ಸಂಧಿ ೫

ಕೇಳು ಶ್ರೇಣಿಕ ಮಂಡಲೇಶ್ವರ | ಹೇಳಿದಪರಾರಾಜಿತೋವರ್ವೀ |
ಪಾಲಗಾ ಚಾರಣರು ವಿಂಧತನಾದ ಭವದಿರವ || ಪ ||

ಎಲೆ ಧರಿತ್ರೀ ಪಾಲ ಕೇಳೈ | ತಿಳಿದು ಮೇರುವ ತೆಂಕದೆಸೆಯ |
ಗ್ಗಲಿಪ ಭರತಕ್ಷೇತ್ರದಾರ್ಯಾಖಂಡದೊಳಗೆಸೆವ ||
ಸಲೆಮಗಧ ವಿಷಯದೊಳು ಪೆರ್ಮೆಯ | ಪೊಳಲು ಶೋಭಿಪ ರಾಜಗೃಹದ |
ಗ್ಗಳಿಪ ನಿರುತಿಯ ದೆಸೆಯ ವಿಪುಳಾಚಲನಿತಂಬದೊಳು || ೧ ||

ದೆಸೆಯನುಣ್ಣನೆನುಂಗಿ ಸೂರ್ಯನ | ಹೊಸೆದು ಮುಕ್ಕಿ ತೊರಾಡುಸಿರಹಸ |
ರಿಸಿ ನಿಮಿರ್ಚಿತೊ ಕಾರಕಾದಂಬಿನಿಯ ನೆಲೆಮನೆಯೊ ||
ಕುಸುಮಯಸ್ತಲ ಹೃದಯವೆನಲ | ರ್ವಿಸಿಪುದಿಯ ನೆಱಿದಂಧಕಾರದಿ |
ನೆಸೆದು ಮುಗಿಲುಚ್ಛಳಿಸಿ ನೆಗೆದಿಹುದೊಂದು ಪೇರಡವಿ || ೨ ||

ಎಲವ ಮುತ್ತುಗಹಾಲೆಯರನೇ | ರಿಲು ಕಡವ ಪೆಗ್ಗೋಳಿಯಾಲವು |
ಬೆಳಲು ಮೋರಟ ಪೆರ್ವಿದಿರಸುಕೆಯರನೆಲ್ಲಿ ಬೆಳುನೆಲ್ಲಿ |
ಹಲಸು ಕೊಡಸಿಗೆ ಮಾವುತೋಱಿಮಾ | ವುಲಿಯ ಕಣಗಿಲು ಕಕ್ಕೆ ವಿಕ್ಕೆಯ |
ನಿಲೆಕದಳಿ ಹಾದರಿಯ ಮರ ಮೊದಲಾದವುರ್ವಿಹವು || ೩ ||

ಮರೆಯನುಣ್ಣನೆ ನೊಣೆವ ಜರದಜ | ಗರದ ಹರವರಿಕರಿಯ ತುಂತುವ |
ಹರಿವ ಹಾವಳಿ ತುಂಗಸಿಂಗವ ನುಂಗಿಬಾಯ್ದೆಗೆವ ||
ಶರಭಗಳ ಕಾಲಾಟವಾ ಕೇ | ಸರಿ ಶರಭಗಳತಿಂದು ತೇಗುವ |
ಪಿರಿಯ ಭೇರುಂಡಗಳ ತಲೆವೊಲನೆನೆಸಿತಾ ವಿಪಿನ || ೪ ||

ಆ ವನದೊಳಿರುತಿಪ್ಪುದದು ಶಬ | ರಾವಳಿಯ ಬಲುಸಿಬಿರವದರೊಳು |
ತೀವಿದಿಭ ಕುಂಭಜಸುಮೌಕ್ತಿಕ ರಾಶಿ ಜೇನಯ್ಯ ||
ಬಾವಿನೆತ್ತರ ಕೆಱಿಪಸಿಯ ತೊವ | ಲೋವರಿಗಳಾ ಚಾಮರದ ಬಲು |
ಕಾವನವು ಮೆರೆದಿಹುದು ಸಿಂಹದಹಲ್ಲ ತೋರಣದಿ || ೫ ||

ಕೆದರುದಲೆ ಕೆಮ್ಮೀಸೆ ಕಿಸುಗಣು | ಬೆದಱುನೋಟವು ಕಾರೊಡಲುವುಡೆ |
ಪುದಿದ ತಳಿರುಡೆ ಸುರಗಿ ಪುಲಿವಾಲದಲಿ ವಿರಚಿಸಿದ ||
ಹದುರುಗಂಕಣ ಖಡೆಯ ಪೆಂಡೆಯ | ದೊದವಿನಿಂ ನಿಗ್ಗವದ ಬಡಿಕೊ |
ಲ್ವದವಡೆದ ಬಿಲ್ಲಂಬು ಬಲೆವಿಡಿದಿಹರು ಬೀಯದರು || ೬ ||

ಕಾರಿರುಲ ಕತ್ತಲೆಯ ತಿರುಳಿಂ | ವಾರಿರುಹಭವನೊಲಿದು ನಿರ್ಮಿಸಿ |
ನಾರಿಯರುರೂಹುಗಳನಂಜಿನರಜದಿ ಪುಟವಿಟ್ಟ ||
ಕಾರಮಿಂಚುಮನವರ ಕಣ್ಣೊಳು | ಸೇರಿಸಿದನೆನೆ ಗಾಡಿಯರು ಕಾಂ |
ತಾರಚರ್ಯರು ಮೆಱೆದರಲ್ಲಿ ಪುಳಿಂದರೊಗ್ಗಿನಲಿ || ೭ ||

ಹೀಲಿಗಳನೊಲಿದುಟ್ಟು ತಳಿರಿನ | ಮೇಲುದಿಟ್ಟಸುಕೆಗಳ ಮೊಲ್ಲೆಯ |
ಮಾಲೆಗಳ ತಲೆಸುವುಡಿಹೊಂಗರಿವೂವಿನೆಸಲುಗಳ ||
ಓಲೆಗಳನಿಕ್ಕಿವಿಯೊಳಿಕ್ಕಿ ವಿ | ಶಾಲ ಗುಂಜಾಭರಣವಾಂತಾ |
ಲೀಲೆಯಿಂ ಶಬರಿಯರೆಸೆದರಾ ಪೆಕ್ಕಣದೊಳಂದು || ೮ ||

ಪಿಡಿದಶೋಕೆಯ ಬಿಲ್ಲು ಚೆಂದಳಿ | ರುಡಿಗೆ ಕೆಂಗಱಿಗೋಲ ಹೊದೆಯೆಳೆ |
ಮಿಡಿಯರಕ್ಕೆ ಗಳರಳ ಕಂಕಣ ಖಡೆಯ ತೋಳಬಳೆ ||
ಕಡುಗಲಿಯ ಮೈಮಾಂದಳಿರಕೈ | ಪೊಡೆಹಲವು ಹೂಗಳ ಮಕುಟದಲ |
ವಡೆಮೆಱೆವನಾ ವಿಂಧ್ಯದೊಳು ವಿಂಧ್ಯಕವನೆಚ್ಚರನು || ೯ ||

ತಳಪಗಂಗಳ ನಗೆಮೊಗದ ಚೆಂ | ದಳಿದುಟಿಯ ನಳಿತೋಳ ಸೆಳೆನಡು |
ಬಲುಮೊಲೆಯ ನುಣ್ದೊಡೆಯ ನೇರಿಲಪಣ್ಣನೆಂಣೆಯಲಿ ||
ಎಳಸಿ ತೊಯ್ದಂತಪ್ಪ ಮೈಯು | ಜ್ಜುಳಿಸುವಾನೆಯ ಮುತ್ತುದೊಡವಿನ |
ಚೆಲುವೆ ವಾಗುರಿ ಮಡದಿಯಾ ವಿಂಧ್ಯಕಗೆ ಕೇಳೆಂದ || ೧೦ ||

ಉಡಿಸುವನು ಚಂದನದ ತಳಿರನು | ಕರಿಶಿರದ ಮುತ್ತಿನ ತೊಡಿಗೆಯನು |
ತೊಡಿಸುವನು ಸುರಹೊನ್ನೆ ಸಂಪಗೆ ಮೊಲ್ಲೆಯರಲುಗಳ ||
ಮುಡಿಸುವನು ವಾಗುರಿಯ ಚೆಲುವಿನ | ಮುಡಿಯೊಳಿಭ ಮದನಾಗ ಕೇಸರ |
ವಿಡಿದ ತಿಲಕವನಿಟ್ಟು ಕೈಪಿಡಿಯಂತೆ ನೋಡುವನು || ೧೧ ||

ಅವಳ ಬಿಂಬಾಧರದ ಸುಧೆಯನು | ಸವಿದು ಬನದೊಳಗಾವ ಪಣ್ಗಳ |
ಸವಿಯ ಮೆಚ್ಚನು ಅವಳ ಸವಿಸುಸಿಲಿನ ಸುಖವ ಮೆಚ್ಚಿ |
ದಿವಿಜ ಲೋಕದ ನೆನಹನೀ….. | ಕವಡಿಕೆಗೆ ಬಗೆಯನು ಮರುಳ್ದವ |
ನವಳನಲ್ಲದೆ ಕಣ್ಗೊಲನು ಸಿಬಿರದೊಳು ಶಬರಿಯರ || ೧೨ ||

ಅಲ್ಲಿಯಾತನಕೂಡೆ ತಟ್ಟಿಯ | ಬಿಲ್ಲುಗಳನಾ ಪೊಂಗುವಿಲುಗಳ |
ಬಲ್ಲಿತೆನಿಪಾ ನಾಳಿವಿಲ್ಲುಗಳಂತೆ ಸಿಂಗಾಡಿ ||
ಬಿಲ್ಲುಗಳ ನೇಣಿಲ್ಲುಗಳ ಪದ | ವಿಲ್ಲುಗಲನೆಡೆಗೆಡೆಗೆ ಸೀವಳಿ |
ಬಿಲ್ಲುಗಳ ಪಿಡಿದಾ ನಿಶಾಟರು ನೆರೆದುದವನೊಡನೆ || ೧೩ ||

ಪರಿಸಬೋಳೆಯ ಕೋಲೆಸೆವ ಹೆಱಿ | ಸರಳೊಡನೆ ಮುಮ್ಮೊನೆಯಕಣೆ ಬಿ |
ತ್ತರದ ಭಲ್ಲೆಯ ಮಾಟದಿ ಸುಸಂಪಗೆಯ ಮುಗುಳಂಬು ||
ದೊರೆವಡೆದ ಕಣಗಿಲ ಪುಳುಂಬವು | ತರದಿ ವಿದಿರೆಲೆ ಸರವಿ ವಂತಿ |
ಳ್ತಿರಿಸಿದಾ ಬತ್ತಳಿಕೆಗಳು ನೆರೆದಿರ್ದುವವರಲ್ಲಿ || ೧೪ ||

ಇಟ್ಟಕಬ್ಬುನಕೋಲು…ವಿಡಿ | ದಿಟ್ಟ ಚಕ್ರವು ಪಿಂಡಿವಾಳವು |
ತೊಟ್ಟಿಡುವ ಬಡಿಕೋಲಿರಿವ ಬಲುಪೊಂದಿ ಪೋಟಿಗಳು ||
ನೆಟ್ಟನೀ ಕೈದುಗಳನಾಂತಾ | ದಿಟ್ಟರುಱೆ ದನಿಗೈವಕೊಂಬಳ |
ವಟ್ಟುಮೆರೆವಾ ಕಾಳೆ ಸನ್ನೆಗಳೆಸೆದುದವರೊಡನೆ || ೧೫ ||

ಹುಲಿಗ ಕೆಂಗುವ ಕಪ್ಪರೆಯ ಜಾ | ಲಲಿವ ತೋ…. ಳಗಡ್ಡ ಜಾಯಿಲೆ |
ಹುಲಿದಲೆಗ ಕಣ್ಣುವ ಮುಗಿಲ ಪುತ್ತಳಿ ನವಿಲು ಮಿತ್ತ ||
ಒಲೆವ ಸುಂಟರುಗಾಳಿ ಭದ್ರನು | ಮಲೆವ ಶೂದ್ರಿಕ ಶೂರಸಿಂಗನು |
ಕಲಿಹನುಮನೆಂದೆಂಬ ನಾಯಿಗಳು ನೆರೆದವವನೊಡನೆ || ೧೬ ||

ನರಿಗೊಲುವ ಮೊಲಗುಲಿಕ ಚೆನ್ನಿಗ | ಬರಗಲವ್ವಳ ಜುಂಜ ಚುಂಚನು |
ಬರಿ….ಮುಕ್ಕನು ಕಡವು ಗಡಿಕನು ಪಂದಿಮಾರಿಗಳೂ ||
ಹರಿಣ ಕೇಸರಿ ಹುಲ್ಲೆಬಾಕನು | ಮರೆಗುಱಿಕ ಹುಲಿದೊಳ್ಗ ಕಾಲನು |
ಕರಿಯ ಜೋಗಿಯೆನಿಪ್ಪ ನಾಯಿಗಳು ನೆರೆದುವವನೊಡನೆ || ೧೭ ||

ಕಣ್ಣಿವಲೆ ಹೊಡೆವಲೆ ಹೊಸೆದಕಾ | ಲ್ಗಣ್ಣಿವಲೆ ತಳ್ಳುವಲೆ ಪುರಿಯೊ |
ಕ್ಕಣ್ಣಿವಲೆ ಹಾಸುವಲೆ ಬೀಸುವಲೆಯೆ ತಟ್ಟಿವಲೇ ||
ತಿಣ್ಣವಲೆ ಜೋಡುವಲೆ ಹೊಸೆದಿ | ಕಣ್ಣಿವಲೆ ಚಕ್ರವಲೆ ಮಿಗಿ ಮು |
ಕ್ಕಣ್ಣವಲೆ ಪೇರ್ವಲೆಯ ಪೊ ಱೆಗಳು ವಿಂಧಕನಕೂಡೆ || ೧೮ ||

ಎರಳೆವಲೆ ಹಂದಿವಲೆ ಹೊಯ್ವಲೆ | ಹರಹುವಲೆಗಳೆಳೆವಲೆ ಹುಡಿಕೆವಲೆ |
ಮರೆವಲೆಗಳಾಗೂಡುವಲೆ ಜಲ್ಲೆವಲೆ ಕೊಲ್ಲಿವಲೆ ||
ಕರಿಯ ಜವಿವಲೆ ಮುಸುಕುವಲೆ ಬಿ | ತ್ತರದ ನೇಣ್ವಲೆ ಮೊಕರವಲೆ ಬೇ |
ಡರಸಿರದೊಳೊಪ್ಪಿದುದು ವಿಂಧ್ಯಕನಿಕ್ಕೆಲದೊಳಲ್ಲಿ || ೧೯ ||

ಗಿಡುಗಸಾಳುವಕುಯ್ಯ ಓರಣ | ಕಡುಲಗಡುವೆಸರವಣ ಜುಗಳ |
ನೊಡನೆ ತೋಡನುಹುಲಣಜುಯಿ ಹಕ್ಕಿಗಳನವರೂ ||
ಪಿಡಿದು ಮುಂಗೈಗದ್ದುಗೆಯೊಳಿ | ಕ್ಕೆಲದೊಳೊಲೆವಾ ಸೋವುಗಟ್ಟಿಗೆ |
ಸಡಗರದಿ ಸೌರಂಭವೆಸೆದುದು ವಿಂಧ್ಯಕನ ಕೂಡೆ || ೨೦ ||

ಕರಿನಿದೀಹದ ಹುಲಿಯೆರಳೆನವಿ | ಲರಗಿಳಿಗಳಾ ಕುಳುವ ಲಾವಿಗೆ |
ಪುರುಳಿಯೆಱಲಾವಿಗೆ ಬು ಱಿಲೆಕಕ್ಕಱಗವುಜು ಬೆಳುವ ||
ಹರಡೆ ಚೆಲುಮಿಲಿಗನು ಚಿಲುವೆಗಿಜು | ಗಿರಳೆ ಕಮ್ಮರನಸಗ ಕೊಟ್ಟುಳೆ |
ಹೊರಸು ಹೊಡೆಗಳೆಂಬ ಪಕ್ಕಿಗಳವರೊಪ್ಪಿದವು || ೨೧ ||

ಪಿಕ್ಕುಳಿಕ ಚೆಂಬೋತ ಗೀಜಗ | ಕುಕ್ಕು ಕೋಗಿಲೆ ಕಾಮುರುಳೆ ಬೆ |
ಳ್ಳಕ್ಕಿಯೆಲಗೊಲೆ ಹುಲ್ಲಭಂದಿಗಳಿಬ್ಬ ನಿರ್ಮುಳುಕ ||
ಳೊಕ್ಕಿಗನು ಹುಡಿಕೀಲು ಹಾ | ಲ್ವಕ್ಕಿ ಕೋಗಿಲೆ ಕೋಟದೇವನ |
ಕುಕ್ಕುಮಾಯಿಯ ಕೆಂಡವಕ್ಕಿಗಳವರೊಳೊಪ್ಪಿದುದು || ೨೨ ||

ಅರೆಹೊರಸುತಿಟ್ಟೀವ ಮಣಿಗನು | ಗರುಡಕೊಣತನು ಮೇಣಟೀವನು |
ಗರಗೆ ತೊಂಡಲು ಗಱಳಬಿಳಿಯಾಗಱಗ ಮುಕ್ಕುಟುಕಾ ||
ಮರಕುಟುಗ ಕಟ್ಟುಱುಕ ಹಂಸೆಲೆ | ಪರಿಯಾಪರ್ದುರೆ ಪರ್ದುಚೆಂಬ |
ರ್ದುರುತರದ ಹಡೆಹದು ಪೆರುವರ್ದವರೊಳೊಪ್ಪಿದವು || ೨೩ ||

ಪೊಲನನೆಲ್ಲರುಮೈದಿ ಬಿಲ್ಲರ | ನಿಲಿಸಿ ಕಳಿವನು ಕಟ್ಟಿ ಮರಮೆ |
ಟ್ಟೊಲೆಯದೇರಿಯೆ ಸಾತೆಯನು ನಿಂದುಳಿಗಳನು ಕಟ್ಟಿ ||
ಸಲೆಬಳಸಿ ಹಜ್ಜೆಯನಱಿದು ಲೆಲೆ | ಲೆಲೆಯೆನುತೆ ಹರಕೊಳಿಸಿ ಸೋವುತ |
ರುಲಿದು ಸನ್ನೆಯ ಹಾಡೆಹಳುವನು ಜಡಿದರವರಂದು || ೨೪ ||

ಬಡಗಲೆರ್ದವು ಹುಲ್ಲೆ ತೆಂಕಣ | ಕಡೆಯ ಬಿಲ್ಲಾಳೆಚ್ಚಱಿಕೆ ನೆಱಿ |
ಪಡುವಣಿಂಬರುತೆವೆ ಮಿಗವು ಮೂಡಣವರಾಂತೆಸಿರೈ ||
ತಡೆಯ ದೊಡ್ಡಾಪಂದಿ ಮಿಗಗಳ | ನಿಡುವಲೆಯ ನೋಡೈದೆ ತೋಹುಗ |
ರೆಡೆಗವಂ ಸೋವುಗರು ಜಡಿತರೆ ವಿಂಧ್ಯಕನು ಕಡುಗಿ || ೨೫ ||

ಭರದ ಮುಷ್ಟಿಯ ಬಿಲ್ಲೊಳಡಗಿತೊ | ಶರಿರವೆನೆ ತಳ ಸಂಚದೊರ್ಮೈ |
ಇರವಿನಿಂ ನೆಱಿನಿಂದು ಕೂರ್ಗಣೆವಿಳುಕನಾಯತದಿ ||
ತಿರುವಿನೆಡೆಯೊಳು ತೊಡಚಿ ರೌದ್ರದೆ | ಬರೆ ಸೆಳೆದು ಮಿಗೆ ಕರ್ಣ ಪೂರಕೆ |
ಪೊರ ಮೃಗಕುಳವನಾವದ್ಯ ವಿಂಧಕನು || ೨೬ ||

ಮುರಿದ ಕೊರಲುಱಿ ನೆಗೆದಮೈ ಬಿಗಿ | ದುರವಳುಂಬದೆ ನಟ್ಟ ಕಣು ಕಿವಿ |
ಯೆರಡು ಮುಂಗಾಲೆತ್ತಿ ಪಿಂಗಾಲೈದೆ ಹಿಮ್ಮೆಟ್ಟಿ ||
ಭರದಿ ದಾಟಿ ಕುರುಂಗನಿರೆ ವನ | ಚರನೆ ಸಲುತಲೆ ಪಱಿಯೆ ಬಳಿಕೊಂ |
ದೆರಡು ಮೂರನು ದಾಂಟುತೊಡಲಡಿಗೆಡೆದುದವನಿಯೊಳು || ೨೭ ||

ಎಂಬೆನೆಂತೋ ನಮೋ ಜಿನಾಯ ಪು | ಳುಂಬಮವನೆಸೆ ತಾಗೆ ಗರ್ಭವು |
ತುಂಬಿದೆರಲೆಯನೊಡಲ ಶಿಶುವುಚ್ಛಳಿಸಿ ಬಿರ್ದುಗಿಲೆ ||
ಕಂಬನಿಯನೊಗುತಾ ಮಱಿಯಮ | ಯ್ಯಂಬನದು ನಕ್ಕುತ್ತ ಮೋಹದಿ |
ನಂಬಿಸುತ್ತಸುವುಳಿದುದಯ್ಯೋ ವಿಮೋಹ ಕಷ್ಟವಲ || ೨೮ ||

ಕರುಳ ಬಂಬಲು ಸೂಸೆ ಘಾಯದಿ | ಸುರಿಯಕಟವಾಯಿಂದ ನೊರೆ ಪೊಱ |
ಗಿರೆ ವದನದಿಂ ಚಿಮ್ಮೆ ಬಿದ್ದಾ ಹರಿಣನಂ ಕಂಡು ||
ಹರಿಣಿ ಕರವುತೆ ಕಂಬನಿಯನೆರ್ದೆ | ಗರಗಿ ತನ್ನನೆ ಮ ಱಿದು ಘಾಯವ |
ನೊರಸಿ ಮೊಗದೊಳು ಮೊಗವನಿಟ್ಟುದು ಬಿಟ್ಟುದೊಡನಸುವ || ೨೯ ||

ಪ್ರಳಯ ರುದ್ರನಕಾಯ್ಪುವಡಬಾ | ನಳನ ತೀವ್ರತೆ ಸಿಡಿಲ ಕಡುಪ |
ಗ್ಗಳದಿನೊಡಗೂಸಿರ್ದು ಪುಲಿಯೊಡಲಿಟ್ಟುದೋಯೆನಿಸಿ ||
ಪೆಳಱಿಸುವ ರೌದ್ರೋತ್ಕಟದ ಮೈ | ದಳೆದು ಜವ್ವನದೊಡೆಗಳೋಯೆನೆ |
ಹೊಳವ ಪಲ್ಗಳ ಪಡೆದಗುರುವಿಸಿ….ಶಾರ್ದೂಲ || ೩೦ ||

ಕಿಡಿಯನೊಗುವೆರಡಕ್ಷಿ ಕಿತ್ತುವ | ನಿಡುಗಿವಿಗಳುಂ ತೆಱದ ಹಲ್ಗಳು |
ದಡಿದ ಮಂಡೆಯ ಮೇಲೆ ಮಿಡುಕುವ ಬಾಲವಾಯತದಿ ||
ಪೊಡರ್ವ ಮೈ ಪುದಿಗೆರ್ದ ಮುಂಗಾ | ಲೆಡೆವಿಡದೆ ಘುಡುಘುಡಿಪರವದು |
ರ್ಗಡವೆಸೆಯೆ ಪೆರ್ವುಲಿಯಗುರ್ವಿಸಿದತ್ತು ಬೇಂಟೆಯಲಿ || ೩೧ ||

ಬೆದಱಿ ಶಬರಿಯರಪ್ಪಿದರು ಬೀ | ಯದರನರೆಬರು ಮರನನೇ ಱಿದ |
ರೊದಗಿದರು ಹಿಂದಕ್ಕೆ ಕೆಲರಾತನ ಬಳಿಗೆ ಕೆಲರು ||
ಪುದಿದರರೆಬರು ಕೊಂಬು ಸನ್ನೆಯ | ನೊದಱಿಸಿದರರೆಬರು ಪಿಡಿದ ಚಾ |
ಪದ ಸರಳಿನೊಡತನವನುಳಿದರು ಕಂಡನೀ ಹದನ || ೩೨ ||

ಕಡುಗಲಿಯು ವಿಂಧ್ಯಕನು ಕಾಣುತೆ | ಸಡಿಫಡಂ ಜಡಿ ರೋಡದಿರಿಮೊ |
ಗ್ಗೊಡೆಯದಿರಿ ಅರ್ದೆಸೆಯಿಱೈ ಯಿಕ್ಕಡಿಗಡೆಯಿಮೆನುತ ||
ಬಿಡಿಸೆ ನಾಯ್ಗಳನಾಗಳೌಮುಂ | ಗುಡಿಯೊಳಟ್ಟಿದುವೊದಗಿದವು ಮಿಗೆ |
ತುಡುಕಿದವು ಮುಸುಕಿದವು ಕಂಗೆಡಿಸಿದವು ಪೆರ್ಬೂಲಿಯ || ೩೩ ||

ಎಡಬಲದೊಳೌವ್ವಳಿಪ ನಾಯ್ಗಳ | ಗಡಣವನು ನೆಱಿ ಪೊಡೆದುದೌಂಕಿದು |
ದಡಸಿ ಸಿಕ್ಕಿದುದೊತ್ತಿ ಸಱ್ಹನೆ ಸೀಳಿತಿಕ್ಕೆಲಕೆ ||
ಕೆಡಹಿದುದು ಬಿಲ್ಲರ ನೆರವಿಯೊ | ಕ್ಕಡಗುದಿಂದುದು ರಕುತಗುಡಿದುದು |
ಕೆಡದುದಾ ವಾಗುರೆಯೆಱಿಯನೊಂದಂಬಿನೇ ಱಿಂದ || ೩೪ ||

ಬುಳ್ಳನಂ ಹೊಳ್ಳಿಸಿತು ನೆಱೆಚಿನ | ಬಳ್ಳನಲ್ಲೆಯನೈದೆ ಬಗಿದುದು |
ಬಳ್ಳಿಗರುಳುಚ್ಚಿದುದು ದಿಬ್ಬನ ನಿಬ್ಬರಿಯನೊಡೆದು ||
ಕೊಳ್ಳಿವಣ್ಣನ ಬಣ್ಣಗೆಡಿಸಿದು | ದಳ್ಳಿಱಿದುದಾಕಾಟವನು ಮಗ |
ಕೊಳ್ಳದೊಳಗೆಂದುಲಿವ ಬೇಡರ ನೆರವಿ ಸಂಧಿಸಿತು || ೩೫ ||

ಕಲಿಯೆನಿಪ ವಿಂಧ್ಯಕನ ಭಯದಲಿ | ನೆಲಮಱೆಯೊಳೊಂದಾದಿ ಶೂಕರ |
ನಲಸದಾದಿಕ್ಪಾಲಕರ ಮಱೆಗೊಂಡು ಗಜವೆಂಟು ||
ಜಳಜನಾಭನ ಹೊತ್ತು ಗರುಡನು | ಸಲೆಸಸಿಯ ಮಱೆಗೊಂಡು ಮೃಗವೊಂ |
ದುಳಿದುದೆಂದೊಡೆ ಅವನ ಕೃಪೆಯನದೇವ ಬಣ್ಣಿಸುವೆ || ೩೬ ||

ಕುಂದದೀ ಪರಿ ಬೇಂಟೆಯಾಡುತ | ಒಂದು ದಿನವೆಲ್ಲರನುಳಿದು ಕಲಿ |
ವಿಂಧ್ಯಕನು ವಾಗುರೆವೆರಸಿ ತೊಳಲುತಿರೆ ಕಲುನೆಲೆಯ ||
ನಿಂದ ವಿಮಳಾಮಲಮತಿಗಳೊಂ | ದಂದಗಾಣುತೆ ಬೇಗ ತಿರುವಾ |
ಯ್ಗೊಂದು ಬೋಳೆಯ ಕೋಲ ಹೂಡುತಲಾಕೆಗಿಂತೆಂದ || ೩೭ ||

ನಿಂದೆರಡು ಬಲುಪುರುಷಮೃಗಗಳ | ನೊಂದೆಕಾಲಲಿ ತರುವುಳಿದು ಕೆಡೆ |
ವಂದದಿಂ ಪಡಲೆಸುವೆ ವಾಗುರೆ ನೋಡು ಮೆಚ್ಚುಂಟಿ ||
ಎಂದಡವಳುರೆ ನೋಡಿ ಬೇಗದಿ | ಬಂದು ಪಿಡಿದೆಸುವಂಬ ಸೆಳೆದಕ |
ಟೆಂದು ನಡ ನಡ ನಡುಗಿದಳು ಭೂಪಾಲ ಕೇಳೆಂದ || ೩೮ ||

ಕೋಲನುಗಿದೆಯೊ ನನ್ನ ಕಿವಿಯೆರ | ಡೋಲೆದೆಗೆದೆಯೊಲಕಟಕಟ ನೀಂ |
ಖೂಳನೈ ನರಮೃಗವಲ್ಲ ಕಣಾ ಗುರುಗಳವರು ||
ಕೋಲವರ ತಾಗುವುದೇ ಸೂರ್ಯ | ಜ್ವಾಲೆತಾಗದು ಸಿಂಹ ಶರಭವು |
ಕಾಲನೊತ್ತುವವೆಂದೊಡವ ಱಿಂಬಲುಹೆ ನೀ ನಂಬು || ೩೯ ||

ಎನಲಿವರ ನೀನಱಿದ ತೆರನೆಂ | ತೆನಲು ಚಮರೀಬಾಲ ಗಜಕೊಂ |
ಬನುತ ಮೌಕ್ತಿಕದಂತ ಜೇನೆಯಿ ಪುಲಿಯುಗುರುಗಳನು ||
ಜನಕೆ ಮಾರುತೆ ಹೋಗಿ ಕಂಡೆನು | ಜನಪನಿವರನು ರಾಜಗೃಹ ಪ |
ತ್ತನ ವೃಷಭನು ಸುಭಕ್ತಿಯೊಳೆರಗಿ ಪೂಜಿಸಿದ || ೪೦ ||

ಯೆಂಬ ನುಡಿಕವಿಸವಿಗೊಡಲು ಬಿ | ಲ್ಲಂಬ ಬಿಸುಟನು ಸುಗತಿದಾಣಮ |
ನಿಂಬಱಿದು ತಾನೇಱುವಂತೇ ಱಿದನು ಬಲುಗುಂಡ ||
ತುಂಬಿ ತಾವರೆಗೆಱಗುವಂತಿರ | ಳುಂಬವೆಱಗಿ ಬಳಿಕ್ಕೆ ಮುನಿಪಾ |
ದಾಂಬುಜದ ಕೆಲದಲ್ಲಿ ಮೈಯಿಕ್ಕಿರ್ದ ಭಕ್ತಿಯಲಿ || ೪೧ ||

ಇರಿನಿಶಾಟನ ಕಾಲಲಬ್ಧಿಯ | ಭರವಱಿದು ಕೈಯೆತ್ತಿಕೊಂಡಾ |
ಗುರುಗಳಮಳ ದಯಾಮೃತವನೆಱಿದವನ ಹೊಲೆದೊಳೆದು ||
ಹರಸಿದರು ನೀಂ ಬೇಡನೇ ಮಹಾ | ಪುರುಷಕಣಾ ಮಗನೆ ಮಳಿನಾಂ |
ಬರದಿ ಕಟ್ಟಿದ ಮಾಣಿಕವೆ ಕೇಳೆಂದನಾ ಮುನಿಪ || ೪೨ ||

ಎಂದೊಡಾಗಲು ವಾಗುರಿಗೆ ಜೀ | ಯಂದು ನಿಮ್ಮೀ ಕಾಲುಗಳ ಕಡು |
ಚಂದದಲಿ ಪೂಜಿಸಿಯೆರಗಿದಾ ವೃಷಭದತ್ತಂಗೆ ||
ಸಂದಣಿಸಿದಾ ಸೆಟ್ಟಿಗಳಿಗೇ | ನೆಂದು ಪೇಳಿರಿ ರಾಜಗೃಹದೊಳೆ |
ಗೆಂದೊಡೆಂದರು ಮಗುಳೆ ಧರ್ಮವ ಹೇಳಿದೇಯೆನಲು || ೪೩ ||

ಧರ್ಮದಿಂದೇನಹುದು ಗುರುಗಳೆ | ವರ್ಮದಿಂದುಣಲುಡಲಹುದು ಸ |
ದ್ಧರ್ಮದಿಂಗಿಟ್ಟಾಯುವುತ್ತಮ ಜಾತಿಕುಲವಹುದು ||
ಧರ್ಮದಿಂ ನೀನೆಂದ ರಾಯನ | ನೂರ್ಮಡಿಯ ಸರಿಯಪ್ಪುದೆನಲಾ |
ಧರ್ಮವನೆ ಹೇಳೆನ್ನ ಗಂಡಂಗೆಂದೊಡೆಂದಪರು || ೪೪ ||

ಕೊಲೆಯನುಳಿ ಹುಸಿಯದಿರು ಕಳವಿನ | ಹೊಲಬಮರಿ ಪರವಧುಗಳನು ಹಂ |
ಬಲಿಸಬೇಡತಿಕಾಂಕ್ಷೆಯನು ಮಾಣೆಂದು ವಿಮಳಮತಿ ||
ಸಲೆ ಮಹಾವ್ರತಿ ಐದಣುವ್ರತ | ಗಳನೊಸೆದು ಕುಡೆ ವಿಂದ್ಯಕನಮನ |
ವೊಲಿದು ನಲಿದು ಮಹಾಪ್ರಸಾದವೆನುತ್ತ ಕೈಕೊಂಡ || ೪೫ ||

ಕಳ್ಳನುಣ್ಣದಿರಣ್ಣ ಮಾಂಸವ | ಕೊಳ್ಳದಿರು ಜೇನಯ್ಯಗುಡಿಯದಿ |
ರ್ಮೆಲ್ಲದಿರುಗಡಲರ್ತಿ ಮೊದಲಾದುದೈದು ಮರದ ಫಲವ ||
ಒಳ್ಳಿದನು ಜಿನನೆನಗೆ ದೇವನು | ಒಳ್ಳಿದರು ಜಿನಮುನಿಯೆ ಗುರುಗಳ |
ದೊಳ್ಳಿತದು ಜಿನಮತವೆ ಮತವೆಂದೈದೆ ನಂಬೆನಲು || ೪೬ ||

ಹಸಿದವಗೆ ಅಮೃತಾನ್ನಭೋಜನ | ವೊಸೆದುಕೊಡೆ ಕೊಂಡಂತೆ ದೈವದ |
ಗಸಣಿ ಮುನ್ನಿಲ್ಲದಗೆ ಸದ್ಗುರು ಕೊಟ್ಟ ಧರ್ಮವದು ||
ಸಸಿನೆ ಸಂತಸಗೊಡುತೆ ನಿಂದುದು | ಬಿಸಿಯ ಕರ್ಬುನವುಂಡನೀರವೋ |
ಲೆಸೆದುದಾ ಸಮ್ಯಕ್ತ್ವವವರಡಿಗೆಱಗಿ ಬೀಳ್ಕೊಂಡ || ೪೭ ||

ಹೆಂಡತಿಯ ಮಾತುಗಳ ಕೇಳಿದ | ಗಂಡಕೆಡುವನೆನಿಪ್ಪ ಮಾತಿಗೆ |
ಖಂಡನವ ಬರೆದಳು ಪುಳಿಂದಿ ಹಿತೋಪದೇಶದಲಿ ||
ಹೆಂಡತಿಯೆ ಗುರುವಾದಳಾಗಲು | ಗಂಡಗಮೃತವ ಕೊಡುವ ಗುರುಗಳ |
ತಂಡವನು ಮುನ್ನಱಿದು ತಿಳುಪಿದ ಕತದಿ ಕೇಳರಸ || ೪೮ ||

ವ್ರತವ ಪಾಲಿಪಬಗೆಯವಗೆ ಪು | ಟ್ಟಿತು ಫಣಿಗೆ ಮಾಣಿಕ್ಯ ಹಂದಿಗೆ |
ನುತ ಮೌ‌ಕ್ತಿಕ ಪುಟ್ಟಿದಂತಿರೆ ತೊಗಲೆಲುವು ರಗುತ ||
ಹತ ಶರೀರಗಳಿಲ್ಲದಲ್ಲಿಯೆ | ಸ್ಥಿತಿವಡೆದು ಗಿಳಿಗಿಳಿಕರ್ದುಂಕದ |
ಹಿತ ಫಲಂಗಳನುಂಡು ತಿಳಿನೀರ್ಗೊಂಡು ಸಖವಿಹರು || ೪೯ ||

ಕೊಲೆಯೆ ಮಲ ಆ ಮಲವೆಪೊಲೆ ಆ | ಪೊಲೆಯನುಳ್ಳನೆ ಪೊಲೆಯನವನಿಂ |
ಪೊಲೆಯೆ ನೋಡಲು ಸಾರ್ಥಕತೆವಡೆದಮಲನಿರ್ದೊಡಲು ||
ಸಲೆಪವಿತ್ರತೆ ತಳೆದುದಲ್ಲದೆ | ಕೊಳೆಯೊಡಲದೇಂ ಶುಚಿಯೊ ವಿಂಧ್ಯಕ |
ಮಲರಹಿತ ವರ್ತನೆಯನುತ್ತಮನಾದನೆಲೆ ಭೂಪ || ೫೦ ||

ತಂದೆತಾಯ್ಗಳುಮೃಗಗಳಾದವು | ಬಂಧು ಬಳಗವು ಖಗಗಳಾದುವು |
ತಂದು ಕೊಟ್ಟವರಾದರಾಮೃಗಗಳು ಕಿರಾತಂಗೆ ||
ಎಂದೊಡಿನ್ನೆಲ್ಲಿಯದು ಮಾಂಸದ | ದಂದುಗವು ನಿಮಗಿನ್ನೆನುತ ಪು |
ಳಿಂದಿಯರುವಾಗುರಿಯ ಚಿತ್ತವ ನಿಂದುನುಡಿಸಿದರು || ೫೧ ||

ಕಂಡೆನಲ ಕೈದೊಡನೆಯವನಿ | ತ್ತಂಡವನು ಎಸುವಂಬನಾನೆಳ |
ಕೊಂಡಫಲವೇನೆನುತೆ ಕಣ್ಣಿರ್ದಂದು ಬಿಸುಸುಯ್ದು ||
ಗಂಡನಾ ಕೈ ಬಾಯ ಮಂತ್ರಿಸಿ | ದಿಂಡೆಗರು ಕಟ್ಟಿದರು ಬಳಿಕಿಂ |
ಗಂಡನೇಂ ಗಂಡನೊಯೆನುತೆ ಮತ್ತೊಂದನೆಣಿಸಿದಳು || ೫೨ ||

ಗಂಡಾನಾವುದನಮ್ಮ ಕೇಳಿರೆ | ಕೊಂಡುದೇ ಮೊರೆಬಿಟ್ಟು ದೇಹಗೆ |
ಹೆಂಡತಿಗೆಯಿದು ಗುಣವಲಾಯೆಂದೆಂದೆಗದಡುಹರು ||
ಖಂಡದಾಸೆಗೆ ಬಯಸುವೆನೆ ಬೆಸ | ಗೊಂಡಡೊಂದನು ಪೇಳೆನಲ್ಲದೆ |
ಗಂಡ ನಡೆದುದೆ ಮಾರ್ಗವೆಂದಿರುತಿರ್ದಳನ್ನೆವರ || ೫೩ ||

ಒಂದುದಿನ ಕಡುಹಸಿದುಪಣ್ಗಳ | ನೊಂದೆಡೆಯೊಳುಂ ಕಾಣದರಸುತ |
ಬಂದುಕಂಡಾ ತುಂಬಿದರಪಣ್ಗೊಯ್ಯೆಪೊಳಲೊಳಗೆ ||
ಅಂದು ಬಿರ್ದಾ ಹಣ್ಣದೆಗೆದಪೆ | ನೆಂದು ಕೈದುಡುಕುವುದು ಜಿನಜಿನ |
ತಿಂದುದಹಿ ವಿಂಧ್ಯಕನ ಕಳಿವವನಾರೊ ಕಾಲವನು || ೫೪ ||

ಆ ಗುರುಗಳಂದೈದು ಮಂತ್ರವ | ನಾಗ ಜಪಿಸುತೆ ಚಿತ್ತದೊಳು ಲೇ |
ಸಾಗಿ ಜಿನಪದ ಭಕ್ತಿಯಲ್ಲದೆ ಪೆಱವ ಪೊಱಗಿಕ್ಕಿ ||
ಬೇಗತನುವನು ಬಿಸುಡೆಶೋಕಿಸಿ | ವಾಗುರಿಕೆ ಬಿಗಿಯಪ್ಪಿ ಗಂಡನ |
ಮೇಗೆ ಮೂರ್ಛಿಸಿಯಿರ್ದಳೊಂದರೆ ಜಾವಪರ್ಯಂತ || ೫೫ ||

ಮೋಹದಿಂದಾ ಮೂರ್ಛೆವೋಗರು | ಮೋಹದಿಂದಾ ಮರಣವಯಿದರು |
ಮೋಹದಿಂದಾರ್ಕೆಡರು ವಾಗುರಿಕಣ್ತೆಱೆದು ಬಳಿಕ ||
ಈ ಹರಣವಿನ್ನೇಕೆನುತ ಕಾ | ಳಾಹಿಯಾಬಾಯೊಳಗೆ ಕೈಯನು |
ಮೋಹಿ ವಿಷದುಬ್ಬೆಗದಿನುಳಿದಳು ತನ್ನ ಕಾರೊಡಲ || ೫೬ ||

|| ಅಂತು ಸಂಧಿ ೫ಕ್ಕಂ ಮಂಗಲ ಮಹಾ ||