮರುಷಣನು ಹಸ್ತಿನ ಪುರದ ತಂ |
ಮರಮನೆಗಳೊಳು ನಿಂದರವರವನೀಶ ಕೇಳೆಂದ || ೪೬ ||

ಹಿಂದೆ ಬಂದರಸುಗಳ ಕೌರವ | ಗೆಂದರವರೇ ಪಾರ್ವರಲ್ಲ ಸು |
ರೇಂದ್ರನಂದನನೋರ್ವರನು ವಾಯುನಂದನನು ||
ಬಂದೊಡೆದೆ ಹಳಿಲೆಂದು ಭೋರನೆ | ಬಂದು ಗಾಂಗೇಯಾದಿಗಳಿಗಾ |
ತಂದ ಸುದ್ದಿಯ ಪೇಳಿದನು ಶ್ರಮದಿಂ ಸುಯೋಧನನು || ೪೭ ||

ಕೇಳಿದನು ಬಿಲ್ಲೋಜನವನೀ | ಪಾಲರನು ಭಂಗಿಸಿದ ದರ್ಪವಿ |
ಶಾಲ ಗಾಂಡಿವವೆತ್ತಿಯ ನಿಮಿಷವನು ನಿಮಿಷಕೆಸುವ ||
ತೋಳ ಬಲವರ್ಜುನಗವಲ್ಲದೆ | ಮೇಳಿಸದು ಮಿಕ್ಕವರೊಳೆನೆ ಭೂ |
ಪಾಲ ವಿದುರಾದಿಗಳು ನಿರ್ಧರಿಸಿದರು ಮನದೊಳಗೆ || ೪೮ ||

ಬಳಿಕ ದೂತರ ಕಳುಹಿ ಪಾಂಡುಜ | ರೊಳವರಿದು ಮಾಹೇಂದ್ರನಗರಕೆ |
ತಳೆದರಾ ಗಾಂಗೇಯ ದ್ರೋಣ ಧೃತರಾಷ್ಟ್ರ ||
ಘಳಿಲನಾ ಪಾಂಡುಜರು ದ್ರುಪದನು | ಬಳೆದ ರಾಗದಲಿದಿರುಗೊಂಡ |
ಗ್ಗಳದ ಭಕ್ತಿಯಲೆರಗಿದರು ಮರುಗಿದರು ಮನದೊಳಗೆ || ೪೯ ||

ಅರಮನೆಯನೈದಿದರು ಹರುಷೋ | ತ್ಕರುಷದಲ ಕುಳ್ಳಿರ್ದು ನೀವಂ |
ದರಗಿನಾವಾಸದಲಿ ತಪ್ಪಿದ ಪೋದ ಬಂದಿರವ ||
ವಿರಚಿಸೆನೆ ಕೇಳಜ್ಜ ನಿಮ್ಮಯ | ಕರುಣವಿರಲದು ನಮಗೆ ಹಾನಿಯ |
ತರಲು ಬಲ್ಲುದೆಯೆಂದನಾ ಶಾಂತಜಗೆ ಯಮಸೂನು || ೫೦ ||

ಬೆಂದುದಾ ಲಾಕ್ಷಾಗೃಹವು ನಾ | ವಂದೆ ಕನ್ನವಸವೆದು ಹೋದೆವ |
ದೊಂದೆಡೆಯೆ ಪಾಂಚಾಲ ಕಾಡನು ಪೊಕ್ಕೆವಸುರರನು ||
ಕೊಂದೆವಿಂತಬಲೆಯರನಾಂತೆವು | ಬಂದೆವಿಂತೆಮ್ಮ ಈ ಸುಕೃತವದು |
ತಂದು ನಿಮ್ಮಡಿ ತೋರಿತೆಂದನು ಧರ್ಮನಂದನನು || ೫೧ ||

ಮಗನೆ ನೀವೆಲ್ಲರು ಬಳಲಿದಿರಿ | ಜಗದಲಪಯಶವಾದುದಿತ್ತಲು |
ಮೃಗಧರಾನ್ವಯ ನೀನು ಕ್ಷಮಿಯಿಪುದೆಂದು ಭೀಷ್ಮರ್ಗೆ ||
ನಗುತ ಬಿನ್ನಹ ಮಾಡಿದನು ನೆ | ಟ್ಟಗೆ ಸುಯೋಧನನೆಂದು ನಮಗ |
ಚ್ಚುಗವ ಮಾಡುವನಲ್ಲ ಕರ್ಮದ ಶೇಷಫಲವೆಂದ || ೫೨ ||

ಮೆಚ್ಚಿದೆವು ಸುಜನತೆಗೆ ಮಗನೇ | ಅಚ್ಚುಗವು ನಿಮಗಿಲ್ಲ ಮನದೊಳು |
ನಚ್ಚಿ ವಿಮಲಾಪ್ತೋಕ್ತಿಯರಿದಾಚರಿಪ ಕತದಿಂದ ||
ಪೆಚ್ಚಿದೀ ಧರ್ಮದಲಿ ಧರ್ಮಜ | ನಿಚ್ಚಮಿರುತಿಹುದೆಂದು ನಿಮ್ಮೊಳು |
ಮಚ್ಚರವು ಬಾರದವೊಲಿಂದ್ರ ಪ್ರಸ್ಥದೊಳಗೆಂದ || ೫೩ ||

ಗುರುವಚನವ ದಲಂಘನೀಯವು | ಕರುಣದಿಂ ಬೆಸಸಿದವೊಲಿಹೆವೆನೆ |
ಹರುಷವನು ತಳೆದೆದ್ದು ಬಂದು ಸುಯೋಧನನ ಬೇರೆ ||
ಕರೆದು ನಯಭಯದೋರಿ ನಾನಾ | ಪರಿಯೊಡಂಬಡವೇಳ್ದು ಬಳಿಕಾ |
ಕುರುಪತಿಯ ಕಳುಹಿದನು ಹಸ್ತಿನಪುರಕೆ ಗಾಂಗೇಯ || ೫೪ ||

ವರ ಮುಹೂರ್ತವು ಪಾರುತಿದ್ದ | ಚ್ಚರಿ ವಿಭವದಲಿ ದ್ರುಪದ ಭೂಪನು |
ಸುರನದಿಯ ಸುಕುಮಾರನುಂ ದ್ರೌಪದಿ ಧನಂಜಯಗೆ ||
ಪರಿಣಯನವನು ಮಾಡದರು ಬೇಳ್ | ಪರ ಬಯಕೆಯನು ನೀಡಿದರು ಮ |
ತ್ತಿರದೆ ಸಂತಸಗೂಡಿದರು ತದನಂತರದಲವರು || ೫೫ ||

ಹರುಷದಲಿ ಧೃತರಾಷ್ಟ್ರವಿದುರರು | ವೆರಸಿ ಕುಂಭಜಸಹಿತ ದ್ರುಪದನ |
ಕರಸಿಯುಡುಗೊರೆಗೊಟ್ಟು ಕಳುಹಿಸಿಕೊಂಡು ಕುಂತಿ ಸಹ ||
ಸುರಸ ಪಾಂಡುಜರೊಡನೆ ದ್ರೌಪದಿ | ವೆರಸಿ ಪೊರವಂಟನು ಪುರವನಾ |
ಸುರನದಿಯ ಸುಕುಮಾರನಮರಾಧೀಶ ವೈಭವದಿ || ೫೬ ||

ದ್ರುಪದನಿತ್ತಾ ಬಳುವಳಿಗಳಾ | ದ್ವೀಪಹಯವ್ರಜವಸ್ತ್ರಭೂಷಣ |
ವಿಪುಳ ಪೆಟ್ಟಿಕೆಗಳ ಸಹಸ್ರ ಸಖೀಜನದ ಮೆರೆವ ||
ಚಪಳ ವಾಮನ ಕುಬ್ಜಮೂಕಾ | ನುಪಮ ಗಾಯಕ ಗಾಯಿನಿಯರೀ |
ಕ್ಷಿಪ ವಿಡಾಯದಿ ಬಂದಳಂದಳದೊಳಗೆ ಪಾಂಚಾಲಿ || ೫೭ ||

ಗಗನ ಪೂತವೊಲೆಸೆದವಾ ಸ | ತ್ತಿಗೆಗಳಾಡಿದವೈದೆ ಚವಲಗ |
ಳೊಗೆದ ಯಾಚಕ ಕಳಕಳವು ತೂರ್ಯರವ ಪೇಳೆರದು ||
ಜಗವ ಬಳಸಿತು ದ್ರುಪದನಾ ಭೋ | ಗಿಗಳ ಬೀಳ್ಕೊಂಡತ್ತ ಪೊಳಲಿಗೆ |
ಮಗುಳಿದರು ಪಾಂಚಾಳ ಧೃಷ್ಟದುಮ್ನರೊಲವಿಂದ || ೫೮ ||

ವರಶತೇಂದ್ರ ವಿನಮ್ರ ಜಿನಪತಿ | ಚರಣ ಸರಸೀಜಾತ ನವ ಮಧು |
ಕರ ವಿರಾಜಿತ ಸುಕವಿ ಸಾಳುವ ರಚಿತ ಮೃದುಲಲಿತ ||
ಪರಮ ನೇಮೀಶ್ವರನ ಪಾವನ | ಚರಿತೆಯೊಳಗೊಂಬತ್ತನೆಯದಿರು ||
ದೊರೆವಡೆದದಭಿವಿನುತ ಪಾಂಡವಪರ್ವ ಉರ್ವಿಯಲಿ || ೫೯ ||

|| ಅಂತು ಸಂಧಿ ೩೭ಕ್ಕಂ ಮಂಗಲಮಹಾ ||