ಸಂಧಿ ೩೯

ಜನವಿನುತ ಪಾಂಡವರು ಬದರೀ | ವನದೊಳಿರೆ ಬಂದಿಂದ್ರರಥ ಖಚ |
ರನು ಕುರುಕ್ಷಿತಿ ಪತಿಯನೊಯ್ದೊಡೆ ತರಿಸಿದರು ಬಳಿಕ || ಪದ ||

ಶ್ರೀವರನು ಮೊದಲಾದ ಯಾದವ | ಭೂವರರು ತಾವತ್ತ ಪಾಂಡುಜ |
ರೀ ವಿಧದಿ ವನವಾಸವೈದಿದರೆಂದು ಅಭಿಮನ್ಯು ||
ಸಾವಧಾನದಿನಾ ಸುಭದ್ರಾ | ದೇವಿ ಪೇಳಲು ಕೇಳ್ದು ಕರ್ಮದ |
ಹಾವಳಿಯನೇನೆಂಬೆನೆಂದರು ಭೂಪ ಕೇಳೆಂದ || ೧ ||

ನಳಿನನಾಭನು ನೀತಿಯುತ ದೋ | ವಳ ಮಹಾ ವಿಕ್ರಮನೆನಿಪ ನಿ |
ರ್ಮಳನನೊಪ್ಪುವ ಕೃಷ್ಣನೆಂಬನ ಕಳುಹೆ ಪಾಂಡವರ ||
ಬಳಿಕೆ ಬಂದಡಿಗೆರಗಿ ನಿಮ್ಮಡಿ | ಗಳನು ರಕ್ಷಣ್ಯದಲಿ ಕಾದಿರ |
ಲೊಲಿದು ಕಳುಹಿದನೆಂದನು ಧರ್ಮಜಗೆ ಕೃಷ್ಣ || ೨ ||

ಎಂದೊಡವರತಿ ಹರುಷವಾಂತರು | ತಂದ ಕತಿಪಯ ಸುಭಟತತಿ ಸಹ |
ಬಂದ ಕೃಷ್ಣನು ಪಾಂಡವರ ಬೀಡಿರ್ದನಿರಲೆನುತ ||
ಒಂದು ದಿನ ಮನದೊಳು ವಿಹಾರಿಸು | ತಂದು ಕಂಡನು ಇಂದ್ರಕೀಲ ನ |
ಗೇಂದ್ರವನು ಚಂದನದಶೋಕೆಯ ಸಾನುವನು ಪಾರ್ಥ || ೩ ||

ಅದು ಮಹಾ ಪಂಚಾಶ್ಯ ಶಾರ್ದೂ | ಲದ ವಿಷಮ ಸತ್ವಗಳ ಹಾವಲಿ |
ವಿದಿತ ಕಿನ್ನರ ಕಿಂಪುರುಷ ಗಂಧರ್ವ ಯಕ್ಷಾದಿ ||
ಪಡೆದು ಕ್ಷಿಡಿಸುತಿಪ್ಪುದರ್ತೀ | ನದರೊಳಾ ಗಾಂಡೀವಿ ಬಿಲುಗೊಂ |
ಡದರ ಸಿರಿಯನು ನೋಡುತೈದಿದನೀಂದ್ರ ಕೀಲವನು || ೪ ||

ಇದಿರೊಳೀಕ್ಷಿಸಿ ಕಂಡನಾ ಪೇ | ರ್ವಿದಿರ ತುದಿಯೊಳಗಿರ್ದ ಖಚರನ |
……………………………………………………. ||
ಚದುರನೊಂದಂಬಿನಲಿ ಪರಿಯೆನೆ | ಬಿದಿರೊರಗಲಾ ಖೇಚರನನಾ |
ಸದಯನಾದರದಿಂ ಪಿಡಿದು ಬಿಡಿಸಿದನು ಬಂಧನವ || ೫ ||

ಕಲಿಧನಂಜಯನಡಿಗೆ ಖೇಚರ | ನೊಲಿದೆರಗಿ ಎಲೆ ಪುಣ್ಯ ಪುರುಷನೆ |
ಉಳಿದೆ ನಾನಿಮ್ಮಡಿಯ ಕೃಪೆಯಿಂದೆಂದು ಬಿನ್ನವಿಸೆ ||
ಎಲೆ ವಿಯಚ್ಚರ ನಿನಗೆಡರ ಕಡು | ಬಲಿದನಾರೆನೆ ಪೇಳಿದನು ದೋ |
ರ್ವಲನೆ ವಿಜಯಾರ್ಧೋತ್ತರ ಶ್ರೇಣಿಯೊಳು ನೆರೆಮೆರೆವ || ೬ ||

ಪುರವು ನೆರೆ ಅಂಬರ ತಿಲಕವಾ | ಪುರವರನು ನಾನಿಂದ್ರರಥ ಖೇ |
ಚರನೆನಿಸೆಗೀ ಗಿರಿಗೆ ವಿದ್ಯಾ ಸಾಧನಾರ್ಥದಲಿ ||
ಬರಲು ಮತ್ತಾಶ್ರೇಣಿಯೊಳು ಬಿ | ತ್ತರದಲೆಸೆವಾ ಗಗನವಲ್ಲಭ |
ಪುರದ ಮೇಘರಥಾಖ್ಯನೆನ್ನಯ ಪಗೆವನೈತಂದ || ೭ ||

ಅರಸ ಕೇಳಾ ವಿದ್ಯ ಮಂತ್ರೋ | ಚ್ಛರಣೆಯಿಂ ಜಪವಿರ್ದ ನನ್ನನು |
ಮರಸಿ ಬೆನ್ನನೆ ಬಂದು ಬಂಧನಗೈದವನು ತನ್ನ ||
ಪುರಕೆ ಪೋದನು ನಿಮ್ಮ ತೆರೆನನು | ವಿರಚಿಸುವುದೆನಲೆಲ್ಲವನು ವಿ |
ಸ್ತರದಿಯರುವಿದನಿಂದ್ರರಥಗೆ ಸಿತಾಶ್ವನೊಲವಿಂದ || ೮ ||

ಸಾಧಿಸಿದ ವಿದ್ಯೆಗಳನತಿ ಪು | ಣ್ಯೋದಯನು ನೀನಿದು ನಿನಗೆ ಸುಖ |
ಸಾಧ್ಯಮಪ್ಪವು ವಿಘ್ನವಾದುದು ತನ್ನ ಸಾಧನೆಗೆ ||
ಮೇದಿನೀಶ್ವರ ಜಯಸೇನುತ ನಿ | ರ್ವಾದದಿಂದ್ರರಥಾಖ್ಯ ಚರನನು |
ಸಾದರದಿ ವರಮಂತ್ರಗಳ ನೊಸೆದಿತ್ತನರ್ಜನಗೆ || ೯ ||

ಗಿರಿಯ ಗುಹೆಯೊಳು ವಿದಿತ ಚಕ್ರೇ | ಶ್ವರಿ ಮಹಾಯಕ್ಷಿಯ ಸಮಕ್ಷದಿ |
ನರನು ಸಾಧಿಸೆ ಶತ್ರುಮದ ಭಂಜಿನಿಯು – ಮಂತರದಿ ||
ವರ ತ್ರಿಲೋಕ ಮಹಾ ಪ್ರಸಾರಿಣಿ | ನೆರೆ ಮನೋರಥ ಸಿದ್ಧಿ ಮೊದಲಾ |
ದುರುತರದ ಮೂವತ್ತು ವಿದ್ಯೆದೇವತೆಗಳಾಗ || ೧೦ ||

ಬೆಸಸು ಬೆಸನೇನೆನುತ ಬಂದ | ರ್ವಿಸಲು ಕಂಡು ಮನೋನುರಾಗದಿ |
ನೆಸೆದು ಪಡೆದಾ ವಿದ್ಯೆಗಳ ಪೂಜಿಸಿ ಸರಾಗದಲಿ ||
ಅಸಿತ ಕಪಿಕೇತನನು ಕೆಲದಲಿ | ಮಿಸುಗುವೀಂದ್ರರಥನೊಳು ಸಂಭಾ |
ಷಿಸುತಿರಲ್ಕೇನೆಂಬೆನೆಲೆ ಭೂಪಾಲ ಕೇಳೆಂದ || ೧೧ ||

ಪರಿಜನವು ಸಹ ತನ್ನ ಕಾಂತೆಯು | ವೆರಸು ಮೇಘರಥಾಖ್ಯನವರಿಗೆ |
ಪಿರಿದು ಬಂಧನದಿಂದ್ರ ರಥನನು ತೋರಿಸುವೆನೆಂದು ||
ನೆರೆದು ಬಂದಾವಂಶವುಡಿದುದ | ನರನೊಳಿಂದ್ರ ರಥಾಖ್ಯನಿರ್ದಾ |
ತೆರನನೀಕ್ಷಿಸಿ ನಾಡೆ ಬೆರಗಾದನು ವಿಯಚ್ಚರನು || ೧೨ ||

ನರನನೀಕ್ಷಿಸಿಯಾದರದಿ ಬಿ | ತ್ತರದ ಪಡೆಯೆನೆ ತನ್ನರಾಶಿಯ |
ನೆರವಿಯೆನೆ ಖಗನಿಂದ್ರ ಸುತಗಾಂಡಿವವ ಪಿಡಿದೆತ್ತಿ ||
ಭರದಿ ಜೇವೊಡೆದೆಯ್ಯೆ ಮಿಗೆ ಭೀ | ಕರದ ಠಂಕೃತಗೇಳ್ದು ಭೋರೆನೆ |
ಸರಳ ಮಳೆಯನು ಮೇಘರಥ ಬಲಮೇಘ ಬೊಗ್ಗಲೆಯೆ || ೧೩ ||

ಮೇಲೆ ಬೀಳುವ ಕಳವಿದೆಲೆ ಬಿರು | ಗಾಳಿಗೌ ಹೊರತೇಲುವಂದದೆ |
ತೇಲಿದವು ಫಲುಗುಣನ ಬಾಣದ ಗರಿಯಗಾಳಿಯಲಿ ||
ಕೋಲು ಹರಿದವು ಖೇಚರರ ತಲೆ | ಯೋಳಿ ಪಾರಿದವುಡಿದ ತೊಡೆಮೊಳ |
ಕಾಲು ಕೈ ಕರುಳರುಣ ಜಲಗಳ ಮಳೆ ಕರೆದುದಾಗ || ೧೪ ||

ಅಸಮಭುಜ ಸವ್ಯಾಪ ಸವ್ಯದಿ | ನೆಸೆಸಿಳೀಮುಖವಂದು ಪರಿದಾ |
ಗಸದೊಳೀಕ್ಷಿಪ ಸುರಸರಣಿಯನು ಬೇಡಲ್ಪಟ್ಟಿದುದು ||
ಕುಸುರಿದರಿದವು ಖಚರ ಬಲವನು | ಮಸಗಿ ಮೇಘರಥನು ಬಳಿಕ ಮಂ |
ತ್ರಿಸಿ ಮಹಾಸ್ತ್ರದಲೆಚ್ಚನಾ ಶಾಖಾಚರಧ್ವಜನ || ೧೫ ||

ಖಂಡಿಸಿದನಾ ಖಂಡಲನ ಸುತ | ಚಂಡಬಾನವನೊಡನೆ ಜಯ ಕೋ |
ದಂಡನಾ ಖೇಚರನ ಬಿಲ್ಲಿನದೊಂದು ವಿಸಿಕದಲಿ ||
ತುಂಡುಗಳೆಯಲು ಬೆದರಿ ಹೊಯ್ದನು | ಕಂಡು ಕೈ ಪರೆಗುಟ್ಟಿ ದಿವಿಜರ |
ಹಿಂಡುನಗುತಿರಲಿಂದ್ರರಥ ಬೆಂಕೊಂಡನಹಿತನನು || ೧೬ ||

ಓಡಬೇಡೆಲೆ ಮೇಘರಥ ನೀಂ | ಹೇಡಿಯಲ್ಲದೊಡೆನ್ನ ವಿದ್ಯದ |
ಜೋಡಣೆಗೆ ಕೈದುವನುಳಿದು ಜಪವಿರ್ವನನಗಿಂತು ||
ಮಾಡುವೈ ಎಂದಟ್ಟಿ ಹಿಡಿದತಿ | ಗಾಢದಲಿ ಸಲೆಕಟ್ಟಿ ತಂದು ವಿ |
ಭಾಡಿಸುತ ಗಾಂಡೀವಿಗೊಪ್ಪಿಸಿದನು ವಿಯಚ್ಚರನು || ೧೭ ||

ಕಟ್ಟಿಗೊಳಗಾಗದನವಧ್ಯನು | ಬಿಟ್ಟು ಕಲೆಯಿಂದ್ರನರಥಕೆಳೊಡ |
ವುಟ್ಟಿದಣ್ಣನ ಕಂಡವೊಲು ಬೆಸಕೆರಗು ಮೇಘರಥ ||
ಬಿಟ್ಟು ಕಳೆ ವೈರವನೆನುತ ಕೈ | ಗಟ್ಟಬಿಟ್ಟೊಡೆ ಜೀಯೆನುತೊಡಂ |
ಬಟ್ಟು ಫಲುಗುಣಗೆರಗಿ ಬೀಳ್ಕೊಂಡನು ನಿಜಾಶ್ರಯಕೆ || ೧೮ ||

ಬಳಿಕಲೆಸೆದಾ ಇಂದ್ರರಥನಾ | ಗಲೆ ವಿಮಾನವ ಬರಿಸಿಭೂರ |
ತಿಲಕ ನೀನೆನ್ನಾಲಯಕೆ ಬರಬಹುದೆ ಎಂದೊರೆದು ||
ಒಲಿದೆರಗಿ ಅರ್ಜುನನನೊಡಗೊಂ | ಡಳಿವಿಗಳಿದತಿರಾಗದಲಿ ದೋ |
ರ್ವಳನು ತನ್ನಯ ಪೊಳಲ ಪೊಕ್ಕನು ಮೊಳಗೆ ಪಟುಪಟಹ || ೧೯ ||

ಅರಮನೆಯನೈದಿದನು ತನ್ನೆಸೆ | ವರಸಿಯರ ಕರೆಸಿದವು ಪು |
ತ್ರರ ಬರಿಸಿದನು ತರಿಸಿದನಮಾತ್ಯರನಾಪ್ತ ಜನದೊಡನೆ ||
ನರನ ಚರಣಕ್ಕೆರಗಿಸಿದನೆ | ಲ್ಲರನು ತನಗುಪಕರಿಸಿದಂದವ |
ನೊರೆದಾತನ ಗಂಡಗುಣವನು ಜಾವಪರಿಯಂತ || ೨೦ ||

ಬಳಿಕ ಮಂಗಲಮಜ್ಜನವನನು | ಗೊಳಿಸಿ ಪೂಜಾದ್ರವ್ಯಸಹ ಜಿನ |
ನಿಳಯವನು ಪೊಗಿಸಿದನು ಖಗಪತಿ ತೀರ್ಥವಂದನೆಯು ||
ಗಳಿಸಿದುದು ನಿನ್ನಿಂದಮೆವಂಗೆ | ದಳವಿಗಳಿದತಿ ಭಕ್ತಿಯಲಿ ನಿ |
ರ್ಮಲ ವೃಷಭನಾತನನು ಪೂಜಿಸಿವಂದಿಸಿದನೊಲಿದು || ೨೧ ||

ಪ್ರವರ ಜಿನಮುನಿಗೆರಗಿ ಹರಕೆಯ | ಕವಚವನು ಮಿಗೆತೊಟ್ಟು ಬರೆ ಗಾಂ |
ಡಿವಿಯನೊಡಗೊಂಡಮೃತ ಬೋನನುಗೊಲಿಸಿ ವಿನಯದಲಿ ||
ಸವಿವೊಡೆದ ಕರ್ಪೂರ ತಾಂಬೂ | ಲವನು ಕೊಟ್ಟುಪಚಾರದಿಂ ಚಿ |
ತ್ತವನೊಲಿಸಿದನು ಮಾಡಿದುದು ಮರವನೆ ಗುಣೋನ್ನತನು || ೨೨ ||

ನಂದನರ್ಘ್ಯಾಂಬರ ವಿಭೂಷಣ | ದಿಂದ ಪೂಜಿಸಿಯರ್ಜುನಂಗೊಲ |
ವಿಂದ ವಂದಿಸಿ ತನ್ನ ನೂರ್ವರು ಸತ್ಕುಮಾರರನು ||
ತಂದು ಕೊಟ್ಟೆಲೆ ದೇವ ನಿಂದಯೆ | ಯಿಂದ ಬಿಲು ವಿದ್ಯೆಯನು ಶಿಕ್ಷಿಪು |
ದೆಂದವರನೆರಗಿಸಿದನೆಲೆ ಭೂಪಾಲ ಕೇಳೆಂದ || ೨೩ ||

ಬಿಲ್ಲ ಬಿಜ್ಜೆಯ ಕಲಿಸುತರ್ಜುನ | ನಲ್ಲಿ ಮಾಸತ್ರಯವನಿರ್ದನು |
ಮೆಲ್ಲನಣ್ಣನನೈದಬೇಕೆನೆ ಸುತರು ಸಹಖಚರ ||
ನಿಲ್ಲದೇರಿಸಿ ಮಣಿವಿಮಾನವ | ನೆಲ್ಲರುಂ ಬದರೀವನಕ್ಕೆ ಬಂ |
ದಲ್ಲಿ ಇಳೆಗವತರಿಸಿ ಯಮನಂದನಗೆ ನಮಿಸಿದರು || ೨೪ ||

ಇಂದ್ರರಥನನಿಬರಿಗೆ ತಾನೊಲ | ವಿಂದ ಪರಿಪರಿ ವಸ್ತುಗಳ ಮಿಗೆ |
ತಂದು ಪಾಗುಡಗೊಟ್ಟು ತಮ್ಮನಿಬರು ಯಥಾ ಕ್ರಮದಿ ||
ವಂದಿಸಲು ಧರ್ಮಜನು ಖಚರನ | ನೊಂದಿ ಕುಳ್ಳಿರಿಮೆನಲು ಕೃಷ್ಣನ |
ತಂದು ತನ್ನಾಸನದೊಳಗೆ ಕುಳ್ಳಿರಿಸಿಕೊಂಡಿರ್ದ || ೨೫ ||

ಎಲೆವಯಿಚ್ಚರ ನಿಮಗೆ ಫಲುಗುಣ | ನೊಳು ಕಲೆಯಿದೆಂತಾದುದೆಂದಾ |
ನಳಿನಾಭನು ಕೇಳೆ ತನ್ನಸುವನು ಪೊರೆದನೀತ ||
ಬಳಿಕ ವಿದ್ಯೆಯ ಸಾಧಿಸಿದ ದೋ | ರ್ವಲದಿ ಗೆಲಿದನು ಖಗನ ನಿಮ್ಮ |
ಕ್ಕಳಿಗೆ ಬಿಲುವಿದ್ಯೆಯನು ಕಲಿಸಿದನೆಂದನೆಲ್ಲವನು || ೨೬ ||

ಎಂದು ಪಾಂಡಜನರೆಲ್ಲರನು ಬಲ | ವಿಂದ ಬೀಳ್ಕೊಂಡೇರಿ ಪುತ್ರರ |
ಸಂದಣಿಯಲಾ ಮಣಿವಿಮಾನದೆ ಪೋಪ ಸಮಯದಲಿ ||
ಬಂದನಾ ಧೃತರಾಷ್ಟ್ರರಾಯನ | ನಂದನನು ನೂರ್ವರು ಸಹೋದರ |
ರೊಂದಿಬರೆ ಚತುರಂಗ ಸೈನ್ಯಾನೂನ ವೈಭವದಿ || ೨೭ ||

ಧಾರಿಣಿಯನವರುಳಿದು ವಿಪಿನದ | ನಾರು ಬೇರನು ತಿಂಬ ಬಡತನ |
ಸೇರಿ ಪಾಂಡುಜರಿಹುದ ನೋಡುವೆ ತನ್ನ ವೈಭವವ ||
ತೋರಿಸುವೆನೆಂದೈದೆ ಬರೆ ತಾ | ನೀರದಾಧ್ವರದೊಳಿಂದ್ರರಥನು ಕು |
ಮಾರಕರು ವಿಸ್ಮಯವನಾಂತರು ನೋಡಿ ವೈಭವವ || ೨೮ ||

ಬಂದು ವಿಪಿನವ ಪೊಕ್ಕು ಮಧ್ಯದೊ | ಳಂದವೆಸೆವಾಸ್ಥಾನ ಶೋಭೆಯ |
ಚಂದದಲಿ ವಿರಚಿಸೆನವಾಮ್ರತರು ಪ್ರದೇಶದೊಳು ||
ಸಂದ ಮಣಿಪೀಠಿಕೆಯಲತಿಮುದ | ದಿಂದಲೊಡ್ಡೋಲಗವನಿತ್ತು ನೃ |
ಪೇಂದು ಲಾಲಿಸುತಿರ್ದನಾ ಗಾಣಿಯರ ಗಾನವನು || ೨೯ ||

ಇತ್ತರದಲೊಪ್ಪಿದು ಘನಗುರು | ವೃತ್ತಕುಚೆಯರು ತುಂಬಿದಿಂಗಳ |
ನೊತ್ತರಿಪನಗೆಮೊಗದ ಬಿಂಬಾಧರದ ನಿಡುಗಣ್ಣ ||
ಹತ್ತು ಸಾವಿರ ಗಣಿಕೆಯರು ಮನ | ವೆತ್ತಲುಂ ಪೂತಂತೆ ತೋರಿತು |
ಬಿತ್ತರದ ನಗೆಗಣ್ಣ ಬೆಳತಿಗೆಯಿಂದ ಸಿರಿ ತುಳುಕೆ || ೩೦ ||

ಕುಶಲನವಲೋಕಿಸುವ ವಿದ್ಯೆಯ | ಬೆಸಗೊಳಲು ಪಡೆಯಾರದೆಂದಾ |
ಗಸಚರನೆ ಕೇಳೀತ ದುರ್ಯೋಧನನು ಪಾಂಡವರ ||
ವಸುಧೆಯನು ಸೆಳೆಕೊಂಡೆ ಕಪಟದ | ಹಸರಿಗನು ತಾನಿಂದಿರವನಾ |
ಬೆಸಲು ವಿಭವವ ತೋರ ಬಂದಪನೆಂದುದಾ ವಿದ್ಯೆ || ೩೧ ||

ಎನೆ ನಭಶ್ಚರನೆನ್ನ ಮಿತ್ರಂ | ನಿನಿತು ಗೆಯ್ದೆನೆಯೆಂದು ಕಾಯ್ಪಿಂ |
ದೆನಸು ವೈಕುರ್ವಣಭರದಿನವತರಿಸಿ ಭೂತಳಕೆ ||
ಘನ ನಿನಾದದಿ ಘರ್ಜಿಸುತ ಮೆಣು | ವನದಿ ಮುಸುಕಿದ ತೆರದಿ ಭೀಕರ |
ವನತಿಶಯಮೆನೆ ಮುಸುಕಿದನು ಬೆದರಿದುದು ಕುರುಸೈನ್ಯ || ೩೨ ||

ನಡುಗಿದನು ಕಲಿಕರ್ಣ ತಾನೆದೆ | ಯೊಡೆದನಶ್ವತ್ಥಾಮ ಬಿಲ್ಲನು |
ಕೆಡಹಿದನು ಕೃಪದ್ರೋಣನಳುಕಿದ ಶಕುನಿಕಂಗೆಟ್ಟ ||
ಮಿಡುಕದಿರ್ದನು ಸೈಂಧವನು ಬಾ | ಯ್ವಿಡುತಲಿರ್ದನು ಶಲ್ಯನಾಗಳು |
ಹಿಡಿದನಾ ದುರ್ಯೋಧನನ ದುಶ್ಶಾಸನನನೊಡನೆ || ೩೩ ||

ಕಟ್ಟಿಕೊಂಡಾ ಖಚರನಾಗಸ | ವಟ್ಟೆಯಲಿ ನಿಲಲಿತ್ತಲುರೆ ಬಾ |
ಯ್ವಿಟ್ಟು ಗೋಳಿಟ್ಟತ್ತು ಕಂಗೆಟ್ಟೈದೆ ಭಾನುಮತಿ ||
ಕೆಟ್ಟೆ ಮೋರೆಯೊಯೆನುತ ಬಂದು ಯು | ಧಿಷ್ಠಿರನ ಚರಣದ್ವಿತಯದೊಳ |
ಗಿಟ್ಟು ನೊಸಲನು ನೇತ್ರಜಲದಿಂ ತೊಳೆದಳಂಘ್ರಿಗಳ || ೩೪ ||

ಏನದದ್ಭುತವಬಲೆ ಪೇಳೆಲೆ | ಭಾನುಮತಿಯೆನೆ ಕುರುಕುಲಾಂಬರ |
ಭಾನು ನಿನ್ನೊಡವುಟ್ಟಿದನನೆನ್ನಸುಗೆ ವಲ್ಲಭನ ||
… … … | … …. …. ||
… …. ………………… || ೩೫ ||

ಅತ್ತಿಗೆಯೆ ಕೇಳ್ನಮ್ಮನಮ್ಮೊಳು | ತತ್ತಡಾವೈವರೆ ಪೆರರು ಬಂ |
ದೊತ್ತಿದರೆ ನೂರೈವರಾವೆನ್ನನ್ಯರಲ್ಲೆಂದು ||
ಅತ್ತ ನೋಡಲು ಕೃಷ್ಣನೋಲೆಗೆ | ಹತ್ತಿಸಿದ ವಕ್ಕಣೆಯನಾಗಲು |
ಇತ್ತನರ್ಜುನಗೋಲೆಯನು ಗುಣಿಧರ್ಮನಂದನನು || ೩೬ ||

ಸರಳಿಗೋಲೆಯ ತೊಡಚೆ ಗಾಂಡೀವಿ | ತಿರುವಿಗಂಬನು ಹೂಡಿ ಕಣ್ಬಗ |
[ತೆರೆದು] ತೆಗೆದಾಬಾನಗೋಲೆಸೆ ಗರಿಯ ಮೊರಹಿನಲಿ ||
ಸುರಸರಣಿಯೊಳಗಿಂದ್ರರಥನ | ಚ್ಚರಿವಿಮಾನದ ಪಕ್ಕದಲಿ ಕುಡ |
ಭರದಿ ಪೋಪುದ ಪಿಡಿದು ತಂದೆಗೆ ಕೊಟ್ಟ ಖಚರಸುತ || ೩೭ ||

ಓಲೆವೋದಿಸಿ ಕಂಡು ಪಾರ್ಥನ | ಕೋಲಿದುದೆಂದದನಾದರಿಸಿ ಸ |
ಲ್ಲೀಲೆಯಿಂದಾ ಪರ್ಣಲಘುವಿದ್ಯೆಯನು ಖಗ ಬೆಸಸೆ ||
ಮೇಲಣಿಂದವರೀರ್ವರನು ಭೂ | ಪಾಲನದಿಮೊದಲಲ್ಲಿ ಸಿರಿ ಪೊ |
ಯ್ತಾಲತಾಂಗಿಯ ಮುಂದೆ ಕಟ್ಟನು ಕಳೆದ ಯಮಸೂನು || ೩೮ ||

ನೆರೆದು ಬಂದೀಕ್ಷಿಸಿತು ಕುರು ಭೂ | ವರನ ತಮ್ಮಂದಿರು ಕೆಳೆಯರ |
ಚ್ಚರಿಯ ಪರಿವಾರ ಪ್ರಧಾನರು ಕುತ್ತುದಲೆಯಿಂದ ||
ಕುರುಪತಿಯ ದುಶ್ಶಾಸನನುಮಿರೆ | ಪಿರಿದು ಬಳಲಿದಿರೆಂದು ತಾನನಿ |
ಬರನು ದಯೆಯಿಂದೊಲಿದು ಸಂತೈಸಿದನು ಧರ್ಮಜನು || ೩೯ ||

ನಾಳವಾಸಿಗೆಯಿಂದ ಕುರುಪತಿ | ಕೌಳಿಕಾರನ ತೆರದಿ ಪಾಂಡವ |
ರಾಳುವಿಗೆಯನು ಸೆಳೆದುಕೊಂಡದನೊಪ್ಪಿಸುವೊಡಿಂದು ||
ವೇಳೆ ಹಾದಿಯದೋಡಮವರೇಂ | ಕೂಳ ಕಾಣರೆ ಲೋಕಮಾನ್ಯರು |
ಬಾಳುವರು ತಾನುಚಿತ ಬಾಹಿರನೆಂದುದಖಿಲ ಜನ || ೪೦ ||

ಅವರ ನುಡಿಗೇಳದವೊಲಾ ಕೌ | ರವನು ನಿಜಪುರವೈದಿದನು ಸ |
ಬ್ಬವದ ಕೃಷ್ಣನು ಬಳಿಕ ದ್ವಾರಾವತಿಗೆ ತೆರಳಿದರು ||
ಇವರು ಬದರೀವನದೊಳಿರುತಿರೆ | ತವದ ರಾಗದೊಳರ್ಜುನನೊ |
ಪ್ಪುವಸುಖದಿನಿರೆ ತಲೆದಳಾ ಗರ್ಭವನು ಪಾಂಚಾಳೆ || ೪೧ ||

|| ಅಂತು ಸಂಧಿ ೩೯ಕ್ಕಂ ಮಂಗಲ ಮಹಾ ||