ಸಂಧಿ ೪೪

ಶ್ರೀರಮಣನಾ ಪಾಂಡವರು ಸಹ | ನಾರದನ ನುಡಿಗೇಳಿ ರಿಪು ಸಂ |
ಹಾರಿ ದಂಡೆತ್ತಿದನು ಬಿಟ್ಟನು ಕುರುಧರತ್ರಿಯಲಿ || ಪದ ||

ಕೇಳು ಮಾಗಧ ಮಂಡಳೇಶ್ವರ | ಪಾಳೆಯವು ಕುರುಧರೆಯಲಿರೆ ಸ |
ಮ್ಮೇಳದಲಿ ಬಾನಿಂದ ನಾರದ ಬರೆ ಜರಾಸಂಧ ||
ಕಾಲಿಗೆರಗಿರೆ ಹರಸಿಯೆಲೆ ಭೂ | ಪಾಲ ನಿಮ್ಮುಜ್ಜುಗವಿದೇನೆನೆ |
ಪೇಳಿದನು ಕಂಸನ ಹರಿಬವನು ಹಡವೆತಾನೆಂದು || ೧ ||

ಮಸಿಯ ಬಣ್ಣದ ಮೈಯವನ ತನಿ | ಬಿಸಿರಕುತ ಜಲದಿಂದ ಜೀವಂ |
ಜಸೆಯ ಚಿತ್ತದಕೆಸರ ತೊಳೆಯಲು ಬಂದೆನೆಲೆ ಮುನಿಪ ||
ಮಸಗಿ ನಾ ಕೊಲಬರಲು ಕಾವುದೆ | ವಿಷಧಿಯೊಳು ಮೈಗರೆದೊಡದು ತ |
ನ್ನಸುವನಾ ಸಿಡಿಲೆರಗಿದಡೆ ಕೊಡೆತಡೆ ಕಾವುದೇ ಮುನಿಪ || ೨ ||

ಓಡಿ ಬದುಕಿದೊಡರಿಯೆ ಯುದ್ಧವ | ಮಾಡಿದೊಡೆ ಯಾದವರ ಹರಣಕೆ |
ಕೇಡತಾರದೆ ಮಾಣೆ ನಿಮ್ಮಡಿಯೆನ್ನ ತೋಳ್ವಲವ ||
ನೋಡುತಿರೆ ನಭದೊಳಗಿದೆಲ್ಲವ | ನಾಡಿ ಕುರುಭೂತಳಕವರ ನೆರೆ |
ಗೂಡಿ ತಹವೊಲು ಮಾಡಿಯೆಂದನು ಕಲಿಜರಾಸಂಧ || ೩ ||

ಬಡವನೇ ನೀ ಸಾರ್ವಭೌಮನು | ನುಡಿಯಬಹುದಿದನೆನಗೆನುತ ತಾ |
ನೊಡನೆ ಕಳುಹಿಸಿ ಕೊಂಡು ಬಾಂಬಟ್ಟೆಯಲಿ ಪರಿತಂದು ||
ತಡೆಯದಾ ದ್ವಾರಾವತಿಗೆ ಬರೆ | ಪೊಡೆಯಲರನೆದ್ದೆರಗಿ ಮಿಗೆ ತ |
ಕ್ಕೆಡೆಯೊಲಿರಿಸಿ ಇದೇನು ಬಿಜಯಂಗೈದಿರಿಂತೆಂದ || ೪ ||

ಸರಸಿಜೋದ್ಭವಸೂನು ಕನ್ನಿಕೆ | ಯರನು ಕಂಡೆವಗೊಂದಿಸಲು ಬಂ |
ದಿರೊ ಉಸುರಿಮೆನೆ ನಸುನಗುತ ಕಡಲುಡುಗೆಯಾಗಿಹಳ ||
ವರನದೀನೇತ್ರೆಯ ಮಳೆಯ ದು | ರ್ಧರ ಶಿಖರಿಕುಚಯುಗೆಯ ನಾನಿಂ |
ದೊರೆಯ ಮೇಲುದನಾಂತ ಭೂಕನ್ನಿಕೆಯನಬುಜಾಕ್ಷ || ೫ ||

ಬರುತ ಕುರುಭೂಮಿಯಲಿ ಕಂಡೆನು | ದುರುಮುಖದಿ ನಿನಗೊಲಿವವಳನೆನ |
ಲರುಪಿ ಮುನಿಪತಿಯದರಿನೆನೆ ಕೇಳ್ದು ಕಮಲಾಕ್ಷ ||
ನೆರೆದಖಿಳ ಪರಿವಾರ ರಣಪರಿ | ಕರ ನೃಪಾಲಕ ನಿಕರ ಪರಿವೃತ |
ನುರು ಜರಾಸಂಧನು ಮುನಿದು ಬಂದಹನೆ ತಾನೆಂದ || ೬ ||

ಜಲಧಿತಟದಲಿ ನೀವಿಹುದು ತಾಂ | ತಿಳಿದು ಕಂಸನ ಕೊಲೆಯನರಸುವ |
ದಳಲಿ ಬಂದಹನವನ ಗರ್ವದ ನುಡಿಗಳನು ಕೇಳಿ ||
ಘಳಿಲನಲ್ಲಿರದೆದ್ದು ಬಂದೆನು | ತಳುವದಿನ್ನಪ್ಪುದನು ನೀವೀ |
ಗಳೆ ನೆಗಲಿ ಕಳನೇರಿ ಕೈಮರದಿರಲು ಬೇಡೆಂದ || ೭ ||

ಎನಲು ಘನಗರ್ಜನೆಯು ಕಿವಿಯಲಿ | ಮೊನಸಿಡಿಭರಿಪುವಂತೆ ಕಣ್ಣೊಳು |
ಜನಿಯಿಸಿತು ಕಡೆಗೆಂಪು ಗಂಟಿಕ್ಕಿದುದು ಕುಡಿವುರ್ವು ||
ತನಿಮಿಡುಕು ತುಟಿಯಲಿ ಕದಪಿನಲಿ | ಸೊನೆ ಬೆವರು ಭುಜದಲಿ ಕುಣಿತವದು |
ತನಗೊದವೆ ನಗಧರನು ತುಂಬಿದ ಸಭೆಯಲಿಂತೆಂದ || ೮ ||

ಒಲಿದು ಬಂದಧಿರಾಜ್ಯಸಿರಿಗೀ | ಬಲದ ಭುಜಕೆ ವಿವಾಹವಾಗಿದೆ |
ಬಲನು ಪಾಂಡುಜರಾದಿಯಾದವನೀಶಸಂಕುಲವು ||
ನಲಿದು ನಿಬ್ಬಣವಾಗಿ ಬಹುದಕೆ | ಬಲಯುತರು ಸಮಕಟ್ಟಿ ಕುರುಭೂ |
ತಳವೆ ಚಿನ್ನ ವಿವಾಹಮಂಟಪವೆಂದನಬುಜಾಕ್ಷ || ೯ ||

ಗಿರಿಯನುಂಗುಟದಿಂದ ಮೀಂಟಿಯೆ | ಬೆರಳ ತುದಿಯಲಿಯೇಳು ದಿವಸವು |
ಧರಿಸಿದತುಳಭುಜಂಗೆ ಮಾಗದ ಲೊಡ್ಡಲಾರ್ತಪನೆ ||
ಮುರಮಥನ ಜಯಿಸೆಂದು ಕಲಿಹಲ | ಧರನುಸುರೆ ಪಾಂಡವರು ಮೊದಲಾ |
ದರಸುಗಳು ಘೂರ್ಣಿಸಿತು ವೀರರಸಾರ್ಣವವೊ ಎನಲು || ೧೦ ||

ತಡೆಯದಾ ಪ್ರಸ್ಥಾನ ಭೇರಿಯ | ಪೊಡೆಯಿಸಿದನಾ ಸೀರಪಾಣಿಯು |
ಕಡಲುಬಾಂದೊರೆಯೊಂದುಗೂಡಿತು ಗಿರಿಗಳವು ಚೆಂಡ ||
ಬಡಿದವೊಲು ನೆಗೆದಾಡಿದವು ತಾ | ನೊಡೆದುದಬುಜಭವಾಂಡವದು ಮಿಗೆ |
ನಡುಗಿದರು ನಾಗಾಮರರು ಭೀಳಾರವವು ಬಳಸೆ || ೧೧ ||

ಕಳುಹಿ ನಾರದ ಮುನಿಯ ತಂದೆಯ | ಬಳಿಗೆ ಬಂದೀ ಹದನನೆಲ್ಲವ |
ತಿಳಿಹಿ ಬಲವಸುದೇವಸಹ ಪರಿಯಯ್ಯಲರಮನೆಗೆ ||
ನಳಿನಾಭನು ಪೋಗಿ ನಾರದ | ಗಳಪಿದಂದವನೆಲ್ಲವನು ಬಿ |
ಚ್ಚಳಿಸೆ ಕೇಳ್ದು ಸಮುದ್ರವಿಜಯ ಮಹೀಶನಿಂತೆಂದ || ೧೨ ||

ಸುರಪ ಕಳುಹಲು ಬಂದ ನೈಗದು | ಸುರ ನಿನಗೆ ಪಟ್ಟವನು ಕಟ್ಟುತ |
ಪರಸಿದನು ನೀನೀ ತ್ರಿಖಂಡಾಧೀಶನಾಗೆಂದು ||
ಸುರವಚನ ತಪ್ಪುವುದೆ ಮಗನೇ | ದೊರಕಿತದು ನಿನಗೆಂದು ನಾನಾ |
ಪರಕೆಗೊಡೆ ಕಾಲ್ಗೆರಗಿ ಕಳುಹಿಸಿ ಕೊಂಡನಬುಜಾಕ್ಷ || ೧೩ ||

ಸುರಭವನವನು ಪಳಿವ ರನ್ನದ | ಸಿರಿನಿಳೆಯಲೀ ದೇವ ಕುವರರ |
ನೆರವಿಯೋಗಲದಲ್ಲಿ ಮಣಿವಿಷ್ಟರದೊಲೊಪ್ಪಿರ್ದ ||
ಪರಮನೇಮಿಜಿನೇಂದ್ರ ಸಭೆಯನು | ಹರುಷದಿಂದೊಳಪೊಕ್ಕು ಬಲವಂ |
ದಿರದೆ ಸಾಷ್ಟಾಂಗ ಪ್ರಣಾವಂ ಗೈದನಬುಜಾಕ್ಷ || ೧೪ ||

ಮನದ ಸಂದೆಗ ತೊಲಗಿದುದು ಜಯ | ವನಿತೆ ತನಗಹಳೆಂಬ ನಿಶ್ಚಯ |
ವನು ಜಿನೇಂದ್ರನ ದರುಶದ ಸಾಮರ್ಥ್ಯದಲಿ ತಿಳಿದು ||
ವನಜನಾಭನು ಭುಜವನೊದಿರಿಸಿ | ಅನಿಬರುಂ ಜಿನರ್ಗೆರಗಿ ಬೀಳ್ಕೊಂ |
ಡನುಪಮಿತ ಮುದನಾದನಾ ದೇವಕಿಯ ಸುಕುಮಾರ || ೧೫ ||

ಪರಸಿ ಶಿವದೇವ್ಯಾದಿ ತಾಯ್ಗಳು | ಸುರುಚಿರಾಕ್ಷತೆಗಳನಿಡಲು ತಾಂ |
ಶಿರದೊಳಾಂತುತ್ಸಹದಿ ಮುರರಿಪು ಹಲಧರನು ಸಹಿತ ||
ಕರಿಪತಿಗಳುಮನೇರಿದರಲಂಕ | ಕರಿಸಿ ಮಿಗೆ ನೀಲಾದ್ರಿಗಳ ಮೇ |
ಲಿರಿಸಿದಂಜನಗಿರಿಯೊ ಬೆಳ್ಳಿಯ ಬೆಟ್ಟವೋ ಯೆನಲು || ೧೬ ||

ಎತ್ತಿದವು ಬೆಳಗೊಡೆಗಳೆರಡವು | ಇತ್ತರದ ಪಿಡಿಗಳಲಿ ಚಮರವ |
ನೆತ್ತಿಥಾಳಿಸುವಂಗನೆಯರೊಪ್ಪಿದರು ಮಣಿದೊಡಿಗೆ ||
ಪೆತ್ತ ಕಿರಿಣಗಳಾಗಸವ ಮಿಗೆ | ಚಿತ್ರಿಸಿದುವಾನಕ ನಿನದ ದಿಗು |
ಭಿತ್ತಿಯುಚ್ಚಳಿಸಿದುದು ಕೌತುಕವಾದುದಾ ಪಯಣ || ೧೭ ||

ವರಸಮುದ್ರವಿಜಯ ನೃಪಾಲನು | ನಿರವಿಸಿದೊಡಕ್ಷೋಹ ಮೊದಲಾ |
ದುರು ಪರಾಕ್ರಮಿಗಳು ನಿಜಾನುಜಕೀಳ್ವರಕ್ರೂರ ||
ವರಯುಧಿಷ್ಠಿರ ಮುಖ್ಯರೈವರು | ತರದಿ ಕಂದರ್ಪಾದಿಗಳುದ ಭಾ |
ಸುರ ಮದೋದ್ಧುರ ಸಿಂಧುರ ಸ್ಕಂದದೊಳಗೊಪ್ಪಿದರು || ೧೮ ||

ವರ ಹಿರಣ್ಯಾಕ್ಷೋಗ್ರಸೇನನು | ಸುರಸ ರುಗುಮಿಣದೇವಸೇನನು |
ದೊರೆವಡೆದ ಜಿತಶತ್ರು ಧೃಷ್ಟದ್ಯುಮ್ನ ಧಾನ್ಯನೃಪ ||
ಸ್ಫುರಿತ ವಿಂದ್ಯಕ ಚಂಡವಾಹನ | ವರ ದುರಪದನಾ ಸಿಂಹಘೋಷನು |
ಪರಮತನ ಬಲವೀರ ಪಾಂಡ್ಯಾದಿಗಳು ಸಂದಣಿಸಿ || ೧೯ ||

ಸಿಂಧು ಕಾಂಭೋಜೀ ಭವಂಗಳ | ನೊಂದಿದಶ್ವಂಗಳನಡರಿದರು |
ಬಂದು ಸುಮುಖ ಜಯದ್ರಥ ಧೃಡರಥ ವಿರಾಟನೃಪ ||
ಸಂದವುತ್ತರ ನಮಿ ಮಹಾರಥ | ಗಂಧರಥ ಮೇಘರಥ ಶಕ್ತಿಮು |
ಖೇಂದುಹಾಸ ಪ್ರಮುಖ ಭೂಭುಜರಡರಿದರು ರಥವ || ೨೦ ||

ಕಾಳಡಂಬರ ವಜ್ರದಾಡ ವಿ | ಶಾಲ ಜಂಬುಕುಮಾರ ಸಿಂಹ |
ಜ್ವಾಲ ನುದ್ಧತನಶನಿವೇಗನು ಸಿಂಹನಾದಕನು ||
ವ್ಯಾಳ ಸಿಂಹಗ್ರೀವ ಸಿಂಹಾ | ಭೀಳಕೇತು ಸದಿಂದ್ರರಥ ಮು |
ಖ್ಯಾಳಿ ವಿದ್ಯಾಧರನು ರತ್ನ ವಿಮಾನ ವೇರಿದರು || ೨೧ ||

ವಸುಧೆಯಲ್ಲವು ರಾಜಪುತ್ರ | ಪ್ರಸರಮಯವಾಗಸಮನಿತುವ |
ರ್ವಿಸುವ ಖೇಚರ ಸೈನ್ಯಮಯವಾಗಿವೆ ನಡೆವುತಿರಲು ||
ಸಸಿಯದನು ಕುಲಾನಿಲನು ಕಂ | ಪೆಸೆದ ತೀಡಲು ಧ್ವಜಪಟಹ ನ |
ರ್ತಿಸುವ ಜಯಮೇಯೆಸೆವ ಹಸ್ತಗಳಂತೆ ತೋರಿದವು || ೨೨ ||

ಬಿಸಿಲನುರೆ ನುಂಗಿದವು ಸತಿಗೇ | ವಸರಗಳು ಮಣದೊಡಿಗೆಗಳ ಕೆಂ |
ಬಿಸಿಲು ಬೆಳಗಿದುದೇಳ್ದ ರಜವೆದೆಗುಡದೆ ಕೀಲಿಸಲು ||
ಪಸರಿಸಿದ ಗಜಕರ್ಣ ವಾತವೆ | ದೆಸೆದೆಸೆಗೆ ನೂಂಕಿದುದು ಹೊಗರ |
ರ್ವಿಸುವ ಹೊಸಮಸೆಯಾಯುಧದ್ಯುತಿಕೊರ್ವಿ ಪರ್ವಿದುದು || ೨೩ ||

ತೊರೆ ಬಯಲ ತೊರೆಯಾಯ್ತು ವನಗಳು | ಮುರಿದು ಬೆಳುವೊಲನಾಯ್ತು ಗಿರಿಗಳು |
ಗರಿವಡೆದು ಹಾರಿದವೊಯೆನೆ ಬಕ್ಕಂ ಬಯಲದಾಗೆ ||
ತೆರೆದ ಸೈನ್ಯದ ಭಾರಕೊಂದೆಸೆ | ಗುರುಗುತಿರೆ ಭೂತಳವು ಯಾದವ |
ರೆರೆಯ ಪಯಣಶ್ರಮದಲೈದಿದನಾ ಕುರುಕ್ಷಿತಿಯ || ೨೪ ||

ಬಂದು ಚಕ್ರಿಯ ಬೀಡು ತಮಗಿ | ನ್ನೊಂದು ಯೋಜನವೆಂಬ ಪವಣಿನೊ |
ಳೊಂದು ತೆರೆಪಾದೆಡೆಯೊಳಗೆ ಬಿಡಸಿದನು ಕಟಕವನು ||
ಅಂದು ಪೊಡೆವ ಬಳಾನಕ ಧ್ವನಿ | ಮಂದಿಯಲಿ ಕಡಲೇಳು ತಮ್ಮೊಳ |
ಗೊಂದಿ ಮಾತಾಡಿದವೊಯೆನೆ ತೀವಿತು ದಿಗಂತವನು || ೨೫ ||

ಬಂದನಾಗಳು ಖಚರನೋರ್ವನು | ವಂದಿಸಿದ ಬಲ ವಾಸುದೇವರಿ |
ಗೆಂದನೆಂದನು ಕಾಲಶಂಬರಮುಖ್ಯರಟ್ಟಿದರು ||
ಸಂದ ಚಕ್ರಿಗೆ ನೆರವ ಬಹ ಖಗ | ವೃಂದವನು ವಿಜಯಾರ್ಧದಲಿ ತಡೆ |
ವಂದವನು ಚಿತ್ತೈಸಬೇಕೆಂದೊರೆದನೆಲ್ಲವನು || ೨೬ ||

ಎನಲು ಬಲನಾರಾಯಣರು ಯೋ | ಚನೆಯ ಕೊಂಡರು ಮಂತ್ರಿ ಮುಖದಲಿ |
ಮನವೊಲಿದು ವಸುದೇವ ಶಂಭುಕುಮಾರ ಪ್ರದ್ಯುಮ್ನ ||
ಇನಿಬರನು ವಿಜಯಾರ್ಧದಲಿ ಖಗ | ರನು ಜರಾಸಂಧನಹೊರೆಗೆ ಬರ |
ಲಿನಿಸುಗೊಡದಿರಿರಾಂಪುದೆಂದಟ್ಟಿದನವರನಂದು || ೨೭ ||

ಅತ್ತ ಚಕ್ರಿಯ ಕಟಕ ಬಿಟ್ಟಿರ | ಲಿತ್ತ ಬಲನಾರಾಯಣರ ಭೀ |
ಡೊತ್ತರಿಸಿ ಬಿಟ್ಟಿರಲು ಬಲಪರಿಮಾಣವೆಂತೆನಲು ||
ಪತ್ತಿ ಸೇನೆಯು ಸೈನ್ಯಮುಖ ಗು | ಲ್ಮತ್ತವಾಹಿನಿಯರು ಚಮೂಪುತ |
ನೊತ್ತಮಾನಕಿಯುಂಮೆನಲು ತಾನೆಂಟು ಭೇದವದು || ೨೮ ||

ತುರಗ ಮೂರಾಳೈದು ಕರೆಯೊಂ | ದರದವೊಂದಿರಲು ತ್ರಿಜಗ |
ದ್ಗುರು ನಿರೂಪದ ಪತ್ತಿಯೆನಿಸುವುದದರ ಮೂರು ಮಡಿ ||
ನೆರೆಯೆ ಸೇನೆಯು ಸೇನೆಮೂರ್ಮಡಿ | ನೆರೆಯೆ ಸೇನಾಮುಖವದಂ ಚದು |
ರರೆ ವಲಂ ತ್ರಿಗುಣಿಸಲು ಗುಲ್ಮವೆನಿಪ್ಪ ಪೆಸರೆಂದ || ೨೯ ||

ಅದರ ಮೂರ್ಮಡಿವಾಹಿನಿಯು ಮ | ತ್ತದರ ಮೂರ್ಮಡಿಯದು ಚಮೂಯೆಂ |
ದದರ ಮೂರ್ಮಡಿಯದು ಪೃಥನೆ ತಾನದರ ಮೂರ್ಮಡಿಯು ||
ಒದವಿದಡೆ ಪೆಸರಿಂದ ಸೀತೆಯು | ಮದರ ದಶಗುಣವಾದೊಡದು ಕೋ
ವಿದರು ಪೇಳ್ದಕ್ಷೋಹಿಣಿಯು ಸರ್ವಜ್ಞನಾಗಮದಿ || ೩೦ ||

ಎಂಟು ಇಪ್ಪತ್ತೊಂದು ಸಾವಿರ | ದೆಂಟು ನೂರಿಪ್ಪತ್ತು ಕರಿಯನಿ |
ತುಂಟು ರಥವಾಕೌಶ ಶಶಿರುತು ಬಾಣರುತು ಸಂಖ್ಯೆ ||
ಉಂಟು ಹಯವಾಲಕ್ಷದಿಮ್ಮೇ | ಗೆಂಟು ಒಂಬೈ ಸಾಸಿರದ ಮೇ |
ಗುಂಟು ಮೂನೂರಿಂದಧಿಕವೈವತ್ತು ಕಾಲಾಳು || ೩೧ ||

(ಟಿಪ್ಪಣಿ : ಒಂದು ಅಕ್ಷೋಹಿಣಿಗೆ ಆನೆಯೆನಿತೆಂದರೆ ೨೧, ೮೨೦ ರಥಮನಿತೆ, ಕುದುರೆಗಳು ೬೫, ೬೧೦).

ಪೇಳುವಡೆ ತಾನೆರಡು ಲಕ್ಷದ | ಮೇಲೆ ಪದಿನೆಂಟ್ಫಾಸಿರದ ಮುಂ |
ದೇಳುನೂರು ಸಂಖ್ಯೆವೊಂದಕ್ಷೋಹಿಣಿಗೆ ನೋಡೆ ||
ಆಳು ತೇರಾನೆಗಳು ಕುದುರೆಗ | ಳೋಳಿಯೆಲ್ಲವನಿಂತು ಕೂಡಿದೊ |
ಡೇಳಿದವೆ ಜಿನವಚನವಿದು ಭೂಪಾಲ ಕೇಳೆಂದ || ೩೨ ||

ವಚನ : ಒಂದಕ್ಷೋಹಿಣಿಗೆ ಚತುರಂಗವನೊಂದುಗೂಡಿದ ಲೆಕ್ಕ :೨, ೧೮, ೭೦೦

ಈ ಹದದಿ ನಾಲ್ವತ್ತುಮೂರ | ಕ್ಷೋಹಿಣಿಯು ಮಾಗಧಗೆ ಹರಿಗ |
ಕ್ಷೋಹಿಣಿಯದಿಪ್ಪತ್ತಯಿದುಯಿಂತುಭಯ ಬಲದೊಳಗೆ ||
ಮೋಹಿತರುವತ್ತೆಂಟು ನೊಂದ | ಕ್ಷೋಹಿಣಿಯ ಬಲವಿರಲು ನಭದಿಂ |
ದಾ ಹೊಳೆವ ಬೆಳುಮೈಯ ಕಲಹಪ್ರಿಯನಿಳಿದು ತಂದ || ೩೩ ||

ವರಜರಾಸಂಧನು ಸುರೇಂದ್ರನ | ಸಿರಿಯ ಸಿರಿಯೋಲಗದಲಿರೆ ತಾಂ |
ಬರಲುಚಿತ ವಿನಯವನು ಮಾಗಧ ಮಾಡಲೊಡನಿರದೆ ||
ಹರಿಯೆನಾ ಹಲಧರನ ತಂದಪೆ | ನರಸ ಕೇಳೆನೆ ಕೊಳುವ ತಲೆಯನು |
ಕರೆದು ಕೊಡುವಂತಿದಿರ ಬಂದನೆ ಲೇಸು ಲೇಸೆಂದ || ೩೪ ||

ಎಂದು ವಾಚಸ್ಪತಿಯ ಮುಖವ ನ | ರೇಂದ್ರ ನೀಕ್ಷಿಸೆ ದೇವ ಬಿನ್ನಹ |
ಬಂದೆರಗಿದೊಡೆ ಕಾವುದಾಂತಡೆ ಕೊಲವುದರಸುಗುಣ ||
ಬಂದು ಕಂಡೊಡೆ ಕಾಣಲಾ ಗೋ | ವಿಂದನಲ್ಲದೊಡೆಮ ಚಕ್ರದ |
ಮುಂದುಳಿವುದೇ ಹಗೆಯತಲೆ ನರನಾಥ ಕೇಳೆಂದ || ೩೫ ||

ನಿನಗೆ ಮಸಗಿದ ಮಾರಿಗಾಂತಾ | ವನೊ ಬದುಕುವವನೊಮ್ಮೆ ಸಾವನ |
ಕೊನರಿಸುವವರಿವುರುವ ಕಳುಹಿಸುವವನೆ ಕಳುಹೆಂದ ||
ಎನಲಮಿತಿಗತಿಯಮಿತಸಾಗರ | ರನು ವಿವೇಕದ ರಾಯಭಾರಿಗ |
ಳನುಕರಿಸಿ ನುಡಿಗಲಿಸಿ ಕಳುಹಲು ಹೋದರವರಂದೆ || ೩೬ ||

ಹರಿಯ ಬಳಿಗಾರಾಯಭಾರಿಗ | ಳಿರದೆ ಬಂದೆರಗಿದರು ಸಂದವ |
ಸರಿಗರಭಿಮತದಿಂದ ಬಳಿಕುಚಿತಾಸನದಲಿದ್ದು ||
ತರತರದಿ ಕುಳ್ಳಿರ್ದ ಕೌಂತೇ | ಯರ ನಿಖಿಲದೇಶಾಧಿನಾಥರ |
ಸಿರಿಯ ಪಿರಿಯೋಲಗವನೀಕ್ಷಿಸಿ ಮೆಚ್ಚಿದರು ಮನದಿ || ೩೭ ||

ಕರಮೆಸೆಯೆ ಹರನೀಲವರ್ಣದ | ಗಿರಿಯನಾ ಬಿದಿ ಸಮೆದ ಪುತ್ಥಳಿ |
ಇರವೆನಲು ಕಾರ್ಮುಗಿಲ ಮೇಗಣ ದಿವಿಜ ಚಾಪವೆನೆ ||
ನೆರೆದ ಮಣಿಭೂಷಣಕಿರಣ ಬಂ | ಧುರತೆಯಿರೆ ಮಣಿಪೀಠವನಲಂ |
ಕರಿಸಿದಚ್ಚುತನಂದವನು ಪರಿವೀಕ್ಷಿಸಿದರವರು || ೩೮ ||

ವರಯುಧಿಷ್ಠಿರ ರಾಯ ತದನಂ | ತರದಲವರನು ಬಂದ ಕಾರ್ಯಾಂ |
ತರವದೇನೆನೆ ಚಿತ್ತಯಿಸು ನಗಧರನೆ ಬಿನ್ನಹವ ||
ಸರಿಯರಲಿ ಕಾದುವುದು ಜಾಣಧಿ | ಕರೊಳು ಕಾದುವುದೆಗ್ಗತನವದು |
ಕರಿಹಯ ಪಟ್ಟಾಂತರವು ನಿಮಗೆಮ್ಮವಗೆ ಕೇಳೆಂದ || ೩೯ ||

ಸರಣವಕ್ಕರೆ ಕಾವ ನಿಮ್ಮೀ | ರ್ವರನು ಬಲನಾರಾಯಣರಿರಾ |
ಧುರದೊಳಾಂತೊಡೆ ಕೊಲ್ವನಾತನ ಚಕ್ರದುಪಹತಿಯ ||
ಪರಿಹರಿಪೊಡಾ ಭಾಳನೇತ್ರಂ | ಗರಿದು ನಿನ್ನಳಿಸೇನೆ ತಡೆವುದೆ |
ಮರುಳುಗೊಳ್ಳದೆ ಕಂಡು ಬದುಕುವುದೆಮ್ಮ ನರಪತಿಯ || ೪೦ ||

ಬಿಡುಬಿಡಾನೆಯ ಕೊಂದು ಮಲ್ಲರ | ಕೆಡಹಿಮಾವನ ಮಡುಪಿ ಬಂಡಿಯ |
ಕಡಲ ಮರೆಹೊಗೆ ನಿಮಧಟು ನಡೆದುದಲೆ ತಾನಿನ್ನು ||
ನಡೆಯ ಬಲ್ಲುದೆ ಸೂರ್ಯನುದಯಿಸೆ | ಸೊಡರು ಬೆಳಪುದೆ ಮೇಣುವಜ್ರದ |
ಕಡಲೆ ಹಲ್ಲಿಗೆ ಹರಿಯಬಲ್ಲುದೆ ಭೂಪ ಕೇಳೆಂದ || ೪೧ ||

ಎನೆ ತೃಣೀಕೃತ ವಿಶ್ವನೃಪ ಸ | ತ್ತ್ವನು ಮುಕುಂದನು ಬಲನ ನೀಕ್ಷಿಸಿ |
ಕೊನರವತಿ ರೋಷವನು ಹೊಮ್ಮಿಸದೊಳಗೊಳಗೆ ತಡೆದು ||
ಜನಿತ ದರಹಸಿತಾನನನು ತಾ | ನಿನಿಸು ಲಾಲಿಸುತಿರಲವರು ಕೊ |
ರ್ವಿನಲಿ ಪಾಂಡುಜ ಮುಖ್ಯರನು ಕಂಡೇಳಿಸಿದರಿಂತು || ೪೨ ||

ಬಲನಧಿಕ ಬಲನೆಂದೊಡೀ ಕೃಷಿ | ವನು ಕಡುಜೂಜಾಳಿ ಧರ್ಮಜ |
ನೆಲರ ಮಗನೆಲೆ ಭೀಮನರ್ಜುನಕಯಗೆ ಬಳೆಯಿಟ್ಟು ||
ಲಲನೆಯರನಾಡಿಸುವನಟ್ಟುವ | ನಿಳೆಯ ಕರುಗಾಹಿಗಳಮಳುಗಳು |
ಮುಳಿದು ಬಹ ನಮ್ಮಾ ಮಕುಟ ಬದ್ಧರನು ತಡೆವವರೆ || ೪೩ |

ಎಂದು ದ್ರುಪದ ವಿರಾಟ ಕಂಸನ | ತಂದೆ ಮೊದಲಾದರಸುಗಳ ಪಲ |
ವಂದದಲಿರೋಡಾಡಿ ಕೇಳು ಮುಕುಂದ ನಿನಗಿವರು ||
ಬಂದು ಕೂಡಿದರೆಂದು ಗರ್ವವ | ತಂದುಕೊಳ್ಳದಿರೆಮ್ಮೊಡೆಯ ನಿಂ |
ದಂದುಳಿದ ನಿಮ್ಮೂರುಗಳನಾಳ್ದಿರು ಸುಖದೊಳೆಂದ || ೪೪ ||

ವನನಿಧಿಯ ಮರೆಗೊಂಡು ಬದುಕಿದಿ | ರಿನಿತುದಿನ ನಿಮ್ಮನ್ವಯವು ಸಹ |
ಮುನಿದು ಬಂದನು ಚಕ್ರಿಕೊಲಲೆನ್ನಾರು ಕಾವವರು ||
ದಿನಕರನು ದಿಕುಪಾಲಕನು ರು | ದ್ರನು ಸೆಣಸಿದೊಡಮವರುಗಳ ಜೀ |
ವನವನುಳುಹುವನಲ್ಲ ಕಾಣ್ಬುದು ಲೇಸು ಮುರವೈರಿ || ೪೫ ||

ಜಿನಪತಿಯ ಪದಯುಗಕೆ ತ್ರಿಜಗವು | ಜನಪತಿಯ ಚರಣಕ್ಕೆ ಭೂಪರು |
ಜನಿತ ಮುದದಿಂದೆರಗದೊಡೆ ಸುಖದಿಂದ ಬಾಳ್ದಪರೆ ||
ಮನದ ಗರ್ವವ ಬಿಸುಟುಕೇಳಲೆ | ವನಜಲೋಚನ ಕಂಡು ಬದುಕಾ |
ಳ್ದನ ಮದೀಯ ಸ್ವಾಮಿಯೆಂದಂತೆಂದವೆನಲೊಡನೆ || ೪೬ ||

ಇರದೆ ವಸುಪಾಲಕನೆನಿಪ ಭೂ | ವರನವರ ಮಾರ್ಕೊಂಡು ನೀವೀ |
ಪರಿಯಲಾ ಮಾಗಧನ ಬಾಹುಲ್ಯವನೆ ಹೇಳಿದಿರಿ ||
ಕರಿಯ ತೋರದೆ ರಿಂಹವಾರ್ಧಿಯ | ನರಿಯೆ ನೋಳ್ಪಾಗಸ್ತ್ಯನೆನಿರೋ |
ಹರಿಮುಳಿದೊಡಿದಿರಾಂತು ಬಾಳ್ವವನಾರೊ ಲೋಕದಲಿ || ೪೭ ||

ಬಿರುನುಡಿಯು ದೂತರವದನದಲಿ | ಮೆರವುದಲ್ಲದೆ ನಿಮಗದೇತಕೇ |
ಬರಿಯ ಗೃಹ ಗರ್ಜನೆಯಲೇಂ ಫಲ ನಾಳೆ ಕದನದಲಿ ||
ಅರಿಯ ಬಹುದದರಂದವನು ನಿ | ಮ್ಮೆರೆಯನನು ಕರೆಜಗಳಕೆಂದುಡು |
ಗೊರೆಯನಿತ್ತವರನು ಕಳುಹಿದನು ನಗುತನಗಧರನ || ೪೮ ||

ವರಜರಾಸಂಧನು ನಿಖಿಲ ಭೂ | ವರರೊಳೊಡ್ಡೋಲಗವಿರಲು ಬಂ |
ದೆರಗಿ ದೂತರೆಲೇನರೇಶ್ವರ ಬಿನ್ನಹವು ಜೀಯ ||
ಹರಿಯ ಬಳಿಗಾವೆಯಿದಿ ಕಾರ್ಯಾಂ | ತರವನೆಲ್ಲವನರಿಯ ಪೇಳ್ದೆವು |
ದುರುಳನವ ನಸು ನಿನ್ನ ಚಕ್ರವ ಬಯಸುತದೆಯೆನಲು || ೪೯ ||

ಸಿಡಿಲದನಿ ಗಿವಿವೊಕ್ಕ ಸಿಂಗದ | ಪಡಿಯೆನಲು ಕೆರಳಿದನು ಕೋಪದಿ |
ಪೊಡೆಸಲಾ ಸನ್ನಾಹ ಭೇರಿಯ ಭೀಳನಾದಕ್ಕೆ ||
ಮೃಡನನದ್ರಿಜೆಯಪ್ಪಿದಳು ಎಲೆ | ಮಡಿದರಮರರು ಕಡುಬೆದರಿ ಮದ |
ವುಡುಗಿದವು ದಿಗಿಭಗಳು ತೂರಿದವಂದು ತಾರೆಗಳು || ೫೦ ||

ಅದರ ಭೀಳಧ್ವನಿಯ ಮಿಗೆ ಕೇ | ಳಿದ ಬಲದ್ವಯದೊಳಗೆ ಕಟ್ಟು |
ರ್ಕೊದವಿ ಶಸ್ತ್ರಾಸ್ತ್ರಂಗಳನು ಮಸೆಯಿಸುವ ತಂತಮ್ಮ ||
ಕದನ ಸಾಧನವಾದ ಸಮಕ | ಟ್ಟೊದಗಿಸುವ ಕಡುವೀರಭಟರೊ |
ಪ್ಪಿದರು ಪ್ರಳಯಾಂತಕನ ಪಡೆಯೆನಲರಸ ಕೇಳೆಂದ || ೫೧ ||

ವರಶತೇಂದ್ರ ಪ್ರಣತಜಿನಪದ | ಸರಸಿರುಹರೋಲಂಬ ಲೀಲಾ |
ಸುರಸ ಕವಿ ಸಾಳ್ವರಚಿತ ಮಾಧುರ್ಯಗುಣಭರಿತ ||
ಪರಮನೇಮಿ ಜಿನೇಂದ್ರ ಪಾವನ | ಚರಿತೆಯೊಳು ಹನ್ನೊಂದನೆಯಂದಿದು |
ದೊರೆವಡೆದುದುದ್ಯೋಗಪರ್ವವು ವಿಶ್ವ ವಿಶ್ರುತವು || ೫೨ ||

|| ಅಂತು ಉದ್ಯೋಗಪರ್ವಕ್ಕಂ ಸಂಧಿ ೪೪ ಕ್ಕಂ ಮಂಗಳ ಮಹಾ ||