ಸಂಧಿ ೪೧

ಖ್ಯಾತರಾ ಪಾಂಡವರು ತಾವ | ಜ್ಞಾತವಾಸದಿ ವರವಿರಾಟನ |
ಭೂತಳದೊಳಿರೆ ತುರುವ ಹಿಡಿದುದು ಕೌರವನ ಬಲವು || ಪದ ||

ಶ್ರೀ ವದನದೊಳು ನನ್ನಿ ನಡೆಯೊಳು | ಪಾವನತೆ ಜಿನಭಕ್ತಿ ತನ್ನಯ |
ಭಾವದೊಳು ನೆಲೆವಡೆಯ ಪಾಂಡವ ಪಿರಿಯ ಸುಕುಮಾರ ||
ಶ್ರೀವರನನಾ ಬಲನನಾ ಕೊಂ | ತೀ ವಿಮಳೆಯನು ಕಳುಹಿತಾಂ ದ್ವಾ |
ರಾವತಿಯನವರೈದಿ ಸುಖದಿಂದಿರ್ದರವರಿರಲು || ೧ ||

ದ್ರುಪದಸುತೆಯನು ಬಳಿಕಲತ್ತಾ | ದ್ರುಪದನರಮನೆಗಟ್ಟಿದರು ತ |
ದ್ವಿಪಿನವಾಸದ ಪಾಳಿಯೀರಾರಬ್ಧವಾಗುತಿರೆ ||
ನೃಪತಿಯಲ್ಲಿರದೇಳ್ದು ಸಿರಿಗಿರಿ | ಯುಪನದಿಯನುತ್ತರಿಸಿ ಸಿರಿರಾ |
ಜಿಪವಿಡಾಯದ ಚೋಳಮಂಡಳ ಮಧ್ಯದೇಶದಲಿ || ೨ ||

ಎಸೆವ ಕಾಂಚೀನಗರದೊಳು ರಾ | ಜಿಸುವ ತಮ್ಮಂದಿರುವೆರಸಿಯಿ |
ರ್ದಸಮ ಭುಜರನಲ್ಲಿರದೆ ಪಡುವಣದಿಕ್ಕೆಗೈತರುತ ||
ಮಿಸುಪ ನಂದನ ಶಾಲಿವನ ರಂ | ಜಿಸುವ ನದಿ ಕಾಸಾರ ಶೋಭಾ |
ವಸದವೆನಿಪ ವಿರಾಟಪುರದ ಬಹಿರ್ವನವ ಪೊಕ್ಕು || ೩ ||

ಬೆಳೆದ ಮುಳುಗಳ ಹೊದರು ತೆಕ್ಕೆನೆ | ಬಳಸಿದಾ ಸಮಿವೃಕ್ಷಕೋಟರ |
ದೊಳಗೆ ತಮ್ಮಯ ದಿವ್ಯಮಯದಾಯುಧಗಳನು ಮಡಗಿ ||
ತಲೆದ ವಿದ್ಯಾ ದೇವತೆಗಳನು | ತೊಲಗದವ ಕಾದಿರ ನಿರೂಪಿಸಿ |
ಪೊಳಲ ಪೊಕ್ಕರು ದೊಕ್ಕನೀಕ್ಷಿಸಿದರು ಜಿನಾಲಯವ || ೪ ||

ಭರತನಂದಾಗಿಸಿದ ಬಸದಿಗೆ | ಸುರಗಿರಿಗೆ ದೊರೆಯೆನಿಪುದನು ನಿ |
ರ್ಭರ ಸುಭಕ್ತಿಯಲಮಳ ಹೃದಯರು ಪೊಕ್ಕು ಜಿನರ್ಗೆರಗೆ ||
ಪಿರಿದು ರೂಪಸ್ತವ ಗುಣಸ್ತವ | ವಿರುತಿ ಸೊಗಯಿಸೆ ನುತಿಸಿ ಪರಮನ |
ಚರಣ ಗಂಧೋಧಕ ಪವಿತ್ರಿತ ಗಾತ್ರರಳ್ತಿಯಲಿ || ೫ ||

ಗುರುಪದಾಂಬುಜಕೆರಗಿ ಪರಕೆಯ | ಧರಿಸಿ ಪೊರವಟ್ಟೊಂದು ತಾಣದೊ |
ಳುರುರಹಸ್ಯದೊಳನಿಬರುಂಕುಳ್ಳಿರ್ದು ತಮ್ಮೊಳಗೆ ||
ಪರಿವಿವೇಕಿಸಿ ವರುಷವದು ಹ | ನ್ನೆರಡು ಬದರೀವನದೊಳಾದುದು |
ಇರಲು ಬೇಕಜ್ಞಾತವಾಸದಿನೊಂದುವರುಷವನು || ೬ ||

ಎಂದು ರೂಪನು ಪಲ್ಲಟಿಸೆಯಮ | ನಂದನನು ಕಕ್ಷದಲಿ ಪೊತ್ತಗೆ |
ಸಂದನೊಸಲಲಿ ಮಟ್ಟಿಬೆರಳಲಿ ದರ್ಭೆಜೋಲ್ಗರ್ಚೆ ||
ಒಂದು ಹಿಡಿಜನ್ನವಿರ ಕಿವಿಯೊಳು | ನಿಂದ ಚೊಳಚೆಯ ಶೋಭೆಯಲಿ ಯಮ |
ನಂದನನು ಪೊಕ್ಕನು ವಿರಾಟ ನೃಪಾಲನರಮನೆಯ || ೭ ||

ವಿನುತ ಮಂತ್ರಾಕ್ಷತೆಯನಿತ್ತೊ | ಳ್ಪೆನಿಸುವಾಸನದಲ್ಲಿ ಕುಳ್ಳಿ |
ರ್ದನುವರಿದು ಶಾಸ್ತ್ರಪ್ರಸಂಗದಿ ನೃಪನನಹದೆನಿಸಿ ||
ಜನವರಿಯೆ ಪೌರಾಣಿಕನು ಪಾಕದ | ಮನೆಯ ಮುಖ್ಯಸ್ಥನನು ಪೊರ್ದಿಯೆ |
……………………. || ೮ ||

ಭರತ ಶಾಸ್ತ್ರ ವಿದಗ್ಧತೆಯಲಾ | ನರನು ಭಾರತಿಕರದೆಸೆಯಲ |
ಚ್ಚರಿಯನಟ್ಟುವನಾದನಾರೂಢಪ್ರವೀಣತೆಯಿಂ ||
ಅರಸನನು ಮೆಚ್ಚಿಸಿ ನಕುಲನಾ | ತುರಗ ಶಿಕ್ಷಕನೆನಿಸೆ ಗೋವಿ |
ಸ್ತರದ ಪಾಲಕನಾದನಾ ಸಹದೇವನೊಲವಿಂದ || ೯ ||

ಪಲದಿವಸಮಿಂತಲ್ಲಿ ಮೈಗರೆ | ಎಳೆಯೆರೆಯನನು ತಂನಿಯೋಗದ |
ಕಲೆಗಳಿಂದೋಲಗಿಸುತಿರಲೊಂದು ದಿವಸದಲಿ ||
ತಳುವದಾ ಖರ್ಪರನೆನಪದೋ | ರ್ವಳನು ಬಲುಕೆಸರಂಕಕಾರನು |
ಮಲವುತಲ್ಲಿಗೆ ಬಂದ ಕಂಡ ವಿರಾಟ ಭೂಪತಿಯ || ೧೦ ||

ವಲ್ಲನಾಗಳು ತನ್ನ ಪೌರುಷ | ವೆಲ್ಲವನು ಬಿಚ್ಚಳಿಸೆ ಭೂಪತಿ |
ಗಲ್ಲಿಗೇಳುತ ತನ್ನೃಪನ ಮೈದುನನು ಕೀಚಕನು ||
ಮಲ್ಲನನು ಕೆಳೆಗೊಂಡಿರುತೆ ನೃಪ | ವಲ್ಲಭನ ಪಂಙ್ತಿಯಲುಣಿಸನುಂ |
ಡಲ್ಲಿ ಕೈದೊಳಗಿಕ್ಕಿದ ಭೀಮನ ನಿರೀಕ್ಷಿಸಿದ || ೧೧ ||

ದಡಿಗನೀ ಬಾಣಸಿಗನನು ಕೈ | ವಿಡಿಯಿಸುವವಾ ಖರ್ಪರನೊಳೆನ |
ಲೊಡನೆ ಕೈವಿಡಿಯಿಸದೊಡೆಲೆ ಕೀಚಕನೆ ನಿನಗಾಣೆ ||
ಬಿಡಲು ಮಲ್ಲರ ಬಡಿಯಲಬಲ್ಲೆನು | ಅಡಿಗೆ ಮಾಡಲು ಬಂದೆನೆಂದಾ |
ನುಡಿ ಪುಸಿಯೆಯೆನೆ ಕೈವಿಡಿಸಿದನಾ ವಿರಾಜನೃಪ || ೧೨ ||

ಇಳೆಯೆರೆಯ ಕಾದಿಸಲು ಬಂದನು | ಕಳಕೆ ನೆರೆದುದು ನೋಟಕರು ಕಡು |
ಬೆಳೆದ ತೆಳ್ಗಳು ಕುಂಕುಮದ ಕಂಪದಲಿ ಹದಗೊಳಿಸಿ ||
ತಲೆಯಲೊಟ್ಟಿದ ಜಾಜು ಬಲಗಿವಿ | ಯೊಲೆವ ಹೂವಿನ ಝಲ್ಲಿ ಬೆಟ್ಟವೆ |
ತಳೆರ್ದು ಬಂದವೊಲೈದೆ ಬಂದನು ಕಳಕೆ ಖರ್ಪರನು || ೧೩ ||

ಮಲ್ಲ ಸಿಂಗರವಾಂತುನಸುಗಳು | ತೊಲ್ಲ ನೊಲ್ಲನೆ ಕೃತಕ ಬಾಣಸಿ |
ಭುಲ್ಲಯಿಸೆ ಬರೆ ಹವಣಿಮಾಡುತ ಭುಜವನೊದರಿಸುತ ||
ನಿಲ್ಲದಾ ಖರ್ಪರನಿದಿರ್ಚಲು | ತಲ್ಲಣಿಸದಿದಿರಾಂತು ದಂಡೆಯೊ |
ಳೆಲ್ಲ ಮೈಯಡಗಿದುದೆನಿಸಿ ಪುಸಿಗೈಯ ತೋರಿದನು || ೧೪ ||

ಅಂದು ಶಾಙ್ಗಿಯ ಕೂಡೆ ತತ್ತಧ | ಟಿಂದೆ ಚಾಣೂರನು ಸೆಣಸಿದೊಂ |
ದಂದದಲಿ ತಿವಿವೆತ್ತುವೊತ್ತುವ ತಪ್ಪುವುಪ್ಪರಿಪ ||
ನಿಂದುನೋಡುವ ಜರಿವದಗಮಿನ | ದೊಂದು ದನಿಯೆನೆ ಘಾಯಮಾಡುವ |
ಸಂದವಿಂದಾಣಗಳ ಚದುರಿಂದವರು ಕಾದಿದರು || ೧೫ ||

ಹಲವು ವಿಂದಾಣದಲಿ ಮಲ್ಲನ | ಬಳಲಿಸಿದನೆಡೆಯರಿದು ಮತ್ತವ |
ನಳವಿಗೊಡೆ ಪಿಡಿದೆತ್ತಿ ನೆಲಕಪ್ಪಳಿಸಿಕೊಲೆ ಭೀಮ ||
ಅಳಲಿ ಬಂದಾ ಕೀಚಕನು ಕಡು | ಮುಳಿದು ಖಂಡೆಯದಿಂ ಪೊಡೆಯೆ ತೋ |
ಳ್ಗಳ ಪಿಡಿದು ನೆಗ್ಗೊತ್ತಿ ತೂಂತಿದ ಜವನಾ ಬಾಯೊಳಗೆ || ೧೬ ||

ಅಳಿನೊಡೆಯನ ಮೈದುನನು ದೋ | ರ್ವಳನೆನುತ ಪರಿವಾರ ಭೀಮಗೆ |
ಮುಳಿದು ಬರೆ ಕಂಡಾ ವಿರಾಟನು ಜಡಿದವರ ನಿಲಿಸಿ ||
ಒಳಗನಾ ಬಾಣಸಿಗನಳಿದರೆ | ಕೊಲುವಿರೇ ಮಲ್ಲನನು ತಾನಿರ |
ದಳಲಿ ಬಾಳ್ಗಿತ್ತೆರಗಿ ಮಡಿದೊಡದೇವೆವಾಯೆಂದ || ೧೭ ||

ಎಂದು ಬಾಣಸಿಗನನು ಪಾಕದ | ಮುಂದಿರಕೆ ಕಳುಹಿದನು ಭೂವರ |
ಸಿಂಧುಮಿತ್ತಲು ಮತ್ತಮತ್ತಲು ಶಕುನಿಕುರುಪತಿಗೆ ||
ಎಂದನಾ ಪಾಂಡವರಿಗಂದೇ | ಸಂದುದೀರಾರಬ್ದವಿನ್ನವ |
ರಂದವನು ನಾವರಸದಿರ್ಪುದು ಚಂದವಲ್ಲೆಂದ || ೧೮ ||

ನಾರುಬೇರನು ತಿಂದು ಬಹುಕಾಂ | ತಾರದೊಳು ಮೃಗದಂತಿರಿರ್ದರ |
ನಾರಯಲು ನಮಗೇನು ಕಜ್ಜವದಿಂದು ಬಂದೆಮ್ಮ ||
ಧಾರಿಣಿಯ ಬೇಡುವರೆ ಬೇಡಿದೊ | ಡಾರು ಕೊಡುವರು ಬಿಡುಬಿಡೆಂಬಾ |
ಕೌರವನ ನುಡಿಗೇಳಿ ಭೀಷ್ಮ ನೃಪಾಲನಿಂತೆಂದ || ೧೯ ||

ಮಗನೆ ಕೇಳೈ ಪಾಂಡವರು ನ | ನ್ನಿಗಪಳಿತರಂಲಂಜಿ ವಿಪಿನ |
ಪ್ರಗತರಾದರದಲ್ಲದೀ ತ್ರಿಭುವನದ ಗಂಡರಿಗೆ ||
ಅಗಿವರೀತೃಣದಿಂದ ಹೀನಕೆ | ಬಗವೆಯವರನು ನೀ ನುಡಿದ ಭಾ |
ಷೆಗೆ ನುಸುಳತರಲವನಿನಗದಿರನಂದನಾ ಭೀಷ್ಮ || ೨೦ ||

ಅವರ ವೀರವನಜ್ಜ ಬಲು ಬೆ | ಟ್ಟವನು ಮಾಡಿಯೆ ನುಡಿವಿರೇ ತ |
ಮ್ಮವರೊಳಾ ಕಲಿ ಶಲ್ಯದ್ರೋಣಾಚಾರ್ಯ ಕೃತವರ್ಮ ||
ರವಿತನುಜ ಭಗದತ್ತ ಭೂರಿ | ಶ್ರವರಿಗಶ್ವತ್ಥಾಮ ಕೃಪ ಭೂ |
ಧವರಿಗೆಣೆಯಹ ನಾಯಕವುಪುವ ಮೆಚ್ಚಿರೇಕೆಂದ || ೨೧ ||

ಮೆಚ್ಚಿವೆಂಬುದು ಮಾತೆ ಕುರುಪತಿ | ಯಿಚ್ಛೆಯನು ನುಡಿವವರು ನಾವ |
ಲ್ಲಚ್ಚುಗವ ಮಾಡದಿರು ಮುನ್ನಾಡಿದ ನುಡಿಗೆ ನೀನು ||
ತುಚ್ಛನೆನಿಸದೆ ಗೂಢ ಚರಿರಂ | ನಿಚ್ಚಯಿಪುದಿರ್ದರವನವರು ವಿ |
ಯಚ್ಚರರೆ ಕಂಡಾಗಳದು ನಿನಗಚ್ಚುಗೆದ್ದುದಲೆ || ೨೨ ||

ಸಿಂಧುಸುತ ಪಲವಂದದಿಂದಿಂ | ತೆಂದು ತಿಳುಪಲು ಬಳಿಕ ಕುರುಪತಿ |
ಯಂದು ಚರನನು ಕಲುಪೆ ಬದರೀವನವು ಮೊದಲಾದ ||
ಸಂದವನಮುಳ್ಳನಿತು ಪುರುಗಳ | ನಂದರಸಿ ಪಲದಿನದ ಮೇಲೈ |
ತಂದರೊಡಯಗೆ ಬಿನ್ನಯಿಸಿದರು ಗೂಢಚರರಂದು || ೨೩ ||

ಕುರುಕುಲಾಂಬರ ಭಾನು ನಿನ್ನಹಿ | ತರನದೆಲ್ಲಿಯು ಕಾಣೆವಗವನ |
ಪುರಗಳೊಳಗೆನಲವರ ಮೊಗವನು ನೋಡಿ ನಸುನಗುತ ||
ಪುರಗಳೊಳಗೆ ವಿಶೇಷ ವಾರ್ತಾಂ | ತರಗಳುಳ್ಳೊಡೆ ಪೇಳಿಮೆನೆ ಬಿ |
ತ್ತರಿಸಿದನು ಮತ್ತವರೊಳೋರ್ವನು ಪತಿಗೆ ಕೈಮುಗಿದು || ೨೪ ||

ದೇವ ಬಿನ್ನಹ ಮತ್ಸ್ಯರಾಯನ | ಠಾವಿನಲಿ ಬಾಣಸಿಗನೋರ್ವನ |
ತೀವ ಸತ್ತ್ವದ ಮಲ್ಲನನು ಕಡುಕಾದಿಕೊಲೆ ಕಂಡು ||
ಆ ವಿಭವ ಮೈದುನನು ಕೀಚಕ | ನೋವಡಿಸಿಗೊಂಡಪ್ಪಳಿಸಿ ನಿ |
ರ್ಜೀವವಾದನು ಕೈದುವಿಡಿಯದ ಪಾಚಿಕನ ಕೈಯ || ೨೫ ||

ಕೇಳಿದಿರೆ ಭೀಷ್ಮಾದಿ ಧಾತ್ರೀ | ಪಾಲರೀವಾರ್ತೆಯನು ಕೀಚಕ |
ನಾಳುತನವನು ನೋಡುವೊಡೆ ಮೃಡನಧಟಿಗಲಗಣನು ||
ನಾಳೆಯರಿವುದನಿಂದೆ ನಿಮಗಾಂ | ಪೇಳುವೆನು ಕೊಂದಾತನಾರೆನೆ |
ಗಾಳಿಯಾತ್ಮಜನಹುದು ಪೆರರಿಲ್ಲೆಂದನಾ ಭೂಪ || ೨೬ ||

ವಿತತ ಶಾಸ್ತ್ರ ವಿವೇಕ ವಿದ್ಯಾ | ಚತುರ ನೀನನುಮಾನವಿದು ನಿ |
ಶ್ಚಿತವಹುದು ತಪ್ಪಲ್ಲೆನುತ ಕೆಲ ಕೆಲರು ಕೊಂಡಾಡಿ ||
ಕ್ಷಿತಿಪನಾ ಮಂತ್ರಿಗಳ ಕರೆದೀ | ಪ್ಸಿತದ ಕಾರ್ಯವ ಕೇಳೆತದ್ಭೂ |
ಪತಿಗಳನು ಕಾಣ್ಬಂದವಿಂತೆಂದನು ಸುಶರ್ಮಾಖ್ಯ || ೨೭ ||

ತುರುವ ಹಿಡಿದ ವಿರಾಟನಗರಿಯ | ಹೊರವಳಯದಲಿ ಪಾಂಡವರು ತಾ |
ವರಿದು ಸೈರಿಪರಲ್ಲದಿರಿತಕೆ ಬಾರದಿರರಾಗ ||
ಅರಿದು ಮೇಲಣುಪಾಯವನು ನ | ಮ್ಮುರುವ ಪರಿಯಲಿ ಮಾಳ್ಪವೆನೆ ನ |
ನ್ನೆಡೆಯ ಮೆಚ್ಚಿಸು ಶರ್ಮನುಕ್ತಿಯನಾಗ ಕೈಕೊಂಡ || ೨೮ ||

ವರಸುಶರ್ಮಕಮಾತ್ರಿಗರ್ತೋ | ವರೆಯರಸನಿವರೀರ್ವರೊಡನಾ |
ನೆರೆದ ನಾಯಕನಿಕರ ಬಹು ಪರಿವಾರವನು ಕೂಡಿ ||
ಕುರುನೃಪತಿ ಕಳುಹಿಸಲು ಬೇರೀ | ವಿರುತಿ ದಸದಿಸೆಯಡರೆ ನಡೆತಂ |
ದರು ವಿರಾಟನ ಪೊಳಲತೆಂಕಣದೆಸೆಗೆ ನಿಲುಕಿದರು || ೨೯ ||

ತುರುವ ಹಿಡಿವರೆನಿಪ್ಪ ಗೋಪರ | ಮೊರೆಯ ಕೇಳ್ದುವಿರಾಟ ನೃಪತ |
ನ್ನುರುವ ಮಗುನುತ್ತರವನಾ ಪುರದೊಳಗೆ ಕಾದಿರಿಸಿ ||
ನೆರೆದ ಗಜಹಯರಥಪದಾತಿಯ | ತುರುಗಳಲಿ ಪೊರಮಟ್ಟನಾ ನಾ |
ಡೆರೆಯ ಪುರವನು ಧರ್ಮನಂದನನಾಥನಿಂತೆಂದ || ೩೦ ||

ಇವರು ನಮ್ಮುಮನರಸ ಬಂದಂ | ದವು ಕಣಾ ಯಿದುನವಗೆ ಹಿಂಗಿದು |
ದವಧಿ ಮುನ್ನವೆ ಮೈಗರೆಯಲೇಕವಗೆಲೇ ಪಾರ್ಥ ||
ತವಕಿಸದೆ ನೀನುತ್ತರನ ಪಿಂ | ದವಿಚಳ ನಿಲ್ಲೆಂದಿರಿಸಿ ಕಲಿ |
ಪವನಸುತ ಸಹ ತಾವು ನಾಲ್ವರು ಪೋಪಸಮಯದಲಿ || ೩೧ ||

ತರುಬಿ ಕಾದಿ ವಿರಾಟನಾಗಳೆ | ಮುರಿದು ಬರುತಿರೆ ಕಂಡು ಮೂವರ |
ನಿರಿಸಿ ಮಾರುತಿಯಾಗಳೋರ್ವನ ಹರಿಗೆ ಗಜೆಗೊಂಡು ||
ತರುವ ಬಿಡು ಫಡ ಹೋಗೆನುತ ತ | ತ್ತಿರಿವ ಸುಭಟರ ಹಣಿದು ಕಡು ಕೈ |
ಮೆರೆದು ಹಿಡಿತಂದಣ್ಣ ಗೊಪ್ಪಿಸಿದನು ಸುಶರ್ಮನನು || ೩೨ ||

ಬಿಡಿಸಿ ಕಳುಹಿದನಾ ಸುಶರ್ಮನ | ನೊಡನೆ ಕರುಣದಿ ಧರ್ಮಜನು ಸಂ |
ಗಡದಿ ತುರುವನು ಬಿಡಿಸಿ ತಮ್ಮನಿಬರು ಸರಾಗದಲಿ ||
ತಡೆಯದಾ ಮತ್ಸ್ಯಾವನಿಪನೊ | ಗ್ಗೊಡೆಯದೈದಿದರಂದು ಪುರವನು |
ಪೊಡೆವ ತಮ್ಮಟ ಭೇರಿಗಳ ಕೋಳಾಹಲಂಗಳಲಿ || ೩೩ ||

ಮರುದಿವಸವೀ ಭೂತಳವು ತಾಂ | ತೆರಪು ನೆರೆಯದೆನೆಪ್ಪವೊಲು ನಾ |
ಲ್ತೆರದ ಬಲಸಹವಾ ತ್ರಿಗರ್ತಾಧೀಶನೈತಂದು ||
ಉರುಬಿದನು ತತ್ಪುರದ ಬಡಗಣ | ತುರುವನಾ ಗೋವರ್ಕಳುರೆ ಬೊ |
ಬ್ಬಿರಿದು ಕವಿದಿದಿರಾಂತು ಸುರಿದರು ಸರಳ ತಂದಲನು || ೩೪ ||

ಕೆಡೆದು ವಹಿತ ಪದಾತಿ ಹಯಗಳು | ಮಡಿದವೊರಗಿದವಾನೆಗಳು ಸುಡು |
ಸುಡಲಿ ಗೋವರ ಕೋಲ ಖುರಪುಟ ಬಹಳವೆಂದರಿದು ||
ಫಡಫಡಿರಿ ತರಿ ಕುರುಗಳನುಸಿಯೆಂ | ದಡಸಿ ನೂರಿಕಿ ತ್ರಿಗರ್ತನೃಪನೊ |
ಗ್ಗೊಡೆಯದಿರಿದರು ಗೋವಳರು ಕಿಗ್ಗಟ್ಟುಗಳ ಕಿತ್ತು || ೩೫ ||

ಅರರೆ ಕಡಿಪಲ್ಲಟಗಳಾದುವು | ಉರುಳಿದರು ಗೋವಳರು ಹಿಡಿದರು |
ತುರುವನಹಿತರು ಕೇಳಿದರು ಮತ್ಸ್ಯಾವನೀಶ್ವರರು ||
ಕುರುಪತಿಯ ದುರ್ಯಶಕೆ ಪೇಸದೆ | ಧರೆಯನೆಳೆದನು ಪಾಂಡವರನಾ |
ತೆರದಿನೆನ್ನನು ಬಗೆದನೇ ಘಡಯೆಂದು ಘರ್ಜಿಸಿದ || ೩೬ ||

ಪುರವ ಪೊರಮಟ್ಟನು ಕುವರನು | ತ್ತರವೆರಸಿ ಚತುರಂಗ ಸೈನ್ಯದ |
ನೆರವಿಯಿಂದಾ ಮತ್ಸ್ಯಭೂಪತಿ ಪಿಂತೆ ಪಾಂಡವರು ||
ಇರದೆ ಬಂದಾ ಮರದ ಹೊದರಿನೊ | ಳಿರಿಸಿದಾಯಧಗಳನು ಯಕ್ಷೋ |
ತ್ಕರದ ಕಾಪಿನ ಪೆಂಪಿನವನಾಂತೊದವಿದರು ಕೂಡೆ || ೩೭ ||

ಕರಗಳೋ ನೀಲಾದ್ರಿಗಳ ಹರ | ವರಿಯ ತುರಗವೊ ಶರಧಿವೀಚಿಯೊ |
ಚರಿಪ ದುರ್ಗಾವ್ರಾತವೋ ತೇರುಗಳೊ ಕಾಲಾಳು ||
ನೆರೆದಮಿತ್ತುವಿನಾಳುಗಳೊ ಭೀ | ಕರದ ವಾದ್ಯವೊ ದೆಸೆವೊದರಿದವೊ |
ಪರಿಕಿಸುವೊಡರಿದಾಗಿ ತೋರಿದುದಂದು ಕುರುಸೈನ್ಯ || ೩೮ ||

ಇದು ಮಹಾ ಭೀಕರ ಪತಾಕಿನಿ | ಇದನಿರಿದು ತವಿಸುವನ ತಾಯ್ಪುಸಿ |
ಇದರೊಳಾಂತೋಡಿದೆವೆನಿಪ ಪಳಿಗಿಕ್ಕೆಯಾದವಲ ||
ಕದನವಿದನೇಂ ದ್ರುಪದನೃಪ ತ | ನ್ನೆದೆಯೊಳಗೆ ನಿಜ ಚಾತುರಂಗವ |
ನಿದೆರೆ ನೂಂಕಿದನೇರಿದುದು ನಿಸ್ಸಾಳದಬ್ಬರದಿ || ೩೯ ||

ಹಳಚಿ ಕಾದಿದುದೆರಡು ಬಲ ಕ | ಟ್ಟಳವಿಯಹ ಹಯಗಜ ಪದಾತಿಗ |
ಳಳದವೀರ್ವಲದೊಳಗೆ ಮತ್ತೊಂದಿನಿತು ಬೇಗದಲಿ ||
ಕಳವಳಿಸೆ ಬೆಂಗೊಟ್ಟು ಮತ್ಸ್ಯನ | ಬಲವು ಬರಲುತ್ತರವೆರಸಿ ಬೆಂ |
ಬಳಿಯ ಹಾಯ್ದ ವಿರಾಟ ನೃಪನನು ನೋಡಿ ಪಾಂಡವರು || ೪೦ ||

ಖಡುಗವನು ಯಮಸುತನು ಜಡಿಯಲು | ನಿಡುಗದೆಯನನಿಲಜನು ಗಾಂಡಿವ |
ವಿಡಿದವರ್ಜುನನಾಂತರಾ ಕೊಂತವನು ಮಾದ್ರಿಜರು ||
ಕಡಲು ಕದಡಿತು ಗಾಂಡಿವವ ಜೇ | ವೊಡೆಯೆ ಗಿರಿಸೆಂಡಾದವುರ್ವರೆ |
ನಡುಗಿದುದು ಕುರುಸೈನ್ಯ ತಳವೆಳಗೊಂಬುದೇನರಿದೆ || ೪೧ ||

ಕೆಡೆದುವಹಿತರ ಶಿರವು ಕರಿಗಳು | ಕಡುಗುದುರೆಗಳು ಪಾರ್ಥನಂಬಿನ |
ತೊಡವಳೆಯ ಪೊನಲೊಳೆ ಮುಳುಗಿದುದು ಭೀಮಗದೆಗೊಂಡು ||
ಹೊಡೆದನಾ ರಥನುಚ್ಚು ನೂರಾ | ಗೊಡೆಯ ಕರಿಶಿರದಿಂದ ಮೌಕ್ತಿಕ |
ಪೊಡವಿಗಡಿಯಿಡಲುಕ್ಕು ನಿಂದುದು ಬಳಿಕ ಕುರುಬಲದ || ೪೨ ||

ಪರಿದು ಬಂದೀಕ್ಷಿಸಿ ತ್ರಿಗರ್ತನು | ನೆರೆಯದಿದನಾತನು ಯುಧಿಷ್ಠಿರ |
ನರನವನುಪವಮಾನ ಸುತನವನಿವರು ಮಾದ್ರಿಜರು ||
ಧುರದೊಳಿವರಲ್ಲದೊಡೆ ಸಿಂಹಕೆ | ಕರಿಗಳಳುಕುವೋಲಳಿಕುವುದೆ |
ಕುರುಬಲವು ತಾನೆಂದು ನಿಜಬಲವೆರಸಿ ಬೆಂಗೊಟ್ಟು || ೪೩ ||

ಜವದ ಬಿರುಗಾಳಿಗೆ ತೆರಳ್ದೋ | ಡುವ ಮುಗಿಲವೊಲು ಪಾಂಡುತನುಜರ |
ಬವರಕಳುಕಿ ಸುಯೋಧನನ [ಸೇನೆಯೋಡಿದುದತ್ತ] ||
ಅವರ ಕಡೆವೋಗದವೊಲಾ ಗೋ | ನಿವಹವನು ಮಗುಳಿಸಿ ತರಲು ಬಂ |
ದವು ಭರದಿ ದೊಮ್ಮಳಿಸೆ ಹೆಣಗಣ ಬಣಬೆ ದುಳಿಯುತಲಿ || ೪೪ ||

ತೊರೆದು ಮೊಲೆಯೆಳೆಗಂಧಿಗಳು ಭೋ | ರ್ಗರೆದುವಿನಿವಾಲಿನಲಿ ಮಲೆಯ ಮು |
ನ್ನರುಣಜಲ ವರುಷದಲಿ ತಣಿದಾಯುದ್ಧ ಭೂಮಿಯಲಿ ||
ಸುರಿದ ಪಾಲಿನ ಹೊನಲದೆತ್ತಲು | ಪರಿವುತಿರೆ ಪೊಡೆತಂದರಾ ಭೂ |
ಪರು ವಿರಾಟನ ಪುರಕೆ ತುರುವನು ಭೂಪ ಕೇಳೆಂದ || ೪೫ ||

ಇವರು ಪಾಂಡವರೆಂದರಿದು ಬಂ | ದವರಡಿಗೆ ತಲೆವಾಗಿದನು ಭೂ |
ಧವಯುಧಿಷ್ಠಿರ ರಾಯ ಮೈಗರೆದಿಂತು ನೀವಿಹುದೆ ||
ನವಗೆ ನೀವಭಿವಂದ್ಯರೆಮ್ಮೀ | ಯವನಿ ನಿಮ್ಮದು ನಿಮ್ಮ ಬೆಸಕೆರ |
ಗುವನು ತಾನೆಂದೊಲಿದು ಬಿನ್ನೈಸಿದನು ಮತ್ಸ್ಯನೃಪ || ೪೬ ||

ತರಿಸಿ ತನ್ನಯ ಪಟ್ಟವರ್ಧನ | ಕರಿಯನೇರಿಸಿ ಧರ್ಮಜನನನಿ |
ಬರನು ತಕ್ಕಿಭಚಯದೊಳೇರಿಸಿ ನೆರಪಿ ಗುಡಿಗಟ್ಟಿ ||
ಪುರದೊಳುತ್ಸವ ವೆರಸಿ ವಾದ್ಯದ | ಭರದೊಳಗೆಯಾರತಿನಿವಾಳಿಯ |
ಪರಿಪರಿಯ ಮಂಗಲದಲಿದಿರ್ಗೊಳೆ ಪುರವನೈದಿದರು || ೪೭ ||

ಎಲೆಲೆ ಕೇಳ್ದಿರೆ ಸೊಜಿಗವನೀ | ಚೆಲುವನೆಮ್ಮ ಪುರಾಣ ಭಟ್ಟನು |
ಕಲೆಯೆರೆಯ ಧರ್ಮಜಗಡಾ ಬಾಣಸಿಗ ಭೀಮಗಡ ||
ಲಲೆಯರನಾಡಿಸುವನಟ್ಟುವ | ಕಲಿಧನಂಜಯ ಗಡತುರಗ ಗೋ |
ಕುಲದ ರಕ್ಷಕರಮಳಗಳು ಗಡಮೆಂದರವರವರು || ೪೮ ||

ಅರಮನೆಗಳೈದಿದರು ಮಣಿವಿ | ಷ್ಟರದೊಳಿರಿಸಿ ಯುಧಿಷ್ಠಿರನನನಿ |
ಬರನುಚಿತದೆಡೆಗೊಟ್ಟು ತನ್ನರಸಿಯರ ಕೈಯಿಂದ ||
ತರಸಿ ಯಾರತಿಯೆತ್ತಿಸಿದನಾ | ಹರುಷದಲಿ ಕಾಣಿಕೆಯನಿತ್ತಾ |
ದರವ ಮಾಡಲು ಸುಖದಲಾಸ್ತವನೀಯ ನಿರುತಿರಲು || ೪೯ ||

ವರಶತೇಂದ್ರಾರಾಶಿ ಜಿನಪತಿ | ಚರಣ ಕಮಲಭ್ರಮರ ಸನ್ನಿಭ |
ಸುರಸ ಕವಿ ಜಿನಭಕ್ತ ವಿರಚಿತ ಮಧುರವಾಗ್ಭರಿತ ||
ಪರಮ ನೇಮೀಶ್ವರನ ಪಾವನ | ಚರಿತೆಯೊಳಗೀರೈದನೆಯದಿದು |
ಪರಿಗಣಿಸಲಾರಣ್ಯ ಪರ್ವವು ಪಾಂಡುನಂದನರ || ೫೦ ||

|| ಅಂತು ಅರಣ್ಯ ಸರ್ವಕ್ಕಂ ಸಂಧಿ ೪೧ ಕ್ಕಂ ಮಂಗಲಮಹಾ ||