ಸಂಧಿ ೩೮

ಕರಸಿ ಪಂಚಪ್ರಸ್ತದಿಂ ನಿಜ | ಪುರಕೆ ಕುರುಪತಿ ಜೂಜಿನಿಂದಾ |
ಧರೆಯನೆಳೆದರೆ ಪಾಂಡವರು ವನವಾಸವೆಯ್ದಿದರು || ಪದ ||

ಶ್ರೀಲಲನೆಯನು ವಕ್ಷದೊಳು ತುದಿ | ನಾಲಗೆಯೊಳತಿ ಸತ್ಯ ವಚನವ |
ತೋಳೊಳಮರಜಯಾಂಗನೆಯನಾಳುತ ನಿರಂತರದಿ ||
ಭೂಲಲನೆಯನು ರಾಮಚಂದ್ರನ | ಮೇಲುಪಂತಿಯನಾಳ್ದು ಧರ್ಮವಿ |
ಶಾಲ ಚರಿತನದೀನನೆಸೆದನೊ ಧರ್ಮನಂದನನು || ೧ ||

ಸುರನದಿಯು ಮೊದಲಾದ ತೆಂಕಣ | ಶರಧಿ ಪರ್ಯಂತೋರ್ವರೆಯನ |
ಚ್ಚರಿಯ ವೈಭವದಲಿ ನಿರಂತರ ಪಾಲಿಸುವುದೊಲಿದು ||
ವರ ನಿಜಾನುಜರೊಡನೆ ಹರುಷದೊ | ಳಿರು ಯುಧಿಷ್ಠಿರ ಎಂದು ಬಳಿಕಾ |
ಕುರುಪತಿಗೆ ಪೇಳದಿರು ಬುದ್ಧಿಯನಾ ವಿಭೋತ್ತಮರು || ೨ ||

ಉರಗ ಕೇತನ ಕೇಳು ಸಾಮಾ | ನ್ಯರೆ ವಿಚಾರಿಸೆ ಪಾಂಡುಜರು ಮ |
ಚ್ಚರವ ಮನದೊಳು ನೆನೆಯದಿರು ನಿನಗನ್ಯರಲ್ಲವರು ||
ಗುರುವಚನವಿದು ನಂಬು ಧರ್ಮಾ | ಚರಣರವರದರಿಂದ ನಿನ್ನೊಳು |
ಬರಿದೆ ತಪ್ಪರು ಕೂಡಿ ನಡೆಯೆಂದನು ನದೀಸುತನು || ೩ ||

ತಂದೆಯೆಂದುದು ಬುದ್ಧಿ ಕೇಳೆಲೆ | ಕಂದ ಪಾಂಡವು ನಾನುಮೆಂತೊಲ |
ವಿಂದ ನಡೆದೆವು ಪಾಂಡುಜರು ನೀನುಂ ನಡೆವುದಂತು ||
ಎಂದನಾ ಧೃತರಾಷ್ಟ್ರನಹುದಹು | ದೆಂದು ದೈವದ ಬಲವವರಿಗುಂ |
ಟೊಂದಿ ನಡೆವುದೆ ಬುದ್ಧಿಯೆಂದನು ಕುರುಪತಿಗೆ ವಿದುರ || ೪ ||

ಅವರಿಗಾದುದು ದೈವಬಲ ಗಡ | ನವಗೆ ದುರ್ಲಭವಾದುದೇಯೆನ |
ಲವನಿಪತಿಕೇಳಿದನು ಲಾಕ್ಷಾ ಗೇಹದುರಿಯೊಳಗೆ ||
ತವದೆ ದೈತ್ಯರನಿಕ್ಕಿ ಗದೆಯನು | ಯುವತಿಯರನಿರೆ ಪಡೆದು ಬಲುಗಾಂ |
ಡಿವದ ಗಳಿಸಿದರದಕೆ ಪೇಳಿದೆನೆಂದನಾ ವಿದುರ || ೫ ||

ಓಡಿದರು ನಟ್ಟಿರುಳು ಕಾಡನು | ಕೂಡಿದರು ಹುಲು ರಕ್ಕಸರುಗಳ |
ಕೂಡಣೆದು ಬಡಿವಣೆದು ಕಪಟದ ಬಿಲ್ಲನೆತ್ತಿದಡೆ ||
ಆಡುವಿರಿಲಧಟೆಂದು ಪಾರ್ವರ | ಕೂಡೆ ಕಾಳಗವೇಕೆನುತ ಕೈ |
ಮಾಡದಾನಿರೆ ವೀರರಾದರೆ ಯೆಂದನಾ ಕರ್ಣ || ೬ ||

ಎನಲು ನಸುನಗುತೆಂದನಾ ದ್ರೋ | ಣನು ವಿದಿತ ಕುರುವಂಶ ಭಾನುಗ |
ಳನು ನಯೋಕ್ತಿಯನೆಂದಡಲ್ಲೆ ನಲೇಕೆ ನಿಮಗದನು ||
ಎನೆಸುಯೋಧನ ವಿಷದ ಲಡ್ಡುಗೆ | ಯಿನಿದು ಮದ್ದಿನ ಕೈಪೆವೊಲು ಕಡೆ |
ಗಿನಿದುಗೊಡುವುದೆ ಎಂದೊಡಂಬಡಿಸಿದನು ಧೃತರಾಷ್ಟ್ರ || ೭ ||

ಬಳಿಕ ಗಾಂಗೇಯಾದಿಗಳು ನಿ | ರ್ಮಲ ಯುಧಿಷ್ಠಿರ ನೃಪನ ಮನ್ನಿಸಿ |
ದೊಲಿದು ಕಳುಹಿಸಿಕೊಂಡು ಹಸ್ತಿನಪುರವನೈದಿದರು ||
ತಳುವದೀ ಯಮಸೂನು ವರನಿನ | ಗಿಳೆಯದಿಂ ಪೊರಮಟ್ಟ ದೈತ್ಯರ |
ಗೆಲಿದ ತಮ್ಮಂದಿರ ಪರಾಕ್ರಮವಾದಿಯಾದವನು || ೮ ||

ಬರಸಿ ಪತ್ರಿಕೆಗೊಟ್ಟು ಕಳುಹಲು | ಚರರು ದ್ವಾರಾವತಿಯ ಪೊಕ್ಕಾ |
ಹರಿಕುಲದ ರಾಯರಿಗೆ ಕೊಡಲೋದಿಸಿ ತಿಳಿದು ಮನದ ||
ಹರುಷದಿಂದ ಸಮುದ್ರವಿಜಯಾ | ದ್ಯರು ವಿವೇಕಿಸಿ ದೇವತಾಕೃಪೆ |
ದೊರಕಿದವರಿಗೆ ಹಾನಿಯುಂಟೇಯೆಂದರೊಲವಿಂದ || ೯ ||

ಹರಿ ಚತುರ್ಭುಜನಾದನೆಂದೆ | ಲ್ಲರು ಚಮರ ಮನ್ನಿಸಿಯೆ ಪಾವುಡ |
ವೆರಸಿ ತನ್ನಯ ರಾಯಭಾರಿಗಳನು ಕಳುಹೆ ಹೋಗಿ ||
ವರ ಯುಧಿಷ್ಠರ ಮುಖ್ಯರನು ಕಂ | ಡಿರದೆ ಪಾಗುಡಗೊಟ್ಟು ಹರಿಕುಲ |
ದರಸುಗಳ ಹರುಷವನು ವಿರಚಿಸಿದರು ಮೃದೋಕ್ತಿಯಲಿ || ೧೦ ||

ಕೇಳೆ ಪಾಂಡವರಮಳ ಮನದಲಿ | ಮೇಳಿಸಿತು ಸಂತೋಷವನ್ನೆಗ |
ಮೇಳಲಂಕಾರಸರಪುರದ ಧಾನ್ಯಕ್ಷಿತೀಶ್ವರನು ||
ಲೋಲಲೋಚನೆ ಕುಸುಮಮಾಲೆಯ | ಲೀಲೆಯಿಂದೊಡಗೊಂಡು ವೈಭವ |
ಜಾಲ ಬರಲಿದಿರ್ಗೊಂಡನುತ್ಸವದಿಂದ ಯಮಸೂನು || ೧೧ ||

ಅಂದು ವನದಲಿ ತಪವನಾಂತರ | ವಿಂದನೇತ್ರ ವಸಂತ ಸೌಂದರಿ |
ಯೆಂದೆನಿಪ ತನುಜೆಯನು ವಂಧ್ಯಕನೃಪತಿಯಮಸುತಗೆ ||
ತಂದು ಮದುವೆಯ ಮಾಡೆ ಸಂಗಡ | ಬಂದು ನಲವಿಂ ಚಂಡವಾಹನ |
ನಂದು ಪನ್ನೀರ್ವರು ಕುವರಿಯರನಿತ್ತನಾ ಕ್ರಮದಿಂ || ೧೨ ||

ಕುಸುಮಮಾಲಾಕಾಂತೆಗಗ್ರನು | ಹಿಷಿ…………………… |
…………………….. ||
ಒಸೆದು ತನುಜೆ ಹಿಡಿಂಬಿಯನು ಆ | ಗಸಪಥದಿ ಕರತಂದು ಭೀಮಗೆ |
ಬೆಸುಗೆಗೊಟ್ಟವರೈದಿದರು ತಂತಮ್ಮ ಪುರಗಳನು || ೧೩ ||

ಬಳಿಕ ಸದ್ವಂಶಜ ಕುಮಾರರ | ಚೆಲುವ ಕುವರಿಯರನು ಮಹೋತ್ಸವ |
ದಲಿ ನಕುಳ ಸಹದೇವನೊಳು ಪಾಣಿಗ್ರಹಣ ಮಾಡಿ ||
ಕುಲದಳಾರನೆಯೊಳು ಮಿಗೆ ತೋಳ್ | ವಳದೊಳಮಳಿನ ಧರ್ಮದೊಳು ನೃಪ |
ಕುಳಕೆ ತಲೆಕಟ್ಟೆನಿಸಿದರು ಪಾಂಡವರು ಧರೆಯೊಳಗೆ || ೧೪ ||

ಸ್ವಸ್ಥದಿಂದನುಜರ್ಕಳ ತಿಳ | ಪ್ರಸ್ಥ ಕಣೆಯಪ್ರಸ್ಥ ನಾಗ |
ಪ್ರಸ್ಥ ಸ್ವರ್ಣಪ್ರಸ್ಥವೆಂಬುತ್ತಮ ಪುರಂಗಳಲಿ ||
ಸುಸ್ಥಿರಂಗೊಳಿಸಿದನು ಕ್ರಮದಿ ಗು | ಣಸ್ಥಿಗಿತ ಯಮಸೂನುವಿಂದ್ರ |
ಪ್ರಸ್ಥನಗರಿಯೊಳಿರ್ದನಾ ಜಿನಮತ ವನಧಿಚಂದ್ರ || ೧೫ ||

ವರಧನಂಜಯ ಕಣೆಯ ಪ್ರಸ್ಥದ | ಲಿರುತ ದ್ರೌಪದಿ ದೇವಿಯೊಳು ತನು |
ವೆರಡು ಜೀವಮದೊಂದೆನಿಸಿ ಮನಸಿಜ ಸುಖವನಾಂತು ||
ಇರಲು ಭೌತಿಕನೋರ್ವನಲ್ಲಿಗೆ | ಹರುಷದಿಂ ಬಂದರ್ಜುನನ ಕಂ | ”
ಡುರು ಮುದದಿ ನಿಲಲೇನು ಬಂದಪಿರೆಂದನಾ ಪಾರ್ಥ || ೧೬ ||

ಜನಪತಿಯೆ ನೀ ಕೇಳು ವಸುದೇ | ವನ ಮನೋಭವೆ ಖಚರಿ ನೀಲಾಂ |
ಜನೆಗೆ ಪುಟ್ಟಿದಳಾ ಸುಭದ್ರಾದೇವಿ ಕಡು ಚೆಲುವೆ ||
ವನಿತೆಯರ ಮಾಣಿಕವವಳ ಚೆಲು | ವನು ವಿಚಾರಿಸಿ ಕೌರವನು ತಾ |
ನನುನಯದಿ ಬೇಡಟ್ಟಿದರೆ ಕೊಡದಾದರವರೆಂದ || ೧೭ ||

ಕೊಡುವೆನರ್ಜುನಗೆಂದು ಕೃಷ್ಣನು | ಕಡಲ ಮಧ್ಯದಿ ಕನಕಪುರದೊಳು |
ಮಡಿಗಿಹನು ತದ್ವನಿತೆಗಿಂ ಗಾಂಡಿವದ ಪಿಡಿದೆತ್ತಿ ||
ತಡೆಯದಾಗಸ ಜಂತ್ರದಾ ಮೀ | ನೆಡೆದ ಕಣ್ಣಿಸು ವಂದದನೇ ಬೇ |
ಳ್ಪಡದೊಳಗೆ ಬರೆದರ್ಜೆಸುವಳಾ ರೂಪನವಳೆಂದ || ೧೮ ||

ಎಂದು ಪಟವನು ತೋರಿಚಿತ್ರದ | ಸೌಂದರಿಯ ಸೌಂದರತೆಯನು ಹರಿ |
ನಂದನನು ನಡೆನೋಡಿ ಸೋಲ್ತಾ ಭೌತಿಕಂ ಬೆರಸು ||
ಅಂದು ಕತಿಪಯ ಪರಿಜನವು ಸಹ | ಸಂದ ಶರಧಿಯನುತ್ತರಿಸಿ ಹಡ |
ಗಿಂದಿಳಿದು ತತ್ಕನಕ ಪುರವನು ಪೊಕ್ಕನಾ ಪಾರ್ಥ || ೧೯ ||

ಬಳಿಕಲಾ ವಸುದೇವ ಕೃಷ್ಣನು | [ತಿಳಿದು] ಪಾರ್ಥನ ಬಂದ ಬರವನು |
ಘಳಿಲನವರಾಪ್ತರು ನಿವೇದಿಸೆ ಹರುಷದಿಂ ಬಲನ ||
ಕಳುಹಿ ದ್ವಾರಾವತಿಗೆ ಕರಸಿದ | ರಳವಿದಳಿದುತ್ಸವ ಸುಲಗ್ನದಿ |
ನಳಿನಮುಖಿಯನು ಮದುವೆಗೈದರು ಪಾರ್ಥಗವರಂದು || ೨೦ ||

ಹರಿಕುಲದ ರಾಯರುಗಳೆಲ್ಲರು | ಪರಿಪರಿಯ ಬಳುವಳಿಯನಿತ್ತರು |
ಭರದಿ ಕಳುಹಲು ಬಂದ ಕಣಯ ಪ್ರಸ್ಥದಲಿ ನರನು ||
ಸ್ಮರಸರಾಗದಲಿರುತಮಿರೆ ಸೌಂ | ದರಿ ಸುಭದ್ರಾದೇವಿ ಪೆತ್ತಳು |
ಪರಬಲಾಂತಕನೆನಿಸುವಭಿಮನ್ಯುವನು ಸಂತಸದಿ || ೨೧ ||

ವೀರದಂಕುರ ಬೆಳೆಬೆಳೆದು ನುತ | ಭೂರುಹವು ತಾನಾದುದೆನೆ ಸುಕು |
ಮಾರಯೌವನವಾಂತನಾ ಬಹುವಿದ್ಯೆ ಕಲೆಯೊಡನೆ ||
ವಾರಿರುಹನಾಭನು ಕರೆಸಿ ಸಾಕು | ಮಾರಿಯೆನಿಪ ವಸುಂಧರೆಯ ಕೈ |
ನೀರೆರೆದನಭಿಮನ್ಯು ಕುವರೆಗೆ ಶುಭಮುಹೂರ್ತದಲಿ || ೨೨ ||

ನಳಿನನಾಭನು ವಿವಿಧ ವಸ್ತುವ | ಬಳುವಳಿಯನಿತ್ತಾ ಕುಮಾರಿಯ |
ನಳಿಯನನು ಕಳುಹುತ್ತ ಕಣಯ ಪ್ರಸ್ಥವನು ಪೊಗಲು ||
ಬಳೆದರಾಗದಿ ಸುತೆಯ ಮೋಹದೆ | ಪಲವು ಕಾಲವು ಕೃಷ್ಣ[ನಲ್ಲಿಯೆ] |
ತೊಲಗದಿರ್ದನು ಮೈದುನ ನೊಳತ್ಯಂತ ವಿನಯದಲಿ || ೨೩ ||

ನರಗೆ ನಾರಾಯಣಗೆ ಭಾವಿಸೆ | ಹರಣವೊಂದಣು ಭೇದವಿಲ್ಲೆಂ |
ದಿರದೆ ಧರೆ ಬಣ್ಣಿಸುವುದಿನ್ನುಂ ಪ್ರೇಂಮದೇಳ್ಗೆಯಲಿ ||
ಸರಸಿಜಾಕ್ಷನು ಬಳಿಕ ತನ್ನಯ | ಪುರವ ಪೊಕ್ಕಿರುತಿರ್ದನಿತ್ತಲು |
ಕುರುಪತಿಯು ಪಾಂಡವರಿಗೊಂದು ಕುಬುದ್ಧಿಯನು ಬಗೆದ || ೨೪ ||

ಕರೆಸಿದನು ವರಸಚಿವ ಶಕುನಿಯ | ನರಸ ಮಂತಣ ಶಾಲೆಯಲಿ ಕು |
ಳ್ಳಿರುತ ಕೇಳೈ ಪಾಂಡುಜರು ದಿನದಿನಕೆ ಹೆಚ್ಚಿದರು ||
ಹರಿ ತನಗೆ ಕುಡಲಿರ್ದ ಪೆಣ್ಣನು | ನರನು ತಂದನು ಕೂಡಿ ನಡದಾ |
ಪರಿಯ ನೋಡವರೆಮ್ಮೊಳೆಂದನು ನೊಂದು ಕುರುರಾಯ || ೨೫ ||

ಇವರ ದೇಶಾಂತರಕೆ ಪೊರವಡಿ | ಸುವೊಡುಪಾಯವದಾವುದೆನೆ ಜೀ |
ಯವಧರಿಸು ಧರ್ಮಜನು ಜೂಜಿನೊಳರ್ತಿಕಾರನಲೆ ||
ಅವರ ಗೆಲುವೊಡೆ ಢಾಳವಾಸಿಗೆ | ಸವೆದವಿದೆ ನನ್ನಲ್ಲಿ ಜೂಜಿನ |
ಬೆವಹರಿಗ ನಾನಿನ್ನ ಗೆಲಿಸುವೆ ಭೂಪ ಕೇಳೆಂದ || ೨೬ ||

ಆಡಿದೊಡೆ ಹಾಸಂಗಿಯವು ತಾ | ಬೇಡಿದಾ ಡಾಯಗಳನೀವವು |
ನಾಡಿಗೊಡ್ಡುವ ಸೆಳೆವರಾಜ್ಯವ ಪೊರವಡಿಸಿ ಕಳೆವ ||
ನಾಡಳೆವಗಪಕೀರ್ತಿಯೇಂ ಜೂ | ಜಾಡೆ ಗೆಲುವುದು ಸೋಲ್ವುದುಳ್ಳುದು |
ರೂಢಿಯಿದು ಕುರುರಾಯ ಚಿತ್ತೈಸೆಂದನಾ ಶಕುನಿ || ೨೭ ||

ಮನದೊಳಗೆ ಗುಡಿಗಟ್ಟಿ ಶಕುನಿಯ | ಮನಗೆ ಕಳುಹಿಸಿ ಕಪಟದಲಿ ಶೋ |
ಭನವ ಬೆಳೆಯಿಸಿ ಬಂದು ವೃಂದವ ಕೂಡಿಪಾಂಡವರ ||
ಅನುನಯದಿ ಬಳಿಯಟ್ಟಿ ಕರೆಯಿಸಿ | ವಿನಯದಿಂದಿರ್ಗೊಂಡು ಬರು ಶೋ |
ಭನವ ವಿರಚಿಸಿ ಬಂಧುಗಳ ಪರಯಿಸಿದನವನೀಶ || ೨೮ ||

ವರಯುಧಿಷ್ಠಿರ ಮುಖ್ಯರನು ನಿಜ | ಪುರದೊಳಗೆ ಪ್ರೇಮದಲಿ ಪಲದಿನ |
ವಿರಿಸಿಕೊಂಡಿರುತೊಂದುದಿನ ಗೋಷ್ಠಿಯಲಿ ಧರ್ಮಜನು ||
ಇರೆ ಸುಯೋಧನ ಶಕುನಿಯೊಳು ಮಿಗೆ | ಹರುಷದಾಡುತ ಲೆತ್ತವನು ತಾಂ |
ಕರದನಾಡುವ ಬಾಯೆನುತ ಮೇಳದಲಿಯಮಸುತನ || ೨೯ ||

ಒಮ್ಮೆ ಕರೆದೊಡೆ ಒಲ್ಲದಿರೆ ಮ | ತ್ತೊಮ್ಮೆ ಕರೆದನು ನೀವು ಜೂಜಿನ |
ಮರ್ಮವನು ನೆರೆ ಬಲ್ಲಿರೆಂಬುದ ಕೇಳಿ ಬಲ್ಲಿನೆನೆ ||
ಧರ್ಮಶಾಸ್ತ್ರ ವಿಚಾರ ಚತುರನು | ಧರ್ಮರಾಯನು ಜೂಜನಾಡಿದ |
ಕರ್ಮವಾರನದೇವ ಮಾಡದು ಭೂಪ ಕೇಳೆಂದ || ೩೦ ||

ಅಳಲಿದಂತೆ ಸುಯೋಧನನು ಪೊಂ | ಗಳನು ಸಾಸಿರವೊಡ್ಡಿದನು ಓ |
ರ್ವಳರು ಭೀಮಾರ್ಜುರನು ಬೇಡೆನೆ ಕೇಳುದರ್ಲೇಳ್ದು ||
ಗೆಲಿದನಾ ಧರ್ಮಜನು ಕರುಪತಿ | ಬಳಿಕ ಭಂಡಾರವನು ತುರಗಾ |
ವಳಿಯನಿಭಘಟೆಯೆಲ್ಲವನು ಸಲೆ ಗೆಲಿದ ನಿಮಿಷದಲಿ || ೩೧ ||

ಅನಿತರೊಳಗಾ ದ್ರೋಣನೈತಂ | ದನು ಸುಯೋಧನ ಪಾಂಡುಜರ ನಿ |
ಮ್ಮನೆಗೆ ಕರೆಯಿಸಿ ಜೂಜಿನಿಂ ನೆರೆಗೆಲಿದನದನೇವೆ ||
ಅನತರಿಪುಗಳ ಧನವ ಖಡುಗದ | ಮೊನೆಯಲೆಳೆವುದು ಕ್ಷತ್ರಿಯರ ನಂ |
ದನರ ಧರ್ಮವು ಹಾಯಿಕದಿರು ಹಾಸಂಗಿಯನು ಶಕುನಿ || ೩೨ ||

ಎಂದೊಡೀರ್ವರು ಕೇಳೆದಾಳ ವ | ಸುಂಧರೆಗೆ ಜೂಜಾಡಿದರು ಮ |
ತ್ತೊಂದು ಹಲಗೆಗೆ ಸೋತನವನಿಯನಂದು ಧರ್ಮಜನು ||
ಅಂದುನೃಪಗಾಂಗೇಯರಿಗೆ ಪರಿ | ತಂದಿವೆಲ್ಲವನರಿಪಿ ತನ್ನನೆ |
ಕೊಂದು ಕೊಂಡನು ಸರ್ಪಕೇತನನೆಂದನಾ ದ್ರೋಣ || ೩೩ ||

ಅವನ ರುಧಿರೋದ್ಗಾರಿ ಗದೆಗೀ | ಭುವನವಾಂತೊಡೆ ಬಾಳುವುದೆ ಗಾಂ |
ಡಿವವೆ ಸಾಲದೆ ಶೂಲಪಾಣಿ ವಿರಂಚಿಗಳ ಗೆಲಲು ||
ನಮಗೆ ಬಗೆ ತಳ್ಳಳಿಸುತಿದೆ ಕೌ | ರವ ಬಗೆಯನಲೆ ಭೀಮ ಪಾರ್ಥರ |
ಹವಣನರಿಯನು ನೀವವರ ಸಂತೈಸಿ ನಡೆಯೆಂದ || ೩೪ ||

ಕೆಟ್ಟೆವೆಂದೈತಂದರಾತ್ಮಜ | ಬಿಟ್ಟು ಕಳೆ ಜೂಜಾಡಿ ನೀನು ಯು |
ಧೀಷ್ಠಿರನ ಕೈಯಿಂದ ಪಡೆದುದುನೆಮ್ಮ ವಂಶಕ್ಕೆ ||
ನೆಟ್ಟನಿದು ಕಿಡಿಯೆಂದು ವರಧೃತ | ರಾಷ್ಟ್ರ ನೆರೆದ ವಚಸ್ಸುಧಾಂಬುಗೆ |
ತಟ್ಟು ಮರಕೆಯೊಳಿರ್ದುದಾ ಭೂಪಾಲಕನ ಹೃದಯ || ೩೫ ||

ಏನ ಮಾಡಿದೆ ಪಾಂಡುರಾಯನ | ಸೂನು ನಿನಗೀದ್ಯೂತ ಕರ್ಮವು
ಮಾನಿತವೆ ಅಕಟಾ ಸುಮುಕ್ತಾಫಲಕೆ ಕೆನ್ನೀರು ||
ದಾನಿಗೊಂದೆ ಧರಾಕ್ಷರಾರ್ಧದ | ಹಾನಿಮಂತ್ರಕೆ ಮುನಿಸು ಮುನಿಗಪ |
ಮಾನಮಾನಿಗೆ ಬಂದತೆರನಾಯ್ತೆಂದನಂಧನೃಪ || ೩೬ ||

ಎಲೆ ಯುಧಿಷ್ಠಿರ ಸೋತಿರೇ ನಿ | ಮ್ಮಿಳೆಯನೆಂದೆನೆ ಜೀಯಮಾತಿನ |
ಮಲಕದೇತಕೆ ಸೋತನಹುದೆನೆ ಎಲೆ ಸುಯೋಧನನೆ ||
ಗೆಲಿದೆ ಯೈಯೆನೆ ಮುಚ್ಚುಮರೆಯೇ | ಗೆಲಿದೆಗೆಲಿದೆನು ಕೇಳಿಮೆನೆ ಕುರು |
ಕುಲದಳಿವನೇನೆಂಬೆನೆಂದನು ಸುಯಿದು ಧೃತರಾಷ್ಟ್ರ || ೩೭ ||

ಎನಲು ಫಣಿಕೇತನನು ತನ್ನವ | ರನು ಕರೆದು ನೀವಿಂದಿವರ ಬೆ |
ನ್ನನೆ ನಡೆದು ತಾಂ ಸೋತವಾಹನ ದೇಶಕೋಶವನು ||
ಇನಿತನುಳುಹದೆ ಒಪ್ಪುಗೊಂಡಿವ | ರನು ತೊಲಗಿಸುವುದೆಂದು ನೇಮಿಸಿ |
ದನು ಧರಾಶಯದೇನಮಾಡಲು……………. || ೩೮ ||

ತರಿಸು ಭಂಡಾರವನು ಭೂಮಿಯ | ನಿರಿಸು ತೊಲಗಿಸದವರಿಗೆನೆ ಕೇ |
ಸುರಿಲವಣವನು ದಳ್ಳಿಸಿದವೊಲು ಗಜರಿನಾಗೆಲಿದ ||
ಧರೆಯನವರಿಗೆ ಬಿಡುವುದೇ ನೀ | ವರ ಮನೆಗೆ ಚಿತ್ತೈಪುದೆಂದಾ |
ಕುರುಪತಿಯು ಕಡುಮುಳಿದನಾ ಧೃತರಾಷ್ಟ್ರ ಮುಖ್ಯರಿಗೆ || ೩೯ ||

ಪೊಡವಿಯನು ಸೆಳೆಕೊಂಡವರ ಹೊರ | ಪಡಿಸುವುದು ಹಿತವಲ್ಲವವರಿಗೆ |
ಕೊಡುವುದೊಂದವಧಿಯನೆನುತ್ತನಿಬರು ಸುಯೋಧನನ ||
ಬಡಿದೊಡಂಬಡಿಸಿದೊಡನುಜ್ಞೆಯ | ಕೊಡಲು ಕುರುಪತಿ ಕಿವಿಯಲದ ತಾ |
ಪಡೆದು ದುರ್ಜನರೆರೆಯ ನುಡಿದನು ಶಕುನಿ ಸಭೆಯೊಳಗೆ || ೪೦ ||

ಖರೆಯನುಳಿದೀರಾರು ವರುಷಂ | ಬರೆಗೆ ವನವಾಸವನು ಚರಿಪುದು |
ಚರಮದಲಿ ಒಂದಬ್ದವಜ್ಞಾತದಲಿ ವರ್ತಿಪುದು ||
ಅರಕೆಗೀ ಪಾಂಡವರು ಬಂದರೆ | ಮರಳಿ ಪನ್ನೆರಡಬ್ದದೇಶಾಂ |
ತರವ ಪೋಪುದು ಬಳಿಕ ನಿಜರಾಜ್ಯದೊಳಗಿಹುದೆಂದ || ೪೧ ||

ಎನಲವನ ನುಡಿಗೇಳಿ ದುರಿಯೋ | ಧನನ ದುರ್ನಯಗಂಡು ಭೀಮಾ |
ರ್ಜುನರು ಕಿಡಿಕಿಡಿಯೋಗಿಯಿನ್ನೇತರದು ಬಂಧುತ್ವ ||
ತಣಿ ರಕುತವನು ಕಾರುವಂತೀ | ತನನು ಪಿಡಿದಪ್ಪಳಿಸಿಯರಗಿನ |
ಮನೆಗೊಲೆಯ ಹರುಬವ ಹಡದವೆಂದರು……………. || ೪೨ ||

ಭೂರಿ ಕೋಪಾನಳವೆ ಬಾಡವ | ಚಾರು ನಯನದ ಕೆಂಪುವಿಧ್ರುಮ |
ವೀರವಧು ಕಡುಗುಂಪೆನಿಸಿದನಿಲೇಂದ್ರ ಸುತರೆಂಬ ||
ಮೇರೆದಪ್ಪಿಯೆ ಬಪ್ಪ ಕಲ್ಪದ | ವಾರಿಧಿಗಳೆರಡನು ಯಮನ ಸುಕು |
ಮಾರಕನ ಕಡೆಗಣ್ಣವಲಯೇ ತಡೆದುದಂದಿನಲಿ || ೪೩ ||

ಬಳಿಕ ಪಾಂಡುಜರನಿಬರುಂ ತ | ನ್ನಿಲಯದಿಂ ಪೊರವಟ್ಟನಾಗಳೆ |
ಕಳುಹಿದನು ಮಂತ್ರಿಗಳ ಭಂಡಾರವನು ಗಜಹಯವ ||
ಇಳೆಯನೊಪ್ಪಿಸಿ ಕೊಳುವುದೆನೆ ಕುರು | ಕುಲತಿಲಕ ಸರ್ವಸ್ವವನು ಕೊಳು |
ನೆಲನನುಳು ಹೂಡಹುಟ್ಟುವಾಳಿಯ ಕೆಡಿಸಬೇಡೆಂದು || ೪೪ ||

ಹೇಳಿದರು ಗಾಂಗೇಯ ಮುಖ್ಯರು | ಕೇಳದಾದದನು ನೃಪತಿಯಕಟಾ |
ಪಾಳಿದಪ್ಪಿದುದೆನ್ನವರು ಪಾಂಡವರ ಬಳಿಸಂದು ||
ತಾಳಲಾರದೆ ನೋವನಶ್ರುಜ | ಲಾಳಿ ಕನ್ನಡಿಸಿದವು ಭೀಷ್ಮ ನೃ |
ಪಾಲ ಮುಖ್ಯರ ಬಾಡಿದಾನನ ಸರಸಿರುಹದೊಳಗೆ || ೪೫ ||

ಬಳಿಕ ಅವರಡಿಗೆರಗಿ ಹರಕೆಯ | ತಳೆದರವರು ಕುಮಾರರಿರನಿಂ |
ಪಳುವದೊಳಗಾವೆಲ್ಲ ಪೊಳಲೊಳಗಿಪ್ಪುದಾದುದಲ ||
ತಿಳಿವೊಡಿದು ತಾನೊಂದು ಪಾಪದ | ಫಲವೆನಲು ನಸುನಗುತ ನಿಮ್ಮಡಿ |
ಗಳ ಕೃಪಾಧೃತವೆಂಮನೆಲ್ಲಿಯು ರಕ್ಷಿಸುವುದೆಂದ || ೪೬ ||

ಆರಿಗಾವೆಡೆ ಜನನ ಮರಣವ | ದಾರಿಗಾವೆಡೆ ಸಿರಿ ದರಿದ್ರತೆ |
ಯಾರಿಗಾವೆಡೆಯುಳಿವು ಕಳಿವಿಂತುಭಯ ಕರ್ಮಜವ ||
ಆರಿ ಬಲ್ಲರು ದುಃಖಸುಖಗಳು | ಸೇರೆ ಸಮಪರಿಣಾಮದಲಿ ಮನ |
ವಾರೆಯುಂಬನೆ ಚದುರನೆಂದನು ಧರ್ಮನಂದನನ || ೪೭ ||

ಚಿಂತಿಸಲು ಬೇಡೆವಗೆ ನಾವು ವ | ನಾಂತರದೊಳನ್ನಗ್ನಿಯೆನೆ ನಿ |
ಶ್ಚಿಂತದಿಂ ರಕ್ಷಿಸುವೆ ಉಮ್ಮಳಿಸದಿರಿ ನೀವೆಂದು ||
ಸಂತಯಿಸೆಯಮಸುತನ ವಿಮಳ | ಸ್ವಾಂತ ಸತ್ವ ಕ್ಷಮೆಗೆ [ಧೈರ್ಯಕೆ] |
ಸಂತಸಂಬಡುತಿತ್ತ ಮರಳಿದರೀ ನೃಪಾಲಕರು || ೪೮ ||

ಅವರು ಇಂದ್ರಪ್ರಸ್ಥವನು ಪೊ | ಕ್ಕವನಿ ಭಂಡಾರಾದಿಯನು ಕೌ |
ರವನವರಿಗೊಪ್ಪಿಸಿಯೆ ಪಂಚಪ್ರಸ್ಥದೊಳಗಿರ್ದ ||
ಯುವತಿಯರು ಕೊಂತಿಯುವೆರಸಿ ಪಾಂ | ಡವರು ದಿಚಿ ಗೋಮುಖದಿ ನಡೆದವ |
ಯುವಧಿಯಲಿ ಗಂಗಾನದಿಯನುತ್ತರಿಸಿ ಬನದೊಳಗೆ || ೪೯ ||

ಬೀಡಬಿಟ್ಟರು ಬಳಿಕ ಬಂದೊಡ | ನಾಡಿ ಯಾಪ್ತ ಪ್ರಧಾನ ಮುಖ್ಯರ |
ನಾಡೆ ಮನ್ನಿಸಿ ಕಳುಹಿ ತಮ್ಮೆಲ್ಲರ ಮಧೂತತಿಯ ||
ರೂಢಿಸಿದ ತಂತಮ್ಮ ಜನಕರ | ಬೀಡಿನೊಳಗಿರಲಟ್ಟಿದರು ತಾಂ |
ಜೋಡಗಲೆನರ್ಜುನನೆಂದುಳಿದಳು ದ್ರುಪದ ತನುಜೆ || ೫೦ ||

ಕ್ಷಿತಿವಿನುತ ಪಾಂಡವರು ಕೊಂತಿಯು | ಚುತರೆ ಪಾಂಚಾಳೆಯುವೆರಸಿ ರಾ |
ಜಿತಮತಿಗಳಾದಕ್ಷಿಣಾಭಿಮುಖದಿ ನಡೆದು ಬಂದು ||
ವಿತತ ಬದರೀವನವ ಪೊಕ್ಕರು | ಶತವಿದಿತ ಶೃಂಗಾದ್ರಿ ತಪ್ಪಲೊ |
ಳತಿ ವಿಶದವಾದೆಡೆಯೊಳಿದ್ದನು ಭೂಪ ಕೇಳೆಂದ || ೫೧ ||

ಇರೆಯುಗಂಧರ ಯಮಳರೆಂದೆಂ | ಬುರು ಸುಗುಣಿಗಳು ಚಾರಣದ್ವಯ |
ವಿರದೆ ಚರಿಗೆಗೆ ಬರಲಿದಿರ್ಗೊಂಡೆರಗಿ ಸಾದರದಿ ||
ಇರಿಸಿ ನವವಿಧಿ ಪುಣ್ಯಯುತ ಬಂ | ಧುರದ ಸಪ್ತಗುಣಾನ್ವಿತ ಯುಧಿ |
ಷ್ಠಿರ ಮಹಾ ವಿಮಳಿನಾಹಾರವಮೊಸೆದು ಕೊಟ್ಟ || ೫೨ ||

ಅನುಪಮನು ಸತ್ಪಾತ್ರದಾನವ | ನನುವಡಿಡಿಯಾಶ್ಚರ್ಯ ಪಂಚಕ |
ವನುತಳೆದು ಸಂತುಷ್ಟನಾದನು ಪರಸಿ ಚಾರಣರು ||
ವಿನುತರತ್ತವತರಿಸಿದರು ಧ | ನ್ಯನು ವಲಂ ನಾನೆಂದು ನಲಿದನು |
ಜಿನಮತ ಕ್ಷೀರಾಂಬುನಿಧಿವರ್ಧನ ಸುಧಾಕರನು || ೫೩ ||

|| ಅಂತು ಸಂಧಿ ೩೮ಕ್ಕಂ ಮಂಗಲಮಹಾ ||